ಶ್ವಾಸದ ಉಸಿರು

ಗಿಡಮರವೆಂದರೆ ಬರಿಗಿಡವಲ್ಲ
ಹೂಹೂ ಗೊಂಚಲ ತೇರು!
ಹಕ್ಕಿಯ ಚಿಲಿಪಿಲಿ ಬರಿಯುಲಿಯಲ್ಲ
ನಾದಾಮೋದದ ತವರು!

ಗುಡ್ಡ ಗಂವರ ಬರಿಜಡವಲ್ಲ
ಭೂಮಿತಾಯಿಯ ಒಡಲು!
ಚಿಗುರೆಲೆ ಮುಗುಳು ತರಗೆಲೆಯಲ್ಲ
ಹಸಿರು ಸಗ್ಗದ ಕಡಲು!

ಸುಳಿತಂಗಾಳಿ ಒಣಹವೆಯಲ್ಲ
ಶ್ವಾಸ ನಿಶ್ವಾಸದ ಉಸಿರು!
ಜುಳು ಜುಳು ಹರಿವುದು ಬರಿ ನೀರಲ್ಲ
ಅಮೃತ ಬೆರೆಸಿದ ಕೆಸರು!

ಎಳೆಹೂಬಿಸಿಲು ತಾಪವದಲ್ಲ
ಮೈಯ ಹೊಳಪಿನ ಬಣ್ಣ!
ಉದಿಸಿದ ಹಸುಳೆ ಮೊಗ್ಗನು ಅರಳಿಸಿ
ತೆರೆವುದು ತೇಜದ ಕಣ್ಣ!

ಕೋಗಿಲೆ ಕುಹುಕುಹು ಬರಿಸ್ವರವಲ್ಲ
ಚೈತ್ರದ ಜೋಗುಳ ಹಾಡು!
ನವಿಲಿನ ನೃತ್ಯ ಬರಿ ಕುಣಿತಲ್ಲ
ಗೆಜ್ಜೆ ಕಾಲ್ಗಳ ಜೋಡು!

ಚಂದ್ರಗೌಡ ಕುಲಕರ್ಣಿ ತಾಳಿಕೋಟೆಯವರು
ಎಸ್.ಕೆ. ಕಲಾ-ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಇವರ ಕತೆ, ಕವನ ಹಾಗೂ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಬೆಣ್ಣೆ ಹಳ್ಳ (ಮಕ್ಕಳ ಕವಿತೆಗಳು), ಒಗಟು ಬಿಡಿಸೋ ಜಾಣ (ಒಗಟು ಕವಿತೆಗಳು), ಎಲ್ಲಮ್ಮನ ಆಟ (ಬಯಲಾಟ ಸಂಪಾದನೆ) ಇವರ ಪ್ರಕಟಿತ ಕೃತಿಗಳು