ನಮ್ಮ ದೇಹವು ನಮ್ಮ ಹಿಂದಿನ ತಲೆಮಾರಿನವರಂತೆಯೋ, ಹೊಲಗಳಲ್ಲಿ ದಿನವೆಲ್ಲಾ ದುಡಿಯುವ ಶ್ರಮಿಕ ರೈತನಂತೆಯೋ ದಣಿಯುವುದಿಲ್ಲವಾದ್ದರಿಂದ ಅದಕ್ಕೆಅವರಷ್ಟೇ ಪ್ರಮಾಣದಲ್ಲಿ ಆಹಾರ ಕೂಡ ಬೇಡ; ಇದು ಅತ್ಯಂತ ಮೂಲಭೂತ ವಾಸ್ತವ; ಹಾಗಾಗಿ ನಮ್ಮ ದೇಹವು ಎಷ್ಟು ಪ್ರಮಾಣದ ಶಕ್ತಿ ಬೇಡುತ್ತದೋ ಅದಕ್ಕೆ ತಕ್ಕಷ್ಟು ಆಹಾರ ಸೇವನೆ ಅತ್ಯಗತ್ಯ, ಅದಕ್ಕಿಂತಲೂ ಹೆಚ್ಚಿನದು ವರ್ಜ್ಯ. ಒಂದೇ ಮನೆಯಲ್ಲಿ ವಿವಿಧ ವಯಸ್ಸಿನವರು, ವಿವಿಧ ಕೆಲಸಗಳನ್ನು ಮಾಡುವವರ ಆಹಾರದ ಅವಶ್ಯಕತೆಗಳು ಬೇರೆಬೇರೆಯಾಗಿರುತ್ತದೆ; ಅದನ್ನು ಇಂಟರ್ನೆಟ್ ನಲ್ಲೋ, ಪತ್ರಿಕೆಯಲ್ಲೋ, ಅಥವಾ ನಮ್ಮ ಗೆಳೆಯರೋ ನಮಗೆ ತಿಳಿಸಲು ಸಾಧ್ಯವಿಲ್ಲ; ಅವರು ತಮಗೆ ತಿಳಿದದ್ದು ಹಂಚಿಕೊಳ್ಳಬಹುದೇ ಹೊರತು ನಮ್ಮ ದೇಹದ ಅವಶ್ಯಕತೆಗಳು ನಮಗೆ ಮಾತ್ರ ತಿಳಿಯಲು ಸಾಧ್ಯ.
ಕ್ಷಮಾ ವಿ. ಭಾನುಪ್ರಕಾಶ್ ಬರಹ

 

ಈ ಕೊರೊನಾ ಲಾಕ್ ಡೌನ್ ಕಾಲದಲ್ಲಿ ಎಷ್ಟೊಂದು ಸಮಯ ಸಿಕ್ಕಿದೆ ಅಲ್ವಾ? ನಮ್ಮನ್ನು ನಾವು ಅರಿತುಕೊಳ್ಳೋಕೆ, ಕುಟುಂಬದವರೊಡನೆ ಸಮಯ ಕಳೆಯೋಕೆ, ಅರ್ಧ ಮುಗಿಸಿದ್ದ ಪುಸ್ತಕವನ್ನು ಮತ್ತೆ ಕೈಗೆತ್ತಿಕೊಳ್ಳೋಕೆ, ಕಲೀಬೇಕು ಅಂದುಕೊಂಡಿದ್ದ ರಾಗದ ತಾಲೀಮು ಮಾಡೋಕೆ; ಹೀಗೆ ಪ್ರತಿಯೊಬ್ಬರ ಯಾದಿಯೂ ದೊಡ್ಡದೇ ಇದೆ; ಹೊಸ ದಿನಚರಿ, ನಮಗೆ ಬೇಕೋ ಬೇಡವೋ, ನಮ್ಮ ಪಾಲಿಗೆ ದಕ್ಕಿದೆ. ಸಾಮಾಜಿಕ ಜವಾಬ್ದಾರಿಯನ್ನು ಮರೆಯದ ಸಾವಿರಾರು ಮಂದಿ ಅಸಹಾಯಕರಿಗೆ, ಆಹಾರ ನೀರು ದೊರೆಯದವರಿಗೆ ತಮ್ಮ ಕೈಲಾದಷ್ಟೂ ಸಹಾಯ ಮಾಡುತ್ತಲೇ ಇದ್ದಾರೆ ಅಥವಾ ಮನೆಯಲ್ಲೇ ಇದ್ದು ಹೊರಗೆ ಹೋಗದೆ ಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ; ಇವೆಲ್ಲಾವುದರ ನಡುವೆ, ಒಂದಷ್ಟು ಜನ, ಲಾಕ್ ಡೌನ್ ಮುಗಿದ ಮೇಲೆ ಬಾಗಿಲಿಂದ ಹೊರಬರಲು ತಿಣುಕಬೇಕಾಗುವಷ್ಟು ತೂಕ ಹೆಚ್ಚಿಸಿಕೊಳ್ಳುವುದರಲ್ಲೇ ತಮಗರಿವಿಲ್ಲದಂತೆಯೇ ಮಗ್ನ! ಮತ್ತಷ್ಟು ಹೆಲ್ತ್ ಕಾನ್ಷಿಯಸ್ ಜನ, ಹಿಂದೆಂದೂ ಇಳಿಸಿಕೊಳ್ಳದಷ್ಟು ತೂಕ ಇಳಿಸಿಕೊಳ್ಳುತ್ತಿದ್ದಾರಂತೆ; ಸಾವಿರಾರು ಭೋಜನ ಪ್ರಿಯರು ತಮ್ಮ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ನ ತುಂಬ ತಮ್ಮ ಹೊಸರುಚಿಗಳ ಪ್ರಯೋಗದ ಫೋಟೋ, ವಿಡಿಯೋಗಳನ್ನೇ ಹಾಕಿ ನೋಡಿದವರಿಗೂ ಬಾಯಲ್ಲಿ ನೀರೂರಿಸಿ ಅವರ ಡಯೆಟ್ ಹಾಳುಮಾಡುವುದರಲ್ಲೇ ಬ್ಯುಸಿ ಇದ್ದಾರೆ!

ಅಲ್ಲ, ಆಹಾರದ ಬಗ್ಗೆ ಇಷ್ಟೊಂದು ಅಬ್ಸೆಶನ್ ಸರಿನಾ ಅನ್ಸುತ್ತೆ ಒಮ್ಮೊಮ್ಮೆ! ಕೆಲವರಿಗಂತೂ ತಾವು ‘ಫುಡ್ಡೀ’ಗಳು ಎಂದು ಹೇಳಿಕೊಳ್ಳುವುದೇ ಒಂದು ಚಟ! ಸಿಕ್ಕಸಿಕ್ಕಲ್ಲಿ ಹೊಸ ತಿಂಡಿಗಳನ್ನು ರುಚಿ ನೋಡಿ ತಮ್ಮ ಹಿಂದಿನ ರೆಸ್ಟೊರೆಂಟ್ ಅನುಭವಕ್ಕೆ ಹೋಲಿಸಿ ಇಷ್ಟೂದ್ದಾ ಟಿಪ್ಪಣಿ ಕೊಡಲು ಹಿಂದೆ ಮುಂದೆ ನೋಡೋಲ್ಲ. ಇದೆಲ್ಲ ಉಳ್ಳವರ ಮಾತು ಬಿಡಿ; ಒಂದು ಹೊತ್ತಿನ ತುತ್ತಿಗೂ ತತ್ವಾರವಿರುವ ಜನರ ಸಂಖ್ಯೆಯೇನೂ ಕಡಿಮೆಯಿಲ್ಲ; ಆದರೆ, ದಿನನಿತ್ಯ ಅದರ ಬಗ್ಗೆ ಯೋಚಿಸುವ ಪುರಸೊತ್ತು ಸಾಮಾನ್ಯವಾಗಿ ಯಾರಿಗೂ ಇಲ್ಲದ್ದು, ಅದರ ಬಗ್ಗೆ ಒಂದು ದಿವ್ಯ ನಿರ್ಲಕ್ಷ್ಯ ತೋರುವ ಜನರ ಸಂಖ್ಯೆಯೇ ಹೆಚ್ಚಿರುವುದು ವ್ಯವಸ್ಥೆಯ ಲೋಪದೋಷವೋ, ಮನುಷ್ಯನಲ್ಲಿ ಮರೆಯಾಗುತ್ತಿರುವ ಮಾನವೀಯತೆಯೋ, ಹೇಳುವುದು ಕಷ್ಟ.

ಆಹಾರ ಅನ್ನೋದು, ಹಸಿವಾದಾಗ ಏನೋ ಒಂದು ತಿನ್ನೋದು ಎಂಬುದನ್ನು ಸೂಚಿಸುವ ಪದವಲ್ಲ; ಆಹಾರವೆಂದರೆ, ದೇವರೇ! (ನಂಬುವವರಿಗೆ!); ಆಹಾರವಿಲ್ಲದೇ ಬದುಕೋಕೆ ಸಾಧ್ಯವೇ? ನೇಮ, ನಿಷ್ಠೆ, ನಿಟ್ಟುಪವಾಸ ಅಂತ ಮಾಡುವವರು, ತಪಸ್ಸಿಗೆ ಕುಳಿತವರು ಕೂಡ ಒಂದು ನಿರ್ದಿಷ್ಟ ಅವಧಿಗೂ ಮೀರಿ ಏನನ್ನೂ ಸೇವಿಸದೇ ಇರಲು ಸಾಧ್ಯವಿಲ್ಲ; ನೀರೋ, ಹಾಲೋ, ಹಣ್ಣೋ – ಕೆಲವು ಘಂಟೆಗಳ, ದಿನಗಳ ನಂತರವಾದರೂ ಸೇವಿಸಲೇ ಬೇಕು; ವೈಜ್ಞಾನಿಕವಾಗಿ ಮಾನವನೂ, ಇತರ ಜೀವಿಗಳಂತೆ ಜೀವಕೋಶಗಳ ಆಗರವೇತಾನೆ? ಹೇಗೆ ಯಂತ್ರಗಳು ಕಾರ್ಯನಿರ್ವಹಿಸಬೇಕೆಂದರೆ ವಿದ್ಯುತ್ತೋ, ಡೀಸೆಲ್ಲೋ, ಬ್ಯಾಟರಿಯೋ ಶಕ್ತಿ ನೀಡಬೇಕೋ, ಹಾಗೇ, ನಮ್ಮ ಜೀವಕೋಶಗಳಿಗೆ ಆಹಾರವು ಶಕ್ತಿ ನೀಡಲೇಬೇಕು. ಇದಕ್ಕಾಗಿ ಆಹಾರ ಸೇವಿಸಲೇಬೇಕು; ಹಾಗಾಗಿ, ವಿಜ್ಞಾನದ ಪ್ರಕಾರ, ಆಹಾರವೆಂದರೆ ನಮ್ಮ ದೇಹಕ್ಕೆ ಇಂಧನ; ಆದರೆ ಆಹಾರ ಕೇವಲ ಶಕ್ತಿ ಮಾತ್ರ ನೀಡುವುದಿಲ್ಲ; ನಮ್ಮ ದೇಹವು ಬೆಳೆಯಲು (ಉದ್ದಕ್ಕೂ, ಅಡ್ಡಕ್ಕೂ!), ಗಾಯಗೊಂಡ ಜೀವಕೋಶಗಳು ರಿಪೇರಿಯಾಗಲು, ಜೀವಕೋಶಗಳ ಒಳಹೊರಗೆ ಸಾಮಾಗ್ರಿಯ ಸಾಗಾಟಕ್ಕೆ ಗೇಟ್ ಕೀಪರ್ ಆಗಲು ಬೇಕಾದ ಲೋಹಗಳ ಕಣಗಳನ್ನು, ವಿಟಮಿನ್ನು, ಪ್ರೋಟೀನು, ಕಿಣ್ವಗಳು, ಖನಿಜಾಂಶಗಳನ್ನು – ಹೀಗೆ ಬೇಕಾದದ್ದೆಲ್ಲವನ್ನೂ ನೀಡುವ ಅಕ್ಷಯ ಪಾತ್ರೆ, ಆಹಾರ ಅನ್ನಬ್ರಹ್ಮವೇ!

ಆಯುರ್ವೇದದ ಪ್ರಕಾರ ಮನುಷ್ಯನ ಆರೋಗ್ಯದ ಸೌಧಕ್ಕೆ ಮೂರು ಆಧಾರ ಸ್ಥಂಭಗಳಿದ್ದು, ಅವುಗಳಲ್ಲಿ ನಿದ್ರೆ, ಬ್ರಹ್ಮಚರ್ಯದ ಜೊತೆಗೆ ಪ್ರಮುಖ ಸ್ಥಾನ ಆಹಾರಕ್ಕೆ! ಭಗವದ್ಗೀತೆಯ ಪ್ರಕಾರ ನಾವು ಸೇವಿಸುವ ಆಹಾರವು ನಮ್ಮ ಮೇಲೆ, ಅಂದರೆ, ನಮ್ಮದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಗುಣವಿಶೇಷಗಳ ಮೇಲೆ ಮಹತ್ತರವಾದ ಪರಿಣಾಮ ಬಿರುತ್ತದೆ ಮತ್ತು ನಾವು ಸೇವಿಸುವ ಆಹಾರದ ಆಧಾರದ ಮೇಲೆ ನಮ್ಮಲ್ಲಿ ರಾಜಸಿಕ, ತಾಮಸಿಕ ಅಥವಾ ಸಾತ್ವಿಕ ಗುಣಗಳು ಕಂಡುಬರುತ್ತವೆ. ಇದು ವೈಜ್ಞಾನಿಕವಾಗಿಯೂ ಸರಿಯೆನ್ನುತ್ತವೆ ಆಹಾರ ವಿಜ್ಞಾನದ ಹಲವು ಸಂಶೋಧನೆಗಳು. ಖುರಾನ್, ಹದೀತ್ ನಂತಹ ಧರ್ಮಗ್ರಂಥಗಳೂ ಆಹಾರದ ಪ್ರಾಮುಖ್ಯತೆಯಷ್ಟೇ ಅಲ್ಲದೇ ಯಾವ ಆಹಾರ ಸೇವನೆಗೆ ಅನುಮತಿ ಇದೆ, ಯಾವ ಆಹಾರ ನಿಷಿದ್ಧ ಎಂಬುದನ್ನೂ ಹೇಳುತ್ತವೆ. ಇದೇರೀತಿ ಬೈಬಲ್ ನಲ್ಲೂ ಆಹಾರದ ಬಗ್ಗೆ, ಆಹಾರವನ್ನು ಮನಸ್ಪೂರ್ತಿಯಾಗಿ ಸವಿದುಣ್ಣುವ ಬಗ್ಗೆ, ಆಹಾರದ ಮಹತ್ವದ ಬಗ್ಗೆಯೂ ಹೇಳಲಾಗಿದೆ.

ಜನಪದದಲ್ಲೂ ಆಹಾರದ ಬಗ್ಗೆ ಅನೇಕ ಹಾಡುಗಳಲ್ಲಿ ಉಲ್ಲೇಖ ಕಂಡುಬರುತ್ತದೆ. “ಹಿಟ್ಟಮ್ ತಿಂದಮ್ ಬೆಟ್ಟಮ್ ಕಡಿದಮ್”, “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ”ದಂತಹ ಗಾದೆಗಳು, ನಾಣ್ಣುಡಿಗಳು ಇತ್ಯಾದಿ, ಆಹಾರದ ಬಗ್ಗೆ ಅನೇಕ ಸಂಗತಿಗಳನ್ನು ಬಿಚ್ಚಿಡುತ್ತವೆ. ಇವುಗಳನ್ನು, ಮತ್ತು, ಇನ್ನೂ ಜಗತ್ತಿನ ಅನೇಕ ಧರ್ಮಗ್ರಂಥಗಳನ್ನು, ಇತಿಹಾಸದ ಗ್ರಂಥಗಳನ್ನು ವೈಜ್ಞಾನಿಕವಾಗಿ ಗಮನಿಸಿದಾಗ, ಆರೋಗ್ಯ ಸೂತ್ರಗಳೆಲ್ಲವೂ ಈಗಿನ ಅತಿಬುದ್ಧಿವಂತರ ಕಾಲಕ್ಕೂ ಹೆಚ್ಚಾಗಿ ಆಗಿನ ಕಾಲದಲ್ಲೇ ಸಾಮಾನ್ಯ ಜನರಿಗೆ ತಿಳಿದಿತ್ತು ಮತ್ತು ಅವುಗಳಿಗೆ ವೈಜ್ಞಾನಿಕ ವಿವರಣೆಯ ಬದಲು ಧಾರ್ಮಿಕ ಅಂಶಗಳ ಅಥವಾ ಭಯದ ಲೇಪನ ನೀಡಿದ್ದರು ಎಂಬುದು. ಅವರಿಗೆ ಈ ಆರೋಗ್ಯಸೂತ್ರಗಳ ಜ್ಞಾನ ದೊರೆಯಲು ಪ್ರಮುಖ ಕಾರಣ, ಪ್ರಕೃತಿ ಮತ್ತು ಅವರ ನಡುವೆ ಇದ್ದ ಅವಿನಾಭಾವ ಸಂಬಂಧ.

ಈಗಿನ ಕಾಲದಲ್ಲಿ ನಮಗೆ ಆಹಾರದ ಬಗ್ಗೆ ಕಿಂಚಿತ್ತೂ ಅರಿವಿಲ್ಲದಿರುವುದಕ್ಕೆ ಕಾರಣವೇ ನಾವು ಪರಿಸರದಿಂದ ದೂರ ಸರಿಯುತ್ತಿರುವುದು; ಹಿತ್ತಲಿನ ಪತ್ರೆಗಳಲ್ಲಿ ವೈಜ್ಞಾನಿಕವಾಗಿ ಏನಿದೆ ಎಂಬುದಕ್ಕಿಂತ ಅದು ನಮ್ಮ ದೇಹಕ್ಕೆ ಹೇಗೆ ಹಿತಕಾರಿ ಎಂಬುದನ್ನು ನಮ್ಮ ಅಜ್ಜಿಯರೂ, ಅವರ ಅಜ್ಜಿಯರೂ ಸ್ಪಷ್ಟವಾಗಿ ಅರಿತಿದ್ದರು; ಈಗ ಹಿತ್ತಲೂ ಇಲ್ಲ, ಅಜ್ಜಿಯರಿದ್ದರೂ ಅವರ ಮಾತು ಕೇಳುವ ವ್ಯವಧಾನ ನಮ್ಮಲ್ಲಿಲ್ಲ; ನಮ್ಮಲ್ಲಿ ಎಷ್ಟು ಜನರಿಗೆ ನಮ್ಮ ಸುತ್ತಲೂ ಇರುವ ಗಿಡಗಳ ಹೆಸರು ಗೊತ್ತು? ಯಾವ ಮರ ಯಾವ ಕಾಲದಲ್ಲಿ ಹೂ ಬಿಡುತ್ತದೆ, ಹಣ್ಣು ಬಿಡುತ್ತದೆ ಅನ್ನುವುದು ನಮಗೆ ಗೊತ್ತೇ? ಮುದ್ದಾದ ದನಿ ತೆಗೆವ ಹಕ್ಕಿಗಳ, ಬಗೆಬಗೆಯ ಕೀಟಗಳ ಲೋಕದ ವಿಸ್ಮಯದಲ್ಲಿ ಅಡಗಿರುವ ಮುದ ತಿಳಿದಿದೆಯೇ? ಅದೆಲ್ಲವನ್ನೂ ಬಿಟ್ಟು ಇಂಟರ್ನೆಟ್ ನಲ್ಲಿ ಯಾರೋ ಹೇಳಿದ್ರು ಅಂತ ನಮ್ಮದಲ್ಲದ ಆಹಾರವನ್ನು ನಮ್ಮ ಹೊಟ್ಟೆಗೆ ಇಳಿಸೋದು ಎಷ್ಟು ಸರಿ?

ಈ ಅಂತರ್ಜಾಲದ ಯುಗದಲ್ಲಿ ಜಗತ್ತೇ ಒಂದು ಹಳ್ಳಿಯಾಗಿರುವುದೇನೋ ನಿಜ; ಆದರೆ ನಮ್ಮ ಹಳ್ಳಿಗಳಲ್ಲಿ ಅಡಗಿರುವ ಜಗತ್ತನ್ನೇ ಮರೆತೆರೆ ಹೇಗೆ? ಇತರರ ಸಂಸ್ಕೃತಿಯನ್ನು ಗಮನಿಸೋಣ, ಅರಿಯೋಣ, ಅದರಲ್ಲಿನ ಅನನ್ಯತೆಯನ್ನು ಕೊಂಡಾಡೋಣ. ಅದರಲ್ಲಿನ ಉತ್ಕೃಷ್ಟತೆಯನ್ನು ನಮ್ಮ ಜೀವನದ ಭಾಗವಾಗಿಸಿಕೊಂಡಾಗ ನಮ್ಮ ನೈಸರ್ಗಿಕ ವ್ಯಕ್ತಿತ್ವಕ್ಕೆ ಚ್ಯುತಿ ಬರದಿದ್ದರೆ ಅದನ್ನೂ ನಮ್ಮ ಭಾಗವಾಗಿಸಿಕೊಳ್ಳೋಣ ಎಂದು ಯೋಚಿಸಿದರೆ ಇದಕ್ಕೊಂದು ಅರ್ಥವಿದೆ; ಸುಖಾಸುಮ್ಮನೇ, “ಅವರು ಬ್ರೋಕೋಲಿ ತಿಂತಾರೆ ನಾವೂ ತಿನ್ನೋಣ; ಅವರು ಆಲಿವ್ ಎಣ್ಣೆ ಬಳಸ್ತಾರೆ, ನಾವೂ ಬಳಸೋಣ” ಅಂದ್ರೆ ಏನರ್ಥ? ಇದು ನಮಗೆ, ನಮ್ಮ ದೇಹಕ್ಕೆ ಸರಿಹೊಂದುತ್ತದೆಯೇ ಎಂದು ಯೋಚಿಸಬೇಕಲ್ಲವೇ? ಹಾಗೆಂದು ಎಂದೋ ಒಮ್ಮೆ ರುಚಿನೋಡಲು ಅಡ್ಡಿಯಿಲ್ಲ; ನಮ್ಮನ್ನು ನಾವು ಅಪ್ಡೇಟ್ ಮಾಡಿಕೊಳ್ಳುವುದು, ಜಗದ ಬಗ್ಗೆ ವಿವಿಧ ವಿಚಾರಗಳ ಬಗ್ಗೆ, ಆಹಾರವೂ ಸೇರಿದಂತೆ, ತಿಳಿದುಕೊಳ್ಳುವುದು ತಪ್ಪೇನಲ್ಲ! ಆಗಾಗ ವಿವಿಧ ಕ್ಯುಸೀನ್ ಗಳ ರುಚಿ ನೋಡುವುದು ಜೀವನೋತ್ಸಾಹದ (ಮತ್ತು ಜಿಹ್ವಾ ಚಾಪಲ್ಯದ!) ಲಕ್ಷಣವೇ. ಆದರೆ, ಯಾವಕಾಲದಲ್ಲಿ ಯಾವ ತರಕಾರಿ, ಹಣ್ಣು, ಧಾನ್ಯ ಬೆಳೆಯಲಾಗುತ್ತೋ ಅದನ್ನುತಿನ್ನುವುದು ವೈಜ್ಞಾನಿಕವಾಗಿ ಸರಿ ಎಂದು ಸಾಬೀತಾಗಿದೆ. ಅದರಲ್ಲೂ ಸ್ಥಳೀಯ ಆಹಾರದ ಸೇವನೆಯೇ ಅತ್ಯಂತ ಸೂಕ್ತ.

ಆರೋಗ್ಯ ಸೂತ್ರಗಳೆಲ್ಲವೂ ಈಗಿನ ಅತಿಬುದ್ಧಿವಂತರ ಕಾಲಕ್ಕೂ ಹೆಚ್ಚಾಗಿ ಆಗಿನ ಕಾಲದಲ್ಲೇ ಸಾಮಾನ್ಯ ಜನರಿಗೆ ತಿಳಿದಿತ್ತು ಮತ್ತು ಅವುಗಳಿಗೆ ವೈಜ್ಞಾನಿಕ ವಿವರಣೆಯ ಬದಲು ಧಾರ್ಮಿಕ ಅಂಶಗಳ ಅಥವಾ ಭಯದ ಲೇಪನ ನೀಡಿದ್ದರು ಎಂಬುದು. ಅವರಿಗೆ ಈ ಆರೋಗ್ಯಸೂತ್ರಗಳ ಜ್ಞಾನ ದೊರೆಯಲು ಪ್ರಮುಖ ಕಾರಣ, ಪ್ರಕೃತಿ ಮತ್ತು ಅವರ ನಡುವೆ ಇದ್ದ ಅವಿನಾಭಾವ ಸಂಬಂಧ.

ಈ ಲಾಕ್ ಡೌನ್ ಕಾಲದಲ್ಲಿ ಸಮಯ ಕಾಲುಮುರಿದುಕೊಂಡು ನಮ್ಮ ಕೈಗೆ ಸಿಕ್ಕಿರುವಾಗ, ಕೇವಲ ವೇಯ್ಟ್ ಲಾಸ್ ನ ಕಾರಣಕ್ಕಾಗಿ ಬಗೆಬಗೆಯ ಡಯೆಟ್ ನ ಮೊರೆಹೋಗುವ ಬದಲು ನಮ್ಮ ಹಿರಿಯರು ತಿನ್ನುತ್ತಿದ್ದ ಆಹಾರವನ್ನೇ ತಿಂದರೂ ನಾವು ಆರೋಗ್ಯ ಹೆಚ್ಚಿಸಿಕೊಳ್ಳುತ್ತೇವೆ ಮತ್ತು ತೂಕ ಕಡಿಮೆ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಹಲವು ನುರಿತ ಆಹಾರತಜ್ಞರು; ಇದನ್ನೇ ಅಲ್ಲವೇ ನಮ್ಮ ಮನೆಯ ಹಿರಿಯರು ಕೂಡ ಹೇಳಿ ಹೇಳಿ ಸುಸ್ತು ಹೊಡೆದಿರುವುದು! ವಾರಕ್ಕೊಂದು ಉಪವಾಸ, ಮೈಮುರಿಯೋ ಕೆಲಸದ ಜೊತೆಗೆ ಹಿತಮಿತವಾದ ಆಹಾರ, ಹೊಟ್ಟೆಕೆಟ್ಟರೆ ‘ಲಂಘಣಂ ಪರಮೌಷಧಂ’ ಎಂಬ ಉಪವಾಸದ ಸೂತ್ರ, ಹಸಿವಾದಾಗ ಮಾತ್ರ ತಿನ್ನುವುದು, ಕುರುಕಲು/ಸಿದ್ಧರೂಪದ ಸಂಸ್ಕರಿಸಿದ ಆಹಾರದ ಓವರ್ ಡೋಸ್ ಇಲ್ಲದ ಸ್ವಚ್ಛ ಆಹಾರ ಸೇವನೆಯೇ ಅವರ ಆರೋಗ್ಯವಂತ ದೇಹದ ಮತ್ತು ಆರೋಗ್ಯವಂತ ಮನಸ್ಸಿನ ಗುಟ್ಟು

ಇದು ಅಷ್ಟೇನೂ ಕಷ್ಟವಲ್ಲ ಎಂಬುದು, ಲಾಕ್ ಡೌನ್ ಪ್ರಭಾವದಿಂದ ತಿಂಡಿ ಊಟದ ಹೋಮ್ ಡೆಲಿವರಿ, ಚಾಟ್/ಐಸ್ಕ್ರೀಮ್ ಕಾರ್ನರ್ ಗಳು ಬಂದ್ ಆದ ಮೇಲೆ ಹಲವರಿಗೆ ಅರ್ಥವಾದಂತಿದೆ. ಮನೆಯಲ್ಲೇ ಮಾಡುವ ಅಡುಗೆಗಳಲ್ಲಿ ಇಷ್ಟು ದಿನ ಕಾಣಿಸದಿದ್ದ ರುಚಿಗೆ ಈಗ ಕಣ್ಣು (ಬಾಯಿ!) ತೆರೆದುಕೊಂಡಿದೆ. ಲೋ ಕಾರ್ಬ್, ಹೈ ಪ್ರೋಟೀನ್, ಕೀಟೋ, ಅಲ್ಟ್ರಾ ಲೋ ಫ್ಯಾಟ್, ಆಟ್ಕಿನ್ಸ್, ಎಚ್.ಸಿ.ಜಿ, ಜಿ.ಎಮ್ ಡಯೆಟ್ – ಹೀಗೆ ಬಗೆಬಗೆಯ ಅರೆಕಾಲಿಕ ಡಯೆಟ್ ಗಳ ಹಿಂದೆ ಬಿದ್ದು, ವೇಗವಾಗಿ ತೂಕ ಇಳಿದು (ತೂಕದ ಜೊತೆಗೆ ಹುಮ್ಮಸ್ಸೂ ಠುಸ್ ಎಂದು!) ತಮ್ಮ ಅತ್ಯಾಪ್ತ ಆಹಾರಕ್ಕಾಗಿ ಹಂಬಲಿಸೀ, ಕಡೆಗೊಂದು ದಿನ, ಡಯೆಟ್ಟೂ ಬೇಡ ಎಂಥದ್ದೂ ಬೇಡ, ಹೊಟ್ಟೆತುಂಬಾ ಊಟ ಮಾಡಿದರೆ ಸಾಕೆಂದು ಮೊದಲಿಗಿಂತಲೂ ಹೆಚ್ಚೇ ತಿನ್ನುವಲ್ಲಿ, ಉಸ್ಸ್ಸಪ್ಪಾ..! ಇವುಗಳಲ್ಲಿ ಕೆಲವು ವೈಜ್ಞಾನಿಕವಾಗಿ ಸರಿಯಿದ್ದರೂ, ಅಲ್ಪಕಾಲೀನ ಸಾರ್ಥಕತೆಯಷ್ಟೇ ಇವುಗಳಿಂದ ಪಡೆಯಲು ಸಾಧ್ಯ ಹೊರತು ಜೀವನ ಪರ್ಯಂತ ಇದೇ ಆಹಾರ ಪದ್ಧತಿಯನ್ನು ಪಾಲಿಸಲು ಸಾಧ್ಯವಿಲ್ಲ.

ಹೀಗೆ, ವೇಗವಾಗಿ ಇಳಿದರೆ, ಆ ತೂಕವು ವೇಗವಾಗಿ ಮರುಕಳಿಸುತ್ತದೆ ಎಂಬ ಸಾಮಾನ್ಯ ಜ್ಞಾನವಿಲ್ಲದಿದ್ದರೆ ಆಗುವುದೇ ಹೀಗೆ; ಎಲ್ಲದಕ್ಕೂ ಅದಕ್ಕೆ ತಕ್ಕಷ್ಟು ಸಮಯ ನೀಡಲೇಬೇಕು; ಇದು ನಿಸರ್ಗ ನಮಗೆ ಕಲಿಸಿದ ಪಾಠ. ವಿವಿಧ ಗಿಡಮರಗಳ ಬೀಜಗಳು ಮೊಳೆತು ಗಿಡ, ನಂತರ ಮರವಾಗಲು ಅದರದ್ದೇ ಆದ ಸಮಯ ಹಿಡಿಯುತ್ತದೆ; ಮೆಂತ್ಯದ ಕಾಳು ಮೊಳಕೆ ಒಡೆಯುವುದಕ್ಕೂ, ಬಿದಿರು ತನ್ನ ಬೀಜದಿಂದ ಹುಟ್ಟಿ ಚಿಗುರುವುದಕ್ಕೂ ಒಂದೇನೇ? ಹಾಗೆಯೇ, ತೂಕ ಇಳಿಸಲು/ಹೆಚ್ಚಿಸಲು, ಆರೋಗ್ಯವು ದಿವಿನಾಗಿ ಹದಕ್ಕೆ ಬರಲುಕೂಡ ಅದರದ್ದೇಆದ ಸಮಯ ಬೇಕು; ಫಾಸ್ಟ್ ಫುಡ್ ನಂತೆ, ಫಾಸ್ಟ್ ರಿಸಲ್ಟ್ ಗಳನ್ನು ಬೇಡುವ ಮನಸ್ಸುಕೂಡ ಅತ್ಯಂತ ಅಪಾಯಕಾರಿ; ಅಂತಹ ಮನಸ್ಸಿಗೆ ತಿಳಿಹೇಳುವುದು ನಾವು ಪ್ರಜ್ಞಾವಂತರಾಗಿದ್ದರೆ ಮಾತ್ರ ಸಾಧ್ಯ; ಆದರೆ ಅದು ಕಷ್ಟವೇನಲ್ಲ! ಅತ್ಯಂತ ಸುಲಭ.

ನಮ್ಮ ದೇಹವು ನಮ್ಮ ಹಿಂದಿನ ತಲೆಮಾರಿನವರಂತೆಯೋ, ಹೊಲಗಳಲ್ಲಿ ದಿನವೆಲ್ಲಾ ದುಡಿಯುವ ಶ್ರಮಿಕ ರೈತನಂತೆಯೋ ದಣಿಯುವುದಿಲ್ಲವಾದ್ದರಿಂದ ಅದಕ್ಕೆಅವರಷ್ಟೇ ಪ್ರಮಾಣದಲ್ಲಿ ಆಹಾರ ಕೂಡ ಬೇಡ; ಇದು ಅತ್ಯಂತ ಮೂಲಭೂತ ವಾಸ್ತವ; ಹಾಗಾಗಿ ನಮ್ಮ ದೇಹವು ಎಷ್ಟು ಪ್ರಮಾಣದ ಶಕ್ತಿ ಬೇಡುತ್ತದೋ ಅದಕ್ಕೆ ತಕ್ಕಷ್ಟು ಆಹಾರ ಸೇವನೆ ಅತ್ಯಗತ್ಯ, ಅದಕ್ಕಿಂತಲೂ ಹೆಚ್ಚಿನದು ವರ್ಜ್ಯ. ಒಂದೇ ಮನೆಯಲ್ಲಿ ವಿವಿಧ ವಯಸ್ಸಿನವರು, ವಿವಿಧ ಕೆಲಸಗಳನ್ನು ಮಾಡುವವರ ಆಹಾರದ ಅವಶ್ಯಕತೆಗಳು ಬೇರೆಬೇರೆಯಾಗಿರುತ್ತದೆ; ಅದನ್ನು ಇಂಟರ್ನೆಟ್ ನಲ್ಲೋ, ಪತ್ರಿಕೆಯಲ್ಲೋ, ಅಥವಾ ನಮ್ಮ ಗೆಳೆಯರೋ ನಮಗೆ ತಿಳಿಸಲು ಸಾಧ್ಯವಿಲ್ಲ; ಅವರು ತಮಗೆ ತಿಳಿದದ್ದು ಹಂಚಿಕೊಳ್ಳಬಹುದೇ ಹೊರತು ನಮ್ಮ ದೇಹದ ಅವಶ್ಯಕತೆಗಳು ನಮಗೆ ಮಾತ್ರ ತಿಳಿಯಲು ಸಾಧ್ಯ; ಹಾಗಾಗಿ ಟ್ರಯಲ್ ಆ್ಯಂಡ್ ಎರರ್ ಪ್ರಕ್ರಿಯೆಯ ಮೂಲಕ ದಿನದಿನಕ್ಕೂ ಆಹಾರದ ಪ್ರಮಾಣ, ತಿಂಡಿಗೂ ಊಟಕ್ಕೂ ನಡುವಿನ ಅಂತರ – ಇಂತಹ ಅಂಶಗಳನ್ನು ಹೆಚ್ಚಿಸಿ, ಕಡಿಮೆಗೊಳಿಸಿ, ಯಾವುದು ನಮಗೆ ಸೂಕ್ತ ಎಂದು ನಾವೇ ನಿರ್ಧರಿಸಿಕೊಳ್ಳಬೇಕಾಗುತ್ತದೆ; ಏಕೆಂದರೆ, ಪ್ರತಿ ಮನುಷ್ಯನೂ ವಿಭಿನ್ನ, ಅನನ್ಯ; ಎಲ್ಲರಿಗೂ ಅದ್ಹೇಗೆ ಒಂದೇ ಬಗೆಯ ನೀತಿನಿಯಮಗಳು ಸರಿಹೊಂದಲು ಸಾಧ್ಯ… ಅಲ್ಲವೇ?

ನಮ್ಮ ಮನಸ್ಸು ಮತ್ತು ದೇಹ ನಮಗೆ ಸದಾ ಸಿಗ್ನಲ್ ಗಳನ್ನು ನೀಡುತ್ತಿರುತ್ತದೆ. ಅದನ್ನು ಕೇಳಿಸಿಕೊಳ್ಳೋ ವ್ಯವಧಾನ ನಮಗಿರಬೇಕಷ್ಟೇ; ಟಿ.ವಿ. ನೋಡುತ್ತಾ, ಪತ್ರಿಕೆ ಓದುತ್ತಾ ತಿಂಡಿತಿಂದರೆ ಅದು ಹೇಗೆ ಮೆದುಳು ನಮಗೆ ನೀಡುತ್ತಿರುವ ಸಂಜ್ಞೆ ನಮಗೆ ತಲುಪೋಕೆ ಸಾಧ್ಯ ಹೇಳಿ? ಆಹಾರವನ್ನು ತಯಾರಿಸುವುದಷ್ಟೇ ಅಲ್ಲ, ಅದನ್ನು ಸೇವಿಸುವುದೂ ಕೂಡ ಧ್ಯಾನದಂತಿರಬೇಕು. ಜೊತೆಗೆ ಬೇಸಿಗೆಯಲ್ಲಿ ಮಾವು, ಹಲಸು, ಕಲ್ಲಂಗಡಿ, ಸೌತೆ, ಮಜ್ಜಿಗೆ, ರಾಗಿ ಅಂಬಲಿಯೇ ಸೂಕ್ತ; ಅಂತೆಯೇ ಛಳಿಗಾಲದಲ್ಲಿ ಹೆಚ್ಚು ಮಸಾಲೆ ಪದಾರ್ಥಗಳ, ಮೆಣಸು, ಎಳ್ಳು, ಕಾಳು ಬೀಜಗಳ ಬಳಕೆಯೇ ಸೂಕ್ತ.

ನಾವು ವಾಸಿಸುವ ಪ್ರದೇಶದಲ್ಲಿ, ನೈಸರ್ಗಿಕವಾಗಿ ಆ ಋತುಮಾನದ ಆಧಾರದಲ್ಲಿ ಬೆಳೆಯುವ ಸೀಸನಲ್ ಆಹಾರವನ್ನು ನಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ, ತಕ್ಕಷ್ಟು ಸೇವಿಸಿದರೆ, ಆಹಾರವು ತನ್ನ ಮಾಯಕ ಶಕ್ತಿಯ ಕಾರಣದಿಂದ ನಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ. ಹಾಂ! ಜೊತೆಗೆ ವ್ಯಾಯಾಮವೂ ಮುಖ್ಯ ಎಂಬುದು ಗೊತ್ತೇಇದೆಯಲ್ಲಾ?! ನಮ್ಮಆರೋಗ್ಯ ನಮ್ಮಕೈಯಲ್ಲಿ ಎಂಬ ಅರಿವಿಗೆ ಪೂರಕವಾಗಿ ಆಹಾರದ ಬಗ್ಗೆ – ಅಂದರೆ ಆಹಾರದ ಮೂಲ, ತಯಾರಿ, ಸೇವನೆಯ ಬಗ್ಗೆ ಅರಿವು ಅತ್ಯಗತ್ಯ; ಇದನ್ನು ನಾವು ಓದಿ, ನೋಡಿ, ಬಲ್ಲವರಿಂದ ಕಲಿತು ಅಳವಡಿಸಿಕೊಳ್ಳಲು ಎಂದು ಬೇಕಾದರೂ ಆರಂಭಿಸಬಹುದು.

ನಮ್ಮದೇ ಪುಟ್ಟ ಕೈತೋಟ ಮಾಡಿಕೊಂಡು ದಿನನಿತ್ಯದ ಅಡುಗೆಗೆ ಬೇಕಾದ ಕೊತ್ತಂಬರಿ, ಪುದೀನ, ಟೊಮೇಟೋ, ಹಸಿಮೆಣಸಿನಕಾಯಿಯಂತಹ ಸರಳವಾಗಿ ಬೆಳೆಯಲು ಸಾಧ್ಯವಾಗುವ ಗಿಡಗಳನ್ನು ಬೆಳೆಸಿಕೊಳ್ಳಬಹುದು. ಆಹಾರದಲ್ಲಿ ಬಳಸುವ ಸಾಮಗ್ರಿಯ ಶುದ್ಧತೆಯ ಬಗ್ಗೆ ಗಮನ ವಹಿಸುತ್ತಾ, ಆದಷ್ಟೂ ಅವುಗಳು ಪಾಸ್ಟಿಕ್ ನಲ್ಲಿ ಪ್ಯಾಕ್ ಆಗದೇ ನಮ್ಮನ್ನುತಲುಪಿದರೆ ನಮ್ಮ ಉದರದ ಜೊತೆಗೆ ನಮ್ಮ ಭೂಮಿಯ ಉದರಕ್ಕೂ ಹಿತ ಎಂಬುದನ್ನು ಮರೆಯುವಂತಿಲ್ಲ; ಬಹುರಾಷ್ಟ್ರೀಯ ಕಂಪನಿಗಳ ಆ್ಯಪ್ ನ ಮೂಲಕ ತರಕಾರಿ, ಹಣ್ಣುಇತ್ಯಾದಿ ತರಿಸುವ ಬದಲು ಹತ್ತಿರದಲ್ಲಿರುವ ರೈತರ ಅಂಗಡಿಗಳಿಂದ, ಸಂತೆಯಿಂದ ಖರೀದಿಸಿದರೆ ಮತ್ತೂ ಉತ್ತಮ.

ನಮ್ಮಆಹಾರದಲ್ಲಿರುವ ಪ್ರತಿಯೊಂದು ಸಾಮಗ್ರಿಯ ಮೂಲದಿಂದ ಹಿಡಿದೂ ಅದನ್ನು ಸೇವಿಸಿದಾಗ ನಮ್ಮಲ್ಲಿ ಆಗುವ ಬದಲಾವಣೆಗಳವರೆಗೂ ತಿಳಿದುಕೊಳ್ಳಲು ಪ್ರಯತ್ನಿಸಿದರೆ, ಅದೆಷ್ಟು ಆಸಕ್ತಿದಾಯಕ ಗೊತ್ತೇ? ನಮಗೇ ಅರಿವಿಲ್ಲದಂತೆ ನಾವು ಪ್ರಕೃತಿಯ ಹಿರಿಮೆಯನ್ನು ಅರಿಯುತ್ತಾ, ಭೂಮಿತಾಯಿಯ ಮಮತೆಯನ್ನು ನಿಜಾರ್ಥದಲ್ಲಿ ಅನುಭವಿಸುತ್ತೇವೆ. ಸರಿ, ನಾ ಹೊರಟೆ, ಹಿತ್ತಲಿನಲ್ಲಿ ಒಂದೆಲಗ ಬಿಡಿಸಿಕೊಂಡು ತಂಬುಳಿ ಮಾಡಲಿಕ್ಕಿದೆ; ನಿಮಗೂ ಹಸಿವಾಯ್ತೇನೋ?! ಸರಳ ಮತ್ತು ಸ್ಥಳೀಯ ಆಹಾರ ಮಾಡೋಕೆ/ತಿನ್ನೋಕೆ ಹೊರಟಿರಲ್ವಾ?