ವಡ್ಡಾರಾಧನೆಯಲ್ಲಿ ಬರುವ ಜನಜೀವನ, ಜಾತಿವ್ಯವಸ್ಥೆ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ಗ್ರಾಮ ಮತ್ತು ಪಟ್ಟಣದ ವರ್ಣನೆ, ತಿಂಡಿತಿನಿಸುಗಳು, ಬಹು ಮಹಡಿ ಕಟ್ಟಡದ ಬೀದಿಗಳು, ವೇಶ್ಯೆಯರ ಬೀದಿಯವರ್ಣನೆ, ಅಂಗಡಿ ಮುಂಗಟ್ಟುಗಳು ಇವೆಲ್ಲಾ ಆ ಕಾಲದ ಒಂದು ವ್ಯವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತವೆ. ಇವುಗಳನ್ನೆಲ್ಲಾ ಅನುವಾದಿಸಿರುವಲ್ಲಿ ಮೂಲದ ಶಬ್ಧದ ಮಿತಿಯನ್ನು ದಾಟದಿರುವದನ್ನು ಕಾಣಬಹುದಾಗಿದೆ. ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಇಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಮನೋಜ್ಞವಾಗಿದೆ ಎನ್ನುತ್ತ ಸರಳ ವಡ್ಡಾರಧನೆ ಕುರಿತ ಅನಿಸಿಕೆಯನ್ನು ನಾರಾಯಣ ಯಾಜಿ ಅವರು ಇಲ್ಲಿ ಪ್ರಸ್ತುತಪಡಿಸಿದ್ದಾರೆ. 

 

ಕನ್ನಡ ಸಾಹಿತ್ಯದಲ್ಲಿ ಶಿವಕೋಟ್ಯಾಚಾರ್ಯನಿಂದ ರಚಿತವಾದ ‘ವಡ್ಡಾರಾಧನೆ’ಗೆ ಒಂದು ವಿಶಿಷ್ಟ ಸ್ಥಾನವಿದೆ. ಇದು ಕನ್ನಡದಲ್ಲಿ ಇದುವರೆಗೆ ಲಭ್ಯವಾದ ಮೊತ್ತಮೊದಲ ಗದ್ಯ ಗ್ರಂಥವಾಗಿದೆ. ಜೈನ ಧರ್ಮದ ಗಹನ ತತ್ವವನ್ನುಹೇಳುವ ಹತ್ತೊಂಭತ್ತು ಕಥೆಗಳಿಂದ ಕೂಡಿದ ಈ ಕೃತಿಯನ್ನು ಕಾಲೇಜಿನ ಪಾಠವಾಗಿ ಇಲ್ಲವೇ ಕನ್ನಡ ಮಾಧ್ಯಮದಲ್ಲಿ ಸಿವಿಲ್ ಸರ್ವಿಸ್ ತೆಗೆದುಕೊಂಡವರಿಗೆ ಓದಲೇಬೇಕಾದದ್ದರಿಂದ ಇದು ಅಕಾಡೆಮಿಕ್ ಆಗಿಯೇ ಉಳಿದಿದೆಯೇ ಹೊರತು ಸಾಮಾನ್ಯ ಓದುಗನಿಗೆ ಕಬ್ಬಿಣದ ಕಡಲೆಯಾಗಿಬಿಟ್ಟಿದೆ. ಕಥೆಗಳ ಸಾರಾಂಶವನ್ನು ಓದುವುದು ಬೇರೆ, ಕಥೆಗಳ ಆಂತರ್ಯವನ್ನು ಕೆಡಿಸದಂತೆ ಓದಿ ರಸವನ್ನು ಆಸ್ವಾಧಿಸುವುದು ಬೇರೆ. ಬಿಡಿಬಿಡಿಯಾಗಿ ಇಲ್ಲಿರುವ ಕಥೆಗಳನ್ನು ಅಲ್ಲಲ್ಲಿ ಓದಿರಬಹುದಾದರೂ ಒಂದೇ ಕಡೆ ಈ ಕಥೆಗಳನ್ನು ಓದಿ ಅದರಲ್ಲಿರುವ ಪ್ರಾಕೃತದ ಗಾಹೆಗಳ ಅರ್ಥವನ್ನು ತಿಳಿದುಕೊಂಡು ಕಥಾ ಪ್ರವೇಶ ಮಾಡಿದಾಗ ಆಗುವ ಆನಂದದ ಅನುಭವ ವಿಶಿಷ್ಟವಾದುದು. ರಾಮಾಯಣ ಮಹಾಭಾರತಗಳಂತೆ ಮೂಲ ಮತ್ತು ಸರಳ ಕನ್ನಡದಲ್ಲಿ ಅನೇಕ ಕೃತಿಗಳು ಲಭ್ಯವಿದೆ. ಅದೇ ರೀತಿ ಕುಮಾರವ್ಯಾಸ ಭಾರತವನ್ನು ಪಂಡಿತ ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡಕ್ಕೆ ಕೊಟ್ಟಿದ್ದಾರೆ. ಇದರ ಗಮಕ ಮತ್ತು ಅರ್ಥವನ್ನು ಕನ್ನಡ ಗಣಕ ಪರಿಷತ್ತು ಸಿಡಿಯಲ್ಲಿ ಸುಂದರವಾಗಿ ತಂದಿದೆ. ಅದೇ ರೀತಿ ಜೈಮಿನಿಯ ಸರಳ ಕನ್ನಡ ಅನುವಾದವೂ ಲಭ್ಯವಿದೆ. ಕನ್ನಡ ಸಾಹಿತ್ಯದ ಅಭ್ಯಾಸಿ ಮತ್ತು ಅಸ್ವಾದಿಗಳಿಗೆ ವಡ್ಡಾರಾಧನೆಯ ಕುರಿತು ಅರಿಯಬೇಕಾದರೆ ಇಂತಹ ಕೊರತೆಯೊಂದಿತ್ತು. ಈ ಕೊರತೆಯನ್ನು ಕನ್ನಡದ ಪ್ರಮುಖ ಪ್ರಕಾಶನ ಸಂಸ್ಥೆಯಾದ ಹಂಪಿಯ ‘ಯಾಜಿ ಪ್ರಕಾಶನ’ ದವರು ಕಬ್ಬಿನಾಲೆ ಡಾ. ವಸಂತ ಭಾರದ್ವಾಜರಿಂದ ಸರಳ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ಇದೊಂದು ಮಹತ್ತರವಾದ ಸಂಗತಿಯಾಗುವುದು ಕೇವಲ ಅನುವಾದ ಎನ್ನುವ ಕಾರಣಕ್ಕಲ್ಲ. ಸುಮಾರು ಕ್ರಿ.ಶ. 940ರ ಕಾಲದ ಕನ್ನಡಭಾಷೆ ಮತ್ತು ಪ್ರಾಕೃತ ಗಾಹೆಗಳನ್ನು ಸರಳ ಗನ್ನಡದಲ್ಲಿ ಕವಿಯ ಮೂಲ ಆಶಯಕ್ಕೆ ಒಂದಿನಿತೂ ಊನಬರದ ರೀತಿಯಲ್ಲಿ ಅನುವಾದಿಸಿರುವುದಕ್ಕೆ. ಸನತ್ಕುಮಾರ ಚಕ್ರವರ್ತಿಯ ಕಥೆ ಎನ್ನುವಲ್ಲಿ ಬರುವ ಗಾಹೆ ಹೀಗಿದೆ:
ಕಚ್ಚು ಜರ ಖಾಸ ಸೋಸೊಂ ಭತ್ತಚ್ಚದಿ ಅಚ್ಚಿಕುಚ್ಚಿದುಕ್ಖಾಣೆ/
ಅ(ಧಿಯಾಸಿ)ದಾಣಿ ಸಮ್ಮಂ ಸಣಂಕುಮಾರೇಣ ವಾಸಸದಂ/
ಇದನ್ನು ಭಾರದ್ವಾಜರು “ಚರ್ಮರೋಗ, ವೃದ್ಧಾಪ್ಯ, ಕೆಮ್ಮು, ವಾಂತಿ, ಭೇದಿ, ಕಣ್ಣುಬೇನೆ ಮೊದಲಾದ ವಿವಿಧ ಬೇನೆಗಳನ್ನು ನೂರುವರ್ಷ ಸಹಿಸಿಕೊಂಡು ಸನತ್ಕುಮಾರ ಚಕ್ರವರ್ತಿ ಋಷಿಯು ಉತ್ತಮವಾದ ಪದವಿಯನ್ನು ಪಡೆದನು” ಎಂದು ಅನುವಾದಿಸುವಾಗ ಮೂಲ ಸೊಗಡನ್ನು ಹೊಸಗನ್ನಡದ ತಿಳಿವನ್ನೂ ಶಬ್ದಗಳ ಮಿತಿಯ ನಡುವೆಯೇ ತೋರಿಸುವುದನ್ನು ಕಾಣಬಹುದು. ಹಳೆಗನ್ನಡದ ಮೂಲದಲ್ಲಿ ಬಂದಿರುವ ಸಂದಿಗಳನ್ನು ಸರಳವಾದ ಭಾಷೆಯಲ್ಲಿ ಅನುವಾದಿಸಿರುವದನ್ನು ಮೆಚ್ಚಲೇ ಬೇಕು.

ಅಗತ್ಯವಿರುವಲೆಲ್ಲ ಅಡಿಟಿಪ್ಪಣಿಗಳ ಮೂಲಕ ಮೂಲದ ಸ್ವಾದವನ್ನೂ ಸವಿಯುವ ಅವಕಾಶವನ್ನೂ ಒದಗಿಸಿದ್ದಾರೆ. ಯಕ್ಷಗಾನ ಮತ್ತು ಅವಧಾನ, ಈ ಎರಡೂ ಪ್ರಕಾರಗಳಲ್ಲಿ ಮಹತ್ವದ ಸಾಧನೆಗೈದ ಲೇಖಕರ ಅನುಭವ ಇಲ್ಲಿ ಸುಂದರವಾಗಿ ಮೂಡಿಬಂದಿದೆ. ವಡ್ಡಾರಾಧನೆ ಪ್ರಾಚಿನ ದೃಷ್ಟಿಯಿಂದ ಮಾತ್ರವಲ್ಲ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ, ಐತಿಹಾಸಿಕ ಅಂಶಗಳಿಂದಲೂ ಮಹತ್ವದ ಗ್ರಂಥ. ಹತ್ತೊಂಬತ್ತು ಜೈನ ಮಹಾಮುನಿಗಳ ಅನುಸರಿಸಬೇಕಾದ ತತ್ವಗಳಾದ- ಉಪಸರ್ಗ, ಪರೀಷಹ, ತಪಶ್ಚರಣೆ, ಬಾಹ್ಯಾಭ್ಯಂತರ ಪರಿಗ್ರಹ, ಇಂದ್ರಿಯ ನಿಗ್ರಹ, ಚಿತ್ತಸ್ಥರ್ಯ, ಸಮತ್ವೀಭಾವ, ಕ್ಷಮಾಗುಣ, ಸಂನ್ಯಾಸ ದೀಕ್ಷೆ, ಕರ್ಮಕ್ಷಯಸಾಧನೆ, ಪ್ರಾಯೋಪಗಮನ ಮೋಕ್ಷಸಿದ್ಧಿ ಮುಂತಾದವುಗಳನ್ನು ವಿವಿಧ ಕಥೆಗಳಮೂಲಕ ಆಡುಭಾಷೆಯಲ್ಲಿ ಇಲ್ಲಿ ಓದಬಹುದಾಗಿದೆ.

ವೈದಿಕ ಮತ್ತು ಜೈನ ಮತಗಳ ನಡುವಿನ ತಾತ್ವಿಕ ಸಂಘರ್ಷ, ಕರ್ಮ ಮತ್ತು ಪುನರ್ಜನ್ಮಗಳಿಗೆ ಈ ಎರಡೂ ಮತಗಳ ನಡುವಿನ ಮೂಲಭೂತವಾದ ಅಂತರಗಳನ್ನು ಅರಿಯುಲು ಈ ಗ್ರಂಥ ಸಹಕಾರಿ. ಸುಕುಮಾರ ಸ್ವಾಮಿಯ ಕಥೆಯಲ್ಲಿ ಬರುವ ಸೂರ್ಯಮಿತ್ರ ಭಟ್ಟಾರರು ಮತ್ತು ಸೋಮಶರ್ಮನ ನಡುವಿನ ಸಂವಾದದಲ್ಲಿ ಬರುವ ಸಂಭಾಷಣೆಯನ್ನು ಅಷ್ಟೇ ಸಹಜವಾಗಿ ಇಲ್ಲಿ ಅನುವಾದಿಸಲಾಗಿದೆ. ‘ಅಬ್ರಹ್ಮಣ್ಯಂ ಭೋ, ಅಬ್ರಹ್ಮಣ್ಯಂ ಭೋ’ ಎನ್ನುತ್ತಾ ಸೋಮಶರ್ಮ ಕೋಗುತ್ತಾ ರಾಜನಿಗೆ ದೂರುಕೊಡುವ ಸನ್ನಿವೇಶದಲ್ಲಿ ಮೂಲದ ಸೊಗಡನ್ನು ಬಿಗಿಯಾಗಿ ಆದರೆ ಅದರ ತಿಳಿವನ್ನು ಅದರ ಬನಿ ಕೆಡದಂತೆ ಕೊಡುವರೀತಿ ಅನುವಾದಕರಿಗೊಂದು ಪಾಠದಂತಿದೆ. ವಡ್ಡಾರಾಧನೆಯಲ್ಲಿ ಬರುವ ಜನಜೀವನ, ಜಾತಿವ್ಯವಸ್ಥೆ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ಗ್ರಾಮ ಮತ್ತು ಪಟ್ಟಣದ ವರ್ಣನೆ, ತಿಂಡಿತಿನಿಸುಗಳು, ಬಹು ಮಹಡಿ ಕಟ್ಟಡದ ಬೀದಿಗಳು, ವೇಶ್ಯೆಯರ ಬೀದಿಯವರ್ಣನೆ, ಅಂಗಡಿ ಮುಂಗಟ್ಟಿಗಳು ಇವೆಲ್ಲಾ ಆ ಕಾಲದ ಒಂದು ವ್ಯವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ. ಇವುಗಳನ್ನೆಲ್ಲಾ ಅನುವಾದಿಸಿರುವಲ್ಲಿ ಮೂಲದ ಶಬ್ಧದ ಮಿತಿಯನ್ನು ದಾಟದಿರುವದನ್ನು ಕಾಣಬಹುದಾಗಿದೆ. ಭಾರದ್ವಾಜರು ಇಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಪ್ರಾಚೀನ ಕವಿ ದಂಡಿ ಹೇಳುವ
ವಾಚಾಮೇವ ಪ್ರಸದೇನ ಲೋಕ ಯಾತ್ರಾ ಪ್ರವರ್ತತೆ
(ಮಾತಿನ ಅನುಗ್ರಹದ ಮಾತ್ರದಿಂದಲೇ ಲೋಕದ ವ್ಯವಹಾರ ಸಾಗುತ್ತಿದೆ) ರೀತಿಗೆ ಅನುಗುಣವಾಗಿದೆ.

ಕಾಲಘಟ್ಟಗಳಲ್ಲಿ ಶಾಸ್ತ್ರವೆನ್ನುವದು ಕೇವಲ ಶಬ್ದಗಳ ಅರ್ಥೈಸುವಿಕೆಯಲ್ಲಿ ತೊಡಗಿದಾಗ ಇದನ್ನು ಅದನ್ನೇ ತನ್ನ ಪ್ರತಿಭೆಗಳ ಮೂಲಕ ಕಾವ್ಯವನ್ನಾಗಿಸಿದ್ದು ಜೈನ ಸಾಹಿತ್ಯಗಳ ವೈಶಿಷ್ಟ್ಯವೆನ್ನಬಹುದು. ಶಾಸ್ತ್ರದ ಗುರಿ ತತ್ವ ಪ್ರತಿಪಾದನೆ, ಇದನ್ನ ಅನುಸರಿಸಲು ಪ್ರತ್ಯಕ್ಷ, ಅನುಮಾನ ಮುಂತಾದ ಪ್ರಮಾಣಗಳ ಮೂಲಕ ಒರೆಹಚ್ಚಿನೋಡುವ ಹೊತ್ತಿನಲ್ಲಿ ಇವೆಲ್ಲಾ ಜನಸಾಮಾನ್ಯರಿಂದ ದೂರವಾಗಿ ಪಂಡಿತವಲಯಗಳಲ್ಲಿ ಹರಳುಗಟ್ಟಿ ನಿಂತವು. ಇಂತಹ ಹೊತ್ತಿನಲ್ಲಿ ಇಲ್ಲೆಲ್ಲಾ ಅರಳಿದ್ದು ಕಾವ್ಯವೆಂಬ ರಸಾನುಭವಗಳು. ತೀ. ನಂ. ಶ್ರೀ.ಯವರು ಹೇಳುವಂತೆ ಇಲ್ಲಿ ಅನುಭವಕ್ಕೆ ಅನುಭವಒಂದೇ ಪ್ರಮಾಣ. ಕವಿರಾಜ ಮಾರ್ಗದಂತಹ ಎತ್ತರದ ಕೃತಿಯ ಅನಂತರದಲ್ಲಿ ಬಂದ ಮೊತ್ತ ಮೊದಲ ಗದ್ಯ ‘ವಡ್ಡಾರಾಧನೆ’ಯನ್ನು ಓದಬೇಕೆನ್ನುವವರಿಗೆ ಸಿಕ್ಕ ಅಮೂಲ್ಯ ಸಂಪತ್ತು ಸರಳ ವಡ್ಡಾರಾಧನೆ.

 

ಬೆನ್ನುಡಿಯಲ್ಲಿ ಬಹುಶ್ರುತ ವಿದ್ವಾಂಸರಾದ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿಗಳು ಹೇಳಿರುವಂತೆ “ಹಳಗನ್ನಡದ ಗದ್ಯಕಥೆಯೊಂದರ ಬಗೆ ಭಾವಗಳ, ಭಾಷೆ ಶೈಲಿಗಳ, ವಸ್ತು ಪಾತ್ರಗಳ ಸೊಗಸು ತಿಳಿಯಬೇಕೆನ್ನುವವರಿಗೆ ಇದರಿಂದ ನಡೆಯುವ ದಾರಿ ಸುಲಭ ಎನ್ನುವಂತಾಗಿದೆ” ಎಂದು ಕೊಂಡಾಡಿರುವದು ಈ ಕೃತಿಗೆ ಕೊಟ್ಟ ಪಾರಿತೋಷಕವಾಗಿದೆ. ಈ ಮೂಲಕ ಯಾಜಿ ಪ್ರಕಾಶನ ಕನ್ನಡ ಸಾಹಿತ್ಯಕ್ಕೆ ಭಾರಾದ್ವಾಜರ ಮೂಲಕ ಕೊಟ್ಟ ಅಧ್ಯಯನಪೂರ್ಣ ಕೃತಿ ಎನ್ನುವದರಲ್ಲಿ ಯಾವ ಅನುಮಾನವೂ ಇಲ್ಲ.