ಪ್ರಕಾಶನ ಸಂಸ್ಥೆಯ ಸಹಾಯಕಿ ಅವನ ಬಗ್ಗೆ ಹಿತವಾದ ಭಾವನೆಯಿಂದ ಪ್ರತಿಕ್ರಿಯಿಸುತ್ತಾಳೆ. ಇಂಟವ್ಯೂ ಮುಗಿದ ಮೇಲೆ ಭೇಟಿಯಾಗಲು ಇಷ್ಟಪಡುತ್ತಾಳೆ. ಪ್ರಕಾಶನದ ಒಡೆಯನಿಗೆ ಮಾತು ಮುಂದುವರಿಸಲು ಇಷ್ಟವಿರುತ್ತದೆ. ಆದರೆ ಆಂಡರ್ಸ್‌ನ ಶಿಥಿಲವಾದ ಅಂತರಂಗ ಅವನನ್ನು ವಿಪರೀತವಾಗಿ ವರ್ತಿಸುವಂತೆ ಮಾಡುತ್ತದೆ. ಅವನಿಂದ ಸಿವಿಯನ್ನು ಕಸಿದುಕೊಂಡು ಹಠಾತ್ತನೆ ಹೊರಡುತ್ತಾನೆ. ಹೊರಗೆ ಬಂದವನು ಪ್ರಕಾಶನ ಸಂಸ್ಥೆಯ ಇಂಟರ್ವ್ಯೂಗೆ ಸಂಬಂಧಿಸಿದ ಎಲ್ಲ ಕಾಗದಗಳನ್ನು ಡಸ್ಟ್‌ಬಿನ್‌ಗೆ ಎಸೆಯುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ನಾರ್ವೆಯ ʻಓಸ್ಲೋ, ಥರ್ಟಿಫಸ್ಟ್‌, ಅಗಸ್ಟ್ʼ ಸಿನಿಮಾದ ವಿಶ್ಲೇಷಣೆ

ಅದು ನಾರ್ವೆಯ ಓಸ್ಲೋ ಪಟ್ಟಣ. ತಿಳಿಬೆಳಕಿನ ವಿಸ್ತಾರದಲ್ಲಿ ಅಚ್ಚುಕಟ್ಟಾಗಿ ಕಾಣುವ ವ್ಯವಸ್ಥಿತ ರೂಪದಲ್ಲಿರುವ ಉದ್ದಾನುದ್ದದ, ಜನರಿಲ್ಲದ ಖಾಲಿ ರಸ್ತೆಗಳು. ಅವುಗಳಲ್ಲಿ ಪಕ್ಕದಲ್ಲಿ ಉದ್ದಕ್ಕೂ ನಿಲ್ಲಿಸಿದ ಕಾರುಗಳು, ದೂರದಲ್ಲಿ ಅಷ್ಟೆತ್ತರದ ಕಟ್ಟಡಗಳು ಹಿತವೆನಿಸುವ ಎಳೆ ಬೆಳಕಲ್ಲಿ ಮಿನುಗುವ ನೋಟಗಳು, ಇವುಗಳನ್ನು ಕುರಿತು ಕಾರಿನಲ್ಲಿ ಕುಳಿತವರ ದೃಷ್ಟಿ ಕೋನದ ಮಾತುಗಳ ಜೊತೆಗೆ ಆ ಸುಂದರ ಪಟ್ಟಣವನ್ನು ಪ್ರಾರಂಭದಲ್ಲಿ ಕಾಣುತ್ತೇವೆ. ಅವರು ಬಾಲ್ಯದಲ್ಲಿ ಆಡಿದ ಆಟಗಳು, ಬೆಳೆದ ಮೇಲೆ ಸ್ವಿಮಿಂಗ್‌ ಪೂಲ್‌ನಲ್ಲಿ ಹಾರಿ ಬಿದ್ದು ಈಜಾಡುತ್ತಿದ್ದ ಬಗೆ, ಇವುಗಳಲ್ಲದೆ ಸ್ಕೂಲು, ಕಾಲೇಜಿನ ದಿನಗಳು, ಋತು ಬದಲಾವಣೆಯಾದಾಗಿನ ಸುಂದರ ಚಿತ್ರಗಳ ಮಾಲೆಯಿದೆ. ವರ್ಷಗಳುರುಳಿದ ಮೇಲೆ ಅದೇ ಜಾಗಗಳಲ್ಲಿ ಜನಗಳ ಓಡಾಟ, ಅಂಗಡಿಗಳು ಸೇರಿ ಬದಲಾದದ್ದನ್ನು ಕುರಿತು ಮಾತನಾಡುತ್ತಿರುತ್ತಾರೆ. ಚಿತ್ರದ ಶೀರ್ಷಿಕೆಯ ಮೊದಲು ಕಂಡ ನಂತರದಲ್ಲಿ ಪ್ರಾರಂಭವಾಗುವ 2016ರ ಜೋಚಿಮ್‌ ಟ್ರೈಯರ್‌ ನಿರ್ದೇಶನದ ʻಓಸ್ಲೋ, ಅಗಸ್ಟ್‌ ಥರ್ಟಿ ಫಸ್ಟ್ʼ ಚಿತ್ರದ ಮೊದಲ ದೃಶ್ಯದಲ್ಲಿ ಆಂಡರ್ಸ್ (ಆಂಡರ್ಸ್‌ ಡೇನಿಯೆಲ್ಸನ್‌ ಲೀ)ಗೆಳತಿಯೊಡನಿರುವುದನ್ನು ಕಾಣುತ್ತೇವೆ. ಅದು ಅವನ ನೆನಪು. ಕತ್ತಲ ಹಿನ್ನೆಲೆಯಲ್ಲಿನ ಆ ಆವರಣ ಅನಂತರದಲ್ಲಿ ಅವನ ಜೀವನ ಅಧೋಗತಿಗೆ ಸಿಲುಕುವುದನ್ನು ಸೂಚಿಸುತ್ತದೆ. ಚಿತ್ರದಲ್ಲಿ ನಿರ್ದೇಶಕ ನಿರೂಪಣೆಯಲ್ಲಿ ನೇರ ಕಾಲಾನುಕ್ರಮವನ್ನು ಅನುಸರಿಸುವುದಿಲ್ಲ, ಈ ಚಿತ್ರ ಆಸ್ಕರ್‌ನ ಅನ್‌ಸರ್ಟನ್‌ ರೆಗಾರ್ಡ್‌ ಪ್ರಶಸ್ತಿಗೆ ನಾಮ ನಿರ್ದೇಶನ ಸೇರಿ ಹತ್ತೊಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ.

(ಜೋಚಿಮ್‌ ಟ್ರೈಯರ್‌)

ನಾರ್ವೆಯ ಕೋಪನ್‌ ಹೇಗನ್‌ನಲ್ಲಿ 1974ರಲ್ಲಿ ಜನಿಸಿದ ಜೋಚಿಮ್‌ ಟ್ರೈಯರ್‌ ಇಂಗ್ಲೆಂಡಿನ ನ್ಯಾಷನಲ್‌ ಸ್ಕೂಲ್‌ ಆಫ್‌ ಫಿಲ್ಮ್‌ ಅಂಡ್‌ ಟೆಲಿವಿಷನ್‌ ಸ್ಕೂಲ್‌ನಲ್ಲಿ ಅಭ್ಯಾಸ ಮಾಡಿದವನು. ಅವನ ತಂದೆ (ಜಾಕಬ್‌ ಟ್ರೈಯರ್) ಮತ್ತು ತಾತ (ಎರಿಕ್‌ ಲೋಚೆನ್) ಕೂಡ ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿದ್ದರು. ಹಾಗಾಗಿ ಚಲನಚಿತ್ರ ವಿಷಯಗಳ ಪರಿಚಯವಿದ್ದವನು ಅವನು. ಪ್ರಖ್ಯಾತ ನಿರ್ದೇಶಕ ಆಂಟೋನಿಯೋನಿ ಮತ್ತು ಡೆ ಪಾಲ್ಮ ಅವರ ಕಲ್ಪನಾ ಸ್ವರೂಪಗಳನ್ನು ಮೆಚ್ಚಿಕೊಂಡಿರುವುದಾಗಿ ಅವನು ಹೇಳಿಕೊಂಡಿದ್ದಾನೆ. ಅವನು ಚಿತ್ರಗಳಲ್ಲಿ ಪಾತ್ರಗಳ ಪೋಷಣೆಯನ್ನು ವಿಶದೀಕರಿಸುವುದು ಪ್ರಿಯವಾದದ್ದೆಂದು ಅಭಿಪ್ರಾಯ ಪಡುತ್ತಾನೆ. 2006ರಲ್ಲಿ ʻರೆಪ್ರೈಸ್‌, 2015ರಲ್ಲಿ ಮೊದಲ ಇಂಗ್ಲಿಷ್‌ ಭಾಷೆಯ `ಲೌಡರ್‌ ದ್ಯಾನ್‌ ಬಾಂಬ್ಸ್‌’ ಮತ್ತು 2017ರ `ಥೆಲ್ಮಾ’ ಚಿತ್ರಗಳನ್ನು ನಿರ್ಮಿಸಿದ್ದಾನೆ. ಅವುಗಳಲ್ಲಿ ʻಥೆಲ್ಮಾʼ ಅತ್ಯುತ್ತಮ ವಿದೇಶಿ ಚಿತ್ರ ಆಸ್ಕರ್‌ ಪ್ರಶಸ್ತಿಗೆ ನಾರ್ವೆಯ ಅಧಿಕೃತ ಪ್ರವೇಶವಾಗಿತ್ತು. ಅವನ ಚಿತ್ರಗಳಲ್ಲಿ ಗಮನಿಸಬಹುದಾದ ಮುಖ್ಯವಾದ ಅಂಶವೆಂದರೆ ಚಿತ್ರದ ಕಥನ ಸ್ವರೂಪ ಒಂದರಿಂದ ಇನ್ನೊಂದು ಬೇರೆಯಾಗಿದ್ದರೂ ಪ್ರಧಾನ ಪಾತ್ರಗಳ ಮನೋನೆಲೆಗಳನ್ನು ಬಿಂಬಿಸುವ ದೃಶ್ಯಗಳ ಪರಿಕಲ್ಪನೆಯಲ್ಲಿ ಸಮಾಧಾನವೆನಿಸುವಂಥ ಚಿತ್ರಕಥಾ ಹೆಣಿಗೆಯನ್ನು ಕಾಣಬಹುದು.

ಒಂದು ದಿನದ ಅವಧಿಯಲ್ಲಿ ಜರುಗುವ ಘಟನೆಗಳನ್ನು ಹೊಂದಿದ ಈ ಚಿತ್ರದಲ್ಲಿ ನಗರದಲ್ಲಿ ಮತ್ತು ಹೊರಗೆ ಒಂಟಿಯಾಗಿ ಪ್ರಮುಖ ಪಾತ್ರದ ಮೂವತ್ನಾಲ್ಕು ವರ್ಷದ ಆಂಡರ್ಸ್ ಅಲೆಯುತ್ತಾನೆ. ಮನಸ್ಸಿಗೆ ಉಲ್ಲಾಸದ ನೋಟಗಳ ಬದಲಿಗೆ ಅವನ ಸಧ್ಯದ ಖಿನ್ನ ಮನಸ್ಥಿಯನ್ನು ನಿರೂಪಿಸುವುದನ್ನು ಕಾಣುತ್ತೇವೆ. ದೊಡ್ಡ ಕೆರೆಯ ಬದಿಯಲ್ಲಿ ನಿಂತಿರುವ ಅವನು ದಿಢೀರನೆ ನಿರ್ಧಾರ ಮಾಡುತ್ತಾನೆ. ಅದರ ಫಲವಾಗಿ ಹಾಕಿಕೊಂಡಿದ್ದ ಓವರ್‌ ಕೋಟಿನ ಜೇಬುಗಳಲ್ಲಿ ಕಲ್ಲಿನ ಚೂರುಗಳನ್ನು ತುಂಬಿ‌, ಕೆರೆಯಲ್ಲಿಳಿದು ಅಲ್ಲಿ ಕಂಡ ಎರಡು ಕೈಗಳಿಂದ ಹಿಡಿಬಹುದಾದ ಕಲ್ಲಿನ ಗುಂಡನ್ನು ಹಿಡಿದು ಕೆರೆಯೊಳಗೆ ಹೆಜ್ಜೆಯಿಟ್ಟು ನಡೆಯುತ್ತ ಹೋಗುತ್ತಾನೆ. ಹೆಚ್ಚು ದೂರ ಹೋಗಲಾರದೆ ಅದರಲ್ಲಿ ಮುಳುಗಿ, ಮತ್ತೆ ಮೇಲೆ ಬಂದು ಮುಂದೆ ನಡೆಯುತ್ತಾನೆ. ಹೀಗೆ ಮಾಡುವಾಗ ಮೊದಲಿನಿಂದಲೂ ಅವನ ಗಂಭೀರ ಮುಖಮುದ್ರೆ ಬದಲಾಗುವುದಿಲ್ಲ.

ಆಂಡರ್ಸ್ ಗಂಭೀರ ಸ್ವರೂಪದ ವ್ಯಸನಿಯಾಗಿರುತ್ತಾನೆ ಮತ್ತು ಆರು ವರ್ಷಗಳಿಂದಲೂ ಪುನರ್ವಸತಿ ಕೇಂದ್ರದಲ್ಲಿರುತ್ತಾನೆ. ಅಲ್ಲಿರುವ ಅಧಿಕಾರಿಗಳು ಅವನನ್ನು ಆಪ್ತ ರೀತಿಯಲ್ಲಿಯೇ ನೋಡಿಕೊಳ್ಳುತ್ತಿರುತ್ತಾರೆ. ಅಲ್ಲಿನ ಅಧಿಕಾರಿ ಆ ದಿನ ಅವನು ಇಂಟರ್‌ವ್ಯೂ ಒಂದಕ್ಕೆ ಹೋಗಬೇಕಾಗಿರುವುದಕ್ಕೆ ಟ್ಯಾಕ್ಸಿ ವ್ಯವಸ್ಥೆ ಮಾಡುತ್ತಾನೆ. ಆದರೆ ಹೊಸ ಜೀವನದ ನಿರೀಕ್ಷೆ, ಭವಿಷ್ಯ ರೂಪಿಸಿಕೊಳ್ಳುವ ಅವಕಾಶದ ಕುತೂಹಲ, ಉಲ್ಲಾಸ ಯಾವುದೂ ಆಂಡರ್ಸ್‌ನಲ್ಲಿ ಕಾಣುವುದಿಲ್ಲ. ಅವನು ಎಂದಿನ ಗಂಭೀರತೆಯಲ್ಲಿಯೇ ಇರುತ್ತಾನೆ. ಇದರಿಂದ ಅವನ ಮನೋನೆಲೆ ಕುಂಠಿತಗೊಂಡಿರುವುದು ವ್ಯಕ್ತವಾಗುತ್ತದೆ.

ಪುನರ್ವಸತಿ ಕೇಂದ್ರದಿಂದ ಹೊರಗೆ ನಡೆಯುವ ಆಂಡರ್ಸ್ ಮೊದಲಿಗೆ‌ ಹೆಂಡತಿ, ಮಗುವಿನೊಂದಿಗೆ ಬದುಕು ರೂಪಿಸಿಕೊಂಡಿರುವ ತನ್ನ ಹಳೆಯ ಗೆಳೆಯ ಥಾಮಸ್(ಹ್ಯಾನ್ಸ್‌ ಒಲಾವ್‌ ಬ್ರೆನರ್) ಮನೆಗೆ ಹೋಗುತ್ತಾನೆ. ಅವನಿಗಲ್ಲಿ ಇನ್ನಿಲ್ಲದಷ್ಟು ಹರುಷದ ಕ್ಷಣಗಳು ಲಭಿಸುತ್ತದೆ. ಅವನು ಗೆಳೆಯನ ಜೊತೆ ಕುಡಿಯಲು ನಿರಾಕರಿಸುತ್ತಾನೆ. ಅವನೊಡನೆ ಮಾತನಾಡುತ್ತ ಹಿಂದಿನ ದಿನಗಳನ್ನು, ಅವನು ಪ್ರೇಮಿಸುತ್ತಿದ್ದ ಇಸೆಲಿನ್‌ಳನ್ನು ನೆನಪಿಸುತ್ತಾನೆ. ಅವೆಲ್ಲ ಹುಸಿ ಎಂದು ನಿರಾಕರಿಸುತ್ತಾನೆ. ಅಲ್ಲದೆ ಅವಳು ಅವನ ಬಗ್ಗೆ ಮತ್ತೆ ಮತ್ತೆ ವಿಚಾರಿಸುತ್ತಿದ್ದಳೆಂದು ಹೇಳಿದರೂ ಅವನು ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ. ಹೀಗೆ ಮಾಡುವುದರಿಂದ ನಿಜಸ್ಥಿತಿಯಿಂದ ದೂರವಿರಲು ಬಯಸುವುದನ್ನು ಅವನು ವಿನಾ ಕಾರಣ ಧ್ವನಿ ಎತ್ತರಿಸಿ ಹೇಳುವುದರಿಂದ ವ್ಯಕ್ತವಾಗುತ್ತದೆ. ಅಂತರಂಗದಲ್ಲಿ ನೆನಪು ಪುಟಿದೇಳಿಸುವ ಹರುಷದ ಎಳೆಗಳನ್ನು ಅಲ್ಲಿಯೇ ಚಿವುಟು ಹಾಕುವಷ್ಟು ಅವನು ಕುಸಿದಿರುತ್ತಾನೆ. ಒಂದಷ್ಟು ಹಣವಿದ್ದರೆ ಸಾಕು ಹಿರಾಯಿನ್‌ ಕಡೆ ಮನಸ್ಸು ಸೆಳೆಯುವಷ್ಟು ತಾನು ವ್ಯಸನಿಯಾದದ್ದರ ಬಗ್ಗೆ ತಿಳಿಸುತ್ತಾನೆ. ಅವನ ಬಗ್ಗೆ ಅವನಿಗೇ ನಿಶ್ಚಿತ ಹಿಡಿತ ಇಲ್ಲವೆನ್ನುವ ರೀತಿಯಲ್ಲಿ ಅವನ ನಡತೆ ಇರುತ್ತದೆ.

ಇದೇನಿದ್ದರೂ ತನ್ನನ್ನು ತಾನು ಮುತ್ತಿಕೊಂಡ ಆವರಣದಿಂದ ಹೊರಗೆ ಬರಲು ಶ್ರಮಿಸಬೇಕೆಂದು ಆಗ್ರಹಿಸುತ್ತಾನೆ. ಥಾಮಸ್‌ ಆಂಡರ್ಸ್‌ನ ತಂದೆ, ಸೋದರಿಯ ವಿಷಯ ತೆಗೆದಾಗ ಆರ್ಥಿಕ ಕಾರಣಕ್ಕಾಗಿ ತನ್ನ ತಂದೆ ಮನೆ ಮಾರಬೇಕೆಂದಿರುವುದನ್ನು ತಿಳಿಸುತ್ತಾನೆ. ಈ ಅವಸ್ಥೆಗಳೇನಿದ್ದರೂ ಉಳಿದವರಿಗಿಂತ ಅನೇಕ ರೀತಿಯಲ್ಲಿ ಉತ್ತಮ ಮಟ್ಟದಲ್ಲಿದ್ದಾಗ ಒಳ್ಳೆಯ ದಿನಗಳನ್ನು ಹೊಂದಬಾರದೇಕೆ ಎಂದು ಥಾಮಸ್‌ನ ಅಭಿಪ್ರಾಯಗಳಿಗೆ ಆಂಡರ್ಸ್‌ನಿಂದ ಸೂಕ್ತ ಪ್ರತಿಕ್ರಿಯೆ ದೊರಕುವುದಿಲ್ಲ.

ಒಂದು ದಿನದ ಅವಧಿಯಲ್ಲಿ ಜರುಗುವ ಘಟನೆಗಳನ್ನು ಹೊಂದಿದ ಈ ಚಿತ್ರದಲ್ಲಿ ನಗರದಲ್ಲಿ ಮತ್ತು ಹೊರಗೆ ಒಂಟಿಯಾಗಿ ಪ್ರಮುಖ ಪಾತ್ರದ ಮೂವತ್ನಾಲ್ಕು ವರ್ಷದ ಆಂಡರ್ಸ್ ಅಲೆಯುತ್ತಾನೆ. ಮನಸ್ಸಿಗೆ ಉಲ್ಲಾಸದ ನೋಟಗಳ ಬದಲಿಗೆ ಅವನ ಸಧ್ಯದ ಖಿನ್ನ ಮನಸ್ಥಿಯನ್ನು ನಿರೂಪಿಸುವುದನ್ನು ಕಾಣುತ್ತೇವೆ. ದೊಡ್ಡ ಕೆರೆಯ ಬದಿಯಲ್ಲಿ ನಿಂತಿರುವ ಅವನು ದಿಢೀರನೆ ನಿರ್ಧಾರ ಮಾಡುತ್ತಾನೆ.

ಅವನಿಗೆ ಊರು ಹೊಸದಾಗಿ ಕಾಣಿಸುತ್ತದೆ. ಅವನು ಪುನರ್ವಸತಿ ಕೇಂದ್ರದಲ್ಲಿ ವರ್ಷಗಳನ್ನು ಕಳೆದಿರುವುದರ ಜೊತೆಗೆ ವಾಸ್ತವದ ಅಂಶಗಳಿಂದ ಕಳಚಿಕೊಂಡಂತೆ ಕಾಣಿಸುತ್ತಾನೆ. ಆಂಡರ್ಸ್ ಎಲ್ಲ ವಿಷಯದಲ್ಲಿಯೂ ಅವನ ಓರಗೆಯ ಹುಡುಗರಿಗಿಂತ ಭಿನ್ನ. ಅವನು ಬರಹಗಾರ, ಅದನ್ನು ಪೋಷಿಸಿಕೊಂಡು ಮುಂದುವರೆದಿದ್ದರೆ ಅವನ ಸ್ಥಿತಿ ಹೀಗೆ ಇರುತ್ತಿರಲಿಲ್ಲವೆಂದು ಥಾಮಸ್‌ನ ನಿಲುವು. ಪರಿಸ್ಥಿತಿ ಬದಲಾಗಲು ಅವನು ಅಳತೆ ಮೀರಿದ ವ್ಯಸನಿಯಾಗಿರುತ್ತಾನೆ. ಹೆರಾಯಿನ್, ಆಲ್ಕೋಹಾಲ್ ಮುಂತಾದವು ಅವನನ್ನು ಆವರಿಸಿಕೊಂಡಿರುತ್ತದೆ. ಇವೆಲ್ಲವುಗಳ ಬಲೆಗೆ ಒಳಗಾಗಿ ತನಗೆ ಭವಿಷ್ಯ ಉಂಟೇ ಎಂಬ ಚಿಂತನೆಯಲ್ಲಿ ಇರುತ್ತಾನೆ.

ಆ ದಿನ ಅವನು ಪಬ್ಲಿಷಿಂಗ್ ಹೌಸ್ ಪ್ರಕಾಶನ ಸಂಸ್ಥೆಯೊಂದರ ಸಂದರ್ಶನಕ್ಕೆ ಹೋಗಬೇಕಾದ ಕಾರಣ ಹೊರ ನಡೆದಿರುತ್ತಾನೆ. ಅಂಡರ್ಸ್ ತಾನು ಹೋಗಲಿರುವ ಪ್ರಕಾಶನ ಸಂಸ್ಥೆಗಿಂತ ಮೊದಲು ಹಲವು ರೀತಿಯಲ್ಲಿ ಹಲವು ಜನರೊಂದಿಗೆ ತೊಡಗಿಕೊಳ್ಳುತ್ತಾನೆ. ಅವನು ಹೋಟೆಲಿನಲ್ಲಿ ಕುಳಿತುಕೊಂಡು ಒಬ್ಬಂಟಿಯಾಗಿ ನಡೆಯುತ್ತಿರುವುದನ್ನು ವೀಕ್ಷಿಸುತ್ತಾನೆ. ಈಗಲೂ ಅವನು ತನಗೂ ಅವನು ಮಾಡುತ್ತಿರುವುದಕ್ಕೂ ಸಂಬಂಧ ಇದೆ ಎನ್ನಿಸುವುದನ್ನು ಸ್ವೀಕರಿಸಿದಂತೆ ಕಾಣುವುದಿಲ್ಲ. ಅಂತೆಯೇ ವರ್ಷಗಳ ಹಿಂದೆ ಅವನ ಪ್ರೇಮಿಸುತ್ತಿದ್ದ ಇಸೆಲಿನ್‌ಳನ್ನು ನೆನಪಿಸಿಕೊಳ್ಳುತ್ತಾನೆ. ಅವಳಿಗೆ ಒಂದೆರಡು ಬಾರಿ ಫೋನ್ ಮಾಡುತ್ತಾನೆ. ಆದರೂ ಅವನಿಗೆ ಸಿಗುವುದಿಲ್ಲ.

ಇಡೀ ಚಿತ್ರದಲ್ಲಿ ಅಂಡರ್ಸ್ ಹೆಚ್ಚಾಗಿ ಸಮಯ ಕಳೆಯುವುದು, ಮುಕ್ತವಾಗಿ ಮಾತನಾಡುತ್ತ ಅನಿಸಿಕೆಗಳನ್ನು ಲವಲೇಶದ ಹಿಂಜರಿಕೆಯಿಲ್ಲದೆ ಥಾಮಸ್‌ನೊಂದಿಗೆ ಚರ್ಚಿಸುತ್ತಾನೆ. ಥಾಮಸ್ ಅಂಡರ್ಸ್‌ನ ವ್ಯತಿರಿಕ್ತ ರೂಪವಾಗಿ ಕಾಣುತ್ತಾನೆ. ಅವನಲ್ಲಿ ಲವಲವಿಕೆ ಇದೆ. ಮದುವೆ ಮಾಡಿಕೊಂಡು ಒಂದು ಮಗುವಿನೊಂದಿಗೆ ವಾಸಿಸುವ ಅವನು ತನಗೆ ಲಭಿಸುವುದರಲ್ಲಿ ಅನಿವಾರ್ಯವಾಗಿ ತೃಪ್ತಿಯಿಂದ ಇರುತ್ತಾನೆ. ಅವನಲ್ಲಿಯೂ ಎಲ್ಲ ಬಗ್ಗೆ ಅಪೇಕ್ಷೆಗಳಿರುತ್ತವೆ. ಆದರೆ ಅನೇಕ ಅಪೇಕ್ಷೆಗಳಲ್ಲಿ ದಕ್ಕುವುದು ಕೆಲವಷ್ಟೇ ಎನ್ನುವುದನ್ನು ಅವನು ಅರಿತುಕೊಂಡಿರುತ್ತಾನೆ. ಹಾಗೆಂದೇ ಅವನು ತನಗೆ ತಿಳಿದ ರೀತಿಯಲ್ಲಿ ಅತ್ಯಂತ ಸಮಾಧಾನಕರವಾಗಿ ಅಂಡರ್ಸ್ ವ್ಯಸನನಾಗಿರುವುದನ್ನು ಬಿಟ್ಟು ಹೊಸ ಜೀವನದ ಕಡೆಗೆ ದೃಷ್ಟಿ ಹಾಕಬೇಕೆಂದು ಒತ್ತಾಯಿಸುತ್ತಾನೆ. ಆದರೆ ಅಂಡರ್ಸ್ ದೃಷ್ಟಿಯಲ್ಲಿ ಥಾಮಸ್‌ನದು ಹುಸಿ ಸಂತೋಷ ಮತ್ತು ಅಪ್ರಮಾಣಿಕ ಒಳನೋಟ. ಎಲ್ಲ ನಿರ್ಬಂಧಗಳಿಗೆ ಒಳಗಾಗಿ ಉಲ್ಲಾಸರಹಿತ ಜೀವನ ಇವುಗಳನ್ನು ಕುರಿತು ಲೇವಡಿ ಮಾಡುತ್ತಾನೆ. ಅವನ ಅಭಿಪ್ರಾಯಗಳು ಈಗಾಗಲೇ ಶಿಥಿಲಗೊಂಡಿರುವ ಅವನ ಮನಸ್ಥಿತಿಯನ್ನು ನಿರೂಪಿಸುತ್ತವೆ. ಇವೆಲ್ಲ ಅವನಲ್ಲಿ ಹೊಸ ಚೈತನ್ಯದ ಹುಡುಕಾಟ ಮತ್ತು ಹೊಸ ಬಾಳಿನ ನಿರೀಕ್ಷೆ ಅವನ ಅಂತರಂಗದಲ್ಲಿ ಇರುವುದರ ಬಗ್ಗೆ ಅನುಮಾನ ಹುಟ್ಟಿಸುತ್ತದೆ.

ಆಂಡರ್ಸ್ ಸಂದರ್ಶನಕ್ಕಾಗಿ ಪ್ರಕಾಶನ ಸಂಸ್ಥೆಗೆ ಹೋಗುತ್ತಾನೆ. ಅಲ್ಲಿ ಅವನನ್ನು ಸಂಸ್ಥೆಯ ಒಡೆಯ‌ ಮತ್ತು ಅವನ ಸಹಾಯಕಿ ಅತ್ಯಂತ ಸಮಾಧಾನ ಚಿತ್ತದಿಂದ ಕಾಣುತ್ತಾರೆ. ಸಂಸ್ಥೆಯ ಒಡೆಯ ಆಂಡರ್ಸ್ ನ ಸಿವಿ ಯನ್ನು ತೆಗೆದು ಓದಿ ಅವನ ಯೋಗ್ಯತೆಯ ಬಗ್ಗೆ ಸಮಾಧಾನಕರ ಅಭಿಪ್ರಾಯ ಹೊಂದಿದ ನಂತರ ಈ ಹಿಂದಿನ ಕೆಲವು ವರ್ಷಗಳಲ್ಲಿ ಮಾಡಿದ್ದೇನು ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಆಂಡರ್ಸ್ ಪ್ರಾಮಾಣಿಕವಾಗಿ ವ್ಯಸನಿಯಾಗಿದ್ದೇನೆ ಎಂದಷ್ಟೇ ಹೇಳುತ್ತಾನೆ. ಪ್ರಾರಂಭದಲ್ಲಿ ಕೊಂಚ ಕುತೂಹಲ ಹಾಗೂ ಸಮಾಧಾನದಿಂದ ಇರುವವನಂತೆ ಕಾಣುವ ಆಂಡರ್ಸ್‌ ವ್ಯಸನಿಯಾಗಿದ್ದರ ನೆನಪು ಉಕ್ಕಿ ದಿಢೀರನೆ ಮುಜುಗರಕ್ಕೆ, ಒತ್ತಡಕ್ಕೆ ಒಳಗಾದವನಂತೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಹಾಗೆ ನೋಡಿದರೆ ಪ್ರಕಾಶನದ ಒಡೆಯನಿಗೆ ಅವನ ನಡವಳಿಕೆ ಅಷ್ಟೇನೂ ವಿಪರೀತವೆನಿಸುವುದಿಲ್ಲ.

ಪ್ರಕಾಶನ ಸಂಸ್ಥೆಯ ಸಹಾಯಕಿ ಅವನ ಬಗ್ಗೆ ಹಿತವಾದ ಭಾವನೆಯಿಂದ ಪ್ರತಿಕ್ರಿಯಿಸುತ್ತಾಳೆ. ಇಂಟವ್ಯೂ ಮುಗಿದ ಮೇಲೆ ಭೇಟಿಯಾಗಲು ಇಷ್ಟಪಡುತ್ತಾಳೆ. ಪ್ರಕಾಶನದ ಒಡೆಯನಿಗೆ ಮಾತು ಮುಂದುವರಿಸಲು ಇಷ್ಟವಿರುತ್ತದೆ. ಆದರೆ ಆಂಡರ್ಸ್‌ನ ಶಿಥಿಲವಾದ ಅಂತರಂಗ ಅವನನ್ನು ವಿಪರೀತವಾಗಿ ವರ್ತಿಸುವಂತೆ ಮಾಡುತ್ತದೆ. ಅವನಿಂದ ಸಿವಿಯನ್ನು ಕಸಿದುಕೊಂಡು ಹಠಾತ್ತನೆ ಹೊರಡುತ್ತಾನೆ. ಹೊರಗೆ ಬಂದವನು ಪ್ರಕಾಶನ ಸಂಸ್ಥೆಯ ಇಂಟರ್ವ್ಯೂಗೆ ಸಂಬಂಧಿಸಿದ ಎಲ್ಲ ಕಾಗದಗಳನ್ನು ಡಸ್ಟ್‌ ಬಿನ್‌ ಗೆ ಎಸೆಯುತ್ತಾನೆ. ತನ್ನ ಅಭಿಲಾಷೆ ಮತ್ತು ಅಪೇಕ್ಷೆಗಳಿಗೆ ಪೂರಕವಾಗಿ ಮನಸ್ಸು ವರ್ತಿಸುವಂತೆ ಮಾಡುವಷ್ಟು ಅವನಲ್ಲಿ ಶಕ್ತಿ ಇಲ್ಲದಿರುವುದರಿಂದ ಎಲ್ಲ ಅತಿರೇಕ ಮತ್ತು, ಅನಿರೀಕ್ಷಿತ ವರ್ತನೆಗಳಿಗೆ ಒಳಗಾಗುವುದನ್ನು ನಿರೂಪಿಸುತ್ತಾನೆ ನಿರ್ದೇಶಕ.

ಅಲ್ಲೊಂದು ಹೊಟೇಲಿನಲ್ಲಿ ಒಬ್ಬಂಟಿ ಕುಳಿತಿರುತ್ತಾನೆ. ಎದುರಿಗೆ ಅಷ್ಟು ದೂರದಲ್ಲಿ ನಾಲ್ಕೈದು ಹುಡುಗಿಯರಿರುತ್ತಾರೆ. ಅವರಲ್ಲೊಬ್ಬಳು ತಾನು ಬಯಸುವ ಭವಿಷ್ಯವನ್ನು ಕುರಿತು ಹೇಳುತ್ತ ಸಂಭ್ರಮಿಸುತ್ತಾಳೆ. ಭವಿಷ್ಯದ ಬಗ್ಗೆ ಆಶಾ ಭಾವನೆ ಹೊಂದಿರುವ ಅವಳು ಶೂನ್ಯ ಭವಿಷ್ಯ ಆವರಿಸಿರುವ ಆಂಡರ್ಸ್‌ಗೆ ಎಲ್ಲ ರೀತಿಯಲ್ಲಿ ವ್ಯತಿರಿಕ್ತವಾಗಿ ತೋರುತ್ತಾಳೆ. ಅವಳನ್ನು ತದೇಕವಾಗಿ ನೋಡುವ ಆಂಡರ್ಸ್‌ನ ಮುಖಭಾವ ಮಾತ್ರ ಎಂದಿನಂತೆಯೇ ಇರುತ್ತದೆ. ಕಾಣಿಸುವ, ಕೇಳಿಸುವ ಉಲ್ಲಾಸ ತುಂಬುವ ಸಂಭಾವ್ಯಗಳನ್ನು ಅವನ ಮನಸ್ಸು ಸ್ವೀಕರಿಸುವಂತಿರುವುದಿಲ್ಲ.

ಆಂಡರ್ಸ್‌ ಹಳೆಯ ಗೆಳತಿಗೆ ಫೋನ್‌ ಮಾಡುತ್ತಾನೆ. ಅವಳ ಜೊತೆ ಹೋಗಿ ಪಾರ್ಟಿಯೊಂದರಲ್ಲಿ ಭಾಗಿಯಾಗುತ್ತಾನೆ. ಅವನು ಅಲ್ಲಿಗೆ ಆಗಮಿಸಿರುವುದರಿಂದ ಪಾರ್ಟಿ ಕೊಟ್ಟ ಗೆಳತಿ ಉಲ್ಲಾಸಗೊಳ್ಳುತ್ತಾಳೆ. ಆದರೆ ಆಂಡರ್ಸ್ ತನ್ನನ್ನು ತಾನು ಹಗುರಾಗಿಸಿಕೊಳ್ಳಲು, ಎಲ್ಲವನ್ನೂ ಕಳಚಿ ಮಾನಸಿಕ ನೆಲೆಯನ್ನು ಹಿತವಾಗಿಸಿಕೊಳ್ಳಲು ಸೋಲುತ್ತಾನೆ. ಅವನು ವಾಸ್ತವ ಪ್ರಪಂಚದಿಂದ ದೂರಾಗಿ ತನ್ನ ಹಳೆಯ ವ್ಯಸನದ ಪ್ರಪಂಚದ ಕಡೆಗೇ ಸೆಳೆಯಲ್ಪಡುತ್ತಾನೆ. ಇದನ್ನು ಅವನು ಸಂತೋಷದಿಂದ ಬರಮಾಡಿಕೊಳ್ಳುವುದಿಲ್ಲ ಎನ್ನುವುದು ಕಾಣುತ್ತದೆ. ಆದರೆ ಅವನು ಅದರ ಸೆಳೆತದಿಂದ ತಪ್ಪಿಸಿಕೊಳ್ಳುವ ಮಾರ್ಗ ಕಾಣಲಾರ. ಆ ಪಾರ್ಟಿಗೆ ಬಂದವರ ಹುಡುಗಿಯರ ವ್ಯಾನಿಟಿ ಬ್ಯಾಗುಗಳಲ್ಲಿ ಇದ್ದ ಹಣವನ್ನು ಕದ್ದು ಜೇಬಿಗೆ ಸೇರಿಸುತ್ತಾನೆ. ಹೀಗೆ ಮಾಡಿದಾಗ ಅವನಿಗೆ ಇನ್ನೆಲ್ಲಿ ಬಿಡುಗಡೆಯ ದಾರಿ ಎಂದುಕೊಳ್ಳುವ ನಮ್ಮ ನಿರೀಕ್ಷೆಗೆ ಅನುಗುಣವಾಗಿ ಅವನು ಅತ್ಯಂತ ಹೇಯವಾದ ಕೆಲಸ ಕೈಗೊಳ್ಳುತ್ತಾನೆ.

ಚಿತ್ರದ ನಿರ್ದೇಶಕ ಜಿಯೋಚಿಮ್‌ ಟ್ರೈಯರ್‌ ಆಶಯವನ್ನು ಅತ್ಯಂತ ಸಮರ್ಥವಾಗಿ ಪೂರ್ಣಗೊಳಿಸುತ್ತಾನೆ. ಹುಡುಗಾಟದ ರೀತಿಯಿಂದ ಶುರುವಾಗುವ ವ್ಯಸನ ಅದು ವ್ಯಕ್ತಿಯನ್ನು ತೀವ್ರವಾಗಿ ಆಕ್ರಮಿಸಿ ಅವನನ್ನು ಪೂರ್ತಿಯಾಗಿ ನಾಶಗೊಳಿಸುತ್ತದೆ ಎನ್ನುವುದನ್ನು ಯಶಸ್ವಿಯಾಗಿ ಮನಗಾಣಿಸುತ್ತಾನೆ. ಅವರ ಪ್ರಯತ್ನದ ಯಶಸ್ಸಿಗೆ ಕಾರಣ ಆಂಡರ್ಸ್‌ ಪಾತ್ರಧಾರಿ ಅಂಡರ್ಸ್ ದೇನಿಲ್ಸನ್ ಅವರೊಂದಿಗೆ ಛಾಯಾಗ್ರಾಹಕ ಮತ್ತು ಹಿನ್ನೆಲೆ ಸಂಗೀತಗಾರರು ಕೂಡ ಸೇರುತ್ತಾರೆ.