ಯಮಾಸಾನ್ ತಮ್ಮ ಹಾಸಿಗೆಯ ಮೇಲೆ ಬಾಗಿಲಿಗೆ ಬೆನ್ನು ಹಾಕಿ ಕೂತಿದ್ದರು. ನನ್ನ ಸುಗತ ಸಾನ್ಶಿರೊ ಚಿತ್ರಕತೆಯನ್ನು ಓದುತ್ತಾ ಕೂತಿದ್ದರು. ಪ್ರತಿ ಪುಟವನ್ನೂ ಗಮನವಿಟ್ಟು ನೋಡುತ್ತಾ ಕೆಲವೆಡೆ ಮತ್ತೆ ಮತ್ತೆ ಹಿಂದಿನ ಪುಟ ತಿರುವಿ ಓದುತ್ತಿದ್ದರು. ದಿನದ ಶೂಟಿಂಗ್ ನ ಆಯಾಸವಾಗಲಿ, ಸಂಜೆಯ ಕುಡಿತದ ನಶೆಯ ಕುರುಹಾಗಲಿ ಅವರು ಕೂತಿದ್ದ ಭಂಗಿಯಲ್ಲಿರಲಿಲ್ಲ. ಪುಟ ತಿರುವುವ ಸದ್ದು ಬಿಟ್ಟರೆ ಉಳಿದಂತೆ ನಿಶ್ಯಬ್ದ. “ನೀವು ಬೆಳಿಗ್ಗೆ ಬೇಗ ಏಳಬೇಕು. ನನಗಾಗಿ ನೀವಿದನ್ನು ಮಾಡಬೇಕಿಲ್ಲ. ದಯವಿಟ್ಟು ಮಲಗಿ” ಅಂತ ಹೇಳಬೇಕೆಂದುಕೊಂಡೆ. ಅವರ ಗಂಭೀರತೆ ಹೆದರಿಕೆ ಹುಟ್ಟಿಸುವಂತಿತ್ತು. ಅವರು ಓದಿ ಮುಗಿಸುವುದನ್ನೇ ಕಾಯುತ್ತಾ ಅಲ್ಲೇ ಕೂತೆ.
ಹೇಮಾ ಎಸ್ ಅನುವಾದಿಸಿರುವ ಅಕಿರ ಕುರಸೋವ ಆತ್ಮಕಥೆಯ ಮತ್ತೊಂದು ಕಂತು

 

ನನ್ನ Three Hundred Miles ಯೋಜನೆ ಕೈತಪ್ಪಿದ ಮೇಲೆ ನಿರ್ದೇಶಕನಾಗುವ ನನ್ನ ಹೋರಾಟವನ್ನು ಕೈಬಿಟ್ಟೆ. ಆಗ ಮಾಡಿದ್ದಿಷ್ಟೇ: ಕುಡಿಯಲು ಹಣ ಬೇಕಿತ್ತು. ಅದಕ್ಕಾಗಿ ಚಿತ್ರಕತೆಗಳನ್ನು ಬರೆಯುತ್ತಾ ಹೋದೆ. ಕುಡಿತ ಇನ್ನು ಮುಂದೆ ಹಳೆಯ ಫ್ಯಾಷನ್ ಆಗಿಬಿಡುವುದೆನೋ ಅನ್ನುವ ರೀತಿಯಲ್ಲಿ ಕುಡಿಯುತ್ತಿದ್ದೆ. ಆಗ ಬರೆದ ಚಿತ್ರಕತೆಗಳೆಂದರೆ Seishun no kiryu (Currentsof Youth, ನಿರ್ದೇಶಕ ಫುಶಿಮಿಜು ಶು,1942)ಮತ್ತು Tsubasa no gaika(A Triumph of Wings, ನಿರ್ದೇಶಕ ಯಮಮಾಟೊ ಸಾತ್ಸೊ, 1942).ಅವು ಆ ಕಾಲಕ್ಕೆ ಹೊಂದುವಂತಹ ಕತೆಗಳಾಗಿದ್ದವು. ವಿಮಾನ ಕಾರ್ಖಾನೆ ಮತ್ತು ಯುವ ವೈಮಾನಿಕ ಚಾಲಕರ ಕುರಿತ ಕತೆಯಾಗಿತ್ತು. ಅವರ ಉದ್ದೇಶ ರಾಷ್ಟ್ರೀಯ ಯುದ್ಧೋತ್ಸಾಹದ ಬೆಂಕಿಗೆ ಉರುವುಲು ನೀಡುವುದಾಗಿತ್ತು. ಆದರೆ ನಾನದನ್ನು ಸ್ವ ಇಚ್ಛೆಯಿಂದ ಮಾಡಲಿಲ್ಲ. ಸೂಕ್ತ ಸೂತ್ರಗಳೊಂದಿಗೆ ಅವುಗಳನ್ನು ಜೋಡಿಸಿಟ್ಟೆ ಅಷ್ಟೇ.

ಇದರ ನಡುವೆ ಒಂದು ದಿನ ದಿನಪತ್ರಿಕೆ ಓದುತ್ತಿರುವಾಗ ಹೊಸ ಪುಸ್ತಕವೊಂದರ ಜಾಹಿರಾತು ನನ್ನ ಗಮನಸೆಳೆಯಿತು. ಆ ಕಾದಂಬರಿಯ ಹೆಸರು ಸುಗತ ಸಾನ್ಶಿರೊ (Sugata Sanshiro). ಅದೇಕೋ ಅದರ ಬಗ್ಗೆ ಭಯಂಕರ ಆಸಕ್ತಿ ಕೆರಳಿತು. ಆ ಜಾಹಿರಾತಿನಲ್ಲಿ ಅದೊಂದು ರೌಡಿಯಾಗಿದ್ದ ಯುವ ಜುಡೋ ಪರಿಣತನ ಕತೆ ಎಂದಿತ್ತು. ಅದನ್ನು ನೋಡುತ್ತಿದ್ದಂತೆ “ಹ್ಞಾಂ ಇದು ಅದೇ” ಎನ್ನುವಂತಹ ಗಾಢವಾದ ಭಾವನೆ ಮೂಡಿತು. ನನಗೆ ಹಾಗನ್ನಿಸಲು ಯಾವುದೇ ತಾರ್ಕಿಕ ವಿವರಣೆಗಳಿಲ್ಲ. ಆದರೆ ಹೃತ್ಪೂರ್ವಕವಾಗಿ ನನಗನ್ನಿಸಿದ ಕುರಿತು ನಂಬಿಕೆಯಿತ್ತು. ಆ ಕುರಿತು ಯಾವುದೇ ಸಂದೇಹ ನನ್ನಲ್ಲಿ ಸುಳಿಯಲಿಲ್ಲ. ತಕ್ಷಣವೇ ಮೊರಿಟ ಅವರ ಹತ್ತಿರ ಹೋಗಿ ಅವರಿಗೆ ಜಾಹಿರಾತನ್ನು ತೋರಿಸಿದೆ. “ದಯವಿಟ್ಟು ಈ ಪುಸ್ತಕದ ಹಕ್ಕುಗಳನ್ನು ಕೊಡಿಸಿಕೊಡಿ. ಇದೊಂದು ಅದ್ಭುತ ಚಿತ್ರವಾಗುತ್ತದೆ” ಎಂದು ಅವರನ್ನು ಕೇಳಿಕೊಂಡೆ. ಮೊರಿಟ ಖುಷಿಯಾಗಿ “ಸರಿ. ನಾನು ಒಮ್ಮೆ ಓದುತ್ತೇನೆ” ಎಂದರು. “ಆ ಪುಸ್ತಕವಿನ್ನೂ ಬಿಡುಗಡೆಯಾಗಿಲ್ಲ. ನಾನು ಕೂಡ ಇನ್ನೂ ಪುಸ್ತಕ ಓದಿಲ್ಲ” ಎಂದೆ. ಮೊರಿಟಾಗೆ ತಮಾಷೆ ಎನಿಸಿತು. “ಓದಿಲ್ಲದಿದ್ದರೂ ಪರವಾಗಿಲ್ಲ. ಈ ಕತೆ ಒಳ್ಳೆಯ ಚಿತ್ರವಾಗುತ್ತದೆ ಎನ್ನುವ ನಂಬಿಕೆ ನನಗಿದೆ” ಎಂದು ಹೇಳಿದೆ. ಅವರು ನಕ್ಕು “ಸರಿ. ನಿನಗೆ ನಂಬಿಕೆಯಿದ್ದರೆ ನೀನು ಹೇಳಿದ್ದು ಸರಿಯಿರಬಹುದು. ಆದರೆ ನೀನು ಓದದೆ ಒಳ್ಳೆಯ ಪುಸ್ತಕ ಎಂದು ಹೇಳಿದ ಮಾತ್ರಕ್ಕೆ ನಾನು ಓಡಿಹೋಗಿ ಪುಸ್ತಕದ ಹಕ್ಕುಗಳನ್ನು ಕೊಳ್ಳಲಾಗುವುದಿಲ್ಲ. ಅದು ಬಿಡುಗಡೆಯಾದಾಗ ನೀನು ಓದು. ಅದು ಚೆನ್ನಾಗಿದ್ದರೆ ಮತ್ತೆ ಬಾ. ಆಗ ನಿನಗೆ ಅದರ ಹಕ್ಕುಗಳನ್ನು ಕೊಡಿಸುತ್ತೇನೆ” ಎಂದರು.

ಶಿಬುಯಾದ ಪುಸ್ತಕದ ಅಂಗಡಿಗಳಲ್ಲಿ ಬೇಟೆ ಶುರುಮಾಡಿದೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪುಸ್ತಕ ಯಾವಾಗ ಬರುತ್ತದೆ ಎಂದು ಹೋಗಿ ಕೇಳಿಬರುತ್ತಿದ್ದೆ. ಕಡೆಗೂ ಪುಸ್ತಕದಂಗಡಿಗೆ ಪುಸ್ತಕ ಬಂದತಕ್ಷಣ ಅದನ್ನು ಕೊಂಡುತಂದೆ. ಸಂಜೆ ಪುಸ್ತಕ ಸಿಕ್ಕಿತು. ಮನೆಗೆ ಬಂದು ಪುಸ್ತಕ ಓದಿ ಮುಗಿಸುವಷ್ಟರಲ್ಲಿ ರಾತ್ರಿ 10.30. ಆದರೆ ನನಗನ್ನಿಸಿದ ಭಾವನೆ ನಿಜವಾಗಿತ್ತು. ಪುಸ್ತಕ ಬಹಳ ಚೆನ್ನಾಗಿತ್ತು. ಸಿನೆಮಾ ಮಾಡಲು ನಾನು ಹುಡುಕುತ್ತಿದ್ದಂತಹ ವಸ್ತುವನ್ನು ಹೊಂದಿತ್ತು. ಬೆಳಕು ಹರಿಯುವವರೆಗೆ ಕಾಯಲು ನನ್ನಿಂದ ಸಾಧ್ಯವಿರಲಿಲ್ಲ.

ಸೆಯಿಜೊದಲ್ಲಿದ್ದ ಮೊರಿಟ ಅವರ ಮನೆಗೆ ಆ ಅವೇಳೆಯಲ್ಲೇ ಹೊರಟೆ. ಅವೇಳೆಯಲ್ಲಿ ಮನೆಯ ಬಾಗಿಲು ಬಡಿದಾಗ ನಿದ್ದೆಗಣ್ಣಲ್ಲಿ ಮೊರಿಟ ಬಾಗಿಲು ತೆರೆದರು. ಅವರಿಗೆ ಪುಸ್ತಕವನ್ನು ಕೊಡುತ್ತಾ “ಇದೊಂದು ಒಳ್ಳೆಯ ಸಿನೆಮಾ ಆಗುತ್ತದೆ. ದಯವಿಟ್ಟು ಹಕ್ಕುಗಳನ್ನು ಕೊಂಡುಕೊಡಿ” ಎಂದೆ. “ಸರಿ. ಬೆಳಿಗ್ಗೆ ಮೊದಲು ಇದೇ ಕೆಲಸ ಮಾಡುತ್ತೇನೆ” ಎಂದು ಮಾತುಕೊಟ್ಟರು. “ಇವನನ್ನು ಯಾರೂ ಯಾವುದೂ ತಡೆಯಲಾರದು” ಎನ್ನುವಂತೆ ನನ್ನತ್ತ ನೋಡಿದರು.

ಮರುದಿನ ನಿರ್ಮಾಪಕ ತನಕಾ ಟೊಮೊಯುಕಿ (ತೊಹೊ ಲಿ.,ನ ತೊಹೊ ಎಗ ಫಿಲ್ಮ ಪ್ರೊಡೆಕ್ಷನ್ನ ಅಧ್ಯಕ್ಷರು ಮತ್ತು ನನ್ನ ಇತ್ತೀಚಿನ ಕಾಗೆಮುಶ ಚಿತ್ರದ ನಿರ್ಮಾಪಕರು) ಸುಗತ ಸಾನ್ಶಿರೊದ ಲೇಖಕ ತೊಮಿತ ತ್ಸುನೆಯೊನ ಮನೆಗೆ ಹೋದರು. ತೊಹೊ ಕಂಪನಿಗಾಗಿ ಅವರು ಸಿನಿಮಾ ಮಾಡುವ ಹಕ್ಕುಗಳನ್ನು ಕೇಳಿದರು. ಆದರೆ ಬರಿಗೈಯಲ್ಲಿ ಹಿಂತಿರುಗಿದರು.

ಶಿಬುಯಾದ ಪುಸ್ತಕದ ಅಂಗಡಿಗಳಲ್ಲಿ ಬೇಟೆ ಶುರುಮಾಡಿದೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪುಸ್ತಕ ಯಾವಾಗ ಬರುತ್ತದೆ ಎಂದು ಹೋಗಿ ಕೇಳಿಬರುತ್ತಿದ್ದೆ. ಕಡೆಗೂ ಪುಸ್ತಕದಂಗಡಿಗೆ ಪುಸ್ತಕ ಬಂದತಕ್ಷಣ ಅದನ್ನು ಕೊಂಡುತಂದೆ. ಸಂಜೆ ಪುಸ್ತಕ ಸಿಕ್ಕಿತು. ಮನೆಗೆ ಬಂದು ಪುಸ್ತಕ ಓದಿ ಮುಗಿಸುವಷ್ಟರಲ್ಲಿ ರಾತ್ರಿ 10.30.

ಮರುದಿನ ಮತ್ತಿಬ್ಬರು ಪ್ರಮುಖರು ದೈಯಿ ಮತ್ತು ಶೊಚಿಕು ಹಕ್ಕುಗಳ ಬೇಡಿಕೆ ಇಡಲು ಹೋಗಿದ್ದರು ಎನ್ನುವ ಸುದ್ದಿ ಕೇಳಿದೆ. ಅವರಿಬ್ಬರೂ ಸುಗತ ಸಾನ್ಶಿರೊದ ಜುಡೊ ಪರಿಣಿತನ ಪಾತ್ರಕ್ಕೆ ದೊಡ್ಡ ನಟರನ್ನೇ ಹಾಕಿಕೊಳ್ಳುವುದಾಗಿ ಕೂಡ ವಾಗ್ದಾನ ಮಾಡಿದರಂತೆ. ಶ್ರೀಮತಿ. ತೊಮಿತ ನನ್ನ ಬಗ್ಗೆ ಸಿನೆಮಾ ಪತ್ರಿಕೆಗಳಲ್ಲಿ ಓದಿದ್ದರಂತೆ. ಅವರು ತಮ್ಮ ಪತಿಗೆ ನಾನು ಭರವಸೆ ಹುಟ್ಟಿಸಬಲ್ಲ ನಿರ್ದೇಶಕ ಎಂದು ಹೇಳಿದರಂತೆ.

ಒಟ್ಟಿನಲ್ಲಿ ನಿರ್ದೇಶಕನಾಗಿ ನನ್ನ ವೃತ್ತಿಜೀವನ ಆರಂಭವಾಯಿತು. ಈ ಶ್ರೇಯವನ್ನು ಸುಗತ ಸಾನ್ಶಿರೊ ಕಾದಂಬರಿಯ ಲೇಖಕರ ಹೆಂಡತಿಗೆ ಅರ್ಪಿಸುತ್ತೇನೆ. ನಿರ್ದೇಶಕನಾಗಿ ಸಾಗಿದ ಸಿನಿಪಯಣದಲ್ಲಿ ಅದೃಷ್ಟ ಕೈಕೊಟ್ಟಾಗೆಲ್ಲ ಯಾರಾದರೂ ದೇವರ ಹಾಗೆ ಬಂದು ನನ್ನ ಕೈಹಿಡಿದಿದ್ದಾರೆ. ವಿಧಿಯ ಈ ಆಟವನ್ನು ನೆನೆದಾಗ ಅಚ್ಚರಿಯಾಗುತ್ತದೆ. ಇದೇ ವಿಧಿ ನಿರ್ದೇಶಕನಾಗಿ ಮೊದಲ ಅನುಭವ ಪಡೆಯುವಂತೆ ಮಾಡಿತು. ಸುಗತ ಸಾನ್ಶಿರೊದ ಚಿತ್ರಕತೆಯನ್ನು ಪಟ್ಟಾಗಿ ಕೂತು ಒಮ್ಮೆಗೆ ಬರೆದು ಮುಗಿಸಿದೆ. ಯಮಾಸಾನ್ ತೀರಪ್ರದೇಶದಲ್ಲಿನ ನೌಕಾ ವಾಯು ನಿಲ್ದಾಣದಲ್ಲಿ ಹವಾಯಿ – ಮರೆಯಿ ಒಕಿ ಕೈಸೆನ್ (The War at Sea fromHawaii to Malaya) ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು. ಅಲ್ಲಿಗೆ ಚಿತ್ರಕತೆಯನ್ನು ತೆಗೆದುಕೊಂಡು ಹೋದೆ. ಅವರು ನಾನು ಬರೆದಿರುವುದನ್ನು ನೋಡಿ ತಮ್ಮ ಸಲಹೆ ನೀಡಲಿ ಎನ್ನುವುದೇ ನನ್ನ ಉದ್ದೇಶವಾಗಿತ್ತು. ನಾನಲ್ಲಿಗೆ ಹೋಗುವ ವೇಳೆಗೆ ಬೃಹತ್ ಗಾತ್ರದ ವಿಮಾನಗಳನ್ನು ಹೊತ್ತ ಹಡಗು ಸಾಗರದತ್ತ ತೆರಳುತ್ತಿತ್ತು. ಯೋಧರು ಅದರಿಂದ ಹೊರಬಂದು ಆಕಾಶದಲ್ಲಿ ಗಿರಕಿ ಹೊಡೆಯುತ್ತಾ ಇಳಿಯುತ್ತಿದ್ದರು. ನಿಜಬದುಕಿನ ಹೋರಾಟದ ಚಿಂತೆಗಳನ್ನು ಸಿನೆಮಾದ ಶೂಟಿಂಗ್ ಮರೆಸಿತ್ತು. ಯಮಾಸಾನರನ್ನು ನೋಡಿ ಅವರಿಗೆ ನಾನು ಬಂದದ್ದರ ಉದ್ದೇಶ ತಿಳಿಸಲಷ್ಟೇ ಸಾಧ್ಯವಾದದ್ದು.

(ಯಮಾಸಾನ್)

ಕ್ಯಾಮೆರ ತಂಡ ಉಳಿದುಕೊಂಡಿದ್ದ ಸ್ಥಳದಲ್ಲೇ ಯಮಾಸಾನರಿಗೆ ಕಾಯುತ್ತೆ ಕುಳಿತೆ. ಅಡ್ಮಿರಲ್ ಮತ್ತು ಕಮಿಷನ್ ಆಫೀಸರಗಳೊಂದಿಗೆ ಊಟಕ್ಕೆ ಹೋಗಬೇಕಾಗಿರುವುದರಿಂದ ಅವರು ಬರುವುದು ತಡವಾಗುತ್ತದೆ ಎನ್ನುವ ಸಂದೇಶ ಬಂತು. ನಾನು ಕಾಯುವುದು ಬೇಡ ಎಂದು ಹೇಳಿಕಳುಹಿಸಿದ್ದರು. ರಾತ್ರಿ ಹನ್ನೊಂದರವರೆಗೆ ಕಾದಿದ್ದು ಆಮೇಲೆ ಹೋಗಿ ಮಲಗಿಬಿಟ್ಟೆ. ಒಂದು ಹೊತ್ತಲ್ಲಿ ಹೊರಳಿದಾಗ ಯಮಾಸಾನರ ಕೊಠಡಿಯ ಬಾಗಿಲಿನ ಬಿರುಕಿನಿಂದ ಬೆಳಕು ಇಣುಕುತ್ತಿರುವುದು ಕಂಡಿತು. ಎದ್ದು ಮೆಲ್ಲಗೆ ಅಲ್ಲಿಗೆ ಹೋಗಿ ಇಣುಕಿದೆ. ಯಮಾಸಾನ್ ತಮ್ಮ ಹಾಸಿಗೆಯ ಮೇಲೆ ಬಾಗಿಲಿಗೆ ಬೆನ್ನು ಹಾಕಿ ಕೂತಿದ್ದರು. ಅವರು ಓದುತ್ತಿದ್ದರು. ನನ್ನ ಸುಗತ ಸಾನ್ಶಿರೊ ಚಿತ್ರಕತೆಯನ್ನು ಓದುತ್ತಾ ಕೂತಿದ್ದರು. ಪ್ರತಿ ಪುಟವನ್ನೂ ಗಮನವಿಟ್ಟು ನೋಡುತ್ತಾ ಕೆಲವೆಡೆ ಮತ್ತೆ ಮತ್ತೆ ಹಿಂದಿನ ಪುಟ ತಿರುವಿ ಓದುತ್ತಿದ್ದರು. ದಿನದ ಶೂಟಿಂಗ್ ನ ಆಯಾಸವಾಗಲಿ, ಸಂಜೆಯ ಕುಡಿತದ ನಶೆಯ ಕುರುಹಾಗಲಿ ಅವರು ಕೂತಿದ್ದ ಭಂಗಿಯಲ್ಲಿರಲಿಲ್ಲ.

ಕೊಠಡಿಗಳಿದ್ದವರೆಲ್ಲ ನಿದ್ದೆ ಹೋಗಿದ್ದರು. ಪುಟ ತಿರುವುವ ಸದ್ದು ಬಿಟ್ಟರೆ ಉಳಿದಂತೆ ನಿಶ್ಯಬ್ದ. “ನೀವು ಬೆಳಿಗ್ಗೆ ಬೇಗ ಏಳಬೇಕು. ಪರವಾಗಿಲ್ಲ ನನಗಾಗಿ ನೀವಿದನ್ನು ಮಾಡಬೇಕಿಲ್ಲ. ದಯವಿಟ್ಟು ಮಲಗಿ” ಅಂತ ಹೇಳಬೇಕೆಂದುಕೊಂಡೆ. ಆದರೆ ಅದೇಕೋ ಮಾತಾಡಲಾಗಲಿಲ್ಲ. ಅವರ ಗಂಭೀರತೆ ಹೆದರಿಕೆ ಹುಟ್ಟಿಸುವಂತಿತ್ತು. ಅವರು ಓದಿ ಮುಗಿಸುವುದನ್ನೇ ಕಾಯುತ್ತಾ ಅಲ್ಲೇ ಕೂತೆ. ಅಂದು ಕಂಡ ಯಮಾಸಾನರ ಬೆನ್ನು ಮತ್ತು ಪುಟ ತಿರುವುತ್ತಿದ್ದ ಸದ್ದನ್ನು ಎಂದಿಗೂ ಮರೆಯಲಾರೆ.

ನನಗಾಗ ಮೂವತ್ತೆರಡು ವರ್ಷ. ಕಡೆಗೂ ಏರಬೇಕಿದ್ದ ಶಿಖರದ ಬುಡ ತಲುಪಿದ್ದೆ. ಅಲ್ಲಿ ನಿಂತು ಶಿಖರದತ್ತ ನೋಡುತ್ತಿದ್ದೆ.