ಕನ್ನಡದ ಆಧುನಿಕ ಕವಿಗಳನ್ನೆಲ್ಲ ಓದಿ, ಬರೆದುಕೊಂಡು, ತಾವು ಸ್ವತಃ ಕವನಗಳನ್ನು ಬರೆದು ತಮ್ಮನ್ನು ಸ್ವತಃ ತಿದ್ದಿಕೊಂಡು, ಗೋಕಾಕರಂಥ ವಿಮರ್ಶಕರ ಅಭಿಪ್ರಾಯವನ್ನು ಕೇಳಿ ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ಅವರ ಸಾಹಿತ್ಯ ರಚನೆಯ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹೇಳಿ ತಾನೂ ಬೆಳೆದ ಪೇಜಾವರ ಸದಾಶಿವರಾಯರು ತಮ್ಮೊಂದಿಗೆ ಇತರರನ್ನೂ ಬೆಳೆಸಿದ ಸಾಹಿತಿ. ಚಿತ್ರಕಲೆ ಟೆನಿಸ್ ಆಟ, ಸಿತಾರ್ ನುಡಿಸುವುದು, ಫೋಟೋಗ್ರಫಿ, ಅಂಚೆಚೀಟಿ ಸಂಗ್ರಹ, ಚಾರಣ, ಮೌಂಟೆನಿಯರಿಂಗ್  ಮುಂತಾದ ಆಸಕ್ತಿಗಳನ್ನು ಹೊಂದಿದ್ದ ಜೀವನ್ಮುಖಿ ಅವರಾಗಿದ್ದರು. 
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಪೇಜಾವರ ಸದಾಶಿವ ರಾವ್ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

 

ಕೇವಲ ಇಪ್ಪತ್ತಾರು ವರ್ಷ ಬದುಕಿದ್ದ ಆಟೊಮೊಬೈಲ್ ಇಂಜಿನಿಯರ್ ಪೇಜಾವರ ಸದಾಶಿವರಾಯರು (1913 – 1939) ಆಧುನಿಕ ಕನ್ನಡದ ಮಹತ್ವದ ಸಾಹಿತಿ. ಅವರು ಕನ್ನಡನಾಡಿನಲ್ಲಿದ್ದದ್ದು ಕೇವಲ 18 ವರ್ಷ. ಅದರಲ್ಲಿಯೂ ಎರಡು ವರ್ಷ ಮಂಗಳೂರಿನಲ್ಲಿ ಇಂಟರ್‍ಮೀಡಿಯೇಟ್ ಕಲಿಯುತ್ತಿದ್ದಾಗ, ‘ಮಿತ್ರಮಂಡಳಿ’ಯ ಸದಸ್ಯರಾಗಿ ಅವರು ಕನ್ನಡ ಸಾಹಿತ್ಯ ಲೋಕದ ಜತೆಗೆ ಇದ್ದರು. ನಂತರ ಕಾಶಿಯಲ್ಲಿ ಇಂಜಿನಿಯರಿಂಗ್ ಕಲಿತು ಇಟೆಲಿಯ ಮಿಲಾನಿನಲ್ಲಿ ಪಿಎಚ್.ಡಿ. ಮಾಡುತ್ತಿದ್ದ ವಿದ್ಯಾರ್ಥಿಯಾಗಿದ್ದಾಗ ಕನ್ನಡ ಪರಿಸರದಿಂದ ದೂರವೇ ಇದ್ದರು. ಈ ನಡುವೆಯೂ ಅವರು ಕನ್ನಡವನ್ನೇ ಧ್ಯಾನಿಸುತ್ತಾ ಕನ್ನಡ ಕಾವ್ಯಕ್ಕೆ ಹೊಸ ದಿಕ್ಕು ತೋರಿಸುವಂತೆ ಬರೆದದ್ದು ಕನ್ನಡದ ವಿಸ್ಮಯಗಳಲ್ಲಿ ಒಂದು.

ಕಾಶಿಯಲ್ಲಿ ಕರ್ನಾಟಕ ಸಂಘವನ್ನು ಕಟ್ಟಿ, ಮಿಲಾನಿನಲ್ಲಿದ್ದಾಗ ದೂರದ ಇಂಗ್ಲೆಂಡಿನಲ್ಲಿದ್ದ ಗೆಳೆಯ ವಿ. ಕೃ. ಗೋಕಾಕ್ ಮತ್ತು ಮಂಗಳೂರಿನ ಜೋಡುಮಠ ವಾಮನ ಭಟ್ಟರ ಜತೆಗೆ ಪತ್ರ ವ್ಯವಹಾರದ ಮೂಲಕವೇ ಕನ್ನಡ ಸಾಹಿತ್ಯದ ಜತೆಗೆ ನಂಟನ್ನು ಮುಂದುವರಿಸುತ್ತ ಇದ್ದವರು ಪೇಜಾವರ. ಕರುಳಿನರೋಗಕ್ಕೆ ತುತ್ತಾಗಿ ವಿದೇಶದಲ್ಲಿಯೆ ಕೊನೆಯುಸಿರೆಳೆದ ಪೇಜಾವರ ಸದಾಶಿವ ರಾಯರ ಬದುಕು ದುರಂತ, ಆದರೆ ಅವರ ಸಾಹಿತ್ಯ ಶಾಶ್ವತ.

ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಕೆ. ಗೋಕಾಕರು ಇಂಗ್ಲೆಂಡಿನಲ್ಲಿ ಓದುತ್ತಿದ್ದಾಗ, ಮಿಲಾನಿನಲ್ಲಿ ಅಧ್ಯಯನ ನಿರತರಾಗಿದ್ದ ಪೇಜಾವರ ಸದಾಶಿವರಾಯರೊಂದಿಗೆ ನಿರಂತರ ಪತ್ರ ವ್ಯವಹಾರ ಮಾಡುತ್ತಿದ್ದರು. ಸದಾಶಿವರಾಯರು ತೀರಿಕೊಂಡ ಮೇಲೆ ಅವರು ಎಷ್ಟು ದೊಡ್ಡ ಸಾಹಿತಿ ಎಂದು ಕನ್ನಡಿಗರಿಗೆ ತಿಳಿಯಪಡಿಸಿದವರು ಗೋಕಾಕರೇ.

1939ರಲ್ಲಿ ಸದಾಶಿವರಾಯರು ತೀರಿಕೊಂಡ ಮರುವರ್ಷ ಗೋಕಾಕರು ತಮ್ಮ – ಅವರ ವಿದೇಶಕಾಲದ ಒಡನಾಟದ ಪತ್ರಗಳನ್ನು ‘ಜೀವನ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಸದಾಶಿವರಾಯರ ‘ನಾಟ್ಯೋತ್ಸವ’ ಕವನವೇ ಕನ್ನಡದ ಮೊದಲ ನವ್ಯಕವನ ಎಂದು ಸೂಚಿಸಿದವರು ಗೋಕಾಕರೇ. ಅವರ ಪ್ರೇರಣೆಯಿಂದಲೇ ಡಾ. ರಂ. ಶ್ರೀ. ಮುಗಳಿ ಮತ್ತು ಡಾ. ವರದರಾಜ ಹುಯಿಲಗೋಳರು ಸೇರಿ ಸದಾಶಿವರಾಯರ ಲಭ್ಯ ಕವನಗಳನ್ನು ಸಂಪಾದಿಸಿ, ‘ವರುಣ’ ಎಂಬ ಹೆಸರಿನಿಂದ 1954ರಲ್ಲಿ ಹೊರತಂದರು.

ಸಾಂಗಲಿಯ ವಿಲಿಂಗ್‌ಟನ್‌ ಕಾಲೇಜಿನಲ್ಲಿ 1945 ರ ಸುಮಾರಿಗೆ ಡಾ. ವಿ. ಕೃ. ಗೋಕಾಕರು ಒಂದು ಸಾಹಿತ್ಯ ಕೂಟವನ್ನು ಪ್ರಾರಂಭಿಸಿದ್ದರು. ಆ ಸಂಘಟನೆಗೆ ‘ವರುಣ ಕುಂಜ’ ಎಂಬ ಹೆಸರಿತ್ತು. ಯಾಕೆಂದರೆ ಈ ಸಂಘದ ಮೊದಲನೆಯ ಸಭೆಯಲ್ಲಿ ಗೋಕಾಕರು ಪೇಜಾವರ ಸದಾಶಿವರಾಯರ ‘ವರುಣ’ ಕವಿತೆಯನ್ನು ಭಾವಪೂರ್ಣವಾಗಿ ಓದಿದ್ದರು. ‘ವರುಣ ಕುಂಜ’ ಮುಂದೆ ಹಲವು ವರ್ಷಗಳ ಕಾಲ ಸಾಹಿತ್ಯ ಪ್ರಸಾರದ ಕಾರ್ಯವನ್ನು ಪ್ರತಿ ಶುಕ್ರವಾರ ಮಾಡುತ್ತಿತ್ತು.

ಪೇಜಾವರ ಸದಾಶಿವರಾಯರು 1929 – 1931 ರ ಅವಧಿಯಲ್ಲಿ ಅವರು ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ಅಧ್ಯಯನ ನಡೆಸುತ್ತಿದ್ದಾಗ ನವೋದಯ ಕಾವ್ಯದ ಮಂಗಳೂರು ಕೇಂದ್ರದ ಮಿತ್ರಮಂಡಳಿ ಎಂಬ ಸಂಘಟನೆಯ ಸದಸ್ಯರಾಗಿ ಆ ಕಾಲದ ಮಂಗಳೂರಿನ ಹಿರಿಯ ಕಿರಿಯ ಸಾಹಿತಿಗಳೆಲ್ಲರ ಒಡನಾಟಕ್ಕೆ ಬಂದಿದ್ದರು. ಮುಳಿಯ ತಿಮ್ಮಪ್ಪಯ್ಯ ಮತ್ತು ಸೇಡಿಯಾಪು ಕೃಷ್ಣ ಭಟ್ಟರ ಮಾರ್ಗದರ್ಶನ ಅವರಿಗಿತ್ತು. ಸದಾಶಿವರಾಯರು ಎಲಾಶಿಯಸ್ ಕಾಲೇಜಿನಲ್ಲಿ ಸಂಸ್ಕೃತದ ವಿದ್ಯಾರ್ಥಿಯಾಗಿದ್ದರೂ, ಕನ್ನಡ ಸಾಹಿತ್ಯವನ್ನು ನಿರಂತರ ಚರ್ಚಿಸುತ್ತಿದ್ದರು. ಮಿತ್ರಮಂಡಳಿಯ ಸಕ್ರಿಯ ಸದಸ್ಯರಾಗಿದ್ದ ಕುಡ್ಪಿ ವಾಸುದೇವ ಶೆಣೈ, ಜೆ. ವಾಮನ ಭಟ್ಟ, ಎಸ್. ಪಿ. ಭಟ್ಟ ಮೊದಲಾದ ಗೆಳೆಯರೊಂದಿಗೆ ಸದಾ ಸಾಹಿತ್ಯ ಸಖ್ಯ ಸದಾಶಿವರಾಯರಿಗೆ ಇತ್ತು. ಅವರ ಪ್ರಬುದ್ಧತೆಯನ್ನು ಆಗಲೆ ಗುರುತಿಸಿದ್ದ ಮಿತ್ರಮಂಡಳಿ ಅವರನ್ನು ‘ಅಲರು’ ಎಂಬ ಕವನಸಂಕಲನದ ಸಂಪಾದಕರನ್ನಾಗಿ ಮಾಡಿತ್ತು. ಆಗ ಪೇಜಾವರ ಸದಾಶಿವರಾಯರಿಗೆ 17 ವರ್ಷ ವಯಸ್ಸು. ಅದಕ್ಕೆ ಅವರು ಬರೆದ ಪ್ರಬುದ್ಧವಾದ ಪೀಠಿಕೆ ಓದಿದರೆ ಯಾರೋ ದೊಡ್ಡ ವಿದ್ವಾಂಸರು ಬರೆದಂತಿದೆ. ನವೋದಯ ಕಾಲದ ರಮ್ಯ ಪಂಥವನ್ನು ಇಲ್ಲಿ ಸದಾಶಿವರಾಯರು ಸಮರ್ಥಿಸಿದ್ದಾರೆ.

ಕನ್ನಡದ ಆಧುನಿಕ ಕವಿಗಳನ್ನೆಲ್ಲ ಓದಿ ಬರೆದುಕೊಂಡು, ತಾವು ಸ್ವತಃ ಕವನಗಳನ್ನು ಬರೆದು ತಮ್ಮನ್ನು ಸ್ವತಃ ತಿದ್ದಿಕೊಂಡು, ಗೋಕಾಕರಂಥ ವಿಮರ್ಶಕರ ಅಭಿಪ್ರಾಯವನ್ನು ಕೇಳಿ ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ಅವರ ಸಾಹಿತ್ಯ ರಚನೆಯ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹೇಳಿ ತಾನೂ ಬೆಳೆದ ಪೇಜಾವರ ಸದಾಶಿವರಾಯರು ತಮ್ಮೊಂದಿಗೆ ಇತರರನ್ನೂ ಬೆಳೆಸಿದ ಸಾಹಿತಿ.

ಬದುಕು

ಪೇಜಾವರ ಅವರು 1913 ರಲ್ಲಿ ಕಟೀಲಿನಲ್ಲಿ ಶಿವಳ್ಳಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವರು. ಅವರ ಮಾತೃಭಾಷೆ ತುಳು. ತಂದೆ ಶಾಮ ರಾಯರು ಜೀವನೋಪಾಯ ಹುಡುಕುತ್ತಾ ಪೇಜಾವರದಿಂದ ಕಟೀಲಿಗೆ ಬಂದು ಕೃಷಿಕರಾಗಿ ಜೀವಿಸುತ್ತಿದ್ದರು. ಸದಾಶಿವರಾಯರ ತಾಯಿ ಸೀತಾ.

(ಪತ್ನಿ ಪ್ರೇಮಲತಾ ಅವರೊಂದಿಗೆ ಪೇಜಾವರ)

ಸದಾಶಿವರಾಯರು 1935 ರಲ್ಲಿ ಬಿ.ಇ. ಪದವಿ ಪಡೆದರು. ಅದಕ್ಕಿಂತ ಮುನ್ನವೇ 1934 ರಲ್ಲಿ ಅವರಿಗೆ ಮದುವೆ ಆಗಿತ್ತು. ಯಾಕೆಂದರೆ ಇಟೆಲಿಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಬೇಕಾಗಿದ್ದರೆ ವಿವಾಹ ಆಗಿರಬೇಕೆಂಬ ನಿಯಮವಿತ್ತಂತೆ. ಅವರ ಪತ್ನಿ ಪ್ರೇಮಲತಾ. 1936 ರಲ್ಲಿ ಮಗಳು ಹೀರಾ ಹುಟ್ಟಿದಳು. ಪೇಜಾವರ ಸದಾಶಿವರಾಯರು ಮಗುವನ್ನು ಮುದ್ದಿಸಿ ಇಟೆಲಿಗೆ ತೆರಳಿದ್ದರು. ಆದರೆ ಅಲ್ಲಿಯೇ ಕೊನೆಯುಸಿರೆಳೆದರು. ಹೀರಾ ಅವರು ಮುಂದೆ ಶ್ಯಾಮಸುಂದರ್ ಅವರನ್ನು ಮದುವೆಯಾದರು. ಇವರು ಕರ್ನಾಟಕದ ಪ್ರಸಿದ್ಧ ಅರಣ್ಯಾಧಿಕಾರಿಯಾಗಿದ್ದರು; ಪೇಜಾವರ ಸದಾಶಿವರಾಯರ ಜನ್ಮಶತಮಾನೋತ್ಸವವನ್ನು ಆಚರಿಸಲು ಮುತುವರ್ಜಿ ವಹಿಸಿದ್ದರು. ಇತ್ತೀಚೆಗೆ ತೀರಿಕೊಂಡರು.

ಪೇಜಾವರ ಸದಾಶಿವರಾಯರು ಐದನೆಯ ತರಗತಿಯವರೆಗೆ ಎಕ್ಕಾರಿನ ಕನ್ನಡ ಶಾಲೆಯಲ್ಲಿ, 6 ರಿಂದ 8 ನೆಯ ತರಗತಿಯವರೆಗೆ ಮೂಲ್ಕಿಯಲ್ಲಿ, 9 ರ ನಂತರ ಮಂಗಳೂರಿನ ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ ಕಲಿತರು. ಅಲ್ಲಿಂದ ನಂತರ ಕಲಿತದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ದ್ವಿತೀಯ ಭಾಷೆಯಾಗಿ ಕಲಿತದ್ದು ಸಂಸ್ಕೃತವನ್ನು. ಕಾಶಿಯಲ್ಲಿ ಹಿಂದಿ ಭಾಷೆಯನ್ನು ಚೆನ್ನಾಗಿ ಕಲಿತಿದ್ದರು.

ಬಿ.ಇ. ಮುಗಿಸಿ ಇಟೆಲಿಗೆ ಹೋಗುವುದೆಂದು ನಿರ್ಧರಿಸಿದ ಮೇಲೆ ಇಟಾಲಿಯನ್ ಭಾಷೆಯನ್ನು ಎಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾಕ್ಟರ್ ಫೆತ್ಸಿ (Dr. Fezzi) ಅವರಿಂದ ಕಲಿತರು. ಮುಂದೆ ಅವರು ತಮ್ಮ ಪಿಎಚ್.ಡಿ. ಥೀಸಿಸನ್ನು ಇಟಾಲಿಯನ್ ಭಾಷೆಯಲ್ಲಿಯೇ ಬರೆಯಬೇಕಾಗಿತ್ತು. ಮಿಲಾನಿನಲ್ಲಿ ಪಿಎಚ್.ಡಿ. ಅಧ್ಯಯನ ನಡೆಸಿ, ತಮ್ಮ ಪ್ರಬಂಧವನ್ನು ಇಟಾಲಿಯನ್ ಭಾಷೆಯಲ್ಲಿಯೇ ಬರೆದು ಪೂರೈಸಿದ್ದರು. (ಇಟಾಲಿಯನ್ ಭಾಷೆಯಲ್ಲಿ ಅವರು ಬರೆದ ಲೇಖನವೊಂದು ಲಭ್ಯವಾಗಿದೆ). ಪಿಎಚ್.ಡಿ. ಥೀಸಿಸನ್ನು ಬರೆದು ಮುಗಿಸಿ ಭಾರತಕ್ಕೆ ಮರಳುವ ಸಿದ್ಧತೆಯಲ್ಲಿದ್ದಾಗ ಪೆರಿಟೊನೈಟಿಸ್ ಎಂಬ ಕರುಳು ಬೇನೆಗೆ ಬಲಿಯಾಗಿ, ತಮ್ಮ 27ನೆಯ ವಯಸ್ಸಿನಲ್ಲಿ ಇಟಲಿಯಲ್ಲಿಯೇ ಕೊನೆಯುಸಿರೆಳೆದರು.

(ಮಗಳು ಹೀರಾ – ಅಳಿಯ ಶಾಮಸುಂದರ)

ಪೇಜಾವರ ಸದಾಶಿವರಾಯರು ಚಿತ್ರ ಬಿಡಿಸುವ ಕಲೆಯನ್ನೂ ಅಭ್ಯಾಸ ಮಾಡಿದ್ದರು. ‘ಸರಪಣಿ’ ಪುಸ್ತಕದ ಮುಖಪುಟವನ್ನು ಅವರೇ ಬಿಡಿಸಿದ್ದರು. ತೆಲುಗು ಪುಸ್ತಕವೊಂದಕ್ಕೆ ಕೂಡ ಮುಖಪುಟವನ್ನು ಅವರು ಬರೆದುಕೊಟ್ಟಿದ್ದರು. ಟೆನಿಸ್ ಆಟ, ಸಿತಾರ್ ನುಡಿಸುವುದು, ಫೋಟೋಗ್ರಫಿ, ಅಂಚೆಚೀಟಿ ಸಂಗ್ರಹ, ಚಾರಣ, ಮೌಂಟೆನಿಯರಿಂಗ್ ಮುಂತಾದ ಹಲವು ಹವ್ಯಾಸಗಳು ಅವರಿಗಿದ್ದವು. ಇಟೆಲಿಯಲ್ಲಿದ್ದಾಗಲೂ ಆಲ್ಫ್ಸ್ ಪರ್ವತ ಹತ್ತಲು ಹೋಗಿದ್ದರು.

(ಆಲ್ಫ್ಸ್ ಪರ್ವತದಲ್ಲಿ ಪೇಜಾವರ – ಗೆಳೆಯನೊಂದಿಗೆ)

ಬಾಲ್ಯದಲ್ಲಿ ಯಕ್ಷಗಾನದ ಬಗ್ಗೆ ಅವರಿಗೆ ಬಹಳ ಹುಚ್ಚಿತ್ತು. ಒಮ್ಮೆ ಕಟೀಲಿನಲ್ಲಿ ಅರ್ಧರಾತ್ರಿಯವರೆಗೆ ಯಕ್ಷಗಾನ ಬಯಲಾಟವನ್ನು ನೋಡಿ, ಅಲ್ಲಿಂದ ಹೊರಟು ನಡೆದುಕೊಂಡೇ (ಸುಮಾರು ಇಪ್ಪತ್ತು ಕಿ. ಮೀ. ದೂರ!) ಬಪ್ಪನಾಡಿಗೆ ಹೋಗಿ, ಅದೇ ರಾತ್ರಿ ನಡೆಯುತ್ತಿದ್ದ ಇನ್ನೊಂದು ಯಕ್ಷಗಾನವನ್ನು ನೋಡಿದ್ದರಂತೆ. ಬನಾರಸ್ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಯಕ್ಷಗಾನ ಪ್ರದರ್ಶನವೊಂದನ್ನು ಏರ್ಪಡಿಸಿ ಅದರಲ್ಲಿ ತಾವೂ ಪಾತ್ರ ವಹಿಸಿದ್ದರು. ಕಾಶಿಯಲ್ಲಿದ್ದಾಗ ಅಲ್ಲಿಂದ ದೂರದ ಬಿಹಾರ, ಒರಿಸ್ಸಾಗಳಿಗೆ ಸೈಕಲಿನಲ್ಲಿಯೇ ಪ್ರವಾಸ ಹೋಗಿ ಬಂದಿದ್ದರಂತೆ.

ಸಾಹಿತ್ಯ ದೀಕ್ಷೆ: ನವೋದಯದ ಉತ್ಸಾಹ

ಸದಾಶಿವರಾಯರು ದಕ್ಷಿಣ ಕನ್ನಡದ ನವೋದಯದ ಉತ್ಸಾಹದ ಕಾಲದಲ್ಲಿ ಬರೆಯಲಾರಂಭಿಸಿದವರು. ಆ ಕಾಲದಲ್ಲಿದ್ದ ಇತರ ಮುಖ್ಯ ಸಾಹಿತಿಗಳಂತೆ ಅವರು ಕವಿತೆಗಳನ್ನೂ, ನಾಟಕಗಳನ್ನೂ, ಕತೆಗಳನ್ನೂ ಸಮಾನ ಉತ್ಸಾಹದಿಂದ ಬರೆಯಲಾರಂಭಿಸಿದರು. ಸಾಹಿತ್ಯದ ಬೆಳವಣಿಗೆಗೆ ಪ್ರೇರಣೆ ನೀಡುವ ಸಂಘಟನೆಯಾದ ಮಂಗಳೂರಿನ ಮಿತ್ರಮಂಡಳಿಯ ಉತ್ಸಾಹೀ ಸದಸ್ಯರಾಗಿದ್ದ ಪೇಜಾವರ ಮಿತ್ರರ ಜತೆಗೆ ಕತೆ ಹಾಗೂ ಕವಿತೆಗಳ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸುವ ಕೆಲಸದಲ್ಲಿಯೂ ಸಕ್ರಿಯರಾಗಿದ್ದರು. ಆ ಸಂದರ್ಭದಲ್ಲಿ ಸಾಹಿತ್ಯ ವಿಮರ್ಶೆಯನ್ನೂ ಅವರು ಮಾಡಿದ್ದಾರೆ.

ಪೇಜಾವರ ಸದಾಶಿವರಾಯರು ಹದಿಹರೆಯದಲ್ಲಿಯೇ ಕವಿತೆಗಳನ್ನು ಬರೆಯತೊಡಗಿದ್ದರು. ಅವರು ನವೋದಯ ಕವಿಗಳ ನೆರಳಿನಲ್ಲಿ ಬೆಳೆದವರು. ಹಿರಿಯರು ಕಿರಿಯರ ಕವಿತೆಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ ಕಾಲ ಅದು. ಕಡೆಂಗೋಡ್ಲು ಮುಂತಾದವರು ತಮ್ಮ ಕವಿತೆಗಳನ್ನು ತೀಕ್ಷ್ಣವಾಗಿ ವಿಮರ್ಶೆ ಮಾಡುತ್ತಿರಲಿಲ್ಲ ಎಂಬ ಕೊರಗನ್ನು ಅವರೇ ಮುಂದೆ ವಿ. ಕೃ. ಗೋಕಾಕರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ: “ನೋಡಿ, ನಿಜವಾದ ವಿಮರ್ಶೆಯು ಇನ್ನು ಪಕ್ವವಾಗಿಲ್ಲ, ನಮ್ಮ ಕಡೆ. ನನ್ನ ಕವನಗಳನ್ನು ಗೆಳೆಯರಾದ ಕಡೆಂಗೋಡ್ಲು, ನಾರಾಯಣ ಭಟ್, ಸೇಡಿಯಾಪು ಇವರು ನೋಡಿದ್ದಾರೆ; ಆದರೆ ನಿಜವಾದ ವಿಮರ್ಶೆ ಮಾಡುವುದಕ್ಕೆ ಏನು ತಿಳಿದುಕೊಂಡೇನೋ ಎಂಬ ಅಳುಕು. ‘ಇದು ಬಹಳ ಚೆನ್ನಾಗಿದೆ. ಇದಕ್ಕಿಂತ ಇದು ಚೆನ್ನು. ಅದು ಪರವಾ ಇಲ್ಲ.’ ಈ ತರದ ವಿಮರ್ಶೆ ನನಗೆ ಯಾವ ಸಮಾಧಾನವನ್ನೂ ಕೊಟ್ಟಿಲ್ಲ. ನನ್ನ ಮನಸ್ಸು ನೋಯಬಾರದೆಂಬ ಕರುಣೆಯಿಂದ ಹೀಗೆ ನುಡಿಯುತ್ತಾರೇನೋ ಅನ್ನಿಸುತ್ತದೆ ಹಲವು ಬಾರಿ.” (ಪತ್ರ, 17.4.1938).

ಪೇಜಾವರ ಅವರ ಕವಿತೆಗಳು

ಪೇಜಾವರ ಸದಾಶಿವರಾಯರ ಕವಿತೆಗಳನ್ನು ಮೂರು ಬಗೆಯವೆಂದು ಪ್ರೊ. ಎ.ವಿ. ನಾವಡರು ವರ್ಗೀಕರಿಸಿದ್ದಾರೆ: ಮೊದಲನೆಯದು, “ಪ್ರೀತಿ, ಪ್ರೇಮ, ಪ್ರಕೃತಿ, ದೇವರು, ಸ್ವಾತಂತ್ರ್ಯದ ಬಯಕೆ ಇವೇ ಪ್ರಧಾನ ಅಂಶಗಳಾಗಿರುವ ನವೋದಯ ಕಾವ್ಯ ಮಾರ್ಗಕ್ಕೆ ಸರಿಹೋಗುವ ಕವನಗಳು. ಎರಡನೆಯದು, ಸಾವು, ವಿಷಾದ, ನೋವು, ನಿರಾಶೆ ಇವುಗಳನ್ನು ಕುರಿತವು. ಮೂರನೆಯದು ರೊಮ್ಯಾಂಟಿಕ್ ಮೌಲ್ಯಗಳಾಚೆ ನವ್ಯಕ್ಕೆ ಹತ್ತಿರವಾಗುವ ‘ನಾಟ್ಯೋತ್ಸವ’, ‘ವರುಣ’ದಂತಹ ಕವನಗಳು.”

“ಮೊದಲ ಗುಂಪಿಗೆ ಸೇರುವ ‘ಲಕ್ಕಣ’, ‘ಕೊಳಲದನಿ’, ‘ಆಟಿಯ ಹುಣ್ಣಿಮೆ’, ‘ಸ್ವಾತಂತ್ರ್ಯ ಭೈರವ’, ‘ಹಂಬಲದ ಹಾಡು’, ‘ವಿರಹಿಣಿಯ ಹಾಡು’, ‘ತಾಜಮಹಲ್’, ‘ಬೆಡಗಿ’, ‘ಕೇಳಿದ ಕೋಗಿಲೆಗೆ’, ‘ಪ್ರಾರ್ಥನೆ’, ‘ಉಷೆಯ ಆಗಮನ’ – ಮುಂತಾದ ಕವನಗಳು ನವೋದಯದ ಕವಿಯೊಬ್ಬನ ಪ್ರಕೃತಿ, ದೇವರು, ಆತ್ಮನಿವೇದನೆ, ದೇಶಪ್ರೇಮ, ಆದರ್ಶ ಪರಂಪರೆ, ಸಂಸ್ಕೃತಿ ಪ್ರೀತಿಯ ಹಿನ್ನೆಲೆಯಿಂದ ರಚಿತವಾದವುಗಳು…. ‘ಬಾಳು’, ‘ಜನನ ಮರಣ’, ‘ಬಡಗಿ’, ‘ಜೀವನಸಮರ’, ‘ಭರವಸೆ’, ‘ಸಂದರ್ಭ’, ‘ಬಯಲಾಸೆ’, ‘ಕರ್ತವ್ಯ’ – ಕವನಗಳು ಸದಾಶಿವರಾಯರ ಬದುಕಿನ ವಿಶಿಷ್ಟ ನಿಲುವುಗಳನ್ನು ಪ್ರತಿಪಾದಿಸುತ್ತವೆ.” (ಪ್ರೊ. ಎ. ವಿ. ನಾವಡ. 2015).

ಪೇಜಾವರ ಸದಾಶಿವ ರಾಯರ ಕೆಲವು ಕವಿತೆಗಳನ್ನು ಓದೋಣ:

ಆಟಿಯ ಹುಣ್ಣಿಮೆ
(ಒಂದು ಹಾಡು)

1
ನಸುಕನು ಎತ್ತಿ ಬೆಳಕನು ಬಿತ್ತಿ
ಬಂದನು ರವಿ ಅರುಣಾಚಲ ಹತ್ತಿ
ಉದಯದ ಗೀತ ಸುರಸಂಗೀತ
ಸೀಳುತ ಬರುವುದು ಸುರಭಿಯ ವಾತ
ಎಲರಿನ ಸೊಂಪು ಅಲರಿನ ಕಂಪು
ಹರಿಸುತಲಿರುವುದು ಕಂಗಳ ಜೊಂಪು
ಮುಗುಳುಗಳಧರವನು – ದಿನಪನು
ಚುಂಬಿಸಿ ಚದರುವನು!

2
ಎಳೆಬಿಸಿಲನ್ನು ನೆಲಜಲವನ್ನು
ತಬ್ಬುತ ಲೋಕವ ಬೆಳಗುವುದಿನ್ನು
ಪಯಿರಿನ ತೆನೆಯು ಕಂಪಿನ ಮೊನೆಯು
ಮಂಗಳದುಷೆ ರಮಣಿಯ ಮನೆಯು
ದುಂಬಿಯ ದಂಡು ಹಕ್ಕಿಯ ಹಿಂಡು
ಹಾರುತಲಿರುವುದು ಗಿಳಿವಿಂಡು.
ಎಳೆಬಿಸಿಲಾಡುತಿದೆ – ಈಗಲೆ
ಕತ್ತಲೆಯೋಡುತಿದೆ!

3
ಹಾಸನು ಬಿಟ್ಟು ಕುಂಕುಮವಿಟ್ಟು
ಬಾರೇ ಸೊಬಗಿನ ಸೀರೆಯನುಟ್ಟು
ಹೂಗಳನಾಯ್ದು ತಳಿರನು ಕೊಯ್ದು
ಮರಳುವ ಪೂಜೆಗೆ ಮಾಲೆಯ ನೆಯ್ದು
ನೀನೈತಾರೆ ಮೋಹದ ನೀರೆ
ಆಟಿಯ ಹುಣ್ಣಿಮೆಯಾಟಕೆ ಬಾರೆ
ಬೆಳಕದು ಏರುತಿದೆ – ಮೂಡಲು
ಕೆಂಪನು ಕಾರುತಿದೆ !

4
ಏನೀ ಹೆಜ್ಜೆ ಏತಕೆ ಲಜ್ಜೆ
ಎಲ್ಲಿ ಕಲಿತೆ ವೈಯಾರದ ಬಿಜ್ಜೆ
ಆಟಿಯ ಮುಗಿಲು ಮಳೆಯಲಿ ಮಿಗಿಲು
ನೋಡದೊ ನಭದಲಿ ಸಿಡಿಲಿನ ದಿಗಿಲು
ಬಿಲ್ಲಿನ ಬಣ್ಣ ಕಟ್ಟಿದೆ ಕಣ್ಣ
ಬಾರೇ ಬಿಲ್ಲದು ಮುರಿಯುವ ಮುನ್ನ
ಕತ್ತಲೆ ಕೂಡಲಿದೆ – ರಯ್ಯನೆ
ಗಾಳಿಯು ತೀಡಲಿದೆ

5
ಏನನು ಮರೆತೆ ಸಿಂಗರದೊರತೆ!
ನಿನಗಿರುವುದೆ ನಗನಟ್ಟಿನ ಕೊರತೆ?
ಕೊರಳಿನ ಸುತ್ತ ಹನಿಗಳ ಮುತ್ತ
ಪೋಣಿಸಿ ಕಟ್ಟುವೆ ನೀ ಬಾರಿತ್ತ
ತಳಿರಿನ ಬಳಿಯ ಕಮಲದ ಕಳೆಯ
ತೊಡಿಸುತ ಕೊಯ್ಯುವೆ ಸೊಬಗಿನ ಬೆಳೆಯ
ಗಗನವು ಮಳೆಸೂಸೆ – ನಿನಗಿದೆ
ಪನಿ ಕುಳಿರಿನ ಸೇಸೆ

6
ವಾಸೂ ಶರದೂ ನಮ್ಮನ್ನು ಕರೆದು
ಬರದಿರೆ ಸಾರಿಹರೆಲ್ಲರ ತೊರೆದು
ಸೀನೂ ಸರಸೀ ನಮ್ಮನು ಅರಸಿ
ಸಿಗದಿರೆ ಹೊರಟರು ದಾರಿಯ ಮರೆಸಿ
ಹೊಲವನು ಸಾರಿ ಮನವನು ತೂರಿ
ತುಂಬಲು ಬುಟ್ಟಿಯ ಬೆಟ್ಟವನೇರಿ
ಹೂಗಳ ಹುಡುಕುವರು- ಗೆಳೆಯರು
ಹುಡುಕುತ ದುಡುಕುವರು

7
ಆಟಿಯ ಹೂವು ಶೋಣದ ಹೂವು
ಕೆರೆಗಳ ದಡದಲಿ ಬೆಳೆದಿಹವು
ಅರಳಿನ ಹೂವು ಹುರುಳಿಯ ಹೂವು
ಅಂಗಳದೆಡೆಯಲಿ ಅರಳಿಹವು
ವಧುವಿನ ಹೂವು ಅದುರಿನ ಹೂವು
ವನದಲಿ ಸೊಬಗನು ತಳೆದಿಹವು
ವಿಧವಿಧ ತಳಿರಿಹವು – ಹೊಸ್ತಿಲ
ಹೊದಿಸಲು ಸೊಬಗಿನವು !

8
ಹುಣ್ಣಿಮೆ ಸೊಂಪು ಹೂಗಳ ಕಂಪು
ಆಟಿ ಕೊಡಂಜಿಯ ಪದಗಳ ಇಂಪು
ಮಳೆಗಳ ಒಲವು ಬೆಳೆಗಳ ಚೆಲುವು
ಹರಿದೋಡುವ ಕೆರೆತೊರೆಗಳ ನಲವು
ಮುಗಿಲಿನ ಕಪ್ಪು ಬಿಸಿಲಿನ ಬೆಪ್ಪು
ಚೆಲುವಿನ ತೌಳವ ತಿಂಗಳಿಗೊಪ್ಪು
ತುಳುವರ ಹಬ್ಬವಿದು – ಹುಣ್ಣಿಮೆ
ಹಬ್ಬದ ಕಬ್ಬವಿದು !

ಆಟಿಯ ಹುಣ್ಣಿಮೆ: ಈ ಕವಿತೆಯಲ್ಲಿ ಚಿತ್ರಿತವಾಗಿರುವ ತೌಳವ ಸಂಸ್ಕೃತಿ ವಿಶಿಷ್ಟವಾದುದು. ತುಳುವಿನಲ್ಲಿ ಆಟಿ ಅಂದರೆ ಆಷಾಡ ಮಾಸ. ಈ ಕವಿತೆಯನ್ನು ಎಸ್. ವೆಂಕಟರಾಜರ ‘ಶ್ರಾವಣದ ಮೊದಲ ದಿನ’ ಕವಿತೆಯ ಜತೆಗೆ ಹೋಲಿಸಿದರೆ ಒಳ್ಳೆಯ ತೌಲನಿಕ ಅಧ್ಯಯನವಾಗುವುದು. ಇಬ್ಬರೂ ಆಷಾಡವನ್ನು ಕೇಂದ್ರವಾಗಿರಿಸಿಕೊಂಡು ತುಳುನಾಡಿನ ಸಂಪ್ರದಾಯಗಳು, ಆಚರಣೆಗಳು (ಆಟಿ ಕೊಡಂಜಿ ಮತ್ತು ಮಾರಿ ಓಡಿಸುವುದು), ಜನರ ಭಾವ ಶ್ರೀಮಂತಿಕೆ, ರೈತರನ್ನೆಲ್ಲ ಕಾಡುತ್ತಿದ್ದ ಬಡತನ, ಅದನ್ನು ಮೀರುವ ಸಂಭ್ರಮ ಇವುಗಳನ್ನು ಸೂಚ್ಯವಾಗಿ ಹೇಳಿದ್ದಾರೆ.

ಆಟಿ ತಿಂಗಳ ನಡುವೆ ಬರುವ ಆಟಿಯ ಹುಣ್ಣಿಮೆ ಸ್ತ್ರೀಯರ ಹಬ್ಬ. ಆ ದಿವಸ ಹೆಂಗಸರು ಹೊಸ್ತಿಲು ಪೂಜೆ ಮಾಡುತ್ತಾರೆ. ಹೊಸ್ತಿಲು ತೊಳೆದು, ಅದು ಹಸಿಯಿರುವಾಗಲೆ ಜೇಡಿಉಂಡೆಯಲ್ಲಿ ರಂಗವಲ್ಲಿ ಬರೆದು ಅದರ ಮೇಲೆ ಇಕ್ಕೆಲಗಳಲ್ಲಿ ಹುರುಳಿಗಿಡ, ನೀರುಕಡ್ಡಿ (ಗದ್ದೆಬದಿಯಲ್ಲಿ ಯಥೇಷ್ಟವಾಗಿ ಬೆಳೆಯುವ / ಬೆಳೆಯುತ್ತಿದ್ದ ಗಿಡ. ಹಿಂದೆ ಹಳ್ಳಿಯ ಮಕ್ಕಳು ಸ್ಲೇಟಿನಲ್ಲಿ ಬರೆದುದನ್ನು ಅಳಿಸಲು ಇದರ ನೀರುತುಂಬಿದ ಮೃದುಕಾಂಡಗಳನ್ನು ಬಳಸುತ್ತಿದ್ದರು), ಮತ್ತು ಇತರ ಹೂಗಳನ್ನಿಟ್ಟು, ಬೇಯಿಸಿದ ಹಲಸಿನಹಣ್ಣಿನ ಬೀಜವನ್ನು, ಅರಳು ಇತ್ಯಾದಿಗಳನ್ನು ಹೊಸ್ತಿಲ ಮೇಲೆ ಇಟ್ಟು ಸಮರ್ಪಿಸಿ, ವಿಶಿಷ್ಟವಾದ ಹೊಸ್ತಿಲು ನಮಸ್ಕಾರ ಸಲ್ಲಿಸುತ್ತಾರೆ.

ಜತೆಗೆ ಕವಿಯು ಕಾಣುವ ಕೆಲವು ಹೊಸನೋಟಗಳೂ ಇವೆ. ಎರಡು ಯುವ ಜೋಡಿ (ವಾಸು ಮತ್ತು ಶರದು; ಸೀನು ಮತ್ತು ಸರಸಿ) ಈ ಸಂಭ್ರಮದಲ್ಲಿ ‘ದಾರಿ ತಪ್ಪಿ’ (ತಪ್ಪಿಸಿ!) ಮರೆಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುವ ಕಥೆಯನ್ನು ಕವಿ ತುಂಟತನದಲ್ಲಿ ತಂದಿದ್ದಾರೆ. ಅದು ಈ ಸಮಾಜ ವಿಶಿಷ್ಟ ಆಚರಣೆಯ ನಡುವಿನ ವೈಯಕ್ತಿಕ ವಿಚಾರಗಳು. ಕವಿ ಅವುಗಳನ್ನೂ ಗಮನಿಸಿ ಕವಿತೆಗೆ ಜೀವಂತಿಕೆ ತುಂಬಿದ್ದಾರೆ ಎನ್ನುವುದನ್ನು ಗಮನಿಸಬೇಕು.

ಇಲ್ಲಿ ಎರಡು ವಿಶೇಷ ಟಿಪ್ಪಣಿಗಳನ್ನು ಮಾಡಬೇಕು. ಮೊದಲನೆಯದು – ಕವಿ ಬಳಿಸಿರುವ ‘ಶೋಣ’ ಎಂಬ ಶಬ್ದ. ಇದು ‘ಶ್ರಾವಣ’ದ ಬ್ರಾಹ್ಮಣ ತುಳು ರೂಪ. ಪೇಜಾವರರ ಮಾತೃಭಾಷೆ ಇದೇ. ಬಹುಜನರು ಮಾತಾಡುವ ಸಾಮಾನ್ಯ ತುಳುವಿನಲ್ಲಿ ಇದು, ‘ಸೋಣ’ ಎಂದಾಗುತ್ತದೆ.

(ಆಟಿ ಕಳಂಜ)

ಆಟಿ ಕಳಂಜ

ಇನ್ನೊಂದು, ‘ಆಟಿ ಕೊಡಂಜಿ’ ಎಂಬ ಪದ. ಇದು ‘ಆಟಿ ಕಳಂಜ’ (ಕಳೆಂಜ) ಎಂದು ಪ್ರಸಿದ್ಧವಾಗಿರುವ ಜಾನಪದ ಕುಣಿತ. ಪೇಜಾವರ ಅವರು ಬಹುಶಃ ಈ ಶಬ್ದದ ಮೂಲದ ಬಗೆಗೆ ಇಲ್ಲಿ ಬೆಳಕು ಚೆಲ್ಲಿದ್ದಾರೆ. ಆಟಿ ಕಳೆಂಜ ಆಷಾಡ ಅಥವಾ ಆಟಿಯ ಕಷ್ಟ ಕಳೆಯುವ ಆಶಯದ ಆರಾಧನಾ ಕುಣಿತ. (ಕರಾವಳಿಯ ಕೃಷಿಕರಿಗೆ ‘ಆಟಿ’ ಕಷ್ಟದ ತಿಂಗಳು. ಆದಾಯವಿಲ್ಲದ, ಉದ್ಯೋಗವಿಲ್ಲದ, ಮಳೆಸುರಿಯುತ್ತಾ ಹೊರಗೆ ಹೋಗಲು ಬಿಡದ ಕಾಲ. ಅದರ ನಡುವೆ ಬರುವ, ಸಾಂಕೇತಿಕವಾಗಿ ಹೊಸ್ತಿಲನ್ನು ಪೂಜಿಸಿ ಮನೆಗೆ ಶುಭವನ್ನು ಆಹ್ವಾನಿಸುವ ಒಂದು ಸಣ್ಣ ಸಂಭ್ರಮಾಚರಣೆಯೇ ಆಟಿಯ ಹುಣ್ಣಿಮೆ. ಮತ್ತೂ ಹದಿನೈದು ದಿನಗಳು ಕಲೆದಾಗ ‘ಆಟಿಯ ಅಮಾವಾಸ್ಯೆ’ ಬರುತ್ತದೆ. ಆಮೇಲೆ ಸಂಭ್ರಮದ ಶೋಣ ಅಥವಾ ಶ್ರಾವಣ ಪ್ರಾರಂಭ). ಆಟಿಯಲ್ಲಿ ನಿರ್ದಿಷ್ಟ ಜನಾಂಗದವರು ಆಟಿಕಳಂಜನ ವೇಷ ಧರಿಸಿ ಮನೆಮನೆಗೆ ಭೇಟಿ ನೀಡಿ ಹರಸುವ ಸಂಪ್ರದಾಯವಿದೆ. ಅವರಿಗೆ ಪಡಿಯಕ್ಕಿ ಅಥವಾ ಹಣವನ್ನು ಕೊಡಬೇಕು.

‘ಆಟಿ ಕಳೆಂಜ’ ಎನ್ನುವ ಹೆಸರಿನಲ್ಲಿರುವ ‘ಕಳೆಂಜ’ ಅಥವಾ ‘ಕಳಂಜ’ ಶಬ್ದದ ಬಗ್ಗೆ ಚರ್ಚೆ ನಡೆದಿದೆ. ಆಟಿ ಕಳೆಯುವುದು ಎಂಬ ಅರ್ಥವನ್ನೇ ಹೆಚ್ಚಿನವರು ಕೊಟ್ಟುಕೊಂಡು ಬಂದಿದ್ದಾರೆ. ಪೇಜಾವರರು ‘ಕೊಡಂಜಿ’ ಎಂಬ ಪದ ಬಳಸಿರುವುದರಿಂದ ಈ ಪದದ ಮೂಲಕ ‘ಕೊರವಂಜಿ’ ಇರಬಹುದೆ ಎಂದು ಊಹಿಸಲು ಪ್ರೇರಣೆ ನೀಡುತ್ತದೆ.

ಆಟಿ ಕೊರವಂಜಿ – ಆಟಿ ಕೊಡಂಜಿ ಆಗಿರಬಹುದೆ? ಪೇಜಾವರರ ಪದಪ್ರಯೋಗವನ್ನು ಕಂಡು ಹೀಗೊಂದು ಊಹೆ. ಪೇಜಾವರ ಅವರ ಪ್ರಾರಂಭದ ಕವನಗಳು ನವೋದಯದ ಕವಿಗಳನ್ನು ಅನುಕರಿಸಿ ಬರೆದಂತಹವು. ‘ಲಕ್ಕಣ’ ಎಂಬ ಕವಿತೆಯಲ್ಲಿ ಈ ರೀತಿಯ ಸಾಲುಗಳಿವೆ:

ಕಬ್ಬಿಗ ಲಕ್ಕಣ ಹಾಡಿದನೆಂದರೆ
ಕಣ್ಣಲಿ ಕುಣಿವುದು ತುಳುನಾಡು
ಬೈರವ ಚೌಟರ ಸಿರಿಸಾವಂತರ
ಅಜಿಲ ಬಂಗರ ಚೆಲುಬೀಡು.

ಈ ಕವಿತೆಯಲ್ಲಿ ಬಾರಕೂರಿನ ಗತವೈಭವವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಇದನ್ನು ತಾನು ಕುವೆಂಪು ಅವರ ಕವಿತೆಯ ಪ್ರೇರಣೆಯಿಂದ ಬರೆದಿರುವೆ ಎನ್ನುವುದನ್ನು ಪೇಜಾವರ ಸದಾಶಿವರಾಯರೇ ಹೇಳಿಕೊಂಡಿದ್ದಾರೆ: “ ‘ಲಕ್ಕಣ’ದ ವಿಚಾರವಾಗಿ ಎರಡು ಮಾತು. ನೀವು ಭಾವಿಸಿದಂತೆ ‘ಲಕ್ಕಣ’ದಲ್ಲಿ ಪುಟ್ಟಪ್ಪನವರ ‘ಕುಮಾರವ್ಯಾಸ’ದ ಛಾಯೆಯಿದೆ, ಯಿರಲೇಬೇಕು. ಯಾಕಂದರೆ ಆ ಕವಿತೆಯನ್ನು ನೋಡಿಯೇ ಇದನ್ನು ಬರೆದಿದ್ದೇನೆ.” (ಗೋಕಾಕರಿಗೆ ಬರೆದ ಪತ್ರ: 25. 3. 1938). ಈ ರೀತಿ ಸ್ವವಿಮರ್ಶೆ ಮಾಡಿಕೊಂಡು ಬೆಳೆದ ಸಾಹಿತಿಗಳು ಅಪೂರ್ವ.

ಲಕ್ಕಣ

ತೌಳವವಿಭವದ ವಸನವನುಟ್ಟು
ಬಿಂಕದಿ ನಿಂತಿದೆ ಬಾರ್ಕೂರು
ಭೂಪತಿ ಪಾಂಡ್ಯ ದಿಗಂಬರ ಜೈನರ
ಮಾತೆಯ ವಿಜಯದ ತವರೂರು
ನಾಡಿಗರೊಲುಮೆಯ ಸೊಗದೂರು
ಕಲಿಗಳಲಿ
ಕಲೆಗಳಲಿ
ಕಾಂತಿಯ ಕಲಶವು ಬಾರ್ಕೂರು
ಶಿಲ್ಪದ ಹುಟ್ಟೂರು

ಕಲಕಲ ನಾದದಿ ನಲಿಯುವ ಸೀತೆಯ
ದಡದೆಡೆ ಜಿನ ಚೈತ್ಯಾಲಯವು
ಕಲ್ಲಲಿ ಕಾವ್ಯದ ಕೆತ್ತಿರುವಂತಿಹ
ನೆತ್ತಿಯನೆತ್ತಿಹ ಮಂಟಪವು
ಬಸದಿಗಳಿಂದ್ರರ ಗುರುಮಠವು
ಸ್ತಂಭಗಳು
ಬಿಂಬಗಳು
ಕಣ್ಣಿಗೆ ಶಿಲ್ಪದ ಹಬ್ಬಗಳು
ಕಲ್ಲಿನ ಕಬ್ಬಗಳು.

ಸೀತೆಯ ಶೀತಳ ವಾರಿಯ ನಾಟ್ಯಕೆ
ಲಕ್ಕಣಕವಿ ತಲೆತೂಗುವನು
ಕಾಡಿನಲಲೆಯುತ ನಾಡಿನಲಾಡುವ
ಗಾಳಿಗೆ ಪುಲಕಿತನಾಗುವನು
ನಾಡಿಗೆ ಸೊಬಗಿಗೆ
ನಲಿಯುವನು
ಒಲಿಯುವನು
ಹಾಡಿನ ಹೃದಯವ ತೆರೆಯುವನು
ತನ್ನನೆ ಮರೆಯುವನು.

ಕದನದಿ ಕಲಿಗಳು ಕಾದಿದ ಬಗೆಯನು
ಲಕ್ಕಣ ಕವಿ ತಾ ತಿಳಿದಿಹನು
ಶೌರ್ಯವ ತೋರಿದ ತೌಳವ ವೀರರ
ಕತೆಗಳ ಕಬ್ಬದಿ ಬರೆದಿಹನು
ಹೃದಯವನಲಗಿಸಲರಿತಿಹನು
ತುಳುಪದದಿ
ಪಾಡ್ದನದಿ
ಹಾಡಿಹ ನವರಣ ರೀತಿಯನು
ಸ್ಮಾರಕ ಗೀತೆಯನು.

ಕಬ್ಬಿಗ ಲಕ್ಕಣ ಹಾಡಿದನೆಂದರೆ
ಕಣ್ಣಲಿ ಕುಣಿವುದು ತುಳುನಾಡು
ಬೈರವ ಚೌಟರ ಸಿರಿಸಾವಂತರ
ಅಜಿಲ ಬಂಗರ ಚೆಲುಬೀಡು
ಕಲಿಗಳ ಕದನದ ಸವಿಹಾಡು
ರಣಗೀತೆ
ವೀರಕತೆ
ಮೈನವಿರೇಳುವ ಕಾವ್ಯ
ಕೇಳಲು ಸುಶ್ರಾವ್ಯ.

ನಚ್ಚಿನ ಬೀರರ ರೊಚ್ಚಿನ ಮಾತಿಗೆ
ಪಟುಭಟರಬ್ಬರವೇಳುವುದು
ನೋಡದೊ ಕಣದಲಿ ತೌಳವ ರಟ್ಟರ
ಗೆಲುವಿನ ಜಯದನಿ ಕೇಳುವುದು
ವೈರಿಗಳೆದೆಯನು ಸೀಳುವುದು
ಬಡಿಗೋಲು
ಮೊನೆವಿಲ್ಲು
ಕಾಣುತ ಕೆಚ್ಚದು ಚಿಮ್ಮುವುದು
ಸ್ಫೂರ್ತಿಯು ಹೊಮ್ಮುವುದು

ರಣದುತ್ಸಾಹವ ಕೈದುಗಳಾಟವ
ಕಾಣದೊ ! ತನು ಬೆರಗಾಗುವುದು
ನುಗ್ಗುವ ಬಂಟರ ಕೇಳಿಯ ಕೇಕೆಗೆ
ಉಕ್ಕಿನ ಮೈಮರುಳಾಗುವುದು
ಕತ್ತಿಯ ಕೈ ಸರಳಾಗುವುದು
ರಿಪುದಳದಿ
ಕೊಳುಗುಳದಿ
ಹಾಹಾಕಾರವದೇಳುವುದು
ಕೂಗದೊ ಕೇಳುವುದು.

ಕಾಲದ ಪರದೆಯು ಮೇಲಕ್ಕೆದ್ದಿತು
ಈಗದು ಹಿಂಡಿನ ಚೆಲುಕನಸು
ಶತಮಾನಾಂತ್ಯದಿ ಮರೆತಿಹ ಲೋಕಕೆ
ಗತ ವೈಭವಗಳ ಸವಿನೆನಪು
ಭಾವನೆಯೂಟಕೆ ಸಿಹಿತಿನಸು
ನಿಜಧರ್ಮ
ಸತ್ಕರ್ಮ
ಮುಳುಗಿಹುದಂದಿನ ಜಲಧಿಯಲಿ
ಕತ್ತಲೆಯಾಳದಲಿ

ತುಳುವರ ಕೀರ್ತಿಯ ಭೇರಿಯು ಮೊಳಗಿದ
ಬಾರ್ಕೂರೆಂಬುದು ಸುಡುಗಾಡೆ
ಮಮತೆಯಲಾಡಿಸಿ ಭಾಗ್ಯದಿ ಬೆಳೆಸಿದ
ಸೀತೆಯ ಶಿಶುವಿಗೆ ಈ ಪಾಡೆ
ನಾಡಿನ ಸೋಲಿನ ಇದು ಬೀಡೆ
ಈಗತಿಯ
ಅವನತಿಯ
ಕಾಣುತ ಕವಿಗಳು ಕೊರಗುವರು
ಕಲಿಗಳು ಮರುಗುವರು.

ಕಾಲದ ಕಡಲಿನ ತೆರೆಗಳ ಹೊಡೆತಕೆ
ಬಳಲುತ ಮುಳುಗಿದೆ ಬಾರ್ಕೂರು
ಕೂಗಿನ ತಾನಕೆ ಕುಣಿಯುವ ಅಳಿವಿನ
ಕಾಲಡಿ ಬಿದ್ದಿದೆ ಈಯೂರು
ನಾಶವು ನಗುತಿಹ ಹಾಳೂರು
ಬಾಳಿನಲಿ
ಬೀಳಿನಲಿ
ಇದು ತುಳು ನಾಡಿನ ಹಂಪೆ
ಈಗಿದು ಕೊಳೆ ಕೊಂಪೆ

ಮೌನದ ತೆರೆಯಲಿ ತೇಲುತ ಬಂದಿದೆ
ನಾಡಿಗೆ ಲಕ್ಕಣನನುರಕ್ತಿ
ಭೀಷಣವಾಂತಿಹ ವಿಲಯದ ಚಿತ್ರದಿ
ಮನವನು ಸೆಳೆಯುವದಾ ವ್ಯಕ್ತಿ
ಕವಿಗಳಿಗಿರುವುದೆ ಈ ಶಕ್ತಿ
ನೇಹದಲಿ
ಮೋಹದಲಿ
ಜಗವನು ಜಯಿಸುವ ಬಾಹುಬಲ
ವಿಜಯದ ಅತುಳಛಲ.

ಲಕ್ಕಣ ಕಟ್ಟಿದ ಪಾಡ್ಡನವೆಲ್ಲವು
ಜನತೆಯ ಹೃದಯವ ತೋರುವವು
ಕಾಲಾಘಾತದಿ ಲೋಕವು ಮರೆತಿಹ
ನಾಡಿನ ನಡೆಯನು ಸಾರುವವು
ಚರಿತೆಯ ಮೆಟ್ಟಲನೇರುವವು
ತನಿರಸವ
ಸುರಿಸಿರುವ
ಕವಿಗಮರತ್ವವನಿತ್ತಿಹವು
ಭಕ್ತಿಯ ಬಿತ್ತಿಹವು.

ಪೇಜಾವರ ಸದಾಶಿವರಾಯರ ‘ಹೂ-ಗ-ಳಿ-ಗೆ’ ಎನ್ನುವ ಕವಿತೆ ‘ವಸಂತ’ ಮಾಸಪತ್ರಿಕೆಯಲ್ಲಿ (ಮೇ 1939) ಪ್ರಕಟವಾಗಿದೆ. ಬರೆದ ದಿನಾಂಕ ದಾಖಲಾಗಿಲ್ಲ. ಬಹುಶಃ ನವೋದಯದ ಮನಸ್ಥಿತಿಯಲ್ಲಿಯೆ ಬರೆದ ಕವಿತೆಯಿದು. ಇದು ನವೋದಯದ ಒಂದು ಉತ್ತಮ ವಿರಹ ಗೀತೆಯಾಗಿದೆ.

ಹೂ-ಗ-ಳಿ-ಗೆ

ಹಳೆಯ ಪುಸ್ತಕದೆರಡು ಹಾಳೆಗಳ ನಡುವಿನಲಿ
ಎಂದೊ ಮಡಗಿದ ನಾಲ್ಕು ಪುಷ್ಪಗಳ ನೋಡಿ
ಒಂದು ಗಳಿಗೆಯ ನೆನಪಿಗೆನ್ನ ಮನಸಿದು ಕನಲಿ
ಮತ್ತೆ ಏಕಾಂತದಲಿ ಮರಳಿಹುದು ಬಾಡಿ || 1 ||

ಬೇಡಿದೆನೆ ಸೌಗಂಧ! ಹೂವುಗಳೆ ನಿಮ್ಮಿಂದ!
ಒಂದು ಕಾಲದ ನೆನಪ ರೂಪಿಸುವೆನೆಂದೆ
ಅವಳ ಕಾಣುವೆನೆನುವ ನನ್ನ ಬಯಕೆಗಳಿಂದ
ಕೆತ್ತುವೆನು ಮತ್ತೊಮ್ಮೆ ಸೌಂದರ್ಯವೆಂದೆ! || 2 ||

ಜರೆಯಿಲ್ಲ ಅಳಿವಿಲ್ಲ ಚೆಲುವೆಗೆಂದವರಾರೊ!
ನೋಡಿಂದು ನಿಮ್ಮಗಳ ಶಾಶ್ವತದ ಸ್ಥಿತಿಯೋ?
ಜರೆಗುದುರಿ ಬಿದ್ದ ತರಗೆಲೆಗೆ ನೀಮ್ಗಳು ಬೇರೋ
ಧರೆಯಲ್ಲಿ ಯೌವನದ ಚೆಲುವಿಗಿದು ಗತಿಯೋ || 3 ||

ನಾಲ್ಕು ಗೆಲ್ಲಲಿ ಸಿಡಿದ ನಿಮ್ಮನೊಂದೆಡೆ ತಂದು
ಪೋಣಿಸುತ ಎನಗಿತ್ತ ನಿಮ್ಮೊಡತಿ ಎಲ್ಲಿ?
ತುಂಬು ಜೀವನದಲ್ಲಿ ಅವಳ ನೋಡಿದೆನಂದು
ಆ ಜೀವವಿದೆಯಿಂದು ಮೃಣ್ಮಯದಲಿ || 4 ||

ದೇಹ ಧರಣಿಯ ಪಾಲು! ಶ್ವಾಸ ಗಗನದ ಪಾಲು!
ತರುಣ ಸೌಂದರ್ಯವದು ದಶದಿಕ್ಕು ಪಾಲು
ಎನ್ನ ಜೀವನವೆಲ್ಲ ಕಾತರದ ನಿಡುಸುಯ್ಲು
ಅವಳ ಕಾಯುತಲಿರುವ ಎನಗಾದ ಪಾಲು? || 5 ||

ಎರಡು ಕಾಗದದಲ್ಲಿ ಮಣ್ಣು ಬಣ್ಣದ ಚುಕ್ಕೆ
ಹೂಗಳೊತ್ತಿದ ಮುದ್ರೆ ನೆನಪಿಗಿರಲೆಂದು
ಬಾಳೆ ನಾರಲಿ ಸುಲಿದ ನಾಲ್ಕು ಒಣಗಿದ ಚೆಕ್ಕೆ
ಹೂಗಳಿವು ಎನ್ನವಳು ಜೀವಿಸಿದ್ದಂದು || 6 ||

ಓದಿಕೊಳ್ಳಬಹುದೆನ್ನ ಜೀವನದ ಅರ್ಥ
ಹಳೆಯ ಪುಸ್ತಕದೆರಡು ಹಾಳೆಯೊಳ ಮೈಯಲ್ಲಿ
ಅಂದಿನಂತೆಯೆ ಇಂದು ಮತ್ತೊಮ್ಮೆ ನೆನಪ
ಅವಳ ಕಾಲದ ನಾಲ್ಕು ಗೆಳತಿಯರ ಕೈಯಲ್ಲಿ
ಒಪ್ಪಿಸಿದೆ ಕುಸುಮಗಳೆ ಕಾದಿರಲಿ ನೆನಪ || 7 ||

ಸಾವಿನ ಕುರಿತ ಕವಿತೆಗಳು

ಸದಾಶಿವರಾಯರ ಕವಿತೆಗಳಲ್ಲಿ ಸಾವಿನ ಕುರಿತು ಬರೆದ ಕವಿತೆಗಳಿಗೆ ಅವರ ಅಕಾಲಿಕ ಸಾವಿನ ನಂತರ ವಿಶೇಷ ಅರ್ಥ ಬಂದಿದೆ. ‘ಬೇಡ’, ‘ಮಾಯಕದ ಮಸಣ’, ‘ಮುರಿದ ಮುರಳಿ,’ ‘ಸಾವು’ ಮುಂತಾದ ಕವನಗಳನ್ನು ಈ ಗುಂಪಿಗೆ ಸೇರಿಸಲಾಗಿದೆ. ‘ಮಾಯಕದ ಮಸಣ’ ಕವಿತೆಯ ‘ಬೇನೆ ಬೇಗುದಿ ಜಿನಸು ಕೊಳ್ಳಲು ಸಾವಿನಂಗಡಿ ಸುಲಭವು’ ಎಂಬ ಸಾಲುಗಳು, ‘ಸಾವು’ ಕವಿತೆಯ ‘ಸಾವು ಸಹಜವು, ಸಾವಿಲ್ಲದೊಡೆ ಬಾಳು ನೋವಿನೋಲಗ’, ‘ಕೊಲೆಯು ಜೀವನದ ಕೊನೆಯೆ! ಬಾಳು ಸಾವಿನ ಆಳೆ! ಜಗದ ಸೌಂದರ್ಯವಿದಂತಕನ ಸೂಳೆ’ ಎಂಬ ಸಾಲುಗಳು ಹೆಚ್ಚಾಗಿ ವಿಮರ್ಶಕರ ಗಮನ ಸೆಳೆದಿವೆ.

ಸದಾಶಿವರಾಯರು ನವೋದಯ ಅಥವಾ ರಮ್ಯ ಪಂಥದ ಬಗ್ಗೆ ಅತೃಪ್ತರಾಗಿ ಹೊಸ ಪ್ರಯೋಗಗಳನ್ನು ಮಾಡುತ್ತ ಸಾನೆಟ್‌ಗಳನ್ನು ಬರೆದರು. ಮೇಲೆ ಉಲ್ಲೇಖಿಸಿದ ‘ಸಾವು’ ಕೂಡಾ ಒಂದು ಸಾನೆಟ್.

ಸಾವು

ಸಾವು ಸಹಜವು ನಿಜವೆ. ಸಾವಿಲ್ಲದೊಡೆ ಬಾಳು
ನೋವಿನೋಲಗ. ಜೀವದಾಧಿಕ್ಯ ಗೋಳು.
ಜಸದ ಅಬ್ಬರವಿರದು, ಪರದ ಅಂಜಿಕೆಯಿರದು
ಹೊಸಪರಿಯ ನೈರಾಶ್ಯ ಧರೆಗಿಳಿಯಬಹುದು.

ಸಾವು ನೋವುಗಳೆರಡು ಸಾಜ ಜೀವಕ್ಕೆಂದು
ಯಾವ ಭೂತದ ನೇಮ ನಡೆಯುತಿಹುದಿಂದು?
ಯಾರ ಹಸಿವಿಂಗಿಸಲು ಯಾರ ಮದ ಭಂಗಿಸಲು
ಕೂರಲಗ ಕತ್ತಿಯಲಿ ನೆತ್ತರಿನ ಭುಗಿಲು?

ಕಾವ ಕರುಣೆಯ ನಯದ ತೋಳ ತೊಂಗಲಿನಲ್ಲಿ
ಜೀವದುಂಬಿಯ ಆಟ. ಕಾವ ಮಾತಿರಲಿ
ಕಾಯಕೊಬ್ಬಿಸಿ ಕೊಲುವ ಕಟುಕರಾಳ್ವಿಕೆಯಲ್ಲಿ
ನೋಯಬಾರದು ಎಂಬ ಮಾತಿಗೆಡೆಯೆಲ್ಲಿ?
ಕೊಲೆಯು ಜೀವದ ಕೊನೆಯೆ! ಬಾಳು ಸಾವಿನ ಆಳೆ!
ಜಗದ ಸೌಂದರ್ಯವಿಂದಂತಕನ ಸೂಳೆ.

ನವೋದಯದಿಂದ ನವ್ಯದತ್ತ

‘ಧೀವರ’ ಮತ್ತು ‘ನಳಂದ’ ಪೇಜಾವರರ ಇನ್ನೆರಡು ಉತ್ತಮ ಸಾನೆಟ್‌ಗಳು. ಇವೆಲ್ಲ ಶೇಕ್ಸ್‌ಪಿಯರ್ ಸಾನೆಟ್ ಮಾದರಿಯಲ್ಲಿವೆ. ‘ಧೀವರ’ ಕವಿತೆ ಅವರ ಹೊಸ ಕಾವ್ಯೋದ್ಯೋಗದ ಅನ್ವೇಷಣೆಯ ಘೋಷಣಾ ಕವಿತೆ.

ಬೇರೆ ನೀರ್ಗಳಲೆನ್ನ ಆಶಯದ ಬಲೆಯ
ಬೀಸಹೊರಟಿಹೆನೀಗ. ಉತ್ಸಾಹದೊಡ-
ಮಾನಸದ ಓಟದಲಿ ಈಸೆ ಹಿರಿಯಲೆಯ,
ಓಟದಂಜಿಕೆ. ನಭದಲಿ ಮತ್ತೆ ಗಜ ಮೋಡ
– ಹೀಗೆ ಹೊಸ ಅನ್ವೇಷಣೆಗೆ ಹೊರಟ ಆತಂಕವನ್ನು ವ್ಯಕ್ತಪಡಿಸುತ್ತ ಕವಿತೆ ಪ್ರಾರಂಭ ವಾಗುತ್ತದೆ. ಶೇಕ್ಸ್‌ಪಿಯರಿಯನ್ ಮಾದರಿಯ ಈ ಸಾನೆಟ್‍ನ ಕೊನೆಯ ದ್ವಿಪದಿ ಹೀಗಿದೆ:

ಇಲ್ಲ ರತ್ನಾಕರದ ಮಣಿಯಾಸೆ ಪ್ರಭುವೆ
ನಾಲ್ಕು ಬಣ್ಣದ ಮೀನು ಬಲೆಯಲಿರೆ, ವಿಭುವೆ!

ಹೀಗೆ ದೇಶ ವಿದೇಶಗಳ (‘ಬೇರೆ ನೀರ್ಗಳು’) ಅಥವಾ ವಿಲಾಯತಿಯ ಅನುಭವವನ್ನು ತಮ್ಮ ಕಾವ್ಯದೊಳಗೆ ಸದಾಶಿವರಾಯರು ತಂದುಕೊಂಡರು. ಇದರ (ಈ ನಿರ್ಧಾರದ) ನಂತರ ಬರೆದ ‘ವರುಣ’ ಮತ್ತು ‘ನಾಟ್ಯೋತ್ಸವ’ ಅವರ ಎರಡು ಪ್ರಸಿದ್ಧ ಕವಿತೆಗಳಾಗಿವೆ. ಇವುಗಳ ಬಗ್ಗೆ ವಿವರವಾಗಿ ಮುಂದೆ ನೋಡಬಹುದು.

ಧೀವರ

ಬೇರೆ ನೀರ್ಗಳಲೆನ್ನ ಆಶಯದ ಬಲೆಯ
ಬೀಸಹೊರಟಿಹೆನೀಗ. ಉತ್ಸಾಹದೋಡ-
ಮಾನಸದ ಓಟದಲಿ ಈಸೆ ಹಿರಿಯಲೆಯ,
ವೇಗದಂಜಿಕೆ. ನಭದಲಿದೆ ಮತ್ತೆ ಗಜ ಮೋಡ !

ಎಳೆತನದ ಮರುಳಿನಲಿ ಯೌವನದ ಭೋಗ –
ಭಾಗ್ಯದೈಸಿರಿಯ ರತ್ನವಿಷ್ಠರದಲ್ಲಿ
ಕುಳ್ಳಿರಿಪೆನೆಂದೆ ! ಇದಕೊ ಯೌವನಮಿಲ್ಲಿ !
ಮಣಿಯಲ್ಲ, ಮೀನನರಸುತೆ ಹೊರಟೆನೀಗ !
ಆಗಸವ ಮುಟ್ಟ ವಾಂಛಿತವಿಲ್ಲ. ಜಗಲಿ-
ಯೊಂದಿಗೆ ಬದಲು; ಅದರ ಮೆಟ್ಟಲನು ಏರಿ
ಮೀನಿನಂಗಡಿಯಿಡುವೆ, ಬರಲಿ ಹಾಯ್ ತೂರಿ
ಎನ್ನ ಧ್ಯೇಯದ ಗಾಳಿ! ಕೂವೆ ನೇರ್ನಿಲಲಿ!

ಇಲ್ಲ ರತ್ನಾಕರದ ಮಣಿಯಾಸೆ ಪ್ರಭುವೆ
ನಾಲ್ಕು ಬಣ್ಣದ ಮೀನು ಬಲೆಯಲಿರೆ, ವಿಭುವೆ!

ನಳಂದ

ದಾರಿಗನೆ ! ಆ ದ್ವಾರವನು ಹಾಯ್ದೊಡೊಳಗೆ
ಒಂದು ಹೆಜ್ಜೆಗೆ ಅಗ್ನಿಚಕ್ರವಿದೆ ! ಇಲ್ಲಿ
ಅವ್ಯಕ್ತ ತೇಜಸಗಳಾವರ್ತದಲ್ಲಿ
ಒಂದು ಸಂಸ್ಕೃತಿಯೊಮ್ಮೆ ಬೆಳೆದಿಳಿಯಿತಿಳೆಗೆ !

ಹಿಂದಕಿದು ಸಾಧಕರ ತವರು. ಪರನಾಡ
ಪಂಬದರ ಭೀಭತ್ಸ ಗಗ್ಗರ ನೇಮ
ಅಬ್ಬರದಿ ನಡೆಯೆ, ಕುಸಿದು ವಿದ್ಯಾಧಾಮ
ಇಂದು ನಂದಾದೀಪ ನಂದಿಹುದು ನೋಡ !

ಭಗ್ನಪ್ರಾಕಾರಗಳ ಹುತ್ತವಿದು. ಸುಪ್ತ
ವೈಭವದ ಕಾವಲಿಗೆ ದಾರಿದ್ರ್ಯಸರ್ಪ !
ಇಲ್ಲಿ – ಗುಪ್ತ ಚಿತೆಯಲಿ ನೆನಪುಗಳ ತಪ್ತ
ಭಸ್ಮ! ಇದು ಉರಿದೊಂದು ಜನಪದದ ದರ್ಪ !

ಓ ಪಥಿಕ ! ಧಗಿಸುತಿದೆ ಈ ಯಜ್ಞಕುಂಡ !
ಯಾವ ನೀರಿಗು ಆರದಿದೆಯಿದರ ಕೆಂಡ !!

ತುಳುನಾಡಿನ ಪದವಿಶೇಷಗಳು

ಪೇಜಾವರ ಸದಾಶಿವರಾಯರ ಮಾತೃಭಾಷೆ ತುಳುವಾದ್ದರಿಂದ ಅವರ ಕವಿತೆಗಳಲ್ಲಿ ತುಳುನಾಡಿನ ಸಂಸ್ಕೃತಿ, ಇತಿಹಾಸ, ಭಾಷೆಯ ಮೇಲಿನ ಪ್ರೀತಿ ವ್ಯಕ್ತವಾಗಿದೆ. ‘ಆಟಿಯ ಹುಣ್ಣಿಮೆ’ ತುಳುನಾಡಿನಲ್ಲಿ ಸಂಭ್ರಮದ ಒಂದು ಆಚರಣೆ. ಇದು ಪೇಜಾವರರ ಒಂದು ಕವಿತೆಯ ಶೀರ್ಷಿಕೆ ಎನ್ನುವುದನ್ನು ಈಗಾಗಲೇ ಗಮನಿಸಲಾಗಿದೆ. ಆ ಕವಿತೆಯಲ್ಲಿ ತುಳುನಾಡಿನ ಸಂಸ್ಕೃತಿಯ ಚಿತ್ರಣವಿದೆ. ‘ಲಕ್ಕಣ’ ಕವಿತೆಯಲ್ಲಿ ಬಾರಕೂರನ್ನು ಸಂಕೇತವಾಗಿರಿಸಿಕೊಂಡು ತುಳುನಾಡಿನ ಗತವೈಭವವನ್ನು ನೆನಪಿಸಿಕೊಂಡಿದ್ದಾರೆ.

ಈ ಲೇಖನದಲ್ಲಿ ಉದಾಹರಣೆಯಾಗಿ ಬಳಸಿರುವ ಮೂರು ಸಾನೆಟ್‌ಗಳಲ್ಲಿ, ತುಳುನಾಡಿನ ಕೆಲವು ವಿಶಿಷ್ಟ ಪದಪ್ರಯೋಗಗಳಿವೆ. ‘ಧೀವರ’ ಕವಿತೆಯಲ್ಲಿ ‘ಓಡ’ ಎನ್ನುವ ಪದವಿದೆ (ಉತ್ಸಾಹದೋಡ). ಓಡ ಅಂದರೆ ತುಳುವಿನಲ್ಲಿ ದೋಣಿ. (ಕನ್ನಡದಲ್ಲಿಯೂ ಹಿಂದೆ ಈ ಪದ ಬಳಕೆಯಿತ್ತು). ‘ಸಾವು’ ಕವಿತೆಯಲ್ಲಿ, ಮತ್ತು ‘ನಳಂದ’ ಕವಿತೆಯಲ್ಲಿ ಭೂತದ ನೇಮ, ಗಗ್ಗರ ನೇಮ ಎಂಬ ಪದಗಳಿವೆ. ತುಳುನಾಡಿನಲ್ಲಿ ಭೂತದ ‘ನೇಮ’ ಅಂದರೆ ದೈವಾರಾಧನೆಯ ಒಂದು ವಿಧ. ‘ನೇಮ’ ಎನ್ನುವುದು ಊರೊಟ್ಟಿನ ಅಂದರೆ ಊರಿನವರೆಲ್ಲರಿಗೆ ಸಂಬಂಧಿಸಿದ ದೈವಾರಾಧನೆಗೆ ಸಲ್ಲುವ ಶಬ್ದ. ಊರಿನವರಿಗೆಲ್ಲ ಆಗ ಏನು ಮಾಡಬಹುದು-ಮಾಡಬಾರದು, ಊರಿನಿಂದ ಹೋಗಬಹುದೆ-ಬಾರದೆ ಇತ್ಯಾದಿ ನಿಯಮಗಳು ಅನ್ವಯವಾಗುತ್ತವೆ. ಸಾಮಾನ್ಯವಾಗಿ ಒಂದು ಮನೆಯವರು, ತಮ್ಮ ಮನೆದೈವಕ್ಕೆ ದೈವನರ್ತಕರಿಂದ ವೇಷಹಾಕಿಸಿ ನಡೆಸುವ ನರ್ತನ ಸೇವೆ ಕೊಟ್ಟರೆ ಅದಕ್ಕೆ ‘ಕೋಲ’ ಎನ್ನುತ್ತಾರೆ. (ತುಳುನಾಡಿನಲ್ಲಿ ಬ್ರಾಹ್ಮಣರ ಸಹಿತ ಹೆಚ್ಚಿನ ಸಮುದಾಯಗಳವರಿಗೆ ಮನೆಯ ದೈವಗಳಿವೆ). ಗಗ್ಗರ ಎನ್ನುವುದು ದೈವಾರಾಧನೆಯ ವಿಶಿಷ್ಟ ಕಾಲ್ಗೆಜ್ಜೆ. ಇದನ್ನು ಧರಿಸಿದ ಮೇಲೆ ದೈವಾವೇಶ ಆಗುವುದು. ಪ್ರಾರಂಭದಲ್ಲಿ ದೈವನರ್ತಕರು ಗಗ್ಗರಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾರ್ಥಿಸುತ್ತಾ, ನೆರೆದ ಗಣ್ಯರಿಗೆ ಅದನ್ನು ತೋರಿಸುತ್ತಾ ದೈವಾವೇಶ ಪಡೆಯಲು ಒಪ್ಪಿಗೆ ಕೇಳುವರು.

‘ನಳಂದ’ ಕವಿತೆಯಲ್ಲಿ ಪಂಬದರು ಎನ್ನುವ ಪದ ಬಳಕೆಯಾಗಿದೆ. ಪಂಬದ ಅನ್ನುವುದು ದೈವನರ್ತಕರ ಒಂದು ಸಮುದಾಯ. ‘ನಲ್ಕೆ’ ಎನ್ನುವುದು ಇಂತಹ ಇನ್ನೊಂದು ಪಂಗಡ.

ಪೇಜಾವರ ಸದಾಶಿವರಾಯರು ನವೋದಯದ ಅಭಿವ್ಯಕ್ತಿ ವಿಧಾನ, ಮಾತ್ರಾಗಣಗಳನ್ನು ಬಳಸಿಕೊಂಡ ಕಾವ್ಯ ಶರೀರವನ್ನು ಬಳಸಿದ ಕಾರಣ ಅವರ ನವ್ಯ ಅಭಿವ್ಯಕ್ತಿಗೆ ಮಿತಿಯುಂಟಾಗಿದೆ ಎಂದು ವಿಮರ್ಶಕರು ಹೇಳುವುದುಂಟು. ಅಲ್ಲದೆ ಮೂರು ಮೂರು ಮಾತ್ರೆಗಳ ಗಣಕ್ಕೆ ಅವರು ಆಕರ್ಷಿತರಾಗಿ ಅದನ್ನೇ ಬಹುವಾಗಿ ಬಳಸಿದ್ದರಿಂದ ಕೆಲವು ಕವಿತೆಗಳ ಅರ್ಥವಂತಿಕೆಗೆ ಕುಂದುಂಟಾಗಿದೆ ಎನ್ನುವ ಅಭಿಪ್ರಾಯವಿದೆ. ಆದರೆ ತಮ್ಮ ಸಾನೆಟ್‌ಗಳಲ್ಲಿ ಈ ಲಯವನ್ನು ಕೂಡಾ ಅವರು ಮುರಿದು ಹೊಸ ಅಭಿವ್ಯಕ್ತಿಯನ್ನೂ ಸಾಧಿಸಲು ಪ್ರಯತ್ನಿಸಿದ್ದುಂಟು.

ಸದಾಶಿವರಾಯರು ಕನ್ನಡ ನಾಡಿಗೆ ಮರಳಿ ಕಾವ್ಯೋದ್ಯೋಗವನ್ನು ಮುಂದುವರಿಸಿದ್ದರೆ ಅಡಿಗರಂತೆ ಯುಗಪ್ರವರ್ತಕ ಕವಿಯಾಗುತ್ತಿದ್ದುದರಲ್ಲಿ ಸಂದೇಹವಿಲ್ಲ.

ನವ್ಯದ ಎರಡು ಆದ್ಯ ಕವಿತೆಗಳು

ಪೇಜಾವರ ಸದಾಶಿವರಾಯರು 1938 ರಲ್ಲಿ ‘ನಾಟ್ಯೋತ್ಸವ’ವನ್ನು ಮತ್ತು 1939 ರಲ್ಲಿ ತಮ್ಮ ಕೊನೆಯ ಕವಿತೆ, ‘ವರುಣ’ವನ್ನು ಬರೆದರು. ಕನ್ನಡದ ಮೊದಲನೆಯ ಮತ್ತು ಎರಡನೆಯ ನವ್ಯ ಕವಿತೆಗಳು ಇವೇ ಆಗಿವೆ.

ಮೇಲೆ ಉಲ್ಲೇಖಿಸಿದ 25. 3. 1938 ರ ಪತ್ರದಲ್ಲಿಯೇ ಸದಾಶಿವರಾಯರು ತಮ್ಮ ಹೊಸಕವಿತೆ ‘ನಾಟ್ಯೋತ್ಸವ’ದ ಕುರಿತು ಗೋಕಾಕರಿಗೆ ಬರೆದಿದ್ದಾರೆ. ಈ ಕವನ ಬರೆಯುತ್ತಿರುವಾಗಲೇ ಸದಾಶಿವರಾಯರಿಗೆ ಇದು ಕನ್ನಡದಲ್ಲಿ ಹೊಸ ಪ್ರಜ್ಞೆಯನ್ನು ಉದ್ಘಾಟಿಸುತ್ತಿರುವ ಕವನ ಎಂದು ತಿಳಿದಿತ್ತು. (ಇದು ಕನ್ನಡದ ಮೊದಲ ನವ್ಯಕವನ ಎಂದು ಕೀರ್ತಿನಾಥ ಕುರ್ತಕೋಟಿಯವರು ಗುರುತಿಸಿದ್ದಾರೆ). “ಬೇರೊಂದು ಹೊಸ ಕವನವನ್ನು ಮೊದಲು ಮಾಡಿದ್ದೇನೆ – ನಮ್ಮಲ್ಲಿಯ ಡ್ಯಾನ್ಸ್ ಫೆಸ್ಟಿವಲ್‌ನ ಕುರಿತು. ಹೀಗೆ ಮೊದಲಾಗಿ,” ಎಂದು ಕವಿತೆಯ ಸಾಲುಗಳನ್ನು ಉದ್ಧರಿಸಿ ತಾವೇ ಅದಕ್ಕೆ ವಿವರಣೆಯನ್ನು ನೀಡಿದ್ದಾರೆ.

ಈ ಕವಿತೆ ಪೂರ್ತಿಯಾಗಿ ಹೀಗಿದೆ:

ನಾಟ್ಯೋತ್ಸವ

ಲೋರೆನ್ಸೊ ಇಲ್ ಮನ್ನೀಫಿಕೊ
ಹಾಡನರ್ಪಿಸಿಹೆನು ತಕೊ!
ಇಂದಿನೆಮ್ಮ ಉತ್ಸವದಲಿ
ಯೌವನದೀ ಸಂಭ್ರಮದಲಿ
ಹರಯವಿದರ ಯಾಗದಲ್ಲಿ
ಜೀವಿತಗಳ ಭೋಗದಲ್ಲಿ
ಗುರುವೆ ನಿನಗೆ ಅಗ್ರಪೀಠ
ಕಲಿತೆವಿಂದು ನಿನ್ನ ಪಾಠ!
ತೇಲಿ ಬರುವ ಜಾಸ್ ಗಾನ
ನಮ್ಮ ಕುಣಿತಕಲ್ಲವೇನ !
ವೆನೇತ್ಸಿಯದ ಕಡೆದ ಗಾಜು
ಸಾರ್ದೇನಿಯದ ಸುರೆಯ ಮೋಜು
ಮುತ್ತಿರುವರೆ ಕತ್ತಲು;
ಹಾಡಿನೊಡನೆ ಮೂಡಿ ಬರುವ
ಬೇರೆ ನಾಡ ಕನಸ ತರುವ
ಸೌರಭದಲಿ ಎತ್ತಲು;
ಯೌವನವನು ಸೂಸುತಿರುವ
ಬಯಕೆಯನ್ನು ಬೀಸುತಿರುವ
ಸುಂದರಿಯರು ಸುತ್ತಲು!
ಯಾರೆ ನೀನು? ನಾನು ಸ್ಪಾನ್ಯ
ಅದು ಇತಾಲ್ಯ ಇದು ಜರ್ಮಾನ್ಯ.
ಯಾರೆ ನೀನು? ನಾನು ಫ್ರಾಂಚ.
ಮತ್ತೆ ನೀನೊ? ನಾನು ಗ್ರೇಚ.
ಮಿಂಚುತಿರುವ ರೇಶ್ಮೆಯಲ್ಲಿ
ಅರ್ಧ ಮುಚ್ಚಿ ಅರ್ಧ ಬಿಚ್ಚಿ
ಜಘನಧ್ವಜವ ಗಗನದಲ್ಲಿ
ವಿಜಯದಾಸೆಯಿಂದ ಚುಚ್ಚಿ
ಗಂಡಿಗಾಗಿ ಕಾದುತಿರುವ
ಹಿಂಡು ಎದುರಿದೆ!
ಕಾಯದಲ್ಲಿ ಕದನದಿಚ್ಛೆ
ಆದರದನು ಕೊಂಚ ಮುಚ್ಚೆ
ಅರಳುತಿರುವ ಮರುಳು ನಗೆ
ಸಾವಿರ ಸಿಗರೇಟ ಹೊಗೆ;
ಮಧುವಿನಲ್ಲಿ ಮಿಂದ ಮುದವು
ಮನಸ ಕೆದರಿದೆ!
ಹಾಡಿನೊಂದು ತೆರೆಯ ಮೇಲೆ
ನರ್ತನಗಳ ತೆಪ್ಪ ತೇಲೆ
ಧೀವರಿಯರು ಬಲೆಯ ಬೀಸಿ
ಮತ್ಸ್ಯಕಾಗಿ ಕಾಯ್ದರೆ,
ಮೀಂಗಳಿವೂ ಗುಣಿಸಿ ಗುಣಿಸಿ
ಅವಳನೆಣಿಸಿ ಇವಳ ಕುಣಿಸಿ
ಮುಗುಳುನಗುತ ಮೆಲ್ಲನೀಸಿ
ಬಲೆಯ ಹಾಯ್ದರೆ!
ಜೀವನಕ್ಕೆ ಎರಡು ಮುಖ-
ಒಂದು ಸುಖ ಒಂದು ದುಃಖ;
ನಾಳಿನರಿವು ಯಾಕೆ ಸಖಾ?
ಇಂದಿಗಿಹುದು ತುಂಬ ಸುಖ!
ನೋಡು ಗಾನವೇರುತಿಹುದು!
ದೀಪವೆಲ್ಲ ಆರುತಿಹುದು!
ಕುರುಡು ನೀಲ ಬೆಳಕಿನಲ್ಲಿ
ಕೊಳ್ಳೊ ಅವಳ ಬಾಹುಗಳಲಿ.
ಒಟ್ಟಿನಲ್ಲಿ ಗುಟ್ಟನಾಡೆ
ಮೊಗವನಿರಿಸೆ ಹೆಗಲ ಕೊಡು
ಬಳ್ಳಿಗೊಂದು ಬಲವ ನೀಡೆ
ಕಟಿಗೆ ಕೈಯ ಇಂಬನಿಡು
ತಾಳದೊಡನೆ ಮೇಳವಿಸುವ
ಎರಡು ಮಧುರ ನುಡಿಯಲಿ
ಜೀವನಗಳ ಜೀವರಸವ
ಅಧರಕಧರ ಕುಡಿಯಲಿ!
ಮುತ್ತಿರುವರೆ ಕತ್ತಲು
ಸೌರಭವಿದೆ ಎತ್ತಲು
ಸುಂದರಿಯರು ಸುತ್ತಲು!
ಒಂದು ರಾತ್ರಿ ಒಮ್ಮೆ ಸೊಕ್ಕಿ
ಶಾಸ್ತ್ರಗಳನ ದೂಡ್ಯೇನ!
ಇಂದು ರಾತ್ರಿ ಬಂದ ಹಾಗೆ
ನನ್ನ ಬಾಳ ಮಾಡ್ಯೇನ!
ಪೃಥಿವಿಯಿದರ ಮಡಿಲನೊಕ್ಕಿ
ಸಾರವನ್ನ ನೋಡ್ಯೇನ!
ಮಿಂಚಿನೊಡನೆ ಮಿಂಚುತೊಮ್ಮೆ
ಕತ್ತಲೆಯನೆ ಕೂಡ್ಯೇನ!

ಕವಿಯೇ ಇದರ ಬಗ್ಗೆ ವಿವರಿಸಿರುವುದು ಹೀಗೆ:

“ಜೀವನಕ್ಕೆ ಎರಡು ಮುಖ
ಒಂದು ಸುಖ ಒಂದು ದುಃಖ
ನಾಳಿನರಿವು ಯಾಕೆ ಸಖಾ
ಇಂದಿಗಿಹುದು ತುಂಬ ಸುಖ
ದೀಪವೆಲ್ಲ ಆರುತಿಹುದು
ನೋಡು ಗಾನವೇರುತಿಹುದು
ಕುರುಡು ನೀಲ ಬೆಳಕಿನಲ್ಲಿ
ಕೊಳ್ಳೊ ನಿನ್ನ ಬಾಹುಗಳಲಿ
ಅಗೊ ಅವಳ…….
– “ಈ ತರದ ಬೊಹೇಮಿಯನ್ ತತ್ವವನ್ನು ಸಾರುತ್ತಾ,
‘ಯಾರೆ ನೀನು?’ ‘ನಾನು ಸ್ಪಾನ್ಯ’
‘ಯಾರೆ ನೀನು?’ ‘ಓಹೋ ಜರ್ಮಾನ್ಯ’
‘ನೀನು ಯಾರೆ?’ ‘ನಾನು ಫ್ರಾಂಚ’
‘ಮತ್ತೆ ನೀನೋ’ ‘ನಾನು ಗ್ರೇಚ’

ಎಂಬ ಪ್ರಶ್ನೋತ್ತರಗಳನ್ನು ಬೇರೆ ಬೇರೆ ರಾಷ್ಟ್ರದ, ನಾಟ್ಯ ಮಂದಿರಕ್ಕೆ ಬಂದಿದ್ದ ಸುಂದರಿಯರಿಂದ ಪಡೆಯುತ್ತಾ ಅರೆ ಮತ್ತನಾಗಿ ಕವಿಯು ಮುಂದೆ ಹೋಗುತ್ತಾನೆ. ಆದರೆ ಅರ್ಧದಲ್ಲೇ ನಿಲ್ಲಿಸಿದ್ದೇನೆ. ಈ ಕವಿತೆಯನ್ನು ಅರ್ಥಮಾಡಿಕೊಳ್ಳುವವರು ನಮ್ಮಲ್ಲೆಷ್ಟು ಮಂದಿ? ಲೋರೆನ್‍ಸೋ ಇಲ್ ಮನ್ನೀಫಿಕೊ ಅಂದರೆ Lorenzo the magnificent, Lord of Florence, great Statesman, Poet, Scientist who likes his Florence to be gay…. ಜಾಸ್ ಅಂದರೆ Jazz band; ನಾಟ್ಯದಲ್ಲಿ ‘ದೀಪವೆಲ್ಲ ಆರುತಿಹುದು, ನೋಡು ಗಾನವೇರುತಿಹುದು’ ಎಂಬಲ್ಲಿ tango ನಾಟ್ಯ, ಸ್ಪಾನ್ಯ (Spain)), ಜರ್ಮನ್ಯ (Germany) ಫ್ರಾಂಚ (France), ಗ್ರೇಚ (Greece) ಎಂತಲೂ, ಮತ್ತೂ ಒಂದೆಡೆ ಬರುವ ವೆನೇತ್ಸಿಯದ ಕಡೆದ ಗಾಜು; ಸಾರ್ದೇನಿಯದ ಸುರೆಯ ಮೋಜು ಎಂಬಲ್ಲಿ Venetian cut glass,, (ಬಹಳ ಹೆಸರಾದದ್ದು), Sardenian wine (ಇದೂ ಬಹಳ ಹೆಸರಾದದ್ದು) ಎಂತಲೂ ನಾವು ಓದುಗರಿಗೆ ತಿಳಿಸಬೇಕಾದರೆ ಎಷ್ಟು ಪುಟಗಳ ಟಿಪ್ಪಣಿಯನ್ನು ಕೊಡಬೇಕು…? ಇದನ್ನೆಲ್ಲಾ ಆಲೋಚಿಸುವಾಗ, ನಮ್ಮ ಜನತೆಗೆ ಈ ತರದ ಕವನಗಳನ್ನು ಬರೆದು ಅರ್ಪಿಸುವುದಕ್ಕೆ ಶ್ರಮಪಡುವುದು ಸಾರ್ಥಕವೇ ಅಂತ ಸಂಶಯ ಬರುತ್ತದೆ.”

ಮುಂದುವರಿದು, “ಹೊಸಗನ್ನಡದ ಸಾಹಿತ್ಯವು ಆರಂಭವಾದ ಮೇಲೆ, ಬಹುಶಃ ನಮ್ಮ ಸಾಹಿತಿಗಳಲ್ಲಿ ಯುರೋಪಿಗೆ ಬಂದು ಹೋದವರು ಏಳೆಂಟು ಮಂದಿಯೇನೋ, ಅವರಲ್ಲಿ ಕವಿಗಳು ಅನ್ನಿಸಿಕೊಳ್ಳುವವರು ನೀವು ಮತ್ತು ಆ ಶಬ್ದವನ್ನು ಬಹಳ ವಿಸ್ತರಿಸಿಕೊಂಡರೆ ನಾನು. ನಾವಿಬ್ಬರು ಕನ್ನಡ ನಾಡಿಗೆ ಯಾವ ಹೊಸ ಮುಡಿಪನ್ನು ಒಪ್ಪಿಸಬೇಕು? ವಿಲಾಯತಿಯ ಈ ಮೂರು ನಾಲ್ಕು ವರ್ಷದ ಪ್ರವಾಸವು ನಮ್ಮ ಜೀವನದಲ್ಲಿ ಹೇಗೆ ಮಾರ್ಪಾಟವನ್ನು ತಂದು ಹಾಕಿದೆಯೋ ಹಾಗೆಯೇ ಕಲೆಯಲ್ಲಿಯೂ ತಂದು ಹಾಕುವಷ್ಟು ಶಕ್ತಿಯುಳ್ಳದ್ದಾಗಿಲ್ಲವೇ? ನಮ್ಮ ಕವನಗಳಲ್ಲಿ ಇಪ್ಪತ್ತನೆಯ ಶತಮಾನದ ವಿಲಾಯತಿಯ ಅನುಭವದ ನಿರೂಪಣೆಯಾಗಬೇಕೋ ಬೇಡವೋ?” ಎಂದು ತಮ್ಮ ಅನುಮಾನವನ್ನು ಹೇಳಿಕೊಂಡಿದ್ದರು.

ಗೋಕಾಕರು ‘ನಾಟ್ಯೋತ್ಸವ’ ಕವನವನ್ನೋದಿ ಬಹಳ ಸಂತೋಷಟ್ಟು ಉತ್ತರಿಸಿದರು: “ನಿಮ್ಮ ನಾಟ್ಯಗೀತೆ ಓದಿ ನಾನು ಹಿಗ್ಗಿದೆ. ನಿಮ್ಮಿಂದ ಬರಬೇಕಾದುದು. ಇದರಲ್ಲಿ ಎಂತಹ ಹೊಸತನ! ಇಂಥ ಕವನಗಳನ್ನು ನೀವಲ್ಲದೆ ನಮ್ಮ ಪ್ರಾಂತದಲ್ಲಿ ಮತ್ತಾರೂ ಬರೆಯಲಾರರು. ಯುರೋಪಿಗೆ ಬಂದ ನಾನು ಸಹ ಬರೆಯಲಾರೆ. ಏಕೆಂದರೆ ಜೀವನವನ್ನು ನಿರೀಕ್ಷಿಸುವ ನನ್ನ ದೃಷ್ಟಿಯೇ ಬೇರೆಯಾಗಿದೆ. ನೀವು ಇಂಥ ನೂರಾರು ಕವಿತೆಗಳನ್ನು ಸಂಕೋಚವಿಲ್ಲದೆ ಬರೆಯಬೇಕು. ಜನರಿಗೆ ಅವು ಅರ್ಥವಾಗುವವೋ ಇಲ್ಲವೋ ಎಂಬ ವಿಚಾರವನ್ನು ನೀವು ಬಿಟ್ಟುಬಿಡಿರಿ. ತನಗೆ ರುಚಿಸಿದ್ದರೆ ಪೂರ್ವಾಪರವನ್ನೆಲ್ಲ ಜನತೆಯು ಎಷ್ಟು ಕಷ್ಟಪಟ್ಟಾದರೂ ತಿಳಿದುಕೊಳ್ಳುತ್ತದೆ.”

ಪಾಶ್ಚಾತ್ಯ ಆಧುನಿಕ ನಾಗರಿಕ ಸ್ವಚ್ಛಂದ ಬದುಕಿನ ಒಂದು ಮಾದರಿಯನ್ನು ಈ ಸುರಾಪಾನ ಸಹಿತ ವಿವಿಧ ದೇಶಗಳಿಂದ ಕರೆಸಿರುವ ಕ್ಯಾಬರೆ ನರ್ತಕಿಯರ ನೃತ್ಯವಿರುವ ನಾಟ್ಯಮಂದಿರದಲ್ಲಿ ಕಾಣಬಹುದು. ಅಲ್ಲಿ ಮಾದಕ ಸುಂದರಿಯರು ಗಂಡುಗಳಿಗಾಗಿ ಕಾದಾಟ ನಡೆಸುವ ಸನ್ನಿವೇಶ ಭಾರತೀಯ ನವೋದಯ ಕಾವ್ಯದಲ್ಲಿ ಕಲ್ಪಿಸಿಕೊಳ್ಳಲಾಗದ ಸನ್ನಿವೇಶವಾಗಿದೆ.

ಅವರು ತಮ್ಮ ಪಿಎಚ್.ಡಿ. ಥೀಸಿಸನ್ನು ಇಟಾಲಿಯನ್ ಭಾಷೆಯಲ್ಲಿಯೇ ಬರೆಯಬೇಕಾಗಿತ್ತು. ಮಿಲಾನಿನಲ್ಲಿ ಪಿಎಚ್.ಡಿ. ಅಧ್ಯಯನ ನಡೆಸಿ, ತಮ್ಮ ಪ್ರಬಂಧವನ್ನು ಇಟಾಲಿಯನ್ ಭಾಷೆಯಲ್ಲಿಯೇ ಬರೆದು ಪೂರೈಸಿದ್ದರು.

‘ನಾಟ್ಯೋತ್ಸವ’ ಕವಿತೆಯ ಲಯ ಪಾಶ್ಚಾತ್ಯ ನೃತ್ಯದ ಲಯಕ್ಕೆ ಸರಿಯಾಗಿ ಇದೆ. ಗಂಡು ಹೆಣ್ಣು ಕೈಕೈ ಹಿಡಿದುಕೊಂಡು ಮಾಡುವ ನೃತ್ಯ ವೇಗ ಪಡೆದುಕೊಂಡಂತೆ ಕವಿತೆಯ ಲಯ ಕೊನೆ ಕೊನೆಗೆ ಹೆಚ್ಚು ತೀವ್ರವಾಗುತ್ತದೆ. ಪೇಜಾವರ ಅವರು ಉತ್ಸಾಹ ರಗಳೆಯ ಮಾತ್ರೆಗಳನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ವೇಗವನ್ನು ಸಾಧಿಸಿ, ಕವಿತೆಗೆ ಅಭಿನಯ ಗುಣವನ್ನು ತಂದಿದ್ದಾರೆ.

ನಾಟ್ಯಮಂದಿರದಲ್ಲಿ ರಾತ್ರಿ ಹೊತ್ತು ನಡೆಯುವ ಈ ಮೋಜಿನ ಗಾನ-ಪಾನ-ನೃತ್ಯ ಗೋಷ್ಠಿಯಲ್ಲಿ ಅರೆಬೆಳಕಿನಲ್ಲಿ, ಅರೆನಗ್ನ ಸುಂದರಿಯರ ಜತೆಗೆ ನಿರೂಪಕನೂ ನರ್ತಿಸುತ್ತಾನೆ. ಅಧರಕ್ಕೆ ಅಧರ ಸೇರಿಸುತ್ತಾನೆ, ನರ್ತಕಿಯನ್ನು ತನ್ನ ಬಾಹುಗಳಲ್ಲಿ ಹಿಡಿದು ಆಸರೆ ನೀಡುತ್ತಾನೆ. ಕೊನೆಗೆ ‘ಕತ್ತಲೆಯನೆ ಕೂಡುತ್ತಾನೆ.’ ಒಮ್ಮೆ ಸೊಕ್ಕಿ ಪಡೆದ ಈ ಹೊಸ ಅನುಭವವು ಅವನ ಪಾರಂಪರಿಕ ಮೌಲ್ಯಗಳಿಂದ ನಿರ್ಬಂಧಿತವಾದ ಹಿಂದಿನ ಬದುಕಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಹಳೆಯ ಬದುಕಿನ ಶಾಸ್ತ್ರಗಳನ್ನು ಅತ್ತ ಸರಿಸದೆ ಈ ಅನುಭವವನ್ನು ಪಡೆಯುವುದು ಸಾಧ್ಯವಿಲ್ಲ. ಈ ಒಂದು ದಿನದ ಅನುಭವವನ್ನು ಮತ್ತೆ ಪಡೆಯಲು ನಿರ್ಧರಿಸಿ, ಹೊಸ ಬದುಕನ್ನು ಬಾಳಲು ನಿರ್ಧರಿಸುತ್ತಾನೆ.

ನಾಟ್ಯೋತ್ಸವ ಕವನದ ಕೊನೆಯಲ್ಲಿ ಕವಿ – “ಒಂದು ರಾತ್ರಿ ಒಮ್ಮೆ ಸೊಕ್ಕಿ ಶಾಸ್ತ್ರಗಳನ ದೂಡ್ಯೇನ! ಇಂದು ರಾತ್ರಿ ಬಂದ ಹಾಗೆ ನನ್ನ ಬಾಳ ಮಾಡ್ಯೇನ!… ಮಿಂಚಿನೊಡನೆ ಮಿಂಚುತೊಮ್ಮೆ ಕತ್ತಲೆಯನು ಕೂಡ್ಯೇನ” – ಎಂದು ನವೋದಯ ಕವಿಗಳು ಊಹಿಸಲಾರದ ಹೊಸ ಪ್ರಜ್ಞೆಯನ್ನು ವ್ಯಕ್ತಪಡಿಸಿದ್ದಾರೆ.

ಕೊನೆಯ ಕವಿತೆ : ವರುಣ

ಸದಾಶಿವರಾಯರು ಅದರ ನಂತರ ಅದೇ ಮಾದರಿಯಲ್ಲಿ ಇನ್ನೊಂದು ಮಹತ್ವದ ಕವಿತೆಯನ್ನು ಬರೆದರು. ಅದು ಅವರ ಪ್ರಸಿದ್ಧ ದೀರ್ಘ ಕವನ ‘ವರುಣ’.

ವರುಣ

ಇಂದು ಸಂಧ್ಯೆ ಎನ್ನ ಕೊಠಡಿ
ಗುಪ್ತ ಸಂಕಟಗಳ ದುರ್ಗ!
ಮನೆಯ ಮೆಟ್ಟಲಿಳಿಯೆ ಮಹಾ
ನಗರವಿದರ ಮಾಯಮಾರ್ಗ !
ಆಕಾಶವು ಮುಸುಕಿದ್ದರು
ಬಿಸಿಲ ರಂಗು ಮಿರುಗುತಿಹುದು
ಕುಳಿರ್ಗಾಳಿ ಬೀಸಿದ್ದರು
ಬೆಪ್ಪಿನೊಪ್ಪ ಸಂಜೆಗಿಹುದು
ಬಾನ ಮೂಲೆಯಿಂದ ತಾರೆ
ಯೊಂದು ಕಣ್ಣ ಮಿಟುಕುತಿಹುದು
ದಾರಿಯುದ್ಧ ಸಾಲುದೀಪ
ಮಿಣುಕಿ ಕೆನಕಿ ಕರೆಯುತಿಹುದು
ನಾಲ್ಕು ಕಡೆಗೆ ನೇಹನಗೆಗೆ
ಎನ್ನ ಹೃದಯವರಳಿ ಮನಸು
ಮಿಡುಕ ಮುಸುಕ ಹರಿದಿದೆ;
ಬೇಸರಿಕೆಯ ಕೋಟೆಯಿಂದ
ಯೋಚನೆಗಳ ಬಾಗಿಲೊಡೆದು
ನಸುಕಿನೊಡನೆ ಬೆರೆತಿದೆ;
ಕುದಿವ ಜೀವ ಕೊಚ್ಚಿ ಹರಿವ
ಜನೋದಧಿಯ ಊರ್ಮಿಯೊಡನೆ
ಉಕ್ಕುತೊಂದು ವೀಚಿಯಾಗೆ
ನನ್ನ ಕರೆದಿದೆ!
ನೂರು ಮಾರು ನಡೆಯಲಿಲ್ಲ
ಸ್ವಾನುಭವದಿ ಬಾನನರಿತೆ!
ದಿವಾನಿಶೆಯ ಸಂಗಮದಲಿ
ಕುಣಿವ ದಿಕ್ತಟಾಕದಲ್ಲಿ
ಅಪ್ಸರೆಯರ ಅಮರ ಗಾನ
ಕೇಳಿತೆಂದು ಭ್ರಮಿಸಿಕೊಂಡ
ಧ್ವನಿಯು ಬರಿ ಮರೀಚಿಕೆ!
ಬೀಸುತಿದ್ದ ಗಾಳಿಯಲ್ಲಿ
ಕೇಶಕಿಂತ ಸೂಕ್ಷ್ಮವಾದ
ನೀರ ಕಣವು ಸೇರಿಕೊಂಡ
ಸುವ್ವಿಸೇಸೆಯಲ್ಲಿ ಕಂಡೆ
ಸೀರುಮಳೆಯ ಸೂಚಿಕೆ!
ಯಾವ ಮುಗಿಲ ಕೋವಿಯಲ್ಲೋ
ಸಿದ್ಧವಾದ ನೀರು ಬೆಳ್ಳಿ
ಸೂಜಿಯಂತೆ ಕೆಳಗೆ ಕರೆದು
ಗಾಳಿಹೊಯ್ದ ಕಡೆಗೆ ಹರಿದು
ಮೌಕ್ತಿಕಗಳ ತುಂತುರಂತೆ
ಥಳಥಳಿಸುವ ಮಣಿಗಳಾಗಿ
ನನ್ನ ಮುಖವ ಮುತ್ತಿಕೊಂಡು
ಉಸಿರಿನೊಡನೆ ಸೇರಿತು!
ಕಟ್ಟ ಬೇಸಗೆಯಲಿ ಬೆಂದ
ತಪ್ತವಾದ ಮೃತ್ತಿಗೆಯಲಿ
ಮೊದಲ ಹನಿಯ ಸಿಂಚನಕ್ಕೆ
ಉದ್ಭವಿಸಿದ ನೆಲದ ಗಂಧ
ಮಲರಿನಲ್ಲಿ ಮಲೆತುಕೊಂಡು
ಮಳೆಗಾಲವು ಇಳೆಗಿಳಿದಿಹ
ಮೊದಲ ಸುದ್ದಿ ಸಾರಿತು !
ಮಳೆಗಾಲದ ಮೊದಲ ಹನಿಯು!
ಎನ್ನ ಅಧರಕಮೃತ ಝರಿಯು!
ಆಸರಿನಲಿ ಆಸೆಯಲ್ಲಿ
ಹೀರಿ ಹೀರಿ ನನ್ನ ನಾಡಿ
ನರಗಳೆಲ್ಲ ಉಬ್ಬಿಕೊಂಡು
ಮತ್ತನಾಗಿ ಸುತ್ತಲೆಲ್ಲ
ಹೊಸ ಬೆಳಕಿನ ಹೊಸ ಬಾಳಿನ
ಭೂಷಣಗಳ ಸೂಚನೆಗಳನು
ಕೊನರುತಿಹುದು ಕಂಡೆನು.
ಶಬರರಟ್ಟಹಾಸದಿದುರು
ಕರಿಯ ಗಜದ ಗುಂಪಿನಂತೆ
ಅಂಬರದಲಿ ಕಾಳಮೇಘ-
ವಳಿಯ ಚಲನವಲನ ಕಂಡು
ಇಂದು ರಾತ್ರಿ ಚೈತನ್ಯದ
ವೀರಕವಚ ಧರಿಸಿ ಧಾತ್ರಿ
ನಡೆದಿರುವಳು ಸಡಗರದಲಿ
ಘೋಷಯಾತ್ರೆಗೆಂದೆನು.
ನಸುಕು ನಿಶೆಯ ಮರೆಗೆ ಜಾರೆ
ಪುಡಿಹನಿಗಳು ಪುಷ್ಪವಾಗಿ
ತಿರಿತಿರಿತ್ತಿರಿತ್ತಿರೆಂದು
ನಲಿದು ನಗುತ ಇಳಿದು ಬಾರೆ,
ಸರಿಗೆಯಲಿ ತೂಗುತಿರುವ
ಸಾಲುದೀಪ ಗಾಳಿಯಲ್ಲಿ
ರಬ್ಬರಂತೆ ಮಣಿವ ಕುಣಿವ
ಕಿರಣ ಕೋಟಿಗಳನು ನೀರ
ಧಾರೆಯಲ್ಲಿ ಮೀಯಿಸುತಿರೆ
ಜೀವನದಿಯ ದಿನಚರಿಯಲಿ
ಜೀವನವನು ಚುಂಬಿಸುತಿಹ
ಯಾವ ಬಾನ ಬಿಂಬಿಸದಿಹ
ಮಾರ್ಗಗಳಸ್ಪಾಳ್ವಿನಲ್ಲಿ
ಅಲ್ಲಿ ಇಲ್ಲಿ ನೂರು ಸಣ್ಣ
ನೀರದರ್ಪಣದಲಿ ಇಂದು
ಇಂದ್ರಚಾಪದೆಲ್ಲ ಬಣ್ಣ
ಕೂಡಿ ಮಿರುಗಿ ಕರಗುತಿದೆ,
ಅಜ್ಞಾತ ಶಕ್ತಿಯೊಂದು
ನಡಿಗೆಗೊಂದು ಅವಸರವನು
ಬಿತ್ತಿ ನನ್ನನಾವ ಕಡೆಗೊ
ಸೆಳೆದುಕೊಂಡು ಹೋಗುತಿತ್ತು.
ವಿದ್ಯುತ್ತಿನ ಹಗ್ಗವನ್ನು
ದಿಕ್ಕಿನಿಂದ ದಿಕ್ಕಿಗೆಳೆದು
ಮೃದುಮೃದಂಗ ಸ್ವರಕೆ ಕಡಲ
ದೊಂಬರನ್ನು ಬಾಂಗೆ ಸೆಳೆದು
ಕಾಣದ ಕೈ ಅಂಬರದಲಿ
ಚುಕ್ಕಿಗಳನು ಹೆಕ್ಕುತ
ಕರಿಬೋಗಸೆಯಲಿಕ್ಕುತ
ಮುಗಿಲಿನಂಗಳದಲಿ ಈಗ
ಯಾವ ಆಟ ಹೂಡಿದೆ?
ಮೇದಿನಿಯ ಒಯ್ಯಾರದೊನವು
ಅರೆನಿಮಿಷದಲಿ ಮಾಯವಾಯ್ತು!
ಮುಖದ ಮೇಲೆ ರೌದ್ರಮುದ್ರೆ
ಮೂಡಿ ಭಾವ ಬದಲಿತು!
ಬರ್ದಿಲದಲಿ ಜಲದ ಕೊಳಗ
ಸ್ಥಾನದಿಂದ ಕದಲಿತೋ!
ನೀರು ಕಟ್ಟಿ ನೀರು ಸುರಿಯೆ
ಮತ್ತೆ ಭಗೀರಥ ಶಿರದಿ
ಮೇಲೆ ಮುಗಿಲಗಂಗೆ ಹರಿದು
ಬರುವಳೇನೊ ಎಂದುಕೊಂಡು
ಕುತೂಹಲದಿ ನೋಡಿದೆ!
ಇಳಿಯಲೊಂದು ನವಸೆಳೆ
ಪ್ರಳಯದಂತೆ ಕೋಲ್ಮಳೆ!
ದೇವಲೋಕ ದ್ವಾರದಲ್ಲಿ
ಮೇಘದುರ್ಗದರೆಮರೆಯಲಿ
ಇಂದ್ರಪದವಿಯೊಡೆತನಕ್ಕೆ
ಇಂದು ರಾತ್ರಿ ಮರಳಿ ಸಿಡಿದ
ಸುರಾಸುರರ ಸಮರದಲ್ಲಿ
ಇಂದ್ರಾಯುಧ ಚಂದ್ರಾಯುಧ
ಗಗನದಲ್ಲಿ ಹೊಂಚಿ ಮಿಂಚಿ
ಪ್ರಳಯ ವರ್ಷ ಧಾರೆಗೊಂದು
ಪ್ರಭೆಯ ಹಿನ್ನೆಲೆಯನು ಕಟ್ಟಿ
ಕರಿಯ ಬಾನ ಬೆಳಗಿತೋ !
ನರಕನದಿಯ ಕಡವಿನಲ್ಲಿ
ಕಾವಲಿದ್ದ ಮಹಾಶ್ವಾನ
ಚರ್ಬರನಿಗೆ ಯಾವ ಅನಿ-
ಚ್ಛಿತನ ನೆರಳ ಸುಳಿವು ಕಂಡೊ
ಕೋಪ ಕೆರಳಿ ಮೂರು ಕೊರಳ
ನರಗಳುಬ್ಬಿ ಶಬ್ದಕೊಬ್ಬಿ
ನರರಿಯದ ಒಂದು ಬೊಗಳು
ಪಾತಾಳದ ಜಠರದಿಂದ
ಭೂತಳಕ್ಕೆ ಸೀಳಿ ಬಂದು
ಎಂಟು ದಿಕ್ಕನಲೆದು ಕೊನೆಗೆ
ನೀರಿನೊಡನೆ ಸಮರ ಹೂಡಿ
ಮಿಂಚಿನೊಡನೆ ಕಲೆತು ಕೂಡಿ
ಸಿಡಿಲಿನಂತೆ ಹೊಡೆಯಿತೊ!
ನಾಗಲೋಕದತ್ತಣಿಂದ
ನಾಗಿಣಿಯರ ಹುತ್ತದಿಂದ
ಬುಸ್ಸೆಂದು ಹಿಸ್ಸೆಂದು
ಕೋಟಿಯುಸಿರು ಏರಿ ಬಂದು
ಬಾನನಳೆವ ಸಾಹಸದಲಿ
ಮುಗಿಲಹತ್ತಿ ದಿಕ್ಕ ಸುತ್ತಿ
ಯೌವನದುನ್ಮಾದದಲ್ಲಿ
ಮಳೆಯ ಕೂಡಿ ಕ್ರೀಡಿಸುತ್ತ
ಸೃಷ್ಟಿಯನ್ನು ಪೀಡಿಸುತ್ತ
ಸುಳಿವ ಸುಂಟರಾಯಿತೊ!
ಚಪ್ಪರಿಸುವ ಚಬುಕಧ್ವನಿಯ-
ನೆದುರಿಪ ಸಾಹಸದಲೆರಡು
ಕಾಲಲೊಮ್ಮೆ ನಿಂತು ಕೊನೆಗೆ
ಚದರುತಿರುವ ಹಯದ ಹಿಂಡು;
ಮೇವ ಮೊಲದ ಹೊಲದ ಮೇಲೆ
ಕೋವಿಸದ್ದು ಸಿಡಿದು ಬೀಳೆ
ಮರೆಯ ನೂರು ಬಿಲಗಳಿಂದ
ಹೊರಗಿಣುಕುವ ಮೊಲದ ಪುಂಡು;
ದಾರಿಯೆಲ್ಲ ನೀರಾದರು
ನಡೆವೆವೆಂಬ ನಿರ್ಧರದಲಿ
ಹೊರಟು ಬಾನಿನಿಂದ ನೀರಿ-
ನೊನಕೆ ಇಳಿಯುವದನು ಅರಿತು
ಇದರ ಜೋಗಿನಲ್ಲಿ ಎದೆಯ
ಕೆಚ್ಚು ಕರಗಿ ಕೊಚ್ಚಿ ಹೋಗಿ
ಕಂಡ ಮನೆಯ ಮಾಡಿನಡಿಯ
ತಂಗಿನಲ್ಲಿ ಕಾಯ್ವುದೊಂದು
ಬೇಸರದಲಿ ಬಳಲಿಕೆಯಲಿ
ತಪತಪಿಸುವ ಜನದ ದಂಡು
ಯಾವ ಚಿತೆಯಲುರಿಯುವೆನ್ನ
ಆತ್ಮವನ್ನು ತಣಿಸಲೆಂದೊ,
ಬಾಳ ಭಾರ್ಗವಿಯಲಿ ಜಲವು
ಸತತ ಹೊಮ್ಮಿ ಹರಿಯಲೆಂದೊ,
ಯಾವ ಧ್ವನಿಯ ಗುಪ್ತಕರೆಗೆ
ವಿಧಿಯ ಸೂಚನೆಯಿದೊ ಎಂದೊ,
ನೇರವಾಗಿ ವಾರಿಯೊಡನೆ
ದಾರಿನಡೆದೆ, ನಡೆದು ನಡೆದು
ಕೊನೆಗೆಯೊಂದು ನಿಮಿಷದಲ್ಲಿ
ಮೇಲಿನಿಂದ ಕರೆದು ಕರೆದು
ನೀರು ಕೂಡ ಉಬ್ಬಸದಲಿ
ತೊದಲುತಿಹುದ ಕಂಡೆ: ಬಳಿಕ
ಬೇಸರದಲೊ ಬೇನೆಯಲ್ಲೊ
ಸೂಕ್ಷ್ಮವಾದ ಹೊಗೆಯ ಹಾಗೆ
ಬುವಿಯ ಬಸಿರ ಬಗೆಕೊಂಡು
ಯಾವ ತಿದಿಯ ಬಲದಲೆದ್ದೊ
ಕೆಮ್ಮಿ ಕೆಮ್ಮಿ ಬುಗ್ಗೆಯಾಗಿ
ಚಿಮ್ಮುತಿಹುದು ಕಂಡುಕೊಂಡೆ

ಬಾಳಶರಧಿ ಮಥನದಲ್ಲಿ
ನಗರಮೇರುವನ್ನು ಸುತ್ತಿ
ಬಾಳುವೆಗಳ ಕಡೆದು ಕಡೆದು
ದಿನದ ಕೊನೆಗೆ ರಜನಿಯಲ್ಲಿ
ಅಸುವ ತೊರೆದ ವಾಸುಕಿ ಈ
ಜನವಿಹೀನವಾದ ಕಾಳ
ವೀಥಿ! ಇದರ ಉದರದಲ್ಲಿ
ಅಲ್ಲಿ ಇಲ್ಲಿ ಸಿಡಿದು ಕಾರ್ವ
ಕೆಂಪು ಬಿಳಿದು ನೀರ ನೊರೆಯು
ವಿಷದ ಮೊರೆಯು ಗುಗ್ಗುಳಿಪುದು.
ಒಂಟಿಯಾಗಿ ಒದ್ದೆಯಾಗಿ
ನೀರಹೊಯ್ಲಿನೇಕನಾದ
ನೀರವದಲಿ ನಡೆಯುವೆನ್ನ
ಹೆಜ್ಜೆಯಿದಕೊ ಮುಗ್ಗರಿಸುತ
ಕುಗ್ಗುತಿಹುದು. ಆದರೆನ್ನ
ಮನದ ಪಕ್ಷಿ ಗರುಡವೇಗ-
ದಿಂದ ವಿಶ್ವವನ್ನು ಅಲೆದು
ಮೋದದಿಂದ ಹಿಗ್ಗಿರುವುದು
ಹೃದಯಗುಡಿಯ ಸೊಡರಿನಲ್ಲಿ
ಪ್ರಭಾಕಿರಣ ಪ್ರಜ್ವಲಿಪುದು.
ಉರ್ವಶಿಯರ ನಾಟ್ಯದಂತೆ
ಎನ್ನ ಜೀವ ನಲಿಯುತಿಹುದು.
ಕಿರುನೆನಪಿನ ಕೀಟ ಮಾತ್ರ
ನಲ್ಗನಸಿನೀ ಚೆಲ್ವನಳಿಸೆ
ಸೂಜಿಮುಖದ ಮುಳ್ಳಿನಿಂದ
ಮೆಲ್ಲನೆನ್ನ ಕೀರುತಿಹುದು :-
ಏರ್ಧೂಳಿಗೆ ಬೇರ್ಗಾಳಿಗೆ
ನಿನ್ನ ಕಿಟಕಿ ತೆರೆದಿದೊ?
ಕಾರ್ಮಳೆಯಲಿ ನೀರ್ಗುದ್ದುತ
ಕಿಟಕಿಯೊಳಗೆ ಸುರಿದಿದೊ?

ಈ ಕವಿತೆಯನ್ನು ಒಂದು ಸರಳ ಓದಿಗೆ ಒಳಪಡಿಸಿದಾಗ ಈ ಅರ್ಥ ಸಿಗುವುದು: “ಕವಿಯು ಒಂದು ಸಂಜೆ ನಗರ ಸಂಚಾರಕ್ಕೆ ಹೊರಡುತ್ತಾನೆ. ಐದು ನಿಮಿಷದಲ್ಲಿ ಅನಿರೀಕ್ಷಿತವಾಗಿ ಮಳೆಯು ಆರಂಭವಾಗುತ್ತದೆ. ಇದು ಮಳೆಗಾಲದ ಆಗಮನವನ್ನು ಸೂಚಿಸುವ ಮೊದಲ ಮಳೆ. ಕವಿಯು ನೀರ್ಮಳೆಯಲ್ಲಿ, ಮಳೆಯಲ್ಲಿ ಯಾವುದೊ ಅವ್ಯಕ್ತ ಶಕ್ತಿಯಿಂದ ಆಕರ್ಷಿತನಾಗಿ ನಡೆಯುತ್ತಾನೆ” (ಇದು ಸ್ವತಃ ಪೇಜಾವರ ಸದಾಶಿವರಾಯರು ಈ ಕವಿತೆಯ ಸಂದರ್ಭವನ್ನು ಗೋಕಾಕರಿಗೆ ಪತ್ರದಲ್ಲಿ ಬರೆದಿರುವ ಮಾತುಗಳು).

ನಮ್ಮ ಗಮನವನ್ನು ಸೆಳೆಯುವ ಇನ್ನು ಕೆಲವು ವಿಚಾರಗಳು ಹೀಗಿವೆ: ಇದರಲ್ಲಿ ‘ನಾಟ್ಯೋತ್ಸವ’ದ ನಂತರದ ಅನುಭವ ದಾಖಲಾಗಿದೆ ಎಂದು ತಿಳಿಯಬಹುದು.

ನವೋದಯದ ಕವಿಗಳಿಗೆ ಸಂಸಾರ ಮತ್ತು ಮನೆ ಇದ್ದರೆ ಈ ಕವಿತೆಯ ನಿರೂಪಕ (ನಿರೂಪಕನನ್ನು ‘ಕವಿ’ ಎಂದೇ ಪೇಜಾವರ ಸದಾಶಿವರಾಯರು ಹೇಳುತ್ತಾರೆ) ‘ಕೊಠಡಿ’ಯಲ್ಲಿ ಏಕಾಂಗಿಯಾಗಿದ್ದಾನೆ. ಅವನಿರುವುದು ಪ್ರಕೃತಿಯ ಮಡಿಲಿನಲ್ಲಿ ಅಲ್ಲ – ‘ಗುಪ್ತ ಸಂಕಟಗಳ ದುರ್ಗ’ದಲ್ಲಿ (ಕಾಫ್ಕಾನ ಕಾದಂಬರಿಯಲ್ಲಿ ಬರುವಂತಹ ದುರ್ಗದಲ್ಲಿ ಎನ್ನಬಹುದೇನೋ). ಈ ಸನ್ನಿವೇಶವೇ ನವ್ಯ ನಾಯಕನ ಅನಾಥಪ್ರಜ್ಞೆಯನ್ನು ಸೂಚಿಸುವುದು ಗಮನಿಸಬೇಕಾದ ವಿಷಯ.

ಪಂಜೆಯವರ ‘ತೆಂಕಣ ಗಾಳಿಯಾಟ’ ಕವನದಲ್ಲಿಯೂ ದಕ್ಷಿಣ ಕನ್ನಡದ ಬಿರುಗಾಳಿ ಮಳೆಯ ವರ್ಣನೆಯಿದೆ. ಆದರೆ ಕವಿತೆಯೊಳಗೆ ಕವಿಯಿಲ್ಲ. ‘ವರುಣ’ ಕವಿತೆಯಲ್ಲಿ ಪ್ರಕೃತಿಯ ಆಟವನ್ನು ನೋಡುವ ಕವಿಯಿದ್ದಾನೆ; ಅವನು ಆಧುನಿಕ ಪ್ರಜ್ಞೆಯಿಂದ ಪುರಾಣವನ್ನು ಅವಲೋಕಿಸುವವನೂ ಆಗಿದ್ದಾನೆ. ಉದಾಹರಣೆಗೆ –

ನೀರು ಕಟ್ಟಿ ನೀರು ಸುರಿಯೆ!
ಮತ್ತೆ ಭಗೀರಥನ ಶಿರದ
ಮೇಲೆ ಮುಗಿಲಗಂಗೆ ಹರಿದು
ಬರುವಳೇನೊ ಎಂದುಕೊಂಡು
ಕುತೂಹಲದಿ ನೋಡಿದೆ!

ಈ ಕವಿ ಸ್ವತಃ ಇಂತಹ ಪುರಾಣ ಕಥೆಗಳನ್ನು ರೂಪಕವಾಗಿ ಬಳಸುತ್ತಾರೆ. ಉದಾಹರಣೆಗೆ, ಗುಡುಗು ಸಿಡಿಲಿನ ಅಬ್ಬರವನ್ನು ಇಂದ್ರ ಪದವಿಗಾಗಿ ಮರಳಿ ಸಿಡಿದ ಸುರಾಸುರರ ಸಮರ, ಆಗ ಪ್ರಯೋಗಿಸಿದ ಇಂದ್ರಾಯುಧ ಚಂದ್ರಾಯುಧಗಳು ಗಗನದಲ್ಲಿ ಮಿಂಚುತ್ತಿವೆ ಎಂದು ವರ್ಣಿಸುತ್ತಾರೆ. (ಯಕ್ಷಗಾನ ಪ್ರೇಮಿಯಾದ ಪೇಜಾವರರಿಗೆ ಮಾತ್ರ ಈ ರೂಪಕ ಹೊಳೆಯಬಹುದು!). ಫಕ್ಕನೆ ಪಾಶ್ಚಾತ್ಯ ಪುರಾಣದಿಂದ ಒಂದು ರೂಪಕವನ್ನು ಎತ್ತಿಕೊಳ್ಳುತ್ತಾರೆ:

ನರಕನದಿಯ ಕಡವಿನಲ್ಲಿ / ಕಾವಲಿದ್ದ ಮಹಾಶ್ವಾನ / ಚರ್ಬರನಿಗೆ ಯಾವ ಅನಿ / ಚ್ಚಿತನ ನೆರಳ ಸುಳಿವು ಕಂಡೊ / ಕೋಪ ಕೆರಳಿ ಮೂರು ಕೊರಳ / ನರಗಳುಬ್ಬಿ ಶಬ್ದ ಕೊಬ್ಬಿ / ನರರರಿಯದ ಒಂದು ಬೊಗಳು / ಪಾತಾಳದ ಜಠರದಿಂದ / ಭೂತಳಕ್ಕೆ ಸೀಳಿ ಬಂದು / ಎಂಟು ದಿಕ್ಕಿನಲೆದು ಕೊನೆಗೆ / ನೀರಿನೊಡನೆ ಸಮರ ಹೂಡಿ / ಮಿಂಚಿನೊಡನೆ ಕಲೆತು ಕೂಡಿ / ಸಿಡಿಲಿನಂತೆ ಹೊಡೆಯಿತೊ!

ಕೊನೆಗೆ ಈ ವರುಣಾಗಮನವನ್ನು, ಅದರ ಜತೆಗೆ ಬಡಿದ ಗುಡುಗು ಸಿಡಿಲು ಮಿಂಚುಗಳನ್ನು, ಆ ನಂತರ ಪರಿವರ್ತನೆಗೊಂದು ಒದ್ದೆಯಾಗಿ ನಿಶ್ಶಬ್ದವಾದ ನಗರವನ್ನು ಒಂದು ತಲ್ಲಣಗೊಳಿಸುವ ಅನುಭವ ಮತ್ತು ಬದುಕಿಗೆ ಅದು ನೀಡುವ ನೆಗೆತವನ್ನು ಸೂಚಿಸುವಂತೆ ಒಂದು ಪುರಾಣದ – ಸಮುದ್ರಮಥನದ – ರೂಪಕವನ್ನು ಬಳಸುತ್ತಾರೆ.

‘ಬಾಳಶರಧಿ ಮಥನದಲ್ಲಿ / ನಗರ ಮೇರುವನ್ನು ಸುತ್ತಿ / ಬಾಳುವೆಗಳ ಕಡೆದು ಕಡೆದು / ದಿನದ ಕೊನೆಗೆ ರಜನಿಯಲ್ಲಿ / ಅಸುವ ತೊರೆದ ವಾಸುಕಿ / ಈ ಜನವಿಹೀನವಾದ ಕಾಳ ವೀಥಿ” – ಎನ್ನುತ್ತಾರೆ. ಇಂತಹ ನಿರ್ಜನ ಬೀದಿಯಲ್ಲಿ ಒಂಟಿಯಾಗಿ ಹೊರಬಂದ ಕವಿಯ –

ಹೆಜ್ಜೆಯಿದಕೊ ಮುಗ್ಗರಿಸುತ
ಕುಗ್ಗುತಿಹುದು, ಆದರೆನ್ನ
ಮನದ ಪಕ್ಷಿ ಗರುಡವೇಗ-
ದಿಂದ ವಿಶ್ವವನ್ನು ಅಲೆದು
ಮೋದದಿಂದ ಹಿಗ್ಗಿರುವುದು.

– ಎಂಬಲ್ಲಿ ಕವಿಯ ಆತಂಕವನ್ನು ಮತ್ತು ಹೊಸ ಅನ್ವೇಷಣೆಯ ಖುಷಿಯನ್ನು ಕಾಣಬಹುದು. ಹೀಗೆ ಹೊಸತನವನ್ನು ಆವಾಹಿಸಿಕೊಂಡರೂ, ಕವಿಗೆ ತನ್ನ ಹಳೆಯ ಸಂಪ್ರದಾಯ, ಪರಂಪರೆಗಳ ನೆನಪು ಪೂರ್ತಿ ಬಿಟ್ಟುಹೋಗದೇನೋ, ಹೋಗಬಾರದೇನೋ; ಅಥವಾ ನಿಜವಾಗಿಯೂ ಹೊಸತನದ ಪ್ರವೇಶ ತನ್ನೊಳಗೆ ಆಗಿದೆಯೋ ಇಲ್ಲವೋ – ಎಂಬ ಅನುಮಾನಗಳೂ ಇದೆ:

ಕಿರುನೆನಪಿನ ಕೀಟ ಮಾತ್ರ
ನಲ್ಗನಸಿನೀ ಚೆಲ್ವನಳಿಸೆ
ಸೂಜಿಮುಖದ ಮುಳ್ಳಿನಿಂದ
ಮೆಲ್ಲನೆನ್ನ ಕೀರುತಿಹುದು : –
ಏರ್ದೂಳಿಗೆ ಬೋರ್ಗಾಳಿಗೆ
ನಿನ್ನ ಕಿಟಕಿ ತೆರೆದಿದೊ?
ಕಾರ್ಮಳೆಯಲಿ ನೀರ್ಗುದ್ದುತ
ಕಿಟಕಿಯೊಳಗೆ ಸುರಿದಿದೊ?

“ ‘ವರುಣ’ ಕವನ ಕನ್ನಡದ ಶ್ರೇಷ್ಠತಮ ನೀಳ್ಗವನಗಳಲ್ಲಿ ಅಗ್ರಪಂಕ್ತಿಗೆ ಸೇರುವುದೆಂಬುದರ ಬಗ್ಗೆ ಎಳ್ಳಷ್ಟೂ ಸಂಶಯವಿಲ್ಲ. ಅಲ್ಲದೆ ಯಾವ ಕಾಲದ್ದೇ ಆಗಲಿ, ಯಾವ ಭಾಷೆಯದೇ ಆಗಲಿ ಯಾವ ಉತ್ತಮ ಕವನವನ್ನೂ ಅದು ಸರಿಗಟ್ಟಿ ನಿಲ್ಲಬಹುದು”, ಎಂದು ಗೋಕಾಕರು ಹೇಳಿದ್ದಾರೆ.

ಕೊನೆಯ ಕವಿತೆಯ ಬಗ್ಗೆ ಕೊನೆಯ ಪತ್ರದಲ್ಲಿ

ಪೇಜಾವರ ಸದಾಶಿವರಾಯರು ಗೋಕಾಕರಿಗೆ ಬರೆದ ದಿನಾಂಕವಿಲ್ಲದ ಕೊನೆಯ ಪತ್ರದಲ್ಲಿ ತಮ್ಮ ಹೆಸರಿಡದ (ಈಗ ‘ವರುಣ’ ಎಂಬ ಶೀರ್ಷಿಕೆಯಿದೆ) ಕೊನೆಯ ಕವಿತೆಯ ಬಗ್ಗೆ ಬರೆದಿದ್ದರು. ಪಿಯಟಾಲಿಗ್ಯೂರ್ ಆಸ್ಪತ್ರೆಯ ಹಾಸಿಗೆಯಲ್ಲಿ ಕುಳಿತು ಅವರು ಬರೆದ ಪತ್ರವಿದು. ಪತ್ರದೊಂದಿಗೆ ಮೂರು ನಾಲ್ಕು ಹೊಸ ಕವಿತೆಗಳ ಜತೆಗೆ, ಈ ಕವಿತೆ – ಬಹುಶಃ ‘ಓಡು’ ಎಂಬ ನಾಮಕರಣವಿದ್ದ ಕವಿತೆ – ಇತ್ತು. (ಪೇಜಾವರರು ಈ ಶೀರ್ಷಿಕೆಯನ್ನು ಅಂತಿಮಗೊಳಿಸದೆ ಅದರ ಮುಂದೆ ಪ್ರಶ್ನಾರ್ಥಕ ಚಿಹ್ನೆ ಇಟ್ಟು ಗೋಕಾಕರ ಅಭಿಪ್ರಾಯ ಕೇಳಿದ್ದರು ಅನಿಸುತ್ತದೆ). ಈ ಶೀರ್ಷಿಕೆ ಸರಿಯೆನಿಸದಿದ್ದರೆ ನೀವೇ ಒಂದು ಶೀರ್ಷಿಕೆಯನ್ನು ಸೂಚಿಸಿ ಎಂದು ಪೇಜಾವರ ಬರೆದಿದ್ದರು. ಮುಂದೆ ಗೋಕಾಕರು ಅದಕ್ಕೆ ‘ವರುಣ’ ಎಂಬ ಶೀರ್ಷಿಕೆಯನ್ನು ನೀಡಿದರು. ಈ ಕವಿತೆಯ ಬಗ್ಗೆ ಪೇಜಾವರ ಸದಾಶಿವರಾಯರು ಗೋಕಾಕರಿಗೆ ಬರೆದ ಟಿಪ್ಪಣಿ ಹೀಗಿದೆ:

“ಕವಿಯು ಒಂದು ಸಂಜೆ ನಗರ ಸಂಚಾರಕ್ಕೆ ಹೊರಡುತ್ತಾನೆ. ಐದು ನಿಮಿಷದಲ್ಲಿ ಅನಿರೀಕ್ಷಿತವಾಗಿ ಮಳೆಯು ಆರಂಭವಾಗುತ್ತದೆ. ಇದು ಮಳೆಗಾಲದ ಆಗಮನವನ್ನು ಸೂಚಿಸುವ ಮೊದಲ ಮಳೆ. ಕವಿಯು ನೀರ್ಮಳೆಯಲ್ಲಿ, ಮಳೆಯಲ್ಲಿ ಯಾವುದೊ ಅವ್ಯಕ್ತ ಶಕ್ತಿಯಿಂದ ಆಕರ್ಷಿತನಾಗಿ ನಡೆಯುತ್ತಾನೆ. ಇದಕ್ಕೆ ‘ಓಡು’ ಹೆಸರು ಉಚಿತವಾಗದಿದ್ದರೆ ನನಗೆ ತಿಳಿಸಿರಿ. ಈ ಕವನದ ವಿಷಯ ನಿಮ್ಮ ಅಭಿಪ್ರಾಯವನ್ನು ಬಯಸುತ್ತೇನೆ. ಇದರಲ್ಲಿ ‘ಚಪ್ಪರಿಸುವ ಚಬಕಿನ ಧ್ವನಿ’ ಹೀಗೆ ಮೊದಲಾಗುವ ಚರಣದಿಂದ ‘ತಪತಪಿಸುವ ಜನದ ದಂಡು’ ಎನ್ನುವ ಚರಣದ ತನಕ ಒಂದು ಭಾವನೆಯ ವಿಸ್ತರಣೆಯಿದ್ದರೂ, ಅಷ್ಟೊಂದು ಬಿಗುಪು ಇಲ್ಲವಾಗಿ ನನಗನ್ನಿಸುತ್ತದೆ. ಇದು ಸರಿಯೇ? ಇದು ಸರಣಿಯ ಒಂದು ಗೊಣಸಿನ ಹಾಗೆ ಕವನದಲ್ಲಿ ನಿಂತಿದೆ. ಇದನ್ನು ಪದ್ಯದಿಂದ ಬಿಟ್ಟುಬಿಡುವುದು ಅಥವಾ ಇಟ್ಟುಕೊಳ್ಳುವುದು, ಇದರಲ್ಲಿ ಯಾವುದು ಉಚಿತ ಎನಿಸುತ್ತದೆ?”

9.9.1939 ರಂದು ಗೋಕಾಕರು ಸದಾಶಿವರಾಯರಿಗೆ ಇಂಗ್ಲಿಷಿನಲ್ಲಿ ಈ ಕವಿತೆಯ ಬಗೆಗೆ ತಮ್ಮ ಅಭಿಪ್ರಾಯವನ್ನು ಬರೆದರು. ಆದರೆ ಅದು ತಲುಪುವಷ್ಟರಲ್ಲಿ ಕವಿ ಇಹಲೋಕವನ್ನು ತ್ಯಜಿಸಿದ್ದರು. (ಪತ್ರ ತಲುಪಿದ್ದು 2.11.1939. ಪೇಜಾವರ 18.10.1939 ರಂದು ತೀರಿಕೊಂಡಿದ್ದರು. ಪತ್ರ ಷರಾದೊಂದಿಗೆ ಗೋಕಾಕರಿಗೆ ಹಿಂದಿರುಗಿಸಲ್ಪಟ್ಟಿತು).

“ನೀವು ಕಳುಹಿಸಿಕೊಟ್ಟ ಕವಿತೆಗಳಲ್ಲೆಲ್ಲ ಶ್ರೇಷ್ಠತಮವಾದುದೂ ಬಹಳ ಆಳವಾದುದೂ ಯಾವುದೆಂದರೆ ನೀವು ಬರೆದ ದೀರ್ಘ ಕವಿತೆ, ‘ಓಡುʼ. ಅದನ್ನು ‘ವರುಣನಿಗೆ ಆಹ್ವಾನ’ ಎಂಬ ಹೆಸರಿನಿಂದ ಕರೆಯಬೇಕೆಂದು ನನಗನಿಸುತ್ತದೆ. ಈ ‘ಓಡು’ ಆಳವಾದ ಅಂತಃಕರಣವನ್ನು ಕರಗಿಸುತ್ತದೆ. ಅದಕ್ಕೆ ನಾನು ಮೋಹಿಸಿಬಿಟ್ಟಿದ್ದೇನೆ. ಅದು ಬಹುಶಃ ನಿಮಗೆ ಬಂದ ಅನಂತದ ಮೊದಲನೆಯ ಅನುಭವವಿರಬೇಕು. ನೀವು ಅದಕ್ಕೆ ಮೊದಲನೆಯ ಸಲ ಕೊಟ್ಟ ಉತ್ತರವಿರಬೇಕು. ನಿಮ್ಮ ಹೃದಯವನ್ನು ತೆರೆದು ನೀವು ಅದನ್ನು ಸ್ವಾಗತಿಸಿದ್ದೀರಿ….. ಈ ಕೃತಿಯಲ್ಲಿ ಕೆಲವು ಶೈಲಿ ದೋಷಗಳಿವೆ. ಮಣಿವ ಕಿರಣ ಕೋಟಿಗಳನ್ನು ರಬ್ಬರಿಗೆ ಹೋಲಿಸಿದ್ದು, ವಿದ್ಯುತ್ತನ್ನು ಹಗ್ಗಕ್ಕೆ ಹೋಲಿಸಿದ್ದು, ಇತ್ಯಾದಿ. ಇಂಥ ಕೆಲವು ದೋಷಗಳನ್ನು ಬಿಟ್ಟರೆ ಇದೊಂದು ಅದ್ಭುತವಾದ ‘ಓಡು’ (Ode) ಎಂದು ಹೇಳಬಹುದು.” (ಮುಂದೆ ಗೋಕಾಕರು ಇದರ ಶೀರ್ಷಿಕೆಯನ್ನು ‘ವರುಣನಿಗೆ ಆಹ್ವಾನ’ ಎಂದು ಬಳಸದೆ ‘ವರುಣ’ ಎಂದು ಇಟ್ಟರು).

ಈ ಕವಿತೆಯ ವಸ್ತು, “ವಿದೇಶದ ನೆಲವೊಂದರಲ್ಲಿ ಕವಿಗಾದ ಅನುಭವ ಹಾಗೂ ಅದಕ್ಕೆ ನೀಡಿದ ಪ್ರತಿಕ್ರಿಯೆ ಆಗಿರಬೇಕೆಂದು ಗೋಕಾಕರು ಬರೆಯುತ್ತಾರೆ”. (ಪ್ರೊ. ಎ. ವಿ. ನಾವಡ. 2015). ತಮ್ಮ ಪತ್ರದಲ್ಲಿ ಈ ಅನುಭವವನ್ನು ‘ಅನಂತದ ಅನುಭವ’ ಎಂದಿದ್ದ ಗೋಕಾಕರು ನಂತರ, ‘ವಿದೇಶದ ಒಂದು ಅನುಭವ’ ಆಗಿರಬಹುದು ಎಂದಿರುವುದು ಈ ಲೇಖಕನ ಓದಿಗೆ (ಆ ವಿಶ್ಲೇಷಣೆ ಮುಂದಿನ ಭಾಗದಲ್ಲಿದೆ) ಪೂರಕವಾಗಿದೆ. ಈ ಕವಿತೆಯ ಬಗ್ಗೆ ಬೇರೆ ಬಗೆಯ ಓದುಗಳೂ ಸಾಧ್ಯವಾಗಬಹುದು. ಹೀಗೆ ಹಲವು ಅರ್ಥ ಸಾಧ್ಯತೆಗಳನ್ನು ಒಳಗೊಂಡಿರುವುದು ನವ್ಯ ಕಾವ್ಯದ ಒಂದು ಲಕ್ಷಣವೂ ಹೌದು.

ಮೊದಲನೆಯ ನವ್ಯ ಕವಿತೆಗಳು ಯಾಕೆ?

ಪೇಜಾವರ ಸದಾಶಿವರಾಯರ ಈ ಕವಿತೆಗಳು ಮೊದಲನೆಯ ನವ್ಯ ಕವಿತೆಗಳು ಯಾಕೆ ಎಂದು ಪರಿಗಣಿಸಲು ಮೂರು ಕಾರಣಗಳಿವೆ.

ಮೊದಲನೆಯದು, ಪೇಜಾವರ ಮತ್ತು ಗೋಕಾಕರು ಇಂಗ್ಲೆಂಡಿನಲ್ಲಿ 1920 ರ ದಶಕದಿಂದಲೇ ತೊಡಗಿದ್ದ ಇಂಗ್ಲಿಷ್ ನವ್ಯಕಾವ್ಯ ಪ್ರಸ್ಥಾನವನ್ನು ಬಲ್ಲವರಾಗಿದ್ದರು. 17.4.1938 ರಲ್ಲಿ ಇಂಗ್ಲೆಂಡಿನಲ್ಲಿದ್ದ ಗೋಕಾಕರಿಗೆ ಇಟಲಿಯ ಮಿಲಾನಿನಲ್ಲಿದ್ದ ಪೇಜಾವರ ಬರೆದ ಪತ್ರದ ಕೆಲವು ಮಾತುಗಳಿವು: “ಇನ್ನೊಂದು ರೀತಿಯಲ್ಲಿ ಯೋಚಿಸಹತ್ತಿದರೆ, ಇನ್ನೊಂದು ಪ್ರಳಯದವರೆಗೂ ನಮ್ಮ ನಾಡಿನ ಜನರಿಗೆ ಪಶ್ಚಿಮ ಘಟ್ಟಗಳ ಸೊಬಗೂ, ಉದಯ-ಸಂಧ್ಯೆಗಳ ಅಂದವೂ, ವಿಧವೆಯರ ಗೋಳೂ, ಹಕ್ಕಿಗಳ ಚಿಲಿಪಿಲಿಯೂ, ವೇದಾಂತವೂ ನಾವು ಕವಿಗಳು ಬರೆದುಕೊಡುವ ತಿನಿಸೋ, ನಮ್ಮ ಜನತೆಗೆ ಶತಮಾನಗಳ ಸಂಪ್ರದಾಯ, ದಾಸ್ಯದ ಗೂಡನ್ನು ಮುರಿದು ಹೊರಗೆ ಹಾರಿ ಬರುವಷ್ಟು ಶಕ್ತಿಯು ಎಂದು ಬರಲಾರದೋ, ಎಂಬ ಪ್ರಶ್ನೆ ತಾನಾಗಿ ಹುಟ್ಟುತ್ತದೆ. ಹೊಸಗನ್ನಡದ ಸಾಹಿತ್ಯವು ಆರಂಭವಾದ ಮೇಲೆ, ಬಹುಶಃ ನಮ್ಮ ಸಾಹಿತಿಗಳಲ್ಲಿ ಯುರೋಪಿಗೆ ಬಂದು ಹೋದವರು ಏಳೆಂಟು ಮಂದಿಯೇನೋ, ಅವರಲ್ಲಿ ಕವಿಗಳು ಅನ್ನಿಸಿಕೊಳ್ಳುವವರು ನೀವು ಮತ್ತು ಆ ಶಬ್ದವನ್ನು ಬಹಳ ವಿಸ್ತರಿಸಿಕೊಂಡರೆ ನಾನು. ನಾವಿಬ್ಬರು ಕನ್ನಡ ನಾಡಿಗೆ ಯಾವ ಹೊಸ ಮುಡಿಪನ್ನು ಒಪ್ಪಿಸಬೇಕು? ವಿಲಾಯತಿಯ ಈ ಮೂರು ನಾಲ್ಕು ವರ್ಷದ ಪ್ರವಾಸವು ನಮ್ಮ ಜೀವನದಲ್ಲಿ ಹೇಗೆ ಮಾರ್ಪಾಟನ್ನು ತಂದು ಹಾಕಿದೆಯೋ ಹಾಗೆಯೇ ಕಲೆಯಲ್ಲಿಯೂ ತಂದು ಹಾಕುವಷ್ಟು ಶಕ್ತಿಯುಳ್ಳದ್ದಾಗಿಲ್ಲವೇ? ನಮ್ಮ ಕವನಗಳಲ್ಲಿ ಇಪ್ಪತ್ತನೆಯ ಶತಮಾನದ ವಿಲಾಯತಿಯ ಅನುಭವದ ನಿರೂಪಣೆಯಾಗಬೇಕೋ ಬೇಡವೋ?”

“ನಿಮ್ಮ ನಾಟ್ಯಗೀತೆ ಓದಿ ನಾನು ಹಿಗ್ಗಿದೆ. ಇದರಲ್ಲಿ ಎಂತಹ ಹೊಸತನ! ಇಂಥ ಕವನಗಳನ್ನು ನೀವಲ್ಲದೆ ನಮ್ಮ ಪ್ರಾಂತದಲ್ಲಿ ಮತ್ತಾರೂ ಬರೆಯಲಾರರು. ಏಕೆಂದರೆ ಜೀವನವನ್ನು ನಿರೀಕ್ಷಿಸುವ ನನ್ನ ದೃಷ್ಟಿಯೇ ಬೇರೆಯಾಗಿದೆ”, ಎಂದು ಗೋಕಾಕರು ಪೇಜಾವರ ಸದಾಶಿವರಾಯರಿಗೆ ಬರೆದ ಪತ್ರವನ್ನು ಮೇಲೆ ಉಲ್ಲೇಖಿಸಲಾಗಿದೆ.

ಎರಡನೆಯದು, ನವ್ಯ ಕವಿತೆಯ ಒಂದು ಲಕ್ಷಣ ಅನುಭವಶೋಧನೆ. ಯಾವುದೇ ಸನ್ನಿವೇಶ ಅಥವಾ ಅನುಭವವನ್ನು ಬದುಕಿನ ಅರ್ಥಶೋಧನೆಗೆ ರೂಪಕವಾಗಿ ಬಳಸಿಕೊಳ್ಳುವುದು ನವ್ಯ ಕಾವ್ಯದ ರೀತಿ. ನವ್ಯ ಕವಿತೆಯಲ್ಲಿ ಕವಿಯ ಧ್ವನಿ ಉತ್ತಮಪುರುಷದಲ್ಲಿ (ಫಸ್ಟ್ ಪರ್ಸನ್ ನೆರೇಶನ್. ಪೇಜಾವರ ಸದಾಶಿವರಾಯರು ಈ ಬಗೆಯನ್ನು ಬಳಸಿಕೊಂಡಿದ್ದಾರೆ) ಇರಬಹುದು. ಅಥವಾ ಬೇರೆ ಎರಡು ಬಗೆಗಳಲ್ಲಿಯೂ ಇರಬಹುದು. (ಇವುಗಳ ಬಗೆಗೆ, ಅಂದರೆ ಎಲಿಯಟ್ ಹೇಳುವ ‘ಥ್ರೀ ವಾಯ್ಸಸ್ ಆಫ್ ಪೊಯೆಟ್ರಿ’ಯ ಬಗ್ಗೆ ಕಯ್ಯಾರ ಕಿಞ್ಞಣ್ಣ ರೈ ಬರಹದಲ್ಲಿ ಹೇಳಿದೆ).

‘ವರುಣ’ ಕವಿತೆ ಸಾಂಕೇತಿಕವಾಗಿ ಪ್ರಕೃತಿಯ ಸನ್ನಿವೇಶವೊಂದನ್ನು ಬಳಸಿಕೊಂಡು ವೈಯಕ್ತಿಕ ಅನುಭವವನ್ನು ಹೇಳುತ್ತಿರುವುದನ್ನು ಕಾಣಬಹುದು. ‘ನಾಟ್ಯೋತ್ಸವ’ದಲ್ಲಿ ಈ ಅನುಭವಕ್ಕೆ ಕವಿ ತೆರೆದುಕೊಂಡುದನ್ನು ಚಿತ್ರಿಸಿದ್ದಾರೆ. ‘ವರುಣ’ ಅನುಭವದ ನೆಲೆಯಲ್ಲಿ ‘ನಾಟ್ಯೋತ್ಸವ’ದ ಮುಂದುವರಿದ ಭಾಗ. ಮಳೆ ಸುರಿದು ಭೂಮಿ ಬಾನು ಒಂದಾಗುವ ಒಂದು ಹಳೆಯ ಕಲ್ಪನೆಯನ್ನು ವೈಯಕ್ತಿಕ ಅನುಭವಕ್ಕೆ ರೂಪಕವಾಗಿ ಬಳಸಿಕೊಂಡಿರುವ ವಿಶಿಷ್ಟ ಕವಿತೆ ಇದು. ಕೆಳಗೆ ಆರಿಸಿಕೊಟ್ಟಿರುವ ಸಾಲುಗಳಲ್ಲಿ ಆ ಅನುಭವ ಹೇಗೆ ಪ್ರಾರಂಭವಾಗಿ ಬೆಳೆದು ಪರಿಸಮಾಪ್ತಿಯಾಯಿತು ಎನ್ನುವುದನ್ನು ಕವಿ, ನಗರದಲ್ಲಿ ಸಂಜೆಯ ಹೊತ್ತಿಗೆ ವಾಕಿಂಗ್ ಹೊರಟ ನಿರೂಪಕನು ಮಳೆಗೆ ಸಿಕ್ಕಿಕೊಂಡು, ತಾನು ಅದರ ಭಾಗವಾಗಿ ಅನುಭವಿಸುವುದರ ವರ್ಣನೆಯ ಮೂಲಕ ರೂಪಕ ಮತ್ತು ಸಂಕೇತಗಳನ್ನು ಬಳಸುವ ಮೂಲಕ ಪ್ರತಿಮಾ ವಿಧಾನದಲ್ಲಿ ಹೇಳಿದ್ದಾರೆ. ‘ನಾಗಿಣಿಯರ ಹುತ್ತದಿಂದ ಬುಸ್ಸೆಂದು ಹಿಸ್ಸೆಂದು ಕೋಟಿಯುಸಿರು ಏರಿ ಬಂದು’, ‘ಯೌವನದುನ್ಮಾದದಲ್ಲಿ ಮಳೆಯ ಕೂಡಿ ಕ್ರೀಡಿಸುತ್ತ’, ‘ನೇರವಾಗಿ ವಾರಿಯೊಡನೆ ದಾರಿನಡೆದೆ, ನಡೆದು ನಡೆದು ಕೊನೆಗೆಯೊಂದು ನಿಮಿಷದಲ್ಲಿ ಮೇಲಿನಿಂದ ಕರೆದು ಕರೆದು ನೀರು ಕೂಡ ಉಬ್ಬಸದಲಿ ತೊದಲುತಿಹುದ ಕಂಡೆ: ಬಳಿಕ …. ಬುವಿಯ ಬಸಿರ ಬಗೆಕೊಂಡು ಯಾವ ತಿದಿಯ ಬಲದಲೆದ್ದೊ ಕೆಮ್ಮಿ ಕೆಮ್ಮಿ ಬುಗ್ಗೆಯಾಗಿ ಚಿಮ್ಮುತಿಹುದು ಕಂಡುಕೊಂಡೆ”, “ಬಾಳಶರಧಿ ಮಥನದಲ್ಲಿ ದಿನದ ಕೊನೆಗೆ ರಜನಿಯಲ್ಲಿ ಅಸುವ ತೊರೆದ ವಾಸುಕಿ”, “ಇದರ ಉದರದಲ್ಲಿ ಅಲ್ಲಿ ಇಲ್ಲಿ ಸಿಡಿದು ಕಾರ್ವ ಕೆಂಪು ಬಿಳಿದು ನೀರ ನೊರೆಯು ವಿಷದ ಮೊರೆಯು ಗುಗ್ಗುಳಿಪುದು” – ಇತ್ಯಾದಿ ವಿವರಗಳಲ್ಲಿ ಲೈಂಗಿಕ ಸಂಕೇತಗಳಿವೆ.

ಕವಿತೆಯ ಕೊನೆಯಲ್ಲಿ ಈ ಅನುಭವ ಭೂಮಿಯಲ್ಲಿ ಯಾವ ಬದಲಾವಣೆ ತಂದಿತು ಎನ್ನುವುದಕ್ಕಿಂತ ಕವಿಯಲ್ಲಿ (ನಿರೂಪಕನಲ್ಲಿ) ಯಾವ ಬದಲಾವಣೆ ತಂದಿತು ಎನ್ನುವುದರ ಬಗ್ಗೆ ಇದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ: “ನೀರಹೊಯ್ಲಿನೇಕನಾದ ನೀರವದಲಿ ನಡೆಯುವೆನ್ನ ಹೆಜ್ಜೆಯಿದಕೊ ಮುಗ್ಗರಿಸುತ ಕುಗ್ಗುತಿಹುದು. ಆದರೆನ್ನ ಮನದ ಪಕ್ಷಿ ಗರುಡವೇಗದಿಂದ ವಿಶ್ವವನ್ನು ಅಲೆದು ಮೋದದಿಂದ ಹಿಗ್ಗಿರುವುದು, ಹೃದಯಗುಡಿಯ ಸೊಡರಿನಲ್ಲಿ ಪ್ರಭಾಕಿರಣ ಪ್ರಜ್ವಲಿಪುದು. ಉರ್ವಶಿಯರ ನಾಟ್ಯದಂತೆ ಎನ್ನ ಜೀವ ನಲಿಯುತಿಹುದು. ಕಿರುನೆನಪಿನ ಕೀಟ ಮಾತ್ರ ನಲ್ಗನಸಿನೀ ಚೆಲ್ವನಳಿಸೆ ಸೂಜಿಮುಖದ ಮುಳ್ಳಿನಿಂದ ಮೆಲ್ಲನೆನ್ನ ಕೀರುತಿಹುದು : ಏರ್ಧೂಳಿಗೆ ಬೇರ್ಗಾಳಿಗೆ ನಿನ್ನ ಕಿಟಕಿ ತೆರೆದಿದೊ? ಕಾರ್ಮಳೆಯಲಿ ನೀರ್ಗುದ್ದುತ ಕಿಟಕಿಯೊಳಗೆ ಸುರಿದಿದೊ?”

ಈ ಸಂಜೆಯ ಅನುಭವ ತನ್ನ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸುವಷ್ಟು ಶಕ್ತವಾಗಿದೆಯೆ ಎನ್ನುವ ಪ್ರಶ್ನೆಯನ್ನು ತನ್ನಷ್ಟಕ್ಕೇ ಕೇಳಿಕೊಳ್ಳುವುದರೊಂದಿಗೆ ಈ ಕವಿತೆ ಕೊನೆಗೊಳ್ಳುತ್ತದೆ. ಈ ಹಂತದಲ್ಲಿ ಕವಿತೆಯಲ್ಲಿ ವರ್ಣಿತವಾಗಿರುವ ಮೊದಲ ಮಳೆ – ತುಂತುರು, ಬಿರುಗಾಳಿ, ಗುಡುಗು, ಸಿಡಿಲು ಸಹಿತ ಕೊನೆಯಲ್ಲಿ ಬರುವ ಜಡಿಮಳೆ – ಒಂದು ಅನುಭವದ ಪ್ರತಿಮೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ನವ್ಯ ಕಾವ್ಯ ಸಮಗ್ರ ಅನುಭವವನ್ನು ಹೇಳಲು ಪ್ರತಿಮೆ, ರೂಪಕ, ಸಂಕೇತ ಇತ್ಯಾದಿ ಕಾವ್ಯಪರಿಕರಗಳನ್ನು ಬಳಸಿಕೊಳ್ಳುತ್ತದೆ. ನವ್ಯದಲ್ಲಿ ಕವಿ ಪ್ರಕೃತಿಯನ್ನು ತಂದರೆ ಅದನ್ನು ಮನಸ್ಸಿನೊಳಗಿನ ತಾಕಲಾಟಕ್ಕೆ, ತನ್ನ ಅನಾಥಪ್ರಜ್ಞೆಗೆ, ತನ್ನ ಅನುಭವಗಳಿಗೆ ರೂಪಕವಾಗಿ, ಸಂಕೇತವಾಗಿ, ಪ್ರತಿಮೆಯಾಗಿ ಬಳಸಿಕೊಳ್ಳುತ್ತಾನೆ. ಕೇವಲ ಪ್ರಕೃತಿ ವರ್ಣನೆಯಲ್ಲಿ ತೃಪ್ತನಾಗುವುದಿಲ್ಲ. ಈ ಬಗೆಯನ್ನು ಪೇಜಾವರ ಸದಾಶಿವರಾಯರ ‘ವರುಣ’ ಕವಿತೆಯಲ್ಲಿ ಕಾಣಬಹುದು. ‘ವರುಣ’ ಕವಿತೆಯಲ್ಲಿ ಪ್ರಕೃತಿಯನ್ನು ವ್ಯಕ್ತಿಯ ಅನುಭವಕ್ಕೆ ಒಂದು ಪ್ರತಿಮೆಯಾಗಿ ಬಳಸಲಾಗಿದೆ.

ಮೂರು – ಮುಕ್ತಛಂದ: ನವ್ಯ ಕಾವ್ಯ ಛಂದಸ್ಸಿನ ನಿಯಮಗಳಿಗೆ ಒಳಪಡುವುದಿಲ್ಲ. ಛಂದಸ್ಸಿನ ಕಟ್ಟುಪಾಡು ಅನುಭವಶೋಧನೆಗೆ ಅಡ್ಡಿಯಾಗಿ, ಖಚಿತವಾದ ಪದಗಳಿಗಿಂತ ಹೆಚ್ಚಾಗಿ, ಪ್ರಾಸ ಮತ್ತು ಗಣಗಳಿಗೆ ಬೇಕಾಗಿ ರಾಜಿ ಮಾಡಿಕೊಂಡು ಖಚಿತವಲ್ಲದ ಪದಗಳನ್ನು ಬಳಸಬೇಕಾಗುತ್ತದೆ. ನವ್ಯಕಾವ್ಯಕ್ಕೆ ಪದಗಳ ನಾದ, ಲಯ ಇತ್ಯಾದಿ ಗುಣಗಳಿಗಿಂತಲೂ ಶಬ್ದಗಳ ಮತ್ತು ವಾಕ್ಯಗಳ ಅರ್ಥವ್ಯಂಜಕ ಸಾಮರ್ಥ್ಯ, ಧ್ವನಿ ಶಕ್ತಿಗಳು ಮುಖ್ಯ. ಪೇಜಾವರ ಸದಾಶಿವರಾಯರು ಛಂದಸ್ಸಿನ ನಿಯಮಗಳನ್ನು ಅರ್ಥಕ್ಕಾಗಿ ಮುರಿಯಲು ಮುಂದಾಗಿರುವುದನ್ನು ‘ನಾಟ್ಯೋತ್ಸವ’ದಲ್ಲಿ ಕಾಣಬಹುದು. ಉತ್ಸಾಹ ರಗಳೆಯ ಲಯದಲ್ಲಿರುವ ಈ ಕವಿತೆಯಲ್ಲಿ ಕೊನೆಗೆ ಅರ್ಥಾನುಸಾರಿಯಾಗಿ ವೇಗವನ್ನು ತರಲು ನಾಲ್ಕನೆಯ ಗಣವನ್ನು ಹ್ರಸ್ವಗೊಳಿಸಿರುವುದು ಗಮನಾರ್ಹ.

ಜೀವನಗಳ ಜೀವರಸವ
ಅಧರಕಧರ ಕುಡಿಯಲಿ!
ಮುತ್ತಿರುವರೆ ಕತ್ತಲು
ಸೌರಭವಿದೆ ಎತ್ತಲು
ಸುಂದರಿಯರು ಸುತ್ತಲು! (ನಾಟ್ಯೋತ್ಸವ)

ಒಟ್ಟಿನಲ್ಲಿ ಪೇಜಾವರ ಅವರ ಈ ಎರಡು ಮಹತ್ವದ ಕವಿತೆಗಳನ್ನು ಓದುವಾಗ, ಕನ್ನಡದ ಮೊದಲ ಎರಡು ನವ್ಯ ಕವಿತೆಗಳಿವು ಎನ್ನುವುದು ಸ್ಪಷ್ಟವಾಗುತ್ತದೆ.

‘ಉತ್ಸಾಹ’ ಎಂಬ ಕವಿತೆಯಲ್ಲಿ (ತ್ರಿವೇಣಿ ಪತ್ರಿಕೆಯಲ್ಲಿ 1938 ರಲ್ಲಿ ಪ್ರಕಟವಾಗಿದೆ) ಛಂದಸ್ಸನ್ನು ತೊರೆದಂತೆ ಕಾಣಿಸುವ ಪ್ರಯತ್ನವಿದೆ. ಉದಾಹರಣೆಗೆ, ಒಂದು ಚರಣ ಹೀಗಿದೆ:

ಭಂಗ ಜೀವರಿಗೆಲ್ಲ ತುಂಗ ಒಲವಿಡುವೆ;
ಬಾಡಿ ಬೀಳ್ವುದಕೆಲ್ಲ ಹೊಸ ಬಾಳ ಕೊಡುವೆ;
ಆಸೆಯಾರಿದ ಚಿಲುಮೆಗೆನ್ನುಸಿರನಿಡುವೆ
ಅಂತರಂಗದಿ ಕವಿದ
ಖಿನ್ನತೆಯ ಹೊಗೆಯ
ಊದಿ, ಉಜ್ವಲಗೊಳಿಸಿ
ಬೆಳಗುವೆನು ಬಗೆಯ.

18 – 18 – 18 – 10- 8 – 10 – 8 ಮಾತ್ರೆಗಳುಳ್ಳ ಏಳು ಸಾಲುಗಳ ಐದು ಚರಣಗಳ ಕವಿತೆ ಇದು. ಇದರಲ್ಲಿ ಮೊದಲ ಮೂರು ಸಾಲುಗಳಲ್ಲಿ ಅಂತ್ಯ ಪ್ರಾಸವನ್ನು ಬಳಸಿಕೊಂಡಿದ್ದಾರೆ; ಕೊನೆಯ ನಾಲ್ಕು ಸಾಲುಗಳು ನಿಜವಾಗಿ ಎರಡು ಸಾಲುಗಳು. ನಾಲ್ಕು ಮತ್ತು ಐದು – ಆರು ಮತ್ತು ಏಳು ಸಾಲುಗಳನ್ನು ಕೂಡಿಸಿದರೆ ಅವುಗಳಲ್ಲೊಂದು ಪ್ರತ್ಯೇಕ ಪ್ರಾಸವೂ ಕಂಡುಬರುವುದು!

ಅಂತರಂಗದಿ ಕವಿದ ಖಿನ್ನತೆಯ ಹೊಗೆಯ
ಊದಿ, ಉಜ್ವಲಗೊಳಿಸಿ ಬೆಳಗುವೆನು ಬಗೆಯ.
-ಆದರೆ ಮುದ್ರಿಸಿರುವುದನ್ನು ಕಂಡಾಗ ಮುಕ್ತಛಂದದ ನವ್ಯ ಕವಿತೆಗಳ ಹಾಗೆ ಕಾಣುತ್ತದೆ.

ಪೇಜಾವರ ಸದಾಶಿವರಾಯರು ಸಹಜವಾಗಿ ಕವಿತೆಯ ಸಾಲುಗಳನ್ನು ಬರೆಯಬಲ್ಲವರಾಗಿದ್ದುದರಿಂದ ಅವರು ಲಯ ಮತ್ತು ಪ್ರಾಸಗಳಿಗಾಗಿ ತಮ್ಮ ಶಬ್ದಗಳ ಧ್ವನಿ ಶಕ್ತಿಯನ್ನು ಮತ್ತು ಅರ್ಥಖಚಿತತೆಯನ್ನು ತ್ಯಾಗ ಮಾಡಿದವರಲ್ಲ ಎನ್ನುವುದು ಮುಖ್ಯವಾದ ಸಂಗತಿ. ಗೋಪಾಲಕೃಷ್ಣ ಅಡಿಗರಿಗೆ ಕೂಡ –

ಅಜ್ಜ ನೆಟ್ಟಾಲ ಮನೆಮುಂದೆ ತೇರಿನ ಹಾಗೆ:
ಮಿಣಿ ಬಿಳಲು ಸೊಂಡಿಲುಗಳಾಡಿ ಮಣಿದವು ತೂಗಿ
– ಮುಂತಾದ ಸಾಲುಗಳನ್ನು ಬರೆಯುವಾಗ ರಗಳೆಯ ಬಂಧವನ್ನು ಪೂರ್ತಿಯಾಗಿ ತೊರೆಯಲು ಆಗಿರಲಿಲ್ಲ. ತೊರೆಯಲೇಬೇಕೆಂಬ ಹಠವೂ ಅವರಿಗಿರಲಿಲ್ಲ.

ಒಟ್ಟಿನಲ್ಲಿ ಪೇಜಾವರ ಸದಾಶಿವರಾಯರು ಕನ್ನಡ ಮೊದಲ ಎರಡು ನವ್ಯ ಕವಿತೆಗಳನ್ನು ಬರೆದವರು ಎಂದು ಹೇಳಲು ಯಾವ ಸಂಶಯವೂ ಇಲ್ಲ. ಆದರೆ ಕನ್ನಡದ ‘ಮೊದಲನೆಯ ನವ್ಯ ಕವಿ’ ಎಂದು ಹೇಳಲಾಗದು. ಅವರ ನವ್ಯ ಕವಿತೆಗಳು ಕನ್ನಡ ಕಾವ್ಯ ಲೋಕದಲ್ಲಿ ಪ್ರಕಟವಾದುದು ಯಾವಾಗ, ಹೇಗೆ, ಅದರ ಪ್ರಭಾವ ಏನು ಎಂದೆಲ್ಲ ಯೋಚಿಸಿದಾಗ ಈ ಮಾತು ಸ್ಪಷ್ಟವಾಗುವುದು.

1939 ರಲ್ಲಿ ಪೇಜಾವರ ಸದಾಶಿವರಾಯರು ಕನ್ನಡ ನಾಡಿಗೆ ಹಿಂದಿರುಗಿದ್ದರೆ ಖಂಡಿತವಾಗಿಯೂ ಅವರು ಗೋಪಾಲಕೃಷ್ಣ ಅಡಿಗರಿಗಿಂತ ಮೊದಲೇ ನವ್ಯಕಾವ್ಯದ ದೀಕ್ಷೆಯನ್ನು ಕನ್ನಡದ ಕವಿಗಳಿಗೆ ನೀಡುತ್ತಿದ್ದರು.

ಇತರ ಸಾಹಿತ್ಯ

ನಾಟಕಗಳು: ಪೇಜಾವರ ಸದಾಶಿವರಾಯರು ಮೂರು ನಾಟಕಗಳನ್ನು ಬರೆದು ‘ಸರಪಣಿ’ ಎಂಬ ಕೃತಿಯಲ್ಲಿ ಪ್ರಕಟಿಸಿದ್ದರು. ಅವರು ಕತೆ, ಲಲಿತ ಪ್ರಬಂಧ, ಹರಟೆ, ವಿಮರ್ಶೆಗಳನ್ನೂ ಬರೆದಿದ್ದು ಅವೆಲ್ಲವೂ ಪ್ರಬುದ್ಧವಾಗಿವೆ.

ಸದಾಶಿವರಾಯರ ನಾಟಕಗಳಲ್ಲಿ ‘ಸರಪಣಿ’ ಐತಿಹಾಸಿಕ ನಾಟಕ, ‘ಬೀದಿಗಿಳಿದ ನಾರಿ’ ಸಾಮಾಜಿಕ ನಾಟಕ, ಮತ್ತು ‘ಜೀವನ ಸಂಗೀತ’ ಒಂದು ಭಾವರೂಪಕ. ‘ಜೀವನ ಸಂಗೀತ’ ಎನ್ನುವುದು ಕಾವ್ಯಾತ್ಮಕವಾದ ವಾಚನೀಯ ನಾಟಕ – ಈಗಿನ ರೇಡಿಯೋ ರೂಪಕ ಇದ್ದ ಹಾಗೆ. ಹೊನ್ನ ಮತ್ತು ಚೆನ್ನಿ ಎಂಬ ಬೆಸ್ತ ಯುವಕ ಯುವತಿ ಮಾತಾಡುತ್ತಿರುವಾಗ ಹೊನ್ನನಿಗೆ ಚೆನ್ನಿ ಒಂದು ಕಥೆ ಹೇಳುತ್ತಾನೆ. ಇದು ಕಥೆಯೊಳಗೆ ಇನ್ನೊಂದು ಕಥೆಯಾಗಿದೆ. ಒಬ್ಬ ಬೆಸ್ತ ಬಲೆ ಬೀಸುವುದಕ್ಕಿಂತ ಮುಂಚೆ ದೇವರನ್ನು ಬೇಡಿಕೊಳ್ಳುವುದು ಹೀಗೆ: ‘ತುಂಬು ಬಲೆ ಮೀನಿರಲಿ, ಅದರ ಪರೆ ಹೊನ್ನಿರಲಿ, ಕಣ್ಣು ಮಾಣಿಕವಿರಲಿ, ಮುಳ್ಳು ಮೌಕ್ತಿಕವಿರಲಿ, ಪುಚ್ಚ ಪಕ್ಕೆಗಳೆರಡೂ ಪಚ್ಚೆಯಾದರೂ ಇರಲಿ’ ಇತ್ಯಾದಿ. ಹೀಗೆ ಪ್ರಾರ್ಥಿಸಿ ಬಲೆ ಬೀಸಿದಾಗ ಮೊದಲೆರಡು ಬಾರಿ ಮೀನಿನ ಬದಲು ಮರದ ಕೊರಡು ಸಿಗುತ್ತದೆ.

ಮೂರನೆಯ ಬಾರಿ ರತ್ನಗಳಿಂದ ತುಂಬಿದ ಮೀನು ಸಿಗುತ್ತದೆ. ಮೀನಿನ ರೂಪದ ಆ ಸುರಮೂರ್ತಿ ಒಂದು ಪ್ರಶ್ನೆ ಕೇಳುತ್ತದೆ: ಈ ಮೂವರಲ್ಲಿ ಯಾರು ನಿನಗೆ ಹಿತವರು, ಪ್ರೇಮವೋ, ಕಾಮವೋ, ಬಲುಧನದ ಸಂಪದವೋ? ಕಥೆಯೊಳಗಿನ ಬೆಸ್ತ ‘ಪ್ರೇಮ’ ಅಂತ ಉತ್ತರಿಸಬೇಕಿತ್ತು. ಅದಕ್ಕಿಂತ ಮುಂಚೆಯೇ ಕಥೆ ಕೇಳುವ ಬೆಸ್ತ ‘ಪ್ರೇಮ!’ ಎಂದು ಹೇಳಿಬಿಡುತ್ತಾನೆ. ಇದು ಅವನ ಮನಸ್ಸಿನೊಳಗಿನಿಂದ ಕಥಾನಿರೂಪಕಿಯ ಬಗ್ಗೆ ಮೂಡಿದ ಪ್ರೇಮದ ಅಭಿವ್ಯಕ್ತಿಯೇ ಆಗಿತ್ತು.

‘ಸರಪಣಿ’ ಒಂದು ಕಲ್ಪಿತ ಐತಿಹಾಸಿಕ ನಾಟಕ. ಹರ್ಷವರ್ಧನ ರಾಜ ತುಂಡು ತುಂಡು ರಾಜ್ಯಗಳನ್ನು ಒಟ್ಟುಗೂಡಿಸಿ ಒಂದು ಬಲಿಷ್ಠ ಸಾಮ್ರಾಜ್ಯವನ್ನು ಕಟ್ಟುವ ಕನಸುಳ್ಳವನು. ಧ್ರುವಸೇನ ಎಂಬ ರಾಜ ಅದಕ್ಕೆ ಅಡ್ಡಿಯಾಗಿದ್ದಾನೆ. ಆಗ ಹರ್ಷವರ್ಧನನ ತಂಗಿ ರಾಜಶ್ರೀ ಧ್ರುವಸೇನನನ್ನು ಉಪಾಯವಾಗಿ ಬಂಧಿಸಿ ಸೆರೆಮನೆಗೆ ಹಾಕಿಸುತ್ತಾಳೆ. ಹರ್ಷವರ್ಧನನ ಮಗಳು ಅಮೃತಕುಮಾರಿ ರಾಜನೊಬ್ಬನನ್ನು ಹೀಗೆ ಸೆರೆಯಲ್ಲಿರಿಸುವುದಕ್ಕೆ ವಿರೋಧಿ. ಅವಳು ರಾತೋರಾತ್ರಿ ಧ್ರುವಸೇನನನ್ನು ಬಿಡುಗಡೆಗೊಳಿಸಲು ಬಂದಾಗ ಹಾಗೆ ಓಡಿಹೋಗುವುದಕ್ಕೆ ಅವನು ಒಪ್ಪುವುದಿಲ್ಲ. ಅಷ್ಟರಲ್ಲಿ ಹರ್ಷವರ್ಧನ ಮತ್ತು ರಾಜಶ್ರೀ ಅಲ್ಲಿಗೆ ಬರುತ್ತಾರೆ. ಧ್ರುವಸೇನನಿಗೆ ಅಮೃತಕುಮಾರಿಯನ್ನು ಮದುವೆ ಮಾಡಿಕೊಡುವ ಮೂಲಕ ಸೌಹಾರ್ದಯುತವಾಗಿ ಸಾಮ್ರಾಜ್ಯ ವಿಸ್ತರಣೆಯಾಗುತ್ತದೆ. ಡಾ. ನಾ. ದಾಮೋದರ ಶೆಟ್ಟಿಯವರು ಹೇಳುವ ಪ್ರಕಾರ ಈ ನಾಟಕ ದೇಶದ ಏಕೀಕರಣವನ್ನು ಪ್ರತಿಪಾದಿಸುವ ನಾಟಕ. (ಉಡುಪಿಯಲ್ಲಿ 31.08.2013 ರಂದು ನಡೆದ ಸಾಹಿತ್ಯ ಅಕಾಡೆಮಿಯ ವಿಚಾರ ಸಂಕಿರಣದಲ್ಲಿ ನೀಡಿದ ಉಪನ್ಯಾಸ).

‘ಬೀದಿಗಿಳಿದ ನಾರಿ’ ಎಂಬ ಸಾಮಾಜಿಕ ನಾಟಕದ ವಸ್ತು ಕುತೂಹಲಕರವಾಗಿದೆ. ಈಗಿನ ಲಾಟರಿಗಳ ಹಾಗೆ ಅಂದಿನ ಗೋವೆಯ ಸೋಡ್ತಿ ಎಂಬ ಪಿಡುಗಿಗೆ ಸುಬ್ಬಪ್ಪ ಬಲಿಯಾಗುತ್ತಾನೆ. ಅವನ ಹೆಂಡತಿ ಬಾಗಿ ಮುನಿಸಿಕೊಳ್ಳುತ್ತಾಳೆ. ಮಗಳು ಚೆನ್ನಮ್ಮ ಮನೆಬಿಟ್ಟು ಹೋಗುತ್ತಾಳೆ. ಆಕೆ ದಾರಿ ತಪ್ಪಿದಳೆಂದೇ ತಂದೆತಾಯಿ ಭಾವಿಸುತ್ತಾರೆ, ಒಬ್ಬರನ್ನೊಬ್ಬರು ದೂಷಿಸುತ್ತಾರೆ. ಆದರೆ ಚೆನ್ನಮ್ಮ ನರ್ಸ್ ಕೆಲಸಕ್ಕೆ ಸೇರಿ ಉದ್ಯೋಗಸ್ಥೆಯಾಗಿ, ತಾಯಿಗೆ ಹಣ ಕಳಿಸುತ್ತಾಳೆ. ಇದೇ ಸದಾಶಿವರಾಯರ ಶ್ರೇಷ್ಠ ನಾಟಕವೆಂದು ಹೇಳಬಹುದು.

ಸದಾಶಿವರಾಯರು ತಮ್ಮ ನಾಟಕಗಳಲ್ಲಿ ಸಹಜವಾದ ನುಡಿಗಟ್ಟುಗಳುಳ್ಳ ಸಂಭಾಷಣೆ, ಸರಳವಾದ ಆದರೆ ಅರ್ಥಪೂರ್ಣವಾದ ರಂಗತಂತ್ರಗಳನ್ನು ಬಳಸಿದ್ದಾರೆ.

ಸಣ್ಣಕತೆಗಳು: ಕಥನ ರೂಪಗಳ ಹುಡುಕಾಟ

ಪೇಜಾವರ ಸದಾಶಿವರಾಯರ ಲಭ್ಯ ಕತೆಗಳಿವು: ‘ಕ್ಷತ್ರಿಯ ರಮಣಿ’, ‘ಬಿರುಸು’, ‘ಶ್ರೀಗಂಧ’, ‘ಬಾಡೂರಿನ ಸೊಗಸು’, ‘ಸೂಜಿಕಲ್ಲು’, ‘ಜೀವನ ನಿರ್ಮಾಲ್ಯ’, ‘ನೆನಹು : ಬೆಳ್ದಿಂಗಳ ರಾತ್ರಿಯಲ್ಲಿ (ಒಂದು ಹರಟೆ)’ ಮತ್ತು ‘ಅಂಧಶಿಲ್ಪಿ’. ಎಂಬ ಕತೆ. ಹೀಗೆ ಒಟ್ಟು ಎಂಟು ಕತೆಗಳು ಲಭ್ಯವಾಗಿವೆ.

‘ಬಾಡೂರಿನ ಸೊಗಸು’ ಮತ್ತು ‘ಶ್ರೀಗಂಧ’ ಎಂಬ ಬರಹಗಳನ್ನು ಲಲಿತ ಪ್ರಬಂಧಗಳೆಂದು ಎಂದು ಗುರುತಿಸಬಹುದು. ‘ನೆನಹು : ಬೆಳ್ದಿಂಗಳ ರಾತ್ರಿಯಲ್ಲಿ (ಒಂದು ಹರಟೆ)’ ಎಂಬ ಕತೆಯನ್ನು ಸದಾಶಿವರಾಯರೇ ‘ಒಂದು ಹರಟೆ’ ಎಂದು ಕರೆದಿದ್ದಾರೆಂಬ ಕಾರಣಕ್ಕೆ ಅದನ್ನೂ ಲಲಿತ ಪ್ರಬಂಧವೆಂದು ಕರೆಯಬಹುದು.

ಪೇಜಾವರ ಸದಾಶಿವರಾಯರು ತಮ್ಮ 15 – 16 ನೆಯ ವಯಸ್ಸಿನಲ್ಲಿ ಪ್ರಾರಂಭಿಸಿ ನಿಧನರಾಗುವವರೆಗೂ ಅಂದರೆ 26 ನೆಯ ವಯಸ್ಸಿನವರೆಗೂ ಕತೆಗಳನ್ನೂ ಬರೆದಿದ್ದಾರೆ. ಈ ಹತ್ತು ವರ್ಷಗಳ ಕಾಲ ದಕ್ಷಿಣ ಕನ್ನಡದ ನವೋದಯ ಕಾಲ ಮತ್ತು ಸಣ್ಣ ಕಥಾ ಕ್ಷೇತ್ರದಲ್ಲಿ ಕಥನ ರೂಪಗಳ ಹುಡುಕಾಟದ ಕಾಲ. ಇಂತಹ ಸಂದರ್ಭದಲ್ಲಿ ಈ ಹುಡುಕಾಟಗಳ ಜತೆಗೆ ತಾವೂ ಸೇರಿ ಕಥನ ಕಲೆಯನ್ನು ಬೆಳೆಸಿದ, ಅದಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಿದ ಕತೆಗಾರ ಪೇಜಾವರ ಸದಾಶಿವ ರಾಯರು.

ಕತೆ ಮತ್ತು ಲಲಿತ ಪ್ರಬಂಧಗಳ ನಡುವಿನ ಗಡಿರೇಖೆಯನ್ನು ಸ್ಪಷ್ಟಪಡಿಸಿಕೊಳ್ಳಲಾಗದೆ ಲೇಖಕರೂ, ಸಂಪಾದಕರೂ ಗೊಂದಲದಲ್ಲಿದ್ದ ಕಾಲದ ರಚನೆಗಳಿವು.

ಪೇಜಾವರ ಸದಾಶಿವರಾಯರ ‘ಶ್ರೀಗಂಧ’ (1937, ತ್ರಿವೇಣಿ ವಿಶೇಷಾಂಕ) ಮತ್ತು ‘ಜೀವನ ನಿರ್ಮಾಲ್ಯ’ ಅವರ ಶ್ರೇಷ್ಠ ಕತೆಗಳು – ಇಟಲಿಯಲ್ಲಿ ಬರೆದ ಕತೆಗಳು, ತಮ್ಮ 24 ಮತ್ತು 26 ನೆಯ ವಯಸ್ಸಿನಲ್ಲಿ. ಅದರಲ್ಲೂ ಕೊನೆಯ ಕತೆ ‘ಜೀವನ ನಿರ್ಮಾಲ್ಯ’ ಸಂಕಲನವೊಂದರಲ್ಲಿ ಪ್ರಕಟವಾದುದು ಸದಾಶಿವರಾಯರು ನಿಧನರಾದ ವರ್ಷವೇ. ಅದರಲ್ಲಿರುವ ಬಿ. ಎಂ. ಶ್ರೀಯವರ ಮುನ್ನುಡಿಯ ದಿನಾಂಕ 1. 10. 1939; ಸದಾಶಿವರಾಯರು ತೀರಿಕೊಂಡುದು 18. 10. 1939 ರಲ್ಲಿ. ಈ ಸಂಕಲನ ಸದಾಶಿವರಾಯರು ತೀರಿಕೊಂಡ ನಂತರ ಮರಣೋತ್ತರವಾಗಿ ಡಿಸೆಂಬರ್ 1939 ರಲ್ಲಿ ಮುದ್ರಣಗೊಂಡಿತು.

ಪೇಜಾವರ ಸದಾಶಿವರಾಯರ ಐತಿಹಾಸಿಕ ಕತೆಗಳು

ಈ ಲೇಖನಮಾಲೆ ಕಾವ್ಯದ ಬಗ್ಗೆ ಇದ್ದರೂ, ಪೇಜಾವರ ಸದಾಶಿವರಾಯರ ಐತಿಹಾಸಿಕ ಕತೆಗಳನ್ನು ಈ ಭಾಗದ ಇತರ ಕತೆಗಾರರ ಕತೆಗಳ ಜತೆಗೆ ಒಂದು ತೌಲನಿಕ ಅಧ್ಯಯನವನ್ನು ಮಾಡಿದಾಗ ಕುತೂಹಲಕರ ಸಂಗತಿ, ಶೈಲಿಯ ಸಾಮ್ಯಗಳು ಗೋಚರಿಸುತ್ತವೆ. ಆ ಬಗ್ಗೆ ಒಂದು ಸಣ್ಣ ಟಿಪ್ಪಣಿ ಇದು: ಆ ಕಾಲದ ಸಣ್ಣ ಕತೆಗಾರರು ತಮಗೆ ಒಂದು ಸಾಮಾಜಿಕ ಜವಾಬ್ದಾರಿ ಇದೆ ಎಂದು ತಿಳಿದು ಕತೆಗಳನ್ನು ಬರೆಯುತ್ತಿದ್ದರೆನ್ನುವುದು ಮುಖ್ಯವಾದ ವಿಷಯ. ಪಾರತಂತ್ರ್ಯಕ್ಕೆ ಒಳಗಾಗಿದ್ದ ನಮ್ಮ ದೇಶದ ಜನರಲ್ಲಿ ವೀರತ್ವವನ್ನು ಉಕ್ಕಿಸುವುದು ಇಂತಹ ಜವಾಬ್ದಾರಿಗಳಲ್ಲಿ ಒಂದು ಎಂದು ಅವರೆಲ್ಲ ಭಾವಿಸಿದ್ದಂತಿದೆ. ಯಾಕೆಂದರೆ ದಕ್ಷಿಣ ಕನ್ನಡದ ನವೋದಯದ ಕೆಲವು ಮುಖ್ಯ ಕತೆಗಾರರು ರಜಪೂತರ ಶೌರ್ಯವನ್ನು ವೈಭವೀಕರಿಸುವ ಕತೆಗಳನ್ನು ಬರೆದಿರುವುದು ಗಮನಾರ್ಹವಾಗಿದೆ. ಪಂಜೆಯವರ ನಾಲ್ಕು ಕತೆಗಳು, ಎಂ. ಎನ್. ಕಾಮತರ ನೀಳ್ಗತೆ ‘ಕ್ಷಾತ್ರ ತೇಜ’, ‘ಕುಮಾರ ಭೀಮಸಿಂಹ’, ‘ಮಹಾರಾಷ್ಟ್ರ’, ಮತ್ತು ‘ಕಮಲ ಕುಮಾರಿ’ – ಇವುಗಳು ಈ ಬಗೆಯ ಪ್ರಾರಂಭಿಕ ವೀರಕಥನಗಳು. ಪೇಜಾವರ ಸದಾಶಿವರಾಯರ ಸಮಕಾಲೀನರಾದ ಎಸ್. ವೆಂಕಟರಾಜರು 1931 ರಲ್ಲಿಯೇ ರಜಪೂತರ ಶೌರ್ಯದ ಕಥಾನಕ ಇರುವ ‘ವೀರಭೂಮಿ’ ಎಂಬ ನೀಳ್ಗತೆಯನ್ನು ಪ್ರಕಟಿಸಿದ್ದರು. ಪೇಜಾವರ ಅವರ ‘ಕ್ಷತ್ರಿಯ ರಮಣಿ’ ಕತೆಯ ಪ್ರಾರಂಭ ಹೀಗೆ : “ಪ್ರಭಾತ ಕಾಲ! ಪ್ರಾತಃ ಸೂರ್ಯನ ಹೊಂಬಣ್ಣದ ಹೊಸ ಕಿರಣರಾಶಿಗಳು ಅರಾವಳೀ ಪರ್ವತ ಶಿಖರವನ್ನು ಭೇದಿಸಿಕೊಂಡು ಬಂದು ಜಗತ್ತನ್ನು ಬೆಳಗಹತ್ತಿದವು. ಮೇಲ್ಗಡೆ ಮನೋಹರವಾದ ಮೇಘಮಾಲೆಯಂತೆ ನಭೋಮಂಡಲವನ್ನು ವ್ಯಾಪಿಸಿರುವ ಪರ್ವತ ಶಿಖರಗಳು! ಕೆಳಗಡೆ ನೀಲ ಜಲ ಪರಿಪೂರ್ಣವಾದ ಸರಸ್ಸುಗಳು! ನಡುವೆ ನಿಬಿಡವಾದ ವೃಕ್ಷರಾಜಿಗಳಿಂದ ರಾಜಿಸುವ ಗಹನವಾದ ವನಪ್ರದೇಶ! ಆ ಶೋಭಾಯುಕ್ತವಾದ ಸ್ಥಳದಲ್ಲಿ ಕೋಗಿಲೆಗಳ ‘ಕುಹೂ’ ರವವನ್ನೂ, ಮಯೂರಗಳ ಕೇಕಾಧ್ವನಿಯನ್ನೂ ಇತರ ಪಕ್ಷಿಗಳ ಕಲರವವನ್ನೂ, ನಿರ್ಝರಗಳ ಕಲಸಿನಾದವನ್ನೂ ಲಕ್ಷಿಸದೆ, ಸಂಪೂರ್ಣವಾದ ಶಾಂತತೆಯು ಎಲ್ಲೆಲ್ಲೆಯೂ ತಾನೇ ತಾನಾಗಿ ವಿರಾಜಮಾನವಾಗಿತ್ತು. “ಸುಮಾರು ನಾಲ್ಕು ಶತಮಾನಗಳ ಹಿಂದೊಂದು ದಿನ ಈ ಸಮಯದಲ್ಲಿ ರಜಪೂತನೋರ್ವನು ಅರಾವಳೀ ಪರ್ವತದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಅಶ್ವಾರೂಢನಾಗಿ ಮುಂದೆ ಸಾಗುತ್ತಿದ್ದನು…” ಪಂಜೆಯವರ ‘ಶೈಲಿನಿ’ ಕತೆಯ ಪ್ರಾರಂಭ ಹೀಗಿದೆ : “ಚಂದ್ರನು ಗಗನಾಂಗಣದಲಿ ಮೆಲ್ಲ ಮೆಲ್ಲನೆ ಸಂಚರಿಸುತ್ತಿದ್ದನು; ಒಮ್ಮೆ ಸಾಂದ್ರವಾಗಿದ್ದ ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿಲ್ದೆರೆಯನ್ನು ತೆರೆದು, ತನ್ನ ಮುಖವನ್ನು ತೋರಿಸುತ್ತ ಸಂಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕೆಯು ಡಿಲ್ಲಿಯ ಪುರಾತನ ಕೋಟೆಯ ಹಾಳುಕೊಂಪೆಯ ಮೇಲೆ ಬಿದ್ದು ನಗುತ್ತಲಿತ್ತು. ನವೀನದುರ್ಗದ ಪ್ರಾಕಾರಗಳು ಶ್ವೇತಶಿಲೆಯಿಂದ ನಿರ್ಮಿತವಾದಂತೆ ಕಂಗೊಳಿಸುತ್ತಿದ್ದವು. ನಗರೋಪಕಂಠದಲ್ಲಿದ್ದ ರಾಜಪುತ್ರರ ಮಂದಿರಗಳೂ ಮನಸಬ್ದಾರರ ಮಹಲುಗಳೂ ಇನ್ನೂ ಶುಭ್ರವಾಗಿ ರಂಜಿಸುತ್ತಲಿದ್ದುವು. ಸಮೀಪದಲ್ಲಿ ಯಮುನಾ ನದಿಯು ಮಂಜುಘೋಷಿಣಿಯಾಗಿ ಪ್ರವಹಿಸುತ್ತಲಿತ್ತು…… ನದಿಯ ದಡದಲ್ಲಿ ಮನುಷ್ಯ ಸಂಚಾರವಿರಲಿಲ್ಲ. ತರುಣನೊಬ್ಬನು ನದಿಯ ತೀರವನ್ನು ಬಿಟ್ಟು ರಾಜಮಾರ್ಗವಾಗಿ ಹೋಗುತ್ತಿದ್ದನು. ತರುಣನು ಒಮ್ಮೆ ಮೆಲ್ಲ ಮೆಲ್ಲನೆ ಕಾಲಿಡುತ್ತ, ಒಮ್ಮೆ ಬೇಗಬೇಗನೆ ನಡೆಯುತ್ತಿದ್ದನು.” ಪಂಜೆಯವರ ‘ವೀರಮತಿ’ ಕತೆಯ ಪ್ರಾರಂಭ ಹೀಗೆ: “ಮಧ್ಯಾಹ್ನ ಸೂರ್ಯನು ಆಕಾಶ ವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗವನ್ನು ತಪ್ತಮಾಡುತ್ತಿಲಿದ್ದವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ನೊಣಗಳನ್ನು ಝಾಡಿಸುತ್ತಿದ್ದುವು. ಹಕ್ಕಿಗಳು ಮರದ ಎಲೆಗಳಲ್ಲಿ ಹುದುಗಿಕೊಂಡು ಸುಖವಾಗಿ ನಿದ್ದೆ ಹೋಗುತ್ತಿದ್ದುವು. ….. ದೇವಗಿರಿಯ ಅರಮನೆಯ ಬಳಿಯಲ್ಲಿ ಕಾವಲುಗಾರರು ಬಹಳ ಎಚ್ಚರಿಕೆಯಿಂದ ಪಹರೆಮಾಡುತ್ತಿದ್ದರು. ಅರಮನೆಯಲ್ಲಿ ಜನರು ಕಾರ್ಯಗೌರವದಿಂದ ಹೋಗುತ್ತ ಬರುತ್ತ, ಅಲ್ಲಲ್ಲಿ ಗುಂಪುಕೂಡಿ ನಿಂತು, ತಮ್ಮೊಳಗೆನೇ ಏನನ್ನೋ ವಿಚಾರ ಮಾಡುತ್ತಿದ್ದರು. ರಾಜಮಂದಿರದ ಕಿರುಬಾಗಿಲಿನಿಂದ ಒಂದು ಪಲ್ಲಕ್ಕಿಯು ಹೊರಗೆ ಬಂದಿತು….” ಐತಿಹಾಸಿಕ ವಸ್ತುಗಳನ್ನು ಇಟ್ಟುಕೊಂಡು ಆಧುನಿಕ ಸಣ್ಣಕತೆಗಳನ್ನು ಬರೆಯುವಾಗ ಪಂಜೆಯವರು ಅನುಸರಿಸಿದ ಕಥನ ಶೈಲಿಯನ್ನು ಪೇಜಾವರ ಸದಾಶಿವರಾಯರೂ ಅನುಸರಿಸಿದ್ದಾರೆ. ಈ ಕತೆಯನ್ನು ಬರೆದಾಗ ಅವರ ವಯಸ್ಸು 16 ರ ಆಸುಪಾಸಿನಲ್ಲಿದ್ದಿರಬೇಕು.

ಕನ್ನಡದ ಆಧುನಿಕ ಸಾಹಿತ್ಯದ ಗೊತ್ತುಗುರಿಗಳನ್ನು ತಾವೆಲ್ಲರೂ ಸೇರಿ ನಿರ್ಧರಿಸುತ್ತಿದ್ದೇವೆ ಎಂಬ ಅರಿವು ಪೇಜಾವರ ಸದಾಶಿವರಾಯರಿಗೆ ಖಂಡಿತವಾಗಿಯೂ ಇತ್ತು. ಸಣ್ಣ ಕತೆಗಳಲ್ಲಿ ಈ ರೀತಿಯ ಹುಡುಕಾಟವೊಂದನ್ನು ಸದಾಶಿವರಾಯರು ನಡೆಸುತ್ತಿದ್ದುದಕ್ಕೆ ಅವರ ಪ್ರಾರಂಭದ ಮೂರು ನಾಲ್ಕು ಕತೆಗಳೇ ಸಾಕ್ಷಿಯಾಗಿವೆ. ಕೊನೆಗೆ ಅವರು ಕಂಡುಕೊಂಡದ್ದು ತಂತ್ರಗಾರಿಕೆಯ ಕಲ್ಪಿತ ಕತೆಗಿಂತಲೂ ಜೀವನಾನುಭವ ಕಥನವೇ ಮುಖ್ಯವೆಂಬುದನ್ನು. ಅವರ ಕೊನೆಯ ಎರಡು ಕತೆಗಳು (‘ಶ್ರೀಗಂಧ’ ಮತ್ತು ‘ಜೀವನ ನಿರ್ಮಾಲ್ಯ’) ಇಂತಹ ಕತೆಗಳಾಗಿವೆ ಮತ್ತು ಅತ್ಯುತ್ತಮ ಕತೆಗಳಾಗಿವೆ. ‘ಜೀವನ ನಿರ್ಮಾಲ್ಯ’ ಕತೆಯು ಮುಂದೆ ದೇಶದ ಇತರೆಡೆಯೂ, ಕನ್ನಡ ಸಾಹಿತ್ಯದಲ್ಲಿಯೂ ಕಾಣಿಸಿಕೊಂಡ ಪ್ರಗತಿಶೀಲ ಸಾಹಿತ್ಯದ ಒಂದು ಮುಖ್ಯ ಕತೆಯೆಂದು ಹೇಳಬಹುದು.

ವಿಮರ್ಶೆ: ಪೇಜಾವರ ಸದಾಶಿವರಾಯರು ಹದಿಹರೆಯದಲ್ಲಿಯೇ ಮಿತ್ರ ಮಂಡಳಿಗಾಗಿ ‘ಅಲರು’ ಎಂಬ ಕವನಸಂಕಲನವನ್ನು ಸಂಪಾದಿಸಿಕೊಟ್ಟರೆಂದು ಈಗಾಗಲೇ ಹೇಳಿದೆ. ಅವರಲ್ಲಿ ವಿಮರ್ಶನ ಪ್ರಜ್ಞೆ ಆಗಲೇ ಜಾಗೃತವಾಗಿತ್ತು. ‘ಪ್ರಬುದ್ಧ ಕರ್ನಾಟಕ’ ಪತ್ರಿಕೆಯ 1931 ನೆಯ ಸಂ.14- ಸಂಚಿಕೆ 3 ರಲ್ಲಿ 18 ವರ್ಷ ವಯಸ್ಸಿನ ಸದಾಶಿವರಾಯರು ‘ಆಧುನಿಕ ಕನ್ನಡ ಕವಿತೆ’ ಎಂಬ 16 ಪುಟಗಳ ಪ್ರಬುದ್ಧ ಲೇಖನವನ್ನು ಪ್ರಕಟಿಸಿದ್ದಾರೆ. ಈ ಲೇಖನದ ಒಂದೆರಡು ಅಂಶಗಳನ್ನು ಪ್ರಸ್ತಾಪಿಸಿದರೆ ಪೇ.ಸ.ರ ಒಳನೋಟಗಳು ಎಂತಹದು ಎನ್ನುವುದು ತಿಳಿಯುತ್ತದೆ: ’ಆಧುನಿಕ ಕವಿತೆಯು ಗದ್ಯದಂತೆ ತೋರಿಬರುವುದು ಆಶ್ಚರ್ಯವೆಂದು ಕಂಡುಬರಲಿಕ್ಕಿಲ್ಲ. ಗದ್ಯಕಾಲದಲ್ಲಿ ಕವಿತೆಯು ಗದ್ಯವನ್ನೇ ಅನುಸರಿಸುವುಸು ಅದೊಂದು ದೊಡ್ಡ ಮಾತಲ್ಲ’. ಈ ಮಾತುಗಳನ್ನು ಕಂಡಾಗ ಸಾಹಿತ್ಯದ ಬೆಳವಣಿಗೆಗೂ ಸಮಾಜದ ಸಂರಚನೆಗೂ ಇರುವ ಸಂಬಂಧ, ಸಾಹಿತ್ಯಕ್ಕೂ ರಾಜಕೀಯಕ್ಕೂ ಇರುವ ಸಂಬಂಧ, ಭಾಷೆಯ ಸ್ವರೂಪದ ಮೇಲೆ ಅನ್ಯ ಭಾಷೆಗಳ ಪ್ರಭಾವದಿಂದ ಸಾಹಿತ್ಯದ ಮೇಲೆ ಉಂಟಾಗುವ ಪರಿಣಾಮ ಇವುಗಳನ್ನೂ ಪೇಜಾವರ ಅವರು ಗಮನಿಸುವುದು ಆಶ್ಚರ್ಯಕರವಾಗಿದೆ.

ಸದಾಶಿವರಾಯರ ಪತ್ರಗಳಲ್ಲಿ ಕೂಡಾ ಸಾಹಿತ್ಯ ವಿಮರ್ಶೆಯ ವಿಚಾರಗಳಿವೆ ಎಂದು ಡಾ. ಎ. ವಿ. ನಾವಡರು ತೋರಿಸಿಕೊಟ್ಟಿದ್ದಾರೆ. ಕೃತಿ ವಿಮರ್ಶೆಯನ್ನೂ ಅವರು ಮಾಡಿದ್ದಾರೆ. 1936 ರಲ್ಲಿ ‘ತ್ರಿವೇಣಿ’ ಪತ್ರಿಕೆಗಾಗಿ ಅವರು ಕೆ. ಕೆ. ಶೆಟ್ಟರ ‘ಮುಂದಿನ ದೇವರು’ ಎಂಬ ಕೃತಿಯನ್ನು ವಿಮರ್ಶಿಸುತ್ತ, “ಧರ್ಮಗಳ ಖಂಡನೆಯನ್ನು ಮಾಡುವುದು ಸುಲಭ. ಸಮಾಜಕ್ಕೆ ಹಲವೊಂದು ನೀತಿಗಳ ಪಾಠವನ್ನು ಹಾಕಿಕೊಟ್ಟ ಧರ್ಮಗಳನ್ನು ಕಿತ್ತೊಗೆದು ಅವುಗಳ ಬದಲು ಬೇರೊಂದು ತತ್ವವನ್ನು ತೋರಿಸಿ ಆ ತತ್ವಗಳಿಗೆ ಸರಿಯಾಗಿ ನಡೆಯುವ ರೀತಿಯನ್ನು ಚಿತ್ರಿಸುವುದು ಎಷ್ಟೋ ಕಷ್ಟ’, ‘ಲೇಖಕರು ಬೋಲ್‍ಶೆವಿಸಮ್ ಬೇಕೆನ್ನುತ್ತಾರೆ ಎಂದೆವಾದರೆ ಅವರೆಲ್ಲೂ ಹಾಗೆ ಹೇಳಿಯೇ ಇಲ್ಲ. ಹೇಳಲಿಲ್ಲವೆಂದರೆ ಇಪ್ಪತ್ತು ಪುಟಗಳಲ್ಲಿಯೂ ಹೇಳಿದ್ದಾರೆ. ಹೀಗೆ ಓದುಗರನ್ನು ಅನಿಶ್ಚಯದ ಅಸಮಾಧಾನದಲ್ಲಿ ಕೈಬಿಡುವುದರ ಬದಲು ಪಂಥಗಳ ಪುರಾತನ ಕೊಳವನ್ನು ಹೊಸಕೋಲಿನಿಂದಲೇ ಆದರೂ ಒಕ್ಕಿ ದುರ್ಗಂಧವೆಬ್ಬಿಸುವ ವ್ಯರ್ಥ ಆಯಾಸವನ್ನು ಕಡಿಮೆ ಮಾಡಿಕೊಂಡು ತಮ್ಮ ತತ್ವದ ನಿರೂಪಣೆಯನ್ನು ಸ್ಪಷ್ಟವಾಗಿ ಮಾಡಿಬಿಡಬಹುದಾಗಿತ್ತು.” ಎಂದಿರುವುದನ್ನು ಗಮನಿಸಿದಾಗ ಅವರ ವಿಮರ್ಶನ ಪ್ರಜ್ಞೆ ಎಷ್ಟು ಹರಿತವಾಗಿತ್ತು ಎನ್ನುವುದು ತಿಳಿಯುತ್ತದೆ.

ಕೊನೆಗೆ

ಒಟ್ಟಿನಲ್ಲಿ ತಮ್ಮ ಅಲ್ಪಾಯುಷ್ಯದಲ್ಲಿ ಮಹತ್ವವುಳ್ಳ ಕವಿತೆಗಳನ್ನೂ, ಕತೆಗಳನ್ನೂ, ಉತ್ತಮ ನಾಟಕಗಳನ್ನೂ, ಸಾಹಿತ್ಯ ವಿಮರ್ಶೆಯನ್ನೂ ಬರೆದ ಪೇಜಾವರ ಸದಾಶಿವ ರಾಯರು ದಕ್ಷಿಣ ಕನ್ನಡಿಗರು ಹೆಮ್ಮೆಪಡಬೇಕಾದ ಸಾಹಿತಿಗಳಲ್ಲಿ ಒಬ್ಬರು.

ತಮ್ಮ ಸಂಕ್ಷಿಪ್ತ ಬದುಕನ್ನು ಅರ್ಥಪೂರ್ಣವಾಗಿ ಬದುಕಿದ ಪೇಜಾವರ ಸದಾಶಿವರಾಯರು, ಆ ಸಣ್ಣ ಅವಕಾಶದಲ್ಲೇ ದೊಡ್ಡ ಸಾಧನೆ ಮಾಡಿ, ಕನ್ನಡ ಸಾಹಿತ್ಯದಲ್ಲಿ ಒಂದು ಭದ್ರವಾದ ಸ್ಥಾನ ಸಂಪಾದಿಸಿಕೊಂಡಿದ್ದಾರೆ.

*****

ಗ್ರಂಥ ಋಣ:
1. ಪೇಜಾವರ ಸದಾಶಿವ ರಾವ್: ಸಮಗ್ರ ಬರೆಹಗಳು. ಸಂಪಾದಕರು: ಎ. ವಿ. ನಾವಡ. ಪ್ರ. ಕೇಂದ್ರ ಸಾಹಿತ್ಯ ಅಕಾಡೆಮಿ. ನವದೆಹಲಿ. 2015.
2. ಪೇಜಾವರ ಸದಾಶಿವ ರಾವ್: ನೂರರ ನುಡಿನಮನ. ಸಂಪಾದಕರು: ಡಾ. ಗಾಯತ್ರೀ ನಾವಡ. ಪ್ರ. ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ, ಉಡುಪಿ. 2015.
3. ಪೇಜಾವರ ಸದಾಶಿವರಾಯ: ಸಾಹಿತ್ಯ ವಾಚಿಕೆ. ಸಂಪಾದಕರು: ನಾ. ದಾಮೋದರ ಶೆಟ್ಟಿ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು. 1995.
ಕೃತಜ್ಞತೆಗಳು:
ಡಾ. ಸಿ. ಆರ್. ಬಲ್ಲಾಳ್ (ಪೇಜಾವರ ಸದಾಶಿವರಾಯರ ಸಮೀಪ ಸಂಬಂಧಿ, ಖ್ಯಾತ ಸರ್ಜನ್)
ಡಾ. ನಾ. ಮೊಗಸಾಲೆ.