ಹಿಮಾಲಯದ ಕುಲು ಕಣಿವೆಯ ಚಾರಣಕ್ಕೆಂದು ಹೋದಾಗ ಮಲಾನಾ ಎಂಬ ಹಳ್ಳಿಯನ್ನು ನೋಡುವ ಉಕ್ಕು ಬಹಳ ಇತ್ತು. ಇದಕ್ಕೆ ಕಾರಣ, ಅದರ ಬಗ್ಗೆ ನಾನು ಓದಿದ್ದ ಮತ್ತು ಕೇಳಿದ್ದ ವಿಚಿತ್ರ ಕತೆಗಳು. ಉದಾಹರಣೆಗೆ: ಅಲ್ಲಿನ ಜನರು ಗ್ರೀಕ್ ಮೂಲದವರಂತೆ; ಅಲೆಕ್ಸಾಂಡರ್ ದಂಡಯಾತ್ರೆಗೆ ಬಂದಾಗ ಅವನ ಜತೆ ಹೋಗದೆ ಇಲ್ಲೇ ಉಳಿದ ಸೈನಿಕರ ಸಂತಾನವಂತೆ; ಜಗತ್ತಿನಲ್ಲಿ ಬೇರೆಲ್ಲೂ ಇರದ ಮಲಾನಿ ಭಾಷೆ ಆ ಹಳ್ಳಿಯಲ್ಲಿ ಮಾತ್ರ ಇದೆಯಂತೆ; ಅಲ್ಲಿರುವ ಪಂಚಾಯಿತಿ ವ್ಯವಸ್ಥೆಯು ಜಗತ್ತಿನ ಡೆಮಾಕ್ರಸಿಯ ಚರಿತ್ರೆಯಲ್ಲಿ ಬಹಳ ಮಹತ್ವದ್ದೆನಿಸುವ ಕಾರ್ಯವಿಧಾನ ಹೊಂದಿದೆಯಂತೆ ಇತ್ಯಾದಿ ಅಂತೆಗಳ ಸರಮಾಲೆ.

ಆದರೆ ಇಂತಹ ಪುರಾತನ ಮತ್ತು ಅದ್ಭುತ ಹಿನ್ನೆಲೆಯನ್ನು ಹೊಂದಿರುವ ಮಲಾನಿಗರು ತಮ್ಮ ಕಠೋರ ಆಚರಣೆಗಳಿಂದಲೂ ಪ್ರಸಿದ್ಧವಾಗಿದ್ದರು. ಮಲಾನಿಗಳಲ್ಲದವರ ಜತೆ ಅವರು ಅಸ್ಪೃಶ್ಯತೆ ಆಚರಿಸುತ್ತಿದ್ದರು. ತಮ್ಮ ದೇವರ ಗುಡಿಗಳಲ್ಲಿ ಕಳ್ಳತನ ಮಾಡಿದ ವ್ಯಕ್ತಿಯನ್ನು ಕಲ್ಲುಗುಂಡು ಕಟ್ಟಿ ಶಿಖರದ ತುದಿಯಿಂದ ಕೆಳಕ್ಕೆ ಉರುಳಿಸುವ ಶಿಕ್ಷಾವಿಧಾನಗಳೂ ಅವರಲ್ಲಿ ಒಂದು ಕಾಲಕ್ಕೆ ಜಾರಿಯಲ್ಲಿದ್ದವು. ಈಗಲೂ ಅವರ ಊರೊಳಗೆ ಯಾರು ಬೇಕಾದರೂ ಪ್ರವೇಶ ಮಾಡುವಂತಿಲ್ಲ. ಹೊರಗಿನವರು ಊರ ಮುಖಂಡರ ಅನುಮತಿ ಪಡೆದು ಪ್ರವೇಶ ಮಾಡಬೇಕು. ಒಳಗೆ ಬಂದಾಗ ಅವರ ವಸ್ತುಗಳನ್ನು, ದನ, ಮೇಕೆ, ಕುದುರೆ, ಮನೆ ಯಾವುದನ್ನೂ ಮುಟ್ಟುವಂತಿಲ್ಲ. ಮುಟ್ಟಿದರೆ ಪ್ರತಿಯೊಂದಕ್ಕೂ ಇಂತಿಷ್ಟು ಎಂದು ದಂಡಗಳಿವೆ. ಗುಡಿ ಮುಟ್ಟಿದರಂತೂ ಗರಿಷ್ಠ ದಂಡ; ಅವರ ದೇವರಿಗೆ ತೊಗಲ ವಸ್ತುಗಳೆಂದರೆ ಸೇರುವುದೇ ಇಲ್ಲ. ಊರು ಪ್ರವೇಶ ಮಾಡುವವರು ತೊಗಲಿನ ಚಪ್ಪಲಿ ಧರಿಸುವಂತಿಲ್ಲ. ತೊಗಲ ಪರ್ಸು-ಬೆಲ್ಟು ಇಟ್ಟುಕೊಳ್ಳುವಂತಿಲ್ಲ. ಅಲ್ಲಿ ಅವರದ್ದೇ ಕಾಯ್ದೆ. ಭಾರತದ  ಕಾನೂನು ಅಲ್ಲಿ ನಡೆಯುವುದಿಲ್ಲ. ಒಮ್ಮೆ ಪರ್ವತದ ಇಕ್ಕಟ್ಟು ದಾರಿಯಲ್ಲಿ ಬರುವಾಗ ಎದುರಾದ ಮಲಾನಿಗರ ಕುದುರೆ ಮರಿಯನ್ನು ಪ್ರವಾಸಿಗನೊಬ್ಬ ಖುಷಿಯಾಟಕ್ಕೆ ಬೆದರಿಸಿದ. ಅದು ಗಾಬರಿಯಿಂದ ಕಮರಿಗೆ ಬಿದ್ದುಹೋಯಿತು. ಅದಕ್ಕಾಗಿ ಮಲಾನಿಗರು ಇಡೀ ಪ್ರವಾಸಿಗರ ತಂಡವನ್ನು ಸೆರೆಯಾಳಾಗಿ ಇರಿಸಿಕೊಂಡಿದ್ದರು. ಅದೆಷ್ಟೊ ಸಾವಿರ ದಂಡ ತೆತ್ತ ಬಳಿಕ ಬಿಟ್ಟುಕೊಟ್ಟರು- ಒಟ್ಟಿನಲ್ಲಿ ಚಳಿನಾಡಲ್ಲಿ ಬೆವರ ಸೆಲೆ ಒಡೆಯುವಂಥ ಆತಂಕ ಹುಟ್ಟಿಸುವ ಕತೆಗಳು.

ಇದಕ್ಕೆ ಪೂರಕವಾಗಿ ಚಾರಣದ ವ್ಯವಸ್ಥೆ ಮಾಡಿದ್ದ ಸಂಸ್ಥೆಯ ಅಧಿಕಾರಿಗಳು, ಬೇಸ್‌ಕ್ಯಾಂಪಿನ ತರಬೇತಿ ಶಿಬಿರದಲ್ಲಿ ಮಲಾನಾ ಬಗ್ಗೆ ವಿಪರೀತ ಹೇಳಿದ್ದರು. ಗಂಡನ ಮನೆಯಲ್ಲಿ ಹೇಗೆಲ್ಲಾ ತಗ್ಗಿಬಗ್ಗಿ ನಡೆಯಬೇಕೆಂಬ ಉಪದೇಶವನ್ನು ಹೆತ್ತವರು ಹೆಮ್ಮಕ್ಕಳಿಗೆ ಕುಟ್ಟಿಕುಟ್ಟಿ ತುಂಬುತ್ತಿದ್ದಂತೆ, ವಿಧಿನಿಷೇಧಗಳ ಪ್ರವಚನ ಮಾಡಿ ನಮ್ಮಲ್ಲಿ ಭಯೋತ್ಪಾದನೆ ಮೂಡಿದ್ದರು.

ಇಂತಹ ಆತಂಕಿತ ಕತೆಗಳನ್ನು ಜಗತ್ತಿನ ಎಲ್ಲ ‘ನಾಗರಿಕ’ ಸಮಾಜಗಳು ತಂತಮ್ಮ ನಾಡಿನ ಬುಡಕಟ್ಟುಗಳಿಗೆ  ಸಂಬಂಧಿಸಿ ಕಟ್ಟಿಕೊಂಡಿವೆ. ಅಂಡಮಾನಿಗೆ ಹೋಗಿದ್ದಾಗ, ವಲಸಿಗರಾದ ಮಹಾದೇಶಿಗಳು ಅಲ್ಲಿನ ಜರವಾ ಸಮುದಾಯದ ಮೇಲೆ ಕಟ್ಟಿದ ಇಂತಹವೇ ಕತೆಗಳನ್ನು ಕೇಳಬೇಕಾಯಿತು. ಚೀನಾ ಆಫ್ರಿಕಾ ಭಾರತಗಳ ಮೇಲೆ ‘ನಾಗರಿಕ’ ಯುರೋಪು ಸಹ ಇಂತಹ ದಂತಕತೆಗಳನ್ನು ಸೃಷ್ಟಿಸಿದೆಯಷ್ಟೆ. ಆದರೆ ಹೊರಗಿನವರಿಗೆ  ಕಟ್ಟುಪಾಡು ಹಾಕುವುದು ಮಲಾನಿಗರ ವಿಶೇಷವೇನಲ್ಲ. ಜಗತ್ತಿನ ಎಲ್ಲ ಬುಡಕಟ್ಟುಗಳಲ್ಲೂ ಹೆಚ್ಚುಕಡಿಮೆ ಇವಿವೆ. ಕರ್ನಾಟಕದ ಕೆಲವು ಕಾಡುಗೊಲ್ಲರ ಹಟ್ಟಿಗಳಲ್ಲಿ ಮುಟ್ಟಾದ ಹೆಂಗಸರನ್ನು ಅಸ್ಪೃಶ್ಯರಿಗಿಂತ ಅತ್ತತ್ತವಾಗಿ ನೋಡುತ್ತಾರೆ. ಅವರನ್ನು ಊರೊಳಗೆ ಇರಗೊಡುವುದಿಲ್ಲ. ಹಟ್ಟಿಗೆ ದಲಿತರು ಪ್ರವೇಶಿಸಿದರೆ ದಂಡ ವಿಧಿಸುವುದುಂಟು. ಗುಡಿಯೊಳಗೆ ದಲಿತರು ಬರದಂತೆ ತಡೆಯುವ ಪದ್ಧತಿ ಹಳ್ಳಿಗಳಲ್ಲಿ ಈಗಲೂ ಇದೆ. ಮೆಕ್ಕಾ ಪಟ್ಟಣದಲ್ಲಿ ಮುಸ್ಲಿಮರಲ್ಲದವರಿಗೆ ಪ್ರವೇಶವಿಲ್ಲ. ತಾವು ಮತ್ತು ಅನ್ಯರು ಎಂಬ ತಾರತಮ್ಯದ ಮೇಲೆ ನಿಂತಿರುವ ಈ ವಿಧಿನಿಷೇಧಗಳು, ಎಲ್ಲ ಸಮಾಜಗಳಲ್ಲೂ ವಿವಿಧ ರೂಪಗಳಲ್ಲಿ ಜಾರಿಯಲ್ಲಿವೆ.

ಆದರೂ ಮಲಾನಿಗರು ದನಕರು ಮುಟ್ಟಿದರೂ ದಂಡ ಹಾಕುತ್ತಾರೆ ಎನ್ನುವುದು ಯಾಕೋ ಅತಿಯೆನಿಸಿತು. ಮುಟ್ಟಲು ನಿಷೇಧವಿರುವುದೇ ಮುಟ್ಟುವುದಕ್ಕೆ ಪ್ರಚೋದನೆ ಕೊಡುತ್ತದೆ. ಹುಗಲು ಅಡ್ಡಿಪಡಿಸುವುದೇ ಅತಿಕ್ರಮಕ್ಕೆ ಪ್ರೇರಿಸುತ್ತದೆ. ಆದ್ದರಿಂದ ಮಲಾನಿಗರು ದಂಡಹಾಕಿದರೂ ಸರಿ, ಆ ಊರನ್ನೊಮ್ಮೆ ನೋಡಬೇಕು ಎಂದು ಛಲ ಮೂಡಿತು.

ನಮ್ಮ ಬಿಡಾರವನ್ನು ಮಲಾನಾ ಹಳ್ಳಿಯಿಂದ ಎರಡು ಕಿ.ಮೀ. ದೂರದಲ್ಲಿ ಒಂದು ನದಿಯ ಕಿನಾರೆಯ ಹೊಲದಲ್ಲಿ ಹಾಕಲಾಗಿತ್ತು. ಎಲ್ಲ ಹಿಮ ನದಿಗಳಂತೆ ಮಲಾನಾ ನಾಲಾ (ಹಳ್ಳ) ಭೋರ್ಗರೆಯುತ್ತ ಹುಚ್ಚುಹಿಡಿದವರು ಓಡುವಂತೆ ಹರಿಯುತ್ತಿತ್ತು. ಅದು ಮುಂದೆ ಹೋಗಿ ಮಣಿಕರ್ಣಿಕೆಯ ಬಿಸಿನೀರಿನ ಬುಗ್ಗೆಗಳಿರುವ ಪಾರ್ವತಿ ನದಿಗೆ ಸೇರುತ್ತದೆ. ಈ ನದಿಯ ಸಂಕವನ್ನು ದಾಟಿ ಒಂದು ಕಡಿದಾದ ಪರ್ವತ ಏರಿ ಮಲಾನ ಗ್ರಾಮಕ್ಕೆ ಹೋಗಬೇಕು. ಬೆಳಗಿಂದಲೂ ಹಲವಾರು ಪರ್ವತಗಳನ್ನು ಹತ್ತೀ ಇಳಿದೂ ಹತ್ತೀ ಇಳಿದೂ ಬಂದಿದ್ದ, ನಮಗೆ ಕಾಲುಗಳು ಪದ ಹೇಳುತ್ತಿದ್ದವು. ದಣಿದ ದೇಹ ಮತ್ತೊಂದು ಪರ್ವತದ ತಿಟ್ಟನ್ನು ಹತ್ತಲು ನಿರಾಕರಿಸುತ್ತಿತ್ತು. ಆದರೆ ಮಲಾನಾ ಬಗ್ಗೆ ಕೇಳಿದ್ದ ದಂತಕತೆಗಳು ಹಳ್ಳಿಯನ್ನು ನೋಡಲು ಒತ್ತಾಯಿಸುತ್ತಿದ್ದವು.

ಹೊರಡುವ ಮುನ್ನ ಬಿಡಾರದಲ್ಲಿ ಮಲಾನಿಗರ ಅಸ್ಪೃಶ್ಯತೆಯ ಮೇಲೆ ಬಿಸಿಬಿಸಿ ಚರ್ಚೆ ಎದ್ದಿತು. ಮಲಾನಾ ಕುರಿತು ಹಬ್ಬಿಸಲಾಗಿದ್ದ ನಿಷೇಧಗಳ ಭಯಕ್ಕೆ ಕೆಲವರು ಬರಲು ಹಿಂದೇಟು ಹಾಕಿದರು. ‘ಮಲಾನಿಗಳು ಭಾರತದವರನ್ನು ಗೌರವಿಸುವುದಿಲ್ಲ, ವಿದೇಶಿಯರನ್ನು ಆದರಿಸುತ್ತಾರೆ’ ಎಂಬುದನ್ನು ಕೇಳಿದ ಕೆಲವರು ಕೆರಳಿ ಕೆಂಡವಾಗಿದ್ದರು; ಅವರು ‘ಈ ಮಲಾನಿಗಳು ತಮ್ಮನ್ನು ಏನಂತ ತಿಳಿದಿದಾರೆ? ನಮ್ಮ ಸೈನ್ಯ ಯಾಕೆ, ಕುಲುವಿನಿಂದ ಕೇವಲ ೫೦ ಜನ ಪೋಲಿಸರು ಬಂದರೆ ಸಾಕು. ಇಡೀ ಹಳ್ಳಿಯೇ ಚಿಂದಿ’ ಎಂದು ಗುರುಗುಟ್ಟುತ್ತಿದ್ದರು. ಕೊನೆಗವರು ಹೋಗಲು ಒಂದೇ ಕಾಲಲ್ಲಿ ನಿಂತಿದ್ದ ನಮ್ಮ ಕಡೆ ತಿರುಗಿ ‘ನಿಮಗೆ ನಾಚಿಕೆಯಾಗುವುದಿಲ್ಲವೇ ಭಾರತೀಯರಿಗೆ ಗೌರವವಿಲ್ಲದ ಊರಿಗೆ ಹೋಗಲು? ನಾವಂತೂ ಸತ್ತರೂ ಅಲ್ಲಿಗೆ ಕಾಲಿಡುವುದಿಲ್ಲ’ ಎಂದು ಘೋಷಿಸಿ ಟೆಂಟಿನಲ್ಲೇ ಉಳಿದರು. ಅವರ ಕಾಲುನೋವು ಕೂಡ ಈ ವೀರಸಂಕಲ್ಪಕ್ಕೆ ಕೊಂಚ ಕಾರಣವಾಗಿದ್ದಿರಬಹುದು. ವಿದೇಶಿಗರ ಬಂಡವಾಳ ಹೂಡಿಕೆಯಿಂದಲೇ ನಮ್ಮ ದೇಶದ ಏಳಿಗೆ ಎಂದು ನಂಬಿರುವ ನಮ್ಮ ಮಧ್ಯಮವರ್ಗದವರು, ಅದರಲ್ಲೂ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಮುಂಬೈ ಪುಣೆ ನಾಸಿಕ ಮುಂಬೈನ ತರುಣರು, ತಮ್ಮ ದೇಶಪ್ರೇಮವನ್ನು ಮಲಾನಿಗರ ವಿರುದ್ಧ ಕೆರಳಿಸಿಕೊಂಡಿದ್ದು ವಿಚಿತ್ರವಾಗಿ ತೋರುತ್ತಿತ್ತು. ಆದರೆ ಅಷ್ಟೊಂದು ಉಗ್ರ ದೇಶಾಭಿಮಾನವಿಲ್ಲದ ಭಂಡರ ಸಂಖ್ಯೆ ಅಲ್ಲಿ ಸಾಕಷ್ಟಿತ್ತು. ನಾವು ‘ಹೌದು ನಮಗೆ ನಾಚಿಕೆಯಿಲ್ಲ’ ಎಂದು ಅವರಿಗೆ ಬದಲು ಹೇಳಿ, ಮಲಾನಿಗರು ಮಾಡಬಹುದಾದ ಮುಜುಗರಕ್ಕೆ ಸಿದ್ಧವಾಗಿ ಹೊರಟೆವು. ಹೊರಡುವ ಮುನ್ನ ‘ಅಲ್ಲಿ ಏನಾದರೂ ಅನಾಹುತವಾದರೆ ಅದಕ್ಕೆ ನಾವೇ ಜವಾಬ್ದಾರರು’ ಎಂದು ಬಿಡಾರದ ಅಧಿಕಾರಿಗೆ ಮುಚ್ಚಳಿಕೆ ಬರೆದು ಕೊಡಬೇಕಾಯಿತು.

ಸ್ಥಳೀಯ ಮಾರ್ಗದರ್ಶಿ ಎಂಬ ಕಿನ್ನರಿ ಜೋಗಿಯ ಹಿಂದೆ ನಾವು ಭಯಭಕುತಿಯಿಂದ ಮಲಾನಾ ಪ್ರವೇಶ ಮಾಡುವಾಗ ಮುಸ್ಸಂಜೆಯಾಗುತ್ತಿತ್ತು. ಅದನ್ನು ಅಜಧೂಳೀ ಸಮಯ ಎನ್ನಬಹುದೇನೊ? ಕಾಡಿಗೆ ಮೇಯಲು ಹೋಗಿದ್ದ ಆಡು ಕುರಿಗಳು ಚೆನ್ನಾಗಿ ಮೇದು, ಡೋಲುಗಳಂತಿರುವ ತಮ್ಮ ಹೊಟ್ಟೆಗಳನ್ನು ಉಬ್ಬಿಸಿಕೊಂಡು ಬಳುಕುತ್ತ ಧೂಳೆಬ್ಬಿಸುತ್ತ ಕಣಿವೆಯ ತಳದಿಂದ ಮೇಲೆ ಹತ್ತಿ ಬರುತ್ತಿದ್ದವು. ಅವುಗಳ ಹಿಂದೆ ತಲೆಮೇಲೆ ಸೊಪ್ಪುಸದೆಯನ್ನೊ ಬೆನ್ನಮೇಲೆ ಕಟ್ಟಿಗೆಯನ್ನೊ ಹೊತ್ತು, ಕಂಕುಳಲ್ಲಿ ಅದೇ ತಾನೆ ಹುಟ್ಟಿದ ಎಳೆಮರಿಗಳನ್ನು ಕವುಚಿಕೊಂಡು ಹೆಂಗಸರು ಬರುತ್ತಿದ್ದರು. ಕೆಲವರ ಮುಖವೂ ಕಾಣದಂತೆ ಹುಲ್ಲು ಮಾಲೆಯಾಗಿ ಇಳಿಬಿದ್ದಿತ್ತು. ನಮ್ಮ ಬೆನ್ನಹಿಂದಿದ್ದ ಪರ್ವತದ ತಲೆಯ ಮೇಲೆ, ಕೆರೆಯಗಲದ ಕಪ್ಪು ಮೋಡವೊಂದು ರೂಪುಗೊಳ್ಳುತ್ತ, ಅಲ್ಲಿಂದ ಗಾಳಿಯನ್ನೂ ಗುಡುಗನ್ನೂ ಬುಲೆಟ್ಟುಗಳಂತಹ ಮಳೆಹನಿಗಳನ್ನೂ ಮುಂಗಡವಾಗಿ ನೆಲಕ್ಕೆ ರವಾನಿಸುತ್ತ, ಯಾವ ಹೊತ್ತಲ್ಲಾದರೂ ಬಂದೇನು ಎಂದು ನೋಟಿಸು ಕೊಡುತ್ತಿತ್ತು. ಬೀಳುತ್ತಿದ್ದ ಒಂದೊಂದು ಹನಿಯೂ ರೂಪಾಯಿ ಅಗಲದ ಒದ್ದೆಗುರುತನ್ನು ಮೂಡಿಸುತ್ತಿದ್ದವು.

ಮಲಾನ ಪ್ರಾಕೃತಿಕವಾಗಿ ಹಿಮಾಲಯ ಸೀಮೆಯಲ್ಲಿಯೇ ನಾನು ಕಂಡ ಸುಂದರವಾದ ಹಳ್ಳಿಗಳಲ್ಲಿ ಒಂದು. ಒಂದು ಬೃಹದಾಕಾರದ ಪರ್ವತದ ನಡುಭಾಗದಲ್ಲಿ ತಾಯಸೊಂಟದಲ್ಲಿ ಮಗು ನಿರಾಳವಾಗಿ ಕೂತಂತೆ ಅದಿತ್ತು. ಹಳ್ಳಿಯ ಹಿಂದೆ ಕಾಣುವ ಪರ್ವತದ ಉಳಿದರ್ಧ ಭಾಗದಲ್ಲಿ ತುದಿತನಕ ದಟ್ಟ ದೇವದಾರು ಕಾಡು ಮೆತ್ತಿಕೊಂಡಿತ್ತು. ಅದರ ಹಿಂದೆ ಬೂದುಬಣ್ಣದ ಬಾನು. ಪರ್ವತದ ನೆತ್ತಿಯಲ್ಲೆಲ್ಲೊ ಹುಟ್ಟಿ ಊರೊಳಗೆ ಮೂರು ಧಾರೆಗಳಲ್ಲಿ ಹರಿಯುತ್ತ ಜಲಪಾತವಾಗಿ ಧುಮುಕಿ ಕೆಳಗೆ ಹರಿವ ನದಿಯನ್ನು ಸೇರುವ ಝರಿಗಳು. ಝರಿಗಳ ಜಳಬಳ ನಾದವು ಊರತುಂಬ ಅನುರಣಿಸುತ್ತಿತ್ತು. ಮಲಾನಾದ ಎದುರು ದಿಕ್ಕಿನ ದಿಗಂತದಲ್ಲಿ ಸಾಲುಸಾಲು ಹಿಮತುಂಬಿದ ಪರ್ವತಶ್ರೇಣಿ. ನಡುವೆ ತೊಟ್ಟಿಲಿನಂತಹ ವಿಶಾಲ ಕಣಿವೆ. ಅದರ ತುಂಬ ಬಗೆಬಗೆಯ ಪಚ್ಚೆಪೈರು ತುಂಬಿದ ಹೊಲಗಳು. ಆ ಪೈರಿನಲ್ಲಿ ಭಂಗಿಸೊಪ್ಪಿನ ಪಾಲೇ ಹೆಚ್ಚು. ನಮ್ಮಲ್ಲಿ ಒಂದು ಗಿಡಸಿಕ್ಕರೆ ಪೊಲೀಸರು ಕೈದು ಮಾಡಿಕೊಂಡು ಹೋಗುತ್ತಾರೆ. ಇಲ್ಲಿ ನೂರಾರು ಎಕರೆಯಲ್ಲಿ ಅದನ್ನು ನಿರ್ಬಿಢೆಯಿಂದ ಬೆಳೆಯಲಾಗುತ್ತಿತ್ತು. ನಮ್ಮ ಬಿಡಾರವನ್ನಾದರೂ ಭಂಗಿಹೊಲದಲ್ಲೇ ಹಾಕಲಾಗಿತ್ತು. ಹಾಗೆ ಕಂಡರೆ, ಇಲ್ಲಿ ಭಂಗಿಗಿಡ ಬೆಳೆಯಲು ಹೊಲವೇ ಬೇಕಿರಲಿಲ್ಲ. ಅದು ತಿಪ್ಪೆಗಳಲ್ಲಿ, ಕಾಲುಹಾದಿಯ ಬದಿಯಲ್ಲಿ, ಕಾಡಕಳೆಯ ಹಾಗೆ ಎಲ್ಲಿಬೇಕಲ್ಲಿ ಸ್ವೇಚ್ಛೆಯಿಂದ ಬೆಳೆದಿತ್ತು. ಅಫೀಮು ಬೆಳೆಗೂ ಮಲಾನಾ ಖ್ಯಾತಿಯಂತೆ. ಆದರೆ ಅದು ನಮಗೆ ಕಾಣಲಿಲ್ಲ.

ಮಲಾನಾ ಆರ್ಥಿಕವಾಗಿ ಸ್ಥಿತಿವಂತ ಹಳ್ಳಿಯೆಂದು ಹೇಳಬಹುದು. ಊರಲ್ಲಿ ಕಲ್ಲುಚಪ್ಪಡಿ ಹಾಕಿ ಕಾಲುರಸ್ತೆ ಮಾಡಿದ್ದರು. ಅದರ ಮೇಲೆಯೇ ನಡೆಯಬೇಕು. ಮೂತ್ರಕ್ಕೆ ಬಿಟ್ಟ ಎಲ್‌ಕೆಜಿ ಕ್ಲಾಸ್ ಮಕ್ಕಳಂತೆ ನಾವು ಇರುವೆ ಸಾಲಾಗಿ ಕೈಯಲ್ಲಿ ಜೀವ ಹಿಡಿದುಕೊಂಡು ಊರ ಹೊಕ್ಕೆವು. ಮಲಾನಿಗರು ಮರದ ಹಲಗೆ ದಿಮ್ಮಿ ಬಳಸಿ ಮಾಡಿದ ಮನೆಗಳ ಕಟ್ಟೆ ಮತ್ತು ಉಪ್ಪರಿಗೆಗಳಲ್ಲಿ ಕುಳಿತಿದ್ದರು. ಅವರು ಹಿಮಾಲಯದ ಎಲ್ಲ ಕೃಷಿಕ ಮತ್ತು ಪಶುಪಾಲಕ ಹಳ್ಳಿಗರಂತೆಯೆ ಇದ್ದರು. ಗ್ರೀಕ್ ಮೂಲದ ಅವರಿಗೇ ವಿಶಿಷ್ಟವಾದ ಚಹರೆಯಿದೆ ಎಂದೇನೂ ಅನಿಸಲಿಲ್ಲ. ಆದರೂ ಅವರು ಹೊರಗಿನವರೊಡನೆ ಸರಳವಾಗಿ ಬೆರೆಯದಂತೆ ಇರುವುದು ನಿಜವಾಗಿತ್ತು. ಅವರಿಗೆ ಅವರದೇ ಆದ ಊರು, ಭಾಷೆ, ಸಮುದಾಯ, ಸಂಸ್ಕೃತಿ ಇತ್ತು. ಆದರೂ ತಮ್ಮ ಗ್ರೀಕ್ ಮೂಲದ ಬಗ್ಗೆ ಹೆಮ್ಮೆಯಿದೆಯೊ ಇಲ್ಲವೊ ತಿಳಿಯಲಿಲ್ಲ. ಈ ಹೆಮ್ಮೆಯನ್ನು ಅವರ ಮೇಲೆ ಹೊರಗಿನವರೇ ಆರೋಪಿಸಿದಂತಿತ್ತು. ಎರಡೂವರೆ ಸಾವಿರ ವರ್ಷಗಳ ಕಾಲ ಹಾಗೆ ಬೆರಕೆಯಿಲ್ಲದೆ ಸಮುದಾಯವೊಂದು ತನ್ನ ಸಂಸ್ಕೃತಿಯನ್ನು ಇಟ್ಟುಕೊಳ್ಳಲು ಸಾಧ್ಯವೇ? ಅವರ ಮೇಲಿನ ದಂತಕತೆಗಳು ಅರೆಸತ್ಯ ಅನಿಸಿತು. ಯಾವತ್ತೂ ನಾಗರಿಕ ಸಮಾಜಗಳು ತಮಗೆ ಅರ್ಥವಾಗದ ಅಥವಾ ಮಣಿಯದ ಸಮುದಾಯಗಳನ್ನು ಕರಾಳಗೊಳಿಸುತ್ತವೆ. ಕೆಲವೊಮ್ಮೆ ನಾಗರಿಕ ಸಮಾಜಗಳಲ್ಲಿ ರಾಜಕೀಯವಾಗಿ ಡೆಮಾಕ್ರಸಿಯಿರುತ್ತದೆ; ಸಾಂಸ್ಕೃತಿಕವಾಗಿ ಡೆಮಾಕ್ರಟಿಕ್ ಸಹನೆ ಇರುವುದಿಲ್ಲ.

ಹಿಮಾಲಯದ ಇತರ ಸಮುದಾಯಗಳಿಗೂ ಮಲಾನಿಗರಿಗೂ ಎರಡು ವಿಷಯದಲ್ಲಿ ವ್ಯತ್ಯಾಸ ಇದ್ದುದು ನಿಜ. ಒಂದು: ಉಳಿದವರಿಗಿಂತ ಅವರು ಹೆಚ್ಚು ಆರೋಗ್ಯಕರ ದೇಹವನ್ನು ಹೊಂದಿದ್ದರು. ಎರಡು: ಮಲಾನಿಗರು ಸೇಬನ್ನು ಬೆಳೆಯುತ್ತಿರಲಿಲ್ಲ. ಸೇಬಿನ ಬೆಳೆಗೆ ಬೇಕಾದ ವಾತಾವರಣ ಇಲ್ಲಿ ಇಲ್ಲವೊ, ಅದು ಹೊರ ಜಗತ್ತಿನೊಡನೆ ಸಂಬಂಧ ಕಲ್ಪಿಸುತ್ತದೆಯೆಂದು ಕೈಬಿಟ್ಟರೊ ತಿಳಿಯದು. ಸೇಬು ಬೆಳೆದರೆ ಅದನ್ನು ಮಾರುಕಟ್ಟೆಗೆ ಸಾಗಿಸುವುದು ಕಷ್ಟವೆಂದೇ ಅವರು ಅದನ್ನು ಕೈಬಿಟ್ಟಿರಬೇಕು. ಈ ದುರ್ಗಮ ಊರಲ್ಲಿ ಸೇಬು ಬೆಳೆದರೂ, ಅದನ್ನು ಪಕ್ಕಾರಸ್ತೆಗೆ ತಲುಪಿಸಲು ಕನಿಷ್ಠ ೨೫ ಕಿಮಿ ಹೋಗಬೇಕು. ಅದೂ ಭಾರವನ್ನು ಬೆನ್ನುಹೊರೆಯಲ್ಲಿ ಸಾಗಿಸಬೇಕು. ಇದಕಂಡು ಮಲಾನಿಗರು ತಮಗೆ ಅಗತ್ಯವಾದ ದವಸ ಧಾನ್ಯ ಕಾಯಿಪಲ್ಲೆ ಬೆಳೆದುಕೊಂಡು, ದನಕರು ಅಡುಮೇಕೆ ಸಾಕಿಕೊಂಡು ಆರಾಮಾಗಿ ಇದ್ದಂತೆ ಕಾಣುತ್ತಿತ್ತು. ಬಹುಶಃ ಗಾಂಜಾ ಅಫೀಮುಗಳೇ ಅವರಿಗೆ ಸೇಬಿಗಿಂತ ಹೆಚ್ಚಿನ ಆಮೇದಾನಿಯನ್ನು  ತಂದುಕೊಟ್ಟಿದ್ದವು ಎನ್ನಬಹುದು.

ಊರು ಪ್ರಾಚೀನ ಎಂಬುದು ಮೇಲುನೋಟಕ್ಕೇ ತಿಳಿಯುತ್ತಿತ್ತು. ಮರದ ಕೆತ್ತನೆಯುಳ್ಳ ಎರಡು ಮೂರು ಅಂತಸ್ತಿನ ಹಳೆಯ ಕಲಾತ್ಮಕ ಮನೆಗಳು. ಕೆಳಗಿನ ಮನೆ ದನದ ಕೊಟ್ಟಿಗೆ. ಎರಡನೆಯದು ದವಸ ತುಂಬುವ ಉಗ್ರಾಣ. ಮೂರನೆಯದರಲ್ಲಿ ಜನವಾಸ. ಮಲಾನಾದ ಯಜಮಾನರ ಮತ್ತು ಪುರೋಹಿತನ ಮನೆಗಳು ಭವ್ಯವಾಗಿದ್ದು ಅವೂ ಕಲಾತ್ಮಕ ಕೆತ್ತನೆಗಳಿಂದ ಕೂಡಿದ್ದವು. ಊರಲ್ಲಿ ಎರಡು ಗುಡಿಗಳಿದ್ದವು. ಒಂದು ಜಮ್ಲು (ಜಮದಗ್ನಿ) ರಿಸಿಯದು. ಇನ್ನೊಂದು ರೇಣುಕೆಯದು. ನನಗೆ ನಮ್ಮ ಸವದತ್ತಿಯ ಎಲ್ಲಮ್ಮ ನೆನಪಾದಳು. ಹಿಮಾಲಯದಲ್ಲಿ ಪರಶುರಾಮ, ರೇಣುಕೆ, ಜಮದಗ್ನಿಯರು ಬಹಳ ಜನಪ್ರಿಯ ದೈವಗಳು. ಇದಕ್ಕೆ ಕಾರಣವೇನೊ ತಿಳಿಯದು. ಆದರೆ ಮಲಾನಿಗರ ಗುಡಿಗಳ ವಾಸ್ತುಶಿಲ್ಪವು ಮನಾಲಿಯ ಹಿಡಿಂಬಾದೇವಿ ಇಲ್ಲವೇ ಕುಲುವಿನ ಬಿಜಲಿ ಮಹಾದೇವ ಗುಡಿಗಳನ್ನೇ ಹೋಲುತ್ತಿತ್ತು.  ಗುಡಿಗಳಿಗೆ ಬಲಿಪ್ರಾಣಿಗಳ ಕೊಂಬುಗಳನ್ನು ಸಿಕ್ಕಿಸಿದ್ದರು. ಗುಡಿಗಳು ಮರಗೆತ್ತನೆಗಳಿಂದ ತುಂಬಿತುಳುಕುತ್ತಿದ್ದವು. ನವಿಲು ಕುದುರೆ ಆನೆ ಹಕ್ಕಿ ಎಲೆ ಹೂವು ನರ್ತಕಿಯರು, ಜಿಂಕೆ ಬೇಟೆಯಾಡುವವರು ಹಾಗೂ ಯುದ್ಧದ ಸನ್ನಿವೇಶಗಳು ಎದ್ದುಕಾಣುತ್ತಿದ್ದವು. ಮಲಾನಿಗರು ಮೂಲತಃ ಸೈನಿಕ ಸಂಸ್ಕೃತಿಯವರು ಎಂಬ ಚಾರಿತ್ರಿಕ ವಾದವನ್ನು ರುಜುವಾತುಗೊಳಿಸುವ ಪುರಾವೆಯಂತೆ, ಕುದುರೆ ಸವಾರರ ಶಿಲ್ಪಗಳಿದವು. ಹಿಮಾಲಯ ಸೀಮೆಯಲ್ಲಿ ಕುದುರೆ ಜನಪ್ರಿಯ ಜಾನುವಾರು. ಸೀಮೆಂಟಿನಿಂದ ಹಿಡಿದು ಮೊಟ್ಟೆಯ ತನಕ ನೂರೆಂಟು ಕಿರಾಣಿ ವಸ್ತುಗಳನ್ನು ಹೇರಿಕೊಂಡು ಅದು ಮುಖಾಮುಖಿ ಆಗುತ್ತಿತ್ತು. ಹಿಮಾಲಯದ ಎಲ್ಲ ಭಾಗಗಳಲ್ಲೂ ಮೇಯುವ ಕೆನೆಯುವ ಚಲಿಸುವ ಕುದುರೆಗಳನ್ನು ಕಾಣಬಹುದು.

ನನಗೆ ಗುಡಿಗಳನ್ನು ಮತ್ತಷ್ಟು ಹತ್ತಿರದಿಂದ ನೋಡುವ ಆಸೆ. ಆದರೆ ಗುಡಿಗಿರಲಿ, ಅದರ ಅಂಗಳಕ್ಕೂ ಪ್ರವೇಶವಿರಲಿಲ್ಲ. ಮಲಾನಿಗರು ಜಗುಲಿಗಳ ಮೇಲೆ ಆರಾಮಾಗಿ ಕೂತು, ಜಿಂಕೆಯಂತೆ ಬೆದರಿ ನಡೆಯುತ್ತಿದ್ದ ನಮ್ಮನ್ನು ತಮಾಶೆಯಿಂದ ನೋಡುತ್ತಿದ್ದರು. ಪಡ್ಡೆಗಳ ಗುಂಪೊಂದು, ಹೆದರಿದವರ ಮೇಲೆ ಹಾವೆಸೆದರು ಎಂಬಂತೆ ‘ಹೋಯ್’ ಎಂದು ಕೂಗಿ, ನಮ್ಮನ್ನು ಕಂಗಾಲನ್ನು ಕಂಡು ನಕ್ಕಿತು. ಈ ಜಮದಗ್ನಿಗಳಿಗೆ ಹೋಲಿಸಿದರೆ, ಮಲಾನಿ ಹೆಂಗಸರೇ ಒಳ್ಳೆಯವರು. ಸ್ವತಃ ದೂರ ನಿಂತು ನಮಗೆ ದಾರಿಬಿಡುತ್ತಿದ್ದರು. ಅದು ಗೌರವವೊ ಅಸ್ಪೃಶ್ಯತೆಯೊ ತಿಳಯದು.

ಮಲಾನಾಕ್ಕೆ ಹೋಗಲು ಎರಡು ದಾರಿಗಳಿವೆ. ಒಂದು-ರಶೋಲ್ ಪಾಸ್. ಇನ್ನೊಂದು ಚಂದ್ರಖಾನಿ ಪಾಸ್. ಎತ್ತಲಿಂದ ಬಂದರೂ ೨೫ ಕಿಮಿ ನಡೆಯಲೇ ಬೇಕು. ಕಡಿದಾದ ಪರ್ವತಗಳನ್ನು ಹತ್ತಲೇಬೇಕು. ಕುಲುಕಣಿವೆಯ ಪ್ರಸಿದ್ಧ ಟ್ರೆಕ್ಕಿಂಗ್ ಹಾದಿಯಲ್ಲಿ ನಟ್ಟನಡುವೆ ಮಲಾನಾ ಅನಿವಾರ್ಯವಾಗಿ ಸಿಗುತ್ತದೆ. ಚಳಿಗಾಲದಲ್ಲಿ ಅದರ ಕಣಿವೆಗಳ ತುಂಬ ಹಿಮಸುರಿದು ಮಲಾನಾ ಹೊರಜಗತ್ತಿನಿಂದ ಕತ್ತರಿಸಿ ಹೋಗುತ್ತದೆ. ಮಲಾನಾದ ಭೌಗೋಳಿಕ ದುರ್ಗಮತೆಯೇ ಅದರ ವಿಶಿಷ್ಟತೆಯಾಗಿತ್ತು. ಅಥವಾ ಯಾವ ಘಟನೆ ಅವರ ಒಳಮುದುರಿಕೆಗೆ ಕಾರಣವಾಗಿದೆಯೊ ತಿಳಿಯಬೇಕಿದೆ. ಆದರೆ ಪ್ರತ್ಯೇಕ ಜೀವನವು ಅವರ ಸಂಸ್ಕೃತಿಗೆ ಒಂದು ಬಗೆಯ ಅನನ್ಯತೆ ತಂದಿರುವುದು ನಿಜ.ಇದಕ್ಕೆ ಅವರ ಭಾಷೆ ಮುಖ್ಯ ಸಾಕ್ಷಿ. ಮಲಾನಿ ಭಾಷೆ ಇಲ್ಲಿ ಬಿಟ್ಟರೆ ಜಗತ್ತಿನ ಬೇರೆಲ್ಲೂ ಇಲ್ಲ. ತಮ್ಮ ಭಾಷೆಯನ್ನು ಅವರು ಕನಶಿ ಎಂದು ಕರೆದುಕೊಳ್ಳುತ್ತಾರೆ. ಅದೊಂದು ಸಂಸ್ಕೃತ ಟಿಬೆಟಿಯನ್‌ಗಳ ವಿಚಿತ್ರ ಮಿಶ್ರಣವುಳ್ಳ ಭಾಷೆ ಎಂದು ಭಾಷಾತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದು ಹೊರಗಿನವರಿಗೆ ತಟ್ಟನೆ ಅರಿವಾಗದ ಕಾರಣ, ರಹಸ್ಯ ಭಾಷೆಯಂತೆ ತೋರುತ್ತದೆ. ಈ ಭಾಷೆಯನ್ನು ಕಲಿತ ಮಲಾನಿಗನಲ್ಲದ ಮನುಷ್ಯ ಎಂದರೆ ಆ ಊರಿನ  ಕಮ್ಮಾರ. ಅವನನ್ನು ಮಲಾನಿಗರು ಕೆಳಗೆ ಕಣಿವೆಯಿಂದ ತಂದು ಇಟ್ಟುಕೊಂಡಿದ್ದಾರೆ. ಅರ್ಧ ಶತಮಾನದಿಂದ ಅವನಿದ್ದರೂ, ಅವನ ಜತೆ ಅವರು ಹಿಂದಿಯಲ್ಲೇ ಮಾತಾಡುತ್ತಾರಂತೆ. ಅವನಿಗೆ ಕನಶಿ ಮಾತಾಡುವ ಅವಕಾಶ ಕೊಟ್ಟಿಲ್ಲವಂತೆ. ಇದರ ಬಗ್ಗೆ ಕುತೂಹಲ ಹುಟ್ಟಿಸುವ ವರದಿಗಳು ಪ್ರಕಟವಾಗಿವೆ.

ನಾವು ನಡೆಯುವಾಗ ಅಲ್ಲೊಂದು ಕಡೆ ‘ಮುರುಕು ಧರುಮ ಶಾಲೆ’ಯಲ್ಲಿ ಸ್ಕೂಲು ನಡೆಯುತ್ತಿತ್ತು. ಹತ್ತು ಹನ್ನೊಂದು ಮಕ್ಕಳು ಜಗುಲಿಯಲ್ಲಿ ಕುಳಿತಿದ್ದವು. ಶಾಲೆಯಲ್ಲಿ ಹಿಂದಿ ಮತ್ತು ಸಂಸ್ಕೃತ ಕಲಿಸಲಾಗುತ್ತದೆಯಂತೆ. ಮಕ್ಕಳು ಪಠ್ಯಪುಸ್ತಕಕ್ಕಿಂತ ಊರು ನೋಡಲು ಬರುವ ಪ್ರವಾಸಿಗರ ಅಧ್ಯಯನದಲ್ಲೇ ಹೆಚ್ಚು ಪರಿಣತರಾಗಿದ್ದವು ಅನಿಸಿತು. ಕಣ್ಣನ್ನೆಲ್ಲ ನಮ್ಮ ಮೇಲೆ ನಟ್ಟು ಕೈಯಲ್ಲಿ ಬುಕ್ಕು ಹಿಡಿದು ಬಾಯಲ್ಲಿ ಮಗ್ಗಿಯನ್ನು ಕೂಗಿಕೂಗಿ ಹೇಳುತ್ತಿದ್ದವು.

ನನಗೆ ಮಲಾನಿಗರ ‘ಹಕೀಮಾ’ ಹೆಸರಿನ ಪಂಚಾಯಿತಿ ವ್ಯವಸ್ಥೆ ಬಗ್ಗೆ ತಿಳಿಯುವ ಆಸಕ್ತಿಯಿತ್ತು. ಪ್ರಾಚೀನ ಗ್ರೀಕ್ ಜನಪ್ರಭುತ್ವದ ಪಳೆಯುಳಿಕೆಯಂತಿದ್ದ ಅದಕ್ಕೆ ಎರಡು ಸ್ತರಗಳಿವೆ. ಒಂದು ಮೇಲ್ಮನೆ. ಇನ್ನೊಂದು ಕೆಳಮನೆ. ಒಂದರಲ್ಲಿ ಪಾಸಾದ ತೀರ್ಮಾನವು ಇನ್ನೊಂದರಲ್ಲಿ ಚರ್ಚೆಗೆ ಒಳಗಾಗಿ ತಿದ್ದುಪಡಿ ಪಡೆಯುತ್ತದೆ ಇಲ್ಲವೇ ನಿರಾಕೃತವಾಗುತ್ತದೆ ಎಂದು ಓದಿದ್ದೆ. ಇದನ್ನು ಅರಿಯಲು ಜನರ ಜತೆ ಚರ್ಚಿಸಬೇಕು. ಆದರೆ ಯಾರ ಜತೆ ಮಾತಾಡುವುದು? ಸಮಯವೂ ಇಲ್ಲ. ಕತ್ತಲಾಗುವುದರೊಳಗೆ ಬಿಡಾರ ಸೇರಿಕೊಳ್ಳಬೇಕೆಂದು ಅಪ್ಪಣೆಯಾಗಿತ್ತು. ಊರೊಳಗೆ ಒಂದು ಸುತ್ತುಹಾಕಿ ಹೊರ ಬಂದದ್ದಾಯಿತು. ಜೀವಂತ ಬದುಕು ತುಂಬಿದ ಊರು ಒಂದು ಸುತ್ತಿನಲ್ಲಿ ತಿಳಿಯಲು ಅದೇನು ಮ್ಯೂಸಿಯಮ್ಮೇ? ಅನ್ಯಗ್ರಹದ ಜೀವಿಗಳನ್ನು ನೋಡಲು ಹೋದವರಂತೆ ನಮ್ಮದೇ ದೇಶದ ಜನರನ್ನು ನೋಡಲು ಹೋದ ಬಗ್ಗೆ ನಮ್ಮ ಬಗ್ಗೆ ನಮಗೇ ಕೆಟ್ಟದ್ದೆನಿಸುತ್ತಿತ್ತು. ಇದಕ್ಕೆ ಮಲಾನಿಗರೂ ಅರ್ಧ ಕಾರಣ.

ಮಲಾನಿಗರು ಹೊರಗಿನವರ ಜತೆ ಬೆರೆಯಲು ನಿರಾಕರಿಸಲು ಚಾರಿತ್ರಿಕ ಕಾರಣಗಳೇನೇ ಇರಲಿ, ಪ್ರಶ್ನೆಯೆಂದರೆ ಅವರು ನಿಜವಾಗಿಯೂ ತಮ್ಮ ಅನನ್ಯತೆ ಉಳಿಸಿಕೊಂಡಿದ್ದಾರೆಯೇ? ಈ ಸಂಶಯ ಕೀಟದಂತೆ ಕೊರೆಯುತ್ತಿತ್ತು. ಮಾರ್ಗದರ್ಶಿಗೆ ಮೆಲ್ಲಗೆ ಕೇಳಿದೆ: ‘ಹೊರಗಿನವರು ಮಲಾನಿಗಳನ್ನು ಮದುವೆಯಾಗಿರುವುದುಂಟೆ?’. ಆತ  ಆಸುಪಾಸಿನ ಹಳ್ಳಿಯ ಹುಡುಗರು ಕುರಿ ದನ ಕಾಯಲು ಹೊಲಕ್ಕೆ ಕಟ್ಟಿಗೆ ತರಲು ಹೋಗುವ ಮಲಾನಿ ತರುಣಿಯರನ್ನು ವರಿಸಿ, ಹಾರಿಸಿಕೊಂಡು ಹೋಗಿರುವ ಪ್ರಸಂಗಗಳನ್ನು ಹೇಳತೊಡಗಿದ. ಮಲಾನದ ಹುಡುಗರೂ ಏನು ಕಮ್ಮಿಯಲ್ಲ. ಬೇರೆ ಸಮುದಾಯದ ಹುಡುಗಿಯರನ್ನು ಕರೆದುಕೊಂಡು ಬಂದು ಇಟ್ಟುಕೊಂಡಿರುವುದೂ ಉಂಟಂತೆ. ಉತ್ತರಾಂಚಲದ ಪರ್ವತಗಳಲ್ಲಿ ಅಲೆಯುವಾಗ, ನೋಡಲು ಕೆಂಪಗೆ ಎತ್ತರಕ್ಕೆ ಇರುವ ಅಲೆಮಾರಿ ಪಶುಪಾಲಕರಾದ ಮುಸ್ಲಿಂ ಗುಜ್ಜರರನ್ನು ನಾನು ಭೇಟಿಮಾಡುವಾಗಲೂ ಇಂತಹುದೇ ಕತೆಗಳನ್ನು ಕೇಳಲ್ಪಟ್ಟೆ. ಆಗ ಅವರು ತಮ್ಮ ಚೆಂದುಳ್ಳಿಯರನ್ನು ಸ್ಥಳೀಯ ಪಹಾಡಿ ಹುಡುಗರು ಪ್ರೇಮಿಸಿ ಅಪಹರಿಸಿಕೊಂಡು ಹೋಗಿರುವುದನ್ನು ಹೇಳಿಕೊಂಡಿದ್ದರು. ತಮ್ಮನ್ನು ದ್ವೀಪದ ಹಾಗೆ ಪ್ರತ್ಯೇಕ ಮಾಡಿಕೊಂಡು ಹಠದಿಂದ, ಬದುಕುತ್ತಿರುವ ಕರ್ನಾಟಕದ ಟಿಬೆಟಿಯನ್ ಕ್ಯಾಂಪುಗಳಾದ ಬೈಲುಕುಪ್ಪೆ, ಮುಂಡಗೋಡುಗಳಲ್ಲಿಯೂ, ಅಲ್ಲಿನ ಶಾಕುಂತಲೆಯರನ್ನು ಸ್ಥಳೀಯ ದುಷ್ಯಂತರು ಗಾಂಧರ್ವ ವಿಧಿಯಲ್ಲಿ ಪ್ರೇಮಿಸಿ, ಮನೆದುಂಬಿಸಿಕೊಂಡಿರುವ ಪ್ರಕರಣಗಳನ್ನು ನಾನು ಕೇಳಿದೆ. ಕೇಳುವುದೇನು? ಬೈಲುಕುಪ್ಪೆಯಲ್ಲಿ ಟಿಬೆಟಿಯನ್ ಚೆಲುವೆಯನ್ನು ಲಗ್ನವಾಗಿ ಕಾಲುಶತಮಾನ ಬಾಳ್ವೆ ಮಾಡಿರುವ ಸಣ್ಣ ಎಂಬುವರನ್ನು ಹೋಗಿ ಭೇಟಿ ಕೂಡ ಆದೆ. ಸಣ್ಣನ ದಾಂಪತ್ಯ ಚೆನ್ನಾಗಿ ನಡೆದಿತ್ತು. ರಾಗಿಯ ಮೇಲೆ ಅಕ್ಕಿಯನ್ನು ಮಿಲ್ಲಿಗೆ ಹಾಕಿಕೊಂಡು ಬಂದಂತಿದ್ದ ಅವರ ಮಕ್ಕಳು ಚೆನ್ನಾಗಿದ್ದರು. ಜಗತ್ತಿನಲ್ಲಿ ಯಾವುದೇ ಸಮುದಾಯವು ಶ್ರೇಷ್ಠತೆ ಪವಿತ್ರತೆ ಅನನ್ಯತೆಗಳ ಹಠದಲ್ಲಿ ಕಟ್ಟಿಕೊಂಡ ಕೋಟೆಗಳನ್ನು ಪ್ರೇಮಿಗಳು ಲಗ್ಗೆಹತ್ತಿ ಸೋಲಿಸದೆ ಬಿಟ್ಟಿಲ್ಲ. ಇದೇ ಮಲಾನಿಗರ ಪೂರ್ವಜರಾದ ಗ್ರೀಕರ ಮಹಾಕಾವ್ಯಗಳೆಲ್ಲ ಹೆಲೆನಳನ್ನು ಪ್ಯಾರಿಸನು ಎತ್ತಿಕೊಂಡ ಹೋದ ಘಟನೆಯ ಪರಿಣಾಮ ತಾನೇ? ಕನ್ನಡದಲ್ಲಿ ‘ಕುಸುಮಬಾಲೆ’ ಈ ತರಹ ಪ್ರೇಮಿಗಳ ಲಗ್ಗೆಯ ಕಥೆ. ಈಚೆಗೆ ನಮ್ಮ ಕರಾವಳಿಯಲ್ಲಿ ಹುಡುಗ ಹುಡುಗಿಯರು ಪ್ರೇಮಿಸುವುದಿರಲಿ, ಮಾತಾಡುವುದನ್ನೂ ನೋಡುವುದನ್ನೂ ಕಷ್ಟ ಮಾಡಲಾಗಿದೆ. ಆದರೆ ಕಡಲನ್ನು ಕೂಡದಂತೆ ನದಿಗಳನ್ನು ಯಾರು ತಡೆದಿದ್ದಾರೆ? ವಿಶುಕುಮಾರರ ‘ಕರಾವಳಿ’ ಹಾಗೂ ತಕಳಿಯವರ ‘ಚೆಮ್ಮೀನು’ ನೆನಪಾದವು.

ಮಲಾನದಲ್ಲಿ ನಮಗೆ ಹೊಟ್ಟೆ ಉರಿಸಿದ ಸಂಗತಿಯೊಂದಿತ್ತು. ಅದೆಂದರೆ, ಭಾರತೀಯರಾದ ನಾವು ನಮ್ಮದೇ ದೇಶದ ಒಂದು ಹಳ್ಳಿಯಲ್ಲಿ ಪರಕೀಯರಂತೆ ಅಂಜಿಕೊಂಡು ತಿರುಗುವಾಗ, ಊರತುಂಬ ವಸತಿಮಾಡಿದ್ದ ವಿದೇಶಿ ಪ್ರವಾಸಿಗರು, ಮನೆ ಅಳಿಯಂದಿರಂತೆ ನಿರಾಳವಾಗಿ ಓಡಾಡಿಕೊಂಡು ಇದ್ದುದು. ಗೋವೆಯ ಕೆಲವು ಬೀಚುಗಳಲ್ಲಿಯೂ ಹಂಪಿಯ ಹೋಟೆಲುಗಳಲ್ಲಿಯೂ ಇಂತಹ ಪರಕೀಯತೆ ನಮಗೆ ಕಾಡುತ್ತದೆ. ಮಲಾನಿಗರು ಪ್ರವಾಸಿಗರ ವಸತಿಗೆಂದು ಸಾಂಪ್ರದಾಯಕ ವಿನ್ಯಾಸದಲ್ಲಿ ಸುಂದರವಾದ ಗೆಸ್ಟ್‌ಹೌಸುಗಳನ್ನು ಕಟ್ಟಿಕೊಟ್ಟಿದ್ದರು. ಬಿಳಿಯರು ಮಲಾನದ ದುರ್ಗಮತೆಗೊ ಸೌಂದರ್ಯಕ್ಕೊ ಏಕಾಂತಕ್ಕೊ  ಆಧುನಿಕ ರಸ್ತೆಯಿಂದ ಮೋಟಾರುಗಳಿಂದ ಮಲಿನವಾಗದ ಅದರ ತಾಜಾತನಕ್ಕೊ ಮರುಳಾಗಿ ಹಿಂಡುಗಟ್ಟಲೆ ಬಂದಿದ್ದರು. ಹಾಗೆ ಕಂಡರೆ ಅವರಿಗೆ ಭಾರತದ ಯಾವ ಜಾಗವೂ ದುರ್ಗಮವಲ್ಲ. ಅಥವಾ ದುರ್ಗಮ ಅಂತಾದರೆ ಅದನ್ನೇ ಅರಸಿಕೊಂಡು ಹೋಗುತ್ತಾರೆ. ಉತ್ತರಕಾಶಿಯ ಹರಕಿಧುನ್ (ಸ್ವರ್ಗಾರೋಹಿಣಿ) ಪರ್ವತದಿಂದ ಮರಳಿ ಬರುವಾಗ ನಮಗೆ ತಂಡತಂಡವಾಗಿ ತಲೂಕದತ್ತ (ಇದು ಭಾರತದ ಕೊನೆಯ ಹಿಮಾಲಯ ಗ್ರಾಮ.) ಹೋಗುತ್ತಿರುವ ವಿದೇಶಿಗರು ಸಿಗುತ್ತಿದ್ದರು. ಬಿಳಿಯ ಪ್ರವಾಸಿಗರು ಹಂಪಿಗೆ ಬರುವುದಕ್ಕೂ ಅವರದ್ದೇ ಕಾರಣಗಳಿವೆ. ಅವರು ಯಾತಕ್ಕೇ ಬರಲಿ, ಅವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಡುವುದು ಟೂರಿಸಂ ನೀತಿಯಾಗಿದೆ. ಮಸಾಜು, ಜನಪದ ಕುಣಿತ, ಮಾದಕ ದ್ರವ್ಯ ಎಲ್ಲವೂ ಅವರಿಗೆ ಸಲೀಸಾಗಿ ಸಿಗುತ್ತದೆ. ಇದಕ್ಕೆ ತಕ್ಕಂತೆ ಹಿಮಾಚಲ ಟೂರಿಸಂ ಇಲಾಖೆ ಮಲಾನಾ ಬಗ್ಗೆ ರೋಚಕವೆನಿಸುವ ಕತೆಗಳನ್ನು ಕಟ್ಟಿಕೊಟ್ಟಿದೆ. ನಾವು ಯೂರೋಪಿಗೆ ಹೋಗಿ ಅವರ ನಗರಗಳ ವೈಭವವನ್ನು ಬಾಯಿಬಿಟ್ಟುಕೊಂಡು ನೋಡುತ್ತೇವೆ. ಅವರೊ ನಮ್ಮಲ್ಲಿ ಬಂದು ಕಾಡುಬೆಟ್ಟಗಳಲ್ಲಿರುವ ಏಕಾಂತ ತಾಣಗಳಿಗೆ ಹೋಗಿ ತಣ್ಣಗೆ ಇರುತ್ತಾರೆ.

ಮಲಾನಾ ಎಲ್ಲ ಪ್ರವಾಸಿ ಊರುಗಳ ಲಕ್ಷಣಗಳನ್ನು ಹೊಂದಿದೆ. ಅದು ಗ್ಲೋಬಲ್ ವಿಲೇಜ್ ಯುಗದ ಜಾಗತೀಕರಣಗೊಂಡ ಹಳ್ಳಿಯಂತಿತ್ತು. ಮಲಾನವನ್ನು ಭಾರತದಲ್ಲಿರುವ ಗ್ರೀಕ್ ದ್ವೀಪ ಎನ್ನಲಾಗುತ್ತದೆ. ಮಾದಕ ಪ್ರವಾಸಿಗರಿಗೆ ಪ್ರಿಯವಾಗಿರುವ ಹಂಪಿಯನ್ನು ಕೂಡ ಇತಿಹಾಸಕಾರರು ‘ಕರ್ನಾಟಕದ ವೆನಿಸ್’ ಎಂದಿರುವರು- ಅದರ ಜಲಧಾರೆಯ ವ್ಯವಸ್ಥೆಯನ್ನು ನೋಡಿ. ನಗರದ ತುಂಬ ನರನಾಡಿಗಳಂತಿರುವ ಕಾಲುವೆಗಳಲ್ಲಿ ನೀರುಹರಿಯುವ ತಂತ್ರಜ್ಞಾನವನ್ನು ಹಂಪಿಯಲ್ಲಿ ಅಳವಡಿಸಲು ಪೋರ್ಚುಗೀಸರು ನೆರವಾಗಿದ್ದರು ಎನ್ನಲಾಗುತ್ತದೆ. ಹಂಪಿ ವಿಜಯನಗರದ ಅರಸರ ಕಾಲದಲ್ಲೇ ವಿದೇಶಿಗರು ಬಂದು ಹೋಗುತ್ತಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಥಳವಾಗಿತ್ತು.

ಆದರೆ ಎಲ್ಲ ಅಂತಾರಾಷ್ಟ್ರೀಕರಣಗೊಂಡ ಹಳ್ಳಿಗಳಿಗೆ ಅವುಗಳು ಎಷ್ಟೇ ನಾಗರಿಕ ಜಗತ್ತಿನಿಂದ ದೂರವಿರಲಿ, ಸಂಕರವನ್ನು ತಡೆಯಲು ಆಗುವುದಿಲ್ಲ. ಮಲಾನಾಕ್ಕೆ ಅದರ ದುರ್ಗಮತೆ ಆಧುನಿಕತೆಯ ನುಗ್ಗನ್ನು ತಡೆಯಲು ಆಗಿಲ್ಲ. ಅದ ತಡೆಯಲು ಅದು ಯತ್ನವನ್ನೂ ಮಾಡಿಲ್ಲ. ಮಲಾನಿಗರು ಹತ್ತಿರದ ನಗ್ಗರಕ್ಕೊ ಮಣಿಕರ್ಣಕಕ್ಕೊ ಕುಲುವಿಗೊ ಹೋದಾಗ ಹೊರಗಿನವರೊಂದಿಗೆ ಬೆರೆಯುತ್ತಾರೆ. ಹಿಂದಿ ಮಾತಾಡುತ್ತಾರೆ. ಅವರ ಊರಲ್ಲಿರುವ ಹಿಂದಿ ಪ್ರೈಮರಿ ಶಾಲೆ ಕೂಡ ಹೊರಜಗತ್ತನ್ನು ಒಳಗೆ ನುಗ್ಗಿಸುವ ಟ್ರೋಜನ್ ಕುದುರೆಯಂತಿದೆ. ಮಲಾನಾ ತನ್ನ ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಬಹಳ ಕಾಲ ಉಳಿಸಿಕೊಳ್ಳುತ್ತದೆ ಎಂದು ನನಗೆ ಅನಿಸಲಿಲ್ಲ. ಬದಲಿಗೆ ಅದು ವಿದೇಶಿಗರನ್ನು ಕೈಬೀಸಿ ಕರೆಯುತ್ತಿದೆ. ಹಾಗಾದರೆ ಅದರ ಮಾದಕತೆಯ ಟೂರಿಸಂ ಅವಸ್ಥೆ ಮಲಾನಾ ತಾನಾಗಿ ಆವಾಹಿಸಿಕೊಂಡಿದ್ದೊ ಅಥವಾ ಪರಿಸ್ಥಿತಿಯೇ ಅದರ ಮೇಲೆ ಹೇರಿದ್ದೊ? ಉತ್ತರ ಸರಳವಾಗಿಲ್ಲ.

ಭಾರತ ಮತ್ತು ಗ್ರೀಸ್, ಆಧುನಿಕತೆ ಮತ್ತು ಸಂಪ್ರದಾಯ, ಗತ ಮತ್ತು ವರ್ತಮಾನಗಳು ಪರಸ್ಪರ ಬೆರೆತು ಸಂಘರ್ಷ ಮಾಡುತ್ತ ಸಮನ್ವಯ ಪಡೆಯುತ್ತ ಬದುಕುತ್ತಿರುವ ತಾಣ-ಮಲಾನಾ ಎನಿಸಿತು. ನಾವು ಕುಲುವಿಗೆ ಬರುವ ಹಾದಿಯಲ್ಲಿ ನಗ್ಗರದಿಂದ (ಮಲಾನಾಗೆ ಸಮೀಪದ ಪಟ್ಟಣ) ಕೊಕಾಕೋಲಾ, ಪೆಪ್ಸಿ ಬಾಟಲುಗಳ ಕೇಸುಗಳನ್ನು ಬೆನ್ನಿಗೆ ಕಟ್ಟಿಕೊಂಡು ಸಾಲಾಗಿ ಬರುತ್ತಿರುವ ಹೆಂಗಸರು ಎದುರಾಗುತ್ತಿದ್ದರು. ಮೊದಲಿಗೆ ಅಸ್ಪಷ್ಟವಾದ ಆತಂಕ ಕುತೂಹಲ ಹುಟ್ಟಿಸಿದ್ದ ಮಲಾನಾ, ಯಾಕೊ ಏನೊ, ರಾಜಕುಮಾರರ ಕುದುರೆಗಳ ಖರಪುಟಕ್ಕೆ ಸಿಕ್ಕ ತಿರುಕುಳ ವಿನಾಚಿಯ ಕೂಸಿನಂತೆ ಮರುಕ ಹುಟ್ಟಿಸತೊಡಗಿತು.