ಸುದರ್ಶನನು ದೀನಾನಂದನಾಗಿ ಗಳಿಸಿದ ಜನಪ್ರಿಯತೆ, ಯಶಸ್ಸು, ನಿರ್ಲಿಪ್ತತೆ ಮತ್ತು ನೈತಿಕ ಕಟ್ಟುಪಾಡುಗಳಿಗೆ ಒಗ್ಗಿದ ಬದುಕಿನ ಕಡೆಗೆ ಕಾದಂಬರಿಯು ಗಮನವನ್ನು ಹರಿಸಿದ್ದರೂ, ಇದನ್ನು ಕೇವಲ ಸುದರ್ಶನನ್ನು ಕುರಿತ ಕಾದಂಬರಿಯನ್ನಾಗಿ ಓದಲಾಗದು. ಆತನು ಕಾದಂಬರಿಯ ಪ್ರಧಾನ ಪಾತ್ರವಾದರೂ ಇವನೊಂದಿಗೆ ವೈದೃಶ್ಯದಲ್ಲಿ ನಿಲ್ಲಬಲ್ಲ ಹಲವು ಪಾತ್ರಗಳು ಇವೆ. ಆ ಪಾತ್ರಗಳು ಸೂಚಿಸುವ ಬಹುಮುಖೀ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಕಾದಂಬರಿಯನ್ನು ಗ್ರಹಿಸಬೇಕಾಗುತ್ತದೆ. ಸುದರ್ಶನನ ಯೋಗ್ಯತೆಯನ್ನು ತಿಳಿಯಲು ಗಿರಿಧರನನ್ನು, ಉಷೆಯ ಯೋಗ್ಯತೆಯನ್ನು ಅರಿಯಲು ಪ್ರಭೆಯನ್ನು ಅವಲೋಕಿಸಬೇಕು.  ಸಂಗೀತಶಾಸ್ತ್ರಿಗಳ ಪರಿಚಯದಿಂದ ಸಂತುಷ್ಟರಾಗಿ ಅಪ್ಪಣನಾಯಕರ ವ್ಯಕ್ತಿತ್ವವನ್ನು ಗುರುತಿಸಬೇಕು. ತಿರುಮಲರಾಯರನ್ನು ನೋಡಿ ಹಿರಿಯರೆಂದು ವಂದಿಸಬೇಕು.
ಆನಂದಕಂದರ ‘ಸುದರ್ಶನ’ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ ನಿಮ್ಮ ಓದಿಗೆ

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಕನ್ನಡ ಸಾಹಿತ್ಯವು ಮಹತ್ವದ ಬೆಳವಣಿಗೆಯನ್ನು ಕಂಡಿತು. ಕನ್ನಡಕ್ಕೆ ವಿವಿಧ ರೀತಿಯ ಗದ್ಯ ಕಥನಗಳು ಆಗಮಿಸಿದವು. ಸಂಸ್ಕೃತ, ಇಂಗ್ಲಿಷ್, ಬಂಗಾಳಿ, ಮರಾಠಿ ಭಾಷೆಗಳಿಂದ ಕನ್ನಡವು ಅನುವಾದ, ರೂಪಾಂತರ, ಅನುಕರಣೆ, ಪುನರ್ ನಿರೂಪಣೆಗಳ ಮೂಲಕ ಅನೇಕ ಬಗೆಯ ಗದ್ಯ ರಚನೆಗಳನ್ನು ಪಡೆಯಿತು. ಪುರಾಣ, ಇತಿಹಾಸ, ಜಾನಪದಗಳಿಂದ ವಸ್ತುಗಳನ್ನು ತೆಗೆದುಕೊಂಡು ಹೊಸ ಬಗೆಯ ಗದ್ಯ ಕಥನಗಳನ್ನು ರಚಿಸುವ ಪ್ರಯತ್ನಗಳಾದವು. ಒಂದು ನಿಟ್ಟಿನಲ್ಲಿ ಸಾಂಪ್ರದಾಯಿಕ ಭಾರತೀಯ ಕಥನ ಮಾದರಿಗಳಲ್ಲಿ ಸಮಕಾಲೀನ ಪಾತ್ರ, ವಿವರಗಳನ್ನು ಒಳಗೊಳ್ಳುವ ಪ್ರಯೋಗಗಳು ನಡೆದರೆ ಇನ್ನೊಂದು ನಿಟ್ಟಿನಲ್ಲಿ ಸ್ಥಳೀಯವೂ ದೇಶೀಯವೂ ಆದ ವಸ್ತು ವಿವರಗಳನ್ನು ಪಾಶ್ಚಾತ್ಯ ಮಾದರಿಯ ಗದ್ಯ ಬಂಧದಲ್ಲಿ ಕೂಡಿಸುವ ಪ್ರಯೋಗಗಳು ನಡೆದವು. ಈ ಮೂಲಕ ಕಾದಂಬರಿ ಪ್ರಕಾರವು ಭಾರತೀಯ ಸಾಹಿತ್ಯವನ್ನು ಪ್ರವೇಶಿಸಿತು.

ಗುಲ್ವಾಡಿ ವೆಂಕಟರಾಯರು, ಬೋಳಾರ ಬಾಬುರಾಯರು, ಎಂ. ಎಸ್. ಪುಟ್ಟಣ್ಣ, ಗಳಗನಾಥ, ಬಿ. ವೆಂಕಟಾಚಾರ್ಯ ಮುಂತಾದವರು ಕಾದಂಬರಿಗಳನ್ನು ಬರೆದ ಆದ್ಯರೆನಿಸಿಕೊಂಡರು. ನಂತರದ ತಲೆಮಾರಿನ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ಕುವೆಂಪು, ಕಡೆಂಗೋಡ್ಲು ಶಂಕರ ಭಟ್ಟ, ಮಿರ್ಜಿ ಅಣ್ಣಾರಾಯ, ರಾವ್ ಬಹದ್ದೂರ ಮೊದಲಾದವರ ಸಮಕಾಲೀನರಾಗಿ ಕಾದಂಬರಿ ಪ್ರಕಾರವನ್ನು ಬೆಳೆಸಿದವರ ಪೈಕಿ ಆನಂದಕಂದ (ಬೆಟಗೇರಿ ಕೃಷ್ಣ ಶರ್ಮ: 1900-1982) ಅವರೂ ಒಬ್ಬರು. ದ. ರಾ. ಬೇಂದ್ರೆ, ಆಲೂರ ವೆಂಕಟರಾಯ, ಶಂಬಾ ಜೋಷಿಯಂಥ ಧೀಮಂತರ ನಿಕಟವರ್ತಿಗಳಾಗಿದ್ದರೂ, ಯಾರ ಪ್ರಭಾವಕ್ಕೂ ಪರವಶವಾಗದ ಬಹುಮುಖ ಪ್ರತಿಭೆ ಮತ್ತು ಕ್ರಿಯಾಶೀಲ ವ್ಯಕ್ತಿತ್ವ ಅವರದ್ದು. ಹಲವು ಅಡಚಣೆಗಳ ನಡುವೆ ‘ಜಯಂತಿ’ ಮಾಸಪತ್ರಿಕೆಯನ್ನು ನಡೆಸುವ ಮೂಲಕ ಕನ್ನಡ ಸಾಹಿತ್ಯದ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದದ್ದು ಅವರು ಸ್ವೀಕರಿಸಿದ ಕನ್ನಡ ದೀಕ್ಷೆಯ ಫಲ. ಜನಪದ ಸೊಗಡನ್ನು ಹೊಂದಿದ ಸೊಗಸಾದ ಕವಿತೆಗಳಲ್ಲಿ, ಕನಕದಾಸ, ಪುರಂದರದಾಸರನ್ನು ಕುರಿತ ಪ್ರೌಢ ಕೃತಿಗಳಲ್ಲಿ, ಕನ್ನಡ ಸಂಸ್ಕೃತಿಯ ಬಗ್ಗೆ ಬರೆದ ಲೇಖನಗಳಲ್ಲಿ, ಸಣ್ಣ ಕತೆಗಳಲ್ಲಿ, ‘ರಾಜಯೋಗಿ’, ‘ಅಶಾಂತಿಪರ್ವ’, ‘ಮಲ್ಲಿಕಾರ್ಜುನ’ ಮುಂತಾದ ಐತಿಹಾಸಿಕ ಕಾದಂಬರಿಗಳಲ್ಲಿ ಅವರ ಸೃಜನಶೀಲತೆ, ಪಾಂಡಿತ್ಯ, ಸಂಶೋಧನ ಸಾಮರ್ಥ್ಯಗಳು ಉಜ್ವಲವಾಗಿ ಬೆಳಗಿವೆ. ‘ಸುದರ್ಶನ’ ಮತ್ತು ‘ಮಗಳ ಮದುವೆ’ ಎಂಬ ಸಾಮಾಜಿಕ ಕಾದಂಬರಿಗಳೂ ಉಲ್ಲೇಖನೀಯವಾಗಿವೆ.

(ಆನಂದಕಂದ (ಬೆಟಗೇರಿ ಕೃಷ್ಣಶರ್ಮ)

ನವೋದಯ ಯುಗದ ಧೋರಣೆಗಳನ್ನು ಬಿಂಬಿಸುವ ಅವರ ‘ಸುದರ್ಶನ’ (ಮೊದಲ ಮುದ್ರಣ: 1933) ಎಂಬ ಕಾದಂಬರಿಗೆ ಸಂಬಂಧಿಸಿದ ಘಟನೆಗಳು ನಡೆಯುವುದು ಬೆಳಗಾವಿಯಲ್ಲಿ. ಕಾದಂಬರಿಯ ನಾಯಕನಾದ ಸುದರ್ಶನನ ಚಿಂತೆ, ಚಿಂತನೆ ಮತ್ತು ಚಟುವಟಿಕೆಗಳು ಕೃತಿಯ ಹೆಚ್ಚಿನ ಭಾಗಗಳನ್ನು ವ್ಯಾಪಿಸಿಕೊಂಡಿವೆ. ಇವನ ಸುತ್ತಲೂ ನಡೆಯುವ ಅನೇಕ ಸಂಗತಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಸಂಬಂಧಗಳ ನೇಯ್ಗೆಯು ಕಾದಂಬರಿಯ ವಿನ್ಯಾಸವನ್ನು ರೂಪಿಸಿದೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಂಡು ಆಪ್ತವಾಗಿ ಓದಿಸುತ್ತಾ ಹೋಗುವ ಕಾದಂಬರಿಯ ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ.

ಗಿರಿಧರನ ಹೆತ್ತವರಾದ ಅಪ್ಪಣರಾಯ-ಯಶೋದಮ್ಮನವರು ಸಾಕಿ ಸಲಹಿದ ಹುಡುಗ ಸುದರ್ಶನ. ಯಶೋದಮ್ಮನ ಅಣ್ಣನಾದ ತಿರುಮಲರಾಯನ ಮಗಳು ಉಷೆ. ತಿರುಮಲರಾಯನು ತನ್ನ ಹೆಂಡತಿಯು ತೀರಿಕೊಂಡ ಮೇಲೆ ಕಮಲಮ್ಮನನ್ನು ಮದುವೆಯಾಗಿ ಆಕೆಯ ಜೊತೆಯಲ್ಲಿ ವಾಸವಾಗಿರುವುದರಿಂದ ತಬ್ಬಲಿಯಾದ ಉಷೆಯನ್ನು ಯಶೋದಮ್ಮನೇ ಸಾಕುತ್ತಿರುತ್ತಾಳೆ. ಬಾಲ್ಯದ ಒಡನಾಡಿಗಳಾದ ಸುದರ್ಶನ ಮತ್ತು ಉಷೆಯ ಗೆಳೆತನವು ಪ್ರಾಪ್ತ ವಯಸ್ಸಿಗೆ ಬರುವಷ್ಟರಲ್ಲಿ ಪ್ರೇಮವಾಗಿ ಬದಲಾಗುತ್ತದೆ. ಅಪ್ಪಣರಾಯರ ತಂಗಿಯೂ, ಗಿರಿಧರನ ಅತ್ತೆಯೂ ಆಗಿರುವ ಶಾರದಮ್ಮನ ಮಗಳು ಪ್ರಭೆಗೆ ಗಿರಿಧರನ ಮೇಲೆ ಒಲವು. ಆದರೆ ಗಿರಿಧರನಿಗೆ ಉಷೆಯ ಮೇಲೆ ಮೋಹ. ಆದ್ದರಿಂದ ಆಕೆಯ ಪ್ರಿಯಕರನೂ ತನ್ನ ಆತ್ಮೀಯ ಗೆಳೆಯನೂ ಆದ ಸುದರ್ಶನನ ಮೇಲೆ ಅಸೂಯೆಯನ್ನು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ತೋರ್ಪಡಿಸುತ್ತಾನೆ. ಅವನ ಹಟವನ್ನು ತಡೆಯಲಾರದೆ ಅವನ ತಂದೆ ತಾಯಿಯರು ಉಷೆಯೊಂದಿಗೆ ಅವನ ಮದುವೆಯನ್ನು ಮಾಡಲು ಒಪ್ಪುತ್ತಾರೆ. ಇದರಿಂದ ನೊಂದ ಸುದರ್ಶನನು ವೈರಾಗ್ಯ ಪರನಾಗಿ ಮನೆಯನ್ನು ಬಿಟ್ಟು ದೀನಾನಂದ ಎಂಬ ಹೆಸರಲ್ಲಿ ದೀನ ದಲಿತರ ಸೇವೆಯನ್ನು ಮಾಡುತ್ತಾ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡರೆ ಗಿರಿಧರನನ್ನು ಮದುವೆಯಾಗಲು ಒಪ್ಪದ ಉಷೆಯು ಅವನಿಂದ ಹೊರದಬ್ಬಿಸಿಕೊಂಡು, ತಂದೆಯಾದ ತಿರುಮಲರಾಯನ ಮನೆಗೆ ಬಂದು ಮಲತಾಯಿಯು ನೀಡುವ ಕಷ್ಟವನ್ನು ಸಹಿಸಿಕೊಳ್ಳುತ್ತಾ ಬಾಳುತ್ತಾಳೆ. ವಿಧಿಯಿಲ್ಲದೆ ಪ್ರಭೆಯನ್ನು ಮದುವೆಯಾಗುವ ಗಿರಿಧರನು ತನ್ನ ಮದುವೆಯ ಸಂದರ್ಭದಲ್ಲಿ ಹಾಡಲು ಬಂದ ಅವಂತಿಕೆ ಎಂಬ ಸೂಳೆಗೆ ಮರುಳಾಗಿ ಆಕೆಯ ಸಂಪರ್ಕವನ್ನು ಬೆಳೆಸುತ್ತಾನೆ. ಇದರಿಂದ ಪ್ರಭೆಯ ಬಾಳು ಮೂರಾಬಟ್ಟೆಯಾಗುತ್ತದೆ.

ಬಾಗಲಕೋಟೆಯ ಮನೆಯಲ್ಲಿ ಅನಾರೋಗ್ಯದಿಂದ ನರಳುತ್ತಿರುವ ತಿರುಮಲರಾಯನಿಗೆ ಮದ್ದನ್ನು ನೀಡಿ ಗುಣಪಡಿಸಲು ಬಂದ ದೀನಾನಂದನನ್ನು ಕಂಡ ಉಷೆಗೆ ಆತನೇ ಸುದರ್ಶನನೆಂದು ತಿಳಿದು ಬೆರಗಾದರೆ, ಆಕೆಯು ತಿರುಮಲರಾಯರ ಮಗಳೆಂದು ಆಗ ತಾನೇ ತಿಳಿದುಕೊಂಡ ಸುದರ್ಶನನೂ ಚಕಿತನಾಗುತ್ತಾನೆ. ತಿರುಮಲರಾಯರನ್ನು ತನ್ನ ಆಶ್ರಮಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಶುದ್ಧ ಹವೆಯಲ್ಲಿ ಚಿಕಿತ್ಸೆಯನ್ನು ನೀಡುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಂತೆ ಉಷೆಯು ಸುದರ್ಶನನ ಜೊತೆ ಆಶ್ರಮವಾಸಿಯಾಗಿದ್ದುಕೊಂಡು ಬಡವರ ಬಾಳನ್ನು ಉದ್ಧರಿಸುವ ಸಂಕಲ್ಪವನ್ನು ಮಾಡುತ್ತಾಳೆ.

ಸಂಭಾಷಣೆಯ ಮೂಲಕ ಆರಂಭವಾಗುವ ಕಾದಂಬರಿಯು ಉಷಾ ಮತ್ತು ಪ್ರಭೆ ಎಂಬ ಗೆಳತಿಯರ ಸ್ವಭಾವಗಳ ವೈರುಧ್ಯವನ್ನು ಅವರ ಮಾತು, ಉಡುಗೆ, ಮತ್ತು ನಡತೆಗಳ ಮೂಲಕ ಕಡೆದು ನಿಲ್ಲಿಸುತ್ತದೆ. ಉಷೆಯ ಪಾಲಿಗೆ ಸಂಗೀತವು ಸುಧಾ ರಸವಾದರೆ ಪ್ರಭೆಯ ಪಾಲಿಗೆ ಅದು ಬೇವಿನ ರಸ. ಗಿರಿಧರ ಮತ್ತು ಸುದರ್ಶನರನ್ನು ಎದುರುಗೊಳ್ಳಲು ರೈಲು ನಿಲ್ದಾಣಕ್ಕೆ ತೆರಳುವಾಗ ಪ್ರಭೆಯು ಅಲಂಕಾರಮಯವಾದ ರೇಷ್ಮೆ ಸೀರೆ ಮತ್ತು ಆಭರಣಗಳನ್ನು ಧರಿಸಿದರೆ, ರೈಲಿನಿಂದ ಇಳಿದ ಗಿರಿಧರನು ವಿದೇಶೀ ಪೋಷಾಕಿನಲ್ಲಿರುತ್ತಾನೆ. ಸುದರ್ಶನನು ಖಾದಿಧಾರಿಯಾಗಿದ್ದರೆ ಉಷೆಯು ಸರಳ ಉಡುಗೆಯಲ್ಲೇ ಕಂಗೊಳಿಸುತ್ತಾಳೆ. ಪ್ರಭೆಯು ಗಿರಿಧರನ ಕೈಯನ್ನು ಕುಲುಕಿ “ಅಯ್ಯೋ! ಇದೇನಿದು? ಕೋಟಿಗೆಲ್ಲ ಹುಡಿ ತಗುಲಿಕೊಂಡಿದೆಯಲ್ಲಾ?” ಎಂದರೆ ಉಷೆಯು ಸುದರ್ಶನನ ಬಳಿಗೆ ಹೋಗಿ ವಿನಯದ ನಗೆಯೊಡನೆ “ಪ್ರವಾಸ ಸುಖಕರವಾಯಿತಲ್ಲವೇ?” ಎಂದು ಕೇಳುತ್ತಾಳೆ. ಇದು ಅವರ ಸ್ವಭಾವಗಳ ಸೂಕ್ಷ್ಮ ದರ್ಶನವನ್ನು ಮಾಡಿಸುವುದರೊಂದಿಗೆ ಇಂಗ್ಲಿಷ್ ಮಾದರಿಯ ಶಿಕ್ಷಣದ ಪ್ರವೇಶ, ಹಳೆಯ ಸಂಪ್ರದಾಯಗಳು-ಮೌಲ್ಯಗಳು ನಾಶವಾಗಿರದಿದ್ದರೂ ಹೊಸ ಜೀವನ ಕ್ರಮ, ಮೌಲ್ಯ ವ್ಯವಸ್ಥೆಗಳು ನಿಧಾನವಾಗಿ ಬೇರು ಬಿಡತೊಡಗಿದ ರೀತಿ, ಸುಧಾರಣಾವಾದಿ ಚಳುವಳಿಗಳು ಆರಂಭಗೊಂಡ ಸೂಚನೆ, ಹೊಸ ಬೆಳವಣಿಗೆಗಳು ಸಮಾಜದ ಮೇಲೆ – ಕುಟುಂಬದ ಒಳಗೆ ತಮ್ಮ ಪ್ರಭಾವವನ್ನು ಬೀರತೊಡಗಿದ್ದರ ಪ್ರತಿಫಲನವನ್ನು ಕಾಣಿಸುತ್ತದೆ.

ಜುಟ್ಟು ಹೋಗಿ ಕ್ರಾಪು ಬಂದದ್ದು ಆಧುನಿಕತೆಯ ಪರಿಣಾಮ. ಇಲ್ಲಿ ಅದರ ಬಗ್ಗೆ ಹಳಬರಿಂದ ಪ್ರತಿರೋಧವು ಬಂದಿರುವ ಸೂಚನೆಯಿಲ್ಲ. ಆ ಬದಲಾವಣೆಗೆ ಸಿಕ್ಕ ಇತ್ಯಾತ್ಮಕ ಪ್ರಶಂಸಾತ್ಮಕ ಪ್ರತಿಕ್ರಿಯೆಗಳನ್ನು ಇಲ್ಲಿ ಕಾಣಬಹುದು. ಬಟ್ಟೆಬರೆಗಳ ವಿಚಾರದಲ್ಲೂ ಇದು ನಿಜ. ಮೇಲುನೋಟಕ್ಕೆ ಸರಳವೆಂದು ಅನಿಸುವ ಆಧುನೀಕರಣದ ಪ್ರಕ್ರಿಯೆಯ ವಿನ್ಯಾಸವೊಂದನ್ನು ಕಾಣುತ್ತೇವೆ. ಇಲ್ಲಿ ಗಿರಿಧರ ಮತ್ತು ಪ್ರಭೆ ಹೊರಗಿನಿಂದ ಆಧುನಿಕರಾಗಿ ಕಾಣಿಸುತ್ತಿದ್ದರೂ ಅಂತರಂಗದಲ್ಲಿ ಹೇಗೆ ಸೊರಗಿದ್ದಾರೆ ಎಂದು ಕ್ರಮೇಣ ತಿಳಿದು ಬರುತ್ತದೆ. ‘ದೇಶದ ಬಡಬಗ್ಗರ ಹಣವನ್ನು ಬಕ್ಕರಿಸಿ ಕಪ್ಪು ಹೊಗೆಯನ್ನು ಕಾರುತ್ತಲಿರುವ ಉಗಿಬಂಡಿ’ ಎಂಬ ಮಾತಿನಲ್ಲಿ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಅಡಳಿತ ವಿರುದ್ಧ ಅಸಹನೆಯೂ ಸೂಕ್ಷ್ಮವಾಗಿ ವ್ಯಕ್ತವಾಗುತ್ತದೆ.

ಬದುಕಿನ ಸೃಜನಶೀಲತೆಯ ಪರವಾಗಿರುವ ಸುದರ್ಶನ ಮತ್ತು ಉಷೆಯ ಪ್ರೀತಿ ಅರಳುವುದು ಸಂಗೀತದ ನಡುವೆ. ಅವರ ವಿರೋಧಿ ನೆಲೆಯಲ್ಲಿರುವ ಗಿರಿಧರ ಮತ್ತು ಪ್ರಭೆ ಆಡಂಬರದ ಬದುಕಿಗೆ ಮರುಳಾದವರಾದರೂ ಕಲಾಪ್ರೇಮಿಯಾದ ಗಿರಿಧರನಿಗೂ ಉಷೆಯ ಮೇಲೆ ಪ್ರೀತಿಯಿದೆಯೇ ಹೊರತು ಅವನಿಗೆ ಸರಿಯಾದ ಜೋಡಿ ಎಂಬಂತೆ ವರ್ತಿಸಲು ಹೆಣಗುತ್ತಿದ್ದ ತನ್ನ ಅತ್ತೆಯ ಮಗಳು ಪ್ರಭೆಯ ಮೇಲೆ ಅಲ್ಲ. ಆಕೆಗಾಗಿ ಏನನ್ನೂ ತಾರದ ಗಿರಿಧರನು ಉಷೆಗಾಗಿ ಕರವಸ್ತ್ರವನ್ನು ತಂದುಕೊಟ್ಟಾಗ ಅವಳು ಅದರ ಮೇಲೆ ಸುದರ್ಶನನ ಹೆಸರಿನ ಕಸೂತಿಯನ್ನು ಮಾಡುವ, ‘ತನಗೆ ಇಷ್ಟವಾದ ವಸಂತ ರಾಗವನ್ನು ಹಾಡು’ ಎಂದಾಗ ಅವಳು ಸುದರ್ಶನಿಗೆ ಅಚ್ಚುಮೆಚ್ಚಾಗಿರುವ ಕೇದಾರಗೌಳವನ್ನು ಹಾಡುವ, ಕನಸಿನಲ್ಲೂ ಅವನನ್ನೇ ಆತ್ಮೀಯವಾಗಿ ಕೂಗಿ ಕರೆಯುವ ಕ್ರಿಯೆಗಳು ಗಿರಿಧರನ ಮನದಲ್ಲಿ ಅಸಮಾಧಾನವನ್ನು ಹುಟ್ಟಿಸುತ್ತವೆ. ಆದರೂ ಉಷೆಯ ಆಲಾಪನೆಗೆ ಮಾರುಹೋಗುತ್ತಾನೆ. ನಡುವೆ ಅಚಾತುರ್ಯವು ನಡೆದರೆ ಕ್ಷುದ್ರ ಜೀವಿಯ ಎದುರೂ ಶಕ್ತಿ ಯುಕ್ತಿಗಳು ನಿಲ್ಲಲಾರವು ಎಂಬ ಆಶಯಕ್ಕೆ ತಕ್ಕಂತೆ ಚದುರಂಗದ ಆಟದ ವೇಳೆಯಲ್ಲಿ ಉಷೆಯ ವಜೀರನು ಸುದರ್ಶನನ ಒಂಟೆಗೆ ತುತ್ತಾಗುವ ಸನ್ನಿವೇಶವು ಬರುತ್ತದೆ. ತುಸು ಪ್ರಜ್ಞಾಪೂರ್ವಕವಾಗಿ ಈ ವಿದ್ಯಮಾನವನ್ನು ಹೆಣೆದಿದ್ದರೆ ಒಳ್ಳೆಯ ಸಂಕೇತವಾಗಿ ಬದಲಾಗುವ ಸಾಧ್ಯತೆ ಇತ್ತು. ಆದರೆ ಇದು ಚದುರಂಗದ ದಾಳಗಳನ್ನು ತಳ್ಳಿ ಹಾಕುವ ಮೂಲಕ ಗಿರಿಧರನ ಅಸೂಯೆಯನ್ನು ವ್ಯಕ್ತಪಡಿಸಲು ಪೂರಕವಾಗಿ ಒದಗಿ ಬರುವ ಸಂದರ್ಭವಾಗಿ ಲೇಖಕರ ಕಣ್ಣಿಗೆ ಕಂಡದ್ದರಲ್ಲಿ ಅಚ್ಚರಿಯಿಲ್ಲ. ಏಕೆಂದರೆ ಅವರು ಕಾದಂಬರಿಯನ್ನು ರಚಿಸಿದ ಹೊತ್ತಿನಲ್ಲಿ ಪ್ರತಿಮೆ ಸಂಕೇತಗಳನ್ನು ಬಳಸಿಕೊಳ್ಳುವ ಪದ್ಧತಿಯು ಇರಲಿಲ್ಲ.

ಬಂಗಾಳಿ ಭಾಷೆಯಿಂದ ಅನುವಾದಗೊಂಡ ಕಾದಂಬರಿಗಳ ಓದಿನ ಪ್ರಭಾವವು ಈ ಕಾದಂಬರಿಯ ರಚನೆಗೆ ಕಾರಣವಾಗಿರಬಹುದು ಎಂಬ ವಿಚಾರಕ್ಕೆ ಪೂರಕವಾಗಿ ಕಾದಂಬರಿಯೊಳಗೆ ರವೀಂದ್ರನಾಥ ಠಾಕೂರರ ‘ನೌಕಾಘಾತ’ ಕಾದಂಬರಿಯನ್ನು ಕುರಿತ ಚರ್ಚೆಯು ಸಾಕ್ಷಿಯಾಗುತ್ತದೆ. ಬಂಗಾಳಿ ಭಾಷೆಯ ಕಾದಂಬರಿಗಳ ನಾಯಕಿಯರು ಪ್ರೇಮಮಯಿಗಳು ಮತ್ತು ಭಾವುಕರಾಗಿದ್ದರೂ ಅನ್ಯಾಯದ ವಿರುದ್ಧ ಯಾವ ಮುಲಾಜಿಲ್ಲದೆ ಪ್ರತಿಭಟಿಸುವ ಮನೋಭಾವದವರಾಗಿದ್ದಾರೆ. “ನೌಕಾಭಂಗದ ನಳಿನಾಕ್ಷ ಡಾಕ್ಟರನ ಗುಣಸ್ವಭಾವಗಳಿಗೂ, ನಿನ್ನ ಸ್ವಭಾವಕ್ಕೂ ಹೋಲಿಕೆ ಇದೆ. ಇವಳಂತೆ ನಾನು ಕರುಣ ರಸ ಪ್ರಧಾನ ನಾಯಕಿಯಾಗಿದ್ದೇನೆ” ಎಂದು ಸುದರ್ಶನನ ಬಳಿಯಲ್ಲಿ ಹೇಳುವ ಉಷೆಯ ಮಾತು ಇದನ್ನು ಪುಷ್ಟೀಕರಿಸುತ್ತದೆ. ಆದರೆ ಅವಳು ಕರುಣರಸಕ್ಕೆ ಮಾತ್ರ ಮೀಸಲಾದ ನಾಯಕಿಯಾಗುವುದಿಲ್ಲ. ಸುದರ್ಶನನೊಡನೆ ಕಟುನುಡಿಗಳನ್ನು ಆಡುವ ಮೂಲಕ ಆತನು ಮನೆಯನ್ನು ಬಿಟ್ಟು ಹೋಗುವಂತೆ ಮಾಡಿದ ಗಿರಿಧರನ ಮೇಲೆ ಸಿಟ್ಟುಗೊಂಡ ಉಷೆಯು “ಸುದರ್ಶನನ ಅಡಿಯ ಹುಡಿಯ ಯೋಗ್ಯತೆಯೂ ನಿನಗಿಲ್ಲ” ಎಂದು ಪ್ರತಿಭಟಿಸುತ್ತಾಳೆ. ಸುಧಾರಣೆ, ಆದರ್ಶಗಳ ನೆಲೆಯಲ್ಲಿ ಮೂಡಿಬಂದ ಆ ಕಾಲದ ಬಹಳಷ್ಟು ಸ್ತ್ರೀ ಪಾತ್ರಗಳು ತೆಳು ಅಥವಾ ಅವಾಸ್ತವಿಕ ಎಂದು ತೋರಿದರೆ ಉಷೆಯು ಅಬಲೆಯಂತೆ ಅಳುತ್ತಾ ಕುಳಿತುಕೊಳ್ಳದೆ ಗಿರಿಧರನ ವಿರುದ್ಧ ಸೆಟೆದು ನಿಂತದ್ದು ಗಮನಾರ್ಹವಾಗಿದೆ. ಉಷೆಯ ಮಾತಿನಿಂದ ಗಿರಿಧರನ ಸ್ವಾಭಿಮಾನಕ್ಕೆ ಪೆಟ್ಟಾಗಿ “ಇನ್ನು ಅವಳು ಇಲ್ಲಿದ್ದರೆ ಸುದರ್ಶನಂತೆ ನಾನೂ ಮನೆಯಿಂದ ಹೊರಬೀಳುತ್ತೇನೆ” ಎಂದು ತನ್ನ ತಂದೆತಾಯಿಯರನ್ನು ಬೆದರಿಸಿದಾಗ ಅವರು ಅಸಹಾಯಕರಾಗಿ ಉಷೆಯನ್ನು ಬಾಗಲಕೋಟೆಯಲ್ಲಿರುವ ಆಕೆಯ ತಂದೆ ತಿರುಮಲರಾಯರ ಬಳಿ ಕಳುಹಿಸಿಕೊಡುವ ಬದಲು ಮಗನ ವಿರುದ್ಧ ಪ್ರತಿಭಟಿಸಬಹುದಾಗಿತ್ತೇ? ಉಷೆಯ ಬದಲು ಪ್ರಭೆಯನ್ನು ಮದುವೆಯಾಗಲು ಒಪ್ಪುವಂತೆ ಮಾಡುವಲ್ಲಿ ಯಶಸ್ವಿಯಾದವರಿಗೆ ಉಷೆಯನ್ನು ಅಲ್ಲೇ ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲವೇ? ಅದರಿಂದ ಉಷಾಳ ಬಾಳುವೆಯು ಸುಧಾರಿಸಬಹುದಿತ್ತೇ? ಎಂಬ ಪ್ರಶ್ನೆಗಳೆಲ್ಲವೂ ಅಪ್ರಸ್ತುತ ಎಂಬಂತೆ ಒಳಿತಿನ ಶಕ್ತಿಯು ಅಸಹಾಯಕವಾಗಿ ಕೆಡುಕಿನ ಶಕ್ತಿಯು ವಿಜೃಂಭಿಸುತ್ತದೆ. ಸ್ವಾಭಿಮಾನಿಯಾದ ಉಷೆಯು ತಾನಾಗಿಯೇ ಹೊರಟು ಹೋಗಿದ್ದರೆ ಕಾದಂಬರಿಯು ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು. ಏನೇ ಇದ್ದರೂ ಆಕೆಯು ನೋವು ಮತ್ತು ಕಣ್ಣೀರಿಗೆ ಮಾತ್ರ ಮೀಸಲಾಗಿ ಉಳಿಯಲಿಲ್ಲ. ಆಕೆಯ ಬಾಳನ್ನು ಚಿತ್ರಿಸುವಾಗ ಲೇಖಕರು ಅವಳ ನೋವು, ಯಾತನೆಗಳನ್ನು ಅನುಕಂಪದಿಂದ ಧ್ವನಿಸಿದ್ದರೂ ಆಕೆಯನ್ನು ದುರ್ಬಲ, ಅಸಹಾಯಕ ಮತ್ತು ಹೇಡಿಯಾಗಿ ಚಿತ್ರಿಸಲಿಲ್ಲ ಎಂಬ ವಿಚಾರವು ಮುಖ್ಯವಾಗುತ್ತದೆ.

ಇವನ ಸುತ್ತಲೂ ನಡೆಯುವ ಅನೇಕ ಸಂಗತಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಸಂಬಂಧಗಳ ನೇಯ್ಗೆಯು ಕಾದಂಬರಿಯ ವಿನ್ಯಾಸವನ್ನು ರೂಪಿಸಿದೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಂಡು ಆಪ್ತವಾಗಿ ಓದಿಸುತ್ತಾ ಹೋಗುವ ಕಾದಂಬರಿಯ ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ.

ತನಗೆ ಪ್ರಭೆಯನ್ನು ಕೊಟ್ಟು ಸುದರ್ಶನನೊಂದಿಗೆ ಉಷೆಯ ಮದುವೆಯನ್ನು ಮಾಡಿಸಲಿದ್ದಾರೆ ಎಂಬ ಸುದ್ದಿಯನ್ನು ಶಾರದತ್ತೆಯ ಮೂಲಕ ತಿಳಿದು ತಲ್ಲಣಿಸಿದ ಗಿರಿಧರನ ಆಂತರಿಕ ತುಮುಲಗಳು ಈ ಕಾದಂಬರಿಯಲ್ಲಿ ಚೆನ್ನಾಗಿ ವ್ಯಕ್ತಗೊಂಡಿವೆ. ಅವನ ಅಧೋಗತಿಯನ್ನು ತಿರಸ್ಕಾರದಿಂದ ಚಿತ್ರಿಸದೆ ಸಹಾನುಭೂತಿಯಿಂದಲೇ ನೋಡಿರುವ ಲೇಖಕರು ಮನೆ ಮತ್ತು ಸಮಾಜದಲ್ಲಿನ ಒಲವುಗಳು ಹೇಗೆ ಅವನನ್ನು ಆ ಪರಿಸ್ಥಿತಿಗೆ ತಂದವು ಎಂಬುದನ್ನು ಹೃದಯಂಗಮವಾಗಿ ಬಣ್ಣಿಸಿದ್ದಾರೆ. “ನೋಡು ಅವಂತಿಕೇ, ನನ್ನ ಸೋದರಮಾವನ ಮಗಳೊಬ್ಬಳಿದ್ದಾಳೆ ಆಕೆಯೂ ಸಂಗೀತವನ್ನು ಚೆನ್ನಾಗಿ ಬಲ್ಲಳು. ವಸಂತ ರಾಗವನ್ನು ಕೇಳಬೇಕು ಆಕೆಯ ಬಾಯಿಯಿಂದಲೇ” ಎನ್ನುವಾಗ ಸಂಗೀತದ ಮೇಲೆ ಆಸಕ್ತಿಯಿಲ್ಲದ ಪ್ರಭೆಯನ್ನು ತೊರೆದು ಅವಂತಿಕೆಗೆ ಹೇಗೆ ಮರುಳಾದನೆಂದು ತಿಳಿಯುತ್ತದೆ. ಗಿರಿಧರನು ಈ ಕಾದಂಬರಿಯ ಏಕೈಕ ಸಂಕೀರ್ಣ ಪಾತ್ರವಾಗಿದ್ದು ಅವನ ಪಾತ್ರ ಚಿತ್ರಣದಲ್ಲಿ ಲೇಖಕರು ತೋರಿದ ಜಾಣ್ಮೆಯು ಮೆಚ್ಚುವಂಥದ್ದು. ಗಿರಿಧರನನ್ನು ಮೆಚ್ಚಿ ಮದುವೆಯಾದ ಫಲವಾಗಿ ಪ್ರಭೆಯು ದಿನಾ ನೋವನ್ನು ಅನುಭವಿಸುವ ಪ್ರಭೆಯ ಪರಿಸ್ಥಿತಿಯೂ ಮನ ಮಿಡಿಯುವಂತಿದೆ. ಇಲ್ಲಿ ಯಾರ ಬದುಕೂ ಸುಖದ ಸುಪ್ಪತ್ತಿಗೆಯಾಗಿರುವುದಿಲ್ಲ. ಬದುಕು ಎಲ್ಲರ ಪ್ರಜ್ಞಾಪೂರ್ವಕ ಆಯ್ಕೆಯಾಗಿರುತ್ತದೆ.

ಸುದರ್ಶನನು ದೀನಾನಂದನಾಗಿ ಗಳಿಸಿದ ಜನಪ್ರಿಯತೆ, ಯಶಸ್ಸು, ನಿರ್ಲಿಪ್ತತೆ ಮತ್ತು ನೈತಿಕ ಕಟ್ಟುಪಾಡುಗಳಿಗೆ ಒಗ್ಗಿದ ಬದುಕಿನ ಕಡೆಗೆ ಕಾದಂಬರಿಯು ಗಮನವನ್ನು ಹರಿಸಿದ್ದರೂ ಇದನ್ನು ಕೇವಲ ಸುದರ್ಶನನ್ನು ಕುರಿತ ಕಾದಂಬರಿಯನ್ನಾಗಿ ಓದಲಾಗದು. ಆತನು ಕಾದಂಬರಿಯ ಪ್ರಧಾನ ಪಾತ್ರವಾದರೂ ಇವನೊಂದಿಗೆ ವೈದೃಶ್ಯದಲ್ಲಿ ನಿಲ್ಲಬಲ್ಲ ಹಲವು ಪಾತ್ರಗಳು ಇವೆ. ಆ ಪಾತ್ರಗಳು ಸೂಚಿಸುವ ಬಹುಮುಖೀ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಕಾದಂಬರಿಯನ್ನು ಗ್ರಹಿಸಬೇಕಾಗುತ್ತದೆ. ಸುದರ್ಶನನ ಯೋಗ್ಯತೆಯನ್ನು ತಿಳಿಯಲು ಗಿರಿಧರನನ್ನು, ಉಷೆಯ ಯೋಗ್ಯತೆಯನ್ನು ಅರಿಯಲು ಪ್ರಭೆಯನ್ನು ಅವಲೋಕಿಸಬೇಕು. ಸಂಗೀತಶಾಸ್ತ್ರಿಗಳ ಪರಿಚಯದಿಂದ ಸಂತುಷ್ಟರಾಗಿ ಅಪ್ಪಣನಾಯಕರ ವ್ಯಕ್ತಿತ್ವವನ್ನು ಗುರುತಿಸಬೇಕು. ತಿರುಮಲರಾಯರನ್ನು ನೋಡಿ ಹಿರಿಯರೆಂದು ವಂದಿಸಬೇಕು. ಐಹಿಕ ಸುಖಗಳನ್ನು ಬೇರೆ ಬೇರೆ ವಿಧಾನಗಳಲ್ಲಿ ಕಾಣುವ ಶಾರದಮ್ಮ, ಸರಸಮ್ಮ, ಕಮಲಮ್ಮ ಮುಂತಾದವರನ್ನು ಕಂಡು ಯಶೋದಮ್ಮನ ಹಿರಿತನಕ್ಕೆ ತಲೆಬಾಗಬೇಕು. ಇವರೆಲ್ಲರೂ ವೈವಾಹಿಕ ಚೌಕಟ್ಟಿನಲ್ಲಿ ಗಂಡು ಹೆಣ್ಣಿನ ಸಂಬಂಧಗಳ ವಾಸ್ತವ ಮತ್ತು ಸತ್ಯಗಳನ್ನು ಅನಾವರಣಗೊಳಿಸುವ ಪಾತ್ರಗಳಾಗಿವೆ.

ಕಮಲಮ್ಮನನ್ನು ಹೊರತುಪಡಿಸಿ ಎಲ್ಲರೂ ಒಳ್ಳೆಯ ಜೀವಗಳೇ. ಎಲ್ಲರಿಗೂ ಪರಸ್ಪರ ಪ್ರೀತಿಯೇ. ಒಬ್ಬರಿಗಾಗಿ ಇನ್ನೊಬ್ಬರು ಮರುಗುವವರೇ. ಆದರೆ ಬದುಕಿನ ಏರಿಳಿತಗಳು, ಇವರ ಸಂಬಂಧಗಳನ್ನು ಎಷ್ಟು ವಕ್ರಗೊಳಿಸುತ್ತದೆ, ಸಾಮಾನ್ಯ ಘಟನೆಗಳು ತಿರುಚಿಕೊಂಡು ಜೀವನವನ್ನು ಹೇಗೆ ಹಾಳು ಮಾಡುತ್ತವೆ ಎಂಬುದನ್ನು ಪಾತ್ರಗಳ ಸಂಭಾಷಣೆ ಮತ್ತು ಅವುಗಳು ಅನುಭವಿಸುತ್ತಿರುವ ನೋವಿನ ಮೂಲಕ ಅರ್ಥ ಮಾಡಿಕೊಳ್ಳಬಹುದು. ಕೊನೆಯವರೆಗೂ ತನ್ನ ಅಹಂಕಾರ, ವ್ಯಾಮೋಹ, ಸ್ವಾರ್ಥಗಳನ್ನೇ ಮೆರೆಸುವ ಗಿರಿಧರನಲ್ಲಿ ಪಾಪಪ್ರಜ್ಞೆ, ಪಶ್ಚಾತ್ತಾಪ ಹುಟ್ಟಿದಂತೆ ಕಾಣುವುದಿಲ್ಲ. ಅವನನ್ನು ಖಳನಾಯಕನೆಂದು ಹೇಳಲಾಗದಿದ್ದರೂ ಪ್ರತಿನಾಯಕನ ಪಾತ್ರ ಎನ್ನಬಹುದು. ವ್ಯವಸ್ಥೆಯ ಸುಳಿಯೊಳಗೆ ಸಿಕ್ಕಿದ ಮುಗ್ಧತೆಯ ಪ್ರತೀಕವಾದ ಸುದರ್ಶನ ಮತ್ತು ಉಷೆಯ ಬಾಂಧವ್ಯವನ್ನು ಕಂಡು ಕರುಬಿ, ವ್ಯವಸ್ಥೆಯ ಲಾಭವನ್ನು ಪಡೆಯುವ ಗಿರಿಧರನು ರಕ್ಕಸನಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ಶೋಷಣೆಯನ್ನು ಮಾಡುವವನಲ್ಲದಿದ್ದರೂ, ಮಾನವೀಯತೆಯನ್ನು ಹೊಂದಿದವನಾಗಿದ್ದರೂ ಅವನ ಸಂವೇದನೆಯ ಸೂಕ್ಷ್ಮತೆಯು ಅವನಿಗೆ ಅರಿವಿಲ್ಲದಂತೆ ಕಳೆದು ಹೋಗಿರುತ್ತದೆ. ‘ಇದಕ್ಕೆಲ್ಲ ಅರ್ಥವೇನು ದೇವರೇ?’ ಎಂದು ನವ್ಯ ಸಾಹಿತ್ಯವು ಕೇಳತೊಡಗಿದ ಪ್ರಶ್ನೆಯನ್ನು ಆನಂದಕಂದರ ಕಾದಂಬರಿಯು ಅದಕ್ಕಿಂತ ಮೊದಲೇ ಯಾವ ಅಬ್ಬರವೂ ಇಲ್ಲದೆ ಕೇಳಿತ್ತು. ನೆರೆಹೊರೆಯವರು, ಗಂಡ- ಹೆಂಡತಿ, ತಂದೆ- ಮಗಳು, ಪ್ರಿಯಕರ- ಪ್ರೇಯಸಿ ಮುಂತಾದ ಬಾಂಧವ್ಯಗಳ ಮೇಲೆ ನೆರಳೊಂದು ಹೇಗೆ ಬೀಳಬಹುದು! ಜೀವ ಜೀವಗಳ ನಡುವೆ ಪ್ರೀತಿ ಇದ್ದಾಗಲೂ ಪರಸ್ಪರ ಅರ್ಥ ಮಾಡಿಕೊಂಡು ಬದುಕುವುದೆಷ್ಟು ಕಷ್ಟ! ಎಷ್ಟು ಹತ್ತಿರವಿದ್ದರೂ ಎಷ್ಟು ದೂರ! ಕಾದಂಬರಿಯು ಭಾವಾತಿರೇಕವಿಲ್ಲದೆ ಕೋಮಲವಾದ ಹೃದಯವಂತಿಕೆಯಲ್ಲಿ ತೊಯ್ದು ಹೋಗಿದ್ದರೂ ಕೃತಿಯ ಗತಿಯು ಹಲವೆಡೆಗಳಲ್ಲಿ ನಿಯಂತ್ರಿತವೂ, ಪೂರ್ವಯೋಜಿತವೂ ಆಗಿದ್ದು ತಾನಾಗಿಯೇ ನೋವಿನ ಹಾದಿಯೆಡೆಗೆ ಸಾಗಬಹುದಾಗಿದ್ದ ವಸ್ತುವನ್ನು ಆ ಕಡೆಗೆ ಅಸಹಜವಾಗಿ ಓಡಿಸಿಕೊಂಡು ಹೋಗಲಾಗಿದೆ.

ಇಂಥ ಸಂದಿಗ್ಧಗಳಲ್ಲಿ ಬಾಗಲಕೋಟೆಗೆ ಸುದರ್ಶನನ ಮರು ಭೇಟಿ, ದಿಟ್ಟ ನಿಲುವು ಉಷೆಗೆ ಧೈರ್ಯವನ್ನು ನೀಡುತ್ತದೆ. ಆ ಮೂಲಕ ಉಷೆಯು ತನ್ನನ್ನು ಕಾಡುವ ಸಮಸ್ಯೆಯಿಂದ ಪಾರಾಗಿ ಹೊಸ ಹುಟ್ಟನ್ನು ಪಡೆಯುತ್ತಾಳೆ. ಆದರೂ ಆಕೆಯ ಅಂತರಂಗದಲ್ಲಿ ಉಳಿದಿರುವ ಅಪೂರ್ಣತೆಯ ಕೊರಗನ್ನು ಗಮನಿಸುವ ಮೂಲಕ ಕಾದಂಬರಿಯು ಸಂಕೀರ್ಣತೆಯನ್ನು ಪಡೆಯುತ್ತದೆ. ಯಾವ ಅನುಭವವೂ ಅನಿವಾರ್ಯವಲ್ಲ ಎಂದು ಸಮಾಧಾನವನ್ನು ಪಟ್ಟುಕೊಂಡರೂ ವೈವಾಹಿಕ ಅನುಭವದಿಂದ ವಂಚಿತಳಾಗಿರುವ ನೋವು ಆಕೆಯನ್ನು ಕಾಡುತ್ತದೆ. “ಇನ್ನೆಲ್ಲಿಯ ಸುದರ್ಶನ? ನನ್ನ ಸುದರ್ಶನನು ದೇಶದ ದೀನಾನಂದನಾಗಿ ಬಿಟ್ಟಿರುವನಲ್ಲವೇ?” ಎಂಬ ಮಾತಿನ ಮೂಲಕ ಅದು ವ್ಯಕ್ತವಾಗುತ್ತದೆ. ಒಬ್ಬಳು ಹುಡುಗಿಯನ್ನು ಇಬ್ಬರು ಪ್ರೀತಿಸಿದರೂ ಯೋಗ್ಯನಾದವನು ಅಡೆತಡೆಗಳನ್ನು ಮೀರಿ ಆಕೆಯನ್ನು ಮದುವೆಯಾಗುವ ಕ್ರಿಯೆಯು ಕಾಣಿಸಿಕೊಳ್ಳುತ್ತಿದ್ದ ನವೋದಯ ಸಾಹಿತ್ಯ ಸಂದರ್ಭದಲ್ಲಿ ಕಾದಂಬರಿಗೆ ಇಂಥ ತಿರುವು ದೊರಕಿದ್ದು ವಿಶೇಷವಾಗಿದೆ. ಉಷಾ ಸುದರ್ಶನರ ಸಮಸ್ಯೆಯನ್ನು ಬಿಡಿಸದಿರುವುದು ಅರ್ಥಪೂರ್ಣವಾಗಿದೆ. ಸುದರ್ಶನನು ದೀನಾನಂದನಾಗಿ ಅಧ್ಯಾತ್ಮದ ಬದುಕನ್ನು ನೆಚ್ಚಿಕೊಂಡು ಆಶ್ರಮಧರ್ಮವನ್ನು ಪಾಲಿಸುವನೆಂಬ ಸೂಚನೆ ಇರುವುದರಿಂದ ಈ ಕಾದಂಬರಿಯು ಮದುವೆಯ ಮಂಟಪದಲ್ಲಿ ಕೊನೆಗೊಳ್ಳುವುದಿಲ್ಲ. ಉಷೆಯು ಕನ್ಯೆಯಾಗಿ ಉಳಿದು ಸುದರ್ಶನನ ಜೊತೆ ದೀನರ ಬಾಳುವೆಯ ಏಳಿಗೆಗಾಗಿ ಶ್ರಮಿಸುತ್ತಾ, ದೇಶ ಸೇವೆಗೆ ಸಿದ್ಧಳಾಗುವುದರಿಂದ ಆಕೆಯ ಬಾಳು ಬೆಳಗುವುದರಲ್ಲಿ ಸಂದೇಹವಿಲ್ಲ. ಲೇಖಕರ ಲಕ್ಷ್ಯವು ಶಾಶ್ವತ ಮೌಲ್ಯಗಳ ನಿದರ್ಶನದಲ್ಲಿ ಕೇಂದ್ರಿತವಾಗಿದೆಯೇ ಹೊರತು ವೈಯಕ್ತಿಕ ಉದ್ಧಾರದಲ್ಲಾಗಲೀ, ಸಾಮಾಜಿಕ ಪರಿವರ್ತನೆಯಲ್ಲಾಗಲೀ ಅಲ್ಲ. ಆದ್ದರಿಂದ ಈ ಕೃತಿಯು ಕ್ರಾಂತಿ ಮತ್ತು ದುರಂತದ ಸಾಧ್ಯತೆಗಳನ್ನು ಬಳಸಿಕೊಳ್ಳುವುದಿಲ್ಲ.

ಸ್ವಭಾವದಿಂದ ಭಿನ್ನರಾದರೂ ಆತ್ಮೀಯ ಗೆಳೆತನದ ಸಂಬಂಧ ಮತ್ತು ಅದರಿಂದ ಹುಟ್ಟುವ ಏರುಪೇರುಗಳಿಂದ ಉಂಟಾಗುವ ಪರಿಣಾಮಗಳು, ಸಂಬಂಧಗಳ ಹಲವು ಮಾದರಿಗಳು, ಉಚ್ಚ-ನೀಚ ತರತಮಗಳನ್ನು ಮೀರುವ ದುಃಖ ಯಾತನೆಗಳು, ತ್ಯಾಗ ಶರಣಾಗತಿಗಳ ಮೂಲಕ ದೊರಕುವ ಶಾಂತಿ, ಮನುಷ್ಯನ ಒಳ್ಳೆಯತನ ಮತ್ತು ಕೆಟ್ಟತನಗಳ ನಿದರ್ಶನಗಳು, ಸೋಲು ಗೆಲವುಗಳು, ನೈತಿಕ ಸಮಸ್ಯೆಗಳು, ವಿಷಮ ದಾಂಪತ್ಯದ ಹಲವು ಮುಖಗಳು, ಭಾವ ತುಮುಲಗಳು, ಕಾಲದೇಶಗಳಿಗೆ ಬದ್ಧವಾಗುವ ಸಂಕಟಗಳು ಇಲ್ಲಿನ ಕಾದಂಬರಿಯ ವಿನ್ಯಾಸವನ್ನು ರೂಪಿಸಿವೆ. ಮನುಷ್ಯನ ಪಾಡನ್ನು ಅವನ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವಿವರಿಸುವ ಆಶಯವು ಇಲ್ಲಿದೆ. ಆಧುನಿಕತೆಯ ಪ್ರವೇಶದಿಂದ ವ್ಯಕ್ತಿಯ ಚರ್ಯೆಯಲ್ಲಿ, ಅವನು ಬದುಕುತ್ತಿರುವ ಸಮಾಜದಲ್ಲಿ ಕಾಣಿಸಿಕೊಂಡಿರುವ ಪಲ್ಲಟಗಳನ್ನು ಕಾದಂಬರಿಯು ಗಮನಿಸಿದೆ. ನವೋದಯ ಸಾಹಿತ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಭಾವುಕತೆಯ ಅಂಶವನ್ನು ಹದವರಿತು ಬಳಸಲಾಗಿದೆ. ಶೃಂಗಾರವೂ ಸೇರಿದಂತೆ ಮನುಷ್ಯರ ಮನಸ್ಸಿನ ಮೂಲ ರಾಗ ಭಾವಗಳನ್ನು ನಿರೂಪಿಸುವಾಗ ಅಪಾರ ಸಂಯಮವು ಎದ್ದು ತೋರುತ್ತದೆ. ನಿರ್ದಿಷ್ಟ ವ್ಯಕ್ತಿ ಮತ್ತು ಸನ್ನಿವೇಶಗಳ ಮೂಲಕ ಅವರ ಸ್ವಭಾವ ಮತ್ತು ಬದುಕಿನ ರೀತಿನೀತಿಗಳನ್ನು ವಿಮರ್ಶೆಗೆ ಒಳಪಡಿಸುವ ಪ್ರವೃತ್ತಿಯು ಕೆಲಸ ಮಾಡಿದೆ. ಸುದರ್ಶನ ಮತ್ತು ಉಷಾ ಆರೋಗ್ಯಕರ ಮೌಲ್ಯಗಳ ಪ್ರತೀಕಗಳು. ಆತ್ಮಗೌರವ, ಆದರ್ಶ, ಧ್ಯೇಯನಿಷ್ಠೆಗಳು ಅವರ ಬದುಕಿನ ಶಕ್ತಿಯ ಮೂಲಗಳು. ಗಿರಿಧರ, ಪ್ರಭೆ, ಕಮಲಮ್ಮ ಮುಂತಾದವರು ಪ್ರತಿನಿಧಿಸುವ ವೈಷಮ್ಯ, ಲಂಪಟತನ, ಆಡಂಬರದ ಬದುಕು ಅದರ ದೌರ್ಬಲ್ಯ. ಇದರ ಪರಿಣಾಮವನ್ನು ಕಾದಂಬರಿಯು ಹಲವು ಸ್ತರಗಳಲ್ಲಿ ಪ್ರತಿಬಿಂಬಿಸಿದೆ. ಸುದರ್ಶನನ ಆದರ್ಶ, ಕನಸು, ಪಯಣ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಅತ್ಯಲ್ಪ ಮಾತುಗಳಲ್ಲಿ ವಿವರಿಸುತ್ತಾ ಅವನ ಚಿಂತನೆ ಮತ್ತು ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವಕಾಶವು ಇಲ್ಲಿ ಸೃಷ್ಟಿಯಾಗುತ್ತದೆ. ಸಾಮಾಜಿಕ ವ್ಯಕ್ತಿತ್ವವೊಂದು ರೂಪುಗೊಳ್ಳುವ ಪ್ರಕ್ರಿಯೆಯ ಅವಲೋಕನಕ್ಕೆ ಲೇಖಕರು ಓದುಗರನ್ನು ಸಿದ್ಧಗೊಳಿಸುತ್ತಾರೆ. ಜೀವನದ ಒತ್ತಡಗಳು, ಬದುಕಿಗೆ ಅದರಿಂದ ಆಗುವ ವಿಕೃತಿ, ಅದರ ಹಿಡಿತದಲ್ಲಿ ಮಾನವೀಯ ಸಂಬಂಧಗಳು ನಲುಗಿ ಹೋಗುವ ರೀತಿಯನ್ನು ಮನಗಾಣಿಸಿದ ಲೇಖಕರು ಮನುಷ್ಯನ ಹೃದಯದಲ್ಲಿ ಗಾಢವಾಗಿ ಪುಟಿಯುವ ಪ್ರೀತಿಯ ಬಯಕೆಯ ಪಾವಿತ್ರ್ಯವನ್ನು ಎತ್ತಿ ಹಿಡಿದಿದ್ದಾರೆ.

ಧ್ಯೇಯನಿಷ್ಠ ಬದುಕಿನ ಶಕ್ತಿಯೇ ಈ ಕಾದಂಬರಿಯ ವಸ್ತು. ಮನುಷ್ಯರ ಹೃದಯ ಪರಿವರ್ತನೆಯಲ್ಲಿ ಭರವಸೆಯನ್ನು ಕಾಣುವ ಆನಂದಕಂದರ ಬರವಣಿಗೆಯಲ್ಲಿ ಒಂದು ರೀತಿಯ ಮುಗ್ಧತೆಯಿದೆ. ಮಾನವೀಯ ಸಂದರ್ಭಗಳನ್ನು ಕಾವ್ಯಮಯವಾಗಿ ಚಿತ್ರಿಸುವ ಕೃತಿಯಲ್ಲಿ ಅನುಭವದ ಸರಳೀಕರಣವಿದೆ. ಭಾವುಕ ಭಾಷೆಯ ಮೂಲಕ ಮೂಡಿ ಬರುವ ಕಾದಂಬರಿಯು ಕರುಣಾಜನಕ ಸನ್ನಿವೇಶಗಳ ನಿರೂಪಣೆಯ ಆಚೆಗೆ ಹೋಗುವುದಿಲ್ಲ. ಈ ಎಲ್ಲ ಮಿತಿಗಳಲ್ಲಿ ನೋಡಿದಾಗಲೂ ‘ಸುದರ್ಶನ’ ವಿಶಿಷ್ಟ ಕೃತಿಯಾಗಿ ಕಾಣಿಸಿಕೊಳ್ಳುತ್ತದೆ. ಕತೆಯ ಮುಖ್ಯ ಪಾತ್ರಗಳಿಗೆ ಸುದರ್ಶನ, ಉಷಾ, ಪ್ರಭೆ, ಗಿರಿಧರ ಎಂದು ಉದ್ದೇಶಪೂರ್ವಕವಾಗಿಯೇ ಹೆಸರಿಡಲಾಗಿದೆ. ಸುದರ್ಶನನಲ್ಲಿ ಬದುಕಿನ ಧ್ಯೇಯ ಆದರ್ಶಗಳ ದರ್ಶನವನ್ನು ನೀಡುವ ಸಾಮರ್ಥ್ಯವಿದ್ದರೆ, ಉಷೆಯು ಭವಿಷ್ಯದಲ್ಲಿ ಬರಲಿರುವ ಹೊಸ ಹಗಲು ಮತ್ತು ಅರಿವಿನ ಸಂಕೇತವಾಗಿದ್ದಾಳೆ. ದೀನ ದುರ್ಬಲರಿಗೆ ಸಹಾಯವನ್ನು ಮಾಡುವ ಮೂಲಕ ಅವರ ಬಾಳುವೆಗೆ ಆನಂದವನ್ನು ಒದಗಿಸುವ ದೀನಾನಂದ ಎಂಬ ಹೆಸರು ಸುದರ್ಶನನ ಪಾಲಿಗೆ ಅನ್ವರ್ಥವಾಗಿದೆ. ಪ್ರಭೆಯು ಆಧುನಿಕತೆಯ ಹೊಳಪು ಮತ್ತು ಥಳುಕು ಬಳುಕಿನ ಆಕರ್ಷಣೆಯ ಕೇಂದ್ರವಾದರೆ ಗಿರಿಧರನು ರಸಿಕನೂ, ಬೆಟ್ಟವನ್ನು ಹೊತ್ತವನಂತೆ ಒತ್ತಡದ ಬದುಕನ್ನು ಸಾಗಿಸುವವನೂ ಆಗಿದ್ದಾನೆ. ಧ್ಯೇಯ ಆದರ್ಶಗಳು, ಸಮಾಜ ಜೀವನ, ಆದರ್ಶಪ್ರಾಯರಾದ ವ್ಯಕ್ತಿಗಳ ಚಿತ್ರಣ, ದುರ್ಜನರ ವಿಜೃಂಭಣೆ, ದೈವಗಳ ತಾಕಲಾಟಗಳು ಎಲ್ಲವೂ ಪುಟ್ಟ ಚೌಕಟ್ಟಿನಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಸಣ್ಣಕತೆಗಳಲ್ಲಿ ದೇಸಿಯನ್ನು ವ್ಯಾಪಕವಾಗಿ ಬಳಸಿದ್ದ ಲೇಖಕರು ತಮ್ಮ ಆರಂಭ ಘಟ್ಟದ ಈ ಕಾದಂಬರಿಯಲ್ಲಿ ಗ್ರಾಂಥಿಕ ಭಾಷೆಯನ್ನು ಬಳಸಿಕೊಂಡಿದ್ದಾರೆ. ತ್ರಿಕೋನ ಪ್ರಣಯದ ಮಾದರಿಗಳನ್ನು ಪ್ರಯೋಗಿಸಿದ್ದಾರೆ. ವೈಷಮ್ಯ, ಜೀವನಪ್ರೀತಿ, ಮಾನವೀಯತೆಗಳೇ ಕೃತಿಯ ಜೀವಾಳವಾಗಿದೆ.

ಆನಂದಕಂದರು ಈ ಕಾದಂಬರಿಯನ್ನು ಬರೆಯುವ ಸಂದರ್ಭದಲ್ಲಿ ಭಾರತದಲ್ಲಿ ವಸಾಹತುಶಾಹಿತ್ವವು ತಳವೂರಿತ್ತು. ಒಂದು ಕಡೆ ಆಂಗ್ಲೀಕರಣ, ಮತ್ತೊಂದೆಡೆ ಸುಧಾರಣಾವಾದಿ ಚಟುವಟಿಕೆಗಳು. ಇವಕ್ಕೆ ಪ್ರತಿರೋಧವೆಂಬಂತೆ ಸ್ವದೇಶಿ ಚಿಂತನೆ ಮತ್ತು ಹೋರಾಟಗಳು, ಪುನರುತ್ಥಾನವಾದಿಗಳ ಪ್ರತಿಭಟನೆಗಳು, ಬ್ರಹ್ಮಸಮಾಜದ ಜನಪ್ರಿಯತೆ, ಅದಕ್ಕೆ ಪ್ರತಿರೋಧವೆಂಬಂತೆ ಹಿಂದುತ್ವವಾದಿಗಳ ಸಂಘಟನೆ ಮತ್ತು ಹೋರಾಟ. ಒಂದು ಕಡೆ ಬ್ರಿಟಿಷರಿಂದ ಸಾಮ್ರಾಜ್ಯ ವಿಸ್ತರಣೆ, ಇನ್ನೊಂದು ಕಡೆ ಸ್ವರಾಜ್ಯದ ಶೋಧನೆ. ಇವುಗಳ ನಡುವೆ ತಮ್ಮ ವೈಯಕ್ತಿಕ ದೈವ, ಮೋಕ್ಷಗಳನ್ನು ಅರಸುವ ತಂಡ. ಒಟ್ಟಿನಲ್ಲಿ ಮನುಷ್ಯರ ಒಳಹೊರಗುಗಳು ತೀವ್ರ ಸಂಘರ್ಷದಲ್ಲಿದ್ದ ಸಂಕೀರ್ಣ ಕಾಲ. ಇವುಗಳೆಲ್ಲವನ್ನೂ ಕಾದಂಬರಿಯ ಸಂವಿಧಾನದ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಆನಂದಕಂದರ ಪ್ರತಿಭೆಯು ಅದರ ಉತ್ತುಂಗದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದರೆ, ಈ ಕಾದಂಬರಿಯನ್ನು ಬರೆಯುವಾಗ ಲೇಖಕರು ಮೂವತ್ತಮೂರರ ಹರಯದ ಯುವಕರಾಗಿದ್ದರೂ ಅವರ ವಯಸ್ಸು ಮತ್ತು ಅನುಭವಗಳು ಮಾಗಿದ ಬಳಿಕ ಈ ಕೃತಿಯನ್ನು ಮತ್ತೆ ಕೈಗೆತ್ತಿಕೊಂಡು, ವಿಶಾಲ ಭಿತ್ತಿಯಲ್ಲಿ ಪುನರ್ ರಚಿಸುತ್ತಿದ್ದರೆ ‘ಸುದರ್ಶನ’ವು ಒಂದು ಮಹಾ ಕಾದಂಬರಿಯಾಗಿ ಆಧುನಿಕ ಭಾರತದ ಸಾಂಸ್ಕೃತಿಕ ಪಠ್ಯಗಳಲ್ಲಿ ಒಂದಾಗುತ್ತಿತ್ತು. ಚಾರಿತ್ರಿಕ ದಾಖಲೆಯಾಗುತ್ತಿತ್ತು. ಸಾಧಾರಣ ಕೃತಿಯಾಗಿ ಉಳಿಯದೆ ಎಲ್ಲ ಕಾಲಕ್ಕೂ ಸಲ್ಲುವ ಕೃತಿಯಾಗುತ್ತಿತ್ತು.

(ಕೃತಿ: ಸುದರ್ಶನ (ಕಾದಂಬರಿ), ಲೇಖಕರು: ಆನಂದಕಂದ, ವರ್ಷ: 1941 (ಎರಡನೇ ಮುದ್ರಣ), ಪ್ರಕಾಶಕರು: ಜಯಂತಿ ಕಾರ್ಯಾಲಯ, ಧಾರವಾಡ, ಪುಟಗಳು: 143)