ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆಯ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ [email protected] ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಿಮ್ಮ ಓದಿಗಾಗಿ ನಾಗರಾಜ ವಸ್ತಾರೆ ಬರೆದ ದಿನದ ಕವಿತೆ.
ಮೊನ್ನೆ ರನ್ ವೇಯಲ್ಲೆಡವಿಬಿದ್ದ
ವಿಮಾನದಲ್ಲಿದ್ದೆ
ಸೀಳೋ ಸಿಡಿತವೋ ತಿಳಿಯಲಿಲ್ಲ
ಪತನವೆಂಬುದು ಮರ್ತ್ಯದ ಮಾತು
ಹವನವೆಂದರೆ ಸೂಕ್ತ
ನಿಮ್ಮ ಲೆಕ್ಕ ಹೇಳುವುದಾದರೆ
ಎಣಿಕೆಗೂ ಎಡೆಯಿರಲಿಲ್ಲ
ಎವೆಯಿಡದ ಅನಿಮಿಷ
ಅದು
ತನ್ನನ್ನು ತಾನೇ
ನುಂಗುವ ವಾಂಛೆ ಬೆಂಕಿ
ಇನ್ನು ಒಳಗಿನ ಕಿಡಿ ದಳ್ಳುರಿ
ಆಗಿದ್ದೇನು ಮಹಾ
ಅಗ್ನಿಯೆಂದೂ ಅತಿಶಯವಲ್ಲ
ಅದು ಸುಖದ ಮೇರು
ಅಥವಾ
ದುಃಖದ ಮುಕ್ತಾಯ
ಪಾರಾಗಲಿಲ್ಲವೆಂದು
ಹೀಗೆ ರೋದಿಸುವುದೆಷ್ಟು
ಸರಿ.
(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು)

ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.