“ಎಲ್ಲಿ ಹಾವು?” ಅಂಥ ಕೇಳಿದರೆ, ತಂಗಿಯಂದಿರಿಬ್ಬರು “ಅದು ಆಗಲೇ ಹೊರಟು ಹೋಯಿತು” ಎಂದು ಪೆಚ್ಚಾಗಿ ಹೇಳಿದರು. ಅವರು ನಾಲ್ಕು ಬಾರಿ ತರಗೆಲೆಗಳ ಮಧ್ಯೆ “ಶ್ಶ್ ಶ್ಶ್” ಅಂಥ ಬೊಬ್ಬೆ ಸದ್ದು ಮಾಡಿ ತಿರುಗಿ ಅವರ ದಾರಿ ಹಿಡಿದರೆ ನನಗೆ ಹಾವು ಕೊಲ್ಲಲಾಗದ ಅಸಾಹಾಯಕತೆ, ಅವರು ತಡವಾಗಿ ಬಂದಿದ್ದ ರೋಷ ಉಕ್ಕಿ ಬರುತ್ತಿತ್ತು. ಕುದಿವ ಕೋಪಕ್ಕೆ ತಂಗಿಯಂದಿರಿಬ್ಬರನ್ನೂ ಬಾಯಿಗೆ ಬಂದಂತೆ ಬೈಯ್ದೆ. ಅವರಿಬ್ಬರೂ ವಿಧೇಯ ವಿದ್ಯಾರ್ಥಿಗಳಂತೆ ಕೇಳಿಸಿಕೊಂಡು ತಲೆ ತಗ್ಗಿಸಿ ನಿಂತಿದ್ದರು. ಪಾಪ ಅವರೇನು ಮಾಡಬೇಕು ‘ಹಾವನ್ನು ಹಿಡಿದಿಟ್ಟು ಕೊಳ್ಳಲಾಗುತ್ತದೆಯೇ’ ಎಂದು ತಡವಾಗಿ ಅರ್ಥವಾಗಿತ್ತು.
ಮುನವ್ವರ ಜೋಗಿಬೆಟ್ಟು ಬರೆವ ಪರಿಸರದ ಕತೆಗಳು

 

ನನ್ನ ಕೈಗೆ ಸ್ಮಾರ್ಟ್ ಫೋನ್ ಬರುವ ಹೊತ್ತಿಗೆ ಎರಡನೇ ವರ್ಷದ ಡಿಗ್ರಿಯಲ್ಲಿ ಓದುತ್ತಿದ್ದೆ. ಹಾಗಂತ, ನಾನೇನೂ ಸುಮಾರು ತಲೆಮಾರು ಹಿಂದಿನವನೇನಲ್ಲ. ಆ ದಿನಗಳಲ್ಲಿ ಮೊಬೈಲ್ ಖರೀದಿಸುವುದು ಈಗಿನಷ್ಟು ಅಗ್ಗವೂ ಅಲ್ಲ, ಸಾಲದ್ದಕ್ಕೆ ಮನೆಯಲ್ಲಿ ಕಟ್ಟುನಿಟ್ಟಿನ ನಿಯಮ. ಪುಣ್ಯಕ್ಕೆ ಈ ಮೊಬೈಲ್ ಜೈಲಿಗೆ ಖೈದಿಯಾಗುವ ಮೊದಲೇ ನನ್ನ ಕುತೂಹಲ ಪ್ರಪಂಚಕ್ಕೆಲ್ಲಾ ಸುಮಾರು ಸುತ್ತು ನಡೆದಾಗಿತ್ತು. ಈಗ ಪರಿಸರ ಸುತ್ತಲು ಹೊರಟರೆ ಫೋಟೋ ತೆಗೆಯುವ ಉದ್ದೇಶಕ್ಕಾಗಿ ಮಾತ್ರ ಮೊಬೈಲ್ ನನ್ನ ಬಗಲಲ್ಲಿರುತ್ತದೆ. ಜೊತೆಗೆ ಒಂದು ಅರೆಬರೆ ಕಾಣುವ ಬೈನಾಕ್ಯುಲರ್ ಕುತ್ತಿಗೆಯಲ್ಲಿ ನೇತಾಡುತ್ತಿರುತ್ತದೆ.

ಆ ದಿನ “ಹೋ, ಒಯ್ ಹೊಯ್ಯಾ” ಎಂದು ರಸ್ತೆಯಲ್ಲಿ ಯಾರೋ ಹಾಡುತ್ತ ಬರುತ್ತಿರುವುದು ಕೇಳಿಸುತ್ತಿತ್ತು. ಅಷ್ಟರಲ್ಲಿ ಅಲ್ಲೇ ಬಟ್ಟೆ ಒಣಗಲು ಹರವುತ್ತಿರುವ ಉಮ್ಮ “ಪಿರಾಂದ್ ರಾಮಣ್ಣ” ಇರಬೇಕು ಅಂದರು. ನಾನು ಚಿಕ್ಕಂದಿನಿಂದ ನೋಡಿದ ನಮ್ಮ ರಸ್ತೆಗಳಲ್ಲಿ ಕಾಣುವ ಪರಿಚಿತ ಮುಖವದು. ತೆಳ್ಳಗೆ ಬೋಳಿಸಿದ ತಲೆಗೂದಲು, ಟ್ರಿಮ್ ಮಾಡಿದ ಗಡ್ಡ. ಒಂದೇ ನೋಟಕ್ಕೆ ಅವನ ಹಾಡುಗಳನ್ನೆಲ್ಲಾ ಮ್ಯೂಟ್ ಮಾಡಿ ನೋಡಿದರೆ ತಲೆ ಸರಿಯಿಲ್ಲವೆಂದು ಎಂಥವನೂ ಸರ್ಟಿಫಿಕೇಟ್ ಕೊಡಲಾರ. ಸಾಮಾನ್ಯ ಜೆಂಟಲ್ ಮನ್ ನಂತೆಯೇ ಅವನ ವೇಷ. ಇಂದಿರಾ ಗಾಂಧಿಯ ಕಾಲದಲ್ಲಿ ಜಮೀನುದಾರನಾಗಿದ್ದ ರಾಮಣ್ಣ “ಉಳುವವನೇ ಹೊಲದೊಡೆಯ” ನೀತಿ ಬಂದಾಗ ಸಮಸ್ತ ಆಸ್ತಿಯನ್ನು ಕಳೆದುಕೊಂಡು ರಸ್ತೆಗೆ ಬಿದ್ದಿದ್ದ. ಆ ಬಳಿಕ ರಸ್ತೆಯಲ್ಲಿ ಏನೇನೋ ಮಾತನಾಡಿಕೊಂಡೋ ಹಾಡಿಕೊಂಡೋ ತಿರುಗಾಡುತ್ತಿದ್ದ.

ಒಂದೆರಡು ಬಾರಿ ನಡು ಪೇಟೆಯಲ್ಲಿ ಅಮಾಯಕರಿಗೆ ಚೂರಿ ಹಾಕಿ ಕೊಲೆ ಪ್ರಯತ್ನ ನಡೆಸಿದ್ದನಂತೆ. ಆದುದರಿಂದಲೇ ಅವನು ರಸ್ತೆಯಲ್ಲಿ ನಡೆಯುವಾಗ ಊರವರಿಗೆಲ್ಲಾ ಹೆದರಿಕೆ. ಉಮ್ಮ ಕೂಡಾ ಇದೇ ಕಾರಣದಿಂದ ಅವನಿದ್ದರೆ ನಮ್ಮನ್ನು ರಸ್ತೆಗೆ ಬಿಡುತ್ತಿರಲಿಲ್ಲ.

‘ಒಳಗೆ ಬನ್ನಿ, ಚೂರಿ ಗೀರಿ ಹಾಕಿಯಾನು’ ಅಂತ ಗದರುತ್ತಿದ್ದಂತೆ ನಾನು ಬೇಲಿಯ ಬದಿಯಲ್ಲಿ ಹೋಗಿ ಅವನನ್ನೇ ವೀಕ್ಷಿಸುತ್ತಿದ್ದೆ. ಅವನು ಹಾಡುತ್ತ ಒಂದು ಕೋಲು ಹಿಡಿದುಕೊಂಡು ಬೀಸುತ್ತಾ ರಸ್ತೆಯನ್ನು ಲೀಸಿಗೆ ತೆಗೆದುಕೊಂಡವನಂತೆ ನಡೆಯುತ್ತಾ ಹಾದು ಹೋದ. ಅಷ್ಟಕ್ಕೆ ನಾನು ನಿಂತಿದ್ದ ಬೇಲಿ ಸಸಿಯ ಮೇಲೆ ಪಟ್ಟೆಂದು ಒಣ ಕೋಲಿನಂತದ್ದೇನೋ ಬಿತ್ತು. ತದೇಕಚಿತ್ತದಿಂದ ಹುಚ್ಚ ರಾಮಣ್ಣನನ್ನು ನೋಡುತ್ತಿದ್ದರಿಂದ ಅಲ್ಲಿ ನಿಶ್ಯಬ್ದ ನೆಲೆಸಿತ್ತು. ನೋಡುತ್ತಿದ್ದಂತೆ ಬಿದ್ದ ಕೋಲಿನ ತುಂಡು ಜೀವ ಪಡೆದು ಮರವನ್ನು ಸುತ್ತಿಕೊಂಡಿತು. ನೋಡಿದರೆ ಕಂಚು ಬೆನ್ನಿನ ಹಾವು. ರಪಕ್ಕನೆ ಸ್ವಲ್ಪ ಹಿಂದಕ್ಕೆ ಜಿಗಿದೆ. ಬೊಬ್ಬೆ ಹಾಕೋಣವೆನಿಸಿದವನೇ, ಬಾಯಿಗೆ ಕೈ ಅಡ್ಡ ಹಿಡಿದು ಹಾವನ್ನೇ ನೋಡುತ್ತಾ ನಿಂತೆ. ಸಪೂರ ತಲೆಯ ಹಾವು ನನ್ನನ್ನೇ ಸುಮಾರು ಹೊತ್ತು ನೋಡಿತು. ಇನ್ನೇನು ನನ್ನ ಮೈ ಮೇಲೆ ಹಾರಲಿದೆ ಎಂದು ಹೆದರಿ ಇನ್ನೂ ಸ್ವಲ್ಪ ಸರಿದು ನಿಂತೆ. ಅಷ್ಟರಲ್ಲಿ ಮತ್ತೆ ರಾಮಣ್ಣನ ನೆನಪಾಗಿ ರಸ್ತೆ ನೋಡಿದರೆ ಅದಾಗಲೇ ಅವನು ಹೊರಟು ಹೋಗಿದ್ದ. ಮತ್ತೆ ಹಾವನ್ನು ನೋಡಬೇಕಾದರೆ ಹಾವಿನ ಬಾಯಲ್ಲಿ ಹಸಿರು ಮಿಡತೆಯೊಂದು ಮಿಸುಕಾಡುತ್ತಿತ್ತು. ಮಿಡತೆ ತೀವ್ರವಾಗಿ ಕೊಸರಾಡಿದರೂ ಅದು ಬಿಡುವಂತಿರಲಿಲ್ಲ. ಒಂದೈದು ನಿಮಿಷದಲ್ಲಿ ಆ ಸಣ್ಣ ಹಾವಿನ ಬಾಯಿಯೊಳಗೆ ಕೊಸರಾಡಿ ಮಿಡತೆಯೂ ಅಂತರ್ಧಾನವಾಯಿತು. ಅದು ಅದರ ಗಂಟಲಿನಿಂದ ಜಾರಿ ಹೊಟ್ಟೆಯ ಕಡೆ ಜರುಗುವುದನ್ನೇ ಗಮನಿಸುತ್ತಾ ನಿಂತೆ.

ನಾವು ಇದನ್ನು “ಮರಪಾಂಬು” ಎಂದು ಕರೆಯುವುದು. ಅಂದರೆ “ಮರ ಹಾವು” ಎಂದರ್ಥ. ಹೆಚ್ಚಾಗಿ ಮರಗಳಲ್ಲೇ ವಾಸಿಸುವ ತೆಳ್ಳಗಿನ ಹಾವಿನ ಮೇಲೆ ನಮ್ಮ ಕಡೆಯ ಜನರಿಗೆ ಸಿಕ್ಕಾಪಟ್ಟೆ ಮೂಢನಂಬಿಕೆ. ಮರದಿಂದ ಹಾರಿ ಹಣೆಗೆ ಕುಟುಕುತ್ತದೆ. ಹಾಗೇನಾದ್ರೂ ಕುಟುಕಿದರೆ ಕ್ಷಣಾರ್ಧದಲ್ಲೇ ಸಾವಂತೆ. ವೈರಿಯ ಸಾವನ್ನು ಕಣ್ಣಾರೆ ಕಾಣುವವರೆಗೂ ಅದರ ದ್ವೇಷ ಕಡಿಮೆಯಾಗುವುದಿಲ್ಲವಂತೆ. ಅದು ಸತ್ತ ವ್ಯಕ್ತಿಯ ಹೆಣ ಹೊತ್ತಿಸುವಾಗ ಅದರ ಹೊಗೆ ಮೇಲೇರುವವರೆಗೂ ಮರಗಳಲ್ಲಿ ಕಾಯುತ್ತಾ ಕುಳಿತಿರುತ್ತವಂತೆ.

ಪಾಪದ ಹಾವಿನ ಮೇಲೆ ಇಷ್ಟೆಲ್ಲಾ ಭಯಾನಕ ಸುಳ್ಳುಗಳನ್ನು ಕಟ್ಟಿ ಉಗ್ರಗಾಮಿಯನ್ನಾಗಿ ಮಾಡಿಬಿಟ್ಟಿದ್ದರು ಜನ. ಇದೆಲ್ಲಾ ಹೇಳುವಾಗ ನಾನು ನನ್ನಷ್ಟಕ್ಕೆ ಕೇಳಿ ಕೊಳ್ಳುವುದಿದೆ. “ಅದೇನಾದರೂ ಸಾಬರನ್ನೋ, ಕ್ರೈಸ್ತನನ್ನೊ ಕುಟುಕಿದರೆ ಏನವಸ್ಥೆ?, ಅವರು ಸತ್ತರೆ ಹೊಗೆಯೇರುವುದಿಲ್ಲವಲ್ಲ” ಅಂತ. ಕರಾವಳಿಯಲ್ಲಿ ಸರ್ವ ಸಾಧಾರಣವಾಗಿ ಕಾಣುವ ಹಾವಿದು. ವಿಷಕಾರಿಯಲ್ಲ, ಇಷ್ಟೆಲ್ಲಾ ನಟೋರಿಯಸ್ ಆಪಾದನೆಯ ಬಳಿಕ ಬಡಿಗೆಗೋ, ಬೆತ್ತಕ್ಕೋ ಸಿಕ್ಕಿ ಅವುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಇತ್ತೀಚೆಗೆ ಉರಿ ಬಿಸಿಲಿಗೂ ಸಣ್ಣಗೆ ಹರಿವ ಪರಿಸರದ ಹತ್ತಿರದ ತೊರೆಗೆ ಹೋಗಿದ್ದೆ. ಅಷ್ಟೊತ್ತಿಗೆ ಯಾವುದೋ ಪಕ್ಷಿ ವಿಚಿತ್ರವಾಗಿ ಕೂಗುತ್ತಿರುವುದು ಕೇಳಿತು. ಕುತ್ತಿಗೆಗೆ ಹಾಕಿದ್ದ ಬೈನ್ಯಾಕುಲರ್ ತೆಗೆದು ಆಕಾಶಕ್ಕೆ ನೋಟವಿಟ್ಟೆ. ಯಾವ ಹಕ್ಕಿಯೆಂದು ಗುರ್ತಿಸುವುದು ಅಷ್ಟು ಸುಲಭವಿರಲಿಲ್ಲ. ಸುಮಾರು ಹಕ್ಕಿಗಳು ಗಲಾಟೆಯೆಬ್ಬಿಸುತ್ತಿದ್ದವು. ಸಾಲದ್ದಕ್ಕೆ ಒತ್ತೊತ್ತು ವಿಶಾಲ ಮರಗಳು. ಚಲಿಸದೆ ಸುಮ್ಮನೆ ನಿಂತು ಮರಗಳನ್ನು ನೋಡುತ್ತಾ ಇನ್ನೊಮ್ಮೆ ಸದ್ದು ಬಂದ ಕಡೆ ನಿಖರವಾಗಿ ಸ್ಥಳ ಅಂದಾಜು ಮಾಡಬೇಕೆನ್ನುವಾಗ ಕಾಲ ಮೇಲೆ ಸಣ್ಣಗೆ ಏನೋ ಹರಿದಂತಾಯಿತು. ಒಮ್ಮೆಲೆ ಕಣ್ಣು ಕಾಲ ಕೆಳಗೆ ಹೊರಳಿತು. ಪಾದದ ಮೇಲೆ ಕಂಚು ಬೆನ್ನಿನ ಹಾವು ಮೆಲ್ಲಗೆ ಹರಿಯುತ್ತಿದೆ. “ನಿರುಪದ್ರವಿ, ವಿಷಕಾರಿಯಲ್ಲ” ಯಾವುದೂ ತಲೆಗೆ ಬರಲಿಲ್ಲ. ಭಯ ಹೊಕ್ಕುಳು ಕಳೆದು ಹೊಟ್ಟೆಯವರೆಗೆ ಏರಿತ್ತು. ಕ್ಷಣದಲ್ಲೇ ಕಾಲು ಝಾಡಿಸಿದೆ. ಸುಮಾರು ದೂರ ಹಾರಿ ಬಿದ್ದ ಸಣಕಲು ಹಾವು ಏನೂ ಆಗದಂತೆ ತರಗಲೆಗಳ ಮಧ್ಯೆ ಹರಿದು ಮಾಯವಾಯಿತು.

ಇದೆಲ್ಲವೂ ನಿಮಿಷಾರ್ಧದಲ್ಲಿ ನಡೆದಿದ್ದು. ಈಗ “ಬದುಕಿದೆ ಬಡ ಜೀವವೇ” ಎಂದು ಎದೆಗೆ ಕೈಯಿರಿಸಿದೆ. ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಗಿರಿಮನೆ ಶ್ಯಾಮರಾವ್ ರವರ ‘ಮಲೆನಾಡಿನ ರೋಚಕ ಕಥೆಗಳು’ ಪುಸ್ತಕದಲ್ಲಿ ಬನಿಯನಿನೊಳಗೆ ನುಗ್ಗಿದ ಹಾವಿನ ಕಥೆ ನೆನಪಾಗಿ ಜೋರಾಗಿ ನಗು ಬಂತು. ಇನ್ನು ಸ್ವಲ್ಪ ಹೊತ್ತು ಹಕ್ಕಿ ನೋಡುತ್ತಾ ಕಲ್ಲಾಗಿ ನಿಂತರೆ ‘ಅನಕೊಂಡ’ ಬಂದು ನುಂಗಿ ಬಿಟ್ಟರೂ ಗೊತ್ತಾಗುವುದಿಲ್ಲವೆಂದು ನನ್ನ ಪರವಶತೆಗೆ ನಾನೇ ನಗುತ್ತಾ ಮನೆಗೆ ಬಂದೆ.

ಮಳೆಗಾಲದಲ್ಲಿ ಬಟ್ಟೆ ತೊಳೆಯುವುದಕ್ಕೆ ಝರಿಗಳ ನೀರು ಹೆಚ್ಚು ಆರಾಮದಾಯಕ. ಹರಿಯುವ ತೊರೆಗೆ ಸಣ್ಣಗೆ ಕಲ್ಲು ಕಟ್ಟಿದರೆ ಸ್ವಲ್ಪ ಹೆಚ್ಚು ನೀರು ನಿಂತು ಬಟ್ಟೆ ತೊಳೆಯುವುದಕ್ಕೆ ಸುಲಭ. ಮರಹಾವಿನ ಒಂದು ಘಟನೆ ಆ ತೊರೆಯ ಪರಿಸರದಲ್ಲಿ ನಡೆದಿದ್ದು ನೆನಪಾಗುತ್ತದೆ. ಒಮ್ಮೆ ಅಕ್ಕಂದಿರು ಸಾಬೂನು ಮರೆತು ಬಿಟ್ಟು ಬಂದದ್ದರಿಂದ ಮನೆಯಿಂದ ಸಾಬೂನು ಕೊಂಡು ಹೋಗುವಾಗ ನನ್ನ ಜೊತೆ ತಂಗಿಯರಿಬ್ಬರು ಕೂಡಿಕೊಂಡರು. ನನ್ನ ಬಾಲಂಗೋಚಿಗಳಂತೆ ಅವರು ಹಿಂದೆಹಿಂದೆ ನಡೆದು ಬರುತ್ತಿದ್ದರು. ಅಷ್ಟರಲ್ಲಿ ಆಗ ತಾನೇ ಮರವಿಳಿದ ಮರ ಹಾವೊಂದು ಮಣ್ಣಿನ ರಸ್ತೆಯಲ್ಲಿ ಸಲೀಸಾಗಿ ಹರಿಯುತ್ತಿತ್ತು. ನನಗೆ ಕಂಡದ್ದೇ ತಡ, “ಹಣೆಗೆ ಕುಟುಕುವುದು, ಸಾವನ್ನು ಕಾಯುವುದು” ಇದೆಲ್ಲಾ ನೆನಪಾಗಿ ಇವತ್ತಿದನ್ನು ಕೊಂದೇ ಬಿಡಬೇಕೆಂದು ತೀರ್ಮಾನಿಸಿದೆ.

ಹೆಚ್ಚಾಗಿ ಮರಗಳಲ್ಲೇ ವಾಸಿಸುವ ತೆಳ್ಳಗಿನ ಹಾವಿನ ಮೇಲೆ ನಮ್ಮ ಕಡೆಯ ಜನರಿಗೆ ಸಿಕ್ಕಾಪಟ್ಟೆ ಮೂಢನಂಬಿಕೆ. ಮರದಿಂದ ಹಾರಿ ಹಣೆಗೆ ಕುಟುಕುತ್ತದೆ. ಹಾಗೇನಾದ್ರೂ ಕುಟುಕಿದರೆ ಕ್ಷಣಾರ್ಧದಲ್ಲೇ ಸಾವಂತೆ. ವೈರಿಯ ಸಾವನ್ನು ಕಣ್ಣಾರೆ ಕಾಣುವವರೆಗೂ ಅದರ ದ್ವೇಷ ಕಡಿಮೆಯಾಗುವುದಿಲ್ಲವಂತೆ. ಅದು ಸತ್ತ ವ್ಯಕ್ತಿಯ ಹೆಣ ಹೊತ್ತಿಸುವಾಗ ಅದರ ಹೊಗೆ ಮೇಲೇರುವವರೆಗೂ ಮರಗಳಲ್ಲಿ ಕಾಯುತ್ತಾ ಕುಳಿತಿರುತ್ತವಂತೆ.

ತಂಗಿಯರಿಬ್ಬರೂ ಸಾಕಷ್ಟು ಹೆದರಿದರು. ಕಲ್ಲು ಎತ್ತಿ ಹಾಕಬೇಕೆನ್ನುವಾಗ ತಂಗಿಯಂದಿರು ತಡೆದರು. ನಾನು ಹಾವು ಕಂಡಾಗಿನಿಂದ ಕಿವಿಗೆ ಗಾಳಿ ಹೊಕ್ಕ ಕರುವಿನಂತೆ ಥಕ ತೈ ಕುಣಿಯುತ್ತಿದ್ದರೆ ತಂಗಿಯಂದಿರಿಬ್ಬರೂ ಹೆದರಿ ಮುದುಡಿ ಗುಬ್ಬಚ್ಚಿ ಮರಿಗಳಂತಾಗಿದ್ದರು. “ನೀವಿಲ್ಲೇ ಕಾವಲು ಕಾಯುತ್ತಾ ಹಾವನ್ನ ನೋಡುತ್ತಾ ನಿಲ್ಲಿ” ಎಂದು ಆಜ್ಞಾಪಿಸಿ ರೆಂಜ ಮರದ ನೆರಳಲ್ಲಿ ಬಿಟ್ಟು ಕೊಲ್ಲಲು ದೊಡ್ಡವರು ಯಾರಾದರೂ ಸಿಗುತ್ತಾರೇನೋ ಎಂದು ಕರೆಯಲು ಹೊರಟೆ. ಹತ್ತಿರದ ಮನೆಗೆ ಮಿಂಚಿನಂತೆ ಓಡಿ ಹಿರಿಯರೊಬ್ಬರನ್ನು ಕರೆದೆ. “ಯಾವ ಹಾವು?” ಎಂದು ಕೇಳಿದ್ದಕ್ಕೆ ” ಮರಹಾವು ಅಂದಿದ್ದೆ”. ಅವರು ನನ್ನ ಕರೆಗೆ ಅನಾಸಕ್ತಿಯಿಂದಲೇ ಮೆಲ್ಲಗೆ ನಡೆದು ಬರುತ್ತಿದ್ದರು. ನನಗೆ ಅವರ ಅನಾಸಕ್ತಿ ಕಂಡು ಕೋಪ ನೆತ್ತಿಗೇರುತ್ತಿತ್ತು. ಬಹಳ ತಡವಾಗಿ ನಡೆದು ಬಂದು ತಲುಪಿದಾಗ ಹಾವು ತಲುಪುವಲ್ಲಿಗೆ ತಲುಪಿಯಾಗಿತ್ತು.

“ಎಲ್ಲಿ ಹಾವು?” ಅಂಥ ಕೇಳಿದರೆ, ತಂಗಿಯಂದಿರಿಬ್ಬರು “ಅದು ಆಗಲೇ ಹೊರಟು ಹೋಯಿತು” ಎಂದು ಪೆಚ್ಚಾಗಿ ಹೇಳಿದರು. ಅವರು ನಾಲ್ಕು ಬಾರಿ ತರಗೆಲೆಗಳ ಮಧ್ಯೆ “ಶ್ಶ್ ಶ್ಶ್” ಅಂಥ ಬೊಬ್ಬೆ ಸದ್ದು ಮಾಡಿ ತಿರುಗಿ ಅವರ ದಾರಿ ಹಿಡಿದರೆ ನನಗೆ ಹಾವು ಕೊಲ್ಲಲಾಗದ ಅಸಾಹಾಯಕತೆ, ಅವರು ತಡವಾಗಿ ಬಂದಿದ್ದ ರೋಷ ಉಕ್ಕಿ ಬರುತ್ತಿತ್ತು. ಕುದಿವ ಕೋಪಕ್ಕೆ ತಂಗಿಯಂದಿರಿಬ್ಬರನ್ನೂ ಬಾಯಿಗೆ ಬಂದಂತೆ ಬೈಯ್ದೆ. ಅವರಿಬ್ಬರೂ ವಿಧೇಯ ವಿದ್ಯಾರ್ಥಿಗಳಂತೆ ಕೇಳಿಸಿಕೊಂಡು ತಲೆ ತಗ್ಗಿಸಿ ನಿಂತಿದ್ದರು. ಪಾಪ ಅವರೇನು ಮಾಡಬೇಕು ‘ಹಾವನ್ನು ಹಿಡಿದಿಟ್ಟು ಕೊಳ್ಳಲಾಗುತ್ತದೆಯೇ’ ಎಂದು ತಡವಾಗಿ ಅರ್ಥವಾಗಿತ್ತು.

ಮನೆಯ ಹಿತ್ತಲಿನ ಕಡೆ ಒಂದು ಸೀತಾಫಲದ ಮರವಿದೆ. ಒಮ್ಮೆ ಅದರ ಹಣ್ಣನ್ನು ಕೊಯ್ಯಲು ಹೋಗುವಾಗ ಉಪಾಯವೊಂದು ಹೊಳೆದು ಬೈ ಹುಲ್ಲಿನಲ್ಲಿ ಹಕ್ಕಿ ಗೂಡು ಮಾಡಿ ಅದೇ ಮರದ ಮೇಲೆ ಇರಿಸಿದರೆ ಸಣ್ಣ ಹಕ್ಕಿ ಬಂದು ಗೂಡು ಮಾಡುತ್ತದೆಯೆಂದು ಅಣ್ಣನಿಗೆ ತಿಳಿ ಹೇಳಿದ್ದೆ. ಅಣ್ಣ “ಅದೆಲ್ಲಾ ನಿನ್ನ ಶುದ್ಧ ಸುಳ್ಳೆಂದೂ, ಹಾಗೆಲ್ಲೂ ಹಕ್ಕಿ ಬಂದೇ ಇಲ್ಲವೆಂದು” ಸುಮಾರು ಹೊತ್ತು ಗೇಲಿ ಮಾಡಿದ್ದ. ಮತ್ತೆ ಸಂಭಾವ್ಯ ಉಪಾಯವನ್ನು ಪರೀಕ್ಷಿಸಬಹುದೇನೋ ಅನ್ನಿಸಿ ಒಪ್ಪಿಗೆ ಕೊಟ್ಟ. ಹಾಗೆಯೇ ಗೂಡು ಇರಿಸಿ ಸೀತಾಫಲ ಹಣ್ಣು ಕೊಯ್ದು ತಿಂದಿದ್ದೆವು. ಮರು ದಿನ ಭಾರತ- ಇಂಗ್ಲೆಡ್ ಕ್ರಿಕೆಟ್ ಮ್ಯಾಚ್ ಇದ್ದದ್ದರಿಂದ ಟಿ.ವಿ ನೋಡಲು ಗೆಳೆಯನ ಮನೆಗೆ ಹೋಗಬೇಕಾಗಿತ್ತು. ಆ ದಿನಗಳಲ್ಲಿ ಟಿ.ವಿಗಳಿರುವ ಮನೆಗಳು ಬಹು ವಿರಳ. ಸುಮಾರು ೧೫ ನಿಮಿಷ ಕಾಡ್ದಾರಿಯಲ್ಲೇ ಅವರ ಮನೆಗೆ ಹೋಗಬೇಕು. ಹೀಗೆ ಹೋಗಬೇಕಾದರೆ ಸುಮ್ಮನೆ ಗೂಡಿಗೆ ಇಣುಕಬೇಕೆಂದು ಹಸಿರೆಲೆಗಳ ಮಧ್ಯೆ ದಾರಿ ಮಾಡುತ್ತಿದ್ದೆ. ತರಗೆಲೆಗಳ ಮಧ್ಯೆ ಆಡುವ ಕಳೆದುಹೋಗಿದ್ದ ಚೆಂಡು ಕಂಡಂತಾಗಿ ಅಲ್ಲೇ ಸ್ವಲ್ಪ ಬಗ್ಗಿ ಹೆರಕಿಕೊಂಡೆ. ಏಳುವಷ್ಟರಲ್ಲಿ ಭುಜದ ಮೇಲೇನೂ ಹರಿದಂತಾಯ್ತು. ಅಲ್ಲೇ ಸಸಿಯ ಮೇಲಿದ್ದ ಹಸಿರು ಹಾವೊಂದು ಬಗ್ಗಿ ಏಳುತ್ತಿದ್ದ ನನ್ನ ಬೆನ್ನ ಮೇಲಿಂದ ಜಾರಿ ನೆಲಕ್ಕೆ ಬಿತ್ತು. ನನ್ನ ಭಯಕ್ಕೆ ಪಾರವಿರಲಿಲ್ಲ. ತೆಳ್ಳಗಿನ ಚೂಪಾದ ತಲೆಯ ಈ ಹಾವುಗಳು ಭಯಂಕರವಾಗಿ ಕಂಡಿತ್ತು. ನಾನು ಹೌಹಾರಿ ಜೋರಾಗಿ ಕಿರುಚಿಕೊಂಡು ಹಿಂದೆ ಸರಿದೆ. ಭಯದಿಂದ ಸ್ವಲ್ಪ ಹೊತ್ತು ಉಸಿರಾಡಲು ಕಷ್ಟವಾಯ್ತು.

ಸಾವರಿಸಿಕೊಳ್ಳಲು ಸಾಕಷ್ಟು ಸಮಯವೇ ಹಿಡಿಯಿತು. ಈ ಹಸಿರು ಹಾವುಗಳೂ ಮರ ಹಾವುಗಳಂತೆ ಸಣ್ಣಪುಟ್ಟ ಕೀಟ ಓತಿಕ್ಯಾತಗಳನ್ನು ತಿಂದು ಬದುಕುವ ನಿರುಪದ್ರವಿ, ವಿಷರಹಿತ ಹಾವು. ಹಲವು ಬಾರಿ ರಸ್ತೆಗಳಲ್ಲಿ ವಾಹನಗಳ ಟೈರಿನಡಿ ಸಿಕ್ಕಿ ದಾರುಣ ಅಂತ್ಯ ಕಾಣುತ್ತದೆ. ಪರಿಸರದಲ್ಲೇ ಇರುವ ಇಂತದ್ದೇ ಹಾವುಗಳು ಸಸ್ಯಗಳಿಗೆ ಮಾರಕವಾದ ಕೀಟಗಳನ್ನು ತಿಂದು ಜೀವ ವೈವಿಧ್ಯತೆಯನ್ನು ಕಾಪಾಡುತ್ತವೆ. ಕೆಲವೊಂದು ಹಾವುಗಳು ಮನುಷ್ಯನಿಗೆ ಹಲವು ರೋಗಕ್ಕೆ ಕಾರಣವಾಗುವ ಇಲಿಗಳನ್ನು ತಿಂದು ಪರಿಸರಕ್ಕೆ ನೈಜ ಸಂರಕ್ಷಣೆ ಒದಗಿಸುತ್ತದೆ.

ಹಿಂದೆ ಮಂಗಗಳು ಬರುವುದಿದ್ದರೆ ಹಸಿರು ಹಾವುಗಳನ್ನು ಪೊಟ್ಟಣ ಕಟ್ಟಿ ಮರದ ಮೇಲಿಡುತ್ತಿದ್ದರಂತೆ. ಅವುಗಳು ಬಂದು ತೆರೆದುಕೊಂಡರೆ ವಿಚಿತ್ರವಾಗಿ ಕೈಗಳಿಗೆ ಸುತ್ತಿಕೊಳ್ಳುವ ಹಸಿರು ಹಾವಿನಿಂದ ಗಲಿಬಿಲಿಯಾಗುವ ಮಂಗಗಳು ಮತ್ತೆ ಆ ಕಡೆ ತಲೆ ಹಾಕುವುದಿಲ್ಲವಂತೆ.

ನನಗಾದ ಹೆದರಿಕೆಯನ್ನು ಸಾವರಿಸಿಕೊಂಡು ಗೆಳೆಯನ ಮನೆಗೆ ಬರುವಷ್ಟರಲ್ಲಿ ಭಾರತದ ಒಂದು ವಿಕೆಟ್ ಬಿದ್ದಿತ್ತು. “ಇನ್ಯಾರು ಔಟಾಗ್ತಾರೆ, ನಮ್ಮ ನೆಚ್ಚಿನ ಅವಸರದ ಆಟಗಾರ ಸೆಹ್ವಾಗ್ ಇರಬೇಕೆಂದು” ಅಂದಾಜು ಹಾಕಿದೆ. ಓವರ್ ಮುಗಿದು ಸ್ಕೋರು ಬೋರ್ಡು ಕಾಣಿಸಿತು. ನನ್ನ ಊಹೆ ಸುಳ್ಳಾಗಿರಲಿಲ್ಲ.