ಲಂಡನ್ನಿನ ಸೈಂಟ್ ಪೌಲ್ಸ್ ಎನ್ನುವ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿವೇತನ ಗಳಿಸಿಕೊಂಡ ಹನ್ನೆರಡು ವರ್ಷದ ಅರಬಿಂದೋವಿನ ಔಪಚಾರಿಕ ಶಿಕ್ಷಣ ಆರಂಭವಾಯಿತು. ಭಾಷೆಗಳನ್ನು ಆಸಕ್ತಿಯಿಂದ ಕಲಿಯುತ್ತಿದ್ದ ಭಾರತೀಯ ಬಾಲಕ ಆಂಗ್ಲ ಹೆಡ್ ಮಾಸ್ತರರ ಮೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬನಾದ. ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್, ಗ್ರೀಕ್ ಲ್ಯಾಟಿನ್ ಹೀಗೆ ಹಲವು ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದ ಅರಬಿಂದೋಗೆ ಲ್ಯಾಟಿನ್ ನಲ್ಲಿ ಇದ್ದ ಪ್ರಭುತ್ವವನ್ನು ಕಂಡ ಹೆಡ್ ಮಾಸ್ತರರು ತಾನೇ ಮುತುವರ್ಜಿಯಿಂದ ಲ್ಯಾಟಿನ್ ಹೇಳಿಕೊಡಲು ಶುರು ಮಾಡಿದರು. ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯ ಎರಡನೆಯ ಕಂತು

 

ಈ ರಸ್ತೆಯನ್ನು ಹೊಕ್ಕುವವರಿಗೂ ಹೊರ ಬೀಳುವವರಿಗೂ ಕಾಣುವಂತೆ ಎರಡೂ ತುದಿಯ ಎಡ ಬಲ ಮಗ್ಗುಲುಗಳಲ್ಲಿ “ಸೈಂಟ್ ಸ್ಟೀಫನ್ಸ್ ಅವೆನ್ಯೂ” ಎಂದು ಬರೆದು ನಿಲ್ಲಿಸಲಾಗಿದೆ. ಬಿಳಿ ಹಲಗೆಯ ಮೇಲೆ ಯಾವ ಕಡೆಗೂ ವಾಲದ ನೇರ ದಪ್ಪ ಕಪ್ಪು ಅಕ್ಷರಗಳಲ್ಲಿ ಬರೆದ ಹೆಸರು ಬೀದಿಯ ಅತಿಥಿ ಆಗಂತುಕರ ವಿನಮ್ರ ಸ್ವಾಗತ ವಿದಾಯಕ್ಕೆ ಕಾದಿರಬೇಕು. ಲಂಡನಿನ ಪಶ್ಚಿಮದ ಬಾಗಿಲು ಎಂದು ಕರೆಯಬಹುದಾದ ಹ್ಯಾಮರ್ಸ್ಮಿತ್ ಎನ್ನುವ ಸ್ಥಳೀಯ ಆಡಳಿತ ಪ್ರದೇಶದಲ್ಲಿ ಇರುವ ಈ ರಸ್ತೆಯಲ್ಲಿ ಒಂದಕ್ಕೊಂದು ಒತ್ತಿಕೊಂಡು ನೂರೈವತ್ತಕ್ಕಿಂತ ಹೆಚ್ಚು ಮನೆಗಳು ಇವೆ. ಈ ಬೀದಿಯ ಒಂದು ತುದಿ ಅಲ್ಲೇ ಹತ್ತಿರ ಇರುವ 1850ರಲ್ಲಿ ನಿರ್ಮಾಣಗೊಂಡ “ಸೈಂಟ್ ಸ್ಟೀಫನ್ಸ್ ನ ಚರ್ಚ್” ಕಡೆಗೆ ಕೊಂಡೊಯ್ಯುತ್ತದೆ.

ರಸ್ತೆಗೆ ನಾಮಕರಣ ಮಾಡುವುದು ಮೆಡೀವಿಯಲ್ ಅಥವಾ ಮಧ್ಯಯುಗದಲ್ಲಿ ಶುರು ಆದ ಪದ್ಧತಿ. ಮಧ್ಯಯುಗದ ಇಂತಹದೇ ತಾರೀಕು ತಿಂಗಳು ಎಂದಿಲ್ಲ, ರೋಮನ್ ಚಕ್ರಾಧಿಪತ್ಯದ ಪತನವಾದ ಐದನೆಯ ಶತಮಾನದಿಂದ, ನವ ಯೂರೋಪಿನ ಉಗಮವಾದ ಹದಿನೈದನೆಯ ಶತಮಾನದ ನಡುವಿನ ಕಾಲವೆಲ್ಲ ಮೆಡೀವಿಯಲ್ ಎಂದು ಕರೆಸಿಕೊಳ್ಳುತ್ತದೆ. ಸಮೀಪದ ಮರ, ನದಿ, ಕಟ್ಟಡ, ತೋಟಗಳ ಹೆಸರನ್ನು ಆ ಪ್ರದೇಶದ ಬೀದಿಗಳಿಗೆ ಇರಿಸುವುದು ರೂಢಿಯಾಯಿತು. ಒಂದೊಂದು ರಸ್ತೆಗೂ ಒಂದೊಂದು ಹೆಸರು. ಪ್ರತಿ ರಸ್ತೆಗೂ ಅದರದ್ದೇ ಗುರುತು ವಿಳಾಸ, ನೆರೆಯ ರಸ್ತೆಯಂತೆ ತಾನಲ್ಲ, ತನ್ನಂತೆ ಉಳಿದ ಬೀದಿಗಳಲ್ಲ ಎನ್ನುವ ಭ್ರಮೆ ಈ ರಸ್ತೆಗಳಿಗೂ ಹುಟ್ಟಬಹುದೇನೊ. ಇರಲಿ, “ಸೈಂಟ್ ಸ್ಟೀಫನ್ಸ್ ಅವೆನ್ಯೂ” ವಿನ 49ನೆಯ ನಂಬರ್‌ನ ಮನೆಯ ಬಿಳಿ ಗೋಡೆಯ ಮೇಲೆ ಉರುಟಾದ ನೀಲಿ ಫಲಕವೊಂದು ಹೊಳೆಯುತ್ತಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಬೀದಿಯ ಒಳಬಂದವರನ್ನು ಮನೆಯ ಮುಂದೆ ಸಾಗುವವರನ್ನು ತನ್ನತ್ತ ಸೆಳೆದು ಮಾತಿಗೆಳೆಯುತ್ತಿದೆ.

ಈ ಮನೆಯಲ್ಲಿ 1884 ರಿಂದ 1887ರ ತನಕ ಭಾರತದಿಂದ ಬಂದಿದ್ದ ಯುವಕನೊಬ್ಬ ಇದ್ದನೆಂದು ನೆನಪು ಮಾಡಿಕೊಡುವ ಪ್ರಯತ್ನ ನೀಲಿ ಫಲಕದ್ದು. ಬೀದಿಯಲ್ಲಿ ನಿಂತು ಫಲಕದಲ್ಲಿರುವ ಹೆಸರನ್ನು ಓದಿದರೆ, ನಮೂದಿಸಲಾಗಿರುವ ಕಾಲಘಟ್ಟದಲ್ಲಿ ಭಾರತೀಯ ಯುವಕನೊಬ್ಬ ಲಂಡನ್ ನ ಆ ಸ್ಥಳದಲ್ಲಿ ಕಳೆದ ದಿನಗಳು ಮಸುಕಿನಿಂದ ನಿಧಾನವಾಗಿ ಹೊರಬರತೊಡಗುತ್ತವೆ. ಜೊತೆಗೆ ಆತನ ಕೊಲ್ಕತ್ತಾದ ಬಾಲ್ಯದ ದಿನಗಳೂ ಅನಾಯಾಸವಾಗಿ ಅದೇ ರಸ್ತೆಯಲ್ಲಿ ರೂಪ ಆಕಾರ ಪಡೆದು ಓಡಾಡತೊಡಗುತ್ತವೆ.

1872ರ ಆಗಸ್ಟ್ 15ರಂದು ಕೋಲ್ಕತ್ತಾದಲ್ಲಿ ಜನಿಸಿದವನು. ಈಗಿನ ಕೋಲ್ಕತ್ತಾ ಆಗಿನ ಕಲ್ಕತ್ತವೊ ಇನ್ನೇನೋ ಆಗಿದ್ದ ಸಮಯದಲ್ಲಿ… ಈಸ್ಟ್ ಇಂಡಿಯಾ ಕಂಪೆನಿ ಬಂಗಾಳವನ್ನು ಶತಮಾನಕ್ಕಿಂತ ದೀರ್ಘವಾಗಿ ಆಕ್ರಮಿಸಿ ಅಧಿಕಾರ ಚಲಾಯಿಸುತ್ತಿದ್ದ ಕಾಲದಲ್ಲಿ.. ಈತ ಹುಟ್ಟಿದ ದಿನಕ್ಕೆ ಸರಿಯಾಗಿ 75 ವರ್ಷಗಳ ನಂತರ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ಯ್ರ ಸಿಕ್ಕಿದ್ದರಿಂದ, ಹುಟ್ಟಿದ ದಿನಕ್ಕೂ ವಿಶೇಷ ಐತಿಹಾಸಿಕ ಮಹತ್ವ ಇದೆ. ಈತ ಏಳು ವರ್ಷದವನಾದಾಗ ತಂದೆ ಡಾಕ್ಟರ್ ಕೃಷ್ಣ ಧುನ್ ಘೋಷ್ ರು ಇವನನ್ನು ಹಾಗು ಇವನ ಇಬ್ಬರು ಅಣ್ಣಂದಿರನ್ನು ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್ ಗೆ ಕಳುಹಿಸುವ ತಯಾರಿಯಲ್ಲಿದ್ದರು. ತನ್ನ ಮಕ್ಕಳು ಶಿಕ್ಷಣ ಮುಗಿಸಿ ಭಾರತೀಯ ನಾಗರಿಕ ಸೇವೆಯಲ್ಲಿ (Indian Civil Service) ಕೆಲಸ ಮಾಡಬೇಕು ಎನ್ನುವ ಬಯಕೆ ಡಾ ಘೋಷರದು. ಆ ಕಾಲಕ್ಕೆ ಭಾರತದಲ್ಲಿ ಪ್ರತಿಷ್ಠಿತ ಎನ್ನಬಹುದಾಗಿದ್ದ ನೌಕರಿ “ಐ ಸಿ ಎಸ್” ಆಗಿತ್ತು. ಆಗಿನ ಆಡಳಿತ ಯಂತ್ರದಲ್ಲಿ ಒಂದು ಸಾವಿರ “ಐ ಸಿ ಎಸ್” ಅಧಿಕಾರಿಗಳು ಇದ್ದಿರಬಹುದು ಅಷ್ಟೇ. ಬ್ರಿಟಿಷ್ ಅಧಿಕಾರದ ಅಧೀನದಲ್ಲಿರುವ “ಐ ಸಿ ಎಸ್” ಗೆ ಪ್ರವೇಶ ಪಡೆಯುವವರು ಇಂಗ್ಲೆಂಡ್ ನಲ್ಲಿ ಓದಿರಬೇಕು, ಕಠಿಣವಾದ ಪ್ರವೇಶ ಪರೀಕ್ಷೆಗಳನ್ನು ಪಾಸಾಗಬೇಕು ಎನ್ನುವ ನಿಯಮಗಳು ಇದ್ದವು.

ಇಂಗ್ಲೆಂಡ್ ಗೆ ಹೊರಟ ಮೂವರು ಮಕ್ಕಳಲ್ಲಿ ಕಿರಿಯವನ ಅಂದಿನ ಹೆಸರು ಅರಬಿಂದೋ ಅಕ್ರೋಯ್ಡ ಘೋಷ್.

ಡಾ. ಘೋಷರು ಮೊದಲು ಇಂಗ್ಲೆಂಡ್ ನಲ್ಲಿ ಇದ್ದು ಬಂದವರು. ಪಾಶ್ಚಾತ್ಯ ಜೀವನ ಶೈಲಿಗೆ ಆಕರ್ಷಿತರಾದವರು. ಆಂಗ್ಲ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರು. ಕಿರಿಯ ಮಗನ ಹುಟ್ಟಿನ ಸಮಯದಲ್ಲಿ ಆಕಸ್ಮಿಕವಾಗಿ ಉಪಸ್ಥಿತರಿದ್ದ ಆಂಗ್ಲ ಮಹಿಳೆ ಮಿಸ್ ಅನ್ನೆಟ್ ಅಕ್ರೋಯ್ಡರ ನೆನಪಿಗೆ ಮಗನ ಹೆಸರಲ್ಲೂ ಆಕೆಯ ನಾಮಾಂಕಿತವನ್ನು ಸೇರಿಸಿದವರು. ತನ್ನ ಮಗನಿಗೆ ಕಡ್ಡಾಯವಾಗಿ ಇಂಗ್ಲೆಂಡ್ ನ ಶಿಕ್ಷಣವೇ ಸಿಗಬೇಕು ಭಾರತದ ಗಾಳಿಯೂ ಅವನ ಬಳಿ ಸುಳಿಯಬಾರದು ಎಂದು ಬಯಸಿದ ಡಾ. ಘೋಷರು ಮೂವರು ಮಕ್ಕಳನ್ನು ಹಡಗು ಹತ್ತಿಸಿ ಇಂಗ್ಲೆಂಡ್ ಗೆ ಬೀಳ್ಕೊಟ್ಟರು. ಬಿನೋಯ್ ಭೂಷಣ್, ಮನಮೋಹನ್ ಹಾಗು ಅರಬಿಂದೋ, ಸಹೋದರರು ಮೊದಲಿಗೆ ರೆವೆರೆಂಡ್ ಹಾಗು ಮಿಸೆಸ್ ಡ್ರೇವೆಟ್ ಎನ್ನುವವರ ಜೊತೆಗಿರಲು ಇಂಗ್ಲೆಂಡ್ ನ ಉತ್ತರದ ಮ್ಯಾಂಚೆಸ್ಟರ್ ಪಟ್ಟಣಕ್ಕೆ ಬಂದರು. ಡ್ರೇವೆಟ್ ದಂಪತಿಗಳು ಡಾ. ಘೋಷರಿಗೆ ಬಂಗಾಳದ ಸ್ನೇಹಿತರ ಮೂಲಕ ಪರಿಚಯವಾದವರು. ಇಂಗ್ಲೆಂಡ್ ನಲ್ಲಿ ಅಣ್ಣಂದಿರ ಶಾಲಾ ಶಿಕ್ಷಣ ಶುರು ಆದರೂ ಇನ್ನೂ ಸಣ್ಣವನೆನ್ನುವ ಕಾರಣಕ್ಕೆ ಕಿರಿಯನಾದ ಅರಬಿಂದೋವಿಗೆ ಮನೆಯಲ್ಲಿಯೇ ಪಾಠ ನಡೆಯುತ್ತಿತ್ತು. ಫ್ರೆಂಚ್ ಲ್ಯಾಟಿನ್ ಗಳ ಜೊತೆಗೆ ಭೂಗೋಳಶಾಸ್ತ್ರ ಹಾಗು ಗಣಿತದ ಆರಂಭಿಕ ಪಾಠಗಳು ನಡೆಯುತ್ತಿದ್ದವು. ಸಣ್ಣ ಪ್ರಾಯದಲ್ಲಿಯೇ ಅರಬಿಂದೋಗೆ ಕಾವ್ಯದಲ್ಲಿ ಆಸಕ್ತಿ ಹುಟ್ಟಿತು. ಮತ್ತೆ ಜೀವನದ ಕೊನೆಯವರೆಗೂ ಉಳಿಯಿತು. ಹನ್ನೊಂದು ವರ್ಷದ ಬಾಲಕ “ಫಾಕ್ಸ್ ಫ್ಯಾಮಿಲಿ ಮ್ಯಾಗಜಿನ್”ಗೆ ಐದು ಕವಿತೆಗಳನ್ನು ಬರೆದು ಕಳುಹಿಸಿದ್ದನು. 1884ರಲ್ಲಿ ಈ ಮೂವರು ಮಕ್ಕಳಿಗೆ ಆಶ್ರಯ ನೀಡಿದ್ದ ಡ್ರೇವೆಟ್ ದಂಪತಿಗಳು ಆಸ್ಟ್ರೇಲಿಯಾಕ್ಕೆ ವಲಸೆ ಹೋಗುವ ನಿರ್ಧಾರಕ್ಕೆ ಬಂದದ್ದರಿಂದ ಲಂಡನ್ನಿನಲ್ಲಿರುವ ಡ್ರೇವೆಟ್ ರ ತಾಯಿಯ ಮನೆಗೆ ಮಕ್ಕಳನ್ನು ಕಳುಹಿಸಿದರು. “ಆ ಮನೆಯೇ ತಾನು” ಎಂದು “ಸೈಂಟ್ ಸ್ಟೀಫನ್ಸ್ ಅವೆನ್ಯೂ” ವಿನ 49ನೆಯ ಮನೆಯ ನೀಲಿ ಫಲಕ ಇಂದೀಗ ಸಾರಿ ಹೇಳುತ್ತಿದೆ.

ಲಂಡನ್ನಿನ ಸೈಂಟ್ ಪೌಲ್ಸ್ ಎನ್ನುವ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿವೇತನ ಗಳಿಸಿಕೊಂಡ ಹನ್ನೆರಡು ವರ್ಷದ ಅರಬಿಂದೋವಿನ ಔಪಚಾರಿಕ ಶಿಕ್ಷಣ ಆರಂಭವಾಯಿತು. ಭಾಷೆಗಳನ್ನು ಆಸಕ್ತಿಯಿಂದ ಕಲಿಯುತ್ತಿದ್ದ ಭಾರತೀಯ ಬಾಲಕ ಆಂಗ್ಲ ಹೆಡ್ ಮಾಸ್ತರರ ಮೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬನಾದ. ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್, ಗ್ರೀಕ್ ಲ್ಯಾಟಿನ್ ಹೀಗೆ ಹಲವು ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದ ಅರಬಿಂದೋಗೆ ಲ್ಯಾಟಿನ್ ನಲ್ಲಿ ಇದ್ದ ಪ್ರಭುತ್ವವನ್ನು ಕಂಡ ಹೆಡ್ ಮಾಸ್ತರರು ತಾನೇ ಮುತುವರ್ಜಿಯಿಂದ ಲ್ಯಾಟಿನ್ ಹೇಳಿಕೊಡಲು ಶುರು ಮಾಡಿದರು.

ಬಾಲ್ಯದ ದಿನಗಳಲ್ಲಿ ಪಾಶ್ಚಾತ್ಯ ಪ್ರಭಾವದಲ್ಲಿ ಮುಳುಗಿ ಹೋಗಿದ್ದ ಅರಬಿಂದೋಗೆ ಜಗತ್ತಿನ ಬೇರೆ ಬೇರೆ ಸಂಸ್ಕೃತಿ ಇತಿಹಾಸಗಳ ಪರಿಚಯ ರಾಜಕೀಯ ಒಳನೋಟ ನೀಡಿದ್ದು, ಭಾರತದ ಸ್ಥಿತಿಗತಿಗಳ ಬಗ್ಗೆ ಎಚ್ಚರ ಮೂಡಿದ್ದು ಇಲ್ಲಿ ಇದೇ ಸಮಯದಲ್ಲಿ, ಮುಖ್ಯವಾಗಿ ಪುಸ್ತಕಗಳ ಮೂಲಕ. ಮತ್ತೆ ಯೂರೋಪಿನ ದೇಶಗಳಲ್ಲಿ ನಡೆದ ಹೋರಾಟ ಕ್ರಾಂತಿಗಳ ಪರಿಚಯ ಆದದ್ದು, ಬ್ರಿಟಿಷರ ಆಡಳಿತದಿಂದ ಭಾರತದಲ್ಲಿ ನಡೆಯುತ್ತಿರುವ ಅನ್ಯಾಯಗಳ ಬಗ್ಗೆ ಎಚ್ಚರ ಮೂಡಿದ್ದು ಕೂಡ ಇದೇ ಸಮಯದಲ್ಲೇ. ರೈತ ಕುಟುಂಬದಲ್ಲಿ ಹುಟ್ಟಿ ಫ್ರಾನ್ಸ್ ನ ಮಹಾನಾಯಕಿಯಾಗಿ ಬೆಳೆದು ಇಂಗ್ಲಿಷರ ವಿರುದ್ಧ ಸೆಣಸಿದ ಜೋನ್ ಆಫ್ ಆರ್ಕ ಹಾಗು ಇಟಲಿಯಲ್ಲಿ ವೈದ್ಯರ ಮಗನಾಗಿ ಹುಟ್ಟಿ ವಕೀಲಿ ಓದಿ ,”ಬಡವರ ವಕೀಲ” ಎಂದು ಹೆಸರು ಪಡೆದು, ರಾಜಾಧಿಪತ್ಯವನ್ನು ಕೊನೆಗೊಳಿಸಿ ಪ್ರಜಾಧಿಪತ್ಯದ ನಾಡಾಗಿಸಬೇಕೆಂದು ಕ್ರಾಂತಿಯ ಹಾದಿ ಹಿಡಿದ ಗಿಸಿಸಿಪೆ ಮಝಿನಿಯರ ಬಗೆಗಿನ ಓದು ಪ್ರೇರಣೆ ನೀಡಿದವು. ಪ್ರೇಮ ಕಾವ್ಯಗಳು, ಎಲಿಜಿಬೆತ್ ಮಾದರಿಯ ಕಾವ್ಯ ನಾಟಕಗಳು ಗಮನ ಸೆಳೆದವು. ಜಗತ್ತಿನ ಭಾಷೆಗಳ, ಸಾಹಿತ್ಯ ಚರಿತ್ರೆಯ ಅಧ್ಯಯನ ತನ್ನದೇ ನೆಲದಲ್ಲಿ ಪರಕೀಯರ ಆಳ್ವಿಕೆಯ ಬಗ್ಗೆ ಇದ್ದ ನಂಬಿಕೆಗಳನ್ನು ಅಲುಗಾಡಿಸಿದವು, ರಾಷ್ಟ್ರೀಯತೆಯ ಮೊದಲ ಕಿಡಿ ಹೊತ್ತಿಸಿದವು.

ಲಂಡನ್ನಿನಲ್ಲಿ ಮಕ್ಕಳನ್ನು ಓದಿಸುವುದು ಡಾ ಘೋಷರಿಗೆ ಸುಲಭದ ಕೆಲಸ ಆಗಿರಲಿಲ್ಲ. ಉದಾರಿಗಳಾಗಿದ್ದ ಡಾ ಘೋಷರು ಕೇಳಿದವರಿಗೆ ಕಷ್ಟದಲ್ಲಿರುವವರಿಗೆ ದಾನ ಮಾಡುತ್ತಿದ್ದವರು. ಮಗನಿಗೆ ಸಕಾಲದಲ್ಲಿ ಖರ್ಚಿಗೆ ಹಣ ಕಳುಹಿಸಲು ಆಗದ ಸಂದರ್ಭಗಳು ಆಗಾಗ ಎದುರಾಗುತ್ತಿದ್ದವು. ಲಂಡನ್ನಿನ ಸಂಕಷ್ಟದ ದಿನಗಳನ್ನು ಮುಂದೆ ಬೇರೆ ಬೇರೆ ಸಂದರ್ಭಗಳಲ್ಲಿ ಅರಬಿಂದೋ ಹೇಳಿಕೊಂಡದ್ದಿದೆ.

“ನಮ್ಮ ಮನೆಯ ಮಾಲಕಿ ತುಂಬಾ ದಯಾಳು, ತಾನೇ ದೀರ್ಘ ಕಾಲದಿಂದ ಸಂಕಷ್ಟದಲ್ಲಿದ್ದರೂ ನಾವು ತಿಂಗಳಿಗೆ ಸರಿಯಾಗಿ ಬಾಡಿಗೆ ಕೊಡದಿದ್ದಾಗ ನಮ್ಮನ್ನು ಹೊರದೂಡಲಿಲ್ಲ” ….

“ವರ್ಷವಿಡೀ ಬೆಳಗಿನ ತಿಂಡಿಗೆ ಬೆಣ್ಣೆ ಹಚ್ಚಿದ ಬ್ರೆಡ್ ಸ್ಯಾಂಡ್ವಿಚ್ ಹಾಗು ಚಹ ಮತ್ತೆ ಸಂಜೆಗೆ ಏನೋ ಒಂದು ಮಿತ ಆಹಾರ ತಿಂದು ದಿನ ಕಳೆದೆ” ಎಂದು ಬರೆದುಕೊಂಡಿದ್ದಾರೆ.

ಬೀದಿಯಲ್ಲಿ ನಿಂತು ಫಲಕದಲ್ಲಿರುವ ಹೆಸರನ್ನು ಓದಿದರೆ, ನಮೂದಿಸಲಾಗಿರುವ ಕಾಲಘಟ್ಟದಲ್ಲಿ ಭಾರತೀಯ ಯುವಕನೊಬ್ಬ ಲಂಡನ್ ನ ಆ ಸ್ಥಳದಲ್ಲಿ ಕಳೆದ ದಿನಗಳು ಮಸುಕಿನಿಂದ ನಿಧಾನವಾಗಿ ಹೊರಬರತೊಡಗುತ್ತವೆ. ಜೊತೆಗೆ ಆತನ ಕೊಲ್ಕತ್ತಾದ ಬಾಲ್ಯದ ದಿನಗಳೂ ಅನಾಯಾಸವಾಗಿ ಅದೇ ರಸ್ತೆಯಲ್ಲಿ ರೂಪ ಆಕಾರ ಪಡೆದು ಓಡಾಡತೊಡಗುತ್ತವೆ.

ಆದರೆ ಒಂದು ದಿನ ಡ್ರೇವೆಟ್ ರ ತಾಯಿ ಹಠಾತ್ತನೆ ಮನೆ ಬಿಟ್ಟು ಹೋದದ್ದು ಅವರ ಕಷ್ಟಗಳನ್ನು ಇನ್ನೂ ಹೆಚ್ಚಿಸಿತು. ನಿತ್ಯವೂ ಮಕ್ಕಳನ್ನು ಪ್ರಾರ್ಥನೆ ಮಾಡುವಂತೆ ಆಕೆ ಒತ್ತಾಯಿಸುತ್ತಿದ್ದುದು ಹಿರಿಯನಾದ ಮನಮೋಹನನಿಗೆ ಇಷ್ಟ ಬರಲಿಲ್ಲ. ಆತ ವಿರೋಧಿಸಿದಾಗ “ಈ ನಾಸ್ತಿಕ ಮಕ್ಕಳೊಡನೆ ನಾನಿರಲಾರೆ, ಈ ಮನೆಗೆ ಏನಾದರೂ ಆಪತ್ತು ಬಂದೀತು” ಎಂದು ಸಿಟ್ಟಿನಲ್ಲಿ ಹೊರಟುಹೋಗಿದ್ದಳು.

ಲಂಡನ್ನಿನ ಕಡುಚಳಿಯಲ್ಲಿ ದೇಹವನ್ನು ಜೋಪಾನವಾಗಿಡುವ ಸೂಕ್ತ ಬಟ್ಟೆ ಇರಲಿಲ್ಲ. ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಡುವ ವ್ಯವಸ್ಥೆ ಇಲ್ಲದೆ ನಡುಗುತ್ತ ಕಳೆಯಬೇಕಾಗಿತ್ತು, ಮಲಗುವ ಕೋಣೆಯೆಂದು ಪ್ರತ್ಯೇಕ ಇರಲಿಲ್ಲ. ಲಂಡನ್ನಿನ ಕಡುಕಷ್ಟದ ದಿನಗಳಲ್ಲಿ ಪುಸ್ತಕದ ಓದು ಮಾತ್ರ ಅರಬಿಂದೋರನ್ನು ಬೆಚ್ಚಗಿಟ್ಟಿರಬೇಕು. ದೈನಂದಿನ ಸಂಕಷ್ಟಗಳ ನಡುವೆ ಓದು ಬರಹ ಚಿಂತನೆಗಳು ನಿರಾತಂಕವಾಗಿ ಸಾಗುತ್ತಿದ್ದವು. ಆ ಸಮಯದಲ್ಲೇ, ಸಾಹಿತ್ಯ ಸಂಬಂಧಿ ಪ್ರಶಸ್ತಿಯಾದ ಬಟರವರ್ಥ್ ಬಹುಮಾನ ದೊರಕಿತು. ಇತಿಹಾಸಕ್ಕೆ ಸಂಬಂಧಿಸಿದ ಬೆಡ್ಫೋರ್ಡ್ ಪ್ರಶಸ್ತಿ ಸಿಕ್ಕಿತು. ಕೇಂಬ್ರಿಜ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಮುಂದಿನ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವೂ ದೊರೆಯಿತು. 1890ರಲ್ಲಿ ಹದಿನೆಂಟರ ಯುವಕ ಕೇಂಬ್ರಿಜ್ ನಲ್ಲಿ ಓದಲು ಶುರು ಮಾಡಿದ. ಎರಡು ವರ್ಷಗಳ ಓದಿನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದ. ಪ್ರಸಿದ್ಧ ಬ್ರಿಟಿಷ್ ಶಿಕ್ಷಣ ತಜ್ಞ ಇತಿಹಾಸಕಾರ ಆಸ್ಕರ್ ಬ್ರೌನಿಂಗ್, ಅರಬಿಂದೋ ಬರೆದ ಉತ್ತರ ಪತ್ರಿಕೆಗೆ ಅಂಕ ಹಾಕಿದ್ದರು.

“ಈ ವಿಷಯದ ಹಲವು ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ನೋಡಿದ್ದೇನೆ, ಆದರೆ ನೀನು ಬರೆದ ಉತ್ತರ ಪತ್ರಿಕೆ ಅತ್ಯುತ್ತಮವಾದದ್ದು” ಎಂದು ಅವರು ನುಡಿದಿದ್ದರು.

ಎಳವೆಯ ದಿನಗಳನ್ನು ಮನೆಯಿಂದ ದೂರದ ಇಂಗ್ಲೆಂಡ್ ಅಲ್ಲಿ ಕಳೆದ ಅರಬಿಂದೋ ಭಾರತೀಯವಲ್ಲದ ಎಂಟತ್ತು ಭಾಷೆಗಳನ್ನು ಕಲಿತಿದ್ದರೂ, ಅವರಿಗೆ ಮಾತೃಭಾಷೆ ಬಂಗಾಳಿಯಲ್ಲಿ ಸರಿಯಾಗಿ ಮಾತನಾಡುವುದು ಬರುತ್ತಿರಲಿಲ್ಲ. ಯುರೋಪಿಯನ್ ಭಾಷೆಗಳು, ಸಾಹಿತ್ಯ, ಕಾವ್ಯ, ಇತಿಹಾಸ, ರಾಜಕೀಯಗಳ ಕಡೆಗೆ ಆಸಕ್ತಿ ಗಮನ ಹೆಚ್ಚಾಗಿ ಇತ್ತು. ಮ್ಯಾಂಚೆಸ್ಟರ್ ಇಂದ ಕೇಂಬ್ರಿಜ್ ತನಕದ ಓದಿನ ಹಾಗು ಕೊಲ್ಕತ್ತಾದಿಂದ ಲಂಡನ್ ವರೆಗಿನ ಯಾತ್ರೆಯ ನಿರ್ಣಾಯಕ ಹಂತವಾಗಿ, ಭಾರತೀಯ ನಾಗರಿಕ ಸೇವೆಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದೂ ಆಯಿತು. ಅಣ್ಣ ಮನಮೋಹನ ಸಾಹಿತ್ಯದಲ್ಲಿ ಮುಂದುವರಿಯಲು ನಿರ್ಧರಿಸಿದರೆ, ಬಿನೋಯ್ ಭೂಷಣ್ “ಐ ಸಿ ಎಸ್” ಪಾಸು ಮಾಡುವಷ್ಟು ಬುದ್ಧಿವಂತನಾಗಿರಲಿಲ್ಲ. ಮಕ್ಕಳು “ಐ ಸಿ ಎಸ್” ಓದಬೇಕೆಂಬ ತಂದೆಯ ಕನಸಿನ ಭಾರ ಪೂರ್ತಿಯಾಗಿ ಅರಬಿಂದೋ ಮೇಲೆಯೇ ಬಿತ್ತು. ತಂದೆಯಿಂದ ಆರ್ಥಿಕ ಸಹಾಯ ಇರದಿರುವ ಕಾರಣಕ್ಕೆ ವಿದ್ಯಾರ್ಥಿ ವೇತನವನ್ನು ಗಳಿಸಿಯೇ ನಡೆದ ಇಲ್ಲಿಯ ತನಕದ ಓದು ಇನ್ನೂ ಮುಂದುವರಿಯಬೇಕಾಗಿತ್ತು. “ಐ ಸಿ ಎಸ್ ” ಪರೀಕ್ಷೆಯಲ್ಲಿಯೂ ಉತ್ತಮ ಶ್ರೇಣಿ ಪಡೆದದ್ದು ಕನಸಿನ ನೌಕರಿಯನ್ನು ಕೈಗೆಟುಕುವಷ್ಟು ಹತ್ತಿರ ತಂದಿತು.

ಅಷ್ಟೊತ್ತಿಗಾಗಲೇ ರಾಜಕೀಯ ನಿಲುವುಗಳು ಅರಬಿಂದೋ ಮನಸಿನಲ್ಲಿ ವಿಭಿನ್ನ ಆಕಾರ ಪಡೆಯುತ್ತಿದ್ದವು, ಭಾರತದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಬಗ್ಗೆ ಪ್ರಶ್ನೆ ಜಿಜ್ಞಾಸೆ ಮೂಡುತ್ತಿದ್ದವು. ಆಂಗ್ಲ ಆಡಳಿತದ ಅಧಿಕಾರ ಯಂತ್ರದ ಕಿರುಚಕ್ರವಾಗಿ ಕೆಲಸ ಮಾಡುವುದರಲ್ಲಿ ಉತ್ಸಾಹ ಕುಗ್ಗತೊಡಗಿತ್ತು. ಅತ್ತ ಬಂಗಾಳದಲ್ಲಿ ತಂದೆ ಡಾ ಘೋಷರಿಗೂ ಬ್ರಿಟಿಷ್ ಆಡಳಿತದ ಅನ್ಯಾಯ ದೌರ್ಜನ್ಯಗಳ ಪರಿಚಯವಾಗಿ ಭ್ರಮನಿರಸನವಾಗುತ್ತಿತ್ತು. ಮಕ್ಕಳೊಡನೆ ಬಹಳ ಕಡಿಮೆ ಪತ್ರ ವ್ಯವಹಾರ ನಡೆಸುತ್ತಿದ್ದವರೂ, ಇಲ್ಲೇನು ನಡೆಯುತ್ತಿದೆ ಎನ್ನುವ ಅರಿವು ಅಲ್ಲಿರುವ ಮಕ್ಕಳಿಗೂ ಆಗಲಿ ಎಂದು ಪತ್ರಿಕಾ ವರದಿಗಳನ್ನು ಕತ್ತರಿಸಿ ಅಂಚೆಯ ಮೂಲಕ ಕಳುಹಿಸುತ್ತಿದ್ದರು. ಅರಬಿಂದೋ ಬಂಗಾಳಿ ಕಲಿಯಲು ಶುರು ಮಾಡಿದರು. ಭಾರತದಿಂದ ಇಂಗ್ಲೆಂಡ್ ಗೆ ಬಂದಿದ್ದ ಸಮಾನ ಮನಸ್ಕ ಗೆಳೆಯರನ್ನು ಭೇಟಿಯಾಗಿ ಗುಟ್ಟಿನಲ್ಲಿ ಸ್ವಾತಂತ್ಯ್ರ ಚಳವಳಿಯ ಬಗ್ಗೆ ಚರ್ಚೆ ಮಾಡಲು ಆರಂಭಿಸಿದರು. ಭಾರತಕ್ಕೆ ಮರಳಿ, ಸ್ವಾತಂತ್ಯ್ರ ಸಂಗ್ರಾಮದಲ್ಲಿ ಭಾಗವಹಿಸುವ ಬಗ್ಗೆ ಒಲವು ಹೆಚ್ಚುತ್ತಿತ್ತು. ಐ ಸಿ ಎಸ್ ಗೆ ಸೇರಲು ಬೇಕಾಗುವ ಮುಂದಿನ ಹಂತದ ಬಗೆಗಿನ ಪ್ರಯತ್ನಕ್ಕಿಂತ, ಆಯ್ಕೆಗೆ ಅನರ್ಹ ಆಗುವುದು ಯಾವ ರೀತಿಯಲ್ಲಿ ಎನ್ನುವ ಬಗ್ಗೆ ಯೋಚನೆ ನಡೆದಿತ್ತು. “ಐ ಸಿ ಎಸ್” ಆಯ್ಕೆಯ ಭಾಗವಾಗಿ ನಡೆಯುವ ಕುದುರೆ ಸವಾರಿ ಪರೀಕ್ಷೆಯಲ್ಲಿ ಉದ್ದೇಶಪೂರ್ವಕವಾಗಿ ಅರಬಿಂದೋ ಭಾಗವಹಿಸಲಿಲ್ಲ. ಪ್ರವೇಶ ಪರೀಕ್ಷೆಯಲ್ಲಿ ಮೊದಲೇ ಉತ್ತಮ ನಿರ್ವಹಣೆ ನೀಡಿದ್ದರಿಂದ ಕುದುರೆ ಸವಾರಿಯ ಪರೀಕ್ಷೆಗೆ ಹಾಜರಾಗದಿದ್ದುದು ಆಯ್ಕೆಯಲ್ಲಿ ಉಪೇಕ್ಷಿಸಬಹುದಾದ ವಿಷಯವೇನೋ ಆಗಿತ್ತು. ಆದರೆ ಅರಬಿಂದೋರ ಇತ್ತೀಚಿನ ಒಲವು ನಿಲುವುಗಳ ಬಗ್ಗೆ ತಿಳಿದಿದ್ದ ಕೆಲವು ಬ್ರಿಟಿಷ್ ಅಧಿಕಾರಿಗಳು ಆಯ್ಕೆಯನ್ನು ತಿರಸ್ಕರಿಸಿದರು. ಅರಬಿಂದೋರಿಗೂ ಅದೇ ಬೇಕಾಗಿತ್ತು. ಆದರೆ, ಪದವಿ ಶಿಕ್ಷಣವನ್ನು ಉತ್ತಮ ಶ್ರೇಣಿಯಲ್ಲಿ ಮುಗಿಸಿದ್ದರೂ ಲಂಡನ್ ಅಲ್ಲಿ ನಿರುದ್ಯೋಗಿಯಾಗಿ ಉಳಿಯವ ಸಂದರ್ಭ ಎದುರಾಯಿತು. ಆ ಸಮಯಕ್ಕೆ ಬರೋಡದ ಮಹಾರಾಜ ಸಯ್ಯಾಜಿ ರಾವ್ ಗಾಯಕ್ವಾಡರು ಲಂಡನ್ ಗೆ ಬಂದಿದ್ದರು. ಡಾ ಘೋಷರ ಸ್ನೇಹಿತರೊಬ್ಬರ ಮೂಲಕ ಅರಬಿಂದೋ ರ ಸಂಪರ್ಕ್ಕೆ ಬಂದ ಗಾಯಕ್ವಾಡರು ಬರೋಡಾದ (ಗುಜರಾತಿನ ಈಗಿನ ವಡೋದರಾ) ರಾಜ್ಯ ಸರಕಾರಿ ಸೇವೆಯ ಕೆಲಸಕ್ಕೆ ಆಹ್ವಾನಿಸಿದರು. “ಐ ಸಿ ಎಸ್” ಲಿಖಿತ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದ ವ್ಯಕ್ತಿಯನ್ನು ತಿಂಗಳಿಗೆ ಇನ್ನೂರು ರೂಪಾಯಿ ಸಂಬಳಕ್ಕೆ ಆರಿಸಿಕೊಂಡೆ ಎಂದು ಹೆಮ್ಮೆಯಿಂದ ಗೆಳೆಯರಲ್ಲಿ ಹೇಳಿಕೊಂಡರು. ಲಂಡನ್ ವಾಸ್ತವ್ಯವನ್ನು ನಿಲ್ಲಿಸಿ ಭಾರತಕ್ಕೆ ಮರಳುವುದಕ್ಕೆ ಬರೋಡಾದ ನೌಕರಿ ಹಾದಿ ಮಾಡಿಕೊಟ್ಟಿತು.

ಏಳು ವರ್ಷದ ಬಾಲಕನಿದ್ದಾಗ, 1879ರಲ್ಲಿ ಇಂಗ್ಲೆಂಡ್ ಗೆ ಬಂದ ಅರಬಿಂದೋ 21ರ ಯುವಕನಾಗಿ, 1893ರಲ್ಲಿ ಭಾರತಕ್ಕೆ ವಾಪಸಾಗಿದ್ದು. ಬಹುಮುಖ ವ್ಯಕ್ತಿತ್ವದ ಸಾಧಕನ ಜೀವನ ಪುಟಗಳಲ್ಲಿ “ಕಾವ್ಯ ಮತ್ತು ರಾಜಕೀಯದ ದಿನಗಳು” ಎಂದು ಮರುವ್ಯಾಖ್ಯಾನಿಸಬಹುದಾದ ಹದಿನಾಲ್ಕು ವರ್ಷಗಳ ಅಧ್ಯಾಯ ಇಲ್ಲಿ ಇಂಗ್ಲೆಂಡ್ ನ ಬೇರೆ ಬೇರೆ ಊರು, ರಸ್ತೆ, ಶಾಲೆ, ವಿಶ್ವವಿದ್ಯಾಲಯ, ಪುಸ್ತಕಾಲಯ, ಮನೆಗಳಲ್ಲಿ ಕಳೆದದ್ದು. ಮಹತ್ವಪೂರ್ಣವೆನಿಸಿದ ಮೂರು ವರ್ಷಗಳನ್ನು ಕಳೆದ ಲಂಡನ್ನಿನ “ಸೈಂಟ್ ಸ್ಟೀಫನ್ಸ್ ಅವೆನ್ಯೂ” ವಿನ 49ನೆಯ ನಂಬರ್‌ನ ಮನೆ ಇಂಗ್ಲೆಂಡ್ ನ ಆ ಎಲ್ಲ ನೆನಪುಗಳಿಗೂ ದಿಕ್ಕು ತೋರಿಸುವ ಕಿಂಡಿ. “ಅರಬಿಂದೋ ಅಕ್ರೋಯ್ಡ ಘೋಷ್” ನಿಂದ “ಶ್ರೀ ಅರಬಿಂದೋ” ತನಕದ ಪರಿವರ್ತನೆಯ ಹಾದಿಗೆ ಸಾಕ್ಷಿ ಹಾಗು ಮಾರ್ಗದರ್ಶಿ. 2007ರಲ್ಲಿ ಲಂಡನ್ನಿನ ಮನೆಯ ಗೋಡೆಯ ಮೇಲೆ ಸ್ಮರಣೆಯ ನೀಲಿ ಫಲಕವನ್ನು ನೆಡಲಾಯಿತು. ಅರಬಿಂದೋ ಅಕ್ರೋಯ್ಡ ಘೋಷ್, ಇಂಗ್ಲಿಷರಂತೆ ಮಾತನಾಡಬೇಕು ಯೋಚಿಸಬೇಕು ಬದುಕಬೇಕು ಎಂದು ಇಂಗ್ಲೆಂಡ್ ಗೆ ಕಳುಹಿಸಲ್ಪಟ್ಟಿದ್ದರೂ ಓದಿನ ಹಸಿವು, ವಿಶ್ವ ಸಾಹಿತ್ಯದೊಟ್ಟಿಗಿನ ಗೆಳೆತನ, ಆರ್ಥಿಕ ಸಂಕಷ್ಟ, ರಾಜಕೀಯ ಒಳನೋಟ, ಆತ್ಮವಿಮರ್ಶೆ, ಸಂಸ್ಕೃತಿ ದ್ವಂದ್ವಗಳ ನಡುವೆ  ‘ಅಪ್ಪಟ ಭಾರತೀಯ’ನಾಗಿ ಇಂಗ್ಲೆಂಡ್ ನಿಂದ ಮರಳಿದರು. ಇಂಗ್ಲೆಂಡ್ ಅನ್ನು ಮೆಚ್ಚಿ ನಿಂದವರಿರಲಿ, ವಿರೋಧಿಸುತ್ತ ನಿರ್ಗಮಿಸಿದವರಾಗಲಿ, ವಿಶಿಷ್ಟ ವಿಶಾಲ ವಿಖ್ಯಾತ ವ್ಯಕ್ತಿತ್ವದೊಳಗಿನ ಸಣ್ಣ ಭಾಗವನ್ನಾದರೂ ತನ್ನೊಳಗೆ ಇದ್ದು ಕಟ್ಟಿಕೊಂಡವರೆಂಬ ಕಾರಣಕ್ಕೆ ಲಂಡನ್ ನಗರದ ಸದಾ ಸ್ಮರಣೆಯಲ್ಲಿ ಉಳಿದರು.

ಅಂದು ಇಲ್ಲಿ ಇದ್ದುಹೋದ ಯುವಕನನ್ನು ಮುಂದೆ ಜನಮನ್ನಣೆ ಪಡೆದ ಹೆಸರಾದ “ಶ್ರೀ ಅರಬಿಂದೋ” ಎಂದು ಈ ನೀಲಿ ಫಲಕ ಸಂಬೋಧಿಸುತ್ತದೆ. 1872ರಲ್ಲಿ ಹುಟ್ಟಿ 1950ರಲ್ಲಿ ಮಡಿದ ಅವರನ್ನು “ಭಾರತೀಯ ಆಧ್ಯಾತ್ಮಿಕ ಗುರು” ಎಂದು ಪರಿಚಯಿಸುತ್ತದೆ; ಕವಿ, ಸ್ವಾತಂತ್ಯ್ರ ಚಳವಳಿಗಾರರು. ಅಷ್ಟೇ ಅಲ್ಲ ಮಹಾತ್ಮ ಗಾಂಧಿಯವರನ್ನೂ ಸೇರಿದಂತೆ ಹಲವರಿಗೆ ಸ್ಪೂರ್ತಿ ನೀಡಿದ ಮಹಾನುಭಾವ ಎಂದೂ ಈ ಫಲಕ ನೆನಪಿಡುತ್ತದೆ.