”ಕ್ರಿಕೆಟ್ ಅನ್ನು ಎಷ್ಟು ಆಸಕ್ತಿಯಿಂದ ಹಿಂಬಾಲಿಸಬೇಕು ಎಷ್ಟು ಪ್ರೀತಿಸಬೇಕು ಎನ್ನುವುದು ಕ್ರಿಕೆಟ್ ಪ್ರೇಕ್ಷಕರನ್ನು ಕಾಲ ಕಾಲಕ್ಕೆ ಕಾಡಿದ ಪ್ರಶ್ನೆಯೇ. ತಂಡವೊಂದು ಕಳಪೆ ಪ್ರದರ್ಶನ ನೀಡಿದಾಗ ಆಯಾ ತಂಡವನ್ನು ನೆಚ್ಚಿಕೊಂಡ ಪ್ರೇಮಿಗಳಲ್ಲಿ ಇನ್ನೂ ಇಂತಹ ಕ್ರಿಕೆಟನ್ನು ತಂಡವನ್ನು ತಾನು ಬೆಂಬಲಿಸಬೇಕೇ, ಕ್ರಿಕೆಟ್ ನೋಡಬೇಕೇ ಎನ್ನುವ ಪ್ರಶ್ನೆಗಳು ಮೂಡುತ್ತಿರುತ್ತವೆ. ಅದೇ ತಂಡ ಪ್ರತಿಷ್ಠಿತ ಪಂದ್ಯವನ್ನು ರೋಚಕವಾಗಿ ಗೆದ್ದಾಗ ಬದುಕಿದರೂ ಸತ್ತರೂ ಕ್ರಿಕೆಟ್ ಅಭಿಮಾನಿಯಾಗಿಯೇ ಎಂದು ಅನಿಸುವುದೂ ಇದೆ”
ಯೋಗೀಂದ್ರ ಮರವಂತೆ ಇಂಗ್ಲೆಂಡ್ ಕ್ರಿಕೆಟ್ ಮೈದಾನದಿಂದ ಬರೆದ ಇತ್ತೀಚಿನ ವರದಿ.

 

ಕ್ರಿಕೆಟ್ ಮೈದಾನದಿಂದ ಬಂದ “ಇತ್ತೀಚಿನ ವರದಿಯ” ಪ್ರಕಾರ ಇಂಗ್ಲೆಂಡ್ ನ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ನಮ್ಮ ತಂಡ ನೀರಸ ಪ್ರದರ್ಶನ ನೀಡಿದೆ, ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳನ್ನು ನಿರಾಶವಾಗಿಸಿದೆ. ಭಾರತದ ನಿರ್ಜೀವ ಪಿಚ್ ಗಳಲ್ಲಿ ೨೦ x ೨೦ರ ನಾಲ್ಕು ತಾಸಿನ ಸ್ಪರ್ಧೆಯಲ್ಲಿ ವೀರ ಶೂರರೆನಿಸಿದವರೆಲ್ಲ ಇದೇ ಮೊದಲ ಬಾರಿ ಬ್ಯಾಟ್ ಹಿಡಿದೆವೋ, ಇವತ್ತೇ ಮೊದಲು ಬೌಲ್ ಮಾಡಿದೆವೋ ಎನ್ನುವ ಸಂಶಯ ಹುಟ್ಟಿಸುವಂತೆ ಇಂಗ್ಲೆಂಡ್ ನಲ್ಲಿ ಟೆಸ್ಟ್ ಆಡಿ ಮರಳಿದ್ದಾರೆ. ಇದಕ್ಕೆಲ್ಲ ಕಾರಣ ನಾಲ್ಕು ತಾಸುಗಳ ಕ್ಷಿಪ್ರ ಪಂದ್ಯಗಳು ಕ್ರಿಕೆಟ್ ಲೋಕವನ್ನು ಆಕ್ರಮಿಸಿದ್ದೋ ಅಥವಾ ಬಿಡುವಿಲ್ಲದೆ ಯಂತ್ರದಂತೆ ದಿನವೂ ಆಟ ಆಡಿದ ಸುಸ್ತೋ ಅಥವಾ ಲಕ್ಷ್ಮಣ್, ದ್ರಾವಿಡ್, ತೆಂಡೂಲ್ಕರ್, ಸೆಹ್ವಾಗ್, ಕುಂಬ್ಳೆ, ಗಂಗೂಲಿ ತಂಡದಲ್ಲಿ ಇಲ್ಲದಿರುವುದೋ ಎನ್ನುವುದನ್ನು ಕ್ರಿಕೆಟ್ ನ ಇಷ್ಟದೇವರೇ ಹೇಳಬೇಕು.

ಬಹಳಷ್ಟು ಹಿಂದಲ್ಲದ ಒಂದಾನೊಂದು ಕಾಲದಲ್ಲಿ ಆಟಗಾರರು ಭಾರತದದಿಂದ ಹೊರಗೆ ಪ್ರತಿವರ್ಷ ಕೌಂಟಿ ಕ್ರಿಕೆಟ್ ಆಡುತ್ತಿದ್ದರು. ಅಷ್ಟೇನೂ ಗಳಿಕೆ ಇಲ್ಲದ ಆದರೆ ಬಹಳಷ್ಟು ಕಲಿಕೆ, ಅನುಭವ ಸಿಗುತ್ತಿದ್ದ ಸರಣಿಗಳು ಆಗ ಇರುತ್ತಿದ್ದವು. ಜಗತ್ತಿನ ಎಲ್ಲ ದೇಶದ ಮುಖ್ಯ ಆಟಗಾರರೂ ಇಂಗ್ಲೆಂಡ್ ನಲ್ಲಿ ಆಡುತ್ತಿದ್ದರು. ವಿದೇಶದ ಹವಾಮಾನ, ಬಾಲ್ ನ ಚಲನೆ, ಹೊಸ ಬಗೆಯ ದಾಂಡಿಗರು ನವೀನ ಎಸೆತಗಾರರ ಜೊತೆ ಬೆರೆತು ಕಲಿಯುತ್ತ, ಚೆಂಡನ್ನು ಎತ್ತರಕ್ಕೆ ಪುಟಿಯಿಸುವಂತಹ ಗಾಳಿಯಲ್ಲಿ ತೇಲುವಂತಹ ಪಿಚ್ ಗಳಲ್ಲಿ ಪರಿಸ್ಥಿತಿಗಳಲ್ಲಿ ನಿಭಾಯಿಸುತ್ತಿದ್ದವರು. ಅಲ್ಲಿ ಆಡಿ ಕಲಿತು ಬೆಳೆದು ಬಂದವರು ಆಟವೆಂದರೆ ಬರೇ ಬ್ಯಾಟ್ ಬೀಸುವುದಲ್ಲ, ಬಾಲ್ ಎಸೆಯುವುದಲ್ಲ ದೈಹಿಕ ಕ್ಷಮತೆ, ಸಮಯ ಪ್ರಜ್ಞೆ, ತಂತ್ರಗಾರಿಕೆ, ಮಾನಸಿಕ ಸಮತೋಲನ ಮನೋಧರ್ಮ ಎಲ್ಲವೂ ಪ್ರಾಮುಖ್ಯ ಅಂತ ತೋರಿಸಿಕೊಟ್ಟಿದ್ದರು. ಕ್ರಿಕೆಟ್ ಆಟದ ಪ್ರಕೃತಿ ಈಗ ಬದಲಾಗಿದೆ. ಭಾರತದ ಒಳಗೆ ಹೆಚ್ಚು ಪಂದ್ಯಗಳು ನಡೆಯುತ್ತವೆ, ಕ್ರಿಕೆಟ್ ಮಂಡಳಿಗಳಿಗೆ ಹೇರಳ ಹಣ ಬರುತ್ತದೆ, ಆಟಗಾರರಿಗೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ಐದು ದಿನಗಳ ಪಂದ್ಯ ಆಡುವುದೂ ಒಗ್ಗಲಿಕ್ಕಿಲ್ಲ ಅಥವಾ ಆಕರ್ಷಕ ಎನಿಸಲಿಕ್ಕಿಲ್ಲ. ಬದಲಾವಣೆ ಆಗಿರುವುದು ಈ ಜಗದ ಕ್ರಿಕೆಟ್ ಗೆ ಅಲ್ಲ ಕ್ರಿಕೆಟ್ ಎನ್ನುವ ಜಗತ್ತಿಗೆ.

ಯಾವ ವಿಷಯದಲ್ಲಿ ಅಪಾರ ಹಣ ಮಾಡಬಹುದೋ ಅದು ಕ್ರೀಡೆಯೋ ಕಲೆಯೋ ಅಥವಾ ಇನ್ನೇನೋ ಅದನ್ನು ವ್ಯಾಪಾರವಾಗಿಸಿ ಅದರಿಂದ ವರ್ಷದಿಂದ ಹೆಚ್ಚು ಹೆಚ್ಚು ಹಣ ಉತ್ಪತ್ತಿ ಮಾಡುವುದು “ಈ ನವೀನ ಯುಗದ ಜಗದ ಕೇತನ”. ಯುರೋಪಿನಲ್ಲಿ ಫುಟ್ಬಾಲ್ ಹೇಗೆ ಅತ್ಯಂತ ವ್ಯಾವಹಾರಿಕ ಹಾದಿಯಲ್ಲಿ ಸಾಗಿದೆಯೋ ಕ್ರಿಕೆಟ್ ಕೂಡ ಅದೇ ಹೆಜ್ಜೆಯನ್ನು ಅನುಸರಿಸುತ್ತಿದೆ. ಮಿಲಿಯನ್ ಗಟ್ಟಲೆ ಹಣ ಸಿಗುವ ಕ್ಲಬ್ ಫುಟ್ಬಾಲ್ ಗಳಲ್ಲಿ ಹೀರೋಗಳೆನಿಸಿದ ಅರ್ಜೆಂಟೈನಾದ ಮೆಸ್ಸಿ, ಪೋರ್ಚುಗಲ್ ನ ರೊನಾಲ್ಡೊ ತಮ್ಮ ತಮ್ಮ ರಾಷ್ಟ್ರೀಯ ತಂಡವನ್ನು ಮುನ್ನಡೆಸುವಾಗ ವಿಶ್ವ ಕಪ್ ಸ್ಪರ್ಧೆಯಲ್ಲಿ ಕೊನೆಯ ಹಂತದ ಹತ್ತಿರ ಹೋಗಲೂ ಪ್ರಯಾಸ ಪಡುತ್ತಾರೆ ಅಥವಾ ಸುಲಭದ ಗೋಲ್ ಹೊಡೆಯಲೂ ತಿಣುಕಾಡುತ್ತಾರೆ. ಇಂಗ್ಲೆಂಡ್ ನಲ್ಲಿ ಯುರೋಪಿನಲ್ಲಿ ಪ್ರತಿ ಮ್ಯಾಚ್ ಗೂ ಬೆಟ್ಟಿಂಗ್ ನಡೆಯುತ್ತದೆ. ಈ ದೇಶಗಳಲ್ಲಿ ಬೆಟ್ಟಿಂಗ್ ಸಕ್ರಮ ವ್ಯವಹಾರವೂ ಹವ್ಯಾಸವೂ ಹೌದು. ತಮ್ಮ ನೆಚ್ಚಿನ ತಂಡ ಸೋತರೂ ಬೆಟ್ಟಿಂಗ್ ಗೆದ್ದ ಖುಷಿ ಕೆಲವರಿಗೆ ಸಿಗುತ್ತದೆ. ವ್ಯಾವಹಾರಿಕ ನಿಟ್ಟಿನಲ್ಲಿ ಫುಟ್ಬಾಲ್ ಹಾದಿಯಲ್ಲೇ ಕ್ರಿಕೆಟ್ ಕೂಡ ಸಾಗುತ್ತಿದೆ. ಇದೀಗ ಅಲ್ಲಿನಂತೆ ಇಲ್ಲೂ. ಪಂದ್ಯಗಳು ಹೆಚ್ಚಿವೆ, ಪ್ರೇಕ್ಷಕರು ಹೆಚ್ಚಿದ್ದಾರೆ, ಹೊಸ ಉದ್ಯೋಗಗಳು ಹುಟ್ಟಿಕೊಂಡಿವೆ, ಬಂಡವಾಳ ಹಾಕಿದವರು ಉತ್ಸಾಹದಲ್ಲಿದ್ದಾರೆ, ಆರ್ಥಿಕ ವಹಿವಾಟು ಗೆದ್ದಿದೆ, ಕ್ರಿಕೆಟ್ ಸೋತಿದೆ. ಕ್ಷಣ ಕ್ಷಣಕ್ಕೂ ತಿರುವು ಕೊಡುವುದಕ್ಕೆ, ಕುತೂಹಲಕ್ಕೆ, ಅನಿಶ್ಚಿತತೆಗೆ ಹೆಸರಾದ ಕ್ರಿಕೆಟಿನ ಒಂದು ಸರಣಿಯಲ್ಲಿ ಸೋತಿದ್ದಕ್ಕೆ ಮಾಡುವ ಆಪಾದನೆ ಇದಲ್ಲ, ಹೇಗೆ ಸೋತರು ಎಷ್ಟು ಸೋತರು ಮತ್ತು ಒಟ್ಟಾರೆ ಕ್ರಿಕೆಟ್ ಲೋಕದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿ ಹುಟ್ಟುವ ಕಳವಳ ಇದು.

ವಿದೇಶದ ಹವಾಮಾನ, ಬಾಲ್ ನ ಚಲನೆ, ಹೊಸ ಬಗೆಯ ದಾಂಡಿಗರು ನವೀನ ಎಸೆತಗಾರರ ಜೊತೆ ಬೆರೆತು ಕಲಿಯುತ್ತ, ಚೆಂಡನ್ನು ಎತ್ತರಕ್ಕೆ ಪುಟಿಯಿಸುವಂತಹ ಗಾಳಿಯಲ್ಲಿ ತೇಲುವಂತಹ ಪಿಚ್ ಗಳಲ್ಲಿ ಪರಿಸ್ಥಿತಿಗಳಲ್ಲಿ ನಿಭಾಯಿಸುತ್ತಿದ್ದವರು. ಅಲ್ಲಿ ಆಡಿ ಕಲಿತು ಬೆಳೆದು ಬಂದವರು ಆಟವೆಂದರೆ ಬರೇ ಬ್ಯಾಟ್ ಬೀಸುವುದಲ್ಲ, ಬಾಲ್ ಎಸೆಯುವುದಲ್ಲ ದೈಹಿಕ ಕ್ಷಮತೆ, ಸಮಯ ಪ್ರಜ್ಞೆ, ತಂತ್ರಗಾರಿಕೆ, ಮಾನಸಿಕ ಸಮತೋಲನ ಮನೋಧರ್ಮ ಎಲ್ಲವೂ ಪ್ರಾಮುಖ್ಯ ಅಂತ ತೋರಿಸಿಕೊಟ್ಟಿದ್ದರು.

ಸೋಲು ಗೆಲುವನ್ನು ಹೇಗೆ ಸ್ವೀಕರಿಸಬೇಕು, ಕ್ರೀಡಾ ಸ್ಪೂರ್ತಿ ಯನ್ನು ಹೇಗೆ ತುಂಬಿಕೊಳ್ಳಬೇಕು ಎಂದು ದೈನಂದಿನ ಬದುಕಿಗೆ ಪಾಠ ಹೇಳುತ್ತಿದ್ದ ಕ್ರಿಕೆಟ್ ಗೆ ಈಗ ಪಾಠ ಯಾರು ಹೇಳಿಯಾರೋ? ಗೊತ್ತಿಲ್ಲ. ಕ್ರಿಕೆಟ್ ಗೆ ಸೋಲು ಇದೇ ಮೊದಲಲ್ಲ ಬಿಡಿ. ೨೦೦೦ನೆಯ ಇಸವಿಯ ಆಸುಪಾಸಲ್ಲಿ ಮತ್ತು ನಂತರದ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಅಲ್ಲಲ್ಲಿನ ಕ್ರಿಕೆಟ್ ಕಣ್ಮಣಿಗಳು ಅಕ್ರಮ, ಮೋಸ, ವಂಚನೆ ಪ್ರಕರಣಗಳಲ್ಲಿ ವರ್ಷಾನುಗಟ್ಟಲೆ ನಿಷೇಧಿತರಾದರು. ಪ್ರಸಿದ್ಧ ಸುಪ್ರಸಿದ್ಧ ಆಟಗಾರರು ಮ್ಯಾಚ್ ಫಿಕ್ಸಿಂಗ್ ಗಳಲ್ಲಿ ಸಿಕ್ಕಿಬಿದ್ದರು. ಅಜರ್, ಜಡೇಜಾ, ಮನೋಜ್ ಪ್ರಭಾಕರ್, ಸಲೀಂ ಮಲ್ಲಿಕ್, ಹ್ಯಾನ್ಸಿ ಕ್ರೋನಿಯೇ, ಶ್ರೀಶಾಂತ್, ಮೊಹಮ್ಮದ್ ಅಮೀರ್ ಮುಂತಾದ ಹೀರೋಗಳು ಕ್ರೀಡೆಯಿಂದ ನಿಷೇಧಿತರಾದರು. ಕೆಲವರ ಮೇಲಿನ ನಿಷೇಧ ತಿಂಗಳುಗಳದು ಮತ್ತು ಕೆಲವರದ್ದು ವರುಷಗಳದ್ದು. ಕೆಲವರು ನಿವೃತ್ತಿ ಆದರು ಮತ್ತೆ ಕೆಲವರು ಆಟಕ್ಕೆ ಮರಳಿದರು, ಆದರೆ ಕ್ರಿಕೆಟಿನ ಮೇಲೆ ವಿಶ್ವಾಸ ಪೂರ್ತಿಯಾಗಿ ಮರಳುವುದು ಇನ್ನೂ ಸಾಧ್ಯ ಆಗಲಿಲ್ಲ. ಒಂದು ನಂಬಲಸಾಧ್ಯವಾದ ಸೋಲಿನ ಮ್ಯಾಚ್ ಕಂಡರೆ ಕೆಲವು ಪ್ರೇಕ್ಷಕರಿಗೆ ಈಗಲೂ ಇದು ಬಹುಷ: ಮೊದಲೇ ನಿಗದಿಯಾದ ಫಲಿತಾಂಶ ಇರಬೇಕು ಎಂದೆನಿಸುವುದಿದೆ. ಎರಡು ದಶಕಗಳ ಹಿಂದೆ ವಿಶ್ವಾಸರ್ಹತೆಯನ್ನು ಕಳೆದುಕೊಂಡ ಕ್ರಿಕೆಟ್ ಉದ್ಯಮವಾಗಿ ಬೆಳೆಯುತ್ತಾ, ರೋಚಕತೆಯನ್ನು ನೀಡುತ್ತಾ ಸತ್ವವನ್ನೂ ಕಲಾತ್ಮಕತೆಯನ್ನೂ ಕಳೆದುಕೊಳ್ಳುತ್ತಿದೆ. ಕ್ರಿಕೆಟಿನ ಸೋಲಿನ ಆರಂಭ ಮ್ಯಾಚ್ ಫಿಕ್ಸಿಂಗ್ ದಿನಗಳಿಂದಲೇ ಶುರು ಆಗಿರಬೇಕು. ಅಂತಹ ಘಟನೆಗಳು ನಡೆದಾಗಲೆಲ್ಲ ದುಃಖಿಗಳಾದ, ಕ್ರಿಕೆಟಿನ ಬದಲಾಗುತ್ತಿರುವ ಸ್ವರೂಪದ ಬಗ್ಗೆ ವಿಷಾದಿಸುವ ಕ್ರಿಕೆಟಿನ ಅಮರ ಪ್ರೇಮಿಗಳು ಹಲವರು. ಮತ್ತೆ ಮತ್ತೆ ಹೃದಯ ಒಡೆಯುವ ಕ್ರಿಕೆಟ್ ಅನ್ನು ಎಷ್ಟು ಹಚ್ಚಿಕೊಳ್ಳಬೇಕು ಎನ್ನುವ ಜಿಜ್ಞಾಸೆ ವೈಚಾರಿಕವೊ ಆಧ್ಯಾತ್ಮಿಕವೊ ಲೌಕಿಕವೊ ಎಂದು ನಿರ್ಧರಿಸುವುದು ಕ್ರಿಕೆಟಿನ ಪಂದ್ಯವೊಂದರಲ್ಲಿ ಸೋಲು-ಗೆಲುವನ್ನು ಊಹಿಸಿದಷ್ಟು ಕಠಿಣ ಎಂದು ಕ್ರಿಕೆಟಿನ ಹಳೆ ಪ್ರೇಮಿಗಳು ಹೇಳುತ್ತಾರೆ..

ಕ್ರಿಕೆಟ್ ಅನ್ನು ಎಷ್ಟು ಆಸಕ್ತಿಯಿಂದ ಹಿಂಬಾಲಿಸಬೇಕು ಎಷ್ಟು ಪ್ರೀತಿಸಬೇಕು ಎನ್ನುವುದು ಕ್ರಿಕೆಟ್ ಪ್ರೇಕ್ಷಕರನ್ನು ಕಾಲ ಕಾಲಕ್ಕೆ ಕಾಡಿದ ಪ್ರಶ್ನೆಯೇ. ತಂಡವೊಂದು ಕಳಪೆ ಪ್ರದರ್ಶನ ನೀಡಿದಾಗ ಆಯಾ ತಂಡವನ್ನು ನೆಚ್ಚಿಕೊಂಡ ಪ್ರೇಮಿಗಳಲ್ಲಿ ಇನ್ನೂ ಇಂತಹ ಕ್ರಿಕೆಟನ್ನು ತಂಡವನ್ನು ತಾನು ಬೆಂಬಲಿಸಬೇಕೇ, ಕ್ರಿಕೆಟ್ ನೋಡಬೇಕೇ ಎನ್ನುವ ಪ್ರಶ್ನೆಗಳು ಮೂಡುತ್ತಿರುತ್ತವೆ. ಅದೇ ತಂಡ ಪ್ರತಿಷ್ಠಿತ ಪಂದ್ಯವನ್ನು ರೋಚಕವಾಗಿ ಗೆದ್ದಾಗ ಬದುಕಿದರೂ ಸತ್ತರೂ ಕ್ರಿಕೆಟ್ ಅಭಿಮಾನಿಯಾಗಿಯೇ ಎಂದು ಅನಿಸುವುದೂ ಇದೆ. ದೂರ ನಿಂತು ಕಡಿಮೆ ಪ್ರೀತಿಸುವೆನೆಂದರೆ ಮನಸಿಗೆ ಮುದ ಸಿಗುವುದಿಲ್ಲ ಹೆಚ್ಚು ಪ್ರೇಮಿಸಿದರೆ ತನ್ನ ಪ್ರವಾಹದಲ್ಲಿ ಸೆಳೆದೊಯ್ದು ಅನಿಶ್ಚಿತ ಅನಿರೀಕ್ಷಿತ ಫಲಿತಾಂಶಗಳನ್ನು ಕೊಡುತ್ತ ಹೃದಯ ಒಡೆಯುವುದು ತಪ್ಪುವುದಿಲ್ಲ. ಕ್ರಿಕೆಟನ್ನು ಎಷ್ಟು ಹಚ್ಚಿಕೊಳ್ಳಬೇಕು ಯಾವಾಗ ಮೋಹಿಸಬೇಕು ಯಾವಾಗ ವಿರಕ್ತಿ ಹೊಂದಬೇಕು ಎನ್ನುವುದು ಕ್ರಿಕೆಟ್ ಎನ್ನುವ ಕ್ರೀಡೆ ಹುಟ್ಟಿದ ಲಾಗಾಯ್ತಿನಿಂದ ಮನಸ್ಸನ್ನು ಕೊರೆಯುವ ಕೀಟವೇ.

ಯಾವ ವಿಷಯದಲ್ಲಿ ಅಪಾರ ಹಣ ಮಾಡಬಹುದೋ ಅದು ಕ್ರೀಡೆಯೋ ಕಲೆಯೋ ಅಥವಾ ಇನ್ನೇನೋ ಅದನ್ನು ವ್ಯಾಪಾರವಾಗಿಸಿ ಅದರಿಂದ ವರ್ಷದಿಂದ ಹೆಚ್ಚು ಹೆಚ್ಚು ಹಣ ಉತ್ಪತ್ತಿ ಮಾಡುವುದು “ಈ ನವೀನ ಯುಗದ ಜಗದ ಕೇತನ”. ಯುರೋಪಿನಲ್ಲಿ ಫುಟ್ಬಾಲ್ ಹೇಗೆ ಅತ್ಯಂತ ವ್ಯಾವಹಾರಿಕ ಹಾದಿಯಲ್ಲಿ ಸಾಗಿದೆಯೋ ಕ್ರಿಕೆಟ್ ಕೂಡ ಅದೇ ಹೆಜ್ಜೆಯನ್ನು ಅನುಸರಿಸುತ್ತಿದೆ.

ಕ್ರಿಕೆಟ್ ನಲ್ಲಿ ಪ್ರೇಕ್ಷಕರ ಎದೆಯೊಡೆಯುವ ಘಟನೆಗಳು ಹಿಂದೆ ಕೂಡ ಬಹಳ ಆಗಿವೆ. ೧೯೪೮ರಲ್ಲಿ ಡಾನ್ ಬ್ರಾಡ್ಮನ್ ತನ್ನ ಕೊನೆಯ ಇನ್ನಿಂಗ್ಸ್ ಅಲ್ಲಿ ಸೊನ್ನೆಗೆ ಔಟ್ ಆಗಿ ಸುಲಭವಾಗಿ ದಕ್ಕಬಹುದಾಗಿದ್ದ ೧೦೦ ರನ್ ಸರಾಸರಿಯ ಮಹಾನ್ ದಾಖಲೆ ಕೂದಲೆಳೆಯಲ್ಲಿ ಕೈತಪ್ಪಿದಾಗ ಅಂದಿನ ಕ್ರಿಕೆಟ್ ಪ್ರೇಮಿಗಳಿಗೆ ಆಘಾತವಾಗಿತ್ತು. ೧೯೮೩ರಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ವಿಶ್ವ ಕಪ್ ಅನ್ನು ಭಾರತಕ್ಕೆ ಒಪ್ಪಿಸಿದಾಗ ವೆಸ್ಟ್ ಇಂಡೀಸ್ ಪ್ರೇಕ್ಷಕರು ಕ್ರಿಕೆಟಿನ ಬಗ್ಗೆ ಜಿಗುಪ್ಸೆ ಹೊಂದಿದ್ದರು. ಇಂಗ್ಲೆಂಡ್ ತಂಡದ ಅಭಿಮಾನಿಗಳಿಗೆ ಪ್ರತಿ ವಿಶ್ವ ಕಪ್ ಕೂಡ ನಿರಾಸೆಯನ್ನೇ ನೀಡುತ್ತಾ ಬಂದಿದೆ . ೧೯೮೬ರ ಏಷ್ಯಾ ಕಪ್ ನಲ್ಲಿ ಮಿಯಾಂದಾದ್ ಚೇತನ್ ಶರ್ಮ ಕೊನೆಯ ಎಸೆತಕ್ಕೆ ಸಿಕ್ಸರ್ ಬಾರಿಸಿ ಪಾಕಿಸ್ತಾನಕ್ಕೆ ಗೆಲುವು ತಂದಿತ್ತಾಗ ಕಣ್ಣೀರು ಹಾಕಿದ ವೀಕ್ಷಕರಿದ್ದರು. ಸಚಿನ್ ತೆಂಡೂಲ್ಕರ್ ನಿವೃತ್ತಿಯ ನಂತರ ಖಿನ್ನರಾಗಿ ಕ್ರಿಕೆಟ್ ಸುದ್ದಿಗಳನ್ನು ಕೇಳುವುದನ್ನೇ ಬಿಟ್ಟವರಿದ್ದಾರೆ. ಯಾವ ತಂಡವೂ ಗೆಲ್ಲಬಹುದಾದ ಯಾರೂ ಸೋಲಬಹುದಾದ ಸಾಧ್ಯತೆಯ ಕ್ರಿಕೆಟ್ ಆಟದಲ್ಲಿ ನಿರಾಶೆಗಳು ಭ್ರಮನಿರಸನಗಳೇ ತುಂಬಿದ್ದರೂ ಕ್ರೀಡೆಯ ಮೌಲ್ಯ ಆ ದಿನಗಳಲ್ಲಿ ಕುಸಿದಿರಲಿಲ್ಲ; ಇದೀಗ ಏರುತ್ತಿರುವುದು ಆಟಗಾರರ, ಬಂಡವಾಳ ಹೂಡಿದವರ ಆಸ್ತಿಯ ಮೌಲ್ಯ ಮಾತ್ರ.

ತಮ್ಮ ನೆಚ್ಚಿನ ಆಟಗಾರ ನಿರೀಕ್ಷೆಯ ಪ್ರದರ್ಶನ ನೀಡದಿದ್ದರೂ ತಮ್ಮ ಮೆಚ್ಚುಗೆಯ ತಂಡ ಸೋತರೂ ಅದೊಂದು ಸ್ಪರ್ಧೆಯೊಳಗಿನ ಪರಿಣಾಮವೋ ಫಲಿತಾಂಶವೊ ಆಗಿರುತ್ತಿತ್ತು. ಒಂದು ವರ್ಷ ಉಂಡ ಸೋಲಿನ ಕಹಿಯ ಮುಯ್ಯಿ ಇನ್ನೊಂದೋ ಎರಡೋ ವರ್ಷ ಬಿಟ್ಟು ತೀರಿಸಿ ತನ್ನ ಕಟ್ಟಾ ಅಭಿಮಾನಿಗಳಿಗೆ ಸಿಹಿಯುಣಿಸಿದ ವೃತ್ತಾಂತಗಳೂ ಇದ್ದವು. ಈಗ ಎಷ್ಟು ಗೆದ್ದರೂ ಸೋತರೂ ಆಡಲು ಮತ್ತಷ್ಟು ಪಂದ್ಯಗಳು ಕಾಯುತ್ತಿರುತ್ತವೆ. ಪ್ರತಿ ದಿನವೂ ಜಗತ್ತಿನ ಯಾವುದೊ ಭಾಗದಲ್ಲಿ ಮ್ಯಾಚುಗಳು ನಡೆಯುತ್ತಿರುತ್ತವೆ. ಪ್ರತಿ ದಿನವೂ ಒಂದೋ ಆಡುವ ಅಥವಾ ಅಭ್ಯಾಸದಲ್ಲಿ ನಿರತವಾಗಿರುವ ಆಟಗಾರರು ಇನ್ನೂ ಕ್ರಿಕೆಟ್ ಅನ್ನು ಆಟವಾಗಿ ಪರಿಗಣಿಸುತ್ತಾರೋ ಅಥವಾ ಏಕತಾನತೆಯ ಕೆಲಸ ಎಂದು ಸ್ವೀಕರಿಸುತ್ತಾರೋ ತಿಳಿದಿಲ್ಲ. ಆಟದಿಂದ ಬಿಡುವು ಪಡೆಯುವುದೇ ಕಷ್ಟ ಆಗಿ ತಂಡದ ನಾಯಕನಿಗೆ ವಿರಾಮ ಕೊಡಲು ಒಂದು ಮುಖ್ಯ ಟೂರ್ನಮೆಂಟ್ ಆಡಿಸದೆ ರಜೆ ನೀಡಬೇಕಾದ ಪರಿಸ್ಥಿತಿ ಈಗ ಇದೆ. ಕ್ರಿಕೆಟಿನ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ ದೇಶಗಳಲ್ಲಿ ಅವರವರ ಅಳತೆಯಲ್ಲಿ ಕ್ರಿಕೆಟ್ ತೀವ್ರ ಬದಲಾವಣೆಯನ್ನು ಕಾಣುತ್ತಿದೆ. ಭಾರತ, ಕ್ರಿಕೆಟಿನ ವ್ಯಾವಹಾರಿಕ ರಾಜಧಾನಿಯಾಗಿ ಬದಲಾಗಿದೆ, ಜಗತ್ತಿಗೆ ಅತ್ಯಂತ ಪ್ರತಿಭಾನ್ವಿತ ಕ್ರಿಕೆಟಿಗರನ್ನು ನೀಡಿದ ಪಾಕಿಸ್ತಾನ ಮ್ಯಾಚ್ ಫಿಕ್ಸಿಂಗ್, ಮಂಡಳಿಯ ಅವ್ಯವಹಾರಗಳಲ್ಲಿ ಇನ್ನೂ ನಲುಗುತ್ತಿದೆ.

ದಕ್ಷಿಣ ಏಷ್ಯಾ ಎಂದರೆ ಕ್ರಿಕೆಟ್ ಸನ್ನಿಯ ಫಲವತ್ತಾದ ಭೂಮಿ. ಬಂಡವಾಳ, ಲಾಭ, ನಷ್ಟದ ಈಗಿನ ಕ್ರಿಕೆಟ್ ವ್ಯವಹಾರಕ್ಕೆ ಹಣ ಬರುವುದು ಈ ದೇಶಗಳಿಂದಲೇ. ಹೆಚ್ಚಿನ ಭಾರತ ಪಾಕಿಸ್ತಾನ ಶ್ರೀಲಂಕಾ ಬಾಂಗ್ಲಾದೇಶೀಯರು ಎಲ್ಲಿದ್ದರೂ ಹೇಗಿದ್ದರೂ ಕ್ರಿಕೆಟನ್ನು ತೀವ್ರವಾಗಿ ಹಚ್ಚಿಕೊಂಡವರು. ಮತ್ತೆ ಕೆಲವರು ಬದುಕಿನ ಬಹುಕಾಲ ಕ್ರಿಕೆಟನ್ನು ಆರಾಧಿಸುತ್ತ ಯಾವುದೊ ಗಳಿಗೆಯಲ್ಲಿ ಕಡುನೊಂದು ಇನ್ನು ನೋಡೇನು ಎಂದು ಕ್ರಿಕೆಟ್ ಮೋಹ ತ್ಯಜಿಸಿದವರೂ ಸಿಗಬಹುದು. ಇನ್ನು ಕೆಲವರು ಕ್ರಿಕೆಟನ್ನು ಇನ್ನು ಬಿಟ್ಟೆ ಎನ್ನುತ್ತಾ ಮುಂದಿನ ಪಂದ್ಯದ ದಿನ ಇದೊಂದು ಮ್ಯಾಚ್ ನೋಡಿ ಬಿಡುವೆ ಎನ್ನುವವರು. ಕ್ರಿಕೆಟನ್ನು ಏನೂ ತಿಳಿಯದವರಿಗೆ ಅದೊಂದು ಮೂರ್ಖರ ಕ್ರೀಡೆ, ತಿಳಿದು ಇಳಿದವರಿಗೆ ಅದೊಂದು ವ್ಯಸನ, ಮಾಯೆ. ಆಧ್ಯಾತ್ಮ ಚಿಂತಕರು ಸಾಧು ಸಂತರು ಅನಾದಿ ಕಾಲದಿಂದಲೂ ಹೆಣ್ಣು ಹೊನ್ನು ಮಣ್ಣಿನ ಮೋಹ ಪ್ರೇಮ ಕಾಮನೆ ವಿರಕ್ತಿಗಳ ಬಗ್ಗೆ ಹೇಳಿದ್ದಾರೆ, ಮುಂದೊಂದು ದಿನ ಆ ಸಾಲಿಗೆ ಕ್ರಿಕೆಟ್ ಕೂಡ ಸೇರಿಸಲ್ಪಟ್ಟೀತು. ಕ್ರಿಕೆಟ್ ಅನ್ನು ಮನಸಿನಿಂದ ಹೊಡೆದೋಡಿಸುವ ಬಗ್ಗೆ ದಾರಿ ಹೊಳಹುಗಳು ಸಿಕ್ಕೀತು. ಈ ನಡುವೆ…. ಈಗತಾನೇ ಬಂದ, ಇತ್ತೀಚಿನ ವರದಿಯ ಪ್ರಕಾರ … ಕ್ರಿಕೆಟ್ ಸೋಲುತ್ತಿದೆ.