ನಾನು ಅಸ್ಸಾಮ್‌ ನ ಸಾಹಿತಿ ವೈ.ಡಿ ತೊಂಗ್ಚಿ  ಅವರನ್ನು ಭೇಟಿ ಮಾಡಿದೆ. ಭಾಷೆಯ ಬಗ್ಗೆ ಅವರ ಮಾತುಗಳು ಬಹಳ ಮುಖ್ಯವಾದವು. ʻʻಇಲ್ಲಿನ ಶಾಲೆಗಳಲ್ಲಿ ಈಗ ಅಸ್ಸಾಮಿಸ್ ಭಾಷೆಯನ್ನು ಕಲಿಸುತ್ತಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರ ಕಲಿಸಲಾಗುತ್ತಿದೆ. ಅರುಣಾಚಲದ ಎಲ್ಲಾ ಭಾಷೆಗಳು ನಶಿಸಿಹೋಗಿ ಹಿಂದಿ ಈ ರಾಜ್ಯದ ಭಾಷೆಯಾಗಿ ಬಿಡುವ ದಿನ ದೂರವಿಲ್ಲ” ಎನ್ನುತ್ತಲೇ ತೊಂಗ್ಚಿಯವರು, ಲಿಪಿ ಇರುವ ಭಾಷೆಗಳನ್ನೇ ಉಳಿಸಿಕೊಳ್ಳುವುದು ಕಷ್ಟವಾಗುತ್ತಿರುವ ಈ ಕಾಲದಲ್ಲಿ ಲಿಪಿ ಇಲ್ಲದ ಭಾಷೆಯನ್ನು ಉಳಿಸಿಕೊಳ್ಳುವುದು ಅಸಾಧ್ಯವೇ ಸರಿ. ಯಾವುದೇ ಭಾಷೆಯ ಉಳಿವು ಬರವಣಿಗೆಯಿಂದ ಮಾತ್ರ ಆಗುವುದಿಲ್ಲ ಎಂದು ಬೇಸರಿಸಿಕೊಂಡರು.
ʻಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ ಇಲ್ಲಿದೆ.

ಇಟಾನಗರದಲ್ಲಿ ಸರಿಸುಮಾರು ಎಲ್ಲದರ ಬಗ್ಗೆಯೂ ವಿಷಯ ಸಂಗ್ರಹಣೆ ಮಾತ್ರವಲ್ಲ ಒಂದಷ್ಟರಮಟ್ಟಿಗಿನ ಅನುಭವವನ್ನೂ ಪಡೆದಾಗಿತ್ತು. ಆದರೆ ಸಾಹಿತ್ಯ ಕ್ಷೇತ್ರದ ಬಗ್ಗೆ ಉಹುಂ, ಲವಲೇಶವೂ ಸುಳಿವು ಸಿಕ್ಕಿಲ್ಲ ಎಂದುಕೊಳ್ಳುತ್ತಲೇ ಊರೂರು ಸುತ್ತುತ್ತಿದ್ದೆ. ಆಗ ಸಿಕ್ಕಿದ್ದು ವೈ.ಡಿ ತೊಂಗ್ಚಿ ಎನ್ನುವ ಸಾಹಿತಿಯ ದೂರವಾಣಿ ಸಂಖ್ಯೆ. ಇಷ್ಟು ಕಾದಿದ್ದಕ್ಕೂ ಸಾರ್ಥಕವೇನೋ ಎನ್ನುವಂತೆ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿಗಳು ಎಂದು ಗೊತ್ತಾಯಿತು. ನನ್ನ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ. ಅರ್ಧ ಪ್ರಯಾಣ ಮುಗಿಸಿ, ಮುಂದಿನ ಪ್ರಯಾಣಕ್ಕೆ ಹೊರಡಲು ಇಟಾನಗರಕ್ಕೆ ಹಿಂದಿರುಗಿದ ಒಂದು ಸಂಜೆ ಅವರಿಗೆ ಫೋನ್ ಮಾಡಿದೆ. ತುಂಬಾ ವಿಶ್ವಾಸದಿಂದ , ತಾಳ್ಮೆಯಿಂದ ನನ್ನ ಪರಿಚಯವನ್ನು ಕೇಳಿಸಿಕೊಂಡವರು “ನೀವು ಇವತ್ತು ಫೋನ್ ಮಾಡಿದ್ದು ಒಳ್ಳೆಯದೇ ಆಯ್ತು. ನಾನು ಊರಿನಲ್ಲಿ ಇರಲಿಲ್ಲ. ನೆನ್ನೆ ಸಂಜೆ ಬಂದೆ. ಈಗಾಗಲೇ ಸಂಜೆಯಾಗಿದೆ. ನೀವು ಈಗ ಬಂದರೆ ನಾವಿಬ್ಬರು ಹೆಚ್ಚು ಮಾತನಾಡಲು ಸಮಯ ಸಾಲುವುದಿಲ್ಲ. ನಾಳೆ ಬೆಳಿಗ್ಗೆ 10.30 ಕ್ಕೆ ಬಂದು ಬಿಡಿ. ಎಷ್ಟು ಸಮಯವಾದರೂ ಆರಾಮವಾಗಿ ಮಾತನಾಡೋಣ” ಎಂದು ಅತ್ಯಂತ ಸೌಜನ್ಯವಾದ ಧ್ವನಿಯಲ್ಲಿ ಆಹ್ವಾನವಿತ್ತರು.

ಮರುದಿನ ಮೋಡ ಮುಸುಕಿತ್ತು. ಸಣ್ಣನೆಯ ಚಳಿ ಜೊತೆಯಾಗಿತ್ತು. ಅವರ ಮನೆ ತಲುಪಿದಾಗ 11 ಗಂಟೆಯ ಸಮಯವಾಗಿತ್ತು. ನಿಶಬ್ಧವಾದ ದೊಡ್ಡ ಆವರಣ ಅದಕ್ಕೆ ಹೊಂದುವಂತಹ ಹಸಿರು ತೋಟದ ನಡುವೆ ಆಕಾಶ ನೀಲಿ ಬಣ್ಣವನ್ನು ಹಾಕಿಕೊಂಡು ಬೌದ್ಧ ಸ್ಥೂಪದಂತೆ ಕಾಣುತ್ತಾ, ಗಜಗಾತ್ರದ ಗೇಟಿನ ಹಿಂಭಾಗಕ್ಕೆ ನಿಂತಿತ್ತು ಅವರ ದೊಡ್ಡ ಬಂಗ್ಲೋ. ಕಾಲಿಂಗ್ ಬೆಲ್ಲಿನ ಸದ್ದಿಗೆ ವಿಧೇಯಳಾಗಿ ಬಂದು ಬಾಗಿಲು ತೆರೆದ ಪರಿಚಾರಿಕೆ “ಬರುತ್ತಾರೆ. ಇಲ್ಲಿ ಕುಳಿತಿರಿ” ಎಂದು ಪಹಾಡಿ ಶೈಲಿಯ ಹಿಂದಿಯಲ್ಲಿ ಹೇಳುತ್ತಾ ಎಡ ಭಾಗದಲ್ಲಿ ಇದ್ದ ಅಯತಾಕಾರದ ಕೋಣೆಯೊಳಗೆ ಕರೆದುಕೊಂಡು ಹೋದಳು. ಹಿತವಾದ ನಿಶಬ್ಧ ಮುಂದುವರೆದಿತ್ತು. ಬುಡಕಟ್ಟಿನ ಕಲೆಯನ್ನು ಸಾರುವ ಮರದ ಕೆತ್ತನೆಯ ಸಾಮಾನು ಎಡ ಮೂಲೆಯಲ್ಲಿ, ಅವರಿಗೆ ಬಂದಿರುವ ಪ್ರಶಸ್ತಿಗಳ ಸಾಲು ನಡುವಿನಲ್ಲಿ, ಕುಟುಂಬದ ಫೋಟೋಗಳನ್ನು ಅಂಟಿಸಿಕೊಂಡಿದ್ದ ಗೋಡೆಗಳು ಇನ್ನೊಂದು ದಿಕ್ಕಿನಲ್ಲಿ, ಅವುಗಳಿಗೆ ಅಂಟಿದಂತೆ ಅವರು ಬರೆದ ಪುಸ್ತಕಗಳ ಕೊಲ್ಯಾಜ್, ಅದರ ಪಕ್ಕದಲ್ಲೇ ಹಾಕಿದ್ದ ಲೆದರ್ ಸೋಫಾ ಸೆಟ್, ಅದರ ಎದುರಿಗೆ ಇರಿಸಿದ್ದ ಗಾಜಿನ ಟೀಪಾಯ್ ಅದರ ಮೇಲಿದ್ದ ಹತ್ತಾರು ಬಣ್ಣ ಬಣ್ಣದ ಪುಸ್ತಕಗಳನ್ನು ನೋಡುತ್ತಲೇ ನಿಂತಿದ್ದೆ.

ನನ್ನದೇ ಕನಸಿನ ಅರಮನೆಯ ಸಣ್ಣ ಕೋಣೆಯೊಂದನ್ನು ಹೊಕ್ಕಿದಂತಹ ಅನುಭವ. ಎರಡೇ ನಿಮಿಷಗಳಲ್ಲಿ ಅದೇ ಸಹಾಯಕಿ ಪರಿಮಳಯುಕ್ತ, ಹಬೆಯಾಡುತ್ತಿದ್ದ ಗುಲಾಬಿ ಚಹ, ಅದರೊಂದಿಗೆ ಅಂದವಾದ ಆಕಾರವನ್ನು ಹೊಂದಿದ್ದ ಕುರುಕಲು ತಿಂಡಿ ಮತ್ತು ರುಚಿಯಾಗಿ ಕಾಣುತ್ತಿದ್ದ ಡ್ರೈ ಜಾಮೂನ್ ತಂದಿಟ್ಟು. “ ಕುಳಿತು ಚಹ ಕುಡಿಯಿರಿ. ಬರುತ್ತಾರೆ” ಎಂದು ಹೇಳಿ ಹೋದಳು. ಆಹಾ, ಆ ವಾತವರಣ, ಅಲ್ಲಿದ್ದ ಮೌನ, ಆ ಪುಸ್ತಕಗಳು ಮತ್ತು ಗುಲಾಬಿ ಚಹ ! ಅದು ಯಾವುದೋ ಲೋಕದಲ್ಲಿದ್ದೆ. ಸುಮಾರು ಎತ್ತರದ, ದುಂಡು ಮುಖದ, ಮೊಂಡು ಮೂಗಿನ, ಚಿಕ್ಕ ಚುರುಕು ಕಣ್ಣಿನ, ಸಣ್ಣಸಣ್ಣ ಬಿಳಿ ಕೂದಲಿನ ಅವರು ಬೂದು ಬಣ್ಣದ ಜಾಗಿಂಗ್ ಸೂಟ್ ಹಾಕಿಕೊಂಡು ಒಳ ಬಂದು ‘ನಮಸ್ತೆ’ ಎಂದಾಗ ಲ್ಯಾವೆಂಡರ್ ಘಮವಿದ್ದ ಅವರು ಪೂಸಿಕೊಂಡಿದ್ದ ಸೆಂಟ್ ಅಲ್ಲೊಂದು ಸ್ನೇಹಮಯ ವಾತಾವರಣವನ್ನು ಕಟ್ಟಿಕೊಟ್ಟಿತ್ತು.

ಅವರು “ಅರುಣಾಚಲ ಪ್ರದೇಶದ ಲೇಖಕರ ಫೋರಮ್‍ನಿಂದ ನಾವು ಡಾ. ಯೂ. ಆರ್. ಅನಂತಮೂರ್ತಿಯವರನ್ನು ಕರೆಯಿಸಿ ಸನ್ಮಾನ ಮಾಡಿದ್ದೆವು” ಎಂದಾಗ ನಮ್ಮಿಬ್ಬರ ನಡುವೆ ಹಸನ್ಮುಖ ಸೇತುವೆಯಾಗಿತ್ತು. “ನನಗೆ ಮೈಸೂರಿನ ಭಾಷಾ ಭಾರತಿ ಪ್ರಶಸ್ತಿ ಬಂದಿದೆ” ಎಂದು ಅವರೆಂದಾಗ, ಅವರೆಡೆಗಿನ ನನ್ನ ಸೆಳೆತಕ್ಕೆ ಕಾರಣ ಸಿಕ್ಕಂತಾಯ್ತು.

ಎಪ್ಪತ್ತರ ಆಸುಪಾಸು ವಯಸ್ಸಿನ ಹಿರಿಯ ಸಾಹಿತಿಗಳು ಅವರು. ಎಲ್ಲದರಲ್ಲೂ ನಾನೆಷ್ಟು ಸಣ್ಣವಳು. ಏನು ಮಾತು ? ಯಾವ ಮಾತನ್ನು ಎಲ್ಲಿಂದ ಶುರು ಮಾಡುವುದು ಎನ್ನುವ ಗೊಂದಲದಲ್ಲೇ, “ ಇದು ನಿಮಗೆ” ಎನ್ನುತ್ತಾ ಮೈಸೂರು ಸ್ಯಾಂಡಲ್ ಸೋಪು ಮತ್ತು ಗಂಧದ ಕಡ್ಡಿಗಳ ಉಡುಗೊರೆ ಕಟ್ಟೊಂದನ್ನು ಅವರ ಕೈಗಿತ್ತು, ಸುಮ್ಮನೆ ಅವರನ್ನೇ ಮಿಕಮಿಕ ನೋಡುತ್ತಿದ್ದೆ. ಹಾಗೋ ಹೀಗೋ ಮಾತಂತೂ ಶುರುವಾಯಿತು. ಮರ್ಯಾದಸ್ತ ಬಿಗುವಿನ ವಾತಾವರಣ. ಅವರ ಮಾತುಗಳನ್ನು ಧ್ವನಿ ಮುದ್ರಿಸಿಕೊಳ್ಳುತ್ತಿದ್ದೆ. ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಬೊಂಡಿಲ್ಲಾ ಪ್ರದೇಶದ ಸುತ್ತಮುತ್ತಲು ಇರುವ ‘ಶೆರ್ದುಪೆನ್’ ಎನ್ನುವ ಬುಡಕಟ್ಟು ಜನಾಂಗಕ್ಕೆ ಸೇರಿದ ‘ವೈಶೇ ದೋರ್ಜಿ ತೊಂಗ್ಚಿ’ ( ವೈ.ಡಿ.ತೊಂಗ್ಚಿ)ಯವರು ಅವರ ಬುಡಕಟ್ಟು ಜನರಲ್ಲಿ ಆಧುನಿಕ ರೀತಿಯ ವಿಧ್ಯಾಭ್ಯಾಸ ಪಡೆದ ಮೊದಲ ತಲೆಮಾರಿನವರು ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ.

ಅಸ್ಸಾಮಿಸ್ ಭಾಷೆಯಲ್ಲಿ ಶಿಕ್ಷಣ ಪಡೆದ ಇವರು ಅರುಣಾಚಲ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಅವರ ಧರ್ಮಪತ್ನಿಯು ಬುಡಕಟ್ಟು ಜನಾಂಗದ ಮಕ್ಕಳಿಗಾಗಿ ಎರಡು ಶಾಲೆಗಳನ್ನು ನಡೆಸುತ್ತಿದ್ದಾರೆ. ನಮ್ಮ ಭೇಟಿಯ ದಿನದಂದು ಆಕೆ ಊರಿನಲ್ಲಿ ಇರಲಿಲ್ಲ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಮಗ. ಅಸ್ಸಾಮಿಸ್ ಭಾಷೆಯಲ್ಲಿ ಬರೆದರೂ ಅವರ ಎಲ್ಲಾ ಬರಹಗಳು ಅರುಣಾಚಲ ಪ್ರದೇಶದ ಮೂಲನಿವಾಸಿಗಳ ಜೀವನ, ಆಚರಣೆಗಳು, ನಂಬಿಕೆಗಳು, ಕಷ್ಟ- ಸುಖಗಳು, ಆಚರಣೆ- ಪದ್ಧತಿಗಳು, ಬುಡಕಟ್ಟು ಸಂವೇದನೆಗಳನ್ನೇ ಒಳಗೊಂಡಿದ್ದಾಗಿದೆ. ನೂರಾರು ಲೇಖನಗಳೊಂದಿಗೆ, 4 ಸಣ್ಣ ಕಥಾ ಸಂಕಲನಗಳು ಮತ್ತು 7 ಕಾದಂಬರಿಗಳನ್ನು ಮತ್ತು 1 ಜಾನಪದ ಕಥಾ ಸಂಕಲನವನ್ನು ಬರೆದಿದ್ದಾರೆ.

“ಆದಿ ಬುಡಕಟ್ಟಿಗೆ ಸೇರಿದ್ದ ಲುಮ್ಮೆಡಾಯಿ ಎನ್ನುವವರು ಕೆಲವು ಬರಹಗಳನ್ನು ಬರೆದಿದ್ದಾರೆ. ಆದರೆ ಅವರೀಗ ತೀರಿಕೊಂಡಿದ್ದಾರೆ. ನಮ್ಮಲ್ಲಿ ಸಾಹಿತ್ಯ ಅಷ್ಟೇನೂ ಬೆಳೆದಿಲ್ಲ” ಎನ್ನುತ್ತಲೇ ಮಾತು ಆರಂಭಿಸಿದ ಅವರೀಗ ಹಿಂದೊಮ್ಮೆ ಬೆಂಗಳೂರಿಗೆ ಬಂದ ವಿಷಯ ಹೇಳುತ್ತಿದ್ದರು. ಈಗಿನ ಸ್ಥಿತಿಗತಿಗಳ ಬಗ್ಗೆ ಕೇಳುತ್ತಿದ್ದರು. ಎದುರು ಬದುರಿನ ಸೋಫಾದ ಮೇಲೆ ಕುಳಿತ್ತಿದ್ದೆವು. ಇಷ್ಟು ಮಾಹಿತಿ ವಿನಿಮಯ ಸಮಯದಲ್ಲಿ ನಮ್ಮ ನಡುವಿನ ಬಿಗುವು ಕಡಿಮೆಯಾಗುತ್ತಿತ್ತು. ಅವರು “ಅರುಣಾಚಲ ಪ್ರದೇಶದ ಲೇಖಕರ ಫೋರಮ್‍ನಿಂದ ನಾವು ಡಾ. ಯೂ. ಆರ್. ಅನಂತಮೂರ್ತಿಯವರನ್ನು ಕರೆಯಿಸಿ ಸನ್ಮಾನ ಮಾಡಿದ್ದೆವು” ಎಂದಾಗ ನಮ್ಮಿಬ್ಬರ ನಡುವೆ ಹಸನ್ಮುಖ ಸೇತುವೆಯಾಗಿತ್ತು. “ನನಗೆ ಮೈಸೂರಿನ ಭಾಷಾ ಭಾರತಿ ಪ್ರಶಸ್ತಿ ಬಂದಿದೆ” ಎಂದು ಅವರೆಂದಾಗ, ಅವರೆಡೆಗಿನ ನನ್ನ ಸೆಳೆತಕ್ಕೆ ಕಾರಣ ಸಿಕ್ಕಂತಾಯ್ತು. ಮೈಸೂರು ನನ್ನೂರು. ನನ್ನ ತವರೂರು. ಈಗ ನಾವಿಬ್ಬರು ಎಷ್ಟು ಸ್ನೇಹಿತರಂತಾಗಿದ್ದೆವು ಎಂದರೆ ನಾನೀಗ ಅವರ ಪಕ್ಕವೇ ಕುಳಿತಿದ್ದೆ. ಮಾತಿನ ಸದ್ದೂ ಹೆಚ್ಚಿತ್ತು.

“ ಪ್ರಾಥಮಿಕ ಶಾಲಾ ದಿನಗಳಲ್ಲೇ ಸಾಧಾರಣವಾಗಿ ಎಲ್ಲರಂತೆ ನಾನೂ ಬರೆಯುವುದನ್ನು ಕವನಗಳಿಂದಲೇ ಶುರು ಮಾಡಿದೆ. ಹೆಚ್ಚೇನು ಅಲ್ಲ. ಆದರೂ ಬರೆದ ಕವನಗಳನ್ನು ಕಳೆದುಕೊಂಡು ಬಿಟ್ಟಿದ್ದೇನೆ. ಈಗ ನನಗೆ ಕವನ ಬರೆಯಲು ಬರುವುದೇ ಇಲ್ಲ” ಎಂದು ಹೇಳುತ್ತಾ ಕಣ್ಣಲ್ಲೇ ನಕ್ಕರು. “ಪ್ರೌಢ ಶಾಲೆಗೆ ಬರುವ ವೇಳೆಗೆ ಲೇಖನಗಳನ್ನು, ಏಕಾಂಕ ನಾಟಕಗಳನ್ನು ಬರೆಯುತ್ತಿದ್ದೆ. ಉಪಾಧ್ಯಾಯರುಗಳು ಪ್ರೋತ್ಸಾಹ ಕೊಡುತ್ತಿದ್ದರು. ಗೌಹಾಟಿಯಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ಈಗಿನವರಿಗೆ ಪ್ರಕಟಿಸಲು ಹೆಚ್ಚು ಅವಕಾಶಗಳಿವೆ. ಆದರೆ ನಮಗೆ ಹಾಗೆ ಇರಲಿಲ್ಲ” ಎನ್ನುತ್ತಾ ಅವರ ಒಂದು ಅಸಾಮಿಸ್ ಭಾಷೆಯಲ್ಲಿರುವ ಪುಸ್ತಕವನ್ನು ಕೈಗೆತ್ತಿಕೊಂಡರು.

“ಇದು ಯಾವ ಪುಸ್ತಕ? ಇದನ್ನು ನಾನು ಓದುವುದು ಹೇಗೆ? ಭಾಷಾಂತರವಾಗಿದೆಯಾ?” ಎಂದು ಕೇಳಿದೆ. ಅದು 2005ರಲ್ಲಿ ಅವರಿಗೆ ಅಕಾಡೆಮಿಯ ಪ್ರಶಸ್ತಿ ತಂದುಕೊಟ್ಟ ಪುಸ್ತಕ ‘ಮೌನ್ ಔಂತ್ ಮುಖರ್ ಹ್ರಿದಯ್ (ಸ್ಥಬ್ಧ ತುಟಿಗಳು ಪಿಸುಗುಡುವ ಹೃದಯ) ಎನ್ನುವ ಪುಸ್ತಕವಾಗಿತ್ತು. ಅದನ್ನು ತೇಜ್‍ಪುರ್ ವಿಶ್ವವಿದ್ಯಾಲಯದ ಸಂಸ್ಕೃತಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ದೇಬಶ್ರಿ ಪ್ರಸಾದ್ ನಾಥ್ ಅವರು ‘Silent Lips and Murmuring Hearts’ ಎಂಬುದಾಗಾಗಿ ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. ಬದ್ಧ ದ್ವೇಷಿಗಳಾದ ಎರಡು ಬೇರೆ ಬೇರೆ ಬುಡಕಟ್ಟಿಗೆ ಸೇರಿದ ಯುವಕ ಮತ್ತು ಯುವತಿ ಪ್ರೀತಿಗೆ ಸಿಲುಕಿದ್ದಾಗ, ತಮ್ಮ ತಮ್ಮ ಜನಾಂಗದಿಂದ ಎದುರಿಸಬೇಕಾದ ಸಂಕಷ್ಟಗಳ ಎಳೆಯನ್ನು ಇಟ್ಟುಕೊಂಡು ಹೆಣೆದಿರುವ ಈ ಕಾದಂಬರಿಯಲ್ಲಿ ವೇಷಭೂಷಣ, ಆಚರಣೆ, ಪದ್ಧತಿಗಳು ಬೇರೆಬೇರೆಯಾಗಿದ್ದರೂ ತಾವು ಒಂದೇ ಮನುಷ್ಯಕುಲಕ್ಕೆ ಸೇರಿದವರು ಎನ್ನುವುದನ್ನು ಮನನ ಮಾಡಿಕೊಂಡು, ದ್ವೇಷ ಮರೆತು ಎರಡು ಬುಡಕಟ್ಟುಗಳು ಒಂದಾಗುವ ಕಥೆಯೊಂದನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕರು.

“ಈ ಪುಸ್ತಕದಿಂದ ನಿಮಗಿಷ್ಟವಾದ ಭಾಗವನ್ನು ಓದಿ ಹೇಳಿ ದಯವಿಟ್ಟು” ಎಂದು ಅವರ ಭುಜ ಅಲ್ಲಾಡಿಸುತ್ತಾ ಎಳೆಯ ಮಗುವಿನಂತೆ ದುಂಬಾಲು ಬಿದ್ದೆ. ಒಂದೋ ಎರಡೋ ಪುಟಗಳನ್ನು ಓದಿ ಸುಮ್ಮನಾಗಬಹುದು ಎಂದುಕೊಂಡಿದ್ದರೆ ತಪ್ಪಾಗುತ್ತಿತ್ತು. ಎಷ್ಟೊಂದು ಪ್ರೀತಿಯಿಂದ, ಆಸಕ್ತಿಯಿಂದ, ಅಸ್ಸಾಮಿಸ್ ಭಾಷೆಯ ಪುಸ್ತಕದ ಕಾಲು ಭಾಗವನ್ನೇ ಭಾವಪೂರ್ಣವಾಗಿ, ನನಗಾಗಿ ಓದಿದರು. ಭಾಷೆ ಅರ್ಥವಾಗದೇನೋ ಎಂದುಕೊಳ್ಳುತ್ತಲೇ ಕೇಳಿಸಿಕೊಳ್ಳುತ್ತಿದ್ದವಳಿಗೆ ಪ್ರತಿ ಪದವೂ ಪರಿಚಿತದಂತೆ ತೋರುತ್ತಿತ್ತು. ಜಾತಿ ದ್ವೇಷ, ಅಂತಸ್ತು ಬೇಧಗಳಿಂದ ಬೇರೆಯಾಗುವ ಪ್ರೇಮಿಗಳ ಭಾವ ಮನತಟ್ಟುತ್ತಿತ್ತು. ಓದಿದ ನಂತರ ಒಂದೈದು ನಿಮಿಷ ಇಬ್ಬರೂ ಸುಮ್ಮನೆ ಕುಳಿತಿದ್ದೆವು. ನಾವಿಬ್ಬರೂ ಈಗ ಜನ್ಮಗಳಿಂದ ಪರಿಚಿತರೇನೋ ಎನ್ನುವ ಹಾಗೆ ಮಾತನಾಡುತ್ತಿದ್ದೆವು. ಅವರ ಆ ಧ್ವನಿ ಮುದ್ರಿಕೆಯನ್ನು ಜತನದಿಂದ ಕಾಪಾಡಿಕೊಂಡಿದ್ದೇನೆ.

ಇಬ್ಬರು ಹೆಣ್ಣು ಮಕ್ಕಳು ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರೀ ಸೇವೆ ಮಾಡುತ್ತಾ ನೆಲೆಗೊಂಡಿದ್ದಾರೆ. 26 ವರ್ಷದ ಮಗ ಈಜುಪಟುವಾಗಿ ಒಂದಷ್ಟು ಹೆಸರುಗಳಿಸಿದ್ದ. ಕೆಲವು ವರ್ಷಗಳ ಹಿಂದೆ ಗೌಹಾಟಿಯಲ್ಲಿ ನಡೆದ ಕ್ರೀಡಾ ಮೇಳದ ಸ್ಪರ್ಧೆಯಲ್ಲಿ ಈಜುಕೊಳಕ್ಕೆ ಮೇಲಿನಿಂದ ಧುಮುಕುವಾಗ ಬೆನ್ನು ಮೂಳೆಯನ್ನು ಮುರಿದುಕೊಂಡ ಯುವಕ ಈಗ ಗಾಲಿ ಕುರ್ಚಿ ಬಿಟ್ಟು ಏಳಲಾರದ ಸ್ಥಿತಿಯಲ್ಲಿದ್ದಾನೆ. ಸಮಸ್ತಕ್ಕೂ ಇನ್ನೊಬ್ಬರನ್ನು ಆಶ್ರಯಿಸಬೇಕಾದಂತಹ ಪರಿಸ್ಥಿತಿ. “ಅಪ್ಪ ವಯಸ್ಸಾದ ಮೇಲೆ ನಿಮ್ಮನ್ನು ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದ ಯಾವಾಗಲು. ಆದರೆ ಈಗ ಪರಿಸ್ಥಿತಿ ಅದುಲು ಬದಲಾಗಿದೆ ನೋಡು” ಎಂದು ಅವರು ಹೇಳಿದಾಗ ಅವರೊಬ್ಬ ನಿರ್ಲಿಪ್ತ ಸಂತನಂತೆ ಕಂಡಿದ್ದು ಸುಳ್ಳಲ್ಲ. ಅಂದಿನಿಂದ ಏನನ್ನೂ ಬರೆಯದೆ ವೈ.ಡಿ.ತೊಂಗ್ಚಿ ಜೀವನ ಸಾಗಿಸುತ್ತಿದ್ದಾರೆ. ಕೇವಲ ಸಾಹಿತ್ಯ ಕೃಷಿಯ ಬಗ್ಗೆ ಮಾತನಾಡಬಹುದು ಎಂದುಕೊಂಡು ಬಂದ್ದಿದ್ದವಳೀಗ ಅವರ ಕುಟುಂಬ ಕಥೆಯ ಹಂಚಿಕೆದಾರಳಾಗಿದ್ದೆ.

ಬೌದ್ಧ ಧರ್ಮದ ಒಂದು ಬುಡಕಟ್ಟಿನಲ್ಲಿ ಮನುಷ್ಯ ಸತ್ತ ನಂತರ ಶವವನ್ನು 108 ತುಂಡುಗಳನ್ನಾಗಿ ಕತ್ತರಿಸಿ ನದಿಯಲ್ಲಿ ತೇಲಿ ಬಿಡುತ್ತಾರೆ. ಈ ರೂಢಿಯನ್ನೇ ಮೂಲವನ್ನಾಗಿ ಇಟ್ಟುಕೊಂಡು ರಚಿತವಾಗಿರುವ ಕಾದಂಬರಿ ‘ಸವ್ ಕಟ ಮಾನುಸ್’ (ಶವ ಕತ್ತರಿಸುವ ಮನುಷ್ಯ) ಇದನ್ನು ಆಗ್ರ ವಿಶ್ವವಿದ್ಯಾಲಯದ ಪ್ರೊ. ದುಬೆ ಅವರು ಇಂಗ್ಲೀಷಿಗೆ ಭಾಷಾಂತರಿಸಿದ್ದರಂತೆ. “ ಅದರೆ ಅದನ್ನು ನಾನು ಒಪ್ಪಲಿಲ್ಲ. ಏಕೆಂದರೆ ಅವರು ಅದರಲ್ಲಿ ತಮ್ಮ ಕಲ್ಪನೆಗಳನ್ನು ಸೇರಿಸಿಬಿಟ್ಟಿದ್ದರು. ಅವರು ಅಸ್ಸಾಂನವರು. ಈ ಎರಡು ರಾಜ್ಯಗಳು ಸರಹದ್ದುಗಳನ್ನು ಹಂಚಿಕೊಳ್ಳುವಷ್ಟು ಹತ್ತಿರದಲ್ಲೇ ಇದ್ದರೂ ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಆಹಾರ, ವಿಹಾರ ಎಲ್ಲವೂ ತೀರಾ ವಿಭಿನ್ನವಾಗಿವೆ. ಅದು ಆ ಲೇಖಕರಿಗೆ ತಿಳಿಯದೆ ಹೋಯ್ತು. ಉದಾಹರಣೆಗೆ ವಿಳ್ಳೇದೆಲೆಯನ್ನು ಅರುಣಾಚಲ ಪ್ರದೇಶದವರು ಉಪಯೋಗಿಸುವುದಿಲ್ಲ. ಅವರಿಗೆ ಅದರ ಪರಿಚಯವೇ ಇಲ್ಲ. ಆದರೆ ಅದು ಅಸ್ಸಾಂನ ಸಂಸ್ಕೃತಿಯ ಅವಿಚ್ಛಿನ್ನ ಭಾಗ. ಅವರು ಇಂತಹ ಹಲವಾರು ತಮ್ಮ ವಿಷಯಗಳನ್ನು ಅದರಲ್ಲಿ ಸೇರಿಸಿಬಿಟ್ಟಿದ್ದರು. ಅದಕ್ಕೆ ಆ ಭಾಷಾಂತರವನ್ನು ಪ್ರಕಟಪಡಿಸಲಿಲ್ಲ” ಎಂದರು.

ಮುಂದುವರೆಯುತ್ತಾ “ ಅದನ್ನೇ ಈಗ ಗೌಹಾಟಿಯ ಹಿಂದಿ ಸೆಂಟಿನಲ್ ಎನ್ನುವ ಪತ್ರಿಕೆಯ ಸಂಪಾದಕರಾಗಿದ್ದ ಶ್ರೀ. ತಿನ್ಕೊ ಕುಮಾರ್ ಎನ್ನುವವರು ಭಾಷಾಂತರಿಸಿದ್ದಾರೆ. ಬಹಳ ಚೆನ್ನಾಗಿ ಬಂದಿದೆ. ಪ್ರಕಟಣೆಯೂ ಆಗಿದೆ” ಎಂದಾಗ, ಭಾಷಾಂತರದ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದೆ. ಒಂದರಿಂದ ಮತ್ತೊಂದು ಪ್ರಾದೇಶಿಕ ಭಾಷೆಗಳಿಗೆ ಕೃತಿಗಳು ರೂಪಾಂತರಕೊಳ್ಳಬೇಕು. ಅದು ಆಗಲೇ ಬೇಕಾದ ಕೆಲಸ. ಆದರೆ ಮುಂದಿನ ತಲೆ ಮಾರುಗಳು ಮಾತೃಭಾಷೆಗಿಂತ ಇಂಗ್ಲಿಷ್ ಹಾಗು ಹಿಂದಿ ಭಾಷೆಯೆಡೆಗೆ ಮಾತ್ರ ಒಲವು ತೋರುತ್ತಿರುವುದು ಭಾಷಾಂತರ ಕೆಲಸಕ್ಕೆ ತೊಡಕಾಗುತ್ತಿದೆ. ಕೃತಿಯ ಮೂಲಭಾಷೆಯಿಂದ ಭಾಷಾಂತರ ಮಾಡುವುದು ಈ ದಿನಗಳಲ್ಲಿ ಅಸಾಧ್ಯವೇ ಸರಿ. ಆದರೆ ಕಡೆ ಪಕ್ಷ ಅದರ ಇಂಗ್ಲಿಷ್ ರೂಪದಿಂದಲಾದರೂ ಸ್ಥಳೀಯ ಭಾಷೆಗಳಿಗೆ ಭಾಷಾಂತರಗೊಳ್ಳಬೇಕು. ಒಂದಷ್ಟರ ಮಟ್ಟಿಗೆ ಸತ್ವ ಹೋಗಿಬಿಡುವ ಸಾಧ್ಯತೆ ಇದ್ದೇ ಇದೆ, ಆದರೂ ಪರಸ್ಪರ ಸಂಸ್ಕೃತಿಗಳ ಪ್ರಾಥಮಿಕ ಪರಿಚವಾದರೂ ಆಗುತ್ತದೆ. ಹೀಗೆ ಹೇಳುತ್ತಾ ಹೋದ ಹಿರಿಯರು ಇಂದಿನ ಯುವ ಬರಹಗಾರರು ಹೆಚ್ಚಾಗಿ ಕವನಗಳನ್ನು ಅದು ಬಿಟ್ಟರೆ ಲೇಖನಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ. ಕಾದಂಬರಿ ಹಾಗು ಕಥೆಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡವರು ಅತೀ ವಿರಳ ಎಂದರು. “ವಾರಕ್ಕೊಮ್ಮೆಯೋ. ಪಕ್ಷಕ್ಕೊಮ್ಮೆಯೋ ಅರುಣಾಚಲ ಪ್ರದೇಶ ಲಿಟೆರರಿ ಸೊಸೈಟಿ’ ಎನ್ನುವ ತಲೆಬರಹದಡಿ ಬೆರೆಳೆಣಿಕೆಯಷ್ಟು ಲೇಖಕರು ಸೇರುತ್ತಿರುತ್ತೇವೆ” ಎಂದರು.

ಇಲ್ಲಿನ ಶಾಲೆಗಳಲ್ಲಿ ಈಗ ಅಸ್ಸಾಮಿಸ್ ಭಾಷೆಯನ್ನು ಕಲಿಸುತ್ತಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರ ಕಲಿಸಲಾಗುತ್ತಿದೆ. ಅರುಣಾಚಲದ ಎಲ್ಲಾ ಭಾಷೆಗಳು ನಶಿಸಿಹೋಗಿ ಹಿಂದಿ ಈ ರಾಜ್ಯದ ಭಾಷೆಯಾಗಿ ಬಿಡುವ ದಿನ ದೂರವಿಲ್ಲ” ಎನ್ನುತ್ತಲೇ ತೊಂಗ್ಚಿಯವರು, ಲಿಪಿ ಇರುವ ಭಾಷೆಗಳನ್ನೇ ಉಳಿಸಿಕೊಳ್ಳುವುದು ಕಷ್ಟವಾಗುತ್ತಿರುವ ಈ ಕಾಲದಲ್ಲಿ ಲಿಪಿ ಇಲ್ಲದ ಭಾಷೆಯನ್ನು ಉಳಿಸಿಕೊಳ್ಳುವುದು ಅಸಾಧ್ಯವೇ ಸರಿ. ಯಾವುದೇ ಭಾಷೆಯ ಉಳಿವು ಬರವಣಿಗೆಯಿಂದ ಮಾತ್ರ ಆಗುವುದಿಲ್ಲ. ಭಾಷೆ ಜೀವಂತವಾಗಿ ಉಳಿಯುವುದು ಅದನ್ನು ಮಾತನಾಡುತ್ತಿದ್ದರೆ ಮಾತ್ರ. ಆದರೆ ಈಗಿನ ಯುವಕರು ಹೆಚ್ಚುಪಾಲು ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ. ಹೀಗಾಗಿ ಅರಿವಿಗೆ ಬಾರದೆಯೇ ಭಾಷೆಗಳು ನಶಿಸಿ ಹೋಗುತ್ತಿವೆ. ಭಾಷೆಯಲ್ಲಿ ಬದಲಾವಣೆ ಅನಿವಾರ್ಯ ಮತ್ತು ಸ್ವಾಗತಾರ್ಹ ಆದರೆ ಒಂದು ಭಾಷೆ ಬಳಕೆಯೇ ಇಲ್ಲದೆ ನಶಿಸಿ ಹೋಗುವುದು ನೋವಿನ ಸಂಗತಿ ಎಂದು ಅವರು ಹೇಳಿದಾಗ ಅದು ಒಂದು ಸಮಸ್ತ ತಲೆಮಾರಿನ ಅಳಲಿನಂತೆ ಧ್ವನಿಸುತ್ತಿತ್ತು.

ಸಾಹಿತ್ಯದ ಮೂಲಕ ಭಾಷೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿಗಳು ಆಸಕ್ತಿವಹಿಸಬೇಕು. ಬರಹಗಾರರನ್ನು ಅಧ್ಯಯನ ದೃಷ್ಟಿಯಿಂದ ಆಯ್ಕೆ ಮಾಡಿ ಕಡೆ ಪಕ್ಷ 6 ತಿಂಗಳುಗಳ ಕಾಲ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಬೇಕು. ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರಾಥಮಿಕ ಅರಿವು ಪಡೆದುಕೊಂಡು ಅದರ ಬಗ್ಗೆ ತಮ್ಮ ತಮ್ಮ ಮಾತೃಭಾಷೆಯಲ್ಲಿ ಬರೆಯುವಂತೆ ಪ್ರೇರೇಪಿಸಬೇಕು ಎನ್ನುವುದು ಅವರ ಸಲಹೆಯಾಗಿತ್ತು.

ʻʻಹತ್ತಿರ ಹತ್ತಿರ ನಲವತ್ತು ವರ್ಷಗಳ ಕಾಲ ಜನರ ಮಧ್ಯದಲ್ಲಿಯೇ ನನ್ನ ವೃತ್ತಿ ಇದ್ದದ್ದು ಮನುಷ್ಯ ಸಂವೇದನೆಗಳ ಬಗ್ಗೆ ನನ್ನ ದೃಷಿಕೋನವನ್ನು ವಿಸ್ತಾರಗೊಳಿಸಿತು. ಜನರ ಸಮಸ್ಯೆಗಳೊಡನೆ ನೇರವಾಗಿ ಮುಖಾಮುಖಿಯಾಗುತ್ತಿದ್ದದ್ದು ಸಂಬಂಧಗಳಲ್ಲಿನ ಸೂಕ್ಷ್ಮತೆಯನ್ನು ನನ್ನ ಬರಹಗಳಲ್ಲಿ ತರುವುದಕ್ಕೆ ಸಹಾಯವಾಯಿತು. ಜನರ ನಡುವೆ ಇರುವುದೇ ನನ್ನ ಬರವಣಿಗೆಗೆ ಪ್ರೇರಣೆ” ಎಂದು ಹೇಳಿಕೊಳ್ಳುತ್ತಲೇ ಈಗಿರುವ ಕಾನೂನುಗಳ ಮುಖ್ಯ ಉದ್ದೇಶ ಅಪರಾಧಿಗಳಿಗೆ ಶಿಕ್ಷೆ ಕೊಡುವುದೇ ಆಗಿದೆ. ಆದರೆ ಸ್ಥಳೀಯ ರಾಜಿ ಕಟ್ಟೆಗಳ ಮೂಲ ಆಶಯ ನೊಂದವರಿಗೆ ಪರಿಹಾರ ಒದಗಿಸಿಕೊಡುವುದಾಗಿರುತ್ತದೆ. ಈಗಲೂ ಸಿವಿಲ್ ರೀತಿಯ ವ್ಯಾಜ್ಯಗಳನ್ನು ಬುಡಕಟ್ಟು ಜನರ ಮುಖ್ಯಸ್ಥರು ನ್ಯಾಯಾಲಯದ ಹೊರತಾಗಿಯೇ ಪರಿಹರಿಸುತ್ತಾರೆ ಎನ್ನುವ ಮಾಹಿತಿಯನ್ನೂ ನೀಡಿದರು.

ಸೋನಂ’ ಜಾಗತಿಕ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ನಿಂತಿರುವ ಕೃತಿ. ಬಹುಪತಿತ್ವವನ್ನು ಬುಡಕಟ್ಟು ಸಮಾಜವು ಒಪ್ಪಿಕೊಂಡಿದ್ದರೂ, ಇನ್ನೊಂದು ಮದುವೆಯಾಗಿ, ತನ್ನನ್ನು ಮಾತ್ರ ಪ್ರೀತಿಸಿ ಏಕಪತ್ನಿ ನಿಷ್ಠೆಯನ್ನು ಉಳಿಸಿಕೊಂಡಿದ್ದ ಪತಿಗೆ ನೋವುಕೊಟ್ಟೆ ಎನ್ನುವ ಮನೋಭಾವವನ್ನು ಆಳವಾಗಿ ಬೆಳೆಸಿಕೊಂಡು, ಮಾನಸಿಕವಾಗಿ ಝರ್ಜರಿತಳಾಗುವ ಸುಂದರ ಹೆಣ್ಣೊಬ್ಬಳ ಕಥೆ. ಈ ಕಾದಂಬರಿಯನ್ನು ಮೊನ್ಪಾ ಭಾಷೆಯಲ್ಲಿ ಬರೆದಿದ್ದಾರೆ ಮತ್ತು ಅದು ಚಲನಚಿತ್ರವೂ ಆಗಿದ್ದು, ಹಲವಾರು ಅಂತರಾಷ್ಟ್ರೀಯ ಸಿನೆಮಾ ಉತ್ಸವಗಳಲ್ಲಿ ಹೆಸರು ಮಾಡಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. “ನನಗೆ ಆ ಸಿನೆಮಾದ ಸಿಡಿ ಸಿಗಬಹುದೇ” ಎಂದು ಕೇಳಿಕೊಂಡೆ. ಒಂದೇ ಒಂದು ಕೊನೆಯ ಕಾಪಿ ಇರುವುದಾಗಿಯೂ ಕೊಡುವುದಾಗಿಯೂ ತಿಳಿಸಿ ತೊಂಗ್ಚಿಯವರು ಒಳಕ್ಕೆ ಹೋದರು.

ಅಲ್ಲೇ ಟೀಪಾಯಿಯ ಮೇಲೆ ಇದ್ದ ಟಿಬೇಟಿಯನ್ ಸಂಸ್ಕೃತಿಗೆ ಸಂಬಂಧಪಟ್ಟ ಚಿತ್ರಪಟಗಳ ಪುಸ್ತಕವೊಂದನ್ನು ತಿರುವಿಹಾಕುತ್ತಿದ್ದೆ. ಅದರಲ್ಲಿ ಒಂದು ಚಿತ್ರದ ಮೇಲಿನಿಂದ ಕಣ್ಣು ತೆರೆಯದಾದೆ. ಕೇಸರಿ ಬಣ್ಣದ ಹಿನ್ನೆಲೆಯಲ್ಲಿ ಕಪ್ಪು ಬಣ್ಣದ ಚಿತ್ರಗಳು ಎದ್ದು ಕಾಣುತ್ತಿದ್ದವು. ಮೊದಲು ಏನೂ ಸ್ಪಷ್ಟವಾಗಲಿಲ್ಲ. ಅದರ ಕೆಳಗೆ ಬರೆದಿದ್ದ ಬರಹವನ್ನು ನೋಡಿದೆ. ಅದೊಂದು 17ನೇ ಶತಮಾನದ ಮಧ್ಯ ಟಿಬೇಟಿನ ಪೇಂಟಿಂಗ್ ಆಗಿತ್ತು. ಕೋಣದ ತಲೆಬುರುಡೆಯ ಮಾಲೆ ಧರಿಸಿದ ಯಮಧರ್ಮರಾಯ, ತಲೆಯಲ್ಲಿ ಕೂದಲು ಇಲ್ಲದೆ ಇರುವ ತನ್ನ ಪತ್ನಿ ಚಾಮುಂಡಿಯನ್ನು ಬಳಸಿ, ಬಗ್ಗಿಸಿ, ಹತ್ತಿರದಲ್ಲಿ ಹಿಡಿದುಕೊಂಡು, ಇಬ್ಬರು ಪರಸ್ಪರ ದೃಷ್ಟಿ ಬೆಸೆದುಕೊಂಡಿದ್ದ ಚಿತ್ರವದು. ತುಸು ಹೆಚ್ಚೇ ಎನಿಸುವಷ್ಟು ಅಪ್ಯಾಯಮಾನವಾಗಿತ್ತು. ‘ಚಾಮುಂಡಿ’ ಎನ್ನುವ ಹೆಸರು ನೋಡಿದೊಡನೆ ಮೈಸೂರಿನ ನೆನಪು ಒತ್ತರಿಸಿ ಬಂದು ಅದರ ಒಂದು ಫೋಟೊ ತೆಗೆದುಕೊಂಡೆ.

ಅಷ್ಟರಲ್ಲಿ ತೊಂಗ್ಚಿಯವರು “ ಇದೊಂದೇ ಸಿಡಿ ಇರುವುದು. ಆದರೆ ಇದರಲ್ಲಿ ಏನೂ ಇಲ್ಲ. ಖಾಲಿ ಇದೆ. ಈಗ ತಾನೆ ಪರೀಕ್ಷಿಸಿದೆ” ಎಂದು ಬೇಸರ ಪಟ್ಟುಕೊಳ್ಳುತ್ತಾ ಆ ಸಿಡಿಯೊಂದಿಗೆ ಬಂದರು. ನನಗೂ ನಿರಾಸೆ. ಆದರೂ ಅದನ್ನೇ ಅವರಿಂದ ತೆಗೆದುಕೊಳ್ಳೋಣ ಎನ್ನಿಸಿ ಕೇಳಿದೆ. ಅಭ್ಯಂತರವಿಲ್ಲದೆ ಕೊಟ್ಟು ಬಿಟ್ಟರು. ಸಂಜೆಯಾಗುತ್ತಿತ್ತು. ಊಟ ತಿಂಡಿಯ ಪರಿವೆಯಿಲ್ಲದೆ ಎರಡು ಕಪ್ ಚಹಾದೊಂದಿಗೆ ಒಂದು ಬದುಕಿಗಾಗುವಷ್ಟು ಮಾತನಾಡಿದ್ದೆವು. ಹೊರಡಲೇ ಬೇಕಿತ್ತು. ಬಾಗಿಲಿನವರೆಗೂ ಬಂದು ಆತ್ಮೀಯವಾಗಿ ಬೀಳ್ಕೊಟ್ಟರು.

“ಇಲ್ಲಿ ಫೋನ್ ನೆಟ್ವರ್ಕ್ ಸಿಗುವುದು ಕಷ್ಟ. ಹಾಗಾಗಿ ಈಮೇಲ್ ಮಾಡುತ್ತಿರು” ಎಂದು ಅವರ ಈಮೇಲ್ ಐಡಿಗಳನ್ನು ಕೊಟ್ಟರು. ಈ ಭೇಟಿ ಎಂದೂ ಮರೆಯಲಾಗದ್ದು. ‘ವೈಶೇ ದೋರ್ಜಿ ತೊಂಗ್ಚಿ’ ಒಂದು ವ್ಯಕ್ತಿಯಲ್ಲ ಅವರೊಂದು ತಲೆಮಾರು. ಅವರೊಬ್ಬ ಲೇಖಕ ಅಲ್ಲ ಅವರೇ ಸಾಹಿತ್ಯ. ಅವರೊಬ್ಬ ಸಂತ ಮಾತ್ರವಲ್ಲ ಹಿರಿದಾದ ಅನುಭವ. ಅದೇನು ಸುಕೃತವೋ ಈ ಅನುಭವ ನನ್ನದಾಗಿದ್ದು. ಅವರಲ್ಲಿಂದ ಹೊರಟಾಗ ಮನಸ್ಸಿನ ಖಾಲಿಯಲ್ಲಿ ಮಾಧುರ್ಯ ತುಂಬಿಕೊಂಡಿತ್ತು. ಮೆದುಳು ಶಾಂತವಾಗಿತ್ತು. ಬೆಂಗಳೂರಿಗೆ ಬಂದ ಮೇಲೆ ‘ಸೋನಂ’ ಗುಂಗು ಹೆಚ್ಚಾಗಿ, ಒಮ್ಮೆ ಪ್ರಯತ್ನಿಸಬಾರದೇಕೆ ಎನಿಸಿ ತೊಂಗ್ಚಿಯವರು ಕೊಟ್ಟಿದ್ದ ಖಾಲಿ ಸಿಡಿಯನ್ನು ಲ್ಯಾಪ್ಟಾಪ್ಗೆ ಹಾಕಿದೆ.

ಅದು ಯಾವ ಮಾಯೆ ನನ್ನನ್ನು ಅಷ್ಟು ಪ್ರೀತಿಸಿತ್ತೋ, ಲಕ್ಷಣವಾಗಿ ಪೂರ್ತೀ ‘ಸೋನಂ’ ಸಿನೆಮಾ ಚಾಲೂವಾಯ್ತು. ಅದ್ಭುತ ಸಿನೆಮಾ ಎನ್ನಲಾಗದಿದ್ದರೂ ಅತ್ಯದ್ಭುತ ಕಥೆಯಂತೂ ಹೌದು. ಸಂತೋಷದಿಂದ ತೊಂಗ್ಚಿಯವರಿಗೆ ಫೊನ್ ಮಾಡಿ ವಿಷಯ ತಿಳಿಸಿದೆ. ಅವರದ್ದೇ ಮಾತುಗಳನ್ನು ನಾನು ಇಂದೂ ಹಾಡುತ್ತಿದ್ದೇನೆ ;

“ಬೆಳಗಾಗಿ ನಾ ಏಳುವಾಗ ಮನೆಯವರ ಆರೋಗ್ಯ ನೋಡುವಂತಾಗಲಿ; ಕಿರಿಯರೆಲ್ಲಾ ಹೂವಿನಂತರಳಲು ನನ್ನಾಶೀರ್ವಾದವಿರಲಿ; ಹಿರಿಯರೆಲ್ಲಾ ಇನ್ನೂರು ವರ್ಷ ಬಾಳಲು ಹಾರೈಕೆಯಿರಲಿ; ತೋಟದ ಹೂವುಗಳು ಬಾಡದಿರಲಿ ಮುಂದಿನ ಋತುವಲ್ಲಿ ನಾ ಚಿಟ್ಟೆಯಾಗಿ ಹಿಂದಿರುಗುವಾಗ. . .”