ವ್ಯಕ್ತಿಗತವಾಗಿ ವಿಭಿನ್ನವಾದ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಇವರೆಲ್ಲ ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ. ಬಾವಿಯಲ್ಲಿ ಹಾರುವುದು ಹೇಗೆ ಅಥವಾ ‘ಹಾರಲೇಬೇಕೆ?’ ಎಂಬ ಕುರಿತು ತಲಸ್ಪರ್ಶಿ ಅಧ್ಯಯನ ನಡೆದಿರಬಹುದೆಂಬ ವಕ್ರ ನೋಟವನ್ನೂ ಇದು ಹೊಳೆಸುವಂತಿದೆ!
ಜಯಂತ ಕಾಯ್ಕಿಣಿ ಬರಹ

 

೧೯೫೩ರ ಈ ಕಪ್ಪು ಬಿಳುಪು ಗ್ರೂಪ್ ಫೋಟೋ ತನ್ನ ಇಡಿಯಲ್ಲಿಯೂ, ಬಿಡಿಯಲ್ಲಿಯೂ ವಿಶಿಷ್ಟವೊಂದನ್ನು ಉದ್ದೀಪೀಸುವಂತಿದೆ. ಇದು ಗೋಕರ್ಣದಲ್ಲಿ ನಮ್ಮ ಮನೆಯ ಪಕ್ಕದಲ್ಲಿರುವ ಮೂಲೆ ಶೇಷಂಭಟ್ಟರ ಮನೆಯ ಹಿಂಗಡೆಯ ಅಂಗಳದ ಬಾವಿ ಕಟ್ಟೆಯ ಬಳಿ ತೆಗೆದದ್ದು. ಈ ಶೇಷಂಭಟ್ಟರು ಬಿಷಪ್ಪರಿಗೆ ಹಸ್ತೋದಕ ಕೊಟ್ಟು ಉದ್ದಂಡ ನಮನ ಮಾಡಿದ ಧೀಮಂತ. ಈ ಮನೆಗೆ ಮೂಲೆ ಮನೆ ಅಂತಲೂ ಹೇಳುತ್ತೇವೆ. ನಾನು, ನನ್ನ ಬಾಲ್ಯದ ಗೆಳೆಯ ನೀಲಕಂಠ, ಪಮ್ಮೇಚ ಇದೇ ಬಾವಿಕಟ್ಟೆಯಲ್ಲಿ ಆಡುತ್ತಿದ್ದೆವು. ಅದರ ಹಿಂದಿನ ತೆಂಗಿನ ಮಡ್ಲಿನ ಪರ್ಣಕುಟಿಯಲ್ಲಿ ಕೊಟ್ಟಿಗೆ ಇದ್ದ ನೆನಪು.

ಆ ಬಾವಿ ಕಟ್ಟೆಯ ಮೇಲೆ ಈ ಕನ್ನಡದ ಕಣ್ಮಣಿಗಳು ಕೂತಿರುವ ಈ ಚಿತ್ರವನ್ನು ಇತ್ತೀಚೆಗೆ ನೋಡಿದ್ದೇ ಮೈ ಜುಮ್ ಎಂದಿತು. ಇದನ್ನು ತೆಗೆದವರು ಗಂಗಾರಾಮ ರಜಪೂತ ಎಂಬ ಛಾಯಾಗ್ರಾಹಕರು. ಅವರು ಆ ದಿನಗಳಲ್ಲಿ ಗೋಕರ್ಣದಲ್ಲಿದ್ದರು. ನಂತರ ಆತ ದಾಂಡೇಲಿಗೆ ಹೋಗಿ ಪೇಪರ್ ಮಿಲ್ ನಲ್ಲಿ ಛಾಯಾಗ್ರಾಹಕರಾಗಿ ಸೇರಿಕೊಂಡಿದ್ದರು. ಅವರ ಮಗ ಅಜಿತ್ ಈಗ ದಾಂಡೇಲಿಯಲ್ಲಿ “ಗೀತಾ ಸ್ಟುಡಿಯೋ” ಅಂತ ಇಟ್ಟುಕೊಂಡಿದ್ದಾನೆ. ಅವನು ಎರಡು ವರ್ಷಗಳ ಹಿಂದೆ ನನಗೆ ಉಡುಗೊರೆಯಾಗಿ ಈ ಚಿತ್ರ ಕೊಟ್ಟ.

ಇಲ್ಲಿ ಮುಂದಿನ ಸಾಲಿನಲ್ಲಿ ತೀರ ಎಡಕ್ಕೆ ಇದ್ದವರು ಬಿ. ಎಚ್.ಶ್ರೀಧರ. ಅವರ ಬದಿಗಿದ್ದವರು ವೈಎನ್ಕೆ ಎಂದು ನನ್ನ ಅನುಮಾನ. ಬೇಂದ್ರೆಯವರ ಪಕ್ಕದಿಂದ ತೊಡೆಗೆ ತೊಡೆ ಕೊಟ್ಟು ಆಪ್ತರಾಗಿ ಕೂತವರು: ತರಾಸು, ಗೌರೀಶ ಕಾಯ್ಕಿಣಿ, ಸು. ರಂ. ಎಕ್ಕುಂಡಿ (ಗದ್ದದ ಮೇಲೆ ಕೈ ನೋಡಿ!), ರಾಮಚಂದ್ರ ಶರ್ಮ ಮತ್ತು ವಟುವಿನಂತೆ ಕಾಣುವ ಎಳೆ ಗೋಪಾಲ ಕೃಷ್ಣ ಅಡಿಗ! ತಮ್ಮ ತಮ್ಮ ಸಾಹಿತಿ ಗಂಡಂದಿರ ಹಿಂದೆ ಕೂತ ಆಯಾ ಹೆಂಡತಿಯರ ಬದ್ಧ ಭೂಮಿಕೆಯೂ ಚಂದ.

ಗೌರೀಶರ ಹಿಂದೆ ನನ್ನ ತಾಯಿ ಶಾಂತಾ ಇದ್ದಾರೆ (ಮತ್ತೆ ಗದ್ದಕ್ಕೆ ಸ್ಟೈಲಿಶ್ ಆಗಿ ಕೈ ಯಿಟ್ಟುಕೊಂಡು). ಶಾಂತಾರ ಬಲಕ್ಕೆ ಹಿರಿಯರಾದ ದಾಮೋದರ ಚಿತ್ತಾಲ ಇದ್ದಾರೆ. ( ಕನ್ನಡಕ, ಕೋಟು) ಇವರ ಬಗ್ಗೆ ದಾಮಣ್ಣ ಎಂಬ ವಿಖ್ಯಾತ ಕವಿತೆಯೊಂದನ್ನು ಗಂಗಾಧರ ಚಿತ್ತಾಲರು ಬರೆದಿದ್ದಾರೆ. ಈ ದಾಮೋದರ ಚಿತ್ತಾಲರ ಹಿಂಬದಿಗೆ ಬಲಕಟ್ಟೆಯ ಮೇಲೆ ಕೂತ ನೀಳ ಕಾಯದವರು ವಿಖ್ಯಾತ ಗಾಯಕ, ಸಂಗೀತಜ್ಞ ರಮೇಶ ನಾಡಕರ್ಣಿ. ಇವರು ಬೇಂದ್ರೆಯವರ “ಕಲ್ಪವೃಕ್ಷ “ಒಳಗೊಂಡು ಎಕ್ಕುಂಡಿಯವರ ಅನೇಕ ಗೀತೆಗಳನ್ನು ಆಕಾಶವಾಣಿಯಲ್ಲಿ ಹಾಡಿ ಆ ಕಾಲದಲ್ಲೇ ಜನಪ್ರಿಯಗೊಳಿಸಿದವರು. ನಂತರ ಮುಂಬೈಯಲ್ಲಿ ಬಹುಕಾಲ ರೇಡಿಯೋದಲ್ಲಿ ಸಂಗೀತ ತಜ್ಞರಾಗಿ ದುಡಿದವರು, ಮಲ್ಲಿಕಾರ್ಜುನ ಮನ್ಸೂರರ ಆಪ್ತವರ್ತಿ.

ಹಿಂದಿನ ಸಾಲಿನಲ್ಲಿ ಮಧ್ಯದಲ್ಲಿ ಬಾವಿಕಟ್ಟೆಯ ಗಡಗಡೆಯ ಕೆಳಗೆ ಅಧ್ಯಕ್ಷನಂತೆ ಎರಡೂ ಕೈಗಳನ್ನು ಎರಡೂ ತೊಡೆಗಳ ಮೇಲೆ ಇಟ್ಟು ಕೂತವರು ಖ್ಯಾತ ಬೆಳಗಾಂ ವಕೀಲ, ಲೇಖಕ ರಂಗರಾವ ತಲಚೇರಕರ್. ಇವರು ವಿಶಿಷ್ಟ ವಕೀಲಿ ಕೇಸುಗಳನ್ನು ಆಧರಿಸಿ ಕಥೆಗಳನ್ನು ಬರೆಯುತ್ತಿದ್ದರು. ಈ ಕ್ಷಣ ಹೊಳೆಯುವ ವಿಷಾದದ ಸಂಗತಿ ಎಂದರೆ, ಮುಂದಿನ ಸಾಲಿನಲ್ಲಿ ಕೂತವರ ತೊಡೆಯ ಮೇಲಿರುವ ಅನಾಮಿಕ ಮಗು ಮತ್ತು ಈಗ ಗೋಕರ್ಣದ ಮನೆಯಲ್ಲಿ ಬಹುಪಾಲು ಮಗುವಿನಂತೆಯೇ ಆಗಿರುವ ಶಾಂತಾರನ್ನು ಬಿಟ್ಟರೆ ಈ ವೃಂದದ ಯಾರೂ ಈ ಉಪಗ್ರಹದ ಮೇಲೆ ಈಗ ಇದ್ದಂತಿಲ್ಲ.

ವ್ಯಕ್ತಿಗತವಾಗಿ ವಿಭಿನ್ನವಾದ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ‘ಬೇಂದ್ರೆ – ತರಾಸು ತೊಡೆನಾಟ’ ಇದಕ್ಕೆ ಸೊಗಸಾದ ಸಾಕ್ಷಿ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಇವರೆಲ್ಲ ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ. ಬಾವಿಯಲ್ಲಿ ಹಾರುವುದು ಹೇಗೆ ಅಥವಾ ‘ಹಾರಲೇಬೇಕೆ?’ ಎಂಬ ಕುರಿತು ತಲಸ್ಪರ್ಶಿ ಅಧ್ಯಯನ ನಡೆದಿರಬಹುದೆಂಬ ವಕ್ರ ನೋಟವನ್ನೂ ಇದು ಹೊಳೆಸುವಂತಿದೆ!

ಕೃಷ್ಣಾಜಿನದ ಮೇಲೆ ಸಿವಿಲ್ ಡ್ರೆಸ್ಸಿನಲ್ಲಿರುವ ಸ್ವಾಮಿಯಂತೆ ಕೂತಿರುವ ಬೇಂದ್ರೆಯವರ ನಗುವೂ – “ಇದೂ ಒಂದು ಆಗಿ ಹೋಗಲಪ್ಪಾ” ಎನ್ನುವಂತಿದೆ. ಅಡಿಗರು ಮಾತ್ರ ಆಗಷ್ಟೇ ಅವರು ಮೊಳಗಿಸಿದ್ದ ಚಂಡೆ ಮದ್ದಳೆಯ ಅನುರಣದ ಸೂಕ್ಷ್ಮ ಸುಪ್ತ ಬಂಡಾಯದ ಸೌಮ್ಯ ಆವೃತ್ತಿಯಲ್ಲಿ, ಇನ್ನೂ ಹಚ್ಚದಿರುವ ಸಿಗರೇಟಿನಂತೆ ಕಾಣುತ್ತಿದ್ದಾರೆ.

ಕುಮಟಾ ಸಮ್ಮೇಳನದಲ್ಲಿ ಬೇಂದ್ರೆ ಮತ್ತು ನವ್ಯದ ನಡುವಣ ಯುದ್ಧ ಘೋಷಣೆ ಅದಾಗಲೇ ಆಗಿತ್ತಂತೆ! ರಮ್ಯ, ಪ್ರಗತಿಶೀಲ, ನವ್ಯಗಳ ‘ಶಾರ್ಟ್ ಸರ್ಕೀಟ್’ ಆಗುವಷ್ಟರ ಮಟ್ಟಿಗಿನ ವಿದ್ಯುದಾಲಿಂಗನ ಇಲ್ಲಿದೆ! ಇಷ್ಟೆಲ್ಲ ಬಿಡಿಗಳನ್ನು ಒಂದಾಗಿಸುವ ಸಂಯುಕ್ತವಾದ ಒಂದು ಇಡಿ ಮನಸ್ಸಿನ ಹಾಜರಿಯೇ ಈ ಚಿತ್ರವನ್ನು ಮತ್ತೆ ಮತ್ತೆ ನೋಡಲು ನಮ್ಮನ್ನು ಒತ್ತಾಯಿಸುವಂತಿದೆ. ಸ್ವಲ್ಪ ಪ್ರಯತ್ನಪಟ್ಟರೂ ಆ ಮನಸ್ಸನ್ನು ನಾವೂ ಎಟುಕಬಹುದಾಗಿದೆ ಎಂಬುದೇ ಖುಷಿಯ ಸಂಗತಿಯಾಗಿದೆ.

ಈ ಫೋಟೋ ನೋಡುತ್ತಿದ್ದರೆ ಹಳೆಯ ಕಪಾಟಿನ ಹಳೆಯ ಪುಸ್ತಕದ ಪುಟಗಳ ಗಂಧ, ತಲತ್ ಮಹಮೂದನ ಕಂಪಿತ ಸ್ವರಗಳ ಹಾಡುಗಳು, ಜಾತ್ರೆಗೆ ಬಂದ ನಾಟಕ ಕಂಪನಿಯ ಡೈನಮೋ ಸದ್ದು ಎಲ್ಲ ಸೇರಿದ ಅಮೂರ್ತವೊಂದನ್ನು ಉಕ್ಕಿಸುವ ಸಣ್ಣ ಗದ್ಗದ ಭಾವದ ಜೊತೆಗೆ ‘ ಸತ್ಯಾರ್ಥಿ’ಗಳ ದಾರಿಯ ವಿನಯ ಮತ್ತು ಮುಕ್ತಗೊಳಿಸಬಲ್ಲ ಭಂಗುರತೆಯೂ ಆವರಿಸಿಕೊಳ್ಳುತ್ತದೆ.


(ಸೌಜನ್ಯ: “ಹೊಸ ಮನುಷ್ಯ” ಮಾಸಿಕ, ನವೆಂಬರ್ 2012 ಸಂಚಿಕೆ)