ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ – ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ ನಾಯಕ ಈ ಇಹಕ್ಕೆ ದೂರವಾದ, ಅವರ್ಣನೀಯವಾದ, ಅಲೌಕಿಕವಾದ ಜಗತ್ತಿನ ಕರೆಗೆ ಓಗೊಡುವವನು. ತುಂಬ ಪ್ರಸಿದ್ಧವಾದ ಕವನ ‘ಮೋಹನ ಮುರಲಿ’ಯಲ್ಲಿ ಅನಿರ್ವಚನೀಯದ ಸೆಳೆತ ಇರುವಂತೆಯೇ ಈ ಇಹವನ್ನು ತೊರೆಯುವುದೇನೂ ಸುಲಭವಲ್ಲ ಎಂಬ ಧ್ವನಿಯೂ ಇದೆ.
ಎಸ್.‌ ದಿವಾಕರ್ ಬರೆದ ಎಂ. ಗೋಪಾಲಕೃಷ್ಣ ಅಡಿಗರ ಕುರಿತ “ಸ್ವಯಂ ದೀಪಿಕೆ” ಪುಸ್ತಕದಿಂದ ಒಂದು ಲೇಖನ

 

ಕನ್ನಡ ಕಾವ್ಯಕ್ಕೆ ಗೋಪಾಲಕೃಷ್ಣ ಅಡಿಗರ ಕೊಡುಗೆಯೇನು? ಈ ಪ್ರಶ್ನೆಗೆ ಉತ್ತರವಾಗಿ ನವೋದಯದ ಕಾವ್ಯಕ್ಕಿಂತ ತೀರ ಭಿನ್ನವಾದ, ಎಲ್ಲ ರೀತಿಯಿಂದಲೂ ಸ್ವೋಪಜ್ಞವಾದ, ನಿಜಕ್ಕೂ ಬೆರಗುಹುಟ್ಟಿಸುವಂಥ ಅವರದೇ ಮಾರ್ಗಪ್ರವರ್ತಕ ಕಾವ್ಯವಿದೆ. ಇಪ್ಪತ್ತನೆಯ ಶತಮಾನದಲ್ಲಿ ಅವರು ಕಾವ್ಯ ರಚಿಸುವವರೆಗೆ ನಮ್ಮ ಆಧುನಿಕ ಕಾವ್ಯ ಬಹುಮಟ್ಟಿಗೆ ಒಂದು ಭಾವವನ್ನೋ ವಿಷಯವನ್ನೋ ಪ್ರಾಸಬದ್ಧವಾಗಿ, ಒಂದು ನಿರ್ದಿಷ್ಟ ಛಂದಸ್ಸಿನಲ್ಲಿ ಹೊಮ್ಮಿಸುವುದಕ್ಕಷ್ಟೇ ಸೀಮಿತವಾಗಿತ್ತು. ‘ಭಾವತರಂಗ’ ಎಂಬ ತಮ್ಮ ಮೊದಲ ಕವನ ಸಂಕಲನದ ಮೊದಲ ಕವನದಲ್ಲೇ ಅವರು,
ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು
ಖಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ
ಎಂದು ಬರೆದರು. ಅದಕ್ಕೆ ಕಾರಣ ನಮ್ಮ ನವೋದಯ ಕಾವ್ಯದ ಏಕತಾನತೆಯ ಬಗ್ಗೆ ಅವರಿಗಿದ್ದ ಅತೃಪ್ತಿ. ಜೊತೆಗೆ ಅವರ ರಸಪ್ರಜ್ಞೆ ಹೇಗೋ ಹಾಗೆ ಅವರ ಪ್ರಖರ ಬೌದ್ಧಿಕತೆಯೂ ನೈತಿಕಪ್ರಜ್ಞೆಯೂ ಕಾರಣವಾಗಿದ್ದವು.

ಅವರನ್ನು ನಮ್ಮ ದೇಶದ ಸ್ವಾತಂತ್ರ್ಯಪೂರ್ವ ಕಾಲದ ಆದರ್ಶವಾದ ಕೆರಳಿಸಿದ ಹಾಗೆಯೇ ಸ್ವಾತಂತ್ರ್ಯೋತ್ತರ ಭಾರತದ ಭ್ರಮನಿರಸನವೂ ಕೆರಳಿಸಿತೆನ್ನಬೇಕು. ಕಾವ್ಯವೆಂದರೆ ಭಾವನೆಗಳನ್ನು ಮನಮುಟ್ಟುವ ಹಾಗೆ ವ್ಯಕ್ತಪಡಿಸುವುದಷ್ಟೇ ಅಲ್ಲವೆಂದು ನಂಬಿದ್ದ ಅಡಿಗರು ಅಮೂರ್ತವಾದ ಭಾಷೆಯಲ್ಲೇ ಕಾವ್ಯ ‘ಸಂಭವಿಸ’ಬೇಕು, ಅದರಲ್ಲಿ ಈ ನೆಲದ ಮಣ್ಣಿನ ವಾಸನೆ ಹೊಡೆಯಬೇಕು, ಅದು ಮೂರ್ತವಾಗಬೇಕು ಎಂದು ಹಂಬಲಿಸಿದರು.

(ಎಂ. ಗೋಪಾಲಕೃಷ್ಣ ಅಡಿಗ)

ಅವರ ದೃಷ್ಟಿಯಲ್ಲಿ ಸ್ವಾತಂತ್ರ್ಯೋತ್ತರ ಕಾಲದ, ನೆಹರೂ ಆಳ್ವಿಕೆಯ ಪೊಳ್ಳು ಭರವಸೆಗಳಾಗಲೀ ಕವಿಯೆನಿಸಿದವನು ಎಚ್ಚರವಿಲ್ಲದೆ ಬಳಸುತ್ತಿದ್ದ ಮಾಮೂಲಿ ಭಾಷೆಯಾಗಲೀ ಬೇರೆ ಬೇರೆಯಾಗಿರಲಿಲ್ಲ. ಯಾಕೆಂದರೆ ರಾಜಕಾರಣಿ ಯಾವ ಮುಂದಾಲೋಚನೆಯೂ ಇಲ್ಲದೆ ಆಡುತ್ತಿದ್ದ ಮಾತುಗಳಂತೆಯೇ ಕವಿಯಾದವನು ಅರ್ಥಬಾಹುಳ್ಯವನ್ನು ಕಡೆಗಣಿಸಿ, ಸಂಗೀತದ ಲಯಕ್ಕೆ ಬದ್ಧನಾಗಿ ಬರೆಯುತ್ತಿದ್ದುದು ಕೂಡ ‘ಸಾರ್ಥಕ’ವೆನಿಸುತ್ತಿರಲಿಲ್ಲ. ಅವರೇ ಒಂದು ಲೇಖನದಲ್ಲಿ ಬರೆದಂತೆ, “ಅತ್ಯಂತ ಸೂಕ್ಷ್ಮವೇದಿಯಾದ ಮನಸ್ಸುಳ್ಳ ಕವಿ ಮಾಡುವ ಕೆಲಸ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತುಂಬ ಬೆಲೆಯುಳ್ಳದ್ದು – ತನಗೆ ತಾನೇ: ಮನುಷ್ಯನ ಜೀವನದ ಅತ್ಯಂತ ಅಪೂರ್ವ ಸಾಧನವಾದ ಮಾತಿನ ಅತ್ಯಂತ ಸರಿಯಾದ ಬಳಕೆಯಿಂದಲೇ ಕವಿ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುತ್ತಾನೆ. ಎಲ್ಲರೂ ಒಂದು ಕಾಲದಲ್ಲಿ ತಮ್ಮ ಮನಸ್ಸಿನ ಒಳತಳದಲ್ಲಿ ಯಾವುದನ್ನು ಅಸ್ಪಷ್ಟವಾಗಿ ಕಾಣುತ್ತಾರೋ ಅನುಭವಿಸುತ್ತಾರೋ ಅದನ್ನೇ ಕವಿಯಾದವನು ಇನ್ನಷ್ಟು ಸ್ಪಷ್ಟವಾಗಿ ಅನುಭವಿಸಿ ಅದನ್ನು ತಕ್ಕ ಶಬ್ದಗಳಲ್ಲಿ ಮೂರ್ತಿಗೊಳಿಸಿ ಆ ಮೂರ್ತಿಯಲ್ಲಿ ಅದರ ಆದರ್ಶ ರೂಪವೂ ಹೊಳೆಯುವ ಹಾಗೆ ಮಾಡುತ್ತಾನೆ.

ಹೀಗೆ ಅವನು ಬದುಕಿನ ಅಭ್ಯುದಯಕ್ಕೂ ಶ್ರೇಯಸ್ಸಿಗೂ ತಕ್ಕ ಪ್ರತಿಮೆಗಳನ್ನು ಸೃಷ್ಟಿಸಿ ಹೊಸ ಕಾಲಕ್ಕೆ ಅತ್ಯಗತ್ಯವಾದ ಹೊಸ ನಂಬಿಕೆಗಳಿಗೆ ತಕ್ಕ ಬಿಂಬವಾಗುವಂಥ ಕೃತಿಗಳನ್ನು ರಚಿಸುವುದರ ಮೂಲಕ ಸಮಕಾಲೀನನಾಗುತ್ತಾನೆ. ಸಮಾಕಾಲೀನತೆ ಎಂದರೆ ತಾತ್ಕಾಲಿಕತೆ ಅಲ್ಲ. ಎಲ್ಲ ಕಾಲದಲ್ಲೂ ಸಲ್ಲುವಂಥದು. ಈಗ ಈ ಕಾಲದಲ್ಲಿ ಯಾವ ರೀತಿ ಎಂಥ ವೇಷದಲ್ಲಿ ಎಂಥ ರೂಪಾಂತರದಲ್ಲಿ ವ್ಯಕ್ತವಾಗುತ್ತದೆ ಎಂದು ಕಾಣುವ ಕಂಡರಿಸುವ ಶಕ್ತಿ.”

ಹೊಸ ಬಗೆಯ ಕಾವ್ಯಸೃಷ್ಟಿಗಾಗಿ ಅಡಿಗರು ನಮ್ಮ ಇಡೀ ಭಾಷೆಯನ್ನೇ ಸೂರೆಗೊಂಡರೆನ್ನಬೇಕು. ಅವರ ಕೆಲವು ಕವಿತೆಗಳಲ್ಲಿ ಸಂಸ್ಕೃತ, ಉರ್ದು, ಪರ್ಶಿಯನ್, ಇಂಗ್ಲಿಷ್ ಪದಗಳ ಜೊತೆಜೊತೆಗೇ ಹಳಗನ್ನಡದ, ನಡುಗನ್ನಡದ, ನಮ್ಮ ವಿವಿಧ ಪ್ರಾಂತ್ಯಗಳ ಪದಗಳು ಕೂಡ ಅರ್ಥಪೂರ್ಣವಾಗಿ ಹೊಂದಿ-ಕೊಂಡಿರುತ್ತವೆ. ಶಬ್ದಗಳ ಬಳಕೆಯಲ್ಲಿ ಅವರದು ಸಂಕೋಚವಿಲ್ಲದ ನಿಲುವು. ಜೊತೆಗೆ ಪ್ರಾಸ, ಅನುಪ್ರಾಸ, ಧ್ವನಿ, ಸಾಮ್ಯ, ಶ್ಲೇಷೆ, ಶಬ್ದಚಿತ್ರ, ವಿಡಂಬನೆ ಮೊದಲಾದವುಗಳನ್ನು ಸೂಕ್ತವೆನಿಸಿದ ಕಡೆಯಲ್ಲೆಲ್ಲ ಬಳಸಿ ನಮ್ಮ ಭಾಷೆಯ ಸಾಧ್ಯತೆಗಳನ್ನು ನಮಗೆ ತೋರಿಸಿಕೊಟ್ಟರು. ಕನ್ನಡಕ್ಕೆ ಸಹಜವೆನ್ನಿಸುವ ಗತಿ, ಲಯ, ಶಬ್ದರೂಪಕ ಮುಂತಾದವುಗಳ ಮೂಲಕ ಅರ್ಥಾನುಭವವನ್ನು ಸಾಧಿಸಿದರು. ಪೌರಾಣಿಕ, ಚಾರಿತ್ರಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಕ ವ್ಯಕ್ತಿಗಳನ್ನು, ಘಟನೆಗಳನ್ನು, ಒಮ್ಮೊಮ್ಮೆ ಕಾವ್ಯದ ಸಾಲುಗಳನ್ನು ಕೂಡ, ಉಪಯೋಗಿಸಿಕೊಂಡು ತೀವ್ರ ಕಾವ್ಯಾನುಭವವನ್ನು ಉಂಟುಮಾಡಿದರು.

ಇದೆಲ್ಲದರ ಪರಿಣಾಮವಾಗಿ ಅವರ ಕಾವ್ಯ ತನ್ನ ಹೊಸ ಭಾಷೆಯಿಂದ, ಅರ್ಥಾನುಸಾರಿಯಾದ ಲಯದಿಂದ, ನಾಟಕೀಯ ಧಾಟಿಯಿಂದ, ಪ್ರತಿಮಾಲಂಕಾರದಿಂದ, ಎಂಥವರನ್ನಾದರೂ ಚುಚ್ಚುವಂಥ ವ್ಯಂಗ್ಯದಿಂದ, ಅಕರಾಳವಿಕರಾಳವೆನ್ನಿಸುವಂಥ ಪ್ರತಿಮೆಗಳಿಂದ, ಸಾರ್ಥಕ ರೂಪಕಗಳಿಂದ ಅಪೂರ್ವವೆನಿಸಿತು.

ಅಡಿಗರ ಕಾವ್ಯದಲ್ಲಿ ಭಾವಾಭಿನಯ ಹೇಗಿರುತ್ತದೆ ಎಂಬುದಕ್ಕೆ ‘ದೀಪಾವಳಿ’ ಎಂಬ ಕವನದ ಈ ಒಂದು ಸಾಲು ಸಾಕು: “ಮರವೆಯಲಿ ನೆನಪು ಥಳಥಳಿಸಿ ಗರಗರ ಗೀರಿ ಸರಭರೆನ್ನುತ್ತಲಿದೆ ಸೊಗದ ನೇಗಿಲ ಮೊನೆ.” ಇದರಲ್ಲಿ ಶಬ್ದಗಳು ಹೊಮ್ಮಿಸುವ ದನಿಯನ್ನಷ್ಟೇ ಆಲಿಸಿದರೆ ದೀಪಾವಳಿಯ ಮತಾಪು, ಬಾಣ ಬಿರುಸು, ಸುರುಸುರುಬತ್ತಿ, ಭೂಚಕ್ರ ಮೊದಲಾದವುಗಳ ಸದ್ದು ಕೇಳಿಸುತ್ತದೆಯಲ್ಲವೆ? ಆದರೆ ಕವನ ದೀಪಾವಳಿಯ ಬಗೆಗಷ್ಟೇ ಇಲ್ಲ. ಇನ್ನು ಅವರು ಉಪಯೋಗಿಸಿರುವ ಪ್ರತಿಮೆಗಳನ್ನು ಗಮನಿಸಿ. ಅವು ಅನುಕ್ರಮವಾಗಿ, ಸಹಜವಾಗಿ ಬೆಳೆಯುವಂಥವು. ಉದಾಹರಣೆಗೆ ಈ ಸಾಲುಗಳನ್ನು ನೋಡಿ:

ಮೂಡಿದೆ ಗುಲಾಬಿ ದಳದಲಿ ಮುಳ್ಳು; ಸಂಪಿಗೆಯ
ಕಂಪಿನಲಿ ಕಾಳ್ಗಿಚ್ಚು ಭುಸುಗುಟ್ಟಿದೆ;
ಮೆತ್ತೆಯಲಿ ಕುಟುಕುತಿದೆ ನೂರು ಚೇಳಿನ ಕೊಂಡಿ;
ಹಾಲು ಹಾಲಾಹಲದ ಗುರಿಮುಟ್ಟಿದೆ.
ಕಾಳನಾಗರ ನೇತ್ರಭೀತ ಪರವಶ ಪಕ್ಷಿ
ಮತ್ತೆ ರಕ್ಕೆಯ ಬಿಚ್ಚಿ ಗರಿಗಟ್ಟಿದೆ.

ಇಲ್ಲಿರುವುದು ಒಂದು ಹಾವಿನ ಪ್ರತಿಮೆ. ಇದು ಏಕಾಏಕಿ ಬೆಳೆದದ್ದಲ್ಲ; ಕ್ರಮಕ್ರಮವಾಗಿ ಬೆಳೆದದ್ದು. ಮುಳ್ಳು, ಭುಸುಗುಟ್ಟಿದೆ, ಚೇಳಿನ ಕೊಂಡಿ, ಹಾಲಾಹಲ, ಇತ್ಯಾದಿ ಶಬ್ದಗಳು ಹಾವನ್ನು ಮುನ್ಸೂಚಿಸುವ ಪರಿಕರಗಳಾಗಿ ಕೆಲಸಮಾಡುತ್ತ ಅಂತಿಮವಾಗಿ ಇಡೀ ಹಾವನ್ನು ‘ಕಾಣಿಸು’ತ್ತವೆ.

ಅಡಿಗರು ತಮ್ಮ ಕಾವ್ಯದಲ್ಲಿ ಅಲ್ಲಲ್ಲಿ ತಂದಿರುವ ನಾಟಕೀಯ ಅಂಶಗಳು ಕೂಡ ಹಿಂದಿನ ಕಾವ್ಯದಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಒಮ್ಮೊಮ್ಮೆ ಯಕ್ಷಗಾನದ ರಾಕ್ಷಸನ ವಾಗ್ವೈಖರಿಯಂತೆ, ಇನ್ನು ಕೆಲವೊಮ್ಮೆ ವಿಡಂಬನೆಯ ಸಹಜ ದನಿಯಂತೆ ಕೇಳಿಸುವ ಈ ನಾಟಕೀಯ ಗುಣ ಕವನದ ಒಟ್ಟು ಆಶಯಕ್ಕೆ ಎಷ್ಟೆಲ್ಲ ಪೂರಕವಾಗಿರುತ್ತದೆ ಎಂಬುದನ್ನು ಗಮನಿಸಬೇಕು.

ನಿದರ್ಶನಕ್ಕಾಗಿ ಈ ಕೆಲವು ಸಾಲುಗಳನ್ನು ನೋಡಿ: “ಮಹಾ ಧಮ್ಮಸ್ಸಿನವನೆ, ಹುಮ್ಮಸ್ಸಿದೆಯೆ ಬಾ ಈಚೆ ಕಡೆ ತೋರಿಸುತ್ತೇನೊಂದು ಕೈಯ”, “ಬಂದರಲ್ಲಾ ಕೊನೆಗು ಯಜಮಾನರು”, “ಪ್ರಭೂ, ಪರಾಕುಪಂಪನ್ನೊತ್ತಿಯೊತ್ತಿ ನಡಬಗ್ಗಿರುವ ಬೊಗಳು ಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ”, “ದೊಡ್ಡವರ ಸಹವಾಸ ಸಾಕೋ ಸಾಕು ಈ ದೇಶಕ್ಕೆ”, “ಮೂಗು ಮುಚ್ಚಿಕೋ ನಗರಸಭೆಯ ಲಾರಿ”, “ರಂಧ್ರಾನ್ವೇಷಣಚತುರನೇ ಕೇಳು, ಕನ್ನಡಿಯ ಮುಂದೆ ಕ್ಷಣವಾದರೂ ನಿಲ್ಲು”, “ಬಲವೆಂದರೆ ಎಡ, ಎಡವೆಂದರೂ ಎಡ – ಇದು ಈ ಕಾಲದ ಗೂಢ”.

ಅಡಿಗರ ಇನ್ನೊಂದು ವಿಶೇಷವಿರುವುದು ಅವರು ನಮ್ಮ ಪುರಾಣಗಳ ಪಾತ್ರಗಳನ್ನೋ ಸನ್ನಿವೇಶಗಳನ್ನೋ ಯಜ್ಞಯಾಗಾದಿಗಳ ವಿವರಗಳನ್ನೋ ಧ್ವನಿಪೂರ್ಣವಾಗಿ ಬಳಸಿಕೊಳ್ಳುವುದರಲ್ಲಿ. ‘ವರ್ಧಮಾನ’ ಕವಿತೆಯಲ್ಲಿ ಬರುವ ಹನುಮಂತ, ‘ಭೂಮಿಗೀತ’ ಕವಿತೆಯಲ್ಲಿ ಕಾಣಿಸಿಕೊಳ್ಳುವ ವಿಶ್ವಾಮಿತ್ರ, ತ್ರಿಶಂಕು, ಕರ್ಣ, ಕುಂತಿಯರು, ‘ಸಾಮಾನ್ಯನಂತೆ ಈ ನಾನು’ ಕವಿತೆಯಲ್ಲಿ ಬರುವ ಹಿರಣ್ಯಕಶಿಪು-ಪ್ರಹ್ಲಾದರ ಪ್ರಸಂಗ – ಇವೆಲ್ಲವೂ ಆಯಾ ಕವಿತೆಗಳ ಆಶಯವನ್ನು ಅನುರಣಿಸುವ ಪ್ರತಿಮೆ-ರೂಪಕಗಳಾಗಿವೆ. ‘ಅಜ್ಞಾತ ವೇಷ’ ಎಂಬ ಕವನದಲ್ಲಿ ಯಕ್ಷಗಾನದ ವೇಷಭೂಷಣಗಳಿರುವ ಪೆಟ್ಟಿಗೆಯನ್ನು ಹೊತ್ತು ಸಾಗಿಸುವ ಕೂಲಿಗಳು ನಮ್ಮ ಪ್ರಜಾತಂತ್ರದಲ್ಲಿರುವ ಸಾಮಾನ್ಯರಿಗೊಂದು ಪ್ರತೀಕವಾಗುತ್ತಾರೆ.

‘ಬತ್ತಲಾರದ ಗಂಗೆ’ ಎಂಬ ಕವನದಲ್ಲಿ ಗಂಗಾನದಿಯೆನ್ನುವುದು ಇಡೀ ಭಾರತ ಸಂಸ್ಕೃತಿಗೆ ಸಂಕೇತವಾಗಿರುವಂತೆ, ಅದರ ಅವನತಿಗೂ ಒಂದು ರೂಪಕವಾಗಿದೆ. ಈ ಧ್ವನಿಯನ್ನು ಕವನದ ಈ ಮೊದಲ ಸ್ಟಾಂಜಾದಲ್ಲೇ ಗಮನಿಸಬಹುದು:

ಬತ್ತಲಾರದ ಗಂಗೆಗೆಂಥ ಕುತ್ತಿದು, ನೋಡು;
ಅದೇ ಪಾತ್ರ, ಧಾಟಿ, ವಸ್ತುಗಳ ಪಾಳಿ;
ಹೊಸ ನೀರು ಬಂದರೂ ಅದೇ ಪುರಾತನದಮಲು,
ರಂಗಮಂದಿರ ಅದೇ, ನಾಟಕವೂ ಅದೇ.

ವರ್ತಮಾನದ ವಸ್ತುಸ್ಥಿತಿಯನ್ನು ಕನ್ನಡಿಸುವುದಕ್ಕಾಗಿ ನಮ್ಮ ಇತಿಹಾಸ, ಪುರಾಣ, ಸಂಸ್ಕೃತಿಗಳ ವಿವರಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದ ಅಡಿಗರು ಅವೆಲ್ಲವೂ ಸ್ವಾನುಭವವನ್ನು ಹರಳುಗಟ್ಟಿಸುತ್ತವೆಯೆಂದೂ ಆ ಮೂಲಕ ಮಾತ್ರ ತಮ್ಮ ಕಾವ್ಯದಲ್ಲಿ ಮಣ್ಣಿನ ವಾಸನೆ ಹೊಡೆಯುತ್ತದೆಂದೂ ನಂಬಿದ್ದವರು. ಅವರ ದೃಷ್ಟಿಯಲ್ಲಿ, “ಮಣ್ಣಿನ ವಾಸನೆ ಎಲ್ಲಿ ಇಲ್ಲವೋ ಅಲ್ಲಿ ಜೀವವಿಲ್ಲ. ಮಣ್ಣಿಗೂ ಜೀವಕ್ಕೂ ಅವಿಚ್ಛಿನ್ನ ಸಂಬಂಧ. ಜೀವಪ್ರಪಂಚಕ್ಕೆ ಸೇರಿದ ಸಾಹಿತ್ಯದಲ್ಲಿ ಎಂಥೆಂಥ ಉದಾತ್ತವಾದ ವಿಚಾರಗಳೂ ಕಲ್ಪನೆಗಳೂ ಇರಲಿ, ಅದರಲ್ಲಿ ಈ ಪಾರ್ಥಿವ ಲೋಕದ ವಾಸನೆ ಹೊಡೆಯುತ್ತಿದ್ದರೆ ಮಾತ್ರ ಅದು ನಿಜವಾದದ್ದೂ ಸಾರ್ಥಕವಾದದ್ದೂ ಆಗಬಲ್ಲದು.”

ಒಮ್ಮೊಮ್ಮೆ ಯಕ್ಷಗಾನದ ರಾಕ್ಷಸನ ವಾಗ್ವೈಖರಿಯಂತೆ, ಇನ್ನು ಕೆಲವೊಮ್ಮೆ ವಿಡಂಬನೆಯ ಸಹಜ ದನಿಯಂತೆ ಕೇಳಿಸುವ ಈ ನಾಟಕೀಯ ಗುಣ ಕವನದ ಒಟ್ಟು ಆಶಯಕ್ಕೆ ಎಷ್ಟೆಲ್ಲ ಪೂರಕವಾಗಿರುತ್ತದೆ ಎಂಬುದನ್ನು ಗಮನಿಸಬೇಕು.

ಅಡಿಗರಿಗೆ ಸ್ವಾನುಭವದಂತೆ ಆತ್ಮವಿಮರ್ಶೆಯೂ ತುಂಬ ಮುಖ್ಯವಾಗಿತ್ತು. ಆದ್ದರಿಂದಲೇ ಅವರು ಭಕ್ತಿ ಪಂಥದ ದಾಸರಂತೆ, ಅನುಭಾವಿ ಕವಿಗಳಂತೆ ಕಾವ್ಯದಲ್ಲಿ ತನ್ಮಯರಾಗಲಿಲ್ಲ. ಬೌದ್ಧಿಕ ಎಚ್ಚರದ ಜೊತೆಗೆ ವಿಮರ್ಶಾ ಪ್ರಜ್ಞೆಯೂ ಅತ್ಯಗತ್ಯವೆಂದು ಪ್ರತಿಪಾದಿಸಿದ ಅವರು ವ್ಯಕ್ತಿ ವೈಶಿಷ್ಟ್ಯಕ್ಕೆ ಒತ್ತು ಕೊಡುವಾಗ ಕೂಡ ಅದಕ್ಕಿರುವ ಸಮಷ್ಟಿಯ ಆಯಾಮವನ್ನು ಕಡೆಗಣಿಸಿದವರಲ್ಲ.

“ಇಷ್ಟು ಕವನಗಳನ್ನು ರಚಿಸಿದೆ, ಇಷ್ಟು ಗ್ರಂಥಗಳನ್ನು ಪ್ರಕಟಿಸಿದೆ ಎಂದು ಸಂಖ್ಯೆಯನ್ನು ಬಿತ್ತರಿಸುವ ಹುಡುಗಾಟಿಕೆ ಬಿಟ್ಟು ಸಾರ್ಥಕವಾಗುವ ಕವನಗಳಲ್ಲಿ ಸದಾಕಾಲಕ್ಕಾಗಿ ಅನುಭವವನ್ನು ಭಟ್ಟಿಯಿಳಿಸಬೇಕು. ಕವನಗಳನ್ನು ಬರೆಯದೆ ಇದ್ದರೂ ನಷ್ಟವಿಲ್ಲ, ಆದರೆ ಬರೆದದ್ದು ಉತ್ತಮವಾಗುವ ಹಾಗೆ ಪರಿಶ್ರಮ ವಹಿಸಬೇಕು; ಕಾಯಬೇಕು”. ಅಡಿಗರೇ ಒಂದು ಕಡೆ ಬರೆದಿರುವ ಈ ಮಾತುಗಳು ಅವರ ಕಾವ್ಯಸೃಷ್ಟಿಯ ಹಿಂದಿರುವ ‘ಸ್ಫೋಟಕ್ಕೆ ಕಾದು ಕಿವಿ ಕಂಪಿಸುವ’ ತಪೋನಿಷ್ಠೆಯನ್ನು ಸೂಚಿಸುತ್ತವೆ.

ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ – ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ ನಾಯಕ ಈ ಇಹಕ್ಕೆ ದೂರವಾದ, ಅವರ್ಣನೀಯವಾದ, ಅಲೌಕಿಕವಾದ ಜಗತ್ತಿನ ಕರೆಗೆ ಓಗೊಡುವವನು. ತುಂಬ ಪ್ರಸಿದ್ಧವಾದ ಕವನ ‘ಮೋಹನ ಮುರಲಿ’ಯಲ್ಲಿ ಅನಿರ್ವಚನೀಯದ ಸೆಳೆತ ಇರುವಂತೆಯೇ ಈ ಇಹವನ್ನು ತೊರೆಯುವುದೇನೂ ಸುಲಭವಲ್ಲ ಎಂಬ ಧ್ವನಿಯೂ ಇದೆ. ಇದೇ ಧ್ವನಿ ‘ಹಿಮಗಿರಿಯ ಕಂದರದಲ್ಲಿ’ ಎಂಬ ದೀರ್ಘ ಕವನದಲ್ಲಿ ಚಲನಚಿತ್ರದ ‘ಮೊಂತಾಜ್’ನಂತೆ ವಿಭಿನ್ನ ಪ್ರತಿಮೆಗಳ ಮೂಲಕ ಮತ್ತೆ ಮತ್ತೆ ಹೊಳಲಿಡುತ್ತದೆ.

ಅಡಿಗರು ಪ್ರಗತಿಶೀಲರ ಪ್ರಭಾವಕ್ಕೊಳಗಾಗಿದ್ದ ಕಾಲದಲ್ಲಿ ಕೆಲವು ಸಮಾಜಕೇಂದ್ರಿತ ಕವನಗಳನ್ನು ಬರೆದರು. ಉದಾಹರಣೆಗೆ ‘ಸಮಾಜಭೈರವ’, ‘ಕಟ್ಟುವೆನು ನಾವು ಹೊಸ ನಾಡೊಂದನು’, ‘ನಾವೆಲ್ಲರು ಒಂದೆ ಜಾತಿ’, ‘ಸುಲಿಗೆಯೆಂಬ ಯಾಗ’, ಏಳುವುದೆಂದೀ ಜನಪದ?’ ಇತ್ಯಾದಿ. ಮೊದಲ ಸಂಗ್ರಹದಲ್ಲಿದ್ದ ‘ನಾನು’ ಇಲ್ಲಿ ‘ನಾವು’ ಎಂದಾದದ್ದು ಗಮನಾರ್ಹ. ಈ ಕವನಗಳಲ್ಲಿ ಅವರು ಸಮಾಜದ ಅವನತಿಯ ಕುರುಹುಗಳನ್ನು ಅನುಕಂಪದಿಂದ, ಜಿಗುಪ್ಸೆಯಿಂದ, ವ್ಯಂಗ್ಯದಿಂದ ಚಿತ್ರಿಸಿದ್ದಾರೆ. ‘ಇಂದು ನಮ್ಮೀ ನಾಡು’ ಎಂಬ ಮೂರು ಕವನಗಳನ್ನು ಬರೆಯುವ ಹೊತ್ತಿಗೆ ಅವರಲ್ಲಿ ಭ್ರಮನಿರಸನಕ್ಕೊಂದು ರೂಪಕವೇ ಸಿದ್ಧವಾಗಿತ್ತೆನ್ನಬೇಕು.

‘ಚಂಡೆಮದ್ದಳೆ’, ‘ಭೂಮಿಗೀತ’, ‘ವರ್ಧಮಾನ’ ಸಂಗ್ರಹಗಳಲ್ಲಿ ಮತ್ತೆ ‘ನಾನು’ ಎನ್ನುವ ವ್ಯಕ್ತಿ ಅವತರಿಸುತ್ತಾನೆ. ಈ ‘ನಾನು’ವಿನಲ್ಲಿರುವವನು ಬರೀ ವ್ಯಕ್ತಿಯಲ್ಲ, ಇಡೀ ಸಮಾಜ; ಸಮಾಜಕ್ಕಿರುವ ಚಾರಿತ್ರಿಕ, ರಾಜಕೀಯ, ಸಾಂಸ್ಕೃತಿಕ ಆಯಾಮಗಳು. ಅಡಿಗರನ್ನು ಶ್ರೇಷ್ಠ ಕವಿಯೆಂದು ಕರೆಯುವುದಕ್ಕೆ ಕಾರಣವಾಗುವ ಅನೇಕ ಕವನಗಳು ಈ ಸಂಗ್ರಹಗಳಲ್ಲಿವೆ.

‘ಭೂಮಿಗೀತ’ ಎಂಬ ಮಹತ್ವಾಕಾಂಕ್ಷೆಯ ಕವನದಲ್ಲಿರುವ ಕೆಲವು ಧ್ವನಿಗಳು ಅವರ ಮೊದಲ ಸಂಗ್ರಹದ ‘ಒಳತೋಟಿ’ ಎಂಬ ಕವನದಲ್ಲೇ ಇರುವುದನ್ನು ಗಮನಿಸಬೇಕು. ‘ಭೂಮಿಗೀತ’ದಲ್ಲಿ ಭೂಮಿತಾಯಿಯ ಆಕರ್ಷಣೆ ವಿಕರ್ಷಣೆ, ಅವಳ ಸಂಬಂಧದಲ್ಲಿರುವ ಹಿಂಸೆ, ಪ್ರಕೃತಿಯಲ್ಲಿರುವ ದ್ವಂದ್ವ, ಅವುಗಳಿಗೆ ಮನುಷ್ಯನೇ ಸೇರಿಸುವ ಇನ್ನಷ್ಟು ದ್ವಂದ್ವ (“ಇವಳೆದೆಗೆ ಬೇರಿಳಿದ ಕಾಲು ನನ್ನದು; ಬಿತ್ತಿದೆನು, ಬೆಳೆದೆ ಆಟಂಬಾಬು”) ಇವೆಲ್ಲವೂ ರೂಪಕಸಮೃದ್ಧಿಯಿಂದಾಗಿ ಅರ್ಥದ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತವೆ.

ಸೃಷ್ಟಿಕ್ರಿಯೆಯನ್ನು ಕುರಿತ ‘ಪ್ರಾರ್ಥನೆ’ ಕವನವಂತೂ ಪ್ರತಿಮೆಯಿಂದ ಪ್ರತಿಮೆಗೆ, ಸಂಕೇತದಿಂದ ಸಂಕೇತಕ್ಕೆ ಬೆಳೆಯುವ, ಒಂದು ಇನ್ನೊಂದರ ಜೊತೆ ಸಂಪರ್ಕ ಸಾಧಿಸುವ, ಹೊಸ ಹೊಸ ಅರ್ಥಗಳನ್ನು ಹೊಳೆಯಿಸುವ ಒಂದು ಸಾವಯವ ಶಿಲ್ಪವಾಗಿಬಿಟ್ಟಿದೆ. ಅವರ ಬಹು ಮುಖ್ಯ ಕವನಗಳು ಏಕಮುಖವಾಗಿ ಸಾಗುವುದಿಲ್ಲ. ಅವು ಹೊಮ್ಮಿಸುವ ಧ್ವನಿಗಳು ಬಹು ಬಗೆಯವು. ‘ಶ್ರೀರಾಮ ನವಮಿಯ ದಿವಸ’ ರಾಮನ ಕತೆಯನ್ನು ಸ್ಥೂಲವಾಗಿ ನಿರೂಪಿಸುತ್ತಿರುವಾಗಲೇ ಸೃಷ್ಟಿಕಾರ್ಯದ ಬಗೆಗೂ ವಿಕಾಸವಾದದ ಬಗೆಗೂ ಹೇಳುವಂತಿದೆ. ‘ಭೂತ’ ಗತಕಾಲದ ಬಗ್ಗೆ ಇರುವಂತೆಯೇ ಭೂತದ ಬಗೆಗೂ ಇದೆ. (ಎ. ಕೆ. ರಾಮಾನುಜನ್ ಇದನ್ನು ಇಂಗ್ಲೀಷಿಗೆ ಅನುವಾದಿಸುವಾಗ ಆ ಭಾಷೆಯಲ್ಲಿ ‘ಭೂತ’ಕ್ಕೆ ಸಮಾನಾರ್ಥ ಪದವೊಂದು ಸಿಕ್ಕದೆ ‘ಘೋಸ್ಟ್ಸ್ ಅಂಡ್ ಪಾಸ್ಟ್ಸ್’ ಎಂದು ಅನುವಾದಿಸಬೇಕಾಯಿತು). ಈ ಮಾತು ‘ಶರದ್ಗೀತ’, ‘ವರ್ಧಮಾನ’, ‘ಕೂಪಮಂಡೂಕ’, ‘ಚಿಂತಾಮಣಿಯಲ್ಲಿ ಕಂಡ ಮುಖ’, ಇತ್ಯಾದಿ ಕವನಗಳಿಗೂ ಅನ್ವಯಿಸುತ್ತದೆ.

ಅಡಿಗರು ಒಬ್ಬ ಧೀಮಂತ ಕವಿ. ಆದ್ದರಿಂದಲೇ ಅವರು ಎಲ್ಲವನ್ನೂ ಪ್ರಶ್ನಿಸುತ್ತಿದ್ದ ಕವಿ. ಅವರದು ಸರ್ವಾಧಿಕಾರದ ವಿರುದ್ಧ ಮೊಳಗಿದ ದನಿ. ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದ ಅವರಿಗೆ ನಮ್ಮ ದೇಶ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಸರ್ವಾಧಿಕಾರದತ್ತ ಸಾಗುತ್ತಿದೆ ಎಂಬ ಆತಂಕವಿತ್ತು. 1975ರ ಜೂನ್ 26ರಂದು ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರಷ್ಟೆ. ಮಾರನೆಯ ಬೆಳಿಗ್ಗೆ ನಾವೆಲ್ಲ ಪತ್ರಿಕೆಗಳಲ್ಲಿ ಆ ಬಗ್ಗೆ ಓದಿದರೂ ಕೂಡ ನಮ್ಮಲ್ಲಿ ಕೆಲವರಿಗೆ ಅಂಥ ಶಾಸನದಿಂದ ಏನೇನು ಅನರ್ಥವಾಗಬಹುದೆಂಬ ಕಲ್ಪನೆಯೂ ಇರಲಿಲ್ಲ.

ಆ ಸಂಜೆ ಅಡಿಗರು ಎಂದಿನಂತೆ ಬೆಂಗಳೂರಿನ ಗಾಂಧಿ ಬಜಾರಿಗೆ ಬಂದರು. ನಾವು ಮೂವರು ನಾಲ್ವರು ಅವರ ಜೊತೆ ಹೋಟೆಲಿನಲ್ಲಿ ಕಾಫಿ ಕುಡಿದೆವು. ಆದರೆ ಹೋಟೆಲಿನಲ್ಲಿ ಕುಳಿತಿರುವಷ್ಟು ಹೊತ್ತೂ ಅವರು ಹೆಚ್ಚೇನೂ ಮಾತಾಡಲಿಲ್ಲ. ಅಂದಿನ ಅವರ ಆ ವ್ಯಗ್ರತೆಗೆ ಕಾರಣವೇನೆಂದು ನಾವೂ ಊಹಿಸಲಾಗಲಿಲ್ಲ. ಹೋಟೆಲಿನಿಂದ ಹೊರಗೆ ಬಂದು ಅಲ್ಲೇ ಇದ್ದ ಕೆನರಾ ಬ್ಯಾಂಕಿನ ಕಟ್ಟೆಯ ಮೇಲೆ ಕುಳಿತದ್ದೇ ಅಡಿಗರು, “ಏನ್ರೀ, ಎಂಥಾ ಧೂರ್ತ ಹೆಂಗಸು ಈಕೆ? ಪ್ರಜಾತಂತ್ರದ ಮೂಲಕ್ಕೇ ಕೊಡಲಿ ಹಾಕಿದಳಲ್ಲ” ಎಂದು ಮೊದಮೊದಲು ಪೇಚಾಡುತ್ತ ಆಮೇಲೆ ಅತೀವ ಸಿಟ್ಟಿನಿಂದ ಒಂದರ್ಧ ಗಂಟೆ ಪ್ರಜಾತಂತ್ರದ ಪರಮಮೌಲ್ಯಗಳ ಬಗ್ಗೆ ಮಾತಾಡಿದರು. ಪರಿಣಾಮವಾಗಿ ನಾವೂ ಸ್ವಲ್ಪ ಹೊತ್ತು ಇಂದಿರಾ ಗಾಂಧಿಯ ಕೃತ್ಯದ ಬಗ್ಗೆ ಯೋಚಿಸುವಂತಾಯಿತು.

ರಾತ್ರಿ ಏಳೂವರೆ ಗಂಟೆಯಾದದ್ದೇ ಅವರು ಮನೆಗೆ ಹೊರಡಲೆಂದು ಎದ್ದರು. ನಾನು ಅದೇ ಹೊತ್ತಿಗೆ ಆ ದಾರಿಯಲ್ಲಿ ಬಂದ ಒಂದು ಆಟೋವನ್ನು ನಿಲ್ಲಿಸಿ ಅವರನ್ನು ಕೂಡಿಸಿದೆ. ಅವರು “ಬರುತ್ತೇನೆ, ನಾಳೆ ನೋಡೋಣ” ಎಂದದ್ದೇ ಆಟೋ ಹೊರಟಿತು. ಆಶ್ಚರ್ಯವೆಂದರೆ ಹತ್ತು ಗಜ ಹೋದದ್ದೇ ಅದು ನಿಂತುಬಿಟ್ಟದ್ದು. ಆಟೋದವನೇನಾದರೂ ಬರುವುದಿಲ್ಲ ಎಂದನೇನೋ ಎಂದುಕೊಂಡು ನಾನು ಓಡಿಹೋದೆ. ಅಡಿಗರು ಕೆಳಗಿಳಿದು ನನ್ನ ಭುಜ ಹಿಡಿದುಕೊಂಡು “ನಾವೀಗ ಬಾಂಬು ಮಾಡಬೇಕು” ಎಂದು ಹೇಳಿದವರೇ ಮತ್ತೆ ಆಟೋದೊಳಗೆ ತೂರಿಕೊಂಡುಬಿಟ್ಟರು. ಆಮೇಲೆ ಮೂರು ದಿನ ಅವರು ಗಾಂಧಿಬಜಾರಿನತ್ತ ಸುಳಿಯಲಿಲ್ಲ. “ಬಹುಶಃ ಬಾಂಬು ಮಾಡುತ್ತಿರಬೇಕು” ಎಂದು ನಾವು ನಕ್ಕದ್ದುಂಟು. ಆದರೆ ನಾಲ್ಕನೆಯ ದಿನ ಬಂದಿತು ಅವರ ಸವಾರಿ. ಎಲ್ಲರೂ ಕಾಫಿ ಹೀರುತ್ತಿರುವಾಗ ಒಂದು ಸಿಗರೇಟು ಹಚ್ಚಿದ ಅಡಿಗರು ಮೆಲ್ಲನೆ ತಮ್ಮ ಕೋಟಿನ ಜೇಬಿನಿಂದ ಮಡಿಸಿದ ಒಂದು ಕಾಗದ ತೆಗೆದು ಸುಮತೀಂದ್ರ ನಾಡಿಗರ ಕೈಗಿತ್ತರು. ಅದರಲ್ಲಿದ್ದದ್ದು ತುರ್ತು ಪರಿಸ್ಥಿತಿಯನ್ನು ವಿಡಂಬಿಸುವ ಒಂದು ಹೊಸ ಕವನ.

ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು
ಬೇಕಾದದ್ದು ಬೆಳೆದುಕೋ ಬಂಧು:
ಕಲೆ ಧರ್ಮನ್ಯಾಯ ಕಾನೂನು ಸ್ವಾತಂತ್ರ್ಯ ಇತ್ಯಾದಿ ಮೂಲವ್ಯಾಧಿ,
ನನ್ನ ಕುರ್ಚಿಗೆ ತಕ್ಕ ಗಾದಿ..

ಎಂದು ಪ್ರಾರಂಭವಾಗುವ ಆ ಕವನದಲ್ಲಿ ಒಬ್ಬ ಸರ್ವಾಧಿಕಾರಿಯ ಅಧಿಕಾರ, ದರ್ಪ, ಆಡಳಿತ, ಎಲ್ಲವೂ ಅತ್ಯಂತ ತೀವ್ರ ವ್ಯಂಗ್ಯಕ್ಕೆ ಗುರಿಯಾಗಿವೆ. ಬಹುಶಃ ಅಡಿಗರಂಥ ಸಮರ್ಥನಾದ ಕವಿ ಮಾಡಬಹುದಾದ ಬಾಂಬು ಅಂದರೆ ಇದೇ ಅಲ್ಲವೆ? ‘ಗಜೇಂದ್ರಮೋಕ್ಷ’, ‘ದೆಹಲಿಯಲ್ಲಿ’, ‘ಎಡ ಬಲ’, ‘ಸಾಮಾನ್ಯನಂತೆ ಈ ನಾನು’, ‘ಮೂಲಕ ಮಹಾಶಯರು’ ಮೊದಲಾದ ಕವನಗಳಲ್ಲಿ ಕೂಡ ಅವರ ಈ ಇಂಥ ಪ್ರಜಾತಂತ್ರಪರ ನಿಲುವೇ ಎದ್ದು ಕಾಣುತ್ತದೆ.

ಇಂಗ್ಲೀಷಿನಲ್ಲಿ ‘ಶೇಕ್ಸ್‍ಪಿಯರ್ ಫಾರ್ ಆಲ್ ಅಕೇಷನ್ಸ್’ ಎಂಬ ಮಾತಿದೆ. ಬದುಕಿನಲ್ಲಿ ಯಾವುದೇ ಸಂದರ್ಭಕ್ಕೂ ಹೊಂದುವ ಸೂಕ್ತವಾದೊಂದು ನಾಣ್ನುಡಿಯ ರೂಪದ ಸಾಲು ಶೇಕ್ಸ್‍ಪಿಯರನಲ್ಲಿ ಸಿಕ್ಕೇ ಸಿಕ್ಕುತ್ತದೆ ಎನ್ನುವುದು ಅದರ ಅರ್ಥ.

ವೈಯೆನ್ಕೆಯವರು ಒಮ್ಮೊಮ್ಮೆ ಅಡಿಗರ ಒಂದೆರಡು ಸಾಲುಗಳನ್ನು ಹೇಳಿದ್ದೇ ‘ಅಡಿಗ ಫಾರ್ ಆಲ್ ಅಕೇಷನ್ಸ್’ (ಎಲ್ಲ ಸಂದರ್ಭಗಳಿಗೂ ಅಡಿಗ) ಎನ್ನುತ್ತಿದ್ದರು. ಆ ಮಾತಿಗೆ ಸಾಕ್ಷಿಯಾಗಿವೆ ಈ ಕೆಲವು ಸಾಲುಗಳು: ‘ಮೂಗು ಮುಚ್ಚಿಕೋ ನಗರಸಭೆಯ ಲಾರಿ’; ‘ದೊಡ್ಡ ದೊಡ್ಡ ಮಾತು-ಬಲೂನು ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ’; ‘ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ ಅಪರ ಪ್ರಯೋಗದಲಿ ಪಾರಂಗತ’, ‘ನಾತದಿಂದಲೇ ಜಗದ್ವಿಖ್ಯಾತನಾಗು-ತ್ತಿರುವನಾಥಪ್ರೇತ’; ‘ಶಸ್ತ್ರಕ್ರಿಯೆಗೆ ಇಲ್ಲಿ ಯಾವ ಶೈಲಿ?’; ‘ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ’, ‘ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದೆಂತೊ ನೋಡಬೇಕು’, ‘ಕೇಳಿಲ್ಲವೇ ನೀವು ಪ್ರತಿನಿತ್ಯವೂ ಟೀವಿ ಕಕ್ಕುತ್ತಿರುವ ನನ್ನ ಠೀವಿವಾಕ್ಕು?’, ‘ಪರಾನುಕರಣೆಯ ಪರಾಕಾಷ್ಠೆಯೇ ಈ ನಮ್ಮ ಸತ್ತು ಬದುಕುವ ಜನರ ಮೂಲನಿಷ್ಠೆ’, ‘ಇದು ಸನಾತನ ವೃಕ್ಷವಣ್ಣ! ನೇಣಿಗೆ ಬೇರೆ ಆಧಾರ ಬೇಕೆ ಈ ಕೊಂಬೆಗಿಂತ?’, ‘ಆಸ್ಥಾನ ಬಿಟ್ಟವಗೆ ಜಾಪಾಳ ಮಾತ್ರೆ’, ‘ಎರಡು ದೋಣಿಗೆ ಕಾಲನಿಟ್ಟು ಸಾಗುವ ಶೂರ, ಇಲ್ಲದ ತೃತೀಯ ಕ್ರಮಕ್ಕೆ ಠಾವೆಲ್ಲೆಂದು ಕುದಿವ ಕುವರ’.

ಈ ಲೇಖನದ ಆರಂಭದಲ್ಲಿ ಅಡಿಗರದು ಮಾರ್ಗಪ್ರವರ್ತಕ ಕಾವ್ಯ ಎಂದೆನಷ್ಟೆ. ಅವರಿಗೆ ತಾವೆಷ್ಟು ದೊಡ್ಡ ಕವಿ ಎಂದು ಗೊತ್ತಿದ್ದುದಲ್ಲದೆ ಕವಿಯಾಗಿ ತನ್ನ ಬಾಳು ಸಾರ್ಥಕವಾಯಿತೆಂಬ ಅರಿವೂ ಇತ್ತು. “ಒಂದು ಕಲೆ ಅಥವಾ ಕವನ ಸಫಲವಾಗುವುದು ಅದರಲ್ಲಿ ಕಲೆಗಾರ ಕಾಲವನ್ನು ತಡೆಹಿಡಿದು ನಿಲ್ಲಿಸಿದಾಗ. ಹೀಗೆ ನಿಲ್ಲಿಸುವುದು ಸಾಧ್ಯವಾಗುವುದು ಭೂತ ಭವಿಷ್ಯತ್ತು ಮತ್ತು ವರ್ತಮಾನಗಳನ್ನು ಒಂದೇ ಬಿಂದುವಿನಲ್ಲಿ ತಂದು ಕೇಂದ್ರೀಕರಿಸಿದಾಗ. ಇಂಥ ಕವನಗಳು ತೀರ ಅಪೂರ್ವವಾದಂಥವು, ಅಂಥವನ್ನು ಬರೆದಿದ್ದರೆ ನಾನು ಕೃತಾರ್ಥ” ಎಂದು ಅವರೇ ಒಂದು ಕಡೆ ಬರೆದಿದ್ದಾರೆ. ‘ಕೂಪಮಂಡೂಕ’ ಎಂಬ ಕವನದಲ್ಲಿ ಬರುವ ಬಾಳೆಗಿಡದ ಈ ರೂಪಕ ಹೇಳುತ್ತಿರುವುದು ಕೂಡ ಇದನ್ನೇ ಅಲ್ಲವೆ?
ಗೊನೆಮಾಗಿ ಬಾಳೆ ಜೀವನ್ಮುಕ್ತ; ಹಳಸುತಿದೆ
ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ.

(ಪುಸ್ತಕ: ಸ್ವಯಂದೀಪಕತೆ, ಲೇಖಕರು: ಎಸ್. ದಿವಾಕರ್, ಪ್ರಕಾಶಕರು: ಅಭಿನವ, ಬೆಂಗಳೂರು, ಪುಟಗಳು: 68 ಬೆಲೆ: 50/-)