೧೯೭೨ರಲ್ಲಿ ಜನಿಸಿದ ಮಂದಕ್ರಾಂತಾ ಸೆನ್ ಬಂಗಾಳಿ ಭಾಷೆಯ ಪ್ರಮುಖ ಕವಿ. ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿಯಾಗಿದ್ದ ಈಕೆ ಕವಿತೆಗಳ ಸೆಳೆತಕ್ಕೆ ಒಳಗಾಗಿ, ಕೇವಲ ಕೊನೆಯ ವೈವಾ ಪರೀಕ್ಷೆ ಉಳಿದಿದ್ದಾಗ ಓದನ್ನು ತ್ಯಜಿಸಿ ಹೊರಟಾಕೆ. ೧೯೯೯ರಲ್ಲಿ ಮಂದಕ್ರಾಂತ ಪ್ರಕಟಿಸಿದ ಸಂಕಲನ `ಹ್ರಿದಯ್ ಅಬಾಧ್ಯ ಮೆಯೆ’ (ಪುಂಡು ಹುಡುಗಿಯಂಥ ನನ್ನ ಹೃದಯವೆ) ಸುಪ್ರಸಿದ್ಧವಾಯಿತು. ಅದೇ ವರ್ಷ ’ಆನಂದ ಪುರಸ್ಕಾರ’ವನ್ನು ಗಳಿಸಿದ ಅತ್ಯಂತ ಕಿರಿಯ ಕವಿಯೆಂಬ ಖ್ಯಾತಿಯೂ ಆಕೆಗೆ ಲಭಿಸಿತು. ೨೦೦೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸುವರ್ಣ ಮಹೋತ್ಸವ ಪುರಸ್ಕಾರ. ಈಗ ಮಂದಕ್ರಾಂತಾ ತನ್ನ ಪತಿಯೊಡನೆ ’ಬ್ರಿಷ್ಟಿದಿನ್’ ಎಂಬ ಪತ್ರಿಕೆಯೊಂದರ ಸಂಪಾದಕಿಯಾಗಿದ್ದಾರೆ.
ಈ ಭಾನುವಾರ ಕೆಂಡಸಂಪಿಗೆಯಲ್ಲಿ ನಿಮ್ಮ ಜೊತೆ ಮಂದಕ್ರಾಂತ ಅವರ ಕವಿತೆಗಳು. ಈ ಕವಿತೆಗಳನ್ನು ಟೀನಾ ಇಂಗ್ಲಿಷ್ ನಿಂದ ಅನುವಾದಿಸಿದ್ದಾರೆ.

೧. ಹದಿನೇಳನೆ ಶತಮಾನದ ಬಂಗಾಲ: ಕುಟುಂಬ ಇತಿಹಾಸದ ಒಂದು ತುಣುಕು
ನನ್ನ ಮುತ್ತಜ್ಜನಿಗೆ ಯಾವಾಗಲು ಭರಾಟೆ
ತನ್ನ ರೂಮಿನಲ್ಲಿ ಹಳೆಯ ದಾಖಲೆಗಳ ತಡಕಾಡುವ
ವಂಶವೃಕ್ಷದಡಿಯಿಂದ ಹಳೆಯ ಚೂರುಗಳನ್ನು ಆಯುವ
ಹುಡುಕುವ ಯಾವುದೊ ಹಳೆಯ ರಕ್ತಸಂಬಂಧ, ಯಾರದೊ, ತಿಳಿಯದು ನಮಗೆ.
ಇವೆಲ್ಲ ಕೆಲಸಕ್ಕೆ ಬಾರದ ಪ್ರಶ್ನೆಗಳು, ನಿರುಪಯುಕ್ತ ಹಸ್ತಪ್ರತಿ -
ಹಲವಾರು ವೀರ್ಯಾಣುಗಳು ಮುಳುಗಿಹೋದ ಸಾಗರಗರ್ಭ
ಮಾಂಧಾತ, ಮರುತ್ತ, ಅಥವಾ ಶಿಖಿಧ್ವಜ? ಇಲ್ಲ ದಿಲೀಪನೆ?
ಮಸುಕು ಹಾಳೆಗಳ ಮೇಲೆ ಅವರ ರೇತಸ್ಸು, ಅವರು ಕಾಂಡೋಮು ಬಳಸುತ್ತಿರಲಿಲ್ಲ.
ನನ್ನ ಮುತ್ತಜ್ಜಿ, ನಾನು ಕೇಳಿದಂತೆ ಆಕೆಯದೂ
ಕೊಂಚ ವಿಚಿತ್ರ ನಡವಳಿಕೆ - ಅಂದರೆ - ಸಾಹಸಿ, ಹಠಮಾರಿ, ಕಟ್ಟುನಿಟ್ಟು
`ನಿನ್ನ ಹೆಂಡತಿಯೊಟ್ಟಿಗೆ ಮಾತ್ರ ಮಲಗು’ ಆಕೆ ಮಗನಿಗೆ ಹೇಳುತ್ತಿದ್ದುದು,
`ಇಲ್ಲವಾದರೆ ಒಂದೇಟಿಗೆ ನಿನ್ನ ಮುಖ ಮುರಿದೇನು’.
ಆದರೆ, ಪೋರ್ಚುಗೀಸರು ನಮ್ಮ ರಕ್ತದಲ್ಲಿ ಬಿತ್ತಿದ
ಹಂಬಲದ ಬೀಜಗಳ ಬೆಳೆಯದಂತೆ ತಡೆಯಬಹುದಿತ್ತಾದರು ಹೇಗೆ?
೨. ಹೇಳದನು ಮತ್ತೊಮ್ಮೆ, ಬೇರೆ ರೀತಿ
ಕತ್ತಲೆನ್ನದಿರು ಕತ್ತಲನು, ಕರೆ ರಾತ್ರಿಯೆಂದು
ಕವಿತೆಗಳ ಸುಳಿಸುತ್ತುವ ಲೇಖನಿ ರಾತ್ರಿ
ಜಗವು ಎಲ್ಲರ ಕಣ್ತಪ್ಪಿಸಿ
ದಿರಿಸು ಬದಲಿಸುವ ಸಮಯವಿದು
ರಾತ್ರಿ.
ಅವಳ ಸದ್ದಿಲ್ಲದೆ ಕದ್ದು ನೋಡುವವರು
ಪಾಪ ಮಾಡರು, ಹಾಗೆಂದೆ ಪುನಃ ಜನಿಸಿಬರುವರು!
ಇಡಿ ಜೀವಮಾನಗಳಲಿ ಪಾಪಗಳೆನ್ನದಿರು ತಪ್ಪುಗಳನು
ಕರೆ ಅವುಗಳ ಕವಿತೆಗಳೆಂದು.
೩. ಟಿವಿಯೊಡನೆ ನನ್ನ ರಾತ್ರಿಗಳು
ಕೆಲವು ದಿನಗಳು ಸುಮ್ಮನೆ ಭಯಾನಕ
ನಾನಾಗ ಟಿವಿಯನಪ್ಪಿಕೊಂಡು ಹಾಸಿಗೆಗೆ ಕರೆದೊಯ್ಯುವೆ
ಚ್ಯಾನೆಲ್ಲುಗಳು ಅರೆಯುತ್ತವೆ ರಾತ್ರಿಯಿಡೀ
ಮಂತ್ರ ಹೇಳುತ್ತವೆ, ಎರಚುತ್ತವೆ
ನನ್ನ ಕಣ್ಣಿಗೆ ಚಿನ್ನದ ಭಸ್ಮ
ಜಾಹೀರಾತಿನ ಧೈರ್ಯಶಾಲೀ ಯುವಕ
ಸ್ಥಬ್ಧ ಕಪ್ಪು ಕಂಗಳು, ಮೆತ್ತನೆ ಕೂದಲು
ಶರ್ಟಿನ ತೆರೆದ ಗುಂಡಿಗಳು, ಕಿವಿಯ ರಿಂಗು. ಆತ ನೋಡುತ್ತಾನೆ
ನೇರವಾಗಿ ನನ್ನ, ಮೆಲ್ಲನೆ ಮಿಟುಕಿಸುತ್ತಾನೆ ಕಣ್ಣ
ಆತ ನನ್ನ ಓಣಿಯಲೆ ವಾಸಿಸುತ್ತಾನೆ
ನನ್ನವನಾಗಲಿದ್ದಾನೆ
ನಾನು ಕೋಕಾ-ಕೋಲಾ ಕುಡಿದರೆ ಮಾತ್ರ.
ಆತ ಇಡಿ ರಾತ್ರಿ ನನ್ನ ಹಾಸಿಗೆಯಲ್ಲಿ ಮಲಗುತ್ತಾನೆ
ಹದಿನೈದು ಸೆಕೆಂಡಿನ ಬ್ರೇಕುಗಳಲ್ಲಿ ನನ್ನ ಬಿಗಿಯಾಗಿ ಅಪ್ಪುತ್ತಾನೆ
ನಾನು ಟಿವಿಯ ಮೆತ್ತನೆ ಚರ್ಮವನು ಸವರುತ್ತೇನೆ
ಚ್ಯಾನೆಲ್ಲುಗಳಾದ್ಯಂತವೂ ಹೊರಳಾಡುತ್ತೇನೆ
ನನ್ನ ಪುಟ್ಟ ಸಹವಾಸವನ್ನು ಬಿಗಿಯಾಗಿ ಹಿಡಿದುಕೊಂಡು