ಪ್ರವಾಸಿಗರಿಗೆ, ಕ್ಯಾಂಪಿಗರಿಗೆ, ಹೇಳಿ ಮಾಡಿಸಿದ ಚಳಿಗಾಲವಿದು. ಕಳೆದ ಕೆಲ ವರ್ಷಗಳಿಗಿಂತಲೂ ಈ ಬಾರಿ ಅಧಿಕ ಚಳಿಯಿದೆ. ಹಾಗಾಗಿ ಸಮುದ್ರತಟದಲ್ಲಿರಲು ಜನ ಹಾತೊರೆಯುತ್ತಾರೆ. ಅದು ನಿಜವೆಂಬಂತೆ ರಾಣಿರಾಜ್ಯದ ದಕ್ಷಿಣ-ಪೂರ್ವ ಭಾಗದ ಪ್ರತಿಯೊಂದು ನಗರಪಾಲಿಕೆಯೂ ತಮ್ಮಲ್ಲಿನ ಪ್ರವಾಸಿ ಸ್ಥಳಗಳನ್ನು ಪ್ರಚಾರ ಪಡಿಸಲು ಬಲು ಆಕರ್ಷಕವಾದ ಜಾಹಿರಾತುಗಳನ್ನು ಹಾಕುತ್ತಿದ್ದಾರೆ. ಶಾಲೆಗಳಿಗೆ ಟರ್ಮ್ ೨ ನಂತರದ ಎರಡು ವಾರಗಳ ರಜೆ ಆರಂಭವಾಗಿದೆ. ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು, ಮೊದಲ ಸೆಮಿಸ್ಟರ್ ಮುಗಿದು ಅವರೆಲ್ಲ ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

ಸಹೋದ್ಯೋಗಿಯೊಬ್ಬರು ಒಂದು ವಾರ ರಜೆ ಹಾಕಿ ಕ್ಯಾಂಪಿಂಗ್ ಹೊರಟರು. ಚಳಿಗಾಲದ ಈ ದಿನಗಳಲ್ಲಿ ತನ್ನ ಮಕ್ಕಳಿಗೆ ಹೊರಾಂಗಣ ಚಟುವಟಿಕೆಗಳಿಲ್ಲದಿದ್ದರೆ ಜೀವನವೆ ಚೆಲ್ಲಾಪಿಲ್ಲಿಯಾಗಿ, ಮನೆಯೆಲ್ಲ ರಣರಂಗವಾಗಿ, ಮನಸ್ಸೆಲ್ಲ ಅಲ್ಲೋಲಕಲ್ಲೋಲವಾಗುತ್ತದೆ, ಎಂದರು. ಎಲ್ಲಿಗೆ ಹೊರಟಿದ್ದಾರೆಂದೆ. ಬ್ರಿಸ್ಬೇನ್ ನಗರಕ್ಕೆ ಹತ್ತಿರವಿರುವ ನಾರ್ತ್ ಸ್ಟ್ರಾಡ್ ಬ್ರೋಕ್ ದ್ವೀಪಕ್ಕೆ ಹೊರಟಿದ್ದರು. ಅಲ್ಲಿರುವ ಕ್ಯಾಂಪ್ ಸೈಟುಗಳು ಬಹಳ ಸುಂದರ, ಸ್ವಚ್ಛ, ಮತ್ತು ವಿವಿಧ ಕಾರಣಗಳಿಗಾಗಿ ಹೆಸರುವಾಸಿ. ಅಲ್ಲಿಗೆ ಹೋಗಿ ಬಂದ, ಪ್ರಾಕೃತಿಕ ಸೌಂದರ್ಯವನ್ನು ಆನಂದಿಸಿ ಬಂದ ನನ್ನ ಮಕ್ಕಳ ವರ್ಣನೆಯದು ಎಂದರೆ ನಿಜವಾದ ಮಾತದು. ಸಮುದ್ರದ ದಂಡೆಯಿಂದಲೆ ಡಾಲ್ಫಿನ್, ಡುಗೊಂಗ್, ಮಂಟಾ ರೇ ಗಳು ಕಾಣಿಸುತ್ತವೆಯಂತೆ. ಬಾಡಿ ಬೋರ್ಡ್ ಹಿಡಿದು ಅಲೆಗಳ ಮಧ್ಯೆ ತೇಲಾಡುತ್ತಿರುವಾಗ ಕಾಲುಗಳನ್ನು ಮುತ್ತಿಡಲು ಬರುವ ಬಣ್ಣಬಣ್ಣದ ಸಮುದ್ರಜೀವಿಗಳನ್ನು ನೋಡುವುದೆ ಕಣ್ಣಿಗೆ ಹಬ್ಬವಂತೆ. ಒಮ್ಮೊಮ್ಮೆ ದೂರದಲ್ಲಿ ತಿಮಿಂಗಲಗಳು ಕಾಣಸಿಗುತ್ತವೆ ಎನ್ನುವುದು ನಿಜದ ಮಾತೆ ಸೈ. ಆ ದ್ವೀಪದಾಚೆಗೆ ಇರುವುದು ತಿಮಿಂಗಿಲಗಳ ವಾರ್ಷಿಕ ವಲಸೆ ಹಾದಿ.

ಕ್ಯಾಂಪಿಗರಿಗೆ, ಪ್ರವಾಸಿಗಳಿಗೆ ಹೇಳಿ ಮಾಡಿಸಿದ ಚಳಿಗಾಲವಿದು. ಕಳೆದ ಕೆಲ ವರ್ಷಗಳಿಗಿಂತಲೂ ಈ ಬಾರಿ ಅಧಿಕ ಚಳಿಯಿದೆ. ಹಾಗಾಗಿ ಸಮುದ್ರತಟದಲ್ಲಿರಲು ಜನ ಹಾತೊರೆಯುತ್ತಾರೆ. ಅದು ನಿಜವೆಂಬಂತೆ ರಾಣಿರಾಜ್ಯದ ದಕ್ಷಿಣ-ಪೂರ್ವ ಭಾಗದ ಪ್ರತಿಯೊಂದು ನಗರಪಾಲಿಕೆಯೂ ತಮ್ಮಲ್ಲಿನ ಪ್ರವಾಸಿ ಸ್ಥಳಗಳನ್ನು ಪ್ರಚಾರ ಪಡಿಸಲು ಬಲು ಆಕರ್ಷಕವಾದ ಜಾಹಿರಾತುಗಳನ್ನು ಹಾಕುತ್ತಿದ್ದಾರೆ. ಶಾಲೆಗಳಿಗೆ ಟರ್ಮ್ ೨ ನಂತರದ ಎರಡು ವಾರಗಳ ರಜೆ ಆರಂಭವಾಗಿದೆ. ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು, ಮೊದಲ ಸೆಮಿಸ್ಟರ್ ಮುಗಿದು ಅವರೆಲ್ಲ ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದಾರೆ. ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರದ ಅನೇಕ ಶಾಲಾ ಮಕ್ಕಳಿರುವ ಕುಟುಂಬಗಳು, ಯುವಜನತೆ ಉತ್ತರದ ಉದ್ದಕ್ಕೂ ಮೈಚಾಚಿರುವ ಮನಮೋಹಕ ಸಮುದ್ರತೀರದ ಕ್ಯಾಂಪ್ ಸೈಟುಗಳಿಗೆ ಲಗ್ಗೆಯಿಟ್ಟಿದ್ದಾರೆ.

ಸಹೋದ್ಯೋಗಿಯ ಮಾತು ಕೇಳಿ ನಾನು ನಾಲ್ಕು ದಿನಗಳ ಮಟ್ಟಿಗೆ ನಾವೂ ಕ್ಯಾಂಪಿಂಗ್ ಹೋದರೆ ಹೇಗೆ ಎಂದುಕೊಂಡು ಕ್ಯಾಂಪ್ ಸೈಟುಗಳತ್ತ ಕಣ್ಣು ಹಾಯಿಸಿದರೆ ಉಹುಂ, ಎಲ್ಲೂ ಕೂಡ ಕ್ಯಾಬಿನ್ ಇರಲಿ, ಕನಿಷ್ಠ ಒಂದು ಟೆಂಟ್ ಸೈಟ್ ಬುಕಿಂಗ್ ಕೂಡ ಸಿಗಲಿಲ್ಲ. ಕಾರಣ ಹೊಳೆಯುವುದು ತಡವಾಗಲಿಲ್ಲ. ಬ್ರಿಸ್ಬೇನ್ ನಗರದ ಉತ್ತರಕ್ಕೆ ಮೂರು ತಾಸುಗಳ ಅವಧಿಯಲ್ಲಿರುವ ಸಮುದ್ರದಂಚಿನ ಹೋಟೆಲ್ಲುಗಳು, ರೆಸಾರ್ಟ್ ಗಳು, ಕ್ಯಾಂಪ್ ಸೈಟುಗಳು ವರ್ಷವಿಡೀ ತುಂಬಿ ತುಳುಕುತ್ತಿರುತ್ತವೆ. ಬರೀ ರಾಣಿರಾಜ್ಯದವರಲ್ಲ, ದಕ್ಷಿಣದ ಕಡೆಯಿಂದ ಮೆಲ್ಬೋರ್ನ್ ಮಂದಿಯ ದೊಡ್ಡ ಜನಜಾತ್ರೆಯೆ ನಮ್ಮ ಉತ್ತರದ ಸೂರ್ಯಕಾಂತಿ ಸಮುದ್ರತೀರಕ್ಕೆ ಬಂದಿಳಿದಿದೆ. ಕಳೆದೆರಡು ವರ್ಷಗಳ ಕೋವಿಡ್-೧೯ ತೊಡಕುಗಳಿಂದ ಬಾಧಿತರಾಗಿದ್ದ ಅವರುಗಳು ಈ ಬಾರಿ ಇಡೀ ಚಳಿಗಾಲವನ್ನು ಸಮುದ್ರತೀರದ ಪಕ್ಕ, ಹಿತವಾದ ಬಿಸಿಲಿನಲ್ಲಿ ಕಳೆಯುತ್ತಿದ್ದಾರೆ. ನಾವುಗಳು ದಿನದ ಮಟ್ಟಿಗೆಂದು ಬೀಚ್ ಪ್ರವಾಸಕ್ಕೆ ಹೋದರೆ ಇವರನ್ನೆಲ್ಲ ನೋಡುತ್ತಾ ‘ವಾಹ್, ಉದ್ಯೋಗ ಜೀವನ ಮುಗಿದ ಮೇಲೆ ನಾನೂ ಕೂಡ ಹೀಗೇ ಬೀಚಿನಲ್ಲಿ ಬಿದ್ದುಕೊಂಡಿರುವ ದಿನಗಳು ಬೇಗ ಬರಲಿ’ ಎಂದು ಕನವರಿಸುತ್ತೀನಿ.

ಆಸ್ಟ್ರೇಲಿಯಾದಲ್ಲಿ ಉದ್ಯೋಗದಿಂದ ನಿವೃತ್ತಿ ಪಡೆಯುವ ನಿಗದಿತ ವಯಸ್ಸು ಅರವತ್ತೇಳು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸಾಯುವಂತಹ ರೋಗಗಳಿಲ್ಲದಿದ್ದರೆ ಸಲೀಸಾಗಿ ತೊಂಭತ್ತಕ್ಕೂ ಹೆಚ್ಚು ವರ್ಷ ಜೀವಿಸುವ ಬಿಳಿ ಆಂಗ್ಲೊ-ಯುರೋಪಿಯನ್ ಜನರ ಆರೋಗ್ಯ ಮತ್ತು ಸರಾಸರಿ ಆಯುಷ್ಯದ ಮೇಲೆ ನಿವೃತ್ತಿ ವಯಸ್ಸು ನಿಗದಿತವಾಗಿದೆ. ಅವರಿಗೆ ಹೋಲಿಸಿದರೆ ಕಡಿಮೆ ಆಯುಷ್ಯವಿರುವ ಆಸ್ಟ್ರೇಲಿಯಾದ ಅಬೊರಿಜಿನಲ್ ಜನರು ಮತ್ತೆಲ್ಲಾ ಬೇರೆ ಜನರು ನಿವೃತ್ತಿ ಪಡೆದ ಕೆಲವೇ ವರ್ಷಗಳಲ್ಲಿ ಗೊಟಕ್ ಎನ್ನುವ ಸಾಧ್ಯತೆಗಳೆ ಹೆಚ್ಚು. ಅಲ್ಲದೆ, ಉದ್ಯೋಗ ಮತ್ತು ನಿವೃತ್ತಿ ವಿಷಯಗಳು ನಿರ್ಧಾರವಾಗುವುದು ಬಂಡವಾಳಶಾಹಿ ಮತ್ತು ನವ ಉದಾರವಾದಿ ನೀತಿಗಳಿಗೆ ತಕ್ಕಂತೆ. ಆ ನೀತಿಗಳಿಗೆ ಅನುಸಾರವಾಗಿ ಅರವತ್ತೇಳನೆ ವಯಸ್ಸಿನ ತನಕ ದುಡಿದರೆ ಮಾತ್ರ ಒಂದಷ್ಟು ಹಣ, ಉಳಿತಾಯ ಕೂಡಿಬಂದು ಸಾಮಾನ್ಯ ಜನರಿಗೆ ತಮ್ಮ ನಿವೃತ್ತಿ ಜೀವನದಲ್ಲಿ ಒಂದಷ್ಟು ನೆಮ್ಮದಿಯಾಗಿ ಬದುಕಲು ಸಾಧ್ಯ. ಉದ್ಯೋಗಗಳ ಜೊತೆಗೆ ಪಿಂಚಣಿ ಸೇರಿಲ್ಲದರ ಕಾರಣ ಕನಿಷ್ಠ ನಲವತ್ತು ವರ್ಷಗಳ ಮಟ್ಟಿಗೆ ದುಡಿಯಲೇಬೇಕು ಎಂದಿರುವ ಸತ್ಯದಲ್ಲಿ ನಮ್ಮೆಲ್ಲರ ನಿವೃತ್ತಿಯಾಚೆಯ ಬದುಕಿನ ಕನಸುಗಳು-ಕನವರಿಕೆಗಳು ತೇಲಾಡುತ್ತಿವೆ.

ಬರೀ ರಾಣಿರಾಜ್ಯದವರಲ್ಲ, ದಕ್ಷಿಣದ ಕಡೆಯಿಂದ ಮೆಲ್ಬೋರ್ನ್ ಮಂದಿಯ ದೊಡ್ಡ ಜನಜಾತ್ರೆಯೆ ನಮ್ಮ ಉತ್ತರದ ಸೂರ್ಯಕಾಂತಿ ಸಮುದ್ರತೀರಕ್ಕೆ ಬಂದಿಳಿದಿದೆ. ಕಳೆದೆರಡು ವರ್ಷಗಳ ಕೋವಿಡ್-೧೯ ತೊಡಕುಗಳಿಂದ ಬಾಧಿತರಾಗಿದ್ದ ಅವರುಗಳು ಈ ಬಾರಿ ಇಡೀ ಚಳಿಗಾಲವನ್ನು ಸಮುದ್ರತೀರದ ಪಕ್ಕ, ಹಿತವಾದ ಬಿಸಿಲಿನಲ್ಲಿ ಕಳೆಯುತ್ತಿದ್ದಾರೆ.

ವಾಪಸ್ ನಮ್ಮ ಸಮುದ್ರತಟದ ಹಿತವಾದ ಬಿಸಿಲಿನಲ್ಲಿ, ಬಿಳಿ ಮರಳಿನಲ್ಲಿ ಮೈ ಹಾಯಿಸಿ ಅಲೆಗಳ ಚೆಲ್ಲಾಟವನ್ನು ದಿಟ್ಟಿಸುತ್ತಾ ಕೂರುವ ಕನಸಿಗೆ ಮರಳೋಣವಂತೆ. ಕ್ಯಾಂಪಿಂಗ್ ಇಲ್ಲಾ ಎಂದಾದ ಮೇಲೆ ಉತ್ತರದ ಬೀಚುಗಳಿಗೆ ಡೇ ಟ್ರಿಪ್ ಮಾಡುವುದು ಎಂದಾಯ್ತು. ನಗರಪಾಲಿಕೆಯ ಜಾಹಿರಾತುಗಳನ್ನು ಮತ್ತೊಮ್ಮೆ ಗಮನವಿಟ್ಟು ನೋಡಿ ಇಲ್ಲಿಯವರೆಗೂ ಮಾಡಿಲ್ಲದಿರುವ ‘whale watching’ ಚಟುವಟಿಕೆಗೆ ಬುಕಿಂಗ್ ಮಾಡಿದ್ದಾಗಿದೆ. ಕೇವಲ ಮೂರು ಗಂಟೆಗಳ ಕಾಲದಲ್ಲಿ ಬೋಟಿನಲ್ಲಿ ಪಯಣಿಸಿ, ಸಮುದ್ರದಲ್ಲಿ ವಿಹರಿಸುವ ಅಪರೂಪದ ಮಹಾಕಾಯಗಳನ್ನು ನೋಡುವ ಕನಸಿಗೆ ಕಂಡಾಪಟ್ಟೆ ಹಣ ತೆರಬೇಕು. ಎಲ್ಲವೂ ಅತ್ಯಂತ ದುಬಾರಿಯಾಗಿರುವ ಆಸ್ಟ್ರೇಲಿಯಾದಲ್ಲಿ ಸಾಮಾನ್ಯ ಮಧ್ಯಮ ವರ್ಗದ ಜೀವನದಲ್ಲಿ ಬದುಕುತ್ತಾ ನಮ್ಮ ಕನಸುಗಳು ಸಾಕಾರವಾಗಲು ಆಗಾಗ ಭಾರಿ ಬೆಲೆ ತೆರಲೇಬೇಕು ಎಂದುಕೊಂಡು ತಿಮಿಂಗಿಲಗಳ ಬಗ್ಗೆ ಮಾಹಿತಿ ಪಡೆಯಲು ಅಂತರ್ಜಾಲ ಲೋಕವನ್ನು ಹೊಕ್ಕಾಗ ಅಲ್ಲಿ ಕಂಡ ತಿಮಿಂಗಿಲಗಳು ಚಿಮ್ಮಿಸುವ ನೀರಿನ ಬುಗ್ಗೆಗಳ ಚಿತ್ರಗಳಿಂದ ರೋಮಾಂಚನವಾಯಿತು. ಚಳಿಗಾಲದಲ್ಲಿ ದಕ್ಷಿಣ ಧ್ರುವ ಪ್ರದೇಶಗಳಿಂದ ಉತ್ತರ ಧ್ರುವದ ಬೆಚ್ಚಗಿನ ಸಮುದ್ರಗಳಿಗೆ ವಲಸೆ ಹೊರಡುವ ತಿಮಿಂಗಿಲಗಳ ಮಹಾ ಪ್ರಯಾಣವನ್ನು ನಾವು ಆಸ್ಟ್ರೇಲಿಯಾದ ಪೂರ್ವದಿಕ್ಕಿನ ಸಮುದ್ರಗಳಲ್ಲಿ ನೋಡುವುದು ಅದೃಷ್ಟವೇ. ಹಾಗೆ ನೋಡಿಯಾದ ಮೇಲೆ ಅದರ ಬಗ್ಗೆ ಬರೆಯುತ್ತೀನಿ.

ಇನ್ನು ಬೇರೆ ದೇಶಗಳಿಗೆ ಹೊರಟ ಜನರು ಸ್ಥಳೀಯರಿಗಿಂತ ಭಿನ್ನವಾದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಚಳಿ ಜಾಸ್ತಿಯಾದಂತೆ ಬೇಸಿಗೆಯಿರುವ ಉತ್ತರಗೋಳ ದೇಶಗಳಿಗೆ ಪ್ರವಾಸ ಹೋಗುವ ದಿಢೀರ್ ಕನಸು ಬಿದ್ದ ಜನರು ಬುಕಿಂಗ್ ಮಾಡಲು ಇಳಿದಾಗ ಜ್ಞಾನೋದಯವಾಯ್ತಂತೆ. ಹೋದ ತಿಂಗಳು ಪಾಸ್ ಪೋರ್ಟ್ ಪಡೆಯಲೊ ಇಲ್ಲಾ ನವೀಕರಿಸಿಕೊಳ್ಳಲೊ ಇದ್ದಕ್ಕಿದ್ದಂತೆ ಜನಜಂಗುಳಿಯಾಗಿತ್ತಂತೆ. ಇದೆಲ್ಲವೂ ಸರಿಯಿದ್ದ ಜನರಿಗೆ ಕೋವಿಡ್ ಕಾಟ ಇನ್ನೂ ತಪ್ಪಿಲ್ಲ. ತಾವು ಹೋಗುವ ದೇಶದ ಕೋವಿಡ್ ಸ್ಥಿತಿಗತಿ ಹೇಗಿದೆ ಎನ್ನುವ ಪ್ರಶ್ನೆಯೊಂದಲ್ಲದೆ ಇಲ್ಲಿಂದ ತಾವೇನು ರುಜುವಾತುಗಳನ್ನು ಒಯ್ಯಬೇಕು, ಅಲ್ಲಿಂದ ವಾಪಸ್ ದೇಶದೊಳಗೆ ಬರಬೇಕಾದರೆ ಪುನಃ ಯಾವ್ಯಾವ ಪರೀಕ್ಷೆ ಮಾಡಿಸಿಕೊಳ್ಳಬೇಕು, ಏನೇನು ಪುರಾವೆ ತರಬೇಕು ಅನ್ನುವ ಗೊಂದಲ. ಈ ಪ್ರಶ್ನೆಗಳನ್ನು ಕೇಳಲು ಮತ್ತೆ ಇಮಿಗ್ರೇಷನ್, ಬಾರ್ಡರ್ ಕಂಟ್ರೋಲ್ ಇತ್ಯಾದಿ ಇಲಾಖೆಗಳಿಗೆ ಫೋನ್ ಹಚ್ಚಬೇಕು. ಉತ್ತರ ಪಡೆಯಲು ತಾಸುಗಟ್ಟಲೆ ಕಾಯಬೇಕು, ಏಕೆಂದರೆ ಇಲಾಖೆಗಳ ವೆಬ್ಸೈಟುಗಳಲ್ಲಿ ಮೊಟ್ಟಮೊದಲು ಕಾಣಿಸುವುದೇ ‘ನಮ್ಮ ಇಲಾಖೆಗೆ ಅಧಿಕ ಒತ್ತಡವುಂಟಾಗಿದೆ. ನೀವು ಕಾಯಬೇಕಾದೀತು’ ಎನ್ನುವ ಹೇಳಿಕೆ. ವಾಟ್ಸಾಪ್, ಫೇಸ್ ಬುಕ್ ಸಾಮಾಜಿಕ ತಾಣಗಳಲ್ಲಿ ಅದೇ ಪ್ರಶ್ನೆಗಳನ್ನು ಕೇಳುವ ಜನರು ಕಡೆಗೆ ಯಾರನ್ನು, ಯಾವುದನ್ನು ನಂಬುವುದು ಎಂದು ತೋರದೆ ಪುನಃ ಅದೇ ಇಲಾಖೆಗಳಿಗೆ ಮೊರೆ ಹೋಗಬೇಕು. ಇದನ್ನೆಲ್ಲಾ ಹೇಳಿದ್ದು ನನ್ನ ಇಟಾಲಿಯನ್ ಸ್ನೇಹಿತೆ. ‘ಈ ಕೋವಿಡ್ ದೆಸೆಯಿಂದ ವಿಮಾನ ಪ್ರಯಾಣ ದರಗಳಲ್ಲಿ ಇನ್ನೂ ಏನೋ ಸ್ವಲ್ಪ ರಿಯಾಯತಿ ಇದೆಯೆಂದು ನಾವು ಬುಕಿಂಗ್ ಮಾಡಲು ಪ್ರಯತ್ನಿಸಿದರೆ ನೂರೆಂಟು ಸಣ್ಣಪುಟ್ಟ ಪ್ರಶ್ನೆಗಳಿಗೆ ಉತ್ತರಿಸಬೇಕು. ಬೇಸರವಾಗಿ ಇಲ್ಲೇ ಲೋಕಲ್ ಪ್ರವಾಸ ಹೊರಟಿದ್ದೀವಿ’, ಎಂದಾಕೆಗೆ ಟೆಂಟ್ ಸೈಟ್ ಕೂಡ ಸಿಕ್ಕದೆ ಹೋದ ನಿರಾಸೆಯೊಡನೆ ಸದ್ಯದಲ್ಲೇ ಸಾಕಾರಗೊಳ್ಳಲಿರುವ ನನ್ನ ತಿಮಿಂಗಿಲ ದರ್ಶನದ ಕನಸನ್ನು ಹೇಳಿಕೊಂಡು, ಇಬ್ಬರೂ ಸಮಾಧಾನಿಸಿಕೊಂಡೆವು.

ಮೂರು ವರ್ಷಗಳ ನಂತರ ಯೂರೋಪಿನ ತನ್ನ ತವರಿಗೆ ಹೊರಟಿದ್ದ ಪರಿಚಯದ ಒಬ್ಬ ಹುಡುಗಿ ಮತ್ತವಳ ಹೊಸ ಗಂಡ ಇಬ್ಬರೂ ಅಲ್ಲಲ್ಲಿ ಒಂದಷ್ಟು ದೇಶಗಳನ್ನು ಸುತ್ತಿಬರುವ ಹಂಬಲ ಹೊತ್ತು ತಯಾರಿ ನಡೆಸಿದ್ದರು. ಆದರೆ ಈ ಕೋವಿಡ್ ಪರೀಕ್ಷೆ, ಎಂಟ್ರಿ-ಎಕ್ಸಿಟ್ ಪುರಾವೆ ಪತ್ರಗಳು ಎಲ್ಲವನ್ನೂ ವಿಚಾರಿಸುತ್ತಾ ಕಡೆಕಡೆಗೆ ತಮ್ಮ ಪಟ್ಟಿಯಲ್ಲಿದ್ದ ಮೂರ್ನಾಕು ದೇಶಗಳನ್ನು ಹೊಡೆದುಹಾಕಿದ್ದರು. ಪರವಾಗಿಲ್ಲ, ಈ ಬಾರಿಯಷ್ಟೇ ನಿರಾಸೆ, ಮುಂದಿನ ಬಾರಿ ಹೋಗೆಹೋಗ್ತೀವಿ ಎಂದ ಹುಡುಗಿಯ ಆಶಾಭಾವ ಮೆಚ್ಚುಗೆಯಾಗಿತ್ತು. ಇಲ್ಲಿ ಅಲ್ಲಿ ಇರುವ ಈ ಪುಟ್ಟ ಪುಟ್ಟ ಕನಸುಗಳೇ ಮನುಷ್ಯ ಪ್ರಾಣಿಗಳಾದ ನಮ್ಮನ್ನು ಕಾಪಿಡುತ್ತಿರುವುದು ಎನ್ನಿಸಿ ಮನಸ್ಸು ಹಗುರವಾಯ್ತು.