ಸಂಗೀತದಲ್ಲಿ ವ್ಯಕ್ತಿಗಳ ಬಗ್ಗೆ ಬರೆಯುವ ಪ್ರಸಂಗ ಬಂದಾಗೆಲ್ಲಾ ಅದು ಆತನ ಸಂಗೀತ-ಸಾಧನೆಯನ್ನು ಹೊಗಳುವುದಕ್ಕಷ್ಟೇ ಸೀಮಿತವಾಗುವ ಅಪಾಯ ಎದುರಾಗುತ್ತದೆ. ಆದರೆ ‘ಏನು ಜನ, ಎಂಥ ಗಾನ’ ಪುಸ್ತಕವೂ ಸಂಗೀತ ಮತ್ತು ಸಂಗೀತಗಾರರ ಕುರಿತೇ ಆಗಿದ್ದರೂ ಈ ಅಪಾಯಕ್ಕೆ ಎಲ್ಲಿಯೂ ಈಡಾಗಿಲ್ಲ. ಇಲ್ಲಿ ಹೇಳಲ್ಪಡುವ ಘಟನೆಗಳೇ ಅಲ್ಲಿನ ‘ವಸ್ತು ಮತ್ತು ವ್ಯಕ್ತಿ’ಯ ಹಿರಿತನವನ್ನು, ಸರಳತೆಯನ್ನು, ಸಂಗೀತ ಅವರನ್ನು ಆವರಿಸಿಕೊಂಡ ಪರಿಯನ್ನು, ಅವರ ಜೀವನ ಪ್ರೀತಿಯನ್ನು ಮನಸ್ಸಿನಾಳಕ್ಕೆ ಇಳಿಸಿ ಬಿಡುತ್ತವೆ.
ಅರವಿಂದ ಗಜೇಂದ್ರಗಡಕರ್ ಅವರ ಮರಾಠಿ ಕೃತಿಯನ್ನು ದಮಯಂತಿ ನರೇಗಲ್ಲ “ಏನು ಜನ ಎಂಥಾ ಗಾನ” ಶೀರ್ಷಿಕೆಯಡಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು ಅದರ ಕುರಿತು ಶ್ರೀಮತಿ ದೇವಿ ಬರೆದಿದ್ದಾರೆ

 

ಸಂಗೀತದ ಬೆಳವಣಿಗೆಯಲ್ಲಿ ಆಕಾಶವಾಣಿಯ ಪಾತ್ರ ದೊಡ್ಡದು ಎಂಬುದನ್ನು ಕೇಳಿದ್ದೇವೆ. ಅಂಥಹ ಆಕಾಶವಾಣಿಯ ಪಾತ್ರ ಮಸುಕಾಗುತ್ತಾ ಇರುವ ಈ ಸಮಯದಲ್ಲಿ ನಾನು ಕೈಗೆತ್ತಿಕೊಂಡದ್ದು ಅರವಿಂದ ಗಜೇಂದ್ರಗಡಕರ್ ಎಂಬ ಆಕಾಶವಾಣಿಯ ಅಧಿಕಾರಿಯಾಗಿದ್ದ ಕಲಾವಿದರೊಬ್ಬರು ಬರೆದ ಪುಸ್ತಕವನ್ನು.

(ಅರವಿಂದ ಗಜೇಂದ್ರಗಡಕರ್)

‘ಅಸೇ ಸೂರ, ಅಶೀ ಮಾಣಸ್’ ಎಂಬ ಹೆಸರಿನ ಮೂಲ ಮರಾಠಿ ಪುಸ್ತಕವನ್ನು ಸುಲಲಿತವಾದ ಕನ್ನಡದಲ್ಲಿ ಅನುವಾದಿಸಿದವರು ಧಾರವಾಡದ ದಮಯಂತಿ ನರೇಗಲ್ ಅವರು. ಈ ಪುಸ್ತಕದ ಹೆಸರು ‘ಏನು ಜನ, ಎಂಥ ಗಾನ’. 2015ರಲ್ಲಿ ಬೆಂಗಳೂರಿನ ಅಭಿನವ ಪ್ರಕಾಶನದಿಂದ ಹೊರಬಂದ ಈ ಪುಸ್ತಕದಂತೆ ಓದಿಸಿಕೊಂಡು ಹೋಗುವ ಸಂಗೀತದ ಪುಸ್ತಕಗಳು ಕನ್ನಡದಲ್ಲಿ ಕಾಣಸಿಗುವುದು ವಿರಳ.

ಅರವಿಂದ ಗಜೇಂದ್ರಗಡಕರ್ ಅವರು ಮನೋವಿಜ್ಞಾನದಲ್ಲಿ ಪದವೀಧರರು, ಕೊಳಲು ವಾದನದಲ್ಲಿ ಪರಿಣತಿ ಪಡೆದು, ನಂತರದಲ್ಲಿ ಆಕಾಶವಾಣಿ ಅಧಿಕಾರಿಯಾಗಿ ದೇಶದ ವಿವಿಧ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರು. ಹೆಸರಾಂತ ಕಲಾವಿದರ ವಿಶ್ವಾಸಕ್ಕೆ ಪಾತ್ರರಾಗಿ, ಅವರೊಂದಿಗೆ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಆಕಾಶವಾಣಿಗಾಗಿ ಸಂಯೋಜಿಸಿದ್ದಾರೆ, ನಿವೃತ್ತರಾದ ಮೇಲೂ ಕಾರ್ಯಶಾಲೆಗಳನ್ನು ನಡೆಸಿ, ಸಂಗೀತ ಪ್ರೇಮವನ್ನು ಬೆಳೆಸಿದವರು.

ಪ್ರಸ್ತುತ ಪುಸ್ತಕದಲ್ಲಿ ಅವರ ಸಂಪರ್ಕಕ್ಕೆ ಬಂದು ಹತ್ತಿರವಾದ ಸಂಗೀತಗಾರರ ಆಪ್ತವಾದ ಚಿತ್ರಣದೊಂದಿಗೆ ಆಕಾಶವಾಣಿ ಮತ್ತು ಕಲಾವಿದರ ನಡುವಿದ್ದ ಸುಮಧುರ ಸಂಬಂಧವು ಹೃದಯಂಗಮವಾಗಿ ಮೂಡಿಬಂದಿದೆ. 117 ಪುಟಗಳುಳ್ಳ ಈ ಪುಟ್ಟ ಪುಸ್ತಕವು ‘ಹೇ ಸ್ವರಧವಲ ಧಾರವಾಡ ನಿನಗೆ ಸಹಸ್ರ ಪ್ರಣಾಮಗಳು’ ಎಂಬ ಲೇಖನದೊಂದಿಗೆ ಆರಂಭವಾಗುತ್ತದೆ. ಇದು ಲೇಖಕರು ಆಕಾಶವಾಣಿ ಅಧಿಕಾರಿಯಾಗಿ ನೇಮಕಾತಿ ಪತ್ರ ಹಿಡಿದು ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಇಳಿಯುವುದರೊಂದಿಗೆ ತೆರೆದುಕೊಳ್ಳುತ್ತದೆ. ಮುಂದೆ ಧಾರವಾಡ-ಹುಬ್ಬಳ್ಳಿಯಲ್ಲಿದ್ದ ಶ್ರೇಷ್ಠ ಕಲಾವಿದರಾದ ಗಂಗೂಬಾಯಿ, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರ್ ಮುಂತಾದವರನ್ನು ಲೇಖಕರು ಭೇಟಿ ಮಾಡಿದ್ದು, ಆಕಾಶವಾಣಿಯ ಚೈನ್ ಕಾರ್ಯಕ್ರಮಕ್ಕಾಗಿ ಬಂದ ಬಿಸ್ಮಿಲ್ಲಾ ಖಾನ್ ಅವರು ಆಕಾಶವಾಣಿ ಹೊರಗಿನ ನಳ್ಳಿಯಲ್ಲಿ ಸ್ನಾನ ಮಾಡಿ, ಅಲ್ಲೇ ಕಟ್ಟೆ ಮೇಲೆ ಕೂತು ಪ್ರಾರ್ಥನೆ-ರಿಯಾಝ್ ಮುಗಿಸಿ ನೇರವಾಗಿ ಸ್ಟುಡಿಯೋ ಪ್ರವೇಶಿಸಿದ್ದು ಮುಂತಾದ ಹಲವು ಘಟನೆಗಳು, ನೆನಪುಗಳು ಇದರಲ್ಲಿ ಅಡಕವಾಗಿವೆ. ಈ ಅಧ್ಯಾಯದಲ್ಲಿ ಮನಸ್ಸನ್ನು ಕಲಕುವಂಥದ್ದು ಬಡತನವನ್ನೇ ಹಾಸಿ ಹೊದೆದಿದ್ದ ಶಿವರಾಮ ಬುವಾ ಅವರ ಬೇಜವಾಬ್ದಾರಿ ಬದುಕಿನ ಕಥೆ-ವ್ಯಥೆ. ಈ ಪುಸ್ತಕದ ಎರಡನೆ ಅಧ್ಯಾಯ ‘ಮಧುರ’ ಎಂಬ ಹೆಸರಿನದ್ದು. ಗಾನ ಸರಸ್ವತಿ ಕಿಶೋರಿ ಅಮೋನ್‌ಕರ್ ಅವರೊಂದಿಗಿನ ಒಡನಾಟದ ಕುರಿತಾದದ್ದು.

ಪರಂಪರೆಯ ಗಾಯನವನ್ನು ರೂಢಿಸಿಕೊಂಡಿದ್ದೂ ಸಂಗೀತದ ಬಗ್ಗೆ ಕ್ರಾಂತಿಕಾರಿ ವಿಚಾರಗಳನ್ನು ಹೊಂದಿದ್ದ ಅವರ ಗಾಯನದಲ್ಲಿದ್ದ ಪರವಶತೆಯನ್ನು ಸೂಕ್ಷ್ಮವಾಗಿ ವಿವೇಚಿಸಿದ್ದಾರೆ. ಕಿಶೋರಿಯವರ ಸ್ವಭಾವದಲ್ಲಿನ ವಿಕ್ಷಿಪ್ತತೆಯ ಉಲ್ಲೇಖವಿದ್ದರೂ ಅವರ ವಿಚಾರದ ಪ್ರಖರತೆಯನ್ನು ಲೇಖಕರಿಲ್ಲಿ ಎತ್ತಿ ಆಡಿದ್ದಾರೆ. ಮೂರನೆಯ ಅಧ್ಯಾಯ ‘ಸಬರಂಗ’ ಗಾಯಕ ಉಸ್ತಾದ ಬಡೇ ಗುಲಾಮ್ ಅಲಿಖಾನ್ ಅವರ ಕುರಿತಾದದ್ದು. ಅವರ ರಿಯಾಝ್‌, ಠುಮ್ರಿ ಗಾಯನ, ‘ಬೈಜೂ ಬವರಾ’ ಚಲನಚಿತ್ರದಲ್ಲಿ ಅವರನ್ನು ಹಿನ್ನೆಲೆ ಗಾಯನಕ್ಕಾಗಿ ಒಪ್ಪಿಸಿದ ನಾಟಕೀಯ ಸಂದರ್ಭ ಇವುಗಳ ವಿವೇಚನೆ ಗಮನಾರ್ಹವಾದುದು. ನಾಲ್ಕನೆಯ ಅಧ್ಯಾಯವಾದ ‘ಮುರಲೀಧರನ ಸಹವಾಸದಲ್ಲಿ’ ಇದು ಹರಿಪ್ರಸಾದ್ ಚೌರಾಸಿಯಾ ಅವರೊಂದಿಗಿನ ಒಡನಾಟ ಕುರಿತಾದದ್ದು. ಪಾಂಡಿತ್ಯ ಹಾಗೂ ಜನಪ್ರಿಯತೆಯ ಶಿಖರವನ್ನೇರಿದ್ದರೂ ಹರೀಜಿಯವರಲ್ಲಿದ್ದ ಮುಗ್ಧತೆ, ಸರಳತೆ, ಆತ್ಮೀಯತೆಗಳನ್ನು ಮನಮುಟ್ಟುವಂತೆ ಬರೆದಿದ್ದಾರೆ. ಅವರೊಂದಿಗಿನ ಹಲವು ನೆನಪುಗಳನ್ನು ಬರೆಯಲಾಗಿದೆ. ಮುಂದಿನ ವಿಭಾಗಕ್ಕೆ ‘ಸ್ವರಮಯ ಅಮೃತಕ್ಷಣಗಳು’ ಎಂಬ ಹೆಸರು ಕೊಟ್ಟಿದ್ದು, ಇದರಲ್ಲಿ ಶಹನಾಯ್ ಸಾಮ್ರಾಟ ಬಿಸ್ಮಿಲ್ಲಾ ಖಾನ್, ಭೀಮಣ್ಣ, ಯಹೂದಿ ಮೆನುಹಿನ್ ಕುರಿತ ಮೂರು ಸ್ಮರಣೀಯವೆನಿಸುವ ಲೇಖನಗಳಿವೆ.

(ದಮಯಂತಿ ನರೇಗಲ್)

ಸಂಗೀತದಲ್ಲಿ ವ್ಯಕ್ತಿಗಳ ಬಗ್ಗೆ ಬರೆಯುವ ಪ್ರಸಂಗ ಬಂದಾಗೆಲ್ಲಾ ಅದು ಆತನ ಸಂಗೀತ-ಸಾಧನೆಯನ್ನು ಹೊಗಳುವುದಕ್ಕಷ್ಟೇ ಸೀಮಿತವಾಗುವ ಅಪಾಯ ಎದುರಾಗುತ್ತದೆ. ಆದರೆ ‘ಏನು ಜನ, ಎಂಥ ಗಾನ’ ಪುಸ್ತಕವೂ ಸಂಗೀತ ಮತ್ತು ಸಂಗೀತಗಾರರ ಕುರಿತೇ ಆಗಿದ್ದರೂ ಈ ಅಪಾಯಕ್ಕೆ ಎಲ್ಲಿಯೂ ಈಡಾಗಿಲ್ಲ. ಇಲ್ಲಿ ಹೇಳಲ್ಪಡುವ ಘಟನೆಗಳೇ ಅಲ್ಲಿನ ‘ವಸ್ತು ಮತ್ತು ವ್ಯಕ್ತಿ’ಯ ಹಿರಿತನವನ್ನು, ಸರಳತೆಯನ್ನು, ಸಂಗೀತ ಅವರನ್ನು ಆವರಿಸಿಕೊಂಡ ಪರಿಯನ್ನು, ಅವರ ಜೀವನ ಪ್ರೀತಿಯನ್ನು ಮನಸ್ಸಿನಾಳಕ್ಕೆ ಇಳಿಸಿ ಬಿಡುತ್ತವೆ. ಎಲ್ಲೂ ದಂತಕಥೆಗಳಿಲ್ಲ, ಉತ್ಪ್ರೇಕ್ಷೆಯ ಮಾತುಗಳಿಲ್ಲ. ವಿಶೇಷವೆನಿಸುವುದು ಸಂಗೀತದ ಸಾಂಗತ್ಯದಲ್ಲಿ ಲೇಖಕ ಪಡುವ ಆನಂದ, ಅದರೊಳಗೆ ಅವರು ಬೆರೆಯುವ ರೀತಿ ಮಾತ್ರವಲ್ಲ ಆ ಅನುಭವವನ್ನು ಶಕ್ತವಾಗಿ ಭಾಷೆಯಲ್ಲಿ ತಂದ ಬಗೆ.

ಪುಸ್ತಕದ ಉದ್ದಕ್ಕೂ ವ್ಯಕ್ತವಾಗುವ ಸಂಗೀತ ಮತ್ತು ಸಂಗೀತಗಾರರ ಬಗೆಗಿನ ಅದಮ್ಯ ಪ್ರೀತಿಯನ್ನು ಅದೇ ಆಪ್ತಸ್ಪರ್ಶದೊಂದಿಗೆ ಅನುವಾದಿಸಿದವರು ದಮಯಂತಿ ನರೇಗಲ್. ಈ ಹಿಂದೆ ‘ಅಭಿನವ’ದಿಂದಲೇ ಹೊರಬಂದ ದಮಯಂತಿಯವರು ಬರೆದ ಗಂಗೂಬಾಯಿ ಹಾನಗಲ್ ಅವರ ಜೀವನಚರಿತ್ರೆಯಾದ ‘ಗಂಗಾವತರಣ’ ಪುಸ್ತಕ, ಬಹು ಮೆಚ್ಚುಗೆಗೆ ಪಾತ್ರವಾದದ್ದನ್ನು ನೆನಪಿಸಿಕೊಳ್ಳಬಹುದು. ಭಾಷೆ ಎಂಬುದು ಸಹಜವಾಗಿ ಅವರಿಗೆ ಒಗ್ಗಿದೆ. ಅದರಲ್ಲಿನ ದೇಸಿ ಸೊಗಡು ವಿಶಿಷ್ಟ ರೀತಿಯಲ್ಲಿ ಇಷ್ಟವಾಗುತ್ತದೆ. ಧಾರವಾಡದ ಮಣ್ಣಿನ ಕಥೆಯನ್ನು ಅದೇ ಮಾತಲ್ಲಿ ಕೇಳುವ ಅನುಭವ ಬೇರೆಡೆ ಸಿಗಲು ಸಾಧ್ಯವಿಲ್ಲ.

ಆಗಿಹೋದ ಶ್ರೇಷ್ಠ ಕಲಾವಿದರ ಬಗ್ಗೆ ದಂತಕಥೆಗಳ ಕೋಟೆಯನ್ನೇ ಕಟ್ಟಿ ‘ಹಾಗಂತೆ ಹೀಗಂತೆ’ ಎನ್ನುವ ಬದಲು ಇಂಥಹ ನೈಜ ಚಿತ್ರಣವನ್ನು ಸಂಗೀತ ಕಲಿಯುವ ಪುಟಾಣಿಗಳಿಗೆ ನೀಡುವ ಅಗತ್ಯವಿದೆ. ಹಿಂದೊಮ್ಮೆ ನನ್ನ ಗುರುಗಳಾದ ಚಂದ್ರಶೇಖರ ಪುರಾಣಿಕಮಠ ಅವರ ಬಳಿ ಯಾರೋ ವಿದ್ಯಾರ್ಥಿ, ‘ಪುಟ್ಟರಾಜ ಗವಾಯಿಗಳು, ಧ್ಯಾನ ಮಾಡುತ್ತಾ ನೆಲದಿಂದ ಮೂರು ಫೀಟ್ ಮೇಲೆ ಹೋಗುತ್ತಾರಂತೆ, ಇದು ನಿಜವೇ’ ಎಂದಿದ್ದಕ್ಕೆ ನಮ್ಮ ಗುರುಗಳು, ‘ಮೇಲೆ ಹೋಗುವುದು ನಿಜವೇ ಇರಬಹುದು, ಆದರೆ ಅವರು ನೆಲದ ಮೇಲಿದ್ದರೂ ತುಂಬಾ ದೊಡ್ಡವರೇ’ ಎಂದಿದ್ದರು. ಈ ತಿಳುವಳಿಕೆ ನಮ್ಮಲ್ಲಿ ಮೂಡಲು ನಾವು ಅಂಥಹ ಕಲಾವಿದರ ನಿಜ ಜೀವನವನ್ನು ನೋಡಬೇಕು, ಕೇಳಬೇಕು, ಓದಬೇಕು. ಈ ದೃಷ್ಟಿಯಿಂದ ‘ಏನು ಜನ, ಎಂಥ ಗಾನ’ ನಮ್ಮೊಳಗಿನ ಸಹಜತೆಯ, ಆಪ್ತತೆಯ ಎಳೆಯನ್ನು ಮೀಟುವ ಮಹತ್ವದ ಪುಸ್ತಕ.

(ಕೃತಿ: ಏನು ಜನ, ಎಂಥ ಗಾನ, ಮೂಲ: ಅರವಿಂದ ಗಜೇಂದ್ರಗಡಕರ್‌, ಕನ್ನಡಕ್ಕೆ: ದಮಯಂತಿ ನರೇಗಲ್ಲ, ಪ್ರಕಾಶಕರು: ಅಭಿನವ ಪ್ರಕಾಶಕರು, ಬೆಲೆ: 100/-)