ಜಯಂತರ ಕತೆಗಳಲ್ಲಿ ನನ್ನನ್ನು ಬಹಳ ಕಾಡಿದ ಕತೆ `ಸ್ವಪ್ನದೋಷ’. ಇದರ ಅನುರಣನ ಶಕ್ತಿ ಮತ್ತು ಪ್ರತಿ ಓದಿನಲ್ಲೂ ನನಗೆ ಕಂಡುಬಂದ ಹೊಸ ಹೊಳಹುಗಳು ಇದಕ್ಕೆ ಕಾರಣವೆಂದುಕೊಂಡಿದ್ದೇನೆ. ಜಯಂತ ತಮ್ಮ ಹಲವು ಕತೆಗಳಲ್ಲಿ ಬಿಡಿಯಾಗಿ ಹೇಳಲು ಪ್ರಯತ್ನಿಸಿದ ಅನೇಕ ಸಂಗತಿಗಳು ಇಲ್ಲಿ ಒಂದೆಡೆ ಕೂಡಿ ಬಂದಿವೆ. ಎರಡು ಜಗತ್ತುಗಳ ನಡುವಿನ ತೊಳಲಾಟ, ವಿರುದ್ಧ ಸೆಳೆತಗಳು, ಒಂದು ಲೋಕದಿಂದ ಇನ್ನೊಂದಕ್ಕೆ ಹೊರಳುವ ನೋವು ಅವರ ಹಲವು ಕತೆಗಳಲ್ಲಿ ವಿವಿಧ ಮಗ್ಗಲುಗಳಲ್ಲಿ ಕಾಣಿಸಿವೆ. ಈ ಎಲ್ಲವೂ ಸ್ವಪ್ನದೋಷದಲ್ಲಿ ಒಟ್ಟಾಗಿ ಒದಗಿ ಬಂದು ಏಕರೂಪ ಪಡೆದಂತೆ ನನಗೆ ಕಂಡಿದೆ.

ಎಲ್ಲೋ ಘಟ್ಟದ ಮೇಲೆ ಕೆಲಸ ಮಾಡುವ ಲೀಲಾಧರ, ಅವನ ಹೆಂಡತಿ ಭವಾನಿಯ ಬದುಕಿನಲ್ಲಿ ಇದ್ದೂ ಇಲ್ಲದಂತಿದ್ದಾನೆ. ರೋಮಾಂಚವಿಲ್ಲದ, ಪ್ರೀತಿಯ ಪರಿಮಳವಿಲ್ಲದ ಈ ಸಂಸಾರದಲ್ಲಿ ಅವಳ ಅಪೇಕ್ಷೆಗಳೂ ಬತ್ತಿಹೋಗಿವೆ. ಅಂತೆಯೇ ಚಿನ್ನದ ಬಳೆ ಮಾಡಿಸಿಕೊಳ್ಳುವ ಅವಳ ಕನಸೂ ಸಹ. ಹೀಗೆ ಸಪಾಟಾಗಿ ಹೋದ ಬದುಕಿನಲ್ಲಿ ಒಂದು ಸಣ್ಣ ಅನಿರೀಕ್ಷಿತ ಘಟನೆ, ಹೊಸ ಸಾಧ್ಯತೆಯ ಬಾಗಿಲನ್ನು ಅವಳ ಮನಸ್ಸಿನಲ್ಲಿ ತೆರೆಯುತ್ತದೆ. ಅದೃಷ್ಟದ ಚಕ್ರ ಅವಳ ಬದುಕನ್ನು ಸ್ಪರ್ಶಿಸಿದ ಈ ಅಪೂರ್ವ ಕ್ಷಣದಿಂದಲೇ ಕತೆ ಆರಂಭವಾಗುತ್ತದೆ. ಅಚಾನಕ ಹನಿದ ಮಳೆಯಿಂದಾಗಿ ಸೊನಗಾರನ ಅಂಗಡಿ ಹೊಕ್ಕು ಆಶ್ರಯ ಪಡೆದ ಆ ಕೆಲವೇ ಗಳಿಗೆಗಳು ಭವಾನಿಯ ಬದುಕಿಗೆ ಹೊಸ ತಿರುವನ್ನೇ ಕೊಡುತ್ತವೆ. ತದನಂತರ ತನ್ನ ಜೀವನದಲ್ಲಿ ಜರುಗುವ ಹಲವು ಅತಿರೇಕಗಳನ್ನು ನಿಭಾಯಿಸಲು ಈ ಕ್ಷಣದ ದರ್ಶನಕ್ಕೆ ಅವಳು ಆತುಕೊಳ್ಳುತ್ತಾಳೆ.

ಚಿನ್ನದ ಬಳೆಯ ಅವಳ ಕನಸು ನಿಜವಾಗುವುದೇ ಆದರೆ ಅದರ ಮೊಟ್ಟಮೊದಲ ಮೆಟ್ಟಿಲು ಸೊನಗಾರನ ಅಂಗಡಿಯ ಪ್ರವೇಶ. ಈ ಪ್ರವೇಶ ಸಾಧ್ಯವಾಗುವುದೆಂಬ ಬಗ್ಗೆ ಅವಳಿಗೆ ಭರವಸೆ ಬಂದಿದ್ದು ಈ ಅನಿರೀಕ್ಷಿತ ಘಟನೆಯಿಂದ. ತಾನು ಎಂದೂ ಕಾಲಿಡಲಾರಳೆಂದು ಭಾವಿಸಿಕೊಂಡ ಅಂಗಡಿಯಲ್ಲಿ ಕಳೆದ ಕ್ಷಣಗಳ ಮೂಲಕ ಅವಳು ಮೊದಲ ಮೆಟ್ಟಲನ್ನು ಹತ್ತಿ ಆಚೆಯ ಲೋಕದಲ್ಲಿ ಇಣುಕುತ್ತಾಳೆ. ಬಂಗಾರ ತೊಡದಿರಲು ತನಗಿರುವ ಸ್ಪರ್ಶಪಿತ್ಥವೇ ಕಾರಣ ಎಂದು ಭವಾನಿ ನೆವಹೇಳುವುದು ಬಹಳ ಅರ್ಥಪೂರ್ಣವಾಗಿದೆ. ಇದು ಅವಳು ತನ್ನ ಕನಸನ್ನು ಹತ್ತಿಕ್ಕುವ ಉಪಾಯ ಮಾತ್ರ ಅಲ್ಲ ಅದನ್ನು ವಾಸ್ತವದಲ್ಲಿ ಗ್ರಹಿಸುವ ಕ್ರಮವೂ ಆಗಿದೆ. ಅಂದರೆ ಎಲ್ಲವೂ ಸ್ಪರ್ಶಗ್ರಾಹ್ಯವಾಗಬೇಕೆಂಬುದೇ ಅವಳ ಅಪೇಕ್ಷೆ. ಅದೇ ಅವಳು ಜೀವನವನ್ನು ಸ್ವೀಕರಿಸುವ ರೀತಿ.

ಈ ಕತೆಯೊಳಗೆ ಸ್ಪರ್ಶ ಮತ್ತು ವಾಸನೆಗಳಿಗೆ ವಿಶಿಷ್ಟವಾದ ಸ್ಥಾನವಿದೆ. ಮದುವೆ ಮನೆಯೊಳಗೆ ಬಂದ ಲೀಲಾಧರ ಸಾರ್ವಜನಿಕರೆದುರು ವಿಚಿತ್ರವಾಗಿ ಆಡಿದ ಕಾರಣ ಯಾರಿಗೂ ತಿಳಿಯದು. ಆ ಹೊತ್ತಿಗಾಗಲೇ ಬಹುಶಃ ಅವನಿಗೆ ಚಿತ್ತಭ್ರಮಣೆಯಾಗಿದ್ದಿರಬಹುದು. ಆ ರಾತ್ರಿ ಮಕ್ಕಳು ಹೋಗಲಿ ತನ್ನ ಕೈಗೆ ಒಂದು ಬಳೆಯೂ ಆಗಲಿಲ್ಲ ಎಂದು ಭವಾನಿ ಅತ್ತಾಗ ಲೀಲಾಧರ ಅವಳ ಬೆನ್ನನ್ನು ನೇವರಿಸುತ್ತ, ಚಾಪೆಯ ಹುಲ್ಲು ಅವಳ ಬೆನ್ನಲ್ಲಿ ಮೂಡಿಸಿದ ನಕ್ಷೆಗಳನ್ನು ಬೆರಳುಗಳಿಂದ ಸ್ಪರ್ಶಿಸುತ್ತಾನೆ. ಮತ್ತು ನಂತರ ಮಾತಿಲ್ಲದೇ ನಿರ್ಗಮಿಸುತ್ತಾನೆ. ಮುಂದೊಮ್ಮೆ ಯಲ್ಲಾಪುರದಲ್ಲಿ ಕಟ್ಟಿಗೆಯ ನಾಟಾದ ನಡುವೆ ಮಲಗಿದ್ದ ಅವನನ್ನು ಎಬ್ಬಿಸಿ ತರುವಾಗ ಅವನ ದೇಹದ ವಾಸನೆ ಅವಳನ್ನು ಸೆರೆಹಿಡಿಯುತ್ತದೆ. ವಾಸನೆ ಸ್ಪರ್ಶಗಳ ಮೂಲಕ ಅರಿವಿಗೆ ಬರುವ ದೈಹಿಕ ಪ್ರಪಂಚವೇ ಅವರಿಬ್ಬರ ನಡುವೆ ನಿಧಾನವಾಗಿ ಬದಲಾಗುತ್ತದೆ. ಜಯಂತ ಇದನ್ನು ಅತ್ಯಂತ ಸೂಕ್ಷ್ಮವಾಗಿ ಸೂಚಿಸುತ್ತಾರೆ. ಪ್ರತಿಯಾಗಿ ಅಷ್ಟೇ ಸೂಕ್ಷ್ಮಗ್ರಾಹಿತ್ವವನ್ನು ಓದುಗರಿಂದ ಬೇಡುತ್ತಾರೆ.

ಚಿತ್ತಭ್ರಮಣೆಯಾದ ಲೀಲಾಧರ ತನ್ನದೇ ಲೋಕವನ್ನು ಸೃಷ್ಟಿಸಿಕೊಂಡು ಅಲೆದಾಡುವ ಸುದ್ದಿ ಕಿವಿಗೆ ಬಿದ್ದು ಭವಾನಿ ಅವನನ್ನು ಹುಡುಕಿಕೊಂಡು ಹೊರಡುತ್ತಾಳೆ. ಕೊನೆಗೂ ಸಿಕ್ಕಿದವನು ಬುದ್ಧಿ ಭಾವಗಳಲ್ಲಿ ಬೇರೆಯದೇ ಮನುಷ್ಯನಾಗಿಬಿಟ್ಟ ಲೀಲಾಧರ. ಅವಳು ತನ್ನ ಹೆಂಡತಿ ಅನ್ನುವದೂ ಅವನಿಗೆ ಗೊತ್ತಿದ್ದಂತಿಲ್ಲ. ಆದರೆ ಭವಾನಿ ಮಾತ್ರ ಹಟ ಹಿಡಿದು ಅವನ ಆರೈಕೆಗೆ ತೊಡಗುತ್ತಾಳೆ. ಕತೆಯ ಸಂಕೀರ್ಣತೆ ಇಲ್ಲಿಂದ ಬೇರೆಯದೇ ಮಜಲಿಗೆ ಏರುತ್ತದೆ. ಭವಾನಿ ಲೀಲಾಧರನ ಜೊತೆ ಹೊಸ ಜಗತ್ತಿಗೆ ಕಾಲಿಡುತ್ತಾಳೆ. ಇದು ಅವಳ ಇನ್ನೊಂದು ಸಾಧ್ಯತೆಯ, ಅವರ ದಾಂಪತ್ಯ ಹೀಗೂ ಇರಬಹುದಿತ್ತು ಅನ್ನುವ ಸಾಧ್ಯತೆಯ ಜಗತ್ತು. ಸೊನಗಾರನ ಅಂಗಡಿಯಲ್ಲಿ ಅವಳಿಗೆ ಹೊಳೆದ ಸಾಧ್ಯತೆಯ ಮುಂದುವರಿಕೆ. ಈವರೆಗಿನ ಮದುವೆಯ ಸಂಬಂಧದ ಅರ್ಥಹೀನತೆಯನ್ನೇ ಎತ್ತಿ ತೋರಿಸುವಂತೆ ಇಲ್ಲಿಂದ ಅವಳ ಇನ್ನೊಂದು ಸಂಸಾರ, ಇನ್ನೊಂದು ದಾಂಪತ್ಯ ಶುರುವಾಗುತ್ತದೆ. ದೇಹವೊಂದನ್ನುಳಿದು ಹೊಸ ಮನುಷ್ಯನಂತೆಯೇ ಇರುವ ಅವನ ಜೊತೆಯದು ಹಾದರವೋ ದಾಂಪತ್ಯವೋ ತಿಳಿಯದ ಭವಾನಿ ತೊಳಲಾಡುತ್ತಾಳೆ. ಸಲುಗೆ ಬಳಕೆಗಳಲ್ಲಿ ಮುಚ್ಚಿಹೋದಂತಿದ್ದ ಕಾಮನೆಗಳು ಅಪರಿಚಿತವೆನಿಸಿದ ಸ್ಪರ್ಶಕ್ಕೆ ಚಿಗುರಿದಾಗ ಕಂಗೆಡುತ್ತಾಳೆ. ಈ ನೈತಿಕ ಸಂದಿಗ್ಧತೆ ಕತೆಯ ಕೇಂದ್ರ ಕಾಳಜಿಗಳಲ್ಲೊಂದಾಗಿದೆ.

ವಿಪರ್ಯಾಸದಂತೆ ಈ ಸ್ಥಿತಿಯಲ್ಲೇ ಇದೊಂದು ಆದರ್ಶ ದಾಂಪತ್ಯದ ಹಾಗೆ ತೋರುತ್ತದೆ. ಯಾವ ನೆನಪಿನ ಹಂಗೂ ಇಲ್ಲದ, ಸಮಾಜ ಸಂಬಂಧಗಳ ಯಾವ ಒಜ್ಜೆಯೂ ಇಲ್ಲದ ಕೇವಲ ಹೆಣ್ಣು ಗಂಡಿನ ನಡುವಿನ ಸಂಸಾರವಿದು. ಕನಸೇ ಇಳಿದು ಬಂದಂಥ ಒಡನಾಟವಿದು. ಏನನ್ನೂ ಒತ್ತಾಯದಲ್ಲಿ ಬೇಡದ, ಎಲ್ಲವನ್ನು ಸಹಜವಾಗಿ ಸ್ವೀಕರಿಸುವ ಸ್ಥಿತಿ. ಆರೈಕೆ ಮತ್ತು ಪ್ರೀತಿಯನ್ನು ಸಹ ಅವಳು ಕೊಟ್ಟಷ್ಟು ಅವನು ಪಡೆಯುತ್ತಾನೆ.

ಈ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲೋ ಎಂಬಂತೆ ಭವಾನಿ ಅವನನ್ನು ತಮ್ಮಿಬ್ಬರಿಗೂ ಗೊತ್ತಿದ್ದ ಲೋಕಕ್ಕೆ ಎಳೆಯಲು ಪ್ರಯತ್ನಿಸುತ್ತಾಳೆ. ಅವಳಿಗೆ ಅಲ್ಲಿ ಇದನ್ನು ಊರಿಸುವ ಆಸೆ. ತನಗೆ ಗೊತ್ತಿರುವ ಪ್ರಪಂಚದಲ್ಲಿಯೇ ಇದನ್ನು ಫಲಿಸಿಕೊಳ್ಳುವ ಆಸೆ. ಸಂದು ಹೋದ ತನ್ನ ಬಾಳಿಗೆ ಸಂಪರ್ಕಿಸಲೋ ಎಂಬಂತೆ ಅವನನ್ನು ತನ್ನ ಬಗ್ಗೆ ಕೇಳುತ್ತಾಳೆ. `ನಾನು ಯಾರು ಅಂತ ಹೇಳಿದರೆ ಏನೋ ವಿಶೇಷ ಸಿಹಿ ಉಂಟು…’  ಎಂದು ಕಾಡುತ್ತಾಳೆ. ಅವನು ಕೂಡ ತನ್ನನ್ನು ಬೇರೆ ಯಾರೋ ಆಗಿ ಕಂಡಿರಬಹುದೆನ್ನುವ ಅನುಮಾನ ಕಾಡತೊಡಗುತ್ತದೆ. ಅವನಿಗೆ ತಾನು ಅವನ ಹೆಂಡತಿಯೆನ್ನುವುದು ಗೊತ್ತೇ? ತಾನು ಭವಾನಿಯೆನ್ನುವುದು ಗೊತ್ತೇ?

ಕತೆಯ ಈ ಭಾಗಗಳು ವಿಚಿತ್ರ ನೋವಿನಿಂದ ಕೂಡಿವೆ. ಸಾಮಾಜಿಕತೆಯ ಮತ್ತು ಮಾನಸಿಕತೆಯ ಸೋಂಕೇ ಇಲ್ಲದ ಈ ಸ್ಥಿತಿ ಮನುಕುಲದ ಸಮಾಜಪೂರ್ವ ಅವಸ್ಥೆಯಂತಿದೆ. ಮತ್ತು ಈ ಅವಸ್ಥಾಂತರಕ್ಕೆ ಹಾತೊರೆಯುವ ಭವಾನಿ ಆದರ್ಶ ದಾಂಪತ್ಯದ ಕನಸನ್ನು ಬೆನ್ನಟ್ಟಿದ ಮನುಷ್ಯನ ಪ್ರತಿನಿಧಿಯಂತಿದ್ದಾಳೆ. ಈ ಶುದ್ಧ ಸ್ಥಿತಿ ಅವಳಿಗೆ ಹೆದರಿಕೆ ಹುಟ್ಟಿಸುತ್ತದೆ. ಜೊತೆಗೆ ತನ್ನದೇ ಅಸ್ತಿತ್ವದ ಪ್ರಶ್ನೆಗಳನ್ನು ಅವಳಲ್ಲಿ ಹುಟ್ಟಿಸುತ್ತದೆ. ತಾಟು ಲೋಟಗಳಿಗೆ ತನ್ನ ಹೆಸರು ಹಾಕಿಸುತ್ತಾಳೆ. ಬಿಟ್ಟು ಬಂದ ಸಂಬಂಧಗಳ ಲೋಕಕ್ಕಾಗಿ ಹಾತೊರೆಯತೊಡಗುತ್ತಾಳೆ. ಲೀಲಾಧರನನ್ನು ಹೇಗಾದರೂ ಅಲ್ಲಿ ಒಯ್ಯಲು ಬಯಸುತ್ತಾಳೆ. ಇದೆಲ್ಲವೂ ಕನಸನ್ನು ನಿಜದಲ್ಲಿ ತರುವಷ್ಟೇ ಅಸಾಧ್ಯವಾದುದೆಂಬುದು ಅರಿಯದವಳಂತೆ, ಹುಂಬತನದಲ್ಲಿ ಅವನನ್ನು ಮರಳಿ ಊರಿಗೆ ಒಯ್ಯಲು ತಯಾರಾಗುತ್ತಾಳೆ.

ಸುಳಿವು ಕೊಡದಂತೆ ಲೀಲಾಧರನನ್ನು ಸಿದ್ಧಪಡಿಸಿ, ಬಸ್ಸಿಗೆ ಕಾದು, ನಿದ್ದೆಹೋದ ಅವನನ್ನು ಹೇಗೋ ಬಸ್ಸು ಹತ್ತಿಸಿದ ನಂತರ ಅವನು ಒಮ್ಮೆಲೇ ಸ್ಫೋಟಿಸುತ್ತಾನೆ. ಇಟ್ಟುಕೊಂಡವಳ ಜಬರು ಕಟ್ಟಿಕೊಂಡವಳಿಗಿಂತ ಜಾಸ್ತಿ ಎಂದು ಕೂಗಿ ಹೊರಟುಹೋಗುತ್ತಾನೆ. ಈ ಮಾತಿನಲ್ಲೇ ಅವನು ಈವರೆಗೂ ಭವಾನಿಯನ್ನು ತನ್ನ ಹೊಸ ಜಗತ್ತಿನಲ್ಲಿ ಬಿಟ್ಟುಕೊಂಡಿಲ್ಲ ಅನ್ನುವುದು ಗೊತ್ತಾಗುತ್ತದೆ. ಎದುರು ಇರುವ ಅವಳನ್ನು ಕಾಣಲಾರದವನಾಗಿದ್ದಾನೆ. ಹಳೆಯ ಲೋಕದಲ್ಲಿ ಮಾತ್ರ ಭವಾನಿಯನ್ನು ಆತ ಹೆಂಡತಿಯಾಗಿ ನೋಡಬಲ್ಲ. ಈ ಕ್ಷಣದಲ್ಲಿ ಒಮ್ಮೆಲೇ ಇನ್ನೊಂದು ಲೋಕಕ್ಕೆ ತಳ್ಳಲ್ಪಟ್ಟ ಭವಾನಿ ಬೇರೆ ದಾರಿಯೇ ತೋಚದ ಅಸಹಾಯಕತೆಯಲ್ಲಿ, ನೀನು ಜೊತೆಗಿರಲಿ ಇಲ್ಲದಿರಲಿ ನನ್ನ ಕನಸನ್ನು ನಾನು ಬೆನ್ನಟ್ಟುತ್ತೇನೆ ಅನ್ನುವುದನ್ನು ಹೇಳುವವಳಂತೆ `ಈ ಸಲ ಬಳೆ ಮಾಡಿಸ್ಕಳ್ಳದೇ ಹೋದ್ರೆ ನಾನು ಭವಾನೀನೇ ಅಲ್ಲಾ…’ ಎಂದು ಬಸ್ಸಿನ ಕಿಟಕಿಯಿಂದ ತಲೆ ಆಚೆ ಹಾಕಿ ಕೂಗುತ್ತಾಳೆ.ಜಯಂತ ಕಾಯ್ಕಿಣಿ, ವಿವೇಕ್ ಶಾನಭಾಗ್

ಮಾಲಕೀತನದ ದುರಾಸೆಯಿಂದಾಗಿ, ಗೊತ್ತಿರುವ ಚೌಕಟ್ಟುಗಳಲ್ಲಿ ಕೂರಿಸುವ ಹಟದಿಂದಾಗಿ ಹುಡಿಗೊಳ್ಳುವ ದಾಂಪತ್ಯ ಜಯಂತರ ಕತೆಗಳಲ್ಲಿ ಹಲವು ಬಾರಿ ಬಂದಿದೆ. ಒಂದು ಮದುವೆಯಿಂದ ತಪ್ಪಿಸಿಕೊಂಡು ಇನ್ನೊಂದು ಕನಸಿನಲ್ಲಿ ಸಿಕ್ಕಿಬಿದ್ದ ದಗಡೂ ಇದ್ದಾನೆ. ಗಾಳಿಮರದ ನೆಳಲಲ್ಲಿ ಮರೆಯಾಗಿ ನಿಂತು ಹಾರೈಸುವ ಗೌರಿ ಇದ್ದಾಳೆ. ಇಬ್ಬರು ಹೆಂಗಸರನ್ನು ಸಮಾನ ನಿರ್ಲಿಪ್ತತೆಯಿಂದ ನೋಡುವ ಅಂತರಿಕ್ಷ ಕೊಠಾರಿ ಇದ್ದಾನೆ. ಇವೆಲ್ಲವೂ ಸಂಬಂಧಗಳ ನೆಲೆಯ ಗಾಢ ಹುಡುಕಾಟಗಳು. ಆದರೆ ಸ್ವಪ್ನದೋಷ ಕಥೆ ಈ ಎಲ್ಲವನ್ನೂ ದಾಟಿ ಇನ್ನೂ ಆಳದ ಅಗತ್ಯಗಳನ್ನು, ನಾಗರಿಕತೆಯ ಮೂಲದಲ್ಲಿರುವ ಸಹಜೀವನದ ನಿಯಮಗಳನ್ನು ಪರಿಶೀಲಿಸುತ್ತದೆ. ಎಲ್ಲಿಯೂ ಅತಿಯಾಗದೇ, ಸಹಜ ಸುಂದರ ಕತೆಯಾಗಿ ಖುಷಿಕೊಡುವ ಸ್ವಪ್ನದೋಷ ತನ್ನ ಸಂಕೀರ್ಣತೆಯಿಂದ ಮತ್ತೆ ಮತ್ತೆ ನನ್ನನ್ನು ಸೆಳೆದಿದೆ.