ಆಚಾರಿಯ ಜೇಬನ್ನ ಹಣ ಅಷ್ಟೊಂದು ತುಂಬಿಕೊಳ್ಳುತ್ತಿರುವುದು ಹೇಗೆ ಎಂದು ರುದ್ರಯ್ಯ ತನ್ನ ಶರ್ಟ್ ಜೇಬಿನಲ್ಲಿರುವ ಚಿಲ್ಲರೆ ತಡಕುವಾಗ ಕೇಳಿಕೊಂಡ. ಅರಿಶಿನದ ಹಾಲು ವರ್ಕ್ ಆಗದಿದ್ದರೂ ರಮ್ ಬೆಳಗ್ಗೆವರೆಗೂ ಕೈ ಕೊಡುವುದಿಲ್ಲ ಅನಿಸಿ ದುಡ್ಡಿನ ಲೆಕ್ಕಾಚಾರ ಹಾಕುತ್ತಿದ್ದ ವೇಳೆ ಆಚಾರಿಯ ಉಬ್ಬಿದ ಜೇಬು ಮತ್ತೆ ನೆನಪಾಗಿತ್ತು. ಮಗನಿಗೆ ಗೊತ್ತಾಗದಂತೆ ಚೂರುಪಾರು ಉಳಿಸಿ ಬ್ಯಾಂಕಲ್ಲಿ ಇಟ್ಟಿರುವ ಹಣ ತೆಗೆದರೆ ಅದು ಹೇಗೆ ಖರ್ಚಾಗುತ್ತದೆ ಎಂಬುದೇ ತಿಳಿಯುವುದಿಲ್ಲ ಎಂಬುದನ್ನು ಕಂಡುಕೊಂಡಿದ್ದ ರುದ್ರಯ್ಯ ತನ್ನ ಬಳಿ ಇದ್ದುದ್ದರಲ್ಲೇ ಎಲ್ಲಕ್ಕೂ ಹೊಂದಿಸುತ್ತಿದ್ದ. ಮಗನಿಗೆ ಕೆಲಸ ಸಿಕ್ಕರೆ ಮನೆ ಮತ್ತೆ ಯಥಾಸ್ಥಿತಿಗೆ ಬರುತ್ತದೆ ಎನ್ನುವುದು ಅವನ ನಂಬಿಕೆಯಾಗಿತ್ತು.
ಎನ್.ಸಿ. ಮಹೇಶ್‌ ಬರೆದ ಈ ಭಾನುವಾರದ ಕಥೆ “ಅಥವಾ…”

 

‘ಉಸಿರಾಡಿದ್ರೆ ಎದೇಲಿ ಗೊರಗೊರ ಅಂತದೆ’ ಅಂದ ರುದ್ರಯ್ಯ. ಡಾಕ್ಟರು ಅವನ ಎದೆ ಮೇಲೆ ಶೆತಸ್ಕೋಪ್ ಇಟ್ಟಾಗ ತಾನೇ ಜೋರಾಗಿ ಉಸಿರು ಎಳೆದು ಬಿಟ್ಟು ಮಾಡಿದ. ‘ಜಾಸ್ತಿ ಥಂಡಿ ಆದಂಗಿದೆ.. ಏನು ರಾತ್ರಿ ಕಿಟಕಿ ತೆರೆದು ಅದರ ಪಕ್ಕ ಮಲಗ್ತೀರಾ?’ ಎಂದು ಡಾಕ್ಟರು ಕೇಳಿದಾಗ ‘ಇಲ್ಲ ಏಳಿ’ ಅಂತಂದು ಸುಮ್ಮನೆ ನಿಂತ. ಡಾಕ್ಟರು ಅವನ ಹೆಸರು, ವಯಸ್ಸು ಕೇಳಿ ಬರೆದುಕೊಂಡ ಮೇಲೆ ಪೆನ್ನು ಆಡಿಸುತ್ತ ಮತ್ತೆ ಅವನನ್ನೇ ನೋಡುತ್ತ ಏನೇನೊ ಗೀಚಿ ‘ತಗೊಂಡು ನೋಡಿ. ಕಡಿಮೆ ಆಗಲಿಲ್ಲ ಅಂದ್ರೆ ಮತ್ತೆ ಬನ್ನಿ. ಆಮೇಲೆ ಟೆಸ್ಟ್ ಗಳಿಗೆ ಬರೆದುಕೊಡ್ತೀನಿ. ಥಂಡಿ ಹೆಚ್ಚಾದ್ರೆ ಸ್ಟ್ರೋಕ್ ಆಗ್ಬಹುದು’ ಅಂತಂದು ಚೀಟಿ ಹರಿದು ಕೊಟ್ಟರು.

ಕ್ಲಿನಿಕ್ ಪಕ್ಕದಲ್ಲೇ ಇದ್ದ ಮೆಡಿಕಲ್ ಶಾಪಿಗೆ ಬಂದ ರುದ್ರಯ್ಯ ಅಂಗಡೀಲಿ ಚೂರು ಬಿಡುವಾಗಿ ನಿಂತಿದ್ದ ಹುಡುಗನಿಗೆ ಚೀಟಿ ಕೊಟ್ಟು ‘ಎಷ್ಟಾಗತ್ತೆ ಮೊದಲು ಚೂರು ಲೆಕ್ಕ ಹಾಕಿ ಹೇಳಪ್ಪ’ ಅಂದ. ಶಾಪಿನ ಹುಡುಗ ಪೆನ್ನನ್ನ ಕಿವಿಗೆ ಸಿಕ್ಕಿಸಿಕೊಂಡು ರುದ್ರಯ್ಯ ಕೊಟ್ಟ ಚೀಟಿಯನ್ನ ಕೊಂಚ ಅಸಹನೆಯಿಂದ ಎಳೆದುಕೊಂಡು ಮನಸ್ಸಲ್ಲೇ ‘ಇವನಿಗೆ ಲೆಕ್ಕ ಬೇರೆ ಹೇಳ್ತಾರೆ’ ಅಂತ ಅಂದುಕೊಳ್ಳುತ್ತ ಅವನ ಕಡೆಗೆ ಒಮ್ಮೆ ಕೆಕ್ಕರಿಸಿ ಕ್ಯಾಲ್ಕುಲೇಟರ್ ಒತ್ತುತ್ತ ನಿಂತ. ತನ್ನ ಜೇಬಿನಲ್ಲಿ ಇನ್ನೂರೈವತ್ತೋ ಅರವತ್ತೋ ಇರಬಹುದು; ಡಾಕ್ಟರ್ ಫೀಸು ಎಂಬತ್ತು; ಮಾತ್ರೆಗಳನ್ನ ಇನ್ನೆಷ್ಟಕ್ಕೆ ಬರೆದುಕೊಟ್ಟಿದ್ದಾರೋ ಎಂದು ರುದ್ರಯ್ಯ ಯೋಚಿಸುವಾಗ ಡಾಕ್ಟರಿಗೆ ತನ್ನ ವಯಸ್ಸು ‘ಅರವತ್ತು ಮೀರಿರಬಹುದು’ ಅಂದದ್ದು ನೆನಪಿಗೆ ಬಂತು. ಜೀವ ಇನ್ನೆಷ್ಟು ಕಾಲ ತಡೆದಾತು ಅಂದುಕೊಳ್ಳುವಾಗ ಹುಡುಗ ಲೆಕ್ಕ ಮಾಡಿ ‘ಡಾಕ್ಟರ್ ಫೀಸೂ ಸೇರಿ ಇನ್ನೂರ ತೊಂಬತ್ತು’ ಅಂದ.

ರುದ್ರಯ್ಯ ಜೇಬಿಂದ ನೂರರ ಎರಡು ನೋಟನ್ನ ತೆಗೆದು ಹುಡುಗನಿಗೆ ತೋರಿಸಿ ‘ಇಷ್ಟಕ್ಕೆ ಬರಂಗೆ ಕಡ್ತ ಮಾಡ್ಕೊಡಪ್ಪ’ ಅಂದ. ಹುಡುಗ ತನ್ನ ಅಂಗಡಿ ಯಜಮಾನನ ಮುಖ ನೋಡಿ ತನ್ನಲ್ಲಿ ಉಕ್ಕುತ್ತಿದ್ದ ಕೋಪ ತಾಳಿಕೊಂಡು ಮಾತ್ರೆಯ ಶೀಟ್ ಗಳನ್ನ ಹುಡುಕಿ ತೆಗೆದು ಕತ್ತರಿಯಿಂದ ಕತ್ತರಿಸಲು ಶುರುಮಾಡಿ ಕವರೊಂದಕ್ಕೆ ಎಲ್ಲ ತುಂಬಿ ಜೊತೆಗೆ ಎರಡು ಸಣ್ಣ ಚಾಕಲೇಟ್ಗಳನ್ನ ಕೊಟ್ಟ. ರುದ್ರಯ್ಯ ಹುಬ್ಬೇರಿಸಿದಾಗ ‘ಚೇಂಜ್ ಇಲ್ಲ ಅದಕ್ಕೆ’ ಅಂದ.

ಹುಡುಗ ಕೊಟ್ಟದ್ದನ್ನ ಸುಮ್ಮನೆ ತೆಗೆದುಕೊಂಡು ಹೆಜ್ಜೆ ಕದಲಿಸುತ್ತಿದ್ದಾಗ ಅನಿಸಿತು- ಚಾಕಲೇಟ್ಗಳನ್ನ ತೆಗೆದುಕೊಂಡು ಈಗ ತಾನು ಮಾಡೋದೇನು? ತಾನೇ ಬಾಯಿಗೆ ಹಾಕಿಕೊಂಡು ಮಕ್ಕಳ ಹಾಗೆ ಚಪ್ಪರಿಸೋಣ ಅಂದರೆ ಅದು ಅವನಿಗೆ ಇಷ್ಟವಿಲ್ಲ. ಮನಸ್ಸಿನಲ್ಲಿ ಕಹಿ ಇದ್ದಾಗ ನಾಲಗೆಗೆ ಸಿಹಿ ತಾಕಿಸುವುದು ಅವನಿಗೆ ಒಪ್ಪದ ಕೆಲಸವಾಗಿತ್ತು. ಮನೆಗೆ ತೆಗೆದುಕೊಂಡು ಹೋಗೋಣ ಅಂದರೆ ಸೊಸೆ ಮಾಣಿಕ್ಯ ‘ಮಗುವಾಗದ ತನ್ನನ್ನ ಹಂಗಿಸಲಿಕ್ಕೆ ಮಾವ ಚಾಕಲೇಟ್ಗಳನ್ನ ತಂದಿದ್ದಾರೆ’ ಅಂದುಕೊಳ್ಳಬಹುದೆಂಬ ಅನುಮಾನ ಕಾಡಿತು. ಆಮೇಲೆ ಇದು ಮಗ ರಾಜನ ಕಿವಿಗೆ ಬಿದ್ದರೆ ಆ ರಾತ್ರಿ ಮಂಚ ಕಿರುಗುಡುವ ಜೋರು ಸದ್ದಿನ ಜೊತೆಗೆ ಮಾಣಿಕ್ಯ ನರಳುವುದನ್ನೂ ಕೇಳಿಸಿಕೊಳ್ಳುತ್ತ ಮಲಗಬೇಕಾಗುತ್ತದೆ ಎನ್ನುವುದು ರುದ್ರಯ್ಯನ ಅರಿವಿಗೆ ಬಂತು. ಹೋದರೆ ಹೋಗಲಿ ಬೀದಿ ಮಕ್ಕಳಿಗೆ ಕೊಟ್ಟುಬಿಡೋಣ ಎಂದರೆ ಬೆಳೆದಿರುವ ತನ್ನ ಬಿಳಿಗಡ್ಡ, ಕೊಳಕು ಮೈ ಕಂಡು ತನ್ನನ್ನ ಯಾರಾದರು ಮಕ್ಕಳ ಕಳ್ಳನೆಂದು ತಿಳಿದರೆ ಎಂದು ಭಯವಾಯಿತು. ಅತ್ಲಾಗಿ ಸುಮ್ಮನೆ ರಸ್ತೆಗೆ ಎಸೆದುಬಿಡೋಣ ಎಂದರೆ ಈ ತಾನು ವಯಸ್ಸಲ್ಲೂ ರೂಪಾಯಿ ರೂಪಾಯಿ ದುಡಿದು ಪಡುತ್ತಿರುವ ಕಷ್ಟದ ಚಿತ್ರ ಕಣ್ಮುಂದೆ ಬಂತು. ಚಾಕಲೇಟ್ಗಳನ್ನ ಸುಮ್ಮನೆ ಶರ್ಟಿನ ಜೇಬಿಗೆ ಹಾಕಿಕೊಂಡು ನಡೆದ.

ಮಗ ರಾಜ ಫ್ಯಾಕ್ಟರಿಯೊಂದರಲ್ಲಿ ಮೊದಲು ಗೂಡ್ಸ್ ಸಪ್ಲೈ ಮಾಡುವ ವ್ಯಾನ್ ಡ್ರೈವರ್ ಆಗಿದ್ದ. ಅಲ್ಲಿ ಇವನು ಏನೊ ಮೋಸ ಮಾಡಿದ್ದಕ್ಕೆ ಕೆಲಸದಿಂದ ತೆಗೆದಿದ್ದರು. ಅನಂತರ ಹೋದ ಕಡೆಯಲ್ಲೆಲ್ಲ ಕೆಲಸ ಕಳೆದುಕೊಂಡು ಬರುತ್ತಿದ್ದ ರಾಜನಿಗೆ ಮದುವೆಯಾಗಿ ಮೂರು ವರ್ಷ ಕಳೆದಿತ್ತು. ಇನ್ನೂ ಒಂದು ಕುಡಿ ಕೊನರಿರಲಿಲ್ಲವಾದ್ದರಿಂದ ಮಾಣಿಕ್ಯ ಮನೆಯವರು ‘ಹಾಸ್ಪೆಟ್ಲಿಗೆ ತೋರಿಸೋಣ’ ಅಂದಾಗ ರಾಜ ಕೆರಳಿದ್ದ.

ಉಸಿರುಕಟ್ಟಿಸುವಂತಿದ್ದ ಪುಟ್ಟ ಮನೆಯಲ್ಲಿ ಇದ್ದದ್ದು ಗೂಡಿನಂತಹ ಒಂದೇ ಬೆಡ್ ರೂಮು. ವಯಸ್ಸಾಗಿ ನಿದ್ರೆ ಸರಿಯಾಗಿ ಬರದೆ ಹಾಲಲ್ಲಿ ಮಲಗಿ ಹೊರಳಾಡುತ್ತಿದ್ದ ರುದ್ರಯ್ಯನ ಕಿವಿಗಳು ಇನ್ನೂ ಅಷ್ಟು ಮಂದವಾಗಿರಲಿಲ್ಲ. ರಾತ್ರಿ ಹೊತ್ತು ಮಗ ಸೊಸೆ ಬಾಗಿಲಿಕ್ಕಿಕೊಂಡ ರೂಮಿನಿಂದ ಒತ್ತಿಹಿಡಿದ ಸುಖದ ನರಳಿಕೆಯ ಸದ್ದು ಬೇಡವೆಂದರೂ ರುದ್ರ್ಯಯನ ಕಿವಿಗೆ ಬೀಳುತ್ತಿತ್ತು. ರಾತ್ರಿಯಾದರೆ ಇದ್ಯಾತರ ನರಕ ತನಗೆ ಎಂದುಕೊಳ್ಳುತ್ತಿದ್ದ ರುದ್ರಯ್ಯನಿಗೆ ರೂಮಿನೊಳಗಿನ ಸದ್ದು ಕ್ರಮೇಣ ಕಡಿಮೆ ಆಗಬಹುದು ಅನಿಸಿತ್ತು. ಹಾಸ್ಪೆಟಲ್ಗೆ ತಾನು ಬರೋದಿಲ್ಲ ಅಂತ ರಾಜ ಮಾಣಿಕ್ಯ ಮೇಲೆ ಒಮ್ಮೆ ಕಿಡಿ ಕಾರಿದಾಗ ಆಕೆ ಅತ್ತುಕೊಂಡು ತನ್ನ ಮನೆಯವರಿಗೆ ಈ ಬಗ್ಗೆ ಹೇಳಿದಾಗ ಅವರು ‘ಹಂಗಾರೆ ಅವನಲ್ಲೇ ಏನೋ ಕೊರತೆ ಇರಬೇಕು’ ಅಂದಿದ್ದರು. ಈ ಸುದ್ದಿ ರಾಜನ ಕಿವಿಗೆ ಮುಟ್ಟಿದ ದಿನದಿಂದ ಅವನು ಎಗ್ಗಿಲ್ಲದೆ ಮಂಚ ಜೋರಾಗಿ ಕಿರುಗುಟ್ಟಿಸಲು ಶುರುಮಾಡಿದ್ದ. ಕೆಲಸ ಸಿಗದ ಕೋಪ ಹಾಗು ತಾನು ತಂದೆಯಾಗದ್ದಕ್ಕೆ ಕೋಪ ಎರಡಕ್ಕೂ ರಾತ್ರಿ ಭುಸುಗುಟ್ಟಿ ಏರಿಳಿಯುತ್ತಿದ್ದ.

ಆ ಸದ್ದು ಮತ್ತು ಅದು ಕಣ್ಣಮುಂದೆ ತರುವ ಅಸಹ್ಯದ ದೃಶ್ಯಗಳನ್ನೆಲ್ಲ ನೆನೆಸಿಕೊಂಡ ರುದ್ರಯ್ಯ ಮಗನಿಗೆ ಒಂದು ದಿನ ‘ಒಳಗೆ ಸೆಖೆ ಕಣೊ’ ಎಂದು ಸಬೂಬು ಹೇಳಿ ಅಂದಿನಿಂದ ಹೊರಗೆ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದ. ಆರಂಭದಲ್ಲಿ ಕೊಂಚ ಹಿತ ಅನ್ನಿಸಿತ್ತಾದರೂ ಬೆಳಗಾಗುವಷ್ಟರಲ್ಲಿ ಚಳಿಗೆ ಮೈ ನಡುಗಲು ಆರಂಭಿಸಿತ್ತು. ರಾತ್ರಿ ಬೀಡಿ ಸೇದಿ ಮಲಗುವ ಮೊದಲು ಒಂದು ಕ್ವಾಟ್ರು ರಮ್ಮು ಗಂಟಲಿಗೆ ಇಳಿಸಿಕೊಂಡರೆ ಎಲ್ಲ ಸಲೀಸು ಎಂದು ಹಿಂದೆ ತಾನು ಬಿಟ್ಟುಬಿಟ್ಟಿದ್ದ ಅಭ್ಯಾಸವನ್ನು ರುದ್ರಯ್ಯ ಮತ್ತೆ ಶುರುಮಾಡಿಕೊಂಡಿದ್ದ. ಆದರೂ ಥಂಡಿಯಾಗಿ ಎದೆಯಲ್ಲಿ ಜೋರು ಗೊರಗೊರ ಸದ್ದು ಶುರುವಾಗಿತ್ತು. ಜೊತೆಗೆ ಬೇರೆ ಯೋಚನೆ ಕೂಡ ಬಂತು. ಬೇಸಿಗೆ ಕಾಲದಲ್ಲಿ ಸರಿ; ಮಳೆಗಾಲದಲ್ಲಿ ಮತ್ತೆ ಒಳಗೇ ಮಲಗಬೇಕಲ್ಲ!

ತನ್ನನ್ನ ಕಿತ್ತು ತಿನ್ನುತ್ತಿರುವ ಯೋಚನೆಗಳ ನಡುವೆ ಬರಬರುತ್ತ ಉಸಿರಾಡಲೂ ಕಷ್ಟವಾದಾಗ ರುದ್ರಯ್ಯ ಅನಿವಾರ್ಯವಾಗಿ ಡಾಕ್ಟರ್ ಬಳಿಗೆ ಹೋಗಿದ್ದ. ಮನೆಗೆ ಹೋದ ಮೇಲೆ ಮಾಣಿಕ್ಯ ತನ್ನನ್ನ ಪ್ರಶ್ನಿಸುವ ಮೊದಲೇ ‘ಅಂಥದ್ದೇನಿಲ್ಲ, ಚೂರು ಔಷಧ ತೆಗೆದುಕೊಂಡರೆ ಸರಿಹೋಗುತ್ತೆ ಅಂದಿದ್ದಾರೆ’ ಅಂತಂದು ಮಾತ್ರೆ ಸಿರಪ್ಪುಗಳಿದ್ದ ಕವರನ್ನ ಆಕೆಯ ಕೈಗೆ ಕೊಟ್ಟ.

‘ಸರಿ’ ಅಂತಂದುಕೊಂಡು ಮಾಣಿಕ್ಯ ಅದನ್ನ ತೆಗೆದುಕೊಂಡು ಅಡುಗೆ ಮನೆ ಸೇರಿಕೊಂಡ ಮೇಲೆ ಮತ್ತೆ ಸುತ್ತ ನೋಡಿ ತನ್ನ ಶರ್ಟ್ ಜೇಬಿನಲ್ಲಿದ್ದ ಎರಡು ಚಾಕಲೇಟ್ಗಳನ್ನ ತೆಗೆದು ಸುತ್ತ ನೋಡಿ ಏನೂ ಸರಿಕಾಣದೆ ನಂತರ ಕತ್ತು ಮೇಲೆತ್ತಿದ.

ಗೋಡೆಗೆ ಪಟ್ಟಿ ಹೊಡೆದು ದಾರ ಕಟ್ಟಿ ನಿಲ್ಲಿಸಿದ್ದ ಸಾಲು ದೇವರ ಫೋಟೊಗಳು ಕಂಡವು. ಅವುಗಳ ಹಿಂದಕ್ಕೆ ಚಾಲೊಲೇಟ್ಗಳನ್ನ ಎಸೆಯುತ್ತ ‘ಸಿಹಿ ಒಪ್ಪಿಸ್ಕೊ ತಂದೆ’ ಎಂದು ಮನಸ್ಸಿನಲ್ಲೇ ಅಂದುಕೊಂಡ. ಅದರಲ್ಲಿ ದೇವರುಗಳ ಬಗೆಗೆ ಕೊಂಚ ವ್ಯಂಗ್ಯವಿದ್ದದ್ದು ಅವನಿಗೇ ಗೊತ್ತಾಯಿತು.

ಮತ್ತೆ ಅಡುಗೆ ಮನೆಯಿಂದ ಹೊರಬಂದ ಮಾಣಿಕ್ಯಳನ್ನ ನೋಡಿ ‘ರಾತ್ರಿ ನಾನು ಮಲಗೋಕೆ ಮುಂಚೆ ಹಾಲಿಗೆ ಚೂರು ಅರಿಶಿನ ಹಾಕ್ಕೊಡಮ್ಮ’ ಅಂತಂದು ‘ ಡಾಕ್ಟರ್ ಹೇಳಿದ್ದಾರೆ’ ಅಂತ ಸೇರಿಸಿದ. ಯಾವ ಮಾತ್ರೇನೇ ತಗೊಳ್ಳಲಿ.. ಅದು ತಗೊಂಡಾಗ ಸರಿ ಇರುತ್ತೆ. ಆಮೇಲೆ ಮತ್ತೆ ಅದೇ ಕಥೆ ಎನ್ನುವುದನ್ನು ತನ್ನ ಮಂಡಿನೋವಿನಿಂದ ಕಂಡುಕೊಂಡಿದ್ದವನಿಗೆ ಶೀತಕ್ಕೆಲ್ಲ ಅರಿಶಿನಾನೇ ಬೆಸ್ಟ್ ಅನಿಸಿತ್ತು.

ಟ್ರಾವಲಿಂಗ್ ಏಜೆನ್ಸಿ ಆಫೀಸೊಂದರಲ್ಲಿ ತುಂಬ ವರ್ಷ ಸೆಕ್ಯೂರಿಟಿ ಗಾರ್ಡ್ ಆಗಿ ದುಡಿದಿದ್ದ ರುದ್ರಯ್ಯ ಚೂರುಪಾರು ಕಾಸು ಕಂಡದ್ದು ಆ ದಿನಗಳಲ್ಲಿಯೇ. ಮನೆ ಪುಟ್ಟ ಗೂಡಿನಂತಿದ್ದರೂ ಅದು ಪಿತ್ರಾರ್ಜಿತ ಸ್ವತ್ತು. ಮಗ ರಾಜನಿಗೆ ಹೆಣ್ಣು ಕೊಟ್ಟದ್ದು ಆ ಮನೆ ನೋಡಿಯೇ. ಇಷ್ಟಾದ ಮೇಲೆ ರುದ್ರಯ್ಯನಿಗೆ ಕೊಂಚ ನಿರಾಳ ಅನಿಸಿತೇನೊ. ತನಗೆ ಇನ್ನು ಚೂರು ರೆಸ್ಟ್ ಬೇಕು ಎಂದು ಮನಸ್ಸಿಗೆ ಬಂದ ದಿನದಿಂದ ರುದ್ರಯ್ಯನ ವಯಸ್ಸು ದಿಢೀರನೆ ಹೆಚ್ಚುತ್ತ ಬೆನ್ನು ಬಾಗುತ್ತಿರುವಂತೆ ಕಂಡು ಎರಡೋ ಮೂರೋ ಸಲ ಅವನು ಆಫೀಸಿನಲ್ಲಿ ತೂಕಡಿಸುತ್ತಿರುವುದನ್ನ ಸಿಸಿ ಟಿವಿಯಲ್ಲಿ ಕಂಡುಕೊಂಡ ಮ್ಯಾನೇಜರು ನಯದ ಮಾತಾಡಿ ಕೆಲಸದಿಂದ ತೆಗೆದಿದ್ದರು.

ಮಗ ಹೇಗೂ ದುಡಿಯುತ್ತಾನೆ ಅಂದುಕೊಂಡಿದ್ದ ರುದ್ರಯ್ಯನಿಗೆ ತಾನು ತೂಕಡಿಸಿ ಕೆಲಸ ಕಳೆದುಕೊಂಡದ್ದು ಅಷ್ಟೊಂದು ಬಾಧಿಸಿರಲಿಲ್ಲ. ಆದರೆ ರಾಜ ಕೂಡ ತಾನು ಕೆಲಸಕ್ಕೆ ಸೇರಿದ ಕಡೆಯಲ್ಲೆಲ್ಲ ಕೆಟ್ಟ ಹೆಸರು ತೆಗೆದುಕೊಳ್ಳುತ್ತ ಬಲವಂತವಾಗಿ ದಬ್ಬಿಸಿಕೊಂಡು ಮನೆಗೆ ಬರುತ್ತ ಕುದಿಯಲು ಆರಂಭಿಸಿದಾಗ ರುದ್ರಯ್ಯನಿಗೆ ಚಿಂತೆ ಶುರುವಾಗಿತ್ತು. ಮಗು ಆಗುವ ಕಾಲಕ್ಕೆ ಆಗುತ್ತೆ ಎಂದು ಹೇಳುವ ಹಾಗೂ ಇರಲಿಲ್ಲ. ಮಾಣಿಕ್ಯಳ ಮನೆಯವರ ಅನುಮಾನಗಳು ರಾಜನನ್ನ ಕಂಗೆಡಿಸಿವೆ ಎಂಬುದನ್ನು ರುದ್ರಯ್ಯ ಕಂಡುಕೊಂಡಿದ್ದ.

ಬಡತನವೇನೂ ರುದ್ರಯ್ಯನಿಗೆ ಹೊಸದಲ್ಲ; ಮೊದಲಾಗಿದ್ದರೆ ಒಂದು ತುತ್ತು ಅನ್ನ ಹೊಂದಿಸಿಕೊಳ್ಳಲು ತಿಣುಕುತ್ತಿದ್ದಾಗಲೂ ಬೇಸರ ಅನಿಸುತ್ತಿರಲಿಲ್ಲ. ಆದರೆ ಮಾಣಿಕ್ಯ ಸೊಸೆಯಾಗಿ ಮನೆಗೆ ಬಂದ ಮೇಲೆ ಮನೆಗೊಂದು ಆತ್ಮಗೌರವವಿದೆ ಅನಿಸಿತ್ತು.

ಜೊತೆಗೆ ಈಗ ತಾನು ಅಪ್ಪನಾಗದ್ದಕ್ಕೆ ಕುದಿಯುತ್ತಿದ್ದ ರಾಜನಿಗೆ ಮನೆಯ ಜವಾಬ್ದಾರಿಯ ಬಗೆಗೆ ಪಾಠ ಹೇಳುವುದು ಅಷ್ಟು ಸೂಕ್ತ ಅಲ್ಲ ಅಂದುಕೊಂಡು ಮುಂಚಿನಿಂದ ತನಗೆ ಕೊಂಚ ಪರಿಚಯವಿದ್ದ ಅಕ್ಕಸಾಲಿ ವಿಶ್ವರೂಪಾಚಾರಿಯ ಚಿನ್ನಬೆಳ್ಳಿ ಅಂಗಡಿಯಲ್ಲಿ ಹಾಗೂಹೀಗೂ ತಾನೇ ಒಂದು ಕೆಲಸ ಗಿಟ್ಟಿಸಿಕೊಂಡಿದ್ದ. ಹೆಚ್ಚೇನಿಲ್ಲ, ವಿಶ್ವರೂಪಾಚಾರಿ ಹೇಳಿದ್ದನ್ನ ಬೆಂಕಿಗೆ ಹಾಕಿ ಕಾಯಿಸುವುದು, ತಿದಿ ಒತ್ತುವುದು, ಉಜ್ಜುವುದು, ಪಾಲಿಶ್ ಹಾಕುವುದು ಇತ್ಯಾದಿ ಸಣ್ಣಪುಟ್ಟ ಕೆಲಸ.

ತಾನು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿ ತನ್ನೊಂದಿಗೇ ವಯಸ್ಸು ಕುಂದಿಸಿಕೊಂಡಿದ್ದ ಹಲವರು ರುದ್ರಯ್ಯನಿಗೆ ಆ ಹೊತ್ತು ಒಂದು ಕಿವಿ ಮಾತು ಹೇಳಿದ್ದರು. ‘ಹೇಗೂ ಚಿನ್ನಬೆಳ್ಳಿ ಅಂಗಡೀಲೇ ಕೆಲಸ ಮಾಡ್ತಿದ್ಯ… ಆ ಆಚಾರಿ ಅಂಗಡೀಲಿ ಇಲ್ಲದಿದ್ದಾಗ ನೀನೂ ಚೂರು ಬೇರೆ ಕಡೆ ಕಣ್ಣಾಯ್ಸು… ಉಂಗ್ರ ಗಿಂಗ್ರ ಉಜ್ಜೋವಾಗ ಚೂರು ನಿನ್ನ ಕಿಸಿಗೇ ಬೀಳೋ ತರ ನೋಡ್ಕೊ..’ ಎಂದು ಸಲಹೆ ಕೊಡುತ್ತ ನಕ್ಕಿದ್ದರು.
ಇದನ್ನ ಕೇಳಿಸಿಕೊಂಡ ದಿನ ರುದ್ರಯ್ಯ ಕೆನ್ನೆ ತಟ್ಟಿಕೊಂಡಿದ್ದ. ಆದರೆ ಮಗ ರಾಜ ಕೆಲಸ ಕಳೆದುಕೊಂಡು ಹತಾಶನಾಗಿ ಬರಲು ಆರಂಭಿಸಿದಾಗ ಸ್ನೇಹಿತರು ಸೂಚಿಸಿದಂತೆ ಮಾಡಿದರೆ ತಪ್ಪೇನು ಎಂದು ಎರಡೋ ಮೂರೋ ಸಲ ಅನಿಸಿತ್ತು.

ವಿರೂಪಾಕ್ಷಾಚಾರಿಯೂ ಈಚೆಗೆ ಅಂಗಡಿಯಲ್ಲಿ ಕೂರುವುದು ಅಪರೂಪವಾಗಿತ್ತು. ‘ಗಿರಾಕಿಗಳು ಕಡಿಮೆ ಆಗಿದ್ದಾರೆ.. ಬಿಸ್ನೆಸ್ ಇಲ್ಲ.. ಬರೀ ಪಾಲಿಶ್ ಹಾಕ್ಕೊಂಡು ಜೀವನ ಮಾಡೋಕೆ ಆಗುತ್ತಾ ಅಂತ?’ ಒಮ್ಮೆ ರುದ್ರಯ್ಯನನ್ನೇ ಕೇಳಿದ್ದ.

ಆದರೂ ಆಚಾರಿ ಈಚೆಗೆ ಬೇರೆ ವ್ಯವಹಾರದ ಕಡೆಗೆ ಹೆಚ್ಚು ಗಮನಕೊಟ್ಟು ಅಂಗಡಿಯನ್ನ ಕೇವಲ ನಾಮಕಾವಸ್ಥೆ ರೀತಿಯಲ್ಲಿ ನಡೆಸುತ್ತಿದ್ದಂತೆ ಅನಿಸುತ್ತಿತ್ತು ರುದ್ರಯ್ಯನಿಗೆ. ಒಮ್ಮೆ ಅಂಗಡಿಗೆ ಪೋಲಿಸಿನವರೇ ಬಂದು ಆಚಾರಿಗೆ ‘ಇನ್ನೂ ಎಷ್ಟು ಮಡಗಿದ್ಯಾ ದೇವರ ಹಳೇ ವಿಗ್ರಹಗಳನ್ನ.. ನಿನ್ನ ಹತ್ರ ತುಂಬ ಡಿಮ್ಯಾಂಡಂತೆ..’ ಎಂದು ಕೇಳಿದಾಗ ಆಚಾರಿ ಕಿಂಚಿತ್ತೂ ಹೆದರಿಕೊಳ್ಳದೆ ಐನೂರರ ನೋಟುಗಳನ್ನು ಒಂದಷ್ಟು ಸರಸರ ಎಂದು ಎಣಿಸುತ್ತ ಕೊಟ್ಟು ನಕ್ಕು ಕೈಮುಗಿದದ್ದು ಇನ್ನೂ ಅವನ ನೆನಪಿನಲ್ಲೇ ಇತ್ತು. ಏನು ವ್ಯವಹಾರವೋ ಏನೊ ತನಗೆ ಮಾತ್ರ ತಿಂಗಳು ತಿಂಗಳಿಗೆ ಹೊಟ್ಟೆ ಬಟ್ಟೆಗಾಗುವಷ್ಟನ್ನ ಆಚಾರಿ ತಪ್ಪದೆ ಕೊಡುತ್ತಿದ್ದುದರಿಂದ ಏನೂ ಕೊರತೆ ಅನಿಸಿರಲಿಲ್ಲ.

ಮನೆಯಲ್ಲಿ ಮಗ ಸೊಸೆಯ ಸುಖದ ನರಳಿಕೆಯ ಸದ್ದು, ಕಿರುಗುಡುವ ಮಂಚದ ಕಿರುಕುಳ ಮತ್ತು ರಾತ್ರಿ ಹೊರಗೆ ಚಳಿಯಲ್ಲಿ ಮಲಗಬೇಕಾದ ಸ್ಥಿತಿ ಸೃಷ್ಟಿಯಾದಾಗ ಮಾತ್ರ ರುದ್ರಯ್ಯನಲ್ಲಿ’ ಲೀಸ್ಗಾದರೂ ಸರಿ.. ಕೊಂಚ ವಿಶಾಲವಾದ ಮನೇಲೇ ಇದ್ದುಬಿಡಬೇಕು’ ಎನಿಸಲು ಶುರುವಾಗಿತ್ತು.

ಅದೇ ಹೊತ್ತಿಗೆ ಎದೆಯಲ್ಲಿ ಗೊರಗೊರ ಸದ್ದು ಜೋರಾಗಿ ಡಾಕ್ಟ್ರು ಟೆಸ್ಟು ಗಿಸ್ಟು ಅಂತೆಲ್ಲ ಹೇಳಿದಾಗ ರುದ್ರಯ್ಯ ನಡುಗಿದ. ಆರೋಗ್ಯಕ್ಕಿಂತ ದೊಡ್ಡದು ಯಾವುದು ಅನಿಸಿ ಪೋನ್ ತೆಗೆದು ಆಚಾರಿಗೆ ಡಯಲ್ ಮಾಡಿ ‘ಸ್ವಾಮಿ ಹುಷಾರಿಲ್ಲ ಒಂದೆರಡು ದಿನ ಬಿಟ್ಟು ಬತ್ತೀನಿ’ ಅಂದ. ಆ ಕಡೆಯಿಂದ ಆಚಾರಿ ‘ಎರಡು ದಿನಾನಾ! ನಾನೂ ಬೇರೆ ಊರಿಗೆ ಕೆಲಸದ ಮೇಲೆ ಹೋಗೋದಿತ್ತು. ಅಂಗಡೀಲಿ ನನ್ನ ಮಗನನ್ನ ಕೂರಿಸಿ ಹೋಗೋಣ ಅಂದ್ಕೊಂಡಿದ್ದೆ. ಎಲ್ಲ ಉಸ್ತುವಾರಿ ನೀನೇ ನೋಡ್ಕೊಂಡಬಹುದಿತ್ತು.. ಮಗನೂ ಒಂದಿಷ್ಟು ಕೆಲಸ ಕಲ್ತಂಗೆ ಆಗ್ತಿತ್ತು. ಸರಿ ಬಿಡು ಮಗನೀಗೇ ಚೂರು ನೋಡ್ಕೊ ಅಂತೀನಿ’ ಅಂದ.

ರುದ್ರ್ಯಯ ಕಂಡಂತೆ ಆಚಾರಿ ಎಂದೂ ಅಂಗಡಿಯಲ್ಲಿ ದೇವರ ವಿಗ್ರಹಗಳನ್ನ ತಾನು ತಯಾರಿಸುವ ಬಗ್ಗೆ ಮಾತಾಡಿರಲಿಲ್ಲ. ಆದರೂ ಪೊಲಿಸಿನವರು ಬಂದು ವಿಚಾರಿಸಿದಾಗ ಹಣ ಕೊಟ್ಟು ಕಳಿಸಬೇಕಾದರೆ ಏನೊ ವ್ಯವಹಾರವಿರಬೇಕು ಎಂದು ಮಾತ್ರ ಅನಿಸಿತ್ತು.

ಆಚಾರಿಯ ಜೇಬನ್ನ ಹಣ ಅಷ್ಟೊಂದು ತುಂಬಿಕೊಳ್ಳುತ್ತಿರುವುದು ಹೇಗೆ ಎಂದು ರುದ್ರಯ್ಯ ತನ್ನ ಶರ್ಟ್ ಜೇಬಿನಲ್ಲಿರುವ ಚಿಲ್ಲರೆ ತಡಕುವಾಗ ಕೇಳಿಕೊಂಡ. ಅರಿಶಿನದ ಹಾಲು ವರ್ಕ್ ಆಗದಿದ್ದರೂ ರಮ್ ಬೆಳಗ್ಗೆವರೆಗೂ ಕೈ ಕೊಡುವುದಿಲ್ಲ ಅನಿಸಿ ದುಡ್ಡಿನ ಲೆಕ್ಕಾಚಾರ ಹಾಕುತ್ತಿದ್ದ ವೇಳೆ ಆಚಾರಿಯ ಉಬ್ಬಿದ ಜೇಬು ಮತ್ತೆ ನೆನಪಾಗಿತ್ತು. ಮಗನಿಗೆ ಗೊತ್ತಾಗದಂತೆ ಚೂರುಪಾರು ಉಳಿಸಿ ಬ್ಯಾಂಕಲ್ಲಿ ಇಟ್ಟಿರುವ ಹಣ ತೆಗೆದರೆ ಅದು ಹೇಗೆ ಖರ್ಚಾಗುತ್ತದೆ ಎಂಬುದೇ ತಿಳಿಯುವುದಿಲ್ಲ ಎಂಬುದನ್ನು ಕಂಡುಕೊಂಡಿದ್ದ ರುದ್ರಯ್ಯ ತನ್ನ ಬಳಿ ಇದ್ದುದ್ದರಲ್ಲೇ ಎಲ್ಲಕ್ಕೂ ಹೊಂದಿಸುತ್ತಿದ್ದ. ಮಗನಿಗೆ ಕೆಲಸ ಸಿಕ್ಕರೆ ಮನೆ ಮತ್ತೆ ಯಥಾಸ್ಥಿತಿಗೆ ಬರುತ್ತದೆ ಎನ್ನುವುದು ಅವನ ನಂಬಿಕೆಯಾಗಿತ್ತು. ಅಲ್ಲೀವರೆಗೂ ಮನೆಯನ್ನ ಹಾಗೂಹೀಗೂ ಗುಡುಗುಡಿಸಿದರೆ ಆಯಿತು ಅಂದುಕೊಂಡಿದ್ದಾಗ ಥಂಡಿ ಅವನ ಎದೆಯನ್ನ ಕೊರೆಯಲು ಆರಂಭಿಸಿತ್ತು.

ರಮ್ ಖಾಲಿಯಾಗಿರುವುದು ಗೊತ್ತಾಗಿ ರಾತ್ರಿ ಹೊತ್ತಿಗೆ ಒಂದಿಷ್ಟು ತಂದಿಟ್ಟುಕೊಳ್ಳಬೇಕು ಎಂದುಕೊಂಡ ರುದ್ರಯ್ಯ ಬಾರಿಗೆ ಹೋದ. ಅಲ್ಲಿ ಅವನ ಭುಜವನ್ನ ಯಾರೊ ತಟ್ಟಿದಂತೆ ಆಯಿತು. ನೋಡಿದರೆ ವೇಣುಗೋಪಾಲ ನಕ್ಕು ‘ಏನ್ಯೆಜಮಾನ?’ ಅಂದ ಪರಿಚಿತ ಭಾವದಲ್ಲಿ.
ಆಚಾರಿಯ ಅಂಗಡಿಗೆ ಆಗಾಗ ಬರುತ್ತಿದ್ದವನು; ನಿತ್ಯ ಅವನದು ಏನೇನೋ ಮಾತು. ರುದ್ರಯ್ಯ ಅವಕ್ಕೆಲ್ಲ ಆ ಹೊತ್ತು ಸರಿಯಾಗಿ ಕಿವಿಗೊಟ್ಟಿರಲಿಲ್ಲವಾದ್ದರಿಂದ ಅರ್ಥವಾಗಿರಲಿಲ್ಲ. ಹೊರಗಿಂದ ಸುಮ್ಮನೆ ಹೀಗೇ ಒಂದು ಬಾಟಲ್ ರಮ್ ತೆಗೆದುಕೊಂಡು ಹೋಗಿಬಿಡೋಣ ಅಂದುಕೊಂಡಿದ್ದವನನ್ನ ವೇಣು ತುಂಬ ಆದರ ತೋರಿಸಿ ‘ದುಡ್ಡು ನಂದೇ ಇರಲಿ, ಕಂಪನಿಗೆ ನೀನಿರು ಸಾಕು’ ಎಂದು ಒಳಗೆ ಕರೆದುಕೊಂಡು ಹೋಗಿ ಕೂರಿಸಿ ವಿಸ್ಕಿಗೆ ಆರ್ಡರ್ ಮಾಡಿ ‘ಇದ್ಯಾಕಿದು ಹೀಗೆ ಗಡ್ಡ ಬಿಟ್ಟಿರೋದು?’ ಎಂದು ರುದ್ರಯ್ಯನನ್ನೇ ನೋಡುತ್ತ ತಮಾಷೆ ಮಾಡುತ್ತ ಕೂತ.

ಬೇರರ್ ವಿಸ್ಕಿ ಬಾಟಲ್ ತಂದಿಟ್ಟು ಹೋದಮೇಲೆ ರುದ್ರಯ್ಯನ ಗ್ಲಾಸಿಗೆ ಚೂರು ಬಗ್ಗಿಸಿ ತಾನೂ ಬಗ್ಗಿಸಿಕೊಂಡು ಗುಟುಕರಿಸುತ್ತ ‘ನಿಮ್ಮೆಜಮಾನ ದೇವರ ವಿಗ್ರಹಗಳನ್ನ ಹುಡುಕಿಕೊಂಡು ಬರ್ತೀನಿ ಅಂತ ಹೋದವನು ದೇವರ ಪಾದ ಏನಾರಾ ಸೇರ್ಕೊಂಡು ಬಿಟ್ನೊ ಹೇಗೆ ಗೊತ್ತಾಗ್ತಿಲ್ಲ’ ಅಂತ ಕಣ್ಣು ತೇಲಿಸಿಕೊಂಡು ನಕ್ಕ.

ರುದ್ರಯ್ಯನಿಗೆ ವೇಣು ಮಾತು ಹಿಡಿಸಲಿಲ್ಲ. ಅವನ ತಮಾಷೆ ತುಂಬ ಕ್ರೂರ ಅನಿಸಿತು. ಆದರೂ ಚೂರು ಸೂಕ್ಷ್ಮವಾಗಿ ಕೆದಕಿದರೆ ಏನಾದರೂ ತಿಳಿಯಬಹುದು ಅನಿಸಿ ‘ನನಗೆ ಗೊತ್ತಿದ್ದಂಗೆ ಅಂಗಡಿ ಏನ್ ಅಷ್ಟು ಲಾಭದಲ್ಲಿ ನಡೀತಿಲ್ಲ. ಆದರೂ ದೇವರು ಚೆನ್ನಾಗಿ ಇಟ್ಟಿದ್ದಾನೆ ಅನಿಸ್ತಿದೆ ಅವರನ್ನ’ ಅಂದ.

ವೇಣು ನಕ್ಕ. ‘ಕರೆಕ್ಟ್.. ದೇವರುಗಳಿಗೆ ವಯಸ್ಸಾದಷ್ಟೂ ನಿಮ್ಮೆಜಮಾನನಿಗೆ ಲಾಭ. ಆದರೆ ಯಾಕೋ ವಯಸ್ಸಾದ ದೇವರುಗಳು ಈಚೆಗೆ ಅವನ ಕಣ್ಣಿಗೆ ಬೀಳ್ತಿಲ್ಲ ನೋಡು’ ಅಂತ ನಕ್ಕ.

ಚೂರು ಚೂರೇ ನಶೆ ಏರಲು ಆರಂಭಿಸಿದ್ದ ರುದ್ರಯ್ಯನಿಗೆ ವೇಣು ಹೇಳುತ್ತಿರುವುದರಲ್ಲಿ ಏನೋ ಇದೆ ಅನಿಸಿ ‘ಎಲ್ಲಾದ್ರೂ ದೇವರುಗಳಿಗೆ ವಯಸ್ಸಾಗುತ್ತಾ…?’ ಅಂತ ಕೇಳಿದ.
‘ಅವಕ್ಕೇ ಡಿಮ್ಯಾಂಡು ಈಗ…. ಏನಿದ್ರೂ ಐನೂರು ಆರನೂರು ವರ್ಷ ಆಗಿರಬೇಕು. ಕೈಕಾಲು ಊನ ಆಗಿದ್ರೆ ಇನ್ನೂ ಚೆಂದ..’ ಅಂದ ವೇಣು.

ರುದ್ರಯ್ಯನಿಗೆ ಹೆದರಿಕೆ ಶುರುವಾಯಿತು. ಕೆನ್ನೆ ತಟ್ಟಿಕೊಂಡ.

ವೇಣು ಮತ್ತೆ ನಗುತ್ತ ‘ಮೊದಲಮೊದಲು ಪರವಾಗಿರಲಿಲ್ಲ. ಹಳೇ ದೇವರುಗಳನ್ನೇ ತರ್ತಿದ್ದ. ಎಲ್ಲಿ ಸಿಗ್ತಿದ್ರೋಪಾ. ಫಾರಿನ್ ಗಿರಾಕಿಗಳನ್ನ ನಾನೇ ಹಿಡ್ಕೊಂಡು ಬರ್ತಿದ್ದೆ. ಸಖತ್ ಕಮೀಷನ್ ಸಿಗ್ತಿತ್ತು. ಈಗೀಗ ಬಿಸ್ನೆಸ್ ಡಲ್. ಹಳೇ ದೇವರುಗಳು ಸಿಗ್ತಿಲ್ಲ ಯಜಮಾನ.. ಐವತ್ತು ವರ್ಷದ್ದು ತಂದುಬಿಟ್ಟು ಹಳೇದು ಅಂದರೆ.. ಆಗುತ್ತಾ ಹೇಳು..’ ಕೇಳಿದ.

ದೇವರ ವಿಗ್ರಹಗಳು ಅನ್ನದೆ ಬರೀ ದೇವರುಗಳು ಅನ್ನುತ್ತಿರುವುದು ರುದ್ರ್ಯಯನಲ್ಲಿ ಹೆದರಿಕೆ ಹುಟ್ಟಿಸಿತು. ಇದೆಲ್ಲ ಯಾವ ಅವಾಂತರಗಳಿಗೆ ತಿರುಗಿಕೊಳ್ಳುತ್ತೋ… ಮತ್ತು ತನಗೆ ಅಂಗಡಿಯಲ್ಲಿ ಕೆಲಸ ಇಲ್ಲದಂಗಾದ್ರೆ ಗತಿ ಏನು ಅಂತ ಲೆಕ್ಕ ಹಾಕಲು ಶುರುಮಾಡಿದ. ಹಾಗೇ ‘ನಿಮಗೇನು ಭಯ ಗಿಯ ಆಗಲ್ವ..?’ ಅಂದ.

ವೇಣು ನಕ್ಕು ಮತ್ತೆ ಕಣ್ಣು ತೇಲಿಸಿಕೊಂಡು ‘ಇವತ್ತು ದುಡ್ಡೇ ಅಲ್ವಾ ಯಜಮಾನ ದೇವರು… ಆ ವಿಗ್ರಹದಾಗೆ ಯಾವ ದೇವರು ಸೇರಿಕೊಂಡಿದ್ದಾರು ಹೇಳು..?’ ಅಂದ.

ಮೆಡಿಕಲ್ ಶಾಪ್ನಲ್ಲಿ ಚೀಟಿ ಕೊಟ್ಟು ಮೊದಲು ಲೆಕ್ಕಹಾಕಿ ಹೇಳಪ್ಪ ಅಂತನ್ನಬೇಕಾಗಿ ಬಂದದ್ದು ನೆನಪಾಗಿ ವೇಣು ಹೇಳುತ್ತಿರುವುದು ಸರಿ ಅನಿಸಿತು ರುದ್ರಯ್ಯನಿಗೆ. ಚೂರು ಸಾರಾಯಿಗೂ ಮಿಗಿಸಿಕೊಂಡು, ಮನೇನೂ ನಡೆಸುವುದರ ಜೊತೆಗೆ ಆಚೆ ಮಲಗಿ ಖಾಯಿಲೆ ತಂದುಕೊಂಡಿರುವುದೂ ದುಡ್ಡಿಂದಲೇ ಎಂದು ತಿಳಿಯುತ್ತಲೇ ಸುಮ್ಮನೆ ಕುತೂಹಲಕ್ಕೆ ‘ಹಳೇವು ಹೊಸಾವು ಅಂತ ಹೆಂಗೆ ಪತ್ತೆ ಹಚ್ತಾರೆ..?’ ಅಂತ ಕೇಳಿದ ರುದ್ರಯ್ಯ.

“ಈಗ ನಿನ್ನನ್ನ ನೋಡಿದ್ರೆ ಹುಡುಗ ಅನ್ನೋಕೆ ಆಗುತ್ತಾ..?” ಅಂತ ವೇಣು ನಕ್ಕ.

******

ಮಾತ್ರೆಗಳನ್ನ ತೆಗೆದುಕೊಂಡು ಜೊತೆಗೆ ಅರಿಶಿನದ ಹಾಲು ಕುಡಿಯುತ್ತಿದ್ದರೂ ಎದೆಯಲ್ಲಿ ಗೊರಗೊರ ಶಬ್ದ ನಿಲ್ಲುವ ಹಾಗೆ ಅನಿಸಲಿಲ್ಲ ರುದ್ರಯ್ಯನಿಗೆ. ಮೊದಲಾಗಿದ್ದರೆ ಈ ವಯಸ್ಸಿನಲ್ಲಿ ಕೇಳಲಿಕ್ಕೆ ಅಸಹ್ಯ ಅನಿಸಿದ್ದ ಸುಖದ ನರಳಿಕೆಯ ಸದ್ದು ಕಿವಿಯಿಂದ ಮಾಯವಾಗಿ ಕೆಲಕಾಲ ತನ್ನ ಎದೆಯ ಗೊರಗೊರ ಕೇಳಿಸುತ್ತಿದ್ದದ್ದು ಈಗ ಕೇವಲ ವೇಣುವಿನ ಮಾತುಗಳೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು.

ಎರಡು ದಿನ ಬಿಟ್ಟು ಅಂಗಡಿಗೆ ಹೋದ ರುದ್ರಯ್ಯ ಮೊದಲಿನಂತೆ ತನ್ನಷ್ಟಕ್ಕೆ ತಾನು ಇರಲಿಲ್ಲ. ಆಚಾರಿಯ ವ್ಯವಹಾರ, ಮಾತಿನ ಶೈಲಿಯ ಕಡೆಗೆ ಗಮನ ಕೊಟ್ಟ. ಯಾರ್ಯಾರು ಬರುತ್ತಾರೆ ಗುರುತು ಇಟ್ಟುಕೊಂಡ. ದೇವರ ವಿಗ್ರಹಗಳನ್ನ ಮಾರಿಕೊಳ್ಳುವವನ ಜೇಬನ್ನ ದೇವರು ಹೇಗೆ ತುಂಬಿಸ್ತಿದ್ದಾನಲ್ವ ಎಂದು ಹುಬ್ಬೇರಿಸಿ ತನ್ನ ಕರ್ಮ ನೆನೆದು ಹಣ್ಣೆ ಚಚ್ಚಿಕೊಂಡ. ತನ್ನ ಹಣೆ ನೋಯಿತೇ ಹೊರತು ದೇವರು ತನಗೆ ಏನೂ ಕಿಮ್ಮತ್ತು ತೋರಿಸಿದಂತೆ ಅನಿಸಲಿಲ್ಲ.

ಬರಬರುತ್ತ ಆಚಾರಿಯ ತಿರುಗಾಟ ಹೆಚ್ಚಿತು. ಅಂಗಡಿಗೆ ಬಂದು ಹೋಗುವವರೂ ಕಡಿಮೆಯಾದರು. ಹೆಚ್ಚೆಂದರೆ ಪಾಲಿಶ್ ಮಾಡಿಸಿಕೊಳ್ಳಲಿಕ್ಕೆ ಬರುತ್ತಿದ್ದವರೂ ವಿರಳವಾಗತೊಡಗಿದರು. ಅಂಗಡಿಯಲ್ಲಿ ತಿದಿ ಒತ್ತುವುದು ತೀರಾ ಕಡಿಮೆಯಾದಂತೆ ರುದ್ರಯ್ಯನ ಒಳಗೆ ಕಾವು ಹೆಚ್ಚಾಗತೊಡಗಿತು. ಆಚಾರಿ ಯಾವ ದಿನವಾದರೂ ತಾನು ಅಂಗಡಿ ಮುಚ್ಚುತ್ತಿರುವುದಾಗಿ ತಿಳಿಸಿ ತನಗೆ ‘ಇನ್ನು ಬೇರೆ ಕಡೆ ಕೆಲಸ ನೋಡ್ಕೊ ಅಂದರೆ ಗತಿ..’ ಎಂದು ಚಿಂತಿಸಿದ. ಆದರೆ ಆಚಾರಿ ಮಾತ್ರ ಆರಾಮಾಗೇ ಓಡಾಡಿಕೊಂಡು ಇದ್ದ. ರುದ್ರಯ್ಯನಿಗೂ ಸಂಬಳ ತಪ್ಪಿಸುತ್ತಿರಲಿಲ್ಲ. ಆದರೂ ಈ ಅಂಗಡಿ ಒಂದು ದಿನ ಮುಚ್ಚುತ್ತದೆ ಎಂದು ರುದ್ರಯ್ಯನಿಗೆ ಬಲವಾಗಿ ಅನಿಸುತ್ತಿತ್ತು.

ಎರಡು ಸ್ವೆಟರ್ ಹಾಕಿಕೊಂಡು, ಕಿವಿಗೆ ಹತ್ತಿ ಇಟ್ಟುಕೊಂಡು ಜೊತೆಗೆ ಮಂಕಿ ಕ್ಯಾಪನ್ನೂ ಹಾಕಿ ಬೆಚ್ಚಗಿನ ಕಂಬಳಿ ಒಳಗೆ ದೇಹ ಹುದುಗಿಸಿಕೊಂಡು ಹೀಗೇ ಆಕಾಶ ನೋಡುತ್ತ ಮಲಗಿದ್ದ ರುದ್ರಯ್ಯನಿಗೆ ಧುತ್ತನೆ ಬಾಗಿಲು ಗೋಡೆಗೆ ಬಡಿದ ಜೋರು ಸದ್ದು ಕೇಳಿಸಿತು. ಧಿಗ್ಗನೆ ಎದ್ದ ರುದ್ರಯ್ಯ ಏನಾಯಿತು ಎಂದು ಆಯಾಸದಲ್ಲಿ ಬಾಗಿ ನೋಡುವಷ್ಟರಲ್ಲಿ ರಾಜ ರೂಮಿನ ಬಾಗಿಲನ್ನ ರಾಕ್ಷಸನಂತೆ ಒದ್ದು

ದೂಡಿಕೊಂಡು ಭುಸುಗುಡುತ್ತ ಬಂದದ್ದು ಕಂಡಿತು. ಅದೇ ಹೊತ್ತಿಗೆ ಮಾಣಿಕ್ಯ ತನ್ನ ಕುತ್ತಿಗೆ ತಾನೇ ಹಿಡಿದುಕೊಂಡು ಅಳುತ್ತ ಬಂದು ‘ಸಾಯಿಸಿ ಬಿಡಿ.. ಯಾಕೆ ಬದುಕಿಸಿದ್ದೀರಾ..!’ ಅಂದಳು.

ರುದ್ರಯ್ಯ ಬೆನ್ನು ಬಾಗಿಸಿಕೊಂಡು ಒಳಗೆ ಹೋಗಿ ಇಬ್ಬರನ್ನೂ ನೋಡಿ ಏನಾಯ್ತು ಎಂದು ಕೇಳಿದ. ಯಾರೂ ತುಟಿ ಬಿಚ್ಚಲಿಲ್ಲ. ಮಾಣಿಕ್ಯ ಗೋಡೆಗೆ ತಲೆಚಚ್ಚಿಕೊಳ್ಳಲು ಆರಂಭಿಸಿದಳು. ರಾಜ ಅದನ್ನು ನೋಡಿ ‘ಚಚ್ಕೊಂಡು ಸಾಯಿ.. ನಿಮ್ಮನೆಯವರಿಗೂ ಹೀಗೇ ಮಾಡ್ಕೊಂಡು ಸಾಯೋಕೆ ಹೇಳು’ ಅಂದ. ‘ಏನಾಯ್ತು…?’ ಅಂತ ರುದ್ರಯ್ಯ ತುಂಬ ಗತ್ತಾಗಿ ಮತ್ತು ಕೋಪದಲ್ಲಿ ಕೇಳಿದ. ರಾಜ ನೆಲಕ್ಕೆ ‘ಥು’ ಅಂತ ಉಗಿದು ‘ ಅಸಯ್ಯ ಎಂಗೇಳಾದು ನಿನಗೆ?’ ಅಂದ.

‘ಅಂದ್ರೆ ನಾನು ಈ ಮನೇಲಿ ಸತ್ತೋಗಿದ್ದೀನಿ’ ಅಂತ ರುದ್ರಯ್ಯ ಕಣ್ಣು ಕೆಂಪಗೆ ಮಾಡಿಕೊಂಡು ಅಂದಾಗ ರಾಜ ‘ಏನಾಗಿದೆ ಅಂತ ಇವಳ ಮನೇವ್ರನ್ನ ಕೇಳು. ಲ್ಯಾಬ್ಗೆ ಹೋಗಿ ನಾನು ಚಡ್ಡಿ ಬಿಚ್ಕೊಂಡು ಜಟಕಾ ಹೊಡಕೊಳ್ಳೊವಾಗ ಚಿಮ್ಮುತ್ತಲ್ಲ ಅದನ್ನ ಪುಟ್ಟ ಬಾಕ್ಸಲ್ಲಿ ತುಂಬಿ ಕೊಡಬೇಕಂತೆ. ಆ ಮಾನಗೆಟ್ಟವು ಅದರಲ್ಲಿ ಎಷ್ಟು ಬದುಕವೆ ಎಷ್ಟು ಸತ್ತವೆ’ ಅಂತ ಪತ್ತೆ ಮಾಡಿ ಹೇಳ್ತಾವಂತೆ..’ ಅಂತ ಮತ್ತೆ ನೆಲಕ್ಕೆ ‘ಥು’ ಅಂತ ಉಗಿದ.

ರುದ್ರಯ್ಯನಿಗೆ ಚೂರುಪಾರು ಅರ್ಥವಾದರೂ ಅಸಹ್ಯ ಅನಿಸಿತು. ‘ಹು.. ಕಡಿಮೆ ಆಗಿದ್ರೆ ಹೆಚ್ಚಾಗಕ್ಕೆ ಏನಾರ ಕೊಡ್ತಾರೆ..’ ಅಂತ ಮಾಣಿಕ್ಯ ಹೇಳಿದಾಗ ರಾಜ ಮುನ್ನುಗ್ಗಿ ಹೋಗಿ ಅವಳ ಜುಟ್ಟುಹಿಡಿದು ಗೋಡೆಗೆ ತಲೆಯನ್ನ ಘಟ್ಟಿಸುತ್ತ ‘ನಿಮ್ಮ ಕಡೆಯವರಿಗೆ ತಿಂದು ಹೆಚ್ಚಾಗೈತೆ… ಅದಕ್ಕೆ ನಂದ್ರಲ್ಲಿ ಕಡಿಮೆ ಆಗಿದೆ ಅಂತಾವ್ರೆ’ ಅಂದ.

ಮಾಣಿಕ್ಯ ಹಣೆ ಮೇಲೆ ದೊಡ್ಡ ಬೊಬ್ಬೆ ಎದ್ದಿತು. ಆಕೆ ಜೋರಾಗಿ ಚೀರುತ್ತ ಆ ನೋವಿನಲ್ಲೂ ಫೋನ್ ತೆಗೆದುಕೊಂಡು ಡಯಲ್ ಮಾಡಿ ತನ್ನ ಮನೆಯವರಿಗೆ ‘ಅಮ್ಮ ನಾನು ನಾಳೆ ಹೊತ್ತಿಗೆ ಇರಲ್ಲ’ ಅಂತಂದು ಎಲ್ಲ ವಿವರಿಸಿದಳು. ಕೂಡಲೆ ಆ ಕಡೆಯಿಂದ ರಾಜನ ಮಾವ ಅವನಿಗೆ ಫೋನ್ ಮಾಡಿ ‘ಕಂಪ್ಲೆಂಟ್ ಕೊಟ್ಟು ಜೈಲಿಗೆ ಹಾಕಿಸ್ಲಿಲ್ಲ ಕೇಳು’ ಅಂದರು.

ರಾತ್ರಿಯಾದರೆ ಇದ್ಯಾತರ ನರಕ ತನಗೆ ಎಂದುಕೊಳ್ಳುತ್ತಿದ್ದ ರುದ್ರಯ್ಯನಿಗೆ ರೂಮಿನೊಳಗಿನ ಸದ್ದು ಕ್ರಮೇಣ ಕಡಿಮೆ ಆಗಬಹುದು ಅನಿಸಿತ್ತು. ಹಾಸ್ಪೆಟಲ್ಗೆ ತಾನು ಬರೋದಿಲ್ಲ ಅಂತ ರಾಜ ಮಾಣಿಕ್ಯ ಮೇಲೆ ಒಮ್ಮೆ ಕಿಡಿ ಕಾರಿದಾಗ ಆಕೆ ಅತ್ತುಕೊಂಡು ತನ್ನ ಮನೆಯವರಿಗೆ ಈ ಬಗ್ಗೆ ಹೇಳಿದಾಗ ಅವರು ‘ಹಂಗಾರೆ ಅವನಲ್ಲೇ ಏನೋ ಕೊರತೆ ಇರಬೇಕು’ ಅಂದಿದ್ದರು.

ರುದ್ರಯ್ಯ ಸುಮ್ಮನೆ ನಿಂತು ನೋಡುತ್ತಿದ್ದರೆ ಅವನ ಎದೆಯ ಗೊರಗೊರ ಸದ್ದು ಮಾತ್ರ ಏನೊ ಮಾತಾಡುತ್ತಿತ್ತು. ಅದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ರಾಜ ಸಿಟ್ಟಿನಲ್ಲಿ ತನ್ನ ಕೈಲಿದ್ದ ಫೋನನ್ನ ಗೋಡೆಗೆ ಬೀಸಿ ಒಗೆದ. ಅದು ಎರಡು ತುಂಡಾಗಿ ಸೀಳಿಕೊಂಡು ಬಿದ್ದಾಗ ಮನೆಯಿಂದ ಆಚೆಗೆ ಭುಸುಗುಟ್ಟುಕೊಂಡು ನಡೆದುಬಿಟ್ಟ.

ರುದ್ರಯ್ಯನಿಗೆ ಬೆಳಕು ಹೇಗೆ ಹರಿಯಿತೆಂದೇ ತಿಳಿಯಲಿಲ್ಲ. ಮಾಣಿಕ್ಯ ಹಾಗೇ ಗೋಡೆಗೆ ತಲೆ ಆನಿಸಿ ಅಳುತ್ತಿದ್ದಳು. ರುದ್ರಯ್ಯ ಈಚೆಗೆ ಬಂದು ಕಂಬಳಿ ಹೊದ್ದು ಕರಡಿಯಂತೆ ಕೂತು ಮುಖ ಮಾತ್ರ ಕಾಣಿಸಿದ್ದ.

ಬೆಳಕು ಇನ್ನೂ ಸರಿಯಾಗಿ ಹರಿದಿತ್ತೋ ಇಲ್ಲವೋ ಮಾಣಿಕ್ಯಳ ಅಪ್ಪ ಅಮ್ಮ ಬಂದು ಅವಳನ್ನ ಕರೆದುಕೊಂಡು ನಡೆದೇಬಿಟ್ಟರು. ಹೋಗುವಾಗ ಸುಮ್ಮನೆ ಕಲ್ಲಿನ ಹಾಗೆ ಕೂತಿದ್ದ ರುದ್ರಯ್ಯನಿಗೆ ‘ಮದುವೆಗೆ ಮುಂಚೆ ಮಗನ್ನ ಯಾವ್ಯಾವ ಹೊಲ ಹಾಯೋಕೆ ಬಿಟ್ಟಿದ್ಯೋ.. ಈಗ ಏನೇನು ರೋಗ ಹತ್ತಿಕೊಂಡಿದ್ಯೋ ಅಂತ ಹೆದರಿಕೋತೈತೆ… ಮನೇವ್ರು ಬೇಲಿ ಹಾಕದಿದ್ದರೆ ಹೀಗೇ ಆಗೋದು’ ಅಂತಂದು ನಡೆದರು.

ರಾಜ ರಾತ್ರಿ ಹೋದವನು ಪತ್ತೆ ಇರಲಿಲ್ಲ. ಮಾಣಿಕ್ಯಳ ಕಡೆಯವರು ಪೊಲೀಸ್ ಕಂಪ್ಲೆಂಟ್ ದಾಖಲಿಸಿ ನಡೆದಿದ್ದರು. ವಿಚಾರಣೆಗೆ ಅಂತ ಪೊಲೀಸರು ರುದ್ರಯ್ಯನನ್ನ ಹೇಗೆಲ್ಲಾ ಪ್ರಶ್ನೆ ಮಾಡಿದರೂ ಅವನು ಮಾತ್ರ ಹಾಗೇ ಕಂಬಳಿ ಹೊದ್ದು ಸುಮ್ಮನೆ ಕಲ್ಲಿನಂತೆ ಕೂತೇ ಇದ್ದ. ಬಿಸಿಲೇರಿ ಒಳಗೆ ಮೈ ಬೆವೆಯಲು ಆರಂಭಿಸಿದರೂ ಅಲುಗಲಿಲ್ಲ. ಕೊಂಚ ಹೊತ್ತಿನ ನಂತರ ಅವನ ಫೋನ್ ರಿಂಗಣಿಸಿತು. ಕತ್ತು ತಿರುಗಿಸಿದ. ‘ಆಚಾರಿ’ ಎಂದು ಕಂಡಿತು.

ಅಂಗಡಿಗೆ ಬರದಿರುವುದಕ್ಕೆ ಇರಬೇಕು ಅಂದುಕೊಂಡ. ಇಲ್ಲಿ ತನ್ನ ಬದುಕೇ ಅಂಗಡಿ ಆಗಿದೆ.. ಇವನ್ದು ಬೇರೆ ಎಂದು ಸಿಟ್ಟಾದ.

ಯೋಚಿಸುತ್ತಾ ಕೂತ: ಯಾರದ್ದು ತಪ್ಪು? ಕೆಲಸ ಹೋಗಿ ಕಂಗಾಲಾಗಿರುವಾಗ ಹೀಗೆ ಒತ್ತಡ ಹೇರಿದರೆ ಯಾರಿಗೆ ತಾನೆ ಸಿಟ್ಟುಬರೋದಿಲ್ಲ? ರಾಜ ಕುದ್ದು ನಡೆದದ್ದು ಸರಿ; ಮಾಣಿಕ್ಯ ಒಳ್ಳೆಯವಳೇ. ಅವರಪ್ಪ ಅಮ್ಮ ಆತುರಗೆಟ್ಟವರು…

ತಾನೂ ಇನ್ನೊಂದಿಷ್ಟು ಸ್ಥಿತಿವಂತನಾಗಿದ್ದು ಮತ್ತು ಮನೆ ಕೊಂಚ ದೊಡ್ಡದಿದ್ದರೆ ಮಾಣಿಕ್ಯ ಮನೆಯವರು ಸದರ ಮಾಡಿಕೊಳ್ಳಲು ಅವಕಾಶಗಳಿರಲಿಲ್ಲ. ಎಲ್ಲಕ್ಕೂ ಕಾರಣ ಮತ್ತೆ ದುಡ್ಡೇ ಅನಿಸಿತು.

ಮಗ ಇಂದಲ್ಲ ನಾಳೆ ಬರುತ್ತಾನೆ; ಸೊಸೆ ಎಲ್ಲಿಗೋದಾಳು? ಇದೇ ಮನೆ ಗಟ್ಟಿ ಅವಳಿಗೆ. ಅಕ್ಕಪಕ್ಕದವರು ಮಾತಾಡಿದರೆ ಪೊಗರು ಕರಗಿ ತಾನೇ ಹುಡುಕಿಕೊಂಡು ಬರ್ತಾಳೆ. ಅಲ್ಲೀವರೆಗೂ ಹೇಗೂ ಕಾಲದೂಡಬೇಕು ಎಂದುಕೊಂಡ ರುದ್ರಯ್ಯ ಮೇಲೇಳಲು ಹೋಗಿ ಆಯತಪ್ಪಿ ಕೂತ. ಕಾಲುಗಳು ಮರಗಟ್ಟಿಕೊಂಡಿದ್ದವು. ಕೊಂಚ ಹೊತ್ತು ಹಾಗೇ ಕಾಲು ನೀಡಿಕೊಂಡು ಕೂತು ಎದ್ದ.

ಸಂಜೆ ಆಗಿತ್ತು. ಸರಿಯಾಗಿ ರೂಮಿಗೇ ಜಾಗವಿಲ್ಲದ ಮನೆಯಲ್ಲಿ ಇನ್ನು ದೇವರಿಗೊಂದು ರೂಮು ಹೊಂದಿಸಿಕೊಡುವುದು ಕಷ್ಟ ಅನಿಸಿದ್ದರಿಂದ ದೇವರಿಗೆ ಪ್ರತ್ಯೇಕ ಕೊಠಡಿ ಕಲ್ಪಿಸಿರಲಿಲ್ಲ. ಗೋಡೆಗೆ ಪುಟ್ಟ ಸ್ಟಾಂಡ್ ಹೊಡೆದು ಅಲ್ಲೊಂದು ದೇವರ ಪಟ; ಅದರ ಮುಂದೊಂದು ಕಳಶ, ಅಕ್ಕಪಕ್ಕ ಪುಟ್ಟ ದೀಪದ ಕಂಬಗಳನ್ನ ಇರಿಸುವ ವ್ಯವಸ್ಥೆ ಮಾಡಿದ್ದ. ನಿತ್ಯ ಸಂಜೆ ಮಾಣಿಕ್ಯ ದೀಪದ ಬತ್ತಿಗಳನ್ನ ಸರಿಮಾಡಿ ಎಣ್ಣೆ ತುಂಬಿ ದೀಪ ಹೊತ್ತಿಸಿ ಕೈಮುಗಿಯುತ್ತಿದ್ದಳು.

ರುದ್ರಯ್ಯ ಮನಸ್ಸಿನಲ್ಲಿ ಕೊಂಚ ಧೈರ್ಯ ತುಂಬಿಕೊಂಡ ಮೇಲೆ ಕಣ್ಣುಗಳು ಚೂರು ತಿಳಿಯಾದವು. ಜೊತೆಗೆ ಹೊಟ್ಟೆ ಹಸಿಯಲು ಆರಂಭಿಸಿತು. ಈ ಹೊಟ್ಟೆ ಅನ್ನುವುದೊಂದು ಬಿಕನಾಸಿ; ಮಾನ ಮರ್ಯಾದೆ ಚೂರೂ ಇಲ್ಲ ಎಂದು ಬೈದುಕೊಂಡು ಸಂಜೆ ನಿತ್ಯ ದೀಪಗಳಿಂದ ಬೆಳಗುತ್ತಿದ್ದ ಸ್ಟಾಂಡಿನ ಕಡೆ ನೋಡಿದ.

ದೀಪದ ಕಂಬಗಳು ಎಂದಿನಂತೆ ತನ್ನ ಕಣ್ಣು ತೆರೆಸುತ್ತಾರೇನೊ ಎಂದು ನಿಂತು ನೋಡುತ್ತಿರುವಂತೆ ಕಂಡವು. ರುದ್ರಯ್ಯ ಅವುಗಳ ಹಿಂದಿರುವ ದೇವರ ಪಟದ ಕಡೆಗೆ ನೋಡಿದ. ‘ದೀಪ ಹಚ್ಚೀನೂ ನಿನ್ನ ಕಣ್ಣಿಗೆ ಕತ್ತಲೆ ಅಂದ ಮೇಲೆ ದೀಪ ಯಾಕೆ ಬಿಡು’ ಅಂದುಕೊಂಡು ಅಡುಗೆ ಮನೆಗೆ ನಡೆದ.

ಒಂದು ರೊಟ್ಟಿ ತಟ್ಟಿಕೊಂಡರಾಯಿತು ಅಂದುಕೊಂಡು ಯಾವುದ್ಯಾವುದೋ ಡಬ್ಬಗಳನ್ನೆಲ್ಲ ತಡಕಿ ಹಿಟ್ಟು ತೆಗೆದುಕೊಂಡು ಕಲಸಿದ. ಈರುಳ್ಳಿ ಹೆಚ್ಚುವಾಗ ಕಣ್ಣೀರಾಗುತ್ತ ಮೆಣಸಿನ ಕಾಯಿಯನ್ನ ಸೀಳುವಾಗ ಚಾಕು ಅವನ ಬೆರಳನ್ನ ತೂರಿ ನಡೆಯಿತು. ಕೈಕೊಡವುತ್ತ ‘ನನ್ನ ಹಣೆಪಟ್ಟಿಗಿಷ್ಟು ಬೆಂಕಿ ಹಾಕ’ ಎಂದು ಬೈದುಕೊಳ್ಳುತ್ತ ರಕ್ತ ಒಸರುತ್ತಿದ್ದ ಬೆರಳಿಗೆ ಚೂರು ಅರಿಶಿನ ಮೆತ್ತಿ ಹಿಡಿದುಕೊಂಡು ನಂತರ ಸ್ಟೌವ್ ಹೊತ್ತಿಸಿ ಹೆಂಚು ಇಟ್ಟ.

ಸ್ವಲ್ಪ ಹೊತ್ತು ಬಿಟ್ಟು ಹೆಂಚು ಎಷ್ಟು ಕಾದಿದೆ ಎಂದು ಮುಟ್ಟಿ ನೋಡಿ ರೊಟ್ಟಿ ಹಿಟ್ಟು ಮಧ್ಯದಲ್ಲಿಟ್ಟು ತೆಳ್ಳಗೆ ತಟ್ಟಲು ಆರಂಭಿಸಿದ. ಹಾಗೆ ತಟ್ಟುವಾಗ ಅವನ ಮನಸ್ಸು ಚೂರು ಎತ್ತಲೋ ಕದಲಿತು.
ಕೈಗೆ ಬಿಸಿ ತಾಕಿ ಸುಟ್ಟಿತು.

ನೋವಿನಿಂದ ಬಲಗೈ ಹಿಂದಕ್ಕೆ ತೆಗೆದುಕೊಂಡು, ಎಡಗೈಲಿ ಸ್ಟೌವ್ ಆರಿಸಿ ರೊಟ್ಟಿ ತಟ್ಟಲಿಕ್ಕೆ ತನ್ನ ಬಳಿ ಇಟ್ಟುಕೊಂಡಿದ್ದ ನೀರಿನ ಪಾತ್ರೆಯಲ್ಲಿ ಬಲಗೈ ಅದ್ದಿ ಈಚೆಗೆ ಬರುವಾಗ ರುದ್ರಯ್ಯನ ಕಣ್ಣಲ್ಲಿ ನೀರು ಕದಲಿದ್ದವು.

ಸಿಟ್ಟು ಅವನ ಒಳಗೆ ಅದೆಲ್ಲಿ ಮಲಗಿತ್ತೋ, ಒಮ್ಮೆಗೇ ಈಚೆಗೆ ಬಂದಿತು. ದೃಷ್ಟಿ ದೀಪಗಳನ್ನ ಬೆಳಗಿಸದ ದೇವರ ಪಟದ ಕಡೆಗೆ ಹರಿಯಿತು. ದೀಪ ಇಲ್ಲ ಅಂತ ಈ ಶಿಕ್ಷೆನೋ ಎಂದುಕೊಳ್ಳುವಾಗ ತನ್ನ ಹೆಂಡತಿ ಬದುಕಿದ್ದಾಗ ಗೇಣುದ್ದ ಮತ್ತು ಮುಕ್ಕಾಲು ಮೊಳದುದ್ದದ ವಿಗ್ರಹಗಳಿಗೆ ಜಾಗ ಹೊಂದಿಸಿ ಪೂಜೆ ಸಲ್ಲಿಸುತ್ತಿದ್ದದ್ದೂ ನೆನಪಿಗೆ ಬಂತು. ಆಕೆ ತೀರಿಕೊಂಡ ಮೇಲೆ ಅವು ಒಂದು ಪೆಟ್ಟಿಗೆ ಸೇರಿದ್ದವು.

ಕೈ ಉರಿಯುತ್ತಾ ಹೋದಂತೆ ಸಿಟ್ಟು ಹೆಚ್ಚಾಗುತ್ತ ತನ್ನ ಬದುಕು, ಮಗ ರಾಜ, ಮಾಣಿಕ್ಯ ಮನೆಯ ಕಮಂಗಿಗಳು, ತನ್ನ ಎದೆಯ ಗೊರಗೊರ ಸದ್ದು, ಜೇಬಲ್ಲಿ ಹಣಕ್ಕೆ ತಡಕಾಟ, ಉಬ್ಬುತ್ತಿರುವ ಆಚಾರಿಯ ಜೇಬು, ತನ್ನ ಕೈ ಸುಟ್ಟ ಹೆಂಚು ಎಲ್ಲ ನೆನಪಾಗಿ ಈ ಎಲ್ಲಕ್ಕೆ ಕಾರಣ ಪೂಜೆ ಮಾಡಿಸಿಕೊಂಡೂ ಸುಮ್ಮನಿರುವ ದೇವರುಗಳು ಅನಿಸಿ ಪೆಟ್ಟಿಗೆ ಬಳಿ ಹೋದ. ತನಗೆ ನೆರವಾಗದ ದೇವರುಗಳಿಗೆ ತನ್ನ ಮನೆಯಲ್ಲಿ ಜಾಗವಿಲ್ಲ, ಪೆಟ್ಟಿಗೆ ಇರುವಷ್ಟು ಜಾಗ ಖಾಲಿ ಮಾಡಿದರೆ ಮನೆ ಕೊಂಚ ದೊಡ್ಡದಾಗುತ್ತದೆ ಅನಿಸಿ ಪೆಟ್ಟಿಗೆ ಹೊರಗೆ ಹೊತ್ತುಕೊಂಡು ಬಂದು ಕೂತ. ಭಾರ ಎತ್ತುಕೊಂಡು ಬಂದದ್ದರಿಂದ ಕೈ ಮತ್ತಷ್ಟು ಉರಿಯಿತು. ಪೆಟ್ಟಿಗೆ ತೆರೆದು ನೋಡಿದ. ದೇವರ ವಿಗ್ರಹಗಳು ತಟಸ್ಥವಾಗಿದ್ದವು. ರುದ್ರಯ್ಯನ ಕೋಪ ಆಕಾಶ ನೋಡಿತು. ಅಲ್ಲಿಯೂ ದೇವತೆಗಳು ಸಾಲಾಗಿ ನಿಂತು ನಕ್ಕಂತೆ ಕಂಡರು.

‘ಇವತ್ತು ನಿಮ್ಮ ಕೈಗೆ ನೋವು ಮಾಡಿ ಹೂತಾಕದೆ ಬಿಡೋದಿಲ್ಲ’ ಅಂದುಕೊಂಡು ಸರಸರ ಎದ್ದುಹೋಗಿ ಸುತ್ತಿಗೆ, ಪಿಕಾಸಿ, ಗುದ್ದಲಿ ತಂದು ಬಿಸಿ ತಾಗಿಸಿಕೊಂಡು ನೋಯುತ್ತಿದ್ದ ಕೈಯಿಂದಲೇ ಸುತ್ತಿಗೆಯಲ್ಲಿ ದೇವರ ವಿಗ್ರಹದ ಕೈ ಒಂದಕ್ಕೆ ಚಚ್ಚಿದ. ಅದು ಎತ್ತಲೋ ತಿರುಗಿಕೊಂಡಿತು.

ನಂತರ ಮನೆ ಪಕ್ಕದ ಮಣ್ಣಿನ ನೆಲವನ್ನ ದೆವ್ವ ಹೊಕ್ಕವನಂತೆ ಅಗೆಯುತ್ತ ಮಣ್ಣು ಪಕ್ಕಕ್ಕೆ ಸುರಿದ. ನಂತರ ಆ ವಿಗ್ರಹಗಳನ್ನ ತಾನು ತೋಡಿದ ಗುಂಡಿಯೊಳಗೆ ಹಾಕಿ ಮತ್ತೆ ಮತ್ತೆ ಸರಸರನೆ ಮಣ್ಣು ಮುಚ್ಚಿದ.

ರಟ್ಟೆಗಳು ನೋಯಲು ಶುರುವಾಗಿ ಮೈ ಬೆವೆತಿತ್ತು. ಹೋಗಿ ಬಟ್ಟೆ ಕಳಚಿ ತಣ್ಣೀರನ್ನ ಮೈಮೇಲೆ ಸುರುವಿಕೊಂಡಾಗ ಚಳಿ ಹೆಚ್ಚಿತು. ರಮ್ ಬಾಟಲಿಗೆ ತಡಕಾಡಿದ. ಮುಂಚೆ ಅಳೆದು ಕುಡಿಯುತ್ತಿದ್ದವನು ಆ ಹೊತ್ತು ಸರಾಗ ಗಂಟಲಿಗೆ ಇಳಿಸಿದ.

ಮೈ ಕೊಂಚ ಬಿಸಿಯಾಗಲು ಆರಂಭಿಸಿಸಿ, ವಿಚಿತ್ರ ಧೈರ್ಯ ತುಂಬಿಕೊಂಡಿತು. ದೇವರುಗಳನ್ನೇ ಹೂತ ಮೇಲೆ ಇನ್ನು ಮಗ ಏನು, ಸೊಸೆ ಏನು… ಬ್ಯಾಂಕಲ್ಲಿ ದುಡ್ಡಿರುವಷ್ಟು ಕಾಲ ತಂದು ತಿಂದು ಕುಡಿದು ಬದುಕಿ ಇಲ್ಲೇ ತಾನು ಈಗಷ್ಟೇ ಹೂತುಹಾಕಿರುವ ಕಡೆ ತನ್ನನ್ನೂ ಹೂತು ಹಾಕಿ ಎಂದು ಹೇಳಿ ಸಾಯಬೇಕು ಅಂತೆಲ್ಲ ಅಂದುಕೊಂಡ.

ಹೋಗಿ ಎಟಿಎಂನಲ್ಲಿ ಎರಡು ಸಾವಿರ ದುಡ್ಡು ಮೀನಮೇಷ ಎಣಿಸದೆ ಸರಾಗವಾಗಿ ಡ್ರಾ ಮಾಡಿ, ಜೊತೆಗೆ ಬಿರ್ಯಾನಿ ಪಾರ್ಸಲ್ ಕಟ್ಟಿಸಿಕೊಂಡು ಬಾರಿಗೆ ಬಂದು ‘ರಮ್ ಬೇಡ ಚೂರು ಹೆಚ್ಚಿನ ಬೆಲೇದೇ ವಿಸ್ಕಿ ಕೊಡಿ’ ಅಂತಂದು ಕೇಳಿ ತೆಗೆದುಕೊಂಡ.

ಮನೆಗೆ ಬಂದು ಪೊಟ್ಟಣ ಬಿಡಿಸಿ ತಿಂದು, ನೀರಿನ ಬದಲಿಗೆ ವಿಸ್ಕಿ ಕುಡಿದು ಮನೆ ಒಳಗೆ ಹಾಗೇ ನೆಲದ ಮೇಲೆ ಮಲಗಿದ. ಪೆಟ್ಟಿಗೆ ಜಾಗ ಖಾಲಿಯಾಗಿದ್ದರಿಂದ ಮನೆ ಕೊಂಚ ವಿಶಾಲವಾಗಿದೆ ಅನಿಸಿತು. ಜೊತೆಗೆ ಥಂಡಿ ನೆಲ ಕೊರೆಯಲು ಆರಂಭಿಸಿದಾಗ ವಿಸ್ಕಿಗಿಂತ ರಮ್ಮೇ ವಾಸಿ ಅಂದುಕೊಂಡು ರಗ್ಗು ಎಳೆದುಕೊಂಡು ಕಣ್ಣುಮುಚ್ಚಿದ್ದಷ್ಟೇ ನೆನಪು.

ರಿಂಗಣಿಸುತ್ತಿರುವ ತನ್ನ ಫೋನಿಗೆ ತಡಕಾಡುವಾಗ ಬೆಳಗಾಗಿರುವುದು ತಿಳಿಯಿತು. ಆಚಾರಿ ಕರೆ ಮಾಡುತ್ತಿದ್ದ. ಬಟನ್ ಒತ್ತಿ ಕಿವಿಗೆ ಇಟ್ಟುಕೊಂಡರೆ ‘ಅಂಗಡಿ ಮುಚ್ಬಿಟ್ಟೆ ಕಣೊ… ನಿನಗೇ ಗೊತ್ತಲ್ಲ ಯಾರೂ ಬರ್ತಿರಲಿಲ್ಲ.. ನೀನೂ ನಿನ್ನೆ ಬರಲಿಲ್ಲ. ಮುಂದೆ ಏನ್ಮಾಡ್ತೀಯೋ ನೋಡು’ ಅಂತಂದಾಗ ರುದ್ರಯ್ಯ ತಣ್ಣಗೆ ಮನೆ ಆಚೆ ಬಂದು ತಾನು ಹಿಂದಿನ ರಾತ್ರಿ ಹೂತುಹಾಕಿದ ಜಾಗ ನೋಡುತ್ತ ‘ನಾನೂ ಮುಚ್ಬಿಟ್ಟೆ ಸ್ವಾಮಿʼ ಅಂದ. ‘ಏನನ್ನೋ ಅಂತ?’ ಆಚಾರಿ ಕೇಳಿದಾಗ ರುದ್ರಯ್ಯ ಉತ್ತರಿಸಲಿಲ್ಲ.

ಎಲ್ಲದರಿಂದ ಬಿಡುಗಡೆ; ಅಂಗಡಿಗೆ ಬರೋಕೆ ಆಗ್ತಿಲ್ಲ ಅಂತ ಸದ್ಯ ಸಬೂಬು ಹೇಳಿ ತಪ್ಪಿಸಿಕೊಳ್ಳೋದು ತಪ್ತು ಅಂತ ಖುಷಿಪಟ್ಟ. ದುಡ್ಡು ಇರೋವರೆಗೂ ತನ್ನ ಬದುಕು… ಅದು ತೀರಿದ ದಿನ ಈ ಬಿಕನಾಸಿ ಹಸಿವು ಬಾಯಿಬಡಿದುಕೊಂಡರೂ ಕೇಳೋದಿಲ್ಲ… ನಾನೇ ತೀರಿಹೋಗಿರತೀನಿ.. ಎನ್ನುವ ವಿಚಾರ ಅವನನ್ನ ಮತ್ತಷ್ಟು ಹುರಿಗೊಳಿಸಿತು.

ದಿನಗಳು ಕಳೆದವು. ಪೋಲಿಸರು ತನ್ನ ಮನೆಯ ಮೇಲೆ ರಾಜನ ಸಲುವಾಗಿ ಕಣ್ಣಿಟ್ಟಿದ್ದಾರೆ ಅನಿಸಿತು ರುದ್ರಯ್ಯನಿಗೆ. ಆಮೇಲೆ ಅದು ಭ್ರಮೆಯೂ ಇರಬಹುದು ಅನಿಸಿತು. ತಿನ್ನುವುದು, ಬೀದಿ ಸುತ್ತುವುದು, ಮನುಷ್ಯರನ್ನ ಗಮನಿಸುವುದು, ಬೀದಿ ಬದಿ ಬದುಕನ್ನ ನೋಡುವುದು, ತನಗೊಂದು ಗೂಡಿದೆ ಅಂದುಕೊಳ್ಳವುದು ಹೀಗೇ.. ಕೆಲ ಕಾಲ ನಡೆಯಿತು.

ಮನೆ ಒಳಗೆ ಮಲಗಲು ಆರಂಭಿಸಿದ್ದರಿಂದಲೋ ಏನೊ ಎದೆಯಲ್ಲಿನ ಗೊರಗೊರ ಸದ್ದು ಕೊಂಚ ಕಡಿಮೆ ಆಗಿರುವಂತೆ ಅನಿಸಿತು ರುದ್ರಯ್ಯನಿಗೆ.

ದುಡ್ಡು ಕರಗುತ್ತಾ ಕರಗುತ್ತಾ ಬಂದಂತೆ ತನ್ನ ಜೀವನವೂ ಕೊನೆಗೊಳ್ಳುತ್ತದೆ ಎಂದುಕೊಂಡಿದ್ದವನಿಗೆ ಇಷ್ಟು ಕಾಲ ಯಾವುದರ ಹಂಗಿಲ್ಲದೆ ತಿರುಗಾಡಿ ಜನರ ಉಸಿರು, ಬೆವರು, ದುಡಿಮೆ, ಮಾರುಕಟ್ಟೆ ಸಡಗರ, ಬಿರ್ಯಾನಿ ರುಚಿ, ರಮ್ಮಿನ ಕಿಕ್ಕು ಈ ಯಾವುದೂ ಕಳೆದು ಹೋಗುವುದು ಬೇಡ ಅನಿಸಲಿಕ್ಕೆ ಶುರುವಾಗಿ ಮೋಹ ಹುಟ್ಟಿಕೊಳ್ಳಲು ಆರಂಭವಾಯಿತು.

ಮತ್ತೆ ಎಲ್ಲಾದರೂ ಕೆಲಸ ಗಿಟ್ಟಿಸಿಕೊಂಡು ದುಡಿಯುವುದು ವ್ಯಸನ; ಹೀಗೇ ಸುತ್ತಿಕೊಂಡಿರಬೇಕು. ನಾಳೆ ಹೊತ್ತಿಗೆ ಎಟಿಎಂನಲ್ಲಿ ಐನೂರು ರೂ. ಉಳಿದಿರಬಹುದು. ಅದು ತೆಗೆದುಕೊಂಡರೆ ಮುಗಿಯಿತು ಎಂದು ಯೋಚಿಸುತ್ತ ಬಿರ್ಯಾನಿ ಬದಲಿಗೆ ಎರಡು ಇಡ್ಲಿ ಕಟ್ಟಿಸಿಕೊಂಡ. ಶಾಸ್ತ್ರಕ್ಕೆ ಒಂದಿಷ್ಟು ರಮ್ ಕುಡಿಯೋಣ ಅಷ್ಟೆ ಎಂಬ ಯೋಚನೆ ಮನಸ್ಸಿನಲ್ಲಿ ಸುಳಿಯಿತು. ಹೀಗೆ ಮಾಡಿದರೆ ಬೀಡುಬೀಸಿನ ದಿನಗಳು ಒಂದಷ್ಟು ಹೆಚ್ಚಬಹುದು ಅಂತ ಲೆಕ್ಕಹಾಕಿದ.

ಇಡ್ಲಿ ಕಟ್ಟಿಸಿಕೊಳ್ಳುವ ಕಡೆ ಮತ್ತೆ ವೇಣು ಸಿಕ್ಕಿದ. ‘ಯಜಮಾನ್ರೇ ಅಂಗಡಿ ಮುಚ್ಚೋಯ್ತಂತೆ… ಗೊತ್ತಾಯ್ತು… ನಿಮ್ಮನೇಲೂ ಏನೋ ಆಯ್ತಂತೆ… ಬಿಡಿ ಸರಿ ಹೋಗುತ್ತೆ…. ಬನ್ನಿ ಊಟಕ್ಕೆ ಹೋಗೋಣ’ ಅಂತ ಕರೆದ.

‘ಬೇಡಪ್ಪೋ’ ಅಂದ ರುದ್ರಯ್ಯ.

‘ಇರಲಿ ಬನ್ನಿ’ ಅಂತ ವೇಣು ಒತ್ತಾಯಿಸಿ ಒಂದು ಮಿಲ್ಟ್ರಿ ಹೋಟಲ್ ಗೆ ಕರೆದುಕೊಂಡು ಹೋದ. ದಿನ ಭವಿಷ್ಯದಲ್ಲಿ ತುಂಬ ನಂಬಿಕೆ ಇರಿಸಿಕೊಂಡಿದ್ದ ವೇಣುವಿಗೆ ಅಂದು ಟಿವಿಯಲ್ಲಿ ಜ್ಯೋತಿಷಿಯೊಬ್ಬರು ‘ಇವತ್ತು ಯಾರಾದರೂ ಅನಾಥರಿಗೆ, ವಯಸ್ಸಾದವರಿಗೆ ಚೂರು ತಿಂಡಿ ಊಟು ಕೊಡಿಸಿ ಸಂತೃಪ್ತಿಗೊಳಿಸಿ… ನಿಮಗೆ ಒಳ್ಳೆದಾಗುತ್ತೆ..’ ಅಂದಿದ್ದರು. ರುದ್ರಯ್ಯನ ಕಥೆ ವೇಣುಗೆ ಗೊತ್ತಿತ್ತಾದ್ದರಿಂದ ಅವನಿಗೆ ಆತ ಅನಾಥನ ಹಾಗೆ ಕಂಡ. ವಯಸ್ಸಾಗಿದ್ದದ್ದು ಅವನ ಚರ್ಮದ ಸುಕ್ಕಿನ ಗೆರೆಗಳೇ ಹೇಳುತ್ತಿದ್ದವು.

ನಾಟಿ ಕೋಳಿ ಸಾರಿಗೆ ಮುರಿದ ಮುದ್ದೆಯ ತುಂಡು ಹೊರಳಿಸಿ ನಾಲಗೆಗಿಟ್ಟುಕೊಂಡು ನುಂಗುತ್ತ ಬ್ರಹ್ಮಾನಂದ ಅನುಭವಿಸುತ್ತಿದ್ದೇನೆ ಎನ್ನುವಂತೆ ತಿನ್ನುತ್ತಿದ್ದ ವೇಣು ‘ಆಚಾರಿ ಕಥೆ ಅಷ್ಟೆ ಅನ್ಸುತ್ತೆ. ದೇವರು ಯಾಕೊ ಸಿಕ್ಕಾಪಟ್ಟೆ ಅಲೆಸ್ತಿದಾನೆ ಅವನನ್ನ. ನನ್ನ ಮಾತ್ರ ಫುಲ್ ಸೇಫಾಗಿ ಇಟ್ಟವ್ನೆ.. ಮೊನ್ನೆ ಯಾರದ್ದೊ ಹೊಲದಲ್ಲಿ ಮೂರ್ನಾಲ್ಕು ವಿಗ್ರಹಗಳು ಸಿಕ್ಕಿದ್ವು. ಸಖ್ಖತ್ ಡಿಮ್ಯಾಂಡು. ನಾನೇ ಪಾರ್ಟಿ ಕರಕೊಂಡು ಹೋಗಿ ವ್ಯಾಪಾರ ಮಾಡ್ಸಿ ಕೊಟ್ಟೆ. ನೆಲದಲ್ಲಿ ಮುಚ್ಚೋಗಿದ್ದ ದೇವರುಗಳಿಗೆ ಈಗ ಫಾರಿನ್ ಟ್ರಿಪ್ ಯೋಗ..’ ಅಂತ ನಕ್ಕ.

ರುದ್ರಯ್ಯನಿಗೆ ತನ್ನ ಬ್ಯಾಂಕ್ ಖಾತೆಯಲ್ಲಿ ಕರಗಿರುವ ದುಡ್ಡು ಮತ್ತು ತಾನು ಹೂತುಹಾಕಿರುವ ದೇವರ ವಿಗ್ರಹಗಳು ಒಟ್ಟಿಗೆ ನೆನಪಾದವು. ವೇಣು ನಂಬರ್ ಕೇಳಿ ತಗೊಂಡ. ನಾಟಿ ಕೋಳಿ ಸಾರಿನ ರುಚಿ ಆ ಹೊತ್ತು ಅವನ ನಾಲಗೆಗೆ ಹತ್ತಿತ್ತು.

******

ಮನೆಗೆ ಬಂದ ರುದ್ರಯ್ಯ ಸಂಜೆಯಾಗಿ ಕತ್ತಲಾಗುವುದನ್ನೇ ಕಾಯತೊಡಗಿದ. ಬೆಳಗ್ಗೆಯೇ ಅಗೆಯಲು ಆರಂಭಿಸಿದರೆ ಯಾರಾದರೂ ನೋಡಿ ಆಮೇಲೆ ಇಲ್ಲದ ತಾಪತ್ರಯಗಳೆಲ್ಲ ಶುರುವಾಗುತ್ತವೆ ಎನ್ನುವುದು ಅವನಿಗೆ ಗೊತ್ತಿತ್ತು.

ತಾನು ಹೂತ ಜಾಗವನ್ನೇ ನೋಡುತ್ತ ‘ಅಂತೂ ಮಣ್ಣಲ್ಲಿ ಮಲಗಿಸಿದ ಮೇಲೆ ಬುದ್ಧಿ ಬಂತು ಅನ್ಸುತ್ತೆ. ನಮ್ಮನ್ನ ಬೀದಿ ಪಾಲು ಮಾಡೋವಾಗ!’ ಅಂದುಕೊಂಡ. ರಾತ್ರಿಯಾದಾಗ ಗುದ್ದಲಿ ತಂದು ಅಗೆದ. ವಿಗ್ರಹಗಳು ಕೈಗೆ ಬಂದವು. ನೋಡಿದ. ಥೇಟ್ ತನ್ನ ಮುಖದ ಹಾಗೇ ಇವೆ ಅನಿಸಿತು.

ಖುಷಿಯಲ್ಲಿ ವೇಣುಗೆ ಫೋನ್ ಮಾಡಿ ಸಮಾಚಾರ ಐತೆ.. ಬೆಳಗ್ಗೆ ಬೇಗ ಬಂದ್ಬಿಡಪ್ಪೋ’ ಅಂದ.

ವೇಣು ಬಂದಾಗ ‘ಇಲ್ಲೇ ಮನೆ ಪಕ್ಕ ಗುಣಿ ತೆಗೆದು ಒಂದು ದಾಸವಾಳದ ಗಿಡ ನೆಡೋಣ ಅಂತ ಅಗೀತಿದ್ರೆ.. ಇವು ಸಿಕ್ಕಿಬಿಡೋದಾ..!’ ಅಂತ ವಿಗ್ರಹಗಳನ್ನ ತೋರಿಸಿದ.

‘ಅಲೆಲೆಲೆಲೆ ಯಜಮಾನ… ಅದೃಷ್ಟಾನ ನಿನ್ನ ಮನೆ ಪಕ್ಕದಲ್ಲೇ ಇಟ್ಕೊಂಡು ಇದ್ಯಲ್ಲಪ್ಪೋ ಇಷ್ಟು ದಿನ… ನಾನು ಒಳ್ಳೆ ಬೆಲೆಗೆ ಮಾರಿಸಿಕೊಡ್ತೀನಿ…. ನಿನಗೆ ಬಂದ ದುಡ್ಡಲ್ಲೂ ನನಗೆ ಚೂರು ಕಮೀಷನ್ ಕೊಡಬೇಕು.. ಆಗಬಹುದಾ…?’ ಅಂದಾಗ ರುದ್ರಯ್ಯನಿಗೆ ಖುಷಿಯಾಯಿತು.

ಹೇಳಿದಂತೆಯೇ ವೇಣು ಫಾರಿನ್ ಗಿರಾಕಿಗಳನ್ನ ಹಿಡಿದು ತಂದು ವ್ಯಾಪಾರ ಕುದುರಿಸಿ ಒಂದು ಸೆಟಲ್ಮೆಂಟ್ ಗೆ ಬಂದ. ತನ್ನ ಕಮೀಷನ್ ತೆಗೆದುಕೊಂಡು ರುದ್ರಯ್ಯನಿಗೆ ಸಲ್ಲಿಸಬೇಕಾದ್ದನ್ನ ವೇಣು ಮೋಸಮಾಡದೆ ಕೊಟ್ಟ.

ಇಷ್ಟು ಕಾಲ ಹಣದ ನೋಟುಗಳನ್ನ ಮುಟ್ಟುವಾಗ ಕೈ ಬೆರಳುಗಳು ಹತ್ತಿರವಿರುತ್ತಿದ್ದವು. ಮೊದಲ ಬಾರಿಗೆ ನೋಟುಗಳ ಕಂತೆ ಹಿಡಿದುಕೊಂಡಾಗ ಕೈ ಬೆರಳುಗಳು ದೂರ ದೂರು ಇವೆ ಅನಿಸಿ ರುದ್ರಯ್ಯ ಕಣ್ಣರಳಿಸಿದ. ಆಸೆ ಹೆಚ್ಚಾಗಿ ‘ಊರ್ನಾಗಿರೋ ಮನೆಗಳಲ್ಲಿ ಇಂಥವು ಎಷ್ಟವೋ… ಕೇಳಿದ್ರೆ ಸಿಗ್ತಾವೆ..’ ಅಂದ.

‘ಏನಾರಾ ಮಾಡು… ವಯಸ್ಸಾಗಿರಬೇಕು ಅಷ್ಟೆ..’ ಅಂತಂದು ವೇಣು ನಡೆದ.

ಹಿಂದೆ ಕೂಡ ದುಡ್ಡು ಇದ್ದ ಸಮಯದಲ್ಲಿ ನಿರುದ್ದಿಶ್ಯವಾಗಿ ಬೀದಿ ಸುತ್ತುತ್ತ ಮನುಷ್ಯರು, ಅವರ ಬೆವರು, ದುಡಿಮೆ, ಮಾರುಕಟ್ಟೆ ಸಡಗರ ಎಲ್ಲ ಕಣ್ತುಂಬಿಕೊಳ್ಳುತ್ತಿರುವಾಗ ಮೆಟಲ್ ವಿಗ್ರಹಗಳ ಅಂಗಡಿಗಳು ರುದ್ರಯ್ಯನಿಗೆ ಕಂಡಿದ್ದವು. ಅವುಗಳನ್ನ ನೋಡಿಯೂ ನೋಡದಂತೆ ನಡೆದಿದ್ದವನು ಇಂದು ಮತ್ತೆ ನೆನಪಿಸಿಕೊಂಡ.

ಮತ್ತೆ ವಿಗ್ರಹಗಳನ್ನ ತಂದು ಕೈಕಾಲು ಮುರಿದು ನೆಲದಲ್ಲಿ ಕೊಂಚ ಮಲಗಿಸಿದರೆ ಅನುಗ್ರಹ ಜೋರಾಗಿ ಮಾಡ್ತಾರೆ ಅನಿಸಿತು.

ಹೀಗೇ ಸಾಗಿ…
ಋತುಮಾನಗಳು ಬದಲಾಗುತ್ತಿದ್ದರೂ ಹಾಗೇ ಕಳೆಗಟ್ಟಿಸಿಕೊಂಡು ನಿಂತಿರುತ್ತಿದ್ದ ವಿಗ್ರಹಗಳು ರುದ್ರಯ್ಯನಿಗೆ ಕೈ ಬಂದು ಮಣ್ಣಲ್ಲಿ ಮಲಗಲು ಆರಂಭಿಸಿವು. ಮನೆ ಲೀಸ್ಗೆ ಕೂಡಿಡುತ್ತಿದ್ದ ಹಣ ಹೆಚ್ಚುತ್ತಾ ಹೋಯಿತು. ಮೃತ್ತಿಕೆ ಪೆಟ್ಟಿಗೆಯೊಳಗೆ ಮಲಗಿಸಿದ ದೇವರುಗಳ ವಯಸ್ಸು ಹೆಚ್ಚುತ್ತಿತ್ತು ಅಷ್ಟೆ. ವೇಣುವನ್ನ ಆಗಾಗ ಕರೆದು ರುದ್ರಯ್ಯನೇ ಮುದ್ದೆ ನಾಟಿ ಕೋಳಿ ಸಾರಿನ ಊಟದ ಜೊತೆಗೆ ಗುಂಡೂ ಕೊಡಿಸುತ್ತಿದ್ದ. ಆಚಾರಿ ಮಾತ್ರ ಸುತ್ತುತ್ತ ಕಾಲು ನೋಯಿಸಿಕೊಳ್ಳುತ್ತಿದ್ದ.

ರುದ್ರಯ್ಯನಿಗೆ ಖುಷಿ ಹೆಚ್ಚಾಗಿ ಹೇರ್ ಕಟಿಂಗ್ ಸಲೂನ್ ಗೆ ಹೋಗಿ ಗಡ್ಡ ತೆಗೆಸಿ ಕನ್ನಡಿಯಲ್ಲಿ ತನ್ನ ಕೆನ್ನೆಯ ನುಣುಪನ್ನ ನೀವಿ ಮುಟ್ಟಿ ನೋಡಿಕೊಂಡ. ವಯಸ್ಸು ತನಗೆ ಕೊಂಚ ತಗ್ಗಿರುವಂತೆ ಕಂಡಿತು. ತನಗೆ ತಗ್ಗಿದರೆ ತಗ್ಗಲಿ ದೇವರುಗಳಿಗೆ ವಯಸ್ಸಾಗುತ್ತಲೇ ಇರಬೇಕು ಅಂದುಕೊಂಡ.

ಮನೆಗೆ ಬಂದು ಸ್ನಾನ ಮಾಡಿ ಕೃತಜ್ಞತಾ ಭಾವದಲ್ಲಿ ಗೋಡೆಗೆ ದಾರ ಕಟ್ಟಿ ತೂಗು ಹಾಕಿದ್ದ ಫೋಟೊಗಳಿಗೆ ಕೈ ಮುಗಿದ. ನಿಮ್ಮನ್ನ ಮಣ್ಣಲ್ಲಿ ಮುಚ್ತಿದ್ದರೂ ಕಾಪಾಡ್ತಿದ್ದೀರಾ ಎಂದು ತಲೆ ಬಾಗುವಾಗ ಆ ಫೋಟೊಗಳ ಹಿಂದೆ ಈ ಹಿಂದೆ ತಾನು ಎಸೆದಿದ್ದ ಚಾಕಲೇಟ್ಗಳು ನೆನಪಿಗೆ ಬಂದವು. ಸ್ಟೂಲ್ ತಂದು ಹತ್ತಿ ಕೈ ಸರಿಸಿ ತಡಕಾಡಿ ಚಾಕಲೇಟ್ಗಳನ್ನ ತೆಗೆದುಕೊಂಡು ಧೂಳು ಊದಿ ಕವರ್ ಬಿಚ್ಚಿ ಬಾಯಿಗೆ ಹಾಕಿಕೊಂಡು ಚೀಪುತ್ತ ಬಟ್ಟೆ ತೊಟ್ಟುಕೊಂಡು ಹೊರಕ್ಕೆ ನಡೆದ.

ವಿಶಾಲವಾದ ಮನೆ ಅಂದಿದ್ದಾರೆ; ಮಾತಾಡಿ ಅಡ್ವಾನ್ಸ್ ಕೊಟ್ಟು ಬಂದರೆ ಮಾಣಿಕ್ಯ ಅಲ್ಲ..ಅವಳ ಅಮ್ಮಾನೂ ಬಂದು ಬೀಳಬೇಕು ಲೌಡೇರು ಅಂದುಕೊಂಡ ನಡೆಯುತ್ತ ನಡೆಯುತ್ತ. ಅದೇ ಹೊತ್ತಿಗೆ ಎದೆಯಲ್ಲಿ ಗೊರಗೊರ ಶಬ್ದ ಮತ್ತೆ ಹೆಚ್ಚಾದಂತೆ ಕಂಡಿತು. ಇದೊಂದು ನಂದೆಲ್ಲಿಕ್ಲಿ ಅಂತ ಬಂತು ಅಂತ ನಕ್ಕ.

ಮನೆ ಓನರ್ ‘ಎಷ್ಟು ಜನ?’ ಅಂತ ಕೇಳಿದಾಗ ‘ಮೂವರೇ… ನಾನು, ಮಗ ಮತ್ತು ಸೊಸೆ. ಅವರಿಬ್ಬರೂ ಬೇರೆ ರಾಜ್ಯದಾಗವ್ರೆ.. ಇನ್ನೇನು ಬಂದುಬಿಡ್ತಾರೆ…’ ಅಂತ ಸುಳ್ಳು ಹೇಳಿ ಅಡ್ವಾನ್ಸ್ ಕೊಟ್ಟೇಬಿಟ್ಟ.
ಸುಮ್ಮನೆ ಕರೀಬಾರದು, ಹಾಲು ಉಕ್ಸು ಬಾ ಅಂತ ಕರೀಬೇಕು- ಎಂದು ಮಿಲ್ಟ್ರಿ ಹೋಟಲ್ನಲ್ಲಿ ಊಟಮಾಡುತ್ತಾ ಯೋಚಿಸಿದ. ಮೂಳೆ ಚೀಪುವಾಗ ತನ್ನ ಎಡಗೆನ್ನೆ ಕೊಂಚ ಅದುರುತ್ತಿರುವಂತೆ ಅನಿಸಿತು. ಏನೋ ಆಗುತ್ತಿದೆ ಅನಿಸುತ್ತಿರುವಂತೆಯೇ ಎಡಗೈ ಸೆಟೆದುಕೊಳ್ಳುತ್ತಿರುವಂತೆ ತೋರುತ್ತ ಕಾಲಲ್ಲೂ ಸೆಳಕುಗಳು ಕಾಣಿಸಿಕೊಳ್ಳುತ್ತ ತಾನು ಮೂಕವಾಗಿ ನೋಡಲು ಆರಂಭಿಸಿದ್ದಷ್ಟೇ ನೆನಪು… ಆಮೇಲೆ ಯಾರಯಾರದೋ ಮಾತು, ಕೈಹಿಡಿದೆತ್ತುತ್ತಿರುವ ಅನುಭವ…

******

ಕಣ್ಣುಗಳು ತಿಳಿಯಾದಾಗ ರುದ್ರಯ್ಯ ಮತ್ತೆ ತನ್ನ ಪುಟ್ಟ ಮನೆಯಲ್ಲಿ ಗೋಡೆಗೆ ಒರಗಿಕೊಂಡು ಇದ್ದ. ಎಡಗೈ ಮತ್ತು ಕಾಲು ಸೆಟೆದುಕೊಂಡಿದ್ದವು. ಬಾಯಿ ಓರೆಯಾಗಿತ್ತು.

ಎದುರಿಗೆ ಮಾಣಿಕ್ಯ ಕೈ ಕಟ್ಟಿಕೊಂಡು ನಿಂತಿದ್ದಳು. ಜೊತೆಗೆ ಅವಳ ಅಪ್ಪ ಅಮ್ಮ…

‘ಅನುಭವಿಸಿ ಈಗ…’ ಮಾಣಿಕ್ಯ ಅಮ್ಮ ಗೊಣಗಿದ್ದು ರುದ್ರಯ್ಯನಿಗೆ ಕೇಳಿಸಿತು..

ಯಾವುದಕ್ಕೆ ಎಂದು ರುದ್ರಯ್ಯನಿಗೆ ತಿಳಿಯಲಿಲ್ಲ. ಕೇಳಲು ಬಾಯಿ ಓರೆ.

ಮಾಣಿಕ್ಯಳನ್ನ ಮಗ ರಾಜ ಬಡಿದಾಗ ತಾನು ಸುಮ್ಮನೆ ನಿಂತಿದ್ದಕ್ಕೆ ಎಂದು ಇವರು ಅಂದುಕೊಂಡಿರಬಹುದು..

ಆದರೆ ಅವನಿಗೆ ಬೇರೆ ಸಂಗತಿಗಳ ಬಗ್ಗೆ ಅನುಮಾನ. ಡಾಕ್ಟರ್ ಹತ್ರ ಮತ್ತೆ ಹೋಗಿ ಟೆಸ್ಟ್ ಗಳಿಗೆ ಬರೆಸಿಕೊಳ್ಳದೆ ಉಪೇಕ್ಷೆ ಮಾಡಿದಕ್ಕೆ ಹೀಗಾಗಿರಬಹುದು. ಅಥವಾ… ಎಂದು ತಾನು ಈಚೆಗೆ ಹೂತು ಹಾಕಿರುವ ಜಾಗದ ಕಡೆಗೆ ನೋಡಿದ…