ಅಂದಿನ ಆ ನಿಶಿ! ವಿಧಾತನು ತನ್ನ ಕಲಾಜ್ಞಾನವನ್ನೆಲ್ಲ ಪ್ರಯೋಗಿಸಿ ಅದನ್ನು ರಚಿಸಿರುವನೆಂಬಂತೆ ತೋರುತ್ತಿತ್ತು. ಆ ಅಂಧಕಾರದ ಭೀಕರ ಸೌಂದರ್ಯವನ್ನು ನೋಡಿ ದೇವಗಣಗಳೂ, ತಾರಾಮಂಡಲವೂ ಮುಗ್ಧವಾದಂತಿತ್ತು. ಸಂಪತನು ಅದರ ಕಡೆಗೆ ತಿಲಾಂಶವೂ ಗಮನಕೊಡದೆ, ಉನ್ಮಾದನಂತೆ ಮನೆಯಿಂದ ಹೊರಬಿದ್ದನು. ಈ ಕೊಲೆಗಡುಕನನ್ನು ಸ್ಪರ್ಶಿಸಲಾರದೆ ವಾಯುದೇವನು ಕೂಗುತ್ತ ದಿಕ್ಕು ತೋಚದೆ ಓಡಾಡಿದನು. ಭೀತಿಗೂ ಪ್ರೇಮಕ್ಕೂ ಪ್ರವೇಶವಿಲ್ಲದ ಸಂಪತನ ಎದೆಯು ಕಂಪಿಸಲಿಲ್ಲ! ಲಕ್ಷ ಹೃದಯಗಳನ್ನು ಕೊರೆದು ತಿಂದ ಆ ಪಾಪ ಮಂದಿರವೂ, ಆ ಕತ್ತಲಲ್ಲಿ ಕದಲದೆ ನಿಂತಿತ್ತು. ಯಾವ ಬಿರುಗಾಳಿಯೂ ಸಿಡಿಲೂ ಅದನ್ನು ಕೆಡಹಿರಲಿಲ್ಲ.
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾ ಸರಣಿಯಲ್ಲಿ ಕುಡ್ಪಿ ವಾಸುದೇವ ಶೆಣೈ ಬರೆದ ಕತೆ “ಪಹರೆ”

 

ತಣಿವವರನ್ನು ತಣಿಸಿ, ದಣಿವವರನ್ನು ದಣಿಸಿ, ದಣಿದ ದಿನಮಣಿಯು ದಿಗ್ದೆಶೆಗಳನ್ನೆಲ್ಲ ಮಲಿನವಾಗಿಸಿ ವಿರಾಮಕ್ಕಾಗಿ ತೆರಳಿದನು. ಆ ತನಕ ಪ್ರಫುಲ್ಲವದನವನ್ನಿಟ್ಟುಕೊಳ್ಳಲೆತ್ನಿಸಿದ್ದ ಕುಮುದೆಯ ಮುಖವು ಕಳೆಗುಂದಿತು. ಅನಿವಾರ್ಯವಾಗಿ ಎದ್ದು, ಸಣ್ಣ ದೀಪವನ್ನೆತ್ತಿ ಉರಿಸಿಟ್ಟಳು. ಕುಮುದೆಗಾಗಿ ಹೆಚ್ಚಿನ ಸಹಾನುಭೂತಿಯನ್ನು ತೋರಲಾರದೆ ಆ ದೀಪವು ಹೊಗೆ ಊದುತ್ತ ಉರಿಯತೊಡಗಿತು. ಕುಮುದೆಯು ಆ ದೀಪವನ್ನೇ ದಿಟ್ಟಿಸುತ್ತ ಕುಳಿತಳು. ಅವಳ ಮನಸ್ಸು ಆದಾವುದೋ ದೂರದ ಸಾಮ್ರಾಜ್ಯದಲ್ಲಿ ಭ್ರಮಣ ಮಾಡುತ್ತಿತ್ತು. ಕೊಠಡಿಯ ಒಂದು ಬದಿಯಿಂದ ಕ್ಷೀಣ ಸ್ವರವೊಂದು ‘ಅಮ್ಮಾ’ ಎಂದು ಕೂಗಿತು. ಕುಮುದೆಯು ತಟ್ಟನೆ ಎದ್ದು ಆ ಕಡೆಗೆ ನಡೆದು ‘ಏನಮ್ಮಾ?’ ಎಂದು ಕೇಳಿದಳು.

ಮಗುವು ಒಂದರೆ ನಿಮಿಷ ಏನನ್ನೋ ಯೋಚಿಸುತ್ತ ‘ಅಮ್ಮಾ, ಅಪ್ಪನು ಬರಲಿಲ್ಲವೇ?’ ಎಂದು ಪ್ರಶ್ನಿಸಿತು.

‘ಇಲ್ಲ’

‘ಈ ದಿನ ಬರುವನಲ್ಲವೇ?’

‘ಅಹುದು ಮಗು; ಕೊಂಚ ಹೊತ್ತಿನಲ್ಲೆ ಬರುವರು. ಆದರೆ, ನೀನು ಎಚ್ಚರವಾಗಿರಬೇಕಾದುದಿಲ್ಲ; ನಿದ್ದೆ ಮಾಡು.’

ಮಗುವು, ತನ್ನ ಶುಷ್ಕ ತುಟಿಗಳನ್ನು ಚೇತನವಿಹೀನವಾದಂತಿದ್ದ ನಾಲಗೆಯಿಂದ ಸವರುತ್ತ ‘ಇಲ್ಲ, ಇನ್ನು ನಿದ್ದೆ ಬಾರದು, ನನಗೆ ಬಾಯಾರಿದೆಯಮ್ಮ!’ ಎಂದಿತು.

ಕುಮುದೆಯು ಸಮೀಪದಲ್ಲಿರಿಸಿದ್ದ ತಟ್ಟೆಯಿಂದ ಸ್ವಲ್ಪ ನೀರನ್ನು ತೆಗೆದು ಮಗುವಿನ ಬಾಯಿಗೆ ಗುಟುಕು ಗುಟುಕಾಗಿ ಬಿಟ್ಟಳು. ನೀರನ್ನು ಕುಡಿದು ಮಗುವು ಪುನಃ ಪ್ರಶ್ನೆ ಮಾಡಿತು. ‘ಅಮ್ಮಾ, ನಿನ್ನ ಊಟವಾಯಿತೇ?’

‘ಇಲ್ಲ ಮನೂ, ಇನ್ನು ಮಾಡಬೇಕಾಗಿದೆ.’

‘ಅಮ್ಮಾ, ನಾನು ಊಟಮಾಡುವುದ್ಯಾವಾಗ?’

‘ನೀನು ಸೌಖ್ಯವಾಗಮ್ಮ; ಆಮೇಲೆ ನಿತ್ಯವೂ ಊಟವಲ್ಲವೇ?’

‘ನೋಡು, ನಾನು ಸೌಖ್ಯವಾಗಬೇಕೆನ್ನುವೆ. ಯಾವಾಗಲೂ ಹಾಗೆಯೇ ಹೇಳುತ್ತಿರುವೆ. ನಾನು ಸೌಖ್ಯವಾಗುವುದೆಂದರೆ ಯಾವಾಗ? ನನಗೀಗ ಜ್ವರವಿದೆಯೇ?’

‘ಅಹುದು ಮಗು, ಕೊಂಚವಿದೆ.’

‘ಅದು ಎಂದೆಂದೂ ನಿಲ್ಲುವುದಕ್ಕಿಲ್ಲವೇ?’

‘ಇದೆ, ನೀನು ಬೇಗನೆ ಗುಣಹೊಂದುವೆ’

‘ಬೇಗನೆ? – ಯಾವಾಗ? ಎರಡು ದಿನಗಳಲ್ಲೇ?’

‘ಅಹುದಹುದು.’

ಮಗುವಿಗೆ ತುಂಬಾ ಯೋಚನೆಗಿಟ್ಟಿತು. ಎರಡೇ ದಿನಗಳಲ್ಲಿ! ತಾನು ಸೌಖ್ಯವಾದ ಮೇಲೆ ಇಂಥ ಖಾದ್ಯ ಪದಾರ್ಥಗಳನ್ನು ಸವಿಯಬೇಕು! – ಇಂಥವರೊಡನೆ ಇಂಥಿಂಥ ಆಟಗಳನ್ನು ಆಡಬೇಕು! – ಎಂಥ ಸುಖ!

ತಡೆಯಲಾರದೆ ಮಗುವು, ಮುಖವರಳಿ, ಆವೇಶದಿಂದ ನುಡಿಯಿತು; ‘ಅಮ್ಮಾ, ನಾನು ಸೌಖ್ಯವಾದ ಮೇಲೆ ನಾನು ಕೇಳಿದ ತಿಂಡಿಗಳನ್ನೆಲ್ಲ ನೀನು ಕೊಡಬೇಕು.’

‘ನನ್ನ ಅಮ್ಮಣ್ಣಿಗೆ ಕೊಡದಿರುವೆನೇ?’

‘ನಾನು ರಾಜುನೊಡನೆ ಓಡಾಡುವಾಗ ‘ಇತ್ತ ಬಾರೆ ಮನೂ’ ಎಂದು ನನ್ನನ್ನು ಕರೆದು, ‘ಎಣ್ಣೆ ತಾ, ಕಾಳು ತಾ’ ಎಂದು ಹೇಳಬಾರದು!’

‘ಇಲ್ಲ ಅಪ್ಪೂ!’

‘ಮತ್ತೆ ನಾನು ಶಾಲೆಗೆ ಹೋಗುವಾಗ ನನಗೊಂದು ಹೊಸ ಕೊಡೆ ಕೊಡಬೇಕಮ್ಮ. ಇನ್ನು ನಾನು ರಾಜುವಿಗೆ ಕೊಡೆಗಾಗಿ ಕಾದಿರಲಾರೆ. ಆಕೆ ಎಂದೆಂದೂ ನನ್ನನ್ನು ಮೈ ತುಂಬ ನೆನೆಯಿಸಿ, ಹಾಗೇಕೆ ಮಾಡಿದೆಯೆಂದಾಗ ‘ನಿತ್ಯವೂ ಕೊಡೆಯಿಲ್ಲದಿದ್ದರೆ ಶಾಲೆಗೇಕೆ ಬರುವೆ? ನಿನ್ನ ಅಪ್ಪನಿಗೆ ಕುಡಿಯಲಿಕ್ಕೆ ಮಾತ್ರ ಗೊತ್ತೇ? ಒಂದು ಕೊಡೆಯನ್ನು ಕೊಂಡುಕೊಡುವಂತೆ ಹೇಳು!’ ಎಂದು ಗದರಿಸುವಳಮ್ಮ – ಆ ರಾಜು! ಕೊಡೆಯೊಂದು ಹೊಸತಾಗಿ ನನಗೆ ಬೇಕೇ ಬೇಕು!’

ಕುಮುದೆಯು ಮೌನವಾಗಿದ್ದಳು. ಆಕೆಯ ಹೃದಯ ಭಾರವನ್ನು ಈ ಹಸುಳೆ ಬಲ್ಲುದೇನು?

ಮಗುವೂ ಮತ್ತೂ ಕಾಡಿತು. ‘ಕೊಡೆ, ತಿಳಿಯಿತೇನಮ್ಮ?’

‘ಅಹುದಹುದು.’

‘ಇನ್ನು ನಾನು ರಾಜುವಿನೊಂದಿಗೆ ಶಾಲೆಗೆ ಹೋಗಲೊಲ್ಲೆ; ಎಂದರೆ ಆಕೆಯ ಕೊಡೆಯನ್ನು ಮುಟ್ಟಲೊಲ್ಲೆ. ನನ್ನ ಹೊಸ ಕೊಡೆ – ತಿಳಿಯಿತೇನಮ್ಮ?’

‘ನೀನೀಗ ಸುಮ್ಮನೆ ನಿದ್ರಿಸು ಮಗು.’

‘ಇಲ್ಲ ನಿದ್ದೆಯಿಲ್ಲ ಅಮ್ಮಾ. ಅಪ್ಪನೊಡನೆ ನಾನು ಮಾತಾಡಬೇಕು. ಅವನೆಂದು ಬರುವನು?’

‘ಅವರು ಬರಲು ಹೊತ್ತಿದೆ ಮಗೂ; ನೀನು ಮಲಗಿಕೋ ಎಂದೆನಲ್ಲ!’

‘ಇರಲಮ್ಮ….. ಅಮ್ಮ, ಕುಡಿಯುವುದೆಂದರೇನಮ್ಮ?’

ಕುಮುದೆಗೆ ಹೃದಯವನ್ನು ಕಲುಕಿಸಿಬಿಟ್ಟಂತಾಯಿತು. ಮಗುವಿನ ವಿಮಲ ಮಾತುಗಳು ಮತ್ತೂ ಆಕೆಯೂ ಎದೆಯನ್ನು ತಿವಿದುವು:
‘ರಾಜುವು ಹೇಳುವಳಲ್ಲ – ಕುಡಿವುದೆಂದರೆ ಕೆಟ್ಟುದೆಂದು? ನಾನು ಕುಡಿವುದಿಲ್ಲವೇ? ನೀನು ಕುಡಿವುದಿಲ್ಲವೆ? ಹಾಗೆಯೇ ‘ನೀನೂ ಕುಡಿವುದಲ್ಲವೇ ರಾಜು? – ನನ್ನ ಅಪ್ಪನು ಕುಡಿದರೆ ಮಾತ್ರ ಕೆಟ್ಟದ್ದು ಹೇಗೆ?’ ಎಂದು ನಾನು ಕೇಳಿದೆ. ಅದಕ್ಕಮ್ಮಾ …. ನನಗೆ ಕೋಪ ಬರುವುದಮ್ಮಾ… ನನ್ನಪ್ಪನು ಕುಡಿವುದು ಮಾತ್ರ ಕೆಟ್ಟುದೆಂದು ಅವಳ ತಾಯಿಯು ಮಾತಾಡುತ್ತಿದ್ದಳೆಂದು ಹೇಳಿದಳಮ್ಮ! ಕೆಟ್ಟ ರಾಜು! ಇನ್ನು ನಾನು ಆಕೆಯೊಡನೆ ಮಾತಾಡಕೂಡದೇ?’

‘ಬೇಡ’

‘ಆದರೆ ಕುಡಿವುದೆಂದರೇನು?’

ಹೊರಗೆ ಕಾಲುಗಳ ಸಪ್ಪಳ ಕೇಳಿಸಿತು. ಅದರೊಡನೆ ಈ ವಾಕ್ಸರಣಿಯು ತೇಲಿ ಬಂತು; ಪಿಕೆಂಟಿಂಗ್ – ಪಿಕ್, ಎಟ್, ಇಂಗ್ – ಪಿಕ್, ಪಿಕ್, ಇಂಗ್ – ಪೀ ಕೇ… ಟ್ ಇಂಗ್ – ಪೀ ಪಿಂಗ್- ಪಿಂಗ್ – ಪಿಂಪಿಂಗ್….’ ಬಾಗಿಲು ಬಲವಾಗಿ ನೂಕಲ್ಪಟ್ಟು ಕೆಂಗಣ್ಣಿನ ಕರಾಳ ಮಾನವ ಜೀವಿಯೊಂದು ಆ ಹರಕು ಕೊಠಡಿಯನ್ನು ಪ್ರವೇಶಿಸಿತು!

ಕುಮುದೆಯು ಅತ್ತ ಕಡೆ ಹೊರಳಿ ನೋಡಿ, ಪುನಃ ಮುಖ ತಿರುಗಿಸಿಕೊಂಡಳು. ಮಗುವು ಹಾಸಿಗೆಯಲ್ಲಿದ್ದು ಕುಳಿತುಕೊಳ್ಳಲೆತ್ನಿಸಿ, ಸಫಲವಾಗದೆ, ತಲೆಯನ್ನು ಮಾತ್ರ ಬಾಗಿಲ ಕಡೆಗೆ ತಿರುಗಿಸಿ, ‘ಅಪ್ಪ ಬಂದ!’ ಎಂದು ಸಂತೋಷದಿಂದ ಕೂಗಾಡಿತು.

ಆರಂಗುಲ ಉದ್ದಕ್ಕೆ ಬೆಳೆದ ಕೂದಲುಳ್ಳ ತಲೆ, ನಾಲ್ಕಂಗುಲದ ಹಣೆ; ಕೆಂಪಡರಿದ ಕಣ್ಣುಗಳೆರಡು; ಮುಖ ತುಂಬ ಗಡ್ಡ; ಬಾಗಿ ಸಂಕೋಚಿಸಿಕೊಂಡ ಭುಜಗಳು; ಗುಂಡಿಯಿಲ್ಲದ ಅಂಗಿಯ ಕೆಳಗೆ ಕೊಳಕಾದ ಪಂಚೆ; ಇವಿಷ್ಟು ಕೂಡಿದರೆ ಓರ್ವ ಸಂಪತನಾಗುವನು. ಆ ಸಂಪತನು ಕುಮುದೆಯ ಗಂಡ! – ನೋಡಿ ಸಹಿಸದಾದಳು. ಮಗುವು ಕೂಗಿತು ‘ಅಪ್ಪ’.

ಸಂಪತನು ಮಗುವಿನ ನಿಸ್ತೇಜ ಮೊಗವನ್ನು ಕಾಣಲಿಲ್ಲ; ಮಮತೆಯ ವಚನವನ್ನಾಲಿಸಲಿಲ್ಲ. ತನ್ನ ಸಂಗೀತವನ್ನು ಮುಂದುವರಿಸಿದನು; ‘ಇಂಗ್, ಇಂಗ್, ಇಂಗ್, ಪಿಕೆಟಿಂಗ್, ಪಿಕ್, ಪಿಕ್ ಇಕ್ ಇಕ್ ಇಂಗ್! ಕುಮುದ್, ಎಲ್ಲಾ ಇಂಗ್, ಪಿಕೆಟಿಂಗ್! ಒಳಗೆ ಹೊರಗೆ ಮೇಲೆ ಕೆಳಗೆ ಎಲ್ಲಾ ಇಂಗಿಂಗ್! ಫೂ, ಫೂ! ಮೀಸೆ ಇಲ್ಲ ಕೂದಲಿಲ್ಲ – ಅಲ್ಲ ಕೂದಲುಂಟು ಮೀಸೆ ಇಲ್ಲ – ಹುಡುಗಿಯರು! ಕುಡಿಯ ಬೇಡಣ್ಣಾ ಅಂತೆ! ಇಲ್ಲ ಮೀಸೆ! ನಾನು ಕೇಳದೆ, ಹೇಳದೆ, ಬೀಳದೆ ಕುಡಿದೆ! ಕುಡಿದು ಕುಡಿದು ಬೀಳದೆ ಎದ್ದು ಕುಡಿದೆ! ಹೇಳಲೇ ಇಲ್ಲ. ಹುಡುಗಿಯರು ಕೇಳಲೇ ಇಲ್ಲ! ಮೀಸೆಯೂ ಇಲ್ಲ! ಫೂ…. ! ಒಂದು, ಎರಡು ಹುಡುಗಿಯರೆಲ್ಲಾ ಹುಡುಗಿಯರು – ಕೇಳಿದರೆ ಪಿಕೆಟಿಂಗ್, ಕುಮುದ್! ಹುಡುಗಿಯರು, ಆಣೆಗಾರರ ಹುಡುಗಿಯರು!’

ಮಗುವು ಬೆಪ್ಪಾಯಿತು. ಕುಮುದೆಯು ಮೌನವಾಗಿ ಕೇಳಿದಳು. ಸಂಪತನು ಮುಂದೆ ಒದರುತ್ತಲೇ ನಡೆದನು.

‘ಇಲ್ಲ ಕುಮುದ್! ಹುಡುಗಿಯರೆಲ್ಲಾ ಬೆಡಗು! ಎಲ್ಲಾ ಮೋಸ! ಗಾಂಧಿ ಮತ್ತು ಶೇಂದಿ ಮತ್ತು ಮೋಸ! ದುಡ್ಡು ಕೊಟ್ಟು ಕುಡಿವವರಿಗೆ ಪಿಕೆಟಿಂಗ್!-ಸಾಲಗಾರರಿಗೆ?’

ಮಗುವು ಕೊಂಚ ಚೇತನಗೊಂಡು, ಪುನಃ ‘ಅಪ್ಪಾ’ ಎಂದಿತು.

ಸಂಪತನ ಕೆಂಪು ಕಣ್ಣುಗಳು ಕೆಂಡವಾದವು. ‘ಅಪ್ಪಾ ಅಪ್ಪಾ ಅಪ್ಪಾ – ಇಲ್ಲ ಊರಲ್ಲಿ ತುಪ್ಪಾ. ನನ್ನಪ್ಪ ನಿನ್ನಪ್ಪ . ಸುಮ್ಮನೆ ಅಪ್ಪ! ಗಾಂಧಿಯೂ ಅಪ್ಪನಂತೆ! ಅವನೂ ಪಿಕೆಟಿಂಗ್, ನೀನೂ ಪಿಕೆಟಿಂಗ್…..’

ಕುಮುದೆಯ ಕಣ್ಣುಗಳಲ್ಲಿ ನೀರಹನಿಗಳು ಕಾಣಿಸಿಕೊಂಡವು. ‘ಮನುವು ನಿಮ್ಮೊಂದಿಗೆ ಮಾತಾಡಬೇಕೆಂದು ಎಚ್ಚರವಾಗಿರುವಳು’ ಎಂದಳು.

ಸಂಪತನಿಗೆ ಅಂದು ಶೇಂದಿ ಅಂಗಡಿಯ ಮುಂದೆ ಪಿಕೆಟಿಂಗ್ ನಡೆಸುವ ಹುಡುಗಿಯರು ತಡೆದ ಕಾರಣ ಪ್ರಪಂಚದ ಮೇಲಿನ ವಿಶ್ವಾಸವೇ ಕಳಚಿ ಹೋಗಿದ್ದಿತು. ಎಂದನು ‘ಎಲ್ಲಾ ಸುಳ್ಳು ಕುಮುದ್. ನೀನೂ ಸುಳ್ಳು, ಮನುವೂ ಸುಳ್ಳು! ಎಲ್ಲಾ ಪಿಕೆಟಿಂಗ್! ಕೊಟ್ಟು ಕೊಟ್ಟು ಪಿಕೆಟಿಂಗ್! ಕೊಡದಿದ್ದರೆ ಕಿಕ್ಕಿಂಗ್!’

ಮಗುವು ಮೌನವಾಯಿತು. ಕುಮುದೆಯೂ ಮಾತೆತ್ತಲಿಲ್ಲ. ಸಂಪತನು ಅರೆ ತಾಸಿನ ತನಕ ಚೀರಾಡಿ, ನೆಗಾಡಿ ‘ಇಂಗ್-ಇಂಗ್’ ಸಂಗೀತವನ್ನು ಹಾಡುತ್ತಾ ಅಲ್ಲೇ ಅಡ್ಡಾಡಿದನು. ಯಾರಿಗೂ ಅನ್ನಾಹಾರವಿಲ್ಲ. ನೀರಿಲ್ಲ.

ಮೇಕೆಗಳೆರಡು ಆ ವ್ಯಾಘ್ರವಿರುವ ಗವಿಯಲ್ಲಿ ನಿದ್ರಾವಶವಾದವು. ವ್ಯಾಘ್ರ-ಅಹ! ವ್ಯಾಘ್ರವು ‘ಪತ್ನಿಪ್ರೇಮ’ವನ್ನು ಬಲ್ಲುದು; ‘ಪುತ್ರ ಪ್ರೇಮ’ವನ್ನೂ ಬಲ್ಲುದು. ಸಂಪತನು…. ವ್ಯಾಘ್ರನಲ್ಲ; ಅದಕಿಂತಲೂ ಲಕ್ಷ ಪಾಲು ಕೀಳು. ಸುರಾದೇವಿಯ ಮಡಿಲಲ್ಲಿ ಬೆಳೆದ ಭೀಷಣ ಕೂಸು! ಪ್ರಪಂಚವನ್ನರಿಸಲಾಪದ ಜೀವನ್ಮೃತನು!!! ಸ್ವ ಪರ ಹಾನಿಗಳನ್ನು ಮಾತ್ರ ಬಲ್ಲ ಕರಾಳಯಂತ್ರ!!!

ಅನಂತಮಹಿಮಳಾದ ನಿಶಿಯು ಇಂಥ ಅನಂತ ಭೀಷಣ ದೃಶ್ಯಗಳನ್ನು ಜಡನೇತ್ರಗಳಿಂದ ಮರೆಯಿಸಿ ಅನಂತಾಕಾಶದಲ್ಲಿ ಮೆರೆದಳು. ಅನಂತನು ಮಾತ್ರ ಅನಂತಲೋಚನಗಳಿಂದಿದನ್ನು ನೋಡಿ ಅನಂತಾಲೋಚನೆಗಳಿಗೊಳಗಾದನು.

***

ನೀರಿನ ಅಂತರಾಳದಲ್ಲಿದ್ದರೂ ಮತ್ಸ್ಯವು ನೀರಿನಲ್ಲಾದ ತಾಡನವನ್ನು ತಿಳಿವಂತೆ, ನಿದ್ದೆಯಲ್ಲಿದ್ದರೂ ಸಂಪತನ ಗುಡಿಸಲಲ್ಲಿ ಅಂದು ಮಾತೃ ಹೃದಯವು ಆಕಸ್ಮಿಕವಾಗಿ ಕಂಪಿಸಿತು. ಕುಮುದೆಯು ತಟ್ಟನೆದ್ದು ಕುಳಿತು, ನೇತ್ರಯುಗಗಳನ್ನು ಅಗಲವಾಗಿರಿಸಿದಳು. ಅದಾವುದೋ ಒಂದು ವಿಧದ ನಿಗೂಢ ಭೀತಿಯಿಂದಾದ ಚಳಿಯಿಂದಾಕೆಗೆ, ತಾನು ಹಿಮಾಲಯದ ಕಂದರಲ್ಲಿ ಕುಳಿತಂತೆನಿಸಿತು. ತಾನು ‘ಅಮ್ಮಾ’ ಎಂಬ ಕ್ಷೀಣ ಸ್ವರವನ್ನು ಕೇಳಿದೆನೇ, ಅಥವಾ ಕನವರಿಸುತ್ತಿರುವೆನೇ ಎಂಬುದು ಆಕೆಗೆ ತಿಳಿಯದಾಯಿತು. ‘ಮನೂ, ಕರೆದೆಯೇನಮ್ಮ?’ ಎಂದು ಮಮತಾವಾಣಿಯಿಂದ ಕೇಳಿದಳು; ಉತ್ತರವಿಲ್ಲ! ಮತ್ತೊಮ್ಮೆ ಹೃದಯವು ಬಲವಾಗಿ ಕಂಪಿಸಿತು ಆ ಭೀತಿ!

ಮರುಕ್ಷಣದಲ್ಲಿ ದೀಪವನ್ನುರಿಸಿ ಅದನ್ನೆತ್ತಿ ಮಗುವಿನ ಕಡೆಗೆ ನೋಡಿದಳು. ಅದೇನು? ಬಾಲೆಯ ನಿಸ್ತೇಜ – ಪರಂತು ಸುಂದರವಾದ ಮುಖವು ಇದೇಕೆ ಹೀಗೆ? – ಬಾಯಿಯು ತೆರೆದುಕೊಂಡಿದೆ! ಕಣ್ಣುಗಳು ಶಾಂತ ನಿದ್ರಾಸೂಚಕವಾಗಿ ಮುಚ್ಚಿಕೊಂಡಿರುವುದೇನೋ ನಿಜ; ಆದರೆ ಹೃಚ್ಚಲನೆಯು ಕಾಣುವುದೇ? -ಕುಮುದೆಯ ಭೀತಿಯು ದ್ವಿಗುಣಿತವಾಯಿತು. ಚಳಿಯು ಆಭಾಸವಾದರೂ ಆಕೆಯ ಹಣೆಯಲ್ಲಿ ಬೆವರ ಹನಿಗಳು ಕಾಣಿಸಿಕೊಂಡವು. ತನ್ನ ಕೈಯನ್ನು ಮಗುವಿನ ಎದೆಯ ಮೇಲಿರಿಸಿದಳಷ್ಟೆ; ಮರುಕ್ಷಣದಲ್ಲಿ ಅವಳ ಆರ್ತನಾದವು ದಿಗಂತವನ್ನೇ ಭೇದಿಸಿ ಹೊರಟಿತು!

ಆ ಹಳ್ಳಿಯಲ್ಲಿ ಆ ಆರ್ತೆಯ ಕೂಗು ಅಂದು ಯಾರಿಗೂ ಕೇಳಿಸಲಿಲ್ಲ. ರೋದನವು ನಾಡಿನಲ್ಲಾದರೂ ಅದು ಅರಣ್ಯ ರೋದನವೇ ಆಯಿತು. ಕಂಠ ಪರ್ಯಂತ ಮದ್ಯಪ್ರಾಶನ ಮಾಡಿ ಪ್ರಪಂಚವನ್ನೇ ಮರೆತು ನಿದ್ರಿಸುವ ಸಂಪತನಿಗೂ ಅದು ಕೇಳಿಸಲಿಲ್ಲ!

ಅಹುದು, ಕ್ರಿಮಿಕೀಟಗಳು ಮರುಕುಗೊಂಡವು; ವೃಕ್ಷಗಳು ಸುಯ್ಯೆಂದು ನಿಟ್ಟುಸಿರಿಟ್ಟವು; ವಾಯುವೂ ಸಹಾನುಭೂತಿಯ ಸಂದೇಶವನ್ನರುಹ ತೊಡಗಿದನು; ಗುಡಿಸಲಿನ ನಿರ್ಜೀವ ಗೋಡೆಗಳೂ ಎಚ್ಚರಗೊಂಡು ಖೇದ ಪ್ರದರ್ಶನ ಮಾಡುತ್ತಿರುವಂತೆ ತೋರಿತು; ಆದರೆ, ಸಂಪತನು ಮಾತ್ರ ಈ ಲೋಕಕ್ಕೆ ಸಂಬಂಧಪಟ್ಟವನಲ್ಲ!

ಕುಮುದೆಯ ರೋಧನದ ಭರವು ಕಡಮೆಯಾಯಿತು. ಎದ್ದು ಪತಿಯನ್ನು ಬಲವಾಗಿ ಅಲುಗಾಡಿಸಿದಳು. ಆದರೆ ಸಂಪತನಿಗೆ ಕುಮುದೆಯ ಭಾಷೆಯೇ ತಿಳಿಯದು. ಅವನ ಪರವಾಗಿ ಸುರಾದೇವಿಯು ಉತ್ತರಕೊಟ್ಟಳು. ‘ಪಿಕೆಟಿಂಗ್ ಇಂಗಿಂಗ್, ಪಿಕ್ಕಿಂಗ್, ಕಿಕ್ಕಿಂಗ್!’

ಹಾಯ್, ಕುಮುದ! ನೀನು ಕೇಸರಿನಲ್ಲೇ ಬೆಳೆಯಬೇಕೆ? ಸಹಸ್ರ ವರ್ಷಗಳ ಕೆಳಗಿನ ಕಾಶಿಯ ಸ್ಮಶಾನದಲ್ಲಿನ ಚಿತ್ರವಲ್ಲವಿದು : ಚಂದ್ರಮತಿಯು ಲೋಹಿತಾಶ್ವನ ಶವವನ್ನು ತೊಡೆಯಲ್ಲಿರಿಸಿ ಆ ಗಾಢ ನಿಶಿಯಲ್ಲಿ ಪರಮಾತ್ಮನಲ್ಲಿ ಮೊರೆಯಿಟ್ಟಳು.

ಹೊರಗೆ ಕಾಲುಗಳ ಸಪ್ಪಳ ಕೇಳಿಸಿತು. ಅದರೊಡನೆ ಈ ವಾಕ್ಸರಣಿಯು ತೇಲಿ ಬಂತು; ಪಿಕೆಂಟಿಂಗ್ – ಪಿಕ್, ಎಟ್, ಇಂಗ್ – ಪಿಕ್, ಪಿಕ್, ಇಂಗ್ – ಪೀ ಕೇ… ಟ್ ಇಂಗ್ – ಪೀ ಪಿಂಗ್- ಪಿಂಗ್ – ಪಿಂಪಿಂಗ್….’ ಬಾಗಿಲು ಬಲವಾಗಿ ನೂಕಲ್ಪಟ್ಟು ಕೆಂಗಣ್ಣಿನ ಕರಾಳ ಮಾನವ ಜೀವಿಯೊಂದು ಆ ಹರಕು ಕೊಠಡಿಯನ್ನು ಪ್ರವೇಶಿಸಿತು!

ಮುಂಜಾನೆ ಕುಮುದೆಯ ಪರಿಚಿತಳೊಬ್ಬಳು ಅಲ್ಲಿಗೆ ಬಂದಾಗ – ತನ್ನ ಚೇತನವಿಹೀನ ಬಾಲೆಯ ಅಸ್ತಿಪಂಜರವನ್ನು ತೊಡೆಯಲ್ಲಿಟ್ಟು ಕುಳಿತಲ್ಲಿ ನಗುತ್ತಿರುವ ಕುಮುದೆಯನ್ನು ನೋಡಿ ಬೆರಗಾದಳು; ಭಯಗೊಂಡಳು!

***

ಅದು ಹಳ್ಳಿಯು; ನಿಜ. ನಗರದ ಪೇಟೆಗಳಲ್ಲಿನ ವಿಲಾಸ ಸಾಮಗ್ರಿಗಳೂ ಸಾಧನಗಳೂ ಅಲ್ಲಿರಲಿಲ್ಲ; ಅದೂ ನಿಜ ಆದರೆ ಭೋಗಾಭಿಲಾಷಿಗೆ, ತನ್ನ ವಾಂಛಿತ ಭೋಗಕ್ಕಾಗಿ ನಗರವೇ ಅವಶ್ಯಕವೆಂದಿಲ್ಲ. ದುಷ್ಕರ್ಮ ಸಾಧನೆಗೆ ಹಳ್ಳಿಯೂ ಯಥೇಷ್ಟ ವಸ್ತುಗಳನ್ನೊದಗಿಸಿ ಕೊಡಬಲ್ಲದು.

ಮದ್ಯದ ಮಾತು – ಮದ್ಯಕ್ಕೆ ನಗರವೆ ಪ್ರಾಮುಖ್ಯವೇ – ಅಲ್ಲ. ಹಳ್ಳಿ…. ಅದರ ಉಗಮಸ್ಥಾನ! ಹಳ್ಳಿಯ ಕೃಪೆಯಿಂದಲೇ ನಗರದ ಲಕ್ಷ ಕಂಠ ನಾಳಗಳು ಸುರೆಯನ್ನು ಸುರಿದುಕೊಳ್ಳುವುವು. ಅದು ಕಾರಣ, ನಗರ ವಾಸಿಗಳೇ ಮದ್ಯಪಾಯಿಗಳೆನ್ನಲಾಗದು. ಅಹುದು, ಅದು ಹಳ್ಳಿಯು, ಅಲ್ಲೊಂದು ಮದ್ಯದ ಗುಡಿಯು. ಮೂರು ಮೈಲುಗಳ ವ್ಯಾಸಕ್ಕೆ ವಾಸವಾಗಿರುವ ಸುರಾ ಭಕ್ತರಿಗೆ ಇಲ್ಲೇ ಉಪಾಸನೆ.

‘ಶಾಸನ ಭಂಗ’ ಚಳವಳವು ಗ್ರಾಮಾಂತರಗಳಲ್ಲೂ ಹರಡಿ ರಾಜಕೀಯ ವಿಷಯಗಳನ್ನರಿಯದ ಪಾಮರರೆನಿಸಿದ ಗ್ರಾಮವಾಸಿಗಳಲ್ಲೂ ವಿವೋಕೋದಯವನ್ನುಂಟು ಮಾಡಹತ್ತಿತ್ತು. ಎರಡನೇ ಬುದ್ಧನ ಬೋಧನೆಯು ಅಲ್ಲಿಗೆ ಮುಟ್ಟಿತು. ಅದು ಕಾರಣ ಇಂದು ಅಲ್ಲಿ ಮದ್ಯದ ಗುಡಿಯ ಮುಂದೆ ಈರ್ವರು ಲಲನೆಯರು ನಿಂತು ಕೆಲವು ದಿನಗಳಿಂದ ನಡೆದು ಬಂದಂತೆ ಪಹರೆ (ಪಿಕೆಟಿಂಗ್) ನಡೆಸುತ್ತಿದ್ದರು. ನೂರು ಜನರು ಆ ಗುಡಿಯೆದುರಲ್ಲಿ ನಿಂತು, ಆ ಲಲನೆಯರ ಕಂಠದಿಂದ ‘ಮದ್ಯಪಾನ ಮಾಡದಿರು’ ಎಂದು ಹೊರಡುವಾ ಕೊಳಲದನಿಯನ್ನು ಕೇಳಿ ಆನಂದಿಸುತ್ತಿದ್ದರು. ಸಮಯ ಆರು ಘಂಟೆ; ಸೂರ್ಯಾಸ್ತಮಾನ.

ಇನ್ನೂರು ಕಣ್ಣುಗಳ ಟೀಕಾಯುಕ್ತ ದೃಷ್ಟಿಯನ್ನು ಅಗಣ್ಯ ಮಾಡಿ, ‘ಮಾನವ’ ನೆಂದು ಯಾರಿಂದಲೊ ಕರೆಯಲ್ಪಡುತ್ತಿದ್ದ ಪ್ರಾಣಿಯೊಂದು ನೆಟ್ಟಗೆ ಆ ಗುಡಿಯ ಮುಂದೆ ಬಂತು. ಬಂದು ಒಳಹೊಕ್ಕುವೆನೆನ್ನುವಾಗ ಲಲನಾದ್ವಯದ ನಾಲ್ಕು ಕೈಗಳು ಆ ಜೀವಿಯನ್ನು ತಡೆದುವು; ಕೋಮಲವಾಣಿ ‘ಹೋಗದಿರು ಕೈ ಮುಗಿಯುವೆವು; ಮದ್ಯವೇ ಮರಣವು!’ ಎಂದಿತು. ಸಂಪತನು ತಲೆಯೆತ್ತಿ ನೋಡಿ ಆ ಲಲನೆಯರಲ್ಲೋರ್ವಳನ್ನು ಗುರುತಿಸಿ ‘ಏನು ನೀನೇ, ಕುಮುದ!’ ಎಂದು ಸಖೇದಾಶ್ಚರ್ಯದಿಂದ ಕೇಳಿದನು.

‘ಕುಮುದ? – ಅಹುದು. ಆದರೆ ಅರಳಿದ ಕುಮುದವಲ್ಲ’ ಎಂದೇ ಕುಮುದೆಯು ಉತ್ತರವಿತ್ತಳು. ‘ಕುಮುದವಲ್ಲ? ಕುಮುದವಾದರೆ, ಬಾಂಧವನನ್ನು ನೋಡಿದಾಗ ಅರಳುವುದು!’

ಸಂಪತನು ತಿರಸ್ಕಾರದಿಂದ ನುಡಿದನು. ‘ಸಾಕು ನಡೆ ಮನೆಗೆ!’

ಕುಮುದೆಯು ಕದಲಲಿಲ್ಲ. ‘ಮನೆ? ನನಗೆಲ್ಲಿದೆ ಮನೆ? – ಈ ಮದ್ಯದ ಗುಡಿಯನ್ನು ಬೀಳಿಸಿ, ಇಲ್ಲಿ ಮನೆಯನ್ನು ಕಟ್ಟುವುದಕ್ಕಾಗಿ ಬಂದಿರುವೆನು. ಆ ತನಕ ನನಗೆ ಮನೆಯೆಲ್ಲಿ ಅಣ್ಣ’ ಎಂದಳು.

ಅಣ್ಣ? – ಗಂಡನನ್ನು ‘ಅಣ್ಣ’ ನೆನ್ನುವಳು!

ಸಂಪತನು ರೋಷದಿಂದ ರೂಪಗೆಟ್ಟನು. ‘ಪಾಪೀಯಸೀ! – ಅಣ್ಣನೆಂದಾರನ್ನು ಕರೆವೆ? ನಿನ್ನ ಅಣ್ಣನು ಎಂದೋ ವಿಷಮ ಜ್ವರ ತುತ್ತಾಗಿ ನರಕಕ್ಕೆ ಹೋಗಿರುವನು!’ ಎಂದು ಒದರಿದನು.

ಕುಮುದೆಯು ಶಾಂತವಾಗಿಯೇ ಉತ್ತರವಿತ್ತಳು. ‘ಇಲ್ಲ. ನನ್ನ ಅಣ್ಣನು ಇಲ್ಲೇ, ನನ್ನ ಮುಂದಿರುವನು. ಅವನು – ವಿಷಮ ಜ್ವರಕ್ಕೆ ತುತ್ತಾಗಿರುವುದೇನೋ ನಿಜ; ಆದರೆ, ಇನ್ನೂ ನರಕಕ್ಕೆ ಹೋಗಲಿಲ್ಲ; ಹೋಗಿ ಮುಟ್ಟಲಿಲ್ಲ. ‘ಮದ್ಯ’ ಎಂಬ ವಿಷವನ್ನು ಪಾನಮಾಡಿ ಅದೊಂದು ಜ್ವರವನ್ನು ಸಂಪಾದಿಸಿ, ನರಕದ ಪಥದಲ್ಲಿ ಪದಾರ್ಪಣ ಮಾಡಿರುವನಷ್ಟೆ. ಅವನನ್ನು ತಡೆಯಲು ನಾನಿಲ್ಲಿ ಬಂದುದಾಗಿದೆ.’

ಸಂಪತನು ರೋಷೋನ್ಮತ್ತನಾಗಿ, ಮೈಮರೆತು ‘ನಾನು ನಿನ್ನ ಗಂಡನು!’ ಎಂದು ಗರ್ಜಿಸಿದನು.

ಆ ಗರ್ಜನೆಗೆ ಕುಮುದೆಯು ಕಂಪಿಸಲಿಲ್ಲ. ‘ಗಂಡ! ಎಲ್ಲಿಯ ಗಂಡ? ಅಣ್ಣಾ ಹೀಗೇಕೆ ಮಾತಾಡುವೆ? ನನಗೆ ವಿವಾಹವಾದುದಿಲ್ಲ. ನೀನು ನನ್ನ ಅಣ್ಣನು!’ ಎಂದು ಸ್ಥಿರವಾಗಿ ನುಡಿದಳು.

ಸಂಪತನು ರೋಷಾವೇಶದಿಂದ ‘ಛಿ! ನರಕ!’ ಎಂದು ಚೀರುತ್ತಾ ಕುಮುದೆಯನ್ನೂ ಆಕೆಯ ಸಂಗಾತಿಯನ್ನು ಎರಡು ಕೈಗಳಿಂದ ತಟ್ಟನೆ ಬಲವಾಗಿ ದೂಡಿ ಮದ್ಯದ ಗುಡಿಯನ್ನು ಪ್ರವೇಶಿಸಿದನು. ವಿನಯಾವತಾರಿಗಳಾದ ಆ ಸ್ತ್ರೀಯರ ಮೇಲೆ ಕೈ ಮಾಡಿದ ಪಾಪಿಯನ್ನು ಹಿಸುಕಿಬಿಡಲು ಎದುರಲ್ಲಿ ಕೂಡಿದ ಜನಸ್ತೋಮದಿಂದ ನೂರು ಕೈಗಳು ಮುಂದುವರಿದವು. ‘ಆಕೆಯ ಪತಿಯವನು, ಹೊಡೆಯಲಾಗದು. ಶಾಂತಿ ಸಂದೇಶವೂ ನೆನಪಿರಲಿ!’ ಎಂದು, ಆ ನೂರು ಕೈಗಳನ್ನು ಬೇರೆ ನೂರು ಶಾಂತಿಹಸ್ತಗಳು ತಡೆದುವು.

***

ಮೇಲೆ ವಿವರಿಸಿದ ಘಟನೆಗಳು ನಡೆದ ರಾತ್ರೆ :- ಭೀಷಣಾಂಧಕಾರ. ಆ ಮದ್ಯದ ಗುಡಿಯ ಆಕಾರವನ್ನೇ ಹೋಲುವ ಸಂಪತನ ಮನೆಯಲ್ಲಿ ಕುಮುದೆಯು ಕೊಳಕಾದ ನೆಲದ ಮೇಲೆ ಗೋಡೆಗೆ ಆತು ಕುಳಿತಿದ್ದಳು. ಪಾಪಿ ಸಂಪತನು ಆಕೆಯನ್ನು ರೋಷದಿಂದ ದೃಷ್ಟಿಸಿ ನಿಂತಿದ್ದನು.

ಸಂಪತನ ಹೊಲಸು ಬಾಯಿಯು ಅವಾಚ್ಯ ಮಾತುಗಳನ್ನು ಪ್ರಸವಿಸಿತು. ‘ಪಾಪೀಯಸಿ! ನಿನಗಾರು ಕುಮುದವೆಂದು ನಾಮಕರಣ ಮಾಡಿದರು? – ಅಷ್ಟು ಜನಸ್ತೋಮದ ಮುಂದೆ ನಿನ್ನ ಪತಿಯಾದ ನನ್ನನ್ನು ಏನೆಂದು ಗಳಹಿದೆ? – ನಾನು ನಿನ್ನ ‘ಅಣ್ಣ?’ ಚಾಂಡಾಲ ಸ್ತ್ರೀ! ಗಂಡನನ್ನು ಅಣ್ಣನೆಂದು ಕರೆವ ತತ್ವಜ್ಞಾನವನ್ನು ನಿನಗಾರು ಕಲಿಸಿದರು? ಆ ‘ಗಾಂಧೀ ಪಂಥ’ದವರೇ? ಗೃಹಿಣಿಧರ್ಮವನ್ನು ಮರೆತು ಸಂತೆಸೂಳೆಯ ವೇಷವನ್ನು ಧರಿಸಿ ಆ ಜನರ ಸಂತೆಯ ಮುಂದೆ ನಿಲ್ಲುವ ದಿಟ್ಟತನ! ಛೀ ಛೀ ನಿನ್ನ ಬಾಳು!’

ತುಟಿಗಳನ್ನು ಕದಲಿಸದೆ, ಕುಮುದೆಯು ಮೌನವಾಗಿ ಕುಳಿತಿದ್ದಳು. ಸಂಪತನು ಮುಂದೆ ಒದರಿದನು;

‘ಮದ್ಯದ ಅಂಗಡಿಯನ್ನು ಬೀಳಿಸುವೆನೆಂದೆಯಾ? ಮತ್ತೆ ಅಲ್ಲಿ ಮನೆ ಕಟ್ಟುವ ಸಾಹಸವೆ? ಹೇ ಕ್ಷುದ್ರಜೀವಿಯೆ; ಒಲೆಯು ಕುಸಿದರೆ ಒಂದು ಹಿಡಿ ಮಣ್ಣನ್ನು ಮೆತ್ತಲಾಪದ ನಿನ್ನ ಆ ಪುಟ್ಟ ಕೈಯು, ಮದ್ಯದಂಗಡಿಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುವ ಶಕ್ತಿ ಪ್ರದರ್ಶನ ಮಾಡಬಲ್ಲುದೆ?’
ಇಲ್ಲ ಕುಮುದೆಯ ಬಾಯಿಂದ ಉತ್ತರವಿಲ್ಲ. ಸಂಪತನ ವಾಕ್ಪಟುತ್ವದ ಭರವೂ ಕಡಿಮೆಯಾಗಲಿಲ್ಲ.

‘ನಿನಗೆ ವಿವಾಹವಾಗಿಲ್ಲ? ಹೇ ಮಾನಗೇಡಿಯೇ! ಅಷ್ಟು ಜನರನ್ನು ಅಲಕ್ಷಿಸಿ, ನಿನ್ನ ಗಂಡನ ಮುಖದಲ್ಲೆ ಆ ಮಾತುಗಳನ್ನಾಡುವ ಸಾಹಸವೆ?’

ತಟ್ಟನೆ ಮುಂದರಿದು ಸಂಪತನು ಕುಮುದೆಯ ಬಾಯಿಗೆ ಬಲವಾಗಿ ಬಡೆದನು! ನಿರಾಹಾರದಿಂದ ಶುಷ್ಕವಾಗಿದ್ದ ಅಧರಗಳೊಡೆದು ನೆತ್ತರ ಹರಿಯಿತು! ಸಹಿಸಲಾರದೆ ಕುಮುದೆಯು ಭೂಶಾಯಿಯಾದಳು!

ಸಂಪತನು ಅಷ್ಟಕ್ಕೇ ನಿಲ್ಲಲಿಲ್ಲ. ‘ಹೇಳು, ನಾನು ನಿನ್ನ ಪತಿಯ ಸ್ಥಾನದಲ್ಲಿರುವೆನೇ? ಅಥವಾ ನಿನ್ನ ಅಣ್ಣನಾಗಿ ತೋರುವೆನೇ?’ ಎನ್ನುತ್ತ ಒದೆದನು.

ಒಳಗಿಂದೊಳಗೆ ಕುದಿಯುತ್ತಿದ್ದ ಜ್ವಾಲಾಮುಖಿಯು ಮೇಲಕ್ಕೆ ಹೊರಟಿತು. ಹೇಳಿದಳು: ‘ಅಹುದು, ನೀನು ನನಗಣ್ಣನಾಗಬೇಕು! ಪ್ರೇಮದ ಸಸಿಯನ್ನು ನಿನಗಾಗಿ, ನಿನ್ನೊಳಿತಿಗಾಗಿ, ನೆಟ್ಟು ಅದಕ್ಕೆ ನೀರೆರೆದು ಶ್ರಮಪೂರ್ವಕವಾಗಿ ಅದನ್ನು ಬೆಳೆಯಿಸತೊಡಗಿದೆನು. ನಿನ್ನನ್ನೊಲಿಸಲು ಮಮತಾವರ್ಷವನ್ನು ಸುರಿದು ಸುರಿದು ಒಣಗಿದೆನು. ನಿನ್ನ ಕುಡಿಕತನವನ್ನು ಬಿಡಿಸಲು ರಾತ್ರಂದಿನವೂ ಹೆಣಗಾಡಿ ಹೆಣವಾದೆನು. ಮನೆಯಲ್ಲಿ ಕಾಳುಕಡ್ಡಿಯಿಲ್ಲದಿದ್ದರೂ ಅದನ್ನು ಸೃಜಿಸಿ ಅಡುಗೆಯನ್ನಿಟ್ಟು ನಿನಗೆ ಬಡಿಸಿದೆನು. ಸಾಕಷ್ಟು ಅನ್ನವಿಲ್ಲದಿದ್ದರೆ ನಿನಗೂ ನನ್ನ ಮನುವಿಗೂ ಬಡಿಸಿ, ನಾನು ಉಪವಾಸದಿಂದ ದಿನಗಳೆದೆನು. ಅನ್ನವು ಕೇವಲ ಕಡಮೆ ಇದ್ದಾಗ, ಮೊದಲೇ ಮದ್ಯದಿಂದ ಅಸ್ತಿಪಂಜರವಾದ ನೀನು ಅನ್ನವಿಲ್ಲದೆ ನಶಿಸಿಹೋಗಬಾರದಾಗಿ ನಿನಗಾಗಿ ಸಾಕಷ್ಟು ಇಟ್ಟು, ನನ್ನ ಮಗುವಿಗೆ ಅರೆಹೊಟ್ಟೆಯಲ್ಲಿಯೇ ತೃಪ್ತಿಪಡಿಸಿ ಅವಳನ್ನು ಕ್ಷಯದ ಬಾಯಿಗೆ ಬಲಿಗೊಟ್ಟೆನು. ಈ ದುರ್ಭಾಗಿ ಬಾಲೆಯು ನನ್ನ ಪಾಪೀ ಬಸಿರಲ್ಲಿ ಜನನಕ್ಕೆ ಬಂದು, ಕೆಲ ಕಾಲ ಈ ನರಕ ಭೋಗ್ಯವನ್ನನುಭವಿಸಿ, ಯಾವುದೋ ಸುಖ ಸಾಮ್ರಾಜ್ಯಕ್ಕೆ ಹೊರಟು ಹೋಯಿತು. ನಾನು ಇಲ್ಲೇ ಉಳಿದೆನು.

ಆತ್ಮಹತ್ಯೆಗೆ ನನ್ನ ಮನಸ್ಸು ಒಪ್ಪದಾಯಿತು. ಉಳಿದ ಜೀವಿತವನ್ನು ನಿನ್ನ – ಸಾಧ್ಯವಾದರೆ ಇತರರ – ಮದ್ಯಪಾನ ಚಟ ನಿರ್ಮೂಲನಕ್ಕಾಗಿ ಸವೆಯಿಸಬೇಕೆಂದು ಮನಸ್ಸಾಯಿತು. ‘ದೇಶ ಸೇವಿಕೆ’ಯಾಗಿ ಸೇರಿ, ನೀನು ಉಪಾಸನೆಗಾಗಿ ತೆರಳುವ ಆ ಸುರಾದೇವಿ ಮಂದಿರದ ಮುಂದೆ ನಿಂತುಕೊಂಡೆ, ನಿನಗಾಗಿಯೇ. ನನ್ನ ಹೃದಯದಲ್ಲಿ ಸಾಕಿ ಸಲಹಿದ ಪ್ರೇಮದ ಸಸಿಯನ್ನು ಕಡಿದಾತನು ನೀನೇ. ಆದರೆ, ಅದನ್ನು ಪುನಃ ಚಿಗುರಿಸುವಂತೆ ಮಾಡಲು ಯತ್ನಗೊಳ್ಳುವೆನು. ಅದು ಕಾರಣವೇ ನಿನ್ನ ಕುಡಿತಕದ ಚಟವು ಸಂಪೂರ್ಣ ಕಿತ್ತು ಹೋಗುವ ತನಕ, ನಿನ್ನನ್ನು ಅಣ್ಣನೆಂದೇ ತಿಳಿದು, ಹಾಗೆಯೇ ಸಂಬೋಧಿಸುತ್ತ, ತದ್ರೀತಿಯಲ್ಲಿಯೆ ಸಂಪರ್ಕವನ್ನಿಟ್ಟುಕೊಳ್ಳಬೇಕೆಂದು ನಿರ್ಧರಿಸಿರುವೆನು!’

ಸ್ತಂಭೀಭೂತನಾಗಿ ಸಂಪತ್ತನು ಎಲ್ಲವನ್ನು ಕೇಳಿದನು. ಒಂದು ಗರ್ಜನೆ, ಒಂದು ಬಲವಾದ ಒದೆ, ಒಂದು ಆರ್ತನಾದ; ಸಂಪತನ ಮನೆಯ ಭಾಗ್ಯಜ್ಯೋತಿಯು ದಿವ್ಯ ಜ್ಯೋತಿಯಲ್ಲಿ ಐಕ್ಯಹೊಂದಿತು!

ಈ ಪಾಮರ ಜನಸಾಗರದಲ್ಲಿ ತಳದಲ್ಲಿ ಅಗಣ್ಯವಾಗಿ ಬಿದ್ದಿದ್ದ ಅಮೌಲ್ಯ ಮೌಕ್ತಿಕವನ್ನು ವಿಧಾತನು ಹೆಕ್ಕಿ ತನ್ನ ಕಂಠಹಾರದಲ್ಲಿ ಧರಿಸಿಕೊಂಡನು!

***

ಪಾಪಿಯ ಮೈಯು ಚಿರ್ರನೆ ತಣ್ಣಗಾಯಿತು. ಭೀತಿಯ ಸಹಸ್ರ ಕರಾಳ ವದನಗಳು ಅವನನ್ನು ನೋಡಿ ನಗುವಂತೆ ಭಾಸವಾಯಿತು. ಓಡಿಹೋಗಿ ಕುಮುದೆಯ ಕಳೇಬರವನ್ನು ಅಪ್ಪಿಕೊಂಡು ಕೇಳಿದನು. ‘ಕುಮುದ! ನೋವಾಯಿತೇ?’

ಆ ಶವವನ್ನು ಅತ್ತಿತ್ತ ಅಲುಗಾಡಿಸಿ ಮತ್ತೊಮ್ಮೆ ಕೇಳಿದನು ‘ಕುಮುದ, ನನ್ನ ಕುಮುದ! ಮಾತಾಡು, – ನೋವಾಯಿತೇನಮ್ಮ?’

ಉತ್ತರವಾಗಿ, ಕಿಟಕಿಯೊಳಗಿಂದ ಗಾಳಿಯು ಬಲವಾಗಿ ಬೀಸಿ ದೀಪವನ್ನು ನಂದಿಸಿ ಬಿಟ್ಟಿತು. ಸಂಪತನು ಸ್ತಂಭಿತವಾಗಿ, ಕರ್ತವ್ಯಮೂಢನಾಗಿ ಕೆಲಕ್ಷಣಗಳ ತನಕ ಸ್ಥಿರವಾಗಿ ನಿಂತನು.

ಆಕಸ್ಮಿಕವಾಗಿ ಅವನಲ್ಲಿ ಅವರ್ಣನೀಯ ಮಾರ್ಪಾಟಾಯಿತು. ಅದು ಸ್ವರ್ಗವೂ ಇರಬಹುದು. ನರಕವೂ ಇರಬಹುದು. ಎದ್ದು, ಆ ಕಳೇಬರದ ಕತ್ತಿಗೆ ಕೈಯಿಕ್ಕಿ, ಎರಡಾಣೆಯ ಗಾಜಿನ ಮಣಿಗಳಿರುವ ಮಾಂಗಲ್ಯ ಸೂತ್ರವನ್ನು ಕಿತ್ತು ತೆಗೆದನು. ಎಂಥ ಪೈಶಾಚಿಕ ದೃಷ್ಟಿ! ಎಂಥ ನಗು – ಈ ನರಪಿಶಾಚಿಯನ್ನು ನೋಡಿ ನಿಜಪಿಶಾಚಿಗಳು ಭೀತಿಯಿಂದ ನಡುಗಿರಬೇಕು!

ಅಂದಿನ ಆ ನಿಶಿ! ವಿಧಾತನು ತನ್ನ ಕಲಾಜ್ಞಾನವನ್ನೆಲ್ಲ ಪ್ರಯೋಗಿಸಿ ಅದನ್ನು ರಚಿಸಿರುವನೆಂಬಂತೆ ತೋರುತ್ತಿತ್ತು. ಆ ಅಂಧಕಾರದ ಭೀಕರ ಸೌಂದರ್ಯವನ್ನು ನೋಡಿ ದೇವಗಣಗಳೂ, ತಾರಾಮಂಡಲವೂ ಮುಗ್ಧವಾದಂತಿತ್ತು. ಸಂಪತನು ಅದರ ಕಡೆಗೆ ತಿಲಾಂಶವೂ ಗಮನಕೊಡದೆ, ಉನ್ಮಾದನಂತೆ ಮನೆಯಿಂದ ಹೊರಬಿದ್ದನು. ಈ ಕೊಲೆಗಡುಕನನ್ನು ಸ್ಪರ್ಶಿಸಲಾರದೆ ವಾಯುದೇವನು ಕೂಗುತ್ತ ದಿಕ್ಕು ತೋಚದೆ ಓಡಾಡಿದನು. ಭೀತಿಗೂ ಪ್ರೇಮಕ್ಕೂ ಪ್ರವೇಶವಿಲ್ಲದ ಸಂಪತನ ಎದೆಯು ಕಂಪಿಸಲಿಲ್ಲ!

ಲಕ್ಷ ಹೃದಯಗಳನ್ನು ಕೊರೆದು ತಿಂದ ಆ ಪಾಪ ಮಂದಿರವೂ, ಆ ಕತ್ತಲಲ್ಲಿ ಕದಲದೆ ನಿಂತಿತ್ತು. ಯಾವ ಬಿರುಗಾಳಿಯೂ ಸಿಡಿಲೂ ಅದನ್ನು ಕೆಡಹಿರಲಿಲ್ಲ. ‘ಸುರೇ! ಸುರೇ!’ ಎಂದು ಒದರುತ್ತ ಸಂಪತನು ಅತ್ತ ಓಡಿ ಬಂದನು. ನಾಯಿಗಳೆರಡು ಈ ಪಿಶಾಚಿಯನ್ನು ಕಂಡು ಬೊಗಳಿದುವಷ್ಟೆ. ಮಾನವನಾರೂ ಆ ಮಾರ್ಗದಲ್ಲಿ – ನೂರು ಗಜಗಳ ವ್ಯಾಸದಲ್ಲಿ – ಇರಲಿಲ್ಲ.

ಆ ಪಾಪ ಮಂದಿರವು – ಮದ್ಯದ ಗುಡಿಯು – ಸಮೀಪಿಸಿತು. ಸಂಪತನು ಅದರ ಮೆಟ್ಟಲುಗಳನ್ನು ಹತ್ತಿ ನೋಡಿದನು. ಬೀಗ ಇಕ್ಕಿಕೊಂಡಿತ್ತು. ಅಲ್ಲಿ ಯಾರೂ ಇರಲಿಲ್ಲ. ಉನ್ಮಾದನಂತೆ ಬಾಗಿಲಿಗೆ ಬಡೆದನು.

‘ಸುರೇ! ಸುರೆ!’

ಆದರೆ, ಆ ಮರದ ಕದವು ಉತ್ತರ ಕೊಡಲಿಲ್ಲ.

ಸಂಪತನ ಉದ್ರೇಕವು ಹೆಚ್ಚಿತು. ಶ್ವಾಸಕೋಶಗಳು ಉಚ್ಛ್ವಾಸ – ನಿಶ್ವಾಸಗಳ ಆವೇಗವನ್ನು ತಡಿಯದಾದುವು. ರಕ್ತದ ಒತ್ತಾಟವು ರಭಸದಿಂದ ನಡೆಯಹತ್ತಿತು. ಪಾಪಿಯ ಶಿರದಲ್ಲಿ ಅಸಹನೀಯ ವೇದನೆಯ ಅಭಾಸವಾಯಿತು.

‘ಸುರೇ! ಸುರೇ!’

ಹ್ಹ! ಎಲ್ಲಿದೆ ಸುರೇ? – ಇದೇ ಮಂದಿರದ ಒಳಗೆ, ಆದರೆ, ಆ ಸುರಾಭಾವಕ್ಕೆ ಚೇತನವಿಲ್ಲ. ವಿನಂತಿಯನ್ನು ಕೇಳಿ ಹೊರಗೆ ಬರಲಾಪದು.
ಪಾಪಿಗೆ ಯಾರಿಂದಲೂ ಉತ್ತರವಿಲ್ಲ. ಆತನ ಶಿರೋವೇದನೆಯು ದ್ವಿಗುಣಿತವಾಯಿತು. ತ್ರಿಕರಣಗಳೂ ತಾಂಡವವಾಡಿದುವು. ಎದೆಗುಂಡಿಗೆಯು ಸಹಜ ಪ್ರಮಾಣವನ್ನು ಮೀರಿ ಉಬ್ಬಿಕೊಳ್ಳಲಾರಂಭಿಸಿತು.

‘ಸುರೇ…. ಸುರೇ…..’

ಬಾಯಿಯಿಂದ ನೆತ್ತರು ಹರಿದು ಬಂತು. ಅಧಿಕೋದ್ರೇಕದಿಂದ ರಕ್ತ ಕೋಶವು ಒಡೆದಿತ್ತು : ‘ಸು…. ಉ… ರೆ’ ಎಂದೂ ಮತ್ತೂ ತೊದಲುತ್ತ ಬಾಗಿಲಿಗಾಗಿ ಕೈಯೆತ್ತಿದನು. ಆ ಕೈಯು ಪುನಃ ಮೆಟ್ಟಲ ಮೇಲೆ ಬಿತ್ತು. ಸುರಾದೇವಿಯು ಪ್ರಸನ್ನಳಾಗಲಿಲ್ಲ. ಸಂಪತನ ಜೀವಶುಕವು ಹಾರಿ ಹೋಯಿತು.

ಮರುದಿನ ಆ ಪಾಪಮಂದಿರದ ಮುಂದೆ ಸಹಸ್ರ ಗ್ರಾಮವಾಸಿಗಳು ನಿಂತು ಆ ಭೀಕರ ದೃಶ್ಯವನ್ನು ನೋಡಿದರು. ಮಾಂಗಲ್ಯ ಸೂತ್ರವನ್ನು ಗಟ್ಟಿಯಾಗಿ ಹಿಡಿದುಕೊಂಡ ಕೈಯನ್ನು ಆ ಪಾಪಮಂದಿರದ ಕಡೆಗೆತ್ತಿ ಸಂಪತನ ಶವವು ಅಂಗಾತ ಬಿದ್ದುಕೊಂಡಿತ್ತು. ಆ ವಿಕಾರಮುಖವು ಒಂದು ನಿಗೂಢ ಅರ್ಥ ಸೂಚಕವಾಗಿದ್ದು. ಕಣ್ಣುಗಳ ದೃಷ್ಟಿಯು ಏಕಕಾಲದಲ್ಲಿ ಎಲ್ಲರ ಕಡೆಗೂ ನೆಡೆಲ್ಪಟ್ಟು ‘ಎಚ್ಚರವಿರಲಿ!’ ಎನ್ನುವಂತಿತ್ತು. ಈ ಪಹರೆಯನ್ನು ನೋಡಿ ಸಹಸ್ರ ಹೃದಯಗಳು ಕಂಪಿಸಿದುವು!

ಜನಸ್ತೋಮದಿಂದೊಬ್ಬನು ಹೇಳಿದನು. ಸಂಪತ್ತನು ಸ್ವರ್ಗಕ್ಕೆ ಹೋಗಿರಬಹುದಾದರೆ ಆ ಮಾಂಗಲ್ಯ ಸೂತ್ರವೆ ದಾರಿ ತೋರಿಸಿರಬೇಕು – ಎಂದು.

(ಸ್ವದೇಶಾಭಿಮಾನಿ; ರಜತೋತ್ಸವ ಸಂಚಿಕೆ)

***

ಟಿಪ್ಪಣಿ
ಕುಡ್ಪಿ ವಾಸುದೇವ ಶೆಣೈ: ತಮ್ಮದೇ ಆದ ‘ಪ್ರಭಾತ’ ವಾರಪತ್ರಿಕೆಯನ್ನು ನಾಲ್ಕು ದಶಕಗಳ ಕಾಲ ನಡೆಸಿದ ಮಂಗಳೂರಿನ ಪತ್ರಕರ್ತ, ಹಾಸ್ಯಲೇಖಕ, ಕತೆಗಾರ, ನಾಟಕಕಾರ, ಪ್ರಕಾಶಕ ಕುಡ್ಪಿ ವಾಸುದೇವ ಶೆಣೈಯವರು (1907 – 1977) ‘ಒಂದಾಣೆ ಮಾಲೆ’ ಎಂಬ ಮಾಲಿಕೆಯಲ್ಲಿ ಕಡಿಮೆ ಬೆಲೆಯಲ್ಲಿ 342 ಪುಸ್ತಕಗಳನ್ನು ಜನರಿಗೆ ಒದಗಿಸಿದರು. ಅವರು ಸ್ವರಚಿತ ಸುಮಾರು 25 ಕಥಾಸಂಕಲನಗಳನ್ನು ಮತ್ತಿತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಕತೆಗಳು ಬಹುತೇಕ ಹಾಸ್ಯ ಕತೆಗಳಾದರೂ ಈ ಕತೆ ದುರಂತ ಕತೆಯಾಗಿದೆ. ಇದು ಗಾಂಧೀವಾದಿ ಸ್ವಾತಂತ್ರ್ಯ ಹೋರಾಟಗಾರರ ಸಮಾಜ ಸುಧಾರಣೆಯ ಅಂಗವಾಗಿ ನಡೆಯುತ್ತಿದ್ದ ಮದ್ಯಪಾನ ವಿರೋಧಿ ಪಿಕೆಟಿಂಗ್ ಚಳುವಳಿಯನ್ನು ಉಲ್ಲೇಖಿಸುತ್ತಿರುವುದರಿಂದ ಆ ಕಾಲದ ಒಂದು ಸುಧಾರಣಾವಾದಿ ಕತೆಯಾಗಿ ಪ್ರಸ್ತುತವಾಗಿದೆ.