ಅವನಿಗೆ ಮೊದಲಿನಿಂದಾನು ಮನೆಕಡೆಯಿಂದ ಸಮಸ್ಯೆ ಇತ್ತು. ಅಮ್ಮ, ಅಪ್ಪ, ವಿಕಲ ಚೇತನ ಅಣ್ಣ, ಮನೆಯಲ್ಲಿ ಸದಾ ಇರುವ ಜಗಳಗಳು ನೆನಪಾದವು. ನನಗೆ ನನ್ನ ಮನೆಯಲ್ಲಿರುವ ಬಡತನ, ರಿಸರ್ವೇಶನ್ ಕೊಟ್ಟರೂ ಇವಕ್ಕೆ ಮುಂದೆ ಬರೋದಕ್ಕೆ ಗೊತ್ತಿಲ್ಲ ಎಂಬ ಕುಹಕಗಳು ಕುದಿಯುತ್ತಿದ್ದವು. ಎರಡು ಮಗ್ಗಿನಲ್ಲಿ ಚಾ ಬಗ್ಗಿಸಿಕೊಂಡು ಕೋಣೆಗೆ ಬಂದರೆ ಅವನು ಹಾಸಿಗೆಯಿಂದೆದ್ದು ಗೋಡೆಗಾತು ಯಾವುದೋ ಮ್ಯಾಗಜಿನ್ ಹಿಡಿದು ಕೂತಿದ್ದ. ಮೊಬೈಲು, ಬ್ಯಾಟರಿ ದಿಕ್ಕಿಗೊಂದೊಂದು ಬಿದ್ದಿದ್ದವು. ಅವನ ಹೆಗಲ ಮೇಲೆ ಕೈ ಹಾಕಿ ಪಕ್ಕ ಕುಳಿತು ಅವನ ಭುಜ ನೇವರಿಸಿದೆ. ಮಗ್ ಕೈಯಲ್ಲಿ ಹಿಡಿದು ಮೆಲುದನಿಯಲ್ಲಿ ಥ್ಯಾಂಕ್ಸ್ ಎಂದಷ್ಟೇ ಹೇಳಿದ.
ದಾದಾಪೀರ್‌ ಜೈಮನ್ ಬರೆಯುವ “ಜಂಕ್ಷನ್‌ ಪಾಯಿಂಟ್‌” ಅಂಕಣ

ಮೂರನೇ ಸೆಮಿಸ್ಟರಿನ ‘ಟೊಪಾಲಜಿ’ ಪರೀಕ್ಷೆ ಮುಗಿಸಿ ವಿಶ್ವವಿದ್ಯಾಲಯದ ಹೊರಗೆ ಬಂದು ಅಲ್ಲೇ ಪಕ್ಕದ ಖಾನಾವಳಿಯಲ್ಲಿ ರೊಟ್ಟಿ ಊಟ ಮಾಡಿ ನಾನಿರುತ್ತಿದ್ದ ಶ್ರೀನಗರದ ರೂಮು ತಲುಪಿ ಕರೆಗಂಟೆ ಒತ್ತಿದೆ. ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡುತ್ತಿದ್ದ ಧೀರಜ್ ಮತ್ತು ಸುಮಿತ್ ಅವರ ಪರೀಕ್ಷೆಗಳು ಹಿಂದಿನ ದಿನವೇ ಮುಗಿದುಹೋಗಿದ್ದವು. ಹೊಸ ವರ್ಷವನ್ನು ಅವರ ಊರಿನಲ್ಲಿಯೇ ತಮ್ಮ ತಮ್ಮ ಕುಟುಂಬದ ಜೊತೆ ಆಚರಿಸುವ ಇಂಗಿತ ವ್ಯಕ್ತಪಡಿಸಿ ತಮ್ಮೂರಾದ ಶಿರಸಿಗೆ ಬೆಳಿಗ್ಗೆಯೇ ಕಾಲ್ಕಿತ್ತಿದ್ದರು. ನನಗೆ ಮರುದಿನ ಕೊನೆಯ ಪರೀಕ್ಷೆ ಇತ್ತು. ಪರೀಕ್ಷೆ ಮುಗಿಸಿ ಕೋಚಿಂಗ್ ಕ್ಲಾಸ್ಸಿನಲ್ಲಿ ಫೀ ವಿಚಾರಿಸಿ ಬರಬೇಕೆಂದು ಯೋಜನೆ ಹಾಕಿಕೊಂಡಿದ್ದೆ.

ನಾನು ವರ್ಷಪೂರ್ತಿ ಲೈಬ್ರರಿಯನ್ನೇ ಮನೆ ಮಾಡಿಕೊಂಡಂತೆ ಅಲ್ಲೇ ಓದುತ್ತ ಕುಳಿತುಕೊಳ್ಳುತ್ತಿದ್ದರೂ ಪರೀಕ್ಷಾ ಸಮಯದಲ್ಲಿ ಅದು ಗಿಜಿಗಿಡುತ್ತಿದ್ದರಿಂದ ರೂಮಲ್ಲೇ ಓದಿಕೊಳ್ಳುವ ನಿರ್ಧಾರ ಮಾಡಿಕೊಂಡಿದ್ದೆ. ಹೊಸವರ್ಷವನ್ನು ಒಟ್ಟಿಗೆ ಆಚರಿಸೋಣ ಅಂದಿದ್ದ ಮಂಜು ಅವನ ಕೊನೆ ಎಕ್ಸಾಮ್ ಮುಗಿಸಿ ರೂಮಲ್ಲಿ ಸಿನಿಮಾ ನೋಡುತ್ತಾ ನನ್ನ ಹೊಟ್ಟೆ ಉರಿಸುತ್ತಾನಿವತ್ತು ಎಂದು ಕಲ್ಪಿಸಿಕೊಂಡಿದ್ದೆ.

ಮೇಲಿನ ಮಹಡಿಯಲ್ಲಿ ಮನೆ ಓನರ್ ಇದ್ದರು. ತುಂಬಾ ಒಳ್ಳೆಯ ಮನುಷ್ಯರು. ಅವರಿಗೆ ಮಕ್ಕಳಾಗಿರಲಿಲ್ಲ. ಅವರು ಚಿತ್ರಕಲಾ ಕಾಲೇಜಿನ ಪ್ರಾಂಶುಪಾಲರಾಗಿದ್ದರಿಂದ ಮನೆ ತುಂಬಾ ಚೆಂದದ ಕಲಾಕೃತಿಗಳಿದ್ದವು. ನಾವು ನಾಲ್ಕು ಜನ ಹೊಸದಾಗಿ ರೂಮಿಗೆ ಬಂದಾಗ ಅಟ್ಟದ ಮೇಲೆ ಎಸೆದಿದ್ದ ಹಲವು ವರ್ಣಚಿತ್ರಗಳನ್ನು ನಾವೇ ಎತ್ತಿ ಕೊಡವಿ ಮನೆಯಲ್ಲಿನ ಕೋಣೆಯಲ್ಲಿ ಹಾಕಿಕೊಂಡಿದ್ದರ ಕಾರಣ ಓನರ್ ಖುಷಿಗೊಂಡಿದ್ದರು. ಅದೇ ಕಾರಣಕ್ಕೆ ನಮ್ಮ ಮೇಲೆ ತುಂಬಾ ಪ್ರೀತಿ ತೋರಿಸುತ್ತಿದ್ದರು. ದೀಪಾವಳಿ, ದಸರಾ ಮತ್ತು ಯುಗಾದಿ ಹಬ್ಬಗಳಂದು ಹೋಳಿಗೆ ಊಟಕ್ಕೆ ಕರೆಯುತ್ತಿದ್ದರು. ತಿಂಗಳಿಗೊಮ್ಮೆ ಚಟ್ನಿಪುಡಿ ಮತ್ತು ಉಪ್ಪಿನಕಾಯಿಯ ಡಬ್ಬಿಯನ್ನು ತಂದುಕೊಡುತ್ತಿದ್ದರು. ನಾವೆಷ್ಟೇ ಒಲ್ಲೆಯೆಂದರೂ ”ಧಾರಾವಾಡಕ್ಕ ಕಲೀಲಿಕ್ಕೆ ಬರೋ ಹುಡುಗರ ಬಾಳೇ ನಮಗೆ ಅರ್ಥ ಆಕ್ಕೆತಿ. ಈ ಊಟದ ಮೆಸ್ಸಿನೊಳಗ ಸೋಡಾ ಹಾಕಿರೋ ಊಟ ತಿಂದೂ ತಿಂದೂ ನಿಮ್ಮ ನಾಲಿಗಿ ಮರುಗಟ್ಟಿರತತಿ. ಸುಮ್ನ ವಲ್ಯ ಅನ್ನಲಾರದನ ಇಸ್ಕೊರಿ. ನಮಗ ಮಕ್ಕಳು ಅಂತ ಇದ್ದಿದ್ರೂ ನಾವು ಚಟ್ನಿ ಪುಡಿ ಕುಟ್ಟಿಕಳಿಸ್ತಿರಲಿಲ್ಲೇನು?” ಎಂದು ನಮ್ಮ ಬಾಯಿ ಮುಚ್ಚಿಸುತ್ತಿದ್ದರು.

ಅವರು ಅಂದು ಬೆಳಿಗ್ಗೆ ಹಂಪಿಯಲ್ಲಿ ಯಾವುದೋ ಕಾರ್ಯಕ್ರಮವಿದ್ದ ಸಲುವಾಗಿ ಕುಟುಂಬ ಸಮೇತ ಅಲ್ಲಿಗೆ ಹೋಗುವ ಮುನ್ನ ಮನೆಯ ಕೀಯನ್ನು ನಮ್ಮ ಬಳಿ ಕೊಟ್ಟು ”ಅಪ್ಪಿಗಳ, ನಾವು ವಾಪಸ್ ಬರೂತನ ಚೂರು ಅಲ್ಲೇ ಮನಿಯಾಗ ಮಕ್ಕೋರಿ ಆತ? ಬೇಕಿದ್ರ ಟೀವಿ ಗೀವಿ ನೋಡ್ಲಿಕ್ಕೂ ಆತು” ಎಂದು ಹೇಳಿಹೋಗಿದ್ದರು. ಬೇರೆ ಸಮಯದಲ್ಲಾದರೆ ಅದರ ಸಂಪೂರ್ಣ ಸದುಪಯೋಗ ಮಾಡಿಕೊಳ್ಳಬಹುದಿತ್ತೇನೆಯೋ? ಆದರೆ ಈಗ ಪರೀಕ್ಷೆಗಳಿದ್ದ ಕಾರಣ ಅವರ ಮನೆಯ ಸೋಫಾದ ಮೇಲೆ ಕೂಡ್ರುವ, ಉಯ್ಯಾಲೆ ಮೇಲೆ ತೂಗುತ್ತ ಓದುವ, ಮಧ್ಯೆ ಮಧ್ಯೆ ತೆಗೆದುಕೊಳ್ಳುವ ಬಿಡುವಿನಲ್ಲಿ ಅವರು ಬಿಡಿಸಿದ್ದ ಚಿತ್ರಗಳ ಅರ್ಥಮಾಡಿಕೊಳ್ಳುವ ಖುಷಿಗಷ್ಟೇ ಸೀಮಿತಗೊಳಿಸಿಕೊಳ್ಳಬೇಕಾಗಿತ್ತು.

”ಮಂಜು, ಮಂಜು… ಬಾಗ್ಲ ತಗಿಲೆ ಅಪ್ಪಿ. ನಾ ನಿನ್ನ ರೂಮ್ಮೇಟ್ ಅದಿನಿ” ಎಂದು ಎಷ್ಟು ಕೂಗಿದರು ಬಾಗಿಲು ತೆರೆಯಲಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿತ್ತು. ಕೂಡಲೇ ಧೀರಜನಿಗೆ ಫೋನ್ ಮಾಡಿದೆ.

”ಧೀ ಬಾಗ್ಲ ಒಳಗಿಂದ ಲಾಕ್ ಆಗ್ಯದ. ಎಷ್ಟ್ ಕೂಗಿದ್ರು ಬಾಗ್ಲ ತಗೀವಲ್ಲ. ಅರಾಮಿಲ್ಲೆನು ಅವಂಗ?”

”ಅವಾ ಇವತ್ತು ನಿನ್ನ ಕೂಡೆ ಪರೀಕ್ಷೆಗೆ ಅಂತ ಬಂದ್ನಲ್ಲ ಮಾರಾಯ. ಆಮೇಲೆ ಒಂದರ್ಧ ಗಂಟೆಗೆಲ್ಲ ವಾಪಸ್ ಬಂದನೆ. ಎಂತಾತು ಅಂತ ನಾನು, ಸುಮಿತ್ ಕೇಳಿ ಕೇಳಿ ಸುಸ್ತಾಯ್ತ. ಅವಂದು ಬರಿ ಇದೆ ನಾಟ್ಕ ಆಯ್ತ್ ನೋಡ್. ನಿಂಗೆ ನಾಳೆ ಎಕ್ಸಾಮ್ ಅದೆ ಅಲ್ಲೆನ? ನೀ ಭಾಳ ಸಮಾಜಸೇವೆ ಮಾಡುಕ್ ಹೋಗೋ ಜರೂರಿಲ್ಲ. ಅವನ್ನ ಅವನ ಪಾಡಿಗ್ ಬಿಡ್. ನೀ ಓದ್ಕಳ… ಜೋರಾಗಿ ಬಾಗಿಲ್ ಬಡಿ. ತಗೀತ” ಎಂದು ಅವನ ಶಿರಸಿ ದಯಲೆಕ್ಟ್ರಿನಲ್ಲಿ ಹೇಳಿ ಫೋನಿಟ್ಟ.

ಸುಮಾರು ಹದಿನೈದು ನಿಮಿಷದ ನಂತರ ಬಾಗಿಲು ಬಡಿದ ನಂತರ ತೆರೆದುಕೊಂಡಿತು. ತೆಳುವಾದ ದೇಹ, ಎರೆ ಮಣ್ಣಿನ ಬಣ್ಣ, ಕೋಲು ಮುಖ, ಹಣೆಯ ಎಡಬದಿಗೆ ಬಾಲ್ಯದಲ್ಲಿ ಬಿದ್ದು ತರಚಿಕೊಂಡ ಗಾಯವಿತ್ತು. ನೈಟ್ ಪ್ಯಾಂಟು, ಸ್ಕಿನ್ ಫಿಟ್ ಟೀ ಶರ್ಟು ಧರಿಸಿದ್ದ. ಎಡತುಟಿಯ ಕೆಳಗೆ ಜೊಲ್ಲು ಹತ್ತಿತ್ತು. ಕಣ್ಣುಗಳು ಊದಿಕೊಂಡು ಅತ್ತಿದ್ದರ ಸುಳಿವು ಕೊಡುತ್ತಿತ್ತು. ಉಫ್… ಧೀ ಹೇಳಿದಂತೆ ಇವ್ನು ದೊಡ್ಡ ಡ್ರಾಮೇಬಾಜ್ ಅಂದುಕೊಂಡೆ. ಬಾಗಿಲು ತೆರೆದವನೇ ನನ್ನನ್ನೊಮ್ಮೆ ನೋಡಿದರೂ ನೋಡದಂತೆ ಹೋಗಿ ಬ್ಲಾಂಕೆಟ್ ಹೊದ್ದು ಮಲಗಿಕೊಂಡ. ನನಗೆ ಉರಿದುಹೋಯ್ತು.

”ಮಂಜು…ಏನಾಯ್ತು?”

”ಏನು ಆಗಿಲ್ಲ ಬ್ರೋ. ಜಸ್ಟ್ ಲೀವ್ ಮಿ ಅಲೋನ್. ನಿಂಗೆ ನಾಳೆ ಎಕ್ಸಾಮ್ ಐತಲ. ಓದ್ಕೋ ಹೋಗು. ನನ್ನ ಬಗ್ಗೆ ವರಿ ಮಾಡ್ಬೇಡ”

”ನಿಂಗೆ ತಲಿ ಕೆಟ್ಟತೆನಪ ದೋಸ್ತಾ? ಇದು ನಿನ್ನ ಮೊದಲ್ನೇ ಸೆಮಿಸ್ಟರಿನ ಎಕ್ಸಾಮ್ ಅನ್ನೋ ಖಬರರ ಅದಾ ಇಲ್ಲೋ?”

”ನಾನೀಗ ಏನನ್ನೂ ಹೇಳೋ ಪರಿಸ್ಥಿತಿಲಿಲ್ಲ ಬ್ರೋ. ಯು ಗೋ ಅಂಡ್ ರೀಡ್”

”ಹಾಳಾಗೋಗು. ನಿನ್ನಣೆಬರ” ಎಂದು ಗೊಣಗಿಕೊಳ್ಳುತ್ತ ಮುಖ ತೊಳೆದುಕೊಳ್ಳಲು ಬಚ್ಚಲುಮನೆಯ ಬಾಗಿಲು ತೆರೆದೆ. ಕನ್ನಡಿ ಕೆಳಗೆಬಿದ್ದು ಚೆಲ್ಲಾಪಿಲ್ಲಿಯಾಗಿತ್ತು. ಏನೋ ದೊಡ್ಡ ಸಮಸ್ಯೆಯೇ ಆಗಿದೆಯೆಂದು ಊಹಿಸಿ ನಿಧಾನಕ್ಕೆ ಕಸಬರಿಗೆ ಹಿಡಿದು ಕೂತೆ. ನನ್ನದೇ ಬಿಂಬದ ಜೊತೆ ಮೇಲೆ ಸೂರ್ಯನಂತೆ ಉರಿಯುತ್ತಿದ್ದ ಮೈಸೂರ್ ಬಲ್ಬಿನ ಬೆಳಕು ಎಲ್ಲ ಚೂರುಗಳಲ್ಲಿಯೂ ಕಂಡವು. ಪ್ರತಿ ಚೂರಿನಲ್ಲೂ ಮುಖದ ಚೂರು ಭಾಗ ಮರೆಯಾಗಿಬಿಟ್ಟಿರುತ್ತಿದ್ದುದರ ಅರಿವಾಯಿತು.

ಎಲ್ಲಾ ಬಿಂಬಗಳನ್ನು ಬಳಿದು ಕಸದಬುಟ್ಟಿಗೆ ಹಾಕಿ ಮುಖ ತೊಳೆದು ಓದುವ ಕೋಣೆಗೆ ಹೋಗಿ ನಾಳೆಯ ಪರೀಕ್ಷೆಗೆ ಮಾಡಿಟ್ಟಿದ್ದ ನೋಟ್ಸ್ ಹೊಂದಿಸಿಟ್ಟು, ಇಂಡಕ್ಷನ್ ಸ್ಟವ್ವಿನಲ್ಲಿ ಇಬ್ಬರಿಗೂ ಚಾ ಕಾಯಿಸಲು ಇಟ್ಟೆ. ಹಾಲು, ಚಹಾ ಪುಡಿ, ಸಕ್ಕರೆ ಎಲ್ಲವು ತಮ್ಮ ತಮ್ಮ ಒಂದೊಂದೇ ಗುಣವನ್ನು ಬಿಟ್ಟುಕೊಟ್ಟು ಬೇರೆಯ ಹೊಸ ರೂಪ ಪಡೆಯಲು ಕುದಿಯುತ್ತಿದ್ದವು.

ಅವನಿಗೆ ಮೊದಲಿನಿಂದಾನು ಮನೆಕಡೆಯಿಂದ ಸಮಸ್ಯೆ ಇತ್ತು. ಅಮ್ಮ, ಅಪ್ಪ, ವಿಕಲ ಚೇತನ ಅಣ್ಣ, ಮನೆಯಲ್ಲಿ ಸದಾ ಇರುವ ಜಗಳಗಳು ನೆನಪಾದವು. ನನಗೆ ನನ್ನ ಮನೆಯಲ್ಲಿರುವ ಬಡತನ, ರಿಸರ್ವಶನ್ ಕೊಟ್ಟರೂ ಇವಕ್ಕೆ ಮುಂದೆ ಬರೋದಕ್ಕೆ ಗೊತ್ತಿಲ್ಲ ಎಂಬ ಕುಹಕಗಳು ಕುದಿಯುತ್ತಿದ್ದವು. ಎರಡು ಮಗ್ಗಿನಲ್ಲಿ ಚಾ ಬಗ್ಗಿಸಿಕೊಂಡು ಕೋಣೆಗೆ ಬಂದರೆ ಅವನು ಹಾಸಿಗೆಯಿಂದೆದ್ದು ಗೋಡೆಗಾತು ಯಾವುದೋ ಮ್ಯಾಗಜಿನ್ ಹಿಡಿದು ಕೂತಿದ್ದ. ಮೊಬೈಲು, ಬ್ಯಾಟರಿ ದಿಕ್ಕಿಗೊಂದೊಂದು ಬಿದ್ದಿದ್ದವು. ಅವನ ಹೆಗಲ ಮೇಲೆ ಕೈ ಹಾಕಿ ಪಕ್ಕ ಕುಳಿತು ಅವನ ಭುಜ ನೇವರಿಸಿದೆ. ಮಗ್ ಕೈಯಲ್ಲಿಡಿದು ಮೆಲುದನಿಯಲ್ಲಿ ಥ್ಯಾಂಕ್ಸ್ ಎಂದಷ್ಟೇ ಹೇಳಿದ.

”ಏನಾಯ್ತು?”

”ಅಣ್ಣ ಯಾಕ್ ಹೀಗೆ ಮಾಡ್ತಿದ್ದಾನೋ ನಂಗೊತ್ತಿಲ್ಲ. ಅಪ್ಪ ನನ್ನನ್ನ ಜಾಸ್ತಿ ಇಷ್ಟ ಪಟ್ಟರೆ ನಾನೇನ್ ಮಾಡಕ್ಕಾಗತ್ತೆ? ಪ್ರತಿಯೊಂದ್ಸಲನೂ ಅಪ್ಪ ಬರಿ ನಿನ್ನನ್ನೇ ಜಾಸ್ತಿ ಪ್ರೀತಿಸ್ತಾನೆ. ನಾನಂದ್ರೆ ಕಸಕ್ಕಿಂತ ಕಡೆ ಅಂತ ಚುಚ್ತಾ ಇರ್ತಾನೆ. ನನ್ನೆಲ್ಲ ನಿರ್ಧಾರಗಳಲ್ಲೂ ಮೂಗು ತೂರಿಸ್ತಾನೆ”

”ಹ್ಮ್‌… ಈಗೇನಾಯ್ತು?”

”ಅಮ್ಮಂಗೂ ಅಪ್ಪಂಗೂ ದಿನಾ ಜಗಳ. ಮಕ್ಕಳಾದವರು ಜಗಳ ಬಿಡಿಸ್ಬೇಕು ಅಲ್ವ? ಇವ್ನು ಹಾಗಲ್ಲ. ಉರಿಯೋ ಬೆಂಕಿಗ್ ತುಪ್ಪ ಸುರ್ದು ಅಪ್ಪಾಜಿನ ತಪ್ಪಿತಸ್ಥನ್ನ ಮಾಡಿ ಅಮ್ಮನ ಪರ ವಹಿಸ್ತಾನೆ. ಕೇಳಿದ್ರೆ ಎಮೋಷನಲ್ ಬ್ಲಾಕ್ಮೇಲ್ ಬೇರೆ! ನಾನು ಹ್ಯಾಂಡಿಕ್ಯಾಪ್ ಅಂತ ನಿಮಗೆಲ್ಲ ತಾತ್ಸಾರ ಅಂತ ಚಿಕ್ ಮಕ್ಳ ತರ ಅಳ್ತಾನೆ. ನನಗೆ ರೋಸಿ ಹೋಗಿದೆ”

”ಹೌದು. ನೀ ಅತ್ರೆ ಚಿಕ್ಕ ಮಗು ಅರ್ಥ ಮಾಡ್ಕೋಬಹುದು.” ಎಂದು ಕಿಚಾಯಿಸಿದ್ದಕ್ಕೆ ಹುಸಿಕೋಪದಿಂದ ನಾನವನ ಹೆಗಲ ಮೇಲೆ ಹಾಕಿದ ಕೈಯನ್ನ ಎತ್ತಿ ಎಸೆದು ನನ್ನ ಬಲ ತೋಳಿಗೆ ನಾಲ್ಕು ಬಾರಿ ಗುದ್ದಿದ. ನಾನು ನಗುತ್ತಲೇ

”ಸಾರಿ, ಸುಮ್ನೆ ತಮಾಷೆ ಮಾಡಿದ್ದು. ಹೇಳು”

”ನನಗೆ ಅವನ ಮೇಲೆ ಪ್ರೀತಿಯಿಲ್ಲ ಅಂತಲ್ಲ. ಆದ್ರೆ ಅವ್ನು ಯಾಕಿಂಗಾಡ್ತಾನೋ ಒಂದೂ ಗೊತ್ತಿಲ್ಲ. ಅಪ್ಪಾಜಿ ಬೇರೆ ಊರ್ ಮಂದಿಗೆಲ್ಲ ಉಪಕಾರ ಮಾಡೋದು, ಮನೆ ಮಂದಿ ಅಂದ್ರೆ ಜಿಪುಣತನ. ಇರೋದ್ರಲ್ಲಿ ನನ್ನತ್ರ ಪರ್ವಾಗಿಲ್ಲ ಅಷ್ಟೇ. ಇನ್ನೇನು ಪರೀಕ್ಷೆ ಹಾಲಿಗೆ ಕಾಲಿಡಬೇಕು ಅನ್ನೋದ್ರೊಳಗೆ ಅಣ್ಣ ಫೋನ್ ಮಾಡಿ ಮನೇಲಿ ಮಾರಾಮಾರಿ ಜಗಳ ಆಗ್ತಿದೆ. ಈ ಕೂಡ್ಲೇ ದಾವಣಗೆರೆಗೆ ಹೊರಟ್ ಬಾ. ಅಪ್ಪ ಬೇಕೋ ಅಥವಾ ನಾನು ಮತ್ತೆ ಅಮ್ಮ ಬೇಕೋ ಎರಡರಲ್ಲಿ ಒಂದನ್ನು ಡಿಸೈಡ್ ಮಾಡು ಅಂತ ಕೂತಿದಾನೆ. ಇವರುಗಳ ನಾಟ್ಕ ನೋಡಿ ನೋಡಿ ಸಾಕಾಗೋಗಿದೆ. ಅದ್ಕೆ ನಾನೆಲ್ಲೂ ಬರಲ್ಲ ಹೆಂಗಾದ್ರೂ ಹಾಳಾಗ್ ಹೋಗಿ ಅಂತ ಆ ಸಿಮ್ ತೆಗೆದು ಬಿಸಾಕಿ ಕೂತಿದೀನಿ”

”ಅದೇ ಸಿಟ್ಟಿಂದ ಪರೀಕ್ಷೆ ಕೂಡ ಬರೆದುಬಿಡಬೇಕಾಗಿತ್ತು…” ಎಂದಕೂಡಲೇ ದುರುಗುಟ್ಟಿ ನೋಡತೊಡಗಿದ.

ಕನ್ನಡಿ ಕೆಳಗೆಬಿದ್ದು ಚೆಲ್ಲಾಪಿಲ್ಲಿಯಾಗಿತ್ತು. ಏನೋ ದೊಡ್ಡ ಸಮಸ್ಯೆಯೇ ಆಗಿದೆಯೆಂದು ಊಹಿಸಿ ನಿಧಾನಕ್ಕೆ ಕಸಬರಿಗೆ ಹಿಡಿದು ಕೂತೆ. ನನ್ನದೇ ಬಿಂಬದ ಜೊತೆ ಮೇಲೆ ಸೂರ್ಯನಂತೆ ಉರಿಯುತ್ತಿದ್ದ ಮೈಸೂರ್ ಬಲ್ಬಿನ ಬೆಳಕು ಎಲ್ಲ ಚೂರುಗಳಲ್ಲಿಯೂ ಕಂಡವು. ಪ್ರತಿ ಚೂರಿನಲ್ಲೂ ಮುಖದ ಚೂರು ಭಾಗ ಮರೆಯಾಗಿಬಿಟ್ಟಿರುತ್ತಿದ್ದುದರ ಅರಿವಾಯಿತು.

”ಓಕೆ ಸಾರಿ. ನಾ ಹೇಳೋಕ್ ಹೊರಟಿದ್ದು ಹಾಗಲ್ಲ. ಎದ್ದು ಮುಖ ತೊಳ್ಕೊ. ಹಂಗೆ ಯೂನಿವರ್ಸಿಟಿ ಒಳಗೆ ಒಂದು ವಾಕ್ ಮಾಡಿಕೊಂಡು ಬರೋಣ” ಎಂದು ಹೊರಡಿಸಿದೆ. ರೂಮು ಲಾಕ್ ಮಾಡಿ ಹೊರಟೆವು. ಸಾಯಂಕಾಲದ ತಂಪು ಗಾಳಿ ಬೀಸಲು ಶುರುವಾಗಿತ್ತು. ಶ್ರೀನಗರದಿಂದ ಪಾವಟೆನಗರದ ಮುಖ್ಯ ರಸ್ತೆಯಲ್ಲಿ ನಡೆಯುತ್ತ ಹೋಗುವಾಗ ಒಂದು ಕೋಚಿಂಗ್ ಕ್ಲಾಸ್ಸಿನಿಂದ ವಿದ್ಯಾರ್ಥಿಗಳು ಪುದುಪುದು ಹೊರಬಂದರು.

”ನೋಡು. ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿ ಕಾಂಪಿಟಿಟಿವ್ ಎಕ್ಸಾಮ್ಸ್ ತಯಾರಿಗೆ ಅಂತ ಬರ್ತಾರೆ. ಇನ್ಸ್ಪೆಕ್ಟರ್, ಐಎಎಸ್, ಕೆಎಎಸ್, ಕಾನ್ಸ್ಟೇಬಲ್ ಹೀಗೆ ನೂರಾರು ಪರೀಕ್ಷೆಗಳಿಗೆ ತಯಾರಿ. ಭಾಳ ಮಂದಿ ಏನಾದ್ರೂ ಆಗೋವರ್ಗು ಮನೆಗಳಿಗೆ ಹೋಗಾದೆ ಇಲ್ಲ ಅನ್ನೋ ಛಲ ತೊಟ್ಟು ಬಂದಿರ್ತಾರೆ”

”ನಿನ್ನ ತರ…”

”ಹು… ಹಂಗೆ ಅಂದುಕೊಳಪ್ಪ. ಕೆಲವೊಂದಿಷ್ಟು ಜನ ಸೋಲ್ತಾರೆ. ಕೆಲವೊಂದಿಷ್ಟು ಜನ ಗೆಲ್ತಾರೆ…ಏನೇ ಆದ್ರೂ ಪರೀಕ್ಷೆ ಅಂತೂ ಎದುರಿಸಲೇಬೇಕಲ್ಲೇನೋ”

”ಬ್ರೋ… ಇವೆಲ್ಲ ನನಗೆ ಮೀನಿಂಗ್ ಲೆಸ್ ಅನ್ಸತ್ತೆ”

”ಹ್ಮ್‌… ನನಗನಿಸತ್ತೆ ನಿಮ್ಮಣ್ಣ ಅಪ್ಪನನ್ನಷ್ಟೇ ದ್ವೇಷಿಸ್ತಿಲ್ಲ. ನಿನ್ನನ್ನೂ ದ್ವೇಷಿಸ್ತಾ ಇದಾನೆ. ನೀನು ಬೆಳೆದ್ರೆ ಅವನಿಗೆ ಹೊಟ್ಟೆಕಿಚ್ಚು. ನಿನಗೆ ಫೋನ್ ಮಾಡಿ ಕೂಡ್ಲೇ ಹೊಂಟ್ ಬಾ ಅನ್ನೋದು ಕೂಡ ನನಗೆ ಹಾಗೆ ಕಾಣ್ಸತ್ತೆ ನೋಡ್ಲೆ ಅಪ್ಯ”

”ನಾನಿಗೇನ್ಮಾಡ್ಲಿ?”

”ಎಲ್ರು ಅವರವರ ಪ್ರಕಾರ ಸರೀನೇ… ಆವಾ ಸಣ್ಣಾವಿದ್ದಾಗ ಅವ್ನ ಮನಸಿನ ಮ್ಯಾಲೆ ಆಗಿರೋ ಗಾಯ ಅವನ್ನ ಹಿಂಗ್ ಮಾಡಿಸ್ತಿರಬಹುದು. ಒಬ್ಬೊಬ್ಬರಿಗೆ ಒಂದೊಂದು ಸಲ ಒಳಗಿನ ಜ್ವಾಲಾಮುಖಿ ಸ್ಫೋಟ ಆಕ್ಕೆತಿ. ನಿಮ್ಮ ಅಣ್ಣಗ ನಿನಗೆ ಸಿಗೋವಷ್ಟು ಪ್ರೀತಿ ಸಿಗ್ತಿಲ್ಲ ಅನ್ನೋ ಕೊರಗು, ಅವ್ವಾಗ ನಿಮ್ಮ ಅಪ್ಪನ ಹತ್ರ ಏಗಿ ಏಗಿ ಸಾಕು ಅನಿಸ್ಲಿಕ್ಕೆ ಅವರದ್ದೇ ಕಾರಣ ಇರಬಹುದು, ಅಪ್ಪಂಗೂ ಕೂಡ ಅವರದ್ದೇ… ನೀ ನೋಡು ಏನ್ಮಾಡ್ತಿಯ ಅಂತ. ಯೋಚ್ನೆ ಮಾಡಿ ನಿರ್ಧಾರ ತಗೋ”

”ನನಗೆ ಈ ಆಯ್ಕೆಗಳು ತುಂಬಾ ಗೊಂದಲಕ್ಕೆ ದೂಡ್ತಾವೆ. ಯಾರಾದ್ರೂ ನನ್ನ ಕೈಹಿಡಿದು ನೀನು ಇದನ್ನ ಮಾಡು ಅನ್ನೋರು ಬೇಕು. ನನಗೆ ತಲೆ ಚಿಟ್ಟು ಹಿಡಿತಿದೆ”

”ನಾನು ಹೇಳಬಹುದು. ನಾನೇನೋ ಹೇಳಿ ಅದು ಸರಿ ಹೋಗದೆ ನಿನ್ನ ಜೀವನಕ್ಕೆ ಇನ್ನಷ್ಟು ಕುತ್ತು ತಂದ್ರೆ ಅನ್ನೋ ಹೆದರಿಕಿ”

”ಹ್ಮ್‌… ಸರಿ ನಾನೇ ಯೋಚಿಸ್ತೀನಿ” ಎಂದವನೇ ತುಂಬಾ ಹೊತ್ತು ಮಾತಾಡಲಿಲ್ಲ. ಹುಸಿಮುನಿಸು ಅವನ ಮುಖದ ಮೇಲೆ ಮೂಡಿದ್ದು ಗಮನಿಸಿ ಕೇಳಿದೆ.

”ನಾನು ಅಕಸ್ಮಾತ್ ಏನಾದ್ರೂ ಹೇಳಿದರೆ ಅದರ ಹಿಂದು-ಮುಂದು ಯೋಚ್ನೆ ಮಾಡದೇನೆ ಅದನ್ನೇ ಮಾಡ್ತಿಯಾ?”

ಆ ಪ್ರಶ್ನೆಗೆ ಅವನು ಉತ್ತರಿಸಲಿಲ್ಲ.

ತುಂಬಾ ಹೊತ್ತು ಮಾತಿಲ್ಲದೆ ನಡೆಯುತ್ತಲೇ ಹೋದೆವು. ಇಬ್ಬರ ತಲೆಯಲ್ಲೂ ಪ್ರಶ್ನೆಗಳು ಧಾಂಗುಡಿಯಿಡುತ್ತಿದ್ದವು. ನನಗೇನು ಹೇಳಬೇಕೋ ತೋಚಲಿಲ್ಲ. ನನ್ನ ಬಲಗೈ ಬೆರಳುಗಳನ್ನು ಅವನ ಎಡಗೈ ಬೆರಳುಗಳಿಗೆ ಬೆಸೆದೆ. ಅವನು ಬಿಡಿಸಿಕೊಳ್ಳಲಿಲ್ಲ. ಮರಳಿ ರೂಮು ಮುಟ್ಟುವವರೆಗೂ ಬೆಸೆದ ಬೆರಳುಗಳು ಹಾಗೆಯೇ ಇದ್ದವು. ತಂಪು ಗಾಳಿ ಯಾವುದೋ ಭರವಸೆಯಿಂದ ಮೈ ಸವರುತ್ತಲೇ ಇತ್ತು.

ರೂಮು ಮುಟ್ಟಿದಾಗ ಸಂಜೆ ಏಳರ ಗಡಿ ಮುಟ್ಟುತ್ತಿತ್ತು. ಸರಿ ಕಣಪ್ಪ. ನಾನು ಸ್ವಲ್ಪ ಓದ್ಕೋತೀನಿ ಎಂದು ಓನರ್ ಮನೆ ಕೀ ಮತ್ತು ನೋಟ್ಸ್ ಎತ್ತಿಕೊಂಡು ಮೇಲೆ ಹೋದೆ. ಗೋಡೆಗಳ ತುಂಬಾ ವರ್ಣಚಿತ್ರಗಳು ನೋಡುತ್ತಲೇ ಮನಸೆಳೆದವಾದರೂ ಸೋಫಾದ ಮೇಲೆ ನಾಳೆಯ ‘ಕಾಂಪ್ಲೆಕ್ಸ್ ಅನಾಲಿಸಿಸ್’ ಪರೀಕ್ಷೆಗೆ ತಯಾರಿಗೊಳ್ಳುತ್ತ ಕುಳಿತೆ. ಇಡೀ ಕಾಂಪ್ಲೆಕ್ಸ್ ಅನಾಲಿಸಿಸ್ ಪೇಪರ್ ಆರಂಭವಾಗುವುದೇ ಮೈನಸ್ ಒಂದರ ವರ್ಗಮೂಲ ಕಂಡು ಹಿಡಿಯಲು ತೊಡಗಿಕೊಂಡು. ಸಮಸ್ಯೆಗಳ ಮೂಲ ತಿಳಿದರೆ ಎಂತಹ ಸಂಕೀರ್ಣತೆಯನ್ನು ದಾಟಬಹುದೆನ್ನುವುದು ಹೊಳೆಯಿತು. ಓದುತ್ತ ಓದುತ್ತ ಮಂಜುವಿನ ಸಮಸ್ಯೆಗೆ ನಾನು ನಿಖರವಾಗಿ ಇದನ್ನೇ ಮಾಡು ಅಂತ ಹೇಳಿಬಿಡ್ಲಾ? ಅದರ ಫಲಾಫಲಗಳು ತಂದೊಡ್ಡುವ ಪರಿಣಾಮಗಳನ್ನು ಎದುರಿಸಲು ನಾನು ತಯಾರಿದೀನ? ತಂದೆ, ತಾಯಿ, ಜೀವಕ್ಕೆ ಹತ್ತಿರದ ಪ್ರೀತಿಪಾತ್ರರ ವಿಷಯದಲ್ಲಿ ಮಾತ್ರವಲ್ಲವೇ ನಾವು ಇಂತಹ ಧೈರ್ಯ ತೋರುವುದಲ್ಲವಾ? ನಾನು ಅವನ ಸ್ಥಾನದಲ್ಲಿದ್ದಿದ್ದರೆ ಯಾರ ಪರವಾಗಿ ನಿಲ್ಲುತ್ತಿದ್ದೆ? ಗೊಂದಲವಾಯಿತು.

ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬೇಕೆನಿಸಿ, ಆ ಮನೆಯಲ್ಲಿದ್ದ ಕಲಾಕೃತಿಗಳನ್ನು ನೋಡಲು ನಿಂತೆ. ಒಂದಕ್ಕಿಂತ ಒಂದು ಚೆನ್ನಾಗಿದ್ದವು. ರಾತ್ರಿ ಒಂಭತ್ತಾಗಿತ್ತು. ಮಂಜು ಮೆಟ್ಟಿಲು ಹತ್ತಿಕೊಂಡು ಬರುವ ಸದ್ದು ಕೇಳಿಸುತ್ತಿತ್ತು. ಚಿಕನ್ ಪಿಜ್ಜಾ ಮತ್ತು ಎರಡು ಟಿನ್ ಬಿಯರ್ ಬಾಟಲಿಗಳನ್ನು ಕೊಂಡು ತಂದಿದ್ದ. ಅದನ್ನ ಟೇಬಲ್ಲಿನ ಮೇಲಿಟ್ಟು ನನ್ನ ಪಕ್ಕ ಬಂದು ಹೆಗಲಿನ ಮೇಲೆ ಕೈ ಹಾಕಿ ನಿಂತ. ನಾನು ನಿನಗೆ ಈ ಕಲಾಕೃತಿಯಲ್ಲಿ ಏನು ಕಾಣಿಸುತ್ತದೆ ಎಂದು ಕೇಳಿದೆ.
”ಕೇಂದ್ರದಲ್ಲಿ ಒಂದು ದೊಡ್ಡ ಸೊನ್ನೆ. ಅದರ ಒಳಗಡೆ ನೀಲಿ ಬಣ್ಣ. ಅಲ್ಲಲ್ಲಿ ಕಮಲದ ಹೂಗಳು. ಅದರ ಸುತ್ತಲೂ ಚರಪರ ಚರಪರ ಕಿತ್ತಾಡುವ ಸಹಬಾಳ್ವೆಯ ಮನುಷ್ಯರು. ಅಲ್ಲೆಲ್ಲ ಗಾಢ ಬಣ್ಣಗಳು. ಮೇ ಬಿ ದಟ್ ಝೀರೋ ಇನ್ ದಿ ಮಿಡಲ್ ಸಿಗ್ನಿಫೈಸ್ ಅ ಬಿಗ್ ವಾಯ್ಡ್ ಇನ್ ಲೈಫ್. ಶೂನ್ಯದ ಬಗ್ಗೆ ಹೇಳ್ತಿರಬೇಕು… ನಿಂಗೇನನ್ಸತ್ತೆ?”

”ಹ್ಮ್‌… ಲೈಕ್ ಇನ್ ಯುವರ್ ಫಿಸಿಕ್ಸ್ ಬ್ಲಾಕ್ ಹೋಲ್ ಈಸ್ ನಾಟ್ ಎನ್ ಎಂಪ್ಟಿ ಸ್ಪೇಸ್ ಬಟ್ ದಿ ಸ್ಪೇಸ್ ದೇರ್ ಟು ಎಕ್ಸ್ಪ್ಲೋರ್… ಖಾಲಿಯಿರೋ ಅವಕಾಶ ಎಲ್ಲದೂ ಕೂಡ ನಮ್ಮ ಹುಡುಕಾಟಕ್ಕೆ ತೆರೆದ ದಾರಿಗಳು ಅನ್ಸತ್ತೆ”

ಅಷ್ಟು ಹೇಳಿ ನಾನು ಉಯ್ಯಾಲೆ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು ಕೊನೆಯ ಪಾಠದ ಪಠ್ಯವನ್ನು ತಿರುವಿ ಹಾಕುತ್ತ ಕುಳಿತೆ. ಅವನು ನನ್ನ ಹಿಂದೆ ಬಂದು ತೂಗುತ್ತಾ ನಿಂತ. ”ಲೈಫ್ ಹ್ಯಾಸ್ ಲಾಟ್ ಆಫ್ ನಂಬರ್ಸ್ ಅಲ್ವ… ಇಲ್ಲಿ ಎಲ್ಲವೂ ಕೊನೆಗೆ ಅಳತೆಗೆ ಬಂದು ನಿಲ್ಲತ್ತೆ.”

”ಆದ್ರೆ ಮನುಷ್ಯನ ವರ್ತನೆಗಳು ಎಲ್ಲ ಅಳತೆ, ಪರಿಮಾಣ ಮತ್ತು ಊಹೆಗೂ ಮೀರಿ ನಿಲ್ತಾನೆ ಇರತ್ತೆ”

ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳದವನಂತೆ ಪಕ್ಕ ಬಂದು ನನ್ನ ಬಲಭುಜಕ್ಕಾತು ತನ್ನ ಬಲಗಾಲಿನಿಂದ ತೂಗುತ್ತಲೇ ಇದ್ದ. ಗಂಟೆ ಹನ್ನೆರಡಕ್ಕೆ ಹೊರಗಿನಿಂದ ಪಟಾಕಿಗಳ ಸದ್ದು ಕೇಳಿದವು. ನಾವಿಬ್ಬರು ಕೂಡಲೇ ಟೆರೇಸಿಗೆ ಹೋಗಿ ಬಿಯರ್ ಮತ್ತು ಪಿಜ್ಜಾ ಹಿಡಿದು ತೆರಳಿದೆವು. ಬೆಳಕಿನ ಕಿಡಿಗಳು ನಕ್ಷತ್ರಗಳ ಮುಟ್ಟಿ ಕೆಳಗಿಳಿಯುತ್ತಿದ್ದವು. ಸುತ್ತಲೂ ಹ್ಯಾಪಿ ನ್ಯೂ ಇಯರ್ ಎನ್ನುವ ಕೂಗು ಮುಗಿಲು ಮುಟ್ಟುತ್ತಿದ್ದವು.

ಕೆಳಗಡೆ ಬಂದು ಸೋಫಾದ ಮೇಲೆ ಕುಳಿತು ಮತ್ತೆ ಓದಲು ಕುಳಿತೆ. ಅವನು ಓನರ್ ಮನೆಯ ಎಲ್ಲಾ ಕಲಾಕೃತಿಗಳನ್ನು ಕೂಲಂಕುಷವಾಗಿ ನೋಡಲು ಹತ್ತಿದ. ನಾನು ಓದುತ್ತ ಓದುತ್ತ ಯಾವಾಗ ನಿದ್ದೆ ಹೋದೆನೋ ತಿಳಿಯಲಿಲ್ಲ. ಬೆಳಿಗ್ಗೆ ಎದ್ದಾಗ ನನ್ನ ಚಷ್ಮಾ ಟೀಪಾಯಿಯ ಮೇಲಿತ್ತು. ನನ್ನ ಮೇಲೆ ಬ್ಲಾಂಕೆಟ್ ಇತ್ತು. ಚಷ್ಮಾದ ಪಕ್ಕ ಒಂದು ಚಿಕ್ಕ ಸ್ಟಿಕ್ ಪ್ಯಾಡ್ ಅಂಟಿತ್ತು. ‘ಥ್ಯಾಂಕ್ಸ್ ಚಶ್ಮಿಶ್. ನಾನು ಊರಿಗೆ ಹೊರಟೆ. ನಿನ್ನ ಪರೀಕ್ಷೆಗೆ ಆಲ್ ದಿ ಬೆಸ್ಟ್’ ಎಂದು ಬರೆದಿತ್ತು. ಸಮಯ ನೋಡಿದೆ. ಬೆಳಗಿನ ಎಂಟು ಗಂಟೆ ತೋರಿಸುತ್ತಿತ್ತು. ಇನ್ನೊಂದು ಗಂಟೆಯಲ್ಲಿ ಎಕ್ಸಾಮ್ ಹಾಲಲ್ಲಿರಬೇಕೆಂದು ನೆನಪಾಗಿ ತಯಾರಾಗಲು ತಡವರಿಸಿ ಕೆಳಗಿಳಿಯುವಾಗ ವರ್ಣಚಿತ್ರದಲ್ಲಿನ ನೀಲಿ ಕೊಳದ ನಡುವೆ ಕಮಲಗಳು ಅರಳಿ ನಿಂತಂತೆ ಭಾಸವಾಯಿತು.