ಗಾರೇಜಿನಲ್ಲಿ ನೆರವಾಗುತ್ತಿದ್ದ ಪಿಟ್ಟನಿಗೆ ಆ ತಿಂಗಳ ಸಂಬಳ ಕೊಡುವುದಕ್ಕೇ ಸಾಧ್ಯವಾಗಲಿಲ್ಲ ಅಡಿಗರಿಗೆ. ಸಾಧು ಸ್ವಭಾವದವನಾದ, ಯಾವತ್ತೂ ಸಂಬಳಕ್ಕಾಗಿ ಹಾತೊರೆದು ಕೇಳದ ಪಿಟ್ಟ ಆರಂಭದಲ್ಲಿ ಏನೂ ಕೇಳಲಿಲ್ಲ. ಆದರೆ ಕೆಲದಿನಗಳಲ್ಲಿ, ‘ಸ್ವಲ್ಪ ಇದ್ದರೆ ಬೇಕಿತ್ತು’ ಎಂದು ಎರಡು ಮೂರು ಬಾರಿ ಕೇಳಿದ. ನಾಳೆ ಕೊಡುವ ಎಂದು ಅಡಿಗರು ಆಶ್ವಾಸನೆ ಕೊಟ್ಟರೂ, ಹಾಗೆ ಹಣ ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಈ ನಡುವೆ ಹುಶಾರು ತಪ್ಪಿದ ಪಿಟ್ಟ, ಆಗಸ್ಟ್ ತಿಂಗಳಲ್ಲಿ ಸಿದ್ಧಾಪುರದ ಆಸ್ಪತ್ರೆಗೆ ಸೇರಿದವನು, ತೀರಿಯೇ ಹೋದ ಸುದ್ದಿ ಬಂದಿತ್ತು.
ನವೀನ ಗಣಪತಿ ಬರೆದ ಈ ಭಾನುವಾರದ ಕತೆ ‘ಪ್ರಾಣ ಪಕ್ಷಿ’ ನಿಮ್ಮ ಓದಿಗಾಗಿ. 

ಅಡಿಗರಿಗೆ ಯಾಕೋ ಮೂರು ದಿವಸಗಳಿಂದ ಹೀಗೆ ಅನ್ನಿಸ ತೊಡಗಿತ್ತು. ಪ್ರಾರಂಭವಾಗಿದ್ದು ಒಂದು ದಿನ ಬೆಳಿಗ್ಗೆ ಬಚ್ಚಲ ಮನೆ ಯಲ್ಲಿ ಮುಖ ತೊಳೆಯುವಾಗ. ಇದೇ ಮೊದಲ ಬಾರಿಗೆ ತನ್ನ ಜೀವ ಹೋಗ್ತದೆ, ಸಾವಿಗೆ ತುಂಬ ಹತ್ತಿರವಿದ್ದೇನೆ ಎಂದು ಅನ್ನಿಸತೊಡಗಿತ್ತು. ಹೋಯಿತು ಹೋಯಿತು ಎನ್ನುವಷ್ಟು ಉಸಿರಾಟದ ಏರಿಳಿತ ಗಳಾದರೂ ಹಲ್ಲುಜ್ಜಿದ ಬ್ರಶ್ ನ್ನು ಸರಿಯಾಗಿ ತೊಳೆದಿಟ್ಟು ಹೋಗಿಬಿಡೋಣ ಎಂದು ಬಲಬದಿಯ ತಣ್ಣೀರಿನ ನಳ ವನ್ನು ತಿರುಗಿಸಲು ಬಗ್ಗಿದರು. ಅರವತ್ತು ಚಿಲ್ಲರೆ ವರ್ಷ ಗಳಲ್ಲಿ ಏನೆಲ್ಲ ಅನುಭವ ಗಳಾಗಿವೆ, ಇಂದು ಅದ್ಯಾವ ಪಾಟಿ ವಿಚಿತ್ರ ಅನುಭವವೋ ಗೊತ್ತಿಲ್ಲ, ವಿಚಿತ್ರ ಸಂವೇದನೆ, ತೀವ್ರ ನೋವೇನೂ ಇಲ್ಲ, ಬಿಗುವಿಲ್ಲ, ಸಡಿಲವಲ್ಲ, ನಿರಾಳ – ಗುದದಿಂದ ಪ್ರಾಣ ಪಕ್ಷಿ ಜಾರಿ ಹಾರಿ ಹೋಗುವಂತೆ ಅನ್ನಿಸಿತು. ಐದು ನಿಮಿಷ ಹಾಗೆಯೇ ಬಚ್ಚಲಿನ ನೆಲದ ಮೇಲೆ ಸಾವರಿಸಿಕೊಂಡು ಕುಳಿತ ಆಡಿಗರಿಗೆ, ಕೂಗಿ ಮಗನನ್ನು ಕರೆಯಬೇಕೆ ಬೇಡವೇ ಎಂದೆನ್ನಿಸಿದರೂ ಮತ್ತೆ ಹಾಗೆಯೇ ಈ ಅದ್ಭುತ ಅನುಭವದ ತಾಜಾ ನೆನಪನ್ನು ಸ್ವಲ್ಪ ಹೊತ್ತು ತಾನೊಬ್ಬನೇ ಅನುಭವಿಸೋಣ ವೆನ್ನಿಸಿತು.

ಜಗತ್ತನ್ನು ಬಿಟ್ಟು ಹೋಗ ಬೇಕೆಂಬ ಜಿಗುಪ್ಸೆ ಯನ್ನೇನೂ ಜೀವನ ಹುಟ್ಟಿಸಿರಲಿಲ್ಲ. ಆದರೂ ಸಾವು ಬಂದರೆ ಜೈ ಏನ್ನೋಣವೆಂಬ ಭಾವ ಅದಾಗಲೇ ಎಂಟು ಹತ್ತು ವರ್ಷ ಗಳಿಂದ ಬರುತ್ತಲೇ ಇತ್ತು. ಬಿಡುವುದಕ್ಕೆ ಏನಿದೆ, ಒಬ್ಬ ಮಗ ಸೊಸೆ ಮೊಮ್ಮಗ, ಹುಟ್ಟಿ ಬೆಳೆದ ಮನೆ, ಅವೇ ಊರು ಬೀದಿ ಪೇಟೆ. ಒಬ್ಬಳು ತಂಗಿ ದೂರದ ಮುಂಬೈಯಿಂದ ಎರಡೊ ಮೂರೋ ವರ್ಷಕ್ಕೆ ಬಂದು ಹೋಗುವವಳು. ಮಾಡುವುದಕ್ಕೂ ಮತ್ತೇನೂ ಉಳಿದಿರಲಿಲ್ಲ. ಮೂವತ್ತು ವರ್ಷಗಳಿಂದ ನಡೆಸುತ್ತಿದ್ದ ಗ್ಯಾರೇಜನ್ನೂ ಮುಚ್ಚಿ ಮೂರು ವರ್ಷಗಳಾದವು. ಎಲ್ಲವನ್ನೂ ಎಲ್ಲ ನೆನಪನ್ನೂ ಬಿಟ್ಟು ದೂರವೆಲ್ಲಿಯೋ ಹೋಗುವುದು, ತೇಲುವುದೋ, ಮುಳುಗುವುದೋ, ಹೀಗೇ ಕುಳಿತು ನಿಂತು ಇರುವುದೋ, ಏನೂ ಇಲ್ಲದಿರುವುದೋ, ಒಟ್ಟಾರೆಯಾಗಿ ಸಾವನ್ನು ರೋಚಕವಾಗಿ ಅನುಭವಿಸಬೇಕು ಅನ್ನುವುದು ಅಡಿಗರ ಬಹುದಿನಗಳ ಕಳಕಳಿಯಾಗಿತ್ತು. ಘನವಾದ ವಸ್ತುವೊಂದು ಹೊಕ್ಕಳಿನ ಒಳಭಾಗದಿಂದ ಇಳಿದಿಳಿದು ಇಹವನ್ನು ಸೀಳಿ ಹೋಗುತ್ತೇನೆ ಎನ್ನುತ್ತಿತ್ತು. ಇಡೀ ಮೈಯಿ ಹತ್ತಿಯಷ್ಟು ಹಗುರವಾದಂತಾಗಿತ್ತು.

ನಂಬಿಕೆಯ ಪ್ರಕಾರ ಪ್ರಾಣ ಮೇಲ್ಮುಖವಾಗಿ ಹೋದಷ್ಟು ಉತ್ತಮ. ಅದರಲ್ಲೂ ತಲೆಯ ಮೇಲಿನ ಸಹಸ್ರಾರ ವೆಂಬ ಅದೃಶ್ಯ ರಂಧ್ರದ ಮೂಲಕ ಪ್ರಾಣಪಕ್ಷಿ ಹಾರಿದರೆ ತುಂಬ ತುಂಬ ತುಂಬ ಉತ್ತಮ. ಬಾಯಿಯಿಂದಲೋ ಮೂಗಿನಿಂದಲೋ ಅಥವಾ ಕಣ್ಣಿನಿಂದಲೋ ಆದರೂ ಹೋಗುವಂತಿದ್ದರೆ ಓಕೆ ಯಾಗಿತ್ತು. ಮೂಲಾಧಾರದಿಂದ ಪ್ರಾಣ ಹಾರುವಷ್ಟು ಕೆಟ್ಟ ಬದುಕನ್ನು ಬದುಕಿದ್ದೇನೆಯೇ? ಅಡಿಗರಿಗೆ ಇಡೀ ದಿನ ಚಿಂತೆಯೋ ಚಿಂತೆ. ಯೋಗ ಗುರು ನಿಟ್ಟುವಳ್ಳಿಯ ವಿಷ್ಣು ನಾಯ್ಕರ ಹತ್ತಿರವಾದರೂ ಹೇಳಿ ಕೊಂಡು ಹಗುರವಾಗೋಣವೆಂದರೆ ಸಂಕೋಚವೆನಿಸಿತು. ಆದರೆ ಇಡೀ ದಿನ ಇದೇ ವಿಚಾರವೇ ಹತ್ತು ಸಾರ್ತಿ ನೂರು ಸಾರ್ತಿ ಮತ್ತೆ ಮತ್ತೆ ತಲೆಗೆ ಬರುತ್ತಿತ್ತು. ಊಟ ತಿಂಡಿಯೂ ರುಚಿಸಲಿಲ್ಲ. ಮಧ್ಯಾಹ್ನ ಊಟವಾದ ಮೇಲೆ ಸ್ಟ್ರಾಂಗ್ ಚಹಾ ಮಾಡಿ ಕೊಡು ಎಂದಿದ್ದರು ಸೊಸೆಗೆ. ಟೀ ಕುಡಿತವೂ ಅಷ್ಟೇ ಆಯಿತು, ಸುರುವಾಗಿದ್ದು ಯಾವಾಗಲೋ ಮುಗಿದಿದ್ದು ಯಾವಾಗಲೋ ಗೊತ್ತಾಗಲಿಲ್ಲ. ಒಂಥರಾ ವಿಸ್ಮೃತಿ.

ಏನಿಲ್ಲವೆಂದರೂ ಮೂವತ್ತೈದು ವರ್ಷದ ನೆನಪು. ಮಗ ಶ್ರೀರಾಮ ಸಾಮಾನ್ಯ ಐದು ವರ್ಷದವನಿದ್ದ. ಸೈಕಲ್ ಮೇಲೆ ಬೇಡ್ಕಣಿಯ ಕೋಟೆ ಹನುಮಂತ ದೇವಸ್ಥಾನಕ್ಕೆ ಕರೆದುಕೊಂಡುಹೋಗಿದ್ದು, ಬಹುಶಃ ಶನಿವಾರವೋ ಸೋಮವಾರವೋ ಇದ್ದಿರಬೇಕು. ಹಣ್ಣು ಕಾಯಿಯನ್ನೂ ಮಂಗಳಾರತಿಯನ್ನೂ ಮುಗಿಸಿ ದೇವರ ಎದುರು ಕೂತಿದ್ದಾಗ ಹೀಗೆ ಸುಮ್ಮನೆ ಹೇಳ ಬೇಕೆನ್ನಿಸಿತು. ಮಗಾ ಕಣ್ಣು ಮುಚ್ಚಿ “ಶ್ರೀರಾಮ ಜೈ ರಾಮ ಜಯಜಯ ರಾಮ” ಹೇಳು. ಹೋದ ತಿಂಗಳು ಬಿಳಗಿಯ ಕನ್ನಾ ನಾಯ್ಕರ ಮಗ ಇಲ್ಲೀಗ್ ಬಂದು ಹೀಂಗ್ ಹೇಳಿ ಮನೆಗೆ ಹೋಗುವುದರ ಒಳಗೆ ಅವನ ಅಪ್ಪನ ಕಪಾಟು ತುಂಬ ದುಡ್ಡು ತುಂಬಿಕೊಂಡಿತ್ತಂತೆ. ನೀನು ಶ್ರದ್ಧೆಯಿಂದ ಹೇಳು, ನೋಡು ನಾವು ಮನೆಗೆ ಹೋಗುವುದರ ಒಳಗೆ ನಮ್ಮ ಮನೆ ಕಪಾಟ್ ಒಳಗೂ ರಾಶಿ ದುಡ್ಡು ಬಂದಿರ್ತು. ಮಗನಿಗೆ ಶ್ರದ್ಧೆ ಬರಲಿ ಅಂತ ಹಾಗೆ ಹೇಳಿದ್ದರೋ ಏನೋ ಅಂತೂ ದುಡ್ಡಿನ ತೀವ್ರ ಅಗತ್ಯವೂ ಇತ್ತು ಅವತ್ತಿಗೆ. ಯಾಕೋ ಇದೇ ನೆನೆಪು ಮತ್ತೆ ಮತ್ತೆ ಬಂತು. ಆ ರಾತ್ರಿ ಇಡೀ ಎಷ್ಟೋ ಹೊತ್ತು ನಿದ್ದೆಯೇ ಬರಲಿಲ್ಲ.

ಮರುದಿನ ಬೆಳಗಾತ ಮುಖ ತೊಳೆದವರೇ ತೋಟಕ್ಕೆ ಓಡಬೇಕೆನಿಸಿತು. ಯಾಕೋ ಮೊಮ್ಮಗನ ಅಳು ಚೇಷ್ಟೆಗಳು ಕಿರಿಕಿರಿ ಯೆನಿಸಿದವು. ಸೊಸೆಯ ಮುಖ ನೋಡುವುದೂ ಬಿಸಿ ಹಾಲಿಗೋ ಚಹಾಕ್ಕೋ ಅಂಗಲಾಚುವುದೂ ಅಸಹನೀಯವೆನಿಸಿತು. ತೋಟದಾಚೆಯ ಹೊಳೆಯ ಏರಿಯ ಮೇಲೆಲ್ಲ ಸುತ್ತಿದರು. ಇಬ್ಬನಿಯ ಹನಿಗಳು ಇನ್ನೂ ಕರಗಿರಲಿಲ್ಲ. ಹೊಳೆಯ ಮೂಲೆಯಲ್ಲಿ ದಾಸವಾಳದ ಗಿಡಗಳು ಮಟ್ಟಿಯಾಗಿ ಎತ್ತರಕ್ಕೆ ಬೆಳೆದಿದ್ದವು. ದಾಸವಾಳದ ಮಟ್ಟಿಯ ಹಿಂಬದಿಯಲ್ಲಿ ಹೇಳಿ ಮಾಡಿಸಿದಂತೆ ಸಪಾಟನೆಯ ಕಪ್ಪು ಕಲ್ಲು ಅಡಿಗರ ಯಾವತ್ತೂ ಆತಿಥ್ಯ ಮಾಡುವ ಸಖನಂತೆ ಎಷ್ಟೋ ವರ್ಷಗಳಿಂದ ಇತ್ತು. ಅಲ್ಲಿ ಕುಳಿತು ಬಿಟ್ಟರೆ ಪ್ರಪಂಚದಿಂದಲೇ ಮರೆಯಾದ ಹಾಗೆ. ಅಡಿಗರಿಗೆ ಹಾಗೇ, ತಾವು ಪ್ರಾಣಾಯಾಮ ಯೋಗ ಮಾಡುವಾಗ ಯಾರೂ ನೋಡ ಬಾರದು, ಏಕಾಗ್ರತೆಗೆ ತೊಂದರೆಯಾಗುತ್ತದೆಂದು ಐದಾರು ವರ್ಷಗಳಿಂದ ಬೆಳಗಿನ ಇಪ್ಪತ್ತು ಮೂವತ್ತು ನಿಮಿಷಗಳನ್ನು ಇಲ್ಲಯೇ ಕಳೆಯುವ ಅಭ್ಯಾಸ ಮಾಡಿಕೊಂಡಿದ್ದರು. ದೇಹಕ್ಕೆ ತುಸುವಾಗಿ ಸುಸ್ತಾಗ ಬೇಕು, ಅಂದರೆ ಅತೀವ ಸಮಾಧಾನ ಸಿಗುವಷ್ಟು ಧ್ಯಾನ ಮಾಡುವುದು ಸಾಧ್ಯವಾಗುತ್ತದೆ. ಇದು ಅದೆಷ್ಟೋ ದಿನಗಳ ಅಡಿಗರ ಅನುಭವ. ಆದಾಗ್ಯೂ ಆಯಾ ದಿನದ ಧ್ಯಾನದ ಅನುಭವ ಹಿತವಾಗಿಯೇ ಇರುತ್ತದೆಂಬ ಯಾವ ಖಾತರಿಯೂ ಇರುತ್ತಿರಲಿಲ್ಲ. ತೋರಿಕೆಯಿಲ್ಲದ ಬದುಕು, ಬಿಡದ ಪ್ರಯತ್ನ – ಅಡಿಗರೆಂದರೆ ಇದೇ, ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ಅಡಿಗರನ್ನು ನೋಡಿದ, ಒಡನಾಡಿದ ಊರಿನ ಊರಾಚೆಯ ಯಾರಾದರೂ ಅಡಿಗರ ಬಗ್ಗೆ ‘ಒಂದು ವಾಕ್ಯ’ ಎಂದರೆ ಇದನ್ನೇ ಅಂದಾರು. ಅಂದಿನ ಪ್ರಾಣಾಯಾಮ ಆಯಿತು, ಮನಸ್ಸು ಧ್ಯಾನದ ಗುಹೆಯೊಳಗೆ ಹೋಗುವುದಕ್ಕೆ ತಕ್ಕ ಮಟ್ಟಿಗೆ ಹದವಾಗಿತ್ತು. ಮುಂದಿನ ಹತ್ತು ನಿಮಿಷ ಗಳಾದರೂ ಧ್ಯಾನ ವಾಗಬೇಕು.

ಸುಮಾರು ಹತ್ತು ವರ್ಷ ಗಳ ಹಿಂದಿನ ನೆನಪು. ಗ್ಯಾರೇಜಿನ ಕೆಲಸಕ್ಕೆಂದು ಪಿಟ್ಟನೆಂಬ ಸುಮಾರು ಇಪ್ಪತ್ತರ ಪೋರ ಬಂದಿದ್ದ. ಬಲಗೈಯಂತಿದ್ದ ಚಂದ್ರ ಬಿಟ್ಟು ಹೋದ ಮೇಲೆ ಚಿಲ್ಲರೆ ಚಿಲ್ಲರೆ ಕೆಲಸಕ್ಕೆ ಬೈಕು ಗಳನ್ನು ಹೊರಗಿಡುವುದಕ್ಕೆ, ಬಂದು ಮಾಡುವಾಗ ಒಳಗಿಡುವುದಕ್ಕೆ, ರಿಪೇರಿಯಾದ ಬೈಕು ಗಳು ಸರಿಯಾಗಿ ಓಡುತ್ತವೆಯೋ ಇಲ್ಲವೋ ಎಂದು ಟೆಸ್ಟ್ ಡ್ರೈವ್ ಮಾಡುವುದಕ್ಕೆ ಯಾರಾದರೂ ಬೇಕೆಂದು ಪಿಟ್ಟನನ್ನು ಇಟ್ಟುಕೊಂಡಿದ್ದರು. ಪ್ರಾಮಾಣಿಕ ಹುಡುಗ, ಹೇಳಿದ್ದನ್ನು ಕೇಳಿದ್ದನ್ನು ಇಲ್ಲವೆನ್ನದಂತೆ ಮಾಡುತ್ತಿದ್ದ. ಬಂದವರೆಲ್ಲ ‘ಗೋವಿನಂತಹ ಮನುಷ್ಯ’ ನೆನ್ನುತ್ತಿದ್ದರು.

ಆದರೆ ಅವನಿಗೆ ನಾಲ್ಕನೇ ತಿಂಗಳ ಸಂಬಳ ಕೊಡುವುದಕ್ಕೇ ಆಗಲಿಲ್ಲ ಅಡಿಗರಿಗೆ. ಅದು ಹೇಗೋ ಹತ್ತು ಹದಿನೈದು ದಿನ ತಡವಾಗಿಯಾದರೂ ದಿನಾ ಅಷ್ಟಷ್ಟು ಎರಡು ಮೂರು ದಿನಗಳಿಗಷ್ಟು ವಾರಕ್ಕೊಮ್ಮೆ ಎಂದು ಮೂರು ತಿಂಗಳು ಸಂಬಳ ಕೊಟ್ಟಿದ್ದರು. ಆದರೆ ಅದೇನೋ, ಜುಲೈ ತಿಂಗಳ ಘೋರ ಮಳೆಗೆ ಸಣ್ಣ ಪುಟ್ಟ ರಿಪೇರಿಗೂ ಯಾರೂ ಬರಲಿಲ್ಲ. ಬಿಡಿ ಭಾಗಗಳು ಕೆಲವು ಬಿಕರಿ ಯಾದಾವಾದರೂ ತಮ್ಮ ಮನೆಯ ಖರ್ಚಿಗೆ ಮೀಟರ್ ಬಡ್ಡಿಯ ಕಂತಿಗೆ ಅವೆಲ್ಲ ಕಂತಿ ಹೋದವು. ಕೊಟ್ಟರಾಯಿತು ಈವತ್ತು ಬಂದೀತು ನಾಳೆ ಬಂದೀತು ಎಂದು ನೋಡ ನೋಡುತ್ತಿದ್ದಂತೆಯೇ ತಿಂಗಳ ಕೊನೆ ಬಂದೇಬಿಟ್ಟಿತು. ಪಾಪ ಯಾವತ್ತೂ ಸಂಬಳಕ್ಕಾಗಿ ಹಾತೊರೆದು ಕೇಳದ ಪಿಟ್ಟ ತಿಂಗಳ ಕೊನೆಯ ವಾರ ಮೂರು ನಾಲ್ಕು ಸಾರ್ತಿ “ಸ್ವಲ್ಪ ಇದ್ದರೆ ಬೇಕಿತ್ತು, ಇದ್ದರೆ ಬೇಕಿತ್ತು” ಎಂದು ಕೇಳಿದ್ದ. ನಾಳೆ,ನಾಳೆ ,ಆದೀತು ಆದೀತು.. ಎಂದ ಅಡಿಗರಿಗೆ ಕೊನೆಗೂ ಅವನಿಗೆ ಒಂದು ರೂಪಾಯಿಯನ್ನೂ ಕೊಡುವುದಕ್ಕೆ ಆಗಲಿಲ್ಲ. ಆಗಸ್ಟ್ ತಿಂಗಳ ಎರಡು ದಿನ ಗ್ಯಾರೇಜಿಗೆ ಬಂದು ಹೋದ ಪಿಟ್ಟ ಮೂರನೇ ದಿನ ಜ್ವರವೆಂದು ಮಲಗಿದವನು ನಾಲ್ಕಾರು ದಿನದಲ್ಲಿ ಸಿದ್ಧಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತು ಹೋಗಿದ್ದ. ಅಂದಿನ ಧ್ಯಾನವೆಲ್ಲ ಪಿಟ್ಟನದ್ದೇ ಆಯಿತು. ಒಂದು ರೂಪಾಯಿಯೂ ಕೊಡುವುದಕ್ಕೆ ಆಗಲಿಲ್ಲ ಛೇ, ಮುಂದೆಂದಾದರೂ ಅವನ ತಾಯಿಗಾದರೂ ಅಷ್ಟು ದುಡ್ಡು ಹೊಂದಿಸಿ ಕೊಡೋಣವೆಂದರೆ ಇಷ್ಟು ವರ್ಷಗಳಾದರೂ ಇನ್ನೂ ಸಾಧ್ಯವಾಗಿಲ್ಲ. ಒಂದು ಮೂಲದಿಂದ ದುಡ್ದು ಬರುತ್ತದಾದರೆ ಅದಾಗಲೇ ಹತ್ತು ಖರ್ಚುಗಳು ಕಾದು ಕುಳಿತಿರುತ್ತವೆ. ಈಗಂತೂ ತನ್ನ ಕೈಯಲ್ಲಿ ಏನೂ ಇಲ್ಲ. ಇರುವ ಹತ್ತು ಗುಂಟೆ ಅಡಿಕೆ ತೋಟದಲ್ಲಿ ಜೀವನ ಸಾಗಬೇಕು. ಮಗನ ನೌಕರಿ ಗೌರ್ನಮೆಂಟ್ ಹೈಸ್ಕೂಲಿನಲ್ಲಿ ಆದರೂ ಇನ್ನೂ ಪರ್ಮನೆಂಟ್ ನೌಕರಿ ಅಲ್ಲ. ಸರ್ಕಾರ ಸಂಬಳ ಹಾಕಿದಾಗಲೇ ಖರೆ. ಆದರೂ ‘ಮೂರು ಸಾವಿರ’, ಕೇವಲ ಮೂರು ಸಾವಿರ ರೂಪಾಯಿಗಳನ್ನು ಅವನ ತಾಯಿಗೋ ತಂದೆಗೋ ಆಗಾಗ ಸಾವಿರದಂತೆ ಅಥವಾ ಐನೂರರಂತೆ ಕೊಟ್ಟಿದ್ದರೂ ಇಷ್ಟು ಹೊತ್ತಿಗೆ ಪಿಟ್ಟನ ಋಣ ತೀರಿ ಬಿಡುತ್ತಿತ್ತು. ಅದೆಲ್ಲ ಆಗಿಹೋದದ್ದು ಮುಂದೆ ಯಾವತ್ತಾದರೂ ಆದಾಗ ಕೊಡೋಣ ಕಾಲಮಿಂಚಿಲ್ಲವಲ್ಲ ಎಂದು ಎಷ್ಟೇ ಸಮಾಧಾನ ಹೇಳಿ ಕೊಂಡರೂ ಮನಸ್ಸು ತಡೆಯದಾಯಿತು. ಧ್ಯಾನದ ಮೊದಲ ಮೆಟ್ಟಿಲುಗಳನ್ನೂ ಹತ್ತಲಾಗಲಿಲ್ಲ., ಕಣ್ಣು ಮುಚ್ಚುವುದೂ ಅಸಾಧ್ಯ ಪ್ರಯತ್ನವಾಯಿತು. ಈ ಹಿಂದೆ ಯಾವತ್ತೂ ಪಿಟ್ಟನ ವಿಷಯ ಹೀಗೆ ಕಾಡಿದ್ದಿಲ್ಲ. ಆಗಾಗ ನೆನಪಾದರೂ ಹೋಗಲಿ ಬಿಡು, ಆದಾಗ ಅವನ ತಂದೆ ತಾಯಿಗೆ ಕೊಟ್ಟರಾಯಿತು, ಬರೀ ಮೂರು ಸಾವಿರ ತಾನೇ.. ಎಂದು ಹಾರಿಕೆಯಾಗಿ ಅನಿಸಿದ್ದುಂಟು ಅಷ್ಟೆ.

ಎಲ್ಲವನ್ನೂ ಎಲ್ಲ ನೆನಪನ್ನೂ ಬಿಟ್ಟು ದೂರವೆಲ್ಲಿಯೋ ಹೋಗುವುದು, ತೇಲುವುದೋ, ಮುಳುಗುವುದೋ, ಹೀಗೇ ಕುಳಿತು ನಿಂತು ಇರುವುದೋ, ಏನೂ ಇಲ್ಲದಿರುವುದೋ, ಒಟ್ಟಾರೆಯಾಗಿ ಸಾವನ್ನು ರೋಚಕವಾಗಿ ಅನುಭವಿಸಬೇಕು ಅನ್ನುವುದು ಅಡಿಗರ ಬಹುದಿನಗಳ ಕಳಕಳಿಯಾಗಿತ್ತು.

ಈವತ್ತು ಇಷ್ಟು ಹೊತ್ತಿಗೆ ಹೀಗೆ ಹೊಂಚು ಹಾಕಿ ಕುಳಿತಿತ್ತೇ? ಈ ವಿಷಯ ಎಂದು ಆಶ್ಚರ್ಯ ವಾಯಿತು. ಸ್ಥಿತಿವಂತ ನಾಗುವಷ್ಟು ದುಡ್ಡು ಮಾಡಬೇಕೆಂಬ ಮಹತ್ವಾಕಾಂಕ್ಷೆ ಇಪ್ಪತ್ತರಿಂದ ನಲವತ್ತು ವಯಸ್ಸಿನ ವರೆಗೂ ಇತ್ತಾದರೂ ಯಾವುದೂ ಕೈ ಹಿಡಿಯಲಿಲ್ಲ. ಯಾಲಕ್ಕಿ ವ್ಯಾಪಾರ, ತೆಂಗಿನ ಕಾಯಿ ವ್ಯಾಪಾರ, ಅಡಿಕೆ ವ್ಯಾಪಾರ, ವೆನಿಲ್ಲಾ ವ್ಯವಸಾಯ ಎಲ್ಲದರಲ್ಲೂ ಕೈಯಾಡಿಸಿದ್ದಾಗಿತ್ತು. ಯಾವತ್ತೋ ಓದಿದ ಶೆಲ್ಲಿ ಕವಿಯ ಪದ್ಯದ ವಾಕ್ಯವೊಂದು ನೆನಪಾಗಿ ಸಣ್ಣನೆಯ ನಗುವೊಂದು ಕೊರೆದು ಮಾಯವಾಯಿತು – “Hope and despair, The torturers”. ಎಷ್ಟೋ ವರ್ಷ ಗಳಿಂದ ನೆನಪಿದ್ದದ್ದು ಅದೊಂದೇ ಸಾಲು, ಪದ್ಯ ಕಥೆಗಳನ್ನು ಓದದೇ ಅದೆಷ್ಟು ದಿನಗಳಾಗಿದ್ದವೋ? ಕಷ್ಟವಾದರೂ ಸಾವರಿಸಿಕೊಂಡು ಮೇಲೆದ್ದು ಮನೆಗೆ ಹೋದ ಅಡಿಗರು ಆಗಲೇ ಸಿದ್ಧವಾಗಿದ್ದ ತಿಂಡಿ ತಿಂದು ಚಹಾ ಕುಡಿದು ಒಂದು ಕವಳ ಹಾಕಿದಾಗ ಅಷ್ಟು ಹಿತವೆನಿಸಿತು.

ಶ್ರೀರಾಮನಿಗೆ ಬರುವ ಹತ್ತು ಸಾವಿರ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ಅದರಲ್ಲಿ ಅಪ್ಪಯ್ಯ ಮಾಡಿದ್ದ ಎರಡು ಲಕ್ಷ ರೂಪಾಯಿ ಸಾಲಕ್ಕೆ ಫೈನಾನ್ಸ್ನವರಿಗೆ ಇನ್ನೂ ಒಂದು ವರ್ಷ ಕಂತು ಕಟ್ಟ ಬೇಕಿತ್ತು. ತಿಂಗಳಿಗೆ ನಾಲ್ಕು ಸಾವಿರ, ಆ ಲೆಕ್ಕದಲ್ಲಿ ಹೋದರೆ ನಿತ್ಯದ ಓಡಾಟಕ್ಕೇ ಮೂರು ಸಾವಿರ ಚಿಲ್ಲರೆ ಖರ್ಚಾಗುತ್ತಿತ್ತು. ಇನ್ನು ಮನೆ ಖರ್ಚು, ಅಪ್ಪಯ್ಯನ ಔಷಧ ಮತ್ತೊಂದು ಎಂದು ತಿಂಗಳ ಕೊನೆಗೆ ಕೆರೆಯಂಚಿಗೇ ನಿಲ್ಲಬೇಕಾಗಿ ಬರುತ್ತಿತ್ತು. ಇನ್ನು ಉಳಿತಾಯದ ಕಾಯಕವೆಲ್ಲಿಯದು. ಒಮ್ಮೆ ಬೆಂಗಳೂರಿಗೆ ಹೋಗಿ ಅಲ್ಲಿನ ಎಲ್ಲ ಆರ್ಟ್ ಮ್ಯೂಸಿಯಂ ಗಳನ್ನು ನೋಡಿ ಬರೋಣ ಎಂದುಕೊಂಡು ನಾಲ್ಕು ವರ್ಷ ಗಳಾದವು. ಹೋಗಿ ಬರುವುದಕ್ಕಾದರೂ ನಾಲ್ಕೈದು ಸಾವಿರ ಉಳಿಸಿಕೊಳ್ಳೋಣ ವೆಂದರೆ, ಎಲ್ಲಾ ತಿಂಗಳಲ್ಲೂ ಫೇಲ್ಯೂರ್ ಫೇಲ್ಯೂರ್ ಫೇಲ್ಯೂರ್ !

ಶ್ರೀರಾಮನಿಗೆ ಹೈಸ್ಕೂಲಿನ ದಿನಗಳಿಂದಲೂ ಕಲ್ಲುಗಳನ್ನು ಕೆತ್ತುವ ಆಸಕ್ತಿ. ಮನೆಯ ಹಿಂದಿನ ಗುಡ್ಡದ ಮೇಲಿಂದ ಸಿಕ್ಕ ಕಪ್ಪು ಬಿಳಿಚು ಕಲ್ಲುಗಳನ್ನೆಲ್ಲ ತಂದು ರಾಶಿ ಹಾಕಿ ಅದಕ್ಕೊಂದು ರೂಪ ಕೊಡುವುದು ಸಾಧ್ಯವೇ ಎಂದು ಆಗಾಗ ವ್ಯರ್ಥ ಪ್ರಯತ್ನ ಮಾಡುತ್ತಲೇ ಇರುತ್ತಿದ್ದ. ಹೈಸ್ಕೂಲಿನ ಮೊದಲ ದಿನಗಳಲ್ಲಿ ಹೊಸೂರಿನ ದೇವಸ್ಥಾನ ವೊಂದರಲ್ಲಿ ಧ್ವಜಗಂಬ ಕೆತ್ತುವುದಕ್ಕೆಂದು ಆಂಧ್ರದಿಂದ ಬಂದ ಶಿಲ್ಪಿ ಗಳು ಶ್ರೀರಾಮನಿಗೆ ಪರಿಚಯವಾಗಿದ್ದರು. ತಾಸುಗಟ್ಟಲೇ ಅವರ ಚಾಣದ ಪೆಟ್ಟನ್ನು ನೋಡುತ್ತಾ ನಿಂತು ಬಿಡುವಷ್ಟು ಹುಚ್ಚು ಹಿಡಿದಿತ್ತು ಶ್ರೀರಾಮನಿಗೆ. ಅಲ್ಲದೇ ಗೆಳೆಯರೊಂದಿಗೆ ಸೈಕಲ್ಲಿನಲ್ಲಿ ಸುತ್ತಿದ ಹತ್ತಿರದ ಬಿಳಗಿಯ ಬಸದಿ, ಭುವನಗಿರಿಯ ದೇವಾಲಯಗಳು, ಕಣ್ಣು ಮುಚ್ಚಿದರೆ ಸಾಕು ಕೆತ್ತಬೇಕು ಕೆತ್ತಬೇಕು,  ಕಲ್ಲಿಗೆ ರೂಪು ಕೊಡ ಬೇಕು ಎನ್ನಿಸುವುದಕ್ಕೆ ಶುರುವಾಯಿತು. ಮೂರ್ನಾಲ್ಕು ದಿನ ರಾತ್ರಿ ನಿದ್ರೆ ಹತ್ತಿದರೆ ಸಾಕು ಇತಿಹಾಸದ ಪಠ್ಯದಲ್ಲಿ ಓದಿದ ಬೇಲೂರು ಹಂಪಿ ಪಟ್ಟದಕಲ್ಲು, ಎಲ್ಲೋರ, ಅಜಂತಾಗಳ ಶಿಲ್ಪಗಳನ್ನೆಲ್ಲ ಮುಟ್ಟಿ-ಅಪ್ಪಿ ಬರುವ ಸಾಲು ಸಾಲು ಕನಸುಗಳು ಬೆಳಗಿನ ವರೆಗೂ ಬೀಳುತ್ತಿದ್ದವು.

ಅಪ್ಪಯ್ಯನಿಗೆ ಗೊತ್ತಾಗದ ಹಾಗೆ ನೂರು ಬೆಟ್ಟೆ ಅಡಿಕೆ ಗಳನ್ನು ಸ್ಕೂಲ್ ಬ್ಯಾಗಿನಲ್ಲಿ ಹಾಕಿಕೊಂಡು ಆಂಧ್ರದ ಶಿಲ್ಪಿಗಳಿಗೆ ಕೊಟ್ಟು ಅವರಿಂದ ಹಳೆಯ ಮೂರು ಚಾಣಗಳನ್ನೂ ಒಂದು ಸುತ್ತಿಗೆಯನ್ನೂ ತಂದು ಇಟ್ಟು ಕೊಂಡಿದ್ದ ಶ್ರೀರಾಮ. ಆದಿತ್ಯವಾರಗಳಲ್ಲೆಲ್ಲ ಅಪ್ಪಯ್ಯನಿಗೆ ಗೊತ್ತಾಗದ ಹಾಗೆ ಚಾಣ ಸುತ್ತಿಗೆ ಯನ್ನು ಹಿಡಿದುಕೊಂಡು ಗುಡ್ಡದ ತುತ್ತ ತುದಿಗೆ ಹೋಗಿ ಕಪ್ಪು ಬಿಳಿ ಕಲ್ಲುಗಳ ಮೇಲೆಲ್ಲ ಬಡಿದು ಕೆತ್ತುವುದಕ್ಕೆ ಸಾಮನ್ಯವಾಗಿ ಒಪ್ಪುವಂತಹ ಕಲ್ಲುಗಳನ್ನು ಒಂದೆಡೆ ರಾಶಿ ಸುರಿದು ಕೊಳ್ಳುತ್ತಿದ್ದ. ಹೆಚ್ಚಿನವು ಕೆಲವು ಪೆಟ್ಟೀಗೇ ತುಂಡಾಗಿ ಪುಡಿ ಪುಡಿ ಯಾಗಿ ಬಿಡುತ್ತಿದ್ದವು. ಒಂದು ಕಲ್ಲಿಗೂ ಆಕಾರ ಕೊಡುವುದಕ್ಕೆ ಆಗಲಿಲ್ಲ. ಕೊನೆಗೊಂದು ದಿನ ನುಣುಪಾದ ಉರುಟನೆಯ ಕಲ್ಲು, ಸಾಮನ್ಯವಾಗಿ ಎರಡು ಕೈಯಲ್ಲಿ ಹಿಡಿದು ಎತ್ತಿ ಒಯ್ಯಬಹುದಾದಷ್ಟು ಗಾತ್ರದ್ದು ಸಿಕ್ಕಿತು. ಕೆಲವು ಪೆಟ್ಟಿಗೇ ಅಸ್ಪಷ್ಟವಾಗಿ ಒಂದು ಮುಖ ಮೂಡಿ ಬಂದ ಹಾಗಾಯಿತು. ಸ್ವಲ್ಪ ಕಸರತ್ತು ಮಾಡಿದರೆ ನ್ಯೂಟನ್ನನ ಮುಖ ಮಾಡಬಹುದೆಂದೆನಿಸಿತು. ಮನೆಗೆ ತೆಗೆದು ಕೊಂಡು ಹೋಗಿ ನೀರಿನಲ್ಲಿ ಅದ್ದಿಟ್ಟು ಸ್ವಲ್ಪ ಮೆತ್ತಗಾದ ಮೇಲೆ ಅಂಗಳದಲ್ಲಿ ಕುಳಿತು ಸೂಕ್ಷ್ಮವಾಗಿ ಕುಸುರಿ ಕೆತ್ತನೆ ಮಾಡಿದರೆ ಸ್ಪಷ್ಟವಾಗಿ ಮುಖ ಮೂಡುತ್ತದೆಂದೆನ್ನಿಸಿತು. ಹಾಗೇ ಎರಡು ಮೂರು ದಿನ ಗುದ್ದಾಡಿದ ಮೇಲೆ ಉಬ್ಬು ಕೆನ್ನೆಗಳು ಹಣೆ ಗಲ್ಲ ನೇರ ನೋಟಕ್ಕಾಗುವಷ್ಟು ತಲೆ ಅಷ್ಟು ಸ್ಪಷ್ಟವಾಗಲ್ಲದಿದ್ದರೂ ಅಲ್ಲಿಂದಲ್ಲಿಗೆ ಬಂತು. ಇನ್ನೆರಡು ದಿನವಾದರೆ ವಾರ್ಷಿಕ ಪರೀಕ್ಷೆ, ಏನು ಮಾಡೋಣ ನ್ಯೂಟನ್ನನ ಮುಖದ ಗೀಳು ಓದುವುದಕ್ಕೂ ನೆಮ್ಮದಿಯಿಂದ ಕುಳಿತು ಕೊಳ್ಳಲು ಬಿಡಲಿಲ್ಲ. ಹುಬ್ಬು ಕಣ್ಣುಗಳನ್ನು ಅಷ್ಟು ಇಷ್ಟು ಮೂಡಿಸಿದರೆ ಅರ್ಧ ಘಂಟೆಯಲ್ಲಿ ಕೆಲಸವೇ ಮುಗಿದು ಹೋಯಿತು ಎಂದುಕೊಂಡು ಮುಸ್ಸಂಜೆಯ ವೇಳೆಗೆ ಅಂಗಳದ ಮೂಲೆಯಲ್ಲಿ ಗೋಣಿ ಚೀಲ ಹಾಸಿಕೊಂಡು ಸುತ್ತಿಗೆ ಚಾಣ ಕಲ್ಲುಗಳನ್ನು ಇಟ್ಟು ಕೊಂಡು ಕುಳಿತಿದ್ದ. ಹುಬ್ಬು ಕಣ್ಣು ಗಳ ಅಳತೆ ಅಂತರ ಎಷ್ಟೆಷ್ಟಿರ ಬೇಕೆಂದು ಸ್ವಲ್ಪ ಯೋಚಿಸುತ್ತಲೇ ಅದರಲ್ಲಿ ಮಗ್ನನಾಗಿ ಬಿಟ್ಟ. ಹಿಂದಿನಿಂದ ಅಪ್ಪಯ್ಯ ಬಂದು ನಿಂತಿದ್ದು ಗೊತ್ತೇ ಆಗಲಿಲ್ಲ. ಏನೋ,  ಕಲ್ಲು ಕೆತ್ತಿಯೇ ಜೀವನ ಮಾಡಬೇಕೆಂದಿದ್ದಿಯಾ? ಮೂರು ಕಾಸಿನ ಗಣಿತ ಬರುವುದಿಲ್ಲಾ, ಇಂಗ್ಲಿಶ್ ಅಂತೂ ಕೇಳುವವರೇ ಇಲ್ಲ; ನಾಡದ್ದಾದರೆ ಪರೀಕ್ಷೆ, ಎಸ್ಎಸ್ಎಲ್ಸಿ ಬೇರೆ, ಕೆಲಸವಿಲ್ಲದ ಕೆಲಸ ಮಾಡಿದರೆ ಮನೆಯಲ್ಲಿ ಜಾಗಾನೇ ಇಲ್ಲ…ಎಂದು ಮೂರು ಕೇರಿಗೆ ಕೇಳುವಷ್ಟು ಕೂಗಾಡಿದವರೇ ಆ ಕಲ್ಲನ್ನೆತ್ತಿ ತೋಟದ ಇಳಿಜಾರಿನಲ್ಲಿ ಹೊರಟು ಹೋದರು. ಮರುದಿನ ನೋಡಿದರೆ ತೋಟದ ಹೊಳೆಯಂಚಿಗೆ ಇನ್ನೊಂದು ಹೆಗ್ಗಲ್ಲಿಗೆ ತಾಗಿ ಎರಡು ಭಾಗವಾಗಿ ಬಿದ್ದಿತ್ತು ನ್ಯೂಟನ್ನನ ಕಲ್ಲು! ಅಂದಿನಿಂದ ಕಲ್ಲು ಕೆತ್ತುವ ಆಸಕ್ತಿಯೇ ಹೊರಟು ಹೋಯಿತಾದರೂ ಚಂದ್ರ ಗುತ್ತಿಯಂತಹ ದೊಡ್ಡ ದೊಡ್ಡ ಬಂಡೆಗಳನ್ನು ನೋಡಿದಾಗ ಜೀವನದಲ್ಲಿ ಒಮ್ಮೆಯಾದರೂ ಏನಾದರೂ ದೊಡ್ಡ ಆಕೃತಿಯೊಂದನ್ನು ಕೆತ್ತಿಯೇ ತೀರ ಬೇಕೆನ್ನಿಸುತ್ತಿತ್ತು.

ಎಲೆಯಡಿಕೆ ತಂಬಾಕಿನ ಮೇಲೋಗರವನ್ನು ಮಧ್ಯ ಲಯದಲ್ಲಿ ಸವಿಯುತ್ತಿದ್ದ ಅಡಿಗರಿಗೆ ಹಿಂದಿನಿಂದ ಯಾರೋ ಜೋರಾಗಿ ಕೂಗಿ ಕರೆದಂತೆ ಅನಿಸಿತು. ತಿರುಗಿ ನೋಡಿದರೆ ಮೇಲಿನ ಮನೆಯ ಹುಡುಗರು – ಅಶ್ವತ್ಥ ಮತ್ತು ವಿವೇಕ ಓಡೋಡಿ ಬರುತ್ತಿದ್ದಾರೆ. ಏದುಸಿರು ಬಿಡುತ್ತಲೇ ಹೇಳಿದ ವಿಷಯ ಸ್ಪಷ್ಟವಾಗಿ ಅಡಿಗರಿಗೆ ಅರ್ಥವಾಗಲಿಲ್ಲ. ಎರಡು ಮೂರು ಸಾರ್ತಿ ಕೇಳಿ ತಿಳಿದು ಕೊಂಡ ಮೇಲೆ ಗೊತ್ತಾಗಿದ್ದು ಶ್ರೀರಾಮನನ್ನು ಯಾರೋ ಮೇಲಿನ ಕೇರಿಯ ದರೆಯ ಕೆಳಗೆ ನೂಕಿದ್ದಾರೆ. ಶ್ರೀರಾಮ ಎಚ್ಚರ ತಪ್ಪಿ ಬಿದ್ದಿದ್ದಾನೆ. ಗಾಬರಿಯಿಂದ ಹುಡುಗರೊಟ್ಟಿಗೇ ಓಡಿ ಹೋದರು ಅಡಿಗರು. ದೂರದಲ್ಲಿ ನೋಡಿದರೆ ಶ್ರೀರಾಮನೇ ನಿಧಾನ ವಾಗಿ ಕಾಲೆಳೆದು ಕೊಂಡು ಬರುತ್ತಿದ್ದ.

ಪೀಜೀ ಹೆಗಡೆಗೂ ಶ್ರೀರಾಮನಿಗೂ ಅಂದು ದೊಡ್ಡ ಗಲಾಟೆ ಯಾಗಿತ್ತು. ದಿಗಂಬರ ಶೇಟ್ ನ ಮನೆಗೆ ಹೀಗೇ ಹರಟೆ ಹೊಡೆಯುವುದಕ್ಕೆಂದು ಹೋಗಿ ಬರುತ್ತಿದ್ದಾಗ ಮೇಲಿನ ಕೇರಿಯ ಕೆರೆಯ ಏರಿಯಲ್ಲಿ ಯಾರೋ ಕುಳಿತಂತೆ ಕಂಡಿತು. ಮೊದಲೇ ಅನುಮಾನವಿದ್ದದ್ದರಿಂದ ಸ್ವಲ್ಪ ಹತ್ತಿರ ಬರುತ್ತಿದ್ದಂತೆ ಅದು ಪೀಜೀ ಹೆಗಡೆಯೇ ಎಂದು ಪಕ್ಕಾ ಆಯಿತು. ಏರಿಯ ಮೇಲಿನ ಮಟ್ಟಿಯ ಮರೆಯಲ್ಲಿ ಶೌಚ ಪೂರೈಸಿ ಬಂದ ಹೆಗಡೆ ಕೆರೆಯ ನೀರಿನಲ್ಲಿ ತೊಳೆದುಕೊಳ್ಳುತ್ತಿದ್ದ. ಅರ್ಧ ಊರೇ ಉಪಯೋಗಿಸುವ ನೀರದು. ಈ ಹಿಂದೆಯೂ ಹೀಗೆಲ್ಲ ಮಾಡಿದ್ದ. ಕೆಲವರು ಹಿಡಿದು ಥಳಿಸಬೇಕೆಂದರೂ ತಪ್ಪಿಸಿ ಕೊಂಡಿದ್ದ. ಇವತ್ತು ಮಾತ್ರ ಶ್ರೀರಾಮ ಅವನ ಹಿಂದೆ ಹೋಗಿ ಬೆನ್ನಿನ ಗುಂಟ ಎರಡೂ ಕೈಗಳನ್ನು ಹಾಕಿ ಲಾಕ್ ಮಾಡಿ ಹಿಡಿದು ಕೊಂಡಿದ್ದ. ಒಂದು ಕೈ ಯನ್ನು ಊರಿ ಮುಂದೆ ಬಾಗಿ ಬಲಗೈ ಬೊಗಸೆ ಪೂರ್ತಿ ನೀರು ತುಂಬಿ ಕೊಂಡು ಶ್ರೀರಾಮನ ಮುಖಕ್ಕೆ ಗುರಿ ಇಟ್ಟು ಸೋಕಿ ಬಿಟ್ಟ ಪಿ.ಜಿ ಹೆಗಡೆ. ಒಂದು ಕ್ಷಣಕ್ಕೆ ಹೇಸಿಗೆಯೆನಿಸಿ ಹೆಗಡೆಯನ್ನು ಹಿಡಿದ ಬಿಗಿ ತಪ್ಪಿದ್ದೇ ಅವ ತಪ್ಪಿಸಿ ಕೊಂಡು ಓಡಿದ. ಅಂತೂ ಮೇಲಿನ ಕೇರಿಯ ದರೆಯ ಏರಿಗೆ ಬಂದಾಗ ಅವನ ಕೈಯೋ ಬನಿಯನ್ನಿನ ತುದಿಯಂಚೋ ಯಾವುದೋ ಸಿಕ್ಕಿ ಹಿಡಿದೇಬಿಟ್ಟೆ ನೆಂಬ ಆವೇಶದಲ್ಲಿದ್ದ ಶ್ರೀರಾಮನಿಗೆ ಮರು ಕ್ಷಣಕ್ಕೆ ಏನಾಯಿತೆಂದು ತಿಳಿಯಲಿಲ್ಲ. ಪೀಜೀ ಹೆಗಡೆ ಶ್ರೀರಾಮನ ಕುತ್ತಿಗೆಯನ್ನು ಕೋಳಿ ಕುರಿಗಳನ್ನು ಹಿಡಿದಂತೆ ಹಿಡಿದು ಗರ ಗರ ತಿರುಗಿಸಿ ಕೆಳಗೆ ದೂಡಿದ್ದ.