ನನ್ನ ಅಪ್ಪ ತನ್ನ ಜೀವನದಲ್ಲಿ ಬಹಳ ಪ್ರೀತಿಸುತ್ತಿದ್ದ ವಸ್ತುಗಳಲ್ಲಿ ತುಪಾಕಿ ಯಾನೆ ಕೋವಿಯೂ ಒಂದಾಗಿತ್ತು. ಅದು ತಾರುಣ್ಯದಿಂದಲೂ ಅವನೆಲ್ಲ ಸಾಹಸಗಾಥೆಗಳಲ್ಲಿ ಭಾಗವಹಿಸಿತ್ತು; ಅವನಿಗೆ ಸಮಾಜದಲ್ಲೊಂದು ಗಣ್ಯತೆಯನ್ನು ನೀಡಿತ್ತು. ಕರ್ಣಕವಚದಂತೆ ಅವನ ವ್ಯಕ್ತಿತ್ವದ ಭಾಗವಾಗಿತ್ತು. ಬಹುಶಃ ಅವನ ಪುರುಷತ್ವದ ಸಂಕೇತವಾಗಿತ್ತು ಕೂಡ. ಆದರೆ ಇದೆಲ್ಲ ನಮಗೆ ಗೊತ್ತಾಗಿದ್ದು ಅವನು ತೀರಿಕೊಳ್ಳುವಾಗ, ಅದರಿಂದ ಆತ ಅಗಲಬೇಕಾಗಿ ಬಂದಾಗ.

ಅಪ್ಪನಿಗೆ ಕೋವಿಯ ಹುಚ್ಚು ಹಿಡಿದಿದ್ದು ಮಿಲಿಟರಿಯಿಂದ. ಅವನು ಯೌವನದಲ್ಲಿದ್ದಾಗ ಒಮ್ಮೆ ಅಮ್ಮನ ಜತೆ ಜಗಳ ಮಾಡಿಕೊಂಡು ತರೀಕೆರೆಗೆ ಹೋದನು. ಅಲ್ಲಿ ಮಿಲಿಟರಿಯವರು ದನದ ಜಾತ್ರೆಯ ಮೈದಾನದಲ್ಲಿ ತರುಣರನ್ನು ಸಾಲಾಗಿ ನಿಲ್ಲಿಸಿ ದೇಹಪರೀಕ್ಷೆ ಮಾಡುತ್ತಿದ್ದರು. ಅಲ್ಲಿ ಕಾಣಿಸಿಕೊಂಡ ಅವನ ದೃಢಕಾಯ ಕಂಡ ಆಫೀಸರು ‘ಫೌಜಿಗೆ ಸೇರ್‍ತೀಯೇನೊ?’ ಎಂದು ಕೇಳಿದನಂತೆ. ‘ಹ್ಞೂಂ’ ಎಂದು ಇವನು ಸೇರಿಕೊಂಡನು. ಆಮೇಲೆ ಕ್ಯಾಂಪಿನಲ್ಲಿ ಬಂದೂಕು ಹಿಡಿಯುವ ತರಬೇತಿ ಕೆಲಸ. ತಿಂಗಳಾದರೂ ಗಂಡ ಬಾರದೆ ಇದ್ದಾಗ ಕಂಗಾಲಾದ ಅಮ್ಮ, ಬೇಹುಗಾರಿಕೆಗೆ ಜನ ಬಿಟ್ಟು, ಅವನು ಮಿಲಿಟರಿ ಕ್ಯಾಂಪಿನಲ್ಲಿರುವುದನ್ನು ಪತ್ತೆ ಮಾಡಿದಳು; ಎಳೆಗೂಸನ್ನೂ, ಅಜ್ಜಿಯನ್ನೂ ಕರೆದುಕೊಂಡು ಹೋಗಿ, ಕ್ಯಾಂಪಿನ ಮುಂದೆ ಅಳುವ ಕಾರ್ಯಕ್ರಮ ಆರಂಭಿಸಿದಳು. ಅಮ್ಮನ ರಂಪ ನೋಡಲಾರದೆ ಮಿಲಿಟರಿಯವರು ಅಪ್ಪನನ್ನು ‘ಹೋಗತ್ಲಾಗೆ’ ಎಂದು ಬಿಡುಗಡೆ ಮಾಡಿ ಓಡಿಸಿದರಂತೆ. ಅಜ್ಜಿ ಇದನ್ನೊಂದು ಸ್ವಾತಂತ್ರ್ಯ ಸಂಗ್ರಾಮದ ಕತೆ ಮಾಡಿ ಹೇಳುತ್ತಿದ್ದಳು. ಕತೆಯ ಕೊನೆಗೆ ‘ಅಯ್ಯೋ, ನಿಮ್ಮಪ್ಪ ಏನು ಕಮ್ಮಿ ಉರಿದಿಲ್ಲ, ಎಪ್ಪೇಸ್’ ಎಂದು ಭರತವಾಕ್ಯ ಸೇರಿಸುತ್ತಿದ್ದಳು.

ಮುಂದೆ ನಮ್ಮ ಬೀದಿಯಲ್ಲಿ ಮೇದರ ರಾಜಣ್ಣ ಮಿಲಿಟರಿಗೆ ಸೇರಿದವನು, ಕೇಳಿದಾಗೆಲ್ಲ ಶಿಲ್ಲಾಂಗಿನಲ್ಲಿದ್ದೀನಿ, ಜಮ್ಮುನಲ್ಲಿದ್ದೀನಿ ಎಂದು ಹೇಳುತ್ತಿದ್ದನು. ಬರುವಾಗ ಮಿಲಿಟರಿ ಕ್ಯಾಂಟೀನಿನಿಂದ ಏನೇನೊ ವಸ್ತುಗಳನ್ನು ತರುತ್ತಿದ್ದನು. ಅಪ್ಪ ಮಿಲಿಟರಿಯಲ್ಲಿ ಇದ್ದಿದ್ದರೆ ದೇಶ ಸುತ್ತಬಹುದಿತ್ತು, ನಮಗೂ ಸ್ಕಾಲರ್‌ಶಿಪ್ ಸಿಗುತ್ತಿತ್ತು ಎಂದೆಲ್ಲ ನಾವು ಪರಿತಪಿಸುತ್ತಿದ್ದೆವು. ಇದನ್ನು ಕೇಳಿಸಿಕೊಂಡು ಅಪ್ಪ ‘ಹೂ ಕಂಡ್ರೊ, ನನಗೆ ಮಿಲಿಟರಿ ತಪ್ಪಿಸಿದೋಳು ಈ ಈ ಕಾಟ್ಪಾಡಿ’ (ಕಪ್ಪಗಿದ್ದ ಅಮ್ಮನಿಗೆ ಕೊಂಕಿನಿಂದ ಅಪ್ಪ ಕರೆಯುತ್ತಿದ್ದದ್ದು ಹಾಗೆ) ಎಂದು ತುಟಿಯಲ್ಲಿ ನಗುಸುಳಿಸುತ್ತ ಅಮ್ಮನಿಗೆ ಕೇಳುವಂತೆ ಗೊಣಗುತ್ತಿದ್ದನು. ‘ನನಗ್ಗೊತ್ತಿಲ್ಲವೇ ನಿಮಪ್ಪನ ಮಿಲಿಟರಿ?’ ಎಂದು ಅಮ್ಮ ಅವನ ಪ್ರಣಯ ಸಾಹಸಗಳನ್ನು ನೆನಪಿಸಿಕೊಂಡು ಪ್ರತಿಯಾಗಿ ಹೇಳುವಳು. ಅಪ್ಪನಿಗೆ ಯಾರ ಜತೆಗಾದರೂ ಜಗಳ ಮಾಡುವಾಗ, ‘ಗುಂಡು ಹೊಡೆದು ಬಿಡ್ತೀನಿ ನೋಡು’ ಎಂದು ಬೆದರಿಸುವುದು ರೂಢಿಬಿದ್ದಿತ್ತು. ಸಿಟ್ಟಾದಾಗ ಅಮ್ಮನಿಗೂ ಈ ಬೆದರಿಕೆ ಹಾಕುತ್ತಿದ್ದ. ಅಮ್ಮ ನಿರಾಳವಾಗಿ ‘ಹೊಡಿ ನೋಡೋಣ. ನನಗೂ ಈ ಜಿಂದಗಿಯಿಂದ ಸಾಕಾಗಿದೆ’ ಎನ್ನುತಿದ್ದಳು. ಕೊನೆತನಕ ಅವನು ಸುಡಲಿಲ್ಲ. ಅವಳು ಸುಡಿಸಿಕೊಳ್ಳಲಿಲ್ಲ.

ಅಪ್ಪ ಮಿಲಿಟರಿ ಕ್ಯಾಂಪಿನಿಂದ ಉಚ್ಛಾಟಿತನಾಗಿ ಬಂದೊಡನೆ ಮಾಡಿದ ಮೊದಲ ಕೆಲಸವೆಂದರೆ, ಒಂದು ಕೋವಿಯನ್ನು ಸಂಪಾದಿಸಿದ್ದು. ಅದೇನು ತೋಟಾಕೋವಿಯಲ್ಲ. ಮಸಿತುಂಬಿ ಛರೆಗಳನ್ನು ಇಟ್ಟು ಲೋಡ್ ಮಾಡಿ ಹಾರಿಸುವ ಸಿಂಗಲ್ ಬ್ಯಾರೆಲ್ಲಿನ ಕೇಪಿನ ಕೋವಿ. ಅದು ವಿಲಕ್ಷಣ ಸೌಂದರ್ಯದಿಂದ ಕೂಡಿತ್ತು. ಹೇಗೆಂದರೆ-ಕಪ್ಪನೆಯ ಬೀಟೆಮರದ ಹಿಡಿಕೆ. ಅದಕ್ಕೆ ಕೆಳಭಾಗ ಮೀನಿನ ರೆಕ್ಕೆಯ ಹುರುಪೆಗಳ ಕೆತ್ತನೆ. ಮುಂದೆ ಬೆರಳಿನಂತೆ ನಿಗುರಿದ ಕೇಪಿಡಿಡುವ ಜಾಗ. ಅದರ ಹಿಂದೆ ಕೇಪನ್ನು ಒಡೆದು ಕಿಡಿಹುಟ್ಟಿಸಿ ಕೋವಿಮಸಿಗೆ ಹಾಯಿಸುವ ಹಾವಿನೆಡೆಯಂತಹ ಕುದುರೆ. ಅದರ ಕೆಳಗೆ ಕುದುರೆ ಮೀಟುವ ಬಾಗಿದ ಕೊಕ್ಕೆ. ಮುಂದೆ ಮರದೊಳಗೆ ಬಿಗಿಗೊಂಡಿರುವ ಉದ್ದನೆಯ ಬ್ಯಾರೆಲ್. ಅದರ ತುದಿಗೆ ಗುರಿ ಸೂಚಿಸುವ ಜೋಳದಕಾಳಿನಷ್ಟು ನಿಶಾನಿ.

ಅಪ್ಪ ಕೋವಿಯನ್ನು ಚೆನ್ನಾಗಿ ಒರೆಸಿ, ಗೋಡೆಗೆ ಮೊಳೆ ಹೊಡೆದು, ಮನೆಯೊಳಗೆ ಯಾರು ಬಂದರೂ ಎದ್ದು ಕಾಣುವಂತೆ, ಸಿಗಿಸಿದ್ದನು. ನಮ್ಮ ಮನೆ ಊರ ಹೊರಗೆ ಒಂಟಿಯಾಗಿದ್ದರೂ, ಕೋವಿಯ ಖ್ಯಾತಿಯಿಂದಲೊ ಏನೊ ಕಳ್ಳತನವಾಗಲಿಲ್ಲ. ತೋಟದಲ್ಲೂ ತೆಂಗಿನಕಾಯಿಯನ್ನು ಯಾರೂ ಕದ್ದು ಕೆಡಹುತ್ತಿರಲಿಲ್ಲ. ಕೋವಿ ಯಾವಾಗಲೂ ನಮಗೆ ಸಿಗದಷ್ಟು ಎತ್ತರದಲ್ಲಿ ಇರುತ್ತಿತ್ತು. ಇದಕ್ಕೆ ಕಾರಣ, ಒಮ್ಮೆ ನಾನೂ ಅಣ್ಣನೂ ಸೇರಿ ಬಾರಾಗಿದ್ದ ಕೋವಿಯನ್ನು ತೆಗೆದುಕೊಂಡು ಅಕಸ್ಮಿಕವಾಗಿ ಕುದುರೆ ಒತ್ತಿ ಕೊಟ್ಟಿಗೆಯ ಗೋಡೆಯನ್ನೇ ಕೆಡವಿದ್ದೆವು. ಬೆದರಿದ ದನಗಳು ಕಣ್ಣಿ ಹರಿದುಕೊಂಡು ಮನೆಬಿಟ್ಟು ಓಡಿದವು, ಎರಡು ದಿನಗಳ ತನಕ ಮನೆಗೆ ಬಂದಿರಲಿಲ್ಲ.


ಅಪ್ಪನಿಗೆ ಶಿಕಾರಿ ಗೆಳೆಯರ ದೊಡ್ಡ ಗ್ಯಾಂಗಿತ್ತು. ಗಾಳಿಹಳ್ಳಿ ಮೈಲಾರಣ್ಣ, ಕಟ್ಟೆಹೊಳೆ ಬುಡೇನ್‌ಸಾಬ್, ಬಸವನಹಳ್ಳಿ ಪೋಲಿಸ್ ರಾಮಣ್ಣ, ಅಮೃತಾಪುರದ ಸಿದನಾಯಕ, ಉಬ್ರಾಣಿಯ ಸ್ವಾಮಿಯಣ್ಣ-ಹೀಗೆ. ಕುಲುಮೆ ಕೆಲಸಗಾರನಾಗಿದ್ದ ಸ್ವಾಮಿಯಣ್ಣನ ಒಂದು ಕಣ್ಣು ತಿರುಚು. ಆದರೆ ಅವನಷ್ಟು ಅದ್ಭುತ ಶಿಕಾರಿಗಾರ ತರೀಕೆರೆ ಸೀಮೆಯಲ್ಲೇ ಇರಲಿಲ್ಲ. ನಾಡಬಂದೂಕು ತಯಾರಿಸುತ್ತಾನೆ ಎಂಬ ಆಪಾದನೆಯೂ, ಕೀರ್ತಿಯೂ ಅವನ ಮೇಲಿತ್ತು. ಅಪ್ಪ ಇವರನ್ನು ಕಟ್ಟಿಕೊಂಡು ಗಿಡಕ್ಕೆ ಶಿಕಾರಿ ಹೋಗುತ್ತಿದ್ದನು. ‘ಗಿಡ’ ಎಂದರೆ, ನಮ್ಮೂರ ದಕ್ಷಿಣಕ್ಕೆ ಇರುವ ಮಲೆನಾಡ ಸೆರಗಿನ ಕಾಡು. ಚೆನ್ನಗಿರಿ ಭದ್ರಾವತಿ ತರೀಕೆರೆ ತಾಲೂಕುಗಳ ನಡುವೆ ಬರುವ ಈ ಕಾಡಿಗೆ ನಮ್ಮ ಸೀಮೆಯ ಈಡುದಾರರೆಲ್ಲ ಶಿಕಾರಿ ಹೋಗುತ್ತಿದ್ದರು. ಇವರೆಲ್ಲ ಶಿಕಾರಿ ಹೋಗುವ ಮುನ್ನಾ ದಿನ ನಮ್ಮ ಮನೆಯಲ್ಲಿ ಮೇಳ ಸೇರುತ್ತಿತ್ತು. ಟೀಕುಡಿಯುತ್ತ, ಹುರಿದ ಶೇಂಗಾ ತಿನ್ನುತ್ತ, ಬೀಡಿಸೇದುತ್ತ ಹರಟೆ ಹೊಡೆಯುತ್ತಿದ್ದರು. ಆಗ ಶಿಕಾರಿ ಕತೆಗಳೆಲ್ಲ ಹೊರಬರುತ್ತಿದ್ದವು. ಅದರಲ್ಲಿ ಸಾಬ್ಜುವಿನ ಸೊಂಟ ತಿರುಪಿದ ಕತೆಯೂ ಒಂದು. ಜೋಳದ ಕಡ್ಡಿಯಂತಿದ್ದ ಸಾಬ್ಜು ಶಿಕಾರಿದಾರರ ಜತೆ ಹಲಾಲ್ ಮಾಡಲು ಹೋಗುತ್ತಿದ್ದವನು. ಅವನಿಗೆ ಮಾಂಸದ ದುರಾಸೆ ಬಹಳ. ಬೇಟೆಯನ್ನು ಕೊಯ್ದು ಪಾಲು ಮಾಡುವ ಮುಂಚೆಯೇ ಅದರ ಲಿವರ್, ಹಾರ್ಟು ಇತ್ಯಾದಿ ಬಿಡಿಭಾಗಗಳನ್ನು ತೆಗೆದು ಸುಟ್ಟು ತಿನ್ನುವುದರಲ್ಲಿ ಆತ ಪರಿಣಿತನಾಗಿದ್ದ. ಒಮ್ಮೆ ಗುಂಡುತಾಗಿದ ಕಾಡುಕೋಣವನ್ನು ಹಲಾಲು ಮಾಡಲು ಹೋಗಿ ಅದರ ಕೊಂಬನ್ನು ಹಿಡಿದನಂತೆ. ಇನ್ನೂ ಪ್ರಾಣವಿದ್ದ ಕೋಣವು ರಭಸದಲ್ಲಿ ತನ್ನ ಕುತ್ತಿಗೆಯನ್ನು ಬೀಸಲು, ಸಾಬ್ಜು ಬಿದಿರಮೆಳೆಯ ಮೇಲೆ ಹೋಗಿ ಬಿದ್ದಿದ್ದನಂತೆ. ಬಿದಿರಮುಳ್ಳುಗಳಲ್ಲಿ ಸಿಲುಕಿಕೊಂಡು ರಕ್ತಮಯವಾಗಿದ್ದ ಅವನನ್ನು ಮೆಲ್ಲಗೆ ಬಿಡಿಸಿ ಕೆಳಗಿಳಿಸಲಾಗಿತ್ತಂತೆ. ಆಗ ಊನವಾದ ಸೊಂಟವನ್ನು ಇಟ್ಟುಕೊಂಡೇ ಅವನು ಬೇಟೆಗಾರರ ಜತೆ ಕುಂಟಿಕೊಂಡು ಹೋಗುತ್ತಿದ್ದನು.

ಶಿಕಾರಿಗೆ ಹೊರಡುವಾಗ ಯುದ್ಧಕ್ಕೆ ಕಳಿಸಿಕೊಡುವಂತೆ ಮನೆಯಲ್ಲಿ ಗಡಿಬಿಡಿ ಆಚರಣೆಗಳು ನಡೆಯುತ್ತಿದ್ದವು. ಒಂದೆಡೆ ಅಪ್ಪನ ಆಯುಧ ಪೂಜೆ. ಅಂದರೆ ತೆಂಗಿನನಾರನ್ನು ಉಂಡೆಮಾಡಿ ಬ್ಯಾರಲ್ಲಿಗೆ ತುರುಕಿ, ಕೋವಿಮಸಿ ದಮ್ಮಸ್ಸು ಮಾಡುವ ಸಲಾಕಿಯ ಮೂಲಕ ಅದನ್ನು ಹೊರತೆಗೆದು, ಬ್ಯಾರಲ್ಲಿನ ಒಳಭಾಗವನ್ನು ಸ್ವಚ್ಛಮಾಡುವುದು; ಸ್ವಲ್ಪ ಗನ್‌ಪೌಡರ್ ಹಾಕಿ ಆಕಾಶದತ್ತ ಹುಸಿಈಡು ಹಾರಿಸುವುದು; ಸೀಸ ಕಾಯಿಸಿ ಅದನ್ನು ಗುಂಡುಗಳನ್ನಾಗಿ ಮಾಡುವುದು; ಛರೆಗಳನ್ನು ಗಾತ್ರಕ್ಕನುಸಾರ ವಿಂಗಡಿಸುವುದು; ಕೆಂಪನೆಯ ಟೋಪಿಯಂತಿರುವ ತಾಮ್ರದ ಕೇಪುಗಳನ್ನು ಬೇರೆ ಪೇಪರಲ್ಲಿ ಹುಶಾರಾಗಿ ಇಡುವುದು; ಒಲೆಯ ಪಟ್ಟಿಯ ಮೇಲಿಟ್ಟು ಬಿಸಿಯಾದ ಎವರೆಡಿ ಶೆಲ್ಲುಗಳನ್ನು ಬ್ಯಾಟರಿಗೆ ತುಂಬುವುದು- ಇತ್ಯಾದಿ. ಇತ್ತ ಒಳಗೆ ಅಮ್ಮ ಇಬ್ಬರು ಅಕ್ಕಂದಿರನ್ನ ಕಟ್ಟಿಕೊಂಡು ಒಂದು ರಾಶಿ ಒಣಗಿದ ಚಪಾತಿ ಮಾಡುವುದು; ಕಡಲೆ ಒಣಮೆಣಸು ಒಣಮೀನು ಗಿಟಕು ನಸುಗೆಂಪಗೆ ಹುರಿದು ಬೆಳ್ಳುಳ್ಳಿ ಉಪ್ಪು ಹಾಕಿ ಕುಟ್ಟಿ ಚಟ್ನಿ ಮಾಡುವುದು; ಮೊಟ್ಟೆ ಬೇಯಿಸುವುದು; ಈರುಳ್ಳಿ ಶುಂಠಿ ಕರಿಮೆಣಸು ಹಾಕಿ, ಮೂರು ದಿನವಾದರೂ ಕೆಡದ ಮೊಸರುಬುತ್ತಿ ಕಟ್ಟುವುದು ಮಾಡುತ್ತಿದ್ದಳು.

ಇಷ್ಟೆಲ್ಲ ತಯಾರಿ ಮಾಡಿಕೊಂಡು ಹೋದರೂ ಕೆಲವೊಮ್ಮೆ ಶಿಕಾರಿ ಆಗುತ್ತಿರಲಿಲ್ಲ. ಅಪ್ಪ ಜೋಲುಮುಖ ಹಾಕಿಕೊಂಡು ಬರುತ್ತಿದ್ದನು. ಆದರೆ ಕೆಲವೊಮ್ಮೆ ಭರ್ಜರಿ ಶಿಕಾರಿಯಾಗುತ್ತಿತ್ತು. ಒಂದು ದಿನ ನಡುರಾತ್ರಿ ಗಿಡದಿಂದ ಬಂದ ಅಪ್ಪ ‘ಕ್ಯಾ?’ ಎಂದು ಮೆಲ್ಲಗೆ ಕದ ಬಡಿದ. ಅಮ್ಮ ಎದ್ದು ಸದ್ದುಮಾಡದೆ ಚಿಮಣಿ ಹಚ್ಚಿದಳು. ಅಪ್ಪ ಶಿಕಾರಿಗೆ ಹೋಗಿರುವುದು ಗೊತ್ತಿದ್ದ ನಾವೆಲ್ಲ ಗಡಬಡಿಸಿ ಎದ್ದು ಮೊದಲೇ ಬಾಗಿಲ ಹತ್ತಿರ ಬಂದಿದ್ದೆವು. ನೋಡಿದರೆ ಗಾಡಿ ತುಂಬ ಮುತ್ತುಗದ ಹೂವಿನ ರಾಶಿ ತುಂಬಿಕೊಂಡು ಬಂದಂತೆ ಕಾಡುಕೋಣದ ಮಾಂಸ. ಆ ರಾತ್ರಿಗೇ ಅಮ್ಮ ಒಲೆಹಚ್ಚಿ ಅಪ್ಪನಿಗೆ ಟೀಮಾಡಿ ಕೊಡುವಳು. ಇಬ್ಬರೂ ಅಕ್ಕಂದಿರು ಈಳಿಗೆ ಮಣೆಯನ್ನು ಹಾಕಿಕೊಂಡು ಮಾಂಸವನ್ನು ಒಣಗಿಸಲು ಉದ್ದಕ್ಕೆ ಸೀಳಿ ಗೇಣುದ್ದದ ಪೀಸು ಮಾಡುವರು. ನಮಗೆ ಕಣ್ಮುಚ್ಚಿದರೂ ನಿದ್ದೆಯಿಲ್ಲ.


ರಾತ್ರಿ ಶೇಂಗಾಹೊಲ ಕಾಯಲು ಹೋಗಲಿ, ದೊಡ್ಡಹಳ್ಳದ ಪಕ್ಕ ಹಾಕಿದ್ದ ಆಲೆಮನೆಗೆ ಹೋಗಲಿ, ತೆಂಗಿನತೋಟಕ್ಕೆ ಹೋಗಲಿ, ಕೋವಿ ಅಪ್ಪನ ಹೆಗಲಮೇಲೆ ಅವನ ಟರ್ಕಿ ಟವಲಿನಂತೆ ಸದಾ ಇರುತ್ತಿತ್ತು. ಅದು ಜತೆಯಲ್ಲಿದ್ದರೆ ಅವನು ಎಷ್ಟೇ ಕತ್ತಲಿದ್ದರೂ ಒಂಟಿಯಾಗಿ ಹೋಗುತ್ತಿದ್ದನು. ಎತ್ತರಕ್ಕೆ ಕೆಂಪಗೆ ಇದ್ದ ಅಪ್ಪ, ಖಾಕಿ ಪ್ಯಾಂಟುಶರಟು ಧರಿಸಿ, ಕೋವಿ ಹೆಗಲಲ್ಲಿಟ್ಟು ಬೀದಿಯಲ್ಲಿ ಹೋಗುವಾಗ, ಅನೇಕ ಹೆಂಗಸರು ಮೆಚ್ಚುಗಣ್ಣಿಂದ ನೋಡುತ್ತಿದ್ದರು. ಇದಕ್ಕೆ ತಕ್ಕಂತೆ ಊರಲ್ಲಿ ತಿಂಗಳಿಗೆ ಒಂದಾದರೂ ಅವನ ತುಪಾಕಿ ಸಾಹಸ ಇರುತ್ತಿತ್ತು. ಒಂದು ಸಲ ನಮ್ಮೂರ ಕೆರೆ ಹತ್ತಿರ ದೊಡ್ಡ ಕೇರೆಹಾವು ಹಾದಿಯಲ್ಲಿ ಅಡ್ಡಾಡುವರನೆಲ್ಲ ಅಟ್ಟಿಸಿಕೊಂಡು ಬರುವ ಅಭ್ಯಾಸ ಇಟ್ಟುಕೊಂಡಿದ್ದು, ಆದಿನ ಗದ್ದೆಕೆಲಸಕ್ಕೆ ಹೋದ ಹೆಂಗಸಿನ ಹಿಂದೆ ರಭಸವಾಗಿ ಬಂತಂತೆ. ಕೇರೆಗೆ ಬೆದೆ ಬಂದರೆ ಹಾಗೆ ಮಾಡುತ್ತವೆಯೆಂದು ಜನ ಹೇಳುತ್ತಿದ್ದರು. ಆಕೆ ಓಡಿ ಬಂದು ಮಧ್ಯಾಹ್ನದ ನಿದ್ದೆ ತೆಗೆಯುತ್ತಿದ್ದ ಅಪ್ಪನಿಗೆ ವರದಿ ಮಾಡಿದಳು. ಮಹಿಳೆಯರ ಅಹವಾಲನ್ನು ಕೂಡಲೇ ಮನ್ನಿಸುತ್ತಿದ್ದ ಅಪ್ಪ, ಧಡ್ಡನೆ ಎದ್ದವನು ಕೋವಿಹಿಡಿದು ಕೆರೆಯತ್ತ ಓಡಿದ. ಹಾವು ಸಿಂಬೆಸುತ್ತಿ ಕೆರೆ ಏರಿದಡದಲ್ಲಿದ್ದ ಒಂದು ಮಾವಿನ ಮರದಡಿ ಮಲಗಿತ್ತಂತೆ. ಗುಂಡು ಹಾರಿಸಿದ. ಊರೆಲ್ಲ ಹೋಗಿ ತಲೆಛಿದ್ರವಾಗಿದ್ದ ಹಾವನ್ನು ನೋಡಿಬಂದಿತು. ಇನ್ನೊಮ್ಮೆ ಅಪ್ಪ ಪ್ರತಿರಾತ್ರಿ ಶೇಂಗಾ ಹೊಲವನ್ನೆಲ್ಲ ಗೂರಾಡಿ ಹಾಳುಮಾಡುತ್ತಿದ್ದ ಕಾಡುಹಂದಿಯನ್ನು, ಮಂಚಿಕೆಯ ಮೇಲೆ ಕಾದುಕೂತಿದ್ದು ಹೊಡೆದು ಹಾಕಿದ. ನಾವೆಲ್ಲ ಹೋದಾಗ ಹಂದಿ ಆಗಸಕ್ಕೆ ಕಾಲುಚಾಚಿ ಸೆಟೆದು ಮಲಗಿತ್ತು. ಸಾಮಾನ್ಯವಾಗಿ ಹಂದಿ ಹೊಡೆದಾಗ, ಇಂತಿಷ್ಟು ಮದ್ದುಗುಂಡು ಬದಲಿಯಾಗಿ ಕೊಡಿಸಬೇಕು ಎಂಬ ಕರಾರು ಹಾಕಿ ಅದನ್ನು ತಿನ್ನುವವರಿಗೆ ಕೊಡಲಾಗುತ್ತಿತ್ತು.

ನಮ್ಮ ಮನೆಯಲ್ಲಿ ಶಿಕಾರಿ ಮಾಡಿದ ಜಿಂಕೆ ಮತ್ತು ಕಾಡುಕುರಿಯ ಚರ್ಮಗಳು ಮನೆಯಲ್ಲಿ ಸಾಮಾನ್ಯವಾಗಿ ಇರುತ್ತಿದ್ದವು. ಅವನ್ನು ಕಿರುಚಾಪೆಯಂತೆ ಬಂದವರು ಕೂರಲು ಹಾಸುತ್ತಿದ್ದೆವು. ಅವನ್ನು ಜೋಳಿಗೆ ಮಾಡಿಕೊಳ್ಳಲು ವಷ್ಟುಮರ ದಾಸಯ್ಯಗಳು ಕೇಳಿ ಇಸಿದುಕೊಂಡು ಹೋಗುತ್ತಿದ್ದರು. ಅವುಗಳಲ್ಲಿ ಕಾಡುಕುರಿಯ ತುಪ್ಪಳವಿದ್ದ ಒಂದು ಚರ್ಮವನ್ನು ನಾನು ಇಟ್ಟುಕೊಂಡಿದ್ದೆ. ಸಿನಿಮಾದಲ್ಲಿ ಕೃಷ್ಣಾಜಿನದ ಮೇಲೆ ಕೂರುವ ಋಷಿಯಂತೆ ಕೂತು, ಅದರ ಮೇಲೆ ಸ್ಲೇಟು ಪುಸ್ತಕ ಇಟ್ಟುಕೊಂಡು ಓದಿಕೊಳ್ಳುತ್ತಿದ್ದೆ.

ಅಪ್ಪನಿಗೆ ಗಿಡಕ್ಕೆ ಹೋಗಲು ಆಗದಾಗ ಹೆಜ್ಜಾರ್ಲೆಗಳ ಬೇಟೆಗೆ ಕೆರೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದನು. ಕೆರೆಯಲ್ಲಿ ಹಾಪು ಬೆಳೆದ ಕಡೆ ಮರಸು ಮಾಡಿಕೊಂಡೊ, ತನ್ನ ಮೈಮೇಲೆ ಸೊಪ್ಪುಸದೆ ಹಾಕಿಕೊಂಡು ಏರಿಮೇಲೆ ಮಲಗಿಯೊ, ಶಿಕಾರಿ ಮಾಡುತ್ತಿದ್ದನು. ನೋಡಲು ಸುಂದರವಾಗಿರುತ್ತಿದ್ದ ಹೆಜ್ಜಾರ್ಲೆ ಬಾತುಗಳು ಸೂಕ್ಷ್ಮ ಸ್ವಭಾವದವು. ನೀರನ್ನು ಜಲಪಾದಗಳಲ್ಲಿ ಬಗೆಯುತ್ತ ಕೊಕ್ಕನ್ನು ನೀರೊಳಗೆ ಅದ್ದಿಅದ್ದಿ ತೆಗೆಯುತ್ತ ಕೆರೆಯೊಳಗಿನ ಕಸವನ್ನು ಮೇಯುತ್ತ ದಡಕ್ಕೆ ಬರುತ್ತಿದ್ದವು. ಮನುಷ್ಯರ ಸುಳಿವು ಕಂಡೊಡನೆ ತೀರದಿಂದ ದೂರಸರಿದು ನಡುಗೆರೆಗೆ ಹೋಗಿಬಿಡುತ್ತಿದ್ದವು. ಅದಕ್ಕಾಗಿ ಅಪ್ಪ ಎತ್ತಿನ ಗಾಡಿಯನ್ನು ಕೆರೆಯ ಮೇಲೆ ನಿಲ್ಲಿಸಿ, ಅದರ ಕೆಳಗೆ ಅಡಗಿ ಶಿಕಾರಿ ಮಾಡುತ್ತಿದ್ದನು. ಗುಂಡು ತಾಗಿದ ಕೂಡಲೆ, ಬಾತುಗಳು ನೀರಲ್ಲಿ ಮುಳುಗಿ ಹೋಗದಂತೆ ಈಜುಬಿದ್ದು ಹಿಡಿದು ತರುತ್ತಿದ್ದನು. ಹೆಜ್ಜಾರ್ಲೆಗಳ ತುಪ್ಪಳ ಕೀಳುವಾಗ ಅವುಗಳ ಕತ್ತಿನ ಬಳಿಯಿರುವ ಕಾಮನಬಿಲ್ಲಿನ ಬಣ್ಣದ ಪುಕ್ಕಗಳನ್ನು ನಾವೆಲ್ಲ ಸಂಗ್ರಹ ಮಾಡಿ ಇಟ್ಟುಕೊಳ್ಳುತ್ತಿದ್ದೆವು. ಕೆರೆ ಒಣಗಿದಾಗ ಅಪ್ಪನ ತುಪಾಕಿ ಸಾಹಸ ನಮ್ಮ ಸ್ಕೂಲಿನ ಪಕ್ಕದ ತುರುಮಂದಿಗೆ ಶಿಫ್ಟ್ ಆಗುತ್ತಿತ್ತು. ಅಲ್ಲಿದ್ದ ಬಸರಿಮರದಲ್ಲಿ ಬೇಸಗೆಯಲ್ಲಿ ಕೆಂಪನೆಯ ರಕ್ತಬಣ್ಣದ ಹಣ್ಣುಗಳು ಕಿರುಕೊಂಬೆಗಳ ಗಿಣ್ಣುಗಳಿಗೆಲ್ಲ ಅಂಟಿಕೊಂಡಿರುತ್ತಿದ್ದವು. ಅವನ್ನು ತಿನ್ನಲು ಹಸಿರು ಬಣ್ಣದ ಹರವೆಗಳು ಬರುತ್ತಿದ್ದವು. ಅಪ್ಪ ಸಣ್ಣಚರೆ ಲೋಡ್ ಮಾಡಿ ಈಡು ಹಾರಿಸುತ್ತಿದ್ದನು. ಅವು ಕೆಳಕ್ಕೆ ಬಿದ್ದೊಡನೆ ಹಲಾಲ್ ಮಾಡಬೇಕು. ಆಗ ಅವುಗಳ ಕುತ್ತಿಗೆ ಹಿಡಿದುಕೊಳ್ಳಲು ಚಾಕು ಮತ್ತು ನೀರಿನ ಜತೆ ನಾನು ಹಾಜರಾಗಿರುತ್ತಿದ್ದೆ. ಮೇಷ್ಟರು ‘ಸಾಹೇಬರೆ ಹಕ್ಕಿಗಳನ್ನು ಹೊಡೆಯಬೇಡಿರಿ’ ಎನ್ನುವರು. ‘ಬಾಯಿ ಕೆಟ್ಟಿದೆ. ಏನ್ ಮಾಡನ ಸ್ವಾಮಿ’ ಎಂದು ಅಪ್ಪ ಅಸಹಾಯಕತೆಯಿಂದ ಬದಲು ಹೇಳುವನು. ಅಪ್ಪ ಮೊದಲ ಮಳೆಬಿದ್ದು ಸಣ್ಣಗೆ ಹುಲ್ಲುಚಿಗುರುವ ಕಾಲಕ್ಕೆ, ಮೊಲದ ಬೇಟೆಗೆ ಸರ್ಕಾರಿ ದನಮೇಯುವ ಕಾವಲಿಗೆ ಹೋಗುತ್ತಿದ್ದನು. ಪಾಪದ ಮೊಲಗಳು ಬ್ಯಾಟರಿಯ ಪ್ರಖರ ಬೆಳಕಿಗೆ ಚಕಿತವಾಗಿ ಕಣ್ಣುಕೊಟ್ಟು ದೃಷ್ಟಿಸ್ಥಂಭನವಾಗಿ ನಿಂತಲ್ಲೆ ನಿಂತುಬಿಡುತ್ತಿದ್ದವು. ಅವನ್ನು ದೊಡ್ಡಛರೆ ಹಾಕಿ ಹೊಡೆಯುತ್ತಿದ್ದನು. ಅಮ್ಮ ಕಾರ ಅರೆದುಕೊಂಡು ಕಾಯುತ್ತಿದ್ದಳು. ರಾಗಿಮುದ್ದೆಗೆ ಮಾಂಸದ ಸಾರು ರೆಡಿಯಾಗುತ್ತಿತ್ತು


ತನ್ನ ಜೀವಮಾನದಲ್ಲಿ ಎಷ್ಟೋ ಹಾವು ಹಕ್ಕಿ ಪ್ರಾಣಿಗಳನ್ನು ಹೊಡೆದು ವೀರನೆನಿಸಿಕೊಂಡ ಅಪ್ಪನ ಕೋವಿಗೆ ತರೀಕೆರೆಗೆ ಬಂದ ಕೂಡಲೆ ನಿರುದ್ಯೋಗ ಶುರುವಾಯಿತು. ಅದು ಅಟ್ಟದ ಅಡ್ಡತೊಲೆಗೆ ಹೊಡೆದ ಮೊಳೆಗಳ ಮೇಲೆ ಆಸೀನವಾಗಿ ತನ್ನ ವಿಶ್ರಾಂತ ಜೀವನ ಆರಂಭಿಸಿತು. ವರ್ಷಕ್ಕೆ ಎರಡು ಸಲ ಅದು ಕೆಳಗಿಳಿದು ಬರುತ್ತಿತ್ತು. ಒಂದು- ಊರಲ್ಲಿ ಎಲೆಕ್ಷನ್ ಇದ್ದಾಗ ಇಲ್ಲವೇ ಗಲಭೆ ನಡೆದಾಗ, ಕೋವಿದಾರರು ಕೋವಿಗಳನ್ನು ಪೋಲಿಸ್ ಸ್ಟೇಶನ್ನಿನಲ್ಲಿ ಡಿಪಾಜಿಟ್ ಮಾಡಬೇಕಾಗುತ್ತಿತ್ತು. ಎರಡು-ಲೈಸನ್ಸ್ ರಿನ್ಯೂವಲ್ ಮಾಡಲು ತಹಸಿಲ್ದಾರ್ ಆಫೀಸಿಗೆ ಒಯ್ಯಬೇಕಾಗುತ್ತಿತ್ತು. ಆಗೆಲ್ಲ ಅಪ್ಪ ಕೋವಿಯನ್ನು ಹೆಮ್ಮೆಯಿಂದ ಹೊತ್ತುಕೊಂಡು ಬಿಎಚ್ ರಸ್ತೆಯಲ್ಲಿ ಹೋಗಿ ಬರುತ್ತಿದ್ದನು. ಕೋವಿ ಮತ್ತೆ ಮೊಳೆಗಳ ಮೇಲೆ ವಿರಾಜಮಾನವಾಗುತ್ತಿತ್ತು. ಅದರ ಬೆಲ್ಟು ಹಾರದಂತೆ ಕೆಳಗೆ ತೂಗುತ್ತಿತ್ತು. ಅದರ ಕೆಳಗೆ ಒಂದು ಹಳೆಯ ಬೆತ್ತದ ಕುರ್ಚಿ ಹಾಕಿಕೊಂಡು ಅಪ್ಪ ಕುಳಿತುಕೊಳ್ಳುತ್ತಿದ್ದನು. ಮನೆಗೆ ಬಂದವರು ಹಾಲಿನಲ್ಲಿ ಕಾಣುತ್ತಿದ್ದ ಕೋವಿನೋಡಿ ಆದರಮಿಶ್ರಿತ ದನಿಯಲ್ಲಿ ಅದರ ವಿಚಾರಣೆ ಮಾಡುತ್ತಿದ್ದರು. ಆಗ ಅಪ್ಪ ಅವರ ಮುಂದೆ ಗಣೇಶಬೀಡಿ ಕಟ್ಟೆಸೆದು, ಬೈಟುಟೀಗೆ ಹೇಳಿ, ತನ್ನ ಶಿಕಾರಿಯ ಕತೆಗಳನ್ನು ಹೇಳಲು ಪೀಠಿಕೆ ಹಾಕುತ್ತಿದ್ದನು.

ಲಕ್ಚರರ್ ಮಗನೊಂದಿಗೆ ಅಪ್ಪ ಒಂದು ದಿನ, ಅಪ್ಪ ತನಗೆ ತೀರಾ ವಯಸ್ಸಾದ ಬಳಿಕ, ನಮ್ಮನ್ನೆಲ್ಲ ಕೂರಿಸಿಕೊಂಡು, ಕೋವಿಯನ್ನು ಯಾರ ಹೆಸರಿಗೆ ವರ್ಗಾವಣೆ ಮಾಡಬೇಕು ಎಂದು ಚರ್ಚೆ ಆರಂಭಿಸಿದನು. ಅದಕ್ಕಾಗಿ ನಮ್ಮಲ್ಲಿ ಪೈಪೋಟಿಯಾಗುತ್ತದೆ ಎಂದು ಆತ ಭಾವಿಸಿದ್ದನೊ ಏನೊ? ದೊಡ್ಡಣ್ಣನು ‘ನನಗೆ ಇದರ ಸವಾಸ ಬೇಡಪ್ಪ’ ಎಂದನು. ಪೋಲಿಸರೆಂದರೆ ಅಳುಕುತ್ತಿದ್ದ ಅವನು, ಸುತ್ತಮುತ್ತ ಎಲ್ಲಿ ಗುಂಡು ಹಾರಿದರೂ, ಕೋವಿಯಿರುವ ಮನೆಗೆ ಬಂದು ಅವರು ವಿಚಾರಣೆ ಮಾಡುತ್ತಿದ್ದುದನ್ನು ಕಂಡಿದ್ದನು. ಇನ್ನು ನಾನು ‘ಲಚ್ಚರ್ರು’. ಕೋವಿ ತೆಗೆದುಕೊಂಡು ಏನು ಮಾಡುವುದು? “ಹೆಣಗ ನನ್ಮಕ್ಕಳಾ! ಒಂದು ಕೋವಿ ಇಟ್ಟುಕೊಳ್ಳಕೆ ಆಗಲ್ಲ ಅಂತೀರಿ. ನೀವು ಗಂಡಸರೇನ್ರೊ? ಮನೆ ಮರ್ಯಾದಿ ಇದು. ಉಳಿಸಿಕೊಳ್ರೊ” ಎಂದು ಕೂಗಾಡಿದನು. ಅದನ್ನು ಕೊನೆಗೆ ಮಾರಲು ಯತ್ನಿಸಿದನು. ಕೇಪಿನ ಕೋವಿ. ಯಾರು ಕೊಳ್ಳುತ್ತಾರೆ? ಕೊನೆಗೊಂದು ದಿನ ಕೋವಿ ಹೊರತೆಗೆದು, ಇಡೀ ದಿನ ಸ್ವಚ್ಛ ಮಾಡಿದನು. ಅದಕ್ಕೆ ಮಸಿತುಂಬಿ, ಆಕಾಶಕ್ಕೆ ಹುಸಿಈಡು ಹಾರಿಸಿ, ಸ್ಟೇಶನ್ನಿಗೆ ಹೋಗಿ ಸರೆಂಡರ್ ಮಾಡಿ ಬಂದನು.

ಅಪ್ಪ ತನ್ನ ಕೊನೆಯ ದಿನಗಳಲ್ಲಿ ಹಾಸಿಗೆ ಹಿಡಿದು ಮೂರು ತಿಂಗಳು ಮಲಗಿದನು. ಆಗ ಕೋವಿ ಮೊಳೆಗಳ ನೇರ ಕೆಳಕ್ಕೆ ಹಾಕಲಾದ ಮಂಚದಲ್ಲಿ ಅಂಗಾತ ಬಿದ್ದುಕೊಂಡಿರುತ್ತಿದ್ದನು. ಮೊಳೆಗಳಿಗೆ ಅವನ ಮಾತ್ರೆ ಟಾನಿಕ್ಕುಗಳ ಕವರನ್ನು ನಾವು ಸಿಗಿಸುತ್ತಿದ್ದೆವು. ಈಗಲೂ ಆ ಮೊಳೆಗಳು ಕೋವಿ ಹೊರುವ ಕೆಲಸವಿಲ್ಲದೆ ಸ್ವತಂತ್ರವಾಗಿ ಅಲ್ಲೇ ಇವೆ. ಆ ಮನೆಯಲ್ಲಿರುವ ನನ್ನ ತಮ್ಮ ಅವಕ್ಕೆ ಛತ್ರಿ, ಮಕ್ಕಳ ಸ್ಕೂಲ್ ಬ್ಯಾಗು, ಬೀಗದಕೈ ನೇತು ಹಾಕುತ್ತಿದ್ದಾನೆ