ಮಂಗಿಯಾರೊಟ್ಟಿ ಮುದುಕನಿಗೆ ಕೈ ಚಾಚಿ ಕಂದಕದಿಂದ ಹೊರಗೆಳೆದು, ಒಣಹುಲ್ಲಿನ ಗೊಂಬೆಯಂತೆ ಅವನನ್ನ ಕ್ಷಣ ಎತ್ತಿ ಹಿಡಿದು ಕಾಲು ಗಾಳಿಯಲ್ಲಿ ತೇಲಿಸಿ ಕೆಳಕ್ಕಿಳಿಸಿದ. ಮುದುಕ ಒಂದು ಮೀಟರ್ ಎತ್ತರಕ್ಕಿಂತ ಹೆಚ್ಚಿಲ್ಲ ಎಂದು ನಾನು ಕಂಡುಕೊಂಡೆ. ಅವನು ತನ್ನ ತೋಳಿನ ಕೆಳಗೆ ಬೃಹತ್ ಬ್ರೀಫ್ ಕೇಸ್ ಅನ್ನು ಹಿಡಿದಿದ್ದ. ಅದು ಅವನನ್ನು ಇನ್ನಷ್ಟು ಚಿಕ್ಕದಾಗಿ ಕಾಣುವಂತೆ ಮಾಡಿತ್ತು. ಅವನ ಟೋಪಿ ಮತ್ತು ಅವನ ಮೇಲಂಗಿಯಂತೆಯೇ ಅವನ ಬ್ರೀಫ್ ಕೇಸ್ ಸಹ ಕಪ್ಪು ಬಣ್ಣದ್ದಾಗಿತ್ತು. ಅದು ಕೂಡಾ ತನ್ನ ಉತ್ತಮ ದಿನಗಳನ್ನು ಆಗಲೇ ಕಂಡುಬಿಟ್ಟಿತ್ತು.
ಆರ್. ವಿಜಯರಾಘವನ್ ಅನುವಾದಿಸಿದ ಜ್ಯಾಕ್ ಆಲ್ಸನ್ ಬರೆದ ಇಂಗ್ಲಿಷ್ ಕಥೆ “ಅದೃಶ್ಯ ಮನುಷ್ಯ”

 

ಒಂದು ದಿನ, ನಾನು ಅವನ ಬಳಿ ಕೆಲಸ ಮಾಡಲು ಪ್ರಾರಂಭಿಸಿದ ಸ್ವಲ್ಪ ದಿನಗಳ ನಂತರ, ಮಂಗಿಯಾರೊಟ್ಟಿ ಹೇಳಿದ: ‘ಇವತ್ತಿಗೆ ಕೆಲಸ ಸಾಕು. ಎಲ್ಲ ಎತ್ತಿಡು. ಎತ್ತಿಡುತ್ತೀ ತಾನೇ. ಹತ್ತು ನಿಮಿಷಗಳಲ್ಲಿ ಹಿಂತಿರುಗಬೇಕು.’ ಸೂಚನೆ ಅಥವಾ ವಿವರಣೆಯಿಲ್ಲದೆ ಕೆಲಸಗಳನ್ನು ಮಾಡುವುದು, ಹಾಗೆ ಮಾಡಿ ಜನರಿಗೆ ಆಶ್ಚರ್ಯವನ್ನುಂಟುಮಾಡುವುದು ಅವನಿಗೆ ವಿಶಿಷ್ಟವಾದ ನಡೆಯಾಗಿತ್ತು. ನಾನು ಪೇಂಟ್ಬ್ರಷ್ ಗಳನ್ನು ಎಚ್ಚರಿಕೆಯಿಂದ ಸ್ವಚ್ಚಗೊಳಿಸಿದೆ. ಒಂದು ಸಣ್ಣ ಕಣದಷ್ಟು ಪೇಂಟ್ ಸಹ ಅವುಗಳ ಮೇಲೆ ಉಳಿಯಬಾರದು, ಉಳಿದರೆ ಮಂಗಿಯಾರೊಟ್ಟಿ ಕೋಪಗೊಳ್ಳುತ್ತಾನೆಂದು ನಾನು ತಿಳಿದಿದ್ದೆ. ನಾನು ಅವನಿಗೆ ನಿಜವಾಗಲೂ ಹೆದರುತ್ತಿರಲಿಲ್ಲ. ಆದರೆ ಅವನು ಹರಿತವಾದ ನಾಲಿಗೆಯ ವ್ಯಕ್ತಿ. ಹಾಗಾಗಿ ನಾನು ಅವನನ್ನು ಯಾವುದಕ್ಕೂ ಅಸಮಾಧಾನಗೊಳಿಸದಿರಲು ಪ್ರಯತ್ನಿಸುತ್ತಿದ್ದೆ. ನಾನು ಎಲ್ಲವನ್ನೂ ಸರಿಯಾದ, ಮಂಗಿಯಾರೊಟ್ಟಿಯು ಬಯಸುವ ಕ್ರಮದಲ್ಲಿಯೇ ಪ್ಯಾಕ್ ಮಾಡಿದೆ: ಎಡಭಾಗದಲ್ಲಿ ಏಣಿ, ಬಲಭಾಗದಲ್ಲಿ ಬಕೆಟ್ ಹೀಗೆ.

ಸುಮಾರು ಕಾಲು ಗಂಟೆಯ ನಂತರ ಒಂದು ಕಾರು ಬಂದು ನಿಂತಿತು. ಹಳೆಯ ಕಪ್ಪು ಸಿಟ್ರೊಯೆನ್ ನ ಸ್ಟೀರಿಂಗ್ ವೀಲ್ ನಲ್ಲಿ ಮಂಗಿಯಾರೊಟ್ಟಿ ಇದ್ದ. ಅವನ ಮುಖ ಎಂದಿನಂತೆ ಮಂಕಾಗಿತ್ತು. ‘ಒಳಗೆ ಬಾ!’ ಅವನು ಹೇಳಿದ. ನಾನು ಬಾಗಿಲು ಮುಚ್ಚುವ ಮೊದಲೇ ಟೈರ್ ಗಳ ಕಿರ್ ಸದ್ದಿನೊಂದಿಗೆ ಕಾರು ಮುಂದಕ್ಕೆ ಎಳೆಯಿತು. `ನಾವು ಎಲ್ಲಿಗೆ ಹೋಗುತ್ತಿದ್ದೇವೆ?’ ನಾನು ಕೇಳಿದೆ. ಅವನು ಉತ್ತರಿಸಲಿಲ್ಲ. ಅದು ನಿನ್ನ ವ್ಯವಹಾರವಲ್ಲ ಎನ್ನುವುದನ್ನು ನೆನಪಿಸುವ ಅವನ ವಿಧಾನವಾಗಿತ್ತು. ನಾನು ಮತ್ತೆ ಸರಿಯಾಗಿ ಕೂತು, ಕುತೂಹಲ ತೊರೆದು ಈ ಕಾರು ಸವಾರಿಯಿಂದ ನನಗೆ ಸಾಧ್ಯವಾದಷ್ಟು ನಾನು ಆನಂದಿಸುತ್ತೇನೆ ಎಂದು ಮನದಲ್ಲೇ ನಿರ್ಧರಿಸಿದೆ. ಹೇಗೂ ಇದು ಏಣಿಯನ್ನೇರಿ ಪೇಂಟ್ ಅಂಗಡಿ ಮುಂಭಾಗಗಳಲ್ಲಿ ನಿಲ್ಲುವುದಕ್ಕಿಂತ ಉತ್ತಮವಾಗಿತ್ತು.

ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಸಣ್ಣ ಕಲ್ಪನೆಯೂ ನನಗೆ ಇರಲಿಲ್ಲ. ಆದರೆ ಶೀಘ್ರದಲ್ಲೇ ನಾವು ಪ್ಯಾರಿಸ್ ನಿಂದ ಹೊರಗಡೆ ಗ್ರಾಮಾಂತರ ಪ್ರದೇಶದಲ್ಲಿದ್ದೆವು. ಮಂಗಿಯಾರೊಟ್ಟಿ ರಸ್ತೆಬದಿಯಲ್ಲಿ ಟಯರ್ ಕಿರುಚುವಂತೆ ಬ್ರೇಕ್ ಒತ್ತಿ ಎಂಜಿನ್ ಆಫ್ ಮಾಡಿದ. ನಾನು ಅವನತ್ತ ನೋಡಿದೆ. ಅವನು ನೇರವಾಗಿ ಮುಂದೆ ನೋಡುತ್ತಿದ್ದ. ನಾನು ಅವನ ನೋಟವನ್ನು ಹಿಂಬಾಲಿಸಿ ನೋಡಿದೆ. ಆದರೆ ನನಗೆ ಕಂಡದ್ದು ಒಂದು ಹಳ್ಳಿಗಾಡಿನ ರಸ್ತೆ ಮತ್ತು ಅದರ ಅಕ್ಕಪಕ್ಕದಲ್ಲಿ ಬೆಳೆದಿದ್ದ ಪೊದೆಗಳು ಮಾತ್ರ.

ಹುಲ್ಲಿನ ಅಂಚಿನ ಮೇಲೆ ಏನೋ ಒಂದು ಚಲನೆ ನನ್ನ ಗಮನ ಸೆಳೆಯಿತು. ಅದು ಟೋಪಿ, ಹಳೆಯ ಕಪ್ಪು ಹೊಂಬರ್ಗ್, ಸಾಮಾನ್ಯ ಉದ್ಯಮಿಗಳು ಧರಿಸುತ್ತಿದ್ದ ರೀತಿಯದು. ಒಂದು ಕ್ಷಣ ಅದು ಜೀವಂತವಾದ ಆಕೃತಿಯಂತೆ ಕಾಣಿಸಿಕೊಂಡಿತು. ಮುಂದೆ ಸಾಗಿತು, ನಿಂತುಕೊಂಡಿತು, ಕಣ್ಮರೆಯಾಯಿತು, ಮತ್ತೆ ಒಂದು ಸೆಕೆಂಡಿಗೆ ಎದ್ದು ಬಂದಂತೆ ಕಂಡಿತು, ನಂತರ ಮುಂದೆ ಸಾಗಿ ಮತ್ತೆ ಕಣ್ಮರೆಯಾಯಿತು. ಎಂತಹ ಹಾಸ್ಯಾಸ್ಪದ ದೃಶ್ಯವೆಂದರೆ ನಾನು ನಗುವುದನ್ನು ತಡೆಯಲಾರದೆ ನಗುವಿನ ಅಲೆಯನ್ನು ಸ್ಫೋಟಿಸಿಬಿಟ್ಟೆ. ಆದರೆ ಟೋಪಿ ನೋಡುತ್ತಿದ್ದ ಮಂಗಿಯಾರೊಟ್ಟಿ ಗಂಭೀರ ಮುಖದಲ್ಲಿಯೇ ಇದ್ದ. ನಾನು ಮತ್ತೆ ಟೋಪಿ ನೋಡಲು ತಿರುಗಿದಾಗ ಅದು ಒಂದೆರಡು ಇಂಚುಗಳಷ್ಟು ಮೇಲೇರಿ ಅದರ ಕೆಳಗೆ ಒಂದು ತಲೆ ಇದೆ ಎಂಬುದನ್ನು ಬಹಿರಂಗಪಡಿಸಿತು. ಹುಲ್ಲಿನ ಅಂಚು ಮತ್ತು ಪೊದೆಗಳ ನಡುವೆ ಒಂದು ಕಂದಕವಿದೆ ಮತ್ತು ಟೋಪಿ ಧರಿಸಿದವರು ಕಂದಕದಲ್ಲಿ ಇಳಿದಿದ್ದಾರೆ ಎಂದು ನನಗೆ ತಿಳಿಯಿತು. ಮಂಗಿಯಾರೊಟ್ಟಿ ಕಾರಿನಿಂದ ಇಳಿದು ಆ ನಿಗೂಢ ಟೋಪಿಯ ಕಡೆಗೆ ನಡೆದ. ಅವನನ್ನು ಹಿಂಬಾಲಿಸಬೇಕೇ ಅಥವಾ ಕಾರಿನಲ್ಲಿಯೇ ಇರಬೇಕೇ ಎಂದು ನನಗೆ ತಿಳಿದಿರಲಿಲ್ಲ.

ನನ್ನ ಕುತೂಹಲ ಜಾಸ್ತಿಯಾಯಿತು. ಕಾರಿಂದ ಸರ್ರನೆ ಹೊರಬಂದು ಅವನನ್ನು ಸೇರಿಕೊಳ್ಳಲು ಅವಸರದಿಂದ ನಡೆದೆ. ಅವನು ರಸ್ತೆಬದಿಯಲ್ಲಿ ನಿಂತು, ಟೋಪಿಯನ್ನು ದಿಟ್ಟಿಸಿ ನೋಡುತ್ತಿದ್ದ; ಅಲ್ಲದೆ ನನಗೆ ಅರ್ಥವಾಗದ ಇಟಾಲಿಯನ್ ಉಪಭಾಷೆಯಲ್ಲಿ ಮಾತನಾಡುತ್ತಿದ್ದ. ನಾನು ಕೂಡ ಕೆಳಗೆ ನೋಡಿದೆ. ಟೋಪಿಯ ಕೆಳಗೆ ಒಬ್ಬ ಮುದುಕನ ಕೆಂಪು ಕೆಂಪಾದ ಸುಕ್ಕುಗಟ್ಟಿದ ಮುಖ ಕಂಡುಬಂತು. ಬೇಸಿಗೆಯ ಮಧ್ಯಾಹ್ನದ ಹೊರತಾಗಿಯೂ ಅವನು ಕಪ್ಪು ತುಪ್ಪಳದ ಕಾಲರ್ ಇದ್ದ ಓವರ್ ಕೋಟ್ ಧರಿಸಿದ್ದ. ಅದು ಅವನ ಹಳೆಯ ಹೊಂಬರ್ಗ್ ಗೆ ಸಂಪೂರ್ಣವಾಗಿ ಹೊಂದಿಕೆಯಾತ್ತಿತ್ತು. ಆಶ್ಚರ್ಯಕರ ಸಂಗತಿಯೆಂದರೆ, ಅವನು ನೇರವಾಗಿ ನಿಂತಿದ್ದರೂ, ಅವನ ತಲೆಯು ಕಂದಕದ ಮೇಲ್ಭಾಗವನ್ನು ಮೀರುತ್ತಿತ್ತು. ಅವನು ಕುಬ್ಜ ಮನುಷ್ಯನಾಗಿದ್ದ. ವೃದ್ಧಾಪ್ಯದಿಂದ ಬಾಗಿದ ದೇಹ ಅವನ ಸಣ್ಣ ನಿಲುವನ್ನು ಉತ್ಪ್ರೇಕ್ಷಿಸುತ್ತಿತ್ತು.

ಮಂಗಿಯಾರೊಟ್ಟಿ ಮುದುಕನಿಗೆ ಕೈ ಚಾಚಿ ಕಂದಕದಿಂದ ಹೊರಗೆಳೆದು, ಒಣಹುಲ್ಲಿನ ಗೊಂಬೆಯಂತೆ ಅವನನ್ನ ಕ್ಷಣ ಎತ್ತಿ ಹಿಡಿದು ಕಾಲು ಗಾಳಿಯಲ್ಲಿ ತೇಲಿಸಿ ಕೆಳಕ್ಕಿಳಿಸಿದ. ಮುದುಕ ಒಂದು ಮೀಟರ್ ಎತ್ತರಕ್ಕಿಂತ ಹೆಚ್ಚಿಲ್ಲ ಎಂದು ನಾನು ಕಂಡುಕೊಂಡೆ. ಅವನು ತನ್ನ ತೋಳಿನ ಕೆಳಗೆ ಬೃಹತ್ ಬ್ರೀಫ್ ಕೇಸ್ ಅನ್ನು ಹಿಡಿದಿದ್ದ. ಅದು ಅವನನ್ನು ಇನ್ನಷ್ಟು ಚಿಕ್ಕದಾಗಿ ಕಾಣುವಂತೆ ಮಾಡಿತ್ತು. ಅವನ ಟೋಪಿ ಮತ್ತು ಅವನ ಮೇಲಂಗಿಯಂತೆಯೇ ಅವನ ಬ್ರೀಫ್ ಕೇಸ್ ಸಹ ಕಪ್ಪು ಬಣ್ಣದ್ದಾಗಿತ್ತು. ಅದು ಕೂಡಾ ತನ್ನ ಉತ್ತಮ ದಿನಗಳನ್ನು ಆಗಲೇ ಕಂಡುಬಿಟ್ಟಿತ್ತು. ಅವನು ಯಾರು, ಅವನು ಈ ಕಂದಕದಲ್ಲಿ ಏನು ಮಾಡುತ್ತಿದ್ದಾನೆ ಎಂದು ನಾನು ಆಶ್ಚರ್ಯಪಟ್ಟೆ.

ಮಾಂಗಿಯಾರೊಟ್ಟಿ, ಸಾಮಾನ್ಯವಾಗಿ ಮಾಡುವಂತೆಯೇ, ನನಗೆ ಯಾವುದೇ ವಿವರಣೆಯನ್ನು ಕೊಡಲಿಲ್ಲ. ಅವನು ನಿಜಕ್ಕೂ ನನ್ನನ್ನು ಮುದುಕನಿಗೆ ಪರಿಚಯಿಸಲಿಲ್ಲ. ಮುದುಕ ಸದಾ ಮೂಗಿನ ಬದಿಗೆ ಬೆರಳಿಂದ ಮುಟ್ಟಿಕೊಳ್ಳುತ್ತಾ ಇದ್ದ. ನಾವು ಮತ್ತೆ ಕಾರಿಗೆ ಮರಳುತ್ತಿದ್ದಾಗ ಮುದುಕ ಒಂದೆರಡು ಬಾರಿ ನನ್ನತ್ತ ಕಣ್ಣು ಮಿಟುಕಿಸಿದ. ಅವನು ಮತ್ತು ನಾನು ಯಾವುದೋ ರಹಸ್ಯವನ್ನು ಹಂಚಿಕೊಂಡಂತೆ ಆ ಭಾವವಿತ್ತು. ಮಂಗಿಯಾರೊಟ್ಟಿ ಅವನ ತೋಳನ್ನು ಹಿಡಿದುಕೊಂಡಿದ್ದ. ಆದರೆ ಆ ಹಿಡಿತದಲ್ಲಿ ಪ್ರೀತಿಯಿರಲಿಲ್ಲ. ತಪ್ಪಿತಸ್ಥನನ್ನು ಬಂಧಿಸುವಾಗ ಪೋಲೀಸರು ಹಿಡಿವ ಹಿಡಿತದಂತೆ ಇದು ತೋರುತ್ತಿತ್ತು. ಅವನನ್ನು ಕಾರಿನ ಹಿಂಭಾಗಕ್ಕೆ ದೂಡಿ, ಒಳಗೆ ಬಾರೆಂದು ನನಗೆ ಮಂಗಿಯಾರೊಟ್ಟಿ ಸೂಚಿಸುವ ಹಾಗೆ ತಲೆಯಾಡಿಸಿದ.

ನಾವು ಎಂದಿನಂತೆ ಟೈರ್ ಗಳನ್ನು ಕಿರುಗುಟ್ಟಿಸಿ ಮುಂದೆ ಸಾಗುತ್ತಿದ್ದೆವು. ಮುದುಕ ಮೊದಲಿಗೆ ಮೌನವಾಗಿದ್ದ. ನಂತರ ನನ್ನೊಂದಿಗೆ ಮಾತನಾಡಿದ: ‘ಮೊರಾ, ಜಿಯೋವಾನೊಟ್ಟೊ. ಸರಿ, ಯಂಗ್ ಮ್ಯಾನ್’- ಅವನು ನನ್ನನ್ನು ಉದ್ದೇಶಿಸಿ ಉತ್ತಮ ಇಟಾಲಿಯನ್ ಭಾಷೆಯಲ್ಲಿ ಹೇಳಿದ. ಉಳಿದ ವಾಕ್ಯಕ್ಕಾಗಿ ನಾನು ಕಾಯುತ್ತಿದ್ದೆ. ಆದರೆ ಅವನಿಂದ ಏನೂ ಮಾಹಿತಿ ಬರಲಿಲ್ಲ. ಆದ್ದರಿಂದ ನಾನು ಅವನನ್ನು ನೋಡಲು ಹಿಂದೆ ತಿರುಗಿದೆ. ಮತ್ತೊಮ್ಮೆ, ಅವನು ನನ್ನತ್ತ ಕಣ್ಣು ಮಿಟುಕಿಸಿ ಮೂಗಿನ ಬದಿಯನ್ನು ತನ್ನ ತೋರುಬೆರಳಿನಿಂದ ತಟ್ಟಿಕೊಂಡ. ‘ಹಾಗಾದರೆ, ಜಿಯೋವಾನೊಟ್ಟೊ, ನಿಮ್ಮ ಅಭಿಪ್ರಾಯವೇನು?’ ಈ ಅಚ್ಚರಿಯ ಪ್ರಶ್ನೆಗೆ ಸೂಕ್ತವಾದ ಉತ್ತರವನ್ನು ನಾನು ಯೋಚಿಸುವ ಮೊದಲೇ, ಮಂಗಿಯಾರೊಟ್ಟಿ ಸಣ್ಣದಾಗಿ ನುಡಿದ. ‘ಸ್ಟಾ ಜಿಟ್ಟೋ, ಬಫೋನ್! ಎಪ್ಪತ್ತೈದು ವರ್ಷದ ಮುದಿ ಮೂರ್ಖ, ಬಾಯಿ ಮುಚ್ಚು!’ ಮುದುಕ ಮಾಂಗಿಯಾರೊಟ್ಟಿಯ ತಲೆಯ ಹಿಂದೆ ನಾಲಿಗೆಯನ್ನು ಹೊರಹಾಕಿ ಅಣಕಿಸಿದಂತೆ ಮಾಡಿದ. ನಂತರ ಅವನು ತನ್ನ ಬ್ರೀಫ್ಕೇಸ್ ಅನ್ನು ತಟ್ಟಿದ. ಹಾಗೇ ಕಿರುನಗೆ ಬೀರುವುದನ್ನೂ, ಕಣ್ಣು ಮಿಟುಕಿಸುವುದನ್ನೂ ಮುಂದುವರೆಸಿದ. ಅವನ ಮುಖದ ಮೇಲಿನ ಅಭಿವ್ಯಕ್ತಿ ಅವನ ಸೂಟ್ ಕೇಸಿನಲ್ಲಿ ರಾಣಿಯ ಆಭರಣಗಳಿವೆ ಎಂದು ಸೂಚಿಸುವಂತಿತ್ತು.

ಒಂದು ಕ್ಷಣ, ಒಂದು ಆಲೋಚನೆ ನನ್ನ ಮನಸ್ಸನ್ನು ಆವರಿಸಿತು: ಅವನು ನಿಜಕ್ಕೂ ಅದೇ ರೀತಿಯ ಅಪರಾಧಿಯಾಗಿರಬಹುದೇ? ಅವನೊಬ್ಬ ಕಳ್ಳನಾಗಿರಬಹುದೇ. ಅವನ ಸಣ್ಣ ನಿಲುವಿನಿಂದ, ಅವನು ಸುಲಭವಾಗಿ ಕಿಟಕಿಗಳ ಮೂಲಕ ಮನೆಗಳ ಒಳಗೆ ನುಗ್ಗಲು, ಹೊರಗೆ ಬರಲು ಸಾಧ್ಯವಾದೀತು. ಅವನು ತನ್ನ ವಯಸ್ಸಿನ ಹೊರತಾಗಿಯೂ ದೇಹರಚನೆಯಲ್ಲಿ ತುಂಬಾ ಚುರುಕಾಗಿ ಕಾಣುತ್ತಿದ್ದ. ಬಹುಶಃ ಅವನ ಬ್ರೀಫ್ ಕೇಸ್ ಕದ್ದ ಸರಕುಗಳಿಂದ ತುಂಬಿರಬಹುದು ಎಂದು ಭಾವಿಸಿದೆ.

ನಾವು ಮತ್ತೆ ರೂ ಬ್ಲಾಂಚೆಯಲ್ಲಿರುವ ಮಂಗಿಯಾರೊಟ್ಟಿಯ ಫ್ಲ್ಯಾಟ್ ಗೆ ಮುಸ್ಸಂಜೆಯ ವೇಳೆಗೆ ಬಂದೆವು. ಅವನು ನನ್ನನ್ನು ಮತ್ತು ಮುದುಕನನ್ನು ಕೆಳಗಿಳಿಸಿ ಕಾರನ್ನು ಪಾರ್ಕ್ ಮಾಡಲು ಹೋದ.

ಮುದುಕ ಸಾಕಷ್ಟು ಆಕ್ರೋಶಗೊಂಡಂತೆ ಕಂಡ. ಉತ್ಸಾಹ ಮತ್ತು ಆತಂಕಗಳೆರಡೂ ಮಿಶ್ರವಾದ ಮುಖಭಾವ ಅಲ್ಲಿತ್ತು. `ನೀನು ಯಾರು?’ ಅವನು ಇದ್ದಕ್ಕಿದ್ದಂತೆ ನನ್ನನ್ನು ಕೇಳಿದ. ಅದು ಸರಿಯಾದ ಪ್ರಶ್ನೆಯಾಗಿತ್ತು. ಅದೇ ಪ್ರಶ್ನೆ ನಾನು ಅವನನ್ನು ಕೇಳಲು ಒದ್ದಾಡಿ ಸಾಯುತ್ತಿದ್ದೆ. ‘ಸಿನೊಯೋರ್ ಮಂಗಿಯಾರೊಟ್ಟಿಗೆ ಕೆಲಸ.’ ಅವನು ಜೋರಾಗಿ ನಕ್ಕ. ‘ಸಿನೊಯೋರ್ ಮಂಗಿಯರೋಟ್ಟಿ ಸಿನೊಯೋರ್ ಮಂಗಿಯರೋಟ್ಟಿ!’ ಅವನು ಕಿರುಚಿದ. ‘ಅದು -! ಅವನು ಸಿನೊಯೋರ್ ಅಲ್ಲ. ಅವನು ಸಿನೊಯೋರ್ ಅಲ್ಲ-!’ ಅವನು ಬಳಸಿದ ಪದಗಳು ನನಗೆ ತಿಳಿದಿರಲಿಲ್ಲ, ಆದರೆ ಅವುಗಳ ಅರ್ಥವು ಸ್ಪಷ್ಟವಾಗಿತ್ತು: ನನ್ನ ಉದ್ಯೋಗದಾತನ ಬಗ್ಗೆ ಅವನಿಗೆ ಬಹಳ ಕೀಳಾದ ಅಭಿಪ್ರಾಯವಿತ್ತು. ‘ಆದರೆ, ನೀನು ಚಿಂತಿಸಬೇಡ, ಜಿಯೋವಾನೊಟ್ಟೊ. ಬೇಗನೇ ಸಿದ್ಧನಾಗು. ತದನಂತರ ‘ಸಿನೊಯೋರ್ ಮಂಗಿಯಾರೋಟ್ಟಿಗೆ ಒಂದು ಅಥವಾ ಎರಡು ವಿಷಯ ತಿಳಿಸು. ಆದರೆ ಎಂದೆಂದಿಗೂ ಅವನಿಂದ ದೂರಹೋಗು.’ ಅವನು ಮತ್ತೆ ತನ್ನ ಬ್ರೀಫ್ ಕೇಸನ್ನು ತಟ್ಟಿದ.

‘ನೀನು ಏಂಜೆಲ್ ಅಥವಾ ಯಕ್ಷಿಣಿಯರೊಂದಿಗೆ ಜೋಡಿಸುವ ವಸಂತಕಾಲದ ಸಂಭ್ರಮದಂತೆ.’ ಅವನು ಆ ಕ್ಷಣದಲ್ಲಿ ವಿಶ್ವವೆಲ್ಲವನ್ನು ಮೃಗಾಲಯದಲ್ಲಿ ಬಂಧಿಯಾದ ಯಕ್ಷಿಣಿಗಳಂತೆ ಕಾಣುತ್ತಿದ್ದ. ಅವನು ಮಾಯಾವಿತನ ಮತ್ತು ಕಿಡಿಗೇಡಿತನ ತುಂಬಿದ ಒಂದು ಸಣ್ಣ ಪ್ರಾಣಿಯಂತೆ. ಅವನು ಹ್ಯಾಟ್ ತಯಾರಿಸುವ ಹುಚ್ಚನಾಗಿದ್ದಾನೆ ಎಂದು ನನಗೆ ಸಾಕಷ್ಟು ಖಚಿತವಾಗಿದ್ದರೂ ನಾನು ಅವನನ್ನು ಇಷ್ಟಪಟ್ಟಿದ್ದೇನೆ ಎಂದು ನಾನು ನಿರ್ಧರಿಸಿದ್ದೆ.

‘ನಾನು ನಿನಗೆ ನಂತರ ತೋರಿಸುತ್ತೇನೆ,’ ಅವನು ಪಿಸುಗುಟ್ಟಿದ, `ಅವನು ಇಲ್ಲೆಲ್ಲೂ ಇಲ್ಲದಿದ್ದಾಗ. ನಮ್ಮ ರಹಸ್ಯ, ಜಿಯೋವಾನೊಟ್ಟೊ. ವ್ಯಾಟೋಬೀನ್? ಸರಿಯಲ್ಲವಾ?’ ಅವನು ಕಣ್ಣು ಮಿಟುಕಿಸಿ ಮತ್ತೆ ಮೂಗಿನ ಬದಿಯನ್ನು ತಟ್ಟಿಕೊಂಡ.

‘ತಬ್ಬೆನ್’, ನಾನು ಅವನನ್ನು ತಮಾಷೆ ಮಾಡುತ್ತಾ ಉತ್ತರಿಸಿದೆ.

ಮಂಗಿಯಾರೊಟ್ಟಿ ಸ್ವಲ್ಪ ಸಮಯದ ನಂತರ ಹಿಂತಿರುಗಿದ. ಅವನ ಮುಖವು ಎಂದಿಗಿಂತಲೂ ಕಪ್ಪಾಗಿತ್ತು, ಬಹುಶಃ ಪಾರ್ಕಿಂಗ್ ಸ್ಥಳವನ್ನು ಹುಡುಕುವಲ್ಲಿ ಅವನಿಗೆ ಕಷ್ಟವಾಗಿತ್ತು ಅನಿಸಿತು.

ನಾವೆಲ್ಲರೂ ಫ್ಲ್ಯಾಟ್ ಗೆ ಹೋದೆವು, ಮಂಗಿಯಾರೊಟ್ಟಿ ಮುದುಕನನ್ನ ತನ್ನ ಮುಂದೆ ಮೆಟ್ಟಿಲುಗಳ ಮೇಲೆ ತಳ್ಳಿಕೊಂಡು ನಡೆದ. ಮುದುಕ ತನ್ನ ಕೋಟ್ ಮತ್ತು ಟೋಪಿ ತೆಗೆದು ಮ್ಯಾಂಗಿಯಾರೊಟ್ಟಿ ತೆರೆದ ಕೆಂಪು ವೈನ್ ಬಾಟಲಿ ಮತ್ತು ಮೂರು ಗ್ಲಾಸ್ ಇಟ್ಟಿದ್ದ ಟೇಬಲ್ ಬಳಿ ಕುಳಿತುಕೊಳ್ಳಲು ಬಂದ. ಮುದುಕ ಬ್ರೀಫ್ ಕೇಸ್ ಕೊಡಲು ನಿರಾಕರಿಸಿದ. ಅದನ್ನು ಎಚ್ಚರಿಕೆಯಿಂದ ತನ್ನ ತೊಡೆಯ ಮೇಲೆ ಇಟ್ಟುಕೊಂಡ. ಅವನು ಮತ್ತು ಮಂಗಿಯಾರೊಟ್ಟಿ ತಮ್ಮ ಉಪಭಾಷೆಯಲ್ಲಿ ಸ್ವಲ್ಪ ಹೊತ್ತು ಮಾತಾಡಿದರು. ಆಗ ಅವರು ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದಂತೆ ಅನಿಸಿತು.

ಅವರು ಮಾತನಾಡುತ್ತಿರುವಾಗ ಮಂಗಿಯಾರೊಟ್ಟಿಯ ಧ್ವನಿಯು ಮೃದುವಾಯಿತು, ಎದುರು ಕುಳಿತ ಸುಕ್ಕುಗಟ್ಟಿದ ಪುಟ್ಟ ಮನುಷ್ಯನನ್ನು ಅವನು ನೋಡಿದ ರೀತಿಯಿಂದ ನಾನು ಹೇಳಬಲ್ಲೆ, ಆಳದಲ್ಲಿ ನಿಜವಾಗಿಯೂ ಅವನಿಗೆ ಅವನ ಬಗ್ಗೆ ಮೆಚ್ಚುಗೆಯಿತ್ತು. ಮಂಗಿಯಾರೊಟ್ಟಿಯ ಸಮಸ್ಯೆ ಎಂದರೆ ಅದನ್ನು ತೋರಿಸಲು ಅವನಿಗೆ ಅವನ ಮನಸ್ಸು ಅನುಮತಿ ಕೊಟ್ಟಿರಲಿಲ್ಲ. ನನ್ನ ಸಿದ್ಧಾಂತವೆಂದರೆ ಆ ಮುದುಕ ಮಂಗಿಯಾರೊಟ್ಟಿಗೆ ಒಂದು ರೀತಿಯ ಸಂಬಂಧಿ- ಬಹುಶಃ ಚಿಕ್ಕಪ್ಪ. ಇದು ನನಗೆ ಆಘಾತದ ಸಂಗತಿಯಾಗಿತ್ತು. ಮಂಗಿಯಾರೊಟ್ಟಿ ಅಡುಗೆಮನೆಯಲ್ಲಿ ನಮ್ಮ ಊಟಕ್ಕೆ ಸ್ವಲ್ಪ ಪಾಸ್ತಾ ಸಿದ್ಧಪಡಿಸುತ್ತಾ ಇದ್ದಾಗ ಮುದುಕ ನನ್ನೊಂದಿಗೆ ಹೇಳಿದ: ‘ನಿನಗೆ ಗೊತ್ತಾ, ಜಿಯೋವಾನೊಟ್ಟೊ, ನನ್ನ ಮಗ ಅಡುಗೆ ಮಾಡುವುದನ್ನ ನನ್ನಿಂದ ಸಹಿಸಲು ಸಾಧ್ಯವಿಲ್ಲ! ಅವನಿಗೆ ಮೊಟ್ಟೆ ಬೇಯಿಸಲೂ ಬರುವುದಿಲ್ಲ, ಈಡಿಯಟ್. ಪಾಸ್ತಾ ಬೇಯಿಸಲು ಅವನಿಂದ ಹೇಗೆ ಸಾಧ್ಯ?

‘ನಿಮ್ಮ ಮಗ? ಸಿಯೊನರ್ ಮಂಗಿಯಾರೊಟ್ಟಿ ನಿಮ್ಮ ಮಗನಾ?’

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಅವನು ಮತ್ತು ನಾನು ಯಾವುದೋ ರಹಸ್ಯವನ್ನು ಹಂಚಿಕೊಂಡಂತೆ ಆ ಭಾವವಿತ್ತು. ಮಂಗಿಯಾರೊಟ್ಟಿ ಅವನ ತೋಳನ್ನು ಹಿಡಿದುಕೊಂಡಿದ್ದ. ಆದರೆ ಆ ಹಿಡಿತದಲ್ಲಿ ಪ್ರೀತಿಯಿರಲಿಲ್ಲ. ತಪ್ಪಿತಸ್ಥನನ್ನು ಬಂಧಿಸುವಾಗ ಪೋಲೀಸರು ಹಿಡಿವ ಹಿಡಿತದಂತೆ ಇದು ತೋರುತ್ತಿತ್ತು.

‘ಅದು ತನ್ನ ನಿಯಂತ್ರಣದಲ್ಲಿದ್ದ ವಿಷಯ, ಪ್ರಕೃತಿಯ ದುರದೃಷ್ಟಕರ ಆಕಸ್ಮಿಕ’ ಎಂದು ಹೇಳುವ ಹಾಗೆ ಮುದುಕ ತನ್ನ ಭುಜಗಳನ್ನು ಕುಣಿಸಿದ.
`ಈಗ, ನೀವು ನಿಜಕ್ಕೂ ಒಳ್ಳೆಯ ಪಾಸ್ತಾ ತಿನ್ನಲು ಬಯಸಿದರೆ, ಸ್ವಲ್ಪ ಸಮಯ ನನ್ನ ಅಡುಗೆ ಮಾಡಲು ಬಿಡಬೇಕು. ನೀವು ಎಂದಿಗೂ ಮರೆಯಲಾಗದ ಘಂ ಎನ್ನುವ ಅಡುಗೆ ನಾನು ನಿಮಗಾಗಿ ಮಾಡುತ್ತೇನೆ. ನನ್ನ ಆ ಮೂರ್ಖ ಮಗನಿಗೆ ಗಿಡಮೂಲಿಕೆಗಳು ಮತ್ತು ಸುವಾಸನೆಗಳ ಬಗ್ಗೆ ಏನು ಗೊತ್ತು? ಅವನಿಗೆ ತಿಳಿದಿರುವುದು ಬೆಳ್ಳುಳ್ಳಿ ಮತ್ತು ಟೊಮೆಟೊ ಪೇಸ್ಟ್ ಮಾತ್ರ’ ಎಂದ. ಆದರೆ ನಾನು- ಈ ಸಮಯ ಅವನು ಮತ್ತೆ ತನ್ನ ಮೂಗಿನ ಬದಿಯನ್ನು ತಟ್ಟಿಕೊಂಡ. ಅವನ ತೊಡೆಯ ಮೇಲಿದ್ದ ಬ್ರೀಫ್ ಕೇಸ್ ಕಡೆಗೆ ನೋಡಿ ತಲೆಯಾಡಿಸಿದ. ‘ಶ್! ಒಂದು ಮಾತೂ ಆಡಬೇಡ’ ಅವನು ಪಿಸುಗುಟ್ಟಿದ.

ನಾನು ಅವನನ್ನು ಖಾಲಿಯಾಗಿ ನೋಡುತ್ತಿದ್ದೆ. ನಂತರ ನಗುತ್ತ ಮಾತಿನ ಕರಾರಿಗೆ ಒಪ್ಪಿಕೊಳ್ಳಲು ನಿರ್ಧರಿಸಿದೆ. ನನ್ನ ಬಾಲ್ಯದ ಮಸಕಾದ ಸ್ಮರಣೆ ಯಕ್ಷಿಣಿಯನ್ನು ಅಸಮಾಧಾನಗೊಳಿಸುವುದು ಬುದ್ಧಿವಂತಿಕೆಯಲ್ಲ ಎಂದು ನನಗೆ ಎಚ್ಚರಿಕೆ ನೀಡಿತು. ಆಗ ಮಂಗಿಯಾರೊಟ್ಟಿ ಬಂದು ತಾನು ತಯಾರಿಸಿದ ಆಹಾರವನ್ನು ಮೇಜಿನ ಮೇಲೆ ಇಳಿಸಿದ. ಅದು ಕೆಟ್ಟದ್ದಾಗಿರಲಿಲ್ಲ, ಆದರೆ ತುಂಬಾ ರುಚಿಯಾಗಿ ಏನೂ ಇರಲಿಲ್ಲ. ಮುದುಕ ಹೇಳಿದ್ದು ಸರಿ: ಇದಕ್ಕೆ ಇನ್ನಷ್ಟು ಪರಿಮಳ, ರುಚಿ ಹೊಂದಿಸಬಹುದಿತ್ತು, ಸರಿಯಾದ ಪ್ರಮಾಣದಲ್ಲಿ ಗಿಡಮೂಲಿಕೆಗಳ ಸಂಯೋಜನೆಯನ್ನು ಮಾಡುವುದರಿಂದ ಬರುವ ಪರಿಮಳ ಮಾತ್ರ ಅದ್ಭುತ.

ನಾವು ಬಾಟಲಿಯನ್ನು ಮುಗಿಸಿ ಎರಡನೆಯದನ್ನು ಪ್ರಾರಂಭಿಸಿದೆವು. ವೈನ್ ನಾಲಿಗೆಯನ್ನು ಸಡಿಲಗೊಳಿಸುತ್ತದೆ ಎಂದು ಹೇಳುತ್ತಾರೆ. ಆದರೆ ಸಂಭಾಷಣೆ ಏನೇನೂ ಸುಲಭವಾಗಲಿಲ್ಲ. ಮಂಗಿಯಾರೊಟ್ಟಿ ಇನ್ನಷ್ಟು ವೈನ್ ತರಲು ಅಂಗಡಿಗೆ ಹೋಗುವುದಾಗಿ ಹೇಳಿದಾಗ ನನಗೆ ಬಹಳ ನಿರಾಳ ಮತ್ತೆ ಸಮಾಧಾನವಾಯಿತು.

ಅವನು ಹೊರಡುವಾಗ, ನನ್ನತ್ತ ತಿರುಗಿ ಇಂಗ್ಲಿಷ್ ನನಲ್ಲಿ ತನ್ನ ತಂದೆಗೆ ಅರ್ಥವಾಗದಂತೆ ಹೇಳಿದ: ‘ಆ ಮುದಿಮೂರ್ಖನ ಮಾತಿಗೆ ಗಮನ ಕೊಡಬೇಡ. ಅವನ ತಲೆ ತುಂಬ ಅಸಂಬದ್ಧತೆ ತುಂಬಿದೆ. ನಿಜಕ್ಕೂ ನಾನು ನೀನಾಗಿದ್ದರೆ, ನಾನು ಅವನೊಂದಿಗೆ ಮಾತನಾಡಲು ಸಹ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.’
ನನಗೆ ಸ್ವಂತ ತಂದೆಯ ಬಗ್ಗೆ ಹಾಗೆ ಹೇಳುವುದು ಕ್ರೂರ ವಿಷಯ ಎನ್ನಿಸಿತು. ಅವನು ಕೊಠಡಿಯನ್ನು ಬಿಟ್ಟ ಕೂಡಲೇ, ಮುದುಕ ಮತ್ತೆ ನನ್ನ ಕಡೆಗೆ ತಿರುಗಿ ಕೇಳಿದ, `ಜಿಯೋವಾನೊಟ್ಟೊ, ನಿನ್ನ ಅಭಿಪ್ರಾಯವೇನು?’

ಅದೇ ಉತ್ತರಿಸಲಾಗದ ಪ್ರಶ್ನೆ. ಆದರೆ ಈ ಬಾರಿ ನಾನು ಅದಕ್ಕೆ ಸಿದ್ಧನಾಗಿದ್ದೆ. ‘ತೀರಾ ಕೆಟ್ಟದ್ದಲ್ಲ’ ಎಂದೆ. ಅದು ಅವನಿಗೆ ಬೇಕಾದ ಉತ್ತರವೇ ಎಂದು ಅನಿಸಿತು. ‘ಕೆಟ್ಟದ್ದಲ್ಲವೇ? ಕೆಟ್ಟದ್ದಲ್ಲವೇ?? ಎಂತಹ ಶೋಚನೀಯ ಅಭಿವ್ಯಕ್ತಿ. ಓಹ್! ಅದು ಅವನು ಹೇಳುವಂತಹ ಅತ್ಯಂತ ಕೆಟ್ಟ ವಿಷಯ,’

ಅವನು ಮಂಗಿಯಾರೊಟ್ಟಿ ಒಂದು ನಿಮಿಷದ ಮೊದಲು ಹೋಗಿದ್ದ ಬಾಗಿಲಿನ ಕಡೆಗೆ ನೋಡಿ ತಲೆಯಾಡಿಸಿ ಹೇಳಿದ. ‘ಇಲ್ಲ, ಜಿಯೋವಾನೊಟ್ಟೊ, ಇದು ಕೇವಲ ಕೆಟ್ಟದ್ದಲ್ಲ ಅನ್ನುವುದಷ್ಟೇ ಅಲ್ಲ; ಇದು ಅದ್ಭುತವಾಗಿದೆ. ಅದ್ಭುತ. ಅದು ಸರಿಯಾದ ಪದ!’

ಅವನು ತನ್ನ ಲೋಟವನ್ನು ಎತ್ತಿಕೊಂಡು ಒಂದೇ ಗುಟುಕಲ್ಲಿ ಖಾಲಿ ಮಾಡಿದ. ನಾನು ಅದನ್ನು ಪುನಃ ತುಂಬಿಸಿದೆ. ಅದೇ ಸಮಯದಲ್ಲಿ ಈ ಪದವನ್ನು ಮತ್ತೆ ಹೇಳಿದೆ: ‘ಅದ್ಭುತ. ಹೌದು ನೀವು ಹೇಳಿದ್ದು ಸರಿ. ಇದು ಅದ್ಭುತವಾಗಿದೆ.’

ಅದು ಅವನನ್ನು ತೃಪ್ತಿಪಡಿಸಿದಂತೆ ಕಂಡಿತು. ಅವನ ಕಣ್ಣುಗಳು ಕಿರಿದಾದವು ಮತ್ತು ಅವನು ಮುಂದಕ್ಕೆ ಬಾಗಲು ನನಗೆ ಸೂಚಿಸಿದ. ಕೋಣೆಯಲ್ಲಿ ನಾವಿಬ್ಬರು ಮಾತ್ರ ಇದ್ದರೂ ಅವನು ತುರ್ತಿನ ಪಿಸುಮಾತನ್ನ ಪ್ರಾರಂಭಿಸಿದ. `ಇದು ಪರಿಪೂರ್ಣ ಅಪರಾಧ, ನೀನು ಯೋಚಿಸುವುದಿಲ್ಲವೇ?’ ಅವನು ಹೇಳಿದ.

‘ಹೌದು,’ ನಾನು ಉತ್ತರಿಸಿದೆ.

`ಹೌದು, ಜಿಯೋವಾನೊಟ್ಟೊ, ನಾನು ಶ್ರೀಮಂತನಾಗುತ್ತೇನೆ! ಶ್ರೀಮಂತ!’

`ಎಷ್ಟು ನಿಖರವಾಗಿ ದೃಢವಾಗಿ ಹೇಳುತ್ತೀರಿ’ ನಾನು ಪ್ರಾರಂಭಿಸಿದೆ. ಆದರೆ ಅವನ ಮಾತಿಗೆ ನಾನು ಅಡ್ಡಿಯಾಗುವಂತಿರಲಿಲ್ಲ.
`ಸ್ವಲ್ಪ ಯೋಚಿಸು! ಪ್ಯಾರಿಸ್ ನ ಅತಿದೊಡ್ಡ ಬ್ಯಾಂಕ್! ನಾನು ಅದನ್ನು ದೋಚುತ್ತೇನೆ!’

‘ಅಂದರೆ… ನೀವು… ಎಫ್ ಅನ್ನು? ಆದರೆ ಯಾವುದೇ ಪ್ರಶ್ನೆಯ ಅಗತ್ಯವಿರಲಿಲ್ಲ. ಈಗ ನಾನು ಹೇಳುವುದನ್ನು ಹೇಳದಂತೆ ಯಾವುದೂ ತಡೆಯಲಾರದು.’ ಅವನ ಕಣ್ಣುಗಳು ಸಂಭ್ರಮದಿಂದ ಹೊಳೆಯುತ್ತಿದ್ದವು.

“ಹೌದು, ಪ್ರಿಯ ಹುಡುಗ, ನಾನು ಸುಮ್ಮನೆ ಅದರೊಳಕ್ಕೆ ಕಾಲಿಡುತ್ತೇನೆ, ನನ್ನ ಬ್ರೀಫ್ ಕೇಸ್ ಅನ್ನು ಹಣದಿಂದ ತುಂಬಿಸಿ ಮತ್ತೆ ಹೊರನಡೆಯುತ್ತೇನೆ” ಎಂದು ಅವನು ಹೇಳಿದ. ಬಳಿಕ ಅವನು ಹಿಂದೆ ಸರಿದು ಕುಳಿತ. ಅವನ ಸುಕ್ಕುಗಟ್ಟಿದ ಚಿಕ್ಕ ಮುಖ ಆತ್ಮವಿಶ್ವಾಸವನ್ನು ತುಂಬಿಕೊಂಡಿತ್ತು. ಅವನು ಸಂಪೂರ್ಣವಾಗಿ ಅವನ ಬುದ್ಧಿಯಿಂದ ಆಚೆ ಹೋಗಿದ್ದ ಎಂದು ನನಗೆ ಈಗ ಖಚಿತವಾಗಿತ್ತು.

`ಆದರೆ, ಯಾರಾದರೂ ನಿಮ್ಮನ್ನು ತಡೆಯಲು ಪ್ರಯತ್ನಿಸುವುದಿಲ್ಲವೇ?’ ನಾನು ಸಾಧ್ಯವಾದಷ್ಟು ನಿಧಾನವಾಗಿ ಕೇಳಿದೆ.

‘ಆಹಾ, ಅದರ ಸೌಂದರ್ಯ ಅಂದರೆ ಅದೇ, ನನ್ನ ದಡ್ಡ ಯುವ ಸ್ನೇಹಿತ. ಅದು ಅದರ ಸೌಂದರ್ಯ: ನಾನು ಅಗೋಚರವಾಗಿರುತ್ತೇನೆ!’ ಕೊನೆಯ ನಾಲ್ಕು ಪದಗಳು ಬ್ಯಾನರ್ ಒಂದರ ಶೀರ್ಷಿಕೆಯಂತೆ ಹೊರಬಂದವು. ಮಾತು ಮುಂದುವರಿಸುವ ಮೊದಲು ಅವನು ಬಾಗಿಲಿನ ಕಡೆಗೆ ಆತಂಕದಿಂದ ನೋಡುತ್ತಿದ್ದ. ‘ನೋಡು!’ ಅವನು ತನ್ನ ಬ್ರೀಫ್ ಕೇಸ್ ತೆರೆದ. ನನಗೆ ಇಣುಕಿ ನೋಡಲು ಅವಕಾಶ ಮಾಡಿಕೊಟ್ಟ. ಸತ್ತ ಸಸ್ಯಗಳು, ಎಲೆ ಮತ್ತು ಹುಲ್ಲಿನ ಗರಿಗಳಂತೆ ಕಾಣಿಸುತ್ತಿದ್ದ ವಸ್ತುಗಳಿಂದ ಆ ಬ್ರೀಫ್ ಕೇಸ್ ತುಂಬಿತ್ತು. ‘ಅವೆಲ್ಲ ಗಿಡಮೂಲಿಕೆಗಳು, ಜಿಯೋವನೊಟ್ಟೊ, ಗಿಡಮೂಲಿಕೆಗಳು. ಅದೇ ಅದರ ರಹಸ್ಯ. ನಾನು ಅದೃಶ್ಯವಾಗುವಂತೆ ಒಂದು ಪಾಕವನ್ನು ಪರಿಪೂರ್ಣವಾಗಿ ಸಿದ್ಧಗೊಳಿಸಿದ್ದೇನೆ. ಅದರ ಬಗ್ಗೆ ನಿನ್ನ ಅಭಿಪ್ರಾಯವೇನು?’

`ತುಂಬಾ ಒಳ್ಳೆಯದು, ಅದ್ಭುತ!’ ನಾನು ಪ್ರೋತ್ಸಾಹದ ಮಾತಿಂದ ಉತ್ತರಿಸಿದೆ. ಅವನು ಹುಚ್ಚನಾಗಿದ್ದ. ಆದರೆ ಅವನು ನಿರುಪದ್ರವಿಯೆಂದು ನಾನು ಭಾವಿಸಿದೆ. ಅವನ ಕಣ್ಣುಗಳು ಆ ಕ್ಷಣದಲ್ಲಿ ಉತ್ಸಾಹ ಮತ್ತು ಹೆಮ್ಮೆಯಿಂದ ಉರಿಯುತ್ತಿದ್ದವು. ಅವನು ‘ಅದ್ಭುತ’ ಎಂಬ ಪದವನ್ನು ತನಗೆ ತಾನೇ ಮತ್ತೆ ಮತ್ತೆ ಹೇಳಿಕೊಂಡ. ನಂತರ ಅಚ್ಚರಿಯೆಂಬಂತೆ, ತನ್ನ ಕುರ್ಚಿಯಲ್ಲಿ ಹಿಂದೆ ಸರಿದ. ಇದ್ದಕ್ಕಿದ್ದಂತೆ ಅವನ ಕಣ್ಣುಗಳು ತಮ್ಮ ಹೊಳಪನ್ನು ಕಳೆದುಕೊಂಡವು. ಅವನ ಮುಖ ಆಳವಾದ ದುಃಖದ ಅಭಿವ್ಯಕ್ತಿಯನ್ನು ಪಡೆದುಕೊಂಡಿತು. ಅವನ ದೇಹವು ತೂತಾದ ಬಲೂನಿನಂತೆ ಇನ್ನಷ್ಟು ಕುಗ್ಗುವಂತೆ ಕಂಡುಬಂತು.

‘ಯಾಕೆ? ಏನು ವಿಷಯ?’ ತುಂಬಾ ವೈನ್ ಕುಡಿಯುವುದರಿಂದ ಅನಾರೋಗ್ಯಕ್ಕೆ ಅವನು ಒಳಗಾಗಬಹುದೆಂದು ಭಾವಿಸಿ ನಾನು ನಿಧಾನವಾಗಿ ಕೇಳಿದೆ.
ನಾನು ಅವನ ಕಣ್ಣಲ್ಲಿ ಕಣ್ಣೀರು ಕಂಡಿದ್ದೇನೆ ಎಂದು ನಾನು ಆಣೆ ಮಾಡಿ ಹೇಳುತ್ತೇನೆ. ‘ನನ್ನನ್ನು ನಾನೇ ಅಗೋಚರವಾಗಿ ಮಾಡಿಕೊಳ್ಳಬಲ್ಲೆ, ಆದರೆ ನನ್ನ ಬ್ರೀಫ್ ಕೇಸ್ ಅನ್ನು ಅಗೋಚರವಾಗಿ ಮಾಡುವುದು ಹೇಗೆ ಎಂದು ನನಗೆ ತಿಳಿದಿಲ್ಲ!’

ನನ್ನ ಮುಖವನ್ನು ನಿರ್ಭಾವುಕವಾಗಿ ಇಟ್ಟುಕೊಳ್ಳುವುದು ನನಗೆ ತುಂಬಾ ಕಷ್ಟಕರವಾಗಿತ್ತು, ಅಲ್ಲದೆ ಮಂಗಿಯಾರೊಟ್ಟಿ ವೈನ್ ನೊಂದಿಗೆ ಹಿಂದಿರುಗಿ\ದ್ದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು.

‘ನನ್ನ ಬೆನ್ನು ತಿರುಗಿದ ತಕ್ಷಣ ಮುದುಕ ಆ ಕಿತ್ತುಹೋದ ಹಳ್ಳಕ್ಕೆ ಗಿಡಮೂಲಿಕೆಗಳನ್ನು ಸಂಗ್ರಹಿಸಲು ಹೋಗುತ್ತಾನೆ. ಪ್ರತಿ ಬಾರಿಯೂ ಅವನನ್ನು ಮರಳಿ ಕರೆದುಕೊಂಡು ಬರಬೇಕಾದವನು ನಾನು. ಅವನು ತನಗೂ ಮತ್ತು ಎಲ್ಲರಿಗೂ ದೊಡ್ಡ ಉಪದ್ರವ.’

ಮಂಗಿಯಾರೊಟ್ಟಿ ಕಾರ್ಕ್ ಸ್ಕ್ರೂ ತರಲು ಅಡುಗೆಮನೆಗೆ ಹೋದ. ಮುದುಕ ನನ್ನ ಕಡೆಗೆ ನೋಡಿದ, ಅವನ ಕಣ್ಣುಗಳು ಮೌನವಾಗಿ ಅವನ ರಹಸ್ಯ ಇನ್ನೂ ಸುರಕ್ಷಿತವಾಗಿದೆಯೇ ಎಂದು ಕೇಳುತ್ತಲಿದ್ದವು. ನಾನು ಇನ್ನೇನು ಮಾಡಬಹುದು? ಅವನತ್ತ ಕಣ್ಣು ಹಾಯಿಸಿ ನನ್ನ ಮೂಗಿನ ಬದಿಗೆ ತಟ್ಟಿಕೊಂಡೆ. ಆ ಕ್ಷಣದಲ್ಲಿ ಅವನ ಮುಖದಾದ್ಯಂತ ಒಂದು ಯಕ್ಷಿಣಿಯ ನಗುವಿನ ಚಿತ್ರ ಹರಡಿಕೊಂಡಿತು.

ಜ್ಯಾಕ್ ಓಲ್ಸೆನ್ ಪರಿಚಯ:
ಜ್ಯಾಕ್ ಓಲ್ಸೆನ್ ಜೂನ್ 7, 1925, ಇಂಡಿಯಾನಾಪೊಲಿಸ್, ಇಂಡಿಯಾನಾ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಹುಟ್ಟಿದ್ದು. ಅಮೆರಿಕಾದ ಪತ್ರಕರ್ತ ಮತ್ತು ಅಪರಾಧ ವರದಿಗಾಗಿ ಹೆಸರುವಾಸಿಯಾಗಿದ್ದ ಲೇಖಕ. ಓಲ್ಸೆನ್ 1954 ರಲ್ಲಿ ಚಿಕಾಗೊ ಸನ್-ಟೈಮ್ಸ್ ನ ಹಿರಿಯ ಸಂಪಾದಕರಾಗಿದ್ದರು. ಅವರು ಟೈಮ್ ನಿಯತಕಾಲಿಕೆಯ ಮಿಡ್ವೆಸ್ಟ್ ಬ್ಯೂರೋ ಮುಖ್ಯಸ್ಥರಾಗಿದ್ದರು ಮತ್ತು 1961 ರಲ್ಲಿ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ನ ಹಿರಿಯ ಸಂಪಾದಕರಾಗಿದ್ದರು. ಜುಲೈ 16, 2002, ಬೈನ್ಬ್ರಿಡ್ಜ್ ದ್ವೀಪ, ವಾಶಿಂಗ್ಟನ್ ರಾಜ್ಯ, ಯುನೈಟೆಡ್ ಸ್ಟೇಟ್ಸ್ ನಲ್ಲಿ  ಓಲ್ಸನ್ ನಿಧನರಾದರು. ಇವರು Edgar Award for Best Fact Crime ಪ್ರಶಸ್ತಿಗೆ ಭಾಜನರಾಗಿದ್ದರು.