ಜಗತ್ತಿನ ಬೇರೆ ಬೇರೆ ಧರ್ಮಗಳ‌ ನಡುವೆ ಕಿತ್ತಾಟವಂತೂ ಇದ್ದೇ ಇದೆ, ಆದರೆ ಒಂದೇ ಧರ್ಮದಲ್ಲಿ‌ ಬೇರೆ ಬೇರೆ ಸ್ತರಗಳು ಹೇಗೆ ಮತ್ತು ಅವುಗಳು‌ ಹೇಗೆ ಪಾಶ್ಚಾತ್ಯ ದೇಶಗಳಿಗೆ ವಿಸ್ಮಯಕಾರಿಯಾದವು.. ಶ್ರೀಮಂತ ದೇಶವಾಗಿದ್ದ ಭಾರತದ ಆ ಕಾಲಘಟ್ಟದ ಆಚರಣೆಗಳೇನಾಗಿದ್ದವು, ಅದು ಹೇಗೆ ಇತರರನ್ನು ಆಕರ್ಷಿಸುತ್ತಿತ್ತು.. ಒಂದೇ ಸಮಯದಲ್ಲಿ ಬೇರೆ ಬೇರೆ ಭೂಭಾಗದಲ್ಲಿ‌ ಒಂದೇ ವಸ್ತುವಿನ ಬೆಲೆ ಹೇಗೆ ಭಿನ್ನವಾಗಿತ್ತು.. ಮೂಲವನ್ನು ಬದಲಿಸಿದ ಮೇಲೂ ಮನುಷ್ಯ ಮೂಲಕ್ಕೆ‌ ಅಂಟಿಕೊಂಡೇ ಇರುತ್ತಾನಾ, ಸಾಮಾಜಿಕ‌ ನ್ಯಾಯಗಳೇನಾಗಿದ್ದವು, ಅಥವಾ ರಕ್ತಪಾತಗಳು ನಡೆವುದಕ್ಕೆ ಕಾರಣಗಳೇನಾಗಿದ್ದವು ಇತ್ಯಾದಿಗಳು ಬಿಡಿಬಿಡಿಯಾಗಿ‌ ನಮಗೆ ಬೇರೆ ಬೇರೆ ಪುಸ್ತಕಗಳಲ್ಲಿ‌ ಸಿಗುತ್ತವೆ, ಆದರೆ ಒಂದು ಕಾದಂಬರಿ ಇವೆಲ್ಲವನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದರೆ..?
ಶ್ರೀ ತಲಗೇರಿ ಬರೆದ ಲೇಖನ

 

ಕಾದಂಬರಿ ಬರೆಯುವಾಗ ಅಧ್ಯಯನ‌ ತುಂಬಾನೇ ಮುಖ್ಯ; ಅಷ್ಟು ಪುಟಗಳಲ್ಲೂ ಓದುಗನನ್ನ ಹಿಡಿದಿಟ್ಟುಕೊಳ್ಳುವುದರ ಜೊತೆಗೆ ಕತೆಯನ್ನ, ಪಾತ್ರಗಳನ್ನ ಬೆಳೆಸುವುದು ಮತ್ತು ಬಳಸುವುದು ಎರಡೂ ಕಠಿಣ ಕೆಲಸವೇ.. ಅಧ್ಯಯನವಿಲ್ಲದ ಕಾದಂಬರಿ ಒಂದು ಒಣ ಬರಹವಾಗುತ್ತದೆ, ರೋಚಕತೆಯನ್ನ ಕಳೆದುಕೊಂಡು ಜಾಳುಜಾಳಾಗುತ್ತದೆ. ಹಗುರ ಹಾಳೆಯ ಪುಟಗಳು ತಿರುವಲು ಭಾರವೆನಿಸಿಕೊಳ್ಳುತ್ತವೆ, ಬೇಡದ ಅದೆಷ್ಟೋ ಭಂಗಗಳು ನಮ್ಮ ಗಮನವನ್ನ‌ ಕೆಣಕುತ್ತಲೇ ಇರುತ್ತವೆ. ಅದರಲ್ಲೂ ಐತಿಹಾಸಿಕ ಕಾದಂಬರಿ ಬರೆಯುವಾಗ ಆ ಕಾಲಘಟ್ಟದ ಕುರಿತಾದ ಮಾಹಿತಿಯನ್ನು ಕಲೆಹಾಕುವುದು ಮತ್ತು ಅದರ ಕಲಾತ್ಮಕತೆಯನ್ನ ಮತ್ತು ಅದರ ಗಂಧವನ್ನ, ಗಾಂಭೀರ್ಯವನ್ನ, ಜನರ ಜೀವನವನ್ನ ಹಾಗೂ ಧಾರ್ಮಿಕ‌, ಸಾಮಾಜಿಕ, ಆಂತರಿಕ ಇತ್ಯಾದಿ ನಂಬಿಕೆಗಳನ್ನ ಅಭ್ಯಸಿಸುವುದು ಸುಲಭದ ಮಾತಲ್ಲ.. ಬೇರೆ ಯಾವುದೋ ದೇಶದ ಇತಿಹಾಸ ಮತ್ತು ನಮ್ಮ‌ ದೇಶದ ಇತಿಹಾಸ, ಹಾಗೂ ಅದರಲ್ಲಿನ ವ್ಯವಸ್ಥೆಗಳು, ಅದರಲ್ಲಿನ ದೋಷಗಳು ಎಲ್ಲವೂ ಕಣ್ಣಿಗೆ ಕಟ್ಟುವಂತೆ ಬರೆಯಬೇಕಲ್ಲವಾ.. ಅದೂ ಯಾರ ಭಾವನೆಗಳಿಗೆ ಧಕ್ಕೆಯಾಗದಂತೆ!

(ವಸುಧೇಂದ್ರ)

ಬೇರೆ ಸಂಸ್ಕೃತಿಯ ಜೊತೆಗೆ ನಮ್ಮ ಸಂಸ್ಕೃತಿಯ ಗೌರವವನ್ನೂ ಉಳಿಸಿಕೊಂಡು, ಹಾಗೇ ನಮ್ಮ ವೈಯಕ್ತಿಕ ನಂಬಿಕೆಗಳ ತೀವ್ರತೆ ಭಾಷೆಯ ನೆಲೆಗಟ್ಟಿನಲ್ಲಿಯೇ ಇರುವಂತೆ ನೋಡಿಕೊಂಡು, ಹೀಗಂತೆ ಅಂತ ಹೇಳುವಾಗ ಬರಹಗಾರ ಪ್ರಬುದ್ಧನೂ ಜೊತೆಗೆ ವೈಚಾರಿಕನೂ ಆಗಿರಬೇಕು.. ಅಂತಹ ಒಂದು ಸಾಹಸದ ಕೆಲಸವನ್ನು ಕೈಗೆತ್ತಿಕೊಂಡು, ಅತ್ಯಂತ ಮನೋಜ್ಞವಾಗಿ ಅದನ್ನ ಮುಗಿಸಿದವರು ವಸುಧೇಂದ್ರ ಅವರು.. ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿ ಹರಿದ ಎರಡು ನದಿಗಳನ್ನ ಇಡೀ ಕತೆಯುದ್ದಕ್ಕೂ ಜೀವ ವಾಹಿನಿಯಾಗಿ, ಜೀವನ ಕ್ರಮದ‌ ಭಾಗವಾಗಿ, ಮತ್ತು ಆಗುಹೋಗುಗಳ ದಾಖಲಾತಿಯಾಗಿ ತೆಗೆದುಕೊಂಡು ಸಿದ್ಧವಾದ ಆ ಕಾದಂಬರಿಯೇ ‘ತೇಜೋ ತುಂಗಭದ್ರಾ’…

ಧರ್ಮ, ಜಾತಿ, ಅಧಿಕಾರ, ಕಾಮ, ದಬ್ಬಾಳಿಕೆ ಇತ್ಯಾದಿ ಇತ್ಯಾದಿಗಳು ಈ ಜಗತ್ತನ್ನು ಆಳುವುದಕ್ಕೆ ಶುರು ಮಾಡಿ‌ ಅದೆಷ್ಟೋ ವರ್ಷಗಳು ಕಳೆದವು. ಮತ್ತೆ ಮತ್ತೆ ನಾವು ಡಾರ್ವಿನ್ನನ ಜೀವ ವಿಕಾಸದ ಸಿದ್ಧಾಂತವನ್ನ ನೆನಪಿಸಿಕೊಳ್ಳಲೇಬೇಕು.. ಈ ಭೂಮಿಯಲ್ಲಿ ದಿನನಿತ್ಯ ಅಸ್ತಿತ್ವಕ್ಕಾಗಿ ಹೋರಾಟ ನಡೆಯುತ್ತಲೇ‌ ಇದೆ, ಅದು ಕಡಿಮೆ ಬೌದ್ಧಿಕತೆಯ (ಮನುಷ್ಯನಿಂದ ಹಾಗೆ ಹೇಳಲ್ಪಟ್ಟ) ಇತರ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳಲ್ಲಾಗಿರಬಹುದು ಅಥವಾ ಈ ಪ್ರಪಂಚದಲ್ಲಿ ಅತ್ಯಂತ ಬುದ್ಧಿವಂತನೆನಿಸಿಕೊಂಡ (ಸ್ವಯಂ ನಾಮಕರಣ) ಮನುಷ್ಯ ಕುಲದಲ್ಲಾಗಿರಬಹುದು.. ಆಹಾರಕ್ಕಾಗಿ, ನೀರಿಗಾಗಿ, ಮಾನಸಿಕ ತುಮುಲಗಳಿಗಾಗಿ ಜಗಳಗಳು, ಹೊಡೆದಾಟಗಳು ಸಾಮಾನ್ಯ ಸಂಗತಿಗಳಾಗಿವೆ ಈಗ.. ಅದಕ್ಕೂ ಮುಂಚೆ ಹೋರಾಟ ಇವುಗಳ ಸಲುವಾಗಿ ನಡೆದರೂ ಸಂಪತ್ತಿಗಾಗಿ, ಭೂಮಿಗಾಗಿ, ಅಧಿಪತ್ಯಕ್ಕಾಗಿ, ಹೆಣ್ಣಿಗಾಗಿ, ಧರ್ಮಕ್ಕಾಗಿ, ವ್ಯಾಪಾರಕ್ಕಾಗಿ ನಡೆಯುವುದು ಇನ್ನೂ ತೀವ್ರವಾಗಿತ್ತು.

ಪ್ರತೀ ದೇಶಕ್ಕೂ ಹೊರದೇಶದ ಯುದ್ಧದ ಭಯ ಒಂದು ಕಡೆಯಾದರೆ, ಆಂತರಿಕ ಗಲಭೆಗಳು, ತಲ್ಲಣಗಳು ಇನ್ನೊಂದು ಆಯಾಮದ‌ ತೊಡಕುಗಳಾಗಿದ್ದವು.. ಈ ಜಗತ್ತಿನಲ್ಲಿ ಮೊದಲಿನಿಂದಲೂ ಅಧಿಕಾರ ವರ್ಗ ಧಾರ್ಮಿಕ ಗುರುಗಳ ಮಾತುಗಳ ಅನುಸಾರವೇ ನಡೆದುಕೊಳ್ಳುತ್ತಿತ್ತು… ಅಧಿಕಾರದ ವಿಸ್ತರಣೆಗೆ ಅಥವಾ ಅದರ ಇರುವಿಕೆಗೆ ತೊಂದರೆಯಾಗುತ್ತದೆ ಅಂತಾದರೆ ಮಾತ್ರ ಧಾರ್ಮಿಕ‌ ಗುರುಗಳ‌ ಮಾತಿಂದ ಚೂರು ಬೇರೆ ಮಾರ್ಗವನ್ನು ಪಡೆದು ಮುಂದುವರೆಯುತ್ತಿತ್ತು.. ಈಗಲೂ ಹಾಗೇ ಅಲ್ಲವೇ?..

ಎಲ್ಲ ಧರ್ಮದವರಿಗೂ ತಮ್ಮ ಧರ್ಮವೇ ಶ್ರೇಷ್ಠವೆಂಬ ನಂಬಿಕೆ ಸಹಸ್ರಾರು ವರ್ಷಗಳಿಂದ ಇದೆ, ಆ ನಂಬಿಕೆಯನ್ನ ಗಟ್ಟಿಗೊಳಿಸಿಕೊಳ್ಳುವುದಕ್ಕೋಸ್ಕರವೇ ಮತಾಂತರ, ಇತರ ಧರ್ಮದದವರ ಹತ್ಯೆ ಇತ್ಯಾದಿಗಳು ಅವ್ಯಾಹತವಾಗಿ ನಡೆಯುತ್ತಲೇ ಬಂದಿವೆ. ಜೊತೆಗೆ ತನ್ನ ಧರ್ಮವನ್ನ ಜಗತ್ತಿನ‌ ಮೂಲೆಮೂಲೆಗೂ ತಲುಪಿಸಬೇಕು ಮತ್ತು ಅವರೆಲ್ಲರನ್ನೂ ತನ್ನ ಧರ್ಮದಲ್ಲೇ ವಿಲೀನಗೊಳಿಸಿಕೊಳ್ಳಬೇಕು ಅನ್ನುವ ಮನಸ್ಥಿತಿ ಇಂದು ನಿನ್ನೆಯದಲ್ಲ. ಹಾಗೇ, ಒಂದಷ್ಟು ಧರ್ಮಗಳು ತನ್ನ ಧರ್ಮಕ್ಕೆ ಜನರನ್ನ ಕರೆಸಿಕೊಳ್ಳುವ ಪ್ರಕ್ರಿಯೆಯನ್ನ ಸುಲಭಗೊಳಿಸಿಕೊಂಡಿವೆ, ಇನ್ನು ಕೆಲವು ಧರ್ಮಗಳು ತಮ್ಮ ಧರ್ಮದಿಂದ ಜನರನ್ನ ಹೊರಹಾಕುವ ಪ್ರಕ್ರಿಯೆಯನ್ನ ಸುಲಭಗೊಳಿಸಿಕೊಂಡಿವೆ. ಬಹುತೇಕ ಒಂದೇ ಕಾಲಘಟ್ಟದಲ್ಲಿ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಈ ತಮ್ಮ ಧಾರ್ಮಿಕತೆಗಳ ಕುರಿತಾಗಿ ಇದ್ದ ಅಭಿಪ್ರಾಯಗಳಾದರೂ ಏನು? ಅದರ ಪರಿಣಾಮಗಳು ಏನೇನಾದವು ಹಾಗೂ ಅದು ಹೇಗೆ ಅದೆಷ್ಟೋ ವರ್ಷಗಳ ನಂತರವೂ ಬದಲಾಗದೇ ಉಳಿದುಕೊಂಡಿತು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಅಷ್ಟು ಸುಲಭವಾಗಿ ಅರಗಿಸಿಕೊಳ್ಳುವಂತಿಲ್ಲ.. ಯಾಕೆಂದರೆ ನಾವೆಲ್ಲರೂ ಕಾಲನ‌ ಖೈದಿಗಳು..

ಒಂದು ವ್ಯವಸ್ಥೆಯ ಲೋಪವನ್ನ ಹೇಳುವಾಗ ಮೊದಲು ತಾನು ಆ ವ್ಯವಸ್ಥೆಯಿಂದ ಹೊರಗೆ ನಿಲ್ಲಬೇಕು.. ಆದರೂ ಎಲ್ಲೋ ನನ್ನದು ಅನ್ನುವ ಭಾವ ಉಳಿದುಹೋಗುತ್ತದೆ, ಅದನ್ನೂ ಮೀರುವ ಪ್ರಯತ್ನ ಸತತವಾಗಿ ನಡೆಯುತ್ತಲೇ ಇರಬೇಕು.. ಲೇಖಕನ ಬಹುದೊಡ್ಡ ಜವಾಬ್ದಾರಿಯಿದು.. ತನ್ನ ಸಾಮಾಜಿಕ, ಧಾರ್ಮಿಕ, ಐತಿಹಾಸಿಕ ನಂಬಿಕೆಗಳಿಂದ, ಪ್ರಜ್ಞೆಯಿಂದ ಬರಹ ರೂಪುಗೊಂಡರೂ ಅದನ್ನು ವೈಚಾರಿಕವಾಗಿ ಬೇರೆಯದೇ ನೆಲೆಯಲ್ಲಿ‌ ನಿಂತು ನೋಡಬೇಕಾದದ್ದು ಬರಹಗಾರನ ಆದ್ಯ ಕರ್ತವ್ಯ.. ಬರಹಗಾರ ಈ ಎಲ್ಲವುಗಳಿಂದ ತಾತ್ಕಾಲಿಕವಾಗಿ ಬಿಡುಗಡೆ ಹೊಂದಬೇಕು, ಜೊತೆಗೆ ಕತೆ ಹೇಗೆ ಬೆಳೆಯುತ್ತದೆಯೋ ಹಾಗೇ ಬರಹಗಾರನ ಅಂತರಂಗ ಬೆಳೆಯುತ್ತದೆ, ಅಲ್ಲೊಂದಷ್ಟು ತುಮುಲಗಳು ಹುಟ್ಟಿಕೊಳ್ಳುತ್ತವೆ, ಸಾವಿರಾರು ಯೋಚನೆಗಳು ಕಾಡಲಾರಂಭಿಸುತ್ತವೆ, ಭಾವೋದ್ವೇಗ, ಭಾವೋತ್ಕರ್ಷ ಇತ್ಯಾದಿಗಳಿಂದ ಬಳಲಬೇಕಾದ ಸ್ಥಿತಿಯೂ ಬರಬಹುದು.. ಅದೊಂದು ಆಂತರಿಕ ಯುದ್ಧ.. ಇಂತಹ ಪ್ರಯತ್ನದಲ್ಲಿ ವಸುಧೇಂದ್ರ ಅವರು ತಮ್ಮ ಸಂಯಮವನ್ನ ಸಮಂಜಸವಾಗಿ ಬಳಸಿಕೊಂಡು ಈ ದಶಕದ ಅಥವಾ ನಮ್ಮ ಸಾಹಿತ್ಯ ಲೋಕದ ಒಂದು ಅದ್ಭುತ ಕಾದಂಬರಿಯನ್ನ ಕೊಟ್ಟಿದ್ದಾರೆ.. ಬಹುಶಃ ಅವರ ಇಷ್ಟೆಲ್ಲಾ ವರ್ಷದ ಅನುಭವ, ಓದು, ಅಧ್ಯಯನ ಇವೆಲ್ಲವನ್ನೂ ಧಾರೆಯೆರೆದಂತೆ ಬರೆದಿದ್ದಾರೆ ಅಂದರೆ ತಪ್ಪಾಗಲಾರದೇನೋ..

ಬೇರೆ ಸಂಸ್ಕೃತಿಯ ಜೊತೆಗೆ ನಮ್ಮ ಸಂಸ್ಕೃತಿಯ ಗೌರವವನ್ನೂ ಉಳಿಸಿಕೊಂಡು, ಹಾಗೇ ನಮ್ಮ ವೈಯಕ್ತಿಕ ನಂಬಿಕೆಗಳ ತೀವ್ರತೆ ಭಾಷೆಯ ನೆಲೆಗಟ್ಟಿನಲ್ಲಿಯೇ ಇರುವಂತೆ ನೋಡಿಕೊಂಡು, ಹೀಗಂತೆ ಅಂತ ಹೇಳುವಾಗ ಬರಹಗಾರ ಪ್ರಬುದ್ಧನೂ ಜೊತೆಗೆ ವೈಚಾರಿಕನೂ ಆಗಿರಬೇಕು..

ತೇಜೋ ಯಾರು, ತುಂಗಭದ್ರಾ ಯಾರು, ಏನು ಸಂಬಂಧ, ಇದು ಯಾವ ಕಾಲ ಘಟ್ಟದ ಕತೆ ಮತ್ತು ಇದರಲ್ಲೇನಿದೆ ಅನ್ನುವುದನ್ನ ಸುಮ್ಮನೆ ಹೇಳಿಬಿಡಬಹುದಾಗಿತ್ತು‌, ಆದರೆ ಆಗ ಆ ಕೃತಿ ಇಷ್ಟು ಗಟ್ಟಿಯಾಗುತ್ತಿರಲಿಲ್ಲ.. ಇಡೀ ಕಾದಂಬರಿಯುದ್ದಕ್ಕೂ ಪ್ರತೀ ಪುಟದಲ್ಲೂ ಜೀವನದ ಸಾರಾಂಶವಿದೆ, ಬದುಕಿನ ಪರಾಮರ್ಶೆಯಿದೆ, ನೆನಪಿಟ್ಟುಕೊಂಡು ಮನನ ಮಾಡಬೇಕಾದ ಮಾತುಗಳಿವೆ, ಉಪದೇಶಗಳಿವೆ.. ತತ್ವಗಳನ್ನ ಹೇಳಬೇಕು, ಆದರೆ ಅದನ್ನ ಸುಮ್ಮನೆ ಹೇಳಿದರೆ ಅದು ಶುಷ್ಕವಾಗುತ್ತದೆ, ರುಚಿಸುವುದಿಲ್ಲ.. ಆದರೆ ಕತೆಯಾದರೆ, ಪಾತ್ರಗಳಾದರೆ, ಒಂದಷ್ಟು ವರ್ಷಗಳ ದಾಖಲಾತಿಯಾದರೆ?.. ಎಲ್ಲವನ್ನೂ ಹೇಳಿ ನಿರಾಳವಾಗಬಹುದು.. ಎಲ್ಲವನ್ನೂ ಹಾಗೇ ನಿರರ್ಗಳವಾಗಿ ಹೇಳಿಬಿಡಬಹುದಾ.. ಖಂಡಿತಾ ಹೇಳಲಾಗುವುದಿಲ್ಲ, ಯಾಕೆಂದರೆ ವಿಚಾರ ಅನ್ನುವುದು ಒಂದಕ್ಕೊಂದು ಬೆಸೆದುಕೊಂಡ ಪ್ರಕ್ರಿಯೆ, ಬೆಳೆಯುತ್ತಲೇ ಇರುವ ಪ್ರಕ್ರಿಯೆ.. ಎಲ್ಲವನ್ನೂ ಹೇಳುವುದು ಅಸಮರ್ಪಕ.. ಮತ್ತು‌ ಕೊನೆಯೊಂದು ಬೇಕಲ್ಲವಾ ಯಾವುದಕ್ಕಾದರೂ..?

ಇಡೀ ಮನುಷ್ಯ ಕುಲ ಹೆಣ್ಣನ್ನು ಹೇಗೆ ನಡೆಸಿಕೊಂಡಿತು ಮತ್ತು ನಡೆಸಿಕೊಳ್ಳುತ್ತಿದೆ ದೇಶ, ಭಾಷೆ, ಜಾತಿ ಇವೆಲ್ಲವುಗಳ ಹೊರತಾಗಿಯೂ.. ಜಗತ್ತಿನ ಬೇರೆ ಬೇರೆ ಧರ್ಮಗಳ‌ ನಡುವೆ ಕಿತ್ತಾಟವಂತೂ ಇದ್ದೇ ಇದೆ, ಆದರೆ ಒಂದೇ ಧರ್ಮದಲ್ಲಿ‌ ಬೇರೆ ಬೇರೆ ಸ್ತರಗಳು ಹೇಗೆ ಮತ್ತು ಅವುಗಳು‌ ಹೇಗೆ ಪಾಶ್ಚಾತ್ಯ ದೇಶಗಳಿಗೆ ವಿಸ್ಮಯಕಾರಿಯಾದವು.. ಶ್ರೀಮಂತ ದೇಶವಾಗಿದ್ದ ಭಾರತದ ಆ ಕಾಲಘಟ್ಟದ ಆಚರಣೆಗಳೇನಾಗಿದ್ದವು, ಅದು ಹೇಗೆ ಇತರರನ್ನು ಆಕರ್ಷಿಸುತ್ತಿತ್ತು.. ಒಂದೇ ಸಮಯದಲ್ಲಿ ಬೇರೆ ಬೇರೆ ಭೂಭಾಗದಲ್ಲಿ‌ ಒಂದೇ ವಸ್ತುವಿನ ಬೆಲೆ ಹೇಗೆ ಭಿನ್ನವಾಗಿತ್ತು.. ಮೂಲವನ್ನು ಬದಲಿಸಿದ ಮೇಲೂ ಮನುಷ್ಯ ಮೂಲಕ್ಕೆ‌ ಅಂಟಿಕೊಂಡೇ ಇರುತ್ತಾನಾ, ಸಾಮಾಜಿಕ‌ ನ್ಯಾಯಗಳೇನಾಗಿದ್ದವು, ಅಥವಾ ರಕ್ತಪಾತಗಳು ನಡೆವುದಕ್ಕೆ ಕಾರಣಗಳೇನಾಗಿದ್ದವು ಇತ್ಯಾದಿಗಳು ಬಿಡಿಬಿಡಿಯಾಗಿ‌ ನಮಗೆ ಬೇರೆ ಬೇರೆ ಪುಸ್ತಕಗಳಲ್ಲಿ‌ ಸಿಗುತ್ತವೆ, ಆದರೆ ಒಂದು ಕಾದಂಬರಿ ಇವೆಲ್ಲವನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದರೆ..? ಉಳಿವಿನ ಪ್ರಶ್ನೆ ಬಂದಾಗ ಮನುಷ್ಯ ಯಾವುದನ್ನ ಆಯ್ದುಕೊಳ್ಳುತ್ತಾನೆ, ಹಾಗೂ ಉಳಿಯುವುದಕ್ಕೆ ಎಂಥ ನೆಪಗಳನ್ನ ಹುಡುಕಿಕೊಳ್ಳುತ್ತಾನೆ, ಕಾಲ ಉರುಳುತ್ತಿದ್ದಂತೆ ಒಲವು ಹೇಗೆ ರೂಪಾಂತರಗೊಳ್ಳುತ್ತದೆ, ಅಥವಾ ಒಲವಿನ ವ್ಯಾಖ್ಯಾನವಾದರೂ ಏನು, ಏಕತಾನತೆ ಮನುಷ್ಯನ ಮಾನಸಿಕತೆಯ ಮೇಲೆ ಬೀರುವ ಪರಿಣಾಮಗಳೇನು ಮತ್ತು ಅದನ್ನ ತೊಡೆದುಕೊಳ್ಳಲು ಆತ ಮೊರೆ ಹೋಗುವ ದಾರಿಗಳ್ಯಾವವು, ನಿಯಮಗಳು ಹೇಗೆ ಹುಟ್ಟುತ್ತವೆ ಮತ್ತು ಅವು ಮಾರ್ಪಾಡಾಗುತ್ತವೆ, ಮನುಷ್ಯ ಸಂಬಂಧಗಳು ಹೇಗೆಲ್ಲಾ ಹುಟ್ಟಿಕೊಳ್ಳುತ್ತವೆ ಮತ್ತು ಅವುಗಳನ್ನ ಕಾಪಾಡಿಕೊಳ್ಳಲು ಎಷ್ಟು ಸಮರ್ಥ ಹಾಗೂ ಯಾವಾಗ ಕಾಪಾಡಿಕೊಳ್ಳುತ್ತಾನೆ ಇತ್ಯಾದಿಗಳೆಲ್ಲವೂ ಒಂದು ಕಡೆಯಾದರೆ ಯಾವ ರಾಜನನ್ನೂ ಅತಿಯಾಗಿ ವೈಭವೀಕರಿಸದೇ ಆತನನ್ನೂ ಕತೆಯ ಭಾಗವಾಗಿ ಬಳಸಿಕೊಂಡು ಆಡಳಿತದ ಮೇಲೆ ಮತ್ತು ಜನಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತಿದ್ದರು ಮತ್ತು ಸಾಮಾಜಿಕ ಸ್ಥಿತಿ ಗತಿಗಳು ರಾಜರ ನಡವಳಿಕೆಗಳನ್ನ ಹೇಗೆ ಪ್ರಶ್ನಿಸುತ್ತಿದ್ದವು ಅಥವಾ ಪ್ರಶ್ನಿಸದೇ ಇರುತ್ತಿದ್ದವು…. ಯುದ್ಧ, ವೈಭೋಗ, ಸಾಮ್ರಾಜ್ಯ ವಿಸ್ತರಣೆ ಇತ್ಯಾದಿಗಳನ್ನೇ ಜಪಿಸುತ್ತಿದ್ದ ರಾಜರ ಅರಮನೆಯೊಳಗಣ ಪರಿಸ್ಥಿತಿ ಹೇಗಿರುತ್ತಿತ್ತು, ಸಹಜ ಆಸೆಗಳಿಗೆ ಮನುಷ್ಯ ಹೇಗೆಲ್ಲಾ ಪ್ರತಿಕ್ರಿಯಿಸುತ್ತಿದ್ದ, ಪ್ರಕೃತಿ ಧರ್ಮಕ್ಕೆ ಮನುಷ್ಯ ಹೇಗೆ ನಡೆದುಕೊಳ್ಳುತ್ತಿದ್ದ, ಒಂದು ಘಟನೆ ಯಾರ್ಯಾರ ಮೇಲೆ ಹೇಗೆಲ್ಲಾ ಪರಿಣಾಮ ಬೀಳಬಹುದು, ಅದರ ಮುಂದುವರೆದ ಭಾಗ ಹೇಗಿದ್ದೀತು..

ಮನುಷ್ಯ ಶಾಂತಿಯನ್ನ ಅದೆಷ್ಟೇ ಪಸರಿಸುತ್ತೇನೆಂದರೂ ಒಳಗೊಂದು ರಾಕ್ಷಸ ಗುಣ ಅದ್ಯಾಕೆ ಹಾಗೇ ಉಳಿದುಹೋಗುತ್ತದೆ. ದೈಹಿಕ ಕಾಮನೆ ಅಥವಾ ಮಾನಸಿಕ ಕಾಮನೆ ಯಾವುದು ಅಪಾಯಕಾರಿ ಅಥವಾ ಯಾವುದು ಜೀವನಕ್ಕೆ ಪೂರಕ, ಇವೆಲ್ಲವುಗಳ ಮಧ್ಯ ಅಲ್ಲೆಲ್ಲೋ ಪುಟ್ಟ ಮಳೆಗಾಲದ ತೊರೆಯಂತೆ ಹರಿವ ಒಲವಿಗಿರಬಹುದಾದ ತಾಕತ್ತೇನು; ಅದೆಷ್ಟು ಕಾಲ‌ ಈ ಒಲವು ಮನುಷ್ಯನನ್ನ ಬದುಕಿಸಬಲ್ಲದು, ಇಷ್ಟೆಲ್ಲಾ ಮಾಡಿಯೂ ಕೊನೆಗೆ ಇವೆಲ್ಲಾ ಏನು, ಯಾಕಾಗಿ ಮಾಡಿದೆವು ಅನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತೇವಾ ಅಥವಾ ಮತ್ತೆ ಅದೇ ವ್ಯೂಹದಲ್ಲೇ ಬಿದ್ದು ಒದ್ದಾಡುವುದಕ್ಕೇ ಹಪಹಪಿಸುತ್ತೇವಾ ಇಂಥ ಹಲವಾರು ಪ್ರಶ್ನೆಗಳನ್ನ ಈ ಕಾದಂಬರಿ ನಮ್ಮೆದುರು ತೆರೆದಿಡುತ್ತದೆ..

ಒಂದಷ್ಟು ಉತ್ತರ ಕೂಡಾ ಕಾದಂಬರಿಯಲ್ಲಿಯೇ ಇದೆ.. ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಉತ್ತರ ಕಂಡುಕೊಳ್ಳುವುದಕ್ಕೂ ಮೊದಲು ಪ್ರಶ್ನೆಗಳು ಹುಟ್ಟಬೇಕು.. ಅಂಥದ್ದೊಂದು ಪ್ರಖರವಾದ ಸಫಲವಾದ ಪ್ರಯತ್ನ ಇಲ್ಲಿದೆ.. ಕತೆಯ ಕುರಿತಾಗಿ ನಾನು ಏನನ್ನೂ ಹೇಳುವುದಕ್ಕೆ ಹೋಗುವುದಿಲ್ಲ , ಅದು ಒಂದು ಸ್ವಾದ, ಅದನ್ನ ನಾವು ನಾವೇ ಅನುಭವಿಸಬೇಕು, ಸುಖಿಸಬೇಕು.. ಈ ಕಾದಂಬರಿಯನ್ನ ಓದಿದ ಮೇಲೆ ಚೂರಾದರೂ ಅಸ್ತವ್ಯಸ್ತವಾಗದೇ ಉಳಿಯುವುದಿಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪರಾಮರ್ಶಿಸಿದರೆ ಒಂದು ಮಹತ್ವದ ಬದಲಾವಣೆ ಕಾಣುವುದಂತೂ ಪಕ್ಕಾ.. ಯಾವ ವಿಷಯದಲ್ಲಿ ಬದಲಾವಣೆ ಅಂದಿರಾ? ಕಾದಂಬರಿ ಓದಿ !!

ಹರಿವೆಂದರೆ ಹಾಗೇ
ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ..
ಜನಾಂಗದ ಕಲೆಗಳ ನಡುವೆ
ಹುಟ್ಟುವ ಕಿಲಕಿಲವೊಂದು
ನಾಳೆಯ ಎಳೆಯುವ ದಾರ..
ಮೂಲವೇ ಕಳೆದ ಮೊಲ
ಸಿಂಹವೇ ಆಗಿ ಉಳಿದೀತಾ..
ಮಣ್ಣಿನ ಮೇಲೆ ಗೆರೆ ಎಳೆದೆಳೆದು
ಅಲ್ಲೇ ಮಲಗಿತು ಜೀವ..
ದಾಸ್ಯವು ಬರೀ ಕೋಳೇನು,
ಇಲ್ಲಾ ಬಯಸುವ ತೋಳೇನು..
ಊರಿನ ಪೂರ ಹೊಸ ಪರಿಮಳ
ಯಾವುದೋ ಎದೆಯಲ್ಲಿ ಅರಳಿದೆ ಹೂವು..
ಮಸಣಕೋ ಇಲ್ಲಾ ಪೂಜೆಗೋ!