ಒಂದು

ತರೀಕೆರೆಯಲ್ಲಿ ಸಂತೆ ನೆರೆಯುವ ಜಾಗಕ್ಕೆ ಸಮೀಪದಲ್ಲಿ ನಮ್ಮ ಮನೆಯಿತ್ತು. ಪ್ರತಿ ಶುಕ್ರವಾರ ನಮ್ಮನ್ನು ಎಬ್ಬಿಸುತ್ತಿದ್ದುದು ಮಸೀದಿಯ ಬಾಂಗ್ ಅಲ್ಲ. ಗುಡಿಯ ಸುಪ್ರಭಾತವಲ್ಲ. ಬದಲಿಗೆ ನಮ್ಮೂರ ಸಂತೆಯ ಗೌಜು. ಆ ಇಂಪಾದ ಗೌಜನ್ನು ಭಾವಕೋಶದಲ್ಲಿ ಹೇಗೊ ಉಳಿಸಿಕೊಂಡಿರುವ ನನಗೆ ಅಕ್ಕಮಹಾದೇವಿಯ `ಸಂತೆಯೊಳಗೆೊಂದು ಮನೆಯ ಮಾಡಿ’ ವಚನವನ್ನು ಓದುವ ಸಂದರ್ಭ ಬಂದಾಗ, ಯಾಕೊ ಕೆಣಕಿದಂತಾಯಿತು.

                        ಎರಡು

ಅಕ್ಕ ತನ್ನ ವಚನದಲ್ಲಿ `ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆ ಎಂತಯ್ಯಾ?’ ಎಂದು ಪ್ರಶ್ನೆ ಹಾಕಿಕೊಳ್ಳುತ್ತಾಳೆ. ಇದಕ್ಕೆ ಉತ್ತರ ಆ ಪ್ರಶ್ನೆಯ ಒಳಗೇ ಇದ್ದಂತಿದೆ. ಆ ಉತ್ತರವೆಂದರೆ- ನಾವು ಬದುಕುವ ಪರಿಸರ ಸಂತೆಯಂತಿದೆ. ಅಲ್ಲಿಂದ  ಸದ್ದು ಬರುವುದು ಸಹಜ. ಅದು ಅನಿವಾರ್ಯ ಎಂದು.

ಹಾಗಾದರೆ ಇದಕ್ಕೆ ಪರಿಹಾರವೇನು? ನಮ್ಮ ಮನೆಯನ್ನು ಇವು ಇರದಂತಹ ಕಡೆ ಮಾಡುವುದೊ? ಅಥವಾ ಈ ಶಬ್ದವನ್ನೇ ಇಲ್ಲವಾಗಿಸುವುದೊ? ಅಕ್ಕನ ಪ್ರಕಾರ ಇವೆರಡೂ ಪರಿಹಾರವಲ್ಲ. ಪರಿಹಾರವೆಂದರೆ, ಬದಲಿಸಲಾಗದ ಇವನ್ನು ಮುಖಾಮುಖಿ ಮಾಡಬೇಕು, ಸಹಿಸಿಕೊಂಡು ಇವುಗಳ ಜತೆಗೇ ಬದುಕಬೇಕು. ಬೇರೆದಾರಿಯಿಲ್ಲ. ವಚನದ ಕಡೆಗೆ ಅವಳು “ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿನಿಂದೆಗಳ ಬಂದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು” ಎಂದು ತತ್ವಜ್ಞಾನದ ಒಂದು ಹೇಳಿಕೆಯನ್ನು ಜೋಡಿಸುತ್ತಾಳೆ.

ಒಂದರ್ಥದಲ್ಲಿ ಇದು ಜೀವನದ ಅತ್ಯಂತ ವಾಸ್ತವವಾದಿ ಧೋರಣೆ. ಅನಗತ್ಯ ಆದರ್ಶವಾದಿಯಾಗಿರಬಾರದು, ಸ್ಥಿತಪ್ರಜ್ಞರಾಗಿರಬೇಕು ಎಂಬ ಅರ್ಥವೂ ಇದರಲ್ಲಿದ್ದಂತಿದೆ. ವೈಯಕ್ತಿಕವಾಗಿ ಅಕ್ಕನ ಜೀವನದ ಸಂದರ್ಭವು ಇಂತಹದೊಂದು ನಿಲುವು ತಾಳಲು ಕಾರಣವಾಗಿರಬಹುದು. ಅವಳು ಮನೆ ಗಂಡ ಸಂಸಾರ ಬಿಟ್ಟು, ಏಕಾಂಗಿಯಾಗಿ ದೂರದ ಶ್ರೀಶೈಲಕ್ಕೆ, ಅಲೌಕಿಕ ಗಂಡನಾದ ಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಹೊರಟವಳು; ಅದೂ ಬತ್ತಲೆಯಾಗದೆ ಬಯಲು ಸಿಕ್ಕದು ಎಂದೋ ಏನೋ ಕೇಶಾಂಬರೆಯಾಗಿ ಹೊರಟವಳು; ಅಂಥವಳು ಹಾದಿಯಲ್ಲಿ  ಎದುರಿಸಿರಬಹುದಾದ ಟೀಕೆ ಕಿರುಕುಳಗಳನ್ನು ಯಾರೂ ಊಹಿಸಬಹುದು.

ಆದರೆ “ಸಂತೆಯೊಳಗೊಂದು ಮನೆಯ ಮಾಡಿ” ಸಾಲಿನಲ್ಲಿರುವ `ಸಂತೆ’ ಶಬ್ದವನ್ನು ಅಕ್ಕನ ಜೀವನ ಸನ್ನಿವೇಶದಿಂದ ಹೊರಗಿಟ್ಟು ನೋಡಿದರೆ, ಬೇರೆಬೇರೆ ಅರ್ಥಗಳು ಕೂಡ ಹೊಳೆಯತೊಡಗುತ್ತವೆ. ಮೊದಲನೆಯದಾಗಿ-ನಾವು ಬದುಕುವ ಪರಿಸರವನ್ನು ಮೂಲಭೂತವಾಗಿ ಬದಲಿಸಲು ಸಾಧ್ಯವಿಲ್ಲ. ಅದಕ್ಕೆ ಹೇಗಾದರೂ ಹೊಂದಿಕೊಂಡು ಬದುಕಬೇಕು ಎಂಬರ್ಥ. ಇದೊಂದು ಬಗೆಯಲ್ಲಿ ಯಥಾಸ್ಥಿತಿವಾದಿ ಅರ್ಥ. ಬದುಕುವ ಪರಿಸರ ಚೆನ್ನಾಗಿದ್ದಾಗ ಯಥಾಸ್ಥಿತಿವಾದವೇನೂ ರಗಳೆಯಲ್ಲ. ಆದರೆ ಪರಿಸರ ಬದುಕಲು ಅಸಹನೀಯ ಎನಿಸುವಷ್ಟು ಕೆಟ್ಟಿದ್ದರೆ? ಆಗಲೂ ಅದರ ಜತೆ ಅಡ್ಜಸ್ಟ್ ಮಾಡಿಕೊಂಡು ಬದುಕಬೇಕು ಎನ್ನುವುದು ಬದಲಾವಣೆಯ ಇಲ್ಲವೇ ಪರ್ಯಾಯ ಕಟ್ಟುವಿಕೆಯ ಸಾಧ್ಯತೆಯನ್ನು ನಿರಾಕರಿಸಿಕೊಂಡಂತೆ. ಒಂದೊಮ್ಮೆ ಈ ಧೋರಣೆಯನ್ನು `ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ನಂಬಿದ್ದ ಬಸವಣ್ಣ ತಾಳಿದ್ದರೆ ಏನಾಗಿರುತ್ತಿತ್ತು? ಪ್ರಥಮತಃ ಶರಣ ಚಳುವಳಿಯೇ ಇರುತ್ತಿರಲಿಲ್ಲ. ಎರಡನೆಯದಾಗಿ- ಇದು `ಬಿ ಎ ರೋಮನ್ ವೈಲ್ ಇನ್ ರೋಂ’ ಎಂಬ ಬದುಕುವ ಉಪಾಯ ಸೂಚನೆಯ ಅರ್ಥವನ್ನೂ ವ್ಯಂಜಿಸುತ್ತದೆ. ಇದೊಂದು ಬಗೆಯಲ್ಲಿ ಅವಕಾಶವಾದಿತನಕ್ಕೆ ಹಾದಿ ಮಾಡಿಕೊಡುವ ಅರ್ಥವೂ ಆದೀತು.  ನಾವೆಲ್ಲಿದ್ದರೂ ನಮ್ಮ ಜೀವನ ದೃಷ್ಟಿಕೋನ ಬಿಡುವುದಿಲ್ಲ ಎಂಬ ಸ್ವಾಭಿಮಾನಕ್ಕೆ ಬದಲಾಗಿ, ಲೋಕದ ಸ್ವಭಾವವೇ ಹೀಗಿದೆ. ನಾನೊಬ್ಬ ಏನು ಮಾಡಲಿ ಎಂಬ ರಾಜಿಮನೋಭಾವದತ್ತ ಇದು ಕರೆದೊಯ್ಯಬಹುದು. ಮೂರನೆಯದಾಗಿ-ಲೋಕದ ರಚನೆಯಲ್ಲಿ ಕೆಲವು ಮೂಲಭೂತ ಸಂಗತಿಗಳಿದ್ದು, ಅವನ್ನು ಬದಲಾಯಿಸಲು ಸಾಧ್ಯವಿಲ್ಲ. ಉದಾಹರಣೆಗೆ ಮುಪ್ಪು ಅಥವಾ ಸಾವು. ಮನುಷ್ಯರಾಗಿ ಹುಟ್ಟಿದ ಬಳಿಕ ಒಂದಲ್ಲಾ ಒಂದು ದಿನ ಇವೆರಡನ್ನೂ ಮುಖಾಬಿಲೆ ಮಾಡಲೇಬೇಕು ಎಂಬರ್ಥವನ್ನು ಇದು ಧ್ವನಿಸುತ್ತದೆ. ಈ ಕಠೋರ ವಾಸ್ತವಕ್ಕೆ ಒಮ್ಮೆ ಡಿಕ್ಕಿ ಹೊಡೆಯಲೇಬೇಕಿದ್ದು, ಯಾವುದೇ ಬದಲಾವಣೆ, ಹೋರಾಟ ವ್ಯರ್ಥ ಎಂಬ ನಿರಾಶೆಯೂ ಹುಟ್ಟಬಹುದು. ಕಂತೆ ಒಗೆಯುವ  ಮುನ್ನ ಅರ್ಥಪೂರ್ಣವಾಗಿ ಬದುಕಬೇಕು ಎಂದು ಛಲವೂ ಹುಟ್ಟಬಹುದು. ಕೆಲವೊಮ್ಮೆ ಸಾವಿನಂತಹ ಘೋರಸತ್ಯವನ್ನು ಎದುರಿಟ್ಟುಕೊಂಡೇ ಲೋಕದಲ್ಲಿ ಪರಿವರ್ತನೆಗಳು ಸಂಭವಿಸಿವೆ. ಪರಿಸ್ಥಿತಿಗೆ ಹೊಂದಿಕೊಂಡು ಹೋಗುವವರು ಜೀವನದಲ್ಲಿ ಯಾವ ದೊಡ್ಡದನ್ನು ಸಾಧಿಸಿದ್ದಾರೆ? ಪರಿಸ್ಥಿತಿಯನ್ನು ತಮ್ಮ ಆದರ್ಶಕ್ಕೆ ತಕ್ಕಂತೆ ಬದಲಿಸುವವರು, ಬದಲಿಸಕ್ಕಾಗದೆ ಸೋತಿರಬಹುದು. ಆದರೆ ಅವರ ಸೆಣಸಾಟವೂ ನಮ್ಮ ಎದುರು ಇಂದು ಆದರ್ಶವಾಗಿದೆ ತಾನೇ?
                                                                                                                                                                            ಮೂರು

ಇಷ್ಟೆಲ್ಲ ಚಿಂತಿಸಿದರೂ, `ಸಂತೆ’ ಶಬ್ದವನ್ನು ಜನಜಂಗುಳಿಯ ಲೋಕ, ನೆಮ್ಮದಿಯಿಂದ ಬದುಕಲಾಗದವರ ಪಾಲಿಗೆ ಅನಿಷ್ಟ ಎಂಬ ನೆಗೆಟಿವ್ ಅರ್ಥದಲ್ಲಿ ಅಕ್ಕ ಬಳಸಿದ್ದನ್ನು  ಯಾಕೊ ನನ್ನ ಮನಸ್ಸು ಒಪ್ಪುತ್ತಿಲ್ಲ. ನನಗೆ ನನ್ನ ಬಾಲ್ಯ ನೆನಪಾಗುತ್ತಿದೆ. ಚಿಕ್ಕಂದಿನಲ್ಲಿ ಐದೇ  ನಿಮಿಷಕ್ಕೆಂದು ಎಚ್ಎಂ ಕೋಣೆಗೆಂದು ಹೋದ ಮೇಷ್ಟರು ಅರ್ಧ ತಾಸಾದರೂ ಬಾರದೆ ಹೋದಾಗ, ನಾವು ಅಸಾಧ್ಯ ಗಲಭೆಯನ್ನು ಹುಟ್ಟುಹಾಕುತ್ತಿದ್ದೆವು. ಮೇಷ್ಟರು ಓಡಿ ಬಂದವರೇ “ಲೋ ಇದೇನು ಸ್ಕೂಲೋ ಮೀನುಸಂತೆಯೋ?” ಎಂದು ಬಯ್ಯುತ್ತಿದ್ದರು. ಅದರಲ್ಲೂ ಪಕ್ಕದ ಕ್ಲಾಸಿನಲ್ಲಿದ್ದ ಹಿಂದೀ ಟೀಚರ್ ಜತೆ ಮಾತಾಡುವುದನ್ನು ಅರ್ಧಕ್ಕೆ ನಿಲ್ಲಿಸಿ ಬಂದಾಗಲಂತೂ ಅವರಿಗೆ ಪ್ರಚಂಡ ಸಿಟ್ಟು. `ಥೂ ಸಂತೆ ನನ್ನ ಮಕ್ಕಳಾ’ ಎಂದು ಹರಸುತ್ತಿದ್ದರು.  ನನ್ನ ಅಪ್ಪ ಕೂಡ ಮನೆಯ ವಸ್ತುಗಳು ಅಲ್ಲಲ್ಲೇ ಬಿದ್ದುದನ್ನು ಕಂಡಾಗ “ಏನೇ! ಮನೇನ ಸಂತೆ ಮಾಡಿಕೊಂಡಿದಿಯಲ್ಲೇ” ಎಂದು ಅಮ್ಮನಿಗೆ ಬೈಯುತ್ತಿದ್ದ. ಈಗಲೂ ಕರಾವಳಿಯ ನನ್ನ ಗೆಳತಿಯೊಬ್ಬರು ತನಗಾಗದವರನ್ನು ಬೈಯುವಾಗ `ಛೀ. ಅದಾ? ಅದೊಂದು ಸಂತೆ’ ಎಂದು ಟೀಕಿಸುವುದುಂಟು. `ಚಿಂತೆಯಿಲ್ಲದೋಳಿಗೆ ಸಂತೇಲಿ ನಿದ್ದೆ ಬಂತಂತೆ’ ಎಂಬ ಗಾದೆಯಲ್ಲೂ ಸಂತೆ ಬಗ್ಗೆ ಒಳ್ಳೇ ಅಭಿಪ್ರಾಯವೇನಿಲ್ಲ. ಎಲ್ಲಕಡೆಯೂ ಸಂತೆಗೆ ಅದು ಅವ್ಯವಸ್ಥೆಯ ಗಲಭೆಯ ಸಂಕೇತ; ವ್ಯವಸ್ಥೆ ಶಾಂತಿ ಏಕಾಂತ ಬಯಸುವವರಿಗೆ ಸಲ್ಲದ ಜಾಗ ಎಂಬರ್ಥವೇ ಇದ್ದಂತಿದೆ.

ಆದರೆ ಇದೇ  `ಸಂತೆ’ ತಾವು ಬೆಳೆದದ್ದನ್ನೊ ಸಾಕಿದ್ದನ್ನೊ ಮಾರುವ ರೈತರ ಮತ್ತು ಪಶುಗಾಹಿಗಳ ಪಾಲಿಗೆ ಅಥವಾ ತಮ್ಮಲ್ಲಿ ಇಲ್ಲದ ವಸ್ತುಗಳನ್ನು ಕೊಳ್ಳಲು ಹೋಗುವ ಗಿರಾಕಿಗಳ ಪಾಲಿಗೆ? ಖಂಡಿತಾ ಅನಿಷ್ಟದ ಸಂಕೇತವಲ್ಲ. ವಾರಕ್ಕೊಮ್ಮೆ ಸಂತೆಗೆ ಹೋಗುವುದು ಎಂದರೆ ಹಳ್ಳಿಗರಿಗೆ ಅದೊಂದು ಬಿಡುಗಡೆಯ ದಿನ ಕೂಡ. ಬಟವಾಡೆ ಮಾಡಿಕೊಂಡ ಕೂಲಿಯವರು ಅವತ್ತು ರಜೆಯ ಸಂತಸವನ್ನು ಅನುಭವಿಸುತ್ತಾರೆ. ಸಂತೆಗೆ ಬಂದವರು ಕೇವಲ ಮಾರುವುದು ಕೊಳ್ಳುವುದು ಮಾಡುವುದಿಲ್ಲ. ಹೋಟೆಲಿಗೆ ಹೋಗಿ ಮಸಾಲೆದೋಸೆ ತಿನ್ನುತ್ತಾರೆ. ಸಿನಿಮಾ ನೋಡುತ್ತಾರೆ. ಕದ್ದು ಸಂತೆಗೆ ಬಂದಿರುವ ತಮ್ಮ ಪ್ರೇಮಿಗಳನ್ನು ಭೇಟಿಮಾಡುತ್ತಾರೆ. ಕಳ್ಳಿನಂಗಡಿಗೆ ಹೋಗಿ ಚಾಕಣ ನಂಜಿಕೊಂಡು ಕುಡಿಯುತ್ತಾರೆ. ಮನೆಗೆ ಹೋಗುವಾಗ ಮಕ್ಕಳಿಗೆ ಪುರಿ, ಬಟ್ಟೆಬರೆ ಖರೀದಿಸುತ್ತಾರೆ. ತಮಗೆ ಪರಿಚಿತರು ಸಿಕ್ಕರೆ ಒಂದು ಮೂಲೆಯಲ್ಲಿ ಕುಳಿತು ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಅದೊಂದು ಹಬ್ಬ. ಜಾತ್ರೆ. ನಮ್ಮ ಉರುಸು ಜಾತ್ರೆಗಳೂ ಒಂದರ್ಥದಲ್ಲಿ ಸಂತೆ ತರಹವೇ. ಜನಜಂಗುಳಿಯೆ ಅಲ್ಲಿನ ವಿಶಿಷ್ಟತೆ; ಅದೇ ಅವುಗಳ ಸಂಭ್ರಮಕ್ಕೆ ಕಾರಣ.

ನನಗೆ ಸಂತೆಯಲ್ಲಿ ತಿರುಗುವುದು ಸದಾ ಖುಷಿ ಕೊಡುತ್ತದೆ. ತರೀಕೆರೆ ಸಂತೆಗೆ ಸುತ್ತ 30-40 ಹಳ್ಳಿಯ ಜನ ಬರುತ್ತಿದ್ದರು. ಇಡೀ ವಾರ ಹಾರುಹೊಡೆದ ಮನೆಯಂತೆ ಬಿಕೋ ಎನ್ನುತ್ತಿದ್ದ ಶೆಡ್ಡುಗಳೆಲ್ಲ, ದವಸ ಧಾನ್ಯ ಹಣ್ಣು ತರಕಾರಿ ತುಂಬಿಕೊಂಡು ತುಂಬಿದ ಪ್ರಾಯದವರಂತೆ ಕಂಗೊಳಿಸುತ್ತಿರುತ್ತವೆ. ಬೆಳಗಿನ ಜಾವವೇ ನಮ್ಮೂರ ಸಂತೆಯ ಸಂಚಲನ  ಶುರುವಾಗಿರುತ್ತಿತ್ತು. ವಡೆ ಮಾಡುವವರು ಒಲೆ ಹೂಡುವುದು, ಶರಬತ್ತು ಮಾಡುವವನು ಬಣ್ಣಬಣ್ಣದ ಲೋಟಗಳಲ್ಲಿ ರಸವನ್ನು ಜೋಡಿಸುವುದು, ಹಾವಾಡಿಗರು ತಮ್ಮ ಆಟ ಹೂಡುವುದು, ರೈತರು ಹಿಂದಿನ ದಿನ ಸಂಜೆಯಷ್ಟೆ ಬಿಡಿಸಿದ ಕಾಯಿಪಲ್ಲೆಯ ಚೀಲಗಳನ್ನು ಬಿಚ್ಚಿ ಗಿರಾಕಿಗಳಿಗಾಗಿ ಕಾತರದಿಂದ ಕಾದಿರುವುದು, ಆ ರಶ್ಶಿನಲ್ಲೂ ಗಂಟೆ ಬಾರಿಸಿಕೊಂಡು ಚಾಟಿಯಲ್ಲಿ ಮೈಗೆ ಹೊಡೆದುಕೊಳ್ಳುತ್ತ ದುರಗಮುರುಗಿಯವನು ಬಾಗಿ ತಟ್ಟೆಹಿಡಿದು ಭಿಕ್ಷೆ ಬೇಡುವುದು, ಬನಾಸ್ಪತ್ರಿ ಹಣ್ಣನ್ನು ಉದ್ದಕ್ಕೆ ಸೀಳಿ ಅದನ್ನು ಹ್ಞಾ ಇಲ್ಲಿ ಸಕ್ರೇರಿ ಸಕ್ರೆ  ಎಂದು ಕೂಗುತ್ತ ಹಣ್ಣುಮಾರಾಟಗಾರ ಗಿರಾಕಿಗಳ ಕೈಗಿಡುವುದು, ಹರೀರ ಎಂದು ಕೆಳಗೆ ಕೆಂಡದ ಮೇಲಿಟ್ಟ ಕೆಟಲಿನಲ್ಲಿ ಹಾಕಿಕೊಂಡು ಬ್ಯಾರಿಕಾಕಾ ಸುತ್ತುವುದು, ಅಜ್ಜಿ ಕುದಿಯ ಎಣ್ಣೆಯಲ್ಲಿ ನಿರಂತರವಾಗಿ ಬೋಂಡದ ಹಳದಿ ಹಿಟ್ಟನ್ನು ಇಳಿಬಿಡಿವುದು-ಒಂದೇ ಎರಡೇ. ಇದರಲ್ಲಿ ನನಗೆ ಯಾವಾಗಲೂ ಕುತೂಹಲ ಹುಟ್ಟಿಸುವುದು ವ್ಯಾಪಾರದಲ್ಲಿ ನಡೆಯುವ ಜಗ್ಗಾಟ. ಕೊಳ್ಳುವವರಿಗೂ ಬೆಳೆದ ರೈತರಿಗೂ ನಡೆಯುವ ಚೌಕಾಸಿಯಾಟ. ಇದು  ಯಾವುದೇ ನಾಟಕದ ಸೀನಿಗೆ ಕಡಿಮೆಯಲ್ಲ. ನನಗೆ ನಿನ್ನ ಮಾಲು ಇಷ್ಟವಿಲ್ಲ ಎಂಬ ಭಾವತೋರುತ್ತ, ಮುಂದಕ್ಕೆ ಹೋಗಲು ಯತ್ನಿಸುವ ಗಿರಾಕಿ. ಬೇಡವಾದರೆ ಹೋಗು ಎಂಬ ಭಾವ ನಟಿಸುತ್ತ ಅವನನ್ನು ಸೆಳೆಯಲು ಯಾವ್ಯಾವುದೊ ಸೂತ್ರಗಳನ್ನು ಎಸೆದು ಬಂಧಿಸುತ್ತ ಹಿಡಿದಿಡುವ ಮಾರಾಟಗಾರ; `ಸರಿಯಾಗಿ ಅಳೆಯಮ್ಮ’ ಎಂದು ಅಸಹನೆಯಿಂದ ಒದರುವ ಗಿರಾಕಿ; `ಹ್ಞೂಂ ಕಣಪ್ಪ, ಅದರ ಮ್ಯಾಲೆ ನಾನೇ ಕುತ್ಕತೀನಿ’ ಎಂಬ ಮಾರಾಟಗಾರ್ತಿ. ತೀರ ಕಡಿಮೆ ಬೆಲೆಗೆ ಕೇಳುವ ಗಿರಾಕಿ; `ಬ್ಯಾಡ. ಹಂಗೇ ತಗಂಡು ಹೋಗ್ ಬಿಡು ಅತ್ಲಾಗೆ’ ಎಂದು ವ್ಯಂಗ್ಯದ ಬಾಣವನ್ನೆಸೆಯುವ ವ್ಯಾಪಾರಿ. ಎಲ್ಲರೂ ನಟರೇ.
ಯಾವುದೇ ಊರಿಗೆ ಹೋದರೆ, ಅಲ್ಲಿನ ಸಂತೆಯಲ್ಲಿ ತಿರುಗಾಡುವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಕರಾವಳಿಯ ಊರಿಗೆ ಹೋದರೆ ಮೀನು ಮಾರ್ಕೆಟ್ಟಿಗೆ ಕಡ್ಡಾಯವಾಗಿ ಹೋಗುತ್ತೇನೆ. ನೀರೊಳಗಿದ್ದ ಯಾವೆಲ್ಲ ಜೀವಚರಗಳು ಇಲ್ಲಿ ಮೀನುಗಾರ್ತಿಯ ಮುಂದಿನ ಹಲಗೆಯ ಮೇಲೆ ವಿವಿಧ ಭಂಗಿಗಳಲ್ಲಿ ಪವಡಿಸಿರುತ್ತವೆ. ನಾನು ಒಮ್ಮೆ ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದಲ್ಲಿ ನಡೆಯುವ ಕುರಿಆಡುಗಳ ಸಂತೆ ನೋಡಲು ಹೋಗಿದ್ದೆ. ಅದೊಂದು ಅಪೂರ್ವ ದೃಶ್ಯ. ಒಬ್ಬ ಜಾನುವಾರನ್ನು ಹಿಡಿದುಕೊಂಡಿದ್ದ ರೀತಿ, ಸೂರ್ಯನ ಸಾರಥಿ ಸಪ್ತಾಶ್ವಗಳ ಲಗಾಮನ್ನು ಹಿಡಿದುಕೊಂಡಂತೆ ತೋರುತಿತ್ತು. ಮಾರುಕಟ್ಟೆ ಅಥವಾ ಸಂತೆ, ಒಂದು ಪ್ರದೇಶದ ಕೃಷಿಸಂಸ್ಕೃತಿಯ ಭಾಗ;  ಆಹಾರ ಸಂಸ್ಕೃತಿಯ ಭಾಗ; ಕುಶಲವೃತ್ತಿಯ ಭಾಗ ಕೂಡ. ಸಾಮಾನ್ಯವಾಗಿ ನಮ್ಮೂರ ಸಂತೆಯ ಮೂಲೆಯಲ್ಲಿ ಕುಂಬಾರರು ಮಡಕೆಗಳನ್ನು ಇಟ್ಟುಕೊಂಡು ಕುಳಿತಿರುತಿದ್ದರು.  ನೆಲದೊಳಗಿನ ಮಣ್ಣು ಕುಲಾಲಚಕ್ರದಲ್ಲಿ ತಿರುಗಿ, ಕುಂಬಾರನಿಂದ ತಟ್ಟಿಸಿಕೊಂಡು, ಆವಿಗೆಯಲ್ಲಿ ಬೆಂದು, ಗಾಡಿಯಲ್ಲಿ ಹುಶಾರಾಗಿ ಸಂತೆಗೆ ಪಯಣ ಮಾಡಿ, ಸಂತೆ ಮೈದಾನದಲ್ಲಿ ಬಾಯಿ ತೆರೆದುಕೊಂಡು ಕೊಳ್ಳುವವರ ಕೈ ತಮ್ಮ ಕಂಠಕ್ಕೆ ಬೀಳಲೆಂದು ಕಾಯುತ್ತಿರುತ್ತವೆ. ಮುಂದೆಯೂ ಅವಕ್ಕೆ ಒಲೆಯ ಮೇಲೆ ಸುಟ್ಟುಕೊಳ್ಳುವ ವಿಧಿ ತಪ್ಪಿದ್ದಲ್ಲ.  ಆದರೆ ತಮ್ಮನ್ನು ಸುಟ್ಟುಕೊಂಡು ತಮ್ಮ ಯಜಮಾನರ ಜಠರಾಗ್ನಿಯನ್ನು ತಣಿಸಲು ಅವು ಅಡುಗೆಯನ್ನು ಸಿದ್ಧಪಡಿಸಿಕೊಡುತ್ತವೆ. ನನಗೆ ಸಂತೆ ಮುಗಿದ ಮೈದಾನ ನೋಡುವುದು ಎಂದರೆ, ಮದುವೆ ಮುಗಿದ ಚಪ್ಪರವನ್ನೊ, ಹೆಣದ ಮುಖವನ್ನೊ ನೋಡಿದಂತೆ ನಿರಾಶೆ ಕವಿಯುತ್ತದೆ.
                                                                                                                      ನಾಲ್ಕು 

ಮನೆ, ಏಕಾಂತದ ನೆಮ್ಮದಿಯ ಸಂಕೇತ. ಅಂತರಂಗದ ಸಂಕೇತ. ಮನೆಯ ಹೊರಗಿನ ಜಗತ್ತು ಸಂತೆಯಂತೆ ಏಕಾಂತ ಸಾಧ್ಯವಿಲ್ಲದ, ಜಂಗುಳಿಯ ಜಾಗ. ಬಹಿರಂಗದ ಸಂಕೇತ.  ಆದರೆ ಮನೆ ಕೆಲವೊಮ್ಮೆ ಅನುಭವದಿಂದ ವಂಚಿಸುವ ಜಾಗ ಕೂಡ ಆಗಿ ತಳಮಳ ಹುಟ್ಟಿಸಬಲ್ಲದು. ಬುದ್ಧನ ಪಾಲಿಗೆ ಅರಮನೆ ಮತ್ತು ಅದರ ಏಕಾಂತ ಲೋಕದ ಸತ್ಯಗಳನ್ನು ಮುಚ್ಚಿಡುವ ಬಂಧೀಖಾನೆಯಾಗಿತ್ತು. ಆದ್ದರಿಂದಲೇ ಅವನು ಮನೆ ತೊರೆದು ಲೋಕದ ಸಂತೆಯಲ್ಲಿ ಬೆರೆತು ಬಾಳಿನ ಹೊಸ ಸತ್ಯಗಳನ್ನು ಮುಖಾಮುಖಿ ಮಾಡಲು ಹೊರಟನು. ನೆಮ್ಮದಿಯಿಂದ ಬದುಕುವವರಿಗೆ ಸಂತೆಯೊಂದು ಪೀಡೆ ನಿಜ. ಆದರೆ ಅವನ್ನೇ ಹುಡುಕಿಕೊಂಡು ಹೋಗುವವರೂ ಇದ್ದಾರೆ. ಅನೇಕ ಮಧ್ಯಮವರ್ಗದ ಶಾಂತಿಪ್ರಿಯ ಜನ,  ಹಳ್ಳಿಗಳನ್ನು ಅವು ಜಂಗುಳಿಯಿಲ್ಲದ ನಿರುಮ್ಮಳ ತಾಣಗಳೆಂದೂ, ಟ್ರಾಫಿಕ್ಕಿನಿಂದ ಕಿಕ್ಕಿರಿದಿರುವ ನಗರಗಳು ಸಂತೆಗಳೆಂದೂ ಭಾವಿಸಿರುವುದುಂಟು. ಆದರೆ ನಮಗೆ ನಗರಗಳಿಗೆ ಹೋದರೆ  ನಮ್ಮ ಬದುಕಿಗೊಂದು ತಿರುವು ಸಿಗುತ್ತದೆ ಎಂದು ಹಂಬಲಿಸಿ ದಿನನಿತ್ಯ ರೈಲು ಬಸ್ಸು ಹತ್ತುವ ನೂರಾರು ಹಳ್ಳಿಗರನ್ನು ನೋಡಿದರೆ, ದೊಡ್ಡಸಂತೆಯ ಆರ್ಥಿಕತೆಯಲ್ಲಿ (ಮಾರ್ಕೆಟ್ ಎಕಾನಮಿ) ಮನೆಮಾಡಲು ಹೋಗುವವರು ಜಾಸ್ತಿ ಆಗುತ್ತಿರುವುದು ಕೂಡ ತಿಳಿಯುತ್ತದೆ. ಇಲ್ಲಿ ಶಬ್ದಕ್ಕೆ ನಾಚುವ ಪ್ರಶ್ನೆಯೇ ಇಲ್ಲ. ಮಹಾನಗರವಾಗಿ ಹುಟ್ಟಿರ್ದ ಬಳಿಕ ಜನಪ್ರವಾಹಕ್ಕೆ ಅಂಜಿದಡೆ ಎಂತಯ್ಯಾ ಎಂದು ಮಹಾನಗರವೇ ನಾಚಬೇಕು