ಏರ್ಪೋರ್ಟು ರೋಡಿನ ಅಜುಬಾಜಿಗೆ ಯಾವ ಗೋಜಿಲ್ಲದೆ ಬೆಳಗುವ ನಿಯಾನು ಲೈಟುಗಳ
ಬೆಳಕು
ಈಗಷ್ಟೇ ರಾಕೆಟ್ಟು ವೇಗ ಮಿತಿಯಲ್ಲಿ ಸಾಗಿದ ಕ್ಯಾಬಿನ ಡ್ರೈವರನ ಕಣ್ಣ ಕೆಳಗಿನ ಸಣ್ಣ ಕಲೆ ಕಾಣುವಷ್ಟು ಪ್ರಖರವಾಗಿದೆ.
ನಿತ್ಯ ಇಂಗಾಲದ ಸಾಂಗತ್ಯದಲ್ಲಿ ಆ ಹಾದಿ ಬದಿಯ
ಕ್ರೋಟಾನು, ಕಣಗಿಲುಗಳು ಶುದ್ಧೀಕರಿಸಿದ ನೀರಿಗೆ ಬೇರೊಡ್ಡಿ ನಳನಳಿಸುತಿವೆ.
ಮೈ ತುಂಬಾ ಹೂಮುಡಿದು,
ಇಲ್ಲವೆ ಎಲೆ ಹೊದ್ದು.
ಸಾಗುವ ವೇಗಕ್ಕೆ ಒಳಗಿದ್ದವರ
ಭಾವ ಅರಿವಾಗದಿದ್ದರೂ
ಗಡಿಬಿಡಿಯಿರದ ಬಿಗಿದ ಮೋರೆ,
ಚಡಪಡಿಕೆ ಮರೆತ ಸೆಟೆದ ಭಾವ,
ಚಷ್ಮದ ಒಳಗಿಂದ ಶುಷ್ಕ ನೋಟ…
ಅಂದು ಅದೇ ಹಾದಿಯಲ್ಲಿ ನಾನು.
ಮೊದಲ ಸಲ ಹಾರುವ, ವಿಮಾನವೇರುವ
ತವಕ.. ತಲ್ಲಣ..
ಛಿಲ್ಲೆನುತಿತ್ತು ಎದೆ.
ಮನಸು ಮರಿಹಕ್ಕಿಯಿರುವ ಗೂಡು.
ಕಣ್ಣು ಕುತೂಹಲದ ಬೀಡು.!
ಉಕ್ಕುವ ಉತ್ಸಾಹ ಕಂಡು ಪಕ್ಕದವ ಗೊಣಗಿದ.
‘ಮೆ ಬಿ ಫರ್ಸ್ಟ್ ಟೈಮ್.!!’
ಖಾಲಿಖೋಲಿಯ ಗೋಲಿಗಣ್ಣೇ
ನವನಾಗರೀಕತೆಯ ಕುರುಹಾಗಿರುವಾಗ
ಕಿವಿಯಿಂದ ಕಿವಿವರೆಗೆ ನಗುತ ನಡೆಯುವುದು,
ಹಣೆಯಲಿಷ್ಟು ಬೆವರು ಹೊಳೆಯುವುದು
ಸಭ್ಯ ಸಂಸ್ಕೃತಿಯಾಗದೇನೋ
ಎನಿಸಿದಾಗ ನಮ್ಮೂರ ರೈಲು ನಿಲ್ದಾಣ
ನೆನಪಾಯಿತು ಯಾಕೋ.
ಸೊನ್ನೆಗಣ್ಣ ಜನರೊಡನೆ
ಪುಳಕ ಹೊದ್ದವರು
ಅನ್ಯ ಗ್ರಹ ಜೀವಿಯಂತೆನಿಸಿ
ಕೊಂಡಾರು ಎನಿಸಿದಾಗ
ನನ್ನದಲ್ಲದ ಒಣನಗುವೊಂದು
ಮೊಗದಲ್ಲಿ.
ಅರೆರೆ.,ಈಗ…! ಈಗ…!!
ನಾನೂ ನಾಗರೀಕ ಜನರ
ನಡುವೆ ಸಲ್ಲಬಹುದೇನೋ.?