ಮನಸ್ಸಿನ ಅಹಂಕಾರ ಮೊದಲು ಅಮಲು ಆನಂತರ ಚಟ ನಂತರ ಅಧೋಗತಿ. ಈ ಅಧೋಗತಿ ಎಂಬ ಹಂತ ಅಲ್ಲಿಯವರೆಗೆ ವ್ಯಕ್ತಿ ಪರಿವರ್ತನೆ ಆಗಲಿಲ್ಲ ಎಂದರೆ ಆತ ವೃತ್ತಿ, ವೈಯಕ್ತಿಕ ಎರಡೂ ಕಡೆ ಮುಳುಗಿದಂತೆಯೇ ಸರಿ. ಇಲ್ಲಿ ಮೊಹಂತಿ ಹೆಂಡತಿಗೆ ವಿಚ್ಛೇದನ ಕೊಡುತ್ತಾನೆ. ಆಕೆ ನೀರಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಕಾರಣನಾಗುತ್ತಾನೆ. ಆನಂತರ ಇತರ ಮಕ್ಕಳನ್ನು ನೋಡಿ ನನಗೂ ಇದ್ದಿದ್ದರೆ ಅನ್ನುವುದು, ಅವಳು ಇನ್ನೊಮ್ಮೆ ಬಂದರೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಕೇವಲ ಮನಸ್ಸಿನಲ್ಲಿ ಮಾತ್ರ ತೀರ್ಮಾನ ಮಾಡಿಕೊಂಡರೆ ಸಾಕೆ ಅದನ್ನು ಬಾಯಂಗಳದಲ್ಲೇ ಇರಿಸಿಕೊಂಡರೆ ಎದುರಿಗಿರುವವರ ಮನದಂಗಳ ತಲುಪುವುದು ಹೇಗೆ?
ಕೆ.ವಿ. ತಿರುಮಲೇಶರ ಕಾದಂಬರಿಗಳ ಕುರಿತು ವಿಶ್ಲೇಷಿಸಿದ್ದಾರೆ ಸುಮಾವೀಣಾ

ತರಂಗಾಂತರ

ಕೆ.ವಿ. ತಿರುಮಲೇಶರ ವಿಭಿನ್ನ ದೃಷ್ಟಿಕೋನವುಳ್ಳ ಮಹತ್ವದ ಕಾದಂಬರಿ ಎಂದರೆ ತರಂಗಾಂತರ. ಚುಟುಕಾಗಿ ವಿನ್ ಎಂದು ಕರೆಸಿಕೊಳ್ಳುವ ವಿನಯಚಂದ್ರ ಇಲ್ಲಿ ನಾಯಕ. ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿ. ಹೆರಾಕ್ಲಿಟಸ್ ಪುಸ್ತಕವನ್ನು ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ತಂದು ಓದುತ್ತಿರುತ್ತಾನೆ. ಅದರಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ “A LOOF” ಪದದ ಜಿಜ್ಞಾಸೆಯಲ್ಲಿ ತೊಡಗುತ್ತಾನೆ. ಹೆರಾಕ್ಲಿಟಸ್ ಎಂಬ ಗ್ರೀಕ್ ತತ್ವಜ್ಞಾನಿಯ ಮಾತುಗಳ ಮಂಥನದೊಂದಿಗೆ ಈ ಕಾದಂಬರಿ ಅನಾವರಣಗೊಳ್ಳುತ್ತದೆ.

“ಒಂದೇ ನದಿಯಲ್ಲಿ ಎರಡು ಸಲ ಸ್ನಾನ ಮಾಡುವಂತಿಲ್ಲ”. “ಚಿನ್ನ ಹುಡುಕಿ ಹೋದವರು ಬಹಳಷ್ಟು ಮಣ್ಣು ಅಗೆಯುತ್ತಾರೆ. ದೊರಕುವ ಚಿನ್ನ ಅತ್ಯಲ್ಪ”. “ನಿದ್ದೆ ತೂಗುವವರು ಸಹ ಜಗತ್ತಿನ ಆಗುಹೋಗುಗಳಲ್ಲಿ ಸಹಭಾಗಿಗಳು” ಮುಂತಾದ ಮಾತುಗಳು ಓದಗುರನ್ನು ಚಿಂತನಾ ಲಹರಿಯಲ್ಲಿ ಮುಳುಗಿಸುತ್ತವೆ. ಲೋಕದರ್ಶನ ಮಾಡಿಸುತ್ತವೆ. ಚಿಂತನಾಶೀಲ ಮನಸ್ಸುಗಳಿಗೆ ಇಂಥ ತಾತ್ವಿಕತೆಯೇ ಆಶ್ರಯವಲ್ಲವೇ?

ಕಾದಂಬರಿಯ ನಾಯಕ ವಿನಯಚಂದ್ರ ಅಪಾರ್ಟ್ಮೆಂಟಿನ ಬೇಸ್‌ಮೆಂಟಲ್ಲಿ ಕುಳಿತು ಪುಸ್ತಕ ಓದುತ್ತಲೂ, ನಿದ್ರೆ ಬಂದರೂ ಸಂಪೂರ್ಣ ನಿದ್ರೆಯನ್ನೂ ಮಾಡಲಾಗದೆ, ಹೋಗುವ ಬರುವ ಎಲ್ಲರನ್ನೂ ಈಕ್ಷಿಸುವ ಹಂತಗಳನ್ನು ಒಟ್ಟಿಗೆ ಬಂಧಿಸುವ ರೀತಿ ಎಲ್ಲ ಹರೆಯದ ಮನಸ್ಸುಗಳನ್ನು ಪ್ರತಿನಿಧಿಸುತ್ತದೆ. ಕಾದಂಬರಿಯ ನಾಯಕ ಇಲ್ಲಿ ರೇಶ್ಮಳನ್ನು ನಾನು ನಗಿಸಬೇಕು ಎಂದು ತಿಳಿದಿರುವುದೂ ಕೂಡ. ಇಂಥ ವೈರುಧ್ಯಗಳು ಸಾಮಾಜಿಕರಲ್ಲಿಯೂ ಅನುರಣಿಸುವಂಥವು. ಕನಿಷ್ಟ ಅವಳು ಶಾಪಿಂಗ್ ಮಾಡಿದ ವಸ್ತುಗಳನ್ನು ಮೆಟ್ಟಿಲೇರಿಯೇ ತಲುಪಿಸಿ ಬರಬೇಕೆಂಬ ಹುಂಬತನ. ಅವಳೇ ಕರೆಮಾಡಬೇಕು ಎಂಬ ತನ್ನ ಬಯಕೆಯನ್ನು ವಾಸ್ತವದಲ್ಲಿಯೂ ನಿಜವಾಗಬೇಕು ಎಂದು ನಿರೀಕ್ಷಿಸುವುದು ಹುಚ್ಚುಕೋಡಿ ಮನಸ್ಸುಗಳನ್ನು ಪ್ರತಿನಿಧಿಸುವಂತಿದೆ. ಇವುಗಳು ಪರಸ್ಪರ ಪೂರಕವಾಗಿಲ್ಲದಿದ್ದರೂ ವೈರುಧ್ಯಗಳಾಗಿಯೇ ನಮ್ಮನ್ನು ನಿಯಂತ್ರಿಸುತ್ತವೆ. ರೇಶ್ಮ ತನ್ನ ಹೆಸರನ್ನು “ಎವರಿ ಒನ್ ಲೈಕಸ್ ಇಟ್” ಎನ್ನುವಲ್ಲಿ (ಪುಟ.ಸಂ. 16)

‘ತರಂಗಾಂತರʼ ಪದ ವ್ಯಕ್ತಿಯಿಂದ ವ್ಯಕ್ತಿಯ ನಡುವೆ ಏರ್ಪಡುವ ಸಂಬಂಧ ಮತ್ತು ಸಂಬಂಧಾಂತರಗಳ ಸೂಚಕವಾಗಿದೆ. ಮೊದಲು ಅಕ್ಕ ರೇಶ್ಮಳ ಮೇಲೆ ಆಸಕ್ತಿಯುಳ್ಳವನು ಆಕೆ ಅವರಮ್ಮನನ್ನು “ಇನ್ಲಾ” ಎಂದಾಗ ಕೊಂಚ ಗಡಿಬಿಡಿಯಾಗುತ್ತಾನೆ. “ಚೀಸ್ ಟಿನ್” ಇಲ್ಲಿ ಸಂಕೇತಾತ್ಮಕವಾಗಿ ಬಂದಿದೆ.

ಚೀಸಿನ ಟಿನ್ನನ್ನು ಬೆನ್ನಟ್ಟುವ ಪ್ರಸಂಗ ಮೊದಲು ಕನಸಿನಲ್ಲಿ ಬರುತ್ತದೆ. ಹಾಗೆ ಬಂದರೂ ಮನುಷ್ಯನ ಭಾವನೆಗಳನ್ನು ಹೇಳುತ್ತದೆ. ಸಂಕೇತದ ಮೂಲಕ. ಹರೆಯದ ವಿನಯನ ತೊಳಲಾಟವನ್ನು ಕಾದಂಬರಿಕಾರು ಚೀಸ್ ಟಿನ್ನಿನ ಮೂಲಕ ತರಬಯಸಿದ್ದಾರೆ. ಚೀಸ್ ಎಂದರೆ ಹಾಲು, ಹಾಲು ಎಂದರೆ ಮದರ್, ವೈಫ್ ಸೆಕ್ಸ್ ಅದು ಉರುಳಿ ಹೋಗತಾ ಇದೆ. “ಪ್ರಜ್ಞೇನ ಸುಪ್ತಪ್ರಜ್ಞೆ ಓವರ್ ಟೇಕ್ ಮಾಡಿದೆ” ಎಂಬ ಮಾತುಗಳು ಇಲ್ಲಿವೆ. (ಪು. ಸಂ 28)

ರಿಮೋಟಿನ ಪ್ರಸಂಗವಂತೂ ಹುಡುಗಿಯರನ್ನು ಮೆಚ್ಚಿಸಲು ಹೆಣಗುವ ಹುಡುಗರ ಪ್ರತಿನಿಧಿಯೆಂಬಂತೆ ಇದೆ. ಹುಡುಗಿಯರನ್ನು ಮೆಚ್ಚಿಸಲು ಇತರರ ಸಹಾಯ ಪಡೆಯುವ ಪ್ರತೀತಿಯೂ ಇಲ್ಲಿ ಇಣುಕಿದೆ. ನಾಯಕ ರೇಶ್ಮಳನ್ನು ಮೆಚ್ಚಿಸುವ ಸಲುವಾಗಿ ತನ್ನಲ್ಲಿ ಹಣವಿಲ್ಲದೇ ಇದ್ದರೂ ಶೈಕ್ಷಣಿಕ ಪ್ರವಾಸಕ್ಕೆ ಹೋಗುವುದಾಗಿ ಹೇಳಿಹಣ ಪಡೆಯುವುದು. ಪಕ್ಕಾ ಲೆಕ್ಕವಿಡುವ ತಂದೆ ಮಗನಿಗೆ ಚೆಕ್‌ನ ಮೂಲಕ ಹಣ ಕೊಡುವುದು ಇಲ್ಲಿ ಬರುತ್ತದೆ. ಅಂಥಾ ಪಕ್ಕಾ ಲೆಕ್ಕವಿಡುವ ತಂದೆಗೇ ದೋಖಾ ಹೇಗಾಗುತ್ತದೆ? ಎಂಬುದು ಇಂದಿನ ಪೋಷಕರಿಗೆ ಚಿಂತೆಯಾದರೆ ಹದಿಹರೆಯದವರಿಗೆ ಇದೇನ್ ಮಹಾ ಎನ್ನುವ ಭಾವನೆ ಬರಬಹುದು.

ರೇಶ್ಮಾ ಅರಬ್ ರಾಷ್ಟ್ರಗಳಿಗೆ ಹೋಗಿ ಬಂದಳು ಎಂದಾಗ ನಾಯಕನಿಗೆ ಸಹಜವಾಗಿ ಕಸಿವಿಸಿಯಾಗುತ್ತದೆ. ಆನಂತರ ಸಿನೆಮಾಕ್ಕೆ ಕರೆಯುತ್ತಾನೆ. ಆದರೆ ಆಕೆಯ ತಂಗಿ ಅಲ್ಲಿ ಸುನೈನ ಬರುತ್ತಾಳೆ. ಚಟರ್ಜಿ ಎಂಬ ಸ್ನೇಹಿತನಿಗೆ ರೇಶ್ಮಾಳ ನಂಬರನ್ನು ಕೊಟ್ಟಾಗಲೂ ಎಲ್ಲೋ ಕೊಡಬಾರದಿತ್ತು, ಆ ನಂಬರ್ ದುರುದ್ದೇಶಕ್ಕೆ ಬಳಕೆಯಾದರೆ ಎಂಬ ಯೋಚನೆಗಳಲ್ಲಿ ನಾಯಕ ಇರುತ್ತಾನೆ. (ಪುಟ ಸಂ. 29) ಆತನನ್ನು “ಫಸ್ಟ್ ರೇಟ್ ವೂಮನೈಸರ್ ಎಂದು ಹೆಸರಾಗಿದ್ದ ಮಂಗನ ಕೈಗೆ ಮಾಣಿಕ್ಯ ಕೊಟ್ಟು ಬಿಟ್ಟೆನೆ” ಎಂದು ಚಿಂತೆಗೀಡಾಗುತ್ತಾನೆ. ಹಳೆಯ ರಿಮೋಟನ್ನು ಹೊಸದಕ್ಕೆ ಬದಲಿ ಮಾಡಿಕೊಂಡ ಮೇಲೆ ರಿಮೋಟ್ ಅನ್ನು ಭೀಮ ದ್ರೌಪದಿಗೆ ತಂದ ‘ಸೌಗಂಧಿಕಾ ಪುಷ್ಪಕ್ಕೆ’ ಹೋಲಿಸುವುದಿದೆ. ಇಲ್ಲಿ ತಿರುಮಲೇಶರು ಹೈದರಾಬಾದ್, ಸಿಖಂದರಾಬಾದಿನ ಪ್ರವಾಸಿ ತಾಣಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಕ್ವಚಿತ್ತಾಗಿ ಪೊಲೀಸಿನವರ ಲಂಚಗುಳಿತನವನ್ನೂ.

“ಸಿಟಿ ಲೈಫ್ ಅನ್ನುವುದು ಇಲ್ಲಿ ಪರದೇಸಿ” ಎನ್ನುವುದನ್ನು ತಿರುಮಲೇಶರು ಬಹಳ ವಿವರವಾಗಿ ಹೇಳಬಯಸಿದ್ದಾರೆ. ಪುಟ ಸಂ 16 ರಲ್ಲಿ ಬದುಕು ಹಾಗೆ ಪರದೇಶಿ, ಜಿ. ಎಸ್. ಎಸ್ ಅವರು “ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯೊಳಗೆ” ಅನ್ನುತ್ತಾರಲ್ಲಾ ಹಾಗೆ. ನಗರ ಜೀವನವೇ ಅಪರಿಚಿತ. ಅಪರಿಚಿತವಾದವರನ್ನು ಸಂಪೂರ್ಣ ಪರಿಚಯ ಮಾಡಿಕೊಳ್ಳುವಷ್ಟರಲ್ಲಿ ಬೇರೇನೋ ತಿರುವು ಬರುವುದಿದೆಯಲ್ಲ ಇದುವೇ ಇಲ್ಲಿ “ತರಂಗಾಂತರ”.

ತಿರುಮಲೇಶರು ಸಿಟಿ ಲೈಫನ್ನು ಕೋಳಿ ಸಾಕಣೆ ಕೇಂದ್ರಕ್ಕೆ ಹೋಲಿಸಿದ್ದಾರೆ. ಮತ್ತೆ ನಾಯಕನ ಮೂಲಕವೂ ಹೈರೈಸ್ ಕಟ್ಟಡದ ಜೀವನ ಯಾರಿಗೂ ಇಷ್ಟವಿಲ್ಲ. ಇಲ್ಲಿ ಒಬ್ಬರು ಇನ್ನೊಬ್ಬರಿಗೆ ಪರಿಚಯವಿರುವುದಿಲ್ಲ ಎಂದು ಹೇಳಿಸುತ್ತಾರೆ. ಹಾಗಾಗಿ ಟೂರ್ ಹೋಗುತ್ತೇನೆ ಎಂದು ಹೇಳಿ ನಗರದಲ್ಲೇ ಇದ್ದು ಹುಡುಗಿಯರನ್ನು ಸಂಧಿಸುತ್ತಾನೆ.

ತರಂಗಾಂತರ ಎಂದರೆ ಇಲ್ಲಿ ಪ್ರತಿಮೆ. (ಪುಟ. ಸಂ 10) ಹಣದ ಚಿಂತನೆ. ಕಾದಂಬರಿಯ ನಾಯಕ ವಿನಯಚಂದ್ರ ಲಿಫ್ಟ್ ಬಾಯ್‌ಗೆ ಐದು ರೂ ಹಣ ಕೊಟ್ಟು ಸ್ವಗತದಲ್ಲಿ ಹೇಳಿಕೊಳ್ಳುವ ವಿಚಾರಧಾರೆ ಓದುಗರನ್ನು ಚಿಂತನೆಯಲ್ಲಿ ತೊಡಗಲು ಪ್ರೇರೇಪಿಸುತ್ತದೆ. “ಕ್ಷಣದ ಹಿಂದೆ ನನ್ನಲ್ಲಿದ್ದ ಐದು ರೂಪಾಯಿ ಲಿಫ್ಟ್ ಬಾಯ್‌ನ ಪ್ರೇಯಸಿಯ ಕೈ ಸೇರಬಹುದು, ಅಥವಾ ಸಿನೆಮಾ ಟಿಕೇಟಿಗೆ ಖರ್ಚಾಗಬಹುದು, ಇಲ್ಲವೇ ಮಕ್ಕಳಿಗೆ ಖುಷಿ ಕೊಡುವ ವಸ್ತುಗಳ ಖರೀದಿಗಾಗಬಹುದು ಎನ್ನುವುದು ಹಣದ ರೂಪವನ್ನೇ ಅವಲೋಕಿಸುವಂತಿದೆ. ನಿದ್ರೆಯ ಕುರಿತು (ಪುಟ ಸಂ. 14) ಚಿಂತೆಯಲ್ಲದವನಿಗೆ ಸಂತೆಯಲ್ಲಿ ನಿದ್ರೆ. ಅಲ್ಲಿಯೂ ಕಾನ್ಸಂಟ್ರೇಶನ್ ಬಯಸುವುದು ಆಧುನಿಕ ಬದುಕಿನ ಸೈಕಾಲಜಿ ಎಂಬುದಾಗಿದೆ.

ಅಂತರಂಗವನ್ನು ಇರಿಯುವವರು ಇರುತ್ತಾರೆಯೇ ವಿನಃ ಅರಿಯುವ ಮನಸ್ಸು ಇಂದಿನ ದಿನಮಾನಗಳಲ್ಲಿ ಕಡಿಮೆಯಾಗುತ್ತಿದೆ. ವ್ಯಕ್ತಿಯನ್ನು ನೋಡಿದ ಕೂಡಲೆ ಇವರಿಷ್ಟೇ ಎಂಬ ನಿರ್ಧಾರಕ್ಕೆ ಬರುವುದು ತಪ್ಪು ಎಂಬುದು (ಪುಟ ಸಂ. 24) ರೇಶ್ಮ ಹಾಗು ನಾಯಕನ ಸಂಭಾಷಣೆಯಲ್ಲಿದೆ.

“ಮಾತಿನ ಗೊಬ್ಬರ ಕೊಡಬೇಕೇ ಬೇಡವೆ” ಚಿಟ್ಟಿ ಮೌನ ವಹಿಸದಾದ (ಪುಟ ಸಂ 71) ಎಂಬಲ್ಲಿ ಮಾತಿಗೂ ಪ್ರಾಮುಖ್ಯತೆ ಇಲ್ಲ ಎಂದಾಗುತ್ತದೆ. ಚಹಾ ಮತ್ತು ಕಾಫಿಯ ವಿಚಾರ ಇಲ್ಲಿ ಸಂದರ್ಭಾನುಸಾರಿ, ವ್ಯಕ್ತಾನುಸಾರಿ, ಹಾಗು ಪ್ರಾಂತ್ಯಾನುಸಾರಿ. ನಾಯಕ ವಿನ್‌ಗೆ ತಾಯಿಯ ಜೊತೆಗೆ ಭಾಂದವ್ಯ ಚೆನ್ನಾಗಿಯೇ ಇರುತ್ತದೆ. ಕಾರಣಾಂತರಗಳಿಂದ ಕೆಲಸದಾಕೆ ಬಾರದೆ ಇದ್ದಾಗ ತಾಯಿ ಸಿಂಕ್‌ನಲ್ಲಿದ್ದ ಪಾತ್ರೆಗಳನ್ನು ಒಬ್ಬರೇ ತಿಕ್ಕುವುದನ್ನು ನೋಡಿ ಅವರನ್ನು ನಿದ್ರೆಗೆ ಕಳುಹಿಸಿ ತಾನೆ “ವಿಮ್ “ಅನ್ನುವ “ಆಧುನಿಕ ಬೂದಿ”ಯನ್ನು ತಿಕ್ಕುತ್ತೇನೆ ಎನ್ನುವುದು ಕಾಲ ಕಳೆದಂತೆ ಜನರ ದಿನನಿತ್ಯದ ಕಾರ್ಯಗಳ ಶೈಲಿಯೂ ಪ್ರತಿಯೊಂದರಲ್ಲೂ ಪಲ್ಲಟಗೊಳ್ಳುತ್ತದೆ ಎಂಬುದಾಗಿದೆ. ಎಲ್ಲಾ, ಕೆಲಸ ಮಾಡಿ ತಣ್ಣೀರಲ್ಲಿ ಸ್ನಾನ ಮಾಡಿ ವಾಚು ನೋಡಿಕೊಂಡಾಗ ಸದ್ಯ ಒಂದು ಒಂದೂವರೆ ಗಂಟೆಗಳ ಸಮಯದವರೆಗೆ ಬೇರೆ ಏನನ್ನೂ ಯೋಚಿಸಲು ಸಾಧ್ಯವಾಗಲಿಲ್ಲ ಎನ್ನುವುದು ಬೇರೆ ಯಾರ ಯೋಚನೆ, ಇನ್ಯಾವ ತಲೆ ಹಾಳು ಮಾಡುವ ಕಿರಿ ಕಿರಿ ತರಿಸುವ ಯೋಚನೆಗಳು ಮದ್ಯೆ ಪ್ರವೇಶಿಸಲಿಲ್ಲ ಎನ್ನುವುದು ಮನುಷ್ಯ ಸದಾ ಉಪಯುಕ್ತ ಕೆಲಸದಲ್ಲಿ ತಲ್ಲೀನನಾಗಿರಬೇಕು ಎಂಬುದನ್ನು ಸಂಕೇತಿಸುತ್ತದೆ. ಮತ್ತೆ ಕನಸಿನಲ್ಲಿ ಚೀಸಿನ ಟಿನ್ ಕಾಡತೊಡಗಿದಾಗ ಹೇಗಾದರೂ ಸರಿ ರೇಶ್ಮಾಳನ್ನು ನೋಡಿಯೇ ತೀರಬೇಕು ಎನ್ನುವ ತೀರ್ಮಾನಕ್ಕೆ ಬರುತ್ತಾನೆ. ಅದಕ್ಕೋಸ್ಕರ ರ್ಯಾಡಿಕಲಿಸ್ಟ ದೀಕ್ಷಿತನ ಮನೆಗೆ ಹೋಗುವುದು ಅದೂ ಆತ ಕಾರಣ ಕೇಳಿದಾಗ (ಪುಟ. ಸಂ 55) “ದ ಮ್ಯಾಟರ್ ಈಸ್ ಫೆಮಿನೈನ್!” ಎನ್ನುತ್ತಾನೆ. “ನಮ್ಮನೆಯಲ್ಲಿ ಇರೋದ್ ಒಂದೇ ಕಾಟ್ ಎಂದರೂ ನೆಲದಲ್ಲಿಯೇ ಮಲಗಿಕೊಳ್ಳುತ್ತೇನೆ” ಎಂದು ಹೇಳಿ ದೀಕ್ಷಿತನ ಉತ್ತರಕ್ಕೂ ಕಾಯದೆ ಅವನ ಮನೆಗೆ ಹೋಗುವುದು ರೇಶ್ಮಾಳನ್ನು ಒಮ್ಮೆ ಭೇಟಿಯಾಗಬೇಕು, ಆ ಭೇಟಿಯ ಸುಮಧುರತೆಯನ್ನು ಅನುಭವಿಸಬೇಕು ಎಂದಿರುವ ಅವನ ಸಹಜ ಚಡಪಡಿಕೆ ಎಷ್ಟಿದೆ ಎಂಬುದನ್ನು ಇಲ್ಲಿ ಗುರುತಿಸಬಹುದು.

ದಿನಗಳು ಉರುಳಿದಂತೆ ಆತನ ಬದುಕಿನಲ್ಲಿ ನಾನಾ ರೀತಿಯ ಬದಲಾವಣೆಗಳುಂಟಾಗುತ್ತವೆ. ದೇವರಲ್ಲಿ ನಂಬಿಕೆ ಇರುವುದಿಲ್ಲ. ಶಕುನ ಅಪಶಕುನಗಳಲ್ಲಿ ನಂಬಿಕೆ ಇಲ್ಲದಿರುವುದು. ವಿನಾ ಕಾರಣ ಚರ್ಚೆಯಲ್ಲಿ ಮುಳುಗುವುದು. ಹೀಗೆ ಆತನ ಸಿಡುಕು ಎಲ್ಲವನ್ನು ಚರ್ಚಿಸಬಹುದಾದ ವ್ಯಕ್ತಿ ರೇಶ್ಮಳನ್ನು ಕಂಡಾಗ ಗೌಣವಾಗುತ್ತಿತ್ತು. ಮತ್ತೆ ಅವಳನ್ನು ರಿಮೋಟಿನೊಂದಿಗೆ ನೋಡಹೋದಾಗ ಸಾಕಷ್ಟು ಬದಲಾವಣೆಗಳು ಉಂಟಾಗಿರುತ್ತವೆ. ಅವಳ ಉಡುಪನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾನೆ. ಹೊಸದಾಗಿ ಕೊಂಡು ತಂದ ರಿಮೋಟನ್ನು ಹಳೆಯದೆ ಇದನ್ನು “ಆ್ಯಾಸಿಡ್ ವಾಶ್” ಮಾಡಿಸಿದ್ದೇನೆ ಎನ್ನುವುದು… ನಾಟಕೀಯತೆ ಆದರೆ ನಿಜಕ್ಕೂ “ಆ್ಯಾಸಿಡ್ ವಾಶ್” ನಮಗೆ ನಮ್ಮ ಮನಸ್ಥಿತಿಗೆ ಆಗಬೇಕು ಎಂಬುದನ್ನು ಇಲ್ಲಿ ಸೂಚಿಸುತ್ತದೆ.

ಪುಟ. ಸಂ. 59 ರಲ್ಲಿ ತಿರುಮಲೇಶರು ಹೆಚ್ಚೆಚ್ಚು ಪರಿಚಯ ಆದ ಹಾಗೆ ನಾವು ನಗುವ ಕೆಪಾಸಿಟಿಯನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ಸರ್ವಕಾಲಕ್ಕೂ ಅನ್ವಯವಾಗುವಂಥದು. ಅದೊಂದು ಪರಿವರ್ತನೆ ನಿಜ ವ್ಯಕ್ತಿತ್ವದ ಅರಿವಿನ ನೆಲೆ ಎಂದರೆ ಪರಿಚಯ ಎನ್ನಬಹುದು. ಅಮ್ಮನಿಗೆ ಸ್ಟಡಿ ಟೂರ್ ಎಂದು ರೇಶ್ಮಳನ್ನು ನೋಡ ಹೊರಡುವ ನಾಯಕ ದೀಕ್ಷಿತನ ರೂಮಿಗೆ ಹೋದರೆ ಅಲ್ಲಿ ಎದುರಾಗುವ ಪ್ರಕಲ್ಪನೆಗಳೇ ಇಲ್ಲಿ ಬೇರೆಯದೇ ತೆರನಾಗಿರುತ್ತವೆ. ದೀಕ್ಷಿತ ನಾನು ಚಹಾ ಕುಡಿಯುವುದಿಲ್ಲ, ನಿನಗಾಗಿ ತಂದಿರಿಸಿದ್ದೇನೆ ಎನ್ನುವುದು. ದೀಕ್ಷಿತ ಮನೆಯಲ್ಲಿ ತೂಗು ಹಾಕಿದ್ದ ಕ್ಯಾಲೆಂಡರ್‌ಗಳನ್ನು ತಿರುಗಿಸಿ ನೋಡಿದಾಗ ಅಲ್ಲಿ ಬರೆದಿದ್ದ. DO NOT SMOKE, SILENCE ಇತ್ಯಾದಿಗಳನ್ನು ನೋಡಿದಾಗ ಕೊಂಚ ತನ್ನ ನಡವಳಿಕೆಯಲ್ಲಿ ಓಘವನ್ನು ತಗ್ಗಿಸಿಕೊಳ್ಳ ಹೊರಟರೂ ಆ ಕ್ರಿಯೆ ಒಂದು ಚಿಕ್ಕ ವಿರಾಮವನ್ನು ತೆಗೆದುಕೊಂಡು ಮುಂದುವರೆಯುತ್ತದೆ. ಇರಾನಿ ಕೆಫೆಗೆ ಹೋಗುವುದು, ಅಲ್ಲಿದ್ದ ಜನರನ್ನು ನೋಡುವುದು ಹೀಗೆ ಎರಡು ದಿನಗಳನ್ನು ತಳ್ಳುತ್ತಾನೆ.
ದೀಕ್ಷಿತ ಮನೆಯ ಮಾಲೀಕ ರೆಡ್ಡಿ ಹೇಗೆ ಮನೆಯ ಒಂದು ಬದಿಯನ್ನು ಮಾರ್ಪಾಟು ಮಾಡುತ್ತಾನೆ. ಕ್ರಮೇಣ ಬಾಡಿಗೆ ಮೇಲಿನ ಆಸೆಯಿಂದ ಪದೇ ಪದೇ ತಕರಾರು ತೆಗೆಯುವ ಕಿರಿ ಕಿರಿ ಮಾಡುವ ಗುಣ ಇಂದಿಗೂ ಅದಷ್ಟೋ ಮನೆ ಮಾಲೀಕರಲ್ಲಿ ಇಲ್ಲದಿಲ್ಲ. ದೀಕ್ಷಿತನನ್ನು ಮನೆ ಬಿಡಿಸಲು ಕಡೆಗೆ ಪೋಲೀಸ್ ಠಾಣೆಯ ಮೆಟ್ಟಿಲನ್ನೂ ಏರುವ ರೆಡ್ಡಿ ಹೇಗೆ ಲಂಚ ಕೊಡುತ್ತಾನೆ. ತನ್ನಿಂದ ಸಹಾಯವಾಗದೇ ಇದ್ದರೂ ಲಂಚವನ್ನು ಪುರಸ್ಕರಿಸುವ ಪೋಲೀಸ್ ಅಧಿಕಾರಿ, ಆನಂತರದಲ್ಲಿ ತನ್ನ ಸಂಬಂಧಿ ಅಧಿಕಾರಿಯ ಸಹಾಯ ಕೇಳುವುದು, ಮತ್ತೆ ಕಾಲೇಜು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಚ್ಚುವುದು ಇಂದಿನ ಸಮಾಜವನ್ನು ಕನ್ನಡಿಸುತ್ತದೆ.

ವಿನಯಚಂದ್ರನ ಜೊತೆ ಸಿನೆಮಾಕ್ಕೆ ಹೋಗಬೇಕಾಗಿದ್ದ ಇಲ್ಲಿ ರೇಶ್ಮಳಿಗೆ ಇಬ್ಬಂದಿತನ ಕಾಡುತ್ತದೆ. ದನದಾಹಿ ಡೇವಿಡ್ ಬರೆದಿರುವ ಪತ್ರಗಳಲ್ಲಿ ಹಣದ ಮಹತ್ವವೇ ಅಡಗಿರುತ್ತದೆ. ಅಲ್ಲಿ ಅವಳು ವಸ್ತುಶಃ ಸುಖದ ಭಾವನೆ ಆವರಿಸಿದರೆ ವಿನಯಚಂದ್ರನ ಮಾತುಗಳಲ್ಲಿ ಆತ್ಮೀಯತೆಯ ಅನುಭೂತಿ ಪಡೆಯುತ್ತಾಳೆ. ಯಾರನ್ನು ಆರಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿ ಸಿಲುಕುತ್ತಾಳೆ. ಹೇಗೂ ತನ್ನ ಭೇಟಿಯ ಅವಕಾಶವನ್ನು ತನ್ನ ತಂಗಿಗೆ ಕೊಡುವುದು ಇಲ್ಲಿ ತರಂಗಾತರವೇ.

ವಿನಯಚಂದ್ರನ ತಾಯಿಗೆ ಜ್ಯೋತಿಷಿಯೊಬ್ಬರು ಹೇಳಿದಂತೆ ಈತ ಸನ್ಯಾಸಿಯಾಗುವುದಿಲ್ಲ. ಹೆಣ್ಣುಗಳ ಹಿಂದೆ ಬೀಳುತ್ತಾನೆ ಎಂಬುದು ಸಾಧಿತವಾಗುತ್ತದೆ. ಇಲ್ಲಿ ಹೆಣ್ಣುಗಳ ಹಿಂದೆ ಬೀಳುವುದು ಎನ್ನುವುದಕ್ಕಿಂತ ಆಯ್ಕೆಗಳನ್ನು ಉಪಯೋಗಿಸಿಕೊಳ್ಳುತ್ತಾನೆ ಎನ್ನಬಹುದು. ಕಾಯುವ ಸುಖದ ಬಗ್ಗೆ ತಿರುಮಲೇಶರ ಬರೆವಣಿಗೆ ಇಲ್ಲಿ ಚೇತೋಹಾರಿಯಾಗಿದೆ. (ಪುಟ ಸಂ. 76) ರೇಶ್ಮಾಳು ಬಾರದೆ ಸುನೈನಳನ್ನು ಕಳುಹಿಸಿದಾಗ ಕಾದಂಬರಿಯ ಪ್ರಾರಂಭದಲ್ಲಿ ಬಂದಿದ್ದ “A LOOF” ಎನ್ನುವ ಒಗಟಿನ ನಿಜ ಅರ್ಥ. “A FOOL” ಅನ್ನುವುದರ ತಿರುಗ ಮುರುಗವನ್ನು ಅವನ್ನು ಸ್ವೀಕರಿಸುವ ಪರಿ ತಿರುಮಲೇಶರಿಂದ ಅತ್ಯಂತ ಧ್ವನಿಪೂರ್ಣವಾಗಿ ಬಂದಿದೆ.

ದೀಕ್ಷಿತ ಕ್ರಾಂತಿಕಾರಿ ಬರಹಗಳಲ್ಲಿ ತೊಡಗುವುದು. ಆತ ಕ್ರಾಂತಿಕಾರಿ ಆದರೂ ಸರಳ ವ್ಯಕ್ತಿ ಎಂಬುದು ಕಾದಂಬರಿಯಲ್ಲಿ ಮೂಡಿಬಂದಿದೆ. ಆತ ಹೇಳುವ “ಹ್ಯೂಮನ್ ಟೂ ಹ್ಯೂಮನ್ ಅನ್ನುವ ಕಲ್ಪನೆ ಎಸ್ಕೇಪಿಸಮ್” ಎನ್ನುತ್ತಾನೆ. “ಲವ್ ದೈ ನೇಬರ್” ಎನ್ನುವ ಉದಾತ್ತ ಕಲ್ಪನೆ ಎನ್ನುವುದು ಅನನ್ಯವಾಗಿ ಮೂಡಿ ಬಂದಿದೆ. ಮನೆಯನ್ನು ಮೂರು ದಿಗಳವರೆಗೆ ಬಿಟ್ಟು ಬಂದ ಮೂರು ದಿನಗಳಲ್ಲಿ ಸುನೈನ ಅನ್ನುವ ವಿಚಾರದಲ್ಲಿ, ಕ್ರಾಂತಿಕಾರಿ ಅನ್ನುವ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಾನೆ. ದೀಕ್ಷಿತನ ಪ್ರಭಾವಕ್ಕೆ ಒಳಗಾಗಿ ಅವನು ಚಿಂತಿಸುವ ಪರಿ. ರೇಶ್ಮಾಳ ಕನವರಿಕೆಯಲ್ಲಿಯೇ ಇದ್ದಾಗ ಪೋಲಿಸರ ಪ್ರವೇಶವಾಗುತ್ತದೆ ಮಾತನಾಡಲೂ ಅವಕಾಶ ಕೊಡದಂತೆ ಅವನನ್ನು ಎಳೆದೊಯ್ಯುತ್ತಾರೆ.

ತಾನೋದಿದ ಹೆರಾಕ್ಲಿಟಸ್, ಮಾವೋತ್ಸೆ ಅವರ ಮಾತುಗಳು ಒಂದರೊಳಗೊಂದು ಇಲ್ಲಿ ಅಪೂರ್ಣವಾಗಿವೆ ಅನ್ನಿಸಿತು. ಇಲ್ಲಿ “ಯಾರು ಕಾರಣರಲ್ಲ ಎಲ್ಲರೂ ಕಾರಣರು” ಅನ್ನುವ ಚಿಂತನೆ ಧ್ವನಿ ಪೂರ್ಣವಾಗಿದೆ. “ಶುಕ್ರನ್” ಎಂದು ಅರಬಿ ಭಾಷೆಯಲ್ಲಿ ಹೇಳಿ ಶಾಲಾ ಕಾಲೇಜುಗಳಲ್ಲಿ ಓಟದ ಸ್ಪರ್ಧೆಗೆ ಓಡಿದಂತೆ ಒನ್, ಟೂ, ತ್ರಿ ಹೇಳುತ್ತಿದ್ದಂತೆ ಓಡಲು ಪ್ರಾರಂಭಿಸಬೇಕೆಂದು ಹೇಳಿ ಗುಂಡಿಕ್ಕುವ ಪರಿ ಖೇದ ತರಿಸುತ್ತದೆ. ದೀಕ್ಷಿತ ಮತ್ತು ವಿನಿಯರ ಕಾರ್ಯಚಟುವಟಿಕೆಗಳನ್ನು ಅವಲೋಕಿಸಿದರೆ ದೀಕ್ಷಿತನಿಗೆ ಆಗಬೇಕಾದ್ದು ಅವನದ್ದೇ ರೂಮಿನಲ್ಲಿ ತಂಗಿದ್ದ ವಿನಯುಚಂದ್ರನಿಗಾಗುತ್ತದೆ. ಅವಸ್ಥೆಗಳು ಪ್ರತಿಫಲಗಳು ಒಬ್ಬರಿಂದೊಬ್ಬರಿಗೆ ವರ್ಗವಾಗುವುದೆನ್ನುವ ಆಗಮಿಸುವ ನಿರ್ಗಮಿಸುವ ಕ್ರಿಯೆ ಎಂಬ ಪಥಗಳು ರೂಪಾಂತರಗಳಾಗುತ್ತವೆ. ಕಾದಂಬರಿಯ ಸನ್ನಿವೇಶಗಳಲ್ಲಿ ಪದೇ ಪದೇ ಸಿಗರೇಟನ್ನು ಹೊತ್ತಿಸಿಕೊಳ್ಳುವ ನಾಯಕ ವಿನಯಚಂದ್ರ ಏನೋ ಮಾಡಲು ಹೋಗಿ ತನ್ನ ಬದುಕನ್ನೇ ಹಚ್ಚಿಕೊಂಡನೇನೋ ಅನಿಸುತ್ತದೆ. ವಿನಿ ಎಂದು ಕರೆಸಿಕೊಂಡ ವಿನಯಚಂದ್ರ ಇಲ್ಲಿ ವಿನ್ ಆಗಬೇಕಿತ್ತು. FOOL ಆಗಿ LOOSER ಆಗಿ ಬದುಕಿನ ಆಟವನ್ನೆ ಕಳೆದುಕೊಂಡನೆ ಅನ್ನಿಸುತ್ತದೆ.

“ಒಳ್ಳೆ ಕೋಳಿ ಸಾಕಾಣಿಕ ಕೇಂದ್ರಗಳು”, “ಪಹಲೇ ಆಪ್ ಪಹಲೇ ಆಪ್” ಎನ್ನುವ ಹೇಳಿಕೆ ಕೇಳಿಕೆಗಳು “ಸ್ಟಾಪ್ ಇಟ್” ಎನ್ನುವ ಮಾತುಗಳು “ಟಚಿಂಗ್ ಎಂಡ್ ನಾಟ್ ಟಚಿಂಗ್” ಮುಟ್ಟಿದ ಹಾಗೆ ಮುಟ್ಟದ ಹಾಗೆ “ಹ್ಯಾವ್‌ಸಂಥಿಂಗ್” , “ಇಗ್ಸ್ಯಾಟ್ಲಿ”, “ಕನ್ಫೆಶನ್ ಮೂಡ್” , “ಸಂಶಯಾತ್ಮ ವಿನಶ್ಯತಿ”, “ಕಾನಸ್ಪೆರೆಸಿ ಆರಾಮ್ ಹರಾಮ್ ಹೈ ರ್ಯಾಡಿಕಾಲಿಸ್ಟ್”, “ಪಿಲಾತ”, ಮಾತುಗಳು ಕೆಪಾಸಿಟಿ, ಅಡ್ರಯಾಕ್ಟಿವ್, ಡೆಲಿಕ್ವೆಂಟ್, ಇಂಫೋಸ್ ಜುಲ್ಮಾನೆ ಬವೆಲಸ್, ಎಂಬ ಅನ್ಯದೇಶಿ ಪದಗಳು ತರಂಗಾಂತರ ಕಾದಂಬರಿಯ ಓದಿನ ಹರವನ್ನು ಇನ್ನಷ್ಟು ವಿಸ್ತರಿಸಿವೆ ಎನ್ನಬಹುದು. ಈ ಪದಗಳೇ ಕಾದಂಬರಿಯ ಸಾಗುವಿಕೆಗೆ ಸಹಕರಿಸಿವೆ, ವಿಭಿನ್ನತೆ ತಂದುಕೊಟ್ಟಿವೆ ಎನ್ನಬಹುದು.

ಪುಟ ಸಂ 96ರಲ್ಲಿ ನಾನು “ಲಾಜಿಕಲ್ ಗಾರ್ಡನ್‌ಗೆ ಹೋಗಬೇಕು ಎನ್ನುವ ಮಾತು ಬರುತ್ತದೆ. ಅದನ್ನೆ ವಿನಯಚಂದ್ರ ಜೂಲಾಜಿಕಲ್ ಗಾರ್ಡನ್ ಎಂದು ಸರಿ ಮಾಡುತ್ತಾನೆ. ಇದು ಆ ಸಂದರ್ಭದ ಪ್ರಶ್ನೆ ಸರಿ! ಆದರೆ ಕಾದಂಬರಿಯ ಅಂತ್ಯಕ್ಕೆ ಇಲ್ಲಿ ಲಾಜಿಕಲ್ ಎಂಡ್ ಅನ್ನುವುದು ವಿನಯಚಂದ್ರನಿಗೆ ಆಗಲಿಲ್ಲವಲ್ಲ ಎಂಬುದೇ ವಿಷಾದ.

ದಿನಗಳು ಉರುಳಿದಂತೆ ಆತನ ಬದುಕಿನಲ್ಲಿ ನಾನಾ ರೀತಿಯ ಬದಲಾವಣೆಗಳುಂಟಾಗುತ್ತವೆ. ದೇವರಲ್ಲಿ ನಂಬಿಕೆ ಇರುವುದಿಲ್ಲ. ಶಕುನ ಅಪಶಕುನಗಳಲ್ಲಿ ನಂಬಿಕೆ ಇಲ್ಲದಿರುವುದು. ವಿನಾ ಕಾರಣ ಚರ್ಚೆಯಲ್ಲಿ ಮುಳುಗುವುದು. ಹೀಗೆ ಆತನ ಸಿಡುಕು ಎಲ್ಲವನ್ನು ಚರ್ಚಿಸಬಹುದಾದ ವ್ಯಕ್ತಿ ರೇಶ್ಮಳನ್ನು ಕಂಡಾಗ ಗೌಣವಾಗುತ್ತಿತ್ತು.

ತಿರುಮಲೇಶರ ‘ಆರೋಪ’ ಕಾದಂಬರಿ ಗಂಡು ಮತ್ತು ಹೆಣ್ಣಿನ ಸಂಬಂಧದ ನೆಲೆಗಳನ್ನು ಚರ್ಚಿಸುವ ಕಾದಂಬರಿಯಾಗಿದೆ. ಗಂಡು ಹೆಣ್ಣಿನ ಸಂಬಂಧದಲ್ಲಿ ಅಧಿಕಾರ ಮತ್ತು ಆಕರ್ಷಣೆ ಎಂಬ ಬಹು ಮುಖ್ಯ ಪ್ರಶ್ನೆಗಳು ಇವರನ್ನು ಬಹುವಾಗಿ ಕಾಡುತ್ತದೆ. ಅರವಿಂದ ಮರೀನಾ ಎಂಬ ಕಲಿತ ಹೆಣ್ಣಿನ ವೈಚಾರಿಕತೆ ಹಾಗು ಹೋರಾಟದ ಕುರಿತು ಆಕರ್ಷಣೆ ಇದ್ದರೆ ಬಡ ಕುಟುಂಬದ ಬೀಡಿ ಕಟ್ಟುವವ ಹೆಣ್ಣು ಲಕ್ಷ್ಮಿಯ ಬದುಕಿನ ಹೋರಾಟ ಮುಖ್ಯವಾಗಿ ಬರುತ್ತದೆ.

ಇವರೀರ್ವರ ನಡುವೆ ಸಂಶೋಧನೆಂದು ಹೋದಾಗ ಸಿಗುವ ಹೆಣ್ಣುಗಳು. ಅವರಿಂದ ಸಹಾಯ ಪಡೆದುಕೊಳ್ಳುವ ಸಹಾಯ ಮಾಡುವ ಅರವಿಂದನ ಪಾತ್ರ ಮಧ್ಯಮವರ್ಗದ ಒಬ್ಬ ಸುಶಿಕ್ಷಿತ ಜೀವನದಲ್ಲಿ ಬಯಸುವ ಸಹಜ ಬಯಕೆಗಳನ್ನು , ತಣಿಸಿಕೊಳ್ಳುವ ವ್ಯಕ್ತಿಯನ್ನು ಸಂಧಿಸುತ್ತದೆ.

ವ್ಯಕ್ತಿ ಮತ್ತು ಪ್ರಭುತ್ವ ಎಂದಾಗ ಆರೋಪ ಕಾದಂಬರಿಯಲ್ಲಿ ಮರೀನಾ ಹೋರಾಟಗಾರಳಾಗಿ ನಿಲ್ಲುವುದು ಅರವಿಂದ ವಿಚಾರಣೆಯನ್ನು ಎದುರಿಸುವುದು ಇಂದಿನ ಪರಿಪ್ರೇಕ್ಷಗಳನ್ನೇ ಸಂಗತಿಸುತ್ತದೆ. ಬಯಸಿದವಳು ಬರದೇ ಇದ್ದಾಗ ಬಯಸದೇ ಬಂದವಳನ್ನು ಒಪ್ಪಿಕೊಳ್ಳುವ ನಾಯಕ ತರಂಗಾಂತರಲ್ಲಿ ಬರುತ್ತಾನೆ ದುರಂತ ಅಂತ್ಯ ಕಾಣುತ್ತಾನೆ. ಮುಸುಗು ಕಾದಂಬರಿಯಲ್ಲೂ ನಾಯಕ ಸಕಲೇಶನನ್ನು ಮೃಣಾಲಿ ಮತ್ತು ಮರ್ಲಿನ್ ಪಾತ್ರಗಳು ನಿಯಂತ್ರಿಸುತ್ತವೆ, ಚಲನಶೀಲನನನ್ನಾಗಿ ಮಾಡುತ್ತವೆ.

ಮುಸುಗು

‘ಮುಸುಗು’ ಇಲ್ಲಿ ಪ್ರತಿಮೆಯಾಗಿಯೂ ಆಚರಣೆಯ ವಿಧವಾಗಿಯೂ ಕಂಡು ಬಂದಿದೆ.ಇಪ್ಪತ್ತನೆಯ ಶತಮಾನದ ಕಡೆಯಲ್ಲಿ ಬಂದ ಈ ಕಾದಂಬರಿ ಇಪ್ಪತ್ತೊಂದನೆಯ ಶತಮಾನದಲ್ಲಿನ ಯುವಜನತೆಯ ಓದಿನ ತವಕ, ಮೋಜು, ಇಂಗ್ಲಿಷ್ ಕಲಿಕೆ, ಆಟಿಸಮ್, ನ್ಯೂರಾಟಿಕ್ಸ್, ನ್ಯೂಮೋನಿಯಾ, ಬಿ.ಪಿ. ತೊನ್ನಿನಂಥ ಚರ್ಮ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗುವುದು, ಸೆಲ್ಫ್ ಇಮೇಜ್, ಆಟೊ ಸಜೆಶನ್, ಸ್ವಾಮಿಸಮ್, ನಿರಾಶ್ರಿತರ ತಾಣವಾಗಿರುವ ರೈಲ್ವೆ ನಿಲ್ದಾಣ, ಅಸಹಿಷ್ಣುತೆ ಮೊದಲಾದ ಪರಿಪ್ರೇಕ್ಷಗಳನ್ನು ಸಂಕೇತಿಸುತ್ತದೆ. ಪುಟ. ಸಂ. 30ರಲ್ಲಿ ಹೇಳಿರುವಂತೆ ಇಪ್ಪತ್ತು ಇಪ್ಪತ್ತರ ಒಳಗಿನ ಹುಡುಗ-ಹುಡುಗಿಯರ ಕನಸು ಹತಾಶೆಗಳು, ದುಃಖಗಳು ವೇಳಾಪಟ್ಟಿಯಂತೆ ಸಾಗಬೇಕಾದ ಕೆಲಸಗಳು ವರ್ತಮಾನದ ತುರ್ತುಗಳು, ಭವಿಷ್ಯದ ಸಮಸ್ಯೆಗಳು ಈ ಎಲ್ಲವನ್ನು ಒಂದೇ ಕೃತಿಯಲ್ಲಿ ಹೇಳಿರುವುದು ತಿರುಮಲೇಶರ ಬರವಣಿಗೆಯ ಶೈಲಿಯ ಹೆಗ್ಗಳಿಕೆ ಎನ್ನಬಹುದು. ಎಲ್ಲಿಯೂ ಗೋಜಲಾಗದಂತೆ ವಿಷಯಗಳನ್ನು, ಸನ್ನಿವೇಶಗಳನ್ನು, ಪಾತ್ರಗಳನ್ನು ಪದರುಪದರಾಗಿ ಮಿಳಿತಗೊಳಿಸುವ ರೀತಿ ಸೃಜನಶೀಲ ಬರಹಗಾರರ ಆದ್ಯತೆಯಾಗಬೇಕೆನ್ನುವುದನ್ನು ಹೇಳುತ್ತದೆ. ಆ ಕಾರಣಕ್ಕೆ ಇವರ ಕಾದಂಬರಿಗಳು ನಿರರ್ಗಳವಾಗಿ ಓದುಗರ ಓದಿಗೆ ಸಿಗುತ್ತವೆ.

ಕಾದಂಬರಿಯ ಶೀರ್ಷಿಕೆ ‘ಮುಸುಗು’ ಕೊರೋನೋತ್ತರ ಕಾಲದ ಅವಶ್ಯಕತೆ ಮಾಸ್ಕನ್ನೂ ಸಂಕೇತಿಸುತ್ತದೆ. “ಮುಸುಗು ಎಂದರೆ ತೆಲುಗು ಭಾಷೆಯೊಳಗೆ ‘ಕವರ್’ ಎಂದರ್ಥ. ಮುಸುಗು ಎಂದರೆ ಮಾಸ್ಕ್ ಕೂಡಾ ಹೌದು” ಎಂಬ ವಿವರಣೆ ಇದೆ. ದೀಪಾವಳಿ ರಜೆಗೆ ಊರಿಗೆ ಹೋಗಬೇಕಾದ ವಿದ್ಯಾರ್ಥಿಗಳ ತಂಡ “ಅಮರ್ ಫಾರ್ಮಿಂಗ್” ಎಂಬ ತೋಟದ ಮನೆಗೆ ಪಿಕ್ನಿಕ್‌ಗೆ ಬರುವುದು. ಕಾದಂಬರಿಯ ಐದನೆಯ ಅಧ್ಯಾಯದಲ್ಲಿ ಬರುವ “ಮುಸುಗಮ್ಮ” ದೇವತೆ ಇಲ್ಲಿ ಕೇಂದ್ರಬಿಂದು. ವರ್ಷಪೂರ್ತಿ ಮುಸುಗನ್ನು ಹಾಕಿಕೊಂಡು ದೀಪಾವಳಿ ಸಂದರ್ಭದಲ್ಲಿ ವರ್ಷಕ್ಕೊಂದು ಬಾರಿ ಸಾರ್ವಜನಿಕರಿಗೆ ದರ್ಶನ ಕೊಡುವ ಜಾತ್ರೆಯನ್ನು ಹೇಳುತ್ತದೆ. ಕುಟುಂಬರಾವ್ ಅನ್ನುವ ಪಾತ್ರದ ಮೂಲಕ ಜಾನಪದ ವಿದ್ಯಾರ್ಥಿ ಜೇಕಬ್‌ಗೆ ಮಾಹಿತಿ ಕೊಡಿಸುವ ಮೂಲಕ ಇಲ್ಲಿ ಕಾದಂಬರಿಕಾರರು ಓದುಗರಿಗೂ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

“ಯೋನಿ ಪೂಜೆ” ಅಸ್ಸಾಂನಲ್ಲಿ ಕಂಡು ಬರುವ ಪೂಜೆ ಎಂದಷ್ಟೆ ತಿಳಿದಿರುವವರಿಗೆ ಆಂಧ್ರದಲ್ಲೂ ಇಂಥ ಆಚರಣೆ ಇದೆ ಎನ್ನುವುದು ಇಲ್ಲಿ ತಿಳಿಯುತ್ತದೆ. ಅದಕ್ಕೆ ಸಂಬಂಧಿಸಿದ ಜಾನಪದ ಕತೆಯನ್ನೂ (ಪುಟ.ಸಂ.175-176) ಉಲ್ಲೇಖಿಸಲಾಗಿದೆ. “ಫರ್ಟಿಲಿಟಿ ಮಿಥ್” ಎಂಬ ಪದ ಇಲ್ಲಿ ಬಳಕೆಯಾಗಿದೆ. ಜಾನಪದ ಸಂಶೋಧನೆಯಲ್ಲಿ ಆಸಕ್ತಿಯಿರುವ ಜೇಕಬ್ ಇಲ್ಲಿ ಮುಸುಗಮ್ಮ ಜಾತ್ರೆಗೆ ಹೋಗುವುದಕ್ಕೆ ಕಾರಣನಾಗುತ್ತಾನೆ. ಸಿಕ್ಕ ಅವಕಾಶಗಳನ್ನು ಸಂಶೋಧನಾರ್ಥಿಗಳು ಕಳೆದುಕೊಳ್ಳಬಾರದು. ಅಲ್ಲಿ ಪೂಜೆ ಮಾಡುವ ಅರ್ಚಕರಿಗಾದರೂ ಕೈ ಬೆಚ್ಚಗೆ ಮಾಡಿ ಮಾಹಿತಿ ಕಲೆ ಹಾಕಬೇಕೆಂಬ ಮನಸ್ಥಿತಿ ಇರುತ್ತದೆ. ಪುಟ.ಸಂ 174 ರಲ್ಲಿ ಸುಮನ್‌ಗೆ “ನೀ ಸುಮ್ಕೆ ಕೂಡಯ್ಯಾ. ನಿನಗಿದರ ಇಂಪಾರ್ಟೆನ್ಸ್ ಗೊತ್ತಿಲ್ಲ!” ಎನ್ನುತ್ತಾನೆ. ಆದರೆ ಎಲ್ಲರೊಳಗೊಂದಾಗಿ ಅಮಲು ಪದಾರ್ಥ ಸೇವಿಸಿ ತನ್ನ ಜೊತೆಗಾರರಿಗೆ ಸಂಚಕಾರ ತರುವುದು ಕೊಂಚ ಬೇಸರಕ್ಕೆ ಕಾರಣವಾದರೂ ತಿರುಮಲೇಶರ ನಿರೂಪಣೆ ಇಲ್ಲಿ ಸಹಜವಾಗಿ ಬಂದಿದೆ.

ಜಾತ್ರೆಗೆ ಎಲ್ಲರೂ ಒಮ್ಮತದಿಂದ ಹೋಗುವುದು. ಕಾವಲುಗಾರರಿಂದ ಮೊದಲ್ಗೊಂಡು, ಪ್ರತಿ ಭಕ್ತನೂ ಕಡ್ಡಾಯವಾಗಿ ಧರಿಸಲೇಬೇಕಾದ ಮುಖವಾಡ ಇಲ್ಲಿ ಬಹಳ ಧ್ವನಿಸುವ ಕಡೆಗೆ ಎಲ್ಲರನ್ನು ಸ್ತಬ್ಧಗೊಳಿಸುವ ಶಬ್ದ ಎನ್ನಬಹುದು. ಹಾಗಿದ್ದರೆ ಮುಖವಾಡ ನಾವು ಧರಿಸಿಯೇ ಇಲ್ಲವೆ. ಅಗೋಚರ ಮುಖವಾಡಗಳನ್ನು ಈಗಾಗಲೇ ಧರಿಸಿದ್ದೇವೆ, ತರಹೇವಾರಿ ಮುಖವಾಡಗಳನ್ನು ಮತ್ತೆ ಹಾಕಬೇಕೆ? ಅದು ಬದಲಾವಣೆಗೆ ನೆನಪಿಗೆ ಸಂಕೇತ ಎನ್ನಿಸಿದರೂ ಮನುಕುಲದ ಬೆನ್ನಿಗಂಟಿದ ಯಾರೂ ತೆಗೆಯಲಾಗದ ಕವಚಗಳು ಎಂದಿಲ್ಲಿ ಕರೆಯಬಹುದು. ನೆರಳಂತೆ ನಮ್ಮನ್ನು ಆವೃತವಾಗಿರುವ ಕವಚ ಅರ್ತಾಥ್ ಮುಖವಾಡಗಳ ಬಗ್ಗೆ ಕಾದಂಬರಿಕಾರರು ತಮ್ಮ ವಿಶಾಲ ಚಿಂತನೆಯನ್ನು ಪುಟ. ಸಂ. 184-185 ರಲ್ಲಿ ಬಹಳ ದೀರ್ಘವಾಗಿ ಮಾಡಿದ್ದಾರೆ. ಚಿತ್ರಕಲೆಯಲ್ಲಿ ಬರುವ “ನ್ಯೂಡ್ ಕಲ್ಪನೆ” ಅಂದರೆ ಬೆತ್ತಲೆಯಾಗಿದ್ದರೂ “ನ್ಯೂಡ್” ಎಂದರೆ ನಗ್ನತೆಯೇ ಅಲ್ಲ. ಅದೊಂದು ಸೌಂದರ್ಯದ ಕಲ್ಪನೆ ಎಂಬ ಮಾತು ಬರುತ್ತದೆ. “ವೈ ನಾಟ್ ವರ್ಶಿಪ್ ಇನ್ ದ ನ್ಯೂಡ್” ಎಂಬ ಮಾತು ಸಮಾಜದ ಶಿಷ್ಟ ಕಲ್ಪನೆಗಳಿಗೆ ಸವಾಲಿನ ಹಾಗೆ, ಶಿಲ್ಪಿಯೊಬ್ಬನ ಮಾನಸಿಕ ಶಿಶುವಾಗಿ ಮೂಡಿಬಂದಿರಬಹುದು ಎಂಬ ವಿಭಿನ್ನ ಆಯಾಮಗಳಲ್ಲಿ ಸಾಂಸ್ಕೃತಿಕ ಆಚರಣೆಗಳನ್ನು ಚರ್ಚಿಸಲಾಗಿದೆ. ಇಲ್ಲಿ ವ್ಯಕ್ತಿಗತ ಅನಿಸಿಕೆ ಮತ್ತು ಬಲ ಹಾಗು ಎಡಪಂಥೀಯ ವಾದಗಳಿಗೆ ಕಾರಣವಾಗಿರುವುದನ್ನು ನೋಡಬಹುದು. ರಾಜಕೀಯ ವ್ಯಂಗ್ಯಕ್ಕೂ ಇಲ್ಲಿ ಗಾಂಧಿ ಹಾಗು ನೆಹರೂರವರ ಕುರಿತ ಪ್ರಹಸನವೊಂದನ್ನು ಕಾದಂಬರಿಕಾರರು ಪ್ರಸ್ತಾಪಿಸಿದ್ದಾರೆ.

ಜಾತ್ರೆ ಇಲ್ಲಿ ಮುಖವಾಡ ತಯಾರಿಕೆಯ ಉದ್ಯಮವಾಗಿ ಮುಸುಗಮ್ಮಳ ಕುರಿತ ಕ್ಯಾಸೆಟ್ ತಯಾರಿಕೆಯ ಉದ್ಯಮವಾಗಿಯೂ ಇಲ್ಲಿ ಬಂದಿದೆ. ಮುಖವಾಡ ಹಾಕಿಕೊಂಡು ಮಂಗಚೇಷ್ಟೆ ಮಾಡುವ, ಸ್ತ್ರೀಯರನ್ನು ಕೆಣಕುವ, ಅಸಹಾಯಕರನ್ನು ಲಾಭಕ್ಕೆ ಬಳಸಿಕೊಳ್ಳುವುದರಲ್ಲಿ ಹಳ್ಳಿಗರು ಪಟ್ಟಣಿಗರು ಎನ್ನುವ ಬೇಧವಿಲ್ಲ ಎಂಬ ಮಾತು ಸತ್ಯ ಎಂಬಂತೆ ಇಲ್ಲಿ ಹೊಟೇಲ್‌ನ ಮಾಣಿ, ಮಾಲೀಕ ಮತ್ತು ಮುಖವಾಡ ಧರಿಸಿ ಜೆಕಬ್‌ನನ್ನು ಎಳೆದುಕೊಂಡು ಬಂದ ವ್ಯಕ್ತಿಗಳ ಮೂಲಕ ಸಾದಿತವಾಗಿದೆ. ಮುಖವಾಡ ಧರಿಸಿ ಕ್ಲೌನೇಶ, ಬಫೂನೇಶ ಆಗುವ ಸಕಲೇಶ ಇಲ್ಲಿ ಪಾಪಪ್ರಜ್ಞೆಯಿಂದ ನರಳುವುದು, “ನನಗೆ ಜೋಕ್ಸ್ ಬರಲ್ಲಪ್ಪ. ಐ ಸೀಕ್ ಎಗ್ಸೆಂಪ್ಶನ್ ಅಂಡ್ ಮರ್ಸಿ!” ಎನ್ನುವುದರಲ್ಲಿ ಓದಿನ ಹೊರತಾಗಿ ಇನ್ನೇನನ್ನೂ ಯೋಚಿಸದ, ಅವನ ಅಹಿಂಸಾ ಮನೋವ್ಯಾಪಾರವನ್ನು ತಿಳಿಸುತ್ತದೆ.

ಇಲ್ಲಿ ಕಾದಂಬರಿಕಾರರು ಸಕಲೇಶನನ್ನು “ಸಕರ್”, “ಸಕಲ್”, “ಸೇಂಟ್”, ಜೇಕಬ್ ನನ್ನು “ಕಬ್” ಎಂದೂ ಕೃಷ್ಣ ಕಾಂತನನ್ನು “ಗವರ್ನರ್” ಎಂಬ ಹೆಸರಿನಿಂದ ಕರೆಯುವುದು ಲಘುಹಾಸ್ಯದಿಂದ ಕೂಡಿದ್ದರೂ ಅವ್ಯಕ್ತ ವ್ಯಕ್ತಿತ್ವದ ಬೇರೆ ಬೇರೆ ಆಯಾಮಗಳನ್ನು ದರ್ಶಿಸುತ್ತದೆ ಎಂದನ್ನಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಬದುಕಿನಲ್ಲಿ ಇನ್ಯಾವತ್ತೂ ಮರೆಯಲಾಗದ ಸಂತಸದ ಹಾಗು ಅನಪೇಕ್ಷಿತ ಘಟನೆಗೆ ಸಾಕ್ಷಿಯಾಗುವುದು ಅವರಲ್ಲಿ ಬಿಟ್ಟರೆ ಇನ್ಯಾರಲ್ಲೂ ಚರ್ಚಿಚಿಸಲಾಗದ ಮುಸುಗನ್ನು ಹಾಕಿಕೊಳ್ಳುವಂತಿದೆ. ಇಂಥ ಅದೆಷ್ಟೋ ಘಟನೆಗಳು ವಿದ್ಯಾರ್ಥಿ ಬದುಕಲ್ಲಿ, ವೃತ್ತಿಬದುಕಲ್ಲಿ ಆಗಿರಬಹುದು ಎಂಬುದನ್ನು ಹೇಳುತ್ತದೆ. ಹಿರಿಯರಿಗೆ ಹೇಳದೆ ಪ್ರಯಾಣ ಮಾಡಿ ಅನಾಹುತ ಮಾಡಿಕೊಳ್ಳುವ ಯುವಕರಿಗೆ ಇದೊಂದು ಪಾಠವಾಗಿದೆ.

ಆರೋಪದ ಅರವಿಂದ, ಮುಸುಗುವಿನ ಸಕಲೇಶ ಓದನ್ನು ಸ್ವೀಕರಿಸಿದ ಬಗೆ ಪರಸ್ಪರ ಪೂರಕ ಅನ್ನಿಸಿದರೂ ಸಕಲೇಶ ಓದನ್ನು ಓದಿಗಾಗಿ ದುಡಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಾನೆ. “ರಾಜ್ಯಶಾಸ್ತ್ರವನ್ನಾಗಲಿ, ಇಂಗ್ಲಿಷ್ ಸಾಹಿತ್ಯವನ್ನಾಗಲಿ ಈ ಆಯುಧದಾರಿಗಳ ಮುಂದೆ ಏನೂ ಮಾಡುವಂತಿರಲಿಲ್ಲ” ಎಂಬ ಮಾತು ಶೈಕ್ಷಣಿಕ ತಿಳಿವಳಿಕೆಯ ಹೊರತಾಗಿಯೂ ಜೀವನ ಕೌಶಲ್ಯ ಮತ್ತು ವೃತ್ತಿ ಕೌಶಲ್ಯ ಬೇಕು ಅನ್ನುವುದನ್ನು ಸೂಚಿಸುತ್ತದೆ. ಇಲ್ಲಿ ಬರುವ ‘ವಿಕ್ಟಿಮ್‌ಬ್ಯಾಶಿಂಗ್’ ಅನ್ನುವ ಪದ ನಿಜವಾಗಿಯೂ ಪದಶಃ ಉಳಿದಿದೆ. ಅಂದರೆ ಈಗಾಗಲೇ ಬಲಿಪಶುವಾದ ವ್ಯಕ್ತಿಯನ್ನು ಅದಕ್ಕೆ ಕಾರಣವೆಂದು ದೂರಿ ಮತ್ತೆ ಮತ್ತೆ ಹೇಳಿ ಅವನ ಮನೋಬಲವನ್ನೇ ಕುಗ್ಗಿಸಿಬಿಡುವ ಅದೆಷ್ಟೋ ಜೀವಂತ ಉದಾಹರಣೆಗಳಿವೆ.

ಇನ್ನು ಕಾದಂಬರಿಯ ಅನಾವರಣಕ್ಕೆ ಬಂದರೆ ಬುದ್ಧಿವಂತ, ಸ್ವಾಭಿಮಾನಿ ಮಹಾತ್ವಾಕಾಂಕ್ಷಿಯಾದ ಸಕಲೇಶ ಅಪ್ಪ ಅಮ್ಮ ಮತ್ತು ಒಡಹುಟ್ಟಿದವರೊಡನೆ ದೀಪಾವಳಿ ಹಬ್ಬ ಆಚರಿಸಿಕೊಳ್ಳಬೇಕಾಗಿತ್ತು. ಸ್ನೇಹಿತ ಜೊತೆಗೇ ಇರುತ್ತೇನೆ ಎಂದವನು ಇನ್ನೆಲ್ಲೋ ಪಿಕ್ ನಿಕ್ ಎಂದು ಹೋಗಿ ಯಾರಲ್ಲಿಯೂ ಹೇಳಿಕೊಳ್ಳಲಾಗದ ಘಟನೆ ಎನ್ನುವ “ಮಾಸ್ಕನ್ನು “ನಿರಂತರ ಧರಿಸಬೇಕಾಗುತ್ತದೆ. ಇಲ್ಲಿ ಸಕಲೇಶನ ಓದು ವೃತ್ತಿಗಾಗಿ ಅಲ್ಲ, ತಿಳಿವಳಿಕೆಗಾಗಿ. ಓದಿದ್ದೆಲ್ಲವೂ ದುಡಿಮೆಗೆ ಬರಬೇಕು. ಅನ್ನುವುದು ತಪ್ಪು ಎಂಬುದನ್ನು ಕಾದಂಬರಿಕಾರರು ಇಲ್ಲಿ ಹೇಳಿರುವುದು ಸಮಂಜಸವಾಗಿದೆ. “ಅಕ್ಷರ ತಿಳಿವಳಿಕೆ ಎಂಬ ಅಕ್ಷಯವಾಗಬೇಕು” ಎಂಬುದನ್ನು ಒಪ್ಪಿಕೊಂಡು “ಅಕ್ಷರವೆಲ್ಲಾ ಅನ್ನವಾಗಬೇಕು” ಎಂಬ ಹುಂಬತನವನ್ನು ನಾನೂ ನಿರಾಕರಿಸುತ್ತೇನೆ.

ಇಂದಿನ ದಿನಮಾನಗಳಲ್ಲಿ ದೈಹಿಕ ಕಾಯಿಲೆಗಳಿಗಿಂತ ಮಾನಸಿಕ ಏರುಪೇರುಗಳೆ ಹೆಚ್ಚಾಗಿರುವುದು. ಭಯ, ಖಿನ್ನತೆ, ಮಾನಸಿಕ ಅಸ್ವಸ್ಥತೆ ಮೊದಲಾಗಿ. ಕಾದಂಬರಿಯಲ್ಲಿ ಮುಖ್ಯವಾಗಿ ನಾಲ್ಕು ಸನ್ನಿವೇಶಗಳಲ್ಲಿ ಕಾದಂಬರಿಕಾರರು ಈ ಕುರಿತು ಮಾತನಾಡುತ್ತಾರೆ.

ಮೊದಲನೆಯದಾಗಿ ಸಕಲೇಶನ ತಾಯಿ ಮಕ್ಕಳ ಯೋಗಕ್ಷೇಮದ ಕುರಿತಾಗಿ ಭಯಪಡುವಲ್ಲಿ. ಡಾಕ್ಟರ್ ಅದಕ್ಕೆ ವಿಟಮಿನ್ ಗುಳಿಗೆ ಕೊಡುತ್ತಾರೆ. ಆದರೆ ಆಕೆ ಪಕ್ಕದ ಮನೆಯವರು ಹೇಳಿಕೊಟ್ಟ ಆದಿತ್ಯ ಹೃದಯವನ್ನು ಪಠಣೆ ಮಾಡುತ್ತಾರೆ. ಆದಿತ್ಯ ಹೃದಯ ಪಠಣೆ ಇಲ್ಲಿ ಭಯ ನಿವಾರಕ ಅಲ್ಲ, ಆದರೆ ಆಕೆಗೊಂದು ಮನೋಬಲ ಬೇಕಿತ್ತು. ಅದು ಆದಿತ್ಯಹೃದಯದ ಪಠಣೆಯ ಮೂಲಕ ಆಕೆಗೆ ಸಿಕ್ಕಿತ್ತು ಅಷ್ಟೆ. ಅದು ಆಕೆ ಕಂಡುಕೊಂಡ ಪರಿಹಾರ.

ಎರಡನೆಯದಾಗಿ ಸಕಲೇಶನ ಸಹವಾಸಿ ಕೃಷ್ಣಕಾಂತ್ ತಾಯಿಯ ವಿಚಾರ. ಸುಮನ್ ರೆಡ್ಡಿಯ ತಾಯಿ ಉಪಚರಿಸುವಾಗ ತನ್ನ ತಾಯಿ ಹೀಗಿರಲು ಸಾಧ್ಯವಿಲ್ಲ ಆಕೆ ನ್ಯೂರೋಟಿಕ್ ನಾನು ಯಾರನ್ನೂ, ಮನೆಗೆ ಕರೆದೊಯ್ಯುವಂತಿಲ್ಲ ಎಂಬ ಕೊರಗು ಇಲ್ಲಿ. ಮಾನಸಿಕ ಅಸ್ವಸ್ಥತೆ ಅದಕ್ಕೆ ಕಾರಣ ಹೇಳುತ್ತದೆ. ತಾಯಿ ದೀಪಾವಳಿ ದಿನ ಮಾತನಾಡಿಸುವುದಿಲ್ಲ ಎಂಬ ನೋವಿನಲ್ಲಿರುವುದು ಆರಂಭದ ದಿನಗಳಲ್ಲಿ ತಂದೆ ಆಕೆಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದೆ. ಕ್ರಮೇಣ ಅವಳನ್ನು ಹಾಗೆ ಮಾಡಿಸುತ್ತದೆ. ಒಂದಿಡೀ ಕಾದಂಬರಿಯಲ್ಲಿ ತ್ರಿವೇಣಿಯವರು ಈ ರೀತಿಯ ವಸ್ತುವನ್ನು ಹೇಳಿದರೆ ತಿರುಮಲೇಶರು ಚುಟುಕಾಗಿ ಹೇಳಿ ಮುಗಿಸುತ್ತಾರೆ.

ಮೂರನೆಯದಾಗಿ ಮುಸುಗಮ್ಮ ಜಾತ್ರೆಯ ನಂತರ ಮೃಣಾಲಿನಿಗೆ ಆದ ಮಾನಸಿಕ ಆಘಾತವನ್ನು ಕುರಿತು ಹೇಳುವಾಗ ದೇಹದ ಗಾಯ ಮಾಸುತ್ತದೆ. ಆದರೆ ಮನಸ್ಸಿನ ಗಾಯ… ಎಂಬ ಮಾತು ಬರುತ್ತದೆ.

ನಾಲ್ಕನೆಯದಾಗಿ ಮನವಳ್ಳಿ ಆಶ್ರಮದ ಕೇರ್ ಟೇಕರ್ ಅವರನ್ನು ಕುರಿತಂತೆಇಲ್ಲಿ ಪ್ರಸಂಗವೊಂದು ಮನಸ್ಸಿನ ಆರೋಗ್ಯ ಕುರಿತೇ ಇದೆ. ದೊಡ್ಡ ಸರಕಾರಿ ಹುದ್ದೆಯಲ್ಲಿ ಇದ್ದ ಅವರಿಗೆ ಚರ್ಮಕಾಯಿಲೆ ಬರುವುದು ಇಲ್ಲಿ ಅವರ ಸಂಸಾರದಲ್ಲಿ ದೊಡ್ಡ ಬಿರುಗಾಳಿಯನ್ನೇ ಬೀಸುವಂತೆ ಮಾಡುತ್ತದೆ. ಕಟ್ಟಿಕೊಂಡ ಹೆಂಡತಿ, ಮಕ್ಕಳು ನೆರೆಹೊರೆಯವರಿಗೆ ಈ ವಿಚಾರ ಗೊತ್ತಾಗಿದೆ ಇದು ಗುಣವಾಗದ ರೋಗ ಎಂದು ಅದನ್ನೆ ನಂಬಿ ಅದುವೇ ಅಂತಿಮ ಎಂದು ತೀರ್ಮಾನಿಸಿ ಮಾನಸಿಕವಾಗಿ ಕುಗ್ಗಿ ನಂತರ ಗುಣವಾಗಿ ಮತ್ತೆ ಮನೆಗೆ ಹಿಂದಿರುಗಿದ ಅನೇಕ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ ತಮ್ಮ ಬಗ್ಗೆಯೇ ಕೀಳರಿಮೆ ಹೊಂದುವುದು ದೌರ್ಬಲ್ಯ. ಅದು ಹೆಚ್ಚಾದಾಗ ಜೀವನವನ್ನೇ ಏರು-ಪೇರು ಮಾಡುತ್ತದೆ ಎಂಬುದಕ್ಕೆ ಇಲ್ಲಿ ಸಮರ್ಥ ಉದಾಹರಣೆ ಬಂದಿದೆ.

ವೈದ್ಯರೆಲ್ಲಾ ಸೂಜಿ, ಕತ್ತರಿ, ಇಕ್ಕಳ ಹಿಡಿದು ಭಯ ತರಿಸುವುದಿಲ್ಲ. ಅದರಲ್ಲೂ ನಯವಾಗಿ ಅವರು ಏಕಾಗ್ರತೆಯಿಂದ ಇದ್ದು ರೋಗಿಯ ಮನಸ್ಸನ್ನು ಬೇರೆಡೆ ಹೊರಳಿಸಿ ಚಿಕಿತ್ಸೆ ನೀಡುವ ಚಿಕಿತ್ಸಕ ಗುಣದ ಕುರಿತು ಇಲ್ಲಿ ಸುಮನ್ ಮುಖವಾಡ ಧಾರಿಯ ಗುಂಡಿಗೆ ಕಾಲು ತಾಗಿಸಿಕೊಂಡು ಗಾಯ ಮಾಡಿಕೊಂಡಾಗ ಪ್ರಸ್ತಾಪವಾಗುತ್ತದೆ. ಸಾಮಾನ್ಯರಿಗೆ ಆಪರೇಷನ್ ಎಂದರೆ ಭಯವೋ ಭಯ. ಆದರೆ ವೈದ್ಯ ಪರಿಭಾಷೆಯಲ್ಲಿ ಮಾಂಸ ಕೊಯ್ಯುವುದಕ್ಕೂ ಆಪರೇಷನ್ ಎಂದೇ ಹೆಸರು ಇರುವುದು ಸಾಮಾನ್ಯ ಅನ್ನಿಸುತ್ತದೆ.

ಮುಸುಗು ಕಾದಂಬರಿಯಲ್ಲಿ ಚಿತ್ರಿತವಾಗಿರುವ ರೈಲ್ವೆ ನಿಲ್ದಾಣದ ಬದುಕು

ತಿರುಮಲೇಶರ ಮೂರು ಕಾದಂಬರಿಗಳಲ್ಲೂ ರೈಲ್ವೇ ಪ್ರಯಾಣದ ವಿಭಿನ್ನ ಮುಖಗಳನ್ನು ಕಾಣಬಹುದು. ಆರೋಪ ಕಾದಂಬರಿಯಲ್ಲಿ ಸಂತೋಷ, ನಿರೀಕ್ಷೆಗಳು ಮತ್ತು ಬಿಡುಗಡೆಯ ಭಾವವನ್ನು ಬಯಸಿದರೆ, ‘ಮುಸುಗು’ ಬಿಡುಗಡೆ, ಅನ್ವೇಷಣೆ ಮತ್ತು ರೈಲ್ವೆ ನಿಲ್ದಾಣದ ಬಡಕೂಲಿಗಳ ಶ್ರಮದ ಬದುಕನ್ನು ಒಂದೆಡೆ ಹೇಳಿದರೆ ಇನ್ನೊಂದೆಡೆ ಕೆಲಸಕ್ಕೆ ಸೇರಿ ಹತ್ತು ವರ್ಷಗಳಲ್ಲೇ ಬಂಗಲೆವಾಸಿ ರೈಲ್ವೇ ಅಧಿಕಾರಿಗಳು ಅದಕ್ಕಾಗಿ ಅವರು ಕೂಲಿಯವರೊಂದಿಗೆ ಸಾಮಾನು ಸರಂಜಾಮುಗಳನ್ನು ಎಗರಿಸುವಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿದೆ. ಕರ್ತವ್ಯ ನಿಷ್ಟತೆಯಿಂದ ಕಳೆದುಕೊಂಡ ಪ್ರಯಾಣಿಕರ ವಸ್ತುಗಳನ್ನು ಪತ್ತೆಹಚ್ಚಿ ತಲುಪಿಸುವುದು ಇತ್ಯಾದಿಗಳು ಆಗುತ್ತದೆ. ಸಕಲೇಶ ಪಿಕ್ ನಿಕ್ ಮುಗಿಸಿ ತಲೆತಪ್ಪಿಸಿಕೊಳ್ಳಲು ಹೋಗುವಾಗ ಅಲ್ಲೆ ಮಲಗಿದ್ದ ವ್ಯಕ್ತಿ ಸತ್ತಂತೆ ಇದ್ದರೂ ನೋಡದಾಗುತ್ತಾನೆ. ಅದೇ ಮೈಸೂರಿಗೆ ಬರುವಾಗ ಎಲ್ಲದರಲ್ಲೂ ಅಪನಂಬಿಕೆಯೇ ಎಂದು ತನ್ನ ಸೂಟ್ ಕೇಸಿಗೆ ಬೀಗ ಹಾಕದೆ ಕಳೆದುಕೊಳ್ಳುತ್ತಾನೆ. ಮನುಷ್ಯನ ವರ್ತನೆಯನ್ನು ಸಂದರ್ಭಗಳು ನಿಯಂತ್ರಣ ಮಾಡುತ್ತವೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ.

ಸೀತಾಫಲಗಳನ್ನು ಮಾರುವ ಹೆಣ್ಣು ಮಕ್ಕಳು ಒಂದೆಡೆ ಆದರೆ ಬೀಗ ಚೈನುಗಳನ್ನು ಮಾರುವವರು, ಗೋಸಾಯಿಗಳು ಸಕಲೇಶನಿಗೆ ಬೆಂಕಿ ಹಾಕಿ ಚಳಿಕಾಯಿಸಲು ಅನುವು ಮಾಡುವುದು ಮತ್ತು ಅವರು ತಿನ್ನುವ ಗೆಡ್ಡೆ ಗೆಣಸುಗಳನ್ನ ಕೊಡುವುದು. ಮನವಳ್ಳಿಯ ಸ್ಟೇಷನ್ನಲ್ಲಿ ಕೂಲಿ ಆಸ್ಪತ್ರೆಗೆ ಸಾಗಿಸುವುದು ಮತ್ತು ಆಶ್ವಿನ್‌ ಕುಮಾರ್ ಸಮಾಜಸೇವೆಗೆ ತನ್ನಲ್ಲಾದ ಸಹಾಯ ಮಾಡುವುದು ಅನನ್ಯವಾಗಿ ಚಿತ್ರಿತವಾಗಿದೆ.

ಇಡೀ ಕಾದಂಬರಿ ಕೇಂದ್ರೀಕೃತವಾಗಿರುವುದು “ಮನವಳ್ಳಿ ರೈಲ್ವೆ ನಿಲ್ದಾಣ”ದ ಮೂಲಕ. ಇಲ್ಲಿ ಬರುವ ಮೊಹಂತಿಗೆ ಶಾಶ್ವತ ನೆಲೆ ಒದಗಿಸಿದರೆ, ಸಕಲೇಶನಿಗೆ ಅಡಗುದಾಣ ಆಯಿತು ಅನ್ನುವಷ್ಟರಲ್ಲಿ ವಿಹಾರತಾಣವಾಗಿ ಪರಿವರ್ತನೆಯ ತಾಣವೂ ಆಗಿ ಬಿಡುತ್ತದೆ. ಯಾವುದೇ ಧಾರ್ಮಿಕ ಚಟುವಟಿಕೆ ಆಗದೇ ಇದ್ದರೂ ನಿರಾಶ್ರಿತರ, ಪುನರ್ವಸತಿ ಶಿಬಿರದಂತೆ ಇಲ್ಲಿ ಕಂಡುಬರುತ್ತದೆ.

ಉಢಾಳ ಪಾತ್ರ ಇಲ್ಲಿ ನಿರಂಜನ ದಾಸ್ ಸೇನೆಯಲ್ಲಿದ್ದ ಅನ್ನುವ ಕಾರಣಕ್ಕೆ ಇಲ್ಲಿ ಕಾದಂಬರಿಯಲ್ಲಿಯೂ ಆತನನನ್ನು ಗೌರವಿಸಬೇಕು ಎನ್ನುವ ಒಂದಂಶವನ್ನು ಬಿಟ್ಟರೆ ಆತ ತನ್ನ ಮೂಗಿನ ನೇರಕ್ಕೆ ಒಳ್ಳೆಯವನಂತೆ ಮಾತನಾಡಿದರೂ ಅಪ್ಪನ ಆಸ್ತಿ ಪೋಲುಮಾಡಿ, ಅಣ್ಣನ ಮಾತನ್ನು ಧಿಕ್ಕರಿಸಿ, ಹೆಂಡತಿಯನ್ನು ಹೀನಾಯವಾಗಿ ನಡೆಸಿಕೊಂಡು, ಇನ್ನೊಂದು ಹೆಣ್ಣಿನ ವ್ಯಾಮೋಹದಲ್ಲಿ ಸಿಕ್ಕು ಸುಳ್ಳುಗಳನ್ನೇ ನಿಜವಾಗಿಸಲು ಹೊರಡುತ್ತಾನೆ. ತಪ್ಪನ್ನೇ ಸರಿ ಎನ್ನುವ ಅದೆಷ್ಟು ಜನ ನಮ್ಮ ನಡುವೆಯಿಲ್ಲ. ಸುಳ್ಳಿಗೆ ಸಮಜಾಯಿಷಿ ಕೊಡುವವರೆಲ್ಲಾ ನಿರಂಜನ ದಾಸನ ಸಾಲಿನಲ್ಲೇ ಬರುವವರು.

‘ಮುಸುಗು’ ಕಾದಂಬರಿಯಲ್ಲಿ ನಾಯಕ ಸಕಲೇಶನಷ್ಟೇ ಪ್ರಾಮುಖ್ಯತೆ ಸಂತೋಷ್ ಮೊಹಂತಿ ಅನ್ನುವ ಪಾತ್ರಕ್ಕೂ ಸಿಕ್ಕಿದೆ. ಕೇಂಬ್ರಿಜ್‌ನಲ್ಲಿ ಸಂಶೋಧನೆ ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿ ಅಲ್ಲಿಯೇ ನೆಲೆಸಬೇಕು ಎಂದಿದ್ದರೂ ತಂದೆ ತಾಯಿಗಳ ಕಾರಣದಿಂದ ಅಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಶಿಕ್ಷಕ ಹುದ್ದೆಯಲ್ಲಿದ್ದುಕೊಂಡು ವಿದ್ಯಾರ್ಥಿಗಳನ್ನು ಅಸಡ್ಡೆಯಿಂದ ನೋಡುತ್ತಿದ್ದು ಅವನ ಲೋಪವಾಗಿತ್ತು. ಸಂಗೀತ ಎಂಬಾಕೆಯನ್ನು ಮದುವೆಯಾದರೂ ಅಲ್ಲಿ ಸುನಾದ ಹೊಮ್ಮಿಸದೆ ಎಲ್ಲದಕ್ಕೂ ಅಪಶೃತಿ ಹೊಮ್ಮಿಸಿ ದುರಂತದ ಕೂಪಕ್ಕೆ ತಳ್ಳಿಬಿಡುತ್ತಾನೆ. ಮೊಹಂತಿ ಮತ್ತು ಸಂಗೀತ ಇಬ್ಬರ ವೈವಾಹಿಕ ಬದುಕು ಕಾದಂಬರಿಯದಾದರೂ ಇಂದಿನ ಅನೇಕ ಸುಶಿಕ್ಷಿತ ದಂಪತಿಗಳು ಸದ್ದಿಲ್ಲದೆ ಎದುರಿಸುತ್ತಿರುವ ಬದುಕು. ಹೇಗೋ ನೆಪಮಾತ್ರಕ್ಕೇ ಬದುಕುತ್ತಿರುವ ಅಸಹನೀಯ ಬದುಕು ಎನ್ನಬಹುದು. ನಮ್ಮಲ್ಲಿ ಅನೇಕರಿಗೆ ಬೌದ್ಧಿಕ ಅಹಂಕಾರವಿರುತ್ತದೆ ಅದು ಅಮಲೂ ಹೌದು. ಹೆಂಡತಿ ವಿದ್ಯಾವಂತೆ ಆಗಿದ್ದರೂ ಕೂಡ ಈಡೇರದ ನಿರೀಕ್ಷೆಯನ್ನೂ, ತಲುಪಲಾಗದ ದೂರವನ್ನು ಕ್ರಮಿಸಲೇಬೇಕೆಂಬ ಹುಚ್ಚು ಹಠವನ್ನು ಹೊಂದಿರುತ್ತಾರೆ. ಏನೇ ಆದರೂ ಹೆಂಡತಿ ಕಾರಣವೆನ್ನುವ ತಾನು ಎಸಗುವ ಅಪರಾಧಗಳಿಗೆ ಆಕೆಯೇ ಕಾರಣ ಎನ್ನುವ ಮನಸ್ಥಿತಿ ಅನೇಕರಲ್ಲಿ ಇರುತ್ತದೆ. ಒಟ್ಟಾರೆ “ಮೊಸರಲ್ಲಿ ಕಲ್ಲು ಹುಡುಕುವ” ವ್ಯರ್ಥ ವ್ಯಸನಿಗಳು ಅನ್ನಬಹುದೇನೋ? ಭಾವನೆಗಳಿಗೆ ಅವಕಾಶ ಕೊಡದೆ ಮೆಟಿರಿಯಲಿಸ್ಟಿಕ್ ಆಗಿ ನೋಡುವ ಜನರನ್ನು ಸಂಕೇತಿಸುತ್ತದೆ.

ತನಗೆ ಮಕ್ಕಳ ಬಯಕೆ ಇಲ್ಲದ್ದು ಪತ್ನಿಯ ಬಯಕೆಯೂ ಆಗಬೇಕೆನ್ನುವ ಹಠ. ತನ್ನ ಮನಸ್ಸಿನ ದೌರ್ಬಲ್ಯಗಳನ್ನು ಹೆಂಡತಿಯಲ್ಲಿ ಅಕ್ಷರಶಃ ನೋಡುವ ಮನಸ್ಸು ಇಲ್ಲಿದೆ. ಅದಕ್ಕಾಗಿ ತಿರುಮಲೇಶರು “ಮನಸ್ಸನ್ನು ಕೆಸರಿನ ಹೊಂಡ ಮಾಡಿಕೊಂಡು ಈ ಮನುಷ್ಯ ತಾನೂ ರಾಡಿಯಲ್ಲಿ ಹೊರಳಿದ್ದಲ್ಲದೆ ಏನೂ ತಿಳಿಯದ ಹೆಂಡತಿ ಮೇಲೂ ಎರಚಿದ” ಎಂದು ಸಮರ್ಥ ಪದಗಳಲ್ಲಿ ಬರೆಯುತ್ತಾರೆ. ತನ್ನ ಯಶಸ್ಸನ್ನು ಹೆಂಡತಿ ಕಂಡು ಆನಂದಿಸಬೇಕು ಎನ್ನುವುದು ಸರಿ, ಆದರೆ ವಿಜೃಂಭಿಸಲೇಬೇಕು ಎಂದು ಬಯಸುವುದು ತಪ್ಪು ಅನ್ನಿಸುತ್ತದೆ. ಹೆಂಡತಿಯ ಅಣ್ಣ- ತಮ್ಮ ಬಂದರೂ ಅವರನ್ನೂ ಸಹಿಸದ ಕಡೆಗೆ ಆಕೆ ಕಡೆ ಪಕ್ಷ ದೈನಿಕಗಳನ್ನು ದೈನ್ಯತೆಯಿಂದ ಕೇಳಿ ತರಿಸಿಕೊಳ್ಳಬೇಕು ಎನ್ನುವ ಭಾವನೆ ಅತಿರೇಕದ್ದು ಅನ್ನಿಸುತ್ತದೆ. ಇದು ಇಂದಿನ ದಿನಮಾನದ ಒಂದು ಊರಿನದ್ದಲ್ಲ, ಎಲ್ಲಾ ಊರಿನ ಸರಿಸುಮಾರು ಎಲ್ಲಾ ಮನೆಗಳ ಸಮಸ್ಯೆಯಾಗಿದೆ. ಅದನ್ನು ನಿರೂಪಿಸಿರುವ ತಿರುಮಲೇಶರ ಶೈಲಿ ನಿಜಕ್ಕೂ ಅನುಕರಣೀಯ.

ತುಂಬಾ ಪ್ರತಿಭಾನ್ವಿತರು ತಮ್ಮ ಖಾಸಗಿ ಬದುಕನ್ನು ಸರಿಯಾಗಿ ಅನುಭವಿಸಲಾರದೆ ದುಃಖಾಂತ್ಯವನ್ನು ಕಾಣುವುದು ಈ ಸ್ವಹಂಗಳಿಂದ ಅನ್ನಿಸುತ್ತದೆ. ಮನಸ್ಸಿನ ಅಹಂಕಾರ ಮೊದಲು ಅಮಲು ಆನಂತರ ಚಟ ನಂತರ ಅಧೋಗತಿ ಈ ಅಧೋಗತಿ ಎಂಬ ಹಂತ ಅಲ್ಲಿಯವರೆಗೆ ವ್ಯಕ್ತಿ ಪರಿವರ್ತನೆ ಆಗಲಿಲ್ಲ ಎಂದರೆ ಆತ ವೃತ್ತಿ, ವೈಯಕ್ತಿಕ ಎರಡೂ ಕಡೆ ಮುಳುಗಿದಂತೆಯೇ ಸರಿ. ಇಲ್ಲಿ ಮೊಹಂತಿ ಹೆಂಡತಿಗೆ ವಿಚ್ಛೇದನ ಕೊಡುತ್ತಾನೆ. ಆಕೆ ನೀರಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಕಾರಣನಾಗುತ್ತಾನೆ. ಆನಂತರ ಇತರ ಮಕ್ಕಳನ್ನು ನೋಡಿ ನನಗೂ ಇದ್ದಿದ್ದರೆ ಅನ್ನುವುದು, ಅವಳು ಇನ್ನೊಮ್ಮೆ ಬಂದರೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಕೇವಲ ಮನಸ್ಸಿನಲ್ಲಿ ಮಾತ್ರ ತೀರ್ಮಾನ ಮಾಡಿಕೊಂಡರೆ ಸಾಕೆ ಅದನ್ನು ಬಾಯಂಗಳದಲ್ಲೇ ಇರಿಸಿಕೊಂಡರೆ ಎದುರಿಗಿರುವವರ ಮನದಂಗಳ ತಲುಪುವುದು ಹೇಗೆ? ತಲುಪಿಸಲು ಮಾರ್ಗ ಬೇಕು ಅಲ್ಲವೆ ಅದಕ್ಕೆ ಪ್ರತಿಮೆಯೆಂಬಂತೆ ಹೈದರಾಬಾದ್‌ಗೆ ಹೋಗಬೇಕಾಗಿದ್ದ ಮೊಹಂತಿ ದಾಹವೆಂದು ನೀರಿಗಾಗಿ ರೈಲ್ವೇ ಸ್ಟೇಷನ್ನಿನಲ್ಲಿ ಇಳಿಯಬೇಕಾಗುತ್ತದೆ. ಪ್ರಯಾಣ ಮುಂದುವರೆಸಲು ಸಾಧ್ಯವಾಗುವುದೇ ಇಲ್ಲ. ಈ ಮೊಹಂತಿಯ ಮನಸ್ಥಿತಿಯನ್ನೇ ಭೌತವಿಜ್ಞಾನಕ್ಕೆ ನೆಗೆಟಿವ್ ಪಾರ್ಟಿಕಲ್ಸ್ ಎಂದಿರುವುದು ವಿಶೇಷವಾಗಿದೆ. ಇಲ್ಲಿ ನಿರಂಜನ ದಾಸನನ್ನು ಮತ್ತೆ ಮತ್ತೆ ಕ್ಷಮಿಸಿ ಅವನನ್ನು ಪರಿವರ್ತನೆಯೆಡೆಗೆ ಕರೆದುಕೊಂಡು ಬರಲು ಕಾರಣವೆಂದರೆ ಅವನು ಮಾಡಿದ ತಪ್ಪನ್ನೇ ಬೇರೆ ರೂಪದಲ್ಲಿ ನಾನೂ ಮಾಡಿದ್ದೇನೆ ಎಂಬ ಅಪರಾಧಿಭಾವ, ಇನ್ನೊಂದು ಪ್ರತಿಮೆ ಇಲ್ಲಿ ಗಾಳಿಪಟಗಳು ಸಕಲೇಶ್ ಬೆಟ್ಟದ ಮೇಲೆ ಹತ್ತಿ ಗಾಳಿಪಟಗಳು ಹಾರಾಡುವುದನ್ನು ಗಮನಿಸಿ ತನ್ನ ಮನದಾಳದ ಬಯಕೆಗಳು, ಹಾರೈಕೆಗಳನ್ನು ಮೊಹಂತಿ ಜೊತೆಗೆ ಹಂಚಿಕೊಳ್ಳುತ್ತಾನೆ.

ಭಾಷೆಗಳ ಕಲಿಕೆ ಮನುಷ್ಯನ ಅರಿವನ್ನು ವಿಸ್ತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದನ್ನೂ ತಿರುಮಲೇಶರು ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ. ಸಕಲೇಶ ಕಲಾಕಾಯಕ್ಕೆ ಸೇರಿದವನು ಸರಿ. ಆದರೆ ಆತ ತನಗಿಂತ ಹಿರಿಯರಿಗೂ ಮನೆಪಾಠ ಮಾಡುವಷ್ಟು ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಹೊಂದಿರುತ್ತಾನೆ. ಸ್ವತಃ ಇಂಗ್ಲೀಷ್ ಮೇಸ್ಟ್ರಾದ ತಿರುಮಲೇಶರು ಯಾವುದೇ ವಿಷಯ ಹಾಗು ಭಾಷೆಯ ನೆಲೆಯಲ್ಲಿ ನೋಡದೆ ಮತ್ತು ಇಂಗ್ಲಿಷ್ ಅಧ್ಯಾಪಕನಾಗಿ ನೋಡುವುದು ಇಲ್ಲಿ ಬಹಳ ಚೆನ್ನಾಗಿ ಚಿತ್ರಿತವಾಗಿದೆ. ಒಬ್ಬ ಭಾಷಾ ಶಿಕ್ಷಕನ ಸವಾಲುಗಳನ್ನು ಹೇಳುವುದರ ಜೊತೆಗೆ ಭಾಷಾಕಲಿಕೆಗೆ ವಿದ್ಯಾರ್ಥಿಗಳು ಹಳೆಯ ಅಭಿಜಾತ ಸಾಹಿತ್ಯವನ್ನು, ನಿಘಂಟುಗಳನ್ನೂ, ಪದಬಂಧಗಳನ್ನು ಬಿಡಿಸಬೇಕು ಎನ್ನುವ ಸಲಹೆ ಇಂದಿನ ವಿದ್ಯಾರ್ಥಿಗಳಿಗೆ ಅಕ್ಷರಶಃ ಹೊಂದಿಕೆಯಾಗುತ್ತದೆ. ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಉತ್ಕಂಠಿತವಾಗಿ ಓದಿಸುವುದು ತಪ್ಪಾದದ್ದನ್ನು ಅಲ್ಲಿಯೇ ತಿದ್ದುವ ಸರಿಯಾದ ಭೋದನಾಕ್ರಮದ ಬಗ್ಗೆ ಮಾತನಾಡುತ್ತಾರೆ. ‘ಮುಸುಗು’ ಕಾದಂಬರಿ ಕುರಿತು ಮಾತನಾಡುವಾಗಲೆ ಇಂದಿನ ಭಾಷಾ ಶಿಕ್ಷಕರಿಗಿರುವ ಸವಾಲುಗಳು ಧುತ್ತನೆ ಕಣ್ಮುಂದೆ ಬರುತ್ತವೆ. “ಲ್ಯಾಂಗೆವೇಜಸ್ ಅಲ್ವ!” ಅನ್ನುವ ಉಡಾಫೆ, ಕಡಿಮೆ ಅವಧಿಗಳನ್ನು ನೀಡುವುದು ಕೆಲಸಕ್ಕೆ ಬಾರದವರು ಅನ್ನುವ ಕಲ್ಪನೆ ಅತ್ಯಂತ ಅಪಾಯಕಾರಿ. ಈ ಕುರಿತು ಶಿಕ್ಷಣತಜ್ಞರು ಅವಶ್ಯ ಚರ್ಚೆಮಾಡಲೇಬೇಕಾಗಿದೆ.

ಮತ್ತೆ ಕಾದಂಬರಿಯ ವಿಷಯಕ್ಕೆ ಬಂದರೆ ಇಂಗ್ಲಿಷ್ ಪ್ರಾಧ್ಯಾಪಕ ರಾಧಾಕೃಷ್ಣರು ‘ಆ್ಯಗನಿ’ ಎಂಬ ಪದದ ಸರಿಯಾದ ಉಚ್ಛಾರ ಕಲಿಸಲು ಹರಸಾಹಸ ಪಡಬೇಕಾಯಿತು. ವಿದ್ಯಾರ್ಥಿ “ಎಗೊನಿ” ಅಂದದ್ದೆ ಅಡ್ಡ ಹೆಸರಾಗುತ್ತದೆ. ಈ ರೀತಿಯ ಅನುಭವ ಭಾಷಾ ಶಿಕ್ಕರಿಗೆ ಆಗಿಯೇ ಇರುತ್ತದೆ. “ಪೂಣಚ್ಚಿ” ಎಂದೋದಲು ಬಾರದ ವಿದ್ಯಾರ್ಥಿ ‘ಪೊನಚಿ’ ಎಂದೋದಿ ಕಾಲೇಜು ಬಿಡುವವರೆಗೂ ಅದೇ ಹೆಸರಿನಿಂದ ಕರೆಸಿಕೊಂಡಿದ್ದು, ‘ಸೂಕ್ಷ್ಮ’ ಎನ್ನುವಲ್ಲೂ ‘ಸುಷ್ಮ’ ಎಂದೋದಿದ ವಿದ್ಯಾರ್ಥಿ ಅದೇ ಹೆಸರಿನಿಂದ ಕರೆಸಿಕೊಂಡ ನಮ್ಮ ವಿದ್ಯಾರ್ಥಿಗಳೆ ಇಲ್ಲಿ ಕಣ್ಮುಂದೆ ಬರುತ್ತಾರೆ.

ಸಕಲೇಶನ ಅಧ್ಯಾಪಕರೊಬ್ಬರು ಅವನ ಲೇಖನ ಟೈಮ್ಸ್ ಪತ್ರಿಕೆಯ ಸೆಂಟರ್ ಪೇಜ್‌ನಲ್ಲಿ ಪ್ರಕಟವಾದಾಗ ಮೆಚ್ಚುಗೆ ವ್ಯಕ್ತಪಡಿಸದೆ ರೂಲ್ಸ್, ಪರ್ಮಿಷನ್ ಇತ್ಯಾದಿ ಮಾತುಗಳನ್ನು ಹೇಳಿ ಅವನ ಉತ್ಸಾಹವನ್ನು ತಗ್ಗಿಸಿದ ರೀತಿ ಕಡೆಗೆ ಕಾಫಿ ಕುಡಿಸಿ ಕ್ಷಮೆ ಕೇಳುವುದು ಆ ರೀತಿಯ ಅಧ್ಯಾಪಕರು ಇರುತ್ತಾರೆ ಎಂಬುದನ್ನು ಸಮದರ್ಶಿಸುತ್ತದೆ. ಇಲ್ಲಿ ತಿರುಮಲೇಶರು ವಿದ್ಯಾರ್ಥಿಯ ಹಿತಚಿಂತನೆ ಬಯಸುವನೆ ಆದರ್ಶ ಶಿಕ್ಷಕ ಎನ್ನುವುದನ್ನು ಮಾರ್ಮಿಕವಾಗಿ ಹೇಳಿದ್ದಾರೆ.

ಸಕಲೇಶ ತನ್ನು ಓದಿಗಾಗಿ ದುಡಿಮೆಯನ್ನು ಹೇಗೆ ಕಂಡುಕೊಳ್ಳುತ್ತಾನೆ. ಮನೆಪಾಠ ಹೇಳುವ ಮೂಲಕ ಅದಕ್ಕೆ ತಯಾರಿ ನಡೆಸುವುದು ಮತ್ತು ಪತ್ರಿಕೆಗಳಿಗೆ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಲೇಖನ ಬರೆಯುವುದು ಆ ಪತ್ರಿಕೆಯವರನ್ನು ಹುಡುಕಿ ಹೊರಡುವುದು, ಲೇಖನಗಳು ಪ್ರಕಟವಾಗುತ್ತವೆ ಎಂದು ಪ್ರತಿ ನಿತ್ಯ ಪತ್ರಿಕೆಗಳನ್ನು ಕೊಂಡುಕೊಳ್ಳುವುದು. ಅದೆ ಬಂದಾಗ ಖುಷಿ ಪಡುವುದು ಗೆಳೆಯರಿಗೆ ಗೊತ್ತಾದಾಗ ಅವರಿಗೊಂದು ಜ್ಯೂಸ್ ಪಾರ್ಟಿ ಏರ್ಪಾಡು ಮಾಡುವುದು.. ಪ್ರವರ್ಧಮಾನಕ್ಕೆ ಬರಲು ಹವಣಿಸುವ ಬರೆಹಗಾರರ ಭಾವನೆಗಳನ್ನು ಶಬ್ದಗಳಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ ಅನ್ನಿಸುತ್ತದೆ.

ಮುಸುಗುವಿನಲ್ಲಿ ಅಡಗಿರುವ ಮೌಲ್ಯಗಳು

ನೆನಪಿನ ಕುರಿತಾದ ಸುಂದರ ಟಿಪ್ಪಣಿ ಇಲ್ಲಿ ಓದುಗರನ್ನು ಸೆಳೆಯುತ್ತದೆ. ತಿರುಮಲೇಶರು ಇಲ್ಲಿ ಪುಟ ಸಂ 61. ರಲ್ಲಿ ನೆನಪುಗಳಿಲ್ಲದೆ ಮನುಷ್ಯ ಬದುಕುವುದು ಅಸಾಧ್ಯ. ನೆನಪುಗಳನ್ನು ಕಸ ಒತ್ತರಿಸಿದಂತೆ ಝಾಡಿಸುವುದು ಸಾಧ್ಯವಿಲ್ಲ ನಮ್ಮನ್ನು ನಿಯಂತ್ರಣ ಮಾಡುವುದು ನೆನಪುಗಳೇ ಎಂಬ ಮೌಲ್ಯಯುತ ಪದಗಳನ್ನು ಹೇಳಿದ್ದಾರೆ.

ಪುಟ ಸಂ. 81 ರಲ್ಲಿ ಬರುವ ಏಕಾಗ್ರತೆಯ ವ್ಯಾಖ್ಯಾನ ಇನ್ನೊಂದು. “ಕುಶಲ ಮತಿತ್ವ ಕ್ರಮೇಣ ಕಡಿಮೆಯಾಗಲು ಪ್ರಾರಂಭವಾಯಿತು” ಎನ್ನುತ್ತಾ ಅದು ಮನುಷ್ಯನ ವ್ಯಕ್ತಿತ್ವಕ್ಕೆ ಇರುವ ಅವಿನಾಭಾವ ಸಂಗತಿ ಎಂದು ಬರೆಯುತ್ತಾರೆ. ಏಕಾಗ್ರತೆ ಬರಬೇಕಾದರೆ ಆ ವ್ಯಕ್ತಿಗೆ ಕ್ಷಮಾಗುಣವಿರಬೇಕು ಎಂದು ಬರೆದಿರುವುದು ಇಲ್ಲಿ ಅನನ್ಯವಾಗಿದೆ.

ಜಗಳದ ಕುರಿತು ಪುಟ ಸಂ.88 ರಲ್ಲಿ ಜಗಳ ಕಾಯುವುದು ವ್ಯಕ್ತಿಯ ದೌರ್ಬಲ್ಯವೇ. ವ್ಯಕ್ತಿಯೊಬ್ಬ ಆಂತರ್ಯದಲ್ಲಿ ನಡೆಸುವ ಕದನವೆ ಬಹಿರ್ಮುಖವಾಗಿ ಪ್ರದರ್ಶನಗೊಳ್ಳುತ್ತದೆ ಎಂದಿದ್ದಾರೆ.

ಸ್ನೇಹದ ಮೌಲ್ಯದ ಬಗ್ಗೆ ಬರೆಯುವಾಗ ಸಕಲೇಶನನ್ನು ಎಲ್ಲರೂ ಸೇಂಟ್ ಎಂದು ಕರೆಯುತ್ತಿರುತ್ತಾರೆ ಅದೇ ಅವನ ಸಹಪಾಠಿಯನ್ನು ಜ್ವರ ಬಂದಾಗ ಆರೈಕೆ ಮಾಡುವುದು ಇಲ್ಲಿ ಸ್ನೇಹಿತನ ಕಣ್ತೆರೆಸುತ್ತದೆ. ಖುಷಿಗೆ ನಷೆಯಾಗಿದ್ದ ಸ್ನೇಹಿರು ಬಾರದೆ ಇರುವುದು ಗೆಳೆತನ, ಮತ್ತಹೀನರ ಗೆಳೆತನ ಅನ್ನುವಂತಿದ್ದ ಹಿತ್ತಾಳೆಯ ಹಾಗೆ ಬುದ್ಧಿವಂಥರ ಗೆಳೆತನ ಸುವರ್ಣ ಪುತ್ಥಳಿ ಇದ್ದ ಹಾಗೆ ಎಂಬುದನ್ನು ಹೇಳುತ್ತದೆ.

ನಂಬಿಕೆಯ ಕುರಿತು ಪುಟ ಸಂ. 120.ರಲ್ಲಿ “ಇಷ್ಟು ಅಪನಂಬಿಕೆಯ ಸಮಾಜದಲ್ಲಿ ಹೇಗೆ ಬದುಕುವುದು. ಕೆಲವರಾದರೂ ನನ್ನಂಥವರು ಬೇಕು” ಎನ್ನುವುದು ಬದುಕು ನಂಬಿಕೆ ಎಂಬ ಹಳಿಗಳ ಮೇಲೆ ಇರುತ್ತದೆಎಂ ಬುದನ್ನು ಹೇಳಬಯಸಿದ್ದಾರೆ.

ದುಷ್ಟತನದ ಬಗ್ಗೆ ಹೇಳುವಾಗ ಪುಟ ಸಂ. 239 ರಲ್ಲಿ ದುಷ್ಟತನ ಎಂದರೆ ಇನ್ಬೊಬ್ಬರ ಜೊತೆ ಜಗಳಾಡುವುದು. ಅವರನ್ನು ಹಿಂಸಿಸಿ ನೋವುಂಟುಮಾಡುವುದು. ಮಹತ್ವಾಕಾಂಕ್ಷಿಯಾಗುವುದು, ಸ್ವಾರ್ಥಿಯಾಗುವುದು ಎಂದಿದ್ದಾರೆ. ಕಡೆಗೆ ಉಪಸಂಹಾರ ಎಂಬಂತೆ ಜಗಳ ಬಹಿರ್ಮುಖಿಯಾದಾಗ ಅದೇ ಅರಿವಿಗೆ ದಾರಿ ತೋರಬಲ್ಲದು. ಆದರೆ ದುಷ್ಟತನ ಎದುರಿಸುವುದು ಹೇಗೆ? ಎಂಬುದು ಕಡೆಯವರೆಗೂ ಪ್ರಶ್ನೆಯಾಗಿಯೇ ಉಳಿಯುತ್ತದೆ ಎನ್ನುವುದು ತಿರುಮಲೇಶರು ಒಬ್ಬ ಶ್ರೇಷ್ಟ ಚಿಂತಕ ಎಂಬುದನ್ನು ಪುನರ್‌ನೆನಪಿಸುತ್ತದೆ.

‘ಮುಸುಗು’ ಕಾದಂಬರಿಯ 105 ನೆ ಪುಟ ಅತ್ಯಂತ ಸತ್ವಶಾಲಿಯಾಗಿ ಕಾರಣ ನಿರಂಜನ್ ದಾಸನ ಮೂಲಕ ಕಾದಂಬರಿಕಾರರು ಇಲ್ಲಿ ಮನುಷ್ಯನ ಕ್ರೌರ್ಯದ ಕುರಿತು ಮಾತನಾಡುತ್ತಾರೆ. ನಿರಂಜನ್ ದಾಸ್ ತನ್ನಿಂದ ಏನೂ ಸಾಧ್ಯವಾಗದಾಗ ಯಕ್ಷಿಣಿಮಾಡಿ ತನ್ನ ವಸ್ತು ಒಡವೆ ಕದ್ದಿದ್ದಾರೆ ಎನ್ನುವುದು ಕಡೆಗೆ ವಿಷ ಹಾಕಿ ಆಶ್ರಮದ ಜಾನುವಾರುಗಳನ್ನ ಕೊಲ್ಲುವುದು, ಅನಾಮಧೇಯ ಕರಪತ್ರಗಳನ್ನು ಹಂಚುವುದು, ಪೋಲಿಸಿನವರಿಗೆ ಕಾಗದ ಬರೆಯುವುದು ಇತ್ಯಾದಿ ಮಾಡುತ್ತಾನೆ. ಇತ್ತೀಚೆಗೆ ನಮ್ಮಲ್ಲೂ ನಡೆಯುತ್ತಿರುವ ಹಣ್ಣಿನೊಳಗೆ ಸ್ಫೋಟಕ ಇರಿಸುವುದು, ಮೈಮೇಲೆ ಬೆಂಕಿಹಚ್ಚುವುದು, ವಿಷ ಹಾಕುವುದು ವಾಹನಗಳಿಗೆ ಕಟ್ಟಿ ಎಳೆವುದು ಇತ್ಯಾದಿಗಳನ್ನು ಹೇಳುತ್ತದೆ.

ಇಲ್ಲಿ ಬರುವ ಸುಮನ್ ರೆಡ್ಡಿ ಬಹಳ ಶ್ರೀಮಂತ. ಕಾರುಬೈಕು, ಪಾಪ್ ಸಂಗೀತ. ಸಿಗರೇಟ್ ಸೂಟು ಬೂಟುಗಳ ಶೋಕಿಯಲ್ಲಿದ್ದರೂ ಸಂಯಮ ಕಳೆದುಕೊಳ್ಳದ, ಇದ್ದ ಹಣವನ್ನು ದುರ್ಬಳಕೆ ಮಾಡದ, ಅನುಕೂಲವನ್ನು ದುರ್ಬಳಕೆ ಮಾಡುವುದಿಲ್ಲ. ಪಿಕ್ನಿಕ್ ಸಮಯದಲ್ಲಿ ಜೇಕಬ್‌ನನ್ನು ಹುಡುಕುತ್ತಾ ಹೋಗುವುದು. ಹೆಣ್ಣು ಮಕ್ಕಳಿಗೆ ಆಯಾಸವಾಗಿದೆ ಅನ್ನಿಸಿದಾಗ ಜೀಪಿನ ಹತ್ತಿರ ಕರೆದುಕೊಂಡು ಹೋಗುವುದು ಅವನ ಸಂಸ್ಕಾರವನ್ನು ತಿಳಿಸುತ್ತದೆ. ಶೋಕಿ ಅವನ ಬದುಕಲ್ಲಿ ಇದ್ದರೂ ನಡತೆಯಲ್ಲಿ ಸಂಯಮತೆ ಇರುವುದು ಸಹಜವಾಗಿ ಮೂಡಿ ಬಂದಿದೆ. ಇದನ್ನೆ ಮುಸುಗುವಿನ ಸಾಫ್ಟ್ ಮತ್ತು ಸ್ಮಾರ್ಟ್ ಕ್ಯಾರೆಕ್ಟರ್ ಎಂದು ಕರೆಯಬಹುದೇನೋ. ಆದರೆ ಹೆಸರಿಗೆ ಪೋಸ್ಟ್ ಗ್ರಾಜುಯೇಟ್ ಎಂಬ ನಾಮಧೇಯ ಇರಲಿ ಎಂದು ಬಯಸುವುದು ತಪ್ಪು ಅನ್ನಿಸುತ್ತದೆ. ಜೊತೆಗೆ ಕಾದಂಬರಿಯ ಪ್ರಾರಂಭದಲ್ಲಿ ಮಾತ್ರ ಕಾಣಿಸುವ ಕೃಷ್ಣಕಾಂತ್ ಸಕಲೇಶ ಕಾಣದಾದಾಗ ಲೇಡಿಸ್ ಹಾಸ್ಟೆಲ್ ಬಳಿ ಹೋಗಿ ಕೇಳುವುದು ಯಾವ ನ್ಯಾಯ ಅನ್ನುವುದು ಡೀಸೆಂಟ್ ಮ್ಯಾನರಿಸಮ್‌ಗಳನ್ನು ಹೇಳಿಕೊಡುವಂತಿದೆ..

‘ಆರೋಪ’ ಕಾದಂಬರಿಯಂತೆಯೇ ಇಲ್ಲಿ ಆಕಸ್ಮಿಕಗಳು ಬರುತ್ತವೆ. ಅಲ್ಲಿ ಜ್ಯೋತಿಷಿ ಹೇಳುವಂತೆ ಇಲ್ಲಿಯೂ ತಿರುಮಲೇಶರು ಆಕಸ್ಮಿಕಗಳು ಜೀವನದ ಗತಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬವುದನ್ನು ಪುನರುಚ್ಛರಿಸಿದ್ದಾರೆ.

ಸಕಲೇಶನ ಪಾತ್ರಕ್ಕೆ ಪೂರಕವಾಗಿ ಬರುವ ಮೃಣಾಲಿಯದು ಇಲ್ಲಿ ಗಟ್ಟಿ ಪಾತ್ರ ಚಿಕ್ಕಮ್ಮನನ್ನು ತಾಯಿಯಾಗಿಸಿಕೊಳ್ಳುವ ಪಾತ್ರ. ಆರೋಪ ಕಾದಂಬರಿಯಲ್ಲಿ ಮೆರೆನಾ ತಾಯಿಯನ್ನು ಕಳೆದುಕೊಂಡಿರುತ್ತಾಳೆ. ಆದರೆ ಮೆಸ್ಕರೆನ್ನಾ ಮರುಮದುವೆ ಮಾಡಿಕೊಳ್ಳುವುದು, ಸಂಬಂಧಿಗಳ ಮನೆಯಲ್ಲಿ ಬಿಡುವುದು ಮಾಡುವುದಿಲ್ಲ. ಇಲ್ಲಿ ಮೃಣಾಲಿ ಅಮ್ಮನನ್ನು ಕಳೆದುಕೊಂಡಮೇಲೆ ಅಜ್ಜಿ ತಾತ ಮನೆಗೆ ಹೋಗಬೇಕಾಗುತ್ತದೆ. ಚಿಕ್ಕಮ್ಮಳ ಅಸಡ್ಡೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ.

ಕಾದಂಬರಿಯಲ್ಲಿ ಈ ಸನ್ನಿವೇಶವನ್ನು ಓದುವಾಗ ಅವ್ವ ಸತ್ತರೆ ಅಪ್ಪ ಚಿಕ್ಕಪ್ಪ ಎಂಬಂತೆ, ಮಲತಾಯಿತಂತೆ ಇಲ್ಲಿಯೂ ಆಕೆ ಆಸ್ತಿಯ ವಿಚಾರದಲ್ಲಿ, ತನ್ನ ಮಕ್ಕಳ ಜೊತೆ ಬೆರೆಯಲು ಬಿಡದೆ ಇರುವುದು ಇದನ್ನು ಕಂಡ ಮೃಣಾಲಿಯ ತಂದೆ ಒಂದಷ್ಟು ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಇಡುವುದು “ನಾನು ಸತ್ರೆ ನಿನ್ನ ಚಿಕ್ಕಮ್ಮ ಮತ್ತು ತಮ್ಮಂದಿರಿಗೆ ಎಲ್ಲಾ ಭದ್ರತೆಯಿದೆ ನಿನಗೆ” ಎನ್ನುವುದು. ಅವಳು ಬೆಳೆದಂತೆ ಚಿಕ್ಕಮ್ಮನಲ್ಲಿ ಆತ್ಮೀಯತೆಯನ್ನೂ ಅನನ್ಯ ಪ್ರೀತಿಯನ್ನು ಹೊಂದುವುದು ಸ್ವತಹ ಅವಳ ತಂದೆಗೇ ನಂಬದ ವಿಚಾರವಾಗುತ್ತದೆ. ಕತ್ತರಿಸಿಕೊಂಡ ಜಡೆಯ ಕುರಿತ ಹಾಗೆ ನಾನು ನಿನ್ನ ಜಡೆಯನ್ನು ಬಾಚಬೇಕು ಎಂದಿದ್ದೆ ಎನ್ನುವುದು… ಅದಕ್ಕಾಗಿ ಮುಂದಿನ ಬಾರಿ ಬರುವಾಗ ಉದ್ದ ಕೂದಲು ಬೆಳೆಸಿಕೊಂಡಿರುತ್ತೇನೆ, ಆಗ ನೀವೇ ಜಡೆ ಹಾಕಿ ಎನ್ನುವುದು ಒಂದು ಧನಾತ್ಮನಕ ತಿರುವನ್ನು ಕೊಟ್ಟಿದೆ ಎನ್ನಬಹದು. ಪ್ರೀತಿ ದ್ವೇಷ ಎಲ್ಲವೂ ನಮ್ಮ ಕೈಯಲ್ಲಿರುತ್ತದೆ. ಬಂಧುಗಳನ್ನು ಬೆಸುಗೆಯಲ್ಲಿ ಬಂಧಿಸಿದರೆ ಅದುವೆ ಪ್ರೀತಿ, ಬಿಟ್ಟರೆ ಅದುವೆ ದ್ವೇಷ ಎಂಬುದನ್ನು ತಿರುಲೇಶರು ಸರಳ ವಾಕ್ಯ ವೃಂದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇದೆಲ್ಲವೂ ಸಾಹಿತ್ಯದ ಓದಿನಿಂದ ಸಾಧ್ಯ ಎಂಬುದನ್ನು ಒಬ್ಬ ಸಾಹಿತ್ಯಾರ್ಥಿಯಾಗಿ ಹೇಳಿರುವುದು ಅದ್ಭುತವಾಗಿದೆ. ಸಾಹಿತ್ಯದಲ್ಲಿ ಅಂಥ ಚಿಕಿತ್ಸಕ ಗುಣ ಇದೆ ಎಂಬುದನ್ನು ಇಲ್ಲಿ ಒಪ್ಪಿತವಾಗುವಂತೆ ಹೇಳಿದ್ದಾರೆ. ಬರೇ ಸಾಹಿತಿಗಳನ್ನು ಬಹಳ ಪ್ರೀತಿಯಿಂದ ನೋಡುವುದು ವಿಮರ್ಶಕರನ್ನು ವಿಲನ್‌ಗಳಂತೆ ನೋಡುವುದು ತರವಲ್ಲ. ಒಬ್ಬ ಕವಿಯ ಸಾಹಿತ್ಯ ಕೃಷಿಗೆ ಇನ್ನಷ್ಟು ಶೋಭೆ ತರಿಸುವುದು ವಿಮರ್ಶಕ ಎಂದು ಹೇಳುವುದನ್ನು ಮರೆತಿಲ್ಲ.

ನಮ್ಮಲ್ಲಿ ಸ್ಥಿರ ಕಲ್ಪನೆಗಳ ಬಗ್ಗೆ ಜಿಜ್ಞಾಸೆಗಳಿವೆ. ಅದಕ್ಕೆ “ಮುಸುಗು” ಕಾದಂಬರಿಯಲ್ಲಿ ಒಂದು ಒಳ್ಳೆಯ ಉದಾಹರಣೆ. ಪುಟ. 143 ರಲ್ಲಿ ಬರುವ ಸನ್ನಿವೇಶ ಹಸು ಪ್ರೀತಿಯಿಂದ ಕರುವಿನ ಮೈ ನೆಕ್ಕುತ್ತದೆ ಎಂದಿದ್ದೇವೆ. ಆದರೆ ಅದು ನೆಕ್ಕುವುದು ಉಪ್ಪಿನ ಅಂಶಕ್ಕೆ ಎಂಬುದನ್ನು ಇಲ್ಲಿ ಹೇಳಿದ್ದಾರೆ. ಸಾಹಿತ್ಯದಲ್ಲಿ “ನಾಸ್ಟಲಾಜಿ” ಅಂದರೆ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡುವ ಸಾಹಿತ್ಯ ಚೆನ್ನಾಗಿರುತ್ತದೆ ಎಂಬುದನ್ನು ಥಾಮಸ್ ಹಾರ್ಡಿಯ ಪುಸ್ತಕಗಳನ್ನು ಓದಬೇಕು ಎಂಬುದರ ಮೂಲಕ ಹೇಳುತ್ತಾರೆ.

‘ತರಂಗಾಂತರ’ ಮತ್ತು ‘ಮುಸುಗು’ವಿನಲ್ಲಿ ತಾಯಂದಿರು ತಮ್ಮ ಮಕ್ಕಳಿಗೋಸ್ಕರ ಚಡಪಡಿಸುವ ಸನ್ನಿವೇಶಗಳು ಇದ್ದೇಇವೆ. ಒಂದರಲ್ಲಿ ಜೋತಿಷ್ಯ ಇನ್ನೊಂದರಲ್ಲಿ ಆದಿತ್ಯ ಹೃದಯ ಪಾರಾಯಣ ಅಂದರೆ ತಮ್ಮ ಅನಿಸಿಕೆಗಳನ್ನು ನಂಬಿಕೆಗಳಲ್ಲಿ ಈಡೇರಿಸಿಕೊಳ್ಳುವ ಹಾಗೆ. ‘ಮುಸುಗು’ ಕಾದಂಬರಿಯಲ್ಲಿ ಪದಗಳ ಜೊತೆ ತಿರುಮಲೇಶರು ಲಾಸ್ಯವಾಡಿದ್ದಾರೆ ಎನ್ನಬಹುದು. ‘ಫೇಲ್’ ಎನ್ನುವ ಪದ. ಪರೀಕ್ಷೆಯಲ್ಲಿ ಫೇಲ್ ಆದವರೋ ಇಲ್ಲ ಪ್ರೇಮ ಪ್ರಕರಣದಲ್ಲಿ ಫೇಲ್ ಆದವರೋ? ‘ಬಾವಿ’ ಪದ ನೀರಿನ ಮೂಲ ಒಂದಾದರೆ ‘ಮೋಸ’ ಕ್ಕೆ ಕೂಡ ಅನ್ವಯವಾಗುವುದು. ‘ವೆಲ್ ‘ಅನ್ನುವ ಪದ ಬಾವಿ ಅನ್ನುವ ಅರ್ಥದಲ್ಲಿ, ಕ್ಷೇಮ ಅನ್ನುವ ಆರ್ಥದಲ್ಲಿ ಬಂದಿರುವುದು. ‘ದಾಸ್’ ಅನ್ನುವ ಆತನ ಸರ್ನೇಮ್ ಇಲ್ಲ ಕೆಟ್ಟ ಚಟಕ್ಕೆ ಸ್ವರಾಂತ್ಯವಾಗಿ ‘ದಾಸ’ ಪದಕ್ಕೆ ಅನ್ವಯವಾಗುತ್ತದೆ. ಜೇಕಬ್‌ನನ್ನು ‘ಕಬ್’ ಅನ್ನುವುದು ನಿಜವಾಗಿಯೂ ಮೃಗ ಅನ್ನುವಂತೆ, ‘ಶೀತಾಫಲ’ ಮತ್ತು ಶೀತಲ್ ಅನ್ನುವ ಪಾತ್ರ ಪದೇ ಪದೇ ಶೀತ ಸಮಸ್ಯೆಯಿಂದ ನರಳುವುದಕ್ಕೆ ಅನ್ವಯಿಸಿ ಹೇಳಲಾಗಿದೆ. ಉಳಿದಂತೆ ಹೈಪೊಥೆಟಿಕಲ್, ಇಕಾನಮಿ ಬಾತ್, ಸೇಂಟ್ಳಿ ಜೋಕ್ಸ್, ವಾರ್ತಾಯುಗ, ಸೆಲ್ಫ್ ಇಮೇಜಸ್, ಆಟೊಸಜೆಸ್ಟನ್, ಸ್ವಾಮಿಸಮ್, ವಿಕ್ಟಿಮ್‌ಬ್ಯಾಶಿಂಗ್ ಎಂಬ ಪದಗಳು ಇಲ್ಲಿ ಮನನೀಯವಾಗಿವೆ.

ಒಟ್ಟಾರೆಯಾಗಿ ತಿರುಮಲೇಶರ ಕಾದಂಬರಿಗಳಲ್ಲಿ ಹೋರಾಟಗಳೆ ಕಂಡು ಬರುತ್ತವೆ. ‘ಆರೋಪ’ ಕಾದಂಬರಿಯಲ್ಲಿ ಕ್ರಾಂತಿಯ ಬಲೆಯಲ್ಲಿ ಸಿಲುಕದೆ ವಿಚಾರಣೆ ಎದುರಿಸುವುದು, ತರಂಗಾಂತರದಲ್ಲಿ ವಿಚಾರಣೆ ಎದುರಿಸದೆ ಕ್ರಾಂತಿಕಾರ ಎಂದು ಹತ್ಯೆಯಾಗುವುದು. ಅರವಿಂದ ಹಾಗು ವಿನಯಚಂದ್ರ ಇಬ್ಬರಿಗೂ ಇಲ್ಲಿ ಕ್ರಾಂತಿ-ಹೋರಾಟಗಳು ಬೇಡವಾಗಿರುತ್ತವೆ. ಆದರೆ ವೃತ್ತಿಬದುಕು ಮತ್ತು ಖಾಸಗಿ ಬದುಕಲ್ಲಿ ಅಂದುಕೊಂಡ ಹಾಗೆ ಇರಬೇಕು ಎನ್ನುವ ಧಾವಂತವಿರುತ್ತದೆ. ತಿರುಮಲೇಶರ ಕಾದಂಬರಿಗಳಲ್ಲಿ ಮದ್ಯದ ಬಾಟಲಿ, ಸಿಗರೇಟುಗಳು ನಾಯಕರನ್ನು ಉಳಿದಂತೆ ಇತರ ಪಾತ್ರಗಳಿಗೆ ಮನರಂಜನೆ, ಕಾಲಹರಣ ಅನ್ನಿಸಿದರೆ ‘ತರಂಗಾಂತರ’ ಮತ್ತು ‘ಆರೋಪ’ದ ನಾಯಕರಿಗೆ ಚಡಪಡಿಕೆಯನ್ನು, ನೋವನ್ನು ತಗ್ಗಿಸಲು ಬಂದನೋವುಗಳೇ ಎನ್ನಬಹುದು. ಅರವಿಂದ ಮತ್ತು ವಿನಯಚಂದ್ರ ಎಂಬ ಪಾತ್ರಗಳು ತಿರುಮಲೇಶರ ಕಾದಂಬರಿಗಳಲ್ಲಿ ಉನ್ನತಾದರ್ಶಗಳನ್ನಾಗಲಿ, ತೀವ್ರಹೋರಾಟವನ್ನೂ ಬಯಸದ ಸಾಮಾನ್ಯ ಯುವಜನತೆಯನ್ನು ಪ್ರತಿನಿಧಿಸುತ್ತವೆ. ಇತರ ಕಾದಂಬರಿಗಳನಂತೆ ‘ಮುಸುಗು’ವಿನಲ್ಲೂ “ನಕ್ಸಲೈಟ್” ಎಂಬ ಮಾತು ಬರುತ್ತದೆ. ‘ಆರೋಪ’ ಮತ್ತು ‘ತರಂಗಾಂತರ’ ಕಾದಂಬರಿಗಳನ್ನು ಓದಿದ ಯಾರಿಗಾದರೂ ಇಲ್ಲಿ ಸಕಲೇಶ ಓದಿಗೆ ತಿಲಾಂಜಲಿ ಇತ್ತು ಚಳವಳಿಗೆ ಧುಮುಕಿದನೇ ಅನ್ನುವ ಸಂದೇಹವನ್ನು ತರಿಸುತ್ತದೆ, ಸುಮನ್ ರೆಡ್ಡಿಯ ಕಾಲಿಗೆ ಗುಂಡೇಟು ತಗುಲಿತ್ತು ಎನ್ನುವಾಗಲೂ ಹಾಗನ್ನಿಸುತ್ತದೆ. ಆದರೆ ಹಾಗಾಗುವುದಿಲ್ಲ. ತಿರುಮಲೇಶರು ಓದುಗರ ಕತೂಹಲವನ್ನು ಹಿಡಿದಿಡಲು ಮಾಡಿದ ತಂತ್ರಗಾರಿಕೆ ಅನ್ನಬಹುದು.. ‘ಮುಸುಗು’ ಕಾದಂಬರಿಯಲ್ಲಿ ತೆರೆದ ಬಾವಿಯಲ್ಲಿ ಬಿದ್ದು ಸಾಯುವುದು ನೀರಿನ ಪ್ರಮಾಣದಿಂದಲ್ಲ. ಅಲ್ಲಿ ವಿಷಾನಿಲದಿಂದ… ಎಂಬುದನ್ನು ಹೇಳಿ ಓದುಗರಲ್ಲಿ ಆ ಕುರಿತು ಮಾಹಿತಿ ಹುಡುಕುವ ಮನೋಭಾವವನ್ನು ಉದ್ದೀಪಿಸಿದಂತೆ ಕಾಣುತ್ತದೆ.

ತಿರುಮಲೇಶರ ‘ಮುಸುಗು’ ಕಾದಂಬರಿ ಮಿಕ್ಕ ಮೂರೂ ಕಾದಂಬರಿಗಳಿಗಿಂತ ಭಿನ್ನ ಅನ್ನಿಸುತ್ತದೆ. ಇಲ್ಲಿಯೂ ಹೋರಾಟಕ್ಕಿಳಿಯುವ ಪಾತ್ರಗಳಿವೆ. ಸಕಲೇಶ, ಮೊಹಂತಿ, ಮೊದಲಾಗಿ ಆದರೆ ಹೋರಾಟದ ಸ್ವರೂಪ. ಮನೋವೈಜ್ಞಾನಿಕ ಹಿನ್ನೆಲೆಯಲ್ಲಿಯೂ ಈ ಕಾದಂಬರಿ ಬೆಳಕು ಚೆಲ್ಲುವುದು ವಿಶೇಷ. ತಿರುಮಲೇಶರಲ್ಲಿ ಬರುವ ನಾಲ್ಕೂ ಕಾದಂಬರಿಯ ಪಾತ್ರಗಳೂ ಎಲ್ಲೂ ಗೊಂದಲ ಮಾಡುವುದಿಲ್ಲ. ಒಂದಾದ ಮೇಲೆ ಒಂದರಂತೆ ಬಂದು ಕಾದಂಬರಿಯಲ್ಲಿ ಬಂದು ಕಲೆತು ತಮ್ಮ ಛಾಪನ್ನು ಮೂಡಿಸಿ ನಿರ್ಗಮಿಸುತ್ತವೆ. ಬೇರೆ ಬೇರೆ ಆಯಾಮದಲ್ಲಿರುವ ಈ ನಾಲ್ಕೂ ಕಾದಂಬರಿಗಳೂ ‘ಮುಸುಗು’ ಆಗಿ, ‘ತರಂಗಗಳಾ’ಗಿ ಬದಲಾವಣೆ ಬಯಸುವ ಅಲೆಗಳಾಗಿ ‘ಆರೋಪ’ಗಳಿಂದ ಬಿಡುಗಡೆಗೊಳ್ಳುವ ಅನೇಕ ವಿಶಾಲ ಚಿಂತನೆಗೆ ಓದುಗರನ್ನು ಹಚ್ಚುವಲ್ಲಿ ಪ್ರೇರಕವಾಗಿದೆ ಎನ್ನಬಹುದು. ಸಮಾಜದ ಪ್ರತಿಯೊಂದು ಆಯಾಮದ ಸಾಗಿಸುವಿಕೆಯೂ ಇಲ್ಲಿದೆ. ಯುವಜನತೆಯೇ ಇಲ್ಲಿ ಕಾದಂಬರಿಗಳ ವಸ್ತುವಾಗಿರುವ ಕಾರಣದಿಂದ ಯುವಕರು ತಿರುಮಲೇಶರ ಕಾದಂಬರಿಗಳನ್ನು ಹೆಚ್ಚು ಹೆಚ್ಚು ಓದಬೇಕೆನಿಸುತ್ತದೆ. ವಿಶ್ವವಿದ್ಯಾನಿಲಯಗಳೂ ತಿರುಮಲೇಶರ ಕಾದಂಬರಿಗಳನ್ನು ಇಡಿಯಾಗಿ ಇಲ್ಲವೆ ಬಿಡಿಯಾಗಿ ಪಠ್ಯದಲ್ಲಿ ಅಳವಡಿಸಿದರೆ ಯುವಜನತೆಯನ್ನು ಇನ್ನಷ್ಟು ಸಾಮಾಜಿಕವಾಗಿ ಹುರಿಗೊಳಿಸಿದಂತಾಗುತ್ತದೆ.