“ಆ ಮುದ್ಕ ಸಂಕ್ರಪ್ಪ ದೇವಮ್ಮಕ್ಕನ ಗಂಡನೇ ಅಲ್ವಂತೆ. ಅವನೂರಾಗೆ ಬ್ಯಾರೆ ಸಂಸಾರ ಅದೆ. ಈವಮ್ಮಂಗೂ ಮಕ್ಕಳು ಮರಿ ಅವೆ. ಈ ವಯಸ್ನಾಗೆ ಈವಪ್ಪನ ಹಿಂದೆ ಓಡ್‌ಬಂದದೆ. ಸಂಕ್ರಪ್ಪಂಗೆ ರಿಟೈರ್ ಆಯ್ತಂತೆ. ಅದಕ್ಕೇ ಈಗ ಆವಯ್ಯನ್ನ ಬಿಟ್ಟು ಇನ್ನೆತ್ಲಾಗೋ ಹೋಗದೆ; ಘಾಟಿ ಹೆಂಗ್ಸು’ ಓನರ್ ಆಂಟಿಯಂತೂ ತಿಂಗಳೊಪ್ಪತ್ತು ಹೊಸರಾಗ, ಹಳೆರಾಗ ಎಲ್ಲವನ್ನೂ ಬೆರೆಸಿ ಹಾಡಿದರು. ಅಷ್ಟೆಲ್ಲ ಅಕ್ಕರೆಯ ಒರತೆಯಾಗಿರುವ ದೇವಮ್ಮಕ್ಕನ ನಿಜ ಬಣ್ಣ ಹೀಗಿರಬಹುದಾ ಎಂಬ ಅಚ್ಚರಿ ಮಲ್ಲಿಕಾಳಿಗೆ. ವಿಜಯಶ್ರೀ ಹಾಲಾಡಿ ಬರೆದ  ಈ ಭಾನುವಾರದ ಕತೆ ‘ದೇವಮ್ಮಕ್ಕ’ ನಿಮ್ಮ ಓದಿಗೆ. 

“ಹೋಗಿ ಆಗ್ಲೇ ನಾಕು ತಿಂಗ್ಳಾತು, ಇತ್ತ ಮೊಕ ಹಾಕಿ ಬರನಿಲ್ಲವಲ್ಲಾ ಹೆಂಗ್ಸು; ಬಾಡಿಗೆಯೂ ಇಲ್ಲ, ಕೊನೆಗೊಂದು ಗಾಳಿ ಸುದ್ದಿಯೂ ಇಲ್ಲ. ಮನೆ ಸಾಮಾನೂ ಹಂಗೇ ಬಿದ್ದವೆ. ಇನ್ನೊಂದ್ ವಾರ ನೋಡ್ಕಂಡು ಬೀಗ ಮುರೀತೀವಿ ಅಷ್ಟೆಯಾ. ಪಾತ್ರೆ ಪಗಡ ಮಾರಿದ್ರೆ ಎರ್ಡ್ ತಿಂಗಳ ಬಾಡಿಗೆಗಾದರೂ ಸರಿ ಹೋಗ್ಬೋದು. ಏನ್ ಜನಾನೋ, ಏನ್ಕತೆಯೋ…” ಓನರ್ ಆಂಟಿಯ ವಟಗುಟ್ಟುವಿಕೆ ಬೆಳಗಿನಿಂದ ಸಾಗುತ್ತಿತ್ತು. ಮಲ್ಲಿಕಾ ನಿರ್ಲಿಪ್ತ ಮುಖದೊಂದಿಗೆ ನೀರು ಹಿಡಿದುಕೊಂಡು ‘ಟೀ ಆಯ್ತ ಆಂಟಿʼ ಎಂದು ವಿಚಾರಿಸುತ್ತ ಗಡಿಬಿಡಿಯಲ್ಲೆಂಬಂತೆ ಮನೆಯೊಳಗೆ ಬಂದು ಬಾಗಿಲು ಹಾಕಿಕೊಂಡಳು. ಅವಳ ಹೊರ ಇರುವಿಕೆ ಹೀಗಿದ್ದರೂ ಒಳಗೊಳಗೆ ಯೋಚನೆಗಳು ಕಡಲಿನಂತೆ ಮರಳುತ್ತಿದ್ದವು. ದಿನದ ಕೆಲಸ ಮುಗಿಸಿ ಕುಳಿತಾಗ, ಪಾಪುಗೆ ತುತ್ತುಣಿಸುವಾಗ, ಕತೆ ಪುಸ್ತಕ ಹಿಡಿದಾಗ ಧಿಗ್ಗನೆ ದೇವಮ್ಮಕ್ಕನೇ ಎದ್ದುಬರುತ್ತಿದ್ದರು. ಓನರ್ ಆಂಟಿಯಂತೂ ತಿಂಗಳೊಪ್ಪತ್ತು ಹೊಸರಾಗ, ಹಳೆರಾಗ ಎಲ್ಲವನ್ನೂ ಬೆರೆಸಿ ಹಾಡಿದರು.

“ಆ ಮುದ್ಕ ಸಂಕ್ರಪ್ಪ ದೇವಮ್ಮಕ್ಕನ ಗಂಡನೇ ಅಲ್ವಂತೆ. ಅವನೂರಾಗೆ ಬ್ಯಾರೆ ಸಂಸಾರ ಅದೆ. ಈವಮ್ಮಂಗೂ ಮಕ್ಕಳು ಮರಿ ಅವೆ. ಈ ವಯಸ್ನಾಗೆ ಈವಪ್ಪನ ಹಿಂದೆ ಓಡ್‌ಬಂದದೆ. ಸಂಕ್ರಪ್ಪಂಗೆ ರಿಟೈರ್ ಆಯ್ತಂತೆ. ಅದಕ್ಕೇ ಈಗ ಆವಯ್ಯನ್ನ ಬಿಟ್ಟು ಇನ್ನೆತ್ಲಾಗೋ ಹೋಗದೆ; ಘಾಟಿ ಹೆಂಗ್ಸು”

“ಹಿಂಗೆಲ್ಲಾ ಕತೆ ಐತಾ ಕಮಲಮ್ಮಾ? ಬೆಣ್ಣೆ ತಿಂದ ಕೊತ್ತಿ ಹಂಗಿದ್ಲಲ್ಲೇ”

“ಇಷ್ಟೇ ಅಲ್ಲ ಶಾರೀ, ಅದೇನೋ ಸುಳ್ಳು ಹೆಸರ್ನಾಗೆ ಚೀಟಿ ಪಾಟಿ ಹಾಕ್ಕಂಡಿದ್ಲಂತೆ. ಟೇಲರ್ ಗಿರಜಂಗೆ ಐದ್ಹತ್ ಸಾವ್ರ ಕೈಕೊಟ್ಟವ್ಳಂತೆ ನೋಡಿ”

“ಹಿಂಗಾ?” “ಹಾ… ಮತ್ತಿನ್ನೇನಂತೀರಿ”
ಓಣಿಯ ಹೆಂಗಸರಿಗೆ ಭರ್ತಿ ವರ್ಷಕ್ಕಾಗುವಷ್ಟು ಸುದ್ಧಿ ಸಿಕ್ಕಿತ್ತು!

“ಮಲ್ಲಿಕಾ ಈಗೀಗ ಮಾತೇ ಆಡಾಕಿಲ್ಲ ನಮ್ತಾವ” ಅಂದವರಿಗೆ ಮಗುವಿಗೆ ಜ್ವರ, ಗಂಡನ ಊಟ-ತಿಂಡಿ, ತನ್ನ ಎಂ.ಎ. ಪರೀಕ್ಷೆ ಹೀಗೆ ಏನೇನೋ ನೆವಹೇಳಿ ತಪ್ಪಿಸಿಕೊಂಡಳು. ಮನೆಯಲ್ಲಿ ರವಿಯೂ ತಿರು ತಿರುಗಿ ಇದೇ ತರದ ಮಾತಾಡಿದಾಗ ‘ಹೌದಾʼ ಎಂದಷ್ಟೇ ಪ್ರತಿಕ್ರಿಯಿಸಿ ಕೋಣೆಗೆ ಹೋಗಿ ಕುಳಿತಿದ್ದಳು. ಕಿಟಕಿಯಲ್ಲಿ ನಂದಿಬಟ್ಟಲು ಐದಾರು ಹೂವರಳಿಸಿತ್ತು. ಈ ಮನೆಗೆ ಬಂದ ಹೊಸದರಲ್ಲಿ ನೆಟ್ಟ ಗಿಡವದು. ಮಣ್ಣಿಗೆ ಬಿದ್ದ ಹೂಗಳಿಗೆ ಇರುವೆಗಳು ಮುತ್ತಿ ಎಳೆದೊಯ್ಯುತ್ತಿದ್ದವು. ಮಲ್ಲಿಕಾ ದೀರ್ಘವಾಗಿ ಉಸಿರೆಳೆದುಕೊಂಡಳು.

***

ಮದುವೆಯಾಗಿ ಎರಡು ವರ್ಷದೊಳಗೇ ರವಿಗೆ ಕಣ್ಣು ಕಾಣದ ಊರಿಗೆ ವರ್ಗಾವಣೆಯಾದಾಗ ಪಾಪುಗೆ ಐದು ತಿಂಗಳು ಮಾತ್ರ. ಗಂಡನ ಊಟ, ತಿಂಡಿಯ ವ್ಯವಸ್ಥೆಗಾಗಿ ಬೆಣ್ಣೆಮಗುವನ್ನು ಕಟ್ಟಿಕೊಂಡು ಮಲ್ಲಿಕಾಳೂ ಕೂಡಲೇ ಹೊರಡಬೇಕಿತ್ತು. ಅಷ್ಟುದೂರ ಬಂದು ನೋಡಿಕೊಳ್ಳುವಷ್ಟು ಆರೋಗ್ಯದ ಜೀವವಲ್ಲ ಅಮ್ಮನದು. ಅದಲ್ಲದೆ ತಂಗಿ ಮಮತಾ ಹೆರಿಗೆಗೆ ಬಂದ ಸಮಯ. ರವಿಯ ಮನೆ ಕಡೆಯಿಂದಲೂ ಯಾರೂ ಹೊರಡದಾದಾಗ ಪಾಪುವನ್ನು ಎತ್ತಿಕೊಂಡು ಬಿಕ್ಕಳಿಸಿ ಅಳುತ್ತಲೇ ಬಸ್ಸುಹತ್ತಿದ್ದಳು ಮಲ್ಲಿಕಾ. ಬಂದದ್ದೋ; ರಣ ಬಿಸಿಲಿನ ಬಯಲುಸೀಮೆಯ ಊರಿಗೆ. ಸಾಲದ್ದಕ್ಕೆ ಆ ವರ್ಷ ದೊಡ್ಡ ಬರಗಾಲ ಬಾಧಿಸಿತ್ತು. ನೀರು ನಿಡಿಯಿಲ್ಲ, ತಂಪಿಲ್ಲ, ಹಸಿರಿಲ್ಲ; ಯಾವುದೋ ಮರಳುಗಾಡಿಗೆ ಬಂದಂತೆನಿಸಿ ತಮ್ಮ ಮಲೆನಾಡನ್ನು ನೆನೆನೆನೆದು ವ್ಯಥೆಪಟ್ಟಿದ್ದಳು. ಐದುತಿಂಗಳ ಬಾಣಂತಿ, ಸಿಝೇರಿಯನ್ ಆದದ್ದರಿಂದ ಮತ್ತಷ್ಟು ಸೂಕ್ಷ್ಮದೇಹದ ಮಲ್ಲಿಕಾ ಮಗುವನ್ನು ಸುಧಾರಿಸುತ್ತಾ ಉಳಿದ ಕೆಲಸಗಳನ್ನು ಹೇಗೋ ಮಾಡಿಕೊಂಡರಾಯಿತು ಎಂಬ ಭಂಡ ಧೈರ್ಯದಲ್ಲೇ ಇದ್ದರೂ, ಹೊಸ ಪರಿಸರದ ಪರಿಸ್ಥಿತಿ ಕೈಕಾಲು ನಡುಗಿಸಿತ್ತು. ಕುಡಿಯಲು ಮತ್ತು ಮನೆ ಬಳಕೆಗೆ ಬೇಕಾದ ಅಷ್ಟೂ ನೀರನ್ನು ಓನರ್ ಮನೆಯೆದುರಿನ ಆಳದ ಗುಂಡಿಯೊಳಗಿನ ನಲ್ಲಿಯಿಂದ ಸರತಿಸಾಲಿನಲ್ಲಿ ನಿಂತು ಹಿಡಿದು ತರಬೇಕಾಗಿತ್ತು. ರವಿಯಂತೂ ಮನೆ ಕೆಲಸಗಳಲ್ಲಿ ಸಹಕರಿಸುವುದು ದೂರದ ಮಾತು. ಏನು ಮಾಡಲೂ ತೋಚದ ಆ ಸಂದರ್ಭದಲ್ಲಿ ಮಲ್ಲಿಕಾಳ ಸಹಾಯಕ್ಕೆ ಬಂದದ್ದು ಹತ್ತಿರದ ಮನೆಯಲ್ಲೇ ಬಾಡಿಗೆಗಿದ್ದ ದೇವಮ್ಮಕ್ಕ.

“ನೀಯೇನೂ ಯೋಚ್ನೆ ಮಾಡ್ಬೇಡ ತಾಯೀ, ಎಳೆಬಾಣಂತಿಯನ್ನು ನೀರಿನ ಗುಂಡಿಗೆ ಇಳಿಸ್ತಾರೇನವ್ವಾ… ನಾನಿರೋದ್ಯಾಕೆ ಇಲ್ಲಿ?” ಎನ್ನುತ್ತಾ ನೀರು ತಂದು ತೊಟ್ಟಿ ತುಂಬಿಸಿದ್ದರು. ಬೆರಗಿನಿಂದ ನೋಡುತ್ತ “ದೇವಮ್ಮಕ್ಕಾ, ನನ್ನಿಂದಾಗಿ ನಿಮಗೆ ತ್ರಾಸ” ಮಲ್ಲಿಕಾ ತೊದಲಿದಾಗ “ಬಿಡವ್ವಾ, ನೀನು ನನ್ನ ಮಗಳಿದ್ದಂತೆ. ಹಸಿ ಮೈ ನಿಂದು, ರೆಸ್ಟ್ ಮಾಡವ್ವಾ. ಇನ್ಮುಂದೆ ನೀರಿನ ಕೆಲ್ಸ ನಂದೇ. ಪಾಪುಗೆ ಬಿಸಿನೀರೆರಿ… ನಂಗೇನೂ ತ್ರಾಸ ಇಲ್ಲ. ಒಂದಪ ಅಡ್ಡಾದ್ರೆ ಕೈಕಾಲು ಹಾಯಾಗ್ತವೆ” ಅಂದುಬಿಟ್ಟಿದ್ದರು. ಆವತ್ತಿನಿಂದ ಮಗು -ಬಾಣಂತಿಯಿರುವ ರವಿಯ ಮನೆಗೆ ಮೊದಲ ನೀರು ಎಂದು ಅಕ್ಕಪಕ್ಕದವರ ಮನವೊಲಿಸಿ, ತೊಟ್ಟಿ ತುಂಬಿಸಿ, ತಮಗೆ ಕೊನೆಯಲ್ಲಿ ನೀರು ಹಿಡಿದುಕೊಳ್ಳುತ್ತಿದ್ದರು.

ತರಕಾರಿ ಗಾಡಿ ಬಂದಾಗಲಂತೂ ದೇವಮ್ಮಕ್ಕನ ಸಂಭ್ರಮವೇ ಸಂಭ್ರಮ. ತರಕಾರಿ ಫ್ರೆಸ್ಸಾಗದೆ ತಂದ್ಬಿಡ್ತೀನಿ ಎನ್ನುತ್ತಾ ಒಂದಷ್ಟು ತಂದು, ತೊಳೆದು, ಒರೆಸಿ, ಸ್ಲ್ಯಾಬಿನ ಅಡಿಯ ನೆಲದ ಮೇಲೆ ಹರವಿ “ಎಲ್ಲಾ ಸಿಸ್ತಾಗಿ ಮಡಗಿದೀನಿ, ಅಡುಗೆ ಮಾಡಿ ತಿಂದ್ಕೊಳ್ಳೋದು ನಿಮ್ಮ ಜವಾಬ್ದಾರಿ. ಪಟ್ಟಾಗಿ ಹೊಡಿ, ಹಂಗೇ ರವಿಗೆ ನುಗ್ಗೆಕಾಯಿ ಸಾರು ಮಾಡಿ ಬಡ್ಸವ್ವಾ” ಎಂದು ತಮ್ಮ ಹಾಸ್ಯಕ್ಕೆ ತಾವೇ ನಗುತ್ತಾ ಮನೆ ಕಡೆ ಹೆಜ್ಜೆ ಹಾಕುತ್ತಿದ್ದರು.

ರವಿಯೂ ರೂಮಿನಿಂದ ಹೊರಬಂದು ತುಸು ಹರಟೆ ಹೊಡೆಯುತ್ತಿದ್ದ. ಪಾಪುಗಂತೂ ದೇವಮ್ಮಕ್ಕ ಭಾರೀ ಮುದ್ದು. ಗೆಜ್ಜೆಕಾಲು ಕುಣಿಸುತ್ತ ಅವರ ಮಡಿಲಿಗೆ ತಲೆಯಿಟ್ಟು ನಿದ್ದೆ ಮಾಡುವವರಂತೆ ನಟಿಸುತ್ತಿತ್ತು. ದೇವಮ್ಮಕ್ಕ ಹುಚ್ಚುಪ್ರೀತಿಯಿಂದ ಬರಸೆಳೆದು ಲೊಚಲೊಚನೆ ಮುತ್ತಿಟ್ಟರೇನೇ ಅದಕ್ಕೆ ಸಮಾಧಾನ. ಎಲೆಯಡಿಕೆ ಬಾಯಿಗೆಸೆಯುತ್ತ ಗಂಡ ಹೆಂಡತಿ ವಿರಾಮವಾಗಿ ಚಾಪೆಯಲ್ಲಿ ಕೂರುತ್ತಿದ್ದರು.

ಮಲ್ಲಿಕಾ ಮಾತುಗಾರ್ತಿಯಲ್ಲ. ನಾಲ್ಕು ಮಾತಿಗೆ ಒಂದು ಬದಲು. ಊರಲ್ಲಿ ಅಪ್ಪನಂತೂ “ಮೂಕಮ್ಮ” ಎಂದೇ ಕರೆಯುತ್ತಿದ್ದರು. ಆದರೆ ಇಲ್ಲಿ ದೇವಮ್ಮಕ್ಕ ಬಿಡುವ ಪೈಕಿಯಲ್ಲ. ಒತ್ತಾಯದಿಂದ ಒಂದ್ಹತ್ತು ಮಾತನ್ನಾದರೂ ಅವಳ ಬಾಯಿಂದ ಹೊರಡಿಸಿಯೇ ಸಿದ್ಧ ಅವರು. ರಾತ್ರಿಯೂಟ ಮುಗಿಸಿ ಎಲೆಯಡಿಕೆ ಜಗಿಯುತ್ತ ಶಂಕ್ರಪ್ಪ, ದೇವಮ್ಮಕ್ಕ ತಣ್ಣಗೆ ಜಗಲಿ ಮೇಲೆ ಕುಳಿತುಕೊಳ್ಳುವುದು ರೂಢಿ. ಹಾಗೇ ಕೆಲವು ಸಲ ಹೊಂಗೆಗಿಡ, ಬೇವಿನಮರ, ನೀರಿನ ತೊಟ್ಟಿಗಳನ್ನು ದಾಟಿ ಇವರ ಮನೆ ಬಾಗಿಲು ಬಡಿಯುವುದೂ ಇತ್ತು. “ನಮ್ದು ಊಟ ಪಾಟ ಆಯ್ತು, ನಿಮ್ದಾಯ್ತೇನವ್ವಾ?” ಎನ್ನುತ್ತ ಒಳಗಡಿಯಿಡುವ ದೇವಮ್ಮಕ್ಕ ದಂಪತಿ ಆಗ ತಾನೇ ಧಾರೆ ಹೊಯ್ಯಿಸಿಕೊಂಡು ಬಂದವರಂತೆ ಹೊಳೆಯುತ್ತಿದ್ದರು. ಅವರು ಬಂದಾಗ ರವಿಯೂ ರೂಮಿನಿಂದ ಹೊರಬಂದು ತುಸು ಹರಟೆ ಹೊಡೆಯುತ್ತಿದ್ದ. ಪಾಪುಗಂತೂ ದೇವಮ್ಮಕ್ಕ ಭಾರೀ ಮುದ್ದು. ಗೆಜ್ಜೆಕಾಲು ಕುಣಿಸುತ್ತ ಅವರ ಮಡಿಲಿಗೆ ತಲೆಯಿಟ್ಟು ನಿದ್ದೆ ಮಾಡುವವರಂತೆ ನಟಿಸುತ್ತಿತ್ತು. ದೇವಮ್ಮಕ್ಕ ಹುಚ್ಚುಪ್ರೀತಿಯಿಂದ ಬರಸೆಳೆದು ಲೊಚಲೊಚನೆ ಮುತ್ತಿಟ್ಟರೇನೇ ಅದಕ್ಕೆ ಸಮಾಧಾನ. ಎಲೆಯಡಿಕೆ ಬಾಯಿಗೆಸೆಯುತ್ತ ಗಂಡ ಹೆಂಡತಿ ವಿರಾಮವಾಗಿ ಚಾಪೆಯಲ್ಲಿ ಕೂರುತ್ತಿದ್ದರು. “ನಮ್ದು ಊಟಾಗದೆ, ಟೀ ಕಾಫಿ ಬೇಡ ಕಣವ್ವಾ, ಒಂತೊಟ್ಟು ಕಷಾಯ ಕೊಡು” ದೇವಮ್ಮಕ್ಕನ ಮಾತಿನಂತೆ ಮಲ್ಲಿಕಾ ಕಷಾಯ, ಹಣ್ಣು ಮುಂದಿಡುತ್ತಿದ್ದಳು. ಶಂಕ್ರಪ್ಪ ಮಿತಭಾಷಿ. ಹೆಂಡತಿ ಹೇಳಿದ್ದಕ್ಕೆ ತಲೆಯಾಡಿಸಿ ಮುಗಳ್ನಗುತ್ತ ನಡುನಡುವೆ ಮಾತಿನೆಳೆ ಎತ್ತಿಕೊಡುತ್ತಿದ್ದರು. ತಮ್ಮೂರಿನ ಜಮೀನು, ಮರಗಿಡ, ಮಕ್ಕಳು-ಮೊಮ್ಮಕ್ಕಳು… ಹೀಗೆ ವಿಷಯಗಳನ್ನು ಸ್ವಾರಸ್ಯಕರವಾಗಿ ಅವರಿಬ್ಬರು ಪ್ರಸ್ತಾಪಿಸುತ್ತಿದ್ದರೆ ಇವತ್ತು ಇಲ್ಲೇ ಇದ್ದುಬಿಡಲಿ ಅನಿಸುತ್ತಿತ್ತು ಮಲ್ಲಿಕಾಗೆ. ಆದರೆ ಗಂಟೆ ಹನ್ನೊಂದು ಹೊಡೆಯಿತೆಂದರೆ ದೇವಮ್ಮಕ್ಕ ಪಟ್ಟನೆ ಎದ್ದುಬಿಡುತ್ತಿದ್ದರು. “ನಮ್ ಸಂಕ್ರಪ್ಪಗೆ ನಿದ್ದೆ ಬಿಟ್ರೆ ಆಗಾಕಿಲ್ಲ, ನಾವ್ ಬತ್ತೀವಿ. ಹೊತಾರೆ ನೀರು ತುಂಬ್ತೀನಿ. ಕದ ಇಕ್ಕೋ” ಎನ್ನುತ್ತಾ ದೇವಮ್ಮಕ್ಕ ನಡೆದರೆ ಶಂಕ್ರಪ್ಪ ಕುಂಟುತ್ತಾ ಹಿಂಬಾಲಿಸುತ್ತಿದ್ದರು.

***

“ಈ ಜಬ್ಬ ಕುಡಿದೇ ಸಾಯುತ್ತಾನೆ ಕಾಣ್ತದೆ. ಇಂಥ ಕುಡುಕನಾಗಿದ್ದಕ್ಕೇ ಸಂಬಳ ಇವನಿಗೆ ದಕ್ಕದೇ ಹೋಗಿರುವುದು. ಸ್ಯಾಲರಿ ಪೂರಾ ಬೇರಾವುದೋ ಅಕೌಂಟಿಗೆ ಹೋಗುವ ಹಾಗೆ ಮಾಡಿದ್ದಾರೆ. ಬಹುಶಃ ದೇವಮ್ಮಕ್ಕನೇ ದುಡ್ಡು ಎಣಿಸಿಕೊಳ್ತಾರೇನೋ. ಅದು ಸರಿಯೇ, ಇಂತವನ ಕೈಗೆ ಪಾವಣೆ ಸಿಕ್ಕಿದರೆ ಮನೆ ನಡೀಲಿಕ್ಕುಂಟಾ? ವಯಸ್ಸು ಅರವತ್ತೈದಾದರೂ ದಾಟಿದೆ ಮನುಷ್ಯನಿಗೆ, ಇನ್ನೂ ರಿಟೈರ್ಡ್ ಆಗಿಲ್ಲ! ಯಾವ ಮಾಸ್ಟ್ರು ಸರ್ಟಿಫಿಕೇಟ್ ಬರೆದರೋ ಏನೋ ಕರ್ಮವೋ. ಇಂತಹ ಸುಮಾರು ಮುದುಕಪ್ಪಗಳಿದಾವೆ ನಮ್ಮ ಆಫೀಸಿನಲ್ಲಿ. ಸೈನ್ ಹಾಕುವುದು, ದುಡ್ಡು ಎಣಿಸುವುದು ಇಷ್ಟೇ ಇವುಗಳ ಕೆಲಸ. ಸರ್ಕಾರಕ್ಕೂ ಲಾಸು, ನಮಗೂ ಕಿರಿಕಿರಿ… ದಂಡಪಿಂಡಗಳು, ಕುಡುಕರ ಸಾವಾಸ ಅಲ್ಲ” ಎಂದೆಲ್ಲ ರವಿ ಆಗಾಗ ಗೊಣಗುವುದನ್ನು ಕೇಳಿಸಿಕೊಳ್ಳುತ್ತಲೇ ಇರುವ ಮಲ್ಲಿಕಾ “ನೀವು ಸಿಗರೇಟು ಸೇದೋದೇನು ಲೋಕ ಕಲ್ಯಾಣಕ್ಕಾ?” ತುಟಿ ಮೀರಿ ಬರುತ್ತೇನೆನ್ನುವ ಅಡ್ಡಮಾತನ್ನು ಹಿಡಿದಿಟ್ಟು ತನ್ನ ಕೆಲಸಗಳಲ್ಲಿ ಮುಳುಗುತ್ತಿದ್ದಳು.

ದೇವಮ್ಮಕ್ಕ ಒಮ್ಮೊಮ್ಮೆ ತಮ್ಮೂರಿಗೆ ಹೊರಡುವುದಿತ್ತು. ಆಗೆಲ್ಲ ಒಂದುವಾರ ನೀರಿನ ಕೆಲಸವನ್ನು ಹೇಗಾದರೂ ಮಲ್ಲಿಕಾಳೇ ಸುಧಾರಿಸುತ್ತಿದ್ದಳು. ಅದಲ್ಲದೆ, ಊರಿಗೆ ಹೊರಡುವ ಹಿಂದಿನ ದಿನ ತಮ್ಮನೆಯಲ್ಲಿದ್ದ ಎರಡು ಪ್ಲಾಸ್ಟಿಕ್ ಡ್ರಂಗಳನ್ನು ತಂದಿಟ್ಟು ಅವುಗಳಲ್ಲಿ ನೀರು ತುಂಬಿಸಿಡುತ್ತಿದ್ದರು ದೇವಮ್ಮಕ್ಕ. ಊರಿಂದ ಬರುವಾಗ ಬ್ಯಾಗಿನ ತುಂಬಾ ತಾಜಾ ತರಕಾರಿ ಮತ್ತು ಕೆಲವೊಮ್ಮೆ ಮೊಮ್ಮಗು ಸುಸ್ಮಿಯನ್ನು ಕರೆತರುತ್ತಿದ್ದರು. ಅಜ್ಜ ಅಜ್ಜಿ ಸುಸ್ಮಿಯ ಕೈ ಹಿಡಿದು ಪೇಟೆಯೆಲ್ಲಾ ತಿರುಗಿ ಗಮ್ಮತ್ತಾಗಿ ಕಾಲಕಳೆದು ಕಡೆಗೊಂದು ದಿನ ವಾಪಸ್ಸು ಬಿಟ್ಟುಬರುತ್ತಿದ್ದರು.

ಮೊದಲಿನಿಂದಲೂ ಶಾಲೆ ಕಾಲೇಜುಗಳನ್ನು ಹೊರತುಪಡಿಸಿ ಮತ್ತೊಂದು ಕಡೆ ತಿರುಗಿದವಳಲ್ಲ ಮಲ್ಲಿಕಾ. ಬಿಡುವಿನ ಹೊತ್ತಲ್ಲಿ ಕತೆಪುಸ್ತಕದ ಹುಚ್ಚು. ಆಗೆಲ್ಲ ಮಮತಾ ತಮಾಷೆ ಮಾಡುತ್ತ ‘ಗುಮ್ಹಕ್ಕಿ’ ಎಂದು ಹೆಸರು ಕಟ್ಟಿದ್ದಳು. ಈಗಲಾದರೂ ಅಷ್ಟೇ, ಹತ್ತಿರದಲ್ಲೇ ಇರುವ ದೇವಮ್ಮಕ್ಕನ ಮನೆಗೆ ಹೋದದ್ದು ನಾಲ್ಕೈದು ಸಲ ಮಾತ್ರ. ಮೊದಲ ಬಾರಿ ಕಾಲಿಟ್ಟಾಗ ಅಲ್ಲಿನ ಅಚ್ಚುಕಟ್ಟು ನೋಡಿ ಬೆಚ್ಚಿಬಿದ್ದಿದ್ದಳು. ಈ ದೇವಮ್ಮಕ್ಕ ಯಾವ ಸಮಯದಲ್ಲಿ ಇಷ್ಟೆಲ್ಲಾ ಕೆಲಸ ಮಾಡುತ್ತಾರಪ್ಪಾ ಎಂದು ಮೂಗಿಗೆ ಬೆರಳಿಟ್ಟು ಕಂಗಾಲಾಗಿದ್ದಳು. ಒಂದೇ ಒಂದು ಧೂಳಕಣ ಬಂದು ಬಿದ್ದರೂ ಪತ್ತೆ ಹಿಡಿಯಬಹುದಾದಷ್ಟು ಸ್ವಚ್ಛ ಅವರ ಮನೆ! ಬಚ್ಚಲುಮನೆಗೆ ಹಣಿಕಿ ನೋಡಿದರೆ ನೀರ ಹನಿಯೂ ಇಲ್ಲದಂತೆ ಓರಣವಾಗಿ ಒರೆಸಿಟ್ಟಿದ್ದರು! ಪುಟ್ಟದಾದ ಮನೆ, ಅಗತ್ಯಕ್ಕೆ ತಕ್ಕಷ್ಟೇ ವಸ್ತುಗಳು; ಆದರೆ ಅಂತಹ ಒಪ್ಪ ಓರಣವನ್ನು ಅದುವರೆಗೆ ಎಲ್ಲೂ ಕಂಡಿರಲಿಲ್ಲ. ಅಟ್ಟದಲ್ಲಿ ಜೋಡಿಸಿಟ್ಟ ಕಾಯಿಮಟ್ಟೆಯಲ್ಲೂ ಏನೋ ಸೆಳೆತವಿತ್ತು. ಆವತ್ತೊಂದಿನ ಮಾತ್ರ ಮನೆಗೆ ಬಂದು ತಾನೂ ನೀಟಾಗಿ ಜೋಡಿಸಿದ್ದಳು. ಎರಡು ದಿನದೊಳಗೆ ಹಿಂದಿನಂತೆಯೇ ಕೆದರಿಕೊಂಡಾಗ ನಮ್ಮಂತವರಿಗಲ್ಲ ಇದೆಲ್ಲ ಎಂದು ನಕ್ಕು ಸುಮ್ಮನಾಗಿದ್ದಳು.

ಆವತ್ತು ಬೆಳಗಿನ ಜಾವದಲ್ಲಿ ಊರಿನ್ನೂ ಆಕಳಿಸಿ ಮೈಮುರಿಯುತ್ತಿದ್ದಾಗಲೇ ದೇವಮ್ಮಕ್ಕ ಗಡಿಬಿಡಿಯಲ್ಲಿ ಹೊರಟುಹೋಗಿದ್ದರು. “ಊರಾಗೆ ಕೆಂಪಿ ದನ ಈದದಂತೆ, ಹೋಗಿದ್ದ್ ಬತ್ತೀನಿ” ಎಂದು ಅವರು ಕೂಗಿ ಹೇಳಿದಾಗ ನೀರಿನತೊಟ್ಟಿ ತೊಳೆಯುತ್ತಿದ್ದ ಓನರಾಂಟಿ, “ದೇವಮ್ಮಕ್ಕಾ, ನೀವಿಲ್ದೇ ನಮ್ಮನೆ ಕೆಲ್ಸ ಸಾಗೋದೇ ಸುಳ್ಳು. ಬೇಗ್ನೇ ಬಂದ್ಬಿಡಿ” ಎಂದಿದ್ದರು. ಮನೆ ತುಂಬ ಜನ, ಮೈತುಂಬಾ ಕೆಲಸ ಹಚ್ಚಿಕೊಂಡೇ ಇರುತ್ತಿದ್ದ ಅವರ ಪಾಡು ನೋಡಲಾಗದೆ ದೇವಮ್ಮಕ್ಕ ಸುಮಾರು ಸಹಾಯ ಮಾಡುತ್ತಿದ್ದುದು ಮಾಮೂಲಾಗಿತ್ತು. “ಬಂದ್ಬಿಡ್ತೀನಿ ಕಣವ್ವಾ” ಎನ್ನುತ್ತಾ ಮಲ್ಲಿಕಾಳನ್ನು ಸಮೀಪಿಸಿ ತಗ್ಗಿದ ದನಿಯಲ್ಲಿ “ಪಾಪೂನ ಚೆನ್ನಾಗಿ ನೋಡ್ಕೋ, ನಿನ್ನ ಆರೋಗ್ಯ ಜ್ವಾಕೆ, ರಾತ್ರಿ ಬಿರ್ರನೆ ಮಲಿಕ್ಕಂಬಿಡು, ಬೇಗ್ನೇ ಬತ್ತೀನಿ” ಎಂದು ಸರಸರನೆ ನಡೆದುಬಿಟ್ಟವರನ್ನು ಎಂತೋ ಏನೋ ಎಂದೆಲ್ಲ ಚಿಂತಿಸುತ್ತಲೇ ಬೀಳ್ಕೊಂಡಿದ್ದಳು. “ಮೂರ್ನಾಕು ಹೆಸ್ರು ಮಡಿಕ್ಕಂಡವ್ಳೇ, ವ್ಯಾವಾರ ಸರಿಯಿಲ್ಲ; ಸಂಕ್ರಪ್ಪನ ಜತೆ ಓಡ್ಬಂದೋಳು” ಓನರ್ ಆಂಟಿಯ ಮಾತುಗಳಿಗೆ ಏನು ಪ್ರತಿಕ್ರಿಯಿಸಬೇಕೆಂದೇ ಹೊಳೆದಿರಲಿಲ್ಲ.

***

ಅಂದು ಸೂರ್ಯ ಮೂಡುವುದಕ್ಕೆ ಮೊದಲೇ ದೇವಮ್ಮಕ್ಕ ಹೊರಟುಹೋದದ್ದು ನಿಜವಾದರೂ ಎರಡು ದಿನಗಳ ಹಿಂದೆ ರವಿ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಮಲ್ಲಿಕಾಳನ್ನು ಕಂಡಿದ್ದರು. ಸಿಗರೇಟಿನಿಂದ ಸುಟ್ಟು, ಕಚ್ಚಿ, ಪರಚಿ ಹಾಸಿಗೆಯಲ್ಲಿ ಹೆಂಡತಿಯನ್ನು ಹಿಂಸಿಸುವ ರವಿಯ ಘನಸ್ತಿಕೆ ಇತ್ತೀಚೆಗೆ ಮಲ್ಲಿಕಾಳ ಬಾಯಿಂದಲೇ ಅವರಿಗೆ ತಿಳಿದಿತ್ತು. ಹಾಗಾಗಿ ಜಗವೆಲ್ಲ ಕಿರುನಿದ್ದೆಯ ತೋಳಿನಲ್ಲಿ ತೂಕಡಿಸುವ ಮಧ್ಯಾಹ್ನದ ಸಮಯದಲ್ಲಿ ಮಲ್ಲಿಕಾಳನ್ನು ಸಂಧಿಸಿ, ಸಂತೈಸಿ, ಅವಳ ಗಾಯಗಳಿಗಾಗಿ ತಾವು ತಯಾರಿಸಿದ ಯಾವುದೋ ಸೊಪ್ಪಿನ ಮದ್ದನ್ನು ಕೊಟ್ಟುಹೋಗುತ್ತಿದ್ದರು. ಅಂತಹ ಭೇಟಿಗಳಲ್ಲಿ ತಮ್ಮ ಬದುಕಿನ ಕತೆಯನ್ನೂ ತೆರೆದಿಟ್ಟಿದ್ದರು. ಅವರ ಮಾತುಗಳ ಸಾರಾಂಶವೆಂದರೆ, ಸಂಕ್ರಪ್ಪ ದೇವಮ್ಮಕ್ಕನ ಪಕ್ಕದೂರಿನ ವಿಧುರ. ಎರಡು ಗಂಡುಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಹೊಂದಿದ ಸಂಸಾರ ಊರಿನಲ್ಲಿತ್ತು. ಗಂಡನ ಹೊಡೆತ, ಬಡಿತ, ನಿಂದನೆಗಳನ್ನು ಸಹಿಸಿ ಇಬ್ಬರು ಹೆಣ್ಣುಮಕ್ಕಳನ್ನು ಚೆನ್ನಾಗಿ ಓದಿಸಿ, ಅವರು ಮೆಚ್ಚಿದ ಹುಡುಗನಿಗೇ ಮದುವೆ ಮಾಡಿಕೊಟ್ಟು ನೆಲೆ ಕಾಣಿಸಿದ ಗಟ್ಟಿಗಿತ್ತಿ ದೇವಮ್ಮಕ್ಕನ ಕುರಿತು ಮೊದಲಿನಿಂದಲೂ ಸಂಕ್ರಪ್ಪನಿಗೆ ಮೆಚ್ಚುಗೆ, ಅನುಕಂಪವಿತ್ತು. ದೇವಮಕ್ಕನ ಗಂಡ ಅಕಸ್ಮಾತ್ ಹೃದಯಾಘಾತದಿಂದ ತೀರಿಕೊಂಡಾಗ ಆಪತ್ಕಾಲದ ಸಹಾಯವನ್ನೂ ಸಂಕ್ರಪ್ಪ ಮಾಡಿದ್ದ. ಆಗ ದೇವಮ್ಮಕ್ಕನಿಗೆ ತಿಳಿದು ಬಂದ ಸಮಾಚಾರವೆಂದರೆ, ಆತ ದುಡಿದ ದುಡ್ಡನ್ನು ಕಿತ್ತುಕೊಳ್ಳುವ ಮಕ್ಕಳು ಕುಡುಕ ಎಂಬ ನೆಪವೊಡ್ಡಿ ಬಯ್ದು, ಟೀಕಿಸಿ ಕುಟುಂಬದಿಂದಲೇ ಹೊರಗಿಟ್ಟಿದ್ದಾರೆ ಎಂಬುದು. ಅದಲ್ಲದೆ ಸಂಕ್ರಪ್ಪನಿಗೆ ಕುಸುಮರೋಗ ಎಂಬ ಕಾಯಿಲೆಯಿದ್ದು, ಆ ಕಾರಣಕ್ಕೂ ಅವನ ಜವಾಬ್ದಾರಿ ಮಕ್ಕಳಿಗೆ ಬೇಡಾಗಿತ್ತು. ರೋಗಿಯ ರಕ್ತ ಹೆಪ್ಪುಗಟ್ಟದೇ ಇರುವ ಈ ಅಪರೂಪದ ರೋಗದ ಚಿಕಿತ್ಸೆಯೂ ದುಬಾರಿ; ಆಗಾಗ ರಕ್ತ ಹಾಕಿಸಬೇಕಾಗುತ್ತಿತ್ತು. ಗಾಯವಾಗದಂತೆ ನೋಡಿಕೊಂಡು ಕಾಳಜಿಯಿಂದ ಆರೈಕೆ ಮಾಡುವ ಜೀವದ ಅಗತ್ಯವೂ ಅವನಿಗಿತ್ತು. ಆಗೀಗ ಕೈಕಾಲು ಬಾತುಕೊಂಡರೆ ಮೇಲೇಳುವುದೂ ಸಂಕ್ರಪ್ಪನಿಗೆ ಕಷ್ಟವಾಗುತ್ತಿತ್ತು. ಅಸಹಾಯಕನಾದ ಅವನೊಂದಿಗೆ ಸುಖದುಃಖ ಹಂಚಿಕೊಳ್ಳುತ್ತ ಅದ್ಯಾವುದೋ ಗಳಿಗೆಯಲ್ಲಿ ದೇವಮ್ಮಕ್ಕ ಹತ್ತಿರಾಗಿದ್ದರು. ಪ್ರೀತಿಯಿಂದ ಒಟ್ಟಿಗೆ ಬದುಕುವ ಆಸೆ ಇಬ್ಬರಿಗೂ ಆಗಿತ್ತು. ಆದರೆ ವೃದ್ಧಾಪ್ಯದ ವಯಸ್ಸಿನಲ್ಲಿ ಬೆಳೆದ ಮಕ್ಕಳ ಮುಂದೆ ಇದನ್ನೆಲ್ಲ ಪ್ರಸ್ತಾಪಿಸಿ ಕಟುಮಾತುಗಳಿಗೆ ಒಳಗಾಗುವುದಕ್ಕಿಂತ ತಮ್ಮ ಪಾಡಿಗೆ ಇರುವುದು ಮೇಲೆಂದು ಭಾವಿಸಿ ಸಂಕ್ರಪ್ಪನ ಆಫೀಸಿಗೆ ಹತ್ತಿರದಲ್ಲೇ ಅವನು ಮೊದಲಿದ್ದ ಬಾಡಿಗೆ ಮನೆಯಲ್ಲಿ ಬದುಕು ಹೂಡಿದ್ದರು. ಊರಿನಲ್ಲಿ ಗೇಣಿಗೆ ಕೊಟ್ಟಿರುವ ತಮ್ಮ ಸಣ್ಣ ಜಮೀನಿನ ಆದಾಯದಲ್ಲೇ ದೇವಮ್ಮಕ್ಕ ಮನೆ ನಿಭಾಯಿಸುತ್ತಿದ್ದರು. ಆದರೆ ಬರುಬರುತ್ತ ಸಂಕ್ರಪ್ಪನ ಆಸ್ಪತ್ರೆಯ ಖರ್ಚು ಅಧಿಕವಾಗಿ ಆರ್ಥಿಕ ಮುಗ್ಗಟ್ಟು ಸಾಮಾನ್ಯವೆಂಬಂತಾಗಿತ್ತು.

ಆ ಮಧ್ಯಾಹ್ನ ತಡೆಯಾಗದೆ ಬಿಕ್ಕುತ್ತ “ಮಲ್ಲಿಕಾ, ಸಂಕ್ರಪ್ಪನ ಕಾಸನ್ನು ನಾನು ಮುಟ್ಟಿಲ್ಲ ಕಣವ್ವಾ, ಆದ್ರೂ ಅವ್ನ ಮಕ್ಳು, ಸೊಸೆಯಂದ್ರು ಊರ್ನಾಗೆ ಇಲ್ಲಸಲ್ಲದ್ದೆಲ್ಲ ಹೇಳಿಟ್ಟವೆ. ಮನಸ್ಸಿಗೆ ಭಾಳ ತ್ರಾಸಾಗದೆ. ಸಂಕ್ರಪ್ಪನೋ ಬ್ಯಾಡಾಂಡ್ರೂ ಕೇಳದೆ ಕುಡೀತಾನೆ. ಜಡ್ಡೂ ಜಾಸ್ತಿ ಆಗದೆ. ಇನ್ನೆರಡು ದಿನದೊಳಗೆ ಆಸ್ಪತ್ರೆಗೆ ಸೇರ್ಸಿ ಅಂದಾರೆ ಡಾಕ್ಟ್ರು. ಹಂಗಾಗಿ ದುಡ್ಡಿನ ಯವಸ್ಥೆ ಮಾಡ್ಬೇಕು. ಬತ್ತೀನಿ ತಾಯಿ, ನಾ ಹೇಳಿದ್ದೆಲ್ಲ ನಿನ್ನಲ್ಲೇ ಇರ್ಲಿ ನನ್ನವ್ವಾ. ಯಾರ್ಕಿತಾನೂ ಬಾಯಿಬುಡ್ಬೇಡ. ಇನ್ನೊಂದ್ವಿಷ್ಯ, ನೀವು ಆದಷ್ಟು ಬೇಗ್ನೆ ಊರ್ಕಡೀಕೆ ಹೋಗ್ಬಿಡಿ. ತವರು ಹತ್ರ ಇದ್ರೆ ನಿಂಗೂ ಸಮಾಧಾನ, ರವಿಯಪ್ಪಂಗೂ ಭಯ ಬತ್ತದೆ. ನಿಮ್ಮಪ್ಪ, ಅವ್ವನ ತಾವ ಬುದ್ಧಿ ಹೇಳ್ಸು ಅವಂಗೆ… ನಾನೂ ಒಂದಪ ಹೇಳ್ತೀನಿ ತಗೋ, ಯೋಚ್ನೆ ಮಾಡ್ದೇ ಆರಾಮಿರು. ಪಾಪು ಜೋಪಾನ” ಎಂದು ಕಣ್ಣೊರೆಸುತ್ತಾ ಹೊರಡಲನುವಾದಾಗ “ಕುಂಕುಮ ತಗೊಂಡು ಹೋಗಿ ದೇವಮ್ಮಕ್ಕಾ” ಎಂದು ರವಿಕೆ ಕಣದೊಂದಿಗೆ ತನ್ನಲ್ಲಿದ್ದ ಐದು ಸಾವಿರ ದುಡ್ಡನ್ನೂ ಕೊಟ್ಟಿದ್ದಳು. “ಅಯ್ಯೋ ತಾಯಿ, ದುಡ್ಡು ಬ್ಯಾಡ ಕಣವ್ವಾ. ನೀನೇ ಮಡಿಕ್ಕೋ, ಕಷ್ಟಕ್ಕೆ ಬೇಕಾಯ್ತದೆ. ನಂದೇನಿಲ್ಲ; ಅಂಥಾ ಪರಿಸ್ಥಿತಿ ಬಂದ್ರೆ ನಮ್ಮೂರ್ನಾಗಿರೋ ಜಮೀನು ಮಾರ್ಹಾಕ್ತೀನಿ. ಕಾಸು ಮಡಿಕ್ಕೋ. ತೆಪ್ಪು ತಿಳೀಬೇಡ, ಬತ್ತೀನವ್ವಾ” ಎಂದು ನಡೆದುಬಿಟ್ಟಿದ್ದರು.

ಮಲ್ಲಿಕಾಳ ಕೆನ್ನೆ ತೊಯ್ಯುತ್ತಿತ್ತು. ಎಲ್ಲ ನಡೆದು ಹದಿನೈದು ವರ್ಷಗಳಾದರೂ ನಿನ್ನೆ ಮೊನ್ನೆಯೆಂಬಂತಿತ್ತು. ಪಾಪುಗೆ ಈಗ ಪಿ.ಯು.ಸಿ. ಮಲ್ಲಿಕಾಳ ತವರೂರಿನ ಹತ್ತಿರದ ಪೇಟೆ ತೀರ್ಥಹಳ್ಳಿಗೆ ರವಿಗೆ ವರ್ಗವಾಗಿಯೇ ಏಳೆಂಟು ಮಳೆಗಾಲ ದಾಟಿದೆ. ಆವತ್ತು ಇದ್ದಕ್ಕಿದ್ದಂತೆ ಹೊರಟುಹೋದ ದೇವಮ್ಮಕ್ಕ ಎಷ್ಟು ಕಾದರೂ ಮತ್ತೆ ಬರಲೇ ಇಲ್ಲ. ಅದೆಲ್ಲ ಕೈಯ್ಯಲ್ಲಿ ಫೋನಿಲ್ಲದ ಕಾಲ. ಎಂಥೆಂಥಾ ಕಷ್ಟಗಳನ್ನು ಎದುರಿಸಿದರೋ ಒಂದೂ ತಿಳಿಯಲಿಲ್ಲ. ಬೇಸರ, ಸಂತಸದ ಸಮಯದಲ್ಲೆಲ್ಲ ದೇವಮ್ಮಕ್ಕನ ನೆನಪು ತೀವ್ರವಾಗಿ ಕಾಡುತ್ತದೆ. ತವರೂರು ನರಿಬ್ಯಾಣದ ಬಸ್‍ಸ್ಟ್ಯಾಂಡಿನಲ್ಲೋ; ತೀರ್ಥಹಳ್ಳಿಯ ಪೇಟೆಯಲ್ಲೋ ದೇವಮ್ಮಕ್ಕ ಸಿಕ್ಕಿ ಬಾಯ್ತುಂಬ ಮಾತಾಡಿದಂತೆ, ಕೆಲವೊಮ್ಮೆ ಬಿಕ್ಕಿ ಅತ್ತಂತೆ ಮಲ್ಲಿಕಾಳಿಗೆ ಆಗಾಗ ಕನಸಾಗುವುದಿದೆ. ಹಾಗೆ ಕನಸು ಬಿದ್ದ ಮರುದಿನ ಭ್ರಮೆಯಲ್ಲಿ ತೇಲಾಡಿದರೆ, ಸಮಯ ಸರಿದಂತೆ ವಾಸ್ತವ ಮುತ್ತಿಕೊಂಡು ಮತ್ತಷ್ಟು ಮೌನಿಯಾಗುತ್ತಾಳೆ.