ಚಿಕ್ಕಮಗಳೂರಿನಲ್ಲಿ  ಬಾಬಾಬುಡನ್ ಗಿರಿಗೆ ತೆರಳಿ ದತ್ತಪೀಠದ ದರ್ಶನ ಪಡೆಯುವುದೊಂದು ಪ್ರೀತಿಯ ವಿಚಾರ. ಆದರೆ ಜನಜಂಗುಳಿಯ ನಡುವೆ ಕಿರಿದಾದ ಹಾದಿಯಲ್ಲಿ ಒಂದೊಂದೇ ಹೆಜ್ಜೆಯಿಟ್ಟು ಹೋದ ಬಳಿಕ ಮನಸ್ಸು ಮುದುಡಿದಂತಾಯಿತು. ನಿರಾಳವಾದ ವಾತಾವರಣದಲ್ಲಿ ಈ ಪರಿಸರವನ್ನು ಕಣ್ತುಂಬಿಕೊಂಡ ಬಾಲ್ಯದ ಕ್ಷಣಗಳು ನೆನಪಾದವು.  ಅಲ್ಲಿಂದ ಕೋದಂಡ ರಾಮ ಸೀತಾದೇವಿ ಮತ್ತು ಲಕ್ಷ್ಮಣನೊಡನೆ ತ್ರಿಭಂಗಿಯಲ್ಲಿ ನಿಂತಿರುವ ದೇವಸ್ಥಾನಕ್ಕೆ ತೆರಳಿದಾಗ ಅಲ್ಲೊಂದು ಸುಂದರವಾದ ವಿವರಣೆ ಸಿಕ್ಕಿತು. ಇದೆಲ್ಲ ಬದುಕಿಗೆ ತೀರ ಹತ್ತಿರವಿದೆ  ಎಂದು ಅನಿಸಿತು. ಚಿಕ್ಕಮಗಳೂರು ಪ್ರವಾಸದ ನೆನಪುಗಳ ಬುತ್ತಿಯನ್ನು ಉಣಬಡಿಸಿದ್ದಾರೆ ಅಂಜಲಿ ರಾಮಣ್ಣ. ಇಂದಿನ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದ ಈ ಬರಹ ನಿಮಗಾಗಿ

ಚಿಕ್ಕಮಗಳೂರು ಪ್ರವೇಶಿಸಿದಾಗ ಧಗೆ. ಅರೆ , ನಮ್ಮ ಬೆಂಗಳೂರು ಐವತ್ತು ವರ್ಷಗಳಲ್ಲಿ ಕಾಣದ ಥಂಡಿ ಕಂಡು ಬೇಸಿಗೆಯ ಸೊಕ್ಕು ಮುರಿದಿತ್ತು. ದೇಶದಲ್ಲೆಲ್ಲಾ ಸೂರ್ಯ ನರ್ತನವಾಗುತ್ತಿರುವಾಗ ‘ಬನ್ನಿ ನನ್ನೆಡೆಗೆ’ ಎಂದು ತಂಪು ಕೊಡುತ್ತಿದ್ದಳು ಈ ಚಿಕ್ಕಮಗಳು, ಈಗ ಇವಳಿಗೇನಾಯಿತು ಎಂದುಕೊಳ್ಳುತ್ತಲೇ ಊರು ಸುತ್ತುತ್ತಿದ್ದೆ. ಎಲ್ಲೆಲ್ಲೂ ಪಾನೀಪುರಿ ಭಯ್ಯಾಗಳು ಪಾನಿಯೊಳಗೆ ಕೈ ಲೊಳಚುತ್ತಿದ್ದರು. ಮಾರ್ವಾಡಿಗಳು ಅಂಗಡಿ ಸಾಲುಗಳಲ್ಲಿ ಗಲ್ಲಾಪೆಟ್ಟಿಗೆ ಏರಿದ್ದರು. ಉತ್ತರಧ್ರುವದಿಂದ ಬಂದ ಯೌವ್ವನದ ದಂಡು ಕಾಲೇಜು ಮೆಟ್ಟಲು ಹತ್ತಲು ಓಡಾಡುತ್ತಿತ್ತು. ‘ರಾಜ ಭೋಜನ ’ ನಾರ್ತ್ ಇಂಡಿಯನ್ ಮತ್ತು ಆಂಧ್ರ ಸ್ಟೈಲ್ ಊಟ ಎಂದು ಬೋರ್ಡು ಹಾಕಿಕೊಂಡು ಜನರಿಂದ ತುಂಬಿ ಮೆಟ್ಟಿಲ ಕೆಳಗೆ ತುಳುಕುತ್ತಿತ್ತು. ‘ರೈಸಿಂಗ್ ಕಾಫಿ’ಯ ಮಾಲೀಕ ಸುಂಟಿಕೊಪ್ಪದ ಕೊಡವ. ಫಿಲ್ಟರ್ ಕಾಫಿ ಮಾರಿ ಮಾರೀ ಮಾರುತ್ತಿದ್ದರೆ, ಪಕ್ಕದಲ್ಲೇ “ವಿಷ್ಣು ಭವನದಲ್ಲಿ” ಮತ್ತದೇ ಜನ ಊಟಕ್ಕಾಗಿ ಹೋರಾಟವೇ ನಡೆಸುತ್ತಿದ್ದರು. ಬೋಳರಾಮಲಿಂಗೇಶ್ವರನ ದೇವಸ್ಥಾನದ ರಸ್ತೆಯ ಈ ಸೊಗಸನ್ನು ನೋಡಿದ್ದಾಯ್ತು. ಶೆಖೆ, ಶೆಖೆ ಮತ್ತು ಶೆಖೆ!

ಊರಿಗೊಬ್ಬಳೇ ಪದ್ಮಾವತಿಯಂತೆ ಎಲ್ಲಾ ಊರಿನಲ್ಲೂ ಇದ್ದೇ ಇರುತ್ತಲ್ಲ ಎಂಜಿ ರಸ್ತೆ, ಅದಕ್ಕೇ ಇಲ್ಲೂ ಇದೆ. ಏಕಮುಖದಲ್ಲಿ ಮಹಾತ್ಮ ಗಾಂಧಿಯ ಪಥ ತುಳಿದರೆ ಹಿಂಬರುವುದು ಏಕಮುಖ ಸಂಚಾರದಲ್ಲಿ ಇಂದಿರಾ ಗಾಂಧಿ ರಸ್ತೆಯಲ್ಲಿ. ಹತ್ತಾರು ಕಾಫೀಪುಡಿ ಮಾರುವ ಮಳಿಗೆಗಳ ಘಮಘಮ. ನಾ ಹೊಕ್ಕಿದ್ದು ಪಾಂಡುರಂಗ ಕಾಫೀ ಅಂಗಡಿ. ಫಳಫಳ ಹೊಳೆಯವ ಕಟ್ಟಡ, ಎಲ್ಲಾ ವಿಧದ ಕಾಫೀ ಪುಡಿ, ಚಹ ಪೌಡರ್, ಏಲಕ್ಕಿ, ಮೆಣಸು ಪ್ಯಾಕೇಟುಗಳು, ಅವುಗಳ ಬಗ್ಗೆ ವಿವರಣೆ ಕೊಡುವ, ಒಂದೇ ಬಣ್ಣದ ಸೀರೆಯುಟ್ಟ ನಾರಿಯರು. ಕಾಫೀ ಪ್ರಿಯರು ಗೂಗಲ್ ಪೇ, ಪೇಟಿಎಂ, ಕ್ರೆಡಿಟ್ಟು-ಡೆಬಿಟ್ಟು ಕಾರ್ಡುಗಳು ಇಂಥವುಗಳನ್ನು ಇಟ್ಟುಕೊಂಡಿದ್ದರೆ ಸಾಕು ಬ್ಯಾಗು ಭರ್ತೀಭರ್ತಿ ಆಗತ್ತೆ. ರುಚಿ ನೋಡಿಯೇ ಕೊಂಡುಕೊಳ್ಳಬೇಕು ಎನ್ನುವ ನನ್ನಂಥ ಅಲ್ಪಮತಿಗಳಿಗೆ ಎದುರುಗಡೆ ’ನಮ್ಮೂರ ಕಾಫೀ’ ಎಂದು ಬೋರ್ಡ್ ಹೊತ್ತ ಅಂಗಡಿ, ಇವರದ್ದೇ ಪುಡಿ ಉಪಯೋಗಿಸಿ ಬಿಸಿಬಿಸಿ ಕಾಫೀ ಮಾಡಿಕೊಡುತ್ತದೆ. ಬೆವರು ಸುರಿಯುತ್ತಿದ್ದರೂ ಹಿತವೆನಿಸಿದ್ದು ಅಲ್ಲಿ ಕುಡಿದ ಫಿಲ್ಟರ್ ಕಾಫಿ.

ಅಲ್ಲಿಂದ ಹಿಂದಿರುಗಿದ್ದು ರಿಕ್ಷಾದಲ್ಲಿ. ಒಂದೆರಡು ಸಂಧಿ ರಸ್ತೆಗಳಲ್ಲಿ ಬಂದವನನ್ನು “ಮೇನ್ ರೋಡಿನಲ್ಲಿ ಬರಬಹುದ್ದಿತ್ತಲ್ಲ” ಎಂದಿದ್ದಕ್ಕೆ “ಅಯ್ಯೋ ಚಿಕ್ಕಮಗಳೂರಿನಲ್ಲಿ ಇಷ್ಟೇ ರಸ್ತೆಗಳು ಇರೋದು ಮೇಡಂ. ಇಂಪ್ರೂವ್‍ಮೆಂಟ್ ಏನಿಲ್ಲ” ಅಂದ. ಆಟೋ ಚಾಲಕರು ಹೇಳಿದರು ಅಂದರೆ ಮುಗೀತಲ್ಲ ಇಂಪ್ರೂವ್‍ಮೆಂಟಿನ ವ್ಯಾಖ್ಯಾನ! ಮೀಟರ್ ಇಲ್ಲದ ಆಟೋ ನೋಡಿ ಅದರ ಬಗ್ಗೆ ಕೇಳಿದ್ದಕ್ಕೆ, “ಇಲ್ಲಿ ಮೀಟರ್ ಇಲ್ಲ ಮೇಡಂ, ಮಿನಿಮಮ್ 40 ರೂಪಾಯಿ. ಚಿಕ್ಕ ಊರು ಒಂದು ಅಂದಾಜಿನ ಮೇಲೆ ದುಡ್ಡು ತೊಗೋತೀವಿ” ಎಂದು ಅರ್ಧ ಮುಕ್ಕಾಲು ಕಿಲೋಮೀಟರ‍್ನಲ್ಲಿ ಇಳಿಸಿ 50 ರೂಪಾಯಿ ತೆಗೆದುಕೊಂಡು ಹೊರಟುಹೋದ.

ಜಿಲ್ಲಾ ಪಂಚಾಯ್ತಿ ಕಚೇರಿಯ ಹಿಂಭಾಗದಲ್ಲಿ ಕಾಫೀ ಮ್ಯೂಸಿಯಮ್ ಇದೆ ಎಂದು ಗೊತ್ತಿತ್ತು. ಸಂಜೆ 7ರವರೆಗೂ ತೆಗೆದಿರುತ್ತದೆ ಎನ್ನುವ ಮಾಹಿತಿಯೂ ಇತ್ತು. ಸರಿ ಸ್ವಲ್ಪ ಬಿಸಿಲು ಕಡಿಮೆಯಾದ ನಂತರ ಹೋಗೋಣ ಎಂದುಕೊಂಡಿದ್ದೆ. ಆದರೆ ಅಲ್ಲಿನ ಜನರೇ ಅಷ್ಟು ಹುಮ್ಮಸ್ಸು ಕೊಡಲಿಲ್ಲ.

ಏಸಿ ಇಲ್ಲದೆ ಇರಲು ಆಗುವುದೇ ಇಲ್ಲ ಎಂದುಕೊಂಡು ಮಲಗಿದ್ದ ರಾತ್ರಿ ಬೆಳಕು ಕಂಡಾಗ ಮೋಡ ಮುಸುಕಿತ್ತು. ಅಬ್ಬ, ಈ ದಿನ ಬಿಸಿಲು ಕಡಿಮೆ ಇರುತ್ತದೆ ಎಂದುಕೊಂಡು ಕೇವಲ 32 ಕಿಲೋಮೀಟರ‍್ಗಳಷ್ಟು ದೂರದಲ್ಲಿ ಇರುವ ಬಾಬಾಬುಡನ್ ಗಿರಿ ನೋಡಿ ಬರೋಣ ಎಂದು ಹೊರಟೆ. ಆ ಜಾಗದ ಬಗೆಗಿನ ಭೂಗೋಳ, ರಾಜಕೀಯ, ನಂಬಿಕೆ, ಪ್ರವಾಸೀ ಆಕರ್ಷಣೆ ಎಲ್ಲದರ ಬಗ್ಗೆ ಗೂಗಲ್ ಸಾಕುಸಾಕಾಗುವಷ್ಟು ಮಾಹಿತಿ ಕೊಡುತ್ತದೆ. ಕರ್ನಾಟಕದ ಎರಡನೆಯ ಎತ್ತರದ ಶಿಖರವನ್ನು 45 ನಿಮಿಷಗಳಲ್ಲಿ ಮುಟ್ಟಿದ್ದಾಯ್ತು. ತುದಿ ತಲುಪುವ ವೇಳೆಗೆ ಮೋಡ ಕೈಗೆ ಸಿಗುವಂತಿತ್ತು. ಆದರೆ ಅಲ್ಲಿದ ಜನಗಳ ದೊಂಬಿ ಕೈಮೇಲೆತ್ತಲು ಅನುವು ಮಾಡಿಕೊಡುವಂತಿದ್ದರೆ ತಾನೆ?!

ಬಾಲ್ಯದಿಂದ ಈವರೆಗೂ ಈ ಜಾಗಕ್ಕೆ ಇದು ನನ್ನ ನಾಲ್ಕನೆಯ ಭೇಟಿ. ಉಹುಂ, ಇಲ್ಲಿ ಯಾವುದೂ ಮೊದಲಿನಂತಿಲ್ಲ, ನೆಮ್ಮದಿಯಾಗಿಯೂ ಇಲ್ಲ. ಅಲ್ಲಿದ್ದವರೆಲ್ಲಾ ಯಾರದೋ ಮಾತನ್ನು ಉಳಿಸಿಕೊಡಲು ಅಲ್ಲಿಗೆ ಧಾಂಗುಡಿ ಇಟ್ಟಂತೆ ಕಾಣುತ್ತಿತ್ತು. ಬಾಬಾಬುಡನ್ , ದತ್ತಾತ್ರೇಯ ಇಬ್ಬರೂ ಅಲ್ಲಿ ಅಪರಿಚಿತರಂತೆ ಕಾಣುತ್ತಿದ್ದರು. ಬುರ್ಖಾ, ಹಿಜಾಬ್ ಇಲ್ಲದ ಹೆಂಗಸರು ಉದ್ದುದ್ದ ಮಲ್ಲಿಗೆ ಮುಡಿದು ಅಲ್ಲಲ್ಲೇ ಒಲೆ ಹಚ್ಚಿ ಅಲ್ಯೂಮಿನಿಯಂ ಡಬರಿಗಳಲ್ಲಿ ಅಡುಗೆ ಮಾಡುತ್ತಿದ್ದರು. ಮೆಟಡೋರ‍್ಗಳ ಸುತ್ತಾ ಟೋಪಿ ಗಂಡಸರು ಮಾತನಾಡುತ್ತಾ ನಿಂತಿದ್ದರು. ಪಿಳ್ಳೆಗಳು ಕುಯೋ ಮುರ್ರೋ ಅಂತ ಕೈಗೊಂದು ಕಾಲಿಗೊಂದು ಆಟ ಆಡುತ್ತಿದ್ದವು. ಸಂಖ್ಯೆಯಲ್ಲಿ ಇವರನೆಲ್ಲಾ ಮೀರಿಸಿದ್ದರು ಪೋಲೀಸರು.

ಬಾಬಾಬುಡನ್ ಗಿರಿ ಬಗೆಗಿನ ಭೂಗೋಳ, ರಾಜಕೀಯ, ನಂಬಿಕೆ, ಪ್ರವಾಸೀ ಆಕರ್ಷಣೆ ಎಲ್ಲದರ ಬಗ್ಗೆ ಗೂಗಲ್ ಸಾಕುಸಾಕಾಗುವಷ್ಟು ಮಾಹಿತಿ ಕೊಡುತ್ತದೆ. ಕರ್ನಾಟಕದ ಎರಡನೆಯ ಎತ್ತರದ ಶಿಖರವನ್ನು 45 ನಿಮಿಷಗಳಲ್ಲಿ ಮುಟ್ಟಿದ್ದಾಯ್ತು. ತುದಿ ತಲುಪುವ ವೇಳೆಗೆ ಮೋಡ ಕೈಗೆ ಸಿಗುವಂತಿತ್ತು. ಆದರೆ ಅಲ್ಲಿದ ಜನಗಳ ದೊಂಬಿ ಕೈಮೇಲೆತ್ತಲು ಅನುವು ಮಾಡಿಕೊಡುವಂತಿದ್ದರೆ ತಾನೆ?!

ದತ್ತಪೀಠದ ನೇರಕ್ಕೇ ಎದುರಿಗಿರುವ ಪೋಲಿಸ್ ಠಾಣೆಯ ಹೆಸರಿನ ಫಲಕದಲ್ಲಿ ಇಮಾಮ್ ಶ್ರೀ ದತ್ತಾತ್ರೇಯ ಸ್ವಾಮಿ ದರ್ಗಾ ಎನ್ನುವ ಸಾಲಿನ ಕೆಳಗೆ ಬಾಬಾಬುಡನ್ (ಅದಿನ್ನೇನೋ) ಪೀಠ ಎಂದು ಬರೆಯಲಾಗಿದೆ. ಎರಡೂ ಸಾಲುಗಳೂ ಪರಸ್ಪರ ವೈರುಧ್ಯ ದಿಂದ ಇವೆ. ಫೋಟೋ ತೆಗೆಯಲು ಆಗಲಿಲ್ಲ. ಅಲ್ಲಿದ್ದ ಪೋಲಿಸರನ್ನು ನೋಡುವಾಗ ಅನ್ನಿಸಿದ್ದು, ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿರುತ್ತಾರಲ್ಲ ಆ ಆಶ್ವಾಸನೆಯನ್ನು ನೆರವೇರಿಸಲು ಇಂತಹ ವಾತಾವರಣ ಸೃಷ್ಟಿಸಿ ಪೋಲಿಸ್ ಕೆಲಸ ನೀಡುತ್ತಾರೇನೋ! ಸಮಸ್ಯೆಗೆ ಪರಿಹಾರ ಗೊತ್ತಿದ್ದರೂ ನರಬಲವಿಲ್ಲದ ವ್ಯವಸ್ಥೆಯಲ್ಲಿ ಎಷ್ಟು ಮಾನವ ಸಂಪನ್ಮೂಲ ಮಾತ್ರವಲ್ಲ ನೆಮ್ಮದಿಯೂ ಹಾಳು ಎಂದುಕೊಳ್ಳುತ್ತಾ ಒಳಗೆ ಹೋಗಲು ಶುರುವಿಟ್ಟೆ.

ದತ್ತಪೀಠದ ಗುಹೆಗೆ ಹೋಗಲು ಈ ಭುಜದಿಂದ ಆ ಭುಜದವರೆಗೆ ಮಾತ್ರ ಅಳತೆ ಇರುವಷ್ಟು ದೊಡ್ಡಗಾತ್ರದ ತಂತಿ, ರಾಡ್‍ಗಳನ್ನು ಬಳಸಿ ಬೋನಿನಂತಹ ಬೇಲಿ ಹಾಕಿದ್ದಾರೆ. ಒಬ್ಬರ ಹಿಂದೆ ಒಬ್ಬರು ಯಾವುದೇ ಆತಂಕದಲ್ಲಿ ಮೆಟ್ಟಿಲು ಇಳಿದು ಬಿಡಬೇಕು ಅಷ್ಟೇ. ಒಂದಷ್ಟೇ ಮೆಟ್ಟಿಲುಗಳನ್ನು ಇಳಿದು ಬಂದವರೆಲ್ಲಾ ಕಾಲುತೊಳೆದುಕೊಂಡು ರಂಪವಾಗಿ ಕೊಚಕೊಚ ಎನ್ನುತ್ತಿದ್ದ ನೆಲದಲ್ಲಿ ಜಾರದೆ ಬಿಗಿಯಾಗಿ ಹೆಜ್ಜೆಯೂರುತ್ತಾ, ತಲೆತಗ್ಗಿಸಿ ಗುಹೆಯೊಳಗೆ ಹೋಗಬೇಕು. ಅಲ್ಲಿ ಯಾರಿಗೂ ಒಮ್ಮೆಗೆ ಕಾಣದೊಂದು ಮೂಲೆಯಲ್ಲಿ ದತ್ತ ಪಾದುಕೆ ಇರುವ ವಿಷಯ ಬಹುಪಾಲು ಹಿಂದೂಗಳಿಗೆ ಗೊತ್ತಿರಲಿಲ್ಲ. ತುಂಬಾ ಜನದ ಜೊತೆ ಮಾತನಾಡಿದೆ. ಕುರಿಗಳ ಹಾಗೆ ಒಬ್ಬರ ಹಿಂದೆ ಒಬ್ಬರು ಮುಂದಿರುವ ಒಂದೆರಡು ‘ಗೋರಿ’ ಗಳಿಗೆ ನಮಸ್ಕಾರ ಮಾಡುತ್ತಿದ್ದರು.

ಒಬ್ಬ ಗಡ್ಡಧಾರಿ ಬೇಗ ಹೋಗಿ ಬೇಗ ಎಂದು ಅವರುಗಳನ್ನು ದಬ್ಬುತ್ತಿದ್ದರೆ, ಪಾದುಕೆ ಇರಿಸಿರುವ ಕೋಣೆಯ ತಿರುವಿನಲ್ಲಿ ಇನ್ನೊಬ್ಬ ಗಡ್ಡಧಾರಿ ಅಲ್ಲೇ ಇದ್ದ ನಲ್ಲಿಯ ಕೆಳಗೆ ಇಟ್ಟಿದ್ದ ದೊಡ್ಡ ಡ್ರಮ್ ನಿಂದ ಒಂದು ಸ್ಟೀಲ್ ಜಗ್ಗಿನಿಂದ ನೀರು ತುಂಬಿಸಿ ತೀರ್ಥದಂತೆ ಇವರುಗಳ ಕೈಗೆ ಹುಯ್ಯುತ್ತಿದ್ದರೆ, ಇವರುಗಳು ಕುಡಿಯುತ್ತಿದ್ದರು.

ದೇವಿ ಅಷ್ಟೋತ್ತರದ ರಾಗದಲ್ಲಿ ನನಗೆ ಅರ್ಥವಾಗದ ಭಾಷೆಯಲ್ಲಿ ಅದೇನೋ ಮಣಮಣವೂ ತೂರಿ ಬರುತ್ತಿತ್ತು ಅದೇ ಗಡ್ಡದ ಮನುಷ್ಯನಿಂದ. ಒಂದಿಬ್ಬರಿಗೆ ನಾನೇ “ಅಲ್ಲಿದೆ ನೋಡಿ ಗುರುಗಳ ಪಾದುಕೆ” ಎಂದು ಹೇಳಿ ತೋರಿಸಿದೆ. ಆದರೆ ಬಾಲ್ಯದಲ್ಲಿ ಇವರುಗಳು ಅಲ್ಲಿರುತ್ತಿರಲಿಲ್ಲ. ಒಬ್ಬ ಪುರೋಹಿತರು ಇರುತ್ತಿದ್ದರು. ಅವರು ದತ್ತ ಪೀಠಕ್ಕೆ ಪೂಜೆ ಮಾಡುತ್ತಿದ್ದರು. ಕೆಮ್ಮಣ್ಣು ಮುಚ್ಚಿಕೊಂಡು ಹಸಿರು ಬಟ್ಟೆ ಹೊದ್ದ ದರ್ಗಾವನ್ನು ದಾಟಿ ಹೋಗುವಾಗ ಹಸಿರು ಶಾಲು ಹೊದ್ದ ಮನುಷ್ಯ ನವಿಲುಗರಿಯ ಗುಚ್ಛವನ್ನು ತಲೆಗೆ ತಾಗಿಸುತ್ತಿದ್ದರು ಅಷ್ಟೇ. ಇವತ್ತು ಅದೇ ದರ್ಗಾಕ್ಕೆ ನೂರು ಕೇಜಿ ಅಳತೆಯ ಮಲ್ಲಿಗೆಯ ಹೂವಿನ ಚಾದರ, ನಡುನಡುವೆ ಇಣುಕುವ ನೂರಿನ್ನೂರು ಕೆಂಪು ಗುಲಾಬಿ ಹೂವುಗಳು.

ದರ್ಗಾ ಭಕ್ತರು ಒಂದು ಕಡೆ ಮೆಟ್ಟಲಿನ ಮಣ್ಣು ಕಿತ್ತುಕೊಂಡು ಪ್ಲಾಸ್ಟಿಕ್ ಕವರಿಗೆ ಹಾಕಿಕೊಳ್ಳುತ್ತಿದ್ದರು. ನಮ್ಮಲ್ಲಿ ಮೃತ್ತಿಕೆಯನ್ನು ನಂಬಿ ಬಳಸುತ್ತೇವಲ್ಲ ಹಾಗಂತೆ. ಆದ್ರೆ ಇದು ಎಲ್ಲರೂ ಓಡಾಡಿ ತುಳಿದ ಕೊಚ್ಚೆ. ಈ ಬಾರಿ ನನಗೆ ’ನಂಬಿಕೆಯೇ ದೇವರು’ ಎಂದುಕೊಳ್ಳುವಷ್ಟು ವಿಶಾಲ ಭಾವ ಬರಲಿಲ್ಲ ಬದಲಿಗೆ ಅಸಹ್ಯ ಎನಿಸಿತು.

ದ್ವೇಷ ರಕ್ತದಲ್ಲಿ ಇಲ್ಲ. ಜಗಳ, ವಾದ, ಗುದ್ದಾಟ ಗಂಧದವರೊಡನೆ ಮಾತ್ರ ಇರುವ ನನಗೆ Only Change is Permanent ಎನ್ನುವ ತತ್ವದ ಅರಿವೂ ಇದೆ. ಅದೆಷ್ಟು one sided ಬದಲಾವಣೆ ಆಗಿಬಿಟ್ಟಿದೆ ಇಲ್ಲಿ. ಬಾಲ್ಯದಿಂದಲೂ ಬಯಲಿನ ಹಸಿರಿನಲ್ಲಿ ವಿಶಾಲ ಆಗಸದ ಕೆಳಗೆ, ಯಾವ ಬೇಲಿ-ಜಾಲಿಗಳ ಹಂಗಿಲ್ಲದೆ ಗುಹೆಯೊಳಗೆ ಹರಸುತ್ತಿದ್ದ ದತ್ತ ಗುರುವಿನ ಪೀಠ ಈಗ ಮೂಲೆ ಸೇರಿದೆ. ಯಾಕೆ ಹೀಗಾಯ್ತು? ಈ ಭಕ್ತರುಗಳು, ಬಂದೇನವಾಜರು ಯಾವಾಗ ಯಾಕಾಗಿ ಇಷ್ಟೊಂದು ಸಂಖ್ಯೆಯಲ್ಲಿ ಹುಟ್ಟಿಕೊಂಡರು ಅಥವಾ ಇವರನ್ನು ಯಾರು ಹುಟ್ಟಿಹಾಕಿದರು?!

ಈ ಬಾರಿ ಒಂದೇ ದಿನ 15 ನಿಮಿಷಗಳ ವ್ಯತ್ಯಾಸದಲ್ಲಿ ಎರಡು ದರ್ಶನ ಪಡೆದೆ. ಎರಡನೆಯ ಬಾರಿ ಹೋದಾಗ ಒಳಗೆ ಒಬ್ಬ ಸರ್ಕಾರಿ ಅಧಿಕಾರಿ ಬಿಟ್ಟು ಯಾರೂ ಇರಲಿಲ್ಲ. ಅಲ್ಲಿದ್ದ ಮುಲ್ಲಾಗಳೂ ಇರಲಿಲ್ಲ. ದತ್ತ ಪಾದುಕೆಯ ಮುಂದೆ ಎರಡು ಬೆಳ್ಳಿಕಂಬಗಳಲ್ಲಿ ದೀಪ ಉರಿಯುತ್ತಿತ್ತು. ಆತ ಹೇಳಿದ್ದು “ಈಗ ಭಜರಂಗ ದಳದವರು ಹುಣ್ಣಿಮೆ ಪೂಜೆ ಮಾಡಲು ಬರುತ್ತಿದ್ದಾರೆ. ಅದಕ್ಕೇ ಸಾರ್ವಜನಿಕರನ್ನು (ಆತ ಇಷ್ಟು ಸಭ್ಯ ಪದ ಬಳಸಲಿಲ್ಲ) ತೆರವು ಮಾಡಲಾಗಿದೆ”. ಹೊರಗೆ ಬಂದಾಗ ದರ್ಗಾಭಕ್ತರು ಯಾರೂ ಇರಲಿಲ್ಲ. ಒಲೆ, ಸೌದೆ, ಉರಿ, ಡಬರಿ ಎಲ್ಲವೂ ಖಾಲಿಯಾಗಿತ್ತು. ಪೊಲೀಸರು ಚುರುಕಾಗುತ್ತಿದ್ದರು. ಒಂದಿಬ್ಬರು ಭಜರಂಗ ಕಾರ್ಯಕರ್ತರು ಬಂದು ಇಳಿಯುತ್ತಿದ್ದರು. ಬಾಕಿಯವರೂ ಬರುತ್ತಿದ್ದಾರೆ ಎಂದು ತಿಳಿಸಿದರು. “ಈ ದಿನವಾದರೂ ದತ್ತಾತ್ರೇಯ ಗುರುಗಳು ಉಸಿರಾಡಲಿ, ಪೂಜೆ ಸಲ್ಲಲಿ” ಎನ್ನಿಸಿದಂತೂ ಸತ್ಯ.

ಎಲ್ಲಾ ಬದಲಾವಣೆಗಳೂ ಬೆಳವಣಿಗೆ ಅಲ್ಲ ಎನ್ನುವ ಪಾಠದೊಂದಿಗೆ ಕೆಳಗಿಳಿದು ಬರುವಷ್ಟರಲ್ಲಿ ಚಿಕ್ಕಮಗಳು ಮಳೆಯ ಸಿಂಚನದಿಂದ ಒದ್ದೆಯಾಗಿದ್ದಳು. ಥಣ್ಣಗೆ, ಸಣ್ಣಗೆ ಹಾಡುತ್ತಿದ್ದಳು ’ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ. . .ಸಕ್ಕರೆಯ ಮಾತು ಹೇಳ್ತೀನಿ ಮೆಲ್ಲಗೆ’ ಓಹೋ, ನೆನ್ನೆಯ ಬಿಸಿ ತಾಗಿ ಇಂದಿಗೆ ಸ್ವೆಟರ್ ಬೇಡ ಎಂದುಕೊಂಡಿದ್ದು ತಪ್ಪಾಯ್ತಲ್ಲ ಎಂದು ಲೆಕ್ಕಾಚಾರ ಹಾಕುತ್ತಲೇ ಕೋಣೆಯ ಚಿಲಕ ಹಾಕಿಕೊಂಡೆ.

ಹೂಂ, ನಿಮಗೆ ಗೊತ್ತಾ? ಚಿಕ್ಕಮಗಳೂರಿನಿಂದ ಇಪ್ಪತ್ತೇ ನಿಮಿಷದ ದೂರದಲ್ಲಿ ಕೋದಂಡರಾಮ ತ್ರಿಭಂಗಿಯಲ್ಲಿ ನಿಂತಿದ್ದಾನೆ, ಲಕ್ಷ್ಮಣ ಸೀತೆಯರೊಂದಿಗೆ. ಈ ಮೂವರಿಗೂ ಇಲ್ಲಿ 1200 ವರ್ಷಗಳಂತೆ. ಡಾ.ವೈಷ್ಣವ ಸಿಂಹ ವಿವರಣೆ ನೀಡುತ್ತಾರೆ ಅಂದಮೇಲೆ ಸೀತಾ ರಾಮಮರನ್ನು ಕಾಣದೆ ಕೆಂಪೇಗೌಡನೂರಿಗೆ ಬರಲಾದೀತೇ?! ಹೌದು, ಇದು ಹಿರೇಮಗಳೂರು. ಮರೆಯುವ ಮುನ್ನ ಹೇಳಲೇಬೇಕು ನಾನು ಕಣ್ಣನ್ ಮಾಮ ಅವರನ್ನು ಭೇಟಿ ಆಗಲಿಲ್ಲ.

ಶಿವಧನಸ್ಸನು ಹೆದೆಯೇರಿಸಿದ ಮಿಥಿಲಾ ಪುರಜನ ಮೋದದ ರಾಮ ಸೀತಾಕಲ್ಯಾಣ ಹೊಂದಿ ಲಕ್ಷ್ಮಣನೊಂದಿಗೆ ವಿನೋದದಿಂದ ಆಯೋಧ್ಯೆಯ ಕಡೆಗೆ ಹೊರಟ್ಟಿದ್ದನಂತೆ. ಚಿರಂಜೀವಿ ಪರಶುರಾಮರು,  ರಾಮನು ಶಿವಧನಸ್ಸು ಮುರಿದ ಕ್ಷತ್ರಿಯ ಎಂದರೆ ಅವನು ಲೋಕಕಲ್ಯಾಣ ಮಾಡುವನೇ ಎನ್ನುವ ಅನುಮಾನದಲ್ಲಿ ಸೀತಾರಾಮನನ್ನು ಅಡ್ಡಗಟ್ಟುತ್ತಾರಂತೆ. ಮಾತಿಗೆ ಮಾತು ಬೆಳೆಸಿದ ಪರಶುರಾಮರು ವಿಷ್ಣುಧನಸ್ಸನ್ನು ರಾಮನ ಮುಂದಿರಿಸಿ ಹೆದೆಯೇರಿಸು ಎನ್ನುವ ಪಂಥಾಹ್ವಾನ ಕೊಟ್ಟರಂತೆ. ರಾಮನು ಸಹಜವೇ ಎನ್ನುವಂತೆ ವಿಷ್ಣುಧನಸ್ಸನ್ನು ಭಿನ್ನಗೊಳಿಸಿಯೂ ಬಾಣ ತೂರದೆ “ನೀವು ಬ್ರಾಹ್ಮಣರು ನಿಮ್ಮ ಮೇಲೆ ಯುದ್ಧ ಹೂಡಲಾರೆ” ಎಂದು ನಮಸ್ಕರಿಸಿದನಂತೆ. ಇದರಿಂದ ರಾಮನ ಗುಣಸ್ವಭಾವದ ಮೇಲೆ ವಿಶ್ವಾಸಗಳಿಸಿದ ಪರಶುರಾಮರು “ನೀನು ಲೋಕಕಲ್ಯಾಣಕ್ಕೆ ಬಂದ ಪರಮಾತ್ಮನೇ ಹೌದು. ಇನ್ನು ನಾನು ಯಾವುದೇ ಕಾರಣಕ್ಕೂ ಶಸ್ತ್ರಾಸ್ತ್ರ ಮುಟ್ಟಲಾರೆ” ಎನ್ನುವ ಪ್ರತಿಜ್ಞೆ ಮಾಡಿದರಂತೆ.

“ರಾಮ ನಿನ್ನ ಮದುವೆಗೆ ನಾನು ಬಂದಿರಲಿಲ್ಲ. ಆದರೆ ಅದನ್ನು ನೋಡಲು ನನಗೆ ಇಂಗಿತವಿದೆ, ತೋರಿಸು” ಎನ್ನುವ ಕೋರಿಕೆಯನ್ನು ಪರಶುರಾಮರು ಮುಂದಿಟ್ಟಾಗ ರಾಮನು ಸೀತೆಯನ್ನು ಬಲಗಡೆಗೆ ನಿಲ್ಲಿಸಿಕೊಂಡು, ಲಕ್ಷ್ಮಣನನ್ನು ಎಡ ಭಾಗದಲ್ಲಿ ನಿಲ್ಲಿಸಿಕೊಂಡು, ಈ ರೀತಿ ದರ್ಶನ ಕೊಟ್ಟನಂತೆ. ಶ್ರೀರಾಮನು ಸಂತಸದ ಮನೋಭಾವದಲ್ಲಿ ಇದ್ದುದ್ದರಿಂದ ತ್ರಿಭಂಗಿಯಲ್ಲಿ ನಿಂತನಂತೆ. ಇಲ್ಲಿ ಸೀತೆಯು ತನ್ನ ಬಲಗೈಯಲ್ಲಿ ಕರವಸ್ತ್ರವನ್ನು ಎಡಗೈಯಲ್ಲಿ ಹೂಗುಚ್ಛವನ್ನು ಹಿಡಿದಿದ್ದಾಳೆ.

ಅವರುಗಳಿಗೆ ಹನುಮಂತನ ಭೇಟಿ ಇನ್ನೂ ಆಗಿರಲಿಲ್ಲವಾದ್ದರಿಂದ ಇಲ್ಲಿ ಅವನು ಇವರೊಡನೆ ಇಲ್ಲ. ಆದರೆ ಶ್ರೀರಾಮನ ಚರಿತ್ರೆಗೆ ಹನುಮನೇ ಆಧಾರವಾದ್ದರಿಂದ ಮೂರ್ತಿಗಳ ತಳಭಾಗದಲ್ಲಿ ಹನುಮನ ಚಿತ್ರವನ್ನು ಕೆತ್ತಾಲಾಗಿದೆ. 4 ಅಡಿಗಳಷ್ಟು ಎತ್ತರವಿರುವ ಸೀತೆ, ರಾಮ, ಲಕ್ಷ್ಮಣರು ತೆಳುನಗುವಿನ ಮುಖಭಾವ ಹೊಂದಿ, ಪಾದಗಳನ್ನು ಲಂಬಕೋನ ತ್ರಿಭುಜಾಕಾರದಲ್ಲಿಇರಿಸಿಕೊಂಡಿದ್ದಾರೆ. ಹರಿತವಾದ ಮೂಗು, ಗಲ್ಲ, ಪ್ರೀತಿಯುಕ್ಕುತ್ತಿರುವ ಕಣ್ಣುಗಳು ಬಲು ಆಕರ್ಷಣೀಯವಾಗಿವೆ. ಚಾಳುಕ್ಯರಿಂದ ಗರ್ಭಗುಡಿಯ ನಿರ್ಮಾಣ ಆಗಿದ್ದರೆ ಹೊಯ್ಸಳರು ಪ್ರಾಂಗಣ ಕಟ್ಟಿಸಿರುತ್ತಾರೆ. ಹಾಗಾಗಿ ಎರಡೂ ಶೈಲಿಯ ಸೌಂದರ್ಯ ಇಲ್ಲಿದೆ.

ಡಾ.ವೈಷ್ಣವ ಸಿಂಹ ಹೇಳುತ್ತಿದ್ದರು ಬೇರೆ ಯಾವುದೇ ದೇವರ ದೇವಸ್ಥಾನಗಳಲ್ಲೂ ಹೆಣ್ಣು ದೇವರ ಗುಡಿ ಪ್ರತ್ಯೇಕವಾಗಿ ಇರುತ್ತದೆ. ಆದರೆ ಜಗತ್ತಿನಾಂದ್ಯಂತ ರಾಮನೊಬ್ಬನೇ ತನ್ನ ಪತ್ನೀಸಹಿತನಾಗಿ ಒಂದೇ ಗುಡಿಯಲ್ಲಿ ದರ್ಶನ ಕೊಡುವವನು. ಲಕ್ಷ್ಮಣ ಸೀತೆಯರಿಲ್ಲದ ತನ್ನದು ಏನೂ ಸಾಧನೆ ಅಲ್ಲ ಅದಕ್ಕೇ ಅವರಿಗೆ ಸಮಾನವಾಗಿ ಪೂಜೆ ದಕ್ಕಬೇಕು ಎನ್ನುವುದು ರಾಮ ತತ್ವ.

“ಒಬ್ಬ ಸಾಮಾನ್ಯನೂ ರಾಮನೇ ಆಗಬಹುದು” ಎನ್ನುವ ಅವರ ಮಾತಿಗೆ ನನ್ನ ಮಾತು ಒಂದಿರಲಿ ಎನ್ನುವಂತೆ ಹೇಳಿದೆ “ಅಯ್ಯೋ ಶ್ರೀರಾಮ ಎಲ್ಲಿ ನಾವೆಲ್ಲಿ” ಅಂತ. ಅದಕ್ಕೆ ಅವರು ಹೇಳಿದ ಉತ್ತರವನ್ನು ಈಗಲೂ ಮೆಲುಕು ಹಾಕುತ್ತಿದ್ದೇನೆ. “ರಾಮ Don’ts ಮತ್ತು Do’s ಎರಡರ ಬಗ್ಗೆಯೂ ಕರ್ತವ್ಯ ಪಾಲಿಸಿದ, ಆದರೆ ನಾವುಗಳು Don’ts ಅನ್ನು ಚಾಚೂ ತಪ್ಪದೆ ಮಾಡಿದ್ದೇವೆ ಹಾಗಾಗಿ ನಾವುಗಳು ಒಳ್ಳೆಯವರು ಎಂದು ನಂಬಿರುತ್ತೇವೆ. ಒಮ್ಮೆಯೂ Do’s ಅನ್ನು ಮಾಡಿದ್ದೇವೆಯಾ ಎಂದು ಕೇಳಿಕೊಳ್ಳುವುದೇ ಇಲ್ಲ. ಅದಕ್ಕೇ ನಾವುಗಳು ರಾಮ ಆಗಲೇ ಇಲ್ಲ” ಹೀಗೆ ಅವರು ಹೇಳಿದ ಇನ್ನಷ್ಟು ರಸವತ್ತಾದ ಕಥೆಗಳನ್ನು ಕೇಳಿಸಿಕೊಂಡು, Live and let live ಎನ್ನುವಂತಹ ಸಂಸಾರಕ್ಕೆ ಒದಗಿಬರುವವರೇ ನಿಜದ ರಾಮದೇವರು, ದತ್ತಗುರುಗಳು ಎಂದರ್ಥ ಮಾಡಿಕೊಂಡು, ಹನಿಹನಿ ಮಳೆಯ ಜೊತೆಯಲ್ಲಿ ’ನನ್ನ ಅಯೋಧ್ಯೆ’ಯ ಬಂದು ಮುಟ್ಟಿದೆ.