ಪರಿಸರ ಪರ ಬರಹಗಾರ  ಎಂಬ ಪರಿಚಯದೊಂದಿಗೆ ನಾಗೇಶ್ ಹೆಗಡೆ ಅವರೊಂದಿಗೆ ಸ್ನೇಹ ಬೆಳೆದರೆ,  ನಂತರ ಅರಿವಿಗೆ ಬರುವುದು ಅವರ ಜೀವನಪ್ರೀತಿ. ವಿಜ್ಞಾನ ಬರಹಗಾರ  ಎಂದು ಗುರುತಿಸಿಕೊಂಡರೂ ಅವರಿಗೆ ಸಂಗೀತ, ಸಾಹಿತ್ಯ, ಭಾಷಾ ವಿಲಾಸ ಸಹಜವಾಗಿ ಒಲಿದು ಬಂದ ಕ್ಷೇತ್ರಗಳು. ಒಟ್ಟಿನಲ್ಲಿ ಸದಾ ಕುತೂಹಲದ ಕಂಗಳಿಂದ ಲೋಕದ ಕಡೆಗೆ  ನೋಡುವ ಅವರು ಅಂತರಂಗದ ಕಡೆಗೂ ಅಷ್ಟೇ ಪ್ರಖರವಾಗಿ ಗಮನ ಹರಿಸಬಲ್ಲರು. ಅವರ ಕುರಿತು 62 ಮಂದಿ ಲೇಖಕರು ಬರೆದ ಬರಹಗಳನ್ನೊಳಗೊಂಡ ‘ನೆಲಗುಣ’ ಅಭಿನಂದನಾ ಗ್ರಂಥವೊಂದನ್ನು ಗುರುರಾಜ್ ಎಸ್. ದಾವಣಗೆರೆ ಅವರು ಸಂಪಾದಿಸಿದ್ದಾರೆ. ಆ ಪುಸ್ತಕದಲ್ಲಿ ಹಿರಿಯ ಕತೆಗಾರ, ಪತ್ರಕರ್ತ ರಘುನಾಥ ಚ.ಹ. ಅವರು ಬರೆದ ಲೇಖನವೊಂದನ್ನು ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿ ನೀಡಲಾಗಿದೆ. 

ಹೋಲಿಕೆ ಅಷ್ಟೇನೂ ಸರಿಯೆನ್ನಿಸದಿದ್ದರೂ ನಾಗೇಶ ಹೆಗಡೆ ಅವರ ಕುರಿತು ಯೋಚಿಸತೊಡಗಿದಾಗಲೆಲ್ಲ ಮಹಾಭಾರತದ ಭೀಷ್ಮ ನೆನಪಾಗುತ್ತಾನೆ. ಸಲಹಿದ ಮೊಮ್ಮಕ್ಕಳು ಅಜ್ಜನಿಗೆ ಎದುರಾಗಿ ನಿಂತಿದ್ದಾರೆ. ಗಂಗಾಸುತ ಶರಶಯ್ಯೆಯಲ್ಲಿ ಮಲಗಿದ್ದಾನೆ. ಬಾಣಗಳನ್ನು ನಾಟಿಸಿಕೊಂಡು ಮಹಾಭಾರತದ ಭೀಷ್ಮ ಪಿತಾಮಹನೇನೊ ನೆಲಕ್ಕುರುಳಿದ. ಆಧುನಿಕ ಭಾರತದ ನಾಗೇಶ ಹೆಗಡೆ ಅವರದು ಬೇರೆಯದೇ ಕಥೆ. ಮೈಗೆ ಬಾಣಗಳು ನಾಟಿದಷ್ಟೂ ಅವರು ಹೆಚ್ಚು ಕ್ರಿಯಾಶೀಲರಾಗುತ್ತಿರುವಂತಿದೆ. ಮಾತುಗಳನ್ನು ನುಂಗಿಕೊಂಡು ನೆಲಕಚ್ಚಿದ ಭೀಷ್ಮಾಚಾರ್ಯನ ಕಥೆ ವರ್ತಮಾನದ ಭಾರತದಲ್ಲಿ ಈಗ ಬದಲಾಗಿದೆ. ನಂಜಿನ ನಾಲಗೆಯ ಎಳೆಯರನ್ನು ನಂಜುಂಡನಂತೆ ತಿದ್ದುವ ಪ್ರಯತ್ನವನ್ನು ನಾಗೇಶ ಹೆಗಡೆ ಮಾಡುತ್ತಿದ್ದಾರೆ. ಎದುರಿಗೆ ನಿಂತ ಬಾಲಕರು ಎಗತಾಳೆ ಮಾಡುತ್ತಿದ್ದರೂ, ಅದನ್ನು ಅತೀವ ಸಹನೆಯಿಂದ ಭರಿಸುತ್ತಾ ವಿಷ ಕಾರುವವರನ್ನು ವಾತ್ಸಲ್ಯದಿಂದ ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ವಯಸ್ಸಿನೊಂದಿಗೆ ವಿವೇಕ ಮತ್ತು ಸಂಯಮವನ್ನು ಕಳೆದುಕೊಳ್ಳುತ್ತಿರುವ ಹಾಗೂ ವಾನಪ್ರಸ್ಥದ ಸಮಯದಲ್ಲಿ ಹೊಸ ಯೂನಿಫಾರ್ಮ್ ತೊಟ್ಟು ಈವರೆಗೆ ತಾವು ನಡೆದುಬಂದ ದಾರಿಯೇ ಸುಳ್ಳೆನ್ನುವಂತೆ ಬದುಕುತ್ತಿರುವ ಹಿರಿಯರೇ ಹೆಚ್ಚಾಗುತ್ತಿರುವ ಉದಾಹರಣೆಗಳ ನಡುವೆ, ನಾಗೇಶ ಹೆಗಡೆ ಭಿನ್ನವಾಗಿ ಕಾಣಿಸುತ್ತಾರೆ; ಕೆಲವೊಮ್ಮೆ ಗುಂಪಿಗೆ ಸೇರದ ಪದದಂತೆಯೂ ಭಾಸವಾಗುತ್ತಾರೆ.

ನಾಗೇಶ ಹೆಗಡೆ ಅವರ ಮೊದಲ ಪರಿಚಯವಾದುದು ಹದಿನಾರರ ಪ್ರಾಯದಲ್ಲಿ. ‘ಪ್ರಜಾವಾಣಿ’, ‘ಸುಧಾ’ ಪತ್ರಿಕೆಗಳಲ್ಲಿ ಅವರ ಹೆಸರು ಕಣ್ಣಿಗೆ ಬಿದ್ದಿತ್ತಾದರೂ, ಲೇಖಕರಾಗಿ ಅವರ ಹೆಸರು ಎದೆಗೆ ಬಿದ್ದದ್ದು ‘ಅಣು ಚಳಿಗಾಲ: ಅಡಗಲು ಸ್ಥಳವೆಲ್ಲಿ?’ ಎನ್ನುವ ಪಿಯುಸಿ ಪಠ್ಯದ ಮೂಲಕ. ಆ ಕ್ಷಣ ಎದೆಗೆ ಬಿದ್ದ ನಾಗೇಶ ಹೆಗಡೆ ಅವರೊಂದಿಗೆ ಒಂದಷ್ಟು ಚಳಿಗಾಲಗಳನ್ನೂ ಬೇಸಿಗೆಕಾಲಗಳನ್ನೂ ಕಳೆಯುವ ಅವಕಾಶ ದೊರೆತದ್ದು ನನ್ನ ಅದೃಷ್ಟ. ‘ಚೆನ್ನಾಗಿ ಬರೆಯಬಲ್ಲೆ, ಏನನ್ನಾದರೂ ಬರೆಯಬಲ್ಲೆ’ ಎನ್ನುವ ಅಹಂಕಾರದೊಂದಿಗೇ ಪತ್ರಿಕೋದ್ಯಮಕ್ಕೆ ಬಂದ ನನಗೆ, ಕಳೆದ ಎರಡು ದಶಕಗಳಿಗೂ ಹೆಚ್ಚಿನ ಅವಧಿಯ ಪತ್ರಿಕೋದ್ಯಮದಲ್ಲಿ ಗುರುಸಮಾನರಾಗಿ ಕಂಡ ಕೆಲವೇ ಕೆಲವರಲ್ಲಿ ನಾಗೇಶ ಹೆಗಡೆ ಮುಖ್ಯರು. ಅವರೊಂದಿಗೆ ಕಳೆದ ಸಮಯ ‘ಸುಂದರ ಸ್ವಪ್ನ’ಗಳ ರೀತಿಯಲ್ಲಿ ಈಗಲೂ ಕಾಡುವುದಿದೆ.

(ನಾಗೇಶ ಹೆಗಡೆ)

ಪತ್ರಿಕೋದ್ಯಮದ ನಿರ್ದಿಷ್ಟ ವಿಭಾಗದಲ್ಲಿ ನಾಗೇಶ ಹೆಗಡೆ ಅವರಷ್ಟೇ ಅಥವಾ ಅವರಿಗಿಂತಲೂ ಹೆಚ್ಚಿನ ಕಸುಬುದಾರಿಕೆ ಇರುವವರನ್ನು ನಾನು ಕಂಡಿದ್ದೇನೆ. ಆದರೆ, ಸಂಪಾದನೆ, ವರದಿಗಾರಿಕೆ, ಪುಟ ಕಟ್ಟುವಿಕೆ, ಸಾಂದರ್ಭಿಕ ಇಲ್ಲಸ್ಟ್ರೇಷನ್‌ಗಳ ರಚನೆ, ಸುದ್ದಿಯ ಗ್ರಹಿಕೆ, ಬರವಣಿಗೆ, ಹೀಗೆ ಪತ್ರಿಕಾ ಕಚೇರಿಯ ಎಲ್ಲ ಕಸುಬುಗಳನ್ನು ಅರಗಿಸಿಕೊಂಡ ನಾಗೇಶ ಹೆಗಡೆ ಅವರಂಥ ಮತ್ತೊಬ್ಬ ಸವ್ಯಸಾಚಿಯನ್ನು ನಾನು ಕಂಡಿಲ್ಲ.

‘ಪ್ರಜಾವಾಣಿ’ ಬಳಗಕ್ಕೆ ಸೇರುವ ಮುನ್ನ, ಪತ್ರಿಕೆಗಳಿಗೆ ಆಗೊಂದು ಈಗೊಂದು ಬರಹಗಳನ್ನು ಒಗೆಯುವುದು ನನಗೆ ಪ್ರಿಯವಾದ ಹವ್ಯಾಸವಾಗಿತ್ತು. ಬೆಂಗಳೂರು ನಗರ ಮಾಲ್ ಸಂಸ್ಕೃತಿಗೆ ಆಗಷ್ಟೇ ತೆರೆದುಕೊಳ್ಳುತ್ತಿದ್ದ ದಿನಗಳವು. ಮಾಲ್‌ಗೆ ಹೋದ ಯುವ ತಾಯಿಯೊಬ್ಬಳು, ಜನಸಂದಣಿಯಲ್ಲಿ ತನ್ನ ಮಗುವಿನಿಂದ ದೂರವಾಗಿ ಕಂಗಾಲಾದಾಗ, ಮಾಲ್‌ನ ಸಿಬ್ಬಂದಿ ಕನ್ನಡದಲ್ಲಿ ಅನೌನ್ಸ್‌ಮೆಂಟ್ ನೀಡಲು ಹಿಂದುಮುಂದೆ ನೋಡಿ ಆ ಹೆಣ್ಣುಮಗಳನ್ನು ಸಂಕಟಕ್ಕೆ ಸಿಕ್ಕಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಪ್ರೇಮಿಗಳು ಧ್ವನಿ ಎತ್ತಿದಾಗ, ಮಾಲ್‌ನ ವ್ಯವಸ್ಥಾಪಕರು ಕ್ಷಮೆ ಕೋರಿದ್ದರು. ಬೆಂಗಳೂರಿನಲ್ಲಿ ಕನ್ನಡ ಚಳವಳಿ ಹೊಸ ರೂಪ (ಹೈಟೆಕ್ ಸ್ವರೂಪ) ಪಡೆದುಕೊಂಡ ಮೊದಲ ಹೆಜ್ಜೆಯದು. ಹೆಚ್ಚು ಸುದ್ದಿಯಾಗದೆ ತಣ್ಣಗಾದ ಆ ಪ್ರಕರಣದ ಬಗ್ಗೆ ಲೇಖನವೊಂದನ್ನು ಬರೆದು ‘ಪ್ರಜಾವಾಣಿ’ಯ ‘ಮೆಟ್ರೊ’ ಪುರವಣಿಗೆ ಕಳುಹಿಸಿದ್ದೆ, ಅದು ಪ್ರಕಟವೂ ಆಯಿತು. ಆದರೆ, ಲೇಖನ ಪ್ರಕಟಣೆಯ ಹಿಂದಿನ ಸಾಹಸ ಅರಿವಿಗೆ ಬಂದುದು ‘ಪ್ರಜಾವಾಣಿ’ಗೆ ಸೇರ್ಪಡೆಯಾದ ನಂತರ. ಲೇಖನಕ್ಕೆ ಸಂಬಂಧಿಸಿದಂತೆ ಮಾಲ್‌ನ ಫೋಟೊ ತೆಗೆಯಲು ಖುದ್ದಾಗಿ ಹೋಗಿದ್ದ ನಾಗೇಶ ಹೆಗಡೆ, ಅಲ್ಲಿನ ಭದ್ರತಾ ಸಿಬ್ಬಂದಿಯಿಂದ ಇರುಸುಮುರುಸು ಅನುಭವಿಸಿದ್ದರು. ಅಷ್ಟು ಮಾತ್ರವಲ್ಲ, ಪತ್ರಿಕೆಗೆ ಜಾಹೀರಾತು ನೀಡುವವರಿಗೆ ಅಸಮಾಧಾನ ತರಬಹುದಾದ ಬರಹವನ್ನು ಪ್ರಕಟಿಸುವ ರಿಸ್ಕ್ ತೆಗೆದುಕೊಂಡಿದ್ದರು. ಎಳೆ ನಿಂಬೆಕಾಯಿಯಂಥ ಪತ್ರಕರ್ತರ ಬರಹಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತರು ಈ ಬಗೆಯ ರಿಸ್ಕ್ ತೆಗೆದುಕೊಳ್ಳುವುದು ಯಾವ ಕಾಲದಲ್ಲೂ ವಿರಳವೇ.

‘ಪ್ರಜಾವಾಣಿ’ ಬಳಗಕ್ಕೆ ಸೇರ್ಪಡೆಯಾದ ಆರಂಭದಲ್ಲಿ ಕೆಲವು ದಿನ ನಾಗೇಶ ಹೆಗಡೆ ಅವರೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ದೊರೆತದ್ದು, ನನ್ನ ವೃತ್ತಿಜೀವನದ ಸ್ಮರಣೀಯ ದಿನಗಳೂ ಹೌದು. ‘ಮೆಟ್ರೊ’ ಹಾಗೂ ‘ಕರ್ನಾಟಕ ದರ್ಶನ’ ಪುರವಣಿಗಳ ಉಸ್ತುವಾರಿ ಅವರದಾಗಿತ್ತು. ಎಂ.ಕೆ. ಭಾಸ್ಕರರಾವ್ ಅವರು ‘ಮೆಟ್ರೊ’ ಪುರವಣಿಯ ಬಹುತೇಕ ಹೊಣೆಗಾರಿಕೆ ನಿರ್ವಹಿಸುತ್ತಿದ್ದರೂ, ‘ಮೆಟ್ರೊ’ ಪುರವಣಿಗೆ ಹೊಳಪು ದೊರೆಯುವಲ್ಲಿ ಹೆಗಡೆ ಅವರ ಪಾತ್ರವೂ ಇತ್ತು. ‘ಕರ್ನಾಟಕ ದರ್ಶನ’ ಪುರವಣಿಯಂತೂ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆಯುವಷ್ಟು ಚೇತೋಹಾರಿಯಾಗಿತ್ತು. ಪತ್ರಿಕೆಯೊಂದರ ಘನತೆ ಹೆಚ್ಚಿಸುವಂತಿದ್ದ ‘ಕರ್ನಾಟಕ ದರ್ಶನ’ ಪುರವಣಿ ಕನ್ನಡದ ಇತರ ಪತ್ರಿಕೆಗಳಿರಲಿ, ದೇಶದ ಯಾವುದೇ ಪತ್ರಿಕೆಯೂ ಕನವರಿಸುವಂತಹದ್ದು. ಆದರೆ, ನಾಗೇಶ ಹೆಗಡೆ ಅವರಂಥ ಪತ್ರಕರ್ತ ಎಲ್ಲ ಪತ್ರಿಕೆಗಳಿಗೂ ಹೇಗೆ ದಕ್ಕಬೇಕು?

ಮಟ್ಟಸ ಎತ್ತರದ, ತುಟಿಗಳಲ್ಲಿನ ಮಂದಹಾಸವನ್ನು ಕಣ್ಣುಗಳಲ್ಲೂ ಸೂಸುತ್ತಿದ್ದ ನಾಗೇಶ ಹೆಗಡೆ ಅವರಿಗೆ, ನಾಡಿನ ಯಾವುದೇ ಮೂಲೆಯಲ್ಲಿ ನಡೆದ ಸಣ್ಣ ಘಟನೆಯ ವಾಸನೆಯೂ ಅದು ಹೇಗೋ ಮುಟ್ಟುತ್ತಿತ್ತು. ಯಾರದೋ ಹೊಲದಲ್ಲಿ ಇದ್ದಕ್ಕಿದ್ದಂತೆ ನೀರು ಚಿಮ್ಮಿದ್ದು, ಚಾರಣದ ಗುಂಪೊಂದು ಕಾಡಿನಲ್ಲಿ ಆಕಸ್ಮಿಕವಾಗಿ ಇರುಳು ಕಳೆಯಬೇಕಾಗಿ ಬಂದದ್ದು, ಬೆತ್ತದಿಂದ ಕಲಾತ್ಮಕ ವಸ್ತುಗಳನ್ನು ರೂಪಿಸುವ ಕುಶಲಕರ್ಮಿಗಳ ಬದುಕು, ಮಂಗನ ಕಾಯಿಲೆಗೆ ಐವತ್ತು ವರ್ಷ ತುಂಬಿದ್ದು – ಹೂತ ಹುಣಸಿಯಲ್ಲಿ ಕಾವ್ಯ ಕಾಣುತ್ತಿದ್ದ ಬೇಂದ್ರೆಯವರಂತೆ ನಾಗೇಶ ಹೆಗಡೆ ಅವರು ಬದುಕಿನ ಎಲ್ಲ ಸಂಗತಿಗಳಲ್ಲೂ ಲೇಖನಗಳ ವಸ್ತು ಕಾಣಬಲ್ಲವರಾಗಿದ್ದರು.

ಸಂಪಾದನೆ, ವರದಿಗಾರಿಕೆ, ಪುಟ ಕಟ್ಟುವಿಕೆ, ಸಾಂದರ್ಭಿಕ ಇಲ್ಲಸ್ಟ್ರೇಷನ್‌ಗಳ ರಚನೆ, ಸುದ್ದಿಯ ಗ್ರಹಿಕೆ, ಬರವಣಿಗೆ, ಹೀಗೆ ಪತ್ರಿಕಾ ಕಚೇರಿಯ ಎಲ್ಲ ಕಸುಬುಗಳನ್ನು ಅರಗಿಸಿಕೊಂಡ ನಾಗೇಶ ಹೆಗಡೆ ಅವರಂಥ ಮತ್ತೊಬ್ಬ ಸವ್ಯಸಾಚಿಯನ್ನು ನಾನು ಕಂಡಿಲ್ಲ.

ಪತ್ರಿಕೆಗಳಲ್ಲಿನ ಪುರವಣಿಗಳ ಬಳಗದ್ದು ಒಂದು ಬಗೆಯಲ್ಲಿ ಸರ್ಕಾರಿ ನೌಕರಿ ಇದ್ದಂತೆ. ಬೆಳಗ್ಗೆ ಹತ್ತಕ್ಕೆ ಬಂದರೆ, ಸಂಜೆ ಐದರ ಸುಮಾರಿಗೆ ಅವರ ಕೆಲಸ ಮುಗಿಯುತ್ತದೆ. ಆನಂತರ ಪತ್ರಿಕಾ ಕಚೇರಿಯಲ್ಲಿ ಸುದ್ದಿ ಬರೆದು ಪುಟ ಕಟ್ಟುವ ಉಪಸಂಪಾದಕರು ಹಾಗೂ ವರದಿಗಾರರದೇ ಕಲರವ. ಆದರೆ, ನಾಗೇಶ ಹೆಗಡೆ ಅವರದು ಹತ್ತರಿಂದ ಐದರ ಪತ್ರಿಕೋದ್ಯಮವಾಗಿರಲಿಲ್ಲ. ಕಚೇರಿಯ ಕಸ ಗುಡಿಸುವವರು ಬರುವ ಮೊದಲೇ ಕಚೇರಿಗೆ ಬರುತ್ತಿದ್ದರು. ತಾವೇ ಬೀಗ ತೆಗೆದು ಕಚೇರಿಯೊಳಗೆ ಬಂದವರು, ಮನೆಗೆ ಮರಳುತ್ತಿದ್ದುದು ಸಂಜೆಗೆ ಗಾಢ ಕಪ್ಪಡರಿದ ನಂತರವೇ. ಎಷ್ಟೋ ಬಾರಿ ಸಂಜೆಯ ವೇಳೆಗೆ ‘ಕರ್ನಾಟಕ ದರ್ಶನ’ದ ಮುಖಪುಟ ಬದಲಾಗುತ್ತಿತ್ತು. ಕಲಾವಿದರನ್ನು ಬದಿಗೆ ಸರಿಸಿ, ತಾವೇ ಪುಟದ ಒಪ್ಪಓರಣದಲ್ಲಿ ತೊಡಗುತ್ತಿದ್ದರು. ಕೆಲವೊಮ್ಮೆ ಇಡೀ ವಾರ ಮುಖಪುಟದ ವಿನ್ಯಾಸ ನಡೆಯುತ್ತಲೇ ಇದ್ದು, ವಿನ್ಯಾಸವನ್ನು ಹಲವು ಬಾರಿ ಮುರಿದು ಕಟ್ಟಲಾಗುತ್ತಿತ್ತು.

ಎಡಿಟಿಂಗ್ ಕಲೆಯಲ್ಲಿ ನಾಗೇಶ ಹೆಗಡೆ ಅವರಷ್ಟು ಕಸುಬುದಾರರು ಯಾವ ಕಾಲದಲ್ಲೂ ತೀರಾ ಕಡಿಮೆ. ‘ಕರ್ನಾಟಕ ದರ್ಶನ’ ಇರಲಿ, ‘ಸುಧಾ’ ಆಗಲೀ, ನಾಗೇಶ ಹೆಗಡೆ ಅವರ ಉಸ್ತುವಾರಿ ಎಂದಮೇಲೆ, ಸಂಪಾದಕರ ಕತ್ತರಿ-ಕುಂಚದ ಸಂಸ್ಕಾರಕ್ಕೆ ಒಳಗಾಗದ ಬರಹಗಳು ಇಲ್ಲವೇ ಇಲ್ಲವನ್ನುವಷ್ಟು ಅಪರೂಪ. ನನ್ನ ಕೆಲವು ಬರಹಗಳು ಏನೊಂದೂ ಪರಿಷ್ಕರಣೆಯಿಲ್ಲದೆ, ಶೀರ್ಷಿಕೆಯ ಬದಲಾವಣೆಯೂ ಇಲ್ಲದೆ ಪ್ರಕಟಗೊಂಡಾಗ ಆಶ್ಚರ್ಯವಾಗುತ್ತಿತ್ತು. ಅಲ್ಲೊಂದು ಮಿಂಚು ಇಲ್ಲೊಂದು ಮುಗುಳು ಎನ್ನುವಂತೆ ಕೆಲವೊಮ್ಮೆ ಪದವ್ಯತ್ಯಾಸ ಕಾಣಿಸುತ್ತಿತ್ತು. ಹೊಸ ಪದದ ಸೇರ್ಪಡೆಯಿಂದಾಗಿ ಬರಹದ ಸೌಂದರ್ಯ ಹಾಗೂ ಅರ್ಥಸಾಧ್ಯತೆ ಹೆಚ್ಚುತ್ತಿದ್ದುದನ್ನು ಗಮನಿಸಿದಾಗಲೆಲ್ಲ, ಆ ಬದಲಾವಣೆ ಬರವಣಿಗೆಯ ಕುರಿತ ಪಾಠದಂತೆ ಕಾಣಿಸುತ್ತಿತ್ತು.

ತಮ್ಮೊಂದಿಗೆ ಕೆಲಸ ಮಾಡುವ ಕಿರಿಯರ ಬರವಣಿಗೆ ಹಾಗೂ ಸಂಪಾದನಾ ಕೌಶಲವನ್ನು ನಾಗೇಶ ಹೆಗಡೆ ಪರೀಕ್ಷೆಗೆ ಹಚ್ಚುತ್ತಿದ್ದರು. ಕಿರಿಯರ ಕೌಶಲ್ಯದ ಬಗ್ಗೆ ನಂಬಿಕೆ ಬಂದರೆ, ಅಪಾರ ಸ್ವಾತಂತ್ರ್ಯ ನೀಡುತ್ತಿದ್ದರು. ಎಡವಿದಾಗ, ಬೆಂಬಲಕ್ಕೆ ನಿಲ್ಲುತ್ತಿದ್ದರು.

ಜನಪ್ರಿಯತೆಯ ಪ್ರಭಾವಳಿಯಲ್ಲಿ ಮಿಂಚುವ ಕೆಲವು ಪತ್ರಕರ್ತರನ್ನು ನೋಡಿದಾಗ, ಯಶಸ್ವಿ ಪತ್ರಕರ್ತನ ಲಕ್ಷಣಗಳೇನು ಎನ್ನುವ ಪ್ರಶ್ನೆ ಎದುರಾಗುತ್ತದೆ. ನಮ್ಮಲ್ಲಿನ ಬಹುತೇಕ ಪತ್ರಕರ್ತರು ಸಮಾಜದಲ್ಲಿ ಗುರ್ತಿಸಿಕೊಂಡಿರುವುದು ತಮ್ಮ ಬರಹಗಳ ಮೂಲಕ. ಅದರಲ್ಲೂ ರಾಜಕೀಯ ವಿಶ್ಲೇಷಣೆ ಬರೆಯುವ ಅಂಕಣಕಾರರಾದರೆ, ಸಮಾಜದ ವಿಧಿಲಿಖಿತ ಬರೆಯುವ ವಿಧಾತನ ಪಟ್ಟವೇ ಅವರಿಗೆ ದೊರೆತುಬಿಡುತ್ತದೆ ಹಾಗೂ ಆ ಪಟ್ಟವನ್ನು ಅವರು ಆನಂದಿಸತೊಡಗುತ್ತಾರೆ. ಪತ್ರಕರ್ತನಿಗೆ ಬರವಣಿಗೆ ಮುಖ್ಯ ಎನ್ನುವುದು ನಿಜ. ಆದರೆ, ಬರವಣಿಗೆಗಿಂತಲೂ ಮುಖ್ಯವಾದುದು ಕಟ್ಟುವ ಗುಣ. ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಎಷ್ಟು ಕಿರಿಯರನ್ನು ರೂಪಿಸಿದ್ದಾರೆ, ತಂಡವನ್ನು ಹೇಗೆ ಮುನ್ನಡೆಸಿದ್ದಾರೆ, ಎಷ್ಟು ಬರಹಗಾರರನ್ನು ರೂಪಿಸಿದ್ದಾರೆ ಎನ್ನುವುದು ಮುಖ್ಯ. ಹೀಗೆ, ಕಟ್ಟುವ ಕೆಲಸವನ್ನು ಮಾಡಿ ಪತ್ರಿಕೆಗಳನ್ನು ಪೊರೆದ ಬಹಳಷ್ಟು ಹಿರಿಯರು ಸುದ್ದಿಮನೆಯ ಚೌಕಟ್ಟಿನಲ್ಲೇ ಉಳಿದು ಸಮಾಜದ ಕಣ್ಣಿಗೆ ಗೋಚರಿಸುವುದಿಲ್ಲ. ಪತ್ರಿಕೆಯನ್ನು ರೂಪಿಸಲು ಜೀವವನ್ನೇ ತೇದವರು ಪುಟದ ಮರೆಯಲ್ಲೇ ಉಳಿದುಬಿಡುತ್ತಾರೆ. ಆದರೆ, ತಮ್ಮ ಬರವಣಿಗೆಯನ್ನೇ ಮುಂದು ಮಾಡಿಕೊಂಡು ಬಂದವರು ಊರು ಸುತ್ತುವ ಉತ್ಸವಮೂರ್ತಿಗಳಾಗಿಬಿಡುತ್ತಾರೆ. ನಾಗೇಶ ಹೆಗಡೆ ಭಿನ್ನವಾಗುವುದು ಇಲ್ಲಿಯೇ. ಅವರು ತಾವು ಬರೆದದ್ದಷ್ಟೇ ಅಲ್ಲ, ಬರೆಸಿದರು ಕೂಡ. ಸದಾ ಉತ್ಸಾಹಮೂರ್ತಿ ಆಗಿರುವ ಅವರು ಉತ್ಸವಮೂರ್ತಿ ಆಗದೆ, ತಮ್ಮ ಪಾಡಿಗೆ ತಾವು ಕೆಲಸ ಮಾಡುವವರು. ತರಾಸು, ಅನಕೃ ಅವರನ್ನು ‘ಓದುವ ಸಂಸ್ಕೃತಿ’ ಬೆಳೆಸಿದವರು ಎನ್ನುತ್ತೇವೆ. ನಾಗೇಶ ಹೆಗಡೆ ಪತ್ರಿಕೆಗಳಿಗೆ ಬರೆಯುವ ಬರಹಗಾರರ ತಲೆಮಾರೊಂದನ್ನು ರೂಪಿಸಿದ ಮೇಷ್ಟ್ರು. ಪತ್ರಿಕೆಗಳಾಚೆಗೂ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕಮ್ಮಟಗಳಲ್ಲಿ, ಪತ್ರಿಕೋದ್ಯಮ ಕಾಲೇಜುಗಳಲ್ಲಿ ಬರವಣಿಗೆ ಸೂಕ್ಷ್ಮಗಳನ್ನು ಹೇಳಿಕೊಡುವ ಕೆಲಸವನ್ನು ಮಾಡುತ್ತಲೇ ಇದ್ದಾರೆ – ಈಗಲೂ.

(ರಘುನಾಥ ಚ.ಹ.)

ನಾಗೇಶ ಹೆಗಡೆ ಕನ್ನಡದ ಅತ್ಯುತ್ತಮ ಪತ್ರಕರ್ತರಲ್ಲೊಬ್ಬರು ಮಾತ್ರವಲ್ಲ; ದೇಶದ ಅತ್ಯುತ್ತಮ ಪತ್ರಕರ್ತರ ಯಾದಿಯಲ್ಲೂ ಸಲ್ಲುವವರು. ಆದರೆ, ಕರ್ನಾಟಕದ ಪತ್ರಿಕೆಗಳಿಗೆ ಅವರು ದಕ್ಕಿದ್ದು ಕನ್ನಡದ ಭಾಗ್ಯ.

‘ವಿಜ್ಞಾನ ಬರಹಗಾರ’ ಎನ್ನುವುದು ನಾಗೇಶ ಹೆಗಡೆ ಅವರಿಗೆ ತಳಕು ಹಾಕಿಕೊಂಡಿರುವ ಲೇಬಲ್ಲು. ದಶಕಗಳಿಂದಲೂ ‘ವಿಜ್ಞಾನ ವಿಶೇಷ’ ರೂಪಿಸುತ್ತಲೇ ಇರುವ ಅವರಿಗದು ಪ್ರಿಯವಾದ ವಿಶೇಷಣವೂ ಇದ್ದೀತು. ಆದರೆ, ‘ವಿಜ್ಞಾನ ಬರಹಗಾರ’ ಎಂದಷ್ಟೇ ಹೇಳುವುದು ಅವರಿಗೆ ಮಾಡುವ ಅನ್ಯಾಯ. ಅವರು ಕನ್ನಡದ ಬರಹಗಾರ. ಕನ್ನಡಿಗರು ಹೆಮ್ಮೆ ಪಡಬೇಕಾದ ಬರಹಗಾರ. ಕನ್ನಡ ಭಾಷೆಯ ಸೌಂದರ್ಯ ಹೆಚ್ಚಿಸಿದ, ನುಡಿಸಾಧ್ಯತೆಗಳನ್ನು ಹೆಚ್ಚಿಸಿದ ಬರಹಗಾರ. ಸರಳತೆಯನ್ನೇ ಸೌಂದರ್ಯವನ್ನಾಗಿಸಿಕೊಂಡ ಪುಟ್ಟ ವಾಕ್ಯಗಳು ಹಾಗೂ ಕಥನ ಕೌತುಕದ ಸ್ವರೂಪ ಅವರ ಬರವಣಿಗೆಯ ವಿಶೇಷ. ಮಕ್ಕಳಿಗೂ ಅರ್ಥವಾಗಬಲ್ಲ ಭಾಷೆಯ ಅವರು ಮಕ್ಕಳ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯೂ ಮಹತ್ವದ್ದು. ಮಕ್ಕಳ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ ನೀಡಲಾಗುವ ‘ಟಾಟಾ’ ಬಳಗದ ‘ಬಿಗ್ ಲಿಟಲ್ ಬುಕ್ ಅವಾರ್ಡ್’ ಕನ್ನಡದಲ್ಲಿ ಈವರೆಗೆ ಸಂದಿರುವುದು ನಾಗೇಶ ಹೆಗಡೆ ಒಬ್ಬರಿಗೇನೆ.

ಪತ್ರಕರ್ತ ಚಳವಳಿಕಾರನೂ ಹೌದು ಎಂದು ನಂಬಿರುವ ನಾಗೇಶ ಹೆಗಡೆ ನಿವೃತ್ತಿಯ ನಂತರ ತಮ್ಮನ್ನು ತಾವು ವರ್ತಮಾನಕ್ಕೆ ಒಗ್ಗಿಸಿಕೊಂಡಿರುವ ಪರಿ ಆಶ್ಚರ್ಯ ಹುಟ್ಟಿಸುವಂತಿದೆ. ಪತ್ರಿಕೆಯಲ್ಲಿದ್ದಾಗ ಪರಿಸರ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದ ಅವರು, ನಿವೃತ್ತಿಯ ನಂತರ ತಮ್ಮ ಕಾಳಜಿಯ ವ್ಯಾಪ್ತಿಯನ್ನು ಇಡೀ ಸಮಾಜಕ್ಕೆ ವಿಸ್ತರಿಸಿಕೊಂಡಂತಿದೆ. ಆ ಕಾರಣದಿಂದಲೇ, ದೇಶದ ಬಹುತ್ವಕ್ಕೆ ಆತಂಕ ಉಂಟುಮಾಡುವ ಘಟನೆಗಳು ನಡೆದಾಗಲೆಲ್ಲ ಅದರ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸವನ್ನು ಅವರು ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದಾರೆ. ಕಸ ಬಳಿಯುವವರ ಕೈಗೂ ಕೆಸರು ಹತ್ತುವುದು ಸಹಜವಷ್ಟೇ. ವ್ಯವಸ್ಥೆಯ ಓರೆಕೋರೆಗಳ ಬಗ್ಗೆ ಮಾತನಾಡುವ ನಾಗೇಶ ಹೆಗಡೆಯವರೂ ಕೆಲವರ ಟೀಕೆ ಟಿಪ್ಪಣಿಗೆ ಗುರಿಯಾಗಿದ್ದಾರೆ. ಹಾಗೆ ಟೀಕಿಸುವವರಲ್ಲಿ ಅವರು ಬೆಳೆಸಿದ ಬಾಲಕರೂ ಇದ್ದಾರೆ. ಸಾಮಾಜಿಕ ಜಾಲತಾಣಗಳ ಹೈಕಳು ನಾಗೇಶ ಹೆಗಡೆ ಅವರನ್ನು ಗೇಲಿ ಮಾಡುವುದನ್ನು ನೋಡಿದಾಗ ಅನ್ನಿಸುವುದು: ಹೆಗಡೆಯವರು ತಮ್ಮ ಶಿಷ್ಯರ ಲೇಖನಗಳನ್ನು ತಿದ್ದಿದರು. ಬರವಣಿಗೆಯ ಪಾಠ ಹೇಳಿಕೊಟ್ಟರು. ಆದರೆ ಕೃತಜ್ಞತೆ ಮತ್ತು ಕೃತಘ್ನತೆಗಳ ನಡುವಣ ವ್ಯತ್ಯಾಸ ಕಲಿಸಿದಂತಿಲ್ಲ. ಅಥವಾ ಈ ಪಾಠ ಈ ತಲೆಮಾರಿಗೆ ಬೇಕಿಲ್ಲವೇನೊ?

(ಕೃತಿ: ನೆಲಗುಣ (ನಾಗೇಶ ಹೆಗಡೆ ಅಭಿನಂದನಾ ಗ್ರಂಥ), ಸಂಪಾದಕರು: ಗುರುರಾಜ್ಎಸ್‌. ದಾವಣಗೆರೆ, ಪ್ರಕಾಶಕರು: ನಾಗೇಶ ಹೆಗಡೆ ಅಭಿನಂದನಾ ಸಮಿತಿ, ಪುಟಗಳು: 434, ಬೆಲೆ: 350/- ಭೂಮಿ ಬುಕ್ಸ್: 9449177628)