” ಬರೆವಣಿಗೆ ಒಂದು ರೀತಿಯಲ್ಲಿ ನನಗೆ ಅಡಗುದಾಣ. ನನಗೆ ಅಂಥಾ ಮಹತ್ವಾಕಾಂಕ್ಷೆಯೇನೂ ಇಲ್ಲ, ನನ್ನ ಬರೆವಣಿಗೆಯ ಬಗ್ಗೆ ಯಾವ ಭ್ರಮೆಯೂ ಇಲ್ಲ. ಹಾಗಾಗಿಯೇ ನನಗೆ ಬರೆದಷ್ಟರ ಬಗ್ಗೆ ತೃಪ್ತಿಯಿದೆ. ಇನ್ನಷ್ಟು ಚೆನ್ನಾಗಿ ಬರೆಯಬೇಕಿತ್ತು ಎನ್ನುವ ಅತೃಪ್ತಿಯೂ ಇದೆ. ಹಾಗೆಂದು ನನ್ನ ಸ್ವಾಭಿಮಾನವನ್ನು ನಾನು ಎಂದೂ ಬಿಟ್ಟು ಕೊಟ್ಟಿಲ್ಲ. ನಾನು ಸುಖದ ಬೆನ್ನು ಹತ್ತದೆ ಇದ್ದುದರಲ್ಲೇ ನೆಮ್ಮದಿಯನ್ನ ಕಾಣುವವನಾಗಿರುವುದರಲ್ಲೇ ಈ ಮನೋಸ್ಥಿತಿಯ ಮೂಲಸೆಲೆ ಇರಬಹುದೇನೋ”
ಕವಿ ಸುಬ್ರಾಯ ಚೊಕ್ಕಾಡಿಯವರ ಎಪ್ಪತ್ತೊಂಬತ್ತನೆಯ ಹುಟ್ಟುಹಬ್ಬಕ್ಕೆ ಅವರ ಮೂವರು ಕಿರಿಯ ಅಭಿಮಾನಿಗಳು ನಡೆಸಿಕೊಟ್ಟಿರುವ ಒಂದು ಮೊಬೈಲ್ ಸಂದರ್ಶನ.

 

ಕಿರಿಯರನ್ನು ಅಕ್ಕರೆಯಿಂದ ಬರಮಾಡಿಕೊಳ್ಳುತ್ತಾ ತಮ್ಮ ನಡವಳಿಕೆ, ಭಾಷಾ ಪ್ರೌಢಿಮೆ, ಕಾವ್ಯ ರಸಜ್ಞತೆ, ತಿದ್ದುವಿಕೆ ಮತ್ತು ಒಳಗೊಳ್ಳುವಿಕೆಯಿಂದ ಗೌರವ ಪೂರ್ವಕ ಪ್ರೀತಿಯನ್ನು ಸಲುಗೆಯನ್ನು ಹುಟ್ಟಿಸುವಂತಹ ಕವಿ ಒಬ್ಬರು ನಮ್ಮ ನಡುವೆಯೇ ಇರುವರು. ಅವರು ತಮ್ಮ ಭಾವಗೀತೆಗಳಿಂದಾಗಿ ಕನ್ನಡ ಜನಮಾನಸದಲ್ಲಿ ಅಚ್ಚು ಮೆಚ್ಚಾಗಿರುವ ಸುಬ್ರಾಯ ಚೊಕ್ಕಾಡಿ. ಎನಗಿಂತ ಕಿರಿಯರಿಲ್ಲ ಎಂಬ ಹಾಗಿನ ನಮ್ರತೆ, ಮೊಮ್ಮಕ್ಕಳೊಡನೆ ಆಡುವ ಅಜ್ಜನ ಹಾಗಿನ ಅಕ್ಕರೆ ಸಲುಗೆಯೊಂದಿಗೆ ನಮ್ಮೊಡನಾಡುವ ರೀತಿ, ಇದು ಏನು, ಈ ಸಾಲು ಹೇಗಿರಬೇಕಿತ್ತು, ಈ ಬರಹ ನೋಡಿ ಹೇಗಿದೆ ಅಂತ ಕಾವ್ಯದ ವಿಷಯ, ಸಾಹಿತ್ಯದ ಮಾತು ಬಂದ ಕೂಡಲೆ ಬೆನ್ನು ನೆಟ್ಟಗಾಗಿ, ಕಣ್ಣು ಚುರುಕಾಗಿ, ಮಗುವಿನ ಬೆರಳು ಹಿಡಿದು ಪಾಟಿಯಲ್ಲಿ ಅಕ್ಷರ ತಿದ್ದಿಸುವ ಟೀಚರೊಬ್ಬ ಮುಂದೆ ಬಂದರೆ ಅದೇ ಚೊಕ್ಕಾಡಿಯವರು ಅಂತ ನನಗೆ ಅನಿಸುತ್ತಿರುತ್ತದೆ. ಅಡಿಕೆಯಾರಿಸುತ್ತ ಜಗಲಿಯಲ್ಲಿ ತನ್ನ ಕಥೆಯ ಮಾಯಾಚಾಪೆ ಹತ್ತಿಸಿಕೊಂಡು ಹೋದ ಅಜ್ಜ, ಮಗುವನ್ನು ಜಗದ ನಿಯಮಗಳ ಶಾಲೆಯಂಗಳದಲ್ಲಿ ಚಾಪೆಯಿಳಿಸಿ, ಚುರುಕು ಮಾತಿನಲ್ಲಿ ಮಾತನಾಡಿಸಿ ಹೇಳಬೇಕಾದ್ದನ್ನು ಹೇಳಿಕೊಡುವ ರೂಪಕ ನನಗೆ ಆಗಾಗ ಇವರ ಮಾತುಕತೆಯಲ್ಲಿ ಅನುಭವಿಸಲು ಸಿಗುತ್ತದೆ. ಸುಳ್ಯ ತಾಲೂಕಿನ ಒಂದು ಮಳೆಕಾಡಿನ ಮಲೆನೆರಳಿನ ಮಧ್ಯೆ ತಣ್ಣಗಿರುವ ಮನೆಯ ಅಂಗಳದಲ್ಲಿ ಆಕಾಶಕ್ಕೆ ದಿಟ್ಟಿ ನೆಟ್ಟು, ನೆಲಕ್ಕೆ ಗಟ್ಟಿ ಕಾಲೂರಿ, ಮಾತು, ನಿಲುವು ಎರಡು ನೆಟ್ಟಗಿರುವ ಒಂದು ಜೀವ ನೋಡಲು ಸಿಕ್ಕರೆ, ನೋಡಿದೊಡನೆ ಗುರುತಿರದೆಯೂ ನಕ್ಕರೆ ಅವರು ಸುಬ್ರಾಯರು, ಆ ಊರು ಚೊಕ್ಕಾಡಿ.
ಇವರ 79ನೆ ಜನ್ಮದಿನದ ನೆಪದಲ್ಲಿ ನಾವು ಮೂವರು ಗೆಳೆಯರು ಇವರನ್ನು ಒಂದಿಷ್ಟು ಮಾತಿಗೆಳೆಯುವ ಅಂತ ಮಾತಾಡಿಕೊಂಡೆವು. ಹರೀಶ್ ಕೇರ ಚೊಕ್ಕಾಡಿಯವರ ಸುಮನಸಾ ವೇದಿಕೆಯಲ್ಲಿ ಪಳಗಿದ ಶಿಷ್ಯ, ಮಾಲಿನಿ ಕುಮಾರವ್ಯಾಸನ ಜಗಲಿಯಿಂದ ನವ್ಯನವ್ಯೋತ್ತರಕ್ಕೆ ಭಾಷ್ಯ ಬರೆಯುತ್ತ ಕಾವ್ಯೋತ್ಸಾಹಿಗಳ ಬಿಗಿದು ಸೇರಿಸುವ, ಚೊಕ್ಕಾಡಿಯವರೊಡನೆ ಸಹಸ್ಪಂದನಕ್ಕೆ ತೆರೆದುಕೊಂಡಿರುವ ಮಗಳಂತ ಶಿಷ್ಯೆ, ಮತ್ತು ನಾನು ಒಂದು ಬೆರಗಲ್ಲಿ ಅಜ್ಜನನ್ನು ನೋಡುತ್ತಲೆ ಅವನ ನೇವರಿಕೆಯಲ್ಲಿ ಸೇರಿರುವ ಮೊಮ್ಮಗಳ ಹಾಗೆ, ಕಿರಿಯ ಶಿಷ್ಯೆ.
ಸುಬ್ರಾಯ ಚೊಕ್ಕಾಡಿ ಎಂಬ ಈ ಸಾಹಿತ್ಯರಸಜ್ಞನ ಆಲೆಮನೆಯಿಂದ ಒಂದಿಷ್ಟು ಇಕ್ಷುರಸ ಹಿಂಡಿ ಓದುಪ್ರೀತಿಯ ಎಲ್ಲರೊಡನೆ ಹಂಚಿ ಸವಿಯುವಾಸೆ ನಮಗೆ. ಕೇಳಿದ ಕೂಡಲೆ ಕೆಂಡಸಂಪಿಗೆಯ ಸಂಪಾದಕರು ನಮ್ಮ ಮರದ ಕೆಳಗೆ ಕೂತೇ ಸವಿಯಿರಿ, ಹಂಚಿರಿ ಎಂದು ಅವಕಾಶ ಕೊಟ್ಟರು. ಮರವನ್ನು ಎಣಿಸುತ್ತಾ ಕಾಡನ್ನು ಮರೆತ ಹಾಗೆ ಎಂಬ ಹಾಗೆ ನಮ್ಮ ಮಾಧ್ಯಮಗಳಿರುವ ಈ ಕಾಲದಲ್ಲಿ, ಕಾಡನ್ನ ಅದರ ವಿವಿಧ ರೂಪಗಳೊಡನೆ ಎದುರಿಗಿಡುವ ಹಾಗೆ ಕೆಂಡಸಂಪಿಗೆ ಪತ್ರಿಕೆಯು ಸಾಹಿತ್ಯವನ್ನ ಓದುಪ್ರೀತಿಯವರಿಗೆ ನೀಡುತ್ತಿದೆ. ಈ ಬರಹ ಪರಿಮಳದೊಡನೆ ಕುಕಿಲು ಸೇರಿದ ಹಾಗೆ ನಿಮ್ಮ ಮನಸ್ಸನ್ನು ಮುಟ್ಟಲಿ, ಹೊಸ ನೋಟಗಳು ತೆರೆಯಲಿ ಎಂದು ನಮ್ಮ ಆಶೆ.

 

ಮಾಲಿನಿ: ಸರ್… ಒಂದಿಷ್ಟು ಪ್ರಶ್ನೆಗಳಿವೆ. ಕೇಳಬಹುದಾ. (ಮಾಲಿನೀ ಪ್ರಶ್ನಾಧಾರಿಣಿ ಅಂತಲೆ ನಮ್ಮ ಗೆಳೆಯರ ಗುಂಪಿನಲ್ಲಿ ಪ್ರಸಿದ್ಧರು) ಇದನ್ನು ಕೇಳಿದಾಗ ರಾತ್ರಿ 9 ಗಂಟೆ.

‌ಚೊಕ್ಕಾಡಿ: ನಾನು ಮೇಷ್ಟರಾಗಿದ್ದವ. ಅದರಲ್ಲು ಹೆಡ್ ಮಾಷ್ಟ್ರು. ಪ್ರಶ್ನೆ ಕೇಳುವುದು ನನ್ನ ಹಕ್ಕು. ಉತ್ತರಿಸುವುದು ಶಿಷ್ಯ, ಶಿಷ್ಯೆಯರ ಕರ್ತವ್ಯ ಅಂತ ತಿಳಿದಿದ್ದೆ. ಆದ್ರೆ ಈಗ ನನಗೇ ಪ್ರಶ್ನೆ ಕೇಳಲು ನಿಮಗೆ ಎಷ್ಟು ಧೈರ್ಯ. ಆಯ್ತು ಬರಲಿ ನಿಮ್ಮ ಪ್ರಶ್ನೆಗಳ ಬಾಣಗಳು.
ಮಾಲಿನಿ: ಒಟ್ಟಿಗೆ ಕಳಿಸ್ತೇವೆ ಸರ್, ಆಗದಾ?

ಚೊಕ್ಕಾಡಿ: ಬರೀ ಪ್ರಶ್ನೆಗಳೋ? ಪ್ರಶ್ನೆಪತ್ರಿಕೆಯೋ? ತುಂಬ ಇದೆಯಾ? ಹಾಗಿದ್ದರೆ ನೀವು ಪ್ರಶ್ನೆಗಳನ್ನ ವಾಟ್ಸಪ್ಪಲ್ಲಿ ಹಾಕಿ. ನಾನು ಮಲಗ್ಗೆದ್ದು ಬೆಳಿಗ್ಗೆ ಮುಂಚೆ ಬರೀತೇನೆ. ಈಗ ಎಕ್ಸಾಮ್ ಫಿವರ್ ಬಂದಿದೆ.
(ನಾವು ಮೂವರೂ ಪ್ರಶ್ನೆಪತ್ರಿಕೆ ಸೆಟ್ ಮಾಡಿ ಬೆಳಗ್ಗೆ ಒಂದೊಂದಾಗಿ ಪ್ರಶ್ನೆ ಹಾಕಿದೆವು. ನಾವು ಪ್ರಶ್ನೆ ಹಾಕಿ ಮುಗಿಸುವುದರೊಳಗೆ ಉತ್ತರ ರೆಡೀ. ಟೀಚರ್ ಇಷ್ಟು ಚುರುಕಿದ್ರೆ ಮಕ್ಕಳು ಹೆಂಗೆ ತಯಾರಾಗಬಹುದು ಯೋಚಿಸಿ.)
ಬೆಳಿಗ್ಗೆ ಆರೂವರೆಗೆ ಕಳಿಸಿದ ಪ್ರಶ್ನೆಗಳಿಗೆ, ಎಂಟು ಗಂಟೆಯೊಳಗೆ ವಾಟ್ಸಪ್ಪಲ್ಲಿ ಉತ್ತರ ಬಂದಿದೆ. ನೀವೇ ಓದಿ.

ಪ್ರಶ್ನೆ: ಜನ ನಿಮ್ಮನ್ನು ನಿಮ್ಮ ನವ್ಯ- ನವ್ಯೋತ್ತರ ಕವಿತೆಗಳ ಸಾಧನೆಗಳನ್ನು ಗುರುತಿಸಿದ್ದಕ್ಕಿಂತಲೂ ಹೆಚ್ಚಾಗಿ, ‘ಮುನಿಸು ತರವೇ ಮುಗುದೆ’ ಮುಂತಾದ ಭಾವಗೀತೆಗಳ ಕವಿಯಾಗಿ ಗುರುತಿಸತೊಡಗಿದಾಗ ಏನನ್ನಿಸಿತು?

(ಚಿತ್ರ: ಪ್ರಸಾದ್ ರಕ್ಷಿದಿ)

ಚೊಕ್ಕಾಡಿ: ನಿಜ ನನ್ನ ಇತರ ಕವಿತೆಗಳನ್ನು ಗುರುತಿಸದೆ ಭಾವಗೀತೆಗಳನ್ನು -ಅದರಲ್ಲೂ ಮುಖ್ಯವಾಗಿ ಮುನಿಸು ತರವೇ ಮೂಲಕ ಗುರುತಿಸ್ತಾ ಇರುವುದನ್ನು ಕಂಡು ಕಸಿವಿಸಿಯಾಗ್ತಿರೋದು ನಿಜ. ಆದರೆ ಇದಕ್ಕೆ ಇನ್ನೊಂದು ಮುಖವೂ ಇದೆ. ನನ್ನ ಗಂಭೀರ ಕವಿತೆಗಳನ್ನು ಓದುವವರೇ ಬೇರೆ, ಭಾವಗೀತೆಗಳಿಗೆ ಪ್ರತಿಕ್ರಿಯಿಸುವವರೇ ಬೇರೆ. ಗಂಭೀರ ಕವಿತೆಗಳ ಓದುಗರ ಸಂಖ್ಯೆ ಕಡಿಮೆಯಿರುತ್ತದೆ. ಮತ್ತು ಅವರು ಅಷ್ಟು ಸುಲಭವಾಗಿ ಪ್ರತಿಕ್ರಿಯಿಸಲಾರರು. ಆದರೆ ಭಾವಗೀತೆಗಳ ಕೇಳುಗರು ಸಾಮಾನ್ಯ ವ್ಯಕ್ತಿಗಳಾಗಿದ್ದು ಅದರ ಸರಳ ವಸ್ತು, ರಾಗ , ಭಾವ, ಹಾಡಿದ ರೀತಿ ಇತ್ಯಾದಿಗಳಿಂದಾಗಿ ಸುಲಭವಾಗಿಯೇ ಪ್ರತಿಕ್ರಿಯಿಸಬಲ್ಲರು. ಕನಿಷ್ಟ ಒಂದು ವರ್ಗದ ಜನರಿಗಾದರೂ ನನ್ನ ಕವಿತೆ ತಲುಪಿದ ಸಂತೋಷ ನನಗಿದೆ. ಉಳಿದ ಗಂಭೀರ ಕವಿತೆಗಳಿಗೆ ಅಷ್ಟಾಗಿ ಪ್ರತಿಕ್ರಿಯೆ ಬಾರದ್ದರ ಬಗ್ಗೆ ನನಗೆ ಬೇಸರವೇನೂ ಇಲ್ಲ. ನನ್ನ ಶಕ್ತಿಯೇ ಅಷ್ಟು ಅಂದುಕೊಳ್ಳುವೆ. ಇಷ್ಟಕ್ಕೂ ಕೆ.ಎಸ್.ನ., ಬೇಂದ್ರೆ, ವಿ.ಸೀ.ಯಂಥವರ ಕವಿತೆಗಳ ಪೈಕಿ ಹೆಚ್ಚು ಜನರಿಗೆ ತಲುಪಿರುವುದು ಅವರ ಸರಳ ಹಾಡುಗಳೇ ಅಲ್ಲವೇ? (ಉದಾ:ಕೆಎಸ್ ನರ ಗಂಭೀರ ಕವಿತೆಗಳಿಗಿಂತ ಮೈಸೂರು ಮಲ್ಲಿಗೆಯ ಕವಿತೆಗಳೇ ಹೆಚ್ಚು ಜನಪ್ರಿಯ ಅಲ್ಲವೇ?)

ಪ್ರಶ್ನೆ: ಕನ್ನಡದ ಮುಖ್ಯ ಕವಿಗಳ ಕವಿತೆಗಳ ಒಂದು ಆಂಥಾಲಜಿ ಹೊರತಂದರೆ, ಅದರಲ್ಲಿ ನಿಮ್ಮ ಯಾವ ಕವಿತೆ ಇರಬೇಕು ಅಂತ ಬಯಸುತ್ತೀರಿ? ಯಾಕೆ?

ಚೊಕ್ಕಾಡಿ: ಅದು ಅವರ ಆಯ್ಕೆ. ಇಂಥದೇ ಕವಿತೆ ಅಲ್ಲಿರಬೇಕೆಂದು ನಾನು ಬಯಸಲಾರೆ. ಯಾಕೆಂದರೆ ನನಗೆ ಇಷ್ಟವಾಗುವಂಥದು ಇಲ್ಲಿ ಆಯ್ಕೆಗಾರರಿಗೆ ಇಷ್ಟವಾಗಿರಲಾರದು. ಅಲ್ಲದೆ, ಯಾವ ಕವಿತೆಯೂ ಒಬ್ಬ ಕವಿಗೆ ಪೂರ್ಣ ತೃಪ್ತಿ ಕೊಡಲಾರದು. ಹಾಗೆ ತೃಪ್ತಿ ಕೊಟ್ಟರೆ ಆತ ಇನ್ನೊಂದು ಕವಿತೆ ಬರೆಯಲಾರ. ಒಬ್ಬ ಕವಿ ಮೂಲತಃ ಬರೆಯುವುದು ಒಂದೇ ಕವಿತೆಯನ್ನ. ವಸ್ತುವಿನ ಅನಂತ ಮುಖಗಳಲ್ಲಿ ಒಂದನ್ನು ಹಿಡಿದ ಆ ಕವಿತೆ ಸಹಜವಾಗಿಯೇ ತೃಪ್ತಿ ಕೊಡದು. ಆ ಅತೃಪ್ತಿಯೇ ಅವನು ಇನ್ನೊಂದು ಕವಿತೆ ಬರೆಯಲು ಕಾರಣವಾಗುತ್ತದೆ. ಹಾಗಾಗಿ ಯಾವ ಕವಿತೆಯನ್ನು ಆಯ್ದರೂ ಅದು ಕವಿ ಬಯಸುವ ಸತ್ಯದ ಅನಾವರಣದ ಒಂದು ಮುಖವೇ ಆಗಿರುವ ಕಾರಣ ಬೇಸರವೇನೂ ಆಗದು. ನನಗಂತೂ ಬರೆದಾದ ಮೇಲೆ ಅದು ನನ್ನದಲ್ಲ, ಓದುಗನದು. ಆಯ್ಕೆ ಅವನದು, ನನ್ನದಲ್ಲ.

ಪ್ರಶ್ನೆ: ಈಗ ನೀವು ಫೇಸ್ಬುಕ್ ವಾಟ್ಸಪ್ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೀರಿ. ಈ ರೀತಿಯ ಮಾಧ್ಯಮಗಳಿಲ್ಲದಿದ್ದಾಗ.. ಇದ್ದಾಗಿನ ವ್ಯತ್ಯಾಸ.. ಅಥವಾ ಅದರ ಬಗ್ಗೆ ನಿಮ್ಮ ಅನಿಸಿಕೆಯೇನು? ಈ ರೀತಿಯ ಇನ್ಸ್ಟಂಟ್ ಪ್ರತಿಕ್ರಿಯೆ ನೀಡಬಲ್ಲ ಜಗತ್ತಿನಿಂದ ಇನ್ಸ್ಟಂಟ್ ಸಾಹಿತ್ಯ ಸೃಷ್ಟಿಯಾಗುತ್ತಿದೆಯಾ? ಹಾಗಿದ್ದರೆ ಇದನ್ನು ಕವಿ ಹೇಗೆ ನಿಭಾಯಿಸಬಹುದು?

ಚೊಕ್ಕಾಡಿ: ವಾಟ್ಸಪ್, ಎಫ್ ಬಿ ಎಲ್ಲ ಇಲ್ಲದಾಗ ನಾನು ನೇರವಾಗಿ ಪತ್ರ ಮುಖೇನ ಲೇಖಕರನ್ನು, ಕಾವ್ಯಾಸಕ್ತರನ್ನು ಸಂಪರ್ಕಿಸುತ್ತಿದ್ದೆ. ಅಲ್ಲಿ ಜಗಳ ಕಾದದ್ದೂ ಇದೆ. ಅಲ್ಲಿನ ನೇರ ಸಂಪರ್ಕ, ಪತ್ರಗಳಲ್ಲಿದ್ದ ಆತ್ಮೀಯತೆಯೇ ನನ್ನನ್ನು ಪೋಶಿಸಿತ್ತು ಬೆಳೆಸಿತ್ತು. ಅಲ್ಲಿ ಕೃತಕತೆಯಿರಲಿಲ್ಲ, ನೇರ ಸಂವಾದವಿತ್ತು. ಅದರಲ್ಲಿದ್ದ ಖುಶಿ ಈಗ ನಾನು ತೊಡಗಿಕೊಂಡಿರುವ ವಾಟ್ಸಪ್ ಎಫ್ ಬಿಗಳಲ್ಲಿಲ್ಲ.ಇಲ್ಲಿ ಒಂದು ಬಗೆಯ ಕೃತಕತೆ, ಪ್ರದರ್ಶನ ಪ್ರಿಯತೆ ಕಾಣಿಸುತ್ತಿದೆ. ಅನೇಕ ಸಲ ಅದು ನಮ್ಮ ಕ್ರಿಯಾಶೀಲತೆಗೆ ಅಡ್ಡಿಯಾಗುತ್ತಿದೆಯೇನೋ ಅನ್ನುವ ಅನುಮಾನದಲ್ಲೇ ಇದರಲ್ಲಿ ತೊಡಗಿಕೊಂಡಿದ್ದೇನೆ. ಆ ಪೈಕಿ ವಾಟ್ಸಪ್ ಹೆಚ್ಚು ಉಪಯುಕ್ತ ಅಂತ ನನಗನ್ನಿಸಿದ್ದಿದೆ. ಮುಖ್ಯವಾಗಿ ಇದನ್ನು ನಾವು ಹೇಗೆ ಬಳಸಿಕೊಳ್ತೇವೆ ಎಂಬುದು ಮುಖ್ಯ. ಆ ಎಚ್ಚರ ನಮಗಿರಬೇಕು.ಇಲ್ಲವಾದರೆ ಸೃಷ್ಟಿಯಾಗೋದು ನಿಶ್ಚಯ. ಅಲ್ಲಿನ ಲೈಕುಗಳು, ಕಾಮೆಂಟುಗಳನ್ನು ಅನುಮಾನದಿಂದಲೇ ಸ್ವೀಕರಿಸುವುದು ಒಳಿತು ಅಂತ ನನಗನಿಸುತ್ತದೆ. ಈ ಇನ್ಸ್ಟೆಂಟ್ ಜಗತ್ತಿನ ಅರಿವಿಲ್ಲದಿದ್ದರೆ ಕವಿ ಖಾಲಿಯಾಗುತ್ತಾ ಹೋಗುವುದು ಖಚಿತ .

ಪ್ರಶ್ನೆ: ಸಾಹಿತಿಗೆ ಮತ್ತು ಕವಿಗೆ ಈ ಸೃಜನಶೀಲ ಸಮಾನಮನಸ್ಕರೊಡನೆ ಒಡನಾಟ ಯಾಕೆ ಮತ್ತು ಎಷ್ಟು ಮುಖ್ಯ? ನಿಮ್ಮ ಸುಮನಸಾ ವೇದಿಕೆಯ (ಸುಳ್ಯದ ಮಧ್ಯದ ಸಮಾನಮನಸ್ಕ ಸಾಹಿತಿಗಳ ವೇದಿಕೆ) ಚಟುವಟಿಕೆಯ ಬಗ್ಗೆ ಗೊತ್ತಿದ್ದರಿಂದ ಈ ಪ್ರಶ್ನೆ. ಸಾಮಾನ್ಯವಾಗಿ ಲೇಖಕರು ತಮತಮದೇ ವಲಯಗಳಲ್ಲಿ ಇರುತ್ತಾರೆ. ನೀವು ಎಲ್ಲರನ್ನು ಸೇರಿಸಿ, ಮಾತಾಡಿಸಿ, ವಿಮರ್ಶಿಸಿ ಮತ್ತು ಹೊಸಬರನ್ನೂ ಸಾಹಿತ್ಯಕ್ಕೆ ಹಚ್ಚುತ್ತ ಬಂದ ರೀತಿಯೇ ನನಗೆ ಅಚ್ಚರಿ.

ಚೊಕ್ಕಾಡಿ: ನಾನು ನವ್ಯ ಸಾಹಿತ್ಯದ ಆಸಕ್ತಿ ಹೊಂದಿದ ಕಾಲದಲ್ಲಿ ನವ್ಯ ಬಿಡಿ ಸಾಹಿತ್ಯದ ಪರಿಚಯವೇ ಇಲ್ಲದ ಕಾಲ ನನ್ನ ಹಳ್ಳಿಯದಾಗಿತ್ತು. ತಿಳಿಸುವ ಗುರುವೂ ಇರಲಿಲ್ಲ, ಮುಂದಿನ ಗುರಿಯೂ ಸ್ಪಷ್ಟವಿರಲಿಲ್ಲ. ಹೊಸ ಬರೆವಣಿಗೆಯ ಅಭ್ಯಾಸಕ್ಕೆ ಬೇಕಾದ ವಾತಾವರಣವನ್ನು, ಭೂಮಿಕೆಯನ್ನು ನಾನೇ ಸೃಷ್ಟಿ ಮಾಡಿಕೊಳ್ಳಬೇಕಾಗಿತ್ತು. ಅದಕ್ಕಾಗಿ ಸಮಾನ ಮನಸ್ಕರ ಒಂದು ತಂಡವನ್ನು ಕಟ್ಟಿಕೊಂಡು ಆಮೂಲಕ ಸಮಕಾಲೀನ ಮತ್ತು ಹಿಂದಿನ ದಿನದ ಹೊಸಸಾಹಿತ್ಯದ ಅಭ್ಯಾಸ, ಸಾಹಿತ್ಯ ಸೃಷ್ಟಿ, ಹೊಸ ಸಾಹಿತ್ಯದ ಪ್ರಕಟಣೆ, ಹೊಸನಾಟಕಗಳ ರಚನೆ ಹಾಗೂ ಪ್ರದರ್ಶನ, ಹೊಸ ಲೇಖಕರ ಸಂಪರ್ಕ ಮತ್ತು ಸಂವಾದ, ಬೀದಿ ನಾಟಕಗಳು, ಪರಿಸರ ರಕ್ಷಣೆಯ ಜಾಥಾ, ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟ, ಪತ್ರಿಕಾ ಪ್ರಕಟಣೆ….. ಇತ್ಯಾದಿಗಳಲ್ಲಿ ಭಾಗವಹಿಸುವ ಮೂಲಕ ಸೃಜನಶೀಲತೆಯ ವಿವಿಧ ಆಯಾಮಗಳ ಅನುಭವ ಪಡೆದುಕೊಳ್ಳಬೇಕಾಯಿತು. ನನ್ನ ಜತೆಯವರಲ್ಲೂ ಅಂಥದೇ ಕನಸುಗಳಿದ್ದುದರಿಂದ ಇಲ್ಲಿ ಹೊಸ ಸಾಹಿತ್ಯದ ಕುರಿತಾದ ಎಚ್ಚರ, ಆಳದ ಆಸಕ್ತಿ ಹಾಗೂ ಅಭ್ಯಾಸ ಸಾಧ್ಯವಾಯ್ತು. ಜತೆಯ ಯುವಕರಿಗೆ ಆಸಕ್ತಿ, ಸಹನೆ ಇತ್ಯಾದಿ ಇದ್ದುದರಿಂದ ಅಧ್ಯಯನ ಹೆಚ್ಚು ಕಟ್ಟುನಿಟ್ಟಿನದೂ ಶಿಸ್ತುಬದ್ಧವೂ ಆಗಲು ಸಾಧ್ಯವಾಯ್ತು. ಇದು ಹಳ್ಳಿಯಾದ್ದರಿಂದ ಎಲ್ಲ ಬಗೆಯವರೊಂದಿಗೂ ಬೆರೆಯಲು ಸಾಧ್ಯವಾಯ್ತು. ನಾವು ಸಾಹಿತ್ಯಾಭ್ಯಾಸಿಗಳು ಬೇರೆ ಎಂಬ ಭಾವ ಆಗಲೂ ಇರಲಿಲ್ಲ, ಈಗಲೂ ಇಲ್ಲ. ಬರೆಹಕ್ಕೆ ಸಂಬಂಧಿಸಿ ಮಾತ್ರ ನಾನಾಗಲೀ ಸುಮನಸಾದ ಇತರರಾಗಲೀ ಬೇರೆ, ಉಳಿದಂತೆ ನಾವೂ ಆ ಸಾಮಾನ್ಯರೆಂದು ಭಾವಿಸುವವರಲ್ಲಿ ಒಬ್ಬರೇ ಎಂಬಂತಿದ್ದೆವು. ಈಗಲೂ ಹಾಗೆಯೇ.

ಪ್ರಶ್ನೆ: ನಿಮ್ಮ ಯಾವ ಕವಿತೆ, ನಿಮ್ಮ ಒಟ್ಟಾರೆ ಕಾವ್ಯಕರ್ಮದ ಸಮಗ್ರ ತಾತ್ವಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನಿಮಗೆ ಅನಿಸುತ್ತದೆ.

ಚೊಕ್ಕಾಡಿ: ಯಾವುದೊಂದು ಕವಿತೆಯೂ ನನ್ನ ಒಟ್ಟೂ ಕಾವ್ಯಕರ್ಮದ ತಾತ್ವಿಕತೆಯನ್ನು ಪ್ರತಿಬಿಂಬಿಸಲಾರದು. ಕವಿ ಬರೆಯುವ ಒಂದೇ ಕವಿತೆಯ ಹಲವು ಭಾಗಗಳಲ್ಲಿ(ಬೇರೆಬೇರೆ ಕವಿತೆಗಳ ರೂಪದಲ್ಲಿ)ಅದು ಚದುರಿಕೊಂಡಂತಿರುತ್ತದೆ. ಕೆಲವು ಕವಿತೆಗಳಲ್ಲಿ (ಉದಾ:ಧ್ಯಾನಸ್ಥ ಕವಿತೆಯಲ್ಲಿ) ಸ್ವಲ್ಪ ಹೆಚ್ಚಾಗಿ ಕಾಣಿಸಿಕೊಂಡಿರಬಹುದು. ಒಬ್ಬ ಕವಿಯ ತಾತ್ವಿಕೆಯನ್ನು ಅವನ ಒಟ್ಟೂ ಕವಿತೆಗಳ ಮೂಲಕ ಗಮನಿಸಬೇಕು ಅಂತ ನನ್ನ ಅಭಿಪ್ರಾಯ. ಪಂಪನಂಥ ಕವಿಕೂಡ ಭಾರತ ಕಥೆ ತನ್ನ ತಾತ್ವಿಕತೆಯನ್ನು ಹಿಡಿದಿಡಲಾರದೆಂದು ಆದಿಪುರಾಣವನ್ನು ಬರೆದ. ಇಂಥ ಅನೇಕ ಉದಾಹರಣೆ ಕೊಡಬಹುದು. ಇಂದಿನ ಕವಿಗಳಿಗೆ ಹಿಂದಿನಂಥವರಿಗಿದ್ದ ಕಥೆಯ, ಬೃಹತ್ ಕ್ಯಾನ್ ವಾಸಿನ ಬೆಂಬಲ ಇಲ್ಲದ ಕಾರಣ ಇದನ್ನು ಗುರುತಿಸುವುದು ಇನ್ನೂ ಕಷ್ಟ.

ಪ್ರಶ್ನೆ: ಹಿಂದಿನ ಪ್ರಶ್ನೆಯ ಮುಂದುವರಿಕೆ: ಹಾಗೊಂದು ತಾತ್ವಿಕ ಭಿತ್ತಿ ಒಬ್ಬ ಕವಿಗೆ ಅಗತ್ಯವೇ? ಇಂದಿನ ಹೊಸ ಕವಿಗಳ ಚದುರಿದ ಚಿಂತನೆಗಳನ್ನು ನೋಡಿದರೆ ನಿಮಗೆ ಏನನಿಸುತ್ತದೆ?

ಚೊಕ್ಕಾಡಿ: ಎಷ್ಟೇ ಬೇಡವೆಂದರೂ ಒಬ್ಬ ಕವಿಗೆ ತಾತ್ವಿಕ ಭಿತ್ತಿಯೊಂದು ಇದ್ದೇ ಇರುತ್ತದೆ. ಅದು ಚದುರಿದಂತೆ ಇರಬಹುದು. ಆ ತಾತ್ವಿಕತೆ ಬರೆಯುತ್ತಾ ಹೋದಂತೆ ಗಟ್ಟಿಯಾಗುತ್ತಾ ಹೋಗುತ್ತದೆ. ಮೊದಲಿಗೆ ನಾವು ಮಾಧ್ಯಮದ ಹುಡುಕಾಟದಲ್ಲಿ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಾ ಆಮೇಲೆ ಒಂದು ಪ್ರಕಾರಕ್ಕೇ ಅಂಟಿಕೊಳ್ಳುವ ಹಾಗೆ. ಅಂಥ ತಾತ್ವಿಕತೆಯನ್ನು ಹೊಂದಿಲ್ಲದ ಕವಿ ನಿಧಾನಕ್ಕೆ ಜೊಳ್ಳಾಗುತ್ತಾ ಹೋಗುತ್ತಾನೆ. ಹೊಸ ಕವಿಗಳಲ್ಲಿ ಈಗ ಆ ತಾತ್ವಿಕತೆ ಸ್ಪಷ್ಟವಾಗಿ ಗೋಚರಿಸದಿರಬಹುದು. ಸತ್ವ ಇರುವ, ಆಳವಾಗಿ ತೊಡಗಿಕೊಳ್ಳುವ ಕವಿ ಅದನ್ನು ಕಂಡುಕೊಂಡೇ ತೀರುತ್ತಾನೆ.

ಪ್ರಶ್ನೆ: ನಿಮ್ಮ ಮೊದಲ ಹಂತದ ಕವಿತೆಗಳು ಮನುಷ್ಯ ಕೇಂದ್ರಿತವಾಗಿದ್ದವು. ಇತ್ತೀಚಿನ ಕವಿತೆಗಳು ನಿಸರ್ಗಕೇಂದ್ರಿತವಾಗಿವೆ. ಈ ಬದಲಾವಣೆ ಉದ್ದೇಶಪೂರ್ವಕವೇ? ಇದನ್ನು ಒಬ್ಬ ಕವಿಯ ಬೆಳವಣಿಗೆಯಲ್ಲಿ ಹೇಗೆ ಗ್ರಹಿಸಬೇಕು?

ಚೊಕ್ಕಾಡಿ: ಹಿಂದೆ ನನ್ನ ಮೇಲೆ ಪ್ರಭಾವ ಬೀರಿದ್ದ ನವ್ಯ ಕವಿತೆಗಳು ಮನುಷ್ಯ ಕೇಂದ್ರಿತವಾಗಿದ್ದು ನಾನೂ ಅಂತಹ ಕವಿತೆಗಳನ್ನು ಬರೆಯತೊಡಗಿದೆ. ಅಲ್ಲದೆ ನನ್ನ ಬದುಕಿನ ಹಿನ್ನೆಲೆಯೂ ಇದಕ್ಕೆ ಕಾರಣವಾಗಿತ್ತು. ಆದರೆ ಆಮೇಲೆ ಇದರ ಸೀಮಿತತೆಯ ಅರಿವಾಗತೊಡಗಿತು. ಅಗಾಧ ಪ್ರಕೃತಿಯ ಎದುರು ಮನುಷ್ಯ ಎಂಬ ಜೀವಿ ಒಂದು ಕಃಪದಾರ್ಥ ಎಂಬುದು ಅರಿವಾಗತೊಡಗಿತು. ಪ್ರಕೃತಿಯ ಎದುರು ನಾನೆಷ್ಟರವ, ಅದರ ರಹಸ್ಯವೇನು ಎಂಬುದು ಕಾಡತೊಡಗಿತು. ಅಲ್ಲದೆ ಪ್ರಕೃತಿಯ ನಡುವೆಯೇ ಬದುಕುತ್ತಿರುವ ನನಗೆ ಪ್ರಕೃತಿಯ ಅನಂತ ರೂಪಗಳ ಅರಿವು ಸ್ವಲ್ಪ ಸ್ವಲ್ಪವೇ ಆಗತೊಡಗಿತು. ಪ್ರಕೃತಿಯ ಎದುರು ಮನುಷ್ಯನ ಶಕ್ತಿ ಹಾಗೂ ಮಿತಿಗಳ ಭಾಸವಾಗುವಿಕೆಯಲ್ಲಿ ನಾನು ಆಮೇಲೆ ಕವಿತೆ ಬರೆಯತೊಡಗಿದೆ. ಹಾಗೆಂದು ಇದು ಕುವೆಂಪು ಹಾಗೂ ಇತರ ಕವಿಗಳು ಕಂಡ ಪ್ರಕೃತಿ ಅಲ್ಲ, ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸಂಬಂಧದ ಹುಡುಕಾಟ. ಆರಂಭದಲ್ಲಿ ಮನುಷ್ಯಕೇಂದ್ರಿತವಾಗಿದ್ದ ನನ್ನಕವಿತೆಗಳು ಆಮೇಲೆ ಸಮಾಜ ಕೇಂದ್ರಿತವಾದವು. ಅಲ್ಲಿಂದ ಮುಂದುವರಿದು ಪ್ರಕೃತಿ ಕೇಂದ್ರಿತವಾದವು. ಮುಂದಿನ ಹಂತ ತಿಳಿಯದು. ಅಷ್ಟರಲ್ಲಿ ನನ್ನ ಆಯುಷ್ಯವೇ ಮುಗಿಯುತ್ತಾ ಬಂದಿದೆಯಲ್ಲ!ಇದು ಉದ್ದೇಶಪೂರ್ವಕವೆನ್ನುವುದಕ್ಕಿಂತ ಅನಿವಾರ್ಯ ಬೆಳವಣಿಗೆ ಎನ್ನಬಹುದು. ಈ ಬೆಳವಣಿಗೆ ಸರಳರೇಖೆಯ ಥರದ್ದೋ, ಚಕ್ರಗತಿಯದ್ದೋ ತಿಳಿಯದು ……

ಪ್ರಶ್ನೆ: ಒಳ್ಳೆಯ ಮಾತು, ಮೆಚ್ಚುಗೆ ಎಲ್ಲರಿಗೂ ಇಷ್ಟ. ತಿದ್ದುವಿಕೆ ನಮಗ್ಯಾಕೆ, ಒಳ್ಳೆಯವನಾಗಿ ಹೆಸರು ತಗೊಳೋಣ ಎಂಬ ಕಾಲದಲ್ಲಿ ನೀವು ನಿಜ ಸಾಹಿತ್ಯಾಸಕ್ತರನ್ನ ತಿದ್ದುತ್ತ ಬಂದಿದೀರಿ, ಕೊಂಕುತನವಲ್ಲದ ನೇರವಂತಿಕೆಯನ್ನ ಉಳಿಸಿಕೊಂಡಿದಿರಿ. ಇದು ಹೇಗೆ? ನಿಮ್ಮ ಪ್ರಾಥಮಿಕ ಶಾಲೆಯ ಅಧ್ಯಾಪಕ ವೃತ್ತಿ ಇದಕ್ಕೆ ಕಾರಣವೇ?

ಚೊಕ್ಕಾಡಿ: ನಿಜ, ನನ್ನ ಪ್ರಾಥಮಿಕಶಾಲಾ ಅಧ್ಯಾಪಕತನ ಜನಸಾಮಾನ್ಯರೊಂದಿಗೆ ಎಲ್ಲಹಂತದ ವಯಸ್ಸಿನವರೊಂದಿಗೆ ಬೆರೆಯಲು ಸಹಾಯಮಾಡಿತು. ‘ಸುಮನಸಾ’ದಲ್ಲಿದ್ದ ಹುಡುಗರು ನನಗಿಂತ ಕಿರಿಯರೂ, ಹೆಚ್ಚಿನವರು ನನ್ನ ಸಂಬಂಧಿಗಳೂ ಆದ್ದರಿಂದ ಗದರಿಸಿಯೋ, ಛೇಡಿಸಿಯೋ ತಿದ್ದಲು ಸಾಧ್ಯವಾಯ್ತು. ನಮ್ಮ ಸ್ನೇಹ ಸಂಬಂಧವನ್ನು ಎಂದೂ ಕಳಕೊಳ್ಳದ ಕಾರಣ ಎಲ್ಲರ ಬೆಳವಣಿಗೆ ಸಾಧ್ಯವಾಯ್ತು. ಆಗ ಅಂಥ ವಾತಾವರಣವಿತ್ತು. ಇಂದು ಅಂಥ ವಾತಾವರಣ ಇದೆಯೆನ್ನಲಾಗುವುದಿಲ್ಲ. ನನ್ನಲ್ಲಿಗೆ ಬಂದ ಕೆಲವು ಎಳೆಯರು ಆ ಸಹನಾ ಶಕ್ತಿಯಿಲ್ಲದೆ ಎಡೆಯಲ್ಲೇ ಕಾಣೆಯಾದ ಅನುಭವ ಈಚಿನದು. ಆಗ ಒಳ್ಳೆಯ ಮಾತನ್ನೇ ಅನುಮಾನಿಸುವ ಕಾಲವಿತ್ತು. ಅಂದಿನ ಅಭ್ಯಾಸದಂತೆ ಇಂದು ಒಳ್ಳೆಯ ಮಾತನ್ನು ಕೂಡಾ ನಾನು ಅನುಮಾನದಿಂದಲೇ ನೋಡುತ್ತೇನೆ.
ಕೊಂಕುತನವಿಲ್ಲದ ನೇರ ನಡವಳಿಕೆ ನನಗೆ ಬದುಕು ಕಲಿಸಿದ ಪಾಠದ ಫಲ.

ಪ್ರಶ್ನೆ: ಇವತ್ತಿನ ಸಾಹಿತ್ಯಾಭ್ಯಾಸಿಗಳಿಗೆ ಸಾಹಿತ್ಯಾಸಕ್ತರಿಗೆ ನಿಮ್ಮ ಸಲಹೆ ಏನು? ಒಂದಿಷ್ಟು ಕಲಿಯಲೇಬೇಕಾದ ಪರಿಕರಗಳನ್ನ ಸೂಚಿಸುತ್ತೀರಾ.

ಚೊಕ್ಕಾಡಿ: ಸಲಹೆ ಕೊಡುವಷ್ಟು ದೊಡ್ಡವ ನಾನಲ್ಲ. ಆದರೂ ಹೇಳುವುದಾದರೆ ನಮ್ಮ ಸಾಹಿತ್ಯ ಪರಂಪರೆಯ ಜ್ಞಾನ, ಕಲಿಕೆಯ ಹಸಿವು, ತಿಳಿಯುವ ತಾಳ್ಮೆ, ಅಗತ್ಯ. ಹಿರಿ ಕಿರಿಯರ ಒಡನಾಟ, ಜನಸಾಮಾನ್ಯರ ಜತೆ ಸೇರುವಿಕೆ ಕೂಡಾ ಅವರ ಆಸಕ್ತಿ, ಕಷ್ಟ ಸುಖಗಳ ಅರಿಯುವಿಕೆಗೆ ಅಗತ್ಯ. ಸಮಾನ ಮನಸ್ಕರು ಸೇರಿ ಅಧ್ಯಯನ ಮಾಡುವುದು, ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದೂ ಅಗತ್ಯ.ಶ್ರಮ ಪಡದೆ ಯಾವುದೂ ದಕ್ಕಲಾರದು. ಸುಲಭ ಪ್ರಸಿದ್ಧಿ ಯಾವಾಗಲೂ ಬರೆಹಗಾರನ ಶತ್ರುವೇ ಸರಿ. ಈ ಕಲಿಯಬೇಕಾದ ಪರಿಕರಗಳ ದೊಡ್ಡದಿರುತ್ತದೆ. ಒಳ್ಳೆಯ ಶಬ್ದಾರ್ಥ ಕೋಶ, ಸರಳ ವ್ಯಾಕರಣ ಪುಸ್ತಕ, ಭಾರತೀಯ ಮೀಮಾಂಸೆ(ತೀನಂಶ್ರೀ) ಪಾಶ್ಚಾತ್ಯ ಕಾವ್ಯ ಮೀಮಾಂಸೆ , ಕಾವ್ಯಾರ್ಥ ಚಿಂತನ, ಕಾವ್ಯಾರ್ಥ ಪದಕೋಶ(ಜಿಎಸ್ ಎಸ್) ಪುರಾಣ ನಾಮ ಚೂಡಾಮಣಿ, ಮಹಾ ಕೋಶ, ಇತ್ಯಾದಿ ಹೇಳ್ತಾ ಹೋಗಬಹುದು. ಏನನ್ನೇ ಬರೆಯಲಿ, ಅರಿವು ಕವಿಗಿರುವುದು ಅಗತ್ಯ. ಪಂಪನಿಂದ ಹಿಡಿದು ಇಂದಿನ ತನಕದ ಕನ್ನಡದ ಮುಖ್ಯ ಲೇಖಕರ ಬರೆಹಗಳ ಅಧ್ಯಯನ ಅಗತ್ಯ. ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆದೀತು. ಹಾಗಾಗಿ ಇಲ್ಲಿಗೇ ನಿಲ್ಲಿಸುವೆ.

ಪ್ರಶ್ನೆ: ಬೆಂಗಳೂರಿನ ಹೊರಗಿರುವ ಸಾಹಿತಿಗಳಿಗೆ ಸಾಮಾನ್ಯವಾಗಿ ತಾವು ಗುರುತಿಸಲ್ಪಡುತ್ತಿಲ್ಲ. ಆ ಮುಖ್ಯವಾಹಿನಿಯಿಂದ ಹೊರಗಿದ್ದೇವೆ ಎಂಬ ಕೊರಗು ಕಾಡುತ್ತಿರುತ್ತದೆ. ಹಾಗೆಂದಾದರೂ ನಿಮಗೆ ಅನಿಸಿದ್ದುಂಟಾ? ಜೊತೆಗೆ ನೀವೆಂದೂ ನಿಮ್ಮ ಸ್ವಾಭಿಮಾನವನ್ನು ತೃಪ್ತಿಯನ್ನು ಯಾವ ಕಾರಣಕ್ಕೂ ಅಡವಿಡಲಿಲ್ಲ. ಈ ಮನಸ್ಥಿತಿಯ ಮೂಲ ಸೆಲೆ ಯಾವುದು?

ಚೊಕ್ಕಾಡಿ: ಖಂಡಿತವಾಗಿಯೂ ನನಗೆ ಹಾಗನಿಸಿಲ್ಲ. ನಾನಿಲ್ಲಿ ನನ್ನ ಪುಟ್ಟ ಹಳ್ಳಿಯಲ್ಲಿ ಓದುತ್ತಾ ಬರೆಯುತ್ತಾ ಆರಾಮಾಗಿ ಇದ್ದೇನೆ. ಇಲ್ಲಿದ್ದೂ ಅಲ್ಲಿನವರ ಒಡನಾಟ ಪ್ರೀತಿ, ಎಲ್ಲಬಗೆಯ ಗೌರವ ನನಗೆ ಸಿಕ್ಕಿದೆ ಇದಕ್ಕಿಂತ ಹೆಚ್ಚಿನದಿನ್ನೇನು ಬೇಕು? ನನ್ನ ಸ್ವಂತದ ಖುಶಿಗಾಗಿ, ನೋವನ್ನು ಮರೆಯುವುದಕ್ಕಾಗಿ ಬರೆಯುತ್ತಾ ಬಂದೆ. ಬರೆವಣಿಗೆ ಒಂದು ರೀತಿಯಲ್ಲಿ ನನಗೆ ಅಡಗುದಾಣ. ನನಗೆ ಅಂಥಾ ಮಹತ್ವಾಕಾಂಕ್ಷೆಯೇನೂ ಇಲ್ಲ, ನನ್ನ ಬರೆವಣಿಗೆಯ ಬಗ್ಗೆ ಯಾವ ಭ್ರಮೆಯೂ ಇಲ್ಲ. ನನ್ನ ಇತಿ ಮಿತಿ ನನಗೆ ತಿಳಿದಿದೆ. ಹಾಗಾಗಿಯೇ ನನಗೆ ಬರೆದಷ್ಟರ ಬಗ್ಗೆ ತೃಪ್ತಿಯಿದೆ. ಇನ್ನಷ್ಟು ಚೆನ್ನಾಗಿ ಬರೆಯಬೇಕಿತ್ತು ಎನ್ನುವ ಅತೃಪ್ತಿಯೂ ಇದೆ. ಹಾಗೆಂದು ನನ್ನ ಸ್ವಾಭಿಮಾನವನ್ನು ನಾನು ಎಂದೂ ಬಿಟ್ಟು ಕೊಟ್ಟಿಲ್ಲ. ನಾನು ಸುಖದ ಬೆನ್ನು ಹತ್ತದೆ ಇದ್ದುದರಲ್ಲೇ ನೆಮ್ಮದಿಯನ್ನ ಕಾಣುವವನಾಗಿರುವುದರಲ್ಲೇ ಈ ಮನೋಸ್ಥಿತಿಯ ಮೂಲಸೆಲೆ ಇರಬಹುದೇನೋ… ಗೊತ್ತಿಲ್ಲ. ಬದುಕು ಈ ಬಗೆಯ ಅನೇಕ ಪಾಠಗಳನ್ನು ಕಲಿಸಿದೆ ಎಂಬುದಂತೂ ನಿಶ್ಚಯ.

ಸರ್ ಇನ್ನೊಂದೇ ಒಂದು ಪ್ರಶ್ನೆ ಇದೆ ಅಂತ ಬೆಳಿಗ್ಗೆ ಹನ್ನೊಂದು ಗಂಟೆಗೆ ಮೆಸೇಜು ಮಾಡಿದಾಗ ಒಂದು ಕೆಂಪು ಮೂತಿ ಎಮೋಜಿ ಬಂತು. ಜೊತೆಗೇ ನಮಗೇ ವಾಪಸ್ ಪ್ರಶ್ನೆ ಅವರದು. ಅದೆಲ್ಲ ಸರಿ.. ಈ ಪ್ರಶ್ನೆಗಳನ್ನೆಲ್ಲ ನಂಗೆ ಯಾಕೆ ಈಗ ಹೀಗೆ ಕೇಳ್ತಾ ಇದೀರಿ? ಈಗಲಾದರೂ ಈ ಬಡಪಾಯಿಗೆ ಹೇಳಬಹುದೆ? ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನೆಸೆದು ನನ್ನ ಅಜ್ಞಾನ ಹೊರಗೆಳೆವ ಪರಮಗುರುಗಳೇ ನಿಮಗೆ ನಮಸ್ಕಾರ.
ನಾವು ಎಂದಿನ ಹಾಗೆ ನಗುವಿನ ಎಮೋಜಿ ಕಳಿಸಿ, ಆಮೇಲೆ ಹೇಳ್ತೀವಿ ಪ್ಲೀಸ್ ಅಂತ ಕೇಳಿದ ಮೇಲೆ ಮುಂದಿನ ಪ್ರಶ್ನೆಗೆ ರೆಡಿ ಆದರು.

ಪ್ರಶ್ನೆ: ಸರ್, ನಿಮಗೆ ತುಂಬ ಮನಸ್ಸನ್ನು ತಟ್ಟಿದ, ಎಲ್ಲದರಲ್ಲೂ ಮೊದಲು ನೆನಪಾಗುವ, ನೀವು ಪ್ರಾತಃಸ್ಮರಣೀಯವೆಂದುಕೊಳ್ಳುವ – ನಿಮಗೆ ಹಿರಿಯರಾದ ಸಾಹಿತಿಯೊಬ್ಬರ ಜೊತೆಗಿನ ನಿಮ್ಮ ಒಂದು ನೆನಪು ನಮ್ಮ ಜೊತೆ ಹಂಚುವಿರಾ. ಇಂತಹುದು ನಿಮ್ಮ ಜೋಳಿಗೆಯ ತುಂಬ ಇವೆ ಅಂತ ಗೊತ್ತು. ನಮಗೆ ಕಿರಿಯರಿಗೆ ತಿಳಿದು ಸವಿಯಲು ಒಂದು ಸಿಹಿನೆನಪು ಆರಿಸಿಕೊಡಿ.

ಚೊಕ್ಕಾಡಿ: ನಿಜ, ನನ್ನ ಜೋಳಿಗೆಯಲ್ಲಿ ಮಾಸ್ತಿ, ಕಾರಂತ, ಅಡಿಗ, ನಿರಂಜನ, ಪು.ತಿ.ನ ಮೊದಲಾದ ಅನೇಕ ಹಿರಿಯರೊಡನೆಯ ಒಡನಾಟಕ್ಕೆ ಸಂಬಂಧಿಸಿದ ಅನೇಕ ಸ್ಮರಣೀಯ ಸವಿನೆನಪುಗಳಿವೆ. ಅವನ್ನೆಲ್ಲ ಇಲ್ಲಿ ವಿವರಿಸಲು ಇಲ್ಲಿ ಅವಕಾಶವಿಲ್ಲ. ಮಾಸ್ತಿಯವರಿಗೆ ಸಂಬಂಧಿಸಿದಂತೆ ಒಂದು ಪುಟ್ಟ ಘಟನೆಯನ್ನು ಮಾತ್ರ ಹೇಳಲು ಯತ್ನಿಸುವೆ.

ಅದು 1978 ರಲ್ಲಿ ನಡೆದುದಿರಬೇಕು. ಮಾಸ್ತಿಯವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ನನಗೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಘೋಷಣೆಯಾಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಕಳದಲ್ಲಿ ಏರ್ಪಾಡಾಗಿತ್ತು. ಆ ಹಿರಿಯರೊಡನೆ ನಾನೂ ಪ್ರಶಸ್ತಿ ಪಡೆಯುವ ಬಗ್ಗೆ ಸಂಕೋಚ ಹಾಗೂ ಸಂಭ್ರಮ ನನ್ನದಾಗಿತ್ತು. ಸಮಾರಂಭದ ಹಿಂದಿನ ದಿನ ರಾತ್ರಿ ಅವರಿದ್ದ ರೂಮಿಗೆ ನಾನು ಅಂಜುತ್ತ ಅಳುಕುತ್ತಲೇ ಹೋಗಿ ನನ್ನ ಪರಿಚಯ ಹೇಳಿಕೊಂಡೆ. ಅವರೋ ನನ್ನನ್ನು ಬಹು ಪರಿಚಿತ ಗೆಳೆಯನಂತೆ ಬಳಿ ಕರೆದು ಕುಳಿತುಕೊಳಿಸಿದರು. ನಾನೋ ಸಂಕೋಚದಿಂದ ಮುರುಟಿಕೊಳ್ಳುತ್ತಾ, ನಿಮ್ಮಂಥ ಹಿರಿಯರ, ಅಪಾರ ಅನುಭವಶಾಲಿಗಳ ಜತೆ ನನಗೆ ಈ ಸಮಾರಂಭದಲ್ಲಿ ಭಾಗವಹಿಸಲು, ನಿಮ್ಮಜತೆ ಕುಳಿತುಕೊಳ್ಳಲು ಸಂಕೋಚವಾಗ್ತಿದೆ ಸಾರ್ ಅಂದೆ. ಅವರು ನಗುತ್ತಾ ನನ್ನ ಮೈದಡವಿ, ಇಲ್ಲಪ್ಪಾ, ಯಾವ ಸಂಕೋಚವೂ ಬೇಡ. ಹಾಗೆ ನೋಡಿದರೆ ನಿನಗೆ ನನಗಿಂತ ಹೆಚ್ಚು ಅನುಭವವಿದೆ ಅಂದರು. ನನಗೆ ವಿಪರೀತ ನಾಚಿಕೆಯಾಗಿ, ಏನು ಹೇಳ್ತಿದ್ದೀರಿ ಸಾರ್, ತಮಾಷೆ ಮಾಡ್ತಿದ್ದೀರಾ? ನಿಮ್ಮೆದುರು ನಾನ ಪುಟ್ಟ ಮಗು ಎಂದೆ. ಆಗವರು ಹೇಳಿದ ಮಾತು ನನಗೆಂದೂ ಮರೆತು ಹೋಗಲಾರದ್ದು. ಅವರೆಂದರು: ನೋಡಪ್ಪಾ, ಪ್ರತಿಯೊಬ್ಬನು ಅನುಭವಗಳನ್ನು ಸ್ವೀಕರಿಸುವ ಸಂವೇದನೆಯು ವಯಸ್ಸಾದಂತೆ ಕಡಿಮೆಯಾಗುತ್ತಾ ಸುಮಾರು ಮಧ್ಯ ವಯಸ್ಸಿನಲ್ಲಿ ಅದು ಸ್ಥಗಿತವಾಗುತ್ತದೆ. ಆಮೇಲೆ ಅವನ ಮನಸ್ಸು ಹೊಸ ಅನುಭವಗಳನ್ನು ಸ್ವೀಕರಿಸಲಾರದು. ನನ್ನ ಅನುಭವ ಸ್ವೀಕರಿಸುವ ಶಕ್ತಿ ಸ್ಥಗಿತವಾಗಿ ತುಂಬಾ ಸಮಯವಾಯ್ತು. ಆದರೆ ನಿನ್ನ ಸಂವೇದನೆಯು ನಿನ್ನ ಈ ಕಾಲದ ಅನುಭವಗಳನ್ನೂ ಸ್ವೀಕರಿಸುತ್ತಲೇ ಇದೆಯಲ್ಲವೇ? ಹಾಗಾಗಿ ನನ್ನಲ್ಲಿ ದಾಖಲಾಗದ ಅನುಭವವನ್ನು ನಿನ್ನ ಮನಸ್ಸು ಈಗಲೂ ಸ್ವೀಕರಿಸುತ್ತಿರುವ ಕಾರಣ ನೀನು ನನಗಿಂತ ಹೆಚ್ಚಿನ ಅನುಭವವನ್ನು ಹೊಂದಿದಂತಾಯ್ತಲ್ಲವೇ? ಅಂತ ಹೇಳ್ತಾ ನಕ್ಕು ಮತ್ತೊಮ್ಮೆ ನನ್ನ ತಲೆ ಸವರಿ, ಮೈದಡವಿ ಆಶೀರ್ವದಿಸಿದ್ದನ್ನು ನಾನೆಂದೂ ಮರೆಯಲಾರೆ. ಪ್ರಾಥಃಸ್ಮರಣೀಯರಾದ ಆ ಹಿರಿಯರ ಹೃದಯ ವೈಶಾಲ್ಯ, ನನ್ನಂಥ ಕಿರಿಯನನ್ನು ಪ್ರೀತಿಯಿಂದ ಕಂಡು ಆಶೀರ್ವದಿಸಿದರೀತಿ ಸದಾ ನೆನಪುಳಿಯುವಂಥಾದ್ದು, ಅನುಸರಣೀಯವಾದದ್ದು.

(ಮಾಲಿನಿ, ಸಿಂಧು, ಹರೀಶ್)

ಚೊಕ್ಕಾಡಿಯವರ ಸಾಹಿತ್ಯ ಪ್ರೀತಿ, ರಸಜ್ಞತೆ, ಸಹೃದಯತೆ, ಪ್ರೌಢಿಮೆ ಮತ್ತು ವಿನಯಶೀಲತೆಯು ಸಾಹಿತ್ಯವನ್ನು ಪ್ರೀತಿಸುವ ಹಿರಿಕಿರಿಯರೆಲ್ಲರಿಗೂ ಮಾದರಿ. ಕವಿ, ಕಥೆಗಾರ, ವಿಮರ್ಶಕ ಎಲ್ಲ ನೆಲೆಗಳಲ್ಲೂ ಸಮರ್ಥವಾಗಿ, ಪ್ರಾಮಾಣಿಕವಾಗಿ, ಮಾನವೀಯವಾಗಿ, ಗಾಢವಾಗಿ, ಆದರೂ ಅಬ್ಬರವಿಲ್ಲದ ಹಾಗೆ ಬರೆಯುತ್ತ ಬಂದಿರುವ ಚೊಕ್ಕಾಡಿಯವರ ಜೊತೆಗಿನ ಈ ಮಾತುಕಥೆಯು, ಓದಿದವರಿಗೆ, ಅವರ ಪ್ರಭಾವಲಯಕ್ಕೆ ಒಂದು ಕಿರುದಾರಿ ಆಗಲಿ ಎಂದು ಆಶಿಸುತ್ತೇವೆ. ಈ ಕಿರಿಯರ ಕಿಂಡಲುಗಳನ್ನು ಇನ್ನೂ ಚುರುಕಾಗಿ ರಿ-ಕಿಂಡಲ್ ಮಾಡುತ್ತಾ, ನಗುತ್ತಲೇ ತಿದ್ದುವ ಈ ಮೇಷ್ಟರು ನಮಗೆಲ್ಲ ತುಂಬ ಕಾಲ ತಿದ್ದುತಿರಲಿ. ಈ ತುಂಬುಜೀವನದ ಸಿಹಿಸಂದರ್ಭದಲ್ಲಿ ನಮ್ಮೆಲ್ಲರ ಶುಭಾಶಯಗಳು ಅವರ ಜನ್ಮದಿನವನ್ನ ಸೊಗಯಿಸಲಿ ಎಂದು ಬಯಸುತ್ತೇವೆ.

ಸುಬ್ರಾಯ ಚೊಕ್ಕಾಡಿಯವರ ಒಂದು ಪುಟ್ಟ, ಆದರೆ ಗಾಢ ಕವಿತೆ ನಿಮ್ಮ ಈ ಕ್ಷಣದ ಓದಿಗಾಗಿ:

“ಆ ಕ್ಷಣದಲ್ಲಿ”
ಆ ಪುಟ್ಟ ಹಕ್ಕಿ ಹಾರಿ ಬಂದು ಕುಳಿತ ರಭಸಕ್ಕೆ
ಮರ ಬೆದರಿ, ಎಲೆಗಳನ್ನುದುರಿಸಿತು
ಕೊಂಬೆಗಳ ಬಾಗಿಸಿತು
ಕಾಂಡದಲಿ ಹರಿಯುತಿದ್ದ ಜೀವರಸ ಒಂದು ಕ್ಷಣ
ಬೆರಗಾಗಿ ನಿಂತಿತು.
ನಕ್ಕ ಹಕ್ಕಿ ಸಣ್ಣಗೇ ಕುಕಿಲಿದಂತೆ
ಥಳ ಥಳ ಹೊಳೆವ ಕಣ್ಣುಗಳ ಪ್ರಕಾಶಕ್ಕೆ
ಮರವಿಡೀ ಝಗ್ಗನೆ ಬೆಳಕಾಯಿತು.