ಇಲ್ಲೊಂದು ಕ್ಯಾಥೆಡ್ರೆಲ್ ಇದೆ. ಇದರ ಮೂಲ ಗ್ರೀಕ್ ದೇವಾಲಯ. ಕ್ರಿ.ಪೂ. ಐದನೇ ಶತಮಾದಲ್ಲಿ ಕಟ್ಟಿದ ಈ ದೇವಾಲಯದ ಕಂಬಗಳು ಈಗಲೂ ಹಾಗೆಯೇ ಇವೆ. ರೋಮನ್ ಆಳ್ವಿಕೆಯಲ್ಲಿ ರೋಮನ್ ದೇವಾಲಯವಾಗಿತ್ತು. ನಂತರ ಕ್ರೈಸ್ತ ಧರ್ಮ ಬಂದ ನಂತರ ಇದನ್ನು ಚರ್ಚ್ ಆಗಿ ಮಾರ್ಪಾಡು ಮಾಡಲಾಯಿತು. ಆಮೇಲೆ ಅರಬ್ಬರ ಆಳ್ವಿಕೆಯಲ್ಲಿ ಮಸೀದಿ ಮಾಡಲಾಯಿತು. ನಂತರ ಮತ್ತೆ ಇಟಾಲಿಯನ್ ಆಳ್ವಿಕೆ ಬಂದ ನಂತರ ಇದನ್ನು ಪುನಃ ಚರ್ಚ್ ಮಾಡಲಾಯಿತು. ಹದಿನೇಳನೇ ಶತಮಾನದ ಭೂ ಕಂಪದ ನಂತರ ಪುನರುಜ್ಜೀವನ ನಡೆಸಿ ಮತ್ತೆ ಚರ್ಚ್ ಮಾಡಲಾಯಿತು. ನನಗೆ ತಿಳಿದ ಮಟ್ಟಿಗೆ ಗ್ರೀಕ್ ದೇವಾಲಯದಿಂದ ಹಿಡಿದು ರೋಮನ್ ದೇವಾಲಯವಾಗಿ, ನಂತರ ಚರ್ಚ್ ಆಗಿ, ತದನಂತರ ಮಸೀದಿಯಾಗಿ ಮತ್ತೆ ಚರ್ಚ್ ಆದ ಇತಿಹಾಸವಿರುವ ಸ್ಥಳ ಇದೊಂದೇ! ದೂರದ ಹಸಿರು ಸರಣಿಯಲ್ಲಿ ಗುರುದತ್ ಅಮೃತಾಪುರ ಅವರು ಸಿಸಿಲಿಯನ್ ಡೈರೀಸ್ ನ  ಎರಡನೇ ಕಂತನ್ನು  ಪ್ರಸ್ತುತಪಡಿಸಿದ್ದಾರೆ.

ಕಳೆದ ಸಂಚಿಕೆಯಲ್ಲಿ ಆರ್ಕಿಮಿಡಿಸ್ ಎಂಬ ಮೇಧಾವಿಯ ಕಾಲಮಾನ, ಜೀವಮಾನದ ಸಾಧನೆ ಹಾಗೂ ಆತನ ದುರಂತ ಅಂತ್ಯದ ಬಗೆಗೆ ಬರೆದಿದ್ದೆ. ಆತ ಇದ್ದ ಪ್ರಾಂತ್ಯದ ಹೆಸರು “ಸಿರಕುಸಾ”. ಈ ಸಂಚಿಕೆಯಲ್ಲಿ ಸಿರಕುಸಾದ ಚರಿತ್ರೆಯನ್ನು ನೋಡೊಣ.

ಭೌಗೋಳಿಕವಾಗಿ ಸಿಸಿಲಿಯ ಆಗ್ನೇಯ ದಿಕ್ಕಿನಲ್ಲಿರುವ ಈ ಪಟ್ಟಣ, ಯಾವುದೇ ಸಾಮ್ರಾಜ್ಯಕ್ಕೆ ಒಂದು ಬಹು ಮುಖ್ಯವಾದ ನೆಲೆ. ಮೆಡಿಟರೇನಿಯನ್ ಸಮುದ್ರ ದಡದಲ್ಲಿರುವ ಈ ನಗರದ ಇತಿಹಾಸ ಕ್ರಿ.ಪೂ. ಏಳನೇ ಶತಮಾನದವರೆಗೂ ಕುರುಹುಗಳನ್ನು ಹೊಂದಿದೆ. ಇದಕ್ಕೆ ಕಾರಣ ಈ ಭೂ ಭಾಗ ಗ್ರೀಸ್ ನತ್ತ ಮುಖಮಾಡಿದೆ. ಗ್ರೀಕ್ ಸಾಮ್ರಾಜ್ಯ ವಿಸ್ತಾರವಾದಂತೆ ಮೊದಲು ವಶಪಡಿಸಿಕೊಂಡ ಇತರೆ ಭೂ ಭಾಗಗಲ್ಲಿ ಸಿಸಿಲಿ ಕೂಡ ಒಂದು. ಒಂದು ನಗರವನ್ನು ಅಚ್ಚುಕಟ್ಟಾಗಿ ಕಟ್ಟುವುದನ್ನು ಗ್ರೀಕರಿಂದ ಕಲಿಯಬೇಕು ಎನ್ನುವುದಕ್ಕೆ ಇಂದಿಗೂ ಉದಾಹರಣೆಗಳಿವೆ. ಕ್ರಿ.ಪೂ. ಎರಡನೇ ಶತಮಾನದಲ್ಲಿ ನಿರ್ಮಿಸಿದ ನೀರಿನ ಕಾಲುವೆಗಳು ಇಂದಿಗೂ ಸಿರಕುಸಾಗೆ ಕುಡಿಯುವ ನೀರನ್ನುಣಿಸುತ್ತಿವೆ ಎಂದರೆ ನೀವು ನಂಬುತ್ತೀರಾ?

ರೋಮನ್ನರು ಮತ್ತು ಗ್ರೀಕ್ ಸಾಮ್ರಾಜ್ಯಗಳ ನಡುವಿನ ಗಡಿ ಭಾಗಗಳು ಸಿಸಿಲಿಯೇ ಆಗಿದ್ದರಿಂದ, ಎರಡೂ ಸಾಮ್ರಾಜ್ಯಗಳ ಪಾರುಪತ್ಯಕ್ಕಾಗಿ ನಡೆದ ಯುದ್ಧಗಳು ಅನೇಕ. ಪ್ರಪಂಚದಾದ್ಯಂತ ಇರುವ ರೋಮನ್ ಹಾಗೂ ಗ್ರೀಕ್ ಇತಿಹಾಸದಲ್ಲಿ, ಈ ಸ್ಥಳದಲ್ಲಿ ಮಾತ್ರ ಗ್ರೀಕ್ ಥೀಯೇಟರ್ ಹಾಗೂ ರೋಮನ್ ಆಂಫಿ ಥೀಯೇಟರ್ ಎರಡೂ ಇವೆ! ಕ್ರಿ. ಪೂ. ಎರಡನೇ ಶತಮಾನದಲ್ಲಿ ಸಂಪೂರ್ಣ ರೋಮನ್ ಆಳ್ವಿಕೆಗೆ ಒಳಪಟ್ಟ ಸಿರಕುಸಾ ನಂತರ ಸುಮಾರು ವರ್ಷಗಳ ಕಾಲ ರೋಮನ್ ಎಂಪೈರ್ ಭಾಗದ ಕಿರೀಟಪ್ರಾಯವಾಗಿತ್ತು. ಕ್ರಿ.ಶ ಎಂಟನೇ ಶತಮಾನದಲ್ಲಿ ಅರಬ್ ಸಾಮ್ರಾಜ್ಯದ ವಿಸ್ತರಣೆ ಇಲ್ಲಿಗೂ ಕಾಲಿಟ್ಟಿತು. ಕ್ರಿ.ಶ. ಹತ್ತನೇ ಶತಮಾನದಲ್ಲಿ ಮತ್ತೆ ಇಟಾಲಿಯನ್ ದೊರೆ ಇದನ್ನು ವಶಪಡಿಸಿಕೊಂಡನು. ಹೀಗೆ ಗತಕಾಲದಿಂದಲೂ ಒಂದಿಲ್ಲೊಂದು ರಾಜರ ಅಥವಾ ಸಾಮ್ರಾಜ್ಯದ ಅತಿಕ್ರಮಣದ ದಾಹಕ್ಕೆ ಬಲಿಯಾದ ಸಿರಕುಸಾಗೆ ಕ್ರಿ.ಶ. ಹದಿನೇಳನೇ ಶತಮಾನದಲ್ಲಿ ಕಂಡು ಕೇಳರಿಯದಂತಹ ಭೂಕಂಪ ಬಂದು ಇಡೀ ಭೂ ಭಾಗವೇ ಸರ್ವ ನಾಶವಾಯಿತು.

(ಕ್ಯಾಥೆಡ್ರೆಲ್ ಒಳಗಿನ ಐದನೇ ಶತಮಾನದ ಗ್ರೀಕ್ ದೇವಾಲಯದ ಕಂಬ)

ಇಷ್ಟೆಲ್ಲಾ ಇತಿಹಾಸ ಯಾಕೆ ಹೇಳಿದೆ ಅಂದರೆ, ಇಲ್ಲೊಂದು ಕ್ಯಾಥೆಡ್ರೆಲ್ ಇದೆ. ಇದರ ಮೂಲ ಗ್ರೀಕ್ ದೇವಾಲಯ. ಕ್ರಿ.ಪೂ. ಐದನೇ ಶತಮಾದಲ್ಲಿ ಕಟ್ಟಿದ ಈ ದೇವಾಲಯದ ಕಂಬಗಳು ಈಗಲೂ ಹಾಗೆಯೇ ಇವೆ. ರೋಮನ್ ಆಳ್ವಿಕೆಯಲ್ಲಿ ರೋಮನ್ ದೇವಾಲಯವಾಗಿತ್ತು. ನಂತರ ಕ್ರೈಸ್ತ ಧರ್ಮ ಬಂದ ನಂತರ ಇದನ್ನು ಚರ್ಚ್ ಆಗಿ ಮಾರ್ಪಾಡು ಮಾಡಲಾಯಿತು. ಆಮೇಲೆ ಅರಬ್ಬರ ಆಳ್ವಿಕೆಯಲ್ಲಿ ಮಸೀದಿ ಮಾಡಲಾಯಿತು. ನಂತರ ಮತ್ತೆ ಇಟಾಲಿಯನ್ ಆಳ್ವಿಕೆ ಬಂದ ನಂತರ ಇದನ್ನು ಪುನಃ ಚರ್ಚ್ ಮಾಡಲಾಯಿತು. ಹದಿನೇಳನೇ ಶತಮಾನದ ಭೂ ಕಂಪದ ನಂತರ ಪುನರುಜ್ಜೀವನ ನಡೆಸಿ ಮತ್ತೆ ಚರ್ಚ್ ಮಾಡಲಾಯಿತು. ನನಗೆ ತಿಳಿದ ಮಟ್ಟಿಗೆ ಗ್ರೀಕ್ ದೇವಾಲಯದಿಂದ ಹಿಡಿದು ರೋಮನ್ ದೇವಾಲಯವಾಗಿ, ನಂತರ ಚರ್ಚ್ ಆಗಿ, ತದನಂತರ ಮಸೀದಿಯಾಗಿ ಮತ್ತೆ ಚರ್ಚ್ ಆದ ಇತಿಹಾಸವಿರುವ ಸ್ಥಳ ಇದೊಂದೇ! ಪ್ರಸ್ತುತ ಇದು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ. ಈ ಕ್ಯಾಥೆಡ್ರೆಲ್ ಎದುರಿಗೆ ಒಂದು ದೊಡ್ಡ ಚೌಕವಿದೆ. ಇದು ಇಲ್ಲಿನ ಬಹು ಚಟುವಟಿಕೆ ಇರುವ ಸ್ಥಳ. ಇಲ್ಲಿ ಹವ್ಯಾಸ ನಿರತರ ಸಂಗೀತ ಕೇಳುತ್ತಾ ಐಸ್ ಕ್ರೀಮ್, ಕನೋಲಿ ತಿನ್ನುವುದರ ಮಜವೇ ಬೇರೆ.

ಗ್ರೀಕರು ಸಂಗೀತ, ಸಾಹಿತ್ಯ, ಕಲೆಯ ಆರಾಧಕರು. ಸುಮಾರು ಮೂರೂ ಸಾವಿರ ಜನ ಆಸೀನಗೊಳ್ಳಬಹುದಾದ ಒಂದು ದೊಡ್ಡ ಥೀಯೇಟರ್ ಇಲ್ಲಿದೆ. ಅರ್ಧ ವೃತ್ತಾಕಾರದಲ್ಲಿ ವೀಕ್ಷಕರಿಗೆ ವ್ಯವಸ್ಥೆ ಮಾಡಿ, ಮುಂದೆ ವೇದಿಕೆ ನಿರ್ಮಿಸಲಾಗಿತ್ತು. ನಮ್ಮ ಬೆಂಗಳೂರಿನ ರಂಗ ಶಂಕರವನ್ನು ಮೇಲ್ಛಾವಣಿಯಿಲ್ಲದೆ ಬಯಲು ರಂಗಮಂದಿರವಾಗಿ ನಿರ್ಮಿಸಿದ್ದರೆ ಹೇಗಿರುತ್ತಿತ್ತೋ, ಹಾಗೆಯೇ ಇದೆ. ಆಗಿನ ಕಾಲ ಘಟ್ಟದ ರಂಗ ಪ್ರವೇಶಗಳು ನಡೆಯುತ್ತಿದ್ದವು. ಸಂಗೀತ ಕಚೇರಿಗಳು ಏರ್ಪಡುತ್ತಿದವು. ಬಹಿರಂಗ ಸಭೆ ಸಮಾರಂಭಗಳು ನಡೆಯುತ್ತಿದ್ದವು. ಇದನ್ನು ನಿರ್ಮಿಸಿದ್ದು ಕ್ರಿ.ಪೂ. ಮೂರನೇ ಶತಮಾದಲ್ಲಿ. ನಂತರದ ದಿನಗಳಲ್ಲಿ ಸರ್ಕಸ್ ಗಳು ಕೂಡ ನಡೆಯುತ್ತಿದ್ದವಂತೆ. ಸಾಮ್ರಾಜ್ಯಗಳು ಬದಲಾದಂತೆ  ಹಿಂದಿನವರು ನಿರ್ಮಿಸಿದ ಗ್ರೀಕ್ ಥೀಯೇಟರ್ “ತಮ್ಮತನದ ಪ್ರತಿಷ್ಠೆ”ಯಿಂದ, ನಿರ್ಲಕ್ಷ್ಯಕ್ಕೊಳಗಾಗಿ ಇತಿಹಾಸದ ಸಾಕ್ಷ್ಯ ಮಾತ್ರ ಆಗಿದ್ದು ದುರಂತ.

(ಗ್ರೀಕ್ ಥೀಯೇಟರ್)

ಗ್ರೀಕರು ಸಂಗೀತ, ಸಾಹಿತ್ಯ, ಕಲೆಯ ಆರಾಧಕರು. ಸುಮಾರು ಮೂರೂ ಸಾವಿರ ಜನ ಆಸೀನಗೊಳ್ಳಬಹುದಾದ ಒಂದು ದೊಡ್ಡ ಥೀಯೇಟರ್ ಇಲ್ಲಿದೆ. ಅರ್ಧ ವೃತ್ತಾಕಾರದಲ್ಲಿ ವೀಕ್ಷಕರಿಗೆ ವ್ಯವಸ್ಥೆ ಮಾಡಿ, ಮುಂದೆ ವೇದಿಕೆ ನಿರ್ಮಿಸಲಾಗಿತ್ತು. ನಮ್ಮ ಬೆಂಗಳೂರಿನ ರಂಗ ಶಂಕರವನ್ನು ಮೇಲ್ಛಾವಣಿಯಿಲ್ಲದೆ ಬಯಲು ರಂಗಮಂದಿರವಾಗಿ ನಿರ್ಮಿಸಿದ್ದರೆ ಹೇಗಿರುತ್ತಿತ್ತೋ, ಹಾಗೆಯೇ ಇದೆ.

ಗ್ರೀಕರ ನಂತರ ಬಂದ ರೋಮನ್ನರ ಆಸಕ್ತಿ, ಸಂಸ್ಕೃತಿ ಬಹಳ ವಿಭಿನ್ನವಾಗಿತ್ತು. ರೋಮನ್ನರು ಹೆಚ್ಚು ಆಕ್ರಮಣಕಾರಿ ಮನೋಭಾವವುಳ್ಳವರಾಗಿದ್ದರು. ಹಾಗಾಗಿ ಅವರ ಕಾಲ ಘಟ್ಟದಲ್ಲಿ ಆಂಫಿ ಥೀಯೇಟರ್ ಗಳು ಪ್ರಚಲಿತಗೊಂಡವು. ಇವು ಅಂಡಾಕಾರದ ಆಕೃತಿಯಲ್ಲಿ ಆಸನ ವ್ಯವಸ್ಥೆಗಳನ್ನು ಹೊಂದಿದ್ದು, ಮಧ್ಯದಲ್ಲಿ ಗ್ಲಾಡಿಯೇಟರ್ ಷೋ ನಡೆಯುತ್ತಿತ್ತು. ಗ್ಲಾಡಿಯೇಟರ್ ಎಂದರೆ ಕತ್ತಿ ಹಿಡಿದು ಸೆಣೆಸಾಡುವ ಸಾಹಸಿ. ಕ್ರೂರ ಮೃಗಗಳ ಜೊತೆ ಸೆಣೆಸಾಡುವ, ಮದವೇರಿದ ಮೃಗಗಳ ಜೊತೆ ಕತ್ತಿ ಹಿಡಿದು ಸೆಣೆಸಾಡುವ ಒಂದು ಪ್ರತಿಷ್ಠೆಯ ಸ್ಪರ್ಧೆ! ಸ್ಪರ್ಧೆಯ ಕೊನೆಯಲ್ಲಿ ರಕ್ತ ಹರಿಯುತ್ತಿದುದು ಸಾಮಾನ್ಯ. ಪ್ರಾಣಿ ಬಲಶಾಲಿಯಾದರೆ ಗ್ಲಾಡಿಯೇಟರ್ ಕೊನೆಯುಸಿರೆಳೆಯುತ್ತಿದ್ದ. ಗ್ಲಾಡಿಯೇಟರ್ ಪರಾಕ್ರಮಿಯಾಗಿದ್ದರೆ ಪ್ರಾಣಿ ಸಾಯುತ್ತಿತ್ತು. ಬರಬರುತ್ತಾ ವೀರರು ಒಬ್ಬರನ್ನೊಬ್ಬರು ಎದುರಿಸಲು ಮುಂದಾಗುತ್ತಿದ್ದರು. ಈ ರೀತಿಯ ಆಕ್ರಮಣಕಾರಿ ಸ್ಪರ್ಧೆಗಳನ್ನು ರೋಚಕವಾಗಿ ಇಡೀ ಪ್ರಾಂತ್ಯದ ಜನರೆಲ್ಲಾ ಬಂದು ವೀಕ್ಷಿಸುತ್ತಿದ್ದರು. ಅದಕ್ಕಾಗಿ ನಿರ್ಮಿಸಿದ್ದ ಸ್ಥಳವೇ ಆಂಫಿ ಥೀಯೇಟರ್. ಸಿರಕುಸಾದಲ್ಲಿ ಒಂದು ರೋಮನ್ ಆಂಫಿ ಥೀಯೇಟರ್ ಇದೆ.

(ರೋಮನ್ ಆಂಫಿ ಥೀಯೇಟರ್)

ಈ ಪ್ರದೇಶದಲ್ಲಿ ಇನ್ನೊಂದು ವಿಶೇಷವಾದ ಸ್ಥಳವಿದೆ. ಅದರ ವೈಶಿಷ್ಟ್ಯದ ಮೂಲ ಕಾರಣ ಅಮೃತ ಶಿಲೆ. ಇಂದಿಗೂ ನೀವು ಮನೆ ಕಟ್ಟುತ್ತಿದ್ದರೆ, ನೆಲಕ್ಕೆ “ಇಟಾಲಿಯನ್ ಮಾರ್ಬಲ್” ಬಳಸುವುದು ಒಂದು ತಕ್ಕುಮೆ. ಇಟಾಲಿಯನ್ ಅಮೃತ ಶಿಲೆ ಅಷ್ಟು ಜಗತ್ ಪ್ರಸಿದ್ದಿ. ಈ ಬೆಟ್ಟ ಗುಡ್ಡದ ಪ್ರದೇಶಗಳಲ್ಲಿ ಅಮೃತ ಶಿಲೆಯನ್ನು ಹೆಕ್ಕಿ ತೆಗೆದ ನಂತರ ಉಳಿದ ಸಾಮಾನ್ಯ ಶಿಲೆಯ ಭಾಗಗಳು ವಿಚಿತ್ರ ಆಕೃತಿಗಳಂತಾಗಿವೆ. ಅದರಲ್ಲಿ ಒಂದು ಬೃಹತ್ ಗುಹೆ ಕಿವಿಯ ಆಕಾರದಲ್ಲಿದ್ದು ಅದನ್ನು “Ear of Dionysius” ಎಂದು ಕರೆಯುತ್ತಾರೆ. ಇದರೊಳಗೆ ಹೋಗಿ ಪಿಸುಗುಟ್ಟಿದರೂ, ಮಾತುಗಳು ಪ್ರತಿಧ್ವನಿಸುತ್ತವೆ. ಇದನ್ನು ಅರಿತ ಒಬ್ಬ ರಾಜ, ತನ್ನ ವೈರಿ ಸೈನ್ಯದ ಸೆರೆಯಾಳುಗಳನ್ನು ಇಲ್ಲಿ ಇಡುತ್ತಿದ್ದನಂತೆ. ಅವರು “ರಹಸ್ಯ” ಎಂದು ಭಾವಿಸಿ ಮಾತನಾಡಿಕೊಳ್ಳುತಿದ್ದ ಮಾತುಗಳು, ಅವರಿಗೆ ಗೊತ್ತಿಲ್ಲದಂತೆ ರಾಜನಿಗೆ ಬಂದು ತಲುಪಿದ್ದವಂತೆ. ಈ ಚಿತ್ರದಲ್ಲಿ ನೀವು ಗಮನಿಸಿದರೆ ಕಿವಿಯಾಕಾರದ ಬೃಹತ್ ಗುಹೆಯ ಮೇಲೊಂದು ಕಿಂಡಿ ಇದೆ. ಅಲ್ಲಿ ರಾಜ ತನ್ನೊಬ್ಬ ಸೈನಿಕನನ್ನು ಕೂರಿಸಿ, ಒಳಗೆ ಬಂಧಿಯಾಗಿದ್ದ ಶತ್ರು ಖೈದಿಗಳ ರಹಸ್ಯದ ಮಾತುಗಳನ್ನು ಅವರಿಗೆ ಗೊತ್ತಾಗದಂತೆ ತಿಳಿದುಕೊಳ್ಳುತ್ತಿದ್ದನಂತೆ. ಎಂಥಾ ಐಡಿಯಾ!!

ಮೊದಲು ಪ್ರಸ್ತಾಪಿಸಿದಂತೆ, ಗ್ರೀಕರು ಸಿರಕುಸಾ ನಗರಕ್ಕೆ ಕೊಟ್ಟ ಕೊಡುಗೆಗಳಲ್ಲಿ ಕುಡಿಯುವ ನೀರಿನ ಕಾಲುವೆಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿಯ ಜನ ಕ್ರಿ.ಪೂ. ಎರಡನೇ ಶತಮಾನದ ಗ್ರೀಕರ ಹೆಸರನ್ನು ಹೇಳಿಕೊಂಡು ನೀರು ಕುಡಿಯುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಸುಮಾರು ಮೂವತ್ತು ಕಿಲೋಮೀಟರ್ ದೂರದಿಂದ ನೀರಿನ ಹರಿವನ್ನು ಕಾಲುವೆಗಳ ಮುಖಾಂತರ ಸಿರಕುಸಾ ತಲುಪಿಸುವ ವ್ಯವಸ್ಥೆಯನ್ನು ಆಗಿನ ಕಾಲದಲ್ಲಿಯೇ ಮಾಡಲಾಗಿತ್ತು. ಈ ಚಿತ್ರದಲ್ಲಿ ಕಾಣುತ್ತಿರುವ ಸಿಹಿನೀರಿನ ಚಿಲುಮೆ ಅದರ ಭಾಗವೇ ಆಗಿತ್ತು. ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದಿನ ವ್ಯವಸ್ಥೆ ಇಂದಿಗೂ ಕಾರ್ಯನಿರ್ವಸುತ್ತಿದೆ, ಜನರಿಗೆ ಉಪಯೋಗವಾಗುತ್ತಿದೆ ಎಂದರೆ ಎಷ್ಟು ಸಂತೋಷದ ವಿಷಯ. ನನಗೆ ಈ ಪ್ರವಾಸದಲ್ಲಿ ಗ್ರೀಕರ ಕಾಲದ ನೀರಿನ ಕಾಲುವೆ ಮುಖಾಂತರ ಬಂದ ನೀರನ್ನು ಕುಡಿದ ಅನುಭವವು ಆಯಿತು!

(ಕ್ರಿ.ಪೂ ಎರಡನೇ ಶತಮಾನದ ಕುಡಿಯಿವ ನೀರಿನ ಗುಪ್ತ ಕಾಲುವೆ)

ಕಾಲಮಾದ ರೇಖೆಯಲ್ಲಿ ಗ್ರೀಕ್, ರೋಮನ್, ಅರಬ್, ಸ್ಪಾನಿಷ್ ಹಾಗೂ ಇಟಾಲಿಯನ್ ರಾಜರು, ಸಾಮ್ರಾಜ್ಯದ ಭಾಗವಾಗಿದ್ದ ಸಿರಾಕೂಸಾ ನನಗೆ ಹಾಳು ಹಂಪೆಯಂತೆ ಗೋಚರಿಸಿತು. ಎರಡನೇ ವಿಶ್ವ ಯುದ್ಧದಲ್ಲಿ ಬ್ರಿಟಿಷರು ಸಿಸಿಲಿಯ ಮೇಲೆ ಆಕ್ರಮಣ ಮಾಡಿದ “Operation Mincemeat” ಪ್ರಸಂಗ ಕೂಡ ಅತ್ಯಂತ ಕುತೂಹಲಕಾರಿಯಾದದ್ದು. ಈಗ ಇದೊಂದು ಚಲನಚಿತ್ರದ ರೂಪದಲ್ಲಿ Netflix ನಲ್ಲಿ ಲಭ್ಯವಿದೆ. ಇತಿಹಾಸದ ಆಸಕ್ತಿ ಇರುವವರು ತಪ್ಪದೆ ನೋಡಿ.

ಮುಂದಿನ ಸಂಚಿಕೆಯಲ್ಲಿ ಇತಿಹಾಸಕ್ಕೊಂದು ವಿರಾಮ ನೀಡಿ, ಪ್ರಕೃತಿಯ ವಿಸ್ಮಯದೊಂದಿಗೆ ಬರುತ್ತೇನೆ. ಜ್ವಾಲಾಮುಖಿಯ ಮುಖಾಮುಖಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೆ ಕಾಯುತ್ತೀರಿ. ಸಿಸಿಲಿಯನ್ ಡೈರೀಸ್ ಮುಂದುವರೆಯುತ್ತದೆ…

ಸಿರಕುಸಾ ಕುರಿತ ಈ ಹಿಂದಿನ ಬರಹ :
ಸಿಸಿಲಿಯನ್ ಡೈರೀಸ್: ಯುರೇಕಾ ನಗರಿ ಸಿರಕುಸಾ