ಇದಿನಬ್ಬ ಸ್ವಲ್ಪ ದೂರವೇ ನಿಂತ. ಆಗಂತುಕ ಗಾಡಿಯೆಡೆಗೆ ಸಾಗಿದ. ಗಾಡಿ ಚಾಲಕ ಮತ್ತು ಆಗಂತುಕ ಮಾತನಾಡಿದರು. ಇದಿನಬ್ಬನಿಗೆ ಗಾಡಿಯೇರಲು ಆಗಂತುಕ ಹೇಳಿದ. ಎತ್ತಿನ ಗಾಡಿ ಆಗಂತುಕ ಸೂಚಿಸಿದ ಒಂದು ದಾರಿ ಹಿಡಿದು ‘ಗಡ- ಗಡ’ ಸದ್ದನ್ನು ಮಾಡುತ್ತಾ ಮುಂದೆ ಸಾಗಿತು. ಮೈಲುಗಳು ಮೈಲುಗಳನ್ನು ದಾಟಿ ಆ ಧೂಳಿನಿಂದಾವೃತಗೊಂಡ ಮಣ್ಣಿನ ರಸ್ತೆಯಲ್ಲಿ ಕುಳಿತಿದ್ದವರನ್ನೆಲ್ಲಾ ಅಲ್ಲಾಡಿಸಿ ಎಸೆದೆಸೆದು ಗಾಡಿ ಬಹಳಷ್ಟು ದೂರ ಸಾಗಿತು.
ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಿರು ಕಾದಂಬರಿಯ ನಾಲ್ಕನೇ ಕಂತು.

 

“ಓಯ್ ಹುಡುಗಾ.. ನೀನಿನ್ನು ನನ್ನ ಗುಲಾಮ, ನನ್ನ ಆಜ್ಞೆಗಳನ್ನು ಪಾಲಿಸಬೇಕಾದ ಕರ್ತವ್ಯ ನಿನ್ನ ಮೇಲಿದೆ ” ಮೊದಲ ಸಂಹಿತೆ ಆಗಂತುಕನಿಂದ ಜಾರಿಯಾಯ್ತು. ಅದೇ ಮೊದಲ ಬಾರಿಗೆ ಇದಿನಬ್ಬನಿಗೆ ತನ್ನ ಹೀನಾಯ ಸ್ಥಿತಿಯ ಅರಿವಾಗಿದ್ದು. ಅವನು ಗುಲಾಮಗಿರಿಯ ಭಯಾನಕತೆಯ ಬಗ್ಗೆ ಮನೆಯಲ್ಲಿ ಹಿರಿಯರು ಹೇಳಿದ್ದನ್ನು ಕೇಳಿಸಿಕೊಂಡಿದ್ದ. ‘ನನ್ನನ್ನು ಒಬ್ಬರಿಗೊಬ್ಬರು ಮಾರುತ್ತಿದ್ದಾರೆ ಹಾಗೂ ನಾನೂ ಯಾರಿಗೋ ಬೇಕಾಗಿ ದುಡಿಯಬೇಕಾದ ಅನಿವಾರ್ಯತೆ ಇದೆ, ಇನ್ನು ಗುಲಾಮಗಿರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ’ ಎಂಬುವುದನ್ನು ನೆನೆಸಿಕೊಳ್ಳುತ್ತಾ, ಭಾರವಾದ ಹೃದಯದೊಂದಿಗೆ, ಆಗಂತುಕನ ನೆರಳ ಹಿಂದೆ ಹೆಜ್ಜೆ ಹಾಕತೊಡಗಿದ. ಮತ್ತೆ ಗೊತ್ತುಗುರಿಯಿಲ್ಲದ ಪಯಣ ಇದಿನಬ್ಬನದ್ದು. ಇಬ್ಬರೂ ಮುಂದೆ ನಡೆದರು.

ದೂರದಲ್ಲೇ “ಹೋಯ್… ಹೋಯ್.. ಹೊಡ್ತಾ” ಎತ್ತು ಹೊಡೆಯುವ ಸದ್ದು ಕೇಳಿ ಬಂತು. ತಿರುವಿನಲ್ಲೇ ದೂಳೆದ್ದಿತು. ಮರುಕ್ಷಣ ಎತ್ತುಗಳೆರಡರ ತಲೆ ಕಂಡಿತು. ಸ್ವಲ್ಪ ಹೊತ್ತಿನಲ್ಲೇ ಟಕ ಟಕ ಸದ್ದಿನೊಂದಿಗೆ ಎತ್ತಿನ ಗಾಡಿಯೊಂದು ಬಂತು. ಆಗಂತುಕ ಎತ್ತಿನ ಗಾಡಿಗೆ ಕೈ ಬೀಸಿದ.

ಗಾಡಿ ನಿಂತಿತು.

ಇದಿನಬ್ಬ ಸ್ವಲ್ಪ ದೂರವೇ ನಿಂತ. ಆಗಂತುಕ ಗಾಡಿಯೆಡೆಗೆ ಸಾಗಿದ. ಗಾಡಿ ಚಾಲಕ ಮತ್ತು ಆಗಂತುಕ ಮಾತನಾಡಿದರು. ಇದಿನಬ್ಬನಿಗೆ ಗಾಡಿಯೇರಲು ಆಗಂತುಕ ಹೇಳಿದ. ಎತ್ತಿನ ಗಾಡಿ ಆಗಂತುಕ ಸೂಚಿಸಿದ ಒಂದು ದಾರಿ ಹಿಡಿದು ‘ಗಡ- ಗಡ’ ಸದ್ದನ್ನು ಮಾಡುತ್ತಾ ಮುಂದೆ ಸಾಗಿತು. ಮೈಲುಗಳು ಮೈಲುಗಳನ್ನು ದಾಟಿ ಆ ಧೂಳಿನಿಂದಾವೃತಗೊಂಡ ಮಣ್ಣಿನ ರಸ್ತೆಯಲ್ಲಿ ಕುಳಿತಿದ್ದವರನ್ನೆಲ್ಲಾ ಅಲ್ಲಾಡಿಸಿ ಎಸೆದೆಸೆದು ಗಾಡಿ ಬಹಳಷ್ಟು ದೂರ ಸಾಗಿತು.

*****

ದಿಣ್ಣೆಗಳು ಏರುವ ಹೊತ್ತು ಮೆಲ್ಲಗೆ ಚಲಿಸುತ್ತಿದ್ದ ಗಾಡಿ ಕುಳಿತವರನ್ನೆಲ್ಲಾ ಗಟ್ಟಿಯಾಗಿ ಕುಲುಕಿದಂತೆ ಭಾಸವಾಗುತ್ತಿತ್ತು. ಕುಳಿತವರ ದೇಹ ಗಾಡಿಯ ಕುಲುಕಾಟಕ್ಕೆ ಹೊಂದಿಕೊಳ್ಳುವಂತೆ ಸುಮಾರು ಹೊತ್ತು ಹಾಗೆಯೇ ಓಡುತ್ತಿತ್ತು. ನಡುನಡುವೆ ತಿರುವುಗಳಲ್ಲಿ ಕಲ್ಲು, ಮರದ ಬೇರುಗಳೇನಾದರೂ ಸಿಕ್ಕರೆ ಒಮ್ಮೆಲೆ ದಡಕ್ಕನೆ ಎಡದಲ್ಲಿದ್ದವರೆನ್ನೆಲ್ಲ ಬಲಕ್ಕೆಸೆದು ಪ್ರಯಾಣಿಕರ ದೇಹವನ್ನು ಸಂಪೂರ್ಣ ನಜ್ಜುಗುಜ್ಜು ಮಾಡುತ್ತಿತ್ತು. ಗಾಡಿ ದಾರಿ ಕ್ರಮಿಸುತ್ತಲೇ ಇತ್ತು. “ಹೋಯ್- ಹೋಡ್ತಾ” ಎಂದು ಎತ್ತುಗಳನ್ನು ಸರಿದಾರಿಗೆ ತರಲು ಗಾಡಿಯವನು ಮಾಡುತ್ತಿದ್ದ ಶಬ್ದ ಝೇಂಕಾರಗಳನ್ನು ಕೇಳಿ ಕೇಳಿ ಕುಳಿತವರಿಗೆಲ್ಲಾ ರೇಜಿಗೆ ಹುಟ್ಟಿತ್ತು. ಸಂಜೆಯಾಗುತ್ತಲಿದ್ದುದರಿಂದ ಗಾಡಿ ಓಡಿಸುವವನಿಗೆ ಸುಸ್ತಾಗುತ್ತಿತ್ತು. ಹೋರಿಗಳ ವೇಗದಲ್ಲೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿತ್ತು. ದಾರಿಮಧ್ಯೆ ಅಪರೂಪಕ್ಕೆ ಕಾಣಸಿಗುವ ಹಚ್ಚ ಹಸಿರು ಭತ್ತದ ಗದ್ದೆಗಳೆದುರಾದಾಗ ಇದಿನಬ್ಬನ ಅಂತರಾಳ ಅಳುತ್ತಿತ್ತು. “ತಾಯಿ ತಂಗಿಯಂದಿರು ಹೇಗಿರಬಹುದು, ಅವರು ನನ್ನ ಮರೆತಿರಬಹುದೇ, ನನ್ನನ್ನು ದೊಡ್ಡಮ್ಮ ಹುಡುಕುತ್ತಿರಬಹುದೇ” ಮೆಲ್ಲನೆ ಸುಳಿದ ಕಣ್ಣ ಹನಿಗಳನ್ನು ಉಟ್ಟಿದ್ದ ಪಂಚೆಯಲ್ಲಿ ಆಗಾಗ ಒರೆಸಿಕೊಳ್ಳುತ್ತಲೇ ಮನಸ್ಸಿನ ಭಾರ ಏರಿಳಿಯುತ್ತಿತ್ತು. ಚಳಿಗಾಲವಾದರೂ, ಉರಿ ಬಿಸಿಲಿಗೇನೂ ಕೊರತೆ ಇರಲಿಲ್ಲ. ಮರಗಳಾವೃತವಾದ ದಾರಿಯಲ್ಲಿ ನೆರಳು ಸ್ವಲ್ಪ ಮಟ್ಟಿಗೆ ಸಮಾಧಾನ ನೀಡುತ್ತಿತ್ತು. ನೆರಳು ಬಿಸಿಲಿನಾಟ ಅವ್ಯಾಹತವಾಗಿತ್ತು. ಉರಿ ಬಿಸಿಲ ಝಳಕ್ಕೆ ಅಂಗಿಯಿಲ್ಲದ ದೇಹ ಕೆಂಬಣ್ಣಕ್ಕೆ ತಿರುಗಿದೆ, ಯಜಮಾನನಿಗೆ ಮಾತ್ರ ಬಿಸಿಲು ಬೀಳದಿರಲೆಂದು ಗಾಡಿಯ ಮೇಲ್ಭಾಗಕ್ಕೆ ಉದ್ದದ ವಸ್ತ್ರವೊಂದನ್ನು ಅಡ್ಡಲಾಗಿ ಬಿಗಿಯಾಲಾಗಿದೆ. ಆಗೊಮ್ಮೆ ಈಗೊಮ್ಮೆ ಅದರಲ್ಲಿ ಅಡಗಿ ಬಿಸಿಲಿನಿಂದ ತಲೆ ತಪ್ಪಿಸಿಕೊಳ್ಳುತ್ತಿದ್ದ ಇದಿನಬ್ಬನಿಗೆ ಸಾಕುಸಾಕಾಗಿತ್ತು. ಸಂಜೆಯಾಗುತ್ತಲೇ ಅವರು ಮಂಗಳೂರು ತಲುಪಿದ್ದರು.

******

ಕತೆ ಹೇಳುತ್ತಿದ್ದ ಅಜ್ಜ ಒಂದು ಸಲ ಕೆಮ್ಮಿ ಗಂಟಲು ಸರಿ ಮಾಡಿಕೊಂಡರು. ಕೆಮ್ಮು ಮಾತಿಗೆ ತಡೆಯಾಗುತ್ತದೆ ಎಂದು ಅನಿಸಿದಾಗ ಎದೆ ಹಿಡಿದು ಎರಡು ಬಾರಿ ಜೋರಾಗಿ ಕೆಮ್ಮಿ ಹೊರಗೆ ಹೋಗಿ ಉಗುಳಿ ಬಂದರು. ಈ ಹೊತ್ತಿಗೆ ನಾವೆಲ್ಲ ಕಿವಿ ಕಣ್ಣು ಉಜ್ಜಿ ಹುರುಪಿನಿಂದ ಕುಳಿತುಕೊಂಡಿದ್ದೆವು. ಅಜ್ಜ ಮತ್ತೆ ಕತೆ ಹೇಳಲು ಶುರು ಹಚ್ಚಿದರು.

ಅದು ಪೆರಾರ್ದೆ (ಸೌರಮಾನ ಪದ್ಧತಿಯ ವೃಷಭ ಮಾಸ) ತಿಂಗಳ ಕೊನೆಯ ದಿನಗಳು. ಸಮುದ್ರ ಸಮೀಪವಾದ್ದರಿಂದ ತೀವ್ರವಾಗಿ ಚಳಿಗಾಳಿ ಬೀಸುತ್ತಿತ್ತು. ಹೊದ್ದುಕೊಳ್ಳಲು ಅಂಗಿ, ಕಂಬಳಿ ಇರಲಿ, ಕನಿಷ್ಠ ಒಂದು ತುಂಡು ಬಟ್ಟೆ ಇಲ್ಲ. ಅಂಗಿ ಧರಿಸುವುದೆಂದರೆ ಸಿರಿತನದ ಸಂಕೇತ. ಸಿರಿವಂತರಲ್ಲದ ಉಳಿದವರಿಗೆ ಕೇವಲ ಪಂಚೆ ಮಾತ್ರ ಉಡಬಹುದು. ಅದನ್ನೂ ನೆಟ್ಟಗೆ ಉಡುವಂತಿಲ್ಲ, ನಡುವಿಗೆ ಸಿಕ್ಕಿಸಿ ಕೌಪೀನದಂತೆ ಉಡಬಹುದಾಗಿತ್ತು. ಅಂದಿನ ಮಂಗಳೂರು ಈಗಿನಂತಿರಲಿಲ್ಲ. ಪೇಟೆಯೆಂದರೆ ಹಳ್ಳಿಗಿಂತ ಸ್ವಲ್ಪ ಜನವಾಸ ಮತ್ತು ಅಂಗಡಿಗಳು ಜಾಸ್ತಿ ಎಂದಷ್ಟೆ. ಹತ್ತಿರ ಹತ್ತಿರ ಮನೆಗಳು, ಮನೆಗಳಿಗಿಂತಲೂ ಅಧಿಕವಿರುವ ತೆಂಗಿನ ಮರಗಳು. ಸಂಜೆಯಾದರೆ ಅಲ್ಲಲ್ಲಿ ಚಿಮಿಣಿ, ದೊಂದಿಗಳನ್ನು ಇಟ್ಟು ವ್ಯಾಪಾರ ನಡೆಸುವ ವ್ಯಾಪಾರಿಗಳು. ಗಾಡಿ ಸ್ವಲ್ಪಮುಂದೆ ಹೋಗುತ್ತಿದ್ದಂತೆ ರಾಶಿರಾಶಿ ಮೀನು ಹಾಕಿ ಕರೆದು ಕೂಗಿ ಗಿರಾಕಿ ಗಿಟ್ಟಿಸುತ್ತಿರುವ ವ್ಯಾಪಾರಿಗಳು. ರಸ್ತೆ ಬದಿಗಳು ತುಂಬಾ ಗಿಲಿಗಿಚ್ಚಿಗಳೇ ತಂಬಿ ಹೋಗಿದ್ದವು. ಸಂಜೆ ಆಕಾಶದ ಸುತ್ತೆಲ್ಲಾ ಹಳದಿ ಹರಡಿ ಸೂರ್ಯನನ್ನು ಬೀಳ್ಕೊಡಲು ತಯ್ಯಾರಾಗಿತ್ತು. ಇದಿನಬ್ಬನನ್ನು ಹೊತ್ತ ಗಾಡಿ ಗಕ್ಕನೆ ನಿಂತಿತು.

“ಇಲ್ಲಿ ಸಾಕು” ಎಂದು ಧನಿ ಎರಡು ನಾಣ್ಯಗಳನ್ನು ಗಾಡಿಯವನಿಗೆ ತೋರಿಸಿದ.

“ಇನ್ನೆರಡು ದಿನ ಇಲ್ಲೇ ಇರುತ್ತೇನೆ ದನಿ, ಗಾಡಿ ಬೇಕಿದ್ದರೆ ಕರೆಯಿರಿ” ಎಂದು ಗಾಡಿಯವ ಹೊರಟ. ಸಂಜೆಯ ವ್ಯಾಪಾರಿಗಳ ಗಿಜಿಗಿಜಿಗಳ ನಡುವೆಯೂ “ಹೋಡ್ತಾ, ಹೋಯ್” ಸದ್ದು ಗಾಡಿ ಹೋದ ದಿಕ್ಕಿನಿಂದ ಕೇಳಿಸುತ್ತಿತ್ತು.

“ಹ್ಞೂಂ ನಡಿ”

ಧನಿಕ ಇದಿನಬ್ಬನನ್ನು ಹಿಂಬಾಲಿಸಲು ಆದೇಶಿಸಿದ. ಸ್ವಲ್ಪ ದೂರ ನಡೆವಷ್ಟರಲ್ಲಿ ಹೆಂಚು ಹಾಕಿದ ಸಾಲುಸಾಲು ಮನೆಗಳು. ಒಂದೇ ನೋಟಕ್ಕೆ ಬಾಡಿಗೆ ಛತ್ರಗಳಂತೆ ಕಾಣುತ್ತಿದ್ದವು. ಧನಿಕ ಸಂಜ್ಞಾಪೂರ್ವಕ ಇದಿನಬ್ಬನನ್ನು ಅಲ್ಲೇ ನಿಲ್ಲಲು ಹೇಳಿ ಮುಂದೆ ಹೊರಟ. ಯಾರೋ ಒಬ್ಬನಲ್ಲಿ ಸ್ವಲ್ಪ ಹೊತ್ತು ಮಾತನಾಡಿ, ಮನೆಯೊಂದನ್ನು ಆಯ್ಕೆ ಮಾಡಿದವರಂತೆ ಅದರ ಹತ್ತಿರ ಹೊರಟರು. ಆತ ಬಾಗಿಲು ತೆರೆದು ಕೊಡುತ್ತಿದ್ದಂತೆ, ಧನಿಕ ಕೈಸನ್ನೆ ಮೂಲಕ ಸಾಮಾನುಗಳೊಂದಿಗೆ ಅತ್ತ ಹೊತ್ತು ತರಬೇಕೆಂದು ಹೇಳಿದ. ಮಣಭಾರದ ಸರಂಜಾಮುಗಳೆನ್ನೆಲ್ಲಾ ಹೊತ್ತು ಹುಡುಗ ಯದ್ವಾತದ್ವಾ ಹೆಜ್ಜೆ ಹಾಕುತ್ತಾ ಕೊಠಡಿ ಗೊತ್ತು ಮಾಡಿದಲ್ಲಿಗೆ ಬಂದ. ಹಸಿವಿನಿಂದ ಹೊಟ್ಟೆ ಚುರುಗುಟ್ಟುತಿತ್ತು. ಧನಿಕ ತನ್ನ ಸಾಮಾನು ಚೀಲವನ್ನುತೆರೆದು ಅವಲಕ್ಕಿ ಮತ್ತು ಬೆಲ್ಲದ ಕಟ್ಟನ್ನು ಕೈಗಿಟ್ಟು ಪಾಕ ಮಾಡಲು ಹೇಳಿದ. ಅವಲಕ್ಕಿ ಕಾಣುತ್ತಿದ್ದಂತೆ ಇದಿನಬ್ಬನಿಗೆ ಹೋದ ಜೀವ ಮರಳಿ ಬಂದಂತಾಗಿತ್ತು. ಬೆಲ್ಲದ ಜೊತೆ ಅವಲಕ್ಕಿ ಕಲಸಿ ಪಾತ್ರೆಯನ್ನು ಧನಿಕನ ಮುಂದಿರಿಸಿದಾಗ ಅದರ ಮುಕ್ಕಾಲು ಭಾಗವನ್ನೂ ತಿಂದು ಮುಗಿಸಿ, ಇದಿನಬ್ಬನತ್ತ ನೋಡಿದ. ಅವನು ಪಾತ್ರೆ ಬಿಟ್ಟು ಏಳುವ ಪುರ್ಸೊತ್ತೂ ಇದಿನಬ್ಬನಿಗಿರಲಿಲ್ಲ. ಗಬಗಬನೆ ತಿಂದು ಮುಗಿಸಿಬಿಟ್ಟ. ಹಸಿವು ಹತ್ತಿಕ್ಕಲು ಹೊಟ್ಟೆ ತುಂಬಾ ನೀರನ್ನು ಕುಡಿದ. ಹೋಟೆಲಲ್ಲಿ ಕೆಲವೊಮ್ಮೆ ತಂಗಳನ್ನ ಅಥವಾ ಬರೀ ನೀರು ಕುಡಿದೇ ಹಸಿವು ನೀಗಿಸಿಕೊಳ್ಳಬೇಕಾಗಿತ್ತು. ಇಲ್ಲಿ ಸಿಕ್ಕಿದ ಸಣ್ಣಪಾಲು, ತನ್ನ ಹಸಿವಿನ ಕಾಲಂಶವೂ ತಣಿಸಿದಂತೆ ಇದಿನಬ್ಬನಿಗೆ ಅನಿಸಲೇ ಇಲ್ಲ.

‘ಹೋಗಿ ಹೊರಗೆ ಬಿದ್ಕೊಳ್ಳೋ” ಧನಿಕನ ಆಜ್ಞೆ ಬಂತು. ಇದಿನಬ್ಬ ಇದನ್ನೇ ನಿರೀಕ್ಷಿಸಿದ್ದ. ಅಲ್ಲೇ ನೆಲಕ್ಕೆ ಹಾಸಿದ್ದ ಗೋಣಿ ಚೀಲವನ್ನು ಹೊದ್ದು ಇದಿನಬ್ಬ ನಿದ್ರೆ ಮಾಡುವ ವಿಫಲಯತ್ನ ನಡೆಸತೊಡಗಿದ್ದ. ಸೊಳ್ಳೆಗಳು ಮುತ್ತಿಕ್ಕಿ ಕಚ್ಚತೊಡಗಿದ್ದವು. “ಟಪ್, ಟಪ್” ಎಂದು ಅರ್ಧ ರಾತ್ರಿಯವರೆಗೂ ಚಳಿಗೆ ನಡುಗುತ್ತಾ ಸೊಳ್ಳೆ ಕೊಲ್ಲುವುದಕ್ಕೆ ಶುರುವಿಟ್ಟುಕೊಂಡಿದ್ದ. ಕೈಗಳು ಹೊಡೆದು ಬಡಿದೂ ಸೋತು ಹೋಗಿದ್ದವು. ಸಾಲದ್ದಕ್ಕೆ ತಿಗಣೆಗಳು ಕಚ್ಚಿ ರಕ್ತ ಹೀರುತ್ತಿದ್ದವು. ಕೀಚ್ ಕೀಚ್ ಸದ್ದು ಮಾಡುತ್ತ ಒಂದಿಷ್ಟು ಇಲಿಗಳೂ ಅವನ ಸುತ್ತ ಹರಿದಾಡುತ್ತಿದ್ದವು. ಇದಿನಬ್ಬ ಎದ್ದು ಕುಳಿತ. ಬೆಳಕು ಹರಿಯುವುದನ್ನೇ ಸುಮ್ಮನೆ ಕಾಯತೊಡಗಿದ. ಇಷ್ಟರವರೆಗೆ ತನ್ನ ಬದುಕಿನುದ್ದಕ್ಕೂ ನಡೆದ ಅಪರೂಪದ ಬದಲಾವಣೆಯನ್ನು ಮೆಲುಕು ಹಾಕುತ್ತಲೇ ಇದ್ದ. ತನ್ನನ್ನು ಮಾರಿದ್ದು, ಪ್ರಾಣಿಗಳಿಗಿಂತಲೂ ಹೀನವಾಗಿ ನಡೆಸಿಕೊಂಡದ್ದು. ಎಲ್ಲವೂ ಚಿಂತಿಸುತ್ತಾ ಶುಭ್ರವಾಗಿದ್ದ ಆಕಾಶದಲ್ಲಿದ್ದ ನಕ್ಷತ್ರ ಎಣಿಕೆ ಮಾಡತೊಡಗಿದ್ದ. ಸದ್ಯ ಆತನಿಗೆ ಕಾಲಹರಣ ಮಾಡಲು ಅದಲ್ಲದೆ ಬೇರೆ ಉಪಾಯವಿರಲಿಲ್ಲ.

ಬೆಳಗಾಗುತ್ತಿದ್ದಂತೆ ಎಚ್ಚೆತ್ತ ಧನಿಕ ಇದಿನಬ್ಬನನ್ನು ಹಿಂಬಾಲಿಸುವಂತೆ ಹೇಳಿ ನಡೆಯತೊಡಗಿದ. ಸೂರ್ಯ ನಸು ನಗುತ್ತಿದ್ದ. ಚಳಿಗಾಳಿ ಸುಯ್ಯನೆ ಸುಳಿಯುತಿತ್ತು. ಕಡಲ ಅಲೆಗಳು ದಡಕ್ಕೆ ಬಡಿಯುವ ಸಪ್ಪಳ ಜೋರಿತ್ತು. ಮೀನು ತರುವ ಬೋಟುಗಳು, ಎತ್ತಿನಗಾಡಿಯ ಸದ್ದು ಇಡೀ ಮಾರುಕಟ್ಟೆಗೆ ಜೀವ ತುಂಬತೊಡಗಿತ್ತು. ಮೀನು ಮಾರುವವರ ಸುತ್ತ ಕಾಗೆ, ಗಿಡುಗಗಳು ಹಾರಾಡುತ್ತಿದ್ದವು. ನಾಯಿಗಳು ಪರಸ್ಪರ ಜಗಳಕ್ಕಿಳಿದು ಮೀನುಗಾರರೆಸೆದ ಕೊಳೆತ ಮೀನಿಗೆ ದೊಂಬಿಯೆಬ್ಬಿಸಿದ್ದವು. ಬೇಗಬೇಗನೆ ಹೆಜ್ಜೆ ಹಾಕುವಂತೆ ಎತ್ತುಗಳಿಗೆ ಬೆದರಿಸುವಂತೆ ಆಗಂತುಕ ಆಗಾಗ ಗದರುತ್ತಲೇ ಇದ್ದ.

ಸ್ವಲ್ಪ ದೂರ ನಡೆದಂತೆ ಒಂದು ದೊಡ್ಡ ಕಟ್ಟಡದ ಎದುರು ಜನಸಾಗರವೇ ಜಮಾಯಿಸಿತ್ತು. ಇದಿನಬ್ಬನಂತೆ ಲುಂಗಿ ಮಾತ್ರ ಉಟ್ಟಿದ್ದ ಜನರನ್ನು ಕುದುರೆಗಾಡಿ, ಎತ್ತಿನ ಗಾಡಿಗಳಲ್ಲಿ ತಂದು ಇಳಿಸುತ್ತಲೇ ಇದ್ದರು. ಅವೆರಲ್ಲರೂ ತನ್ನಂತೆ ಮಾರಲು ತಂದ ಸರಕುಗಳೆಂದು ತಿಳಿಯಲು ಇದಿನಬ್ಬನಿಗೆ ಹೆಚ್ಚು ಹೊತ್ತು ಬೇಕಿರಲಿಲ್ಲ. ಕಿಕ್ಕಿರಿದ ಗುಲಾಮರ ಮಧ್ಯೆ ಒಂದಷ್ಟು ದಲ್ಲಾಳಿಗಳು ಸುತ್ತುವರಿದಿದ್ದರು. ಹರಾಜು ಆರಂಭವಾಯಿತು.

“26 ವರ್ಷ, 2 ವರ್ಷಗಳಿಂದ ಬೇರೆ ಎರಡು ಮಾಲಿಕರ ಜೊತೆ ಕೆಲಸ ಮಾಡಿದ್ದಾನೆ”

“ತಾಯಿ ತಂಗಿಯಂದಿರು ಹೇಗಿರಬಹುದು, ಅವರು ನನ್ನ ಮರೆತಿರಬಹುದೇ, ನನ್ನನ್ನು ದೊಡ್ಡಮ್ಮ ಹುಡುಕುತ್ತಿರಬಹುದೇ” ಮೆಲ್ಲನೆ ಸುಳಿದ ಕಣ್ಣ ಹನಿಗಳನ್ನು ಉಟ್ಟಿದ್ದ ಪಂಚೆಯಲ್ಲಿ ಆಗಾಗ ಒರೆಸಿಕೊಳ್ಳುತ್ತಲೇ ಮನಸ್ಸಿನ ಭಾರ ಏರಿಳಿಯುತ್ತಿತ್ತು.

ದಢೂತಿ ದೇಹದವನೊಬ್ಬ ಕ್ರಯಕ್ಕಿಟ್ಟ ಗುಲಾಮನನ್ನು ತೋರಿಸಿ ಜೋರಾಗಿ ಕೂಗಿ ಹೇಳತೊಡಗಿದ್ದ. ಹರಾಜಿಗೆ ನಿಲ್ಲುವ ಕೂಲಿಯಾಳುಗಳನ್ನು ವಿವಸ್ತ್ರಗೊಳಿಸಿ ಒಂದು ಸಣ್ಣ ತುಂಡು ಬಟ್ಟೆ ಉಡಲು ಕೊಡುತ್ತಿದ್ದರು. ನಿಲ್ಲುವಾಗ ಸ್ವಲ್ಪ ಕೊಂಕಿಯೋ, ಬಾಗಿಯೋ ನಿಂತರೆ ಹರಾಜು ಕರೆಯುವವನ ಕೈಯಲ್ಲಿದ್ದ ಚಾಟಿ “ಛಟೀರ್, ಛಟೀರ್” ಎಂದು ಕೂಲಿಯಾಳಿನ ಬೆನ್ನಿಗೆ ಮುತ್ತಿಕ್ಕುತ್ತಿತ್ತು. ಸರದಿ ಪ್ರಕಾರ ಒಬ್ಬೊಬ್ಬರ ಗುಣ ವಿಶೇಷಣ ಸಾರಿ ಹರಾಜು ಕರೆಯುವಾಗ ಕೇಳಿಸಿಕೊಳ್ಳುತ್ತ ಕುಳಿತಿರುವ ಧನಿಕರು ಯಾರಾದರೂ ಮುಂದೆ ಬಂದು “ಎರಡು ಪಾವಲಿ, ಮೂರು , ಮೂರುವರೆ ಪಾವಲಿ.. ” ಹೀಗೆ ಕೂಗುತ್ತಾ ಬೆಲೆ ಕಟ್ಟುತ್ತಿದ್ದರು. ಊರಿನ ಹೆಸರಾಂತ ವ್ಯಾಪಾರಿಗಳು ಯಾರಾದರೂ ಕೂಲಿಯವನಿಗೆ ಬೆಲೆ ಕಟ್ಟಿದರೆ ಮುಗಿಯಿತು; ಇನ್ಯಾರೂ ಅವರ ವಿರುದ್ಧ ನಿಂತು ಬೆಲೆಯೇರಿಸುವ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ.

ಒಬ್ಬೊಬ್ಬನನ್ನೇ ನಿಲ್ಲಿಸಿ ವಸ್ತ್ರ ಕಳಚಿ ತುಂಡು ಬಟ್ಟೆಯುಡುವ ಆದೇಶ ಕೇಳಿ ಬರುತ್ತಿತ್ತು.

“ಲೋ ನೀನೂ ಕಳಚೋ,”

ಬಟ್ಟೆಯ ತುಂಡೊಂದು ಗಾಳಿಯಲ್ಲಿ ಬಂದು ಇದಿನಬ್ಬನ ತೋಳಿಗೆ ಬಿತ್ತು. ಯಾರು ತನ್ನ ನಗ್ನತೆಯನ್ನು ಕಾಣುತ್ತಾರೋ, ನೋಡುತ್ತಾರೋ ಎಂಬ ನಾಚಿಕೆಗೆ ಅಲ್ಲಿ ಬೆಲೆಯೇ ಇರಲಿಲ್ಲ. ಸುಮ್ಮನೆ ಅಪ್ಪಣೆ ಪಾಲಿಸಿ ಉಟ್ಟ ಲುಂಗಿಯನ್ನು ಬಿಚ್ಚಿ ತುಂಡು ಬಟ್ಟೆ ಉಡಬೇಕಾಗಿತ್ತು. ಚಕಾರವೆತ್ತಿದರೆ ಬಲತ್ಕಾರದಿಂದ ಹೊಡೆದು ಬಡಿದು ಹರಾಜು ಕಟ್ಟೆಗೆ ಹತ್ತಿಸಿ ಬಿಡುತ್ತಿದ್ದರು. ಹರಾಜು ಕಟ್ಟೆಯ ಸುತ್ತ ಅಜಾನುಬಾಹುಗಳಾದ ಹತ್ತಾರು ಜನ ರೌಡಿಗಳು ನಿಲ್ಲುತ್ತಿದ್ದರು. ಅಲ್ಲಿ ಬರುವ ಕೂಲಿಯಾಳುಗಳನ್ನು ಪರೀಕ್ಷಿಸುವುದು ಮತ್ತು ಪಳಗಿಸುವ ಕೆಲಸಗಳನ್ನು ಮಾಡುತ್ತಿದ್ದರು. ಅಲ್ಲೇ ಪಕ್ಕದಲ್ಲಿ ಹೆಂಗಸರನ್ನು ಮಾರುವ ಹರಾಜು ಕಟ್ಟೆಯೂ ಹಿಂಬಾಗದಲ್ಲಿತ್ತು. ಸ್ವಲ್ಪ ಅಡ್ಡಲಾಗಿ ನಾಲ್ಕು ನೀಳವಾದ ಬಟ್ಟೆ ಬಿಗಿದು ಎರಡನ್ನೂ ಪ್ರತ್ಯೇಕಿಸಿದ್ದರು. ಹೆಂಗಸರು ಕೂಲಿಯಾಳುಗಳು ಬೇಕಿದ್ದರೆ ಎಡ ಭಾಗಕ್ಕೆ ಮತ್ತು ಗಂಡಸರು ಬೇಕಿದ್ದರೆ ಬಲ ಭಾಗಕ್ಕೂ ಸುತ್ತು ನಿಲ್ಲಬೇಕಾಗಿತ್ತು. ಹರಾಜಿನಲ್ಲಿ ಅತಿ ಹೆಚ್ಚು ಹಣಕ್ಕೆ ಕರೆದವನು ಮೂರು ಬಾರಿ ಆತನ ಕ್ರಯವನ್ನು ಜೋರಾಗಿ ಹೇಳಿದಾಗಲೇ, ಅವನೇ ಕೂಲಿಯವನ ಮಾಲಿಕನಾಗಿ ಬಿಡುತ್ತಿದ್ದ. ಹತ್ತಿರದಲ್ಲೇ ಮೇಜು ಹಾಕಿ ಕುಳಿತುಕೊಂಡವನು ಕೂಲಿಯವನು ನಿಗದಿಪಡಿಸಿದ ಕ್ರಯವನ್ನು ಮತ್ತು ಮಾರಲು ಬಂದವನಿಗೆ ಮಾರುಕಟ್ಟೆಯ ವಂತಿಗೆಯನ್ನು ಕೇಳಿ ಪಡೆಯುತ್ತಿದ್ದ.

ಇದಿನಬ್ಬನನ್ನು ಸಾಲಿನಲ್ಲಿ ನಿಲ್ಲುವಂತೆ ಹರಾಜು ಕರೆಯುವವನೊಬ್ಬ ದಬಾಯಿಸಿದ. ಒಬ್ಬೊಬ್ಬರಾಗಿ ಸಾಲು ಸಾಲಾಗಿ ಹರಾಜು ಕಟ್ಟೆಗೆ ಹತ್ತತೊಡಗಿದರು. ಇದಿನಬ್ಬನ ಮುಂದೆ ನಿಂತ ವ್ಯಕ್ತಿಯೂ ಹರಾಜು ಕಂಬಕ್ಕೆ ಹತ್ತಲು ತಯ್ಯಾರಾದ. ಆತನು ನೇಣುಗಂಬಕ್ಕೆ ಗಲ್ಲು ಶಿಕ್ಷೆಗೆ ಕೊಂಡು ಹೋಗುವವರ ಹಾಗೆ ಅಳುತ್ತಿದ್ದ. ಆತ ತನ್ನ ಕಣ್ಣುಗಳನ್ನು ಉಜ್ಜುತ್ತಿದ್ದಂತೆ, ಇದಿನಬ್ಬನಿಗೂ ಕಣ್ಣೀರು ಒತ್ತರಿಸಿ ಬರತೊಡಗಿತು.
“ಲೋ ಅಳು ಗಿಳು ಎಲ್ಲಾ ಮತ್ತೆ, ಹತ್ತೋ ಕಟ್ಟೆಗೆ ”

ಛಟೀರ್.. ಎಂದು ಬೆನ್ನ ಮೇಲೆ ಬಿದ್ದ ಏಟಿಗೆ ನಿಗುರಿ ನಿಂತವನಂತೆ ಆತ ಹರಾಜು ಕಟ್ಟೆಗೆ ಹತ್ತಿದ. ಬೆನ್ನಿಗೆ ಬಾರಿಸಿದ್ದ ಚಾಟಿಯ ಗುರುತು ಕೆಂಪಡರಿ ರಕ್ತ ಒಸರತೊಡಗಿತ್ತು. ಹೊಡೆತದ ನೋವಿಗೆ ಆತ ಬಿಲ್ಲಿನಂತೆ ಸೆಟೆದು ಹರಾಜು ಕಟ್ಟೆಗೇರಿದ. ಯಾವುದೋ ಗಿರಾಕಿ ಆತನಿಗೆ ಬೆಲೆ ಕಟ್ಟಿ ಕೊಳ್ಳತೊಡಗಿದ. ಇದಿನಬ್ಬನ ಮನಸ್ಸು ಮತ್ತೆಲ್ಲೋ ಹೋಯಿತು.

“ಹತ್ತೋ ಕಟ್ಟೆಗೆ”

ಇದಿನಬ್ಬ ಯಾಂತ್ರಿಕವಾಗಿ ಕಟ್ಟೆಗೆ ಹತ್ತಲು ತಯ್ಯಾರಾದ. ಮನದೊಳಗೆ ನೂರಾರು ಚಿಂತೆಗಳು ಮುಳ್ಳಿನಂತೆ ಚುಚ್ಚುತ್ತಲಿದ್ದವು. “ಯಾರು ಖರೀದಿಸುತ್ತಾರೋ, ಎಲ್ಲಿ ಹೋಗಬೇಕೋ?” ಎಂಬ ಪ್ರಶ್ನೆಗಳು ಕಾಡಲಾರಂಭಿಸಿದವು. ಅದೇ ಹೊತ್ತಿಗೆ ಹರಾಜು ಪ್ರಾರಂಭಗೊಂಡಿತು. ಕರೆದುಕೊಂಡು ಬಂದ ವ್ಯಾಪಾರಿ ದೂರ ನಿಂತು ತದೇಕಚಿತ್ತದಿಂದ ನೋಡುತ್ತಿದ್ದ.

“ಇದಿನಬ್ಬ, ಲತ್ತ್ ಜವ್ವಾನೆ, ಪದ್ರಾಡ್ ವರ್ಸ, ರಡ್ಡ್ ಪಾವಲಿ” ಎಂದು ಒಂದೇ ಸಮನೆ ತುಳುವಿನಲ್ಲಿ ಕೂಗತೊಡಗಿದ.

ಗುಂಪಿನಿಂದ “ಎರಡು ನಾಣ್ಯ” ಎಂಬ ಶಬ್ದ ಬಂತು. ಹರಾಜು ಕರೆಯುವವನು ಅತ್ತ ತಿರುಗಿದ. ಇದಿನಬ್ಬ ಚಾಟಿಯೇಟಿಗೆ ಹೆದರಿ ನೇರ ಮತ್ತು ಹೆಚ್ಚು ಗಂಭೀರವಾಗಿ ನಿಂತಿದ್ದ.

“ಎರಡು ನಾಣ್ಯ” ಹರಾಜಿನವನ ಚರ್ವಿತ ಚರ್ವಣ ಮಾತು ಆರಂಭಗೊಂಡಿತು. ಇದಿನಬ್ಬ ಮನಸ್ಸಿನಲ್ಲೇ “ಯಾವುದೋ ಊರಿನ ಋಣ ಉಳಿದಿರಬಹುದೆಂದು” ಎಣಿಕೆ ಹಾಕುತ್ತಿದ್ದ. ಅನತಿ ದೂರದಲ್ಲಿ ಯಾರೋ ಬಿಳಿಯ ಬ್ರಿಟಿಷನೊಬ್ಬ ಕುದುರೆಗಾಡಿಯಲ್ಲಿ ಬರುವುದು ಕಾಣುತ್ತಿತ್ತು. ಆತ ಹತ್ತಿರ ಬಂದರೆ ಖಂಡಿತಾ ಯಾರಾದರೂ ಕೂಲಿಯಾಳುಗಳನ್ನು ಖರೀದಿಸಲು ತಯ್ಯಾರಿದ್ದ. ಬ್ರಿಟಿಷರು ವಸಾಹತುಗಳಲ್ಲಿ ಕೆಲಸ ಮಾಡುವ ಕಷ್ಟ , ಕಾರ್ಪಣ್ಯಗಳನ್ನು ಇದಿನಬ್ಬ ಅಷ್ಟು ಸಣ್ಣದರಲ್ಲೇ ಕೇಳಿ ತಿಳಿದುಕೊಂಡಿದ್ದ.

“ದೇವಾ… ನನ್ನನ್ನು ಆ ರಾಕ್ಷಸನ ಕಣ್ಣಿಗೆ ಕಾಣಿಸದೆ ಇರುವಂತೆ ಮಾಡು, ನನ್ನನ್ನು ಅವನ ಕೂಲಿಯಾಳಾಗಿ ಮಾಡದಿರು” ಎಂದು ಇದಿನಬ್ಬ ಮನದಲ್ಲಿ ಪರಿಪರಿಯಾಗಿ ಪ್ರಾರ್ಥಿಸುತ್ತಿದ್ದ.

ಹರಾಜಿನವನು “ಎರಡು ನಾಣ್ಯ” ಎರಡನೇ ಬಾರಿ ಕರೆದ. ಮೂರನೇ ಬಾರಿ ಕರೆಯುವುದಕ್ಕೂ ಯುರೋಪಿನವನು ಮುಂದೆ ಬರುವುದಕ್ಕೂ ಸರಿ ಹೋಯಿತು.

“ಎರಡು ನಾಣ್ಯ” ಮೂರನೇ ಬಾರಿ ಹರಾಜಿನವನು ಕರೆದು ಬಿಟ್ಟ.

“ಸದ್ಯಕ್ಕೆ ಯುರೋಪಿನವನಿಂದ ತಪ್ಪಿಸಿಕೊಂಡೆನಲ್ಲಾ” ಎಂದು ಮನದಲ್ಲೇ ಅಂದುಕೊಳ್ಳುತ್ತಾ ಇದಿನಬ್ಬ ದೀರ್ಘ ನಿಟ್ಟುಸಿರೆಳೆದುಕೊಂಡ.

“ಹೇಯ್, ಮ್ಯಾನ್, ಯೂ ಯೂ ಸ್ಟಾಪ್ ”

ಹರಾಜು ಕಟ್ಟೆಯಿಂದ ಇಳಿಯಲನಣಿಯಾದ ಇದಿನಬ್ಬನಿಗೆ ಆಜ್ಞೆಯೊಂದು ಬಂತು. ಯುರೋಪಿನವರ ಕರೆಗೆ ಎಲ್ಲರೂ ತಲೆಬಾಗುತ್ತಿದ್ದವರೇ, ಎಲ್ಲಾದರೂ ಚಕಾರವೆತ್ತಿದರೂ ಉಗ್ರದಂಡನೆ ಎದುರಿಸಬೇಕಾಗಿತ್ತು. ಇದಿನಬ್ಬ ಇಳಿಯದೆ ಹರಾಜು ಕಟ್ಟೆಯಲ್ಲೇ ಕಂಬದಂತೆ ನಿಂತ. ಎದೆ ಬಡಿತ ಕಿವಿಗೆ ಕೇಳಿಸಲಾರಂಭಿಸಿತು. ಇದಿನಬ್ಬನ ಸುತ್ತ ತಿರುಗಿ ಅಡಿಯಿಂದ ಮುಡಿಯವರೆಗೆ ಇದಿನಬ್ಬನನ್ನು ಸೂಕ್ಷ್ಮವಾಗಿ ನೋಡಿದವನೇ “ಗೋ, ಟೇಕ್ ನೆಕ್ಸ್ಟ್ ಪರ್ಸನ್” ಎಂದು ಅಬ್ಬರಿಸಿದ. ಇದಿನಬ್ಬನಿಗೆ ಹೋದ ಜೀವ ಮರಳಿದಷ್ಟೇ ಖುಷಿ. ಹೋಗುವುದು ನರಕಸದೃಶ ಕೂಲಿ ಕೆಲಸಕ್ಕಾದರೂ, ಬಿಳಿಯರಿಂದ ತುಳಿಸಿಕೊಳ್ಳುವುದು ಅದಕ್ಕೂ ಶೋಚನೀಯ ಎನಿಸಿತ್ತು. ಬ್ರಿಟಿಷ್ ಜನರ ಕ್ರೌರ್ಯದ ಕತೆಗಳು ಕಿವಿಯಿಂದ ಕಿವಿಗೆ ಹರಡಿ ಬ್ರಿಟಿಷರೆಂದರೆ ಜನರೆಲ್ಲ ಭಯ ಬೀಳುತ್ತಿದ್ದ ಕಾಲವದು. ಆ ಹೊತ್ತಿಗೆ ಹೊಟೆಲ್‍ನಿಂದ ಇದಿನಬ್ಬನನ್ನು ಕೊಂಡ ದಲ್ಲಾಳಿ ಹೊಸ ಮಾಲಿಕನಿಂದ ಹಣ ಸ್ವೀಕರಿಸಿ ಜನಜಂಗುಳಿಯ ಮಧ್ಯೆ ಮಾಯವಾದ. ಹೊಸ ಮಾಲಿಕ ಹತ್ತಿರ ಬಂದು;

“ಎನ್ನಾ ತಂಬಿ ಉನಕ್ಕ್ ಎತ್ರ ವಯಸ್ಸಿರ್ಕ್, ಎಲ್ಲಾ ವೇಲ ಸೈಯ್ಯಾ ಮುಡಿಯುಮಾ” ಎಂದು ವಿಚಾರಿಸತೊಡಗಿದ. ಇದಿನಬ್ಬ ಸಣ್ಣ ಹುಡುಗ, ಬ್ಯಾರಿ, ತುಳು ಬಾಷೆ ಬಿಟ್ಟು ತುಣುಕು ಮಿಣುಕು ಮಲಯಾಳ ಮಾತ್ರ ಬರುತ್ತಿತ್ತು ಮತ್ತು ಅರ್ಥವಾಗುತ್ತಿತ್ತು.

“ಹಾ ನಂಡಬ್ಬೊಗು ಒರೇ ಆನ್ ಮೋನು, ನಾನ್ ಅಜಿಲಮೊಗರುಡೆ ಬನ್ನ್ರೆ”

ಎಂದು ಅರ್ಧಂಬರ್ಧ ಅರ್ಥವಾಗದ ಭಾಷೆಯ ಪ್ರಶ್ನೆಗೆ ತನಗೆ ತಿಳಿದ ರೀತಿಯಲ್ಲಿ ಉತ್ತರಿಸಿದ. ಮಾಲಿಕ ಇದು ಯಾವುದೋ ಅನ್ಯಗ್ರಹದ ಭಾಷೆ ಇರಬೇಕೆಂದು ಕೆಕ್ಕರಿಸಿ ನೋಡುತ್ತಾ ನಿಂತು ಬಿಟ್ಟ. ಮಾಲಿಕನಿಗೆ ತನ್ನ ಭಾಷೆ ಅರ್ಥವಾಗಿಲ್ಲವೆಂದು ತಿಳಿದವನೇ, ಇದಿನಬ್ಬ ಸುಮ್ಮನೆ ಪಿಳಿಪಿಳಿ ಕಣ್ಣು ಬಿಟ್ಟು ಮಾಲಿಕನನ್ನೇ ದಿಟ್ಟಿಸಿದ. ಅಲ್ಲಿದ್ದ ಯಾರೋ ಒಬ್ಬರು ಇದಿನಬ್ಬ ಮತ್ತು ಹೊಸ ಮಾಲಿಕನ ಅವಸ್ಥೆ ನೋಡಿ ಭಾಷಾಂತರಿಸಿಕೊಟ್ಟರು. ಕೈಯಲ್ಲಿದ್ದ ವಸ್ತ್ರ ಕೊಟ್ಟು ಧರಿಸಿಕೊಳ್ಳುವಂತೆ ಹೇಳಿ ಹೊರಡಬೇಕೆಂದು ಸಂಜ್ಞಾ ಭಾಷೆಯಲ್ಲೇ ಇದಿನಬ್ಬನಿಗೆ ತಮಿಳುನಾಡಿನ ಹೊಸ ಮಾಲಿಕ ಕರೀಂ ಆಜ್ಞಾಪಿಸಿದ. ಇದಿನಬ್ಬ ವಸ್ತ್ರ ಬದಲಿಸಲು ಮರೆಗೆ ಬಂದ. ಆ ಹೊತ್ತಿಗೆ ಹರಾಜು ಸಂತೆಯೇ ಗೊಳ್ಳೆಂದು ಒಮ್ಮೆ ನಕ್ಕಿತು. ಹಿಂದಿರುಗಿ ನೋಡಬೇಕಾದರೆ ಯಾವುದೋ ಕೂಲಿಯವನಿಗೆ ತೊಡಿಸಿದ್ದ ತುಂಡುಡುಗೆ ಆಕಾಶದಲ್ಲಿ ಹಾರತೊಡಗಿತ್ತು. ಹರಾಜು ಕಟ್ಟೆಯಲ್ಲಿ ಬೆತ್ತಲೆಯಾದ ಕೂಲಿಯವನು ವಸ್ತ್ರ ಹಿಡಿಯಲು ಪ್ರಯತ್ನಿಸಿಯೂ ಸಿಗದಿದ್ದಾಗ ಹಿಂದೆ ನಿಂತಿದ್ದವನ ತುಂಡುಡುಗೆ ಎಳೆದಿದ್ದ. ಅವನು ಇನ್ನೊಬ್ಬನ, ಮತ್ತೊಬ್ಬನ ಹೀಗೆ ಸರಣಿ ಬೆತ್ತಾಲಾಗುವ ಹಾಸ್ಯ ಇಡೀ ಗಂಭೀರ ಕೂಲಿ ಮಾರುಕಟ್ಟೆಗೆ ತಿಳಿಹಾಸ್ಯ ಉಕ್ಕಿಸಿತ್ತು. ಒಂದು ಕ್ಷಣ ಕೂಲಿಯಾಳು-ಮಾಲಿಕ ಎಂಬ ಬೇಧವಿಲ್ಲದೆ ಎಲ್ಲರೂ ಬಿದ್ದು ಬಿದ್ದು ನಕ್ಕರು.

(ಈ ಕಾದಂಬರಿಯ ಮುಂದಿನ ಕಂತು, ಮುಂದಿನ ಭಾನುವಾರ ಪ್ರಕಟವಾಗುವುದು)