ಕಾರಿನ ಪಯಣದಲ್ಲಿ ನೋಡಿದ್ದು ಎಟ್ನಾ ಪರ್ವತದ ಐದು ಸೂಕ್ಷ್ಮ ವಲಯಗಳನ್ನು. ಜ್ವಾಲಾಮುಖಿಯ ತಪ್ಪಲಿನ ಜಾಗ ವ್ಯರ್ಥ ಭೂಮಿಯೆಂದು ಭಾವಿಸಿದ್ದ ನನಗೆ ಇದೊಂದು ಆಶ್ಚರ್ಯಕರ ಸಂಗತಿಯಾಗಿತ್ತು. ಈ ಪರ್ವತದ ಮಣ್ಣಿನ ಫಲವತ್ತತೆ ಹೆಚ್ಚಿರುವುದರಿಂದ ಇಲ್ಲಿನ ಕೃಷಿ ಉತ್ಪನ್ನಗಳಿಗೆ ಪ್ರಪಚದಾದ್ಯಂತ ಒಂದು ಗರಿಮೆಯಿದೆ. ನನ್ನ ಕಲ್ಪನೆಗೆ ಇದು ತದ್ವಿರುದ್ಧವಾಗಿತ್ತು. ಪರ್ವತದ ತಪ್ಪಲಿನ ಕೆಳ ಹಂತದಲ್ಲಿ ಕಿತ್ತಳೆ, ಗಜ ನಿಂಬೆ ಬೆಳೆಯುತ್ತಾರೆ. ಅದರಲ್ಲಿಯೂ ರಕ್ತ ವರ್ಣದ ಕಿತ್ತಳೆ “ಬ್ಲಡ್ ಆರೆಂಜ್” ಈ ಭಾಗದ ವಿಶೇಷ.
ಸಿಸಿಲಿಯನ್‌ ಓಡಾಟದ ಮತ್ತಷ್ಟು ಅನುಭವಗಳನ್ನು ಗುರುದತ್ ಅಮೃತಾಪುರ ಅವರು ತಮ್ಮ ‘ದೂರದ ಹಸಿರು’ ಅಂಕಣದಲ್ಲಿ ಹಂಚಿಕೊಂಡಿದ್ದಾರೆ.

ಬಾಲ್ಯದ ದಿನಗಳಲ್ಲಿ ಜ್ವಾಲಾಮುಖಿಯನ್ನು ಕೆಲವು ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದ ನೆನಪು. ಹಳೆಯ ಸಿನೆಮಾಗಳಲ್ಲಿನ ಭಾವೋದ್ವೇಗದ ಸನ್ನಿವೇಶಗಳಲ್ಲಿ ಜ್ವಾಲಾಮುಖಿ ಸ್ಪೋಟವಾಗುವ ದೃಶ್ಯಗಳನ್ನು ತೋರಿಸುತ್ತಿದ್ದರು. ವಿಜ್ಞಾನ ಪುಸ್ತಕಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ಭಾರತದ ಏಕೈಕ ಸಜೀವ ಜ್ವಾಲಾಮುಖಿಯ ಬಗೆಗೆ ಉಲ್ಲೇಖವಾಗಿತ್ತು. ಆಮೇಲೆ ಟೀವಿಯಲ್ಲಿ ಡಿಸ್ಕವರಿ ಚಾನೆಲ್ ಬಂದಾಗ, ಜ್ವಾಲಾಮುಖಿಯ ಹಲವಾರು ವಿಡಿಯೋಗಳು ಕುತೂಹಲವನ್ನು ಹೆಚ್ಚಿಸಿತ್ತು. ಹಾಗಾಗಿ ಬದುಕಿನಲ್ಲಿ ಒಮ್ಮೆಯಾದರೂ ನಿಜವಾಗಿ ಜ್ವಾಲಾಮುಖಿಯನ್ನು ನೋಡಬೇಕೆಂಬ ಹೆಬ್ಬಯಕೆ ಇತ್ತು. ಸೂರ್ಯನೇ ಹುಟ್ಟದ ನಾಡು, ಮರುಭೂಮಿ, ಹಿಮಾಲಯ, ಹವಳದ ದ್ವೀಪ ಹೀಗೆ ಏನೆಲ್ಲಾ ನೋಡಿದ್ದರೂ, ಈ ಪಟ್ಟಿಯಲ್ಲಿ ಜ್ವಾಲಾಮುಖಿ ಒಂದು ಸೇರುವುದಿತ್ತು. ಈಗಷ್ಟೆ ಭೂ ತಾಯಿಯ ಗರ್ಭದಿಂದ ಹೊರಬಂದ ಮಣ್ಣು ಹೇಗಿರುತ್ತದೆ? ಅದರ ವಾಸನೆ- ತೂಕ ಮತ್ತದರ ವೈಶಿಷ್ಟ್ಯಗಳನ್ನು ತಿಳಿಯಲು ಉತ್ಸುಕನಾಗಿದ್ದೆ.

ಸಿಸಿಲಿ ಪ್ರವಾಸ ಆರಿಸಿಕೊಂಡದ್ದಕ್ಕೆ ಇದೂ ಒಂದು ಕಾರಣ. ಅಲ್ಲಿನ ಎಟ್ನಾ ಪರ್ವತ ಯೂರೋಪಿನ ಅತ್ಯಂತ ಚಟುವಟಿಕೆಯಿಂದ ಕೂಡಿರುವ ಒಂದು ಜ್ವಾಲಾಮುಖಿ! ಕಳೆದ ವರ್ಷದಲ್ಲಿಯೇ ಹಲವಾರು ಬಾರಿ ಸ್ಫೋಟಗೊಂಡು ಲಾವಾ ರಸವನ್ನು ಹೊರಹಾಕಿದ ಪರಿಣಾಮ, ಈ ಪರ್ವತದ ಎತ್ತರ ಸುಮಾರು ನೂರು ಅಡಿಗಳಷ್ಟು ಬೆಳೆದಿದೆ. ಸುಮಾರು 1,190 ಚದರ ಕಿಲೋಮೀಟರ್ ವಿಸ್ತಾರವುಳ್ಳ ಈ ಪರ್ವತದ ಭೂ ಭಾಗ ಇಂದಿಗೂ ತನ್ನ ಬಾಹುಳ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಎಟ್ನಾ ಪರ್ವತ ಸಮುದ್ರ ತಟದಿಂದ ನೋಡಬಹುದಾದ ಯೂರೋಪಿನ ಅತೀ ಎತ್ತರದ ಪರ್ವತ! ಸಿಸಿಲಿಯ ಆಗ್ನೇಯ ಭಾಗದ ಕಡಲ ಕಿನಾರೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಈ ಪರ್ವತ ಸಮುದ್ರ ಮಟ್ಟದಿಂದ 3,357 ಮೀ ಎತ್ತರದಲ್ಲಿದೆ.

ಈಗ ಜ್ವಾಲಾಮುಖಿ ಹೇಗಾಗುತ್ತದೆ ಎಂದು ವಿವರಿಸಿಬಿಡುತ್ತೀನಿ. ಎರಡು ಭೂ ಭಾಗದ ನಡುವೆ ನಡೆಯುವ ಆಂತರಿಕ ತಿಕ್ಕಾಟದಲ್ಲಿ ಉಂಟಾಗುವ ಒತ್ತಡ ಎಲ್ಲೇ ಮೀರಿದಾಗ, ಸ್ಪೋಟಗೊಂಡು ವಿಷಾನಿಲ, ಲಾವಾರಸ ಹಾಗೂ ನೀರಿನ ಹಬೆ ಹೊರಹಾಕುತ್ತದೆ. ತುಂಬಾ ಸರಳವಾಗಿ ಹೇಳುವುದಾದರೆ: ಇಬ್ಬರು ಕುಸ್ತಿ ಪಟುಗಳು ಕೈ-ಕೈ ಮಿಲಾಯಿಸಿದಾಗ ಅವರ ಕೈ ಮೇಲಿನ ಒತ್ತಡ ಹೇಗಿರುತ್ತದೋ ಹಾಗೆ! ನಮ್ಮ ದೇಹದ ಚರ್ಮದೊಳಗೆ ಕೀವು ಒತ್ತಡ ಹೆಚ್ಚಾದಾಗ ಹೊರಬರುವುದು ಇನ್ನೊಂದು ಉದಾಹರಣೆ. ಎರಡು ಭೂ ಭಾಗದ ನಡುವೆ ನಡೆಯುವ ಆಂತರಿಕ ತಿಕ್ಕಾಟ ನಿರಂತರ ಪ್ರಕ್ರಿಯೆ. ನಮ್ಮ ಹಿಮಾಲಯ ಕೂಡ ಇದೆ ರೀತಿಯಲ್ಲಿ ಹುಟ್ಟಿದ್ದೆಂದೂ ಮತ್ತು ಇಂದಿಗೂ ಹಿಮಾಲಯ ವರ್ಷಕ್ಕೆ ಒಂದು ಸೆಂಟಿಮೀಟರ್ ನಷ್ಟು ಬೆಳೆಯುತ್ತಿದೆ ಎಂದೂ ನಾನು ಚಾರಣ ಹೋದಾಗ ನಮ್ಮ ಗೈಡ್ ಹೇಳಿದ್ದು ನೆನಪು. ನಾನು ಆಗಲೇ ಹೇಳಿದಂತೆ ಎಟ್ನಾ ಪರ್ವತ ವರ್ಷಕ್ಕೆ ನೂರು ಅಡಿಗಳಷ್ಟು ಬೆಳೆದಿದೆ!

ಈ ಆಯಾಮದ ಪ್ರಕಾರವಾಗಿ ನೋಡಿದರೆ, ಜ್ವಾಲಾಮುಖಿಗಳು ಯಾವಾಗಲೂ ಸ್ಫೋಟಗೊಳ್ಳುವುದಿಲ್ಲ. ಆಂತರಿಕ ಒತ್ತಡ ತಡೆಲಾರದಷ್ಟು ಬೆಳೆದಾಗ ಮಾತ್ರ ಸ್ಫೋಟಗೊಳ್ಳುತ್ತದೆ. ಹವಾಮಾನ ಮುನ್ಸೂಚನೆಯಲ್ಲಿ ವಿಜ್ಞಾನ ಮುಂದುವರೆದಂತೆ, ಈ ಜ್ವಾಲಾಮುಖಿಯ ಪರ್ವತಗಳನ್ನೂ ಸಹ ಉಪಗ್ರಹಗಳ ಮೂಲಕ ಪ್ರತಿ ಘಳಿಗೆಯಲ್ಲೂ ವೀಕ್ಷಿಸಲಾಗುತ್ತದೆ. ಸ್ಫೋಟದ ಮುನ್ಸೂಚನೆಯನ್ನು ಅರಿಯಬಹುದಾದ ದಿನಗಳು ಬಂದಿವೆ.

ಪ್ರತೀ ಬಾರಿ ಜ್ವಾಲಾಮುಖಿ ಪರ್ವತ ಸ್ಫೋಟಗೊಂಡಾಗಲೂ ಅದರ ತೀವ್ರತೆ, ಗಾತ್ರ ಎಲ್ಲವೂ ವಿಭಿನ್ನವಾಗಿರುತ್ತದೆ. ನಾನು ಭೇಟಿ ನೀಡಿದಾಗ ಜ್ವಾಲಾಮುಖಿಯ ಸ್ಫೋಟವಾಗಲಿಲ್ಲ. ಆದರೆ ನೀರಿನ ಹಬೆ ಹೊರಬರುವುದನ್ನು ಕಂಡು ಆಶ್ಚರ್ಯವಾಯಿತು. ಈ ಫೋಟೋದಲ್ಲಿ ನೋಡಬಹುದು. ಇದನ್ನು ಅದೃಷ್ಟ ಎನ್ನಬೇಕೋ, ದುರಾದೃಷ್ಟ ಎನ್ನಬೇಕೋ ತಿಳಿಯಲಿಲ್ಲ. ಅಕಸ್ಮಾತ್ ಜ್ವಾಲಾಮುಖಿ ಸ್ಫೋಟವಾದರೆ, ಅದು ಶಾಂತವಾಗುವವರೆಗೆ ಎಟ್ನಾ ಪ್ರವಾಸ ನಿಷಿದ್ಧವಾಗಿರುತ್ತದೆ. ಆದರೆ ದೂರದಿಂದ ಲಾವಾ ರಸ ಚಿಮ್ಮುವುದನ್ನು ನೋಡಬಹುದು. ಜ್ವಾಲಾಮುಖಿ ಸ್ಫೋಟವಾಗದೆ ಮಾಮೂಲಿನಂತಿದ್ದರೆ, ಅದರ ಸುತ್ತ ಓಡಾಡಿ ಚಾರಣದ ಪ್ರವಾಸ ಕೈಗೊಳ್ಳಬಹುದು. ಇನ್ನೊಂದು ತಮಾಷೆಯ ಸಂಗತಿಯೆಂದರೆ, ಪ್ರವಾಸದ ಸಮಯದಲ್ಲಿ ನಾನು ಜ್ವಾಲಾಮುಖಿ ಸ್ಫೋಟಗೊಳ್ಳಲಿ ಎಂದು ದೇವರಲ್ಲಿ ಬೇಡುತ್ತಿದ್ದರೆ, ಬೆಂಗಳೂರಿನಲ್ಲಿ ನನ್ನಮ್ಮ ತದ್ವಿರುದ್ಧವಾಗಿ ಬೇಡುತ್ತಿದ್ದರು.

ಈ ಭಾಗದಲ್ಲಿ ಎಟ್ನಾ ಪರ್ವತದ ಪ್ರವಾಸ ಒಂದು ಪ್ರಮುಖ ಆಕರ್ಷಣೆ. ಹಲವಾರು ಪ್ರವಾಸೋದ್ಯಮ ಕಂಪನಿಗಳು ಈ ಪ್ರವಾಸವನ್ನು ಏರ್ಪಡಿಸಿರುತ್ತವೆ. ನಮ್ಮ ಪ್ರವಾಸದಲ್ಲಿ ಚಾಲಕನೇ ಗೈಡ್. ಫೋರ್ ವೀಲ್ ಡ್ರೈವ್ ಇರುವ ವಾಹನದಲ್ಲಿ 2000 ಮೀ ಎತ್ತರದ ಎಟ್ನಾ ಪರ್ವತದ ಭಾಗಗಳಿಗೆ ಕರೆದೊಯ್ಯುತ್ತಾರೆ. ಎರಡು ಘಂಟೆಗಳ ಚಾರಣದ ಸಮಯದಲ್ಲಿ ಎಟ್ನಾ ಜ್ವಾಲಾಮುಖಿಯ ಬಗೆಗೆ ಅನೇಕ ವಿವರಗಳನ್ನು ನೀಡುತ್ತಾರೆ. ಬೆಳಗಿನಿಂದ ಸಂಜೆಯವರೆಗೆ ಇರುವ ಪ್ಯಾಕೇಜ್ ಟೂರ್ ನಲ್ಲಿ ನಮಗೆ ಇಷ್ಟವಾದ ಇನ್ನೊಂದು ಭಾಗವೆಂದರೆ “ಶಾಪಿಂಗ್” ಎಂದು ಅನಗತ್ಯವಾಗಿ ಸಮಯ ವ್ಯರ್ಥವಿಲ್ಲ.

ಕಾರಿನ ಪಯಣದಲ್ಲಿ ನೋಡಿದ್ದು ಎಟ್ನಾ ಪರ್ವತದ ಐದು ಸೂಕ್ಷ್ಮ ವಲಯಗಳನ್ನು. ಜ್ವಾಲಾಮುಖಿಯ ತಪ್ಪಲಿನ ಜಾಗ ವ್ಯರ್ಥ ಭೂಮಿಯೆಂದು ಭಾವಿಸಿದ್ದ ನನಗೆ ಇದೊಂದು ಆಶ್ಚರ್ಯಕರ ಸಂಗತಿಯಾಗಿತ್ತು. ಈ ಪರ್ವತದ ಮಣ್ಣಿನ ಫಲವತ್ತತೆ ಹೆಚ್ಚಿರುವುದರಿಂದ ಇಲ್ಲಿನ ಕೃಷಿ ಉತ್ಪನ್ನಗಳಿಗೆ ಪ್ರಪಚದಾದ್ಯಂತ ಒಂದು ಗರಿಮೆಯಿದೆ. ನನ್ನ ಕಲ್ಪನೆಗೆ ಇದು ತದ್ವಿರುದ್ಧವಾಗಿತ್ತು. ಪರ್ವತದ ತಪ್ಪಲಿನ ಕೆಳ ಹಂತದಲ್ಲಿ ಕಿತ್ತಳೆ, ಗಜ ನಿಂಬೆ ಬೆಳೆಯುತ್ತಾರೆ. ಅದರಲ್ಲಿಯೂ ರಕ್ತ ವರ್ಣದ ಕಿತ್ತಳೆ “ಬ್ಲಡ್ ಆರೆಂಜ್” ಈ ಭಾಗದ ವಿಶೇಷ. ಇದರ ಬಗೆಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ. ಗಜ ನಿಂಬೆ ಎಂದರೆ ಮುಷ್ಠಿ ಗಾತ್ರದ್ದನ್ನು ನೋಡಿದ್ದೆ. ಆದರೆ ಇಲ್ಲಿ ಅದರ ಜೊತೆಗೆ ಅನಾನಸ್ ಗಾತ್ರದ ನಿಂಬೆಯನ್ನೂ ಬೆಳೆಯುತ್ತಾರೆ!

ನಮ್ಮ ಹಿಮಾಲಯ ಕೂಡ ಇದೆ ರೀತಿಯಲ್ಲಿ ಹುಟ್ಟಿದ್ದೆಂದೂ ಮತ್ತು ಇಂದಿಗೂ ಹಿಮಾಲಯ ವರ್ಷಕ್ಕೆ ಒಂದು ಸೆಂಟಿಮೀಟರ್ ನಷ್ಟು ಬೆಳೆಯುತ್ತಿದೆ ಎಂದೂ ನಾನು ಚಾರಣ ಹೋದಾಗ ನಮ್ಮ ಗೈಡ್ ಹೇಳಿದ್ದು ನೆನಪು. ನಾನು ಆಗಲೇ ಹೇಳಿದಂತೆ ಎಟ್ನಾ ಪರ್ವತ ವರ್ಷಕ್ಕೆ ನೂರು ಅಡಿಗಳಷ್ಟು ಬೆಳೆದಿದೆ!

ಸ್ವಲ್ಪ ಮೇಲೆ ಬಂದಂತೆ ಎಲ್ಲಿ ನೋಡಿದರೂ ದ್ರಾಕ್ಷಿ ತೋಟಗಳು. ವೈನ್ ಟೂರ್ ಇಲ್ಲಿನ ಇನ್ನೊಂದು ಆಕರ್ಷಣೆ. ಈ ಭಾಗದ ಮಣ್ಣಿನ ವಿಶೇಷತೆಯಿಂದ ಬೆಳೆದ ದ್ರಾಕ್ಷಿಯ ವೈನ್ ರುಚಿ ಇನ್ನೆಲ್ಲೂ ಸಿಗಲಾರದೆಂದು ನಮ್ಮ ಗೈಡ್ ವಿವರಿಸಿದರು. ಇನ್ನೂ ಮೇಲೆ ಹೋದಂತೆ ಗೋಡಂಬಿ, ಪಿಸ್ತಾ ಬೆಳೆಯುತ್ತಾರೆ. ಅದಕ್ಕೂ ಮೇಲೆ ದಾಟಿದರೆ ಸಿಗುವುದು ಪೈನ್ ಕಾಡುಗಳು. ಇನ್ನೂ ಮೇಲೆ ಹೋದರೆ ಸಿಗುವುದು ಕೊನೆಯ ಭಾಗವಾಗಿ ಕಪ್ಪು ಮಣ್ಣಿನ ಗುಡ್ಡಗಳು.

(ಹಗ್ಗದ ಸಹಾಯದಿಂದ ಗುಹೆಯೊಳಗೆ ಇಳಿಯುತ್ತಿರುವುದು)

ಕಾರು ನಿಲ್ಲಿಸಿ ಚಾರಣ ಮಾಡಲು ಪ್ರಾರಂಭಿಸಿದ ಮೇಲೆ ನಮ್ಮ ಮೊದಲ ನಿಲ್ದಾಣ “ವಾಲ್ಕ್ಯಾನಿಕ್ ಕೇವ್”. ಅಂದರೆ ಸುಮಾರು ಇನ್ನೂರು ವರ್ಷಗಳ ಹಿಂದೆ ಲಾವಾ ರಸ ನದಿಯಂತೆ ಹರಿದು ಹೋದಾಗ ಮಾಡಿರುವ ಸುರಂಗಗಳು. ಹಗ್ಗದ ಸಹಾಯದಿಂದ ಗುಹೆಯೊಳಗೆ ಇಳಿದು, ಟಾರ್ಚ್ ಬೆಳಕಿನಿಂದ ಎಲ್ಲವನ್ನೂ ಗೈಡ್ ವಿವರಿಸಿದರು. ಲಾವಾ ರಸ ನದಿಯಂತೆ ಹರಿಯುವಾಗ, ಅದರ ಮೇಲ್ಮೈ ಪದರ ಹೊರಗಿನ ಗಾಳಿಯ ತಾಪಮಾನದಿಂದ ಗಟ್ಟಿಯಾಗಿ ಕಲ್ಲಾಗುತ್ತದೆ. ಆದರೆ ಒಳಗೆ ಲಾವಾ ರಸ ಹಾಗೆಯೇ ಹರಿಯಲು ಮುಂದುವರೆಯುತ್ತದೆ. ರಕ್ತ ಸ್ರಾವವಾಗುವಾಗ ಹೇಗೆ ರಕ್ತ ಹೆಪ್ಪುಗಟ್ಟುತ್ತದೆಯೋ ಹಾಗೆ! ಲಾವಾ ನದಿಯ ಕೇಂದ್ರ ಭಾಗದಲ್ಲಿ 1000 ಡಿಗ್ರಿ ಸೆಲ್ಷಿಯಸ್ ಗಿಂತಲೂ ತಾಪಮಾನ ಹೆಚ್ಚಿರುತ್ತದಂತೆ!

ಅದನ್ನೆಲ್ಲ ನೋಡಿ ಮುಂದೆ ನಡೆದು ಸಾಗುತ್ತಿದ್ದರೆ ಎಲ್ಲಿ ನೋಡಿದರು ಕಪ್ಪು ಮಣ್ಣಿನ, ಕಲ್ಲಿನ ಪರ್ವತಗಳು. ನಾವು ನಡೆದು ಸಾಗಿದ ಪರ್ವತಗಳು ಇನ್ನೂರು ವರ್ಷಗಳ ಹಿಂದೆ ರೂಪಗೊಂಡವು. ನಮಗೆ ಇನ್ನೂರು ವರ್ಷ ಎಂದರೆ ಹೆಚ್ಚು ಎನಿಸಿದರೂ, ಪರ್ವತಗಳ ಆಯಸ್ಸಿನ ಕಾಲಮಾನದಲ್ಲಿ ಇವಿನ್ನೂ ನವಜಾತ ಶಿಶುಗಳಿದ್ದಂತೆ. ಒಂದು ಉದಾಹರಣೆ ಕೊಡುವುದಾದರೆ ಕರ್ನಾಟಕವು ಸೇರಿದಂತೆ ಇರುವ ಪಶ್ಚಿಮ ಘಟ್ಟಗಳು ಹಿಮಾಲಯ ಪರ್ವತ ಶ್ರೇಣಿಗಳಿಗಿಂತ ಪುರಾತನದವು. ಅವು ಸುಮಾರು ನೂರೈವತ್ತು ಮಿಲಿಯನ್ ವರ್ಷಗಳ ಹಿಂದೆ ಹುಟ್ಟಿರುವವು (ಅಂದರೆ ಹದಿನೈದು ಕೋಟಿ ವರ್ಷಗಳ ಹಿಂದಿನವು). ಹಿಮಾಲಯ ಪರ್ವತ ಶ್ರೇಣಿಯು ಸುಮಾರು ನಲವತ್ತರಿಂದ ಐವತ್ತು ಲಕ್ಷ ವರ್ಷಗಳ ಹಿಂದಿನವು. ಅದರ ಮುಂದೆ ಇನ್ನೂರು ವರ್ಷಗಳ ಲೆಕ್ಕ ಉಂಟೆ? ಕಪ್ಪು ಮಣ್ಣನ್ನು ಎತ್ತಿ ಹಿಡಿದರೆ ಹಗುರವಾಗಿತ್ತು. ಸುಟ್ಟ ವಾಸನೆಯ ಜಾಡು ಇನ್ನೂ ಇತ್ತು. ಕ್ರಮೇಣ ಬಿಸಿಲು, ಮಳೆ, ಗಾಳಿಯ ಪರಿಣಾಮದಿಂದ ಕಪ್ಪು ಬಣ್ಣ ಬೇರೆಯ ಸಹಜ ಪರ್ವತಗಳ ಬಣ್ಣಕ್ಕೆ ತಿರುಗುತ್ತದೆ. ಆದರೆ ಆ ಪ್ರಕ್ರಿಯೆಗೆ ಇನ್ನೂ ಸಾವಿರಾರು ವರ್ಷಗಳೇ ಬೇಕು!

(ಎಟ್ನಾ ಪರ್ವತದ ಹಗುರವಾದ ಕಪ್ಪು ಮಣ್ಣು)

ಬೆಟ್ಟ ಇಳಿದು ಬರುವಾಗ ನಮ್ಮ ಗೈಡ್, ತನಗೆ ಭಾರತ ಪ್ರವಾಸದಲ್ಲಿ ಆದ ಅನುಭವಗಳನ್ನು ಹಂಚಿಕೊಂಡರು. ಅವರ ಅಭಿಪ್ರಾಯವನ್ನು ಯೂರೋಪಿನ ಬಹಳ ಜನರು ಒಪ್ಪುತ್ತಾರೆ. ಹೌದು ಅಥವಾ ಇಲ್ಲ ಎನ್ನುವುದಕ್ಕೆ ಭಾಷೆ ಬರದಿದ್ದಾಗ ತಲೆ ಅಲ್ಲಾಡಿಸುವುದು ಸಾಮಾನ್ಯ. ಜಗತ್ತಿನ ಬೇರೆಲ್ಲೆಡೆ ತಲೆ ಆಡಿಸುವಾಗ, ಹೌದು ಎಂದರೆ ಮೇಲಿನಿಂದ ಕೆಳಗೆ ತಲೆಯಾಡಿಸಿ ಹೌದೆನ್ನುತ್ತಾರೆ. ಇಲ್ಲ ಎಂದರೆ, ಎಡದಿಂದ ಬಲಕ್ಕೆ ತಲೆ ಆಡಿಸಿ ಇಲ್ಲ ಎನ್ನುತ್ತಾರೆ. ಆದರೆ ಭಾರತದಲ್ಲಿ ಎರಡನ್ನೂ ಮಿಶ್ರಿತವಾಗಿ ಭಾಷೆ ಬಾರದವರಿಗೆ ಏನೂ ಅರ್ಥವಾಗದಂತೆ ಮಾಡುತ್ತಾರಂತೆ. ಎಂಭತ್ತರ ದಶಕದಲ್ಲಿ ರಾಜಸ್ಥಾನದ ಹಳ್ಳಿಯಲ್ಲಿ ಯಾರೋ ಒಬ್ಬರು ಹೀಗೆಯೇ ತಲೆಯಾಡಿಸಿ ಜೈಪುರದ ಬಸ್ಸಿನ ಬದಲು ಜೋಧಪುರದ ಬಸ್ಸಿಗೆ ಹತ್ತಿಸಿ ಕಳಿಸಿಬಿಟ್ಟಿದ್ದರಂತೆ. ಅಲ್ಲಿ ತಲುಪಿದ ಮೇಲೆ ಡ್ರೈವರ್ ತನ್ನ ಮನೆಗೆ ಕರೆದೊಯ್ದು ಊಟೋಪಚಾರ ಮಾಡಿದ್ದನ್ನು ನೆನೆದು “ಭಾರತದವರು ಅನಕ್ಷರಸ್ಥರೆಂದು ಮೂದಲಿಸುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮನುಷ್ಯತ್ವದ ಅನಕ್ಷರತೆ ಹೆಚ್ಚಿದೆ” ಎಂದರು. ಅವರು ಭೇಟಿ ನೀಡಿದ್ದ ಎಂಭತ್ತರ ದಶಕದಲ್ಲಿ ಇದು ಪ್ರಸ್ತುತ ಎನ್ನಬಹುದೇನೋ.

ಬೆಟ್ಟ ಇಳಿದು ಬರುವ ಹೊತ್ತಿಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಕುಮಾರ ಪರ್ವತದಲ್ಲಿ ಭಟ್ಟರ ಮನೆಯಂತೆ ಇಲ್ಲಿ ಚಾರಣ ಮಾಡಬಹುದಾದ ಎಲ್ಲ ಪರ್ವತಗಳ ಮೇಲೆಯೂ ಒಂದು “ಹಟ್” ಇರುತ್ತದೆ. ಪದ ಬಳಕೆಯಲ್ಲಿ ಗುಡಿಸಲು ಎನ್ನುವ ಅರ್ಥ ಬಂದರೂ, ಅದೊಂದು ಸುಸಜ್ಜಿತ ಹೋಟೆಲ್. ಅಲ್ಲಿ ಬಿಸಿ ಬಿಸಿ ಪಾಸ್ತಾ ತಿಂದು ನಮ್ಮ ಹೋಟೆಲ್ ಕಡೆಗೆ ಹೊರಟೆವು.

ಎಟ್ನಾ ಪರ್ವತ ೨೦೨೧ ಫೆಬ್ರವರಿಯಲ್ಲಿ ಸ್ಫೋಟಗೊಂಡಾಗ ಅದರ ತೀವ್ರತೆ ಎಷ್ಟಿತ್ತೆಂದರೆ, ಸುಮಾರು ಹದಿಮೂರು ಕಿಲೋಮೀಟರ್ ನಷ್ಟು ದಟ್ಟ ಹೋಗೆ ಹಬ್ಬಿ ಹತ್ತಿರದ ಕಟಾನಿಯಾ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈ ಪರ್ವತದ ಎತ್ತರವೇ ಇಲ್ಲಿನ ಜನರಿಗೆ ವರದಾನ. ಮೂರೂ ಸಾವಿರ ಮೀಟರ್‌ಗಿಂತಲೂ ಎತ್ತರದ ಬೆಟ್ಟದಲ್ಲಿ ಚಿಮ್ಮುವ ಲಾವಾ ರಸ ಹರಿದು ಬರುವಾಗ ಕ್ರಮೇಣ ತಣ್ಣಗಾಗಿ ಅರ್ಧದಲ್ಲಿಯೇ ನಿಂತುಬಿಡುತ್ತದೆ. ಜ್ವಾಲಾಮುಖಿಯಿಂದ ಹೊರಬರುವ ವಿಷಾನಿಲ ಹಾಗೆಯೇ ಎತ್ತರದಲ್ಲಿ ಆಗಸವನ್ನು ಸೇರಿಬಿಡುತ್ತದೆ. ಈ ಜ್ವಾಲಾಮುಖಿಯಿಂದ ಪ್ರಾಣ ಹಾನಿಯಾದ ಉದಾಹರಣೆ ಇಲ್ಲವಂತೆ!

ನನ್ನ ಪ್ರಯಾಣದ ವೈವಿಧ್ಯಮಯ ಸ್ಥಳಗಳ ಪಟ್ಟಿಯಲ್ಲಿ ಎಟ್ನಾ ಪರ್ವತ ಕೂಡ ಸೇರ್ಪಡೆಯಾಯಿತು. ಭೂ ಗರ್ಭದಿಂದ ಜನಿಸಿದ ನವಜಾತ ಶಿಶುವಿನ ದರ್ಶನವೂ ಆಯಿತು. ಮುಂದಿನ ಸಂಚಿಕೆಯಲ್ಲಿ ಸಿಸಿಲಿಯ ತಿಂಡಿ-ತಿನಿಸುಗಳ ಬಗ್ಗೆ ಬರೆಯುತ್ತೇನೆ. ಈ ಸಾಲು ಬರೆಯುವಾಗ ಅಲ್ಲಿ ತಿಂದದ್ದನ್ನೆಲ್ಲ ನೆನಸಿಕೊಂಡು ಬಾಯಲ್ಲಿ ಮತ್ತೆ ನೀರು ಬಂತು. ನಿರೀಕ್ಷಿಸಿ…