ಆ ಮಣ್ಣಿನ ದಾರಿಯ ಆಚೀಚೆ ಬೇರೆಯವರ ಹೊಲಗಳು ಇವೆ. ಎಲ್ಲರೂ ಸಣ್ಣ ಸಣ್ಣ ಹಿಡುವಳಿದಾರರು. ಅಲ್ಲಿರ್ಪ ಗುತ್ತೆಪ್ಪ, ದುರ್ಗಪ್ಪ, ಬಸಪ್ಪ, ಮಾಲತೇಶ ಹೀಗೇ ಒಬ್ಬೊಬ್ಬರೇ ಕ್ರಮೇಣ ಪರಿಚಯವಾದರು. ನಡೆದುಕೊಂಡು ಹೋದರೆ ಇದೊಂದು ಲಾಭ ಅಲ್ಲವೇ? ಅಲ್ಲಿನ ಬಹಳಷ್ಟು ರೈತರು ಬೆಳೆಯುವ ಬೆಳೆಗಳು ಒಂದೋ ಭತ್ತ, ಮುಸುಕಿನ ಜೋಳ ಇಲ್ಲವೆ ಶುಂಠಿ. ಅಡಿಕೆಗೆ ಬೆಲೆ ಬರುತ್ತಿದೆ ಅಂತ ಕೆಲವರು ಇತ್ತೀಚಿಗೆ ತಮ್ಮ ಗದ್ದೆಯನ್ನು ತೋಟವನ್ನಾಗಿ ಮಾಡುತ್ತಿದ್ದರು. ಆದರೆ ಯಾರೂ ಕೂಡ ಅಲ್ಲಿ ಸಮಗ್ರ ಕೃಷಿ ಮಾಡಿರಲಿಲ್ಲ. ಎಲ್ಲರದೂ ಒಂದೇ ಬೆಳೆ. ಬೆಲೆ ಬಂದರೆ ಲಾಟರಿ ಇಲ್ಲವಾದರೆ ದೇವರೇ ಗತಿ ರೀ!
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣ

ಬಿಸಲಕೊಪ್ಪದ ಶಂಭುಲಿಂಗ ಹೆಗಡೆ ಅವರ ತೋಟದಿಂದ ಹೊರಬಿದ್ದು, ನಾನು ನಾಗಣ್ಣ ಬೆಳ್ಳನಕೇರಿಗೆ ಹೊರಟಾಗ ಮಳೆಗಾಲವಾದರೂ ಇನ್ನೂ ಬೇಸಿಗೆಯೇನೋ ಎಂಬಂತಹ ಚುರು ಚುರು ಬಿಸಿಲಿತ್ತು. ನನಗೆ ನೆನಪಿದ್ದಂತೆ ಆಗ ಆರಿದ್ರಾ ನಕ್ಷತ್ರ. ಸಹಜ ಕೃಷಿ ಮಾಡುವವರು ಮಳೆ ನಕ್ಷತ್ರಗಳ ಬಗ್ಗೆ ತುಂಬಾ ನಿಗಾ ವಹಿಸಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ, ನಕ್ಷತ್ರಗಳ ಅನುಸಾರಕ್ಕಿಂತಲೂ ತನ್ನ ಮನಸ್ಸಿಗೆ ಬಂದಂತೆ ಸುರಿಯುತ್ತಿರುವ ಬಗೆ ನೋಡಿದರೆ… “ಇಷ್ಟು ದಿನ ಮನಸ್ಸಿಗೆ ಬಂದಂತೆ ಆಟ ಆಡಿದೆಯಲ್ಲವೆ, ಇದೋ ಈಗ ನನ್ನ ಸರದಿ!” ಅಂತ ಮನುಷ್ಯನಿಗೆ ಸವಾಲು ಹಾಕುತ್ತಿರುವಂತೆ ಅನಿಸುತ್ತದೆ!

ಬೆಳ್ಳನಕೇರಿಯ ನಮ್ಮ ಹೊಲದ ಹತ್ತಿರ ನಮ್ಮ ಇನ್ನೊಬ್ಬ ದೂರದ ಸಂಬಂಧಿಕರ ಮನೆಯಿದೆ. ವಯಸ್ಸಿನಲ್ಲಿ ಅವರೂ ಕೂಡ ಶಂಭು ಮಾವನ ವಾರಿಗೆ. ಆದರೆ ಮಾತಿನಲ್ಲಿ ಅವರಿಗಿಂತ ಒಂದು ಬಾಯಿ ಮೇಲು! ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಇವರಿಗೆ ಮಾತಿನ ಚಟ. ಅವರ ಮಾತುಗಳ ಒರತೆಯಲ್ಲಿ ತಮಾಷೆಗೇನು ಕೊರತೆ ಇಲ್ಲ. ಅವರ ಹೆಸರು ರಾಮಚಂದ್ರ ಮಾವ. ಅವರದ್ದೂ ಅಡಿಕೆ ತೋಟ,ಭತ್ತದ ಗದ್ದೆ ಇವೆ. ಅದೂ ಮನೆಯಿಂದ ಒಂದೆರಡು ಮೈಲಿ ದೂರವೇ. ಅವರು ದಿನವೂ ಸೈಕಲ್ಲು ತಳ್ಳಿಕೊಂಡು ತಮ್ಮ ತೋಟಕ್ಕೆ ಹೋಗಿ ಒಬ್ಬರೇ ಎಷ್ಟೋ ಕೆಲಸಗಳನ್ನು ಮಾಡುವುದನ್ನು ನೋಡಿ ನಾನು ಆಶ್ಚರ್ಯ ಪಡುತ್ತಿದ್ದೆ. ನಮಗೆ ಎಷ್ಟೊಂದು ನೆಪಗಳಿದ್ದವು… “ಮನೆ ದೂರ ಇದೆ, ನಮ್ಮ ಹೊಲಕ್ಕೆ ಹೋಗುವ ದಾರಿ ಸರಿ ಇಲ್ಲ, ನಮಗೆ ಅನುಭವವಿಲ್ಲ, ಮೊಬೈಲ್ ಚಾರ್ಜ್ ಇಲ್ಲ…!” ಹೀಗೇ ಹತ್ತು ಹಲವು.. ಅವರು ಮಾತ್ರ ಸಮಯಕ್ಕೆ ಸರಿಯಾಗಿ ಸೈಕಲ್ಲು ತುಳಿಯುತ್ತಾ ಹೊರಟೇ ಬಿಡೋರು. ನಮ್ಮ ಹೊಲಕ್ಕೆ ಅವರ ಮನೆ ಹತ್ತಿರ. ಹೀಗಾಗಿ ನಾವು ಅವರಿಗೆ ಮೊದಲಿಂದಲೂ ತೊಂದರೆ ಕೊಡುತ್ತಿದ್ದೆವು. ಅವರ ಮನೆಗೆ ಹೋದ ಕೂಡಲೇ ರಾಮಚಂದ್ರ ಮಾವ ಅವರ ಪತ್ನಿ ನಮಗೆ ಚಹಾ ಮಾಡ್ತೀನಿ ಅಂತ ಆಗ್ರಹ ಮಾಡೋರು. ಹಾಗೆ ಅವರಿಗೆ ತೊಂದರೆ ಕೊಡೋದು ಬೇಡ ಅಂತ ಮನೆಗೆ ಹೋಗದೆ ಇದ್ದರೆ ಅವರಿಗೆ ಬೇಜಾರು.. ಹೀಗೆ ಒಂದು ತರಹದ ಧರ್ಮ ಸಂಕಟ. ಹೀಗಾಗಿ ಅಲ್ಲಿಗೆ ಹೋಗಿ ಅವರ ಮನೆಯ ಮುಂದೆ ಕಾರು ಇಟ್ಟು, ನಮಗೆ ಹೊಲದಲ್ಲಿ ತುಂಬಾ ಕೆಲಸ ಇದೆ ಅಂತ ಪೋಸು ಕೊಟ್ಟು ನಮ್ಮ ಹೊಲಕ್ಕೆ ನಡೆದೇ ಹೊರಟೆವು.

ಜಯಂತ ಕಾಯ್ಕಿಣಿ ವಿರಚಿತ, “ಸಿಕ್ಕೀತೇ ಮುಂದಿನ ದಾರಿ…” ನಾನು ಕೆಲಸವನ್ನು ಬಿಟ್ಟಾಗ ನನ್ನ ತುಂಬಾ ನೆಚ್ಚಿನ ಹಾಗೂ ಕೆಚ್ಚಿನ ಹಾಡು ಆಗಿತ್ತು. ಈಗ ಮಣ್ಣಿನ ದಾರಿಯಂತೂ ಸಿಕ್ಕಿತ್ತು. ಯಾಕೆಂದರೆ ನಮ್ಮ ಹೊಲಕ್ಕೆ ಹೋಗುವ ದಾರಿ ಹಾಗಿತ್ತು! ಮಳೆಯಾದರಂತೂ ಅದು ಅಕ್ಷರಶಃ ಸಣ್ಣ ಸಣ್ಣ ಕೆರೆಗಳ ಸಮೂಹವೇ ಆಗುತ್ತಿತ್ತು. ಅಲ್ಲಿ ನಡೆದುಕೊಂಡು ಹೋಗಬೇಕು ಇಲ್ಲವೇ ಟ್ರಾಕ್ಟರ್ ಮಾತ್ರವೇ ಆ ರಸ್ತೆಯಲ್ಲಿ ಹೋಗಬಹುದು. ಹೀಗಾಗಿ ಭಗವಂತ ಕಾಲ್ಕೊಟ್ಟ ಅಂತ ನಡೆಯುವ ನಿರ್ಧಾರ ತೊಗೊಂಡು, ನಮ್ಮ ಕಾರಿನಲ್ಲಿ ತಂದಿದ್ದ ಸಸಿಗಳನ್ನು ಇಬ್ಬರೂ ಕೈಯಲ್ಲಿ ಹಿಡಿದು ಹೊರಟೆವು.

ನಮಗೆ ಎಲ್ಲವೂ ಹೊಸ ಅನುಭವಗಳೇ. ನಮ್ಮ ಜೊತೆಗೆ ಕತ್ತಿಗಳೂ ಇದ್ದವು. ಕತ್ತಿ ಅಂತ ಅಲ್ಲಿ ಹೇಳೋದು ಹುಲ್ಲು ಕತ್ತರಿಸಲು ಬಳಸುವ ಕುಡಗೋಲು / ಮಚ್ಚು ತರಹದ್ದು. ಹೊಲದ ಕೆಲಸಕ್ಕೆ ಬೇಕಾದ ಪರಿಕರಗಳನ್ನು ಶಿರಸಿಯ TSS ನಿಂದ ಈಗಾಗಲೇ ತಂದಾಗಿತ್ತು. ಕತ್ತಿ, ಬುಟ್ಟಿಗಳು, ಸಲಿಕೆ, ಹಾರೆ, ಗ್ವಾರೆ ಹೀಗೆ ಎಲ್ಲವನ್ನೂ ನಾನು ಕೊಂಡಿದ್ದೆ. ಪದೆ ಪದೆ ರಾಮಚಂದ್ರ ಮಾವರ ಮನೆಯಲ್ಲಿ ಅದು ಕೊಡಿ ಇದು ಕೊಡಿ ಅಂತ ಕೇಳೋದು ಸರಿ ಇರೋಲ್ಲ ಅಂತ. ಅದರೊಟ್ಟಿಗೆ ಮೊಣಕಾಲವರೆಗೂ ರಕ್ಷಣೆ ನೀಡುವ ಮೂರು ಜೊತೆ ಗಮ್ ಬೂಟ್ ಗಳು. ಯಾಕೆಂದರೆ ನನಗೆ ಹಾವಿನದೇ ಭಯ. ಅದೂ ಅಲ್ಲದೆ ಅಲ್ಲಿನ ಕೆಸರಿನಲ್ಲಿ ಚಪ್ಪಲಿಗಳು ಹಾಕಿಕೊಂಡರೆ ಹೂತುಬಿಟ್ಟಾವು ಎಂಬುದು ಇನ್ನೊಂದು ಕಾರಣ. ಕಾಲಿಗೆ ಗಮ್ ಬೂಟು ಹಾಕಿ, ಕೈಯಲ್ಲಿ ಕತ್ತಿ ಹಿಡಿದು ವೀರ ಯೋಧರನ್ನು ಮೀರಿಸುವಂತೆ ನಾವು ದೃಡವಾದ ಹೆಜ್ಜೆ ಇಡುತ್ತ ಸಾಗಿದ್ದೆವು. ಸೈನಿಕರಿಗೆ ಜೈ, ರೈತರಿಗೆ ಜೈ ಎನ್ನುತ್ತಾ ಸಾಗಿದ್ದೆವು. ನಮ್ಮಲ್ಲಿ ಹುಮ್ಮಸ್ಸು ಅಧಿಕವಾಗಿತ್ತು. ಅಷ್ಟೊತ್ತಿಗೆ ನನಗೆ ಹ್ಯೂಮಸ್ ನೆನಪಾಗಿತ್ತು!

ಬೇತಾಳ ದಾರಿ ಸವೆಸುವ ನೆಪದಲ್ಲಿ ಪ್ರಶ್ನೆ ಕೇಳುವಂತೆ “ಅಯ್ಯಾ ನಾಗಣ್ಣ ಹ್ಯೂಮಸ್ ಅಂದರೆ ಏನು ಗೊತ್ತೇ…?” ಅಂದೇ. ಕತ್ತಿ ಕೈಯಲ್ಲಿ ಹಿಡಿದು ಥೇಟು ರಾಜಾ ವಿಕ್ರಮಾದಿತ್ಯನಂತೆಯೇ ಹೊರಟಿದ್ದ ನಾಗಣ್ಣ ಒಂದು ಕ್ಷಣ ಅಧೀರರಾದರು. ತಲೆ ಹೋಳಾದೀತು ಎಂಬ ಯೋಚನೆ ಬಂತೋ ಏನೋ?

“ಹ್ಯುಮರಸ್ ಗೊತ್ತು ಸರ್, ಆದ್ರೆ ಹ್ಯೂಮಸ್? ಊಹೂಂ…”
ಅಂತ ತಮಗೂ ಹಾಸ್ಯ ಪ್ರಜ್ಞೆ ಇದೆ ಅಂತ ತೋರಿಸಿದರು.
ನನಗೂ ಅದೇ ಬೇಕಾಗಿತ್ತು. ಅವರು ತನಗೆ ಗೊತ್ತು ಅಂದುಬಿಟ್ಟಿದ್ದರೆ ನನಗೆ ಮಾತಾಡುವ ಅವಕಾಶ ಎಲ್ಲಿ?

“ಮಣ್ಣಲ್ಲಿ ಸಾವಯವ ಪದಾರ್ಥಗಳು, ಅಂದರೆ ಕಟ್ಟಿಗೆ, ಎಲೆ ಹಾಗೂ ಹುಳು-ಹುಪ್ಪಡಿ ಈ ಎಲ್ಲಾ ಜೀವಂತ ಪದಾರ್ಥಗಳ ಪಳಿಯುಳಿಕೆಗಳು ಅಲ್ಲಿ ಕಲೆತು, ಕಳೆತು ಸೃಷ್ಟಿಯಾಗುವ ಒಂದು ವೇದಿಕೆ ಅನ್ನಬಹುದು.. ಈ ಹ್ಯೂಮಸ್ಸು ಒಂದನ್ನ ನಾವು ನಮ್ಮ ಮಣ್ಣಿನಲ್ಲಿ ಬರಿಸಿದರೆ ಅರ್ಧ ಗೆದ್ದಂತೆ. ಮುಂದಿನದನ್ನು ಅವೆ ನೋಡಿಕೊಳ್ಳುತ್ತವೆ.”

“ಸೂಪರ್ ಸರ್. ಹಾಗಾದ್ರೆ ಆ ಹ್ಯೂಮಸ್ ಮಣ್ಣಲ್ಲಿ ತಯಾರಾಗಬೇಕು ಅಂದ್ರೆ ಏನು ಮಾಡಬೇಕು?”

“ಅದಕ್ಕೆ ಸ್ವಲ್ಪ ಕಷ್ಟ ಪಡಬೇಕು. ಅದಕ್ಕೆಲ್ಲ ಮಣ್ಣಿನಲ್ಲಿನ ಜೀವರಾಶಿ (bio mass) ಹೆಚ್ಚಿಗೆ ಮಾಡಬೇಕು. ಅದು ಒಂದೆರಡು ದಿನಗಳಲ್ಲಿ ಆಗೋದಲ್ಲ ನಿಧಾನವಾಗಿ ಮಾಡೋಣ ಇರಿ…” ಅನ್ನುತ್ತ ನಡೆಯತೊಡಗಿದೆ.

Bio mass ಹೆಚ್ಚಿಗೆ ಮಾಡೋಕೆ ತುಂಬಾ ಗಿಡಗಳ ಪಳಿಯುಳಿಕೆಗಳನ್ನು ಮಣ್ಣಿಗೆ ಸೇರಿಸಬೇಕು ಅಥವಾ ಅವು ನೈಸರ್ಗಿಕವಾಗಿ ಕಾಡಿನಲ್ಲಿ ಬೀಳುವಂತೆ ಮಾಡಬೇಕು. ಅದಕ್ಕೆ ಗಿಡಗಳು ಇರಬೇಕು. ಆದರೆ ನಮ್ಮ ಹೊಲ ತುಂಬಾ ಖಾಲಿ ಖಾಲಿ ಇತ್ತು. ಅಲ್ಲಿ ಮರ-ಗಿಡಗಳು ಅಂತ ಇದ್ದರೂ ಅವು ಬೆರಳೆಣಿಕೆಯಷ್ಟು ಅನ್ನಬಹುದು. ಹಿಂದೆಲ್ಲ ನಾನು ಎಷ್ಟೋ ಗಿಡಗಳನ್ನು ವರ್ಷಕ್ಕೊಮ್ಮೆ ಹಚ್ಚಿ ಹಚ್ಚಿ ಬರುತ್ತಿದ್ದೆ. ನಾನು ಬೆಂಗಳೂರಿಗೆ ಬಂದಾದ ಮೇಲೆ ಅವು ಇರುತ್ತಿರಲಿಲ್ಲ. ಆರೈಕೆ ಇಲ್ಲದೆ ಅವು ಹೇಗೆ ಬದುಕಬೇಕು? ಅದರಲ್ಲಿ ಕೆಲವುಗಳ ಹಣೆಬರಹ ಗಟ್ಟಿ ಇದ್ದು ಹೇಗೋ ಉಳಿದುಕೊಂಡಿದ್ದವು. ಎರಡು ಅಪ್ಪೆ ಮಿಡಿ, ಇಪ್ಪತ್ತು ತೇಗ, ಒಂದು ಸಿಲ್ವರ್ ಓಕ್ ಹೀಗೆ…

ಈಗ ಸ್ವಲ್ಪ ವೇಗವಾಗಿ ಬೆಳೆಯುವ ಗಿಡಗಳನ್ನು ಈಗ ಬೆಳೆಸುವ ಅವಶ್ಯಕತೆಯಿತ್ತು.

ಕಾಲಿಗೆ ಗಮ್ ಬೂಟು ಹಾಕಿ, ಕೈಯಲ್ಲಿ ಕತ್ತಿ ಹಿಡಿದು ವೀರ ಯೋಧರನ್ನು ಮೀರಿಸುವಂತೆ ನಾವು ದೃಡವಾದ ಹೆಜ್ಜೆ ಇಡುತ್ತ ಸಾಗಿದ್ದೆವು. ಸೈನಿಕರಿಗೆ ಜೈ, ರೈತರಿಗೆ ಜೈ ಎನ್ನುತ್ತಾ ಸಾಗಿದ್ದೆವು. ನಮ್ಮಲ್ಲಿ ಹುಮ್ಮಸ್ಸು ಅಧಿಕವಾಗಿತ್ತು. ಅಷ್ಟೊತ್ತಿಗೆ ನನಗೆ ಹ್ಯೂಮಸ್ ನೆನಪಾಗಿತ್ತು!

ಆ ಮಣ್ಣಿನ ದಾರಿಯ ಆಚೀಚೆ ಬೇರೆಯವರ ಹೊಲಗಳು ಇವೆ. ಎಲ್ಲರೂ ಸಣ್ಣ ಸಣ್ಣ ಹಿಡುವಳಿದಾರರು. ಅಲ್ಲಿರ್ಪ ಗುತ್ತೆಪ್ಪ, ದುರ್ಗಪ್ಪ, ಬಸಪ್ಪ, ಮಾಲತೇಶ ಹೀಗೇ ಒಬ್ಬೊಬ್ಬರೇ ಕ್ರಮೇಣ ಪರಿಚಯವಾದರು. ನಡೆದುಕೊಂಡು ಹೋದರೆ ಇದೊಂದು ಲಾಭ ಅಲ್ಲವೇ? ಅಲ್ಲಿನ ಬಹಳಷ್ಟು ರೈತರು ಬೆಳೆಯುವ ಬೆಳೆಗಳು ಒಂದೋ ಭತ್ತ, ಮುಸುಕಿನ ಜೋಳ ಇಲ್ಲವೆ ಶುಂಠಿ. ಅಡಿಕೆಗೆ ಬೆಲೆ ಬರುತ್ತಿದೆ ಅಂತ ಕೆಲವರು ಇತ್ತೀಚಿಗೆ ತಮ್ಮ ಗದ್ದೆಯನ್ನು ತೋಟವನ್ನಾಗಿ ಮಾಡುತ್ತಿದ್ದರು. ಆದರೆ ಯಾರೂ ಕೂಡ ಅಲ್ಲಿ ಸಮಗ್ರ ಕೃಷಿ ಮಾಡಿರಲಿಲ್ಲ. ಎಲ್ಲರದೂ ಒಂದೇ ಬೆಳೆ. ಬೆಲೆ ಬಂದರೆ ಲಾಟರಿ ಇಲ್ಲವಾದರೆ ದೇವರೇ ಗತಿ ರೀ!

“ಅದ್ಹೇಗೆ ಒಂದೇ ಬೆಳೆಯ ಮೇಲೆ ಅವಲಂಬಿತರಾಗುತ್ತೀರಾ? ಎಲ್ಲ ರೀತಿಯ ಬೆಳೆಗಳು, ಮರಗಳು ಇರಬೇಕು. ಆಯಾ season ಗೆ ನಮಗೆ ಆದಾಯ ಬರುವಂತೆ ಮಾಡಿಕೊಳ್ಳಬೇಕು..” ಅಂತ ಮೊದಮೊದಲು ಅಲ್ಲಿನವರ ಮುಂದೆ ಭಾಷಣ ಬಿಗಿಯುತ್ತಿದ್ದೆನಾದರೂ ಆಮೇಲೆ ಸುಮ್ಮನಾದೆ. ಬೇರೆಯವರಿಗೆ ಹೇಳುವ ಮೊದಲು ನಾನು ಅದನ್ನು ಅಳವಡಿಸಬೇಕಿತ್ತು!

ನಮ್ಮ ಮಣ್ಣಿನ ದಾರಿಯ ಪಕ್ಕದ ಬೇಲಿಯಲ್ಲಿ ಒಂದು ಗಿಡವನ್ನು ನೋಡಿ, ನಾನು ತುಂಬಾ ಪುಳಕಿತನಾದೆ. ನಾಗಣ್ಣನಿಗೆ ಅದನ್ನು ತೋರಿಸುತ್ತ,
“ಇದೆ ನೋಡಿ ಗೊಬ್ಬರ ಗಿಡ. ಇವನ್ನ ನಾವು ಹೆಚ್ಚು ಹೆಚ್ಚು ಬೆಳೀಬೇಕು”

ನಾಗಣ್ಣ ಅದನ್ನು ಕೂಲಂಕಷವಾಗಿ ಗಮನಿಸಿ ಅದರ ಒಂದು ಫೋಟೋ ತೆಗೆದು ತಮ್ಮ ಮೊಬೈಲ್ ನ Google lens ಗೆ ಅದೇನು ಅಂತ ಕೇಳಿದರು. ಅದೊಂದು ಅದ್ಭುತ ಮೊಬೈಲ್ ಯಾಪ್, ಏನೇ ಫೋಟೋ ಕೊಟ್ಟರು ಅದನ್ನು ಸ್ಕ್ಯಾನ್ ಮಾಡಿ ಅದರ ವಿವರ ಕೊಡುತ್ತೆ. ಅವರು ಕನ್ನಡದವರೇ ಆದರೂ ಓದಿದ್ದು ಇಂಗ್ಲೀಷು. ಅವರಿಗೆ ಗೊಬ್ಬರ ಗಿಡಕ್ಕೆ ಆಂಗ್ಲ ಭಾಷೆಯಲ್ಲಿ ಏನಂತಾರೆ ಅಂತ ಬೇಕಿತ್ತು.

“ರಿ ಸ್ವಾಮಿ ಗೂಗಲ್ ಅಕ್ಕನ್ನ ಕೇಳೋಕೆ ಮೊದ್ಲು ನನ್ನ ಕೇಳಿ. ಅದಕ್ಕೆ ಇಂಗ್ಲಿಷ್ ಅಲ್ಲಿ ಗ್ಲಿರಿಸಿಡಿಯ ಅಂತಾರೆ.” ಅಂದೆ.

“Correct ಸರ್, ಗೂಗಲ್ ಕೂಡ ಅದನ್ನೇ ಹೇಳ್ತಾ ಇದೆ” ಅಂತ ನನಗೊಂದು certificate ಕೊಟ್ಟರು.

“ಇದನ್ನ ಬೇಲಿಗೆ ಅಷ್ಟೇನಾ ಸರ್ ಹಾಕೋದು?”

“ಬೇಲಿಗೆ ಹಾಕಿದರೆ ಒಳ್ಳೆಯದೇ, ಗಾಳಿ ತಡೆಯುತ್ತೆ. ಹಾಗೇನೇ ಗಿಡಗಳ ಮಧ್ಯೆ ಹಾಕಿದರೆ ಇನ್ನೂ ಶ್ರೇಷ್ಠ. ಅದರ ಎಲೆಗಳಲ್ಲಿ ಹೇರಳವಾಗಿ ಸಾರಜನಕ ಇರುತ್ತೆ, ಬೇರುಗಳಲ್ಲಿ ಕೂಡ ಸಾರಜನಕ ಫಿಕ್ಸ್ ಮಾಡುತ್ತೆ. ನಮ್ಮ ಪಂಚ ತರಂಗಿಣಿ ಪದ್ಧತಿಯಲ್ಲಿ ಇದು ತುಂಬಾ ಮುಖ್ಯವಾದ ಗಿಡ. ಇನ್ನೊಂದು ಮಜಾ ಗೊತ್ತಾ ಇದಕ್ಕೆ ಸಾವೆ ಇಲ್ಲ! ಇದರ ಒಂದು ಟೊಂಗೆ ಮುರಿದು ಸುಮ್ಮನೆ ನೆಟ್ಟರೂ ಚಿಗುರುತ್ತೆ. ಒಂಥರಾ ರಕ್ತ ಬೀಜಾಸುರ ಇದ್ದಂಗೆ! ಹೆಚ್ಚು ನೀರೂ ಕೇಳೋದಿಲ್ಲ. ಹೊಸದಾಗಿ ತೋಟ ಮಾಡುವವರಿಗೆ ಈ ಗಿಡ ವರದಾನ”

ಗ್ಲಿರಿಸಿಡಿಯ ಎಂಬ ಹೆಸರಿನ ಅರ್ಥ “ಇಲಿ ಕೊಲ್ಲೋದು” ಅಂತ. ಇದರ ಬೀಜ ಬಳಸಿ ಇಲಿ ಪಾಷಾಣ ಮಾಡಬಹುದಂತೆ. ಇನ್ನೊಂದೆಡೆ ಹಸುಗಳಿಗೆ ಒಳ್ಳೆಯ ಮೇವು ಕೂಡ ಹೌದು. ಇದರ ಎಲೆ, ಕಟ್ಟಿಗೆಯನ್ನೆಲ್ಲ ಕಡಿದು ಭೂಮಿಗೆ ಸೇರಿಸಬಹುದು. ಗಿಡ ಮತ್ತೆ ಮತ್ತೆ ಬೆಳೆಯುತ್ತೆ. ಕಾಫಿ, ಅಡಿಕೆಯಂತಹ ಗಿಡಗಳಿಗೆ ನೆರಳಿಗೆ ಅಂತಲೂ ಉಪಯೋಗ ಆಗುತ್ತೆ. ಅದೊಂದು ಅದ್ಭುತವಾದ ಗಿಡವೇ ಹೌದು. ಇದರ ಮಹತ್ವ ತುಂಬಾ ಜನರಿಗೆ ಗೊತ್ತಿಲ್ಲ.. ಗೊತ್ತಿದ್ದವರೂ ಅದೇಕೋ ಅದನ್ನು ಬೆಳೆಸಲು ಮನಸ್ಸು ಮಾಡಲ್ಲ. ಅದರ ಕಾಂಡ ಸ್ವಲ್ಪ ಗಟ್ಟಿ ಹಾಗೂ ದಪ್ಪಗೆ ಅನ್ನೋದು ಒಂದು ಕಾರಣ ಆದ್ರೆ, ಅದಕ್ಕೆ ಸಾವಿಲ್ಲ ಅನ್ನೋದು ಇನ್ನೊಂದು ಕಾರಣ ಇರಬಹುದೇ? ಆದರೆ ಮಲೆನಾಡಿನ ಕಡೆ ಬೇಲಿಗಳಿಗೆ ಇದೆ ಗಿಡಗಳನ್ನ ತುಂಬಾ ಹಾಕಿದ್ದನ್ನು ನಾನು ಗಮನಿಸಿದ್ದೆ. ಮಣ್ಣಿಗೆ ಇದು ಒಳ್ಳೆಯ ಮುಚ್ಚಿಗೆಯೂ ಹೌದು. ಜೊತೆಗೆ ಒಳ್ಳೆಯ ಹಸಿರು ಗೊಬ್ಬರ ಕೂಡ. ಅದರ ಎಲೆಗಳಲ್ಲಿ ಸಾರಜನಕವನ್ನು ಅದು ಶೇಖರಣೆ ಮಾಡುತ್ತೆ. ಮಣ್ಣಿನ ಸವಕಳಿ ತಡೆಗೆ ಕೂಡ ಇದನ್ನು ಬಳಸಬಹುದು.

“ನಾಗಣ್ಣ ಮಳೆ ಶುರುವಾಗೋದರೊಳಗೆ ಬೇಲಿಗೆಲ್ಲ ಗೊಬ್ಬರ ಗಿಡ ಹಾಕಿ ಬಿಡೋಣ. ಮುಂದೆ ನಮಗೆ ತುಂಬಾ ಸೊಪ್ಪು ಸಿಗುತ್ತೆ” ಅಂತ ಹೇಳುತ್ತ ನಡೆಯುತ್ತಿದ್ದ ಹಾಗೆಯೆ ನಮ್ಮ ಹೊಲ ಕಂಡಿತು. ನಾಲ್ಕು ಎಕರೆ ಜಾಗದಲ್ಲಿ ಎಲ್ಲೆಲ್ಲೂ ಹುಲ್ಲು, ಪೊದೆಗಳು ಬೆಳೆದದ್ದು ನೋಡಿ ಎಲ್ಲಿಂದ ಶುರು ಮಾಡೋದು ಅಂತ ಕಂಗಾಲಾಗಿ ನಿಂತೆ. ಅಷ್ಟೊತ್ತಿಗೆ ಪಕ್ಕದ ಜಮೀನಿನ ಶಂಕ್ರಣ್ಣ ಗೌಡ್ರು ಎಲ್ಲಿದ್ದರೋ ಏನೋ, ಪ್ರತ್ಯಕ್ಷ ಆದರು.

“ನಮಸ್ಕಾರ ರೀ, ಹೊಲದಾಗ ಏನ ಮಾಡಬೇಕಂತ ಮಾಡೀರಿ ಈ ವರ್ಷ? ಯಾರಿಗರೇ ಕೊಡಬೇಕಿತ್ತು. ನಿಮಗ ಮಾಡಾಕಾಗುದಿಲ್ಲ ಬಿಡ್ರಿ” ಬರುತ್ತಲೇ ಅಪಶಕುನ ನುಡಿದರು. ನಾನು ಇಂಥವರನ್ನ ಎಷ್ಟು ನೋಡಿಲ್ಲ!

“ಯಾರಿಗೂ ಕೊಡಂಗಿಲ್ಲ, ಇನ್ನ ಮುಂದ ನಾವ ಮಾಡ್ತೀವಿ ಗೌಡ್ರ. ಹಣ್ಣಿನ ತೋಟ ಮಾಡೋಣ ಅಂತ ಇದ್ದೀವಿ.”

“ಹಣ್ಣು ಮಾಡಿದರ ಇಲ್ಲಿ ಮಂಗ್ಯಾ ತಿಂದs ಖಾಲಿ ಮಾಡ್ತಾವ್ ಬಿಡ್ರಿ. ಸುಮ್ಮನ ಅಡಿಕಿ ಹಚ್ಚ್ರಿ ಅದಕ ಚೊಲೋ ರೇಟ್ ಈಗ. ಬ್ಯಾರೆ ಎಲ್ಲ ಮಾಡಿ ಕೈ ಸುಟುಗೊಳ್ಳೋದ. ಟ್ರ್ಯಾಕ್ಟರ್ ಹೊಡಸ್ರಿ ಮೊದಲ. ಸಿಕ್ಕಾಪಟ್ಟೆ ಹುಲ್ಲು ಬೆಳದೈತಿ. ಹೊಲ ಚೊಕ್ಕ ಇರಬೇಕು ನೋಡ್ರಿ” ಅಂತೂ ಗೌಡರು ಮಾತು ಮುಗಿಸಿದ್ದರು.

ಬೆಳೆದಿದ್ದ ಕಳೆಯೂ ನನಗೆ ಅಮೂಲ್ಯವೇ. ನೈಸರ್ಗಿಕ ಕೃಷಿಯ ಭೂತ ಹೊಕ್ಕಿಸಿಕೊಂಡ ನನಗೆ ಟ್ರ್ಯಾಕ್ಟರ್ ಹೊಡಿಸುವುದಕ್ಕೆ ವಿರೋಧ ಇತ್ತಾದರೂ, ಮೊದಲಿಗೆ ಒಂದು ಸಲ ಎಲ್ಲವನ್ನೂ ಸವರಿ ಮತ್ತೆ ಭೂಮಿಗೆ ಸೇರಿಸಬೇಕು ಅಂತ ಅನಿಸಿತು. ಏನೇ ಮಾಡಿದರೂ ಪೂರ್ತಿ ನಾಲ್ಕು ಎಕರೆಗೆ ಮಾಡಿಸಬೇಕಲ್ಲ. ಒಂದೇ ಸಲಕ್ಕೆ ಯಾವುದೇ ಒಂದೇ ಬೆಳೆಯನ್ನು ಹಚ್ಚುವ ಯೋಚನೆಯೇ ನನಗಿರಲಿಲ್ಲ. ಆದರೆ ಪ್ರಾಯೋಗಿಕವಾಗಿ ಪಂಚ ತರಂಗಿಣಿ ಅಳವಡಿಸಲು ಒಂದಿಷ್ಟು ಗುಂಟೆಗಳ ಸಣ್ಣ ಜಾಗ ನನಗೆ ಸಾಕಿತ್ತು.

ಸಧ್ಯಕ್ಕೆ ಗೌಡರನ್ನು ಅಲ್ಲಿಂದ ಸಾಗ ಹಾಕಬೇಕಿತ್ತು. ಇನ್ನೂ ಸ್ವಲ್ಪ ಹೊತ್ತು ಅಲ್ಲೇ ಇದ್ದರೆ ನನ್ನ ಯೋಜನೆಗಳೆಲ್ಲ ತಪ್ಪು ಅಂತ ಅವರು ಸಾಧಿಸಿಬಿಟ್ಟಿರೋರು. ಆಚೀಚೆ ನೋಡಿದೆ, ನಾಗಣ್ಣ ಎಲ್ಲೋ ಕಾಣೆಯಾಗಿದ್ದರು. ಅವರು ಹೊಲದಲ್ಲಿ ಎಲ್ಲಿದ್ದಾರೆ ಅಂತ ಹುಡುಕುವ ನೆಪದಲ್ಲಿ ಗೌಡರಿಗೆ ಬೈ ಹೇಳಿ ಹೊರಟೆ..

(ಮುಂದುವರಿಯುವುದು…)