ಇಂದಿನ ಅವನ ವರ್ತನೆಯನ್ನು ನೋಡಿದೊಡನೆಯೇ ನಾಗಣ್ಣನು ಏನೋ ಕಿತಾಪತಿಗೆ ಹೊರಟಿದ್ದಾನೆಂದು ಅವರಿಗೆ ದೃಢವಾಯಿತು. ಅಂತೂ ಗುಪ್ತ ಪೋಲೀಸನೊಬ್ಬನು ದೂರದಿಂದ ಅವನನ್ನು ಅನುಸರಿಸತೊಡಗಿದನು. ಇದನ್ನು ಕಂಡು ನಾಗಣ್ಣನು ಮನಸ್ಸಿನಲ್ಲೇ ನಕ್ಕು ನೆಟ್ಟಗೆ ಪಂಚಮಾಲಿಗೆ ಹೋಗಿ ಅಕ್ಕಿ ಧಾರಣೆ ಕೇಳಿದ; ಸರಾಫಕಟ್ಟೆಗೆ ನಡೆದು ಪವನಿಗೆ ಕ್ರಯ ಮಾಡಿದ; ಅಲ್ಲಿಂದ ಬಿರುಸು ಬಾಣ ಪಟಾಕಿಗಳನ್ನು ಮಾರುವ ಅಂಗಡಿಗೆ ಹೋಗಿ ಎರಡು ಬಿರುಸು ಕೊಂಡುಕೊಂಡ.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವಓಬೀರಾಯನ ಕಾಲದ ಕತೆಗಳುಸರಣಿಯಲ್ಲಿ ಪೇಜಾವರ ಸದಾಶಿವರಾವ್ ಬರೆದ ಕತೆ ಬಿರುಸು ಭಾನುವಾರದ ನಿಮ್ಮ ಓದಿಗೆ

 

 

– 1 –
‘ನನ್ನ ಆಲೋಚನೆ ಕೇಳ್ತಿಯಾ?’

‘ಏನೂ?’

‘ನಾಳೇನೇ ಮಂಗ್ಳೂರಿಗೆ ಹೋಗಿ ಪೋಲೀಸಿನವರಿಗೆಲ್ಲಾ ಚೆನ್ನಾಗಿ ಕಾಣಿಸಿಕೊಂಡು ಪೇಟೆ ತುಂಬಾ ತಿರುಗಿ ಬಂದುಬಿಡ್ತೇನೆ…..’

‘ಒಳ್ಳೇ ಜಾಣ ಕಾಣೋ ನೀನು. ಶುದ್ಧ ಹುಚ್ಚಪ್ನ ಹಾಗೆ ಆ ಕೆಂಪುಟೊಪ್ಪಿಗಳ ಮೂಗಿನ ಮುಂದೆ ಸುಳಿದಾಡೋದು. ಹೋಗುವ ಕಾಲದ ಬುದ್ಧಿ ನಿಂಗೆ. ಮೊದಲೇ ಅವರಿಗೆ ನಮ್ಮ ಮೇಲೆ ಸಂಶಯಯಿದ್ಹಾಗೆ ತೋರುತ್ತೆ. ಈಗ ನೀನು ಬೇಕು ಬೇಕೂಂತ ಅವರ ಕೈಲಿ ಬೀಳೋದು ಹುಚ್ಚುತನ – ಕೇವಲ ಹುಚ್ಚುತನ.’

‘ನಾನು ಹೇಳುವುದನ್ನು ಪೂರಾ ಕೇಳು, ಕರೀಂ…. ಮತ್ತೆ ನಿನ್ನ ವ್ಯಾಖ್ಯಾನ.’

‘ಹೇಳೋದೇನು ನಾಗಣ್ಣ? ಹುಂ, ಆಗ್ಲಿ ನಿನ್ನ ಸೇವೆ.’

‘ಮೊದ್ಲು ಅವರ ಸಂಶಯ ನನ್ನ ಮೇಲೆ ಬೀಳುವ ಹಾಗೆ ಮಾಡ್ತೇನೆ. ಅವರೆಲ್ಲಾ ಕಣ್ಣಿಗೆ ಎಣ್ಣೆ ಹಾಕಿ ಕಾಯುತ್ತಿರುವಾಗ ನೀನು ಹೇಗೂ ಪಾರಾಗಿ ಹೋಗಬಹುದು. ಒಂದು ವೇಳೆ ಕೆಲಸ ನಾನು ಯೋಚಿಸಿದ ಹಾಗೆ ಮುಂದುವರಿಯದಿದ್ದರೆ ನಿನಗೊಂದು ಸಂಕೇತ ಕೊಡುತ್ತೇನೆ.’

‘ಏನು?’

‘ಸಂಕೇತ.’

‘ಹುಂ.’

‘ನಾನು ಹೋದಕಡೆ ಬಂದಕಡೆ ಪೋಲೀಸಿನವರು ನಾಯಿಗಳಂತೆ ಹಿಂಬಾಲಿಸುವುದನ್ನು ನೋಡಿದ್ರೆ ಎಂಥಾ ಗುಮ್ಮಟ್ರಾಯನೂ ನಗಬೇಕು ನೋಡು, ಹಾಗೆ ಮಾಡ್ತೇನೆ ಅವರನ್ನು. ಕೆಂಪುಟೊಪ್ಪಿಗಳು ಬೆನ್ನುಕಾಯುವಾಗ ನೀನು ನಗಾ ಹಿಡ್ಕೊಂಡು ಕೇಶವನ ಹತ್ರ ಹೋಗು. ನಿನ್ನ ಮೇಲೆ ಸಂಶಯ ಲವಲೇಶವಿಲ್ಲದ ಹಾಗೆ ಮಾಡೊ ಕೆಲಸ ನನ್ನ ಕೈಯಲ್ಲಿದೆ.’

‘ಅಷ್ಟರವರೆಗೆ?’

‘ಅಷ್ಟರವರೆಗೆ ನೀನು ನಮ್ಮ ಮೊದಲಿನ ಸ್ಥಳವಿದೆಯಲ್ಲಾ ಗುಡ್ಡದ ಮೇಲೆ? – ಅಲ್ಲಿರಬೇಕು. ಎಲ್ಲಾ ನಾನು ಯೋಚಿಸಿದ ಹಾಗೆ ಆದ್ರೆ ನಾಡದು – ಅಂದ್ರೆ ನಾಡದು – ಆದಿತ್ಯವಾರ ರಾತ್ರಿ – ಇಲ್ಲ …. ಹಾ …. ಸುಮಾರು … ಒಂದು ಗಂಟೆಗೆ ಸಂಕೇತ ಕೊಡುತ್ತೇನೆ.’

‘ಹೂಂ, ಸಂ…..’

‘ಕೇಳು. ಒಂದು ಗಂಟೆ ಸಮಯಕ್ಕೆ ಆಕಾಶ ನೋಡಿಕೊಂಡಿರು. ಒಂದು ಬಿರುಸು ಕಂಡ್ರೆ ಅಪಾಯ. ಪೇಟೆ ಹತ್ರ ಹೊರಡ್ಲೇಬೇಡ. ನಾನೇ ಸಮಯ ನೋಡಿ ಬಂದೇನು. ತಿಳಿಯಿತಲ್ವಾ.’

‘ಏನಂದೀ? ಬಿರುಸು?’
‘ಹೌದೋ, ಬಿರುಸು ಬಾಣ, ಗೊತ್ತಾಯ್ತಲ್ವಾ?’
‘ಹುಂ’
‘ಒಂದು ಬಿರುಸು ಕಂಡ್ರೆ – ಅಪಾಯ’
‘ಹುಂ. ಅಪಾಯವಿಲ್ಲದಿದ್ರೆ?’

‘ಎರಡು ಬಿರುಸು ಹಾರಿಸುತ್ತೇನೆ. ಒಂದರ ಹಿಂದೊಂದು. ಒಂದಾದ್ರೆ ಅಪಾಯ. ಎರಡಾದ್ರೆ – ನೆಟ್ಟಗೆ ಸರಾಫಕಟ್ಟೆ – ಏನೂ?’
‘ಆದ್ರೆ ಪೋಲೀಸಿನವರು ನೋಡುವದಿಲ್ವಾ ಈ ನಿನ್ನ ಸಂಕೇತಗಳನ್ನಾ?’

‘ಉದ್ಯೋಗ ಇಲ್ವಾ ನಿನಗೆ? ಆ ಗೊಡ್ಡು ತಲೆಗಳಿಗೆ ಇದೆಲ್ಲಾ ಅರ್ಥವಾಗಬೇಡವೆ? ಇದೆಂಥಾ ಕೌತುಕಾಂತ ಬಾಯಿಬಿಟ್ಟು ನೋಡ್ಯಾವು. ಇಷ್ಟೆಲ್ಲಾ ಅವುಗಳ ತಲೆಗೆ ಹೋಗಿಬಿಟ್ರೆ ಊರು ಉರುಟಾದೀತು.’

‘ಹೌದೋ ನಾಗಣ್ಣ, ಎಲ್ಲಿ ಕಲಿತಿ ಈ ಮಂತ್ರ ತಂತ್ರ. ಏನು ತಲೆ ಮಹಾರಾಯಾ ನಿನ್ನದು! ನಿನ್ನೊಟ್ಟಿಗೆ ಕೆಲಸ ಮಾಡಲು ಸುರು ಮಾಡಿದ ಮೇಲೆ ಅರ್ಧಕ್ಕರ್ಧ ನಿನ್ನ ಉಪಾಯ ಎಲ್ಲಾ ಕಲಿತುಬಿಟ್ಟೆ! ನಿನ್ನ ಗುರು ….’

‘ಅದೆಲ್ಲಾ ಇರ್ಲಿ, ನೀನು ಈವತ್ತೇ ಆ ಗುಡ್ಡ ಸೇರಬೇಕು. ನಾನು ಕೆಳಗೆ ಸೋಮೇಶ್ವರದಲ್ಲಿ ಬಿಡಾರ ಮಾಡಿಕೊಂಡಿರುತ್ತೇನೆ. ನಾಡದು ಆದಿತ್ಯವಾರ ಜೋಕೆ. ಒಂದು ಗಂಟೆಗೆ – ನೆನಪಿರಲಿ.’
‘ಹುಂ.’

ನಾಗಣ್ಣನೂ ಕರೀಮನೂ ಎದ್ದು ಹೊರಟುಹೋದರು. ಎರಡು ದಿನಗಳ ಹಿಂದೆ ಉಳ್ಳಾಲ ದೂಮಪ್ಪ ಹೆಗ್ಡೆಯವರ ಮನೆಗೆ ಯಾರೋ ಕನ್ನ ಹೊಡೆದು ಸುಮಾರು ಎರಡು ಮೂರು ಸಾವಿರ ರೂಪಾಯಿ ಬೆಲೆ ಬಾಳುವ ನಗನಾಣ್ಯಗಳನ್ನು ಹೊತ್ತಿದ್ದರು. ಇತ್ತೀಚೆಗೆ ನಾಲ್ಕೈದು ತಿಂಗಳಿಂದ ಕಳ್ಳರ ಭಯವು ಪ್ರಬಲವಾಗಿತ್ತು. ಪೋಲೀಸಿನವರು ಪ್ರತಿಬಾರಿಯೂ ಪರಾಜಿತರಾಗಿದ್ದರು. ಕಳ್ಳರೂ ಸಾಧಾರಣದವರಿರಲಿಲ್ಲ. ಏನಾದರೊಂದು ಹೊಸ ಸೋಗು ಹಾಕಿಕೊಂಡು ಪೋಲೀಸಿನವರ ಬೆರಳುಗಳಡಿಯಿಂದಲೇ ನುಸುಳಿ ಹೋಗುತ್ತಿದ್ದರು. ಪೋಲೀಸಿನವರಿಗೂ ಕೆಲವು ಜನರ ಮೇಲೆ ಸಂಶಯವಿದ್ದಿತು. ಕಳ್ಳ ವಸ್ತುಗಳನ್ನು ಕೊಂಡುಕೊಳ್ಳುವ ಕೇಶವ, ಐದಾರೇ ತಿಂಗಳ ಹಿಂದೆ ಅತ್ತೆ ಮನೆಯಿಂದ ಬಿಡುಗಡೆ ಹೊಂದಿಬಂದ ಕರೀಂ ಮತ್ತು ನಾಗಣ್ಣ ಇಬ್ಬರೂ ಪೋಲೀಸಿನವರ ದೃಷ್ಟಿಗೆ ತೀರಾ ಅಗೋಚರರಾಗಿರಲಿಲ್ಲ. ಆದರೆ ಯಾರನ್ನೂ ದಸ್ತಗಿರಿ ಮಾಡುವಷ್ಟು ಪ್ರಬಲ ಸಾಕ್ಷಿಗಳಾವುವೂ ದೊರೆತಿರಲಿಲ್ಲ. ಆದುದರಿಂದ ಪೋಲೀಸಿನವರಿಗೆ ಕೈಕಟ್ಟಿದಂತಾಗಿತ್ತು.

ದೂಮಪ್ಪ ಹೆಗ್ಡೆಯು ಸಾಧಾರಣ ಮಟ್ಟಿಗೆ ಉಳ್ಳಾಲದ ತುಂಡರಸನೆಂತಲೇ ಹೇಳಬೇಕು. ರಾಮನ ತಪ್ಪಿಗೆ ಶ್ಯಾಮನ ತಲೆಯೊಡೆದು ಕಡೆಗೆ ಪಂಚಾಯತಿಗೆ ಮಾಡಿ ದೊಡ್ಡವನಾದ ಮಹಾರಾಯ. ಅಂಥವನ ಮನೆಗೆ ಕನ್ನ ಹಾಕಿದ ಕಳ್ಳರ ಸಾಹಸವನ್ನು ಕಂಡು ಪೋಲೀಸರೂ ತಲೆದೂಗಿದರು. (ಗುಣಕ್ಕೆ ಮತ್ಸರವೇ). ಈ ಬಾರಿಯೂ ನಗಗಳ ಪತ್ತೆಯಾಗದಿದ್ದರೆ ದೂಮಪ್ಪ ಹೆಗ್ಡೆಯು ಪೇಟೆ ಎಲ್ಲಾ ತಳಮಳ ಮಾಡಿ, ಅತಳ ಪಾತಾಳ ಒಂದು ಮಾಡಿ ತಮ್ಮ ಪಕಡಿ ಹಾರಿಸದೆ ಬಿಡನೆಂದು ಪೋಲೀಸಿನವರಿಗೆ ಚೆನ್ನಾಗಿ ಗೊತ್ತು. ಆದುದರಿಂದಲೇ ಅವರಿಗೆ ಕಳ್ಳರನ್ನು ಹಿಡಿಯಲು ದ್ವಿಗುಣೋತ್ಸಾಹ.

ದೂಮಪ್ಪ ಹೆಗ್ಗಡೆಯ ಮನೆಗೆ ಕನ್ನ ಹಾಕಿದ ಕದೀಮರು ನಮ್ಮ ಕರೀಂ ಮತ್ತು ನಾಗಣ್ಣರೆಂದು ಇನ್ನೊಮ್ಮೆ ಹೇಳಬೇಕಾಗಿಲ್ಲ. ಯಾರ ಮನೆಗೆ ಕಳ್ಳರು ನುಗ್ಗಿದರೂ ತನ್ನ ಮನೆ ಗರ್ಭಗುಡಿಗೆ ಸಮಾನವೆಂದೂ ಕನ್ನ ಹಾಕುವಷ್ಟು ‘ಎದೆಗಟ್ಟಿ’ ಸದ್ಯಕ್ಕೆ ಯಾರಿಗೂ ಇಲ್ಲವೆಂದೂ ಕೊಚ್ಚಿಕೊಳ್ಳುತ್ತಿದ್ದ ಹೆಗ್ಗಡೆಯ ಗರ್ಭಗೃಹವನ್ನು ಭೇದಿಸಿ, ಎರಡು ಮೂರು ಸಾವಿರ ರೂಪಾಯಿ ನಗನಾಣ್ಯಗಳನ್ನು ಹಾರಿಸಿದುದು, ಹೆಗ್ಗಡೆಯ ಹೆಮ್ಮೆ ಒಮ್ಮೆಗೆ ತಗ್ಗಿದಂತೆಯೇ ಸೈ. ಆದರೆ ಎಷ್ಟರವರೆಗೆ?

ನಾಗಣ್ಣನು ಕರೀಮನನ್ನು ‘ಬೀಳ್ಕೊಂಡು’ ನೆಟ್ಟಗೆ ಮಂಗಳೂರತ್ತ ಕಡೆಗೆ ಹೊರಟ. ಪೇಟೆಗೆ ಬಂದೊಡನೆಯೇ ಪೋಲೀಸು ಠಾಣೆಯ ಮಾರ್ಗವಾಗಿ ಎರಡು ಬಾರಿ ಅತ್ತಿತ್ತ ದರ್ಬಾರಿನಲ್ಲಿ ತಿರುಗಾಡಿಬಿಟ್ಟ. ‘ಚರ್ ಚರ್’ ಎಂದು ತನ್ನೊಡೆಯನ ಆಗಮನವನ್ನು ಘಂಟಾಘೋಷವಾಗಿ ಸಾರುವ ಜೋಡುಗಳು, ಕೆಂಪು ಪಟ್ಟಿಯ ಕಲಾಬತ್ತಿ, ರುಮಾಲು, ಬೆಳ್ಳಿಕಟ್ಟಿನ ಊರುಗೋಲು, ಹುರಿಮಾಡಿದ ದೊಡ್ಡ ಹುಲಿಮೀಸೆ, ಇವೆಲ್ಲಾ ಎಂಥವನನ್ನಾದರೂ ಒಮ್ಮೆಗೆ ಕೈಮುಗಿಸುವಂತಿತ್ತು. ನೋಡಿದರೆ ಅತ್ತೆಮನೆ ಅಂಬಲಿ ತಿಂದು ಸಾಕಾಗಿ ಮೊನ್ನೆ ತಾನೇ ಅರಮನೆಯಿಂದ ಹೊರಗೆ ಬಂದ ವ್ಯಕ್ತಿಯೆಂದು ಅವನನ್ನು ಯಾರೂ ಹೇಳರು. ಅಷ್ಟು ನಾಗಣ್ಣನ ಡೌಲು.

ಠಾಣೆಯ ಮುಂದೆ ಇಷ್ಟು ಠೀವಿಯಿಂದ ಹೋಗುತ್ತಿರುವವನಾರೆಂದು ಕುತೂಹಲದಿಂದ ನೋಡಿದ ಪೋಲೀಸಿನವನು, ನಾಗಣ್ಣನೆಂದು ತಿಳಿದೊಡನೆಯೇ ಕೊಂಚ ಬೆಚ್ಚಿಬಿದ್ದನು. ಕುತೂಹಲವು ಕೌತುಕವಾಯಿತು. ನಾಗಣ್ಣನು ಸಾಧಾರಣ ಮೂರ್ತಿಯಲ್ಲವೆಂದೂ ಪಾಪದ ಪೋಲೀಸಿನವರಾರಾದರೂ ಸಿಕ್ಕಿದರೆ, ಏನಾದರೂ ಹಂಚಿಕೆ ಮಾಡಿ, ಏಳುಕೆರೆ ನೀರು ಕುಡಿಸಿಬಿಟ್ಟಾನೆಂದೂ ಪೋಲೀಸಿನವರಿಗೆಲ್ಲಾ ತಿಳಿದಿತ್ತು. ಇಂದಿನ ಅವನ ವರ್ತನೆಯನ್ನು ನೋಡಿದೊಡನೆಯೇ ನಾಗಣ್ಣನು ಏನೋ ಕಿತಾಪತಿಗೆ ಹೊರಟಿದ್ದಾನೆಂದು ಅವರಿಗೆ ದೃಢವಾಯಿತು. ಅಂತೂ ಗುಪ್ತ ಪೋಲೀಸನೊಬ್ಬನು ದೂರದಿಂದ ಅವನನ್ನು ಅನುಸರಿಸತೊಡಗಿದನು. ಇದನ್ನು ಕಂಡು ನಾಗಣ್ಣನು ಮನಸ್ಸಿನಲ್ಲೇ ನಕ್ಕು ನೆಟ್ಟಗೆ ಪಂಚಮಾಲಿಗೆ ಹೋಗಿ ಅಕ್ಕಿ ಧಾರಣೆ ಕೇಳಿದ; ಸರಾಫಕಟ್ಟೆಗೆ ನಡೆದು ಪವನಿಗೆ ಕ್ರಯ ಮಾಡಿದ; ಅಲ್ಲಿಂದ ಬಿರುಸು ಬಾಣ ಪಟಾಕಿಗಳನ್ನು ಮಾರುವ ಅಂಗಡಿಗೆ ಹೋಗಿ ಎರಡು ಬಿರುಸು ಕೊಂಡುಕೊಂಡ. ಇನ್ನೂ ಪೋಲೀಸಿನವನು ಬೆನ್ನು ಬಿಟ್ಟಿರಲಿಲ್ಲ. ನಾಗಣ್ಣನು ನಗುತ್ತಾ ರೈಲ್ವೇ ನಿಲ್ದಾಣಕ್ಕೆ ಬಂದು ರೈಲು ಹತ್ತಿದೊಡನೆ ಪೋಲೀಸಿನವನೂ ಮೌನವಾಗಿ ಇನ್ನೊಂದು ಗಾಡಿ ಹತ್ತಿದ. ಅಂತೂ ಇಂತೂ ಶುಕ್ರವಾರ ಸಾಯಂಕಾಲದೊಳಗೆ ಪೋಲೀಸು ಠಾಣೆಯಲ್ಲಿ ತಾನು ಇನ್ನೊಮ್ಮೆ ಕಾರ್ಯರಂಗಕ್ಕೆ ಇಳಿದಿದ್ದೇನೆಂದು ತೋರಿಸಿ ನಾಗಣ್ಣನು ಸೋಮೇಶ್ವರದಲ್ಲಿಳಿದ; ಅವನ ಹಿಂದೆ ಪೋಲೀಸಿನವ.

ಇತ್ತೀಚೆಗೆ ನಾಲ್ಕೈದು ತಿಂಗಳಿಂದ ಕಳ್ಳರ ಭಯವು ಪ್ರಬಲವಾಗಿತ್ತು. ಪೋಲೀಸಿನವರು ಪ್ರತಿಬಾರಿಯೂ ಪರಾಜಿತರಾಗಿದ್ದರು. ಕಳ್ಳರೂ ಸಾಧಾರಣದವರಿರಲಿಲ್ಲ. ಏನಾದರೊಂದು ಹೊಸ ಸೋಗು ಹಾಕಿಕೊಂಡು ಪೋಲೀಸಿನವರ ಬೆರಳುಗಳಡಿಯಿಂದಲೇ ನುಸುಳಿ ಹೋಗುತ್ತಿದ್ದರು.

ಸೋಮೇಶ್ವರದಲ್ಲಿ ಮನೆಗಳಿಗೆ ಅಭಾವವಿದ್ದಿಲ್ಲ. ರಾಮಣ್ಣ ಭಟ್ರ ಒಕ್ಕಲಿನವನೊಬ್ಬ ಗೇಣಿ ತಿಂದು ಓಡಿಹೋಗಿದ್ದ. ಅವನ ಮನೆ ಖಾಲಿಯಾಗಿತ್ತು. ನಾಗಣ್ಣನ ‘ಜೇನ ಸೋನೆಯ’ ತರದ ನಾಲ್ಕು ಮಾತುಗಳನ್ನು ಕೇಳಿ ರಾಮಣ್ಣ ಭಟ್ರು ಮನೆ ಬಿಟ್ಟುಕೊಟ್ಟರು. ನಾಗಣ್ಣ ಅದರಲ್ಲಿಳಿದುಕೊಂಡ. ಹಳ್ಳಿಯಲ್ಲಿ ಊಟಕ್ಕೆ ಹಣ ಬಿಚ್ಚಬೇಕಾಗಿಲ್ಲ. ಧರ್ಮಾತ್ಮರು ನಾಗಣ್ಣನಂತಹ ಪಟಾಕಿ ಬಾಯವರಿಗೆ ಒಂದು ತಿಂಗಳವರೆಗಾದರೂ ಅನ್ನವಿಕ್ಕಿ ಸಾಕಿ ಸಲಹಿಯಾರು!

– 2 –

ನಾಗಣ್ಣನು ಶನಿವಾರ ದಿನ ನಾಲ್ಕೈದು ಬಾರಿಯಾದರೂ ಕಾಡಿನ ಬದಿಗೆ ಹೋಗಿ ಏನೋ ಯೋಚಿಸಿ ಅಧೈರ್ಯಪಟ್ಟವನಂತೆ ನಟಿಸಿ ಹಿಂದಿರುಗಿ ಬಂದು ಬಿಟ್ಟಿದ್ದ. ಇದರಿಂದಾಗಿ ಆ ದಿನ ಸಾಯಂಕಾಲದೊಳಗೆ ಆರು ಪೋಲೀಸಿನವರು ಸೋಮೇಶ್ವರಕ್ಕೆ ಬಂದಿದ್ದರು. ನಾಗಣ್ಣನಂತೂ ಈ ಲೋಕದಲ್ಲೇ ಇರಲಿಲ್ಲ – ಆನಂದದಿಂದ.

“ಬಿರುಸು ಎರಡು ಕರೀಮನಿಗೆ.”

ರಾತ್ರಿ ಮಲಗಲು ಹೋಗುವಾಗ ಮನೆಯ ಮುಂದಿನ ಮರಗಳ ಮರೆಯಲ್ಲಿ ಕಣ್ಣಿಗೆ ನಸ್ಯವಿಕ್ಕಿ ಕಾದು ಕುಳಿತಿದ್ದ ಪೋಲೀಸಿನವರನ್ನು ಕಂಡು ನಾಗಣ್ಣನು ಆನಂದ ತೃಪ್ತಿಗಳಿಂದ ಇನ್ನೊಮ್ಮೆ ಮನದಲ್ಲೇ ನಕ್ಕನು. ಕೆಂಪುಟೊಪ್ಪಿಗಳು ಈ ಬಾರಿ ನಿಸ್ಸಂಶಯವಾಗಿಯೂ ಪರಾಜಿತರಾಗುವರೆಂದು ಅವನ ದೃಢವಾದ ನಂಬಿಕೆ – ಈ ನವೀನವಾದ, ಇಷ್ಟರವರೆಗೆ ಯಾರೂ ಕಂಡು ಕೇಳದಂತಹ ಉಪಾಯವನ್ನು ಭೇದಿಸಿ ನೋಡಲು ದಪ್ಪ ತಲೆಯ ಆ ಮೊದ್ದು ಜಂತುಗಳಿಗೆ ಸಾಧ್ಯವೇ? ಛೆ!

ಆದಿತ್ಯವಾರ ದಿನ ಮುಂಜಾನೆ ನಾಗಣ್ಣನು ಇನ್ನೊಮ್ಮೆ ಕಾಡಿನ ಬಳಿಗೆ ಹೋಗಿ ಏನೋ ಅನುಮಾನಪಟ್ಟವನಂತೆ ಹಿಂತಿರುಗಿದನು. ಆದರೆ ಒಂದು ವಿಶೇಷ. ಮೊದಲಿನಂತೆ ಪೋಲೀಸಿನವರು ಅವನನ್ನು ಅನುಸರಿಸಿ ಬಂದಿರಲಿಲ್ಲ; ಮಾತ್ರವಲ್ಲದೆ ಪರೀಕ್ಷಿಸಿ ನೋಡಲಾಗಿ ಮೊದಲನೆ ಆರು ಮಂದಿಯ ಬದಲು ಈಗ ಬರೇ ನಾಲ್ಕು ಮಂದಿ ಮಾತ್ರವಿದ್ದರು. ನಾಗಣ್ಣನಿಗೆ ಆಶ್ಚರ್ಯವೂ ಕೌತುಕವೂ ಅಸಮಾಧಾನವೂ ಆಯಿತು.

“ಏನಾಯ್ತು ಇವ್ರಿಗೆ? ಹಾಂ!”

ಮಧ್ಯಾಹ್ನ ಇಬ್ಬರ ಹೊರತು ಉಳಿದವರೆಲ್ಲರೂ ಹೊರಟು ಹೋಗಿದ್ದರು. ಅವರೂ ಕೂಡ ಮೊದಲಿನ ಹಾಗೆ ಜಾಗರೂಕತೆಯಿಂದ ಮನೆಯನ್ನು ನೋಡಿಕೊಳ್ಳುವುದರ ಬದಲು ಈಗ ಏನೋ ಅಸಡ್ಡೆಯಿಂದ ವರ್ತಿಸುತ್ತಿದ್ದರು. ಇದನ್ನು ನೋಡಿದ ಬಳಿಕ ನಾಗಣ್ಣನ ಮನಸ್ಸಿನ ನೆಮ್ಮದಿಯೇ ಹೋದಂತಾಯಿತು. ಇಷ್ಟು ಸಾಧನೆ ಮಾಡಿಯೂ ಕಾರ್ಯವು ಕೈಗೂಡದಿದ್ದರೆ – ಚಿಃ – ಆಲೋಚನೆ ಮಾಡುವಾಗ ದುಃಖ ಬರುತ್ತೆ (ಸಹಜವೇ ಸರಿ!), ಎರಡು ಮೂರು ಸಾವಿರ ರೂಪಾಯಿಯು ಕಣ್ಣೆದುರಿನಲ್ಲೇ ಕೈಯಿಂದ ತಪ್ಪಿಹೋಗುವಾಗ!

ನಾಗಣ್ಣನನ್ನು ಕಾಯಲಿಟ್ಟಿದ್ದ ಪೋಲೀಸರ ಸಂಖ್ಯೆ ಸಾಯಂಕಾಲ ಇನ್ನೂ ಕಡಮೆಯಾಯಿತು. ಅವನ ಕಾರ್ಯಕಲಾಪಗಳ ಮೇಲೆ ಕಣ್ಣಿಡಲು ಉಳಿದವನು ಒಬ್ಬನೇ – ನಾಗಣ್ಣನನ್ನು ಪೇಟೆಯಿಂದ ಸಂಶಯದಿಂದ ಅನುಸರಿಸಿಕೊಂಡು ಬಂದಿದ್ದ ಕಾನ್ಸ್ಟೇಬಲ್ ಮಹಾಶಯ! ‘ತಾನೊಂದೆಣಿಸಿದರೆ ದೈವ…..’ ಇತ್ಯಾದಿ ಇದೆಯಲ್ಲಾ, ಹಾಗಾಯಿತು ನಮ್ಮ ನಾಗಣ್ಣನಿಗೆ, ನಿಜವಾಗಿಯೂ ಖೇದಾಸ್ಪದವಾದ ವಿಷಯ.

‘ಅವರಿಗೆ ಏನೋ ಸಂಶಯವಾಗಿರಬೇಕು. ನನ್ನ ನಟನೆ ಸ್ವಲ್ಪ ಜಾಸ್ತಿಯಾಯ್ತೂಂತ ಕಾಣುತ್ತೆ. ಛೆ; ಕರೀಮನಿಗೆ ಹಾಗಾದ್ರೆ, ಒಂದೇ ಬಿರುಸು ಈವತ್ತು. ಸಂಕೇತಾಂತ ಒಂದು ಮಾಡಿದ್ದು ಒಳ್ಳೇದೇ ಆಯ್ತು. ಇಲ್ಲದಿದ್ರೆ ಮಾಲು ಸಮೇತ ಕರೀಂ ಅವರ ಕೈಯಲ್ಲಿ ಸಿಕ್ಕಿ ಬಿಡುತ್ತಿದ್ದ. ನಿನ್ನೆ ಆರು ಜನಾ; ಈವತ್ತು ಒಬ್ನೇ. ಎಲ್ರೂ ಆ ಕೇಶವನ ಸರಾಫ ಕಟ್ಟೆಯ ಹತ್ರ ಹೊಂಚು ಹಾಕಿಕೊಂಡಿರಬೇಕು. ಮುಖ್ಯ ನಾನು ನಟನೆಮಾಡಿದ್ದು ಸ್ವಲ್ಪ ಜಾಸ್ತಿಯಾಯ್ತೂಂತ ಕಾಣುತ್ತೆ. ಆ ಕಾಡಿನ ಬಳಿಗೆ ಅಷ್ಟು ಸರ್ತಿ ಹೋಗ್ಬಾರಾದಿತ್ತು. ಕೈಯಲ್ಲಿದ್ದ ತುತ್ತು ಬಾಯಿಗೆ ಬಾರದಾಯಿತಲ್ಲಾ! ಸತ್ತೋಗ್ಲಿ ಇನ್ನು. ಮರುಗಿ ಏನು ಪ್ರಯೋಜನ? ಅಂತೂ ಬೇಗ ಬೇಗ ಮಾಡ್ಲಿಕ್ಕಾಗ್ಲಿಲ್ಲ ಕೆಲಸ. ಕರೀಮನಿಗೆ ಒಂದೇ ಬಿರುಸು. ಈವತ್ತು ನಮ್ಮ ಕೆಲಸ ಎಲ್ಲಾ ಕೈಗೂಡಿದ್ರೆ …. ಇರ್ಲಿ ….. ಕೊಡುಮಣ್ತಾಯ ದೈವಕ್ಕೆ…..’ ಇತ್ಯಾದಿ ಹರಕೆ ಹೇಳಿಕೊಂಡು ಮನೋರಾಜ್ಯದಲ್ಲಿ ನಾಗಣ್ಣನು ಸ್ವೇಚ್ಛೆಯಿಂದ ವಿಹರಿಸುತ್ತಿದ್ದನು.

– 3 –

ಕರೀಮನು ಗುಡ್ಡೆಯ ಮೇಲೆ ಮರಗಳ ಮರೆಯಲ್ಲಿ ನಿಂತು ಆಕಾಶವನ್ನು ತದೇಕದೃಷ್ಟಿಯಿಂದ ನೋಡುತ್ತಿದ್ದನು. ಸ್ವಲ್ಪ ಸಮಯದ ಬಳಿಕ ದೂರದಲ್ಲಿ ಆಕಾಶವು ಕ್ಷಣಕಾಲ ಬೆಳಗಿತು. ಒಂದು ಬಿರುಸು ಜಗ್ಗನೆ ಕಾಣಿಸಿಕೊಂಡು, ಸರ್ರನೆ ಮೇಲೇರಿ ಅಂಧಕಾರದಲ್ಲಿ ಲೀನವಾಯಿತು.

‘ಹಃ ಕರ್ಮವೇ? ಒಂದು ಬಿರುಸು. ಹಾಗಾದ್ರೆ ಅಪಾಯ.’

ಕರೀಮನ ಮಾತು ಮುಗಿಯುವುದರೊಳಗೆ, ಇನ್ನೊಂದು ಬಿರುಸು ಆಕಾಶದಲ್ಲಿ ಮೂಡಿ ಮಾಯವಾಯಿತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

‘ಹಃ ಎರಡು ಬಿರುಸು! ನೆಟ್ಟಗೆ ಸರಾಫ ಕಟ್ಟೆಗೆ ಸಾಮಾನು’ ಎನ್ನುತ್ತಾ ಕರೀಮನು ಹಿಂದು ಮುಂದೆ ನೋಡದೆ ಗುಡ್ಡ ಇಳಿದು, ಮಂಗಳೂರ ದಾರಿ ಹಿಡಿದು ಧಾವಿಸಿದ. ಇನ್ನು ಅರ್ಧನಿಮಿಷ ಅವನು ಆಕಾಶವನ್ನು ನಿರೀಕ್ಷಿಸಿ ನಿಂತಿದ್ದರೆ, ಮೂರನೇ, ನಾಲ್ಕನೇ, ಐದನೇ …. ನೂರನೇ, ಇನ್ನೂರನೇ ಬಿರುಸು ಬಾಣ ಆಕಾಶದಲ್ಲಿ ಹಾರಿ ಮಾಯವಾಗುವುದನ್ನು ಕಂಡು ಆಶ್ಚರ್ಯದಿಂದ ಮೂಕನಾಗುತ್ತಿದ್ದ.

ಆದರೆ ಕರೀಮನು ಆಕಾಶವನ್ನು ನಿರೀಕ್ಷಿಸಲೂ ಇಲ್ಲ. ಆಶ್ಚರ್ಯದಿಂದ ಮೂಕನಾಗಲೂ ಇಲ್ಲ. ಗುಡ್ಡದ ಕೆಳಗೆ ಸೋಮೇಶ್ವರ ದೇವಸ್ಥಾನದಲ್ಲಿ ಅಂದು ರಾತ್ರಿ ವರ್ಷಾವಧಿಯ ಉತ್ಸವವೆಂದು ಅವನಿಗೆ ಗೊತ್ತೂ ಇರಲಿಲ್ಲ. ಪಾಪ!

ನಾಗಣ್ಣನ ಅಭಿಮಾನ ಭಂಗವಾಯ್ತು. ಹೆಗ್ಗಡೆಯ ತಗ್ಗಿದ ಮುಖವು ಏರಿಹೋಯ್ತು. ಕರೀಮನಿಗೆ ಸೆರೆಮನೆಯ ಗತಿಯಾಯ್ತು.

ಟಿಪ್ಪಣಿ
ಪೇಜಾವರ ಸದಾಶಿವರಾಯರು (1913 – 1988) ಅಕಾಲದಲ್ಲಿ ತೀರಿಕೊಂಡ ಕನ್ನಡದ ಪ್ರತಿಭಾವಂತ ಸಾಹಿತಿ. ಇಂಜಿನಿಯರ್ ಆಗಿದ್ದ ಅವರು ದೂರದ ಇಟಲಿಯಲ್ಲಿ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್ ಅಧ್ಯಯನ ನಡೆಸುತ್ತಿದ್ದಾಗ ಕರುಳು ಬೇನೆಗೆ ಬಲಿಯಾದರು. ಅವರ ‘ನಾಟ್ಯೋತ್ಸವ’ ಕವಿತೆ ಕನ್ನಡದ ಮೊದಲನೆಯ ನವ್ಯ ಕವಿತೆ ಎಂದು ಪರಿಗಣಿಸಲ್ಪಟ್ಟಿದೆ. ಅವರ ಕವಿತೆಗಳನ್ನು ಮರಣೋತ್ತರವಾಗಿ ರಂ. ಶ್ರೀ. ಮುಗಳಿಯವರು ‘ವರುಣ’ ಎಂಬ ಸಂಕಲನದಲ್ಲಿ ಪ್ರಕಟಿಸಿದರು. ಮಂಗಳೂರಿನ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತ, ಹೊಸ ಕವಿತೆ, ಕತೆ, ಪ್ರಬಂಧಗಳ ಪ್ರಕಟಣೆಗೆ ಪ್ರೋತ್ಸಾಹಿಸುತ್ತಿದ್ದ ಸದಾಶಿವ ರಾಯರ ಕತೆಗಳು, ನಾಟಕಗಳು, ಪ್ರಬಂಧಗಳು ಇತ್ತೀಚಿನವರೆಗೆ ಅಲಭ್ಯವಾಗಿದ್ದು ಈಗ ಪ್ರೊ.ಎ.ವಿ. ನಾವಡ ಅವರು ಸಂಪಾದಕತ್ವದ ಸಮಗ್ರ ಸಾಹಿತ್ಯ ಸಂಪುಟ ಲಭ್ಯವಿದೆ.
ಬ್ರಿಟಿಷರು ಮಾಡಿದ ಮುಖ್ಯ ಸಮಾಜ ಸುಧಾರಣೆ ಎಂದರೆ ಶಿಸ್ತಿನ ಪೋಲೀಸ್ ವ್ಯವಸ್ಥೆಯ ಮೂಲಕ ಕಳ್ಳಕಾಕರ ಹಾವಳಿಯನ್ನು ಅಡಗಿಸಿದ್ದು. ಟಿಪ್ಪುವಿನ ಆಳ್ವಿಕೆಯಲ್ಲಿ ಕರಾವಳಿ (ಕಿನಾರಾ) ಜಿಲ್ಲೆ ರಾಜಧಾನಿಗೆ ಬಹುದೂರವಿದ್ದುದರಿಂದ ಕಳ್ಳರ ಸಂತತಿ ಸಾವಿರವಾಗಿತ್ತು. ಬ್ರಿಟಿಷರ ಆಡಳಿತ, ಕೋರ್ಟು ಮತ್ತು ಪೋಲೀಸ್ ಕಛೇರಿಗಳು ಮಂಗಳೂರಿಗೆ ಬಂದ ಕಾರಣ ಜಿಲ್ಲೆಯ ಜನರಿಗೆ ನೆಮ್ಮದಿಯಿಂದ ಬದುಕಲು ಬೇಕಾದ ಏರ್ಪಾಡಾಯಿತು. ಪ್ರಯಾಣ ಕಾಲದಲ್ಲಿ ಮೊದಲಿನಷ್ಟು ಅಭದ್ರತೆ ಇರದಿದ್ದರೂ (ಟಿಪ್ಪುವಿನ ಕಾಲದಲ್ಲಿ ಬೇಸಾಯ ಮಾಡಲಾಗದೆ ಓಡಿಹೋದವರು ದರೋಡೆಗಾರರಾಗಿ ಕಾಲ ಕಳೆಯುತ್ತಿದ್ದರು ಎನ್ನುವುದನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ), ದರೋಡೆಗಾರರ ಹಾವಳಿ ಪೂರ್ತಿ ಕಡಿಮೆಯಾಗಿರದಿದ್ದುದು ಈ ಹಿಂದಿನ ಎಂ. ಎನ್. ಕಾಮತರ ಕತೆಯಲ್ಲಿ ದಾಖಲಾಗಿದ್ದರೆ, ಎರಡು ದಶಕಗಳ ನಂತರ ಕಳ್ಳಕಾಕರು ಪೋಲೀಸ್ ಇಲಾಖೆಗೆ ಇನ್ನಷ್ಟು ಹೆದರುತ್ತಿದ್ದುದರ ದಾಖಲೆ ಈ ಕತೆಯಲ್ಲಿದೆ. ಬ್ರಿಟಿಷ್ ಪೋಲೀಸರು ಕಳ್ಳರನ್ನು ಹಿಡಿಯುವಲ್ಲಿ ತೋರಿಸುತ್ತಿದ್ದ ಚಾಣಾಕ್ಷತೆಯ ಒಂದು ಉದಾಹರಣೆಯಾಗಿಯೂ ಈ ಕತೆಯನ್ನು ಗಮನಿಸಬೇಕು.