ಮಹಿಳೆಯರಿಗೆ ಬಹುತೇಕ ನಿರಾಕರಿಸಲ್ಪಟ್ಟಿರುವ ಕಲಾಕ್ಷೇತ್ರದ ವಲಯಕ್ಕೆ ಅಮೀರ್ ಬಾಯಿಯಂಥ ಅಭಿನಯ ತಾರೆ ಪ್ರವೇಶ ಪಡೆದದ್ದು ಒಂದು ಪವಾಡವೇ ಸರಿ.  ಸಂಪ್ರದಾಯದ ಗೆರೆ ದಾಟಿ, ಅಮೀರ್ ಬಾಯಿ, ಪ್ರತಿಭೆಯನ್ನು ಪೋಷಿಸಲು ಮುಂದಾದರು. ಮುಂಬೈಯ ಎಚ್.ಎಂ.ವಿ ಕಂಪನಿಯು ಅಮೀರ್ ಬಾಯಿಯ ಪ್ರತಿಭೆಯನ್ನು ಗುರುತಿಸಿ ಧ್ವನಿ ಮುದ್ರಣಕ್ಕೆ ಕರೆಸಿಕೊಂಡಿತು. ಹದಿನಾರು ವರ್ಷದ ಅಮೀರ್ ಬಾಯಿ ಅಲ್ಲಿ ಕವ್ವಾಲಿಯೊಂದನ್ನು ಹಾಡಿದ್ದರು. ನಂತರ ಅವಕಾಶಗಳು ಇವರನ್ನು ಹುಡುಕುತ್ತಾ ಬಂದವು. ಪ್ರೊ. ರಹಮತ್ ತರೀಕೆರೆ ಬರೆದ ಅಮೀರ್ ಬಾಯಿ ಕರ್ನಾಟಕಿ ಕೃತಿಯ ಕುರಿತು ಡಾ. ಸುಮಂಗಲಾ ಮೇಟಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. 

ನಮ್ಮ ಜಿಲ್ಲೆಯ ಮನೆಮಗಳು ತವರಿನ ಕೀರ್ತಿಯನ್ನು ದೂರದ ಮುಂಬೈವರೆಗೆ ಪಸರಿಸಿದ ಗಾಯಕ ನಟಿ,  ಅಮೀರ್ ಬಾಯಿ ಕರ್ನಾಟಕಿ. ಧರ್ಮಾತೀತ ಸಂಬಂಧಗಳಲ್ಲಿ ಬದುಕನ್ನು ಸವೆಸಿದ ನಾಗರತ್ನಮ್ಮ, ಗೋಹರಬಾಯಿ ಕರ್ನಾಟಕಿ, ಶಾಂತಾ ಹುಬ್ಳೀಕರ, ಲತಾ ಮಂಗೇಶ್ಕರ, ಹಮೀದಾಬಾನು, ಉಷಾಕಿರಣ, ಉಮಾದೇವಿ, ರಾಜಕುಮಾರಿ, ನೂರಜಹಾನ, ದೇವಿಕಾರಾಣಿ, ಪ್ರತೀಮಾ ದೇವಿಯಂಥವರ ಸಾಲಿನಲ್ಲಿ ಮುಂಚೂಣಿಯ ಸ್ಥಾನ ಅಮೀರ್ ಬಾಯಿಯವರದು.

ಹಿಂದೂ-ಮುಸ್ಲಿನ್ ಸಂಸ್ಕೃತಿಯ ಸಮ್ಮಿಲನದ ಪ್ರತೀಕವಾಗಿ ಪ್ರಸಿದ್ಧರಾದ ಅಮೀರ್  ಬಾಯಿ ಅಖಂಡ ಬಿಜಾಪುರ ಜಿಲ್ಲೆ ಬೀಳಗಿ ತಾಲ್ಲೂಕಿನ ತುಂಬರಮಟ್ಟಿ ಎಂಬ ಗ್ರಾಮದಲ್ಲಿ ಫೆ.19, 1912ರಲ್ಲಿ ಜನಿಸಿದರು. ತಂದೆ-ಹುಸೇನಸಾಬ, ತಾಯಿ-ಅಮಿನಮಾ, ಅಕ್ಕ-ಗೋಹರಬಾಯಿ. ತುಂಬರಮಟ್ಟಿಯೆಂಬ ಕುಗ್ರಾಮದ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಅಮೀರ್ ಬಾಯಿ ಕರ್ನಾಟಕದ ಕೀರ್ತಿಯನ್ನು ಕರ್ನಾಟಕದಾಚೆಗೆ ಪಸರಿಸುವರೆಂದು ಯಾರೂ ಅಂದುಕೊಂಡಿರಲಿಲ್ಲ. ತಂದೆ ಹುಸೇನಸಾಬರೆ ಸ್ವತಃ ಗವಾಯಿಗಳಾದ ಕಾರಣ ಮನೆಯೇ ಇವರ ಮೊದಲ ಪಾಠಶಾಲೆಯಾಯಿತು. ಅಲ್ಲದೇ ಬಿಜಾಪುರದ ರಂಗಭೂಮಿ ಪರಿಸರವೂ ಇವರ ಪ್ರತಿಭೆಗೆ ಪೂರಕವಾಗಿ ನೆಲವನ್ನು ಹದಗೊಳಿಸಿತು.

ಮನುಷ್ಯ ಬದುಕಿನ ಪ್ರತಿಬಿಂಬವೆನಿಸಿದ ನಾಟಕಗಳಲ್ಲೂ ಅಭಿನಯಿಸಿದ ಅಭಿನೇತ್ರಿ. ರಂಗಭೂಮಿಗಾಗಿ ತಮ್ಮ ಬದುಕನ್ನು ತೇಯ್ದರು. ಅಭಿನಯ ಹಾಗೂ ಗಾಯನ ಪ್ರತಿಭೆ ಎರಡನ್ನೂ ಹೊಂದಿದ್ದ ಗಾನಕೋಗಿಲೆ ಅಮೀರ್ ಬಾಯಿ.

ಅವರ ಬಗ್ಗೆ ಹಿರಿಯ ಸಂಶೋಧಕರಾದ ಡಾ.ರಹಮತ್ ತರಿಕೆರೆ ಅವರು ಬರೆದ ಪುಸ್ತಕವನ್ನುಓದುವ ಅವಕಾಶ ದೊರೆಯಿತು. ಯಾರಿಗೇ ಆಗಲಿ, ಸ್ಫೂರ್ತಿದಾಯಕವಾಗಿರುವ ಈ ಪುಸ್ತಕದಲ್ಲಿ ಕಾಡಿದ ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸಿರುವೆ.

ಹಾಲುಂಡ ತವರಿಗೆ ಎನೆಂದು ಹರಸಲಿ
ಹೊಳೆದಂಡೆಲಿರುವ ಕರಕೀಯ | ಕುಡಿಯ್ಹಂಗ
ಹಬ್ಬಲಿ ಅವರ ರಸಬಳ್ಳಿ

-ಎಂಬ ಜನಪದ ತಾಯಿಯ ಆಶಯದಂತೆ ಹಾಲುಂಡ ತವರಿನ ಸವಿನೆನಪುಗಳು ಸ್ಮೃತಿಪಟಲದಲ್ಲಿ ಉಳಿದು, ಇಬ್ಬಂದಿತನ ಕಾಡುತ್ತಿರುವ ಕಾರಣವಾಗಿಯೇ ದೂರದ ಮುಂಬೈಯಲ್ಲಿ ಬಣ್ಣದ ಬದುಕನ್ನು ಕಟ್ಟಿಕೊಂಡರು ಅಮೀರ್ ಬಾಯಿ. ಆದರೆ ತಮ್ಮ ಹೆಸರಿಗೆ ಕನ್ನಡ ನಾಡಿನ ಹೆಸರನ್ನೆ ಸೇರಿಸಿಕೊಂಡರು. ಇದು ಅಮೀರ್ ಬಾಯಿಯವರಿಗೆ ತಮ್ಮೂರಿನ ಸೆಳೆತಗಳ ಗಾಢತೆಗೆ ಸಾಕ್ಷಿಯಾಗಿವೆ. ಅಲಾಬ, ಮೊಹರಂನಂಥ ಆಚರಣೆ ಸಂದರ್ಭದಲ್ಲೆಲ್ಲ ತಮ್ಮ ಹುಟ್ಟೂರಿಗೆ ಬರುತ್ತಿದ್ದರು. ಅಲ್ಲಿ ಹಳ್ಳಿಗರೊಂದಿಗೆ ಅತ್ಯಂತ ಸರಳವಾಗಿ ಬೆರೆಯುತ್ತಿದ್ದರು. ಹಾಡುತ್ತಾ, ಕುಣಿಯುತ್ತಾ ಕಾಲ ಕಳೆಯುತ್ತಿದ್ದರು. ಇಂಥ ಸರಳಜೀವಿ ಅಮೀರ್ ಬಾಯಿ ಕಲಾಕ್ಷೇತ್ರದ ಹಲವು ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಢಿಸಿದರು.

ತುಂಬರಮಟ್ಟಿಯೆಂಬ ಕುಗ್ರಾಮದ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಅಮೀರ್ ಬಾಯಿ ಕರ್ನಾಟಕದ ಕೀರ್ತಿಯನ್ನು ಕರ್ನಾಟಕದಾಚೆಗೆ ಪಸರಿಸುವರೆಂದು ಯಾರೂ ಅಂದುಕೊಂಡಿರಲಿಲ್ಲ. ತಂದೆ ಹುಸೇನಸಾಬರೆ ಸ್ವತಃ ಗವಾಯಿಗಳಾದ ಕಾರಣ ಮನೆಯೇ ಇವರ ಮೊದಲ ಪಾಠಶಾಲೆಯಾಯಿತು. ಅಲ್ಲದೇ ಬಿಜಾಪುರದ ರಂಗಭೂಮಿ ಪರಿಸರವೂ ಇವರ ಪ್ರತಿಭೆಗೆ ಪೂರಕವಾಗಿ ನೆಲವನ್ನು ಹದಗೊಳಿಸಿತು.

ರಂಗಸಂಗೀತ, ಚಲನಚಿತ್ರ ಸಂಗೀತ, ಭಕ್ತಿಸಂಗೀತ, ಜಾನಪದಸಂಗೀತ ಅಲ್ಲದೇ ಪ್ರಧಾನ ಗಾಯಕಿಯಾಗಿಯೂ ಪ್ರಸಿದ್ದರಾದರು. ಈಕೆ ನಾಯಕ ಗಾಯಕಿಯಾದ ಮೊದಲ ಕನ್ನಡತಿಯೆಂಬುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ. ಇವರ ಜೀವಮಾನದ ಸಾಧನೆ ಅಗಾಧವಾದುದು. ಹಾಗಾಗಿಯೇ ಇವರಿಗೆ ಕನ್ನಡಕೋಗಿಲೆ, ಕನ್ನಡಕೋಕಿಲೆ, ಗಾನ ಕೋಗಿಲೆ, ಕರ್ನಾಟಕ ಕೋಗಿಲೆ ಎಂದೆಲ್ಲ ಬಿರುದುಗಳಿವೆ.

ಜನಸಾಮಾನ್ಯರ  ಕೌಟುಂಬಿಕ ಹಿನ್ನೆಲೆ ಇರುವ ಅಮೀರ್ ಬಾಯಿಯ ಅಭಿರುಚಿ, ನಿರಂತರ ಪ್ರಯತ್ನ, ದಣಿವರಿಯದ ದುಡಿಮೆ, ಸಾಧನೆಯ ಹಂಬಲ, ಸಮರ್ಪಣಾ ಭಾವ, ಆಕೆಯ ಅಚಲವಾದ ನಂಬಿಕೆ ಕಾರಣವಾಗಿಯೇ ಆಕೆ ಇಂದಿಗೂ ಜನಮಾನಸದಲ್ಲಿದ್ದಾರೆ. ಕಲಾರಸಿಕರ ನಾಡಿಮಿಡಿತ ಅರಿತ ಅಭಿನೇತ್ರಿಗೆ ಪ್ರೇಕ್ಷಕರನ್ನು ಸಮ್ಮೋಹನಗೊಳಿಸುವ ಕಲೆ ಸಿದ್ಧಿಸಿತ್ತು.
ಬಣ್ಣದ ಲೋಕದ ಬವಣೆಯ ಬದುಕು ಬಣ್ಣ ಬಳಿದುಕೊಂಡು ಪರದೆಯ ಮೇಲೆ ನಟಿಸುವ ಕಲಾವಿದರಿಗೆ ಗೊತ್ತು. ಇದೊಂದು ಮಾಯಾಲೋಕ. ಈ ಮಾಯಾಲೋಕದ ಚಕ್ರ ಯಾರನ್ನು ಎಲ್ಲಿ ಹೊತ್ತೊಯ್ಯುವದೋ ತಿಳಿಯದು. ಇಲ್ಲಿ ಮೆರೆದವರು ಎಷ್ಟೋ, ಮೈಮನವನ್ನು ಕಳೆದುಕೊಂಡವರೆಷ್ಟೋ ಲೆಕ್ಕವೇ ಇಲ್ಲ.

ಸಂಪ್ರದಾಯಸ್ಥ ವಲಯದಲ್ಲಿ ಸಂಗೀತ ಮತ್ತು ನಟನೆ ಎರಡೂ ಕ್ಷೇತ್ರಗಳು ಮಹಿಳೆಯರಿಗೆ ನಿಷೇಧಿತ ವಲಯಗಳೇ ಆಗಿದ್ದವು. ಇಂಥ ನಿಷೇಧವನ್ನು  ದಾಟಿ ತಮ್ಮದೇ ಛಾಪನ್ನು ಮೂಢಿಸಿದ ಕಲಾವಿದೆ ಅಮೀರ್ ಬಾಯಿ ಕರ್ನಾಟಕಿ. ಮೊದಲು ರಂಗಭೂಮಿಯನ್ನು ನಂತರ ಸಿನೇಮಾರಂಗವನ್ನು ಪ್ರವೇಶಿಸುವ ಮೂಲಕ ಗಾಯನ ಮತ್ತು ನಟನೆ ಎರಡೂ ಕ್ಷೇತ್ರದಲ್ಲೂ ಮೆರೆದ ಹಿರಿಮೆ ಇವರದು.

ಮಹಿಳೆಯರಿಗೆ ಬಹುತೇಕ ನಿರಾಕರಿಸಲ್ಪಟ್ಟಿರುವ ಸಾರ್ವತ್ರಿಕ ವಲಯಕ್ಕೆ ಅಮೀರ್ ಬಾಯಿಯಂಥ ಅಭಿನಯ ತಾರೆ ಪ್ರವೇಶ ಪಡೆದದ್ದು ಒಂದು ಪವಾಡವೇ ಸರಿ. ಮುಂಬೈಯ ಎಚ್.ಎಂ.ವಿ ಕಂಪನಿಯು ಅಮೀರ್ ಬಾಯಿಯ ಪ್ರತಿಭೆಯನ್ನು ಗುರುತಿಸಿ ಧ್ವನಿ ಮುದ್ರಣಕ್ಕೆ ಮುಂಬೈಗೆ ಕರೆಸಿಕೊಂಡಿತು. ಹದಿನಾರು ವರ್ಷದ ಅಮೀರ್ ಬಾಯಿ ಕವ್ವಾಲಿಯೊಂದನ್ನು ಹಾಡಿದ್ದರು. ಅವರ ಹಾಡಿನ ಮಧುರತೆ, ಮೋಹಕತೆ ಎಲ್ಲರನ್ನು ನಿಬ್ಬೆರಗುಗೊಳಿಸಿತು. ನಂತರ ಅವಕಾಶಗಳು ಇವರನ್ನು ಹುಡುಕುತ್ತಾ ಬಂದವು. ಕನ್ನಡ, ಹಿಂದಿ, ಗುಜರಾತಿ, ಮರಾಠಿ, ಉರ್ದು ಇತ್ಯಾದಿ ಭಾಷೆಗಳಲ್ಲಿ ಹಾಡುವ ಅವಕಾಶಗಳು ಮನೆ ಬಾಗಿಲಿಗೆ ಬಂದವು.

ಹಿಂದಿ ಚಿತ್ರರಂಗದ ಇತಿಹಾಸದಲ್ಲಿಯೇ 1930-40ರ ದಶಕದಲ್ಲಿಯ ಪ್ರಮುಖ ಗಾಯಕಿಯರಾದ ಬಿಬ್ಬೊ, ಕಜ್ಜನ್, ಮುನ್ನಿಬಾಯಿ, ಖುರ್ಷಿದ ಗುಲಾಬ್, ಜೋಹರಾ, ಬೇಗಮ್ ಅಕ್ತರ, ಶಂಶಾದ ಬೇಗಂ, ಎಂ.ಎಸ್. ಸುಬ್ಬಲಕ್ಷ್ಮಿಯಂತಹ ಅದ್ಭುತ ಗಾಯಕಿಯರಲ್ಲಿ ಮಹತ್ವದ ಸ್ಥಾನ ಇವರದು. ಕ್ರಿ.ಶ 1943ರಲ್ಲಿ ಅಶೋಕ ಕುಮಾರ ಅಭಿನಯದ ‘ಕಿಸ್ಮತ್’ ಚಿತ್ರದಲ್ಲಿ ಅವರು ಹಾಡಿದ ಹಾಡುಗಳು ಜನಮನ ಸೂರೆಗೊಂಡವು. ಅವರು ಹಾಡಿದ ‘ಆಜ್ ಹಿಮಾಲಯ ಕಿ ಚೊಟಸೆ ಧೀರೆ ಧೀರೆ ಆರೇ ಬಾದಲ್ ಧೀರೆ ಆ ಮೇರಾ ಬುಲಬುಲ ಸೋ ರಹಾ ಹೈ ಶೋರ ಗುಲ್ ನ ಮಚಾ’ ಈ ಹಾಡು ಸಂಗೀತ ಪ್ರಿಯರ ನಡುವೆ ಸುಂಟರಗಾಳಿಯನ್ನೆ ಎಬ್ಬಿಸಿತು.

ಮತ್ತು ‘ಘರಘರ ಮೇ ದಿವಾಲಿ ಮೇರೆ ಆಂಗನ ಮೇ ಅಂಧೇರೆ’ ಎಂಬ ಹಾಡುಗಳಿಗೆ ಇವರು ನೀಡಿದ ಧ್ವನಿ ಅತ್ಯದ್ಭುತವಾದದ್ದು. ಅಲ್ಲದೇ ಇದೇ ಚಿತ್ರದ ‘ದೂರ ಹಟೋ ಹೇ ದುನಿಯಾವಾಲೋ ಹಿಂದೋಸತಾನ ಹಮಾರಾ ಹೈ’ ಎಂಬ ಗೀತೆ ಜನರಲ್ಲಿ ದೇಶಭಕ್ತಿಯ ಉನ್ಮಾದವನ್ನು ಹೆಚ್ಚಿಸಿತು. ಇವರ ಹಾಡುಗಳಿಂದಾಗಿಯೇ ಬಹುತೇಕ ಸಿನೇಮಾಗಳು ದಾಖಲೆಯನ್ನು ನಿರ್ಮಿಸಿದವು. ಸುಮಾರು ಎರಡು ದಶಕಗಳ ಕಾಲ ಹಿಂದಿ ಚಿತ್ರರಂಗದ ತಾರೆಯಾದ ಈಕೆ 135 ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿದರು. ಮುನ್ನೂರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಕೀರ್ತಿ ಅಮೀರ್ ಬಾಯಿಯವರಿಗೆ ಸಲ್ಲುತ್ತದೆ.

ಬಿ ಪಿ. ಮಣಿಕ್‌ರ ಸಂಗೀತ ನಿರ್ದೇಶನದಲ್ಲಿ ‘ವಿಷ್ಣುಭಕ್ತಿ’(1939) ಎಂಬ ಹಿಂದಿ ಚಲನಚಿತ್ರಕ್ಕೆ ಗಾನಕೋಗಿಲೆಗೆ ಹಾಡುವ ಅವಕಾಶ ದೊರೆಯಿತು. ಅಲ್ಲಿಂದ ಪ್ರಾರಂಭವಾದ ಇವರ ಸಿನೇಮಾ ಹಾಡುಗಳು ಸರಿಯಾಗಿ ಮೂರು ದಶಕಗಳ ಕಾಲ ಜನರ ಮನದಲ್ಲಿ ಉಳಿದವು. 135 ಸಿನೇಮಾಗಳಿಗೆ 350ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಕೀರ್ತಿ ಇವರದು. ಇವರು ಸರದಾರ(1940), ದರ್ಶನ(1941). ಸ್ಟೇಶನ ಮಾಸ್ತರ(1942) ರಲ್ಲಿ ಬಿಡುಗಡೆಯಾದವು. ಸುಬಹ ಕಾ ತಾರಾ, ಡಾರ್ಕ ಸ್ಟ್ರೀಟ್ , ಜಾದು ಅಂಗೂರಿ ಎಂಬ ಧ್ವನಿಮುದ್ರಿಕೆಗಳನ್ನು ಕೂಡಾ ಅಮೀರ್ ಬಾಯಿ ನೀಡಿದ್ದಾರೆ.

ಬಿಜಾಪುರದೊಂದಿಗೆ ಇದ್ದ ಇವರ ಅನ್ಯೋನ್ಯ ಸಂಬಂಧದ ಕಾರಣವಾಗಿ ಅವರಿಗೆ ಕನ್ನಡ ಚಿತ್ರಗಳಲ್ಲಿ ಹಾಡುವ, ನಟಿಸುವ ಅವಕಾಶಗಳು ದೊರೆತವು. ಇವರ ಮೊದಲ ಚಲನಚಿತ್ರ ‘ಚಿರಂಜೀವಿ’ ಕ್ರಿ.ಶ 1935ರಲ್ಲಿ ತೆರೆಕಂಡಿತು. ಅಮೀರ್ ಬಾಯಿ ಕರ್ನಾಟಕಿ ಹಾಡಿದ `ಮಧೂರೆ ವೀಣೆ ಮಧೂರೆ ವೀಣೆ ಪ್ರೇಮ’ ಎಂಬ ಹಾಡು ಜನಪ್ರಿಯತೆಯನ್ನು ಗಳಿಸಿತು.
ಇವರ ಎರಡನೇ ಚಲನಚಿತ್ರ ‘ಚಂದ್ರಹಾಸ’ 1947ರಲ್ಲಿ ತೆರೆಕಂಡಿತು. ಇದರಲ್ಲಿ ಅಮೀರ್ ಬಾಯಿ ಕರ್ನಾಟಕಿ ‘ಬಾಬಾ ಬಯಸಿದ ಬನಸಿರಿಯೇ’ ಎಂಬ ಹಾಡಿನ ಜೊತೆಗೆ ಬೇಡರ ರಾಣಿಯಾಗಿ ಪಾತ್ರ ನಿರ್ವಹಿಸಿದರು. ಆಕೆ ಹಾಡಿದ ‘ಅರಗಿಳಿ ಮರಗಿಳಿ ಭರದಲಿ ಬಾ’ ಎಂಬ ಮತ್ತೊಂದು ಹಾಡು ಜನಮನ ಸೂರೆಗೊಂಡಿತು.

ಮೂರನೆಯ ಚಲನಚಿತ್ರ ‘ಶ್ರೀನಿವಾಸ ಕಲ್ಯಾಣ’ 1952ರಲ್ಲಿ ತೆರೆಕಂಡಿತು. ಇದರಲ್ಲಿ ಇವರು ಬಕುಳಾದೇವಿ ಪಾತ್ರ ನಿರ್ವಹಿಸಿದ್ದರಲ್ಲದೆ, ಅವರು ಹಾಡಿದ ‘ಜಯ ಕೃಷ್ಣ ನಮೋ, ಜಗದೀಶ ನಮೋ ಕೃಷ್ಣ ನಮೋ’ ಮತ್ತು ‘ಕಂಡೇ ಕಂಡೇ ಶ್ರೀ ಹರಿ ನಿನ್ನ ಮಹಾಮಹಿಮೆಯ’ ಎಂಬ ಹಾಡುಗಳನ್ನು ಹಾಡಿದರು. ಎಂದೆಂದಿಗೂ ಜನಮಾನಸದಲ್ಲಿ ಉಳಿದ ಹಾಡುಗಳವು. ಇವರ ನಾಲ್ಕನೇಯ ಚಲನಚಿತ್ರ ‘ದಲ್ಲಾಳಿ’ 1953ರಲ್ಲಿ ತೆರೆಕಂಡಿತು. ಇದರಲ್ಲಿ ಇವರು ಹಾಡಿದ ‘ದೂರಾಯಿತು ಮನದಾಶಾಕಿರಣ’ ಹಾಡು ಜನಪ್ರಿಯತೆಯನ್ನು ಗಳಿಸಿತು. ಇವರ ಐದನೇಯ ಚಲನಚಿತ್ರ ‘ಆಶಾನಿರಾಶಾ’ ತೆರೆಯನ್ನೆ ಕಾಣಲಿಲ್ಲ.

1930-40ರ ಕಾಲಸಂದರ್ಭದ ಬಹುತೇಕ ಕಾವ್ಯ, ಕಾದಂಬರಿ, ನಾಟಕ, ಸಿನೇಮಾಗಳಲ್ಲೆಲ್ಲ ರಾಜಕೀಯ ಸ್ವಾತಂತ್ರದ ಆಶಯ ಮತ್ತು ತುಡಿತಗಳನ್ನು ಕಾಣುತ್ತೇವೆ. ಇವರು ಅಭಿನಯಿದ ಚಿರಂಜೀವಿ ಚಿತ್ರದಲ್ಲಿ ಗಾಂಧಿಚಳವಳಿಯ ದೃಶ್ಯಗಳಿವೆ. ಅಲ್ಲದೇ ಅಮೀರ್ ಬಾಯಿ ಕರ್ನಾಟಕಿಯವರು ಅಭಿನಯಿಸಿದ ಗುಜರಾತಿ ಚಲನಚಿತ್ರದಲ್ಲಿ ಹಾಡಿದ ‘ವೈಷ್ಣವ ಜನತೋ ತೇನೇ ಕಹಿಯೇ ಎಂಬ ಹಾಡು ಗಾಂಧಿಯವರ ಪ್ರೀತಿಯ ಹಾಡುಗಳಲ್ಲಿ ಒಂದಾಗಿತ್ತೆಂಬುದು ವಿಶೇಷ.  ಚಂದ್ರಹಾಸ ಚಿತ್ರದಲ್ಲಿ ಇವರು,
“ತ್ರಿಪುರದೈತ್ಯ ಮದದಮನ ನಿಪುಣ ಶ್ರೀಶಿವನ ಧರ್ಮಜಾಯೆ
ಕೃಪೆಯ ಕಿರಣಗಳ ಕವಚವಿತ್ತು ನಮ್ಮನ್ನು ಕಾಯೆ ತಾಯೆ
ಘೋರಯುದ್ಧ ರಕ್ತಾಗ್ನಿ ತಾಗುತಿದೆ ನಮ್ಮ ನಾಡಗಡಿಗೆ
ವೈರಿರಾಹು ಮುನ್ನುಗ್ಗುತಿಹನು ಸ್ವಾತಂತ್ರ್ಯ ಸೂರ್ಯನೆಡೆಗೆ
ದೈನ್ಯದಾಸ್ಯಗಳು ನಮ್ಮ ದೇಶದೊಳು ಸುಳಿಯದಂತೆ ಮಾಡೆ”

ಎಂಬ ಸಾಲುಗಳಲ್ಲಿ ರಾಷ್ಟ್ರೀವಾದಿ ಆಶಯಗಳೇ ಇವೆ. ಅಮೀರ್ ಬಾಯಿ ಕಂಠದಿಂದ ಹೊರಡಿದ ಧ್ವನಿ ಬಹುತೇಕರಲ್ಲಿ ಸ್ವಾತಂತ್ರ್ಯದ ಕೆಚ್ಚನ್ನು ಹೆಚ್ಚಿಸಿತು. ಅಲ್ಲದೆ ಆ ಕಾಲ ಸಂದರ್ಭದಲ್ಲಿ ಮುಂಬೈ ಕರ್ನಾಟಕದಲ್ಲಿ ಬ್ರಿಟೀಷ ವಿರೋಧಿ ಕಾರ್ಯಚಟುವಟಿಕೆಗಳು ನಡೆದಿದ್ದವೆಂಬುದನ್ನು ಸಾರುತ್ತದೆ. ಬದುಕಿನುದ್ದಕ್ಕೂ ಭಾವನಾತ್ಮಕ ಸಂಬಂಧವನ್ನು ಹೊಂದಿದ ಕಲಾವಿದರು ಕೇವಲ ತಾವಷ್ಟೇ ಬೆಳೆಯುವದಲ್ಲದೆ, ತಮ್ಮೊಂದಿಗೆ ತಮ್ಮೂರಿನ ಹೆಸರನ್ನು ಬೆಳೆಸುತ್ತಾರೆ. ತನ್ನ ಉಡಿಯಲ್ಲಿ ಇಡೀ ಬದುಕಿನುದ್ದಕ್ಕೂ ಹೂವಿನಂತೆ ಕರ್ನಾಟಕವನ್ನು ಹೊತ್ತು ಸುತ್ತಿದ ಕಲಾವಿದೆ ಕನ್ನಡ ಕುಲದ ಪ್ರೀತಿಗೆ ಪಾತ್ರವಾಗಿದ್ದಾಳೆ.

ವೈಯಕ್ತಿಕ ಬದುಕಿನಲ್ಲಿ ಕಾಣದ ತೃಪ್ತಿಯನ್ನು ಕಲಾಬದುಕಿನಲ್ಲಿ ಕಂಡುಕೊಂಡ ಕಲಾವಿದೆಯು ತಮ್ಮ 53ನೇ ವಯಸ್ಸಿನಲ್ಲಿ ಅಂದರೆ ಮಾರ್ಚ7, 1965ರಲ್ಲಿ ಮುಂಬೈನ ಇಂದಿನ ಹಿಂದೂಜಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಾಯಕ ನಟಿ ಅಮೀರ್ ಬಾಯಿ ಕರ್ನಾಟಕಿಯವರು ಬದುಕಿನುದ್ದಕ್ಕೂ ದೇಶಾಟನೆ ಮಾಡಿದರೂ ಈ ದೇಹ ತಮ್ಮೂರ ಮಣ್ಣಿನಲ್ಲಿಯೇ ಮಣ್ಣಾಗಬೇಕೆಂದು ಬಯಸಿದ್ದನ್ನು ಗಮನಿಸಿದರೆ ಹುಟ್ಟಿನಿಂದ ಸಾಯುವವರೆಗೂ ಹಾಲುಂಡ ತವರಿನ ನೆನಪುಗಳು ಇವರನ್ನು ಕಾಡುತ್ತಿದ್ದವೆಂಬುದು ಸತ್ಯವೆ.

(ಕೃತಿ: ಅಮೀರ್ ಬಾಯಿ ಕರ್ನಾಟಕಿ, ಲೇಖಕರು: ರಹಮತ್‌ ತರೀಕೆರೆ, ಪ್ರಕಟಣೆ: ಅಭಿನವ ಪ್ರಕಾಶನ, ಬೆಲೆ‌: 300)