ವಿಳಾಸಕ್ಕೆ ಮರೆಯದೇ ತಲುಪಿಸು
ಮಳೆ ಬಿಟ್ಟ ಸಂಜೆಯ
ಖಾಲಿ ಮುಖವನ್ನು
ನೋಡಲು ಭಯವಾಗುತ್ತಿದೆ.
ಹೊತ್ತಾದರೂ
ಒಂಟಿಯಾಗಿ
ಮರದ ದಗರಿಯಮೇಲೆ ಕೂತು
ವಿರಹದ ದನಿಯನ್ನು
ಕಕ್ಕುತ್ತಿರುವ ಹಕ್ಕಿ;
ಹಿಡಿದು ಕೊಂದುಹಾಕಿಬಿಡಬೇಕೆನ್ನುವ
ಮೌನ;
ಅನಾಥವಾಗಿ ನಿದ್ದೆಹೋದ
ಚಪ್ಪಲಿಗಳು;
ಶೋಕಗೀತೆಯ
ಬಿಟ್ಟು ಬಿಟ್ಟು ಹಾಡುತ್ತಿರುವ
ಮತಿಭ್ರಮಣ ಕನಸು
ಈ ನಡುವಿನ
ಖಾಲಿತನದೊಳಗೆ
ಸದ್ದಿಲ್ಲದೆ
ತುಂಬಿಕೊಳ್ಳುವ ನೀನು
ಖಾಲಿಯಾದದ್ದೆ
ಅರಿವಿಗೆ ಬಾರಲಿಲ್ಲ..!
ಸಿಗಿದು
ಚರ್ಮಸುಲಿದಂಥ
ನೆನ್ನೆಗಳ ಮೇಲೆ
ಕನಿಕರಪಟ್ಟು ಮುದುರಿ
ಕೂತರೆ
ನಾಳೆಗಳ
ಮಾರಣಹೋಮ
ನಡೆಯುವುದು ಶತಸಿದ್ಧ
ಮಳೆಬಿದ್ದ ನೆಲದಲ್ಲಿ
ನೆನಪುಗಳ
ಕಲಸಿ ತಿಂದರೂ
ನನ್ನ ಹಸಿವು
ನೀಗಿತ್ತಿಲ್ಲ;
ಹಸಿವ ನೀಗಿಸಲು
ಒಂದು ತೊಟ್ಟು
ಅನುರಾಗದ
ವಿಷವನ್ನಾದರೂ ನನ್ನ
ವಿಳಾಸಕ್ಕೆ
ಮರೆಯದೇ ತಲುಪಿಸು…
Beautiful ♥️