(ಎ.ಎನ್. ಮುಕುಂದ)

ಪೂರ್ಣಚಂದ್ರ ತೇಜಸ್ವಿ ಸ್ವತಃ ಈ ನಾಡಿನ ಅತ್ಯಂತ ಶ್ರೇಷ್ಠ ಫೋಟೋಗ್ರಾಫರುಗಳಲ್ಲಿ ಒಬ್ಬರು. ಅವರು ತುಂಬ ಮೂಡಿ, ಅಪಾಯಿಂಟ್‌ಮೆಂಟ್ ಇಲ್ಲದೆ ಯಾರನ್ನೂ ಭೇಟಿಮಾಡುವುದಿಲ್ಲ ಎಂದು ಬೇರೆ ಬೆಂಗಳೂರಿನ ಕೆಲವು ಸ್ನೇಹಿತರು ಹೆದರಿಸಿದ್ದರು. ಮೂಡಿಗೆರೆ ಲೈನ್ ಬೇರೆ ಹಾಳಾಗಿತ್ತು. ಹೇಗೂ ಒಂದು ಛಾನ್ಸ್ ತೆಗೆದುಕೊಂಡುಬಿಡೋಣ ಎಂದು ಸೀದಾ ಅವರ ಮನೆಗೆ ಹೋದೆವು. ತೇಜಸ್ವಿ ಕಂಪ್ಯೂಟರು ರೂಮಿನಿಂದ ಬಂದು ಸ್ವಾಗತಿಸಿದರು. ನನ್ನ ಫೋಟೋ ತೆಗೆಯೋಕ್ಕೆ ಬೆಂಗಳೂರಿಂದ ಬಂದಿದಿರೇನ್ರಿ. ನಿಮಗೇನಾದರೂ ಬುದ್ಧಿ ಇದೆಯೇನ್ರಿ ಎಂದು ತಮ್ಮ ಎಂದಿನ ಧಾಟಿಯಲ್ಲಿ ದಬಾಯಿಸಿದರು. ಆದರೆ ಫೋಟೋ ತೆಗೆಸಿಕೊಳ್ಳಲು ಒಪ್ಪಿದರು ಮತ್ತು ಪೂರ್ಣ ಸಹಕಾರ ನೀಡಿದರು. ಆದರೆ ಫೋಟೋ ಸೆಷನ್ನನ್ನು ಎಂಜಾಯ್ ಮಾಡಿದ ಹಾಗೆ ಕಾಣಲಿಲ್ಲ.

ಈ ಮನುಷ್ಯರ ಫೋಟೋ ತೆಗೆಯೋದು ಎಂಥ ರಗಳೆ ಕೆಲಸ ಅಲ್ಲವೇನ್ರಿ. ಅದಕ್ಕೇ ನಾನು ಮನುಷ್ಯರ ಫೋಟೋ ತೆಗೆಯೋದಿಲ್ಲ. ಹಕ್ಕಿಗಳ, ಪ್ರಾಣಿಗಳ ಫೋಟೋ ತೆಗೀತೀನಿ. ಅವು ಪೋಸ್ ಮಾಡೋಲ್ಲ. ಅವು ಕೃಪೆ ಮಾಡೋವರ್ಗೆ ನಮಗೆ ಪೇಶನ್ಸ್ ಇರಬೇಕು ಅಷ್ಟೆ. ಬರ್ಡ್ ಫೋಟೋಗ್ರಫಿ ಅಂದರೆ ಫಿಶಿಂಗ್ ತರ ಕಣ್ರೀ ಎಂದರು. ಆಮೇಲೆ ತಮ್ಮ ಕಂಪ್ಯೂಟರ್ ರೂಮಿಗೆ ಕರೆದುಕೊಂಡು ಹೋದರು. ಡಾರ್ಕ್ ರೂಮಿನಲ್ಲಿ ಕೂತು ನಮ್ಮ ಕಣ್ಣುಗಳ ಆಯುಷ್ಯ ಕನಿಷ್ಠ ಇಪ್ಪತ್ತೈದು ವರ್ಷ ಕಡಿಮೆಯಾಗಿ ಹೋಗಿದೆ. ಕಂಪ್ಯೂಟರಿನ ಸಹಾಯ ಹೇಗೆ ಪಡೆಯಬಹುದು ಅಂತ ಹುಡುಕ್ತಿದೀನಿ ಅಂದರು.ಫಿಲ್ಮ್ ಯುಗದ ಆಶಯ, ಸ್ವರೂಪಗಳನ್ನು ಅವರು ಕ್ಯಾಶುಅಲ್ ಆದ ಭಾಷೆಯಲ್ಲಿ, ಹರಟೆಯ ರೂಪದಲ್ಲಿ ವಿವರಿಸುತ್ತಿದ್ದುದು ಅವರ ಯಾವತ್ತೂ ಕಥೆಗಳ ಶೈಲಿಯನ್ನು ನೆನಪಿಸುತ್ತಿತ್ತು. ಆದರೆ ಅಲ್ಲಿ ನಾವಿದ್ದ ನಾಲ್ಕೈದು ಗಂಟೆಗಳ ಕಾಲ ತಪ್ಪಿಯೂ ಸಾಹಿತ್ಯದ ಸುದ್ದಿ ಮಾತಾಡಲಿಲ್ಲ. ಅವರ ತೋಟವನ್ನೆಲ್ಲಾ ಸಂಭ್ರಮದಿಂದ ತೋರಿಸಿದರು.

 

(ಎ.ಎನ್. ಮುಕುಂದ ಅವರ ‘ಮುಖಮುದ್ರೆ’ ಪುಸ್ತಕದಿಂದ.ಈ ಪುಸ್ತಕವನ್ನು ನವ ಕರ್ನಾಟಕ ಪುಸ್ತಕದಂಗಡಿಯ ಮಳಿಗೆಗಳಿಂದ ಕೊಳ್ಳಬಹುದು. ಅಥವಾ MUP@MANIPAL.EDU ಈ ಮೇಲ್ ವಿಳಾಸಕ್ಕೆ ಬರೆದು ತರಿಸಿಕೊಳ್ಳಬಹುದು)