ನಿಧಾನವಾಗಿ ಜನ ಆಗ ತಾನೆ ಸ್ನಾನ ಮಾಡಿ, ಒಪ್ಪ ಓರಣ ಮಾಡಿಕೊಂಡು ಬರಲಾರಂಭಿಸಿದ್ದರು. ಭಜನೆಯ ವೇಳೆಯಲ್ಲಿ ಗುಡಿಗೆ ಬರುವಾಗ ಸ್ನಾನ ಮಾಡಿ ಬರುವ ಪದ್ಧತಿಯೂ ಗಮನಾರ್ಹ. ದಿನವಿಡೀ ಹೊಲಗದ್ದೆಗಳಲ್ಲಿ ದುಡಿಯುವ ವರ್ಗ ದುಡಿಮೆ ಮುಗಿಸಿಕೊಂಡು ಮನೆಗೆ ಬಂದು ಸ್ನಾನ ಮಾಡಿ ದೇವಾಲಯಕ್ಕೆ ಬರಲು ಸಂಜೆ ೭.೩೦ ಕಡಿಮೆ ಆಗುವುದಿಲ್ಲ ಅಂತ. ಅದಕ್ಕೇ ಇಡೀ ದೇವಾಲಯ ಗಲಗಲ ಅನ್ನಲು ೮ ಗಂಟೆ ತನಕ ಬೇಕಾಯಿತು. ನನ್ನ ವಾಪಸ್‌ ಊರಿಗೆ ಹೋಗುವ ಆತುರಕ್ಕೆ ಅರ್ಥವಿಲ್ಲ ಅಂತ ತಿಳಿದು ಮುಗಿದಾಗ ಹೊರಡೋದು ಅಂತ ತೀರ್ಮಾನಿಸಿ ವಾಚ್‌ ನೋಡಿಕೊಳ್ಳುವುದನ್ನು ಬಿಟ್ಟು ತೆಪ್ಪಗೆ ಕುಳಿತುಕೊಂಡೆ.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣದಲ್ಲಿ ಹೊಸ ಬರಹ

ಸಂಜೆಯ ಆರೂವರೆಗೆ ಹಳ್ಳಿಯನ್ನು ತಲುಪಿದಾಗ ಇಡೀ ಊರು ಕತ್ತಲಲ್ಲಿ ಮುಳುಗಿತ್ತು. ವಿದ್ಯುತ್‌ ಇರಲಿಲ್ಲ. ದೇವಸ್ಥಾನದ ಬಾಗಿಲು ಹಾಕಿತ್ತು. ಇಲ್ಲಿ ಯಾವತ್ತಾದರೂ ಬಾಗಿಲು ತೆಗೆದಿದ್ದರೋ ಇಲ್ಲವೋ ಅನ್ನುವಂತೆ ಭಣ ಭಣ ಅನ್ನುತ್ತಿತ್ತು. ಅಷ್ಟಕ್ಕೂ ಅದು ಕಲ್ಲಿನ ದೇಗುಲ ಅಲ್ಲ. ಮನೆಯಂತೆ ತೋರುವ ಸಣ್ಣ ದೇವಾಲಯ. ಹಳ್ಳಿಯ ನಡುವೆ ಇದ್ದು ಅದರ ಸುತ್ತಲೂ ಮನೆಗಳು, ಅರಳಿಮರ. ಒಟ್ಟಿನಲ್ಲಿ ಹಾಸನ ಜಿಲ್ಲೆಯ ಒಂದು ಸಾಮಾನ್ಯ ಹಳ್ಳಿಯ ಚಿತ್ರಣ ಅಲ್ಲಿತ್ತು. ಯಾವಾಗ ಬಾಗಿಲು ತೆಗೆಯುತ್ತಾರೆ ಅಂತ ವಿಚಾರಿಸಿದಾಗ ಸುಮಾರು ಏಳುವರೆಯ ಸುಮಾರಿಗೆ ಅಂದರು. ಸರಿ ಮತ್ತೆ ಬಂದರಾಯ್ತು ಅಂತ ನಾವು ಅಲ್ಲೇ ಹಳ್ಳಿ ಸುತ್ತಿಕೊಂಡು ಬರಲು ಹೊರಟೆವು.

ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟದ ಬಳಿ ಇರುವ ಚಂಪಕಧಾಮ ದೇವಾಲಯವನ್ನು ದರ್ಶಿಸಿ ಅಲ್ಲಿಂದ ಕಾಡಿನ ಮೂಲಕ ಸುವರ್ಣಮುಖಿ ಕೊಳಕ್ಕೆ ಹೋಗುವ ದಾರಿಯಲ್ಲಿ ಒಬ್ಬಾಕೆ ಸಣ್ಣ ಗುಡಿಯಲ್ಲಿ ದೇವರನ್ನು ಇಟ್ಟುಕೊಂಡು ಕುಳಿತಿದ್ದಳು. ಅಂದಹಾಗೆ ಇದು ಬೆಂಗಳೂರಿಗರಿಗೆ ಅರ್ಧ ದಿನ ಕಳೆಯಲು ಒಳ್ಳೆಯ ಜಾಗ. ೨ ಕಿ. ಮೀ ದಾರಿ ಬೆಂಗಳೂರಿನ ವಾಹನ ದಟ್ಟಣೆಯ ಬದುಕಿನಿಂದ ಒಳ್ಳೆಯ ಬಿಡುಗಡೆ ನೀಡುತ್ತದೆ. ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕಿನ ಹತ್ತಿರವೇ ಇದೆ. ಈ ಸುತ್ತಲ ಜಾಗದಲ್ಲಿ ಅನೇಕ ಪೂರ್ವೈತಿಹಾಸಿಕ ತುಣುಕುಗಳಿವೆ. ಅಲ್ಲಿ ಒಂದು ೨೫೦೦ ವರ್ಷಗಳ ಲೆಬರಿಂತ್‌ (ಚಕ್ರವ್ಯೂಹ) ಇದೆ. ಅದರ ಮುಂದಿನ ಗುಡಿಯಲ್ಲಿ ಇದ್ದ ಎರಡು ಗ್ರಾಮ್ಯ ದೈವಗಳನ್ನು ಆಕೆ ಕರಿಯಣ್ಣ ಮತ್ತು ಕೆಂಚಣ್ಣ ಎಂದು ಹೇಳಿದಳು. ಅದು ನನ್ನನ್ನು ಹಳೇ ನೆನಪುಗಳಿಗೆ ಕೊಂಡೊಯ್ಯಿತು. ಚಿಕ್ಕ ವಯಸ್ಸಿನಲ್ಲಿ ನೋಡಿದ್ದ ದೈವಗಳು ಅವು. ಅಲ್ಲೆಲ್ಲೋ ಛತ್ತೀಸಗಢದ ಬಸ್ತರಿನ ಬುಡಕಟ್ಟು ಜನರ ದೇವದೇವಿಯರನ್ನು ನೋಡಲು ಹೋಗುವ ನಾನು ನಮ್ಮ ಗ್ರಾಮದೇವತೆಗಳನ್ಯಾಕೆ ನೋಡಲು ಹೋಗಬಾರದು ಅಂತ ಮತ್ತೆ ಆ ನೆನಪುಗಳನ್ನು ಹಸಿರು ಮಾಡಿಕೊಳ್ಳುವ ಬಂದ ಒಂದು ಅವಕಾಶವನ್ನು ಬಿಡದೆ ಹಳ್ಳಿಯ ಭೂತದಗುಡಿಯ ಮುಂದಿದ್ದೆ.

ನಾವು ಹಳ್ಳಿಯನ್ನು ಕತ್ತಲೆಯಲ್ಲೇ ಒಂದು ಸುತ್ತು ಬರುವ ಹೊತ್ತಿಗೆ ವಿದ್ಯುತ್‌ ಬಂದಿತ್ತು. ಸ್ವಲ್ಪ ಹೊತ್ತಿನಲ್ಲೇ ಧ್ವನಿವರ್ಧಕದ ದನಿ ಮೊಳಗಲಾರಂಭಿಸಿತು. ಮತ್ತೆ ಗುಡಿಯ ಬಳಿ ಬಂದಾಗ ಅದಕ್ಕೆ ಜೀವ ಬಂದಿತ್ತು. ಬಾಗಿಲು ತೆಗೆದಿತ್ತು. ಹೂವಿನ ಅಲಂಕಾರ ಶುರು ಮಾಡಿದ್ದರು. ಹಳ್ಳಿಯ ಮಕ್ಕಳೆಲ್ಲಾ ಸುತ್ತಮುತ್ತ ಆಟವಾಡುತ್ತಿದ್ದರು. ಧ್ವನಿವರ್ಧಕ ದೇವರನಾಮಗಳನ್ನು ಬಿತ್ತರಿಸುತ್ತಿತ್ತು. ಒಳಗೆ ಎರಡು ದೇವರು. ಒಂದು ಕೆಂಪಗಿನ ಹಾಗೂ ಮತ್ತೊಂದು ಹಳದಿ ಬಣ್ಣದ ದೇವರು. ದುಂಡಗಿನ ಹರಿಗೆಯ ರೂಪದ ದೇವರು ಮುಖವಾಡದ ಹಾಗೆ ತೋರುತ್ತಿತ್ತು.. ಅದನ್ನು ದೇವಭೂತಾಳೆ ಮರದಿಂದ ಮಾಡುತ್ತಾರಂತೆ. ಈ ದೈವಗಳನ್ನು ಕರಿಯಣ್ಣ, ಕೆಂಚಣ್ಣ ಎಂದು ಕರೆಯುತ್ತಾರೆ. ವಿಷ್ಣುವಿನ ವೈಕುಂಠದ ಕಾವಲು ಕಾಯುವ ಜಯ ವಿಜಯರು ನಮಗೆ ಗೊತ್ತೇ ಗೊತ್ತು. ಆದರೆ ಇಲ್ಲಿ ವಿಷ್ಣು ಭಕ್ತರಾದ ಊರಿನ ಜನರಿಗೆ ಕರಿಯಣ್ಣ ಕೆಂಚಣ್ಣ ವಿಠಲನ ಬಾಗಿಲನ್ನು ಕಾಯುವ ದ್ವಾರಪಾಲಕರು. ಮತ್ತು ಊರ ಕಾಯವ ಕ್ಷೇತ್ರಪಾಲಕರು. ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಗ್ರಾಮದೇವತೆಯೊಂದಿಗೆ ಕ್ಷೇತ್ರಪಾಲಕ ದೇವತೆಗಳ ಕಲ್ಪನೆ ಇರುವುದನ್ನು ಇಲ್ಲಿ ಗಮನಿಸಬಹುದು. ದೇವರನ್ನು ಮುಟ್ಟಲು ಇವರೇ ಸಂವಹಕರು. ಈ ಮುಖವಾಡಗಳ ಮೇಲೆ ದೊಡ್ಡದಾದ ಕಣ್ಣು, ಕೋರೆಹಲ್ಲು, ಚಾಚಿದ ನಾಲಿಗೆ, ಹಣೆಯಲ್ಲಿ ಮೂರು ಉದ್ದ ವೈಷ್ಣವನಾಮಗಳನ್ನು ಕಾಣಬಹುದು. ಅಲ್ಲೊಂದು ದಂಡದಂತಹ ಕೋಲಿತ್ತು. ಅದನ್ನು ಗಂಟೆಗಳಿಂದ ಅಲಂಕರಿಸಿದ್ದರು.

ಊರಲ್ಲಿ ಒಂದೆರಡು ಹೊಯ್ಸಳದ ಕಾಲದ ವಿಠಲನ ದೇವಾಲಯಗಳಿದ್ದು ಅವರ ದ್ವಾರಪಾಲಕರಾದ ಭೂತಗಳಿಗೆ ಮುಖ್ಯ ಗುಡಿ. ಕರಾವಳಿಯವರ ಬೂತಾರಾಧನೆಯಂತೆ ಹಳೆ ಮೈಸೂರಿನ ಕೆಲವು ಹಳ್ಳಿಗಳಲ್ಲಿ ಈ ಭೂತನ ಗುಡಿಗಳಿರುತ್ತವೆ. ಈ ದೇವರಿಗೆ ಮಾದೇರಾಯ ಎಂಬ ಹೆಸರೂ ಕೂಡ ಇದೆ. ಇದು ಮಾಧವರಾಯ ಹೆಸರಿನ ರೂಪಾಂತರವೆನ್ನಬಹುದು.

ನಿಧಾನವಾಗಿ ಜನ ಆಗ ತಾನೆ ಸ್ನಾನ ಮಾಡಿ, ಒಪ್ಪ ಓರಣ ಮಾಡಿಕೊಂಡು ಬರಲಾರಂಭಿಸಿದ್ದರು. ಭಜನೆಯ ವೇಳೆಯಲ್ಲಿ ಗುಡಿಗೆ ಬರುವಾಗ ಸ್ನಾನ ಮಾಡಿ ಬರುವ ಪದ್ಧತಿಯೂ ಗಮನಾರ್ಹ. ಆಗ ಬೆಳಕು, ಧ್ವನಿವರ್ಧಕದಿಂದ ಇಡೀ ಗುಡಿ ಹೊಳೆಯಿತು. ದಿನವಿಡೀ ಹೊಲಗದ್ದೆಗಳಲ್ಲಿ ದುಡಿಯುವ ವರ್ಗ ದುಡಿಮೆ ಮುಗಿಸಿಕೊಂಡು ಮನೆಗೆ ಬಂದು ಸ್ನಾನ ಮಾಡಿ ದೇವಾಲಯಕ್ಕೆ ಬರಲು ಸಂಜೆ ೭.೩೦ ಕಡಿಮೆ ಆಗುವುದಿಲ್ಲ ಅಂತ. ಅದಕ್ಕೇ ಇಡೀ ದೇವಾಲಯ ಗಲಗಲ ಅನ್ನಲು ೮ ಗಂಟೆ ತನಕ ಬೇಕಾಯಿತು. ನನ್ನ ವಾಪಸ್‌ ಊರಿಗೆ ಹೋಗುವ ಆತುರಕ್ಕೆ ಅರ್ಥವಿಲ್ಲ ಅಂತ ತಿಳಿದು ಮುಗಿದಾಗ ಹೊರಡೋದು ಅಂತ ತೀರ್ಮಾನಿಸಿ ವಾಚ್‌ ನೋಡಿಕೊಳ್ಳುವುದನ್ನು ಬಿಟ್ಟು ತೆಪ್ಪಗೆ ಕುಳಿತುಕೊಂಡೆ.

ಪೂಜೆ ಮಾಡುತ್ತಿದ್ದವರು ಊರಿನ ರೈತಾಪಿ ಜನರೇ. ಶರ್ಟ್‌, ಲುಂಗಿ ಧರಿಸಿದ್ದ ಅವರು ಯಾವ ಮಂತ್ರಗಳನ್ನು ಪಠಿಸುತ್ತಿರಲಿಲ್ಲ. ಅದು ತೀರಾ ಸರಳವಾದ ಪೂಜೆ. ಹೂವು, ಹಣ್ಣು, ಕಾಯಿ, ಗಂಧದಕಡ್ಡಿಯ ಪೂಜೆ.

ನಿಧಾನವಾಗಿ ಜನ ಸೇರತೊಡಗಿದ್ದರು. ಅಲ್ಲಿಗೆ ಬಂದ ಒಂದು ಗುಂಪು ಭಜನೆ ಶುರುಹಚ್ಚಿಕೊಂಡರು. ಅವಾರ ಉತ್ಸಾಹ ಅಬ್ಬಾ! ಬೆಳಿಗ್ಗೆ ಎಲ್ಲಾ ಹೊಲದಲ್ಲಿ ದುಡಿದು ಬಂದ ಅವರು ಭಜನೆಯನ್ನು ಕಲಿತುಕೊಂಡು ಅಪರಿಮಿತ ಉತ್ಸಾಹದಿಂದ ಭಜನೆಯಲ್ಲಿ ತೊಡಗಿಕೊಂಡಿದ್ದರು. ರಾಮ, ಕೃಷ್ಣ, ಶಿವ, ವಿಠ್ಠಲ, ನಾರಾಯಣ, ವಿಷ್ಣು, ಅಕ್ಕ ನಾಗಮ್ಮ, ಚೆನ್ನಬಸವಣ್ಣ ಎಲ್ಲರೂ ಬಂದು ಹೋದರು. ಅವರೆಲ್ಲಾ ಪ್ರತಿ ಶನಿವಾರ ಹೀಗೆ ಒಂದೆರಡು ಗಂಟೆಗಳ ಕಾಲ ಭಜನೆ ಮಾಡಿ ಊರಿಗೆ ಪ್ರಸಾದ ಹಂಚಿ ಊರಲ್ಲೊಂದು ಧಾರ್ಮಿಕ, ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸಿದ್ದಾರೆ. ಊರಿನ ಹತ್ತಿರದ ಒಂದು ಮಠದಲ್ಲಿ ಭಜನೆಗಳನ್ನು ಕಲಿತು ಅದನ್ನೊಂದು ದೇವಕಾಯಕವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಊರಲ್ಲಿ ಯಾರ ಮನೆಯಲ್ಲಾದರೂ ವಿಶೇಷವಾದ ಕಾರ್ಯಕ್ರಮ, ಹಬ್ಬ, ಹರಿದಿನಗಳಿದ್ದಾಗ ಭೂತನ ಮೆರವಣಿಗೆ ಮಾಡುತ್ತಾರೆ. ಆಗ ಕರಿಯಣ್ಣ ಮತ್ತು ಕೆಂಚಣ್ಣನನ್ನು ಹೊತ್ತು ಕುಣಿಯುತ್ತಾರೆ. ಕುಣಿಯುತ್ತಾ ಕುಣಿಯುತ್ತಾ ಆವೇಶ ಬರುತ್ತದೆ. ಮನೆಗಳು ಮತ್ತು ಊರಿನ ವಿವಿಧ ಚೌಕಗಳ ಮುಂದೆ ಜನ ಟವೆಲ್‌ ಹಾಸಿ ಭೂತಗಳಿಗೆ ಬಾಳೆಹಣ್ಣುಗಳನ್ನು ನೀಡುತ್ತಾರೆ. ಭೂತ ಹೊತ್ತವರು ಅದರ ಸುತ್ತ ಕುಣಿಯುತ್ತಾರೆ. ಬಹುಶಃ ಹೀಗೆ ದೇವರನ್ನು ಹೊತ್ತು ಕುಣಿಯುವುದು ಭಾರತದಾದ್ಯಂತ ಜಾನಪದ ದೇವಪ್ರಪಂಚದ ಭಾಗವೇನೋ. ಅವಾಗ ಮೈಮೇಲೆ ಗಂಟೆಗಟ್ಟಲೆ ಇರುವ ಭಾರ ಹಾಗೆ ಅವರನ್ನು ಟ್ರಾನ್ಸ್ ಸ್ಥಿತಿಗೆ ಕೊಂಡೊಯ್ಯುತ್ತೋ ಏನೋ! ನಮ್ಮನ್ನು ಹೊತ್ತು ಸಲಹುವ ದೈವವನ್ನು ಸಾಂಕೇತಿಕವಾಗಿಯಾದರೂ ಚಣ ಕಾಲ ಹೊತ್ತು ನಮ್ಮ ಭಾರದ ಋಣವನ್ನು ಇಳಿಸಿಕೊಳ್ಳುವ ಕ್ರಿಯೆ ಇದು.

ಭೂತಗಳ ಪ್ರಪಂಪಚವನ್ನು ಕರ್ನಾಟಕದ ಸಂದಭದಲ್ಲಿ ಕೇವಲ ಕರಾವಳಿ ಜಲ್ಲೆಗಳಾದ ಮಂಗಳೂರು ಮತ್ತು ಉಡುಪಿಗೆ ಸೀಮಿತಮಾಡಲಾಗುತ್ತದೆ. ಭೂತಗಳ ‘ಜಗತ್ತುʼ ಅದಕ್ಕಿಂತ ದೊಡ್ಡದು. ತ್ರಿಮೂರ್ತಿಗಳು, ದುರ್ಗೆ, ಪಾರ್ವತಿ, ಲಕ್ಷ್ಮಿ ಇವರು ದೇವರು. ಅವರ ಸಹಾಯಕರಾದ ಉಳಿದ ದೇವತೆಗಳಿಗೆ ‘ದೈವಗಳುʼ ಮತ್ತು ‘ಭೂತಗಳುʼ ಎಂದು ಹೆಸರು. ಇನ್ನು ಊರನ್ನು ಕಾದು ಮಡಿದವರು, ಪರೋಪಕಾರಿಗಳು, ಅಕಾಲ ಮರಣಕ್ಕೆ ಸಿಲುಕಿ ಅಸು ನೀಗಿದವರು, ಸೈನ್ಯದ ಯೋಧರು ಕೂಡ ಭೂತ-ದೇವಗಣಗಳಲ್ಲೆ ಸೇರುತ್ತಾರೆ. ಉದಾಹರಣೆಗೆ ಸಿಕ್ಕಿಂ ರಾಜ್ಯದಲ್ಲಿ ಭಾರತ ಮತ್ತು ಚೀನಾ ಗಡಿಯ ಸಮೀಪದಲ್ಲಿ ಚೀನಾಸೈನ್ಯದ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಹರಭಜನಸಿಂಗ್‌ ಎಂಬ ಸೈನ್ಯಾಧಿಕಾರಿಗೆ ಅಲ್ಲಿ ಬಾಬಾ ಹರಭಜನ್‌ ಸಿಂಗ್‌ ದೇವಾಲಯವಿದೆ. ಕಾವಲು ಕಾಯುವ ಸೈನಿಕ ತೂಕಡಿಸಿದರೆ ಆತ ಈಗಲೂ ಬಂದು ಎಚ್ಚರಿಸುತ್ತಾನೆ. ಅನೇಕ ವರ್ಷಗಳವರೆಗೆ ಎರಡು ದೇಶಗಳ ನಡುವೆ ಸೈನಿಕ ಮಾತುಕತೆ ನಡೆಯುವಾಗ ಬಾಬಾಗೆ ಒಂದು ‘ಖಾಲಿʼ ಕುರ್ಚಿ ಮೀಸಲಿರುತ್ತಿತ್ತು. ಭಾರತೀಯ ರೈಲ್ವೆಯಲ್ಲಿ ಬುಕ್ಕಿಂಗ್‌ ಆದ ಸೀಟಿಗೆ ಯಾರೂ ಬರದಿದ್ದರೆ ಆ ಸೀಟನ್ನು ಬೃಎಯವರಿಗೆ ಬಿಟ್ಟುಕೊಡಲಾಗುತ್ತದೆ. ಆದರೆ ಈ ಬಾಬಾ ಎಂಬ ಸೈನಿಕ ಭೂತ-ದೈವಕ್ಕೆ ಮೀಸಲಾಗಿ ಮಿಲಿಟರಿಯವರು ಬುಕ್ಕಿಂಗ್‌ ಮಾಡಿರುವ ಸೀಟು ಕೊನೆಯ ನಿಲ್ದಾಣದವರೆಗೂ ಹಾಗೆ ಇರುತ್ತಿತ್ತು. ನೂರೈವತ್ತು ವರ್ಷಗಳ ವಿದೇಶಿ ಆಳ್ವಿಕೆಯಲ್ಲಿ ಭಾರತೀಯ ದೇವತೆಗಳ ಬಗ್ಗೆ ಅಧ್ಯಯನ ನಡೆದಷ್ಟು ಜಾನಪದ ದೈವ-ಭೂತಗಳ ಬಗ್ಗೆ ಅಧ್ಯಯನ ನಡೆದಿಲ್ಲ. ಭೂತ-ಪಿಶಾಚಿಗಳ ಜಗತ್ತಿಗೂ ಈ ಭೂತಪ್ಪಗಳ ಜಗತ್ತಿಗೂ ಬಹಳ ವ್ಯತ್ಯಾಸವಿದೆ. ಭಾರತೀಯ ದೈವಪ್ರಪಂಚ ಸಂಕೀರ್ಣವಾದುದು. ಅದರ ಆಳ ಅಗಲದ ವ್ಯಾಪ್ತಿ ಊಹೆಗೂ ನಿಲುಕದಷ್ಟು ಅಗಾಧ.