ಈ ಎಲ್ಲಾ ಸಮಯದಲ್ಲೂ ನನಗೆ ಎದುರಿನ ಮನೆಯವರು ಕಾಣಲಿಲ್ಲ. ಈ ಸಮಯದಲ್ಲಿ ಕರ್ಫ್ಯೂ ವಿಧಿಸಿದ್ದರು. ಗಲಾಟೆ ಅದೆಷ್ಟು ಭಯಾನಕವಾಗಿತ್ತೆಂದರೆ ಬಿಬಿಸಿ ನ್ಯೂಸ್ ನಲ್ಲೂ ದಾವಣಗೆರೆಯ ಹೆಸರು ಬಂದಿತ್ತು. ಪೋಲೀಸರು “ಕಂಡಲ್ಲಿ ಗುಂಡು” ಅಂತ ರಸ್ತೆಯಲ್ಲಿ ಕೂಗುತ್ತಾ ತಿರುಗಾಡುತ್ತಿದ್ದರು. ನಾಯಿಗಳು ಪೋಲೀಸರ ಹಿಂದೆ ಬಿದ್ದು ಬೊಗಳುತ್ತಿದ್ದವು. ಅವರು ನಾಯಿಗಳನ್ನು “ಹಚಾ.. ಹಚಾ…” ಅಂತ ಓಡಿಸುತ್ತಿದ್ದುದು ಕೇಳಿಬರುತ್ತಿತ್ತು. ಕೆಲವೊಮ್ಮೆ ನಾಯಿಗಳು ಕುಂಯ್ ಗುಡುತ್ತಾ ಓಡಿಹೋಗುವ ಸದ್ದು ಕೇಳಿದಾಗ ಬಹುಷಃ ಪೋಲೀಸರು ಕಲ್ಲು ಹೊಡೆದಿದ್ದಾರೆ ಎಂದು ಗೊತ್ತಾಗುತ್ತಿತ್ತು.
ಶ್ರೀಹರ್ಷ ಸಾಲಿಮಠ ಬರೆಯುವ ಅಂಕಣ

 

ನಮ್ಮದು ಮೂಲೆ ಮನೆ. ಮೂರು ರಸ್ತೆಗಳು ಕೂಡುವಲ್ಲಿ ಕಟ್ಟಿದ್ದು. ನಮ್ಮ ಮನೆಯ ಎದುರಿನ ಮೂಲೆಯಲ್ಲಿ ಮುಸ್ಲಿಮರ ಮನೆಯಿತ್ತು. ನಮ್ಮನೆಯದು ಇಟ್ಟಿಗೆಗಳಿಂದ ಕಟ್ಟಿದ ಕಾಂಪೌಂಡ್, ಅವರದು ಬೇಲಿ. ನಮ್ಮ ಮನೆಯಲ್ಲಿ ಕುಂಡಗಳು, ಒಂದು ತೆಂಗಿನ ಮರ, ಕಾಂಕ್ರೀಟಿನ ನೆಲ, ಬಾಗಿಲೆದುರಿಗೆ ಚಾಚಿದ್ದ ಉಕ್ಕಿನ ಬಲೆಯಮೇಲೆ ಮೈಚಾಚಿ ಮಲಗಿದ್ದ ದ್ರಾಕ್ಷಿಬಳ್ಳಿಗಳು ಮತ್ತು ಅದರ ನಡುವೆ ಓಡಾಡುವ ಗಿಳಿಹಸಿರು ಬಣ್ಣದ ರೇಷ್ಮೆ ಹುಳಗಳು. ಅವರ ಮನೆಗೆ ತಂತಿಬೇಲಿಯಿತ್ತು. ಒಳಗೆ ಎರಡು ಮೂರು ಜಾತಿಯ ಮಲ್ಲಿಗೆ ಹೂಬಳ್ಳಿಗಳು, ಬಳ್ಳಿಗುಂಟ ವಿವಿಧ ಬಗೆಯ ಗಿಡಗಳು, ನೀಲಿ ಕೆಂಪುಬಣ್ಣದ ಹೂಗಿಡಗಳು, ಯಾವಾಗಲೂ ನೆಲ ಕೆರೆಯುತ್ತಾ ಕಾಳು ಹುಡುಕುವ ಕೋಳಿಗಳು, ಹತ್ತಾರು ಹೆಂಡಿರನ್ನು ಆಳುತ್ತಿರುವೆ ಎಂಬ ಜಂಬದಿಂದ ಕೆಂಪು ಕಿರೀಟ ಕೊಂಕಿಸಿಕೊಂಡು ಹೆಜ್ಜೆಯಿಡುತ್ತಿದ್ದ ಉದ್ದ ಕತ್ತಿನ ಹುಂಜ, ಮಣ್ಣಿನ ನೆಲ ಮತ್ತು ಬಣ್ಣಬಣ್ಣದ ಕೋಳಿಮರಿಗಳು. ಕಾಂಪೌಂಡಿನೊಳಗೆ ನಮ್ಮ ಮತ್ತು ಮನೆಮಾಲಿಕರ ಮನೆಗಳು ಗೋಡೆಯನ್ನು ಒಂದಕ್ಕೊಂದು ಅಂಟಿಸಿಕೊಂಡಿದ್ದವು.

ಈ ಮುಸ್ಲಿಮರ ಮನೆಯಲ್ಲಿ ಕಾಲೇಜು ಓದುತ್ತಿದ್ದ ಹುಡುಗಿ ಇದ್ದಳು. ನಾನು ಇಲ್ಲಿಯವರೆಗೆ ಅಷ್ಟು ನಾಜೂಕಿನ ನಡಿಗೆಯ ಮತ್ತೊಂದು ಹುಡುಗಿಯನ್ನು ನೋಡಲೇ ಇಲ್ಲ. ಆಕೆ ರಸ್ತೆಯಲ್ಲಿ ನಡೆಯುತ್ತಿದ್ದರೆ ಹಿಂದು ಮುಂದಿನ ದೃಶ್ಯಗಳೆಲ್ಲ ಮುಸುಕಾಗಿ ಅವಳೊಬ್ಬಳೇ ಸ್ಲೋಮೋಶನ್ ನಲ್ಲಿ ನಡೆದುಬರುತ್ತಿದ್ದಂತೆ ಕಾಣುತ್ತಿತ್ತು. ಆಕೆಯ ಹೆಸರು ಪರ್ವೀನ್. ಆಕೆ ಅವಳ ತಾಯ್ತಂದೆಯರಂತೆ ಉರ್ದು ಒತ್ತಿನ ಕನ್ನಡ ಮಾತನಾಡುತ್ತಿರಲಿಲ್ಲ. ನಮ್ಮ ಹಾಗೆ ಮಾತನಾಡುತ್ತಿದ್ದಳು. ಆಕೆ ಮಾತನಾಡುತ್ತಿರುವಾಗ ಉದ್ದನೆಯ ಕತ್ತಿನ ಮೇಲೆ ನಾಜೂಕಾಗಿ ಕುಳಿತಿದ್ದ ತಲೆ ಆಕೆಯ ಮನೆಯ ಬೇಲಿಯೊಳಗೆ ಠೇಂಕಾರಿಂದ ಓಡಾಡಿಕೊಂಡಿದ್ದ ಹುಂಜದ ಕತ್ತಿನಂತೆ ಹಿಂದೆ ಮುಂದೆ ಅಲ್ಲಾಡುತ್ತಿತ್ತು. ಹಾಗಂತ ಆಕೆಯ ಮುಖದಲ್ಲಿ ಒಮ್ಮೆಯೂ ಅಹಂಕಾರ ಗತ್ತು ಅನ್ನುವುದು ಕಂಡಿರಲಿಲ್ಲ. ಯಾವತ್ತೂ ನಗುಮುಖ ಮತ್ತು ಮಾತಿನಲ್ಲಿ ವಿನಯ. ಚುರುಕಾಗಿ ಪಟಪಟನೆ ಮಾತನಾಡುತ್ತಿದ್ದಳು.

ನನಗೆ ಕಂಡದ್ದನ್ನೆಲ್ಲ ಕಲಿಯುವ ಆಸೆಯಿದ್ದುದರಿಂದ ಆಕೆಯ ಬಳಿ ಉರ್ದು ಕಲಿಯಲು ಹೋಗುತ್ತಿದ್ದೆ. ಆಕೆ ತೊಡೆಯ ಮೇಲೆ ನನ್ನನ್ನು ಕೂರಿಸಿಕೊಂಡು ಪಾಠಿಯ ಮೇಲೆ “ಅಲೀಫ್, ಬೇ, ಫೇ..” ಅಂತೆಲ್ಲ ಬಲದಿಂದ ಎಡಕ್ಕೆ ಬರೆಸುವಳು. ನನಗೆ ಪಾಠ ಹೇಳಿಸಿಕೊಂಡದ್ದಕ್ಕಿಂತ ಆಕೆಯ ಸಾನಿಧ್ಯದಲ್ಲಿರುವುದೇ ಖುಷಿ ಕೊಡುತ್ತಿತ್ತು. “ತುಂಬಾ ಬೇಗ ಕಲಿತಿಯಾ ನೀನು..” ಅಂತ ಆಕೆ ಮೆಚ್ಚುವಳು. ನನಗೆ ಸಿನಿಮಾ, ಧಾರಾವಾಹಿ ನೋಡುವುದು ಅಷ್ಟು ಇಷ್ಟವಾಗುತ್ತಿರಲಿಲ್ಲವಾದರೂ ಪರ್ವೀನ್ ಗಾಗಿ ನಾನು ನೋಡುತ್ತಿದ್ದೆ. ಯಾಕೆಂದರೆ ಆಕೆಯ ಜೊತೆ ಮಾತನಾಡಲು ಉರ್ದು ಕಲಿಯುವುದರ ಹೊರತಾಗಿ ಬೇರೆ ವಿಷಯಗಳೂ ಬೇಕಲ್ಲ!

ಪರ್ವೀನ್ ಮನೆಯವರೆಲ್ಲರೂ ನನ್ನ ಬಗ್ಗೆ ಬಹಳ ಅಭಿಮಾನ ಇಟ್ಟುಕೊಂಡಿದ್ದರು. ಅವರ ಮನೆಯಲ್ಲಿ ಮಾಡಿದ್ದ ತಿಂಡಿಯನ್ನು ನನಗೆ ತಟ್ಟೆಯಲ್ಲಿ ಹಾಕಿಕೊಡುತ್ತಿದ್ದರು. ನಾನು ಎಷ್ಟು ಒತ್ತಾಯಿಸಿದರೂ ತಿನ್ನುತ್ತಿರಲಿಲ್ಲ. ತಿನ್ನಬಾರದು ಅಂತ ನನಗೆ ಯಾವ ಪ್ರತಿಬಂಧಗಳೂ ಇರಲಿಲ್ಲ. ಅವರು ಮಾಡಿದ ತಿಂಡಿಯಿಂದ ಸೂಕ್ಷ್ಮವಾಗಿ ಅತ್ತರಿನ ವಾಸನೆ ಬರುತ್ತಿತ್ತು. ಇದು ಎಷ್ಟು ಘಾಟೆಂದರೆ ಅವರು ಕೊಡುತ್ತಿದ್ದ ಹಾಲು ಹಣ್ಣುಗಳಲ್ಲೂ ಆವರಿಸಿಕೊಳ್ಳುತ್ತಿತ್ತು. ಆ ವಾಸನೆಯನ್ನು ಹೊಂದಿದ್ದ ಯಾವ ಪದಾರ್ಥಗಳು ಎಷ್ಟು ಪ್ರಯತ್ನಿಸಿದರೂ ಗಂಟಲೊಳಗೆ ಇಳಿಯುತ್ತಿರಲಿಲ್ಲ. ರಂಜಾನ್ ದಿನಗಳಲ್ಲಿ ಅವರು ವಿವಿಧ ಭಕ್ಷ್ಯಗಳನ್ನು ತಯಾರಿಸಿ ಪ್ರದರ್ಶನಕ್ಕಿಡುತ್ತಿದ್ದರು. ನಮ್ಮ ಅಕ್ಕಪಕ್ಕದ ಮನೆಯವರೆಲ್ಲ ಹೋಗಿ ವಸ್ತುಸಂಗ್ರಹಾಲಯದಲ್ಲಿ ಸರತಿಯಲ್ಲಿ ನಿಂತು ನೋಡುವಂತೆ ಎಲ್ಲ ನೋಡಿಕೊಂಡು ಬರುತ್ತಿದ್ದರು. ಆ ದಿನ ಅಡುಗೆ ಅತ್ತರಿನ ಘಾಟು ರಸ್ತೆಯವರೆಗೂ ಬರುತ್ತಿತ್ತು.

ಪರ್ವಿನ್ ಗೆ ಒಬ್ಬ ಅಣ್ಣ ಮತ್ತು ಒಬ್ಬ ತಂಗಿ ಇದ್ದರು. ತಂಗಿಯ ಹೆಸರು ಶಬ್ಬೀನಾ. ಶಬ್ಬೀನಾ ನನಗಿಂತ ಎರಡು ವರ್ಷ ದೊಡ್ಡವಳು. ಆಕೆ ಪರ್ವೀನಳ ಅಥಾವತ್ ತದ್ವಿರುದ್ಧ. ನಯನಾಜೂಕಿನಿಂದ ಗಿಲಿಟು ಮಾಡುತ್ತಾ ಚೆಂದಗೆ ಅಲಂಕಾರ ಮಾಡಿಕೊಂಡು ಪರ್ವೀನ್ ಮಹಾರಾಣಿಯಂತೆ ಅಡ್ಡಾಡುತ್ತಿದ್ದರೆ ಶಬ್ಬೀನಾ ಮಾಸಲು ಬಟ್ಟೆ ಹಾಕಿಕೊಂಡು ಅಡ್ಡಾದಿಡ್ಡಿ ಓಡಾಡುತ್ತಾ ಮನೆಗೆಲಸಗಳನ್ನೆಲ್ಲ ಮಾಡುತ್ತಿದ್ದಳು. ಗಿಡಗಳಿಗೆ ನೀರು ಹಣಿಸುವುದು, ಕೋಳಿಗಳಿಗೆ ಕಾಳು ಹಾಕುವುದು, ಅವುಗಳನ್ನು ಬುಟ್ಟಿಯೊಳಗೆ ಸೇರಿಸುವುದು, ಹೊರಗೆ ಬಿಡುವುದು, ಕಸ ಹೊಡೆಯುವುದು, ಅಂಗಳ ಸಾರಿಸುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು. ಆಕೆಯ ಮಾಡುತ್ತಿದ್ದ ಕೆಲಸಗಳು, ಆಕೆಯ ಬಟ್ಟೆ ನೋಡುತ್ತಿದ್ದ ಅನೇಕರು ಆಕೆಯನ್ನು ಮನೆಗೆಲದವಳು ಎಂದೇ ತಿಳಿದುಕೊಂಡಿದ್ದರು. ಈಕೆಯ ಚರ್ಮವಾಗಲಿ ಕೂದಲಾಗಲಿ ಪರ್ವೀನಳಂತೆ ನಾಜೂಕಿನದ್ದಲ್ಲ. ಈಕೆಯ ಕೈ ಜಾಲಿಕಟ್ಟಿಗೆಯಂತೆ ಬಲಿಷ್ಟವಾಗಿದ್ದವು. ಒಮ್ಮೆ ಯಾವುದೋ ಜಗಳದಲ್ಲಿ ಆಕೆ ನನ್ನ ಕೈಹಿಡುದು ತಿರುಚಿ ಭುಜದ ಗಂಟು ಉಳುಕಿ ಎರಡು ದಿನ ನೋವನ್ನು ಮುಟ್ಟಿನೋಡಿಕೊಳ್ಳುತ್ತ ಅಡ್ಡಾಡಿದ್ದೆ!

ಅದು ಬಿಟ್ಟರೆ ಪರ್ವೀನ್ ಅಣ್ಣ ಮತ್ತು ಪಕ್ಕದ ಮಹೇಶ ಮಾಮಾ ದಿನಾ ಒಟ್ಟಿಗೇ ಒಂದೇ ಸೈಕಲ್ ನಲ್ಲಿ ಹೋಗುತ್ತಿದ್ದರು. ಪರ್ವೀನ್ ಅಪ್ಪ ನಮ್ಮ ತಂದೆಯನ್ನು ದಿನಾ ರಾತ್ರಿ ಊಟ ಆದ ಮೇಲೆ ದೇಶಾವರಿ ಮಾತನಾಡಿಸುತ್ತಿದ್ದರು. ನನಗೆ “ನಿಮ್ದು ಡ್ಯಾಡಿ ತುಂಬಾ ಓದಿದಾರೆ… ನೀವೂ ತುಂಬಾ ಓದ್ಬೇಕೂ..” ಅಂತಿದ್ದರು.

ಒಂದು ದಿನ ಇದ್ದಕ್ಕಿದ್ದಂತೆ ಎಲ್ಲರೂ ಹಿಂದೂ ಮುಸ್ಲಿಂ ಗಲಾಟೆ ಅಂತ ಮಾತನಾಡಿಕೊಳ್ಳತೊಡಗಿದರು. ಮುಂದಿನ ವಾರ ಹಿಂದೂ ಮುಸ್ಲಿಂ ಗಲಾಟೆ, ಮೂರು ದಿನ ಬಿಟ್ಟು ಹಿಂದು ಮುಸ್ಲಿಂ ಗಲಾಟೆ, ಎಂದೆಲ್ಲ ದಿನ ಹತ್ತಿರ ಬಂದು ಇವತ್ತು ರಾತ್ರಿ ಹಿಂದು ಮುಸ್ಲಿಂ ಗಲಾಟೆ ಅಂತ ಎಲ್ಲ ಮಾತನಾಡಿಕೊಳ್ಳತೊಡಗಿದರು. ಈ ಗಲಾಟೆ ಎಂದರೆ ಜನ ಸಾಯುವಂತೆ ತಾರಾಮಾಡಿ ಹೊಡೆದಾಟ ಎಂಬುದೂ ಅವರ ಮಾತಿನಲ್ಲಿತ್ತು. ಸಾವಿರಾರು ಜನ ಸಾಯುತ್ತಾರೆ ಎಂಬುದನ್ನು ಪದೇ ಪದೇ ಉಲ್ಲೇಖಿಸುತ್ತಿದ್ದರು. ನನಗೆ ಮುಸ್ಲಿಮರು ಎಂದರೆ ಯಾರು ಅಂತ ಗೊತ್ತಿತ್ತು. ಯಾಕೆಂದರೆ ಅವರ ಭಾಷೆ ವೇಷಭೂಷಣ ಹಬ್ಬ ಊಟ ಇತ್ಯಾದಿಗಳು ನಮಗಿಂತ ವಿಭಿನ್ನವಾಗಿದ್ದವು. ನಮ್ಮ ಹಬ್ಬಗಳಲ್ಲಿ ಅವರು ಹೊಸ ಬಟ್ಟೆ ಹಾಕಿಕೊಳ್ಳುತ್ತಿರಲಿಲ್ಲ ಅವರ ಹಬ್ಬಗಳಲ್ಲಿ ನಾವು ಹಾಕಿಕೊಳ್ಳುತ್ತಿರಲಿಲ್ಲ. ರಜೆ ಮಾತ್ರ ಸಮಾನವಾಗಿ ಸಿಗುತ್ತಿತ್ತು. ಆದರೆ ಹಿಂದೂಗಳು ಅಂದರೆ ಯಾರು ಅಂತ ಗೊತ್ತಿರಲಿಲ್ಲ. ಬಹುಷಃ ಅವರೂ ಸಹ ಇವರಂತೆಯೇ ಬೇರೆ ರೀತಿಯ ಆಚರಣೆ ಉಳ್ಳ ಜನಗಳು ಇರಬಹುದೆಂದುಕೊಂಡಿದ್ದೆ. ಪುಸ್ತಕಗಳಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅಂತ ಓದಿದ್ದೆ ಅದರಲ್ಲಿ ಮುಸ್ಲಿಂ ಮಾತ್ರ ಎದುರಿಗೆ ನೋಡಿದ್ದು. ಕ್ರಿಶ್ಚಿಯನ್ ಹಿಂದೂ ಕಂಡಿದ್ದಿಲ್ಲ.

ಇವತ್ತು ರಾತ್ರಿ ಗಲಾಟೆ ಅಂತ ಮಾತನಾಡಿಕೊಂಡ ದಿನ ಸಂಜೆ ನಮ್ಮ ತಂದೆ ತಮ್ಮ ಫೈಲ್ ಗಳಲ್ಲಿ ಕಳೆದುಹೋಗಿದ್ದರು. ನಾನು ಎಂದಿನಂತೆ ಅವರ ತಲೆ ತಿನ್ನುತ್ತಾ ತಂದೆಯನ್ನು,
“ಹಿಂದೂಗಳೆಂದರೆ ಯಾರು?” ಅಂತ ಕೇಳಿದೆ.

“ಹಿಂದೂಗಳೆಂದರೆ ನಾವೇ” ಅಂತ ಕ್ವಚಿತ್ತಾಗಿ ಫೈಲ್ ಗಳ ನಡುವೆಯಿಂದಲೇ ತಲೆ ಎತ್ತದೇ ಹೇಳಿದರು.

ನನಗೆ ಸಿನಿಮಾ, ಧಾರಾವಾಹಿ ನೋಡುವುದು ಅಷ್ಟು ಇಷ್ಟವಾಗುತ್ತಿರಲಿಲ್ಲವಾದರೂ ಪರ್ವೀನ್ ಗಾಗಿ ನಾನು ನೋಡುತ್ತಿದ್ದೆ. ಯಾಕೆಂದರೆ ಆಕೆಯ ಜೊತೆ ಮಾತನಾಡಲು ಉರ್ದು ಕಲಿಯುವುದರ ಹೊರತಾಗಿ ಬೇರೆ ವಿಷಯಗಳೂ ಬೇಕಲ್ಲ!

ನಾನು ಒಮ್ಮೆಲೆ ಗಾಭರಿ ಬಿದ್ದು ಹೋದೆ! ಅಂದರೆ ಇವತ್ತು ರಾತ್ರಿ ನಾವು ಹೊಡೆದಾಡಲು ಹೋಗಬೇಕಾ? ನಮ್ಮ ಮನೆಯ ಓಣಿಯಲ್ಲಿ ಎರಡೇ ಮುಸ್ಲಿಂ ಮನೆಗಳಿದ್ದದ್ದು. ಈಗ ಮುಸ್ಲಿಮರ ಮನೆಯ ಎದುರಿಗೆ ನಮ್ಮ ಮನೆ ಇದ್ದುದರಿಂದ ಹೊಡೆದಾಡಬೇಕಾದ ಸರದಿ ನಮ್ಮದೇ ಇರಬೇಕೇನೊ ಎಂದೆನಿಸಿತು. ಈಗ ಯಾರು ಯಾರೊಡನೆ ಹೋಡೆದಾಡಬೇಕು. ನಮ್ಮ ಅಪ್ಪ ಪರ್ವೀನಳ ಅಪ್ಪನಿಗೆ ಯಾಕೆ ಹೊಡೆಯಬೇಕು? ಅವರು ನೋಡಿದರೆ ನಮ್ಮಪ್ಪನ ಬಗ್ಗೆ ಅಷ್ಟೊಂದು ಅಭಿಮಾನ ಇಟ್ಟುಕೊಂಡಿದ್ದಾರೆ. ಜೊತೆಜೊತೆಗೆ ರಿಸಿಪಿಗಳನ್ನು ಚರ್ಚೆ ಮಾಡುತ್ತಿದ್ದ ನಮ್ಮಮ್ಮ ಮತ್ತು ಅವರಮ್ಮ ಕೂದಲು ಜಗ್ಗಾಡಿಕೊಂಡು ಹೊಡೆದಾಡುವುದನ್ನು ಊಹಿಸಿಕೊಳ್ಳಲು ಪ್ರಯತ್ನಿಸಿದೆ. ನನ್ನ ಸರದಿ ಎಂದರೆ ನಾನು ಯಾರೊಡನೆ ಹೊಡೆದಾಡುವುದು ಎಂಬುವುದರ ಗೊಂದಲವಾಯಿತು. ಪರ್ವೀನ್ ಜೊತೆಗೆ ಹೊಡೆದಾಡುವುದು ನನ್ನಿಂದ ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಶಬ್ಬೀನಾ ಜೊತೆಗೆ ಹೊಡೆದಾಡಲು ನನಗೆ ಧೈರ್ಯವಿರಲಿಲ್ಲ! ನನ್ನನ್ನು ಒಂದೇ ಕೈಮೇಲೆ ಬ್ಯಾಲೆನ್ಸ್ ಮಾಡಿ ನಿಲ್ಲಿಸಿಕೊಳ್ಳುತ್ತಿದ್ದ ಅವರಣ್ಣ ಆರಾಮಾಗಿ ಎತ್ತಿ ಎಸೆದುಬಿಡುತ್ತಿದ್ದ. ನನ್ನ ಎದೆ ಡವಗುಟ್ಟತೊಡಗುತ್ತಿದ್ದಂತೆ ಇನ್ನೊಮ್ಮೆ ಪರಿಹರಿಸಿಕೊಂಡುಬಿಡೋಣ ಎಂದುಕೊಂಡು ಮತ್ತೆ ತಂದೆಯನ್ನು ಕೇಳಿದೆ,
“ಇವತ್ತು ಹೊಡೆದಾಡಲಿಕ್ಕೆ ನಾವೂ ಹೋಗಬೇಕಾ?”

“ಇಲ್ಲ. ಹುಚ್ಚು ಸೂಳೇ ಮಕ್ಳು ಹೊಡೆದಾಡ್ತಾರ ಅಷ್ಟೇ!” ಅಂದರು

ನನಗೆ ಸಮಾಧಾನವಾಯಿತು.

“ಅವರೆಲ್ಲ ಯಾಕೆ ಹೊಡೆದಾಡ್ತಿದ್ದಾರೆ?”
“ಯಾಕಂದ್ರ ಅವರು ಹುಚ್ಚುಸೂಳೆಮಕ್ಳು ಅದಕ್ಕೇ!”
ತೀರಾ ಕನಿಷ್ಟ ಪದಗಳಲ್ಲಿ ಎಲ್ಲಾ ವಿವರಗಳನ್ನು ಮುಗಿಸಿ ನಮ್ಮ ತಂದೆ ಫೈಲುಗಳ ಲೋಕದಲ್ಲಿ ಮುಳುಗಿಹೋಗಿದ್ದರು.

ಅವತ್ತು ರಾತ್ರಿ ಕಳೆಯಿತು. ಬೆಳಿಗ್ಗೆ ಎದ್ದವನೇ ಕೇಳಿದೆ.
“ಹಿಂದೂ ಮುಸ್ಲಿಂ ಗಲಾಟೆ ಮುಗೀತಾ?” ಅಂತ ತಂದೆಯನ್ನು ಕೇಳಿದೆ.
“ಹು.. ರಾತ್ರಿ ನಮ್ಮನೆ ಬಾಗಿಲಿಗೆ ಕಲ್ಲು ಹೊಡೆದರು. ನಾನು ಕಿಟಕಿಯಿಂದ ಬ್ಯಾಟರಿ ಹಿಡಿದು ‘ಏಯ್ ಯಾರದು?’ ಅಂತ ಕೂಗಿದೆ. ಓಡಿಹೋದರು” ಅಂದರು.

ನನ್ನ ಹದಿವಯಸ್ಸಿನವರೆಗೆ ನಮ್ಮಪ್ಪ ಸರ್ವಶಕ್ತ ಸೂಪರ್ ಮ್ಯಾನ್ ಅಂದುಕೊಂಡದ್ದರಿಂದ ಅವರ ಮಾತನ್ನು ನಂಬಿದೆ. ಎಷ್ಟೋ ದಿನಗಳವರೆಗೆ ನಮ್ಮಪ್ಪ ಬರೀ ಬ್ಯಾಟರಿ ಹಿಡಿದು ಸಾಬರನ್ನು ಓಡಿಸಿದರು ಅಂತ ಕೊಚ್ಚಿಕೊಂಡಿದ್ದೆ. ಹಲ್ಲು ತಿಕ್ಕಿ ಸ್ನಾನ ಮಾಡಿ ತಿಂಡಿ ತಿಂದು ಹೊರಗೆ ಬಂದಾಗ ಅಕ್ಕಪಕ್ಕದ ಅಂಕಲ್ ಗಳೆಲ್ಲ ಅಲ್ಲಲ್ಲೇ ಮಾತನಾಡಿಕೊಂಡು ಅಡ್ಡಾಡುತ್ತಿದ್ದರು. ಬೆಳಿಗ್ಗೆ ಹಾಲು ತರೋಕೆ ಹೋದಾಗ ಮೇಷ್ಟ್ರಿಗೆ ಪೋಲೀಸರು ಹೊಡೆದಿದ್ದಾರಂತೆ ಅಂತ ಮಾತಾಡಿಕೊಳ್ಳುತ್ತಿದ್ದರು. ಮೇಷ್ಟ್ರ ಮಗ ರಾಜು ನನ್ನ ಬಳಿ ಬಂದು “ನಮ್ಮಪ್ಪ ಪೋಲೀಸರ ಬಳಿ ಒದೆ ತಿಂದು ಬಂದಿದ್ದಾರೆ” ಅಂತ ಹೆಮ್ಮೆಯಿಂದ ಹೇಳಿಕೊಂಡ. ನನಗೆ ಬೇಸರವಾಯಿತು. ಯಾಕೆಂದರೆ ಮೇಷ್ಟ್ರು ತುಂಬಾ ಮೆದು ಸ್ವಭಾವದವರಾಗಿದ್ದರು. ತಮ್ಮ ಹೆಂಡತಿಗೆ ಮತ್ತು ಮಕ್ಕಳಿಗೆ ಬಿಟ್ಟು ಬೇರಾರಿಗೂ ಬೈದವರಲ್ಲ. “ನಿಮ್ಮಪ್ಪ ವಾಪಸು ಪೋಲೀಸ್ ಗೆ ಹೊಡೆಯಬೇಕಾಗಿತ್ತು” ಅಂದೆ.

“ಹೇ.. ಹೇ…! ಪೋಲೀಸರಿಗೆ ಯಾರೂ ಹೊಡೆಯೋಕಾಗಲ್ಲ. ಸುಮ್ಮನೆ ಹೊಡೆಸಿಕೋಬೇಕಷ್ಟೇ!” ಅಂದ.

ಆದರೆ ಈ ಗಲಾಟೆ ಆಗಿರೋದು ಯಾಕೆ ಅಂತ ನನಗೆ ಇನ್ನೂ ವಿಷದವಾಗಿರಲಿಲ್ಲ. ಹುಚ್ಚುಸೂಳೆಮಕ್ಕಳ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ ಅಂತ ರಾಜುನನ್ನೇ ಕೇಳಿದೆ. ಆತ
“ಅದು ಒಬ್ಬನು ಯಾವನೊ ರಾಮನ ಗುಡಿ ಒಡೆದು ಹಾಕಿ ಮಸೀದಿ ಕಟ್ಟಿದ್ದನಂತೆ. ಅದಕ್ಕೆ ಅದನ್ನ ಒಡೆದು ಮತ್ತೆ ಗುಡಿ ಕಟ್ಟಬೇಕು ಅಂತ ಗಲಾಟೆ ಮಾಡಕತ್ತಾರ” ಅಂದ.

ನಮ್ಮೂರಿಂದ ಕೊಂಡಜ್ಜಿಗೆ ಹೋಗುವ ದಾರಿಯಲ್ಲಿ ಒಂದು ಮಸೀದಿ ಇತ್ತು. ಬಹುಷಃ ಅದನ್ನೇ ಒಡೆದು ಗುಡಿ ಕಟ್ಟುತ್ತಾರೇನೊ ಅಂದುಕೊಂಡಿದ್ದೆ. ನನ್ನ ಚಿಂತನೆಯ ಭೌಗೋಳಿಕ ಪರಿಧಿಯೇ ಅಷ್ಟಿತ್ತು ಆಗ.

“ಹಾಗಿದ್ದರೆ ಅವನನ್ನ ಹಿಡಿದು ಜೈಲಿಗೆ ಹಾಕಬೇಕು. ಅವನು ಯಾಕೆ ಗುಡಿ ಒಡೀಬೇಕಿತ್ತು?” ಅಂದೆ.
“ಹೆ..ಹೆ… ಅವನು ಸತ್ತು ಆಲೆ ಐನೂರು ವರ್ಷ ಆಗೇತಿ” ಅಂದ!

ಈ ಎಲ್ಲಾ ಸಮಯದಲ್ಲೂ ನನಗೆ ಎದುರಿನ ಮನೆಯವರು ಕಾಣಲಿಲ್ಲ. ಈ ಸಮಯದಲ್ಲಿ ಕರ್ಫ್ಯೂ ವಿಧಿಸಿದ್ದರು. ಗಲಾಟೆ ಅದೆಷ್ಟು ಭಯಾನಕವಾಗಿತ್ತೆಂದರೆ ಬಿಬಿಸಿ ನ್ಯೂಸ್ ನಲ್ಲೂ ದಾವಣಗೆರೆಯ ಹೆಸರು ಬಂದಿತ್ತು. ಪೋಲೀಸರು “ಕಂಡಲ್ಲಿ ಗುಂಡು” ಅಂತ ರಸ್ತೆಯಲ್ಲಿ ಕೂಗುತ್ತಾ ತಿರುಗಾಡುತ್ತಿದ್ದರು. ನಾಯಿಗಳು ಪೋಲೀಸರ ಹಿಂದೆ ಬಿದ್ದು ಬೊಗಳುತ್ತಿದ್ದವು. ಅವರು ನಾಯಿಗಳನ್ನು “ಹಚಾ.. ಹಚಾ…” ಅಂತ ಓಡಿಸುತ್ತಿದ್ದುದು ಕೇಳಿಬರುತ್ತಿತ್ತು. ಕೆಲವೊಮ್ಮೆ ನಾಯಿಗಳು ಕುಂಯ್ ಗುಡುತ್ತಾ ಓಡಿಹೋಗುವ ಸದ್ದು ಕೇಳಿದಾಗ ಬಹುಷಃ ಪೋಲೀಸರು ಕಲ್ಲು ಹೊಡೆದಿದ್ದಾರೆ ಎಂದು ಗೊತ್ತಾಗುತ್ತಿತ್ತು. ಒಮ್ಮೆ ಕಂಡಲ್ಲಿ ಗುಂಡು ಅಂತ ಹೆಂಗೆ ಕೂಗುತ್ತಾರೆ ನೋಡುವ ಅಂತ ನಮ್ಮ ತಂದೆ ಬಾಗಿಲ ಸಂಧಿಯಿಂದ ಇಣುಕಿದ್ದರು, ನಾನೂ ಜೊತೆಗೆ ಇಣುಕಿದ್ದೆ.

ಜೀಪಿನ ಹಿಂಬದಿಯಲ್ಲಿ ನಿಂತು ಟಾಪ್ ಮೇಲೆ ರೈಫಲ್ ಇಟ್ಟುಕೊಂಡು ಸುತ್ತಲೂ ಗುರಿಯಿಟ್ಟುಕೊಂಡು ಒಬ್ಬ ಪೋಲೀಸ್ ನಿಂತಿದ್ದರೆ ಒಳಗಿನಿಂದ ಮೈಕಲ್ಲಿ ಕೂಗುತ್ತಿದ್ದರು. ಅಕ್ಷರಷಃ ಅವತ್ತು ಅವರು ಕಂಡಿದ್ದರೆ ಗುಂಡು ಹೊಡೆಯುತ್ತಿದ್ದರೇನೋ! ಆದರೆ ಅವತ್ತು ಮಧ್ಯಾಹ್ನ ಅಕ್ಕ ಪಕ್ಕದ ಮನೆಯವರ್ಯಾರೋ ಕಸ ಚೆಲ್ಲಲು ಹೊರಬಂದಾಗ “ಏನಮ್ಮಾ.. ಕಂಡಲ್ಲಿ ಗುಂಡು ಅಂತ ಕೂಗಿದ್ದು ಕೇಳಿಸಲ್ಲವಾ? ಒಳಗೆ ಹೋಗಿ” ಅಂತ ಪೋಲೀಸರು ಗದರಿದರು. ಆ ಯಮ್ಮ ನಿರ್ಲಿಪ್ತವಾಗಿ “ಒಂದು ನಿಮಿಷ ಕಸ ಚೆಲ್ಲುತ್ತೇನೆ” ಅಂತ ಹೇಳಿ ಕಸದ ತೊಟ್ಟಿಯಲ್ಲಿ ಕಸ ಚೆಲ್ಲಿಯೇ ವಾಪಸು ಹೋದಳು!