ಸ್ಥಳೀಯರ ಜೊತೆಗಿನ ಮಾತು ಪ್ರವಾಸದ ಹೊರಹನ್ನು ಮತ್ತಷ್ಟು ಹೆಚ್ಚಿಸಿ, ಮಾಹಿತಿಯೊದಗಿಸಿ ಅರ್ಥಪೂರ್ಣವೆನಿಸುತ್ತದೆ. ಹಾಗೆ ಮಾತನಾಡುವಾಗ ವೈಯಕ್ತಿಕ ಮಾಹಿತಿ ಕೊಡುವುದರಿಂದ ದೂರ ಉಳಿಯುವುದು ಮತ್ತು ಧಾರ್ಮಿಕ ಹಾಗು ಆಹಾರದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳದಿರುವುದು ಸ್ವಾಗತಾರ್ಹ. ಅರೆಬರೆ ರಾಜಕೀಯ ಜ್ಞಾನದಿಂದ ನಮ್ಮ ದೇಶದ ಬಗ್ಗೆ ಕೀಳು ಅಭಿಪ್ರಾಯ ಬರದಂತೆ ಮಾತನಾಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಬೇರೆಯವರ ಮಕ್ಕಳನ್ನು ಹಿರಿಯರ ಅನುಮತಿಯಿಲ್ಲದೆ ಮುದ್ದು ಮಾಡುವ ಬಗ್ಗೆ ಎಚ್ಚರಿಕೆ ಇರಬೇಕು. ಹೇಳದೆ ಕೇಳದೆ ಮತ್ತೊಬ್ಬರ ಮಕ್ಕಳ ಫೋಟೋ ತೆಗೆಯುವುದು ಕಾನೂನಿನಲ್ಲಿ ಅಪರಾಧವಾಗಿರುತ್ತದೆ. ʻಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ  ಪ್ರವಾಸಕ್ಕೆ ಬೇಕಾದ ಸಲಹೆಗಳನ್ನು ನೀಡಿದ್ದಾರೆ. 

ಪ್ರವಾಸವೆಂದರೆ ನಮಗೆ ನಾವೇ ಅಪರಿಚಿತರಾಗೋ ಘಳಿಗೆ. ಪ್ರವಾಸವೆಂದರೆ ಅಪರಿಚಿತಗಳನ್ನು ಪರಿಚಯ ಮಾಡಿಕೊಳ್ಳುವುದರೆಡೆಗಿನ ಯಾನ. ಪ್ರವಾಸವೆಂದರೆ ಆಹ್ಲಾದಕರ, ಸುಖ, ಸಂತೋಷ. ಎಲ್ಲವೂ ಹೌದು. ಆದರೆ ನಿಜಾರ್ಥದಲ್ಲಿ ಪ್ರವಾಸವೆಂದರೆ ಮಲ್ಲಿಗೆ ಮಾಲೆಯಲ್ಲಿನ ಪಚ್ಚೆಕದಿರಿನಂತೆ. “ಅಯ್ಯೋ, ಯಾಕಾದ್ರೂ ಇಲ್ಲಿಗೆ ಬಂದ್ವೋ” ಅಂತೆನಿಸದ ಪ್ರವಾಸವಿರಬೇಕಾದರೆ ಒಂದಷ್ಟು ಮಾನಸಿಕ ಮತ್ತು ಸಾಮಾನುಗಳ ಸಿದ್ಧತೆಯ ಅವಶ್ಯಕತೆ ಇದ್ದೇ ಇರುತ್ತದೆ. ಕೊಲಂಬಸ್ ಹೇಳಿದಂತೆ “ಪ್ರಯಾಣ ಮಾಡುವುದು ಒಂದು ಕಲೆ”. ಈ ಕಲೆ ಕರಗತವಾಗೋದು ನಮ್ಮ ಆಸಕ್ತಿ, ಅಭಿರುಚಿ, ಅವಕಾಶ ಮತ್ತು ಸಿದ್ಧತೆಗಳಿಂದ ಮಾತ್ರ.

ಘಮಘಮ ಘಮಾಡಿಸ್ತಾವ ಮಲ್ಲಿಗಿ ನೀ ಹೊರಟಿದ್ದೀಗ ಎಲ್ಲಿಗಿ? ರಜೆ ದಿನಗಳು ಬಂದಾಗ ಅಥವಾ ಮನಸ್ಸು ಬಯಸಿದಾಗ ಪ್ರವಾಸಕ್ಕೆ ಹೊರಡಬೇಕೆಂದರೆ ಮೊದಲು ತೀರ್ಮಾನವಾಗಬೇಕಾದ್ದು ಯಾವ ಜಾಗಕ್ಕೆ ಹೋಗಬೇಕೆನ್ನುವುದು. ಗುಡ್ಡಗಾಡು ಪ್ರದೇಶ, ಹಿಮಾಲಯ, ಮರುಭೂಮಿ, ತೀರ್ಥಯಾತ್ರೆ, ಗಿರಿಧಾಮಗಳು, ಕರಾವಳಿ ಪ್ರದೇಶ, ಐತಿಹಾಸಿಕ ಸ್ಥಳಗಳು , ದ್ವೀಪಗಳು, ಸಂಶೋಧನೆಗಾಗಿ ಮಾಡುವ ಪ್ರವಾಸ, ಮಿಲಿಟರಿ ಜಾಗಗಳು, ಬಾರ್ಡರ್ ಪ್ರದೇಶಗಳು, ಸಾಹಸ ಕ್ರೀಡೆಗಳಿಗಾಗಿ ಇರೋ ಜಾಗ, ಸ್ಪಾ ಮತ್ತು ಆಯುರ್ವೇದ ಚಿಕಿತ್ಸೆಗಾಗಿ ಇರುವ ಸ್ಥಳಗಳು ಮತ್ತು ವಿದೇಶಗಳು ಹೀಗೆ ಆಯ್ಕೆಗಳಿಗೆ ಬರವಿಲ್ಲ. ಆದರೆ ನಮ್ಮ ಅಭಿರುಚಿ, ಒದಗಿರುವ ಸಮಯಾವಕಾಶ, ಖರ್ಚು-ವೆಚ್ಚಗಳ ಸಾಮರ್ಥ್ಯ ಮತ್ತು ಅವಶ್ಯಕತೆಗಳಿಗನುಗುಣವಾಗಿ ನಮ್ಮ ಆಯ್ಕೆಯಿರಬೇಕು.

ಯಾವ ಹವಾಮಾನದಲ್ಲಿ ಯಾವ ಸ್ಥಳಕ್ಕೆ ಭೇಟಿ ನೀಡಬೇಕೆನ್ನುವುದರ ಮಾಹಿತಿ ಸಂಗ್ರಹಣೆ ಪ್ರಯಾಣದ ಮೊದಲ ಯೋಜನೆಯಾಗಿರಬೇಕು. ಈ ನಿಟ್ಟಿನಲ್ಲಿ ಅಂತರ್ಜಾಲದಲ್ಲಿ ಸಿಗುವ ವೆಬ್‌ಸೈಟ್‌ಗಳು, ಬ್ಲಾಗ್‌ಗಳು ಮತ್ತು ಸರ್ಕಾರೀ ಪ್ರವಾಸೋದ್ಯಮ ಇಲಾಖೆಯವರ ವೆಬ್‌ಸೈಟ್‌ಗಳು ಸಾಕಷ್ಟು ಮಾಹಿತಿ ನೀಡುತ್ತವೆ. ಹಾಗೆಯೇ ಪ್ರವಾಸ ಕಥನಗಳನ್ನು ಓದುವುದು, ಡಾಕ್ಯೂಮೆಂಟರಿಗಳನ್ನು ನೋಡುವುದು, ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳನ್ನೂ ಓದುವುದು ಮತ್ತು ಅವುಗಳಲ್ಲಿನ ಜಾಗಗಳ ಹೆಸರು, ವಿಳಾಸ, ಮಾರ್ಗ ಮತ್ತಿತರ ನಮ್ಮ ಆಸಕ್ತಿದಾಯಕ ವಿಷಯಗಳನ್ನು ಗುರುತುಮಾಡಿಟ್ಟುಕೊಳ್ಳುವುದು ಯೋಜನಾ ಹಂತದ ಜರೂರತ್ತು ಕೂಡ. ಟ್ರಾವೆಲ್ ಏಜೆಂಟ್‌ಗಳ ವೃತ್ತಿಪರ ಸಹಾಯದಿಂದಲೂ ಬೇಕಾಗುವಷ್ಟು ಮಾಹಿತಿ ದೊರೆಯುತ್ತದೆ.

ಸಾಕಷ್ಟು ಮೊದಲೇ ಹೋಗಬೇಕೆಂದಿರುವ ಸ್ಥಳಗಳ ಬಗ್ಗೆ ನಿರ್ಧಾರ ಮಾಡಿಕೊಂಡು, ಬಸ್ ರೈಲು ಮತ್ತು ವಿಮಾನ ಪ್ರಯಾಣ ಯಾವುದೇ ಇದ್ದರೂ ಮೊದಲೇ ಕಾದಿರಿಸಿಕೊಂಡರೆ ಕೊನೆ ಕ್ಷಣಗಳ ಗೊಂದಲದಿಂದ ದೂರವಿರಬಹುದು ಮಾತ್ರವಲ್ಲ ಒಂದಷ್ಟರ ಮಟ್ಟಿಗೆ ಹಣವೂ ಉಳಿತಾಯವಾಗುತ್ತದೆ. ತಿಂಗಳುಗಳ ಮೊದಲೇ ಆದರೆ ರೈಲುಗಳಲ್ಲಿ ಟಿಕೆಟ್‌ಗಳು ಸುಲಭವಾಗಿ ಸಿಗುತ್ತವೆ ಮತ್ತು ವಿಮಾನದ ದರವೂ ಕಡಿಮೆಯಾಗುತ್ತದೆ. ವಿದೇಶಗಳಿಗೆ ಹೋಗುವುದಾದರೆ ಬಹಳ ಮೊದಲೇ ನಿರ್ಧರಿಸಿಕೊಳ್ಳುವುದು ಒಳ್ಳೆಯದು. ಕಾರಣ ಪಾಸ್‌ಪೋರ್ಟ್ ಪಡೆದುಕೊಳ್ಳಲು ಮತ್ತು ನವೀಕರಣಗೊಳಿಸಿಕೊಳ್ಳಲು ಸ್ವಲ್ಪ ಹೆಚ್ಚಿನ ಕಾಲವೇ ಹಿಡಿಯುತ್ತದೆ ಮತ್ತು ಕೆಲವು ದೇಶಗಳು ವೀಸಾ ನೀಡಲು ಕನಿಷ್ಟ ಆರು ತಿಂಗಳುಗಳ ಕಾಲದಿಂದ ಚಾಲ್ತಿಯಲ್ಲಿರುವ ಪಾಸ್‌ಪೋರ್ಟ್‌ಗಳನ್ನು ಕೇಳುತ್ತವೆ. ಹಾಗೆಯೇ ವೀಸಾ ಪಡೆಯುವ ಪ್ರಕ್ರಿಯೆಗೂ ಸಮಯಾವಕಾಶ ಬೇಕಿರುತ್ತೆ.

ಹೋಗಬೇಕೆಂದಿರುವ ಜಾಗದ ಬಗ್ಗೆ ಸ್ಪಷ್ಟತೆ ಮೂಡಿದ ಮೇಲೆ ನಾವು ಇಳಿದುಕೊಳ್ಳಬೇಕೆಂದಿರುವ ಹೋಟೆಲ್‌ಗಳು, ಹೋಮ್ ಸ್ಟೇಗಳು, ಟ್ರಾವೆಲರ್ಸ್ ಬಂಗ್ಲೋ, ಕ್ಲಬ್ ಹೌಸ್, ರೆಸಾರ್ಟ್‌ಗಳನ್ನು ನಾವಿರುವ ಜಾಗದಿಂದಲೇ ಈಮೇಲ್ ಅಥವಾ ಫೋನ್ ಮೂಲಕ ಕಾದಿರಿಸಿಕೊಳ್ಳುವುದು ಜಾಣತನ, ಕೆಲವು ಖಾಸಗೀ ಕಂಪನಿಯವರೂ ಸರ್ಕಾರೀ ಸೌಲಭ್ಯದಂತೆಯೇ ಕೆಲಸಗಾರರಿಗೆ ಪ್ರವಾಸ ಮಾಡಲು ಕೆಲವು ಸವಲತ್ತುಗಳನ್ನು ನೀಡುತ್ತಾರೆ. ಅವುಗಳು ನಾವು ಹೋಗಬೇಕೆಂದುಕೊಂಡಿರುವ ಜಾಗದಲ್ಲಿ ಉಪಯೋಗಕ್ಕೆ ಬರುವುದೇ ಎಂದು ಮುಂಚಿತವಾಗಿ ತಿಳಿದುಕೊಂಡರೆ ಅನುಕೂಲವನ್ನು ಪಡೆದುಕೊಳ್ಳಬಹುದು. ಕೆಲವು ಹೋಟೆಲ್‌ಗಳು, ಟ್ರಾವೆಲ್ ಕಂಪನಿಯವರು (ಟೂರ್ ಆಪರೇಟರ್ಸ್) ಮತ್ತು ರೆಸಾರ್ಟ್ ವ್ಯವಸ್ಥೆಯು ಪ್ರವಾಸಿಗರು ತಮ್ಮಲ್ಲಿ ಉಳಿದುಕೊಳ್ಳುವುದಾದರೆ ಪ್ರವಾಸದ ಪ್ಯಾಕೇಜ್ ನೀಡಲು ಮುಂದೆ ಬರುತ್ತಾರೆ. ಅಂತಹ ಪ್ಯಾಕೇಜ್‌ಗಳ ಬಳಕೆ ಮಾಡಿಕೊಂಡರೆ ಸಮಯ ಮತ್ತು ಹಣದ ಉಳಿತಾಯ ಮಾತ್ರವಲ್ಲ ನಿರ್ದಿಷ್ಟವಾಗಿ ಮತ್ತು ನಿರಾತಂಕವಾಗಿ ಪ್ರವಾಸವನ್ನು ಅನುಭವಿಸಬಹುದಾಗಿರುತ್ತೆ.

ಪ್ರವಾಸ ಕಥನಗಳನ್ನು ಓದುವುದು, ಡಾಕ್ಯೂಮೆಂಟರಿಗಳನ್ನು ನೋಡುವುದು, ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳನ್ನೂ ಓದುವುದು ಮತ್ತು ಅವುಗಳಲ್ಲಿನ ಜಾಗಗಳ ಹೆಸರು, ವಿಳಾಸ, ಮಾರ್ಗ ಮತ್ತಿತರ ನಮ್ಮ ಆಸಕ್ತಿದಾಯಕ ವಿಷಯಗಳನ್ನು ಗುರುತುಮಾಡಿಟ್ಟುಕೊಳ್ಳುವುದು ಯೋಜನಾ ಹಂತದ ಜರೂರತ್ತು ಕೂಡ.

ಮಿಲಿಟರಿ ಪಡೆಗಳು ಇರುವ ಜಾಗ ಅಥವಾ ಸರಹದ್ದುಗಳೆಡೆಗೆ ಪ್ರವಾಸ ಹೋಗುವ ಬಯಕೆ ಇದ್ದರೆ ಅದಕ್ಕೆ ಕೆಲವೊಮ್ಮೆ ನಾವಿರುವ ಜಾಗದಿಂದಲೇ ಅನುಮತಿ ಪಡೆಯಬೇಕಿರುತ್ತದೆ. ನಾವು ಹೋಗಬೇಕೆಂದಿರುವ ಊರಿನ ಜಿಲ್ಲಾಧಿಕಾರಿಗಳಿಗೆ ಅಥವಾ ಸೇನಾ ಕಚೇರಿಗಳೊಂದಿಗೆ ಪತ್ರ ಮುಖೇನ ವ್ಯವಹರಿಸಿದರೆ ಉತ್ತಮ. ಇದನ್ನು ಈ-ಮೇಲ್ ಮೂಲಕವೂ ಪಡೆದುಕೊಳ್ಳಬಹುದಿರುತ್ತದೆ, ಇಲ್ಲವೇ ನಾವು ಉಳಿದುಕೊಳ್ಳಲು ಕಾದಿರಿಸುವ ಸ್ಥಳಗಳ ಉಸ್ತುವಾರಿಯವರ ಸಹಾಯವನ್ನು ಪಡೆಯಬಹುದಾಗಿರುತ್ತದೆ. ಟ್ರಾವೆಲ್ ಏಜೆಂಟ್‌ಗಳು ಸಹಾಯ ಮಾಡುತ್ತಾರೆ.

ಮಾನಸ ಸರೋವರ, ಚಾರ್ಧಾಮ್ ಯಾತ್ರೆ, ಕಾಶೀ ಯಾತ್ರೆ, ಹಜ್ ಯಾತ್ರೆ ಹೀಗೆ ಧಾರ್ಮಿಕ ಯಾತ್ರೆಗಳಿಗೆ ಸರ್ಕಾರದಿಂದ ಮತ್ತು ಆಯಾ ರಾಜ್ಯದ ಪ್ರವಾಸೋದ್ಯಮ ಇಲಾಖೆಯಿಂದ ನಿಯೋಜಿಸಲ್ಪಟ್ಟವರು ಮತ್ತು ಕೆಲವು ಹೆಸರಾಂತ ಖಾಸಗೀ ಟೂರ್ ಆಪರೇಟರ್ಸ್ ಇರುತ್ತಾರೆ. ಈ ವಿಷಯದಲ್ಲಿ ಅವರುಗಳ ಮಾಹಿತಿ ಮತ್ತು ಸಹಾಯ ಪಡೆಯುವುದೇ ಉತ್ತಮ.

ಏಕಾದಶಿ ಉಪವಾಸ ಸ್ವಲ್ಪ ತಿನ್ನಿ ಉಪ್ಪಿಟ್ಟು ಅವಲಕ್ಕಿ ಪಾಯಸ: ಆಹಾರ ಹಿತವಾಗಿದ್ದರೆ ವಿಹಾರವು ಸುಖವೂ ಮತ್ತು ಸಂತೋಷದಾಯಕವಾಗಿರುತ್ತೆ. ಅದಕ್ಕೇ ನಾವು ಹೋಗಬೇಕೆಂದಿರುವ ಸ್ಥಳದ ದೈನಂದಿನ ಆಹಾರ ಅಭ್ಯಾಸದ ಬಗ್ಗೆಯೂ ಮೊದಲೇ ತಿಳಿದುಕೊಂಡಿರಬೇಕು. ನಮ್ಮ ದೇಶದ ಎಲ್ಲಾ ಪ್ರಮುಖ ಸ್ಥಳಗಳಲ್ಲೂ ಎಲ್ಲಾ ರೀತಿಯ ಆಹಾರ ಸಿಗುವುದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ವಿದೇಶಗಳಿಗೆ ಹೋಗುವಿರಾದರೆ ಮತ್ತು ನೀವು ಪೂರ್ಣ ಸಸ್ಯಾಹಾರಿಗಳಾಗಿದ್ದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕಾದೀತು. ಅಪ್ಪಟ ಸಸ್ಯಾಹಾರಿಗಳು, ವಿದೇಶಗಳಲ್ಲಿ ಲ್ಯಾಕ್ಟೋ ವೆಜಿಟೇರಿಯನ್ ಎಂದು ಹೇಳಬೇಕು, ಭಾರತದಲ್ಲಿ ಎಲ್ಲೆಡೆಯೂ ಜೈನರ ಪದ್ಧತಿಯ ಆಹಾರ ಲಭ್ಯವಿರುವುದರಿಂದ ತೊಂದರೆಯೇನಿಲ್ಲ. ನೀವು ಆಹಾರ ಪ್ರಿಯರಾಗಿದ್ದರೆ ಸ್ಥಳೀಯರ ಊಟವನ್ನು ಪ್ರಯತ್ನಿಸಬಹುದು. ಆದರೂ ಕೆಲವು ಅಲೆರ್ಜಿಕ್ ಆಹಾರಗಳ ಬಗ್ಗೆ ಎಚ್ಚರದಿಂದಿರಬೇಕು. ಉದಾಹರಣೆಗೆ ಮಶ್ರೂಂ, ಬಿದಿರು, ಕಳಲೆ ಮುಂತಾದವುಗಳು ಕೆಲವರಲ್ಲಿ ತಕ್ಷಣವೇ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತೆ. ಕುಡಿಯುವ ನೀರಿನ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದರೂ ಪ್ರವಾಸ ಪ್ರಯಾಸವಾಗುವುದಂತೂ ಖಂಡಿತ.

ಆಹಾರದಷ್ಟೇ ಮುಖ್ಯವಾದದ್ದು ಹೋದ ಕಡೆಯಲ್ಲಿ ನಮ್ಮ ಆರೋಗ್ಯ. ಸಣ್ಣ ಇರಿಸುಮುರಿಸು ಕೂಡ ಪ್ರವಾಸದ ಆನಂದಕ್ಕೆ ಕಲ್ಲು ಹೊಡೆತದಂತೆಯೇ ಸರಿ. ಸಣ್ಣ ಪುಟ್ಟ ಗಾಯಗಳಿಗೆ ಬೇಕಾಗುವ ಮುಲಾಮು, ಸಾಮಾನ್ಯ ತಲೆನೋವಿನ ಮಾತ್ರೆ, ಹೊಟ್ಟೆಗೆ ಸಂಬಂಧ ಪಟ್ಟ ಮುಜುಗರಗಳಿಗೆ ಬೇಕಾದ ಔಷಧಗಳನ್ನು ಇಟ್ಟುಕೊಂಡಿರಲೇಬೇಕು. ಜೌಗು ಪ್ರದೇಶಗಳಲ್ಲಿ ಇರಬಹುದಾದ ಜಿಗಣೆಯಂತಹ ಕ್ರಿಮಿ ಕೀಟಗಳ ಬಾಧೆಗೆ ಮತ್ತು ಸಾಮಾನ್ಯ ಅಲರ್ಜಿಗಳಿಗೆ ಔಷಧಗಳನ್ನು ಹೊಂದಿರಬೇಕು. ಮಧುಮೇಹ, ಥೈರಾಯಿಡ್, ರಕ್ತದೊತ್ತಡದಂತಹ ತೊಂದರೆಗಳಿಗೆ ತೆಗೆದುಕೊಳ್ಳುವ ನಿತ್ಯದ ಔಷಧಗಳನ್ನು ನಮ್ಮ ಪ್ರವಾಸದ ದಿನಗಳಿಗೆ ಸಾಕಾಗುವಷ್ಟು ಮಾತ್ರವಲ್ಲ ಒಂದೆರಡು ಡೊಸ್‌ಗಳಷ್ಟು ಮಾತ್ರೆಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಂಡಿರುವುದು ಒಳಿತು. ವಿಮಾನದಲ್ಲಿ ಹೋಗುವಿರಾದರೆ ದ್ರವರೂಪದ ಔಷಧಿಗಳನ್ನು ನಿಮ್ಮ ಕೈ ಚೀಲದಲ್ಲಿ (ಕ್ಯಾಬಿನ್ ಬ್ಯಾಗೇಜ್) ಇರಿಸಿಕೊಳ್ಳಲು ಅನುಮತಿಯಿರುವುದಿಲ್ಲ. ದ್ರವ ರೂಪದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಪ್ರವಾಸದ ಉದ್ದೇಶಕ್ಕಾಗಿ ನಿಮ್ಮ ವೈದ್ಯರ ಬಳಿ ಮಾತನಾಡಿ ಮಾತ್ರೆಗಳನ್ನು ಪಡೆದುಕೊಳ್ಳಿ, ತೆಗೆದುಕೊಂಡು ಹೋಗುವುದು ಸುಲಭವಾಗುತ್ತದೆ.
ವಿದೇಶಗಳಿಗೆ ಹೋಗುವಾಗ ಕೆಲವು ಔಷಧಿಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ನಿಯಮದ ಪ್ರಕಾರ ಸಿಬ್ಬಂದಿ ನಿರಾಕರಿಸುತ್ತಾರೆ. ಅದಕ್ಕಾಗಿ ವೈದ್ಯರಿಂದ ಮೊದಲೇ ಪ್ರಮಾಣ ಪತ್ರ ತೆಗೆದಿಟ್ಟುಕೊಂಡಿರಿ. ಯಾವ ಔಷಧಿ ಯಾವ ತೊಂದರೆಗೆ ಎಂದು ಬರೆಸಿಟ್ಟುಕೊಂಡಿರಿ. ನಿತ್ಯ ತೆಗೆದುಕೊಳ್ಳುವ ಮಾತ್ರೆಗಳನ್ನು ಪ್ರಯಾಣದ ಅವಧಿಗೆ ಮತ್ತು ಒಂದೆರಡು ದಿನಗಳಿಗೆ ಆಗುವಷ್ಟನ್ನು ನಿಮ್ಮ ಕೈಚೀಲದಲ್ಲಿ ಇರಿಸಿಕೊಳ್ಳಿ, ಅಕಸ್ಮಾತಾಗಿ ಲಗೇಜುಗಳು ನಿಮ್ಮನ್ನು ತಲುಪಲು ತಡವಾದರೆ ಆರೋಗ್ಯಕ್ಕೆ ತೊಂದರೆ ಆಗುವುದು ತಪ್ಪುತ್ತದೆ. ನೀವು ಇನ್ಸ್ಲುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವವರಾದರೆ ಸಿಬ್ಬಂದಿಗಳಿಗೆ ಮೊದಲೇ ತಿಳಿಸಬೇಕು. ಇಲ್ಲವಾದರೆ ಸಿರಿಂಜ್‌ಗಳನ್ನು ಕೊಂಡೊಯ್ಯಲು ತೊಂದರೆಯಾಗುತ್ತದೆ.

ವಿವೇಕಯುತ ಪ್ರವಾಸಕ್ಕಾಗಿ ಇದೆ ವಿವೇಕ್ ಎಕ್ಸ್‌ಪ್ರೆಸ್‌: ಪ್ರಪಂಚದ ಅತೀ ಉದ್ದವಾದ ರೈಲು ಮಾರ್ಗಗಳಲ್ಲಿ ಎಂಟನೆಯ ಸ್ಥಾನ ಪಡೆದಿರುವ ವಿವೇಕ್ ಎಕ್ಸ್‌ಪ್ರೆಸ್‌ ರೈಲು, 2013ರಲ್ಲಿ ಆಚರಿಸಲಾಗುವ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿವಸದ ಆಚರಣೆಗಾಗಿ 2011ರಲ್ಲೇ ಬಿಡುಗಡೆಯಾಗಿರುವ ರೈಲು ಮಾರ್ಗ. ನಾಲ್ಕು ಜೊತೆ ಎಕ್ಸ್‌ಪ್ರೆಸ್‌ ರೈಲುಗಳ ಸಂಪರ್ಕದ ಕನ್ಯಾಕುಮಾರಿಯಿಂದ ಕಾಶ್ಮೀರದವರೆವಿಗೂ ಇರುವ ಏಕೈಕ ರೈಲು ಇದಾಗಿದೆ. 4200 ಕಿಲೋಮೀಟರ್‌ಗಳ ದೂರವನ್ನು 615 ನಿಲ್ದಾಣಗಳ ಮೂಲಕ ಕ್ರಮಿಸುವ ಈ ರೈಲಿನಲ್ಲಿನ ಪ್ರಯಾಣ ಅದ್ಭುತ. ಸಮಯದ ಪರಿವೆಯೇ ಇಲ್ಲದ ಮತ್ತು ಜವಾಬ್ದಾರಿ ಮುಕ್ತವಾದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಸಂಪರ್ಕ ಸಾಧನ.

ಅಂಗಳದ ರಂಗೋಲಿಯಂತಿರಲಿ ಷಾಪಿಂಗ್ ಮತ್ತು ಸಾಹಸ: ಹೋದೆಡೆಯಲ್ಲಿನ ವಿಶೇಷಗಳನ್ನು ಕೊಂಡು ತರುವುದು ಅಭ್ಯಾಸದಂತೆ ಅಲ್ಲ ಹವ್ಯಾಸದಂತಿರಲಿ. ಆಸೆಗಿಂತ, ಮನಕ್ಕೆ ಮನೆಗೆ ಮತ್ತು ಆದಾಯಕ್ಕೆ ಹಿತವಾಗಿರಲಿ. ಬೇಕು ಎನ್ನುವಷ್ಟೂ ಬೇಡವಾದುದ್ದನ್ನು ಕೊಂಡುಕೊಂಡರೆ ಲಗೇಜ್ ಹೆಚ್ಚಾಗಿ ಮುಂದಿನ ಪ್ರಯಾಣ ನಿತ್ರಾಣವಾದೀತು. ಆ ಜಾಗದ ವಿಶೇಷತೆಯೇನು ಎಂಬುದನ್ನು ಮೊದಲೇ ತಿಳಿದುಕೊಂಡಿರಬೇಕು. ಜೊತೆಗೆ ಸ್ಥಳೀಯರ ಹತ್ತಿರ ಮಾತನಾಡಿ ಲೋಕಲ್ ಮಾರುಕಟ್ಟೆಗಳ ಬಗ್ಗೆ ತಿಳಿದುಕೊಂಡು ಅಲ್ಲಿ ಷಾಪಿಂಗ್ ಮಾಡುವುದು ಉತ್ತಮ. ಸರ್ಕಾರೀ ಪ್ರವಾಸೋದ್ಯಮ ಮಳಿಗೆಗಳಲ್ಲಿ ವ್ಯಾಪಾರ ಮಾಡಿದರೆ ಬೆಲೆ ಮತ್ತು ಗುಣಮಟ್ಟ ಎರಡರ ಖಾತರಿಯೂ ಇರುತ್ತೆ. ಕಾಶ್ಮೀರದಲ್ಲಿ ಕಾರ್ಪೆಟ್ಟುಗಳು, ರಾಜಸ್ಥಾನದಲ್ಲಿ ಬಟ್ಟೆಗಳು, ಹರಿದ್ವಾರದಲ್ಲಿ ಗಂಗಾಜಲ, ಡಾರ್ಜಿಲಿಂಗ್‌ನ ಚಹ ಹೀಗೇ ಎಷ್ಟೋ ಕಡೆ ನಾವು ಕೊಂಡುಕೊಂಡ ಸಾಮಾನುಗಳನ್ನು ಕೊರಿಯರ್ ಅಥವಾ ಪಾರ್ಸಲ್‌ಗಳ ಮೂಲಕ ನಮ್ಮ ಮನೆಗೇ ತಲುಪಿಸುವ ವ್ಯವಸ್ಥೆಯಿರುತ್ತದೆ. ಇಂತಹ ಅನುಕೂಲವನ್ನೂ ಪಡೆಯಬಹುದು.

ವಿದೇಶದಲ್ಲಿನ ಷಾಪಿಂಗ್‌ಗೆ ಹೆಚ್ಚು ಗಮನ ಬೇಕಾಗುತ್ತದೆ. ನಾವು ತೆಗೆದುಕೊಂಡು ಹೋಗಿರುವ ವಿದೇಶಿ ಹಣ (ಕರೆನ್ಸಿ) ಭಾರತೀಯ ರೂಪಾಯಿಗಳಿಗೆ ಅನುಪಾತದಲ್ಲಿ ಹೊಂದಿಸಿಕೊಂಡು ವ್ಯಾಪಾರ ಮಾಡಬೇಕು. ಅಲ್ಲಿಯೂ ಮೋಸ ಮಾಡುವ ಜನರಿದ್ದಾರೆ. ಹಾಗಾಗಿ ಕ್ಯಾಲ್ಕ್ಯುಲೇಟರ್ ಇಟ್ಟುಕೊಂಡಿದ್ದರೆ ಒಳಿತು. ವಿದೇಶಗಳಲ್ಲಿ ಸಹ ಪ್ರವಾಸಿ ಮಳಿಗೆಗಳಿಗೆ ಹೋಗಿ ವ್ಯಾಪಾರ ಮಾಡದೆ ಲೋಕಲ್ ಮಾರುಕಟ್ಟೆಗಳಿಗೆ ಹೋದರೆ ಹೆಚ್ಚಿನ ವೈವಿಧ್ಯಮಯ ಸಾಮಾನುಗಳು ನ್ಯಾಯಯುತ ಬೆಲೆಗೆ ದೊರೆಯುತ್ತವೆ. ಕೆಲವು ಸಾಮಾನುಗಳನ್ನು ವಿದೇಶಗಳಿಂದ ನಮ್ಮಲ್ಲಿಗೆ ತರಲು ಕಾನೂನಿನಲ್ಲಿ ಒಪ್ಪಿಗೆ ಇರುವುದಿಲ್ಲ. ಅವುಗಳ ಬಗ್ಗೆ ಮೊದಲೇ ಎಚ್ಚರ ವಹಿಸಬೇಕು ಹಾಗೆಯೇ ಕೆಲವು ಸಾಮಾನುಗಳನ್ನು ಇಂತಿಷ್ಟೇ ಪ್ರಮಾಣದಲ್ಲಿ ಮಾತ್ರ ತರಬಹುದು ಎಂದು ನಿಗದಿಯಾಗಿರುತ್ತದೆ.

ಪ್ಯಾರಗ್ಲೈಡಿಂಗ್, ರಾಕ್ ಕ್ಲೈಂಬಿಂಗ್, ಸ್ಕೀಯಿಂಗ್, ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್, ಅಂಡರ್ ಸೀ ವಾಕ್ (ಸಮುದ್ರದಾಳದಲ್ಲಿ ನಡಿಗೆ), ಬಂಗಿ ಜಂಪಿಂಗ್, ಜೆಟ್ ಸ್ಕೀಯಿಂಗ್, ಹೀಗೇ ಅನೇಕ ಆಕರ್ಷಣೀಯ ಕ್ರೀಡೆಗಳಿಗೂ ಪ್ರವಾಸವೇ ಉತ್ತಮ ಅವಕಾಶ ತಾನೆ? ಸಮುದ್ರತೀರಕ್ಕೆ ಹೋದಾಗ ಜಲಕ್ರೀಡೆಗಳನ್ನು ಅನುಭವಿಸದೆ ಹಿಂತಿರುಗಿದರೆ ನಿಜಕ್ಕೂ ಪ್ರವಾಸದ ಮೋಜು ಪೂರ್ತಿಯಾಗೋದಿಲ್ಲ. ಅದಕ್ಕಾಗಿಯೇ ಭಾಗಶಃ ಎಲ್ಲಾ ಕರಾವಳಿ ಪ್ರದೇಶದ ಪ್ರವಾಸೀ ತಾಣದಲ್ಲೂ ಇಂತಹ ಸೌಲಭ್ಯವಿರುತ್ತದೆ. ಗಿರಿಧಾಮಗಳಲ್ಲಿ ವಾಯುಕ್ರೀಡೆಗಳಿಗೆ ಅವಕಾಶ. ಎಲ್ಲಾ ಸಾಮಗ್ರಿಗಳು ಮತ್ತು ಸಹಾಯಗಳು ಅಲ್ಲೇ ದೊರೆಯುತ್ತವೆ. ಆದರೆ ಎಲ್ಲವೂ ವ್ಯಾಪಾರೀಕರಣಗೊಂಡಿರುವುದರಿಂದ ಪ್ರವಾಸಿಗರು ತಮ್ಮ ವಿವೇಚನೆಯಿಂದ ಕ್ರೀಡೆಗಳನ್ನು ಮತ್ತು ಸಹಾಯಕರನ್ನು ಆರಿಸಿಕೊಳ್ಳಬೇಕಿರುತ್ತದೆ. ಲೈಸೆನ್ಸ್ ಹೊಂದಿರುವವರಿಂದ ಅನುಕೂಲಗಳನ್ನು ಪಡೆದುಕೊಂಡರೆ ಸುರಕ್ಷಿತ.

ಐದು ಬೆರಳು ಕೂಡಿ ಒಂದು ಮುಷ್ಠಿಯು: ಎಂದೂ ಮಾಸದ ನೆನಪುಗಳನ್ನು ಉಳಿಸಿಕೊಡುವ ಮತ್ತು ಸುಖಕರವಾದ ಅನುಭವವನ್ನು ಕಟ್ಟಿಕೊಡುವ ಪ್ರವಾಸವು ಯಾವತ್ತಿಗೂ ನಮ್ಮ ಸಣ್ಣ ಸಣ್ಣ ಪೂರ್ವ ತಯಾರಿಯ ಪ್ರತಿಫಲ. ಅದಕ್ಕಾಗಿ ಗಮನಿಸಲೇಬೇಕಾದ್ದು ಎಂದರೆ; ಎಲ್ಲರೂ ಹೋಗುತ್ತಾರೆ ಎಂದೋ ಅಥವಾ ಹೆಚ್ಚು ಪ್ರಚಲಿತದಲ್ಲಿದೆ ಎಂದೋ ಒಂದು ಜಾಗಕ್ಕೆ ಹೋಗುವ ಬದಲು ನಮ್ಮ ಆಸಕ್ತಿ ಮತ್ತು ಅಭಿರುಚಿಯಂತೆ ಸ್ಥಳಗಳ ಆಯ್ಕೆ ಮಾಡಿಕೊಳ್ಳಬೇಕು. ಸಾಕಷ್ಟು ಮೊದಲೇ ಬಸ್ಸು, ರೈಲು, ಕಾರು, ವಿಮಾನ, ಇಳಿದುಕೊಳ್ಳುವ ಜಾಗಗಳ ಬುಕಿಂಗ್ ಮಾಡಿಕೊಂಡಿರಬೇಕು.

ಪ್ರಾಥಮಿಕ ಮತ್ತು ನಾವು ನಿತ್ಯವೂ ಉಪಯೋಗಿಸುವ ಔಷಧಗಳನ್ನೂ ನಮ್ಮ ಸಿದ್ಧತೆಯಲ್ಲಿ ಸೇರಿಸಿಕೊಂಡಿರಬೇಕು. ಪ್ರಯಾಣದ ಟಿಕೆಟ್‌ಗಳು, ಪಾಸ್‌ಪೋರ್ಟ್ ಮತ್ತು ವೀಸಾಗಳು, ವೋಟರ್ಸ್ ಗುರುತಿನ ಪತ್ರ ಅಥವಾ ಇನ್ನ್ಯಾವುದೇ ನಮ್ಮ ಗುರುತಿನ ಪತ್ರವನ್ನು ಇಟ್ಟುಕೊಂಡಿರಬೇಕು. ವಿಸಿಟಿಂಗ್ ಕಾರ್ಡ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಮೊಬೈಲ್ ಸಿಮ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಅವುಗಳಿಗೆ ಸಂಬಂಧಪಟ್ಟ ಪಾಸ್‌ವರ್ಡ್‌ಗಳನ್ನು ಜೋಪಾನವಾಗಿರಿಸಿಕೊಳ್ಳಬೇಕು.

ತೆಗೆದುಕೊಂಡು ಹೋಗುವ ಅಷ್ಟೂ ಹಣವನ್ನು ಒಂದೇ ಸ್ಥಳದಲ್ಲಿ ಇಟ್ಟುಕೊಳ್ಳುವುದು ಉಚಿತವಲ್ಲ. ವಿದೇಶಗಳಿಗೆ ಹೋಗುವಾಗ ಮೊಬೈಲ್ ಫೋನ್‌ಗಳಿಗೆ ಸಿಮ್ ಕಾರ್ಡ್‌ಗಳು ನಮ್ಮ ದೇಶದಿಂದಲೇ ಕೊಂಡು ಹೋದರೆ ಹಣ ಉಳಿತಾಯ ಮತು ಸುರಕ್ಷಿತವೂ ಹೌದು. ಟಿಕೆಟ್ ಹಾಗೂ ಪಾಸ್‌ಪೋರ್ಟ್‌ ಮತ್ತು ವೀಸಾಗಳನ್ನು ಸ್ಕ್ಯಾನ್ ಮಾಡಿ ಮಿಂಚಂಚೆಯ ಫ಼ೋಲ್ಡರ್‌ಗಳಲ್ಲಿ ಇಟ್ಟುಕೊಂಡಿರಬೇಕು. ಹಾಗೆಯೇ ನಕಲು ಪ್ರತಿಗಳನ್ನಾಗಿ ಮಾಡಿ ಲಗೇಜ್‌ನಲ್ಲಿ ಇಟ್ಟಿರುವುದೂ ಒಳ್ಳೆಯದು.

ದೇಶದಲ್ಲಿನ ವಿಮಾನಯಾನಕ್ಕೆ ವಿಮಾನ ಹೊರಡುವ ೨ ಗಂಟೆಗಳ ಮೊದಲು ಹಾಗು ವಿದೇಶ ಪ್ರಯಾಣಕ್ಕೆ ೩ ರಿಂದ ೪ ಗಂಟೆಗಳ ಮೊದಲೇ ವಿಮಾನನಿಲ್ದಾಣದಲ್ಲಿ ನಮ್ಮ ಹಾಜರಾತಿಯಿರಬೇಕು. ರೈಲು ಮತ್ತು ಬಸ್ಸುಗಳಲ್ಲಿ ಪಯಣಿಸುವಾಗಲೂ ಸಹ ಸಮಯಕ್ಕೆ ಮೊದಲೇ ಅಲ್ಲಿ ನಿಲ್ದಾಣಗಳಲ್ಲಿ ಇದ್ದು ಬಿಟ್ಟರೆ ನಿರಾತಂಕ. ಹಿಮಾಚ್ಛಾದಿತ ಪ್ರದೇಶಕ್ಕೆ ಹೋಗುವಾಗ ಅಲ್ಲಿನ ಕ್ರೀಡೆಗಳಿಗೆ ಬೇಕಾದ ಧಿರಿಸುಗಳು ಅಲ್ಲಿಯೇ ದೊರೆಯುತ್ತವೆ. ಆದರೆ ಛಳಿಗಾಲದ ಬಟ್ಟೆಯನ್ನು ನಾವೇ ಕೊಂಡೊಯ್ಯಬೇಕು.

ಒಂದು ಜೊತೆ ಜೀನ್ಸ್ ಪ್ಯಾಂಟು, ಹಿತವಾದ ನಡಿಗೆಯ ನೀಡುವ ಷೂಜ಼್ ಮತ್ತು ಚಪ್ಪಲಿಗಳು, ಛತ್ರಿ, ಟಾರ್ಚ್, ಟೋಪಿಗಳು, ಈಜುಡುಗೆಗಳು, ತಂಪು ಕನ್ನಡಕಗಳು ಯಾವುದೇ ಪ್ರದೇಶಕ್ಕೆ ಹೋದರೂ ಅತೀ ಅವಶ್ಯಕವಾಗಿ ಬೇಕಾದ್ದೇ. ಹವಾಮಾನದ ವೈಪರಿತ್ಯದಿಂದಾಗಿ ಹೊರಗಡೆ ಹೋದಾಗ ಹೆಂಗಸರು ಮತ್ತು ಗಂಡಸರು ಇಬ್ಬರೂ ತ್ವಚೆಯ ರಕ್ಷಣೆಯ ಕಡೆ ಗಮನ ನೀಡಬೇಕಿರುತ್ತೆ. ಆ ಕಾರಣಕ್ಕೆ ಸನ್‌ಸ್ಕ್ರೀನ್ ಲೋಷನ್ ಮತ್ತು ಮಾಯಿಸ್ಚರೈಸರ್ ಯಥೇಚ್ಛವಾಗಿ ಬಳಸಬೇಕು.

ವಿಮಾನದಲ್ಲಿ ಹೋಗುವಾಗ ಕೈಚೀಲದಲ್ಲಿ ನೇಲ್ ಕಟರ್, ಚಾಕು, ಉಗುರು ಬಣ್ಣ, ಟೂತ್ ಪೇಸ್ಟ್, ನೀರು, ಹಿಟ್ಟುಗಳು ಹೀಗೆ ಕೆಲವೊಂದು ಸಾಮಾನುಗಳನ್ನು ನಿಷೇಧಿಸಲಾಗಿರುತ್ತೆ. ಅವುಗಳ ಬಗ್ಗೆ ಗಮನವಿರಬೇಕು. ಹೋದ ಜಾಗದಲ್ಲಿನ ಸುತ್ತಾಟಕ್ಕೆ ಸಣ್ಣ ಬ್ಯಾಗ್ ಒಂದು ಜೊತೆಯಿರಲಿ. ಈಗಾಗಲೇ ಸಾಕಷ್ಟು ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದೆ. ಕೆಲವು ಧಾರ್ಮಿಕ ಸ್ಥಳಗಳಲ್ಲಿ ಉಡುಪಿನ ಬಗ್ಗೆ ಮತ್ತು ಇತರೆ ಕೆಲವು ವಿಚಾರಗಳಲ್ಲಿ ಅಲ್ಲಿನ ನಿಯಮವನ್ನು ಪಾಲಿಸಬೇಕಿರುತ್ತದೆ.

ಅನುಭವಗಳನ್ನು ದೃಶ್ಯಗಳಲ್ಲಿ ಶಾಶ್ವತಗೊಳಿಸಿಕೊಳ್ಳಬೇಕೆನ್ನುವ ಇಚ್ಛೆಯಿದ್ದರೆ ಕ್ಯಾಮೆರಾ ಸದಾ ಜೊತೆಗಿರಲಿ. ಫೋಟೋಗಳ ಡೌನ್ಲೋಡಿಗೆ ಬೇಕಾದ ಪರಿಕರಗಳು, ಬ್ಯಾಟರಿ ಚಾರ್ಜರ್‌ಗಳು. ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್‌ಗಳ ಚಾರ್ಜರ್‌ಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯದಿರಿ. ಕೆಲವು ಕಡೆ ಫೋಟೋ ತೆಗೆಯಲು ಹಣ ಕೊಟ್ಟು ರಶೀದಿ ಪಡೆಯಬೇಕಿರುತ್ತದೆ. ಮತ್ತೆ ಕೆಲವು ಕಡೆ ಫೋಟೋ ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಇದರ ಬಗ್ಗೆಯೂ ನಿಗಾ ಇರಬೇಕಾಗಿರುತ್ತದೆ.

ವಿದೇಶಗಳಲ್ಲಿನ ವಿದ್ಯುತ್ ವ್ಯವಸ್ಥೆಗೆ ನಮ್ಮ ದೇಶದ ಎಲೆಕ್ಟ್ರಿಕಲ್ ಸಾಮಾನುಗಳ ಪಿನ್‌ಗಳು ಸರಿಹೊಂದುವುದಿಲ್ಲ. ಅದಕ್ಕಾಗಿ ಒಂದು ಅಡಾಪ್ಟರ್ ಇಟ್ಟುಕೊಳ್ಳುವುದು ಉತ್ತಮ. ಧ್ವನಿ ರೆಕಾರ್ಡರ್ (ಎಂಪಿ ೩) ಇದ್ದರೆ ತೆಗೆದಿಟ್ಟುಕೊಳ್ಳಿ. ಗೈಡ್ ಅಥವಾ ಸ್ಥಳೀಯರ ಬಳಿ ಮಾತನಾಡುವಾಗ ಅವರ ಭಾಷೆ, ಮಾತಿನ ಶೈಲಿ ಎಲ್ಲವನ್ನು ರೆಕಾರ್ಡ್ ಮಾಡಿಕೊಳ್ಳುವುದು ಒಂದು ಸೊಗಸಾದ ಅನುಭವ.

ಹಿಮಾಲಯದ ಎತ್ತರದ ಪ್ರದೇಶಗಳಿಗೆ ಹೋದಾಗ ದೇಹದಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸವಾಗುವುದರಿಂದ ತಾತ್ಕಾಲಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಹೋದ ದಿನ ವಿಶ್ರಾಂತಿ ಪಡೆಯುವುದು ಒಳಿತು ಮತ್ತು ಮದ್ಯಪಾನದಿಂದ ದೂರವಿದ್ದರೆ ಉತ್ತಮ.

ಹೋದ ಕಡೆ ಇಳಿದುಕೊಳ್ಳುವ ಹೋಟೆಲ್‌ಗಳ ವಿಳಾಸ ಮತ್ತು ಫೋನ್ ನಂಬರುಗಳನ್ನು ಬರೆದಿಟ್ಟುಕೊಳ್ಳಬೇಕು. ಅಲ್ಲಿಂದಲೇ ಸ್ಥಳೀಯ ಪ್ರೇಕ್ಷಣೀಯ ಜಾಗಗಳ ಬ್ರೋಷರ್‌ಗಳನ್ನು ಪಡೆದುಕೊಳ್ಳುವುದು ಮತ್ತು ಅನುಕೂಲವಿರುವ ಕಡೆ ಪ್ರವಾಸೋದ್ಯಮ ಇಲಾಖೆಯಿಂದ ನೇಮಿಸಲ್ಪಟ್ಟ ಗೈಡ್‌ಗಳ ಸಹಾಯ ಪಡೆದುಕೊಳ್ಳುವುದು ಅನುಕೂಲಕರ.

ಬೇರೆ ಭಾಷೆಯಾಡುವ ಸ್ಥಳಗಳಿಗೆ ಹೋದಾಗ ಆ ಭಾಷೆಯಲ್ಲಿನ ದಿನ ನಿತ್ಯಕ್ಕೆ ಬೇಕಾದ ಒಂದಷ್ಟು ಪದಗಳನ್ನು ಮೊದಲೇ ಕಲಿತೋ ಇಲ್ಲವೇ ಬರೆದುಕೊಂಡೋ ಹೋಗುವುದು ನಿಜಕ್ಕೂ ಸಹಾಯಕರ. ಪ್ರವಾಸಗಳಿಗೆ ಹೋದಾಗ ಚಿನ್ನದ ಒಡವೆ ಮತ್ತು ಪಾರ್ಟಿ ವೇರ್‌ಗಳಂತಹ ಭಾರೀ ಉಡುಪುಗಳಿಂದ ದೂರವಿರೋದು ಹಿತಕರ.

ಸ್ಥಳೀಯರ ಜೊತೆಗಿನ ಮಾತು ಪ್ರವಾಸದ ಹೊರಹನ್ನು ಮತ್ತಷ್ಟು ಹೆಚ್ಚಿಸಿ, ಮಾಹಿತಿಯೊದಗಿಸಿ ಅರ್ಥಪೂರ್ಣವೆನಿಸುತ್ತದೆ. ಹಾಗೆ ಮಾತನಾಡುವಾಗ ವೈಯಕ್ತಿಕ ಮಾಹಿತಿ ಕೊಡುವುದರಿಂದ ದೂರ ಉಳಿಯುವುದು ಮತ್ತು ಧಾರ್ಮಿಕ ಹಾಗು ಆಹಾರದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳದಿರುವುದು ಸ್ವಾಗತಾರ್ಹ. ಅರೆಬರೆ ರಾಜಕೀಯ ಜ್ಞಾನದಿಂದ ನಮ್ಮ ದೇಶದ ಬಗ್ಗೆ ಕೀಳು ಅಭಿಪ್ರಾಯ ಬರದಂತೆ ಮಾತನಾಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಬೇರೆಯವರ ಮಕ್ಕಳನ್ನು ಹಿರಿಯರ ಅನುಮತಿಯಿಲ್ಲದೆ ಮುದ್ದು ಮಾಡುವ ಬಗ್ಗೆ ಎಚ್ಚರಿಕೆ ಇರಬೇಕು. ಹೇಳದೆ ಕೇಳದೆ ಮತ್ತೊಬ್ಬರ ಮಕ್ಕಳ ಫೋಟೋ ತೆಗೆಯುವುದು ಕಾನೂನಿನಲ್ಲಿ ಅಪರಾಧವಾಗಿರುತ್ತದೆ. ನಮ್ಮ ಜೊತೆ ಮಕ್ಕಳನ್ನು ಕರೆದುಕೊಂಡು ಹೋಗಬೇಕಾದಲ್ಲಿ ಅವರ ವಯಸ್ಸಿಗೆ ಅನುಗುಣವಾದ ಅವಶ್ಯಕತೆಗಳನ್ನು ನಮ್ಮ ಸಾಮಾನುಗಳ ಜೊತೆ ಮೊದಲೇ ಸೇರಿಸಿಟ್ಟುಕೊಳ್ಳಬೇಕು.

ದೇಶವಿರಲಿ ವಿದೇಶವಿರಲಿ ಅಪರಿಚಿತರೊಂದಿಗೆ ಹೆಚ್ಚು ಸಲುಗೆ ಸಲ್ಲ. ಅವರುಗಳಿಗೆ ಸಹಾಯ ಮಾಡುವುದು ಮತ್ತು ಪಡೆಯುವುದೂ ಕೂಡ ಬೇಡ. ಎಲ್ಲೇ ಆದರೂ ಅಪರಿಚಿತರ ಸಾಮಾನುಗಳ ಜವಾಬ್ದಾರಿ ತೆಗೆದುಕೊಳ್ಳುವುದು ಜಾಣತನವಲ್ಲ. ಸೆಲ್ಫ್ ಡ್ರೈವಿಂಗ್‌ನಲ್ಲಿ ಪ್ರವಾಸ ಮಾಡುವುದಾದರೆ ಊರಿನ ಒಳಗೆ ಹೋಗುವ ಮೊದಲೇ ಅಲ್ಲಿನ ರಸ್ತೆಗಳ ಬಗ್ಗೆ ಮಾಹಿತಿ ಪಡೆಯುವುದು ಮತ್ತು ಭೂಪಟ ಇಟ್ಟುಕೊಳ್ಳುವುದು ಸಹಕಾರಿ. ವೈದ್ಯಕೀಯ ಸೌಲಭ್ಯ ಪಡೆಯುವ ಉದ್ದೇಶದಿಂದ ಮಾಡುವ ಪ್ರವಾಸವಾದರೆ ಬಹಳ ಮೊದಲೇ ಸ್ಥಳವನ್ನು ಕಾದಿರಿಸಿಕೊಳ್ಳಬೇಕಾಗುತ್ತದೆ.

ಒಬ್ಬರೇ ಹೋಗಲಿ, ಗುಂಪಿನಲ್ಲಿರಲಿ ಏರು ಧ್ವನಿಯಲ್ಲಿ ಮಾತನಾಡುವುದು ಹಿತಕರವಲ್ಲ. ನಮ್ಮ ಭಾಷೆ ಬಲ್ಲವರು ಇಲ್ಲಿ ಯಾರೂ ಇರುವುದಿಲ್ಲ ಅನ್ನುವ ಭ್ರಮೆಯಲ್ಲಿ ಅಸಭ್ಯವಾಗಿ ವರ್ತಿಸಬಾರದು. ಯೂರೋಪ್ ಉಳಿದು ಮತ್ತ್ಯಾವುದೇ ದೇಶಕ್ಕೆ ಹೋಗುವಾಗ ಅಮೇರಿಕನ್ ಡಾಲರ್‌ಗಳನ್ನು ಒಯ್ಯುವುದು ಅನುಕೂಲ.

ಎಲ್ಲೆಲ್ಲಿಗೆ ಹೋಗಬೇಕು, ಹೋಗುವ ಮಾರ್ಗ, ದಿನಾಂಕ ಎಲ್ಲವನ್ನೂ ಮೊದಲೇ ಬರೆದಿಟ್ಟುಕೊಂಡಿದ್ದರೆ ಪ್ರಯಾಣ ಕಾಲದಲ್ಲಿ ಗೊಂದಲಗಳು ಬಹಳ ಕಡಿಮೆ. ಎಲ್ಲವೂ ಮೊದಲೇ ನಿಗದಿಯಾಗಿದ್ದರೂ ಹೋಗಿರುವ ಸ್ಥಳದ ಸುತ್ತಮುತ್ತಲು ಅಭಿರುಚಿಗೆ ಹೊಂದುವಂತಹ ಆಕರ್ಷಣೀಯ ಸ್ಥಳಗಳಿದ್ದರೆ ನೋಡಿ ಬರಲು ಸಮಯಾವಕಾಶ ಮಾಡಿಕೊಳ್ಳಬೇಕು. ಮನೆಯನ್ನು ಬೀಗ ಹಾಕಿ ಪ್ರವಾಸಕ್ಕೆ ಹೊರಡುವಾಗ ನೆರೆಹೊರೆಯವರ ಹಾಗೂ ವ್ಯಾಪ್ತಿಯ ಪೋಲೀಸ್ ಠಾಣೆಯ ವಿಳಾಸ ಮತ್ತು ಫೋನ್ ನಂಬರ್ ಇಟ್ಟುಕೊಂಡಿರಬೇಕು. ಯಾವ ಊರಿಗೆ ಹೋಗುತ್ತಿದ್ದೇವೆ ಮತ್ತು ಉಳಿದುಕೊಳ್ಳುವ ಜಾಗದ ಬಗ್ಗೆ ಮನೆಯವರು ಅಥವಾ ಖಾಸ ಗೆಳೆಯರಿಗೆ ಮಾಹಿತಿ ಕೊಟ್ಟು ಹೋಗುವುದು ಒಳಿತು.

ಅಗಣಿತ ತಾರಾ ಗಣಗಳ ನಡುವಿನ ಅನುಭವ: ಒಮ್ಮೆಯಾದರೂ ಹೊಂದಬೇಕೆನಿಸುವ ಅನುಭವವೆಂದರೆ ಜೈಪುರದ ಚೌಕಿದಾನಿ, ಜೈಸಲ್ಮೇರಿನ ತನ್ನೋಟಿ ಮಾ ದೇವಸ್ಥಾನ, ರಾಮೇಶ್ವರದ ಧನುಷ್ಕೋಡಿ, ಲೇಹ್‍ನ ಛಾಂಗ್ಲ ಪಾಸ್‌ನಲ್ಲಿರುವ ಅತ್ಯಂತ ಎತ್ತರದ ವಾಹನ ಚಲಾವಣೆಗೆ ಇರುವ ರಸ್ತೆ, ಕೇದಾರದಿಂದ ಕೆಳಗಿಳಿಯುವ ಹೆಲಿಕಾಪ್ಟರ್, ಬದರಿಯ ಬಳಿಯ ಇಂಡೋ-ಟಿಬೆಟ್ ಸರಹದ್ದಿನಲ್ಲಿರುವ ಮಾನ ಎನ್ನುವ ಹಳ್ಳಿ ಮತ್ತು ಅಲ್ಲಿರುವ ಸರಸ್ವತಿ ನದಿಯ ಉಗಮದ ಜಾಗ, ಋಷಿಕೇಶದ ಗಂಗೆ ಆರತಿ, ದೆಹಲಿಯ ಚಾಂದನಿ ಚೌಕ್, ಗ್ಯಾಂಕ್ಟಾಕ್‌ನ ಬೌದ್ಧ ಸಂಶೋಧನಾ ಕೇಂದ್ರ, ಡಾರ್ಜಿಲಿಂಗ್‌ನ ಪುಟಾಣಿ ರೈಲು, ಡಾಲ್ಹೌಸಿಯ ಪ್ಯಾರಗ್ಲೈಡಿಂಗ್, ನೇಪಾಳದ ಲುಂಬಿಣಿ, ಮಡಿಕೇರಿ ಬಳಿಯ ಬೈಲುಕುಪ್ಪೆ, ಸ್ವಿಟ್ಜರ್ಲ್ಯಾಂಡ್‌ನ ಗ್ಲೇಶಿಯರ್ ರೈಲು ಯಾನ, ಮಾರಿಷಿಯಸ್‌ನ ಜಲಕ್ರೀಡೆ, ಹಳೇ ದುಬೈ ರಸ್ತೆಗಳಲ್ಲಿನ ನಡಿಗೆ, ಅಂಡಮಾನಿನ ಹ್ಯಾವ್ಲಾಕ್ ದ್ವೀಪ, ಶ್ರೀಲಂಕೆಯ ಅನುರಾಧಪುರದ ಬೌದ್ಧ ಸ್ಥೂಪ ಮತ್ತು ಆನೆಗಳ ಅನಾಥಾಲಯ, ಮುಂಬೈನ ಮರೀನ ಬೀಚ್, ಚೆನ್ನೈನ ಮೊಸಳೆಗಳ ಉದ್ಯಾನ, ಕರುಳಿನಲ್ಲಿ ರಂಧ್ರ ಕೊರೆಯುವ ಹಂಪೆಯ ಪಾಳುಬಿದ್ದ ಶ್ರೀಮಂತಿಕೆ, ಭೂಪಾಲದ ಭೀಮ್ ಭೈಟಕ್, ಕಾರ್ಗಿಲ್, ಶ್ರೀನಗರ, ಲಡಾಕಿನ ಸಿಂಧು-ಜ಼ನ್ಸ್ಕಾರ್ ನದಿಗಳ ಸಂಗಮ, ಗ್ರೀಸ್ ದೇಶದ ಸ್ಯಾಂಟೋರಿನಿ ದ್ವೀಪ, ಹರಿದ್ವಾರದ ಮಾಲಸಾದೇವಿಯ ದೇವಸ್ಥಾನಕ್ಕಿರುವ ರೋಪ್ ವೇ, ಕೆಲ್ಲಿಂಪಾಂಗ್‌ನ ರವಿಂದ್ರನಾಥ ಟ್ಯಾಗೋರರ ಮನೆ, ರೂರ್ಕಿ ವಿಶ್ವವಿದ್ಯಾಲಯ, ಪ್ಯಾರೀಸ್‌ನ ರಾತ್ರಿ ಜೀವನ, ಅಜ್ಮೀರಿನ ರಂಜಾನ್ ಆಚರಣೆ, ಇಸ್ರೇಲ್ ದೇಶ, ಕನ್ಯಾಕುಮಾರಿಯ ವಿವೇಕಾನಂದ ಹೆಬ್ಬಂಡೆಯ ಧ್ಯಾನ, ಅಮೃತಸರದ ಸ್ವರ್ಣ ಮಂದಿರ, ಒಂದೇ ಎರಡೇ. ಪ್ರಕೃತಿಯ ಅಗಾಧತೆಯೆದುರು ನಮ್ಮ ಜೀವನಕ್ಕಿರುವ ಸಮಯ ಮತ್ತು ಅವಕಾಶ ಎಷ್ಟೊಂದು ಗೌಣವೆನಿಸುತ್ತದೆ.

ನವಿಲೂರ ಮನೆಯಿಂದ ನುಡಿಯೊಂದು ತಂದಿಹೆನು: ಈ ಬದುಕು ನಿಜಕ್ಕೂ ನೆನಪುಗಳನ್ನು ಕೂಡಿಟ್ಟುಕೊಳ್ಳುವ ಒಂದು ಪ್ರಕ್ರಿಯೆ. ಭಾವ ಮತ್ತು ಬುದ್ಧಿಕೋಶಗಳು ಹಿಗ್ಗಬೇಕಾದರೆ ದೇಶ ಸುತ್ತುವುದು ಬೇಕೇಬೇಕು. ಸುತ್ತಾಟವನ್ನು ಕೇವಲ ಹೋದವರಷ್ಟೇ ಅನುಭವವಾಗಿಸಿಕೊಂಡರೆ ಸಾಕೆ? ಆ ಕಾರಣಕ್ಕೆ ಹೋದೆಡೆಯಲೆಲ್ಲಾ ಫೋಟೊ ತೆಗೆಯುವ ಆಸೆ ಹುಟ್ಟುವುದು. ಅಂತೆಯೇ ಅಂದಂದಿನ ಪ್ರವಾಸದ ದಿನಚರಿಯನ್ನು ತಾರೀಖು, ಸಮಯ ಮತ್ತು ಸ್ಥಳದ ಹೆಸರುಗಳ ಸಮೇತ ನಮೂದಿಸಿಕೊಂಡು ಪ್ರವಾಸದ ಸಮಯದಲ್ಲಿ ಮನಸ್ಸಿಗೆ ಬರುವ ವಿಶೇಷ ವಿವರಗಳನ್ನು ಅನಿಸಿಕೆಗಳನ್ನು ಬರೆದಿಟ್ಟುಕೊಳ್ಳಬೇಕು. ಅಲ್ಲಿನ ಜನರ ಜೀವನ ಶೈಲಿ, ನಂಬಿಕೆಗಳು, ಗುಣವಿಶೇಷತೆಗಳು, ಆಹಾರ ಪದ್ಧತಿಗಳು, ಹಬ್ಬಗಳು, ಧಾರ್ಮಿಕ ತತ್ವಗಳು, ಸಾಮಾನ್ಯ ಕಾನೂನುಗಳು, ವೈದ್ಯಕೀಯ ವ್ಯವಸ್ಥೆ ಎಲ್ಲವನ್ನೂ ಹಿಂದಿರುಗಿದನಂತರ ಬರಹದ ಮೂಲಕ ಹಂಚಿಕೊಂಡರೆ ನಾವು ಮಾಡಿ ಬಂದ ಪ್ರವಾಸಕ್ಕೆ ಒಂದು ಸಾರ್ಥಕ್ಯ. ಪ್ರಪಂಚದ ವೈವಿಧ್ಯತೆಯನ್ನು ನೋಡುವುದು, ತಿಳಿಯುವುದು, ಆನಂದಿಸುವುದು ಮತ್ತು ಅದರ ಮೂಲಕ ಕಲಿಯುವುದು- ಕಲಿಸುವುದು ಇವುಗಳು ಬದುಕಿನ ಉದ್ದೇಶವಾದಾಗ ನಮ್ಮ ಪ್ರವಾಸಕ್ಕೆ ಬರುವುದು ಹೆಚ್ಚಿನ ಮೆರುಗು.

ಹಾಂ, ಮರೆತದ್ದು ಆದರೆ ಮರೆಯಬಾರದ್ದು ಎಂದರೆ ಕರೋನ. ಈಗ ಈ ಕಾಯಿಲೆಯಿಂದಾಗಿ ಪ್ರವಾಸದ ನಿಯಮಗಳು ಹೊಸದಾಗಿ ಹುಟ್ಟಿವೆ. ಎಲ್ಲಿಗೇ ಹೋಗುವ ಮೊದಲು ಅದನ್ನು ತಿಳಿದುಕೊಳ್ಳಲೇಬೇಕು.