ತನ್ನ ಮತ್ತು ವೇನ್ ಳ ಮಾಯೆಗಳನ್ನೆಲ್ಲ ತೋರಿಸಿ ಬೇಸ್ತು ಬೀಳಿಸುವ ಉತ್ಸಾಹ ಗ್ರೇ ಗೆ. ಬೇಸಿಲ್ ಮತ್ತು ಹ್ಯಾರಿಯನ್ನು ಕರೆದುಕೊಂಡು ಹೋಗಿ ಥಿಯೇಟರಿನಲ್ಲಿ ವೇನ್ ಳ ಪ್ರತಿಭಾ ಸೌಂದರ್ಯವನ್ನು ತೋರಿಸುವ ಪ್ರಯತ್ನ ಮಾಡಿದ ಗ್ರೇ. ಆದರೆ ಅಂದು ರಾತ್ರಿ ದೊಡ್ಡ ಆಘಾತ ಕಾದಿತ್ತು. ರೊಸಾಲಿಂಡಳ ಪಾತ್ರ ಮಾಡಿದ್ದ ವೇನ್, ಜೀವಂತಿಕೆಯನ್ನೇ ಕಳೆದುಕೊಂಡ ಆಟದ ಬೊಂಬೆಯಂತೆ ನಟಿಸಿದಳು.
ಆಸ್ಕರ್ ವೈಲ್ಡ್ ಬರೆದ ‘ದಿ ಪಿಕ್ಚ್ ರ್ ಆಫ್ ಡೋರಿಯನ್ ಗ್ರೇ’ ಕಾದಂಬರಿ ಕುರಿತು ನವೀನ ಗಣಪತಿ ಬರಹ

 

ಆಸ್ಕರ್ ವೈಲ್ಡ್ ಎಂದರೆ ಹುಚ್ಚು ಪಾತ್ರಗಳು ಹುಚ್ಚು ಪದ್ಯಗಳು. “ನರಕಕ್ಕೆ ಮುತ್ತಿಡುವ ಬಾಯಿ” ಯಂತಹ ವಿಚಾರಗಳು. ಮೊನಚು ಮಾತು, ಬೆವರಿಳಿಸುವ ತಂತ್ರ. ಹುರಿಗಡಲೆಯ ರುಚಿಯಾದರೂ ಅಚ್ಚು ಕಟ್ಟಿನ ಭಾಷೆ. ಅಂಥಹದ್ದೊಂದು ಓದು ಅವನ ಪ್ರಸಿದ್ಧವಾದ “ದಿ ಪಿಕ್ಚ್ ರ್ ಆಫ್ ಡೋರಿಯನ್ ಗ್ರೇ”.

ಅಷ್ಟಕ್ಕೂ ಇದು ಥ್ರಿಲ್ಲರ್ರೋ, ಟ್ರಾಜಿಡಿಯೋ ಇದ್ಯಾವುದೂ ಅಲ್ಲದ ವೈಲ್ಡ್ ನ ಸ್ವಾನುಭವದ ತರ್ಕ ಶುಷ್ಕತೆಯೋ? ಅಲ್ಲಲ್ಲಿ ತೊಡಕಾದರೂ, ತತ್ವ ಶಾಸ್ತ್ರದ (ಹತ್ತೊಂಬತ್ತು ಇಪ್ಪತ್ತನೇ ಶತಮಾನದ) ಕಂತೆ ಕಂತೆಗಳನ್ನೇ ಅಲ್ಲಲ್ಲಿ ಎತ್ತಿಟ್ಟಿದ್ದಾನಲ್ಲ ಎನಿಸಿದರೂ ಬಿಡದೇ ಓದಿಸಿಕೊಂಡು ಹೋಗುವ ಈ ಕಥಾಲಾಪ ವಿಚಿತ್ರವಾಗಿದೆ. ಇಡೀ ಕಾದಂಬರಿಯೇ ಡೋರಿಯನ್ ಗ್ರೇ ಯ ಪ್ರಲಾಪ ವಿಲಾಪ. ನಮಗೇನೋ ಪ್ರಕಾಶ – ಬೆಳಕು ಕಂಡೀತು, ಪ್ರಭಾವವೇನೋ ಆದೀತು ಎನ್ನುವ ಭ್ರಮೆಯಲ್ಲಿ ಸುಮಾರು ಇನ್ನೂರು ಪೇಜುಗಳ ಈ ಕಾದಂಬರಿಯನ್ನು ಓದಿದರೆ, ಕಾಣುವುದು ಪ್ರಪಾತವೇ.

(ಆಸ್ಕರ್ ವೈಲ್ಡ್)

ಗ್ರೇ ಯ ಮನೋಹರವಾದ ಮುಖದಿಂದ ಸ್ಫೂರ್ತಿಗೊಂಡು ಅವನ ಭಾವಚಿತ್ರವನ್ನು ಬಿಡಿಸಿದ ಬೇಸಿಲ್ ಹಾಲ್ ವರ್ಡ್. ಲಂಡನ್ನಿನ ದೊಡ್ಡ ಚಿತ್ರಕಲಾವಿದ. ಪ್ರದರ್ಶನ ಮಾರಾಟಗಳ ಇಚ್ಚೆಯೇ ಇಲ್ಲದೇ ಅಭಿಮಾನದಿಂದ ಬಿಡಿಸಿದ ಚಿತ್ರವನ್ನು ಗ್ರೇಗೇ ಗಿಫ್ಟ್ ಮಾಡಿದ. ಬೇಸಿಲ್ಲನ ಸ್ಟುಡಿಯೋದಲ್ಲಿ ಇಷ್ಟೆಲ್ಲ ನಡೆಯುವಾಗಲೇ ಗ್ರೇ ಗೆ ಪರಿಚಯವಾಗಿ ಪರಮ ಮಿತ್ರನಾದವ ಹೆನ್ರಿ ವೋಟನ್ / ಹ್ಯಾರಿ. ಬೇಸಿಲ್ ನ ಬಹುಕಾಲದ ಗೆಳೆಯ, ಕಲಾಭಿಮಾನಿ, ವಿಮರ್ಶಕ, ಇತ್ಯಾದಿ. ಇಡೀ ಕಥೆಗೆ ವಿಷವಾಗಿ, ವಿಷಯ ವ್ಯಾಪಾರಿಯಾಗಿ, ಕಥೆಯ ತಿರುವು ಮುರುವುಗಳಲ್ಲೆಲ್ಲ ಅನಿವಾರ್ಯ ವಾಗುವವನೇ ಹೆನ್ರಿ/ಹ್ಯಾರಿ.

“real beauty ends where an intellectual expression begins. Look at the successful men in any profession. how perfectly hideous they are” ಎನ್ನುವ ಹೆನ್ರಿ ಬೇಸಿಲ್ ಚಿತ್ರಿಸಿದ ಗ್ರೇ ಯ ಚಿತ್ರವನ್ನು ಗ್ರೋವೆನರ್ ನಲ್ಲಿ ಪ್ರದರ್ಶಿಸುವಂತೆ ಒತ್ತಾಯಿಸುತ್ತಾನೆ.

ಗ್ರೇ ಬರಿಯ ಚಂದದ ಆಕಾರವೆಂಬ ಅನುಮಾನ – ಔದಾಸೀನ್ಯವೇ ಇದ್ದರೂ, ಕುತೂಹಲಕ್ಕೆ ಅವನನ್ನು ಪರಿಚಯಿಸಿಕೊಡುವಂತೆ ಬೇಸಿಲ್ ಗೆ ದುಂಬಾಲು ಬಿದ್ದಿದ್ದ ಹೆನ್ರಿ/ಹ್ಯಾರಿ. “i love secrecy” ಎಂದು ಗ್ರೇ ಯನ್ನು ಪರಿಚಯಿಸುವುದಕ್ಕೆ ಹಿಂದೇಟು ಹಾಕಿದ್ದ ಬೇಸಿಲ್. ಅವನಿಗೆ ಗ್ರೇ ಆ ಹೊತ್ತಿನ ಒತ್ತಾಸೆ, ಹೊಸ ಸೃಷ್ಟಿಗೆ ಹೊಸತು ಹೊಸತು ಎನ್ನುವ ಸ್ಪೂರ್ತಿ. ಹಿಂದೆಂದೂ ಯಾವ ಕಲಾಕೃತಿಯಲ್ಲೂ ಸಾಧ್ಯವಾಗದ ಹದವಾದ ಪಾಕ, ಪರಿಪೂರ್ಣತೆ ಗ್ರೇ ಯ ಒಡನಾಟದಿಂದ ಸಾಧ್ಯವಾಯಿತು. ಗ್ರೇ ಯ ಭಾವಚಿತ್ರ ಬೇಸಿಲ್ಲನ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿತ್ತು. ಬೇಸಿಲ್ಲನೇ ಹೇಳುವ ಹಾಗೆ “I sometimes think, Harry, that there are only two eras of any importance in the world’s history. The first is the appearance of a new medium for art, and the second is the appearance of a new personality for art also.’

ಎಲ್ಲ ದೇಶಗಳ ಮೇಲ್ವರ್ಗಗಳೂ ಹಾಗೆಯೋ ಏನೋ, ಹರಟೆಗೆ, ಪಾನಕ್ಕೆ, ಊಟ ಕೂಟಗಳಿಗೆ ಅನಿವಾರ್ಯವೆನ್ನುವಷ್ಟು ಸಮಯವನ್ನು ಎತ್ತಿಡುತ್ತವೆ.

ಲಾರ್ಡ್ ಹೆನ್ರಿ ವೋಟನ್ ಡೋರಿಯನ್ ಗ್ರೇ ಯ ಹತ್ತಿರದ ಗೆಳೆಯನಾಗಿಬಿಟ್ಟ. ಹಿರಿಯ ಗೆಳೆಯ! ಅಂದ ಚಂದವೇ ಶ್ರೇಷ್ಟ, ಯೌವನವೇ ಜೀವನವೆಂದು ಗ್ರೇ ಯ ಮನಸ್ಸನ್ನೆಲ್ಲ ಆವರಿಸಿಬಿಟ್ಟ. ಆದರೆ ಸುಂದರವಾದ ಆ ಭಾವಚಿತ್ರಕ್ಕೂ ನಿಜವಾದ ಚಂದದ ಮುಖಭಾವಕ್ಕೂ ಇರುವ ಅಂತರ – ವ್ಯತ್ಯಾಸಗಳನ್ನು ಸಹಜವೆಂಬಂತೆ ಹಲುಬಿದ್ದೇ ಹ್ಯಾರಿ ಮಾಡಿದ ತಪ್ಪಾಯಿತು. ಗ್ರೇ ಬದಲಾಗಿ ಹೋದ. ಅಲ್ಲಿಯವರೆಗೆ ಮುಗ್ಧ ಎಳೆಯ ಹುಡುಗನಂತಿದ್ದ ಗ್ರೇ ಯ ಮನಸ್ಸಿನೊಳಗೆ ಸಂದೇಹದ ದೊಡ್ಡ ಗಿಡವೇ ಬೆಳೆದು ನಿಲ್ಲುವ ಹಾಗಾಯಿತು. “ಚಂದದ ಚಿತ್ರಕ್ಕೆ ಮುಪ್ಪೆಲ್ಲಿದೆ? ಮೈ ಮುಖಗಳ ಅಂದವೋ ಕಾಲನ ಕಾಲಲ್ಲಿ ಮುಕ್ಕಾಗಿ ಮುದುರಿ ಹೋಗುವಂಥಹವು ತಾನೇ? ಇದು ತಿರುವು ಮುರುವಾಗಿ ಚಿತ್ರಕ್ಕೇ ಮುಪ್ಪು ಬರುವಂತಿದ್ದರೆ?”

ಸಿಬೈಲ್ ವೇನ್ ಥಿಯೇಟರಿನ ರಮ್ಯ ಅಭಿನೇತ್ರಿ. ಅವಳ ಅಭಿನಯ ಗ್ರೇಯ ಜೀವನದ ದೃಷ್ಟಿ ಯಲ್ಲಿ ಮಹತ್ವದ ಪರಿವರ್ತನೆಯೇ ಆದರೂ, ಹ್ಯಾರಿಯ ದೃಷ್ಟಿಯಲ್ಲಿ ಸಹಜತೆ/ಪ್ರಕೃತಿಯೇ ಹೆಚ್ಚು ಸಹ್ಯವಾಗಬಹುದಾಗಿತ್ತು. ಮೆಚ್ಚಿ ಮೃದುವಾಗಿ ಪ್ರತಿರಾತ್ರಿ ಥಿಯೇಟರಿನಲ್ಲಿ ಅವಳನ್ನು ನೋಡುವುದೇ ಗ್ರೇ ಗೆ ಹುಚ್ಚು ಗೀಳಾಯಿತು. ಪ್ರೀತಿ ಪಕ್ಕಾ ಆಗಿ ಮದುವೆಯೂ ನಿಶ್ಚಯವಾಯಿತು. ಪ್ರಕೃತಿಯ ಪ್ರೀತಿ ಪ್ರಣಯಗಳೆದುರು ಹ್ಯಾರಿಯ ಮಾತು ವಿಚಾರಗಳು ಒರಟೆನಿಸಿದವು.

ಅವನಿಗೆ ಗ್ರೇ ಆ ಹೊತ್ತಿನ ಒತ್ತಾಸೆ, ಹೊಸ ಸೃಷ್ಟಿಗೆ ಹೊಸತು ಹೊಸತು ಎನ್ನುವ ಸ್ಪೂರ್ತಿ. ಹಿಂದೆಂದೂ ಯಾವ ಕಲಾಕೃತಿಯಲ್ಲೂ ಸಾಧ್ಯವಾಗದ ಹದವಾದ ಪಾಕ, ಪರಿಪೂರ್ಣತೆ ಗ್ರೇ ಯ ಒಡನಾಟದಿಂದ ಸಾಧ್ಯವಾಯಿತು.

ತನ್ನ ಮತ್ತು ವೇನ್ ಳ ಮಾಯೆಗಳನ್ನೆಲ್ಲ ತೋರಿಸಿ ಬೇಸ್ತು ಬೀಳಿಸುವ ಉತ್ಸಾಹ ಗ್ರೇ ಗೆ. ಬೇಸಿಲ್ ಮತ್ತು ಹ್ಯಾರಿಯನ್ನು ಕರೆದುಕೊಂಡು ಹೋಗಿ ಥಿಯೇಟರಿನಲ್ಲಿ ವೇನ್ ಳ ಪ್ರತಿಭಾ ಸೌಂದರ್ಯವನ್ನು ತೋರಿಸುವ ಪ್ರಯತ್ನ ಮಾಡಿದ ಗ್ರೇ. ಆದರೆ ಅಂದು ರಾತ್ರಿ ದೊಡ್ಡ ಆಘಾತ ಕಾದಿತ್ತು. ರೊಸಾಲಿಂಡಳ ಪಾತ್ರ ಮಾಡಿದ್ದ ವೇನ್, ಜೀವಂತಿಕೆಯನ್ನೇ ಕಳೆದುಕೊಂಡ ಆಟದ ಬೊಂಬೆಯಂತೆ ನಟಿಸಿದಳು. ಕೊನೆಯವರೆಗೂ ಕಾದಿದ್ದ ಗ್ರೇ ವೇನಳಲ್ಲಿ ಉಂಟಾಗಿದ್ದ ಭಾವಾನುಭಾವಗಳ ಬದಲಾವಣೆಗಳಿಂದ ಬೇಸತ್ತು ಸಿಟ್ಟಾದ. ಸಹಜ ಪ್ರೀತಿಯ ಬಿಗಿಯನುಭವಗಳು ವೇನಳನ್ನು ನಾಟಕೀಯ ನಟನೆಗಳಿಂದ ಭ್ರಮನಿರಸನ ಗೊಳ್ಳುವಂತೆ ಮಾಡಿತ್ತು. ಪಾತ್ರ – ನಟನೆ – ನಾಟಕ – ಕಲೆಗಳೆಲ್ಲ ಜೊಳ್ಳಾಗಿ ಕಂಡವು. ರಂಗಸ್ಥಳವೇ ಅವಳ ಪಾಲಿಗೆ ಸತ್ತು ಹೋಗಿ ಆ ಜೀವನ ಇನ್ನೆಂದಿಗೂ ಅಸಾಧ್ಯವೆನಿಸಿತು. ಕಾವ್ಯ ನಾಟಕಗಳ ರೋಮಿಯೋ ಅಸಹ್ಯನೆನಿಸಿದ. “i am sick of shadows, take me away” ಅಂದಳು ಗ್ರೇ ಗೆ.

“you have spoiled the romance of my life” ಎಂದು ಅಬ್ಬರಿಸಿ, ಕ್ಷಮೆ ಬೇಡಿ ಗೋಗರೆದರೂ ಹಿಂತಿರುಗಿ ನೋಡದೇ ನಿಷ್ಕರುಣೆಯಿಂದ ವೇನ್ ಳನ್ನು ತಿರಸ್ಕರಿಸಿ ಹೊರಟು ಹೋದ ಗ್ರೇ. ಮಹಾಕವಿಗಳ ಕನಸುಗಳನ್ನೆಲ್ಲ ಕಟ್ಟಿಕೊಡುತ್ತಿದ್ದ ಚಂದದ ಬುದ್ಧಿ ಭಾವಗಳ ಹುಡುಗಿ ಈವತ್ತು ‘a third rate actress with a pretty face’ ಆಗಿದ್ದಳು.

ಇಷ್ಟೆಲ್ಲ ಮುಗಿಸಿಕೊಂಡು ಮನೆಗೆ ಬಂದ ಗ್ರೇ ಅದು ಹೇಗೋ ಬೇಸಿಲ್ ಬರೆದ ತನ್ನದೇ ಚಿತ್ರವನ್ನು ದಿಟ್ಟಿಸುವಂತಾಯಿತು. ಸೂಕ್ಷ್ಮವಾಗಿ ಗಮನಿಸಿದರೆ ಮುಖದ ಗೆರೆಗಳೆಲ್ಲ ಸ್ಪಷ್ಟವಾಗಿ ಗೋಚರಿಸಿದವು. ತುಟಿಯ ಕೆಳಭಾಗದಲ್ಲೆಲ್ಲೋ ವ್ಯತ್ಯಾಸವಾದಂತಾಗಿ ಮತ್ತೊಮ್ಮೆ ದಿಟ್ಟಿಸಿ ನೋಡಿದರೆ ಹೌಹಾರುವಂತಹ ಕ್ರೂರ ಮುಖಭಾವ ಸ್ಪಷ್ಟವಾಗಿ ರಾಚುವಂತಿತ್ತು. ಯಾವತ್ತೂ ಹೀಗೆ ಕಾಣದ ಚಿತ್ರ, ಅಂದ ಚಂದದ ಎಳೆಯ ಹುಡುಗನ ಚಿತ್ರ ಅದು. ಮತ್ತೆ ಮತ್ತೆ ದಿಟ್ಟಿಸಿ ನೋಡಿದ. ಒಮ್ಮೇ ಬೇಸಿಲ್ ನ ಮೇಲೆಯೇ ಅನುಮಾನ ಬಂತು. ಮತ್ತೊಮ್ಮೆ ಇಲ್ಲ ಇದು ಈಗಾದ ಬದಲಾವಣೆಯೆನಿಸಿತು. ಮತ್ತೂ ಒಮ್ಮೆ ನೋಡಿದರೆ ಒಂದಂತೂ ಸ್ಪಷ್ಟವಾಗಿತ್ತು. ಗ್ರೇ ಶುದ್ಧ ಕ್ರೂರಿಯಂತೆ ಚಿತ್ರಿತನಾಗಿದ್ದ. ಅಮಾನವೀಯ, ದಯೆ ದಾಕ್ಷಿಣ್ಯಗಳೇ ಇಲ್ಲದ ಮುಖ ಭಾವ ಬೇಡ ಬೇಡವೆಂದರೂ ಭಾವಚಿತ್ರದಲ್ಲಿ ಪ್ರತಿಫಲನವಾಗಿತ್ತು. ಚಿಂತಾಕ್ರಾಂತನಾದ ಗ್ರೇ. ಇಷ್ಟು ದಿನ ಇಲ್ಲದ್ದು ಅಥವಾ ಇಷ್ಟು ದಿನ ಗಮನಿಸದ್ದು ಇವತ್ತು ಮನಸ್ಸಿಗೆ ಒದೆಯುವಂತೆ ಚುಚ್ಚಿ ಕೆದಕುವಂತೆ ಅಸಹನೀಯವಾಯಿತು.

ಬೆಳಕು ಹರಿಯುವ ಹೊತ್ತಿಗೆ ಮಲಗಿದ ಗ್ರೇ. ತನ್ನ ಪ್ರತಿಕೃತಿಯನ್ನೇ ಬರೆದಿದ್ದಾನೆ ಬೆಸಿಲ್ ಎನಿಸಿತು. ವೇನ್ ಳನ್ನು ತಿರಸ್ಕರಿಸಿ ಬಂದಿದ್ದು ಅವಿವೇಕವೆನಿಸಿತು. ನಾಳೆ ಮತ್ತೆ ಹೋಗಿ ವೇನಳ ಕ್ಷಮೆ ಕೇಳಿ, ಸಂಧಾನ ಮಾಡಿಕೊಂಡು, ಪ್ರೀತಿಯ ಕೂಡು ಜೀವನ ನಡೆಸಬೇಕೆಂದುಕೊಂಡ ಗ್ರೇ. ತನ್ನ ಚಿತ್ರ ತಪ್ಪಿಯೂ ಕಣ್ಣಿಗೆ ಬೀಳದಂತೆ ಪರದೆಯೊಂದರಿಂದ ಅದನ್ನು ಮುಚ್ಚಿಯೂಬಿಟ್ಟ.

ಹ್ಯಾರಿ ಕಳುಹಿಸಿದ ಟೆಲಿಗ್ರಾಮನ್ನೂ ಲೆಕ್ಕಿಸದೇ, ಬೆಳಗಿನ ಪತ್ರಿಕೆಗಳನ್ನೂ ಓದದೇ ಮಧ್ಯಾಹ್ನ ಎದ್ದಾಗಿನಿಂದ ವೇನಳಿಗೆ ಪತ್ರ ಬರೆಯುವುದರಲ್ಲೇ ನಿರತನಾಗಿದ್ದ ಗ್ರೇ. ಪುಟಗಳಷ್ಟಾದವು ಆದರೂ ಮುಗಿಯದು, ನಿವೇದಿಸಿದಷ್ಟೂ ಮುಗಿಯದ ಪ್ರೀತಿ, ತಪ್ಪು-ಒಪ್ಪಿನ ಎಲ್ಲ ಏರಿಳಿತಗಳನ್ನೂ ಬಗೆ ಬಗೆದು ಬರೆದಿದ್ದ. ಹ್ಯಾರಿಯ ನೆನಪೂ ತನ್ನ ರಮ್ಯ ಕಲ್ಪನೆಗಳನ್ನು ಹಾಳು ಮಾಡಿತೆನ್ನಿಸಿತು. ಸಂಜೆಯ ವೇಳೆ ಹ್ಯಾರಿಯೇ ಹುಡುಕಿಕೊಂಡು ಬಂದ. ಇನ್ನೂ ವೇನ್ ಳೊಟ್ಟಿಗೆ ರಾಜಿ-ರಂಜನೆಯ ಕನಸಿನಲ್ಲಿಯೇ ಇದ್ದ ಗ್ರೇಗೆ ವೇನಳ ಆತ್ಮಹತ್ಯೆಯ ಸುದ್ದಿ ಸಿಡಿಲಿನಂತೆಯೇ ಬಡಿಯಿತು. ಮತ್ತೆ ಹುಡುಕಿಕೊಳ್ಳಬೇಕಿದ್ದ ಪ್ರೀತಿ ಇನ್ನು ಬರೀ ಸುಳ್ಳಾಗಿತ್ತು. ಗ್ರೇ ಯ ಜೀವನದ ಮೊದಲ ಪ್ರೇಮಪತ್ರ ಕಳೇಬರಕ್ಕೆ ತಲುಪುವ ಹಾಗಾಯಿತು. ಹ್ಯಾರಿ ತನ್ನ ವಿಚಾರಗಳ ಬಲೆಯಲ್ಲಿ ಮತ್ತೆ ಗ್ರೇಯನ್ನು ಕೆಡವಿದ:

“ಯೌವನವನ್ನನುಭವಿಸುವುದಲ್ಲದೇ ಉಳಿದದ್ದೆಲ್ಲವೂ ಮೂರ್ಖತನ. ವೇನಳೋ ಯಾವತ್ತೂ ನಾಟಕ – ನಟನೆಯವಳಾಗಿದ್ದಳು. ನಿಜ ಜೀವನ ಎದುರಾಗುತ್ತಲೇ ಸಹಿಸಿಕೊಳ್ಳಲಾಗದೇ ಮುದುರಿ ಹೋದಳು. ಅವಳ ಸ್ವಾರ್ಥವೇ ಅವಳನ್ನು ಮುಗಿಸಿಬಿಟ್ಟಿತು.”

ಹ್ಯಾರಿ ಹೋದಮೇಲೆ ಬೇಸಿಲ್ ಬಂದು ಹೋದ. ಅಷ್ಟು ಸಮಾಧಾನ ಪಡಿಸುವುದಕ್ಕೆ. ವೇನಳ ಸಾವಿಗಾಗಿ ಒಂದಷ್ಟು ಪಶ್ಚಾತ್ತಾಪವನ್ನೂ ಪಡದ ಗ್ರೇಯನ್ನು ನೋಡಿ ವ್ಯಥೆಯಾಯಿತು. ಇದೊಂದು ರಮ್ಯ ದುರಂತ ನಾಟಕವೆಂದು ಬೇಸಿಲ್ ನನ್ನು ಬಾಯಿ ಮುಚ್ಚಿಸಿದ ಗ್ರೇ. ಅಷ್ಟಕ್ಕೂ ತನ್ನನ್ನು ಕ್ರೂರವಾಗಿ ಚಿತ್ರಿಸಿದ ಬೇಸಿಲ್ ನನ್ನು ನೋಡಿದರೆ ರಕ್ತವೆಲ್ಲ ಕುದಿಯುತ್ತಿತ್ತು. ಅಂತೂ ಇಂತೂ ಸಾಗಹಾಕಿದ.

ತನ್ನ ಭಾವಚಿತ್ರವನ್ನು ತಾನೂ ಮತ್ತು ಯಾರೂ ನೋಡಬಾರದೆಂದು ಮನೆಯ ಮೇಲಿನ ಧೂಳು ಹಿಡಿದ ಕೋಣೆಯೊಂದಕ್ಕೆ ಸಾಗಿಸಿದ. ಹೊರಗಿನ ನಾಲ್ಕು ಜನ ಫೋಟೊ ಫ್ರೇಮ್ ಹಾಕುವವರು ಬಂದು ಅದನ್ನೆತ್ತಿ ಸಾಗಿಸಬೇಕಾಯಿತು. ತನ್ನನ್ನೇ ಹೋಲುವ ಚಿತ್ರ, ತನ್ನದೇ ಭಾವ-ಸ್ವಭಾವಗಳನ್ನು ಬೇಡ ಬೇಡವೆಂದರೂ ಪ್ರತಿಫಲಿಸುತ್ತಿದ್ದ ಚಿತ್ರ, ಚಿತ್ರ ಕಲಾವಿದನೊಬ್ಬನ ಅದ್ಭುತ ಸೃಷ್ಟಿ ಅನಿರೀಕ್ಷಿತವಾಗಿ ಅತ್ಯಸಹನೀಯವಾಗಿತ್ತು.

ಹುಟ್ಟಿಸಿದ ಕಲಾವಿದ ಒಂದುಕಡೆ, ನಿರ್ಜೀವ ಚಿತ್ರ ಇನ್ನೊಂದು ಕಡೆ, ಸಜೀವವಾಗಿ ಬೇಕು-ಬೇಡದ ಗುಣಗಳನ್ನೆಲ್ಲ ಹೊತ್ತ ಚಂದದ ಚತುರನೊಂದು ಕಡೆ. ವೈಲ್ಡನ ವಿಡಂಬನೆಯೇ ಅಂಥದ್ದು. ಅವನ ಚಿತ್ರವನ್ನು ನಾಲ್ಕಾರು ಜನ ಹೊತ್ತು ಮೇಲೆ ಸಾಗಿಸಬೇಕಾಯಿತು. ಕ್ರೌರ್ಯವೋ, ಹೇಯವೋ, ಪಾಪವೋ ಯಾವುದೋ ಒಟ್ಟೂ ನಮ್ಮದೆನ್ನುವುದನ್ನು ನಾವು ಬಿಟ್ಟೇವೇನು? ಬೇಡವೆನ್ನಿಸಿದರೂ ಬಿಟ್ಟೇವೆಯೇ? ನನ್ನದು ಎನ್ನುವ ಗುಣಗಳ ಮೇಲೆ ಅದೆಂಥಾ ವ್ಯಾಮೋಹ. ಮೇಲೆಯೋ ಬದಿಗೋ ಎಲ್ಲಿಯೋ ಇಟ್ಟುಕೊಂಡರಾಯಿತು. ಬೇಕಾದಾಗ ಮುನ್ನೆಲೆಗೆ ತಂದುಕೊಂಡರಾಯಿತು!

ಗ್ರೇಯ ಹೆಸರು ಎಲ್ಲೆಂದರಲ್ಲಿ ಕೇಳಿ ಬರತೊಡಗಿದವು. ಪಾರ್ಟಿಗಳಲ್ಲಿ, ಕ್ಲಬ್ಬುಗಳಲ್ಲಿ, ಜನ ಸೇರುವ ಗಲ್ಲಿಗಳಲ್ಲಿ. ವಂಚನೆ ಸುಲಿಗೆ ಮುಂತಾದ ಕತ್ತಲ ಕಲೆಗಳಲ್ಲಿ ಲಂಡನ್ನಿನ್ನಲ್ಲೇ ಛಾಪು ಮೂಡಿಸಿದ್ದ. ವಿಷಯಗಳೆಲ್ಲ ಕಿವಿಗೆ ಬಿದ್ದು ಬೇಸಿಲ್ಲನಿಗೆ ಕಸಿವಿಸಿಯುಂಟಾಯಿತು. ಒಮ್ಮೆ ತನ್ನ ಕಲೆಗೇ ಸ್ಪೂರ್ತಿಯಾಗಿದ್ದ ಸ್ಫುರದ್ರೂಪಿ ಯುವಕನೊಬ್ಬ ಈ ಮಟ್ಟಿಗೆ ಹದಗೆಟ್ಟಿರುವುದು ಬೇಸರ ತರಿಸಿತು. ಬುದ್ಧಿ ಹೇಳೋಣವೆನಿಸಿತು. ರಾತ್ರಿಯೊಮ್ಮೆ ಬೀದಿಯಲ್ಲಿ ಕಣ್ಣಿಗೆ ಬಿದ್ದ ಗ್ರೇ ಯನ್ನು ಹಿಂಬಾಲಿಸಿ ಅವನ ಮನೆಗೆ ಬಂದ ಬೇಸಿಲ್. ಮೇಲಿನ ಧೂಳು ಕೋಣೆಗೆ ಕರೆದೊಯ್ದು ತನ್ನ ಚಿತ್ರದ ಎದುರು, ತನ್ನ ರಕ್ತ ರಂಜಿತ ಭವಿಷ್ಯವನ್ನು ಮೊದಲೇ ಬರೆದ ಬೇಸಿಲ್ ನ ಮೇಲೆ ಇನ್ನಿಲ್ಲದ ಸಿಟ್ಟು ಬಂದು ಅವನಿಗೆ ಗೊತ್ತೇ ಆಗದಂತೆ ಹಿಂದಿನಿಂದ ತಿವಿದು ಮುಗಿಸಿಬಿಟ್ಟ ಗ್ರೇ. ತನ್ನ ಗೆಳೆಯ ಅಲನ್ ಕ್ಯಾಂಬೆಲ್ ನನ್ನು ಯಾಮಾರಿಸಿ ಕರೆಸಿ ಕುರುಹೇ ಸಿಗದಂತೆ ಬೇಸಿಲ್ಲನ ಶವವನ್ನು ಇಲ್ಲವಾಗಿಸಿದ. ಅಲನ್ ಕ್ಯಾಂಬೆಲ್ ಆತ್ಮಹತ್ಯೆ ಮಾಡಿಕೊಂಡ. ಗ್ರೇ ಯೂ ಅವನನ್ನೇ ಅನುಸರಿಸಿದ. ಕಲೆ ಸತ್ತು ಹೋಯಿತು, ಕಲಾವಿದರೂ ಹೋದರು. ಮೂರು ಆತ್ಮಹತ್ಯೆ ಮತ್ತು ಒಂದು ಸ್ಪಷ್ಟವಾದ ಕೊಲೆ, ಬಹುಶಃ ಥಿಯೇಟರಿನ ಟ್ರ್ಯಾಜಿಡಿಗಳು ರಮ್ಯವಾಗುವುದಕ್ಕೆ ಇವೆಲ್ಲ ಅನಿವಾರ್ಯವೋ ಏನೋ?