ತಾನು ಕಂಡಿದ್ದ ಕನಸುಗಳನ್ನೇ ಬದುಕುತ್ತಿರುವುದಾದರೂ ಏನೋ ಕಳೆದುಕೊಂಡ ಭಾವ ಆಕೆಯನ್ನು ಕಾಡುತ್ತಿದೆ. ತಾನು ಕಳೆದುಕೊಂಡಿದ್ದು ಕತ್ತಲನ್ನೋ, ಕನಸುಗಳನ್ನೋ ಎಂಬ ಗೊಂದಲದಲ್ಲಿದ್ದವಳಿಗೆ ಯಾಕೋ ಗಾಢ ಬೆಳಕಿನಲ್ಲಿ ಕನಸುಗಳು ಹುಟ್ಟಲ್ಲವೇನೋ ಎಂಬ ಗುಮಾನಿ ಶುರುವಾಗಿದೆ. ಈಗ ಆಕೆ ಏಕಾಏಕಿ ಮಹಾನಗರದಲ್ಲಿ ಕನಸನ್ನು ಹುಟ್ಟಿಸುವ ಕತ್ತಲನ್ನು ಹುಡುಕಲು ಶುರು ಮಾಡಿ ಬಿಟ್ಟಿದ್ದಾಳೆ. ವೈಟ್ ಫೀಲ್ಡಿನ ಟೆಕ್ ಪಾರ್ಕುಗಳು, ರಿಂಗ್ ರೋಡಿನ ಸಾಲುದೀಪಗಳು, ಕೋರಮಂಗಲದ ಪಬ್ಬುಗಳು, ಮಾರತಹಳ್ಳಿಯ ಮಾಲುಗಳು, ಎಂ.ಜಿ. ರೋಡಿನ ಬೀದಿಗಳು, ಕಡೆಗೆ ತಾನು ವಾಸಿಸುವ ಅಪಾರ್ಟ್ಮೆಂಟ್ ಗಳಲ್ಲಿ ಕತ್ತಲೆಯನ್ನು ಹುಡುಕಿಕೊಂಡು ಹುಚ್ಚಿಯಂತೆ ಅಲೆದಿದ್ದಾಳೆ.
ಮೇಘಾ ಯಲಿಗಾರ್ ಬರಹ

 

ಅವತ್ತೊಂದಿನ ಮಹಾನಗರದ ಅತಿ ಜನಜಂಗುಳಿ ವಾಸಿಸುವ ಪ್ರದೇಶದಲ್ಲಿ ನಡು ರಾತ್ರಿ, ಆ ಮನೆಯ ಬಾಲ್ಕನಿಯಿಂದ ಇಣುಕಿ ನೋಡಿದಾಗ ಸ್ಮಶಾನಕ್ಕೆ ಇಣುಕಿದಂತಾಗಿತ್ತು. ಆ ಕಿರಿದಾದ ಓಣಿಯ ಢಾಳು ಬೆಳಕಿನ ಬೀದಿದೀಪದ ಅಡಿಯಲ್ಲಿ ಒತ್ತೊತ್ತಾಗಿ ನಿಂತಿದ್ದ ಹತ್ತಾರು ಬೈಕುಗಳು ಸಾಲಾಗಿ ಜೋಡಿಸಿಟ್ಟ ಹೆಣಗಳಂತೆ ಕಂಡವು. ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಅಚ್ಚುಕಟ್ಟಿನ ಸಿಮೆಂಟು ನೆಲ, ಒಂದೇ ಒಂದು ಗಿಡವಿಲ್ಲ, ಗಾಳಿಯಿಲ್ಲ. ನಂಗೆ ಉಸಿರು ಕಟ್ಟಿದಂತಾಯಿತು, ತಲೆ ತಿರುಗಿದ್ದು ಭಯಕ್ಕೋ ಆಗಲೇ ತಲೆಗೇರಿದ್ದ ನಶೆಗೋ ತಿಳಿಯಲಿಲ್ಲ.

ಬಯಸಿದ ಬಾಗಿಲು ತೆರೆಯುವ ಮಾಯಾನಗರಿಗೆ ಊರು ಬಿಟ್ಟು ಬಂದವರಲ್ಲಿ ಅವಳೂ ಒಬ್ಬಳು. ಇಲ್ಲಿ ಹಗಲೂ ಇಲ್ಲ, ರಾತ್ರಿಯೂ ಇಲ್ಲ. ಪಾಳಿಯ ಮೇಲೆ ದುಡಿತ, ಚಲಿಸುವ ಗಾಡಿಗೆ ಬಿಡುವಿಲ್ಲ. ಇಲ್ಲಿ ಕತ್ತಲೆ ಸಿಗುವುದಿಲ್ಲ. ಬೆಳಕಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಎರಡನೇ ಪಾಳಿಯಲ್ಲಿ ದುಡಿದು ನಡುರಾತ್ರಿ ಮನೆಗೆ ಮರಳುತ್ತಿರುವವಳಿಗೆ ಬೆಳಕಿನದೇ ಕಾಟ, ಹಾದಿಗುಂಟ ಸಾಲು ಸಾಲು ಬೀದಿದೀಪ. ಭರ್ರೆಂದು ಓಡುವ ವಾಹನಗಳು, ಜಗಮಗಿಸುವ ಜಾಹಿರಾತು ಬವಳಿ ಬಂದಿದ್ದು ಸುಸ್ತಿಗೋ, ಭಯಕ್ಕೋ ತಿಳಿಯಲಿಲ್ಲ.

ಹಳ್ಳಿಯೂ ಅಲ್ಲದ ಪಟ್ಟಣವೂ ಅಲ್ಲದ ಊರಲ್ಲಿ ರಾತ್ರಿ ಹಗಲು ಲೆಕ್ಕ ತಪ್ಪದಂತೆ ಲಭ್ಯವಾಗುತ್ತಿತ್ತು. ತೀರ ದೂರವಲ್ಲದ ಹಳ್ಳಿಗೆ ಹೋದಾಗ ಆ ಗವ್ವೆನ್ನುವ ಕತ್ತಲೆ, ಭಯ, ವಿಷಾದ, ಸಾವಿನ ವಾಸನೆಯನ್ನು ಸೂಸುತ್ತಿತ್ತು. ದೂರದಲ್ಲೆಲ್ಲೋ ಬೊಗಳುವ ನಾಯಿ, ಜೀರುಂಡೆಯ ಹಾಡು, ಟಾರ್ಚು ಹಿಡಿದು ಗೋರುತ್ತ ಬರುವ ಮುದುಕ, ಆಕಾಶವಾಣಿಯ ವಿಷಾದ ಹೊರಡಿಸುವ ಹಿನ್ನೆಲೆ ಧ್ವನಿ, ಆರರ ಪೋರಿಗೆ ಹೆದರಿಕೆಯಲ್ಲದೆ ಮತ್ತೇನು ಹುಟ್ಟಲು ಸಾಧ್ಯ ? ಆಗ ಅಂಜಿ ಅಜ್ಜಿಯದೋ, ಅತ್ತೆಯದೋ, ಅವ್ವನದೋ ತೊಡೆಯೇರುವವಳಿಗೆ ಯಾವಾಗ ಪಟ್ಟಣಕ್ಕೆ ಓಡಿ ಬಂದೇನೊ ಎನ್ನುವ ತವಕ.

ಬೆಳಿಗ್ಗೆ ಏಳುವುದರಿಂದ ರಾತ್ರಿ ಮಲುಗುವ ತನಕ ಕರಾರುವಕ್ಕಾಗಿ ವೇಳಾಪಟ್ಟಿಯನ್ನು ಹಾಕಿಯೇ ಬದುಕುತ್ತಿದ್ದ ಬೋರ್ಡಿಂಗ್ ಸ್ಕೂಲಿನ ದಿನಗಳು. ರಾತ್ರಿ ಹತ್ತಾಗುತ್ತಿದ್ದಂತೆ ಡಾರ್ಮಿಟರಿಯ ಪುಟ್ಟ ರಾಕ್ಷಸಿಯರ ಗದ್ದಲ ಕೇಳಲಾರದ ವಾರ್ಡನ್ ಲೈಟು ಆಫು ಮಾಡಿಸಿ ಬಾಗಿಲು ಬಂದೋಬಸ್ತ್ ಮಾಡಿಸುತ್ತಿದ್ದಳು. ಬೆಳಿಗ್ಗೆ ಈ ರಾಕ್ಷಸಿಯರನ್ನು ಬಡಿಬಡಿದು ಎಬ್ಬಿಸುವವಳಿಗೆ, ರಾತ್ರಿ ಬಡಿಬಡಿದು ಮಲಗಿಸುವ ಕಾಯಕ ಕರ್ಮ. ದಿನವಿಡೀ ಪಾಸು ಫೇಲಿನ ಲೆಕ್ಕ ಹಾಕುವವಳಿಗೆ ಬದುಕಿನ ಲೆಕ್ಕಾಚಾರದ ಖಾತೆ ಪುಸ್ತಕ ತೆರೆಯುವ ಹೊತ್ತು, ಸಾಲು ಸಾಲು ದೀಪಗಳು ಫಕ್ಕನೆ ಆರಿದ ಮೇಲೆ, ಕಿಟಕಿಯ ಬಲಿಷ್ಠ ಗಾಜು, ಕಬ್ಬಿಣದ ಮೇಶ್ಶನ್ನೂ ಹಾಯ್ದು ಬರುತ್ತಿದ್ದ ಪೆಟ್ರೋಮ್ಯಾಕ್ಸಿನ ಬೊಗಸೆಯಷ್ಟು ಬೆಳಕೆ ಆಸರೆ. ಆಗ ಹುಟ್ಟಿದ್ದ ಕನಸು, ಮಹಾನಗರಕ್ಕೆ ಹೋದರೆ ಎರಡು ತೋಳ್ಚಾಚಿ ಬೆಳಕನ್ನು ಬಳೆದುಕೊಳ್ಳಬಹುದು ಎಂಬ ಆಲೋಚನೆ, ಹದಿನಾರರ ಹುಡುಗಿಯ ಕಣ್ಣಲ್ಲಿ ಭರವಸೆಯ ಕೋಲ್ಮಿಂಚು, ಕನಸುಗಳ ಕಾಮನಬಿಲ್ಲು.

ಇನ್ನೂ ಹನ್ನೆರಡು ತುಂಬುವ ಮೊದಲೇ ಊರು ಬಿಟ್ಟವಳಿಗೆ ಅಲ್ಲಿ ಗಡಿಯಾರದ ಮುಳ್ಳಿನ ಮರ್ಜಿಯನ್ನೂ ಕಾಯದೇ ಕರಾರುವಕ್ಕಾಗಿ ಹಾಜರಿಯಾಗುತ್ತಿದ್ದ ಕತ್ತಲೆಯ ಮೇಲೆ ಅಪಾರ ಅಸಹನೆ. ‘ಬೆಂಗಳೂರಾಗ ಕರೆಂಟು ತೆಗೆಯೋದೇ ಇಲ್ಲಂಥ ! ಯಾವಾಗ್ಲೂ ಟಿವಿ ಓಡ್ತಿರ್ತದಂತ, ಎಂಟರ ಬಸ್ಸಿಗೆ ಕಾಯೋದೆ ಬ್ಯಾಡಂತ, ರಾತ್ರಿ ಇಡೀ ಬಸ್ಸು ಟ್ರೇನು ಇರ್ತಾವಂತ, ಆ ಊರಾಗ ಕತ್ತಲಾನಾ ಆಗಂಗಿಲ್ಲಂತ.’ ಕಟ್ಟಿಗೆ ಕುಂತ ಅಮ್ಮಂದಿರ ಮಾತುಗಳು ಕಿವಿಗೆ ಬಿದ್ದಿದ್ದ ಊರು ಬಿಡುವ ಹಂಬಲ. “ನಾ ಬೆಂಗಳೂರಿಗೆ ಹೋಕ್ಕೆನಿ, ಅಲ್ಲಿ ಕತ್ತಲಾನ ಆಗಂಗಿಲ್ಲಂತ” ಎಂದುಕೊಂಡಿದ್ದು ಎಂತಹ ಮೋಜಿನ ಆಟವಾಗಿದ್ದರೂ, ಗೆಲ್ಲುವುದಕ್ಕೆ ಒಂದೇ ಹೆಜ್ಜೆ ಬಾಕಿ ಇದ್ದರೂ ಆಟಗೂಟ ಜೈ ಹೇಳಲೇಬೇಕು ಎಂಬುದನ್ನು ಹೊರತುಪಡಿಸಿ ಬೇರೆ ಕಾರಣಗಳಿರಲಿಕ್ಕಿಲ್ಲ. ಆದರೆ ಆಕೆ ದೊಡ್ಡವಳಾಗುತ್ತಿದ್ದಂತೆ ಆಕೆಗೆ ತನ್ನೂರನ್ನು, ತನ್ನೂರಿನ ಕತ್ತಲನ್ನು ದ್ವೇಷಿಸಲು ಹೊಸ ಹೊಸ ಕಾರಣಗಳು ದೊರೆಯುತ್ತಲೇ ಹೋದವು. ಬೋರ್ಡಿಂಗ್ ಸ್ಕೂಲಿನಿಂದ ವರ್ಷಕ್ಕೆರಡು ಸರ್ತಿ ಊರಿಗೆ ಬರ್ತಿದ್ದವಳಿಗೆ ಊರು ಆಪ್ತವಾಗದೇ ಮತ್ತಷ್ಟು ಅಪರಿಚಿತವಾಗುತ್ತಲೇ ಹೋಯಿತು.

ಆಕೆಗೆ ಊರಲ್ಲಿ ಸ್ನೇಹಿತರಿಲ್ಲ, ಅಪರೂಪಕ್ಕೆ ಮನೆಗೆ ಬರುವ ಮಗಳಿಗೆ ಅವ್ವನ ಅಚ್ಛಾ, ಅಪ್ಪನ ನಿಗಾ ಹೆಚ್ಚಾಗಿ ಹೊರಗೆ ಕಾಲಿಡದಂತಾಯಿತು. ಬೀದಿಗಳು ಮರೆತು ಹೋದವು, ಮಂದಿಯ ಹೆಸರು ಮರೆತವು. ಸಣ್ಣ ಊರಿನ ಕಟ್ಟುಪಾಡುಗಳು ಬಂಧನದಂತೆ ಭಾಸವಾಯಿತು, ಬಲಿತ ಬುದ್ಧಿ ಸ್ವಾತಂತ್ರ್ಯದ ಹಂಬಲವನ್ನು ಹೆಚ್ಚಿಸುತ್ತಲೇ ಹೋಯಿತು. ‘ಇದ್ದೂರಾಗ ಇದ್ರ ಏನೂ ಮಾಡಲಿಕ್ಕೆ ಆಗಂಗಿಲ್ಲ, ಬೇಕಾದ್ದ ಬಟ್ಟೆ ಹಾಕೋದಿಕ್ಕೆ, ಬೇಕಾಗಿದ್ದನ್ನು ತಿನ್ನೋಕೆ, ಬೇಕಾದಹಾಗೆ ಬದುಕೋಕೆ ಆಗಂಗಿಲ್ಲ’ ಎಂಬ ಕಾರಣಗಳು ಬರೀ ಕಾರಣಗಳಾಗಿರದೇ ಬೆಂಗಳೂರಿನಲ್ಲಿ ಅದೆಲ್ಲವನ್ನೂ ಮಾಡಬಹುದು ಎಂಬ ಕನಸುಗಳಾಗಿ ಮಾರ್ಪಾಡಾದವು.

ರಾತ್ರಿ ಹತ್ತಾಗುತ್ತಿದ್ದಂತೆ ಡಾರ್ಮಿಟರಿಯ ಪುಟ್ಟ ರಾಕ್ಷಸಿಯರ ಗದ್ದಲ ಕೇಳಲಾರದ ವಾರ್ಡನ್ ಲೈಟು ಆಫು ಮಾಡಿಸಿ ಬಾಗಿಲು ಬಂದೋಬಸ್ತ್ ಮಾಡಿಸುತ್ತಿದ್ದಳು. ಬೆಳಿಗ್ಗೆ ಈ ರಾಕ್ಷಸಿಯರನ್ನು ಬಡಿಬಡಿದು ಎಬ್ಬಿಸುವವಳಿಗೆ, ರಾತ್ರಿ ಬಡಿಬಡಿದು ಮಲಗಿಸುವ ಕಾಯಕ ಕರ್ಮ. ದಿನವಿಡೀ ಪಾಸು ಫೇಲಿನ ಲೆಕ್ಕ ಹಾಕುವವಳಿಗೆ ಬದುಕಿನ ಲೆಕ್ಕಾಚಾರದ ಖಾತೆ ಪುಸ್ತಕ ತೆರೆಯುವ ಹೊತ್ತು, ಸಾಲು ಸಾಲು ದೀಪಗಳು ಫಕ್ಕನೆ ಆರಿದ ಮೇಲೆ, ಕಿಟಕಿಯ ಬಲಿಷ್ಠ ಗಾಜು, ಕಬ್ಬಿಣದ ಮೇಶ್ಶನ್ನೂ ಹಾಯ್ದು ಬರುತ್ತಿದ್ದ ಪೆಟ್ರೋಮ್ಯಾಕ್ಸಿನ ಬೊಗಸೆಯಷ್ಟು ಬೆಳಕೆ ಆಸರೆ.

ಆ ಕತ್ತಲೆಯನ್ನು, ಕತ್ತಲು ತುಂಬಿದ ಊರನ್ನು, ಜನರನ್ನು ದ್ವೇಷಿಸುತ್ತಲೇ, ಬರೀ ಊರಲ್ಲ, ಮಂದಿನೂ ಕತ್ತಲದಾಗ ಅದಾರ ಅಂತ ಹಳಿಯುತ್ತಲೇ, ಬೆಳಕನ್ನು ಬದುಕನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿದ್ದವಳು ಈಗ ತನ್ನ ಬೆಂಗಳೂರಿನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ‘ಮೇಲಿನ ಮನಿ ಪಾರಿ ಊರಿಗೆ ಬರಲ್ಲ್ರೀ, ಒಂದು ಹಬ್ಬಿಲ್ಲ ಹುಣ್ಣಿವಿಲ್ಲ, ಮಠದ್ ಜಾತ್ರೀಗೂ ಬರಲಿಲ್ಲ, ಅವರಜ್ಜಾ ಹೋದಾಗ ಬರಲಿಲ್ಲದು ಬೇಬರ್ಸಿ’ ಅಂತ ಊರಿನ ಮಂದಿಯ ಕಡೆಯಿಂದೆಲ್ಲ ಬೈಸಿಕೊಳ್ಳುವಷ್ಟು ಊರನ್ನೂ ಮರೆತೆಬಿಟ್ಟಿದ್ದಾಳೆ. ಆಕೆ ಅಂದುಕೊಂಡಂತೆ ಇಲ್ಲಿ ಕತ್ತಲೆ ಆಗುವುದಿಲ್ಲ, ರಾತ್ರಿ ಇಡೀ ಆಡಬಹುದು ಎಂದುಕೊಂಡಿದ್ದವಳಿಗೆ ಈಗ ರಾತ್ರಿ ಇಡೀ ಗಾಢ ಬೆಳಕಿನಡಿ ಕುಳಿತು ದುಡಿಯುವ ಅನಿವಾರ್ಯತೆ. ಸಿಟಿಯ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಾ ಈ ಬೆಳಕಿಗೆ ಬೆರಗಾಗುತ್ತಿದ್ದವಳು ಈಗ ಸಾಕಷ್ಟು ಬೆಳಕನ್ನು ಬರಸೆಳೆದುಕೊಂಡಾಗಿದೆ. ಆದರೆ, ಹಗಲು ರಾತ್ರಿಯ ಹಂಗನ್ನೂ ಮೀರಿ ವ್ಯಾಪಿಸಿಕೊಂಡ ಬೆಳಕು ಈಗ ಅವಳ ರಾತ್ರಿಗಳನ್ನು, ಕತ್ತಲೆಯನ್ನು, ಭಯವನ್ನು ಮಾತ್ರವಲ್ಲ ಕನಸುಗಳನ್ನೂ ಕಿತ್ತುಕೊಂಡುಬಿಟ್ಟಿದೆ ಎಂಬ ಪ್ರಜ್ಞೆ ಅವಳಲ್ಲಿ ಈಗ ಕಾಡುತ್ತಿದೆ. ಹಳೆಯ ಕನಸುಗಳನ್ನೆಲ್ಲ ನನಸು ಮಾಡಿಕೊಂಡು, ಆ ಕನಸುಗಳನ್ನೇ ಬದುಕುತ್ತಿರುವವಳಿಗೆ, ಇತ್ತೀಚೆಗೆ ಆಕೆಯಲ್ಲಿ ಹೊಸ ಕನಸುಗಳೇ ಹುಟ್ಟುತ್ತಿಲ್ಲ. ಆಕೆಯ ಬದುಕಿನಲ್ಲಿ ಕನಸು ಕಾಣುವುದಕ್ಕೆ ಸಮಯವೇ ಇಲ್ಲ, ಕನಸಿಗೆ ಕಾವು ಕೊಡುವ ಕತ್ತಲೆಯೂ ಆಕೆಗೆ ಸಿಗುತ್ತಿಲ್ಲ ಎಂಬುದನ್ನು ಅರಿತಿದ್ದಾಳೆ.

ತಾನು ಕಂಡಿದ್ದ ಕನಸುಗಳನ್ನೇ ಬದುಕುತ್ತಿರುವುದಾದರೂ ಏನೋ ಕಳೆದುಕೊಂಡ ಭಾವ ಆಕೆಯನ್ನು ಕಾಡುತ್ತಿದೆ. ತಾನು ಕಳೆದುಕೊಂಡಿದ್ದು ಕತ್ತಲನ್ನೋ, ಕನಸುಗಳನ್ನೋ ಎಂಬ ಗೊಂದಲದಲ್ಲಿದ್ದವಳಿಗೆ ಯಾಕೋ ಗಾಢ ಬೆಳಕಿನಲ್ಲಿ ಕನಸುಗಳು ಹುಟ್ಟಲ್ಲವೇನೋ ಎಂಬ ಗುಮಾನಿ ಶುರುವಾಗಿದೆ. ಈಗ ಆಕೆ ಏಕಾಏಕಿ ಮಹಾನಗರದಲ್ಲಿ ಕನಸನ್ನು ಹುಟ್ಟಿಸುವ ಕತ್ತಲನ್ನು ಹುಡುಕಲು ಶುರು ಮಾಡಿ ಬಿಟ್ಟಿದ್ದಾಳೆ. ವೈಟ್ ಫೀಲ್ಡಿನ ಟೆಕ್ ಪಾರ್ಕುಗಳು, ರಿಂಗ್ ರೋಡಿನ ಸಾಲುದೀಪಗಳು, ಕೋರಮಂಗಲದ ಪಬ್ಬುಗಳು, ಮಾರತಹಳ್ಳಿಯ ಮಾಲುಗಳು, ಎಂ.ಜಿ. ರೋಡಿನ ಬೀದಿಗಳು, ಕಡೆಗೆ ತಾನು ವಾಸಿಸುವ ಅಪಾರ್ಟ್ಮೆಂಟ್ ಗಳಲ್ಲಿ ಕತ್ತಲೆಯನ್ನು ಹುಡುಕಿಕೊಂಡು ಹುಚ್ಚಿಯಂತೆ ಅಲೆದಿದ್ದಾಳೆ. ತಾನು ಹುಡುಕುತ್ತಿರುವ ಕತ್ತಲೆಯ ಬಗ್ಗೆ ಆಳವಾಗಿ ಯೋಚಿಸಿದ್ದಾಳೆ. ಆಕೆ ಹುಡುಕುತ್ತಿರುವುದು ಎಂತಹ ಕತ್ತಲೆ ಅಂತ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ.

ಅದು ಗೌವ್ವೆನ್ನುವ ಕತ್ತಲೆಯಲ್ಲ, ಕುಪ್ಪಳಿಯ ಕಾಡಿನ ಗೂಬೆಗತ್ತಲಲ್ಲ, ಪಬ್ಬುಗಳಲ್ಲಿ ಮಬ್ಬೆರಿಸುವ ಕತ್ತಲಲ್ಲ, ಸಿನಿಮಾ ಟಾಕೀಜಿನ ಕೃತಕ ಕತ್ತಲೂ ಅಲ್ಲ…. ತಾನು ಬಾಲ್ಯದಲ್ಲಿ ಮೂರುಸಂಜೆಯ ಹೊತ್ತಿಗೆ ತನ್ನೂರಿನ ಹೆಸರಿಲ್ಲದ ಬೀದಿಯಲ್ಲಿ ಸೈಕಲ್ ತಿರುಗುವಾಗಲಿದ್ದ ಮಬ್ಬುಗತ್ತಲು. ಕಣಗಿಲೆ, ಪಾರಿಜಾತ, ಅದ್ಯಾವ್ದೋ ಘಾಟು ವಾಸನೆಯ ಹಳದಿ ಹೂವುಗಳ ಸಾಲು ಸಾಲು ಗಿಡಗಳನ್ನು ಹೊತ್ತು ನಿಂತಿದ್ದ ಆ ಬೀದಿಯ ಕತ್ತಲು. ತನ್ನ ಊರಿನ ಕುಂಬಾರ ಓಣಿ, ಕಡ್ಲೆಪೇಟೆಯ ಕತ್ತಲು ಎಂದು ತಿಳಿದಾಗ ತಬ್ಬಿಬ್ಬಾಗಿದ್ದಾಳೆ.

“ಕಾವ ನೆರಳಾಗ್ ಯಾಕ್ ಓಡಾಡ್ತಿ.. ಹುಳ ಹುಪ್ಪಡಿ ಇರ್ತಾವಾ ಬಾ ಇತ್ಲಾಗ್”ಅಂತ ಗದರಿಸುವ ಅವ್ವ ಆ ಹೊತ್ತಿನ ಕತ್ತಲನ್ನು ಯಾಕೆ ಕಾವನೆರಳು ಅಂತಿದ್ಲು ಅನ್ನೋದು ಆಕೆಗೀಗ ತಿಳಿದಂತಾಗಿದೆ. ರಾತ್ರಿ ಇಡೀ ಕೆಮ್ಮುತ್ತಾ ನರಳುತ್ತಿದ್ದವಳನ್ನು ನಿದ್ದೆಗಣ್ಣಲ್ಲೇ ಕರೆದೊಯ್ಯುತ್ತಿದ್ದ ಅವ್ವ ಕುಡಿ ಒಲೆಯ ಮೇಲೆ ರೊಟ್ಟಿ ಹಂಚಿಟ್ಟು ಅಪ್ಪನ ಹಳೆಯ ಲುಂಗಿಯ ಬಟ್ಟೆಯಿಂದ ಕೊಡುತ್ತಿದ್ದ ಕಾವಿನಷ್ಟೇ ಈ ಕತ್ತಲೂ ಆಕೆಯ ಎದೆಗೆ, ಕನಸುಗಳಿಗೆ ಕಾವನ್ನು ನೀಡುತ್ತದೆ ಎಂಬುದನ್ನು ಅರಿತಾಕೆ ಆ ಕಾವುನೆರಳಿಗಾಗಿ ಹುಡುಕಾಟ ಮುಂದುವರೆಸಿದ್ದಾಳೆ. ಮತ್ತೆ ಈಗ ತನ್ನೂರಿನ ಬೀದಿಗಳು ಹಾಗೆ ಇದ್ದಾವೆಯೇ, ಆ ಕಾವುನೆರಳು ಹಾಗೆಯೇ ಇದೆಯೇ ಎಂದೆಲ್ಲ ಯೋಚಿಸುತ್ತಾಳೆ. ತನ್ನವರನ್ನು, ತನ್ನ ಊರನ್ನು ತೊರೆದುಬಂದಾಕೆ ಎದೆಯಲ್ಲಿ ತನ್ನ ಊರನ್ನೇ ಹೊತ್ತು ತಿರುಗುತ್ತಿದ್ದಾಳೆ.

ಊರನ್ನು ತಾನು ತೊರೆದಿಲ್ಲ ಊರು ತನ್ನೊಳಗೆ ತಾನಿದ್ದಲ್ಲೇ ಇದೆ ಎಂದೆನಿಸಿ ನಿರಾಳವಾಗುತ್ತಾಳೆ. ಮಹಾನಗರದಲ್ಲಿ ಅಪರೂಪಕ್ಕೆ ಕಾವನೆರಳು ಸಿಕ್ಕಾಗಲೊಮ್ಮೊಮ್ಮೆ ಆಕೆಯ ಕನಸುಗಳಿಗೆ ಕಾವು ಸಿಗುತ್ತದೆ. ಮತ್ತೊಂದು ಕನಸು ಹುಟ್ಟುತ್ತದೆ. ಅದು ಮತ್ತೆ ಊರಿಗೆ ಮರಳುವ ಕನಸಾ ? ಆಕೆಗೂ ತಿಳಿದಿಲ್ಲ.