ನಿರ್ವಾಣಗೊಳ್ಳೋಣ
ನೆತ್ತರು ಬಸಿದು
ಕುದಿಯಲು
ಇಟ್ಟು ಬರುತ್ತೇನೆ
ಸ್ವಲ್ಪ ಹೊತ್ತು
ಕಾಯಿ;
ಶತಮಾನಗಳ ಮಾತು
ಇಂದೇ ಆಡಿ ಮುಗಿಸೋಣ
ಎಲೆ ಉದುರುವ
ಚಳಿಗಾಲದ ರಾತ್ರಿಗಳು
ಭೂಮಿಗೆ
ಹೊದಿಕೆ ಹೊದ್ದಿಸಿ
ಪಾಪದ ಕಟಕಟೆಯಲ್ಲಿ
ಎಚ್ಚರವಾಗಿವೆ;
ದೂರದ ಮಳೆಗಾಲಕ್ಕೆ
ಕಾತರಿಸುವ
ಕಪ್ಪೆಗಳ ಬಾಯಿ
ಯಾರೋ ಮುಚ್ಚಿ
ಮೌನ ಸಮಾಧಿಯ
ಚೊಕ್ಕಟಗೊಳಿಸಿದ್ದಾರೆ;
ಹೂವೇ ಇಲ್ಲದ
ಜಾಜಿ ಬಳ್ಳಿ
ಕಲ್ಲಿನಂಥ
ಮರದ ಎದೆ, ಸೊಂಟ,
ನಿತಂಬಗಳ ಬಳಸಿ
ತಬ್ಬಿ ತೂಗುತ್ತಿದೆ
ಇಬ್ಬರ
ಏಕಾಂತಕಿದು
ಹೇಳಿಮಾಡಿಸಿದ ರಾತ್ರಿ
ನಿನ್ನವಲ್ಲದ
ಎಲ್ಲವನ್ನೂ ಕಳಚಿಟ್ಟು ಬಾ
ಇಂದೇ
ನಿರ್ವಾಣಗೊಳ್ಳೋಣ
ಸಾವಿಲ್ಲದ
ಒಲವಿನ ಮನೆಯಲ್ಲಿ
ಆರದ ದೀಪವಾಗೋಣ….!