ಬಾಲ್ಯದಲಿ ಕಂಡ ಹೊಂಗನಸು, ಕಿವಿ ತುಂಬಿದ ಶುದ್ಧಗಾಳಿ, ಷೋಷಕರ ನಿಸ್ವಾರ್ಥ ಪ್ರೀತಿ, ತಾನು ಏನೆಲ್ಲ ಆಗಿ ಬದುಕಬೇಕೆಂಬ ಅವಳ ಒಳಗಣ್ಣಿನ ಆಶೋತ್ತರಗಳು ಆಕೆಯ ಮನಸೋ-ಎದೆಯೋ ಎಂಥದ್ದೋ ಒಂದರಲಿ ಸಿಲುಕಿ ಉಸಿರುಗಟ್ಟಿದಂತೆ ಬದುಕುತ್ತಿರುವವಳು. ಒಂದು ಮುಕ್ತ, ನಿರಪೇಕ್ಷಿತ ನಿರ್ವಾಜ್ಯ ಪ್ರೇಮ ಬಯಸಿದವಳಿಗೆ ದೊರಕುತ್ತಿರುವುದು ಕಣ್ಗಾವಲಿನ, ನಿರೀಕ್ಷೆಗಳಿಂದ ತುಂಬಿದ ಪ್ರೀತಿ.
ಪೂರ್ಣಿಮಾ ಮಾಳಗಿಮನಿ ಬರೆದ ಚೊಚ್ಚಲ ಕಾದಂಬರಿ “ಇಜಯಾ”ಗೆ ಕೇಶವ ಮಳಗಿ ಬರೆದ ಮುನ್ನುಡಿ

 

ಸುಖದ ಪರಿಕಲ್ಪನೆ ಮತ್ತು ಕನಸು ದುಸ್ವಪ್ನವಾಗುವ ಭಯಾನಕತೆ

ಈ ವೇದನೆಗೆ ಅಕ್ಕರದ ರೂಪ ನೀಡಿ ನಿರಾಳವಾಗೋಣವೆಂದರೆ ಇದು ನಿರಾಕಾರಿ. ಮಿಂಚಂತೆ ಸುಳಿವ ಗುಣಗಳನು ಚಿಟಿಕೆಯಲಿ ಹಿಡಿಯೋಣವೆಂದರೆ ಅದು ಸನಿರ್ಗುಣಿ. ಕೊನೆಗೆ ಅನಾದಿ ಕಾಲದ ಈ ಬೇಗುದಿಯನು ‘ಮಣ್ಣ ಹೆಣ್ಣು ಬಾನೊಡೆಯನಿಂದ ಅಗಲಿಹಳನಾದಿಯಿಂದ’ ಎಂದು ಕವಿ ಕೈತೊಳೆದುಕೊಳ್ಳಬೇಕಾಯಿತು.

ಈಕೆ ಕಾಲದೇಶಗಳ ಮೀರಿ ಎಲ್ಲ ನಾಗರಿಕತೆಯಲೂ ಉದ್ಭವಿಸುವವಳು. ಆಯಾ ಕಾಲದ ಕವಿ-ಕಲಾವಿದ-ಕೋವಿದರು ಇನ್ನೀಕೆಯನ್ನು ಬಂಧಿಸಿಟ್ಟೆವು ಎಂದು ನಿರಾಳತೆಯಲಿ ಉಸಿರು ಬಿಡುವರು. ಆದರೆ, ಆಕೆಯೋ, `ಹುಲು ಮಾನವರೆ, ನೀವು ನನ್ನನ್ನು ನಿಮ್ಮ ಬಣ್ಣ, ಕುಂಚ, ಶಾಸನ, ತಾಳೆಗರಿ, ಚಿತ್ರಪಟಗಳಲ್ಲಿ ಹಿಡಿದಿಡಲು ಸಾಧ್ಯವೆ?’ ಎಂದು ಮೈಕೇಲೆಂಜೋನತ್ತ ನೋಡಿ, ಮೊನಾಲಿಸಾ ಕೊಂಕು ನಗೆ ಬೀರುವಳು. `ಹೃದಯೇನ ಅಸನ್ನಿಹಿತ’ ಎಂದು ಬರೆದ ಕಾಳೀದಾಸನತ್ತ ಕರುಣೆಯಿಂದೆಂಬತೆ ಕಣ್ಣು ಮಿಟುಕಿಸುವಳು.

(ಪೂರ್ಣಿಮಾ ಮಾಳಗಿಮನಿ)

ಈಕೆಯ ಒಳತೋಟಿಗಳೇನು? ಎಲ್ಲಿಯೋ, ಯಾವುದೋ ಕಾಲದೇಶದಲ್ಲಿ ದಿಢೀರನೆ ಅಗ್ನಿಪಕ್ಷಿಯಂತೆ ಹುಟ್ಟು ಪಡೆವ ಇವಳ ಸಮಸ್ಯೆಯಾದರೂ ಎಂಥದು, ಇವಳಿಗೆ ಬೇಕಿರುವುದಾದರೂ ಏನು? ಎಂದು ತಲೆ ಕೆಡಿಸಿಕೊಂಡವರು ತಮಗೆ ತೋಚಿದ ಹೆಸರನ್ನು ಕೊಟ್ಟುಕೊಳ್ಳುವರು. `ಎಮ್ಮಾ’ (ಗುಸ್ತಾವ್ ಫ್ಲೆಬೊ-ಮದಾಂ ಬೋವರಿ), ಆನಾ ಕರೆನಿನ (ಟಾಲ್‍ಸ್ಟಾಯ್-ಆನಾ ಕರೆನಿನ), ಬಾಥ್‍ ಶೀಬ (ಹಾರ್ಡಿ-ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್), ಕ್ಯಾಥಿ (ಬ್ರಾಂಟೆ-ವುದರಿಂಗ್ ಹೈಟ್ಸ್), ಶಂತಲ್ (ಮಿಲನ್ ಕುಂದೇರ-ಐಡೆಂಟಿಟಿ) ಹೀಗೆ ಬಾಯಿಗೆ ಬಂದ ಹೆಸರನ್ನು ಬಡಬಡಿಸುವರು. ಇನ್ನೂ ಕೆಲವರು ಅಶೋಕವನದ ಶೋಕ ಸೀತೆ, ದ್ರುಪದ ರಾಜ್ಯದ ರಾಜಕುಮಾರಿ, ಗಾಂಧಾರದ ಚೆಲುವೆ, ಊರ್ಮಿಳೆ, ಅಮೃತಮತಿ, ಕಣ್ಣಗಿ… ಮುಂತಾದವರ ಹೆಸರು ಹೇಳುತ್ತ ಏನೋ ಅಸಂಬದ್ಧವಾಯಿತು ಎಂದು ಗೊಂದಲದಲಿ ಬೀಳುವರು.

ಹೆಸರು-ದೆಸೆ, ಊರು-ದೇಶಗಳು ಯಾವುದೇ ಇರಲಿ ಒಡಲೊಳಗೆ ಕುದಿವ ತವಕ ಇಟ್ಟುಕೊಂಡು ಯಾವಾಗ ಸ್ಫೋಟಿಸುವಳೋ ಅರಿವಿಲ್ಲದ ಈ ಬೆಂಕಿ ಹಕ್ಕಿ ಹೆಣ್ಣೆಂಬುದಂತೂ ದಿಟ. ಕುಟುಂಬ, ಸಮಾಜ, ಆ ಸಮಾಜ ನಿರ್ಮಿಸಿದ ಕಟ್ಟಳೆ, ಭವಬಂಧನಗಳಿಗೆ, ಅಪೇಕ್ಷಿತ ಬದುಕಿಗೆ ಹೆಗಲು, ಬೆನ್ನು ಕೊಟ್ಟು ಮೂಕಳಾಗಿ ಜೀವಿಸುವಂಥವಳು. ಬಾಲ್ಯದಲಿ ಕಂಡ ಹೊಂಗನಸು, ಕಿವಿ ತುಂಬಿದ ಶುದ್ಧಗಾಳಿ, ಷೋಷಕರ ನಿಸ್ವಾರ್ಥ ಪ್ರೀತಿ, ತಾನು ಏನೆಲ್ಲ ಆಗಿ ಬದುಕಬೇಕೆಂಬ ಅವಳ ಒಳಗಣ್ಣಿನ ಆಶೋತ್ತರಗಳು ಆಕೆಯ ಮನಸೋ-ಎದೆಯೋ ಎಂಥದ್ದೋ ಒಂದರಲಿ ಸಿಲುಕಿ ಉಸಿರುಗಟ್ಟಿದಂತೆ ಬದುಕುತ್ತಿರುವವಳು. ಒಂದು ಮುಕ್ತ, ನಿರಪೇಕ್ಷಿತ ನಿರ್ವಾಜ್ಯ ಪ್ರೇಮ ಬಯಸಿದವಳಿಗೆ ದೊರಕುತ್ತಿರುವುದು ಕಣ್ಗಾವಲಿನ, ನಿರೀಕ್ಷೆಗಳಿಂದ ತುಂಬಿದ ಪ್ರೀತಿ. ಎಲ್ಲ ಭಾವಗಳೂ ಪರಿಪೂರ್ಣತೆಯಲಿ ತುಂಬಿ ತುಳುಕಿ, ಈವರೆಗೂ ಕಂಡರಿಯದ ಬೆಚ್ಚಗಿನ ಅನುಭವ ಬಯಸುವವಳಿಗೆ ದೊರಕುತ್ತಿರುವುದು ಅದೇ ಅದೇ ದಿನದ ಗೋಳಿನ ಕ್ಷುದ್ರ ಸಂಗತಿಗಳು.

ಇಂದ್ರೀಯಗಳು ದೊರಕಿಸುವ ಮುಕ್ತಿಯ ಲೌಕಿಕಾನುಭವ, ರುಚಿಶುಚಿಗಳ ಆಹಾರ, ದ್ರವಿಸುವ ನಿದ್ರೆ-ಮೈಥುನಗಳು ತಂದೀವ ಸುಖವಿಲಾಸ, ಉಕ್ಕುವ ಕೃತಕ ಬೆಚ್ಚಭಾವಗಳು ಆಕೆಯನು ರೋಸುವಂತೆ ಮಾಡುವವು. ನೀರಸವಾದ, ಮನಸಿಗೆ ಮುದವನು ನೀಡದ, ಸಾಹಸವನು ಬಯಸುವ ಚಂಚಲತೆಯನು ತಣಿಸದ ಬದುಕು ಘೋರವೆನಿಸಿ ನಿರಾಕಾರವಾದ, ಸುಟ್ಟು ಕರಕಾಗಿಸುವ ಬೆಂಕಿಯ ಹಕ್ಕಿ ಆಕೆಯಲಿ ಆಕಾರವನು ಪಡೆಯತೊಡಗುವುದು.

ಇದು ಆಕೆಯ ಬದುಕಿನ ಭಯಾನಕ ಕ್ಷಣದ ಆರಂಭ. ಅವಳನ್ನು ದುರ್ಭರಗೊಳಿಸಿ, ಹಣ್ಣುಗಾಯಿ ನೀರುಗಾಯಿ ಮಾಡಿ, ಬಸವಳಿವಂತೆ ಹಿಂಡಿಹಿಪ್ಪೆ ಮಾಡುವ ದುರಂತಗಳ ಸರಮಾಲೆಯತ್ತ ಆಕೆಯನು ಅನಾಯಾಸವಾಗಿ ನೂಕುವುದು. ಹಸಿರಿನಿಂದ ಕಂಗೊಳಿಸುವ ನೆಲ ಹತ್ತಿ ಉರಿಯತೊಡಗಿ ಪ್ರಪಾತವಾಗಿ ಬದಲಾಗುವುದು. ಒಂದು ಹೆಣ್ಣು ತನ್ನೊಳಗೆ ತಾನೇ ಹುಟ್ಟು ಹಾಕಿಕೊಂಡ ಬೆಂಕಿಹಕ್ಕಿಗೆ ತಾನೇ ಸುಟ್ಟು ಕರಕಾರುವುದನ್ನು ಚಿರಂತನವಾಗಿ ಬಂಧಿಸಿಡುವುದು ಹೇಗೆ? ಎಂಬ ಚಿಂತೆಯಲಿರುವ ಈ ನಿರ್ದಯ ಲೋಕದ ಕವಿಗೆ ಇದು ಸುಗ್ಗಿಕಾಲ. ಆಕೆ ಸಂಕಷ್ಟಕ್ಕೊಳಗಾದಷ್ಟೂ ಕವಿಗೆ ಹೊಸ ಹೊಸ ಪದ, ನುಡಿಗಟ್ಟು, ವಾಕ್ಯಸರಣಿಗಳು ತಲೆಗೆ ನುಗ್ಗುವವು. ಆಕೆ ಕನಲಿದಷ್ಟೂ ಕವಿಯ ಕಲ್ಪನೆ ಹೊಸ ರೆಕ್ಕೆ ಪಡೆದು ಕ್ಷಿತಿಜಕ್ಕೆ ಹಾರುವುದು. ಆಗಲೀಗ ಯಾವ ದೇಶವೋ, ಇನ್ನಾವ ಭಾಷೆಯೊ, ಯಾವ ಕಾಲವೋ ಅಂತೂ ಆಕೆ ಹೊಸದೊಂದು ರೂಪದಲ್ಲಿ ನಮ್ಮೆದುರು ಬಂದು ಮನಸ್ಸನ್ನು ಕಸಿವಿಸಿಗೊಳಿಸುವಳು.

ಇದೀಗ, ಕಿರಿಯ ತಲೆಮಾರಿನ ಸಹಲೇಖಕಿ ಪೂರ್ಣಿಮಾ ಮಾಳಗಿಮನಿ ಸೃಷ್ಟಿಸಿದ ಅಂತಹ ಪಾತ್ರವೊಂದು ತಿಂಗಳುಗಳಿಂದ ನನ್ನನ್ನು ಜೀವ ಹಿಂಡುತ್ತಿದೆ. ಈಕೆಯ ಕುರಿತು ಬರೆದು ಕೈತೊಳೆದುಕೊಳ್ಳದೆ ಮುಕ್ತಿಯಿಲ್ಲವೆಂದು ನನಗೆ ಗೊತ್ತು. ಆದರೂ, ಹೇಗೆ, ಏನಾದರೂ ಬರೆಯುತ್ತಿ ನೋಡಿಯೇ ಬಿಡುವೆ, ಎಂಬಂತೆ ಈಕೆ ನನ್ನ ಕೈ ಕಟ್ಟಿ ಹಾಕಿ, ಸಂಕಟಕೆ ದೂಡಿ ತಿಂಗಳುಗಳಿಂದ ಕಾಡುತ್ತಿದ್ದಾಳೆ. ಆಕೆ ಕಾಡಿದಷ್ಟೂ ನಾನು ಬಸವಳಿಯುತ್ತಿರುವೆ. ಆಕೆಯ ಜಾಡುಗಳನ್ನು ಮತ್ತೆ ಮತ್ತೆ ಹುಡುಕಿ, ಮೆಲುಕು ಹಾಕಿ, ಯಾಕಾದರೂ ಹೀಗೆ ಮಾಡಿದಳು ಎಂದು ಅರಿಯಲು ಯತ್ನಿಸುತ್ತಿರುವೆ. ಮಿಲನ್ ಕುಂದೇರನ ‘ಐಡೆಂಟಿಟಿ’ಯ ಶಂತಲ್ ಕೂಡ ಹೀಗೆಯೇ ತಿಂಗಳುಗಟ್ಟಲೆ ಕಾಡಿದ್ದರೂ ಆಕೆಯ ಬಗೆಗೆ ಏನೂ ಬರೆಯಬೇಕಾದ ಒತ್ತಡವಿಲ್ಲದಿದುರಿಂದ ಅಷ್ಟರಮಟ್ಟಿಗೆ ನಿರುಮ್ಮಳೆಯಿತ್ತು. ಆದರೆ, ಇಲ್ಲಿ, ಬರೆಯದೆ ನನಗೆ ಮುಕ್ತಿಯಿಲ್ಲ.

ಕನಸುಗಳು ತಲೆಯಲ್ಲಿ ತುಂಬಿದಂತಹ ಹುಡುಗಿ, ಎಂಬಂತಿದ್ದ ಈಕೆಯ ಹೆಸರು ಏನಾದರೂ ಇರಲಿ. ಅದರ ಗೊಡವೆ ನನಗೆ ಬೇಡ. ಕಣ್ಣರಿಕೆಯಲಿ ಸಲುಹಿದ, ಮಧ್ಯಮ ವರ್ಗದ ತಂದೆತಾಯಿ, ಮಗಳ ಕನಸುಗಳು ಅರಳಿ ಹೂವಾಗಲಿ ಎಂಬ ಅವರ ಅನವರತ ಕಾಳಜಿ, ವಯಸ್ಸಿಗೆ ಬಂದೊಡನೆ ಸೂಕ್ತ ಗಂಡಿನೊಂದಿಗೆ ಮದುವೆ, ಇದ್ದುದರಲ್ಲಿಯೇ ಒಳ್ಳೆಯವರು ಎನ್ನಬಹುದಾದ ಗಂಡನ ಮನೆಯವರು, ಮಕ್ಕಳು, ಕೈತುಂಬ ಪಗಾರವನು ತರುವ ಬ್ಯಾಂಕಿನ ನೌಕರಿ, ಈಕೆಯ ಅಂತರಂಗದ, ಚಿಗುರೊಡೆಯಲು ಕಾದ ಮೊಗ್ಗುಗಳಿಗೆ ನೀರನ್ನೇ ಎರೆಯುವ ಪತಿಯ ಸಹಕಾರ…. ಸುಖದ ಬದುಕು ಎನ್ನುವುದಾದರೆ, ಮಧ್ಯಮವರ್ಗದ ಹೆಣ್ಣಿಗೆ ಇದಕ್ಕಿಂತ ಒಳ್ಳೆಯ ಜೀವನ ಸಿಗಲು ಸಾಧ್ಯವೆ?

ಎಲ್ಲಿಯೋ, ಯಾವುದೋ ಕಾಲದೇಶದಲ್ಲಿ ದಿಢೀರನೆ ಅಗ್ನಿಪಕ್ಷಿಯಂತೆ ಹುಟ್ಟು ಪಡೆವ ಇವಳ ಸಮಸ್ಯೆಯಾದರೂ ಎಂಥದು, ಇವಳಿಗೆ ಬೇಕಿರುವುದಾದರೂ ಏನು? ಎಂದು ತಲೆ ಕೆಡಿಸಿಕೊಂಡವರು ತಮಗೆ ತೋಚಿದ ಹೆಸರನ್ನು ಕೊಟ್ಟುಕೊಳ್ಳುವರು.

ಇಂತಹ ಹೆಣ್ಣುಗಳ ಸಮಸ್ಯೆಯೇ ಅದು. ಮೊದಲಿಗೆ ಕನಸು ಕಾಣುತ್ತಾರೆ. ಕಲ್ಪಿತ ಸುಖದ ಚೌಕಟ್ಟು ಅಮಿತಾನಂದವನೇ ನೀಡುತ್ತಿದೆ, ಇದನ್ನು ಒಡೆದು ಹೊರ ಹೋಗುವ ಇಲ್ಲದ ಉಸಾಬರಿಯೇಕೆ? ಎಂದು ಬದುಕುತ್ತಿರುತ್ತಾರೆ. ಆದರೆ, ಹುತ್ತದೊಳಗಿನ ಹಬೆಯಂತೆ ಇಂತಹ ಸುಖ ತರುವ ಪರಿಸರದಲ್ಲೂ ಅವರ ಅಂತರಂಗದ ಕನಸುಗಳು ಮೇಲಮೇಲಕ್ಕೆ ಪುಟಿದೇಳತೊಡಗುತ್ತವೆ. ಎಲ್ಲೆಡೆಯಿಂದ ಸಹಕಾರವಿದ್ದಾಗಲೂ ಕನಸಿನ ಸಾಕಾರಕ್ಕೆ ಅಡ್ಡಿಯಾಗಿರುವುದೇನು? ದಿಢೀರನೆ ಭಯವಿಹ್ವಲತೆ ಹುಟ್ಟಿಸಿದ ಸಹೋದ್ಯೋಗಿಯ ಸಾವು, ಬ್ಯಾಂಕಿನ ಸಹಾಯಕ ಸಿಬ್ಬಂದಿಯ ಕಣ್ಮರೆ? ಅಥವ ಬದುಕಿನ ನಿರರ್ಥಕತೆ? ಇಲ್ಲವೆ, ಕನಸುಗಳನ್ನು ಗ್ರಹಿಸುವ ವಿಧಾನದಲ್ಲಿಯೇ ಇರುವ ಸಮಸ್ಯೆಯೊ?

ನಮ್ಮ ಎಚ್ಚರ, ನಿದಿರೆ, ಅರೆಯೆಚ್ಚರದ ಗಳಿಗೆಯಲಿ ನಮ್ಮನ್ನು ಸದಾ ನಿಯಂತ್ರಿಸುವ ಕನಸುಗಳು ಆಳವಾಗಿ ಸಂಸ್ಕೃತಿಯಲ್ಲಿ ಬೇರು ಬಿಟ್ಟಿವೆ. ಕುಟುಂಬ, ಸಮಾಜ, ಧಾರ್ಮಿಕ ನಂಬಿಕೆ, ವರ್ಗಪ್ರಜ್ಞೆ, ಶಿಕ್ಷಣ ಮತ್ತು ಸಾಮಾಜಿಕ ಚಲನಶೀಲತೆಗಳು ಈ ಸಂಸ್ಕೃತಿಯ ಭಾಗವಾಗಿವೆ. ನಮ್ಮ ಕನಸುಗಳು ನಾವು ಪ್ರತಿನಿಧಿಸುವ ಸಮಾಜದ ಸಾಂಸ್ಕೃತಿಕ ಪ್ರತಿಬಿಂಬಗಳೇ ಆಗಿವೆ, ಎಂದು ಎರಿಕ್ ಫ್ರಾಮ್ ಮತ್ತು ಕಾರ್ಲ್ ಯೂಂಗ್ ಹೇಳುತ್ತಾರೆ. ಸಮಾಜವೆಂದಾಕ್ಷಣ ಅದೊಂದು ಏಕರೂಪದ ಸಂಚಯವಲ್ಲ. ಒಂದು ಸಮಾಜದಲ್ಲಿ ಏಕಕಾಲಕ್ಕೆ ಹಲವಾರು ಭಿನ್ನತೆ, ವಿರೋಧಾಭಾಸಗಳು ಮನೆಮಾಡಿರುವ ಸಂಸ್ಕೃತಿ ಜೀವಿಸುತ್ತಿರುತ್ತದೆ. ಆ ಕಾರಣದಿಂದಲೇ, ನಾವು ಎಷ್ಟು ಸಾಂಸ್ಕೃತಿಕ ಬಂಡವಾಳವನ್ನು ಹೂಡುತ್ತಿರುತ್ತೆವೆಯೋ ಅಷ್ಟು ಪ್ರಮಾಣದಲ್ಲಿ ನಮ್ಮ ಕನಸುಗಳು ಸಾಕಾರಗೊಳ್ಳಬಲ್ಲವು, ಎಂದು ಪಿಯರ್ ಬೋರ್ದು ಹೇಳುತ್ತಾರೆ. ಆರ್ಥಿಕವಾಗಿ ಕೆಳಹಂತದಿಂದ ಚಲನಶೀಲತೆ ಪಡೆದು ಸುಖದ ಬದುಕನ್ನು ಪಡೆಯುತ್ತ ಮಧ್ಯಮ ವರ್ಗವಾಗಿ ಹೊರಹೊಮ್ಮುವ ಕುಟುಂಬವೊಂದು ತನ್ನ ಅಪಾರ ಹಣವನ್ನು ಶಿಕ್ಷಣದಲ್ಲಿ ಹೂಡಬೇಕಾಗುತ್ತದೆ. ಅಂತಹ ಪರಿಸರವನ್ನು ಕುಟುಂಬದಲ್ಲಿ ನಿರ್ಮಿಸಬೇಕಾಗುತ್ತದೆ, ಎನ್ನುವುದು ಕೂಡ ಬೋರ್ದೋ ಉವಾಚವೇ.

ಈ ಕಾದಂಬರಿಯ ನಾಯಕಿಯ ಉಭಯ ಕುಟುಂಬಗಳು (ತಂದೆ-ತಾಯಿ, ಗಂಡನ ಮನೆಯ ಪರಿವಾರ) ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಸಂಸಾರಗಳು. ಆ ನಿಮಿತ್ತವಾಗಿಯೇ ಸಾಮಾಜಿಕ ಭದ್ರತೆಯ ರೂಪವಾದ ನೌಕರಿ, ಅದರ ಹಣ ನೀಡಬಹುದಾದ ಸುಖವನ್ನು ಕಂಡುಕೊಳ್ಳುವಲ್ಲಿ ಪ್ರಯತ್ನಿಸುವವರು. ಇಲ್ಲಿ, ಹೆಣ್ಣಿನ ನಿರೀಕ್ಷಿತ ಪಾತ್ರವೆಂದರೆ, ಕುಟುಂಬ ನಿರ್ವಹಣೆ, ಸಂಪಾದನೆ, ಮಕ್ಕಳ ಪಾಲನೆ ಪೋಷಣೆ, ರುಚಿಶುಚಿಗಳ ಆದ್ಯತೆ, ಪ್ರವಾಸ ಇತ್ಯಾದಿ. ನಿಜವಾದ ಸಂಘರ್ಷವಿರುವುದೇ ಇಲ್ಲಿ. ಇಲ್ಲಿನ ನಾಯಕಿ ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಆಕೆಯ ಪತಿಯೇ ಉತ್ತೇಜಕ ಶಕ್ತಿಯಾಗಿದ್ದಾನೆ. ಆತನೊಬ್ಬ ಪತ್ನಿಯ ಇಚ್ಛೆಯರಿತು ನಡೆವ ನಮ್ರನಂತೆ ಕಂಡರೂ ಕಥಾನಾಯಕಿಯ ನಿರ್ಧರಿತ ಕ್ಷಣದಲ್ಲಿ ಇಂಥ ದುಸ್ಸಾಹಸದ ಸಹವಾಸ ನನಗೆ ಬೇಡ ಎಂಬ ವಿಥ್‍ ಡ್ರಾ ಲಕ್ಷಣಗಳನ್ನು ತೋರುವವನು. ಸಮಸ್ಯೆಯಿರುವುದು ಹೊರಗಿನ ಸಹಜ ಬೆಂಬಲ ದೊರಕಿಸಿಕೊಳ್ಳುವುದರಲ್ಲಲ್ಲ. ತನ್ನ ರೋಚಕ ವಿಚಾರ, (ದು)ಸ್ಸಾಹಸಗಳನ್ನು ಹಂಚಿಕೊಳ್ಳುವ, ಹಂಗಿರದ ಸ್ವಾತಂತ್ರ್ಯವನ್ನು ತನ್ನೊಡನೆ ಆಸ್ವಾದಿಸಬಲ್ಲ ಮತ್ತು ಅಂಟಿನ ಗುಣ ಹೊಂದಿರದ, ನೀರಿನಷ್ಟು ಪಾರದರ್ಶಕವಾಗಿರಬಲ್ಲ ಸಾಂಗತ್ಯ. ಅದರ ಗೈರು ಹಾಜರಿಯ ವಿಷಾದ ಹೊರಗೆ ಪ್ರಕಟವಾಗದೆ, ಆಳದಲ್ಲಿ ಕೊರೆದು ಮರವನ್ನು ಬೀಳಿಸುವಷ್ಟು ಪ್ರಬಲವಾಗಿರುವಂಥದ್ದು. ಈ ವಿಷಾದ ಮಡುಗಟ್ಟಿ ಬದುಕು ಮೂರಾಬಟ್ಟೆಯಾಗಲು ಕಾರಣ ನಾವು ಕನಸುಗಳನ್ನು ಗ್ರಹಿಸುವ ರೀತಿಯಲ್ಲಿರುವ ಸಾಂಸ್ಕೃತಿಕ ದೋಷಗಳೇ ಆಗಿವೆ. ಇಲ್ಲಿ ಹೆಣ್ಣು ಸ್ವತಂತ್ರಳು ಎಂದರೂ ಆಕೆ ಸ್ವಾತಂತ್ರ್ಯದ ಭ್ರಮೆಯಲ್ಲಿರುವ ಬಂದಿ.

(ಕೇಶವ ಮಳಗಿ)

ಕಥೆ ಬೆಳೆದಂತೆ ಈ ಅಂಶಗಳು ಬಹುಬೇಗ ಓದುಗ ಅರಿಯುತ್ತ ರೋಚಕತೆ, ವಿಷಾದ, ಆಘಾತ ಇತ್ಯಾದಿಗಳನ್ನು ಅನುಭವಿಸುವನು. ಪೂರ್ಣಿಮಾರ ಕಥನ ಶೈಲಿ, ತಂತ್ರ, ವಿನ್ಯಾಸ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕಥೆಯನ್ನು ತೀರ ಹೊಸತೊಂದು ಬಗೆಯಲ್ಲಿ ನಡೆಸಬೇಕೆಂಬ ಛಲದ ನಿರೂಪಣೆ ನನ್ನನ್ನು ಬಹುವಾಗಿ ಆಕರ್ಷಿಸಿದ ಅಂಶವಾಗಿದೆ. ಘಟನೆಗಳನ್ನು ಹೆಣೆಯುವ ಕ್ರಮ ಮತ್ತು ಸಿಕ್ಕು ನಿರೂಪಣೆಯ ಮೂಲಕ ಕಥನದ ಮೇಲೆ ನಿಯಂತ್ರಣ ಸಾಧಿಸುವ ವಿಧಾನ ಕೂಡ ಮೇಲುಸ್ತರದ್ದಾಗಿದೆ. ಆರಂಭಿಕ ಭಾಗದಲ್ಲಿ ವಾಸ್ತವಮಾರ್ಗದ ಕಥನ ಶೈಲಿ ಮಂಜ ಎಂಬ ಪಾತ್ರದ ಪರಿಚಯದಿಂದ ಒಂದು ದುಸ್ಸಾಹಸಮಯ ಭ್ರಾಮಕ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆ ಭಾಗಗಳು ಸಾಹಸಮಯ, ರೋಚಕ. ಜತೆಜತೆಗೆ, ಹತಾಶೆ, ಬದುಕಿನ ದುರ್ಭರತೆ, ರೂಕ್ಷತೆಗಳ ದರ್ಶನ ಮಾಡಿಸಬಲ್ಲಷ್ಟು ಸಶಕ್ತ.

ಸುಖವನ್ನೇ ಬಯಸಿದ ಕನಸೊಂದು ದುಸ್ವಪ್ನವಾಗಿ ಬದಲಾಗಿ, ಹಳವಂಡ ಮುಗಿದು ಮತ್ತೆ ಬದುಕಿಗೆ ಮರಳಿದಾಗ ಆ ಬದುಕು ಮೊದಲಿನ ಸುಖದ ಕಲ್ಪನೆಯಂತೆಯೇ ಇರುವುದೇ? ಅಥವ ಈ ಪ್ರಶ್ನೆಯನ್ನು ಇನ್ನೊಂದು ರೀತಿಯಲ್ಲಿ ಕೇಳಿಕೊಳ್ಳುವುದಾದರೆ, ಸಂಕೀರ್ಣವಾದ ಸಾಮಾಜಿಕ ರಚನೆ ಹೊಂದಿರುವ ನಮ್ಮಂಥ ದೇಶಗಳಲ್ಲಿ ಹಣ ನೀಡುವ ಸುಖ-ಸ್ವಾತಂತ್ರ್ಯಗಳೇ ನಮ್ಮ ನಿಜವಾದ ಕನಸುಗಳಾಗಿರುತ್ತವೆಯೆ? ಅಥವ ನಮ್ಮೊಳಗೆ ಅವಿತಿರುವ ಮನೋಕಾಮನೆಗಳನ್ನು ಆಗು ಮಾಡಿಕೊಳ್ಳಲು ನಮ್ಮ ಸಾಮಾಜಿಕ ರಚನೆಯಲ್ಲಿ ಬದಲಾವಣೆಯ ಅಗತ್ಯವಿದೆಯೆ? ನಾವು ಪಡೆದುಕೊಳ್ಳಬೇಕಾದ ಸಂಗಾತಿ ಎಂಥವನಾಗಿರಬೇಕು ಮತ್ತು ಕುಟುಂಬದ ಕಟ್ಟಳೆಗಳು ವಿಧಾನಗಳು ಯಾವಾಗಿರಬೇಕು? ಎಂಬುದಾಗಿದೆ.

ಪ್ರಶ್ನೆಯನ್ನು ಹೇಗೆ ತಿರುಚಿ ಕೇಳಿಕೊಂಡರೂ ಸದ್ಯಕಂತೂ ನಾನಿವಳ ಕಾಡುವಿಕೆಯಿಂದ ಬಿಡಿಸಿಕೊಂಡು ನಿರುಮ್ಮಳವಾಗುತ್ತಿದ್ದೇನೆ. ಇನ್ನೀಗ ಈಕೆ ನಿಮ್ಮ ಜೀವ ಹಿಂಡಲು ಸಿದ್ಧವಾಗಿ ನಿಂತಿರುವಳು. ಅದು ನಿಮ್ಮ ಹಣೆಯ ಬರಹ.

ಇಂಥದ್ದೊಂದು ಅಪರೂಪದ ಕಥನವನ್ನು ಕಟ್ಟಿದ ಪೂರ್ಣಿಮಾ, ಕಾದಂಬರಿ ಬರೆಯುವಾಗಿನ ಸಹನೆಯನ್ನು ನನ್ನ ಈ ಹರುಕು-ಮುರುಕು ಮಾತುಗಳನ್ನು ಬರೆಯಿಸುವಲ್ಲಿಯೂ ತೋರಿದ್ದಾರೆ. ಅವರ ಈ ಅಪರೂಪದ ಹೆಂಗರುಳಿನ, ಬದುಕಿನ ರೂಕ್ಷತೆಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುವ, ಗಡಸು ಸತ್ಯಗಳನ್ನು ಅರಹುವ ಈ ಕೃತಿಗೆ ಅರ್ಹ ಮಾನ್ಯತೆ ದೊರಕಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತೇನೆ.

 

(ಕೃತಿ: ಇಜಯಾ, ಲೇಖಕರು: ಪೂರ್ಣಿಮಾ ಮಾಳಗಿಮನಿ, ಪ್ರಕಾಶಕರು: ಗೋಮಿನಿ ಪ್ರಕಾಶನ, ತುಮಕೂರು, ಬೆಲೆ: 160/-)