ಬೆಳದಿಂಗಳ ನಕ್ಷೆ
ಬಿರುಕು ಬಿಟ್ಟ ಗೋಡೆಯ ಮೌನದಲಿ
ಅಜ್ಞಾತ ಹಕ್ಕಿಯ ಗೂಡೊಂದು
ಮುಗಿಲ ಕೂಗುತಿತ್ತು
ಅಂಗಳ ತುಂಬಿದ ನೀರಿನ ದಡದಲಿ
ಮರಿಗಳ ಹಿಂಡು
ಕಣ್ಣಾಮುಚ್ಚಾಲೆ ಆಡುತ
ಪೇಪರ್ ಬೋಟಿನ ಕಣ್ಣೊಳಗೆ
ಆತ್ಮ ಸಂಗಾತವ ಕಳಕೊಂಡು
ಅಲೆಗಳ ಲೆಕ್ಕದಲಿ ಮೈಮರೆತವು
ಅವಳು ಬಿಡುಗಣ್ಣಲಿ
ಪಾದಕ್ಕೆರಗಿದ ಗಾಯದ ಸಲಾಕೆ ಜಾಡಿಸುತ್ತ
ಗೋಗರಿವ ಮುಳ್ಳುಗಳ ಹೃದಯದಲಿ
ಕಸಿ ತುಂಬೊ ರಸದ ಎಸಳಾದಳು
ಇಬ್ಬನಿಯ ಕಣ್ಣಿನ
ಹೂವಿನ ನೋಟದ ಹಾಗೆ!
ದಿಕ್ಕಿರದ ಬಾಗಿಲುಗಳ ಬಳ್ಳಿಗಳಲಿ
ಕರುಳಿನ ಪಾತ್ರೆಯಾಗಿ ಅಲೆವಳು
ಗೋಡೆಗಳ ನಡುವೆ
ಬೆಸುಗೆಯ ಚಿತ್ತ
ಬೆನ್ನಾಗ ಬಿಗಿದುಕೊಂಡು
ಹರಿವ ತೊರೆಯಲಿ ತೇಲಿ ಬರೋ ನಾವೆಯಾದಳು
ಉರಿವ ಒಲೆಗಳ ಹೊಕ್ಕಳಲಿ
ನಕ್ಷತ್ರಗಳ ನೆಲಕ್ಕಿಳಿಸಿ
ಅವನ ಕಣ್ಣೊಳಗೆ
ಸದಾ ಹುಣ್ಣಿಮೆಯ ಚಂದಿರ ಚಿತ್ರಿಸಿ
ಬೆಳದಿಂಗಳ ನಕ್ಷೆಯಾದಳು ಅಂಗಳದ ಚಿಗುರಿಗೆ
ಹೆಗಲ ಗುರುತಾಗಿದ್ದ ಜೋಪಡಿ
ಹುಲ್ಲಿನೆಳೆಗಳಲಿ
ಬಿದಿರ ಕೊಂಬಿಗೆ
ಆತುಗೊಂಡ ಜೋಪಡಿಯೊಳಗ
ಚುಕ್ಕಿಗಳ ದಿಂಬಾಗಿಸಿದ
ಹೊಂಗೆಯ ನೆರಳಿನ ಗುರುತುಗಳು
ಸಗಣಿಯಿಂದ ಸಾರಿಸಿದ ಪಡಸಾಲಿ
ಮಧುವಣಗಿತ್ತಿಯಂತೆ
ವಳ್ಳು ಬೀಸುಕಲ್ಲುಗಳ ಹೊಕ್ಕಳಲಿ
ದಕ್ಕಿಸಿಕೊಂಡ ಅವಳು
ನಡುಮನೆಯ ಮೈದಾನದಾಗ
ನಡುಗಂಬದ ನೆಲೆ
ಬಿರುಕ ಕಿಂಡಿಗಳಲಿ
ಮುರಿದ ಟೊಂಗೆಗಳೆಲ್ಲಾ ಬೆಸೆದು
ಗುಡಿಸಲ ಕಣ್ಣಾಗಿ
ಚಂದಿರನ ಜೋಗುಳ ಕಟ್ಯಾವು
ಗಾಯದ ಬೆನ್ನು ನಿದ್ರಿಸಲು
ಮಳೆಯ ರಭಸದಲಿ
ಕೆರೆಯಂತಾಗುವ ಜೋಪಡಿಯೊಳಗ
ಎಳೆಯ ರೆಕ್ಕೆಗಳನು
ಪಕ್ಕೆಲುಬಲಿ ಅವಿತುಕೊಂಡು
ಬೆಚ್ಚನೆಯ ಬರವಸೆ ತುಂಬ್ಯಾಳೊ ನಾಳೆಗಾಗಿ
ಗಿಜಿಗುಡುವ ಕೆಸರು ರಸ್ತೆಯ ನಡುವೆ
ಗೋಣಿಚೀಲದ ಸೆಲೆಯಾಗಿ
ನೆತ್ತಿಯ ಮೇಲೆ
ಮುಳ್ಳಿನ ಹೊರೆ ಹೊತ್ತಳು ಕರುಳು ಬಳ್ಳಿಗಾಗಿ
ಈ ಜೋಪಡಿಯ ಪ್ರತಿ ಗರಿಗಳಲು
ಅವಳ ಬೆವರಿನ ಬಡಿತಗಳು
ಕಾಲದ ಸೆಳೆತ ದೂಕ್ಯಾವು
ಕೌದಿಯ ನೆರಿಗೆಳಲಿ