ನ್ಯೂಯಾರ್ಕ್ ಡ್ರಾಮಾ ಕ್ರಿಟಿಕ್ಸ್ ಸರ್ಕಲ್ ನವರು ‘ಲಾಂಗ್ ಡೇಸ್ ಜರ್ನಿ ಇನ್‌ಟು ನೈಟ್..’ ನಾಟಕವನ್ನ ‘ಬೆಸ್ಟ್ ಪ್ಲೇ’ ಅಂತ ತೀರ್ಪು ಕೊಟ್ಟರು. ಬೆಸ್ಟ್ ಫಾರಿನ್ ಪ್ಲೇ ಆಗಿ ‘ವಾಲ್ಟ್ಸ್ ಆಫ್ ದಿ ಟೊರಿಯಾಡೋರ್ಸ್’ ಆರಿಸಿದರು. ಮೂರು ಇತರ ಫಾರಿನ್ ನಾಟಕಗಳಿಗೆ ಅವರ ಓಟ್ ನಮೂದಿಸಿದ್ದರು. ಆದರೆ ‘ವೇಯ್ಟಿಂಗ್ ಫಾರ್ ದಿ ಗಾಡೋ’ ಗೆ ಒಂದೇ ಒಂದು ಓಟ್ ದಕ್ಕಿರಲಿಲ್ಲ. ಇದು ನಿಜವಾದ ಅಬ್ಸರ್ಡಿಟಿ. ಹಾಗೇ ಆಯಾ ಘಟ್ಟದಲ್ಲಿ ನಾಟಕಕ್ಕೆ ದಕ್ಕಬೇಕಾದ ಮಾನ್ಯತೆ ದಕ್ಕಿರಲಿಲ್ಲ. ಅದು ಅರ್ಥಹೀನ ಸ್ಥಿತಿ ಅನಿಸಬಹುದು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

 

ದೃಶ್ಯ ಜಗತ್ತಿಗೆ ಹೊಂದಿಕೊಂಡ ಕಣ್ಣುಗಳಿಗೆ ಬರೀ ಮಾತುಗಳು ನೀರಸ ಅನಿಸಲು ಆರಂಭಿಸುತ್ತವೆ. ಫೋನಿನಲ್ಲಿ ಎಷ್ಟಂತ ಹರಟುವುದು? ದೃಶ್ಯದ ಜೊತೆಜೊತೆಗೆ ಮಾತು ಪೂರಕವಾಗಿ ಬಂದರೆ ಚೆಂದ. ಇಲ್ಲದಿದ್ದರೆ ಬರೀ ಮಾತು ಕತ್ತಲೆ ಇದ್ದಂತೆ. ಕತ್ತಲು ಇರುವುದು ವಿಶ್ರಾಂತಿ ಸಹಿತ ನಿದ್ರಿಸಲಿಕ್ಕೆ ಅಂತ ಭಾವಿಸಿದ್ದ ಒಂದು ಕಾಲಘಟ್ಟ ಇತ್ತು. ಬೆಳಗ್ಗಿನಿಂದ ಸಂಜೆಯವರೆಗೆ ಕಾಲೇಜಿನಲ್ಲಿ ಪಾಠ; ಸಂಜೆಯ ನಂತರ ದಿನನಿತ್ಯ ಒಂದು ನಾಟಕ ನೋಡಬೇಕು. ಆಮೇಲೆ ಮನೆಗೆ ಲೇಟಾಗಿ ಹೋಗಬೇಕು. ಅಪ್ಪ ಬೈದದ್ದನ್ನೇ ಬೈಯಬೇಕು. ಇದು ಮಾಮೂಲಿ ಸಂಗತಿಯಾಗಿತ್ತು.

ನನ್ನ ಬದುಕಿನಲ್ಲಿ ಕತ್ತಲು ಮತ್ತು ಬೆಳಕಿಗೆ ಒಟ್ಟೊಟ್ಟಿಗೆ ಅರ್ಥ ತಂದುಕೊಟ್ಟಿದ್ದು ರಂಗಭೂಮಿ. ನಾಟಕ ನೋಡಲು ರಂಗಮಂದಿರ ಹೊಕ್ಕರೆ ಅಲ್ಲಿ ಕತ್ತಲು. ನಂತರ ದಿಗ್ಗನೆ ಬೆಳಕು ಹೊತ್ತಿಕೊಂಡು ಆಟ ಶುರು. ನಮ್ಮ ಬದುಕಿನದೇ ಪರಿಷ್ಕೃತ ರೂಪ. ಇಂಥದ್ದಕ್ಕೆ ಹೊಂದಿಕೊಂಡ ಕಣ್ಣು ಮನಸ್ಸಿಗೆ, ಧ್ವನಿಯನ್ನು ಹೊರಡಿಸುತ್ತಿರುವ ವ್ಯಕ್ತಿ ಕಾಣದಿದ್ದರೆ ಬೇಸರ ಶುರುವಾಗುತ್ತದೆ. ಕಾಲ ದೂಡುವ ಬಗೆ ಹೇಗೆ? ಪತ್ರಿಕೆ ತೆರೆದರೆ ಕೋವಿಡ್ಡು, ಲಸಿಕೆ, ವಿವಿಧ ಹಗರಣ. ಟಿವಿ ಹಾಕಿದರೆ ತಾರಕ ಸ್ಥಾಯಿಯಲ್ಲಿ ಸಾವುಗಳ ಸ್ಟಾಟಿಸ್ಟಿಕ್ಸ್ ವರದಿ. ಫೋನ್ ಕಿವಿಗಿಟ್ಟುಕೊಂಡರೆ ಮತ್ತದೇ ಕತ್ತಲು.

ರಂಗ ‘ಭೂಮಿ’ ಈಗ ವಿಶ್ರಾಂತ. ಆನ್ಲೈನು, ವರ್ಚುವಲ್ ಡ್ರಾಮ ನೋಡುವ ಸೌಲಭ್ಯವಿದ್ದರೂ ಮನಸ್ಸು ಅದಕ್ಕೆ ಸ್ಪಂದಿಸುವುದಿಲ್ಲ. ನಾಟಕ ಲೈವ್ ಆಗಿ ನೋಡಿದರೇನೇ ಚೆಂದ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಆದರೂ ಕಣ್ಣುಗಳು ಕೇಳುವುದಿಲ್ಲ. ರಂಗಭೂಮಿ ವಿಶ್ರಾಂತವಾಗಿದ್ದರೂ ಸಿನಿಮಾಗಳು ಇವೆಯಲ್ಲ. ನೋಟ ನೋಟವೇ ತಾನೇ. ಈ ಟೈಂನಲ್ಲಿ ಕ್ಲಾಸಿಕ್ ಸಿನಿಮಾಗಳು ಅರ್ಥವಾಗುವುದು ಕಷ್ಟ ಅನಿಸಿ ಗೆಳೆಯನಿಗೆ ಒಂದು ಚೆಂದದ ನವಿರು ಸಿನಿಮಾ ಸೂಚಿಸಲು ಹೇಳಿದೆ.

ಹೈಸ್ಕೂಲು ಓದುವಾಗ ಅವನು ಅದ್ಯಾವ ಹುಡುಗಿಯನ್ನು ಪ್ರೀತಿಸಿದ್ದನೋ, ಪ್ರೀತಿಸಿ ಧೈರ್ಯ ಸಾಲದೆ ನೋವು ತಿಂದಿದ್ದನೋ ಗೊತ್ತಿಲ್ಲ. ನನಗೆ ‘ಕನ್ನಡದಲ್ಲಿ ‘99’ ಮೂವಿ ನೋಡು ಗುರುವೇ ಚೆನ್ನಾಗಿದೆ. ತಮಿಳಿನ 96ರ ರಿಮೇಕ್’ ಅಂದ. ಏನು ಎತ್ತ ಎಂದು ವಿಚಾರಿಸದ ನಾನು ಸರಿ ಅಂತಂದು ನೋಡಿದೆ. ಎದೆಯಲ್ಲಿ ಹದಿಹರೆಯದ ಪ್ರೀತಿಯನ್ನ ಜತನದಿಂದ ಕಾಪಿಟ್ಟುಕೊಂಡಿರುವವರಿಗೆ ಗಾಢವಾಗಿ ತಟ್ಟುವ ಸಿನಿಮಾ. ನನ್ನನ್ನೂ ಒಂದು ರೀತಿ ತಣ್ಣಗೆ ಆವರಿಸಿಕೊಂಡದ್ದು ಅಚ್ಚರಿ ತರಿಸಿತು. ಪ್ರೀತಿ ಬಿಟ್ಟಾಕಿ, ಮೂವೀಲಿ ನನಗೆ ಇಷ್ಟವಾದದ್ದು 99ರ ಸ್ಕೂಲ್ ಬ್ಯಾಚಿನ ಕೆಲವರು ಇಪ್ಪತ್ತು ವರ್ಷದ ನಂತರ ರೀಯೂನಿಯನ್ ನಲ್ಲಿ ಸೇರುವ ಸಂಗತಿ. ಇದು ನನ್ನಲ್ಲಿ ಒಂದು ಹೊಳಹು ಹೊಳೆಯಿಸಿತು.

ಮಾತಿನ ಬರೀ ಕತ್ತಲೆಗಿಂತ ಕಂಪ್ಯೂಟರ್ ಪರದೆ ಮೇಲಾದರೂ ಮುಖಕಾಣಿಸುತ್ತ ಮಾತಾಡುವುದು ಸರಿ ಅನಿಸಿತು. ನನಗೆ ಹೊಳೆದ ಮಾತು ಮತ್ತು ಕತ್ತಲ ಬಗೆಗಿನ ಮೆಟಫರನ್ನ ಡಿಜಿಟಲ್ ಪರಿಣಿತ ಗೆಳೆಯನಿಗೆ ವಿವರಿಸಿ ಒಂದು ಆನ್ಲೈನ್‌ನಲ್ಲಿ ಮೀಟ್ ಅರೇಂಜ್ ಮಾಡು ಅಂತಂದೆ. ಅವನು ತಲೆ ಕೆರೆದುಕೊಂಡು ‘ಸುಮ್ಮನೆ ಹಾಗೇ ಅರೇಂಜ್ ಮಾಡು ಅಂದಿದ್ದರೆ ಮಾಡ್ತಿದ್ದೆ. ಈ ಮಾತು.. ಕತ್ತಲು ಎಲ್ಲ ಬೇಕಿತ್ತಾ..?’ ಅಂದ. ನಂತರ ಐಡಿ ಹಾಳುಮೂಳು ಕ್ರಿಯೇಟ್ ಮಾಡಿ ಸಮಯ ನಿಗದಿ ಮಾಡಿದ. ಜೂಮ್ ಮೀಟ್‌ನಲ್ಲಿ ಭಾಗಿಯಾಗುವವರಿಗೆ ನಾನು ಹೀಗೊಂದು ನಿಬಂಧನೆ ಹಾಕಿದೆ – ‘ಬೇರೆಬೇರೆ ದೇಶಗಳಲ್ಲಿರುವವರು ತಂತಮ್ಮ ದೇಶಗಳಲ್ಲಿನ ಸಾವುಗಳ ಲೆಕ್ಕ ಕೊಡುವುದು ಬಿಟ್ಟು ಈ ಹೊತ್ತಿನ ತಂತಮ್ಮ ಗ್ರಹಿಕೆ ಹೇಗಿದೆ ಎಂದು ಮಾತಾಡಬೇಕು’ ಅಂದಿದ್ದೆ. ‘ನೆಗೆದುಬಿತ್ತು.. ಒಬ್ಬನೂ ಬರಲ್ಲ ನೋಡ್ಕೊ’ ಅಂದ ಡಿಜಿಟಲ್ ಪರಿಣಿತ ಗೆಳೆಯ.

ನಿಗದಿಯಾದ ದಿನ ಬೆಳ್ಳಂಬೆಳಗೆ ನನಗೆ ಅಚ್ಚರಿ ತರಿಸುವಷ್ಟು ಗೆಳೆಯ ಗೆಳತಿಯರು ಜೊತೆಯಾದರು. ಒಬ್ಬೊಬ್ಬರ ಚಿತ್ರ ಪರದೆ ಮೇಲೆ ಕಾಣಿಸಿಕೊಳ್ಳಲು ಆರಂಭಿಸಿದಾಗ ನಾನು ಉತ್ತೇಜಿತನಾದೆ. ಜೂಮ್ ಮೀಟಲ್ಲಿ ನನ್ನನ್ನ ಕಂಡ ಹಲವರು ‘ಕಡೆಗೂ ನಿನಗೆ ಬುದ್ಧಿ ಬಂತು. ಅದೂ ನೀನು ಜೂಮ್ ಮೀಟ್‌ನಲ್ಲಿ!’ ಅಂತ ರೇಗಿಸಲು ಆರಂಭಿಸಿ ‘ಅದೇನು ಇದ್ದಕ್ಕಿಂದ್ದಂಗೆ..?’ ಎಂದು ಪ್ರಶ್ನೆ ಎಸೆದರು. ಉತ್ಸಾಹ ಹೆಚ್ಚಿದಾಗ ನನಗೆ ಜಿಎಸ್ಎಸ್ ರ ಪದ್ಯ ನೆನಪಾಯಿತು. ‘ಮಾತಿನ ಹಣತೆ ಹಚ್ಚಿ ನಿಮ್ಮನ್ನ ನೋಡೋಣ..’ ಅಂತಂದೆ. ಡಿಜಿಟಲ್ ಪರಿಣಿತ ತಲೆಚಚ್ಚಿಕೊಳ್ಳುತ್ತಿರುವುದು ಕಾಣುತ್ತಿತ್ತು. ಉಳಿದವರು ನಗುತ್ತಿದ್ದರು. ‘ಜಿಎಸ್ಎಸ್ ಅವರ ಪದ್ಯ ಕೇಳಿ’ ಅಂತಂದು ಹೇಳಿದೆ-

‘ಆದರೂ ಹಣತೆ ಹಚ್ಚುತ್ತೇನೆ ನಾನು;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.’

(ಸ್ಯಾಮುಯಲ್ ಬೆಕೆಟ್)

ಪದ್ಯ ಕೇಳಿಸಿಕೊಂಡ ಎಲ್ಲರೂ ಖುಷಿಯಲ್ಲಿ ‘ಹೋ…’ ಅಂದರು. ಮತ್ತೆ ಕೆಲವರು ‘ವಿಶಲ್ ಪೋಡು..’ ಅಂದರು. ಯುಕೆನಲ್ಲಿರುವ ಗೆಳತಿ ಸೋಯಿ ಈಚೆಗೆ ಹಿಂದಿ ಕಲಿಯಲು ಆರಂಭಿಸಿದ್ದರೂ ಪದ್ಯ ವಾಚನಕ್ಕೆ ‘ವಾಹ್ ಕ್ಯಾ ಬಾತ್ ಹೈ..’ ಅಂದಳು. ನಾನು ನಕ್ಕೆ.

ಮತ್ತೇನು ಸಮಾಚಾರ ಎಂದು ವಿಚಾರಿಸುತ್ತಿದ್ದಂತೆ ಕೆಲವರು ನನ್ನನ್ನ ಸಿಟ್ಟಿನಲ್ಲಿ ರೇಗಿಸಲು ಆರಂಭಿಸಿದರು. ‘ಅದೇನದು ನಿಂದು ಗ್ರಹಿಕೆ.. ಕಸಪೊರಕೆ.. ಅಂತೆಲ್ಲ..’ ಅಂದರು. ಸೋಯಿ ನಗುತ್ತಿದ್ದಳು. ಎಲ್ಲಿ ಮಾತು ಲೋಕಾಭಿರಾಮಕ್ಕೆ ತಿರುಗಿಕೊಳ್ಳುತ್ತದೋ ಎಂದು ಹೆದರುತ್ತ ಮತ್ತು ಆ ಹೆದರಿಕೆಯನ್ನ ನಾನು ಮರೆಮಾಚುತ್ತಿದ್ದಾಗ ನೀನಾಸಂನಲ್ಲಿ ಕಲಿತ ಗೆಳೆಯನೊಬ್ಬ “ನಿನಗೆ ಕರೋನ ‘ಪ್ರಚಂಡ ರಾವಣ’ ಅನಿಸಿರಬಹುದು. ನನಗೆ ಇವತ್ತಿನ ಕಾಲ ಸ್ಯಾಮುಯಲ್ ಬೆಕೆಟ್ ನ ‘ವೇಯ್ಟಿಂಗ್ ಫಾರ್ ದಿ ಗಾಡೊ..’ ನಾಟಕ ನೆನಪಿಸ್ತಿದೆ..” ಅಂದ.

ನಾನು ಕೊಂಚ ನಿರಾಳನಾಗಿ ಅವನಿಗೆ ‘ಹೇಗೆ ಜಸ್ಟಿಫೈ ಮಾಡು..’ ಅಂದೆ. ಡಿಜಿಟಲ್ ಪರಿಣಿತ ಮುಖ ಕಿವುಚಿಕೊಳ್ಳುತ್ತಿದ್ದ. ಉಳಿದವರು ನಗುತ್ತಿದ್ದರು.

ನಿನಾಸಂ ಗೆಳೆಯ ‘ನಾಟಕದಲ್ಲಿ ವ್ಲ್ಯಾಡಿಮಿರ್ ಹಾಗೂ ಎಕ್ಸ್ಟ್ರಗನ್ ಕಟ್ಟಕಡೆಯವರೆಗೂ ಗಾಡೋಗೆ ಕಾಯ್ತಾರೆ. ಆದರೆ ಗಾಡೊ ಕಡೆಗೂ ಬರೋದೇ ಇಲ್ಲ. ಬದುಕು ಅಂದರೆ ಅರ್ಥರಹಿತವಾಗಿ ಕಾಯುವುದು ಅನ್ನುವುದನ್ನ ನಾಟಕ ಹೇಳುತ್ತೆ. ನಮ್ಮ ಪರಿಸ್ಥಿತಿನೂ ಹಾಗೇ ಇದೆ. ನಾವೂ ಇವತ್ತು ಕರೋನದಿಂದ ಪರಿಹಾರ ಸಿಗುತ್ತೆ ಸಿಗುತ್ತೆ ಅಂತ ಕಾಯ್ತಲೇ ಇದ್ದೀವಿ. ಪರಿಹಾರಾನ ಇಲ್ಲಿ ಗಾಡೋಗೆ ಹೋಲಿಸಬಹುದು… ನಾಟಕದಲ್ಲಿ ಗಾಡೋ ಬರೋದಿಲ್ಲ. ಹಾಗೇ ನಮಗೂ ಪರಿಹಾರ ಸಿಗೋದಿಲ್ಲ. ಅದೂ ಅಬ್ಸರ್ಡ್ ನಾಟಕ, ನಮ್ಮ ಇವತ್ತಿನ ಪರಿಸ್ಥಿತಿನೂ ಅಷ್ಟೇ ಅಬ್ಸರ್ಡ್ ಆಗಿದೆ..’ ಅಂದ.

“‘ವೇಯ್ಟಿಂಗ್ ಫಾರ್ ದಿ ಗಾಡೊ’ ಅದ್ಭುತ ನಾಟಕ. ಎರಡು ಮಾತಿಲ್ಲ. ಪರಿಹಾರದ ನಿನ್ನ ಸಮೀಕರಣ ಕೂಡ ಸರಿ ಅನಿಸಿಬಿಡುತ್ತೆ. ಆದರೆ ನಾನು ‘ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬ ಅಗ್ಗ’ ಅನ್ನುವ ಅಡಿಗರ ಸಾಲನ್ನ ಸದಾ ನೆನೆಯುವವನು..” ಅಂದೆ.

‘ತಗ್ಗೊ ಶುರುವಾಯ್ತು…’ ಅಂತ ಅಲರ್ಟಾದರು ಗೆಳೆಯರು. ಸೋಯಿ ಎಂದಿನ ಹಾಗೇ ನಗುವುದನ್ನ ಮುಂದುವರೆಸಿದ್ದಳು.

‘ವೇಯ್ಟಿಂಗ್ ಫಾರ್ ದಿ ಗಾಡೊ’ ನಾಟಕವನ್ನ ತುಂಬ ಹಿಂದೆ ಓದಿದ್ದೆ. ನಿಜಕ್ಕೂ ಅದ್ಭುತ ನಾಟಕ. ನನ್ನ ಸರ್ಟಿಫಿಕೇಟ್ ಹೊರತಾಗಿಯೂ ಅದು ಚೆಂದದ ನಾಟಕ. ಐದೇ ಪಾತ್ರಗಳು. ಅದರಲ್ಲೂ ಒಂದು ಪಾತ್ರ (ಮೆಸೆಂಜರ್ ಹುಡುಗ) ತೀರಾ ಚಿಕ್ಕದು. ಉಳಿದ ನಾಲ್ಕು ಪಾತ್ರಗಳು ನಮ್ಮ ಕಾಲ, ದೇಶ ಅರ್ಥಗ್ರಹಿಕೆಗೆ ಅನುಸಾರ ನಿಲುಕುವಂಥವು. ಎರಡೇ ಅಂಕದ ನಾಟಕ. ಮೊದಲ ಅಂಕದಲ್ಲಿ ಬೋಳು ಮರ ಹಿನ್ನೆಲೆಗಿದೆ. ಅದೊಂದು ಸಂಕೇತ. ಎರಡನೆ ಅರ್ಧದಲ್ಲಿ ಮರ ಚಿಗುರಿದೆ. ಅದು ಮತ್ತೊಂದು ಸಂಕೇತ. ಇನ್ನು ನಾಲ್ಕು ಪಾತ್ರಗಳು- ವ್ಯ್ಲಾಡಿಮಿರ್, ಎಸ್ಟ್ರಗನ್, ಪಾಟ್ಜೊ ಹಾಗೂ ಲಕ್ಕಿ.

ವ್ಲ್ಯಾಡಿಮಿರ್, ಎಸ್ಟ್ರಗನ್ ಪಾತ್ರಗಳು ಬದುಕಿನ ವೈಫಲ್ಯ ಹಾಗೂ ಅರ್ಥರಹಿತ ಸ್ಥಿತಿಯನ್ನ ಬಿಂಬಿಸುವಂಥವು. ಜೊತೆಗೆ ಬದುಕು ಮತ್ತು ಸಾವು ತಮಾಷೆಯ ಸಂಗತಿಗಳಾಗಿವೆ ಎಂದು ಸೂಚಿಸುವ ನಾಟಕ. ಗಾಡೊನನ್ನು ನಾವು ಧರ್ಮ ಮತ್ತು ಮೋಕ್ಷ ಪ್ರದಾಯಕ ದೇವರು ಅಂತಂದುಕೊಳ್ಳುವುದಾದರೆ ಆತ ನಾಟಕದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಇನ್ನು ಪಾಟ್ಜೊ ಹಾಗೂ ಲಕ್ಕಿ ಪಾತ್ರ ಚಿತ್ರಣಗಳು ಮಾಲೀಕ ಹಾಗೂ ಗುಲಾಮ, ಬಂಡವಾಳಶಾಹಿ ಹಾಗೂ ಶ್ರಮಿಕ, ಸಿರಿತನ ಹಾಗೂ ಬಡ ಕಲಾವಿದನಿಗೆ ಸಮೀಕರಿಸಿ ನೋಡಬಹುದು ಎಂದು ಹಲವರು ತೋರಿಸಿಕೊಟ್ಟಿದ್ದಾರೆ. ತುಂಬ ಅನ್‌ಲಕ್ಕಿ ಫೆಲೊಗೆ ಇಲ್ಲಿ ‘ಲಕ್ಕಿ’ ಅಂತ ಹೆಸರಿಟ್ಟಿರುವುದು ಮತ್ತೊಂದು ಸಂಕೇತ.

ಇನ್ನು ಗಾಡೋ- ಆತ ದೇವರೇ? ಅವನಿಗೆ ಮನುಕುಲ ಕಾಯುತ್ತಿದೆಯೆ ಎಂದು ಪ್ರಶ್ನಿಸಿಕೊಂಡರೆ ಅದಕ್ಕೂ ಸ್ಪಷ್ಟ ಉತ್ತರವಿಲ್ಲ. ಗಾಡೊ ‘ ಗಾಡ್..?’ ಇರಬಹುದೆ ಎಂದು ಬೆಕೆಟ್ ನನ್ನೇ ಒಮ್ಮೆ ಕೇಳಿದಾಗ ಆತ ‘ದೇವರೇ ಆಗಿದ್ದರೆ ನಾನು ದೇವರು ಅಂತಲೇ ಬರೀತಿದ್ದೆ’ ಅಂತ ಉತ್ತರಿಸಿದ್ದರು. ಹಾಗಾದರೆ ಮತ್ತೇನು? ಕಾಯುವಿಕೆ ಯಾರಿಗಾಗಿ?

ರಂಗ ‘ಭೂಮಿ’ ಈಗ ವಿಶ್ರಾಂತ. ಆನ್ಲೈನು, ವರ್ಚುವಲ್ ಡ್ರಾಮ ನೋಡುವ ಸೌಲಭ್ಯವಿದ್ದರೂ ಮನಸ್ಸು ಅದಕ್ಕೆ ಸ್ಪಂದಿಸುವುದಿಲ್ಲ. ನಾಟಕ ಲೈವ್ ಆಗಿ ನೋಡಿದರೇನೇ ಚೆಂದ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಆದರೂ ಕಣ್ಣುಗಳು ಕೇಳುವುದಿಲ್ಲ.

ಈ ನಾಟಕದಲ್ಲಿನ ‘ವೇಯ್ಟಿಂಗ್’ (ಕಾಯುವಿಕೆ) ಅನ್ನುವುದು ಮನುಷ್ಯನ ಸ್ಥಿತಿ. ಹಾಗೇ ತಾನು ಬದುಕುತ್ತಿರುವ ಜಗತ್ತಿನಲ್ಲಿ ಇರಿಸಿಕೊಂಡಿರುವ ಕಟ್ಟಕಡೆಯ ನಂಬಿಕೆಯ ಸ್ಥಿತಿಯೂ ಹೌದು. ನಾಟಕದಲ್ಲಿರುವ ಒಂಟಿತನ – ಅದು ಮನುಷ್ಯರಿಂದ ಕಾಯ್ದುಕೊಂಡಿರುವ ಭೌತಿಕ ದೂರ ಮಾತ್ರ ಅಲ್ಲ. ಬದಲಿಗೆ ಆ ಒಂಟಿತನವನ್ನ ಸಾಮಾಜಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಕಾಣಲಾಗಿದೆ.

ನೀನಾಸಂ ಗೆಳೆಯ ಬೆಕೆಟ್‌ನ ನಾಟಕ ನೆನಪಿಸಿದ ಕೂಡಲೇ ನನಗೆ ಇಷ್ಟು ವಿವರಗಳು ನೆನಪಾದವು. ಕನ್ನಡದಲ್ಲಿ ಇದೇ ನಾಟಕವನ್ನ ‘ಅನಾಹತನಾದ’ ಅಂತಲೋ ಅಥವಾ ಬೇರೆ ಹೆಸರಿನಿಂದಲೊ ರಂಗಕ್ಕೆ ತಂದಿದ್ದರು. ಆ ಪ್ರಯೋಗ ನೋಡಿದ ನೆನಪು.

ಈ ಎಲ್ಲ ಅಂಶಗಳು ನಾಟಕದಲ್ಲಿ ಇವೆ. ಇಷ್ಟಕ್ಕೆ ‘ಪರಿಹಾರ’ವನ್ನ ಗಾಡೋಗೆ ಸಮೀಕರಿಸುವುದು ನನಗೆ ಹಿಡಿಸಲಿಲ್ಲ.

ಹೇಳಿದೆ- ‘ನೋಡು ಗೆಳೆಯ… ನಾಟಕದಲ್ಲಿ ಬಿಂಬಿತವಾಗಿರುವ ಬದುಕಿನ ಅಬ್ಸರ್ಡಿಟಿ- ಅಸಂಗತತೆಯನ್ನ ಒಪ್ಪಿಕೊಳ್ಳೋಣ. ಹಾಗಂತ ಬದುಕು ಪೂರಾಪೂರಾ ಹಾಗೇ ಎಂದು ಜಡ್ಜ್‌ಮೆಂಟಲ್ ಆಗೋದು ಬೇಡ. ಒಂದು ಕಾಲದಲ್ಲಿ ಅಸಂಗತ ಅನಿಸಿದ್ದು ಮತ್ತೊಂದು ಕಾಲದಲ್ಲಿ ತಿಳಿಯಾಗಲು ಆರಂಭಿಸುತ್ತದೆ. ಇದಕ್ಕೆ ಬೆಕೆಟ್ ಬರೆದ ‘ವೇಯ್ಟಿಂಗ್ ಫಾರ್ ದಿ ಗಾಡೋ’ ನಾಟಕದ ಸಂದರ್ಭ ಮತ್ತು ನಂತರದ ಬೆಳವಣಿಗೆಯನ್ನ ಗಮನಿಸು, ತಿಳಿಯುತ್ತೆ. ಇವತ್ತು ನಾವು ಆ ಗಾಡೊ ನಾಟಕವನ್ನ ಇಪ್ಪತ್ತನೆಯ ಶತಮಾನದ ಶ್ರೇಷ್ಠ ನಾಟಕ ಅಂತೆಲ್ಲ ಕರೆದು ಆರಾಧಿಸ್ತಿದ್ದೇವೆ. ಆದರೆ ಅದು ರಚನೆಗೊಂಡ ಸಂದರ್ಭ ಹೇಗಿತ್ತು ಗೊತ್ತಾ..?’

ಜೂಮ್ ಮೀಟ್‌ನಲ್ಲಿ ಹಲವರು ನನ್ನ ಮಾತಿನ ಬಗ್ಗೆ ಕುತೂಹಲ ತಾಳಿದರು. ಸೋಯಿ ಹುಬ್ಬುಗಳು ಮೇಲೆದ್ದವು. ನಿನಾಸಂ ಗೆಳೆಯ ಕೆನ್ನೆಗೆ ಅಂಗೈ ಒತ್ತಿ ಫೋಸ್ ಕೊಟ್ಟ.

ನಿಜದ ಸಂಗತಿ ಅಂದರೆ ಸ್ಯಾಮುಯಲ್ ಬೆಕೆಟ್ ನಾಟಕ ಬರೆಯುವ ಮೊದಲು ಬರೆದದ್ದು ಕಾದಂಬರಿ. ಟ್ರಯೋಲಜಿ. ತಾನು ಬರೆದ ಕಾದಂಬರಿಗಳನ್ನ ಹಿಡಿದು ಪ್ರಕಾಶಕರ ಬಳಿ ಸುತ್ತಾಡಿದ. ಸುಮಾರು ನಲವತ್ತು ಮಂದಿ ಪ್ರಕಾಶಕರು ಬೆಕೆಟ್ ನ ಕಾದಂಬರಿಗಳನ್ನು ಪ್ರಕಟಿಸಲು ನಿರಾಕರಿಸಿದರು. ಅದೇ ಸಮಯದಲ್ಲಿ ಬೆಕೆಟ್, ‘ಬ್ಲ್ಯಾಕ್ನೆಸ್ ಆಫ್ ಪ್ರೋಸ್‌’ನಿಂದ ಕೊಂಚ ರಿಲೀಫ್ ಪಡೆದುಕೊಳ್ಳಲಿಕ್ಕೆ ಬರೆಯಲು ಆರಂಭಿಸಿದ್ದು ನಾಟಕ ಎನ್ನುವುದು ಮುಖ್ಯವಾದ ಸಂಗತಿ. ಅದೂ ಆತ ಗಾಡೋ ನಾಟಕವನ್ನ ಮೊದಲು ಬರೆದದ್ದು ತನಗೆ ಅನ್ಯವಾದ ಫ್ರೆಂಚ್ ಭಾಷೆಯಲ್ಲಿ. ಬೇರೆ ಭಾಷೆಯಲ್ಲಿ ಬರೆದರೆ ಅದು ಒಂದು ಡಿಸಿಪ್ಲೀನ್ ಕಲಿಸುತ್ತದೆ ಅನಿಸಿ ಬರೆದದ್ದು ಗಾಡೊ. ನಂತರ ಬೆಕೆಟ್ ಖುದ್ದು ಇಂಗ್ಲಿಷ್ ಗೆ ಅನುವಾದಿಸಿದ. ಮತ್ತೂ ಮುಖ್ಯವಾದ ಸಂಗತಿ ಅಂದರೆ ಬೆಕೆಟ್ ಇಪ್ಪತ್ತನೆಯ ಶತಮಾನದ ಪ್ರಸಿದ್ಧ ನಾಟಕ ‘ವೇಯ್ಟಿಂಗ್ ಫಾರ್ ದಿ ಗಾಡೊ’ ಬರೆಯುವ ಪೂರ್ವದಲ್ಲಿ Eleutheria ನಾಟಕ ಬರೆದಿದ್ದ. ಬೆಕೆಟ್‌ಗೆ ಗಾಡೊಗಿಂತ Eleutheria ಪ್ರಿಯವಾದ ನಾಟಕ. ಆದರೆ ಮೊದಲು ರಂಗಕ್ಕೆ ಬಂದದ್ದು ಗಾಡೊ.

ಹಾಗೆ ಬಂದದ್ದರ ಹಿಂದೆ ಮತ್ತೊಂದು ತಮಾಷೆಯ ಸಂಗತಿ ಇದೆ. ಇದನ್ನ ಅಸಂಗತದ ದೃಷ್ಟಿಯಿಂದ ನೋಡಲು ಆರಂಭಿಸಿ ನಂತರ ಸಂಗತಕ್ಕೆ ಬರಬಹುದು. ಕಾದಂಬರಿಗಳ ಪ್ರಕಟಣೆ ಹಲವು ಪ್ರಕಾಶಕರಿಂದ ತಿರಸ್ಕೃತಗೊಳ್ಳುತ್ತಿದ್ದರೂ ಕಟ್ಟಕಡೆಗೆ ಬೆಕೆಟ್‌ನ ತ್ರಿವಳಿ ಕಾದಂಬರಿಯನ್ನ ಪ್ರಕಟಿಸಲು ಜೆರೋಮ್ ಲಿಂಡನ್ ಎಂಬ ಪ್ರಕಾಶಕ ಮುಂದೆ ಬಂದ. ಆದರೆ Eleutheria ಹಾಗೂ ‘ವೇಯ್ಟಿಂಗ್ ಫಾರ್ ದಿ ಗಾಡೊ’ ನಾಟಕಗಳನ್ನ ರಂಗಕ್ಕೆ ತರುವ ಪ್ರೊಡ್ಯೂಸರ್‌ಗಳು ಸಿಗಲಿಲ್ಲ. ಕಡೆಗೆ ಒಬ್ಬ ಸಿಕ್ಕ. ಆತನ ಹೆಸರು ರೋಜರ್ ಬ್ಲಿನ್. ಈಗ Eleutheria ಅಥವಾ ‘…ಗಾಡೊ’ ಎಂದು ಆಯ್ಕೆ ಬಂದಾಗ ಆರಿಸಿಕೊಂಡದ್ದು ‘… ಗಾಡೊ’ ವನ್ನೇ. ಕಾರಣ ತುಂಬ ತಮಾಷೆಯಿಂದ ಕೂಡಿದೆ. ಗಾಡೋದಲ್ಲಿ ನಟರ ಸಂಖ್ಯೆ ಕಡಿಮೆ ಇದೆ ಹಾಗೂ ಪ್ರೊಡ್ಯೂಸ್ ಮಾಡಿದರೆ ಖರ್ಚು ಕಡಿಮೆ ಆಗುತ್ತದೆ ಎಂಬುದು ಆತನ ಲೆಕ್ಕಾಚಾರವಾಗಿತ್ತು.

ಹಾಗೆ ರಂಗಕ್ಕೆ ಬಂದದ್ದು ‘ವೇಯ್ಟಿಂಗ್ ಫಾರ್ ದಿ ಗಾಡೊ’. ಬಂದ ಕೂಡಲೇ ಅದಕ್ಕೆ ಯಶಸ್ಸು ದೊರೆಯಲಿಲ್ಲ. ಲಂಡನ್ನಿನಲ್ಲಿ ಆದ ಆ ಪ್ರೊಡಕ್ಷನ್ ಕಂಡ ಮರಿಯ ಮನೇಸ್ ಎಂಬ ರಂಗವಿಮರ್ಶಕಿ – ‘I doubt whether I have seen a worse play’ ಎಂದು ಬರೆದರು. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬ್ರೂಕ್ಸ್ ಅಟ್ಕಿನ್ಸನ್ ಗಾಡೊ ನಾಟಕವನ್ನ ‘A mystery wrapped in an enigma’ ಎಂದು ಬರೆದರು.

ನ್ಯೂಯಾರ್ಕ್ ಡ್ರಾಮಾ ಕ್ರಿಟಿಕ್ಸ್ ಸರ್ಕಲ್ ನವರು ‘ಲಾಂಗ್ ಡೇಸ್ ಜರ್ನಿ ಇನ್‌ಟು ನೈಟ್..’ ನಾಟಕವನ್ನ ಬೆಸ್ಟ್ ಪ್ಲೇ ಅಂತ ತೀರ್ಪು ಕೊಟ್ಟರು. ಬೆಸ್ಟ್ ಫಾರಿನ್ ಪ್ಲೇ ಆಗಿ ‘ವಾಲ್ಟ್ಸ್ ಆಫ್ ದಿ ಟೊರಿಯಾಡೋರ್ಸ್’ ಆರಿಸಿದರು. ಮೂರು ಇತರ ಫಾರಿನ್ ನಾಟಕಗಳಿಗೆ ಅವರ ಓಟ್ ನಮೂದಿಸಿದ್ದರು. ಆದರೆ ‘ವೇಯ್ಟಿಂಗ್ ಫಾರ್ ದಿ ಗಾಡೋ’ ಗೆ ಒಂದೇ ಒಂದು ಓಟ್ ದಕ್ಕಿರಲಿಲ್ಲ. ಇದು ನಿಜವಾದ ಅಬ್ಸರ್ಡಿಟಿ. ಹಾಗೇ ಆಯಾ ಘಟ್ಟದಲ್ಲಿ ನಾಟಕಕ್ಕೆ ದಕ್ಕಬೇಕಾದ ಮಾನ್ಯತೆ ದಕ್ಕಿರಲಿಲ್ಲ. ಅರ್ಥಹೀನ ಸ್ಥಿತಿ ಅನಿಸಬಹುದು. ‘ವೇಯ್ಟಿಂಗ್ ಫಾರ್ ದಿ ಗಾಡೋ’ ನಾಟಕದ ಮುಕ್ತಾಯ ಗಮನಿಸಬೇಕು. ಇಂದೂ ಕೂಡ ಗಾಡೋ ಬರುವುದಿಲ್ಲ ಎಂದು ಸಂದೇಶದ ಹುಡುಗನಿಂದ ಖಾತ್ರಿಯಾದಾಗ ವ್ಲ್ಯಾಡಿಮಿರ್ ಹಾಗೂ ಎಸ್ಟ್ರಗನ್ ಹೊರಡಲು ಅನುವಾದವರು ಸುಮ್ಮನೆ ನಿಲ್ಲುತ್ತಾರೆ. ಪರದೆ ಬಿದ್ದರೂ ಅವರು ನಿಂತೇ ಇರುತ್ತಾರೆ ಎಂಬಲ್ಲಿಗೆ ನಾಟಕ ಕೊನೆಗೊಳ್ಳುತ್ತದೆ. ಅದು ನಾಟಕದಲ್ಲಿನ ಅಸಂಗತತೆ.

ಆದರೆ ಗಾಡೋ ನಾಟಕ ಕ್ರಮೇಣ ಹಲವರ ಅರ್ಥಗ್ರಹಿಕೆಗೆ ನಿಲುಕಿತು. ನಂತರ ಸೃಷ್ಟಿಯಾದದ್ದೆಲ್ಲ ಇತಿಹಾಸ. ಹೆರಾಲ್ಡ್ ಪಿಂಟರ್, ಟಾಮ್ ಸ್ಟಾಪರ್ಡ್, ಎಡ್ವರ್ಡ್ ಅಲ್ಬಿ, ಸ್ಯಾಮ್ ಶೆಪರ್ಡ್, ಡೇವಿಡ್ ಮ್ಯಾಮೆಟ್, ಫೆರ್ನಾಂಡೊ ಅರಬಲ್, ಅಲತೊಲ್ ಫ್ಯುಗಾರ್ಡ್ ಮತ್ತಿತ್ತರರು ಬೇರೆಬೇರೆ ಸ್ತರಗಳಲ್ಲಿ ಒಂದು ರೀತಿ ಬೆಕೆಟ್‌ನ ಮಕ್ಕಳಾಗಿಬಿಟ್ಟರು ಎನ್ನುತ್ತಾನೆ ಮೆಲ್ ಗುಸಾವ್.

ನಂತರ ಶುರುವಾದದ್ದು ಬೆಕೆಟ್ ಶಕೆ. ಅವನಿಂದ ಮುಂದೆ ನಾಟಕ ಬರೆಯುವ ಕ್ರಮ ಬದಲಾಯಿತು. ನಾಟಕ ಅಂದರೆ ಸಾಂಪ್ರದಾಯಿಕ ಶಿಸ್ತಿನಿಂದ ಕೂಡಿರಬೇಕು, ಇಷ್ಟೇ ಉದ್ದವಿರಬೇಕು, ಕಥಾವಸ್ತು, ಪಾತ್ರಪೋಷಣೆ, ನಾಟಕದಲ್ಲಿ ಚಲನೆ ಈ ಬಗೆಯಲ್ಲೇ ಇರಬೇಕೆಂಬ ನಿಬಂಧನೆ ದೂರವಾಯಿತು. ‘In his hands statis became a dramatic art’ ಎಂಬುದು ಬೆಕೆಟ್‌ಗೆ ಸಿಕ್ಕ ಪ್ರಶಂಸೆ.

ಟಾಮ್ ಸ್ಟಾಪರ್ಡ್ ಸೃಷ್ಟಿಸಿದ ರೋಸನ್ ಕ್ರಾಂಟ್ಜ್ ಹಾಗೂ ಗಿಲ್ಡರ್ ಸ್ಟರ್ನ್ ಬೆಕೆಟ್ ನ ವ್ಯ್ಲಾಡಿಮಿರ್ ಹಾಗು ಎಸ್ಟ್ರಗನ್ ಪಾತ್ರಗಳಾಗಿ ಇತಿಹಾಸವನ್ನ ತಿಳಿಯಲು ಉದ್ಯುಕ್ತವಾದವು. ಪಿಂಟರ್‌ನ ಕೋಣೆ- ಬೇಸ್ಮೆಂಟ್, ಬೆಡ್ ರೂಂ ಬೆಕೆಟ್ ತನಗೆ ತಾನೇ ವಿವರಣೆ ಕೊಟ್ಟುಕೊಟ್ಟುಕೊಳ್ಳುವ ಹಾಗೂ ಸೀಲ್ಡ್ ಆದ ಎನ್ ಕ್ಲೋಷರ್ ಗೆ ಹೋಲಿಸಲಾಗಿದೆ. ಜೊಸೆಫ್ ಚೈಕಿನ್ ಹಾಗೂ ಶೆಫರ್ಡ್‌ನ ‘ಟಂಗ್ಸ್’ ಬೆಕೆಟ್ ನ ‘ಡ್ರೀಮ್ ಆಫ್ ಕಾನ್ಶಿಯಸ್ನೆಸ್..’ ಎನ್ನಲಾಗಿದೆ. ಪೀಟರ್ ಬ್ರೂಕ್ ‘ಕಿಂಗ್ ಲಿಯರ್’ ನಾಟಕ ನಿರ್ದೇಶಿಸುವಾಗ ಬೆಕೆಟ್ ನ ‘ಎಂಡ್ ಗೇಮ್’ ಜೊತೆ ಸಮೀಕರಿಸುವುದರ ಜೊತೆ ಬೆಕೆಟ್ ಸೃಷ್ಟಿಸಿದ ಅಲೆಮಾರಿಯನ್ನಾಗಿ ಲಿಯರ್‌ನನ್ನು ಕಾಣಿಸಿದರು.

ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ‘ವೇಯ್ಟಿಂಗ್ ಫಾರ್ ದಿ ಗೋಡೊ’ ನಾಟಕವನ್ನ John kani ಹಾಗೂ Winston Ntshona ಅವರ ಬ್ಲ್ಯಾಕ್ ಸೌತ್ ಆಫ್ರಿಕನ್ ಆವೃತ್ತಿಯ ರೂಪಾಂತರದಲ್ಲಿ ಸಾರ್ವತ್ರಿಕತೆಯನ್ನ ಕಾಣಬಹುದು. ಈ ಪ್ರೊಡಕ್ಷನ್ ವಿಮೋಚನೆಗೆ ಇನ್ನಿಲ್ಲದಂತೆ ಹಂಬಲಿಸಿದ ದಕ್ಷಿಣ ಆಫ್ರಿಕಾದ ಅನುಭದ ಕಥನವಾಗಿಯೂ ಕಾಣಬಹುದು ಎನ್ನುವಷ್ಟರ ಮಟ್ಟಿಗೆ ‘ಗಾಡೊ’ ನಾಟಕ ತನ್ನ ವಿಸ್ತರಣೆ ಪಡೆದುಕೊಂಡಿತ್ತು.

ಜೂಮ್ ಮೀಟ್‌ನಲ್ಲಿ ಇಷ್ಟನ್ನು ವಿವರಿಸುತ್ತ ‘ಒಂದು ಘಟ್ಟದಲ್ಲಿ ಅರ್ಥಹೀನ ಅನಿಸಿದ್ದು ಮತ್ತೊಂದು ಘಟ್ಟದಲ್ಲಿ ಅರ್ಥದ ಶಿಖರ ಕಾಣಿಸುತ್ತದೆ. ಅಥವಾ ಕಾಣಿಸಬಹುದು. ನಾಟಕದಲ್ಲಿನ ‘ವೇಯ್ಟಿಂಗ್’ ಒಂದು ಬಗೆಯಲ್ಲಿ ಸ್ಟಾಟಿಕ್. ಬದುಕಿನಲ್ಲಿ ಕಾಯುವುದು ನೋವು ಮತ್ತು ಮಜ ಎರಡೂ ಹೌದು. ಸೊ ಗೆಳೆಯ… ನಿನ್ನ ಸಮೀಕರಣವನ್ನ ನಾನು ಅಂಗೀಕರಿಸಲ್ಲ..’ ಅಂದೆ.

ನನ್ನ ಮಾತು ಕೇಳಿಸಿಕೊಳ್ಳುತ್ತ ಸುಸ್ತಾದ ಕೆಲವರು ನಕ್ಕು ‘ಮೇಷ್ಟ್ರು ಕ್ಲಾಸ್ ಮುಗಿಸಿದ್ರಪ್ಪ..’ ಎಂದು ಕೀಟಲೆ ಆರಂಭಿಸಿದರು. ‘ಇಲ್ಲ ಅಂದುಬಿಡಿ ನೋಡೋಣ..’ ಅಂತ ನಾನು ಸವಾಲು ಹಾಕಿದೆ. ಎಲ್ಲರೂ ನಗುತ್ತ ನನಗೆ ಕೈ ಮುಗಿದರು.

‘ಈ ಅಬ್ಸರ್ಡಿಟಿ, ಇಮೇಜುಗಳೆಲ್ಲ ನಾಟಕದಲ್ಲಿ ಕಾಣಬಹುದು ಅಷ್ಟೇ. ರಿಯಲ್ ಲೈಫಲ್ಲಿ ಹಿಂಗೆಲ್ಲ ಇರಲ್ಲ. ಸೊ ನಿನ್ನ ಮಾತು ಒಪ್ಪಬಹುದು’ ಅಂದಳು ಮತ್ತೊಬ್ಬಳು ಗೆಳತಿ ಶ್ರೀಪದ.

‘ಹಾಗೇನಿಲ್ಲ. ನೀನೂ ಒಂದು ಚೆಂದದ ಅಬ್ಸರ್ಡ್ ನಾಟಕ ಬರೀತೀನಿ ಅಂತನ್ನುವುದಾದರೆ ನಾನು ನಿನಗೆ ಎರಡು ಸಂಗತಿ ಕಟ್ಟಿಕೊಡ್ತೀನಿ. ತೀರಾ ಈಚೆಗೆ ಘಟಿಸಿದ್ದು ಇವು..’ ಅಂದೆ.

‘ಮೇಷ್ಟ್ರು ಕ್ಲಾಸ್ ಮುಗಿಯಂಗೆ ಕಾಣಲ್ಲ. ಬೆಲ್ಲಾದ್ರೂ ಹೊಡೀರೋ..’ ಅಂತಂದು ಗೆಳೆಯರು ಮತ್ತೆ ರೇಗಿಸಿದರು. ಈ ಮಾತಿಗೆ ಎಲ್ಲರದೂ ನಗುವಿನ ಸಾಥ್.

‘ಏ ಇರಿ ಸ್ವಲ್ಪ…’ ಅಂತಂದು ನಾನು, ಈಚೆಗೆ ನನ್ನ ಗಮನ ಸೆಳೆದ ಎರಡು ಸಂಗತಿ ನೆನಪಿಗೆ ತಂದುಕೊಂಡೆ.

ಮೊದಲನೆಯದು ಗ್ವಾಟೆಮಾಲ ಪ್ರದೇಶದಲ್ಲಿ ನಡೆದದ್ದು. ಆತನ ಹೆಸರು ಡೇವಿಡ್ ಗಾರ್ಸಿಯಾ. ವಯಸ್ಸು ಮೂವತ್ನಾಲ್ಕು. ಗ್ವಾಟೆಮಾಲದಲ್ಲಿ ಆತ ಅಕೌಂಟೆಂಟ್. ಗಾರ್ಸಿಯಾ ಆ್ಯಕ್ಟಿವ್ ವಾಲ್ಕನೋದ ಅಡ್ವಾಂಟೇಜ್ ತೆಗೆದುಕೊಂಡು ಈಚೆಗೆ ಫುಡ್ ಕ್ರೇಜ್ ಸೃಷ್ಟಿಸಿದ ವಿಡಿಯೋ ವೈರಲ್ ಆಗಿದೆ. ಆತ ವಾಲ್ಕನೋದಿಂದ ಪಿಜ್ಜಾ ಕುಕ್ ಮಾಡಿರುವ ವೀಡಿಯೋ ಅದು. ಅದಕ್ಕೆ ಆತ ‘Pacaya Pizza’ ಎಂದು ಹೆಸರುಕೊಟ್ಟಿದ್ದಾನೆ. ಗ್ವಾಟೆಮಾಲದಲ್ಲಿ ಕುದಿಯುತ್ತ ಹೊರಗೆ ಧುಮ್ಮಿಕ್ಕುತ್ತಿರುವ ಲಾವಾದ Pacaya valcano ವನ್ನ ಅಡುಗೆ ಮನೆಯನ್ನಾಗಿಸಿಕೊಂಡು ಆತ ಪಿಜ್ಜಾ ತಯಾರಿಸಿದ್ದು ಕೇಳಿದಾಗ ನನಗೆ ಇದು ಅಬ್ಸರ್ಡ್ ಕ್ರಿಯೆ ಅನಿಸಿದ್ದು ನಿಜ. ಆದರೆ ಕುದಿವ ವಾಲ್ಕನೊ ನಡುವೆಯೇ ಪಿಜ್ಜಾ ಬೇಯಿಸಿದ್ದು ನನಗೆ ಹುಚ್ಚಿನ ಸಂಗತಿಯೂ ಹೌದು, ಜೊತೆಗೆ ಜೀವನ ಪ್ರೀತಿಯ ಸಂಕೇತವೂ ಹೌದು ಅನಿಸಿತು.

ಎರಡನೆಯ ಸಂಗತಿ ಬಂಗಾಳದಲ್ಲಿ ನಡೆದದ್ದು. ಅದೂ ಈಗ ಜಾರಿಯಲ್ಲಿರುವ ಲಾಕ್ ಡೌನ್ ಸಂದರ್ಭದಲ್ಲೇ ನಡೆದಿರುವುದು. ಈ ವಿಡಿಯೋ ಕೂಡ ವೈರಲ್ ಆಗಿದೆ. ಸಾವಿನ ಪ್ರಮಾಣ ಹೆಚ್ಚುತ್ತಿದೆ; ಮನೆ ಬಿಟ್ಟು ಹೊರಗೆ ಬರಬೇಡಿ ಅಂತ ಕರ್ಫ್ಯೂ ವಿಧಿಸಿದ್ದರೂ ಬಂಗಾಳದಲ್ಲಿ ಒಬ್ಬ ಹುಡುಗ ರಸ್ತೆಯಲ್ಲಿ ಧೀರೋದಾತ್ತವಾಗಿ ಬರುತ್ತಾನೆ. ಅವನನ್ನ ಪೊಲೀಸರು ಹಿಡಿದು ಕಾರಣ ಕೇಳುತ್ತಾರೆ. ಹುಡುಗನ ಕೊರಳ ಪಟ್ಟಿ ಹಿಂದೆ ಒಂದು ಪುಟ್ಟ ಫಲಕ ಇದೆ. ಅದರಲ್ಲಿ ‘Mishti kinte Jachi’ ಎಂದು ಬರೆಯಲಾಗಿದೆ. ಇದು ಬಂಗಾಲಿ ಭಾಷೆ. ಇದರ ಅರ್ಥ – ‘ಸ್ವೀಟ್ಸ್ ತರಲು ಹೋಗುತ್ತಿದ್ದೇನೆ..’ ಅಂತ. ಇದು ವಿಚಿತ್ರ ಮತ್ತು ಅಬ್ಸರ್ಡ್ ಅನಿಸುತ್ತದೆ.

ದಿನನಿತ್ಯ ಸಾವಿನ ಸಂಖ್ಯೆ ಏರುತ್ತಿರುವಾಗ ಬಂಗಾಲಿ ಹುಡುಗನ ಫಲಕದಲ್ಲಿನ ಬರಹ ಕ್ರೌರ್ಯದಿಂದ ಕೂಡಿದೆ ಅಂತನ್ನಿಸಬಹುದು. ಅದನ್ನು ಹಾಗೆ ಗ್ರಹಿಸಬೇಕಾಗಿಲ್ಲ. ಬದುಕು ಇಲ್ಲಿ ಸ್ವೀಟ್ಸ್‌ನ ಸಂಕೇತ. ಸಾವುಗಳ ನಡುವೆಯೇ ನಾವು ಬದುಕನ್ನ ತರಲು ಹೊರಡಬೇಕು ಎಂದೂ ಇದನ್ನ ಗ್ರಹಿಸಿಕೊಂಡರೆ ಚೆಂದ.

ಇಷ್ಟನ್ನ ಶ್ರೀಪದಳಿಗೆ ಹೇಳಿದೆ. ಗೆಳೆಯರು ಚಪ್ಪಾಳೆ ತಟ್ಟಿದರು. ಸೋಯಿ ಮತ್ತೆ ‘ಕ್ಯಾ ಬಾತ್ ಹೈ..’ ಅಂದಳು.

ಸುಸ್ತಾದ ಗೆಳೆಯರು ‘ಕ್ಲಾಸ್ ಮುಗಿಸೋಣ್ವ ಮೇಷ್ಟ್ರೆ..’ ಎಂದು ಮತ್ತೆ ರೇಗಿಸಿದರು. ‘ಮುಗಿಸ್ರಪ್ಪ’ ಅಂದೆ. ‘ಮತ್ಯಾವಾಗ ಹಣತೆ ಹಚ್ತೀರಾ..?’ ಎಂದು ಕೇಳಿದರು. ನಕ್ಕೆ. ಶೇಕ್ಸ್ಪಿಯರ್ ಸ್ಟೈಲಲ್ಲಿ ‘ಶುಭವಿದಾಯ’ ಅಂದೆ. ಎಲ್ಲರ ನಿರ್ಗಮನ.


ಬೆಕೆಟ್ ಪ್ರತಿಪಾದಿಸಿದ ಅಬ್ಸರ್ಡಿಟಿ, ಗ್ವಾಟೆಮಾಲಾದ ಅಕೌಂಟೆಂಟ್ ಬೇಯಿಸಿದ ‘Pacaya Pizza’ ಮತ್ತು ಸ್ವೀಟ್ಸ್ ತರಲು ಹೊರಗೆ ಬಂದ ಬಂಗಾಳಿ ಹುಡುಗನ ಚಿತ್ರಗಳು ಕಣ್ಮುಂದೆ ಕದಲುತ್ತಿದ್ದವು. ಟವೆಲ್ ತೆಗೆದುಕೊಂಡು ಸ್ನಾನಕ್ಕೆ ನಡೆದೆ.